ಅಂಗಗಳು : ತೀರ್ಥಂಕರ ಉಪದೇಶಗಳಿರುವ ೧೨ ಭಾಗಗಳು, ಆಚಾರಾಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮವಾಯಾಂಗ, ಭಗವತೀವ್ಯಾಖ್ಯಾಪ್ರಜ್ಞಪ್ತಿ, ಜ್ಞಾತೃಧರ್ಮಕಥಾ, ಉಪಾಸಕಾಧ್ಯಯನ, ಅಂತಕೃದ್ಧಶಾ, ಅನುತ್ತರೋಪಪಾದಿಕದಾಶಾ, ಪ್ರಶ್ನವ್ಯಾಕರಣ, ವಿಪಾಕ ಸೂತ್ರ, ದೃಷ್ಟಿವಾದ
ಅಂತರಾಯ : ಅಡ್ಡಿ, ಸವಣರು ಆಹಾರ ಮಾಡುವಾಗ ಉಂಟಾಗುವ ವಿಘ್ನ.
ಅಂತರಂಗ ತಪಸ್ಸು : ಪ್ರಾಯಶ್ಚಿತ, ತಪ್ಪುಗಳನ್ನು ತಿದ್ದಿಕೊಳ್ಳುವುದು, ವಿನಯ, ವೈಯಾವೃತ್ಯ (ಸೇವೆ ಮಡುವುದು), ಸ್ವಾಧ್ಯಾಯ (ಆಲಸ್ಯವಿಲ್ಲದೆ ಜ್ಞಾನಾರ್ಜನೆ), ವ್ಯುತ್ಸರ್ಗ (ಮಮತೆ ಇಲ್ಲದಿರುವಿಕೆ) ಧ್ಯಾಬನ (ಚಂಚಲತೆಯಿಲ್ಲದ ಏಕಾಗ್ರತೆ)
ಆಕೃತಿಮಜಿನಗೃಹ : ಸ್ವರ್ಗದೊಳಗಿನ ಸಹಜ ಚೈತ್ಯಾಲಯ
ಅಗುರಲಘುತ್ವ : ಸಿದ್ಧರ ೮ ಗುಣಗಳಲ್ಲಿ ಒಂದು – ಬಾರವೂ ಹಗುರವೂ ಅಲ್ಲದ ಗುಣಸ್ಥಿತಿ. ಒಂದು ನಿರ್ದಿಷ್ಟ ಅಳತೆಯ ಬಟ್ಟೆಯನ್ನು ತೆಗೆದುಕೊಂಡು, ಉದಾಹರಣೆಗೆ ಒಂದು ಕರವಸ್ತ್ರವನ್ನು ಎಷ್ಟೇ ಮಡಿಕೆಗಳಿಂದ ಮಡಚಿದರೂ ಬಿಚ್ಚಿದರೂ ಅದು ಅಷ್ಟಷ್ಟಕ್ಕೆ ಹೊಂದಿಕೊಳ್ಳುತ್ತಿದ್ದರೂ ತನ್ನ ಮೂಲವನ್ನು ಉಳಿಸಿಕೊಂಡಿರುತ್ತದೆ. ಅದರಂತೆಯೇ ಜೀವನೂ ಚಿಕ್ಕ – ದೊಡ್ಡ ದೇಹಗಳನ್ನು ಸೇರಿ ಚಿಕ್ಕದೂ – ದೊಡ್ಡದೂ ಆದಾಗಲೂ ತನ್ನ ಸಹಜತೆಯನ್ನು ಬಿಟ್ಟಿರುವುದಿಲ್ಲ. ಇದೇ ಅಗುರು- ಲಘುತ್ವ ದೃಷ್ಟಾಂತ ; ಇದು ‘ಸ್ವದೇಹ – ಪರಿಮಾಣ’ ದ ವಿವರಣೆ ಕೂಡ.
ಅಚ್ಯುತಕಲ್ಪ : ಊರ್ಧ್ವಲೋಕದಲ್ಲಿ ಕಡೆಯರಾದ ೧೬ನೆಯ ಸ್ವರ್ಗ, ಇದರ ಒಡೆಯನು ಅಚ್ಯುತೇಂದ್ರ.
ಅಜ್ಜಿ(ಕೆ) : ಜೈನ ಸನ್ಯಾಸಿನಿ, ಆರ್ಯಿಕೆ, ಕಂತಿ, ಗಣನೀ
ಅಜ್ಜಿಕಾಸಮುದಾಯ : ಜೈನ ಸನ್ಯಾಸಿನಿಯರ ತಂಡ
ಅಣುವ್ರತ : ಜೈನ ಗೃಹಸ್ಥ, ಗೃಹಿಣಿಯರು ಆಚರಿಸುವ ಅಹಿಂಸೆ, ಸತ್ಯ, ಅಸ್ತ್ರೇಯ, ಅಪರಿಗ್ರಹ ಬ್ರಹ್ಮಚರ್ಯವೆಂಬ ವ್ರತಗಳು. ಸನ್ಯಾಸಿಗಳ ಹಾಗೆ ಸೂಕ್ಷ್ಮವಾಗಿ ಆಚರಿಸಿದೆ ಸಂಸಾರಿಗಳು ಸ್ಥೂಲವಾಗಿ ಅಣುರೂಪದಲ್ಲಿ ಆಚರಿಸುತ್ತಾರೆ.
ಅಧಃಶಯನ : ವ್ರತಗಳ ಪಾಲನೆಯ ಅವಧಿಯಲ್ಲಿ ಮಂಚ ಅಥವಾ ಹಾಸುಗೆಯನ್ನು ಬಿಟ್ಟು ಕೆಳಗೆ ನೆಲದಮೇಲೆ ಮಲಗುವುದು.
