ಕಿವಿಯಿಂದೀಟಿಸುವರ್ ಸಮಸ್ತ ರಸಮಂ ತೋರ್ಪರ್ ಸರೋಜಾತಮಂ
ಯುವತೀ
ಪ್ರೌಢಲತಾಗ್ರದೊಳ್ ಕುಮುದಮೊಂದೊಂದಲ್ಲಿ ಬಾಲಪ
ಲ್ಲವಮಂ
ಪುಟ್ಟಿಪರಾರ್ಯಮೋಹನಮುಮಂ ಮಾಳ್ಪೀ ಚಮತ್ಕಾರಮಂ
ಕವಿಗಳ್
ಬಲ್ಲವೊಲನ್ಯರೆತ್ತಱೆವರಂತಾ ಬ್ರಹ್ಮನುಂ ಬಲ್ಲನೇ (ಲೀಲಾ – ೧೨)

ಕಾಲವಿಚಾರ

“ನೇಮಿ ಜನ್ನಮರಿರ್ವರೆ ಕರ್ನಾಟಕ ಕೃತಿಗೆ ಸೀಮಾಪುರುಷರ್” ಎಂಬ ಹೊಗಳಿಕೆ, ‘ಚತುರ್ಭಾಷಾ ಚಕ್ರವರ್ತಿ’ ಎಂಬ ಬಿರುದಿಗೆ ಪಾತ್ರನಾದ ನೇಮಿಚಂದ್ರ ೧೧೫೦ – ೧೨೦೦ರ ನಡುವಣ ಕಾಲದಲ್ಲಿದ್ದನೆಂದು ಬಾಹ್ಯಾಂತರ ಪ್ರಮಾಣಗಳಿಂದ ತಿಳಿಯುತ್ತದೆ. ಸ್ವವಿಷಯ ಪರಿಚಯವನ್ನಾಗಲಿ, ಪೂರ್ವಕವಿಸ್ತವನವನ್ನಾಗಲಿ ಎಸಗದೆ, ತನ್ನ ಆಶ್ರಯದಾತ ಸೌಂದತ್ತಿಯ ರಟ್ಟವಂಶದ ಲಕ್ಷ್ಮಣರಾಜನನ್ನು ಅವನ ಮಡದಿ ಚಂದಲದೇವಿಯನ್ನು ಹೊಗಳುತ್ತಾನೆ. ೧೧೯೦ರಲ್ಲಿದ್ದ ಮೊದಲನೆಯ ಲಕ್ಷ್ಮಣ ರಾಜನೇ ಇವನ ಆಶ್ರಯದಾತನೆಂಬುದು ಸುಸ್ಪಷ್ಟ ೧೧೭೩ ರಿಂದ ೧೨೨೦ರವರೆಗೆ ಆಳುತ್ತಿದ್ದ ವೀರಬಲ್ಲಾಳನನ್ನು ನೇಮಿನಾಥಪುರಾಣದಲ್ಲಿ ಕವಿ ಸ್ತುತಿಸುತ್ತಾನೆ. ೧೨೦೯ರಲ್ಲಿದ್ದ ಜನ್ನನೂ, ೧೨೦೫ರಲ್ಲಿದ್ದ ಪಾರ್ಶ್ವನಾಥನೂ ಇವನನ್ನು ಸ್ತುತಿಸಿರುವುದರಿಂದ ಇವನ ಕಾವ್ಯಗಳು ಈ ಹೊತ್ತಿಗಾಗಲೇ ನಾಡಿನಲ್ಲಿ ಪ್ರಸಿದ್ಧವಾಗಿರಬೇಕು.

ಕೃತಿ ಪರಿಚಯ : ಲೀಲಾವತಿ ಪ್ರಬಂಧಂ

ನೇಮಿಚಂದ್ರನ ಮೊದಲ ಕೃತಿ ಲೀಲಾವತೀ ಪ್ರಬಂಧಂ ಅದರ ಕಥೆಯನ್ನಿಲ್ಲಿ ಸ್ಥೂಲವಾಗಿ ಸಂಗ್ರಹಿಸಲಾಗಿದೆ. ಜಯಂತೀಪುರದ ಚೂಡಾಮಣಿ ರಾಜನಿಗೆ ಪದ್ಮಾವತಿ ರಾಣಿ. ರೂಪಕಂದರ್ಪದೇವ ಅವರ ಮಗ. ಹೆಸರಿಗೆ ತಕ್ಕಂತೆ ರೂಪ ವಿದ್ಯೆ ಯೌವ್ವನಗಳಿಂದ ಶೋಭಿಸುತ್ತಿದ್ದ. ಒಂದು ದಿನ ಈ ಯುವರಾಜ ಗೆಳೆಯ ಮಕರಂದನೊಡನೆ ಚಂದ್ರಿಕಾಮಹೋತ್ಸವವನ್ನು ನೋಡಿ ವಿಹ್ವಲಮನವಾಗಿ ಮನೆಗೆ ಬಂದು ಮಲಗುತ್ತಾನೆ. ಬೆಳಗಿನ ಜಾವದ ಕನಸಿನಲ್ಲವನು ಸರ್ವಾಂಗಸುಂದರಿ ಷೋಡಶಿಯೊಬ್ಬಳನ್ನು ಕಂಡು, ಕಾಮಾತುರದಿಂದ ಬಳಲುತ್ತಾನೆ. ಗೆಳೆಯ ಮಕರಂದನ ಸಮಾಧಾನ ಪ್ರಯತ್ನವೂ ವಿಫಲವಾಗುತ್ತದೆ.

ಹೀಗಿರುವಾಗ ಇಂದ್ರಜಾಲಿಗನೊಬ್ಬ ತನ್ನ ಸಂಗಾತಿಯೊಡನೆ ಬಂದು ಅದ್ಭುತ ಮಾಯಾ ವಿದ್ಯೆಗಳನ್ನು ಯುವರಾಜನ ಮುಂದೆ ಪ್ರದರ್ಶಿಸುತ್ತಾನೆ. ಅನುಪಮಸುಂದರಿಯಾದ ರಾಜವಂಶದ ಕನ್ಯೆಯನ್ನು ತೋರಿಸುವಂತೆ ಮಕರಂದನು ಕೇಳಿಕೊಳ್ಳಲಾಗಿ, ಸಂಗಾತಿ ವಿರಹವ್ಯಥೆಯಿಂದ ಸೊರಗಿದ ಚೆಲುವೆ ರಾಜಕುಮಾರಿಯೊಬ್ಬಳನ್ನು ತೋರಿಸುತ್ತಾನೆ. ತನ್ನ ಸ್ವಪ್ನ ಸುಂದರಿಯೆ ಅವಳೆಂದು ರೂಪಕಂದರ್ಪ ಮೂರ್ಛೆ ಹೋಗುತ್ತಾನೆ. ಅಷ್ಟರಲ್ಲಿ ಇಂದ್ರಜಾಲಿಗರು ಮಾಯವಾಗಲಾಗಿ, ಎಚ್ಚೆತ್ತ ರಾಜಕುಮಾರ ತನ್ನ ಕನಸಿನ ಸುಂದರಿಯನ್ನು ಹುಡುಕಿಕೊಂಡು ಹೊರಡುತ್ತಾನೆ. ಗೆಳೆಯ ಆತನನ್ನು ಹಿಂಬಾಲಿಸುತ್ತಾನೆ. ಪ್ರಯಾಣ ಕಾಲದಲ್ಲೊಂದು ರಾತ್ರಿ ಅಡವಿಯ ಮಾವಿನ ಸರಿರಾತ್ರಿಯಾದರೂ ತನ್ನ ಗಂಡ ಚೂತಪ್ರಿಯ ಬರಲಿಲ್ಲವಾಗಿ ದುಃಖದಿಂದ ಹಲಬುತ್ತಾಳೆ. ವಿರಹತಾಪದಿಂದ ಬಳಲುತ್ತಿದ್ದ ತನ್ನ ಒಡತಿಗೆ ಶುಶ್ರೂಷೆ ಮಾಡಬೇಕಾದ ಪ್ರಸಕ್ತಿಯಿಂದಾಗಿ ತಡವಾಯಿತೆಂದು ಗಂಡುಗಿಳಿ ಮಡದಿಗೆ ಸಮಾಧಾನ ಹೇಳುತ್ತಾನೆ. ಒಡತಿಯ ವಿರಹ ಕಾರಣವನ್ನು ವಿವರಿಸುವಂತೆ ವಿಜ್ಞಾಪಿಸಿಕೊಳ್ಳಲಾಗಿ, ಚೂತಪ್ರಿಯ ತನ್ನ ಸತಿಗೆ ವಿವರಗಳನ್ನು ನಿರವಿಸುತ್ತಾನೆ.

‘ಕುಸುಮಪುರವೆಂಬ ಪಟ್ಟಣದಲ್ಲಿ ಶೃಂಗಾರಶೇಖರನೆಂಬ ದೊರೆ. ವಿಭ್ರಮಲೇಖೆ ಅವನ ರಾಣಿ. ಬಹುದಿನ ಮಕ್ಕಳಾಗಲಿಲ್ಲವಾಗಿ, ರಾಣಿ ಕುಲದೇವತೆಯಾದ ಪದ್ಮಾವತಿಯನ್ನು ಪೂಜಿಸುತ್ತಾಳೆ. ದೇವಿ ಪದ್ಮಾವತಿ ಅವಳಿಗೆ ಸಂತಾನದ ವರ ನೀಡುತ್ತಾಳೆ. ಸಕಾಲದಲ್ಲಿ ವಿಭ್ರಮ ಲೇಖೆ ಸುಂದರ ಲಲನೆಯನ್ನು ಪಡೆಯುತ್ತಾಳೆ. ಮಗುವಿಗೆ ಲೀಲಾವತಿಯೆಂದು ನಾಮಕರಣವಾಗುತ್ತದೆ. ದೇವರಾಜನಾದ ವಾಸವ ಬಂದು ಕೂಸನ್ನು ಹರಸಿ ಹೋಗಲಾಗಿ ಅವಳಿಗೆ ‘ವಾಸವದತ್ತಾ’ ಎಂಬ ಹೆಸರೂ ಪ್ರಾಪ್ತವಾಗುತ್ತದೆ. ಪ್ರಾಯಕ್ಕೆ ಬಂದ ಮಗಳಿಗೆ ಮದುವೆ ಮಾಡಲು ತಂದೆ ಅನೇಕ ರಾಜಕುಮಾರರನ್ನು ತೋರಿಸುತ್ತಾನೆ. ಅವರಲ್ಲೊಬ್ಬನೂ ಲೀಲಾವತಿಗೆ ಮೆಚ್ಚುಗೆಯಾಗಲಿಲ್ಲ.

‘ಹೀಗಿರುವಾಗ ಲೀಲಾವತಿಯೊಂದು ರಾತ್ರಿ ಕನಸಿನಲ್ಲಿ ಚೆಲುವನೊಬ್ಬನನ್ನು ಕಂಡು, ಕನಸು ನಿಜವೆಂದು ಬಗೆದು, ಅವನನ್ನು ಹುಡುಕಾಡುತ್ತಾಳೆ. ಆಕೆಯ ಉದ್ವಿಗ್ನ ಸ್ಥಿತಿಯನ್ನು ಕಂಡು ಮರುಗಿದ ಸಖಿಯರು ಅವನ ಚಿತ್ರವನ್ನು ಬರೆದು ತೋರಿಸುವಂತೆ ಕೇಳುತ್ತಾರೆ. ತಾನು ಬರೆದ ಚಿತ್ರವನ್ನೆ ನೋಡುತ್ತ ನೋಡುತ್ತ ಲೀಲಾವತಿಯ ವಿರಹತಾಪ ಉಲ್ಬಣಗೊಳ್ಳುತ್ತದೆ. ಅವಳಿಗೆ ಉಪಚಾರಮಾಡಿ ಹೊರಡುವುದು ತಡವಾಯಿತು’ ಎಂದು ಹೇಳುತ್ತ ಚೂತಪ್ರಿಯ ನಿದ್ದೆ ಹೋಗುತ್ತಾನೆ.

