ಖಗೋಲ ಕಾಯಗಳು ಹೊಮ್ಮಿಸುವ ವಿಕಿರಣ ಹಲವು ತರಂಗ ದೂರ ವ್ಯಾಪ್ತಿಯಲ್ಲಿರುತ್ತದೆ.  ರೇಡಿಯೋ ತರಂಗ, ಸೂಕ್ಷ್ಮತರಂಗ, ಅವಕೆಂಪು, ಗೋಚರ, ಅತಿನೇರಳೆ, ಎಕ್ಸ್-ಕಿರಣ, ಗಾಮ ಕಿರಣ, ಇವೆಲ್ಲ ವಿವಿಧ ತರಂಗದೂರ ವ್ಯಾಪ್ತಿಗಳಿಗಿರುವ ಹೆಸರುಗಳು. ರೇಡಿಯೋ ದೂರದರ್ಶಕ, ದ್ಯುತಿ ದೂರದರ್ಶಕ, ಅವಕೆಂಪು ದೂರದರ್ಶಕ -ಹೀಗೆ ಒಂದೊಂದು ವ್ಯಾಪ್ತಿಯ ವಿಕಿರಣಗಳನ್ನು ಪಡೆದು ಖಗೋಲಕಾಯಗಳ ವಿವರಗಳನ್ನು ಬೇರೆ ಬೇರೆ ವ್ಯಾಪ್ತಿಗಳಲ್ಲಿ ಪಡೆಯುವ ಪ್ರಯತ್ನಗಳು ಸಾಗುತ್ತಿವೆ.

ಗೋಚರ ಬೆಳಕಿನಲ್ಲಿ ತೋರುವ ವಿವರಗಳನ್ನು ಹಬಲ್ ದೂರದರ್ಶಕದಿಂದ ಪಡೆಯುತ್ತಲೇ ಇದ್ದಾರೆ. ಹಾಗೆಯೇ ಚಂದ್ರ ಎಕ್ಸ್-ಕಿರಣ ದೂರದರ್ಶಕದಿಂದ ಎಕ್ಸ್ ಕಿರಣಗಳನ್ನು ಗ್ರಹಿಸಿ ವಿವರಗಳನ್ನು ಪಡೆಯುತ್ತಿದ್ದಾರೆ. ಅಂದರೆ ನಾವು ಒಮ್ಮೆಗೇ ಎಲ್ಲ ಬಣ್ಣಗಳಲ್ಲಿರುವ ವಿಶ್ವದ ಬಿಂಬಗಳನ್ನು ಪಡೆಯಲಾರೆವು. ಒಂದೊಂದು ಬಣ್ಣದಲ್ಲಿರುವುದನ್ನು ಒಮ್ಮೊಮ್ಮೆಗೆ ನೋಡಿ ಸಮಗ್ರ ಚಿತ್ರವನ್ನು ಕಟ್ಟಿಕೊಡಬೇಕು.

ಈ ದಿಸೆಯಲ್ಲಿ ಟೆಲ್ ಅವೀವ್ (ಇಸ್ರೇಲ್) ವಿಶ್ವವಿದ್ಯಾಲಯದ ಮತ್ತು ಭಾರತೀಯ ಖಗೋಲ ಸಂಸ್ಥೆ (ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್) ಜಂಟಿಯಾಗಿ ಕೈಗೊಳ್ಳಲಿರುವ ಒಂದು ಯೋಜನೆ – ‘ನೇರಳೆ ವಿಶ್ವ’ದ ಅಧ್ಯಯನ -ಅಂದರೆ ಅತಿ ನೇರಳೆ ಮತ್ತು ನೇರಳೆ ಬೆಳಕನ್ನು ಸೂಸುವ ಖಗೋಲ ಕಾಯಗಳನ್ನು ಅಧ್ಯಯಿಸುವುದು. ಇದನ್ನು ಟೆಲ್ ಅವೀವ್ ವಿಶ್ವವಿದ್ಯಾಲಯದ ಅತಿನೇರಳೆ ಅನ್ವೇಷಕ ಯೋಜನೆ (ಟೆಲ್ ಅವೀವ್ ಯುನಿವರ್ಸಿಟಿ ಅಲ್ಟ್ರ ವಯಲೆಟ್ ಎಕ್ಸ್ ಪ್ರೋಪ್ರಾಜೆಕ್ಟ್ – ಟವರ್ಸ್‌)ಎಂದು ಕರೆದಿದ್ದಾರೆ.

