ಕವಿ ಕಾವ್ಯ ವಿಮರ್ಶೆ :

ಜಿನಸೇನ ಗುಣಭದ್ರಾಚಾರ್ಯರ ಕಥೆಯನ್ನು ನೇಮಿಚಂದ್ರ ಅನುಸರಿಸಿದ್ದರೂ, ಪುರಾಣವನ್ನು ಕಾವ್ಯವನ್ನಾಗಿ ಪರಿವರ್ತಿಸುವಲ್ಲಿ ಸ್ವೋಪಜ್ಞತೆಯನ್ನು ಮೆರೆದಿದ್ದಾನೆ. ಮೂಲ ಕಥೆಯನ್ನು ತನ್ನ ಕಾವ್ಯಕ್ಕೊಗ್ಗಿಸಿಕೊಳ್ಳುವಲ್ಲಿ ಲೋಪಾಗಮಾದೇಶ ವಿಧಾನಗಳನ್ನು ಅರ್ಥವತ್ತಾಗಿ ಬಳಸಿಕೊಂಡಿದ್ದಾನೆ. ಕಾವ್ಯವನ್ನು ರಸಾರ್ದ್ರಗೊಳಿಸಲು ವರ್ಣಸಿ, ಕಲ್ಪನೆ ಉಪಮಾದ್ಯಲಂಕಾರಗಳನ್ನು ಶೃಂಗಾರಾದಿ ರಸಗಳನ್ನು ಸಮಕಾಲೀನ ಜನಾಭಿರುಚಿಗೆ, ತನ್ನ ಧ್ಯೇಯೋದ್ದೇಶಗಳಿಗೆ ಭಂಗಬರದಂತೆ ಉಪಯೋಗಿಸಿಕೊಂಡಿದ್ದಾನೆ.

ಉತ್ತರ ಪುರಾಣದಲ್ಲಿ ಆದ್ಯಾಹ್ನಕ ಪೂಜೆಯನ್ನು ಮಾಡಿ, ವಂಶೋದ್ಧಾರಕನಾದ ಪುತ್ರನನ್ನು ಅರ್ಹದ್ದಾಸನ ಪತ್ನಿ ಜಿನದತ್ತೆ ಪಡೆದರೆ, ನೇಮಿಚಂದ್ರನಲ್ಲಿ ಈ ಪ್ರಸಂಗ ವಿದ್ತಾರವಾಗಿ ನಿರೂಪಣೆಗೊಂಡಿದೆ. ಮರಿಗಳೊಡನಿದ್ದ ಗಿಳಿ, ನವಿಲು ಚಿಗರೆ, ಹಂಸ ಮೊದಲಾದ ಪಕ್ಷಿ ಪ್ರಾಣಿಗಳನ್ನು ಉದ್ಯಾನದಲ್ಲಿ ಕಂಡಾಗ ಅವಳ ಪುತ್ರಾಕಾಂಕ್ಷೆ ತೀವ್ರವಾಗುತ್ತದೆ. ಮಕ್ಕಳಿಗಾಗಿ ಜಿನದತ್ತೆಯ ಹಂಬಲ, ಜಿನಪೂಜೆ ಮತ್ತು ಮಲಧಾರಿ ಸ್ವಾಮಿಗಳ ಆಗಮನ ಮತ್ತು ಹರಕೆಗಳ ಪರಿಣಾಮವಾಗಿ, ಅವಳು ಮಕ್ಕಳನ್ನು ಪಡೆಯುತ್ತಾಳೆಂದು ಕವಿ ಸವಿವರವಾಗಿ ವರ್ಣಿಸುತ್ತಾನೆ.

ತನ್ನ ತಂದೆ ಮುಕ್ತಿಗೆ ಸಂದನೆಂಬ ವಾರ್ತೆ ಕಿವಿಯ ಮೇಲೆ ಬೀಳುತ್ತಿದ್ದಂತೆ ಅಪರಾಜಿತ ಮೂರ್ಛೆ ಹೋಗುತ್ತಾನೆ. ಮೂರ್ಛೆ ತಿಳಿದನಂತರ, ಸ್ವರ್ಗಕ್ಕೆ ಹೋಗಿ ಅವನನ್ನು ಕಂಡು ಬರುವುದಾಗಿ ಪಕ್ಕದವರಿಗೆ ತಿಳಿಸುತ್ತಾನೆ. ‘ನಿನ್ನ ಇಷ್ಟಾರ್ಥ ಏಳನೆಯ ಜನ್ಮಕ್ಕೆ ಸಿದ್ಧಿಸುತ್ತದೆಂ’ದು ಅಶರೀರವಾಣಿ ನುಡಿದುದಾಗಿ ಈ ಕವಿ ಬರೆಯುತ್ತಾನೆ.