‘ಚೂತ್ರಪ್ರಿಯ ವಿವರಿಸಿದ ವೃತ್ತಾಮತ ನಿನಗೆ ಸಂಬಂಧಿಸಿದ್ದು’ ಎಂದು ಮಕರಂದ ರೂಪಕಂದರ್ಪನಿಗೆ ತಿಳಿಸುತ್ತಾನೆ. ಬೆಳಗಾಗುತ್ತಲೆ ಅವರು ಪ್ರಯಾಣವನ್ನು ಮುಂದುವರಿಸುತ್ತಾರೆ. ದಾರಿಯಲ್ಲೆದುರಾದ ಜಿನಮುನಿಗಳಿಗೆ ವಂದಿಸುತ್ತ ಅವರು ವಿಂಧ್ಯಾಚಲ ಇಂದ್ರಕೂಟ ದೇವಗಿರಿಗಳನ್ನು ದಾಟಿ, ಮಯೂಖನಿರ್ಝರವೆಂಬ ರತ್ನಶೈಲಕ್ಕೆ ಬರುತ್ತಾರೆ. ಅಲ್ಲಿದ್ದ ವಿದ್ಯುಲ್ಲೇಖೆ ಚಂದ್ರಲೇಖೆಯರೆಂಬ ವಿದ್ಯಾಧರಿಯರ ಮಾನ್ಯತೆಗೆ ಪಾತ್ರನಾಗಿ, ಚಕ್ರೇಶ್ವರೀ ದೇವಿಯನ್ನು ಆರಾಧಿಸಿ, ಸಿದ್ಧರಸದ ಪೊಂಗೊಡ ಮತ್ತು ಕಾಳಾವಲೋಕಿನೀ ಫಲಕವನ್ನು ರಾಜಕುಮಾರ ಪಡೆಯುತ್ತಾನೆ. ವಸಂತಮಾಸ ಪ್ರಾಪ್ತವಾಗಲು, ಇತ್ತ ರೂಪಕಂದರ್ಪನಿಗೆ, ಅತ್ತ ಲೀಲಾವತಿಗೆ ವಿರಹವೇದನೆ ಉಂಟಾಗುತ್ತದೆ. ಸಖಿಯರ ಸಲಹೆಯ ಮೇರೆಗೆ ಲೀಲಾವತಿ ಕುಸುಮಪುರದ ಹೊರವಲಯದ ವಸಂತೋದ್ಯಾನದಲ್ಲಿದ್ದ ಪದ್ಮಾವತಿಯನ್ನು ಆರಾಧಿಸಿ, ವರವನ್ನು ಪಡೆದು, ತನ್ನ ಉಪ್ಪರಿಗೆಯಲ್ಲಿ ಪ್ರಿಯಕರನ ಬರವಿಗಾಗಿ ಕಾದು, ನಿದ್ರೆ ಹೋಗುತ್ತಾಳೆ. ವಿರಹತಾಪದಿಂದ ಮೂರ್ಛೆಹೋಗಿದ್ದ ರೂಪಕಂದರ್ಪನನ್ನು ವಿದ್ಯುಲ್ಲೇಖೆ ಚಂದ್ರಲೇಖೆಯರು ‘ಪರ್ಣಲಘುವಿದ್ಯೆ’ಯಿಂದ ಎತ್ತಿಕೊಂಡು ತಂದು ಲೀಲಾವತಿಯ ಮಂಚದಲ್ಲಿಳಿಸಿ, ಅಜಿತನಾಥನ ಪೂಜೆಗಾಗಿ ಹೋಗುತ್ತಾರೆ. ಪರಸ್ಪರ ಅಂಗಸ್ಪರ್ಶರಿಂದ ಲೀಲಾವತಿ ರೂಪಕಂದರ್ಪರಿಬ್ಬರೂ ಎಚ್ಚರಗೊಂಡು, ವಿಸ್ಮಿತರಾಗಿ, ತಮ್ಮ ಕೊರಳಿನ ಹಾರಗಳನ್ನು ಬದಲಿಸಿಕೊಂಡು, ಸುಖವನ್ನು ಹೊಂದಿ, ಮೂರ್ಛೆಗೊಳ್ಳುತ್ತಾನೆ.

ಪೂಜೆಯಿಂದ ಹಿಂದಿರುಗಿದೆ ವಿದ್ಯುಲ್ಲೇಖೆ ಚಂದ್ರಲೇಖೆಯರು ರೂಪಕಂದರ್ಪನನ್ನೆತ್ತಿ ಕೊಂಡು ಹೋಗಿ ಮಕರಂದನ ಬಳಿ ಇಳಿಸುತ್ತಾರೆ. ಬೆಳಗಾದಾಗ ಇಬ್ಬರೂ ರಾತ್ರಿಯ ಘಟನೆಯನ್ನು ನೆನೆದು ಪುಲಕಿತರಾಗುತ್ತಾರೆ. ಲೀಲಾವತಿ ತನ್ನ ಕಾದಲನ ಬರವಿಗಾಗಿ ಕಾಯುತ್ತ ತೋಟದಲ್ಲಿಯೇ ಉಳಿಯುತ್ತಾಳೆ. ಗೆಳೆಯನೊಡನೆ ಅಲ್ಲಿಗೆ ಬಂದ ರೂಪಕಂದರ್ಪ ನಿದ್ರಾವಶನಾಗುತ್ತಾನೆ. ಅವನನ್ನು ನೋಡಿದ ಸಖಿಯರು ಅವನನ್ನು ಮದನನೆಂದೇ ಬಗೆದು, ಕರೆತಂದು, ತಮ್ಮ ಒಡತಿಗೊಪ್ಪಿಸುತ್ತಾರೆ. ಅವರಿಬ್ಬರ ಅಂತರಂಗವನ್ನರಿತ ಆ ಗೆಳತಿಯರು ಅವರಿಬ್ಬರಿಗೂ ಗಾಂಧರ್ವ ವಿವಾಹವನ್ನು ನೆರವೇರಿಸುತ್ತಾರೆ. ನವದಂಪತಿಗಳು ಜಲಕ್ರೀಡೆ ವನಕ್ರೀಡೆಗಳಲ್ಲಿ ವಿಹಾರ ವಿಲಾಸಗಳಲ್ಲಿ ಜಗತ್ತನ್ನೇ ಮರೆಯುತ್ತಾರೆ. ಹೀಗಿರುವಾಗ ಒಂದು ದಿನ ಲೀಲಾವತಿ ಮಕರಂದನಿಂದ ಕಾಳಾವಲೋಕಿನೀ ಫಲಕವನ್ನು ಕಸಿದುಕೊಂಡು, ಅದರಲ್ಲಿ ಕಂಡ ಪ್ರತಿರೂಪ ತನ್ನದಾದರೂ, ಅನ್ಯಸ್ತ್ರೀ ಚಿತ್ರವೆಂಬ ಭ್ರಮೆಯಿಂದ ಸಿಟ್ಟಾಗಿ ಲತೆಯಾಗುತ್ತಾಳೆ. ಪತ್ನಿಯನ್ನು ಕಾಣದೆ ವಿರಹದಿಂದ ಅಲೆದಾಡುತ್ತ ಬಂದು, ಆ ಬಳ್ಳಿಯನ್ನು ಲೀಲಾವತಿಯೆಂದೇ ಬಗೆದು ಆಲಿಂಗಿಸಿಕೊಳ್ಳಲಾಗಿ, ಆ ಬಳ್ಳಿ ಲೀಲಾವತಿಯಾಗಿ ಹಿಂದಿನಂತಾಗುತ್ತಾಳೆ.

ಮುಂದಿನ ದಿನಗಳಲ್ಲಿ ಅವರು ಸುಖಸಂತೋಷದಿಂದ ಕಾಲ ಕಳೆಯುತ್ತಾರೆ. ಉದ್ಯಾನದಲ್ಲೊಮ್ಮೆ ರೂಪಕಂದರ್ಪನೊಬ್ಬನೇ ತಿರುಗಾಡುತ್ತಿದ್ದಾಗ, ವಸಂತಶೇಖರನೆಂಬ ವಿದ್ಯಾಧರನ ಹೆಂಡತಿ ಮದನಮಂಜರಿ ಅವನ ರೂಪಕ್ಕೆ ಮರುಳಾಗಿ ಅವನೊಡನೆ ನೆರೆಯಲಿಚ್ಛಿಸುತ್ತಾಳೆ. ಶೌಚಗುಣವೇ ಸಾಕಾರಗೊಂಡಂತಿದ್ದ ಅವನು ಅವಳ ಇಚ್ಛೆಯನ್ನು ಪೂರೈಸದಿದ್ದಾಗ, ಅವಳು ರೋಷಗೊಂಡು ತನ್ನ ಮಾಯಾವಿದ್ಯೆಯಿಂದ ಅವನನ್ನು ಕುರವಕವನ್ನಾಗಿ ಮಾರ್ಪಡಿಸುತ್ತಾಳೆ. ಗಂಡನನ್ನು ಕಾಣದ ಲೀಲಾವತಿ ದುಃಖಭಾರದಿಂದ ಅಲೆದಲೆದು ಬಳಲಿ, ಸಾವನ್ನಪ್ಪಲು ಸಿದ್ದಳಾಗುತ್ತಾಳೆ. ಆಗವಳ ಸಖಿ ‘ಹೂಬಿಡದ ಕುರವಕಕ್ಕೆ ದೋಹದವುಂಟು ಮಾಡಿದ ಬಳಿಕ ನಿನ್ನಿಚ್ಛೆಯಂತೆ ವರ್ತಿಸು’ ಎಂದು ಬೇಡಿಕೊಳ್ಳುತ್ತಾಳೆ, ಲೀಲಾವತಿ ಗೆಳತಿಯ ಮಾತಿನಂತೆ ಅದನ್ನಪ್ಪಿಕೊಳ್ಳಲಾಗಿ, ಅದು ರೂಪಕಂದರ್ಪನಾಗಿ ಮಾರ್ಪಡುತ್ತದೆ. ಅನಂತರ ರೂಪಕಂದರ್ಪದೇವನು ಲೀಲಾವತಿಯೊಂದಿಗೆ ಜಯಂತೀಪುರವನ್ನು ಸೇರಿ, ತಂದೆತಾಯಿಯರನ್ನು ಕೂಡಿಕೊಂಡು ಸುಖ ಸಂತೋಷದಿಂದ ಜೀವನ ನಡೆಸುತ್ತಾನೆ.