ಟಾವೆಕ್ಸ್ ದೂರದರ್ಶಕವನ್ನು ಭೂಸ್ಥಾಯಿ ಕಕ್ಷೆಯಲ್ಲಿ ಸ್ಥಾಪಿಸಲು ಶ್ರೀಹರಿಕೋಟದಿಂದ ಉಡ್ಡಯಿಸಲಾಗುವುದು. 130 – 320ನಾನೋಮೀಟರ್ ವ್ಯಾಪ್ತಿಯಲ್ಲಿ ಟಾವೆಕ್ಸ್ ವಿಶ್ವವನ್ನು ವೀಕ್ಷಿಸಲಿರುವುದು. 54ಚಾಪ ಮಿನಿಟುಗಳ ದೃಷ್ಟಿಕ್ಷೇತ್ರದ ಟಾವೆಕ್ಸ್, ನಕ್ಷತ್ರಗಳ ಮಧ್ಯೆ ಇರುವ ಮಾಧ್ಯಮದ ಕಡೆಗೆ ಹೆಚ್ಚು ಗಮನ ಕೊಡಲಿದೆ. ಈ ಅಂತರ್ತಾರಾ ಮಾಧ್ಯಮದಲ್ಲಿ ಸೇಕಡ 99ರಷ್ಟು ಅನಿಲ ಮತ್ತು ಸೇಕಡ 1ರಷ್ಟು ದೂರ ಇದೆಯೆಂದು ಅಂದಾಜು ಮಾಡಿದ್ದಾರೆ. ಈ ಮಾಧ್ಯಮದಲ್ಲೆ ಹೊಸ ನಕ್ಷತ್ರಗಳು ಹುಟ್ಟುತ್ತಿವೆ. ಹೀಗೆ ಹುಟ್ಟುವ ಶಿಶು ನಕ್ಷತ್ರಗಳು ತುಂಬಾ ಬಿಸಿಯಾಗಿದ್ದು ಅತಿ ನೇರಳೆ ಕಿರಣಗಳನ್ನು ಹೊಮ್ಮಿಸುತ್ತವೆ.

ಟಾವೆಕ್ಸ್ ದೂರದರ್ಶಕದ ಉಡ್ಡಯನ 2009ರಲ್ಲಿ ನಡೆಯುವ ನಿರೀಕ್ಷೆಯಿದೆ.

 

ಯಾವುದೇ ಆಕಾಶಕಾಯದ ಬಿಂಬವನ್ನು ದೂರದರ್ಶಕದ ಮೂಲಕ ಸೆರೆಹಿಡಿದಾಗ ಆ, ಆಕಾಶಕಾಯವು ಚಿಮ್ಮುವ ವಿಕಿರಣವನ್ನು ಅನುಸರಿಸಿ ಬಿಂಬದ ಆಕಾರವಿರುತ್ತದೆ. ದೂರದರ್ಶಕದಲ್ಲೂ ಅವಕೆಂಪು, X-ಕಿರಣ, ದೃಗ್ಗೋಚರ ವಿಕಿರಣಗಳಲ್ಲಿ ಯಾವುದಾದರೊಂದನ್ನು ಗ್ರಹಿಸಿ ಅದಕ್ಕೆ ಸಂವಾದಿಯಾದ ಬಿಂಬವು ದಾಖಲಾಗುತ್ತದೆ. ಆ ನಿರ್ದಿಷ್ಟ ಆಕಾಶಕಾಯದ ಸಮಗ್ರ ಚಿತ್ರಣ ಪಡೆಯಲು ನಾವು ವಿವಿಧ ವಿಕಿರಣಗಳ ಬಿಂಬಗಳನ್ನು ನೋಡಬೇಕಾಗುತ್ತದೆ. ಇದಕ್ಕೆ ಕ್ರಾಬ್ ನೆಬ್ಯೂಲಾ ಸಹ ಒಂದು ಉದಾಹರಣೆ.