ಸಮಗ್ರ ಕನ್ನಡ ಸಾಹಿತ್ಯವನ್ನು ಇಪ್ಪತ್ತು ಸಂಪುಟಗಳಲ್ಲಿ ಪ್ರಕಟಿಸುತ್ತಿರುವ ಹಂಪಿಯು ಕನ್ನಡ ವಿಶ್ವವಿದ್ಯಾಲಯವನ್ನೂ, ಪ್ರಕಟಣೆಗೆ ಧನಸಹಾಯ ಮಾಡಿರುವ ಕರ್ನಾಟಕ ಸರ್ಕಾರವನ್ನೂ ಕನ್ನಡಿಗರು ಅಭಿನಂದಿಸಬೇಕಾಗಿದೆ. ಜೈನ ಸಾಹಿತ್ಯವೊಂದೇ ಸಾಕು, ಶ್ರೀಮಂತಿಕೆಯಲ್ಲಿ ವೈವಿಧ್ಯ ವೈಭವದಲ್ಲಿ, ವೈಪುಲ್ಯ ವಿಸ್ತಾರದಲ್ಲಿ, ಗುಣ ಮೌಲ್ಯದಲ್ಲಿ ಕನ್ನಡ ಜಗತ್ತಿನ ಯಾವ ಭಾಷೆಯ ಸಾಹಿತ್ಯದೊಡನೆಯಾದರೂ ಸರಿಸಮನಾಗಿ ನಿಲ್ಲಬಲ್ಲುದೆಂದು ಘೋಷಿಸಲು. ವಚನ – ದಾಸ ಸಾಹಿತ್ಯಗಳಿಗೆ ಸಮನಾದ ಸಾಹಿತ್ಯವಂತು ಯಾವ ಭಾಷೆಯಲ್ಲಿಯೂ ಇಲ್ಲ. ಈ ಸತ್ಯವನ್ನರಿಯದೆ ಕನ್ನಡದ ಬಗ್ಗೆ ಹಗುರವಾಗಿ ಮಾತಾಡುವ ಮೂರ್ಖರಿಗೆ ಈ ಸಂಪುಟಗಳೇ ಎಚ್ಚರಿಕೆಯ ನಿಕೇತನಗಳಾಗಿವೆ.

ಪ್ರಕೃತ ‘ನೇಮಿಚಂದ್ರ ಸಂಪುಟ’ದಲ್ಲಿ ಅವನ ಎರಡು ಸುಪ್ರಸಿದ್ಧ ಗ್ರಂಥಗಳಾದ ಲೀಲಾವತೀ ಪ್ರಬಂಧಂ ಮತ್ತು ನೇಮಿನಾಥ ಪುರಾಣಂ ಸೇರಿವೆ. ಲೀಲಾವತೀ ಪ್ರಬಂಧಂ ಗ್ರಂಥವನ್ನು ೧೯೬೬ರಷ್ಟು ಹಿಂದೆಯೇ ನನ್ನ ಗುರುಗಳಾದ ಪ್ರೊ. ಕೆ. ವೆಂಕಟರಾಮಪ್ಪ ಅವರೊಡನೆ ನಾನು ಸಂಪಾದಿಸಿದ್ದೆ. ಅದು ಮೈಸೂರಿನ ಶಾರದಾ ಮಂದಿರದಿಂದ ಪ್ರಕಟಗೊಂಡಿತ್ತು. ಪ್ರಾಚ್ಯ ಸಂಶೋಧನ ಸಂಸ್ಥೆಯ ಕೆ (ಘ), ಕೆ ೧೭೨ (ಚ) ಮತ್ತು ಕೆ ೩೭೧ (ಕ) ಈ ಮೂರು ಹಸ್ತಪ್ರತಿಗಳನ್ನು ಕಾವ್ಯ ಕಲಾನಿಧಿ ಪ್ರಕಾಶನದ ಮುದ್ರಿತ ಗ್ರಂಥವನ್ನೂ ಬಳಸಿಕೊಂಡು ಈ ಕೃತಿಯನ್ನು ಸಂಪಾದಿಸಲಾಗಿತ್ತು. ಹಳೆಯ ಮುದ್ರಣಗಳನ್ನು ಮತ್ತೊಮ್ಮೆ ಓದಿ, ತಾಳೆ ನೋಡಿ, ಯುಕ್ತವಾದ ಪಾಠಗಳನ್ನು ಮಾತ್ರ ಪಠ್ಯದಲ್ಲಿಟ್ಟುಕೊಂಡು, ಉಳಿದುದನ್ನು ಕೈಬಿಡಲಾಗಿದೆ.