ತನಗೆ ಹಿಂದಿದ್ದ ಸುಬಂಧುವಿನ (ಸುಮಾರು ೫೦೦) ವಾಸವದತ್ತಾ ಕಾವ್ಯವನ್ನು ವಿಶೇಷವಾಗಿ, ಕುತೂಹಲನ (ಸುಮಾರು ೮೦೦) ಲೀಲಾವಯೀ ಕಾವ್ಯವನ್ನು ಸ್ವಲ್ಪಮಟ್ಟಿಗೆ ನೇಮಿಚಂದ್ರ ಅನುಸರಿಸಿದ್ದಾನೆ. ಈ ಕಾವ್ಯದ ಹೆಸರು ಲೀಲಾವತಿಯಾದರೂ, ವಾಸವದತ್ತೆಯ ಹೆಸರು ಕಾವ್ಯದುದ್ದಕ್ಕೂ ಎದ್ದು ಕಾಣುತ್ತದೆ. ಇತರ ಕೆಲವು ಹೆಸರುಗಳಲ್ಲಿಯೂ ಸಾಮ್ಯವಿದೆ. ನಾಯಕ ನಾಯಕಿಯರ ಪ್ರಣಯ ವಿರಹಗಳು ಮೊದಲು ಕನಸಿನಲ್ಲಿ ಗೋಚರಿಸುತ್ತವೆ. ಎರಡರಲ್ಲಿಯೂ ನಾಯಕರು ನಾಯಿಕೆಯರನ್ನು ಹುಡುಕಿಕೊಂಡು ಹೋಗುತ್ತಾರೆ. ನಾಯಿಕೆಯ ವೃತ್ತಾಂತ ಶುಕಸಾರಿಕೆಯರಿಂದ ತಿಳಿಯುತ್ತದೆ. ನಾಯಕನ ವಿರಹಕಾಲದ ವ್ಯಾಪಾರವೆಲ್ಲ ವಿಂಧ್ಯಾಟವಿಯಲ್ಲಿ ಜರುಗುತ್ತದೆ. ಉಳಿದ ಪ್ರಸಂಗಗಳು ಲೀಲಾವತಿಯಲ್ಲಿ ಭಿನ್ನವಾಗಿವೆ. ಪ್ರಣಯಿಗಳ ಸಮಾಗಮ ವಿಧಾನ, ಪ್ರಣಯಮಾರ್ಗದಲ್ಲೊದಗಿದ ವಿಘ್ನರಾಶಿ ಹಾಗೂ ಪರಿಹಾರೋಪಾಯಗಳ ವಿಷಯದಲ್ಲಿ ಈ ಎರಡೂ ಕಾವ್ಯಗಳ ನಡುವೆ ವಿವರಗಳಲ್ಲಿ ಭಿನ್ನತೆಯಿದ್ದರೂ, ಕಾವ್ಯೋದ್ದೇಶ ಕಾವ್ಯಶಿಲ್ಪದ ಸ್ಥೂಲಚಿತ್ರ ಎರಡರಲ್ಲಿಯೂ ಬಹುಮಟ್ಟಿಗೆ ಒಂದೆ ಎಂದು ಹೇಳಬಹುದಾಗಿದೆ. ಈ ಸಾಮ್ಯಗಳಿಗೆ ಮುಖ್ಯ ಕಾರಣ ಸುಬಂಧುವಿನ ಕಾವ್ಯ, ಕುತೂಹಲನ ಕೃತಿಗಿಂತ ಕರ್ನಾಟಕದಲ್ಲಿ ಬಹುಜನಪ್ರಿಯತೆಯನ್ನು ಪಡೆದಿರುವುದೆ ಆಗಿದೆ. ಲೀಲಾವತಿ ಕೃತಿಯ ವಾಸವದತ್ತೆಯನ್ನನುಸರಿಸಿಲ್ಲ. ಇವೆರಡಕ್ಕೂ ಮೂಲವೆನ್ನಬಹುದಾದ ಮತ್ತೊಂದು ಪ್ರಾಚೀನ ಕೃತಿಯಿದ್ದಿರಬೇಕೆಂದು ಕೆಲವು ವಿದ್ವಾಂಸರು ಊಹಿಸುತ್ತಾರೆ.

[1]

ಈ ಎರಡು ಕೃತಿಗಳ ಜತೆಗೆ ನೇಮಿಚಂದ್ರ ಇನ್ನೂ ಕೆಲವು ಕೃತಿಗಳನ್ನು ನೋಡಿರಬೇಕೆಂದು ಊಹಿಸಬಹುದಾದ ಸಾಧ್ಯತೆಗಳಿವೆ. ಮಾಯಾಭುಜಂಗನ ಪ್ರಕರಣ ರಾಜಶೇಖರನ ಕರ್ಪೂರ ಮಂಜರಿಯಲ್ಲಿ ಬರುವ ಭೈರವಾನಂದನನ್ನು ನೆನಪಿಗೆ ತರುತ್ತದೆ. ವಿಕ್ರಮೋರ್ವಶೀಯದಲ್ಲಿರುವಂತೆ ಇಲ್ಲಿಯ ಪ್ರಣಯಿಗಳೂ ಮೂರು ಸಾರಿ ಅಗಲುತ್ತಾರೆ. ಅಲ್ಲಿಯೂ ರಾಣಿ ಲತೆಯಾಗುತ್ತಾಳೆ ; ಗಂಡ ತಬ್ಬಿದಾಗ ಮಾನವಿಯಾಗುತ್ತಾಳೆ.

ನೇಮಿಚಂದ್ರ ರೂಢಿಯಂತೆ ಕಾವ್ಯಾರಂಭದಲ್ಲಿ ಯಾವ ಕನ್ನಡದ ಪೂರ್ವಕವಿಯನ್ನೂ ಸ್ಮರಿಸಿಲ್ಲ. ಸಮಂತಭದ್ರ, ಅಕಳಂಕದೇವ, ಪೂಜ್ಯಪಾದ, ಕೊಂಡಕುಂದಾಚಾರ್ಯ,ಪರಮೇಷ್ಠಿ, ಜಿನಸೇನ, ವೀರಸೇನ, ಗುಣಭದ್ರಾಚಾರ್ಯರಿಗೆ ನಮನ ಸಲ್ಲಿಸುತ್ತಾನೆ. ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಪರಿಣತಿ ಅವನು ಭಾಸ ಕಾಳಿದಾಸ ದಂಡಿ ಮೊದಲಾದವರ ಗ್ರಂಥಗಳನ್ನು ಸಹ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರಬೇಕು. ಅಂತೆಯೇ ಪಂಪ ರನ್ನ ಮೊದಲಾದ ಪೂರ್ವದ ಕನ್ನಡ ಕವಿಗಳನ್ನು ಓದಿ ಅರಗಿಸಿಕೊಂಡಿದ್ದಾನೆನ್ನುವುದಕ್ಕೆ ಇವನ ಕಾವ್ಯಗಳಲ್ಲಿ ಅಲ್ಲಲ್ಲಿ ಅವರ ಪ್ರಭಾವವನ್ನು ಗುರುತಿಸಬಹುದು.

ನೇಮಿಚಂದ್ರ ಚತುರ್ಭಾಷಾ ವಿಶಾರದನಾಗಿ, ಬೇರೆ ಭಾಷೆಗಳ ಪ್ರಭಾವ ಇವನ ಕೃತಿಗಳ ಮೇಲೆ ಗಾಢವಾಗಿದ್ದರೂ, ಇವನು ಸ್ವತಂತ್ರ ಕವಿ ಎನ್ನಲು ಅನೇಕ ಆಧಾರಗಳನ್ನು ಉಲ್ಲೇಖಿಸಬಹುದಾಗಿದೆ: ಚಂದ್ರಿಕಾ ಮಹೋತ್ಸವ, ಸೂಳೆಗೇರಿ, ಹೂವಿನ ಸಂತೆಗಳ ಸವಿಸ್ತಾರ ವರ್ಣನೆ ಇಲ್ಲಿ ಬರುತ್ತದೆ. ಜಿನಾರಾಧನೆ, ಪದ್ಮಾವತೀಪೂಜೆ ಮೊದಲಾದ ಶಾಸ್ತ್ರೀಯ ಪ್ರಕ್ರಿಯೆಗಳು ಈ ಶೃಂಗಾರ ಕಾವ್ಯದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸುತ್ತವೆ. ವಿದ್ಯುಲ್ಲೇಖೆ ಚಂದ್ರಲೇಖೆಯರು ಮಕರಂದನಿಲ್ಲದಿದ್ದಾಗ ಕಂದರ್ಪದೇವನನ್ನು ಪರ್ಣಲಘು ವಿದ್ಯೆಯ ನೆರವಿನಿಂದ ಲೀಲಾವತಿಯ ಹಾಸುಗೆಯಲ್ಲಿ ಹಾಕಿ ಹೋಗುತ್ತಾರೆ. ಕುಸುಮಪುರದ ಉದ್ಯಾನದಲ್ಲಿ ಪ್ರಣಯಿಗಳ ವಿವಾಹ ನೆರವೇರುತ್ತದೆ. ಕಾಳಾವಲೋಕಿನೀ ಫಲಕದ ನಿಮಿತ್ತವಾಗಿ ಲೀಲಾವತಿ ಲತೆಯಾಗುತ್ತಾಳೆ.

ಕವಿಗೆ ಅಷ್ಟಾದಶವರ್ಣನೆಯ ವ್ಯಾಮೋಹ ಅತಿ. ಉಚಿತ ವರ್ಣನೆ ಓದುಗರಿಗೆ ಸ್ವಾದುವಾಗಬಹುದಾದರೂ ಕಾವ್ಯದ ಒಂದು ಪ್ರಮುಖಾಂಗವಾದರೂ, ಅನುಚಿತವಾದ ಪ್ರಮಾಣದ ಎಲ್ಲೆ ಮೀರಿದ ವರ್ಣನೆ ಅಹಿತವಾಗುತ್ತದೆ. ಸಮತೋಲನ ಪ್ರಜ್ಞೆಯಿಲ್ಲದ, ಕಾವ್ಯಾಂಗಗಳ ಬೆಳವಣಿಗೆಗೆ ಉಪಷ್ಟಂಭಕವಲ್ಲದ ವರ್ಣನೆಯಿಂದ ಕಥೆಯ ಕ್ರಿಯೆ ಕುಂಟುತ್ತದೆ, ಪಾತ್ರಗಳ ವಿಕಾಸಕ್ಕೆ ಭಂಗವೊದಗುತ್ತದೆ.

ಕೃತಿ ಪರಿಚಯ : ಅರ್ಧನೇಮಿ ಪುರಾಣಂ

ನೇಮಿನಾಥಪುರಾಣ ನೇಮಿಚಂದ್ರನ ಎರಡನೆಯ ಗ್ರಂಥ. ಜೈನಧರ್ಮವನ್ನು ಬೆಳಗಲು ಬರೆದ ಈ ಧಾರ್ಮಿಕದ ಗ್ರಂಥದಲ್ಲಿ ಪೂರ್ವದ ಪಂಪರನ್ನರಂತೆ ಕಾವ್ಯಧರ್ಮವನ್ನು ಬೆಳಗಲು ಪ್ರಯತ್ನಿಸಿದ್ದಾನೆ. ನೇಮಿನಾಥ ೨೨ನೆಯ ತೀರ್ಥಂಕರ. ಕನ್ನಡದಲ್ಲಿ ೧೫ ಮಂದಿ ತೀರ್ಥಂಕರರ ಕಥಾನಕಗಳಿವೆ. ನೇಮಿನಾಥನಿಗೆ ಸಂಬಂಧಿಸಿದ ಪುರಾಣಗಳೇ ಹೆಚ್ಚು. ಹತ್ತನೆಯ ಶತಮಾನದ ಚಾವುಂಡರಾಯನ ಗದ್ಯಕಾವ್ಯವಾದ ತ್ರಿಷಷ್ಟಿ ಲಕ್ಷಣ ಮಹಾಪುರಾಣದಲ್ಲಿ ನೇಮಿನಾಥನ ಕಥೆ ಬರುತ್ತದೆ. ೧೧೪೦ರಲ್ಲಿದ್ದ ಕರ್ಣಪಾರ್ಯನು ನೇಮಿನಾಥ ಪುರಾಣವನ್ನು ರಚಿಸಿದ್ದಾನೆ. ಈ ಪುರಾಣದಲ್ಲಿ ಹರಿವಂಶ – ಕುರುವಂಶಗಳ ಕಥೆಗಳ ಜತೆಗೆ ಕೃಷ್ಣಚರಿತ್ರೆಯೂ ಅಂತರ್ಗತಗೊಂಡಿರುವುದರಿಂದ ಇದು ವಿಶಿಷ್ಟವಾಗಿದೆ.