ಅನಂತಜ್ಞಾನ : ತೀರ್ಥಂಕರರಾಗುವವರಿಗೆ ಕರ್ಮಪರಿಣಾಮಗಳು ನಷ್ಟವಾದ ಮೇಲೆ ಉಂಟಾಗುವ ಅಪಾರ ಅರಿವು.
ಅನಂತ ಚತುಷ್ಟಯ : ತೀರ್ಥಂಕರರಿಗೆ ಅನಂತಜ್ಞಾನ, ಅನಂತದರ್ಶನ, ಅನಂತಸುಖ, ಅನಂತವೀರ್ಯ ಎಂಬ ನಾಲ್ಕು ಗುಣಗಳುಂಟು.
ಅನಂತದರ್ಶನ : ಅನಂತ ಚತುಷ್ಟಯಗಳಲ್ಲಿ ಒಂದು
ಅನಂತವೀರ್ಯ : ತೀರ್ಥಂಕರರಿಗೆ ಇರುವ ಅನಂತ ಚತುಷ್ಟಯ ಗುಣಗಳಲ್ಲಿ ಒಂದು
ಅನಂತಸುಖ : ಅನಂತ ಚತುಷ್ಟಯಗಳಲ್ಲಿ ಒಂದು
ಅನಶನ : ಉಪವಾಸ, ಇದು ಬಾಹ್ಯ ತಪಸ್ಸಿನ ಒಂದು ಬಗೆ
ಅನಗಾರ : ಗೃಹತ್ಯಾಗಿಯಾದ ಮುನಿ. ಜೈನಮುನಿಗಳು ಚರಿಗೆಗಾಗಿ ಸಂಚರಿಸುವ ಸಮಯವನ್ನು ಅನಗಾರ ವೇಳೆಯನ್ನುವರು.
ಅನುಮತಿವಿರತ ಪ್ರತಿಮೆ ಗೃಹಸ್ಥರ ಹನ್ನೊಂದು ಪ್ರತಿಮೆಗಳಲ್ಲಿ ಹತ್ತನೆಯದಾದ ವಿರಕ್ತನಾಗಿರುವಿಕೆ.
ಅಪರ ವಿದೇಹ ಮನುಷ್ಯನಿಗೆ ಮೋಕ್ಷ ದೊರೆಯುವ ಕ್ಷೇತ್ರವಾದ ವಿದೇಹ ಕ್ಷೇತ್ರದ ಪಶ್ಚಿಮಭಾಗ. ಇದು ಕರ್ಮಭೂಮಿ.
ಅಪವರ್ಗ ವರ್ಗ ತಾರತಮ್ಯಗಳು ಇರದ ಮೋಕ್ಷ
ಅಭ್ಯಂತರ ಪರಿಗ್ರಹ ಹೆಂಡತಿ, ಮಕ್ಕಳು, ಆಸ್ತಿ, ಮೊದಲಾದವುಗಳ ಮಮಕಾರದ ಪರಿಣಾಮವೇ ಪರಿಗ್ರಹ. ಇವುಗಳಲ್ಲಿ ಅಂತರಂಗ ಪರಿಗ್ರಹಕ್ಕೆ ಅಭ್ಯಂತರ ಪರಿಗ್ರಹವೆಂದು ಹೇಳಿದೆ.
ಅಯೋಗಿ ಕೇವಲಿ ಕಾಯಯೋಗದಿಂದ ಮುಕ್ತನಾಗಿ ೧೪ ನೆಯ ಗುಣಸ್ಥಾನವನ್ನು ಹೊಂದಿದ ಜೀವಿ.
ಅರಿ (ರಿ) ಹಂತ ತೀರ್ಥಂಕರ, ನಾಲ್ಕುಘಾತಿ ಕರ್ಮಗಳನ್ನು ನಾಶಮಾಡಿ ಕೇವಲಜ್ಞಾನ ಪಡೆದವರು.
ಅವಗಾಹನತ್ವ ಒಂದು ಜೀವದ ಸ್ಥಳದಲ್ಲಿ ಅನೇಕ ಜೀವಗಳು ನಿಲ್ಲುವುದು. ಇದು ಅಷ್ಟಗುಣಗಳಲ್ಲಿ ಒಂದು
ಅವಧಿಜ್ಞಾನ ಭವಪ್ರತ್ಯಯಜ್ಞಾನ. ಕಾಲದೇಶಗಳು ಎಷ್ಟೇ ದೂರವಾಗಿದ್ದರೂ ದ್ರವ್ಯ. ಕ್ಷೇತ್ರ. ಕಾಲ, ಭವಗಳನ್ನು ಅವಧಿಮಾಡಿಕೊಂಡು ಇಂದ್ರಿಯಗಳಿಗೆ ಅಗೋಚರವಾದ ವಿಷಯಗಳನ್ನು ತಿಳಿಸುವ ವಿಶೇಷಜ್ಞಾನ.
ಅವ್ವಗಳು ಜೈನ ಸನ್ಯಾಸಿನಿಯರು, ಕಂತಿಯರು
ಅವ್ಯಾಬಾಧತ್ವ ಯಾವ ಬಾಧೆಯೂ ಇಲ್ಲದಿರುವುದು. ಇದು ಮುಕ್ತಜೀವರಿಗೆ ಇರುವ ಎಂಟು ಗುಣಗಳಲ್ಲಿ ಒಂದು.
ಅಷ್ಟಕರ್ಮ ಕರ್ಮವು ಮುಖ್ಯವಾಗಿ ೮ ಬಗೆ : ನಾಲ್ಕು ಘಾತಿಕರ್ಮ ಮತ್ತು ನಾಲ್ಕು ಅಘಾತಿಕರ್ಮ
ಅಷ್ಟಮಂಗಲ ಎಂಟು ಮಂಗಳ ವಸ್ತುಗಳಿವೆ : ಕೊಡೆ, ಧ್ವಜ, ಕಲಶ, ಚಾಮರ, ಸುಪ್ರತಿಷ್ಠಕ (ಪೂಜಾದ್ರವ್ಯಗಳನ್ನಿಡುವ ಪಾತ್ರೆ), ಭೃಂಗಾರ (ಗಿಂಡಿ), ಕನ್ನಡಿ, ಬೀಸಣಿಗೆ.