ವಸುದೇವನ ಕಥೆಯಲ್ಲಿಯೂ ಈ ಕವಿ ಸ್ವಾರಸ್ಯವಾದ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾನೆ. ವಸುದೇವನ ಬಂಧನವಾದಾಗ, ನಿಪುಣಮತಿ ಎಂಬ ಲೆಂಕ ಬಂಧನದ ವಿಷಯವನ್ನು ನೇರವಾಗಿ ಅವನಿಗೆ ತಿಳಿಸಿದನೆಂದು ಉತ್ತರ ಪುರಾಣ ಚಾವುಂಡರಾಯಪುರಾಣಗಳು ತಿಳಿಸುತ್ತವೆ. ಒಂದು ದಿನ ಉದ್ಯಾನದಲ್ಲಿದ್ದ ವಸುದೇವ ಕಸ್ತೂರಿ ಮೊದಲಾದ ದ್ರವ್ಯಗಳನ್ನು ಅಂತಃಪುರಕ್ಕೆ ಕೊಂಡೊಯ್ಯುತ್ತಿದ್ದ ಚೇಟಿಯನ್ನು ಹಿಡಿದುಕೊಂಡಾಗ ‘ಸೆಱೆಯೊಳಿರ್ದುಂ ವಿಕಾರತನಮನೊಂದಂ ಕೋಡಗಂಗಳೊಳ್ಕಂಡೆನೊಂದಂ ನಿನ್ನೊಳ್ಕಂಡೆನ್’ ಎನ್ನುತ್ತಾಳೆ. ಆಗ ವಸುದೇವ ಅವಳ ಮಾತಿನ ಅರ್ಥವೇನೆಂದು ತಿಳಿಯಲು ಅಂಗಲಾಚುತ್ತಾನೆ, ಬೆದರಿಸುತ್ತಾನೆ. ಪುರಜನರ ಪುಕಾರಿನಿಂದಾಗಿ, ಅವರು ಬಂಧನದಲ್ಲಿರಬೇಕಾಯಿತೆಂದು ಅವಳು ತಿಳಿಸುತ್ತಾಳೆ. ಕವಿಯ ಸ್ವೋಪಜ್ಞತೆಗೆ ಹಾಗೂ ಕಲ್ಪನಾ ಪ್ರತಿಭೆಗೆ ಈ ಪ್ರಸಂಗ ಸುಂದರ ನಿರ್ದಶನವಾಗಿದೆ.

ಇಂತೆಯೇ ವಸುದೇವ ಯಾರಿಗೂ ತಿಳಿಯದಂತೆ ಉದ್ಯಾನದ ಅರಮನೆಯನ್ನು ತೊರೆದು ದೇಶಾಂತರ ಹೋದ ಸಂದರ್ಭದಲ್ಲಿ ವಿದ್ಯಾಧರಕರಣ, ಭೇತಾಳಗಳನ್ನು, ಸ್ಮಶಾನವನ್ನು ಕುರಿತು ಮಾಡಿರುವ ವರ್ಣನೆಯೂ ಅವನ ಸ್ವಂತಿಕೆಗೆ ನಿದರ್ಶನಗಳಾಗಿವೆ.

ಸತಿ ಶಾಲ್ಮಲಿದತ್ತೆ ತನ್ನ ಪತಿ ವಸುದೇವನನ್ನು ಖಚರದಿಂದ ಬಿಡಿಸಿಕೊಂಡು ತನ್ನ ಪರ್ಣಲಘು ವಿದ್ಯೆಯ ಸಹಾಯದಿಂದ ಚಂಪಾಪುರದ ಬಳಿಯ ಸರೋವರದ್ವೀಪದ ಮಧ್ಯದಲ್ಲಿಳಿಸಿದಂತೆ ಚಾವುಂಡರಾಯ ಪುರಾಣ ಮತ್ತು ಉತ್ತರ ಪುರಾಣಗಳಲ್ಲಿ ನಿರೂಪಿತವಾಗಿದೆ. ಆದರೆ ಆ ದ್ವೀಪದಲ್ಲಿಳಿಸಿದುದರ ಕಾರಣವನ್ನು ಪುರಾಣಗಳು ತಿಳಿಸುವುದಿಲ್ಲ. ವಸುದೇವನನ್ನು ಬಿಟ್ಟುಬಿಡುವಂತೆ ಅಶರೀರವಾಣಿ ಕೇಳಿಸಲು ಅದು ದೈವಾಜ್ಞೆಯೆಂದು ತಿಳಿದು ಚಂಪಾಪುರದ ಬಹಿರುದ್ಯಾನದಲ್ಲಿಳಿಸಿದಂತೆ ಕವಿ ಕಲ್ಪಿಸಿಕೊಂಡಿದ್ದಾನೆ.

ವಸುದೇವ ನಂದಗೋಪರು ಗಂಡು ಹೆಣ್ಣು ಕೂಸುಗಳನ್ನು ಅದಲು ಬದಲು ಮಾಡಿಕೊಂಡ ಪ್ರಸಂಗವೂ ಪುರಾಣಗಳಿಗಿಂತ ಕಾವ್ಯದಲ್ಲಿ ಭಿನ್ನವಾಗಿದೆ. ವಸುದೇವ, ಬಲರಾಮರು ಕೃಷ್ಣನೆನ್ನಿತ್ತಿಕೊಂಡು ಬರುವಾಗ ದೀವಟಿಗಳು ದೂರವಾಗಿ ಕಾಣುತ್ತಾರೆ. ‘ತಮ್ಮ ಪಜ್ಜೆವಿಡಿದು ಬೆನ್ನಟ್ಟಿಬಂದ ಕಂಸ’ನೆಂದೇ ಬಗೆದು, ವಸುದೇವ ಬಲರಾಮರು ಮುಂದೆ ಕಾಣಿಸಿದ ದೇಗುಲವನ್ನು ಪ್ರವೇಶಿಸುತ್ತಾರೆ. ಆ ಹೊತ್ತಿಗೆ ನಂದಗೋಪನೂ ತನ್ನ ಹೆಂಗೂಸನ್ನು ತಂದು, ‘ನಿನ್ನ ಹರಕೆಯಿಂದ ಹುಟ್ಟಿದ ಈ ಹೆಂಗೂಸು ನಿನಗಿರಲಿ, ನನಗೆ ಗಂಡುಕೂಸು ಬೇಕು’ ಎಂದು ದೇವಿಯ ಮುಂದಿಟ್ಟು, ಹೊರಗೆ ಹೊರಡಲುದ್ಯುಕ್ತನಾದಾಗ ವಸುದೇವ ತನ್ನ ಗಂಡುಕೂಸಿನೊಡನೆ ಎದುರಾಗುತ್ತಾನೆ. ಆ ಇಬ್ಬರೂ ತಮ್ಮ ಕೂಸುಗಳನ್ನು ಅದಲು ಬದಲು ಮಾಡಿಕೊಂಡು ವಾಪಸಾಗುತ್ತಾರೆ.