ಶೃಂಗಾರ ಕಾವ್ಯವನ್ನು ಬರೆದ ಲೇಖನಿಯೇ ನೇಮಿನಾಥ ಪುರಾಣವನ್ನು ರಚಿಸಿ, ಮುಮುಕ್ಷುಗಳ ಅಭೀಷ್ಟವನ್ನು ಪೂರೈಸಿ, ಜಿನಧರ್ಮದ ಮಹಿಮೆಯನ್ನು ಬೆಳಗಿಸಿದೆ. ಸಂಪೂರ್ಣ ಪುರಾಣವನ್ನು ರಚಿಸುವ ಬಯಕೆ ನೇಮಿಚಂದ್ರನಿಗಿದ್ದರೂ ಪೂರ್ವಭವಾವಳಿ ಹಾಗೂ ಕಂಸವಧೆಯೊಡನೆ ಎಂಟು ಆಶ್ವಾಸನೆಗಳಲ್ಲಿ ಕೃತಿ ಮುಕ್ತಾಯವಾಗುತ್ತದೆ. ರಚನೆ ಅರ್ಧದಲ್ಲಿಯೇ ನಿಂತುಹೋದದ್ದಕ್ಕೆ ಕಾರಣ ಗೊತ್ತಿಲ್ಲ. ಕವಿಯ ಸಾವೇ ಕಾರಣವೆಂದು ಊಹಿಸುವುದುಂಟು. ಅದೇನೇ ಇರಲಿ, ಕಾವ್ಯ ಅರ್ಧದಲ್ಲಿಯೇ ನಿಂತುಹೋಗಿರುವುದರಿಂದ ಇದನ್ನು ‘ಅರ್ಧನೇಮಿಪುರಾಣ’ವೆಂದು ಕರೆಯುವುದುಂಟು. ಈ ಪುರಾಣ ಕಥೆಯನ್ನು ಮುಂದೆ ಸಂಗ್ರಹಿಸಲಾಗಿದೆ.

ಜಂಬೂದ್ವೀಪದ ಸುಗಂಧಿಳ ವಿಷಯದಲ್ಲಿ ಸಿಂಹಪುರವೆಂಬ ನಗರವಿದೆ. ಅರ್ಹದ್ದಾಸ ಅಲ್ಲಿಯ ಅರಸು. ಜಿನದತ್ತೆ ಅವನ ರಾಣಿ, ಮಗ ಅಪರಾಜಿತ, ಪ್ರೀತಿಮತಿ ಅವರ ಸೊಸೆ. ಅವರು ಹಲವು ಕಾಲ ಸುಖದಿಂದಿರುವಾಗ ವಿಮಲವಾಹನರ ಸಮವಸರಣ ಬರುತ್ತದೆ. ಅಲ್ಲಿ ಗೈದಿ ಧರ್ಮೋಪದೇಶವನ್ನಾಲಿಸಿದ ಅರ್ಹದ್ದಾಸ ಸಂಸಾರವ್ಯಾಮೋಹವನ್ನು ತೊರೆದು, ತನ್ನ ಮಗನಿಗೆ ಪಟ್ಟಿಕಟ್ಟಿ, ದೀಕ್ಷೆ ಪಡೆದು, ತಪೋನಿರತನಾಗುತ್ತಾನೆ. ಅಪರಾಜಿತ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದಂತೆ, ತಂದೆ ಮತ್ತು ವಿಮಲವಾಹನರು ಮೋಕ್ಷಕ್ಕೆ ಸಂದ ಸುದ್ಧಿ ಅವನ ಕಿವಿಯನ್ನು ತಾಗುತ್ತದೆ. ತಂದೆ ಮತ್ತು ಗುರುಗಳನ್ನು ಕಾಣದೆ ಆಹಾರ ತೆಗೆದುಕೊಳ್ಳುವುದಿಲ್ಲವೆಂದು ಹಟತೊಟ್ಟು, ಚತುರಂಗಬಲಸಹಿತ ಅವನು ಮಂದರ ಪರ್ವತದ ತಪ್ಪಲಲ್ಲಿ ಬೀಡು ಬಿಡುತ್ತಾನೆ. ಆಗ ದೇವೇಂದ್ರನ ಆಣತಿಯ ಮೇರೆಗೆ ಕುಬೇರ ಇಂದ್ರಜಾಲವಿದ್ಯೆಯ ಮೂಲಕ ಅಪರಾಜಿತನಿಗೆ ತಂದೆ ಮತ್ತು ಗುರುಗಳನ್ನು ತೋರಿಸುತ್ತಾನೆ. ಅದರಿಂದ ತೃಪ್ತನಾದ ಅಪರಾಜಿತ ನಗರಕ್ಕೆ ಹಿಂದಿರುಗಿ, ಸುಖಶಾಂತಿಯಿಂದ ರಾಜ್ಯಭಾರವನ್ನು ನಡೆಸುತ್ತಾನೆ.

ಹೀಗಿರುವಾಗ ಫಾಲ್ಗುಣಿ ನಂದೀಶ್ವರನ ಪೂಜಾಸಮಯದಲ್ಲಿ ಅಪರಾಜಿತ ತ್ರಿಭುವನತಿಲಕವೆಂಬ ಬಸದಿಗೆ ಹೋದಾಗ, ಇ‌ಬ್ಬರು ಚಾರಣಮುನಿಗಳು ಎದುರಾಗುತ್ತಾರೆ. ಅವರನ್ನು ಎಲ್ಲಿಯೋ ಕಂಡ ನೆನಪಿರುವುದಾಗಿ ಅಪರಾಜಿತ ನುಡಿಯುತ್ತಾನೆ. ಆ ಮುನಿಗಳಲ್ಲಿ ಹಿರಿಯವನು ಹೇಳಿದ ಕಥೆಯಿದು” ‘ಮಂದರ ಪರ್ವತದ ಅಪರ ವಿದೇಹ ಗಂಧಿಲ ವಿಷಯದಲ್ಲಿರುವ ವಿಜಯಾರ್ಧಪರ್ವತದ ಎರಡು ಪಕ್ಕಗಳಲ್ಲಿ ಎರಡು ವಿದ್ಯಾಧರ ಶ್ರೇಣಿಗಳಿವೆ. ಉತ್ತರ ಶ್ರೇಣಿಯಲ್ಲಿ ಸೂರ್ಯಪ್ರಭವೆಂಬ ಪಟ್ಟಣ; ಅದರಲ್ಲಿ ಸೂರ್ಯಪ್ರಭನೆಂಬ ದೊರೆ. ಧಾರಿಣಿ ಅವನ ಮಡದಿ. ಅವರಿಗೆ ಚಿಂತಾಗತಿ, ಮನೋಗತಿ, ಚಪಳಗತಿಯರೆಂಬ ಮೂವರು ಮಕ್ಕಳು. ಮತ್ತೊಂದು ಶ್ರೇಣಿಯ ಅರಿಂಜಯ ಎಂಬ ಖಚರನಿಗೂ ಅವನ ರಾಣಿ ಅಜಿತಸೇನಾದೇವಿಗೂ ವಿಳಾಸವತಿಯೆಂಬ ಮಗಳು. ಅವಳು ಗಗನಗಾಮಿನೀ ವಿದ್ಯೆಯಲ್ಲಿ ಪರಿಣತೆ. ಅವಳನ್ನು ಆ ವಿದ್ಯೆಯಲ್ಲಿ ಯಾರು ಸೋಲಿಸುತ್ತಾರೋ, ಅವನೇ ಅವಳ ಪತಿಯೆಂದು ತಂದೆತಾಯಿ ಸ್ವಯಂವರವನ್ನು ಏರ್ಪಡಿಸುತ್ತಾರೆ. ಇತರ ವಿದ್ಯಾಧರ ಕುಮಾರರಂತೆ ಮನೋಗತಿ ಚಪಳಗತಿಯರೂ ಸೋಲುತ್ತಾರೆ. ತಮ್ಮಂದಿರ ಸೋಲಿಗೆ ವ್ಯಗ್ರವಾದ ಚಿಂತಾಗತಿ ತಾನೇ ಮುಂದಾಗಿ ವಿಳಾಸವತಿಯನ್ನು ಸೋಲಿಸುತ್ತಾನೆ. ಆದರವನು ವಿಳಾಸವತಿಯನ್ನು ಮದುವೆಯಾಗಲೊಪ್ಪದೆ, ತನ್ನ ತಮ್ಮಂದಿರಲ್ಲೊಬ್ಬರನ್ನು ವಿವಾಹವಾಗುವಂತೆ ಒತ್ತಾಯಿಸುತ್ತಾನೆ. ಅದಕ್ಕೊಪ್ಪನ ವಿಳಾಸವತಿ ನಿರ್ವೇಗದಿಂದ ದೀಕ್ಷೆ ಪಡೆಯುತ್ತಾಳೆ. ಚಿಂತಾಗತಿ ಮನೋಗತಿ ಚಪಳಗತಿಯರೂ ದೀಕ್ಷೆವಹಿಸಿ ಸತ್ತ ಮೇಲೆ ಸಾಮಾನಿಕ ದೇವರಾಗಿ ಜನಿಸುತ್ತಾರೆ. ಹಾಗೆ ಜನಿಸಿದವರಲ್ಲಿ ನೀನೆ ಚಿಂತಾಗತಿ. ಗಗನ ಚಂದ್ರ ಹಾಗೂ ಗಗನ ಸೌಂದರಿ ಎಂಬವರಿಗೆ ಮಕ್ಕಳಾಗಿ ಹುಟ್ಟಿ, ದೀಕ್ಷೆ ವಹಿಸಿ, ಜನ್ಮಾಂತರಗಳಲ್ಲಿ ಸಾಗಿ ಬಂದಿದೆ. ಅದರ ವಿವರವನ್ನು ನಿರವಿಸುತ್ತೇನೆ, ಕೇಳಿ’ ಎಂದು ಮುಂದಿನ ಕಥೆಯನ್ನು ಪ್ರಾರಂಭಿಸುತ್ತಾನೆ.