ಅಷ್ಟಮಹಾಪ್ರಾತಿಹಾರ್ಯ ಜಿನನ ಹಿರಿಮೆಯನ್ನು ಹೇಳುವ ಎಂಟು ಲಾಂಛನಗಳು : ರತ್ನ ನಿರ್ಮಿತ ಅಶೋಕವೃಕ್ಷ, ಹೂಮಳೆ, ದಿವ್ಯಧ್ವನಿ, ರತ್ನಸಿಂಹಾಸನ, ಚಾಮರವೀಜನೆ, ಪ್ರಭಾಮಂಡಲ, ಮಕ್ಕೊಡೆ, ದೇವದುಂದುಭಿ.
ಅಷ್ಟವಿಧಾರ್ಚನೆ ನೀರು, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲ – ಎಂಬ ೮ ವಿಧವಾದ ವಸ್ತುಗಳಿಂದ ಮಾಡುವ ಪೂಜೆ
ಅಷ್ಟಾಂಗ ಮಹಾ ನಿಮಿತ್ತ ಬುದ್ಧಿಋದ್ಧಿಗಳಲ್ಲೊಂದು, ಅಪರಿಮಿತವಾದ ಬುದ್ಧಿ ಶಕ್ತಿ : ಇವು ಎಂಟಿವೆ – ಅಂತರಿಕ್ಷನಿಮಿತ್ತ, ಭೌಮನಿಮಿತ್ತ, ಅಂಗನಿಮಿತ್ತ, ಸ್ವರನಿಮಿತ್ತ, ವ್ಯಂಜನ ನಿಮಿತ್ತ, ಲಕ್ಷಣ ನಿಮಿತ್ತ, ಉತ್ಪಾತನಿಮಿತ್ತ ಮತ್ತು ಸ್ವಪ್ನ ನಿಮಿತ್ತ.
ಅಸಿಆವುಸ ಅರಹಂತರು, ಸಿದ್ಧರು, ಆಚಾರ್ಯರು, ವುಪಾಧ್ಯಾಯರು, ಸರ್ವಸಾಧುಗಳು – ಎಂಬ ಪಂಚಪರಮೇಷ್ಠಿಗಳ ಆದ್ಯಕ್ಷರ ಸಂಕ್ಷೇಪಣೆ
ಅಸ್ತಿಕಾಯ ಅಸ್ತಿ ಎಂದರೆ ಇರುವಿಕೆ. ಅತಿಕಾಯವೆಂದರೆ ಸತ್ತಾ ಲಕ್ಷಣವುಳ್ಳವುಗಳಾಗಿ ಹಲವು ಪ್ರದೇಶಗಳನ್ನು ಅಪೇಕ್ಷಿಸುವದ್ರವ್ಯ (ಕಾಯ).
ಆಕಿಂಚನ್ಯ ತನ್ನದಾಗಿ ಏನೂ ಇಲ್ಲದಿರುವಸ್ಥಿತಿ. ಇದು ಹತ್ತು ಧರ್ಮಗಳಲ್ಲೊಂದು.
ಆರ್ಜವ ಋಜುತ್ವ, ಪ್ರಾಮಾಣಿಕತೆ : ಹತ್ತು ಧರ್ಮಗಳಲ್ಲೊಂದು
ಆಯಿರಿಯ ಆಚಾರ್ಯ, ಪಂಚ ಪರಮೇಷ್ಠಿಗಳಲ್ಲಿ ಮೂರನೆಯವರು.
ಆಸನಕಂಪ ವಿಶೇಷ ಸಂದರ್ಭಗಳಲ್ಲಿ ದೇವೇಂದ್ರನಿಗೆ ತಿಳಿಸುವ ಸಲುವಾಗಿ ಉಂಟಾಗುವ ಅತನ. ಪೀಠದ ಅಲುಗಾಟ
ಆಸ್ರವ ರಾಗದ್ವೇಷಗಳಿಂದಾಗಿ ಜೀವದ ಶುಭಾಶುಭ ಕಾರ್ಯಗಳಿಂದ ಹುಟ್ಟುವ ಕರ್ಮಪುಗ್ಗಲವು ಜೀವದೊಳಕ್ಕೆ ಹರಿದುಬರುವಿಕೆ.
ಆಱನೆಯ ನರಕ ಜೀವಗಳು ಪಾಪದ ಫಲವನ್ನು ಅನುಭವಿಸುವ ಏಳು ನರಕಗಳು ಮಧ್ಯಲೋಕದ ಕೆಳಗಿವೆ. ಇವುಗಳಲ್ಲಿ ಆರನೆಯ ನರಕ ತಮಃ ಪ್ರಭೆ ಎಂಬುದು ಅತಿಶೀತವಾದ ಬಿಲ.
ಇಟಾಯಿಗಳು ಅತಿಶಯ (?)
ಈರ್ಯಾಪಥ ಜೈನ ಮುನಿಗಳು ಸಂಚರಿಸುವ ಮಾರ್ಗ
ಈಶಾನೇಂದ್ರ ೧೬ ಸ್ವರ್ಗಗಳಲ್ಲಿ ಈಶಾನ ಎಂಬುದೂ ಒಂದು. ಇದರ ದೇವತೆಗಳ ಎರೆಯನಾದ ಇಂದ್ರನಿಗೆ ಈಶಾನೇಂದ್ರ ಎಂದು ಹೆಸರು.
ಈಷತ್‍ಪ್ರಾಗ್ಭಾರ ಅನುತ್ತರ ವಿಮಾನಗಳ ಮೇಲುಗಡೆ ಇರುವ ಸಿದ್ಧಕ್ಷೇತ್ರ.