ಚತುರ್ಭಾಷಾಪಂಡಿತನಾದ ನೇಮಿಚಂದ್ರನಿಂದ ಕನ್ನಡ ಭಾಷೆಗೆ ಅಪೂರ್ವ ಶಕ್ತಿ ಸತ್ವ ಘನತೆ ಗಾಂಭೀರ್ಯ ಓಜಸ್ಸುಗಳು ಪ್ರಾಪ್ತವಾಗಿವೆಯೆಂಬುದರಲ್ಲಿ ಸಂದೇಹವಿಲ್ಲ. ಅವನ ಈ ಪದ್ಯಗಳನ್ನು ಗಮನಿಸಿ.

ಅಸ್ತವ್ಯಸ್ತಂ ಪದಮ
ಪ್ರಸ್ತುತಮತಿವಿಹಿತಮರ್ಥಮೆನೆ
ದುಷ್ಕೃತಿಯಂ
ವಿಸ್ತಾರಿಸಿ
ಸಲೆ ಸುಜನಶಿ
ರಸ್ತೋದಮನೇಕೆ
ಮಸಗಿ ಮಾೞ್ಪರೊ ಕೆಲಬರ್ (ಲೀಲಾ – ೨೨)

ಮಿಗೆ ಪದಮಿಡಲಱಿದ ನಾ
ಲಗೆವೆಱೆವರ್
ಸಲೆ ಸದರ್ಥಮಂ ಕಾಣದ ಪೋ
ಬಗೆಗುರುಡರ್
ಬಗೆವೊಡೆ
ಬ್ಬಿಗರಕ್ಕುಮೆ
ಓದುಗೇಳದಕ್ಕರಗಿವುಡರ್ (ಲೀಲಾ – ೨೩)

ನೀರೊಳಗಣ ಪೆಣನಂತೆವೊ
ಲಾರೆೞವೊಡಮುರುಳೆವರಿದು
ಪುರುಳಿಲ್ಲದಹಂ
ಕಾರದೊಳೆ
ಬಾತು ಬಲ್ಮೆಗೆ
ಹಾರೈಸುವರೇಕೆ
ಬಯಕೆಗವಿಗಳ್ ಕೆಲಬರ್ (ಲೀಲಾ – ೨೪)

‘ವಿದಗ್ಥ ವಿದ್ಯಾನರೇಂದ್ರನ್, ಅಖಿಳಕಳಾಕೋವಿದನ್, ಉಚಿತಶಬ್ಧ ವಿದ್ಯಾಸದನಂ, ಕವಿಚಕ್ರವರ್ತಿಭುವನಾಭರಣಂ, ಸುಕರ ಕವಿಶೇಖರಂ, ಕವಿರಾಜಮಲ್ಲನ್, ತಾರ್ಕಿಕತಿಲಕಂ, ಮಾನವಮೇರು, ಜಿನಶಾಸನದೀಪಕಂ, ಅಕಳಂಕಂ ಭಾವುಕಮುಕುರಂ’ ಮೊದಲಾದ ಬಿರುದುಗಳಿಂದ ಶೋಭಿತವಾದ ಕವಿ ಅಭಿಮಾನಧನನೆಂದು, ಆತ್ಮಪ್ರತ್ಯಯ ಶ್ರೀಮಂತನೆಂದು ಕನ್ನಡ ನಾಡು ಹೆಮ್ಮೆಪಡಬಹುದಾಗಿದೆ. ಈ ಬಿರುದುಗಳು ಸ್ವಕಪೋಲಕಲ್ಪಿತವೊ, ಅರಮನೆ ಗುರುಮನೆಗಳು ನೀಡಿದುವೊ ಚರ್ಚೆ ಅನಾವಶ್ಯಕ. ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ವರಕವಿಯೆಂಬುದರಲ್ಲಿ ಸಂದೇಹವಿಲ್ಲ. ಕವಿ ಕಾವ್ಯ ರಚನೆ ಮಾಡುವಾಗ, ಯುಗಧರ್ಮ ಹಾಗೂ ಜನಾಭಿರುಚಿಯನ್ನು ದೃಷ್ಟಿಯಲ್ಲಿರಿಸಿ ಕೊಂಡಿರುತ್ತಾನೆಂಬುದನ್ನು ಮರೆಯುವಂತಿಲ್ಲ.

ಕವಿಯ ಅಸಾಧಾರಣ ಶಕ್ತಿಯ ಬಗ್ಗೆ ಹಾಗೂ ಶ್ರೇಷ್ಠಕೃತಿಯ ಬಗ್ಗೆ ಅವನು ಹೇಳಿರುವ ಮಾತು ಮೆಚ್ಚಬೇಕಾದುವೆಂದೇ ಹೇಳಬೇಕು.