‘ಮಗಧದೇಶದ ಅಡವಿಯೊಂದರಲ್ಲಿ ವಿಂಧ್ಯಕನೆಂಬ ಬೇಡ. ವಾಗುರಿ ಅವನ ಹೆಂಡತಿ. ಒಂದು ದಿನ ಅವರು ಬೇಟೆಗೆ ಹೋದಾಗ, ತಪೋನಿರತರಾದ ಇಬ್ಬರು ಮುನಿಗಳ ಮೇಲೆ ಬಾಣಪ್ರಯೋಗ ಮಾಡಲು ಗಂಡ ಸಿದ್ಧನಾದಾಗ, ವಾಗುರಿ ತಡೆಯುತ್ತಾಳೆ. ಪತಿಯನ್ನು ಆ ಮುನಿಗಳ ಬಳಿ ಕರೆದೊಯ್ಯುತ್ತಾಳೆ. ಪತಿ ಮುನಿಗಳಿಂದ ಪಂಚಾಣುವ್ರತ ದೀಕ್ಷೆ ಪಡೆದು, ಜೀವನ ನಡೆಸುತ್ತಿದ್ದು ಹಣ್ಣನ್ನಾರಿಸುವಾಗ ಅವನು ಹಾವು ಕಡಿದು ಸಾಯುತ್ತಾನೆ. ಅದೇ ಹಾವಿನಿಂದ ಕಡಿಸಿಕೊಂಡು ವಾಗುರಿಯೂ ಸಾಯುತ್ತಾಳೆ. ಅನಂತರ ವಿಂಧ್ಯಕ ರಾಜಗೃಹದ ವೃಷಭದತ್ತನೆಂಬ ವೈಶ್ಯನಿಗೆ ಇಭ್ಯಕೇತು ಎಂಬ ಮಗನಾಗಿ ಹುಟ್ಟುತ್ತಾನೆ. ಅವನು ರೂಪವಂತ, ನಾಟ್ಯಪ್ರವೀಣ, ಕಾವ್ಯಪ್ರೇಮಿ.

ರಾಜಗೃಹ ನಗರದ ಪ್ರಭು ಜಿತಶತ್ರುವಿಗೆ ಅರಸಿ ಸುಪ್ರಭೆಯಲ್ಲಿ ಕಮಲಪ್ರಭೆಯೆಂಬ ಮಗಳು ಜನಿಸುತ್ತಾಳೆ. ಕಮಲಪ್ರಭೆ ಪ್ರಾಯಕ್ಕೆ ಬಂದಾಗ ಸ್ವಯಂವರ ಏರ್ಪಾಡಾಗುತ್ತದೆ ಅವಳು ಇಭ್ಯಕೇತುವಿನ ಕೊರಳಿಗೆ ಹೂಹಾರ ಹಾಕುತ್ತಾಳೆ. ಜಿತಶತ್ರುವಿಗೆ ಕಿರಿಯ ಹೆಂಡತಿ ವಸಂತಸೇನೆಯಲ್ಲಿ ಹುಟ್ಟಿದ ಮದನ ಸುಂದರಿಯನ್ನು ಇಭ್ಯಕೇತುವಿಗೆ ಕೊಟ್ಟು ಮದುವೆಯಾಗುತ್ತದೆ. ಜಿತಶತ್ರು ಅಳಿಯನಿಗೆ ರಾಜ್ಯಭಾರವನ್ನು ವಹಿಸಿ, ತಪಸ್ಸಿಗೆ ಹೊರಡುತ್ತಾನೆ. ವೃಷಭದತ್ತನೂ, ಮಗ ಇಭ್ಯಕೇತುವಿಗೆ ಪಟ್ಟಕಟ್ಟಿ, ದೀಕ್ಷೆ ಪಡೆಯುತ್ತಾನೆ.

ಒಂದು ದಿನ ಇಭ್ಯಕೇತು ಒಡ್ಡೋಲಗದಲ್ಲಿದ್ದಾಗ ಬೇಡನೊಬ್ಬ ಆನೆಯ ಕುಂ ಭಸ್ಥಳದ ಮುತ್ತುಗಳನ್ನೂ, ಕಸ್ತೂರಿ ಮೃಗವನ್ನೂ ಸಿಂಹದ ಮರಿಯನ್ನೂ ತಂದು ಕಾಣಿಕೆ ನೀಡುತ್ತಾನೆ. ದೊರೆಗೆ ಅವನ ಮೇಲೆ ಮೋಹಹುಟ್ಟಲಾಗಿ, ಅವನನ್ನು ತನ್ನ ಸೇನಾಪತಿಯನ್ನಾಗಿ ನೇಮಿಸಿಕೊಳ್ಳುತ್ತಾನೆ. ಒಂದು ದಿನ ಮಂದರ ಪರ್ವತದ ಭಟ್ಟಾರಕರನ್ನು ಇಭ್ಯಕೇತು ಸಂಧಿಸಿ, ತನಗೆ ಬೇಡನಲ್ಲಿ ವ್ಯಾಮೋಹವೇಕೆ ಹುಟ್ಟಿತೆಂದು ಕೇಳುತ್ತಾನೆ. ಹಿಂದೆ ಇಭ್ಯಕೇತು ವಿಂಧ್ಯಕನಾಗಿದ್ದುದನ್ನು, ಅವನ ಹೆಂಡತಿ ವಾಗುರಿಯೇ ಈಗ ಬೇಡನಾಗಿರುವುದನ್ನು ಅವರು ತಿಳಿಸುತ್ತಾರೆ. ಇಭ್ಯಕೇತುವಿಗೆ ಪೂರ್ವಜನ್ಮಸ್ಮರಣೆಯುಂಟಾಗಿ, ತನ್ನ ಮಗನಿಗೆ ರಾಜ್ಯಭಾರವನ್ನು ವಹಿಸಿ, ಸತಿ ಕಮಲಪ್ರಭೆಯೊಡನೆ ತಪಸ್ಸಿಗೆ ಹೊರಡುತ್ತಾನೆ. ಸೇನಾಪತಿ ಧೀವರನೂ ಅವರನ್ನು ಹಿಂಬಾಲಿಸುತ್ತಾನೆ. ಕಠಿನ ತಪಸ್ಸಿನಿಂದ ಆ ಮೂವರೂ ಕ್ರಮವಾಗಿ ಶ್ರೀನಿಳಯ ವಿಮಾನದಲ್ಲಿ ಶ್ರೀದೇವನಾಗಿ, ಸುಪ್ರಭವಿಮಾನದಲ್ಲಿ ವಿಮಲ ಪ್ರಭುದೇವನಾಗಿ, ವಿದ್ಯುತ್ಪ್ರಭ ವಿಮಾನದಲ್ಲಿ ಶ್ರುತಪ್ರಭಾಂಕದೇವನಾಗಿ, ಮುಂದೆ ಮೂವರೂ ಚಿಂತಾಗತಿ, ಮನೋಗತಿ ಮತ್ತು ಚಪಲಗತಿಯಾಗಿ ಹುಟ್ಟುತ್ತಾರೆ.

ಚಾರಣರು ನಿರವಿಸಿದ ಪೂರ್ವ ವೃತ್ತಾಂತವನ್ನು ಕೇಳಿದ ಅಪರಾಜಿತ ತಪಸ್ಸಿಗೆ ತೆರಳಿ, ದೇಹತ್ಯಾಗಮಾಡಿ, ಅಚ್ಯುತಸಾಂತಕರ ವಿಮಾನದಲ್ಲಿ ಅಚ್ಯುತೇಂದ್ರನಾಗಿ ಜನಿಸುತ್ತಾನೆ. ಅಷ್ಟಾದರೂ ಅವನ ಭೋಗತೃಷ್ಣೆ ಆರಲಿಲ್ಲ.

ಜಂಬೂದ್ವೀಪದ ಭರತಕ್ಷೇತ್ರದ ಕುರುಜಾಂಗಣ ದೇಶದಲ್ಲಿ ಹಸ್ತಿನಾಪುರವೆಂಬ ಪಟ್ಟಣ. ಶ್ರೀಚಂದ್ರರಾಜ ಆ ಪುರದ ಅಧಿಪತಿ. ಶ್ರೀಮತಿ ಅವನ ರಾಣಿ. ಅವರಿಗೆ ಸುಪ್ರತಿಷ್ಠನೆಂಬ ಮಗ. ಯೌವನ ಪ್ರಾಪ್ತವಾದ ಮಗನಿಗೆ ಸುನಂದಾ ದೇವಿಯನ್ನು ತಂದು ಮದುವೆ ಮಾಡಿಕೊಳ್ಳಲಾಗುತ್ತದೆ. ಅವರಿಗೆ ಸುದೃಷ್ಟನೆಂಬ ಮಗ ಹುಟ್ಟುತ್ತಾನೆ. ಸುಖಸಂತೋಷಗಳಿಂದ ಓಲಾಡುತ್ತಿದ್ದ ಸುಪ್ರತಿಷ್ಠನೊಂದು ದಿನ ಕರುಮಾಡದಲ್ಲಿ ಮಲಗಿರುವಾಗ ಉಲ್ಕಾಪಾತವನ್ನು ಕಂಡು, ರಾಜ್ಯಭಾರವನ್ನು ತ್ಯಜಿಸಿ, ತಪಸ್ಸುಮಾಡಿ, ಉತ್ತರ ವಿಜಯಂತಿ ವಿಮಾನದಲ್ಲಿ ಅಹಮಿಂದ್ರನಾಗಿ ಜನಿಸುತ್ತಾನೆ. ಅವನೇ ಮುಂದೆ ಹರಿವಂಶದ ಸಮುದ್ರರಾಜನಿಗೆ ನೇಮಿನಾಥನೆಂಬ ಮಗನಾಗಿ ಹುಟ್ಟುತ್ತಾನೆ.

ಹರಿವಂಶದ ಇತಿಹಾಸ :

ಭರತಕ್ಷೇತ್ರದ ಕೃತಾರ್ಥವೆಂಬ ವಿಷಯದಲ್ಲಿ ಸೌಂದರ್ಯಪುರವೆಂಬ ನಗರ. ಅಲ್ಲಿಯ ದೊರೆ ಶೂರಸೇನ. ಅವನ ಮಗ ಸೂರವೀರ. ಅವನಿಗೂ ಪತ್ನಿ ಧಾರಿಣಿಗೂ ಅಂಧಕವೃಷ್ಟಿ, ನರಪತಿವೃಷ್ಟಿ ಎಂಬಿಬ್ಬರು ಮಕ್ಕಳು. ಅಂಧಕವೃಷ್ಟಿ ಮತ್ತು ಆತನ ಪತ್ನಿ ಸುಭದ್ರೆಗೆ ಸಮುದ್ರವಿಜಯ, ವಸುದೇವ ಮೊದಲಾದ ಹತ್ತು ಮಂದಿ ಗಂಡು ಮಕ್ಕಳೂ, ಕುಂತಿ ಮಾದ್ರಿ ಎಂಬಿಬ್ಬರು ಹೆಣ್ಣುಮಕ್ಕಳೂ ಹುಟ್ಟುತ್ತಾರೆ. ನರಪತಿವೃಷ್ಟಿ ಮತ್ತು ಅವನ ಪತ್ನಿ ಪದ್ಮಾವತಿಯರಿಗೆ ಉಗ್ರಸೇನ, ದೇವಸೇನ, ಮಹಾಸೇನರೆಂಬ ಮೂವರು ಗಂಡುಮಕ್ಕಳೂ, ಗಾಂಧಾರಿ ಎಂಬ ಹೆಣ್ಣುಮಗಳೂ ಆಗುತ್ತಾರೆ.

ಅಂತೆಯೇ ಹಸ್ತಿನಾವತಿಯ ಕುರುವಂಶದಲ್ಲಿ ಪರಾಶರನೆಂಬ ರಾಜ, ಅವನಿಗೆ ಸತ್ಯವತಿ ಎಂಬ ಹೆಂಡತಿ. ಅವರಿಗೆ ವ್ಯಾಸನೆಂಬ ಮಗ. ಅವನಿಗೆ ಸುಭದ್ರೆ ಎಂಬ ಹೆಂಡತಿ. ಅವರ ಹೊಟ್ಟೆಯಲ್ಲಿ ಧೃತರಾಷ್ಟ್ರ, ಪಾಂಡು, ವಿದುರರೆಂಬ ಮಕ್ಕಳು ಹುಟ್ಟುತ್ತಾರೆ.