ನೇಮಿನಾಥ ಪುರಾಣಂ ಕೃತಿಯನ್ನು ಸಂಪಾದಿಸುವಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ೩೬೧ನೆಯ ನಂಬರಿನ ‘ಜ’ ಮೈಕ್ರೊ ಫಿಲಂ ಪ್ರತಿಯನ್ನೂ, ಡಾ. ಬಿ.ಎಸ್. ಕುಲಕರ್ಣಿ ಮತ್ತು ಶ್ರೀ ಬಿ.ಎಸ್. ಸಣ್ಣಯ್ಯನವರ ಮುದ್ರಿತ ಪ್ರತಿಗಳನ್ನೂ ಇಟ್ಟುಕೊಂಡು, ನನಗೆ ಸೂಕ್ತವೆಂದು ತೋರಿದ ಪಾಠಗಳನ್ನು ಸ್ವೀಕರಿಸಿ, ಪ್ರಸ್ತುತ ಪ್ರತಿಯನ್ನು ಸಿದ್ಧಗೊಳಿಸಲಾಗಿದೆ.

ಈ ಸಂಪುಟವನ್ನು ರೂಪಿಸುವಲ್ಲಿ, ಶಬ್ದಾರ್ಥಕೋಶವನ್ನು ಸಿದ್ಧಪಡಿಸುವಲ್ಲಿ, ಕರಡು ತಿದ್ದುವಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರೂ ಗಣ್ಯ ವಿದ್ವಾಂಸರೂ ಸಾಹಿತಿಗಳೂ ಆದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಂತೋಷದಿಂದ ಸಂಪೂರ್ಣ ನೆರವು ನೀಡಿದ್ದಾರೆ. ಅಚ್ಚುಕಟ್ಟಿಗೆ ಮತ್ತೊಂದು ಹೆಸರು ಮಲ್ಲೇಪುರಂ.

ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ವಿದ್ವಾಂಸರೂ, ಗಣ್ಯ ಸಾಹಿತಿಗಳೂ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಡಾ. ಬಿ.ಎ. ವಿವೇಕ ರೈ ಅವರ ನೇತೃತ್ವದಲ್ಲಿ ಮೌಲ್ಯಾತ್ಮಕವಾದ ಕೆಸಲಗಳು ಕನ್ನಡ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ಸಂತೋಷದ ಸಂಗತಿ. ಈ ಸಂಪುಟಗಳ ಯೋಜನೆಯನ್ನು ರೂಪಿಸಿ, ಶೀಘ್ರವಾಗಿ ಪ್ರಕಾಶಪಡಿಸಿದ ಜೈನಸಾಹಿತ್ಯ ಸಂಪುಟಗಳ ಉನ್ನತ ಸಲಹಾಸಮಿತಿಯ ಪಾತ್ರ ಅಭಿನಂದನೀಯವಾದದ್ದು. ಈ ಸಮಿತಿಯ ಎಲ್ಲ ಸನ್ಮಿತ್ರರಿಗೆ ನಾನು ಕೃತಜ್ಞತೆಯ ನಮನಗಳನ್ನು ಸಲ್ಲಿಸುತ್ತೇನೆ.

ಮೈಸೂರಿನ ಶ್ರೇಷ್ಠ ಪ್ರಕಾಶಕರಲ್ಲೊಬ್ಬರೂ, ಪ್ರಸಿದ್ಧ ಮುದ್ರಕರೂ ಆದ ಶ್ರೀ ಡಿ.ಎನ್. ಲೋಕಪ್ಪನವರು ಈ ಗ್ರಂಥ ಮುದ್ರಣ ಸಂದರ್ಭದಲ್ಲಿ ನನಗೆ ಹೆಚ್ಚು ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಅವರಿಗೂ ನನ್ನ ಧನ್ಯವಾದಗಳು ಸಲ್ಲುತ್ತದೆ. ಈ ಸಂಪುಟದ ಸಿದ್ಧತೆಯಲ್ಲಿ ಹಲವು ರೀತಿಯಲ್ಲಿ ನೆರವಾದ ಮಿತ್ರರನ್ನು ನೆನೆಯುತ್ತೇನೆ.

ಕನ್ನಡದ ಜನ ಈ ಸಂಪುಟವನ್ನು ಆದರರಿಂದ ಬರಮಾಡಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ದೇಜಗೌ
೨೮.೫.೦೬
ಮೈಸೂರು – ೧೨