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನ ಕ್ರಮಂ
ಮುಟ್ಟುಗೆ
ಮುಟ್ಟದಿರ್ಕೆ ಮುಗಿಲಂ ಹರನಂ ನರನಿಕ್ಕಿಗಂಟುಂ
ಮೆಟ್ಟುಗೆ
ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್
ಮುಟ್ಟಿದರಿಕ್ಕಿ
ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ (ಲೀಲಾ – ೧೧)

ಮರನೀಗುಂ ಮಣಿಯೊಗುವೊಂದು ಪಶುವೀಗುಂ ಕೇಳಿಮೆಂದೋಳಿಯೊಳ್
ಪುರುಡಂ
ಪುಟ್ಟಿಸಿ ಕಾಷ್ಠಮಂ ಕೊನರಿಪರ್, ಕಲ್ಲಲ್ಲಿ ನಾರೆತ್ತುವರ್
ಮರುಳಂ
ಪೋಪುರುಳಾಗಿಪರ್ ಕಿವಿಗಳೊಳ್ ಪೀಯೂಷಮಂ ಪಿಂಡಲು
ರ್ವರೆಯೊಳ್
ಸಂದ ಕವಿ ಪ್ರವೇಕರೆ ವಲಂ ಬಲ್ಲರ್ ಪೆಱರ್ ಬಲ್ಲರೇ (ಅದೇ – ೧೩)

ಕವಿಗಳು ಅಘಟನ ಘಟನಾಸಮರ್ಥರು, ಮೌಲ್ಯನಿರ್ಮಾಪಕರು ಹಾಗು ಸಂರಕ್ಷಕರು; ರಾಮಕೃಷ್ಣಾದಿ ಮಹಾಪುರಷರಂಥ ದೇವತೆಗಳ ಸೃಷ್ಟಿಕರ್ತರು. ದೇವರು ಜಗತ್ತನ್ನು ಸೃಷ್ಟಿಸಿದರೆ, ಕವಿಗಳು ದೇವರನ್ನೆ ಸೃಷ್ಟಿಸುತ್ತಾರೆ.

ಬ್ರಹ್ಮಸೃಷ್ಟಿಗೆ ಸವಾಲೆಸೆಯುವ, ಇಡೀ ಯುಗದ ಮತ್ತು ಜನಾಂಗದ ಸತ್ವದ ಸಾರವಾಗಿರುವ ಕಾವ್ಯಕ್ಕಾಗಲಿ ಕಲೆಗಾಗಲಿ ಬೆಲೆಕಟ್ಟುವುದುಂಟೆ ಎಂದು ನೇಮಿಚಂದ್ರ ಎತ್ತಿರುವ ಪ್ರಶ್ನೆ ಸಹಜವಾಗದ್ದು.

ಬೆಲೆಯಿಂದಕ್ಕುಮೆ ಕೃತ ಗಾ
ವಿಲ
ಭುವನದ ಭಾಗ್ಯದಿಂದಮಕ್ಕುಂ ನೋೞ್ಪಂ
ಬೆಲೆಗೊಟ್ಟು
ತಾರ ಮಧುವಂ
ಮಲಯಾನಿಲನಂ
ಮನೋಜನಂ ಕೌಮುದಿಯಂ (ಅದೇ, ಪು – ೪೫)

ಜಗತ್ತಿನ ಎಲ್ಲ ಶ್ರೇಷ್ಠ ಕೃತಿಗಳಿಗೆ ಕಾಳಿದಾಸ, ಶೇಕ್ಸ್‌ಪಿಯರ್, ಟಾಲ್ಸ್‌ಟಾಯ್, ಮೊಜಾರ್ಟ್, ಬೀಠೋವನ್, ಮೈಕೇಲ್ ಆಂಜಿಲೋ ಮುಂತಾದವರ ಕೃತಿಗಳಿಗೆ ಮುತ್ತಿನಂಥ ಈ ಮಾತು ಅನ್ವಯಿಸುತ್ತದೆ.

ಶೃಂಗಾರ ರಸಕ್ಕಾಗಿ ಬಾಯ್‌ಬಾಯ್ ಬಿಡುತ್ತಿರುವ ಚತುರ ಸ್ತ್ರೀಯರಿಗಾಗಿ ರಸಿಕರಿಗಾಗಿ ಹಾಗೂ ಕವಿಗಳಿಗಾಗಿ ಕರ್ಣರಸಾಯನಂದತಿರುವ ಲೀಲಾವತಿಯನ್ನು ಕುಂಚಿಸುತ್ತಿರುವುದಾಗಿ ಕವಿ ಹೇಳಿಕೊಳ್ಳುತ್ತಾನೆ.

ರಸಿಕರ ಪೊಸಬಗೆಗಿಂಪಂ
ಪೊಸತಂ
ಪೊಸಯಿಸುತುಮೊಂದೆ ಪೊರೆಯೆತ್ತಲೊಡಂ
ರಸಮೊಸರದೊಡೇಂ
ಬಸನವೆ
ಬಿಸುಡುವುದಾಪುೞಿತ
ಕಬ್ಬುಮಂ ಕಬ್ಬಮುಮಂ (ಲೀಲಾ – ೬೪)

ಓದಲೊಡಮಿಂಪಿನಿಂದೆಲ
ರೂದಲೊಡಂ
ಸುರಭಿಶೀತದಾಮೋದದಿನೇಂ
ಮೋದದೊಡೆ
ಕವಿತೆಗಂ ಕಡು
ವಾದೇಂ
ಪೂವಿಂಗಮೊಗ್ಗ ಮುಡಿಗಿಕ್ಕುವುದೇ (ಲೀಲಾ – ೬೫)

ಲಲಿತಂ ಪ್ರತೀಯಮಾನೋ
ಪಲಕ್ಷಿತಂ
ವಾಚ್ಯಮಾದೊಡೊಪ್ಪದು ಕೃತಿ ಪೆ
ರ್ಮೊಲೆಯಂ
ಮೆಱೆದೊಡೆ ಸಲೆ
ಣ್ಮಲರಂ
ಮೆಱೆಯದೊಡೆ ಯುವತಿಯೇನೊಪ್ಪುವಳೇ (ಲೀಲಾ – ೬೬)