ಪಾಂಡುವಿಗೆ ಹರಿವಂಶದ ಕುಂತಿಯಲ್ಲಿ ಮೋಹ ಬೆಳೆಯುತ್ತದೆ. ವಿರಹದಿಂದ ಅಲೆದಾಡುತ್ತ ಉದ್ಯಾನವೊಂದನ್ನು ಸೇರಿದಾಗ, ಅವನಿಗಲ್ಲಿ ಉಂಗುರವೊಂದು ಸಿಗುತ್ತದೆ. ಆ ಉಂಗುರ ವಜ್ರಮುಖನೆಂಬ ವಿದ್ಯಾಧರನಿಗೆ ಸೇರಿದ್ದು. ಆ ವಿಷಯವನ್ನು ತಿಳಿದ ಪಾಂಡು ಅದನ್ನು ವಿದ್ಯಾಧರನಿಗೀಯುತ್ತಾನೆ. ಪಾಂಡುವಿನ ನಿಷ್ಕಪಟ ಗುಣವನ್ನು ಮೆಚ್ಚಿದ ವಜ್ರಮುಖ ‘ಇದು ಕಾಮರೂಪಸಾಧನ. ಇದರ ಸಹಾಯದಿಂದ ನೀನು ನಿನ್ನಿಚ್ಛೆಯನ್ನು ಪೂರೈಸಿಕೊಂಡ ನಂತರ ನನಗೆ ಹಿಂದಿರುಗಿಸು’ ಎಂದು ಉಂಗುರವನ್ನವನಿಗೆ ಒಪ್ಪಿಸುತ್ತಾನೆ. ಅದರ ಸಹಾಯದಿಂದ ಪಾಂಡು ಕುಂತಿಯ ಅಂತಃಪುರವನ್ನು ಪ್ರವೇಶಿಸಿ, ಅವಳೊಡನೆ ಸರಸಕೇಳಿಯಲ್ಲಿ ತೊಡಗುತ್ತಾನೆ. ಕುಂತಿ ಗರ್ಭಿಣಿಯಾಗಿ ಕಾಲಕ್ರಮೇಣ ಗಂಡು ಮಗುವನ್ನು ಹಡೆಯುತ್ತಾಳೆ. ಮದುವೆಯಾಗುವ ಮುನ್ನವೇ ಹುಟ್ಟಿದ ಮಗುವೆಂದು ಹೆದರಿ, ಕುಂತಿ ಅದನ್ನು ಮಂದಸದಲ್ಲಿಟ್ಟು, ಯಮುನಾ ನದಿಗರ್ಪಿಸುತ್ತಾಳೆ. ಸೌಂದರ ರಾಜಪುರದ ರಾಜ ಆದಿತ್ಯನಿಗೆ ಆ ಮಂದಸ ಸಿಗುತ್ತದೆ. ಅದನ್ನು ಅರಮನೆಗೆ ತಂದು, ಮುಚ್ಚಳ ತೆಗೆದಾಗ, ಆ ಕೂಸು ರಾಣಿಯರ ಪೈಕಿ ರಾಧೆಯ ಕಡೆಗೆ ತೆವಳುತ್ತದೆ. ರಾಧೆ ಸಾಕಿದ್ದರಿಂದ ‘ರಾಧೇಯ’ನೆಂದೂ, ಮಂದಸದಿಂದ ಹೊರತೆಗೆದಾಗ ಅದು ತನ್ನೆರಡು ಕಿವಿಗಳನ್ನು ಕೈಯಿಂದ ಹಿಡಿದುಕೊಂಡಿದ್ದುದರಿಂದ ‘ಕರ್ಣ’ನೆಂದೂ, ಆದಿತ್ಯ ಮಗನಾದ್ದರಿಂದ ‘ರವಿಸುತ’ನೆಂದೂ, ಕನ್ಯೆಗೆ ಹುಟ್ಟಿದ್ದರಿಂದ ‘ಕಾನೀನ’ನೆಂದೂ ಅವನಿಗೆ ಹೆಸರಂಟಿಕೊಳ್ಳುತ್ತದೆ.

ಮುಂದಿನ ಕಾಲದಲ್ಲಿ ಪಾಂಡುವಿನೊಡನೆ ಕುಂತಿಮಾದ್ರಿಯರ, ಧೃತರಾಷ್ಟ್ರನೊಡನೆ ಗಾಂಧಾರಿಯ ವಿವಾಹ ನಡೆಯುತ್ತದೆ. ಪಾಂಡುವಿಗೆ ಧರ್ಮರಾಯಾದಿ ಪಂಚಪಾಂಡವರೂ, ಧೃತರಾಷ್ಟ್ರನಿಗೆ ದುರ್ಯೋಧನ ದುಶ್ಯಾಸನಾದಿ ನೂರ್ವರು ಮಕ್ಕಳೂ ಜನಿಸುತ್ತಾರೆ.

ಹೀಗಿರುವಾಗ ಗಂಧಮಾದವ ಗಿರಿಯಲ್ಲಿದ್ದ ಸುಪ್ರತಿಷ್ಠರೆಂಬ ಯತಿಪತಿಯನ್ನು ಶೂರವೀರ ಸಂದರ್ಶಿಸಿ, ಅವರಿಂದ ಉಪದೇಶ ಪಡೆದು, ಶೂರವೀರ ವೈರಾಗ್ಯಪರನಾಗಿ ರಾಜ್ಯವನ್ನು ತ್ಯಜಿಸಿ ತಪೋನಿರತನಾಗುತ್ತಾನೆ. ಸುಪ್ರತಿಷ್ಠತರಿಗೆ ಸುದರ್ಶನನೆಂಬುವನು ಕ್ರೂರಹಿಂಸೆ ಕೊಡುತ್ತಿದ್ದುದನ್ನು ಕಂಡ ಶೂರವೀರ ಆ ಉಪದ್ರವಕ್ಕೆ ಕಾರಣವೇನೆಂದು, ಯತಿಪತಿಯನ್ನು ಪ್ರಶ್ನಿಸುತ್ತಾನೆ. ಯತಿಪತಿ ಪೂರ್ವಭವದ ಕಥೆಯನ್ನು ವಿವರಿಸುತ್ತಾನೆ.

ಭರತಕ್ಷೇತ್ರದ ಚಂಪಾಪುರದಲ್ಲಿ ಸೂರದತ್ತ ಸುದತ್ತರೆಂಬ ವರ್ತಕರಿದ್ದರು. ವ್ಯಾಪಾರಕ್ಕೆ ಹೋದ ಇವರು ಅಪಾರ ಹಣವನ್ನು ಸಂಪಾದಿಸುತ್ತಾರೆ. ಸುಂಕಕೊಡುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹಣವನ್ನೊಂದು ಪೊದರಿನಲ್ಲಿ ಬಚ್ಚಿಡುತ್ತಾರೆ. ಬೇರುಬಿಕ್ಕೆಗಳನ್ನರಸುತ್ತಿದ್ದ ಶೌಂಡಿಕನೆಂಬ ಕಳ್ಳನಿಗೆ ಆ ಗಂಟು ಸಿಗುತ್ತದೆ. ಹರದರು ಬಂದು ನೋಡಿ, ಹಣ ಕಾಣೆಯಾಗಿರಲಾಗಿ, ಪರಸ್ಪರ ಅನುಮಾನದಿಂದ, ಹೊಡೆದಾಡಿ, ಸತ್ತು ನರಕ ಸೇರುತ್ತಾರೆ. ಅನಂತರ ಅವರು ಟಗರುಗಳಾಗಿ, ಗೂಳಿಗಳಾಗಿ, ಹುಟ್ಟಿ, ಜನ್ಮಾಂತರ ವೈರದಿಂದ ಹೊಡೆದಾಡಿ, ಸತ್ತು ಕೋಡಗಗಳಾಗಿ ಹುಟ್ಟುತ್ತಾರೆ. ಮತ್ತೆಯೂ ಕೋಡಗಗಳು ಬಡಿದಾಡಿದಾಗ, ಒಂದು ಸಾಯುತ್ತದೆ. ಮತ್ತೊಂದು ಸಾಯುವ ಸ್ಥಿತಿಯಲ್ಲಿರುತ್ತದೆ. ಆಗ ಗಗನದಿಂದಿಳಿತಂದ ಚಾರಣರು ಧರ್ಮೋಪದೇಶ ಮಾಡಲಾಗಿ, ಪಾವನಗೊಂಡ ಕಪಿಸತ್ತು, ಸೌಧರ್ಮ ಕಲ್ಪತರುವಿನಲ್ಲಿ ಚಿತ್ರಾಂಗದ ದೇವನಾಗಿ ಹುಟ್ಟುತ್ತದೆ. ಆಯುಷ್ಯಾಂತದಲ್ಲಿ ಅವನು ಮಡಿದು, ಪೌದನಪುರದರಸನಿಗೆ ಸುಪ್ರತಿಷ್ಠನೆಂಬ ಮಗನಾಗಿ ಜನ್ಮತಳೆಯುತ್ತಾನೆ.

ಕಪಿಯಾಗಿ ಸತ್ತ ಸುದತ್ತ ಸಿಂಧೂತೀರದ ರುಸಿವಳ್ಳಿಯಲ್ಲಿ ಮೃಗಾಯಣನೆಂಬ ಮುನಿಗೂ, ವಿಶಾಳೆಯೆಂಬ ಗೊರವತಿಗೂ ಗೌತಮನಾಗಿ ಹುಟ್ಟಿ, ಮುಂದೆ ಸುದರ್ಶನ ದೇವನಾಗಿ ಉಪಸರ್ಗ ಮಾಡಿದನೆಂದು ಹೇಳುತ್ತಾರೆ. ಈ ಕತೆಯನ್ನು ಕೇಳಿದ ಸುದರ್ಶನದೇವರು ಸದ್ಧರ್ಶನ ನಿರತನಾಗುತ್ತಾನೆ. ಅಂಧಕವೃಷ್ಟಿಯೂ ವೈರಾಗ್ಯಪರನಾಗಿ, ತಪಗೈದು, ಮೋಕ್ಷ ಪಡೆಯುತ್ತಾನೆ.

ಸಮುದ್ರ ವಿಜಯ ತನ್ನ ತಮ್ಮಂದಿರೊಡನೆ ನಿರ್ವಿಘ್ನವಾಗಿ ರಾಜ್ಯಭಾರ ನಡೆಸುತ್ತಿದ್ದಾಗ ಮನ್ಮಥರೂಪನೂ ರಸಿಕನೂ ಆದ ಕಿರಿಯ ತಮ್ಮ ವಸುದೇವನಿಂದ ತಂತಮ್ಮ ಸಂಸಾರಗಳು ಹಾಳಾಗುತ್ತಿರುವುದಾಗಿ ಊರಿನ ಜನ ದೂರು ಸಲ್ಲಿಸುತ್ತಾರೆ. ಪುರಜನರ ತೃಪ್ತಿಗಾಗಿ ಸಮುದ್ರವಿಜಯ ತಮ್ಮ ತಮ್ಮನನ್ನು ಊರಹೊರಗಿನ ಉದ್ಯಾನದ ಅರಮನೆಯಲ್ಲಿ ಬಂಧನದಲ್ಲಿಡುತ್ತಾನೆ. ಬಂಧನದ ವಿಷಯ ತಿಳಿದ ವಸುದೇವ ಯಾರಿಗೂ ತಿಳಿಯದಂತೆ ಅರಮನೆಯಿಂದ ಹೊರಟು, ಸ್ಮಶಾನ ಸೇರಿ, ತಾನು ಬೆಂಕಿಯಲ್ಲಿ ಬಿದ್ದು ಸತ್ತುದಾಗಿ ಪತ್ರ ಬರೆದಿಟ್ಟು, ದೇಶಾಂತರಕ್ಕೆ ಹೋಗುತ್ತಾನೆ. ಅದೊಂದು ದಿಗ್ವಿಜಯ ಯಾತ್ರೆ.