ಉತ್ತರಗುಣ ೨೨ ಪರೀಷಹಗಳೂ ೧೨ತಪಸ್ಸುಗಳೂ ಕೂಡಿ ಒಟ್ಟು ೩೪ ಉತ್ತರ ಗುಣಗಳು.
ಉಪಸರ್ಗ ಮುನಿಗಳ ತಪಸ್ಸಿನ ಏಕಾಗ್ರತೆಗೆ ಉಂಟಾಗುವ ಅಟ್ಟುಳಿ. ಇದರಲ್ಲಿ ದೇವೋಪಸರ್ಗ, ಮಾನುಷೋಪಸರ್ಗ, ತಿರಿಕೋಪಸರ್ಗ, ಅಚೇತನೋಪಸರ್ಗ ಎಂದು ನಾಲ್ಕು ಬಗೆ.
ಉದ್ವರ್ತನ ಸುಗಂಧದ್ರವ್ಯಗಳನ್ನು ಮೈಗೆ ಲೇಪಿಸುವುದು.
ಉದ್ಯಾಪನೆ ಕೈಗೊಂಡವ್ರತಮೇಷ್ಠಿಗಳಲ್ಲಿ ನಾಲ್ಕನೆಯವರಾದ ಉಪಾಧ್ಯಾಯರು.
ಋಷಿನಿವೇದಕ ಸುದ್ದಿನಿವೇದಕ. ನಗರದ ಹೊರವಲಯದಲ್ಲಿದ್ದು ಮುನಿಗಳ ಬರುವಿಕೆಯನ್ನು ರಾಜರಿಗೆ ಅರಿಕೆ ಮಾಡುವಾತ.
ಏಕಭುಕ್ತಿ ಅಂತಃಕರಣದ ವಿಕಲ್ಪವನ್ನು ದೂರಮಾಡಿ ದ್ಯಾನಾದಿಗಳಲ್ಲಿ ನಿರತನಾಗಿ ಒಂದೇ ಊಟವನ್ನು ಮಾಡುವುದು.
ಏಕವಿಹಾರಿ ಒಂಟಿಯಾಗಿ ಸಂಚರಿಸುವ ಮುನಿ
ಔದಾರಿಕ ಶರೀರ ಮನುಷ್ಯ ಮತ್ತು ತಿರ್ಯಕ್ ಜೀವಿಗಳ ಸ್ಥೂಲದೇಹ. ಇದು ಗರ್ಭ ಮತ್ತು ಸಂಛೂರ್ಛನದಿಂದ ಉಂಟಾಗುವ ಶರೀರ.
ಕಂತಿ ಜೈನ ಸನ್ಯಾಸಿನಿ. ಅಜ್ಜಿ (ಕೆ), ಆರ್ಯಿಕೆ, ಅವ್ವೆ – ಎಂಬುವು ಇತರ ಸಂವಾದಿ ಶಬ್ದಗಳು
ಕರ್ಮ ರಾಗದ್ವೇಷ ನಿಮಿತ್ತ ಕಾರ್ಮಣ, ವರ್ಗಣಾ ರೂಪ ಪುದ್ಗಲ ಸ್ಕಂಧಗಳು ಜೀವದೊಡನೆ ಸಂಬಂಧವನ್ನು ಹೊಂದುವುದು ; ಮನ ವಚನ ಕಾಯಗಳ ವ್ಯಾಪಾರ.
ಕಲ್ಪ ಮಾನವರು ವಾಸಿಸುವುದು ಮಧ್ಯಲೋಕದಲ್ಲಿ. ಅದರ ಮೇಲುಗಡೆ ಜೋಡಿಜೋಡಿಯಾಗಿ ೧೬ ಕಲ್ಪಗಳಿವೆ. ಇದೇ ಸ್ವರ್ಗ. ಇಲ್ಲಿನ ದೇವತೆಗಳಲ್ಲಿ ಚಿಕ್ಕವರು, ದೊಡ್ದವರು, ಒಡೆಯರು (ಇಂದ್ರ) ಎಂಬ ಕಲ್ಪನೆಗಳಿರುವುದರಿಂದ ಇವಕ್ಕೆ ಕಲ್ಪಗಳೆಂದು ಹೆಸರು.
ಕಷಾಯ ಗೊತ್ತಿದ್ದೂ ಮಾಡುವ ಹಿಂಸೆ. ಆತ್ಮನ ಗುಣಗಳನ್ನು ಕೆಡಿಸುವುದೂ ದುಃಖ ತರುವುದೂ ಆದ ಸ್ವಭಾವ. ಕ್ರೋಧ ಮಾನ ಮಾಯಾ ಲೋಭ – ಇವು ಕಷಾಯಗಳು.
ಕಾಪಿಷ್ಠ ಮಧ್ಯಲೋಕದ ಮೇಲುಗಡೆ ೧೬ ಕಲ್ಪಗಳು ಜೋಡಿಯಾಗಿವೆ, ಇವೇ ದೇವತೆಗಳು ವಾಸಿಸುವ ಸ್ವರ್ಗ. ಕಾಪಿಷ್ಠ ಎಂಬುದು ಅಂತಹ ಒಂದು ಕಲ್ಪ.
ಕಾಯೋತ್ಸರ್ಗ ದೇಹಕ್ಕೆ ಆಗುವ ಉಪಸರ್ಗ ಸಹಿಸಿ, ಅಲುಗಾಡದೆ, ಎರಡೂ ಕೈ ಇಳಿಬಿಟ್ಟು ನಿಂತು ಆತ್ಮಧ್ಯಾನ ಮಾಡುವುದು.