ಈ ಕೃತಿ ಅನುರಾಗದಿಂದ ಓದುವವರ ನಾಲಗೆಗಳಿಗೆ ಅಮರ್ದು; ಕೇಳುವವರ ಕಿವಿಗಳಿಗೆ ಮಾಣಿಕದ ಮಂಜರಿ; ಭ್ರವಿಸುತ್ತುಮಿರ್ಪ ಬಗೆಗಳಿಗೆ ಪೊಚ್ಚ ಪೊಸ ವೇಟದ ಪೆಣ್ಣಂತಿದೆ ಎಂದು ಕವಿ ತನ್ನ ಕಾವ್ಯದ ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತಾನೆ. ಶೃಂಗಾರವಿಲ್ಲದ ಬಾಳು ಮರುಧರೆಯಾಗುತ್ತದೆ, ನೀರಿಲ್ಲದ ಕೊಳವಾಗುತ್ತದೆ, ಸುಮಸಂಪತ್ತಿಲ್ಲದ ಲತೆಯಾಗುತ್ತದೆ., ಜೀವರಸವಿಲ್ಲದ ಶವವಾಗುತ್ತದೆ, ನಿರಾಶೆಯ ಸುಡುಗಾಡಾಗುತ್ತದೆ ; ಅದಿರುವ ಬದುಕು ಸ್ವರ್ಗವಾಗುತ್ತದೆ. ಆಶೆಯ, ಸೃಜನಶೀಲತೆಯ ಸ್ಫೂರ್ತಿಯಾಗುತ್ತದೆಂಬುದು ಅವನ ಸಂದೇಶ.

ನವರಸಾಲಂಕಾರಗಳಿಂದ ಹೃದಯಂಗಮವಾದ ನೇಮಿನಾಥ ಪುರಾಣವೊಂದು ‘ನವ್ಯ’ ಕಾವ್ಯವೆಂದೂ ಮೋಕ್ಷ ಸಾಧನವೂ ಪಾಪಹರವೂ ಆದ ನೇಮಿನಾಥ ಸಂಕೀರ್ತನವೇ ನೇಮಿನಾಥ ಪುರಾಣದ ಉದ್ದೇಶವೆಂದು ತಿಳಿಸಿ, ಆ ಕಾವ್ಯದ ಅಗ್ಗಳಿಕೆಯನ್ನು ನಿರೂಪಿಸುತ್ತಾನೆ.

ರಸಮೊ ರಸಾಯನಮೋ ಶ್ರುತಿ
ವಸಂತಮೋ
ಕಿವಿಗಳಮೃತಮೋ ನೇಮಿಯ ವಾಕ್
ಪ್ರಸರಮದಱೆಸಕದಿಂನಿ

ಪ್ಪುಸತಾದುದು
ಜಗಕೆ ನೇಮಿನಾಥ ಪುರಾಣಂ (ನೇ. ಪು. ೧ – ೨೮)

ಕವಿಯ ಈ ಸ್ವಪ್ರಶಂಸೆ ಈ ಕಾವ್ಯದ ಅನೇಕ ಕಡೆಗಳಲ್ಲಿ ದಿಟವೆಂದು ತೋರುತ್ತದೆ.

ಪುರಾಣಗಳಲ್ಲಿ ಬರುವ ಶುಷ್ಕ ಸನ್ನಿವೇಶಗಳನ್ನು ಅನುಚಿತ ಬರಡು ವರ್ಣನೆಗಳನ್ನು ಕಾವ್ಯದಲ್ಲಿ ಕವಿ ಕೈಬಿಟ್ಟಿದ್ದಾನೆ. ಇಲ್ಲಿ ಅಷ್ಟಾಂಗಗಳ ನೆರಳೂ ಸುಳಿಯುವುದಿಲ್ಲ. ಮೇರು ಪರ್ವತ ತ್ರಿಲೋಕಗಳ ವರ್ಣನೆ ಚಿಟಿಕೆಯಲ್ಲಿ ಮುಗಿಯುತ್ತದೆ. ಜೈನ ಪುರಾಣಗಳಿಗೆ ಅನಿವಾರ್ಯವಾದ ಭವಾವಳಿಯ ಕತೆಗಳು ರ್ಹಸ್ವ ಹಾಗೂ ಸುಂದರವಾಗಿವೆ. ಅವನ ವರ್ಣನಾಕೌಶಲ ಶೃಂಗಾರ ನಿರೂಪಣೆಯಲ್ಲೆಂತು ಮುಗಿಲು ಮುಟ್ಟುತ್ತದೆಯೋ ಅಂತೆಯೇ ನವರಸಗಳ ವರ್ಣನೆಯಲ್ಲಿಯೂ ತನ್ನ ಮೆರುಗನ್ನು ಮೆರೆಯುತ್ತದೆ. ಖಚರನಿಂದ ವಸುದೇವನನ್ನು ಬಿಡಿಸುವಾಗ ಶಾಲ್ಮಲಿದತ್ತೆ ತೋರುವ ಸಾಹಸದ ಚಿತ್ರಣ ಕವಿಪ್ರತಿಭೆಗೆ ಸಾಕ್ಷಿಯಾಗಿದೆ. ಪರ್ವತ ಕಾನನ ಪಶು ಪಕ್ಷಿ ವೃಕ್ಷ – ಮೊದಲಾದುವುಗಳ ವರ್ಣನೆಯಲ್ಲಿ ಅವನ ವೀಕ್ಷಣ ಸಾಮರ್ಥ್ಯವೂ ಲೋಕಾನುಭವಸಂಪತ್ತೂ ಅಭಿವ್ಯಕ್ತವಾಗುತ್ತವೆ.