ವಿಜಯಖೇಟಪುರವವನ್ನು ಪ್ರವೇಶಿಸಿದ ವಸುದೇವ ಅಲ್ಲಿಯ ದೊರೆಯ ಮಗಳು ಶ್ಯಾಮಲೆಯನ್ನು ಮದುವೆಯಾಗಿ, ಬಳುವಳಿಯಾಗಿ ಬಂದ ರಾಜ್ಯದಲ್ಲಿ ಸುಖವಾಗಿರುತ್ತ, ಒಂದು ದಿನ ಅಲ್ಲಿಂದ ಹೊರಟು, ಮುಂದೆ ಮುಂದೆ ಸಾಗಿ, ದಾರಿಯಲ್ಲಿ ಸಿಕ್ಕಿದ ಸರೋವರದಲ್ಲಿ ಮುಖ ತೊಳೆದುಕೊಂಡು, ವಿಶ್ರಮಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಸರೋವರದಿಂದ ಹೊರಬಂದ ಮದ್ದಾನೆಯ ಬೆನ್ನೇರಿದ ಕೂಡಲೇ ವಿದ್ಯಾಧರರಿಬ್ಬರು ಅವನೆದುರು ಬಂದು, ಅವನನ್ನು ವಿಮಾನದಲ್ಲಿ ಕೂರಿಸಿಕೊಂಡು ಕಿನ್ನರ ಗೀತಪುರಕ್ಕೆ ಕರೆದೊಯ್ಯುತ್ತಾರೆ. ಅಲ್ಲಿನ ರಾಜ ಅಶನಿವೇಗನ ಮಗಳು ಶಾಲ್ಮಲಿದತ್ತೆಯೊಡನೆ ಲಗ್ನವಾಗುತ್ತದೆ. ಕೆಲವು ದಿನಗಳನಂತರ ಶಾಲ್ಮಲೀದತ್ತೆಯೊಡನೆ ನಿದ್ರಿಸುತ್ತಿದ್ದ ವಸುದೇವನನ್ನು ಖೇಚರನೊಬ್ಬ ಹಿಡಿದುಕೊಂಡು ಹೋಗುತ್ತಾನೆ. ಕೂಡಲೇ ಎಚ್ಚತ್ತ ಶಾಲ್ಮಲೀದತ್ತೆ ಖಡ್ಗಪಾಣಿಯಾಗಿ ಖೇಚರನನ್ನಪ್ಪಳಿಸಲಾಗಿ, ಅವನು ವಸುದೇವನನ್ನು ಬಿಸಾಡಿ ಓಡಿ ಹೋಗುತ್ತಾನೆ. ಅವನನ್ನಾಕೆ ಕರೆದೊಯ್ಯುವಾಗ, ಅವನನ್ನು ಬಿಟ್ಟುಬಿಡುವಂತೆ ಅಶರೀರವಾಣಿಯಾಗುತ್ತದೆ. ‘ದೇವತಾವಚನಮಲಂಘ್ಯಂ’ ಎಂದು ಶಾಲ್ಮಲೀ ದತ್ತೆ ವಸುದೇವನನ್ನು ಪರ್ಣಲಘು ವಿದ್ಯೆಯಿಂದ ಭೂಮಿಗಿಳಿಯುತ್ತಾಳೆ. ವಸುದೇವ ಚಂಪಾಪುರದ ಹೊರಭಾಗದಲ್ಲಿ ಸುರಕ್ಷಿತವಾಗಿ ಇಳಿಯುತ್ತಾನೆ. ಗಂಧರ್ವದತ್ತೆಯೆಂಬುವಳ ವೀಣಾಸ್ವಯಂವರದಲ್ಲಿ ಭಾಗವಹಿಸುತ್ತಾನೆ. ತನಗೆ ಕೊಟ್ಟ ವೀಣೆಗಳು ದೋಷಯುಕ್ತವಾಗಿರಲು, ದೋಷರಹಿತ ವೀಣೆಗಳನ್ನು ಕೊಡಲು ಕೇಳುತ್ತಾನೆ. ಅಂತಹ ವೀಣೆಗಳು ಎಲ್ಲಿ ಸಿಗುತ್ತವೆಂದು ಮಂಟಪದ ಜನ ಕೇಳುತ್ತಾರೆ. ಜೈನಮುನಿಸಂಘವನ್ನು ಹಿಂಸಿಸಿದ ಬಲಿಯ ಕಥೆಯನ್ನು ತ್ರಿವಿಕ್ರಮನಾಗಿ ಬಂದ ವಿಷ್ಣುಮುನಿಯ ಕತೆಯನ್ನು ವಸುದೇವ ವಿವರಿಸುತ್ತಾನೆ. ತ್ರಿವಿಕ್ರಮನಾಗಿ ಬೆಳೆದ ವಿಷ್ಣುಮುನಿಯನ್ನು ಸಮಾಧಾನಪಡಿಸುವ ಸಲುವಾಗಿ ಬಳಸಿದ ವೀಣೆಗಳ ಸಂತತಿಗೆ ಸೇರಿದ ವೀಣೆಗಳನ್ನು ತರುವಂತೆ ಅವನು ಹೇಳುತ್ತಾನೆ. ಅವನ ಸೌಂದರ್ಯವನ್ನು ಬುದ್ಧಿವಂತಿಕೆಯನ್ನು ಮೆಚ್ಚಿದ ಗಂಧರ್ವದತ್ತೆ ಅವನನ್ನು ಮದುವೆಯಾಗುತ್ತಾಳೆ. ಆಮೇಲೊಂದು ದಿನ ಮಾಗಧಿನಗರದ ರಕ್ತಾಕ್ಷನ ಮಗಳು ರೋಹಿಣಿಯ ಸ್ವಯಂವರ ವಾರ್ತೆಯನ್ನು ಕೇಳಿ ವೇಷಾಂತರದಿಂದ ಅಲ್ಲಿಗೆ ಹೋಗುತ್ತಾನೆ. ಅವನ ವಿವಿಧ ವಾದ್ಯಗಳ ಬಾಜಣೆಗೆ ಮನಸೋತ ರೋಹಿಣಿ ಅವನ ಕೊರಳಿಗೆ ವರಣಮಾಲೆಯನ್ನು ತೊಡಿಸುತ್ತಾಳೆ. ಆಗ ಜರಾಸಂಧ ಸಮುದ್ರವಿಜಯ ಮೊದಲಾದ ವೀರಾಧಿವೀರರು ತಮಗೆ ಅವಮಾನವಾಯಿತೆಂದು ವಸುದೇವನ ಮೇಲೆ ಯುದ್ಧ ಸಾರುತ್ತಾರೆ. ಅವರೆಲ್ಲರನ್ನು ವಸುದೇವ ಸೋಲಿಸುತ್ತಾನೆ. ಸಮುದ್ರವಿಜಯ ತಮ್ಮನನ್ನು ಗುರುತಿಸಿ, ಹರ್ಪಿಸುತ್ತಾನೆ. ವೈಭಯುತವಾಗಿ ರೋಹಿಣಿಸಹಿತ ಹದಿನಾರು ಸಾವಿರ ಕನ್ಯಾರತ್ನಗಳೊಡನೆ ಲಗ್ನ ನೆರವೇರಿದ ನಂತರ, ವಸುದೇವ ಅಣ್ಣನೊಂದಿಗೆ ಸೂರ್ಯಪುರಕ್ಕೆ ತೆರಳಿ, ಸುಖದಿಂದಿರುತ್ತಾನೆ. ರೋಹಿಣಿಯ ಹೊಟ್ಟೆಯಲ್ಲಿ ಬಲದೇವ ಹುಟ್ಟುತ್ತಾನೆ. ಅವನ ಬಿಮ್ಜಾಣ್ಮೆಯನ್ನು ಮೆಚ್ಚಿದ ರಾಜಪುತ್ರರು ಬಿಲ್ವಿದ್ಯೆಯನ್ನು ಕಲಿಯಲು ಅವನ ಬಳಿ ಬರುತ್ತಾರೆ. ಅಂಥವರಲ್ಲಿ ಕಂಸನೂ ಒಬ್ಬ.

ಪೌದನಪುರದ ಸಿಂಹರಥನೆಂಬ ದೊರೆ ಜರಾಸಂಧನಿಗೆ ಮುಳ್ಳಾಗುತ್ತಾನೆ. ಅವನನ್ನು ಹಿಡಿದು ತರುವಂತೆ ಜರಾಸಂಧ ವಸುದೇವನನ್ನು ಕೇಳಿಕೊಳ್ಳುತ್ತಾನೆ. ಆಗ ತನ್ನ ಶಿಷ್ಯ ಕಂಸನನ್ನು ಕಳಿಸುತ್ತಾನೆ. ಕಂಸ ಸಿಂಹರಥವನ್ನು ಸೋಲಿಸಿ, ಸೆರೆ ಹಿಡಿದು ತರುತ್ತಾನೆ. ತನ್ನ ಮಗಳು ಜೀವಂಜಸೆಯನ್ನು ಮದುವೆಯಾಗುವಂತೆ ಜರಾಸಂಧ ವಸುದೇವನಿಗೆ ಸೂಚಿಸುತ್ತಾನೆ. ಯುದ್ಧವೀರ ಕಂಸನಿಗೆ ಅವಳನ್ನು ಮದುವೆಮಾಡಿಕೊಡುವುದುಚಿತವೆಂದು ವಸುದೇವ ಹೇಳುತ್ತಾನೆ. ಕಂಸ ಉಗ್ರಸೇನನ ಮಗನೆಂದೂ, ಹುಟ್ಟಿದಾಗ ಅಪಶಕುನಗಳು ತಲೆದೋರಲಾಗಿ ಅವನನ್ನು ಯಮುನಾನದಿಗೆ ತೇಲಿ ಬಿಡಲಾಯಿತೆಂದೂ, ಅವನು ಅಲ್ಲಿಂದ ಬದುಕಿಬಂದನೆಂದೂ ವಸುದೇವ ಕಂಸನ ವಿಚಾರವನ್ನರುಹುತ್ತಾನೆ. ಆಗ ಜರಾಸಂಧ ತನ್ನ ಮಗಳನ್ನು ಕಂಸನಿಗೆ ಮದುವೆಮಾಡಿಕೊಡುತ್ತಾನೆ.