ಕುಂಚ ನವಿಲುಗರಿಯ ಪಿಂಛ
ಕೇವಲಜ್ಞಾನ ಪರಿಶುದ್ಧವೂ ಪರಿಪೂರ್ಣವೂ ಸರ್ವವ್ಯಾಪಿಯೂ ಆದ ಆನಂತಜ್ಞಾನ. ಇದು ಮುಕ್ತ ಜೀವಕ್ಕೆ ಸಹಜವಾಥ ಜ್ಞಾನ
ಕೇವಲ ಬೋಧೆ ನೋಡಿ – ಕೇವಲಜ್ಞಾನ
ಕೋಷ್ಠಬುದ್ಧಿ ಭಂಡಾರದಲ್ಲಿ ಧ್ಯಾನವು ತುಂಬಿರುವ ಹಾಗೆ ಎಲ್ಲ ವಿಷಯಗಳ ತಿಳಿವಳಿಕೆ.
ಕ್ಷಾಯಿಕ ಲಬ್ಧಿ ಲಾಭಾಂತರಾಯವು ಕರ್ಮವು ಸಂಪೂರ್ಣವಾಗಿ ಕ್ಷಯಗೊಳ್ಳುವುದು.
ಕ್ಷೀರವರ ಮಧ್ಯಲೋಕದಲ್ಲಿ ಕಡಲಿನ ನಡುವೆ ಇರುವೆ ದ್ವೀಪ. ಪಾಂಡುರ ಮತ್ತು ಪುಷ್ಪದಂತ ಎಂಬುವರು ಈ ದ್ವೀಪಾಧಿಪತಿಗಳು
ಗಂಧಕುಟಿ ದೇವಾಲಯದಲ್ಲಿ ಜಿನರ ಬಿಂಬಗಳಿರುವ ಎಡೆ. ಸಮವಸರಣದಲ್ಲಿ ತೀರ್ಥಂಕರರು ನಿಂತು ಉಪದೇಶಿಸುವ ಮಧ್ಯಮಂಟಪ. ಇದು ಅನೇಕ ಮಂಗಲದ್ರವ್ಯ ಸಂಪತ್ತನ್ನುಳ್ಳುದೂ ೬ ಧನಸ್ಸು ಅಗಲ – ಉದ್ದ ಮತ್ತು ಇನ್ನೂ ಹೆಚ್ಚು ಎತ್ತರ ಉಳ್ಳುದು.
ಗಂಧೋದಕ ಜಿನರಿಗೆ ಅಭಿಷೇಕಿಸಿದ ಶ್ರೀಗಂಧ ಮಿಶ್ರವಾದ ಪವಿತ್ರಜಲ, ತೀರ್ಥ.
ಗಣಧರ ತೀರ್ಥಂಕರರ ಪ್ರಧಾನ ಶಿಷ್ಯ. ಶ್ರುತಕೇವಲಿ.
ಗುಂಡಿಗೆ ಕಮಂಡಲು
ಗುಣಸ್ತವ ಜಿನರ ಅನನುಗುಣಗಳ ಸ್ತುತಿ
ಗರ್ಭಾವತರಣ ತೀರ್ಥಂಕರರಿಗೆ ಉಂಟಾಗುವ ಅಯ್ದು ಮಂಗಲಗಳಲ್ಲಿ ಮೊದಲನೆಯದು, ಜಿನರ ಜೀವ ತಾಯಿಯ ಗರ್ಭಕ್ಕೆ ಇಳಿದುಬರುವುದು.
ಘಟಾಂತಿಕೆ ಜಿನಶಾಸನ ದೇವಿ, ಯಕ್ಷಿ
ಘನೋದಧಿ ಲೋಕವನ್ನು ಸ್ತುತಿರುವ ವಾಯುಮಂಡಲಗಳಲ್ಲಿ ಕೆಳಗಿನದು. ಇದು ಎರಡು ಹರದಾರಿ ದಪ್ಪಾವಾಗಿದ್ದು ಗೋಮೂತ್ರದ ಬಣ್ಣದಿಂದ ಕೂಡಿದೆ.
ಘನಾನಿಲ ಲೋಕವನ್ನು ಆವರಿಸಿರುವ ಗಾಳಿ. ಇದಕ್ಕೆ ಅಂಬುವಾತ, ಜಲವಾತ ಎಂಬ ಹೆಸರುಗಳುಂಟು.
ಘಾತಿಕರ್ಮ ಅನಂತಗುಮಗಳಿಗೆ ಕೇಡು ಮಾಡುವ ಜ್ಞಾನಾವರಣೀಯ, ದರ್ಶನಾವರಣೀಯ, ಮೋಹನಿಯ ಮತ್ತು ಅಂತರಾಯ – ಎಂದು ೪ ಬಗೆ
ಚಂದ್ರಗತಿ ಯಾವುದೆ ಭೇದಭಾವ ತೋರಿಸದೆ, ಸಮಾನಭಾವದಿಂದ ವರ್ತಿಸಿ, ಯಾನ ಮನೆಯಲ್ಲಿಯೂ ಹೆಚ್ಚು ಹೊತ್ತು ಉಳಿಯದೆ ಮುಹೂರ್ತಕಾಲ ಇದ್ದು ಭಿಕ್ಷಾನಂತರ ಮುಂದೆ ಸಾಗುವಿಕೆ.
ಚಕ್ರರತ್ನ ಚಕ್ರವರ್ತಿಗೆ ಇರುವ ೧೪ ರತ್ನಗಳಲ್ಲೊಂದು. ಆಯುಧಾಗಾರಲ್ಲಿ ಹುಟ್ಟುತ್ತದೆ. ದಂಡಯಾತ್ರೆ ಮಾರ್ಗದರ್ಶನ ಮಾಡುತ್ತದೆ. ಶತ್ರುವಿದ್ದಲ್ಲಿ ಇದು ಚಲಿಸದೆ ನಿಲ್ಲುತ್ತದೆ.
ಚತುರ್ವಿಧದಾನ ಆಹಾರ, ಅಭಯ , ಔಷಧಿ ಮತ್ತು ಶಾಸ್ತ್ರದಾನ.