ಈ ಕಾವ್ಯದಲ್ಲಿ ತುಂಬ ರಸವತ್ತಾದ, ಕವಿಯ ಕಲ್ಪನಾಪ್ರತಿಭೆಗೆ ನಿದರ್ಶನವಾದ ಸನ್ನಿವೇಶವೆಂದರೆ ವಾಮನಾವತಾರ ವಟುವಾಗಿ ಬಲಿಯಲ್ಲಿಗೆ ಬಂದ ವಾಮನ ಮೂರಡಿ ನೆಲವನ್ನು ಕೇಳಲಾಗಿ’ ಕಿಱಿದಂ ಬೇಡಿದಿರ್ ಕೊಟ್ಟಿನಳೆದುಕೊಳ್ಳಿಮೆನೆ’

ವಟು ಮರುದುದ್ದವಾದನನಿತಲ್ಲದಲೇತ್ತಲೆಯುದ್ದವಾದನ
ಕ್ಕಟ
ಮದಿಲುದ್ದ ವಾದನಿವನಾವನೊ ಪೆರ್ಮರದುದ್ದವಾದನಿಂ
ತುಟು
ಗಿರಿಯುದ್ದವಾದನಿದು ವಿಸ್ಮಯ ಮಾಮುಗಿಲುದ್ದವಾದನೋ
ವಟಮಟಿಗಂ
ದಿಟಕ್ಕೆನೆ ಕರಂ ಬಳೆದಂ ಮನದಂತೆ ವಾಮನಂ (ಅದೇ – ೨೪)

ಅಂತುಮಲ್ಲದೆ

ಮರನಂ ಮುಟ್ಟಿದನಿಲ್ಲ ಮೇಘ ಘಟೆಯೊಳ್ ಕಾಲ್ಕೋದನಿಲ್ಲಿಲ್ಲ ಭೂ
ಧರಮಂ
ದಾಂಟಿದನಿಲ್ಲ ಬಾಂದೊಱೆಯೊಳಿಟ್ಟ ಕಾಲನಿಲ್ಲಿಲ್ಲ ಭಾ
ಸ್ಕರನಂ
ಮಾಯದ ಮಾಣಿ ಸೆಂಡೊಡೆದನಾ ಇಲ್ಲೆಂಬಿನಂ ನೀಡಿದಂ
ತರದಿಂ
ಪಾದ ಮನುರ್ವಿಕೊರ್ವಿ ಬಲಿಯಂ ಗೆಲ್ವಾಮನಂ ವಾಮನಂ (ಅದೇ, ೬ – ೨೫)

ಲಲಿತ ಬಂಧುರ ವರ್ಣನೆಯ ಮೂಲಕ ಕವಿ ಪ್ರತಿಭೆ ವಾಮನನೊಡನೆ ಮುಗಿಲುದ್ದ ಹಿಗ್ಗುತ್ತದಲ್ಲದೆ, ಓದುಗರನ್ನು ತನ್ನೊಡನೆ ಕರೆದೊಯ್ಯುತ್ತದೆ, ವಾಮನ ತ್ರಿವಿಕ್ರಮನಾಗಿ ಬೆಳೆಯುವ ದೃಶ್ಯ ಕವಿಯ ಕಲ್ಪನಾ ಸಾಮರ್ಥ್ಯಕ್ಕೂ ಭವ್ಯಶೈಲಿಗೂ ಅಲೌಕಿಕ ಮನೋಧರ್ಮಕ್ಕೂ ಕನ್ನಡಿ ಹಿಡಿದಂತಿದೆ.

ನೇಮಿಚಂದ್ರನ ಶೈಲಿ:

ಯೌವನೋತ್ಕರ್ಷದ ಪೂರ್ವ ವಯಸ್ಸಿನಲ್ಲಿ ಪಾಂಡಿತ್ಯ ಪ್ರದರ್ಶನೋತ್ಸಾಹದಲ್ಲಿ ಮಾತುಗಳ ದುಂದುಗಾರಿಕೆ, ಅಹಂಮೂಲವಾದ, ಅನುಚಿತ ಪೆಡಸು ಶೈಲಿ ಎದ್ದು ಕಾಣುವುದುಂಟು. ಲೀಲಾವತಿ ಈ ಮಾತಿಗೆ ಸಾಕ್ಷಿ. ಅಲ್ಲೆಲ್ಲ ಸಂಸ್ಕೃತಪಾಕೃತಗಳು ಮೇಲ್ಗೈಯಾಗಿ ಮೆರೆಯುತ್ತವೆ. ನೇಮಿನಾಥಸ್ವಾಮಿಯ ಕೃಪೆಯೇ ನೇಮಿನಾಥಪುರಾಣದಲ್ಲಿ ಹರಿದಂತೆ ಸಂಸ್ಕೃತ ಪ್ರಾಕೃತಗಳು ಕನ್ನಡದ ಜಾಯಮಾನಕ್ಕೊಗ್ಗಿಕೊಳ್ಳುತ್ತವೆ. ಕಾಡಿನಲ್ಲಿ ಬೇಟೆಯಾಡುತ್ತಿದ್ದ ಬೇಡನೊಬ್ಬ ಮುನಿಯೊಬ್ಬನನ್ನು ಕಂಡಕೂಡಲೆ ಬಿಲ್ಲು ಬಾಣಗಳನ್ನೆಸೆದು ಪಾದಕ್ಕೆ ಬೀಳಲು