ಕಂಸ ಮಧುರಾಪುರಕ್ಕೆ ಹೋಗಿ, ತನ್ನ ತಂದೆ ಉಗ್ರಸೇನನನ್ನು ಸೆರೆಯಲ್ಲಿಟ್ಟು, ಬಿಲ್ವಿವಿದ್ಯೆಯ ಗುರುವಾದ ವಸುದೇವನನ್ನು ಸಿಂಹಾಸನದಲ್ಲಿ ಕೂರಿಸಿ, ತನ್ನ ಚಿಕ್ಕಪ್ಪನ ಮಗಳಾದ ದೇವಕಿಯನ್ನು ಅವನಿಗೆ ಮದುವೆಮಾಡಿಸಿ ಸುಖಾಮೋದದಲ್ಲಿರುತ್ತಾನೆ. ಒಂದು ದಿನ ಅತಿಮುಕ್ತನೆಂಬ ಮುನಿ ಚರಿಗೆಗೆ ಬರಲು ಜೀವಂಜಸೆ ಚೇಷ್ಟೆಗಾಗಿ ದೇವಕಿ ಮೈನೆರೆದ ವಸ್ತ್ರವನ್ನುಡಲು ಅವನ ಕಡೆಗೆ ಹಿಡಿಯುತ್ತಾಳೆ. ದೇವಕಿಯ ಮಗನಿಂದ ನಿನ್ನ ಗಂಡನಿಗೆ ಸಾವು ಬರಲಿ ಎಂದು ಮುನಿ ಶಾಪಕೊಡುತ್ತಾನೆ. ಜೀವಂಜಸ ಕೋಪದಿಂದ ಆ ಬಟ್ಟೆಯನ್ನು ಎರಡು ತುಂಡು ಮಾಡಿ, ನೆಲದ ಮೇಲೊಗೆಯುತ್ತಾಳೆ. ‘ದೇವಕಿಯ ಮಗನಿಂದಳೆ ನಿನ್ನ ತಂದೆಯೂ ಸಾಯುತ್ತಾನೆ.’ ಎಂದು ಸಾರುತ್ತಾನೆ. ಈ ಸಂಗತಿಯನ್ನು ಕೇಳಿದ ಕಂಸ ಗರ್ಭವತಿಯಾದ ದೇವಕಿಯನ್ನು ಕಾಡಿ ಬೇಡಿ ಹೆರಿಗೆಗಾಗಿ ತನ್ನರಮನೆಗೆ ಕರೆದೊಯ್ಯುತ್ತಾನೆ. ದೇವಕಿ ಮೂರು ಸಲ ಅವಳಿ ಮಕ್ಕಳನ್ನು ಹೆರುತ್ತಾಳೆ. ದೇವೇಂದ್ರ ಆ ಮಕ್ಕಳನ್ನು ಬೇರೆಡೆಗೆ ಸಾಗಿಸಿ, ಆ ಸ್ಥಳದಲ್ಲಿ ಮಾಯಾಶಿಶುಗಳನ್ನಿರಿಸುತ್ತಾನೆ. ಕಂಸ ಆ ಮಾಯಾಶಿಶುಗಳನ್ನು ಕೊಂದು, ನಿರಾಳದಿಂದಿದ್ದನು.

ಕೊನೆಗೆ ಭಾದ್ರಪದ ಅಷ್ಟಮಿಯ ನಡುರಾತ್ರಿ ದೇವಕಿ ಕೃಷ್ಣನನ್ನು ಹೆರುತ್ತಾಳೆ. ವಸುದೇವ ಆ ಮಗುವನ್ನು ಮಧುರಾಪುರದ ಗೊಲ್ಲಹಳ್ಳಿಯ ನಂದನಿಗೆ ಕೊಟ್ಟು ಅವನ ಹೆಣ್ಣು ಕೂಸನ್ನು ತಂದು ಹೆಂಡತಿಯ ಪಕ್ಕದಲ್ಲಿ ಮಲಗಿಸುತ್ತಾನೆ. ತಂಗಿ ಹಡೆದದ್ದು ಹೆಣ್ಣು ಕೂಸೆಂದು ತಿಳಿದ ಕಂಸ ಅದರ ಮೂಗನ್ನು ತಿರುಚಿ, ಅಷ್ಟಕ್ಕೆ ಸಮಾಧಾನಗೊಳ್ಳುತ್ತಾನೆ. ಆ ಮಗು ದೊಡ್ಡವಳಾಗಿ, ತನ್ನ ವಿಕಾರಕ್ಕೆ ಹೇಸಿ, ವೈರಾಗ್ಯತಾಳಿ, ವಿಂಧ್ಯಾಟವಿಗೆ ಹೋಗಿ ತಪಸ್ಸು ಮಾಡಿ, ವಿಂಧ್ಯಮಾನಸೆಯೆಂಬ ದೇವತೆಯಾಗಿ ಪ್ರಸಿದ್ಧಿ ಪಡೆಯುತ್ತಾಳೆ. ಅತ್ತ ಕೃಷ್ಣ ಯಶೋಧೆ ಹಾಗೂ ಗೋಪಿಯರ ತೋಳ್ದೊಟ್ಟಿಲಲ್ಲಿ ಅಕ್ಕರೆಯ ಮಡಿಲಿನಲ್ಲಿ ಸುಖವಾಗಿ ಬೆಳೆಯುತ್ತಾನೆ.

ಮಧುರೆಯಲ್ಲಿ ಕಂಸ ಜೀವಂಜಸೆಯರು ಅಪಶಕುನಗಳ ನರಕದಲ್ಲಿ, ಕೆಟ್ಟ ಕನಸುಗಳ ಮರೂಭೂಮಿಯಲ್ಲಿ ತೊಳಲಾಡುತ್ತಾರೆ. ತನ್ನ ವೈರಿ ಕೃಷ್ಣ ನಂದನ ಮನೆಯಲ್ಲಿ ಬೆಳೆಯುತ್ತಿದ್ದುದನ್ನರಿತು ಅವನ ಕೊಲೆಗೆ ಸನ್ನಾಹ ಮಾಡುತ್ತಾನೆ. ಪೂರ್ವಭವದ ಸಂಬಂಧವಿದ್ದ ಎಂಟು ದೇವತೆಗಳು ಕಂಸನ ಮುಂದೆ ಪ್ರತ್ಯಕ್ಷವಾಗುತ್ತದೆ. ಕೃಷ್ಣನನ್ನು ಕೊಲ್ಲುವಂತೆ ಕೃಷ್ಣ ಅವುಗಳಿಗೆ ತಾಕೀತು ಮಾಡುತ್ತಾನೆ. ಪೂತಿನಿಯಾಗಿ, ಕಾಗೆಯಾಗಿ, ಶಕಟವಾಗಿ, ಅಶ್ವವಾಗಿ, ಮತ್ತಿಯ ಮರವಾಗಿ ಕೃಷ್ಣನನ್ನು ಕೊಲ್ಲಲು ಪ್ರಯತ್ನಿಸಿ, ವಿಫಲವಾಗುತ್ತವೆ. ಹಿಂದೆ ಸೋತ ಮಾಯಾವಿಗಳು ಭಯಂಕರ ಮಳೆಯನ್ನು ಸುರಿಸಿ, ಗೋಕುಲವನ್ನು ವಿನಾಶಗೈಯಲು ಪ್ರಯತ್ನಿಸುತ್ತವೆ. ಕೃಷ್ಣ ಗೋವರ್ಧನ ಗಿರಿಯನ್ನೆತ್ತಿ ಹಿಡಿದು, ಎಲ್ಲರನ್ನು ರಕ್ಷಿಸುತ್ತಾನೆ. ಕತ್ತೆಯಾಗಿ, ವೃಷಭನಾಗಿ ಕೊಲ್ಲಲು ಬಂದ ದಾನವರನ್ನು ಕೃಷ್ಣ ಸಂಹರಿಸುತ್ತಾನೆ. ಕೃಷ್ಣನ ಸಾಹಸಕೃತ್ಯಗಳ ವಿಷಯ ತಿಳಿದ ವಸುದೇವ ದೇವಕಿಯರು ವ್ರತದ ನೆಪದಲ್ಲಿ ಗೋಕುಲಕ್ಕೆ ಬಂದು, ಮಗನನ್ನು ನೋಡಿ, ಹರ್ಷಚಿತ್ತರಾಗಿ ಹಿಂದಿರುಗುತ್ತಾರೆ.

ಮಧುರೆಯ ಒಂದು ಚೈತ್ಯಾಲಯದಲ್ಲಿ ನಾಗಶಯ್ಯೆ, ಶಾಙ್ಗಧರು ಮತ್ತು ಪಾಂಚಜನ್ಯ ಎಂಬ ಶಂಖಗಳು ಉದಿಸುತ್ತವೆ. ಅದನ್ನು ವಶಪಡಿಸಿಕೊಂಡವರು ಚಕ್ರಿಗಳಾಗುತ್ತಾರೆಂಬ ವಿಷಯ ತಿಳಿದ ಕಂಸ ಪ್ರಯತ್ನಿಸಿ ಸೋಲುತ್ತಾನೆ. ಅವನ್ನು ಯಾರಾದರೂ ವಶಪಡಿಸಿಕೊಳ್ಳಬಹುದೆಂದು ಡಂಗುರ ಹೊಡೆಯಿಸುತ್ತಾನೆ. ಕೃಷ್ಣ ಅವನ್ನು ವಶಪಡಿಸಿಕೊಂಡಾಗ, ಕಂಸನ ಸೇಡು ಮರುಕಳಿಸುತ್ತದೆ. ಕಾಳಿಯ ಮಡುವಿನಿಂದ ಸಾವಿರ ಎಸಳಿನ ಕಮಲವನ್ನು ತರಲು ಹೇಳಿ ಕಳಿಸುತ್ತಾನೆ. ಕೃಷ್ಣ ಕಾಳಿಂಗನನ್ನು ಮರ್ದಿಸಿ, ಕಮಲವನ್ನು ಕಂಸನಿಗೆ ತಲುಪಿಸುತ್ತಾನೆ. ಕೃಷ್ಣನೇ ತನ್ನ ಕಡುವೈರಿಯೆಂದು ಭಾವಿಸಿ, ಅವನನ್ನು ಕೊಲ್ಲಿಸುವ ಉದ್ದೇಶದಿಂದ ಕಂಸ ಅವನನ್ನು ಮಲ್ಲಯುದ್ಧಕ್ಕೆ ಆಹ್ವಾನಿಸುತ್ತಾನೆ. ಚಾಣೂರನನ್ನೂ ಅವನ ಸಂಗಡಿಗರನ್ನೂ ಕೃಷ್ಣ ಕೊಲ್ಲುತ್ತಾನೆ. ತನ್ನ ಮೇಲೆ ಹಾಯ್ದ ಆನೆಗೂ ಅದೇ ಗತಿ ಪ್ರಾಪ್ತವಾಗುತ್ತದೆ. ಅನಂತರ ಅವನ ಮೇಲೆ ಬೀಳಲು ಕಂಸ ತನ್ನ ಸೈನ್ಯಕ್ಕೆ ಆಣತಿ ನೀಡುತ್ತಾರೆ. ವಸುದೇವ ಬಲರಾಮರೇ ಆ ಸೈನ್ಯವನ್ನು ಬಗ್ಗುಬಡಿಯುತ್ತಾರೆ. ಕಂಸನ ಉಪಟಳ ಅತಿಯಾಯಿತೆಂದು ಬಗೆದ ಕೃಷ್ಣ ಅವನನ್ನು ಮುಗಿಸಿಬಿಡುತ್ತಾನೆ.

 


[1] ಇದೇ ಸಂಪಾದಕನ ಲೀಲಾವತೀ ಪ್ರಬಂಧದ ಕವಿ ಕಾವ್ಯ ವಿಮರ್ಶೆಯ ಭಾಗವನ್ನು ಈ ಸಂದರ್ಭದಲ್ಲಿ ನೋಡಬಹುದು.