ಚತುರಾನುಯೋಗ ಜೈನಶಾಸ್ತ್ರದ ತಿರುಳು ಇರುವುದು ಅನುಯೋಗ, ಅದು ಪ್ರಥಮಾನುಯೋಗ ಕರಣಾನುಯೋಗ, ಚರಣಾನುಯೋಗ, ದ್ರವ್ಯಾನುಯೋಗ – ಎಂದು ೪ ಭಾಗ
ಚತುರ್ನಿಕಾಯ ಭವನವಾಸಿ, ವ್ಯಂತರ, ಜ್ಯೋತಿಷ್ಕ ಮಾತು ವೈಮಾನಿಕ – ಎಂಬ ನಾಲ್ಕು ಬಗೆಯ ದೇವತೆಗಳು
ಚರಮ ಶರೀರ ಮೋಕ್ಷಕ್ಕೆ ಮೊದಲು ಜೀವನು ಪಡೆದಿರುವ ಕಡೆಯ ದೇಹ
ಚರಿಗೆ ಭಿಕ್ಷೆಗೆ ಹೋಗುವುದು, ಆಹಾರಕ್ಕಾಗಿ ಹೋಗುವ ಅಲೆದಾಟ
ಚರು ನೈವೇದ್ಯ, ಅಷ್ಟವಿಧಾರ್ಚನಾ ದ್ರವ್ಯಗಳಲ್ಲೊಂದು
ಚರ್ಯಾಮಾರ್ಗ ಜೈನಮುನಿಯು ಆಹಾರಕ್ಕಾಗಿ ಸಂಚರಿಸುವ ಹಾದಿ
ಚೈತ್ಯಾಲಯ ಜಿನಾಲಯ, ಬಸದಿ
ಚಾತುರ್ವರ್ಣ ವೃತ್ತಿಭೇದದಿಂದಾಗುವ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ.
ಚಾರಣಯುಗಳ ತಪಸ್ಸಿನ ಮಹಿಮೆಯಿಂದ ಆಕಾಶದಲ್ಲೂ ನೀರನಮೇಲೂ ಸಂಚರಿಸುವ ಜೋಡಿ ಮುನಿಗಳು.
ಜಕ್ಕಳೆ ಯಕ್ಷಿ, ಶಾಸನದೇವಿ
ಜಿನ ತೀರ್ಥಂಕರ ಅರಹಂತ, ೪ ಘಾತಿ ಮತ್ತು ೪ ಅಘಾತಿ ಎಂಬ ೮ ಕರ್ಮಗಳನ್ನು ಗೆದ್ದವನು
ಚರಮಾಂಗ ಮೋಕ್ಷಕ್ಕೆ ಮುನ್ನ ಜೀವನು ಪಡೆದಿರುವ ಕಡೆಯ ಸ್ಥೂಲ ದೇಹ
ಜಂಬೂದ್ವೀಪ ಮಧ್ಯಲೋಕದ ನಟ್ಟನಡುವೆ ಲಕ್ಷಯೋಜನ ವಿಸ್ತಾರವೂ ದುಂಡಾಗಿಯೂ ಇರುವ ದ್ವೀಪ. ಇದರ ಸುತ್ತ ಲವಣ ಸಮುದ್ರವಿದೆ.
ಜಿನಗೃಹ ಜಿನಾಲಯ, ಬಸದಿ
ಠವಣೆಕೋಲು (ಬಸದಿಯಲ್ಲಿ) ಓದುವಾಗ ಹೊತ್ತಗೆಯನ್ನು ಇಟ್ಟುಕೊಳ್ಳುತ್ತಿದ್ದ ನಾಲ್ಕು ಕಾಲುಗಳ ಅಟ್ಟವಣೆ ಪೀಠ
ತನುವಾತ ಲೋಕವನ್ನು ಸುತ್ತಿರುವ ವಾಯುಮಂಡಲಗಳಲ್ಲಿ ತುಂಬ ಎತ್ತರದಲ್ಲಿರುವುದು ತನುವಾತ. ಇದು ಸಿದ್ಧಶಿಲೆಯ ನೆತ್ತಿಯ ಭಾಗವಾಗಿದ್ದು ಒಂದು ಕಿಮಾಷ್ಟು ದಪ್ಪವಿದೆ. ಈ ವಲಯದಲ್ಲಿ ಸಿದ್ಧಪರಮೇಷ್ಠಿಗಳಿರುತ್ತಾರೆ.
ತೀರ್ಥಂಕರ ಸಂಸಾರನಿಸ್ತರಣ ಉಪಾಯವನ್ನು ತಿಳಿಸಿಕೊಂಡವವರು, ಧರ್ಮತೀರ್ಥವನ್ನು ಪ್ರಚಾರ ಮಾಡುವವರು.
ತ್ರಿಕಾಲಯೋಗ ಜಿನರ್ಗಂ ತ್ರಿಕಾಲಯೋಗಂ ಎಂದು ರನ್ನನು ಅಜಿತಪುರಾಣದಲ್ಲಿ (೧೨-೨೦) ಹೇಳಿದ್ದಾನೆ. ಅದರ ಪ್ರಕಾರ ತ್ರಿಕಾಲಯೋಗವೆಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬ ಮೂರು ಕಾಲಗಳಾಗುತ್ತವೆ. ಆದರೆ ಬೆಳಗ್ಗೆ ನಡುಹಗಲು, ಮತ್ತು ಇಳಿಹೊತ್ತು – ಇದು ಸಾಮಾನ್ಯಾರ್ಥ
ತ್ರಿಗುಪ್ತಿ ಮನ ವಚನ ಕಾಯಗಳ ವ್ಯಾಪಾರವನ್ನು ಬಾಹ್ಯ ಪ್ರವರ್ತನಕ್ಕೆ ಬಿಡದೆ ತಡೆಯುವುದು. ಇದರಲ್ಲಿ ಮನೋಗುಪ್ತಿ ವಚನಗುಪ್ತಿ ಕಾಯಗುಪ್ತಿ ಎಂದು ಮೂರು ಬಗೆ.