ಕೊಲಲಾಗದು ಕಳಲಾಗದು
ಕುಲಟೆಯರೊಳ್
ನೆರೆಯಲಾಗದಾರ್ತದಿನರ್ಥ
ಕ್ಕಲವರಲಣಮಾಗದು
ಪುಸಿ
ಯಲಾಗದೀ
ಬತಮನೈದುಮಂ ಪಿಡಿಮಗನೇ (ಅದೇ. ೩ – ೭೩)

ಇಲ್ಲಿ ವ್ಯರ್ಥ ಪದಗಳ ಬಳಕೆಯಿಲ್ಲ; ಸಿಕ್ಕಿಲ್ಲ; ಸಿವುರಿಲ್ಲ; ನಿರಾಭರಣ ಸುಂದರಿಯ ಕಣ್ಕುಕ್ಕದ ಮುಗ್ಧ ಸೌಂದರ್ಯ ಹೃದಯಂಗಮವಾಗಿದೆ: ಕನ್ನಡ ನೆಲದ ಸೊಗಡು ಸವಿಗಳು ಅಲ್ಲಲ್ಲಿ ಮಗಮಗಿಸುತ್ತವೆ.

ಮನೋಜ್ಞವಾದ ಉಪಮೆಗಳಿಂದ ಹಾಗೂ ಜನಬಳಕೆಯ ಗಾದೆಗಳಿಂದ ಸಾಣೆಹಿಡಿದಂತಾಗಿ ಅವನ ಶೈಲಿಯಲ್ಲಿ ಹೊಸ ಹೊಳಪು ಕಾಣಿಸಿಕೊಳ್ಳುತ್ತದೆ.

‘ಗಾಜಿನ ಮಣಿಯಂ ಮಾರುವವೊಲ್
‘ಮಾಱಿಯುಱಿದಾಡಿನಂತೆ

‘ಸೂರ್ಯಂ
ಕೞ್ತಲೆಯಂ ಮದ್ದಿಂಗಮವಿಸಿ ಕಂಡೆಡೆಯುಂಟೇ
‘ಕನಸಿನ
ಬತ್ತಕ್ಕೆ ಗೋಣಿಯಾಂಪರೆ
‘ಲೋಕಕ್ಕುಪಕರಿಸುವನೊಳ್
ದೋಷಮುಂಸ್ತುತ್ಯಮಲ್ತೆ
‘ಕೆಮ್ಮುಗಿಲ
ಪೊರೆಯೊಳ್ ಪೊಳೆವೆಳಮಿಂಚಿನಗೊಂಚಲಂತೆ
‘ಕಾಗೆ
ಪೊರೆದ ನಿತಱಿಂದಂ ಕೋಗಿಲೆ ತಾನದಱ ಪಿಳ್ಳೆಯಕ್ಕುಮೆ
‘ಸೊರ್ಕಾನೆದಿಂಬಂಗಾಡೆ
ಹೋಱುಗೆಯೆಂಬಂತೆ
ಱರಜತಾಚಳಮಿಕ್ಕಿದ
ತತ್ತಿಗಳೆನೆ ತೊಳತೊಳಗುವುವು ಸೌಧಸದನಾವಳಿಗಳ್
ಪೂವಂ
ತೋಱದೆ ಪನಸು ಫಲಾವಳಿಯಂ ಪಡೆವ ತೆಱದೆ
‘ಕೞ್ತೆಯೊಳುೞ್ತು
ಕವಡಿಕೆಯಂ ಬಿತ್ತಿದಂತೆ
‘ಕಿಲುಂಬೇಱೆದ
ಕಾಂಸ್ಯದಂತೆ
‘ಪಂದಿಗೆಱಗಿದ
ನಾಯಂ ಹೆಕ್ಕಳಿಸುವಂತೆ
‘ಇಲಿಯುಲಿಪುಗೇಳ್ವ
ಬೆಕ್ಕಿನಂತೆ
‘ಕಲ್ಪಿಸವೇೞ್ಪುದೇ
ಪುರುಡಿನೊಳ್ ಪೆಂಡಿರ್ಗೆ ಪಾಂಡಿತ್ಯಮಂ
‘ಶರ್ಕರೆನಾಲಗೆ
ನೃಪರೆರ್ದೆಕರ್ತರಿಯೆಂಬುದು ಜಳಕನಾದು ದೆಮ್ಮಗ್ರಜನಿಂ
‘ಕ್ರೂರ
ಕಾಳಾಹಿ ತನ್ನ ತತ್ತಿಯಂ ತಾನೆ ತಿನಲಿರ್ಪಂತೆ
‘ಎಸಡಿಯ
ಬಸಿಱನೊಡೆದು ಪುಟ್ಟವೆ ಮಱಿಗಳ್

ಇಲ್ಲಿಯ ಎಲ್ಲ ಗಾದೆ ಉಪಮೆಗಳಲ್ಲಿ ಕೆಲವು ಎರವಲಾದರೂ ಸಂದರ್ಭಕ್ಕನುಸಾರವಾಗಿ ಅರ್ಥಸ್ಪಷ್ಟತೆಗಾಗಿ ಅವನ್ನು ಕವಿ ಬಳಸಿಕೊಂಡಿದ್ದಾನೆ. ಸ್ವಂತ ಕಮ್ಮಟದಲ್ಲಿ ತಯಾರಾದ ಉಪಮಾದ್ಯಲಂಕಾರಗಳಲ್ಲಿ ಕವಿಯ ಲೋಕಾನುಭವ ಸಂಪತ್ತು ಅಭಿವ್ಯಕ್ತವಾಗುತ್ತದೆ. ಕೇವಲ ಪಾಂಡಿತ್ಯ ಪ್ರದರ್ಶನಕ್ಕಾಗಿ ಒಮ್ಮೊಮ್ಮೆ ಅವನು ಅನುಚಿತವಾಗಿ ಅಜಾಗರೂಕತೆಯಿಂದ ಉಪಮೆಗಳನ್ನು ಬಳಸುವಂತೆ ತೋರುತ್ತದೆ.

ಕಡುಗೊಬ್ಬಿದ ಕಡಸುಗಳಿಂ
ಕಡೆಯೊಳ್
ಬರುತಿರ್ಪಧೇನು ಬಡವಾಗಿರ್ದುಂ
ಬಿಡೆ
ಕರಮೆಸೆದುದುದ ಚಾಗಿಯ
ಬಡತನಮುಂ
ಖಳನ ಸಿರಿಯನಗ್ಗಳಮಲ್ತೇ (ಲೀಲಾ – ೯೨)

ಕಡಸುಗಳನ್ನು ಖಳನಿಗೆ ಹೋಲಿಸುವಲ್ಲಿ ವಿಶೇಷ ಚಮತ್ಕಾರವೇನೂ ಇದ್ದಂತಿಲ್ಲ. ಆದರೆ ಖಳನೆ ಸಿರಿಗಿಂತ ಚಾಗಿಯ ಬಡತನ ಶ್ರೇಷ್ಠವೆಂಬ ಸುಭಾಷಿತವಂತು ಕಾಲದೇಶಾತೀತವಾದ ಸತ್ಯವನ್ನು ಸಿರುತ್ತದೆ. ತನ್ನ ಕಾವ್ಯದ ಬಗ್ಗೆ, ತನ್ನ ಶೈಲಿಯ ಬಗ್ಗೆ ಕವಿಗೆ ಆತ್ಮವಿಶ್ವಾಸ ಅಪಾರವಾಗಿದೆ. ಪಂಪರನ್ನ ಬಸವೇಶ್ವರ ನಾರಣಪ್ಪರಂತೆ ಕನ್ನಡದ ಹಿರಿಮೆಯ ಪ್ರಕಾಶನಕ್ಕೆ ಇಂಥ ಕವಿಗಳ ಪಾತ್ರವೂ ಅಸಾಮಾನ್ಯವಾದದ್ದೇ.

ಪ್ರಭಾವಮುದ್ರೆ:

ಚಂಪೂ ಪದ್ಧತಿಯ ಅಭಿಜಾತ ಪರಂಪರೆ ಖಿಲವಾಗುತ್ತಿದ್ದು, ಸರ್ವಾಕರ್ಷಕವಾದ ವಚನ ಪದ್ಧತಿ ತಲೆಯೆತ್ತುತ್ತಿದ್ದ ಕಾಲದಲ್ಲಿ, ಹಳೆಯ ಸಂಪ್ರದಾಯವನ್ನುಳಿಸಿ ಕೊಳ್ಳಲು ಪ್ರಾಮಾಣಿಕವಾಗಿ ದೃಢಹಠದಿಂದ ನೇಮಿಚಂದ್ರ ಪ್ರಯತ್ನಿಸುತ್ತಾನೆ. ಮಹಾಕಾವ್ಯಕ್ಕೆ, ಪೌರಾಣಿಕವಸ್ತುಗಳ ಕಥನಕ್ಕೆ ಮಾರ್ಗಶೈಲಿಯ ಚಂಪೂಪದ್ಧತಿಯೊಂದೆ ಅನಿವಾರ್ಯಸಾಧನವೆಂದು ನೇಮಿಚಂದ್ರನ ಸಂಕಲ್ಪವಾಗಿದ್ದಂತೆ ತೋರುತ್ತದೆ. ಆದ್ದರಿಂದ ಅವನ ನಂತರ ಬಂದ ಚಂಪೂಕವಿಗಳು, ಸಂಕಲನಕಾರರು ಮತ್ತು ಕಲ್ಷಣಕಾರರು ಅವನನ್ನು ಅಭಿಮಾನದಿಂದ ಗೌರವಪೂರ್ವಕವಾಗಿ ನೆನೆಯುತ್ತಾರೆ, ಅನುಸರಿಸುತ್ತಾರೆ. ಜನ್ನ ‘ನೇಮಿಯ ದೇಸಿ’ಯನ್ನು, ಎರಡನೆಯ ಗುಣವರ್ಮ ‘ನೇಮಿಯ ಚಮತ್ಕೃತಿ’ಯನ್ನು ಕಮಲಭವ ‘ನೇಮಿಚಂದ್ರ ಬುಧ’ನನ್ನು ಪ್ರಶಂಸಿಸುತ್ತಾರೆ. ಲೀಲಾವತಿಯ ಬಗ್ಗೆ ಅನೇಕ ದಂತ ಕಥೆಗಳೂ ಇವೆ ಎಂಬುದನ್ನು ಮರೆಯುವಂತಿಲ್ಲ. ಒಟ್ಟಿನಲ್ಲಿ ನೇಮಿಚಂದ್ರ ಮುಂದಿನ ಹಲವಾರು ತಲೆಮಾರುಗಳ ಕವಿಗಳಿಗೆ ಸ್ಫೂರ್ತಿದಾಯಿಯಾಗಿದ್ದಾನಲ್ಲದೆ, ಕಾವ್ಯ ಪ್ರೇಮನಿಗಳ ರಸವಾರ್ಧಿಯಾಗಿದ್ದಾನೆಂಬುದಂತು ಸತ್ಯ.