ತ್ರಿಪ್ರದಕ್ಷಿಣೆ ನಿಂತ ವ್ಯಕ್ತಿಯ ಬಲಾಡೆಯಿಂದ ಮೂರುಸಲ ಮಾಡುವ ಪ್ರದಕ್ಷಿಣೆ
ದಶಲಕ್ಷಣ ಧರ್ಮ ರಾಗ ದ್ವೇಷಾದಿ ದುರ್ಭಾವಗಳಿಂದ ದೂಷಿತಗೊಂಡ ಮನಸ್ಸಿನ ಉಪಶಮನ ಇದಕ್ಕಾಗಿ ೧೦ ಧರ್ಮಗಲು – ಕ್ಷಮಾಮಾರ್ದವ ಆರ್ಜನ ಶೌಚ ಸತ್ಯ ಸಂಯಮ ತಪ ತ್ಯಾಗ ಆಕಿಂಚನ್ಯ ಬ್ರಹ್ನಚರ್ಯ್ಯ.
ದರ್ಶನವಿಶುದ್ಧಿ ಸಮ್ಯಗ್ ದರ್ಶನದಲ್ಲಿ ಅತ್ಯಂತ ನಿರ್ಮಲವಾದ, ದೃಢವಾದ ಚಿತ್ತವೃತ್ತಿ
ದಿಗ್‌ವ್ರತ ಮುನಿಗಳು ಪಾಲಿಸುವ ಸಂಚಾರ ನಿಯಮಗಳ ಬಗೆ, ೪ ದಿಕ್ಕು ಗಳಲ್ಲಿಯೂ ಎಲ್ಲೆಯನ್ನು ಕಲ್ಪಿಸಿ ಅದರಾಚೆ ಹೋಗದಿರುವ ನಿಯಮ.
ದಿವ್ಯಧ್ವನಿ ತೀರ್ಥಂಕರರು ಸಮವಸರಣದಲ್ಲಿ ವಿರಾಜಮಾನರಾಗಿ ಹೊರಡಿಸುವ ಧರ್ಮಬೋಧೆಯ ಧ್ವನಿ. ಅದು ಚತುರ್ಗತಿಯಲ್ಲಿರುವ ಪ್ರಾಣಿಗಳಿಗೆಲ್ಲ ಅವರ ವರ ಭಾಷೆಯಲ್ಲಿ ಅಥವಾಗುತ್ತದೆ.
ದೇಶವಿರತಿ ಏಕದೇಶ ಹಿಂಸಾದಿ ಪಾಪ ಕಾರ್ಯನಿವೃತ್ತಿ ರೂಪವಾದ ಅಣುವ್ರತಗಳನ್ನು ಪಾಲಿಸುವ ಪರಿಣಾಮ
ದೇಶವ್ರತ ದಿಗ್‍ವ್ರತದ ಕ್ಷೇತ್ರವನ್ನು ಸಂಕೋಚಪಡಿಸಿ ನಿರ್ದಿಷ್ಟವಾದ ಆ ಗಡಿಯೊಳಗೆ ಮಾತ್ರ ಹೋಗಿ ಬರುತ್ತಿದ್ದು ಅದು ಹೊರಗೆ ಹೋಗದಿರುವ ನಿಯಮ.
ದ್ರವ್ಯಷಟ್ಕ ಉತ್ಪಾದ, ವ್ಯಯ ಮತ್ತು ದ್ರೌವ್ಯ ಸಂಯುಕ್ತವಾದುದು. ಇದು ೬ ವಿಧ-ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ, ಕಾಲ.
ದ್ವಾದಶ ತಪ ಆತ್ಮನತ್ತ ಹರಿದು ಬರುವ ಕರ್ಮಗಳನ್ನು ಬಾರದಂತೆ ತಡೆಯಲು ನೆರವಾಗುವ ಹನ್ನೆರಡು ಬಗೆಯತಪಸ್ಸು. ಇದರಲ್ಲಿ ಆರು ಬಹಿರಂಗತಪಸ್ಸು, ಆರು ಅಂತರಂಗ ತಪಸ್ಸು (ನೋಡಿ).
ಧಾತಕೀಷಂಡ ಮಧ್ಯಲೋಕದಲ್ಲಿ ಕಡಲಿನ ನಡುವೆಯಿರುವ ಹದಿನಾರು ದ್ವೀಪಗಳಲ್ಲೊಂದು. ಈ ದ್ವೀಪಕ್ಕೆ ಪ್ರಭಾಸ ಮತ್ತು ಪ್ರಿಯದರ್ಶನ – ಇವರು ಒಡೆಯರು
ದ್ವಾದಶವಿಧಪ ಕರ್ಮ ನಿರ್ಜರೆಗಾಗಿ ಮಾಡುವ ಸಾಧನೆ. ಇದರಲ್ಲಿ ೨ ವಿಧ -ಆರು ಬಾಹ್ಯತಪಸ್ಸು ಮತ್ತು ಆರು ಆಭ್ಯಂತರ ತಪಸ್ಸು . ಒಟ್ಟು ೧೨ ವಿಧ.
ನಂದೀಶ್ವರ ಮಧ್ಯಲೋಕದಲ್ಲಿ ಜಂಬೂದ್ವೀಪದ ೮ನೆಯ ಸಮುದ್ರದಲ್ಲಿರುವ ದ್ವೀಪವೇ ನಂದೀಶ್ವರ ದ್ವೀಪ. ಅಲ್ಲಿನ ಅಕೃತ್ರಿಮ ಚೈತ್ಯಾಲಯಗಳಿಗೆ ಪೂಜೆ ನಡೆಯುವ ಕಾಲಗಳಿಗೆ ನಂದೀಶ್ವರ ಎಂದು ಹೆಸರು.
ನಂದ್ಯಾಯವರ್ತ ಒಂದು ಸ್ವರ್ಗದ ಹೆಸರು
ನಮೋಸ್ತು ನಮಸ್ಕಾರಕ್ಕೆ ಅರ್ಹರಾದವರು, ಶ್ರಮಣರು. ನಮೋಸ್ತುಗಳೆಂದು ಸವವರ್ಗೆ ಪೆಸರಾಯ್ತು – ಎಂದು ಕೇಶಿರಾಜನು ಶಬ್ದ,ಮಣಿದರ್ಪಣದಲ್ಲಿ ಹೇಳಿದ್ದಾನೆ.
ನವದೇವತೆ ೯ ದೇವರುಗಳು – ಅರಹಂತ, ಸಿದ್ಧ, ಅಚಾರ್ಯ, ಉಪಾಧ್ಯಾಯ, ಸರ್ವಸಾಧು, ಜಿನಧರ್ಮ, ಜಿನಾಗಮ, ಜಿನಚೈತ್ಯ (ಬಿಂಬ) ಜಿನ ಚೈತ್ಯಾಲಯ.
ನವಪದಾರ್ಥ ಪದಾರ್ಥವೆಂದರೆ ವಸ್ತು. ಪದಾರ್ಥಗಳು ಒಂಬತ್ತು – ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರ, ಮೋಕ್ಷ, ಪುಣ್ಯ, ಪಾಪ. ಸಪ್ತ ತತ್ವಗಳ ಜತೆಗೆ ಪುಣ್ಯ – ಪಾಪವನ್ನು ಸೇರಿಸಿದರೆ ನವ ಪದಾರ್ಥಗಳಾಗುತ್ತವೆ.
ನವರತ್ನ ಒಂಬತ್ತು ಬಗೆಯ ರತ್ನಗಳು – ವಜ್ರ ವೈಡೂರ್ಯ, ಗೋಮೇಧಿಕ, ಪುಷ್ಯರಾಗ, ನೀಲ ಮರಕತ, ಪಚ್ಚೆ, ಮುತ್ತು, ಹವಳ.
ನವವಿಧ ಪುಣ್ಯ ಮುನಿಚರಿಗೆಗೆ ಬಂದಾಗ ದಾನ ಮಾಡುವ ೯ ಕರ್ಮಗಳು – ಇದಿರ್ಗೊಳ್ಳುವುದು, ಕಾಲು ತೊಳೆಯುವುದು, ಒಳ್ಳೆಯ ಎಡೆಯಲ್ಲಿ ಕೂಡಿಸುವುದು, ಅರ್ಚಿಸುವುದು, ನಮಸ್ಕರಿಸುವುದು, ಮನವಚನಕಾಯಶುದ್ಧಿಗಳು, ಆಹಾರದಾನ.
ನಿರಂತರಾಯ ವ್ರತಾದಿ ಕ್ರಿಯೆಗಳಲ್ಲಿ ನಡುವೆ ತೊಡಕು, ವಿಘ್ನ (ಅಂತರಾಯ) ಉಂಟಾಗದಿರುವುದು.
ನಿರತಿಚಾರ ತಪಸ್ಸಿನ ನಿಯಮಗಳನ್ನು ಉಪ್ಪಂಘಿಸದೆ ಕ್ರಮವಾಗಿ ಪಾಲನೆ ಮಾಡುವುದು.
ನಿರ್ವಾಣ ಮೋಕ್ಷ
ನಿಷಿಧಿ  ಸನ್ಯಸನ ವಿಧಿಯಿಂದ ಮರಣ ಹೊಂದಿದವರ ಸಮಾಧಿ
ನೋಂಪಿ ವ್ರತ, ನಿಯಮಪೂರ್ವಕ ಆಚರಿಸುವ ಹಬ್ಬ, ನೋನ್ ಎಂಬ ಕ್ರಿಯಾಧಾತುವಿಗೆ ‘-ಪಿ’ ಎಂಬ ಭಾವನಾಮ ಪ್ರತ್ಯಯ ಸೇರಿ ಸಿದ್ಧಿಸಿದ ರೂಪ.
ಪಂಚಕಲ್ಯಾಣ ತೀರ್ಥಂಕರನಾಗುವ ಜೀವ ತನ್ನ ಕಡೆಯ ಜನ್ಮಕ್ಕಾಗಿ ತಾಯಿಯಗರ್ಭಕ್ಕೆ ಅವತರಿಸಿದಾಗಿನಿಂದ ನಡೆಯುವ ೫ ಮಂಗಳ ಕಾರ್ಯಗಳು – ಗರ್ಭಾವತರಣ, ಜನ್ಮಾಭಿಷೇಕ, ನಿಷ್ಕ್ರಮಣ, ಕೇವಲಜ್ಞಾನ, ನಿರ್ವಾಣ (ಮೋಕ್ಷ)
ಪಂಚನಮಸ್ಕಾರ ಅರಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು – ಈ ಅಯ್ವರು ಪಂಚಪರಮೇಷ್ಠಿಗಳಿಗೆ ಮಾಡುವ ನಮಸ್ಕಾರ, ಪೂಜೆ
ಪಂಚಪರಮೇಷ್ಠಿ ಅಯ್ವರು ಪರಮೇಶ್ರೇಷ್ಠರು – ಅರಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು
ಪಂಚಭಕ್ಷ್ಯ ಭಕ್ಷ, ಭೋಜ್ಯ, ಲೇಹ್ಯ, ಚೋಷ್ಯ, ಪಾನೀಯ
ಪಂಚಮಹಾಶಬ್ಧ ಬಸದಿಯಲ್ಲಿ ಮೊಳಗುವ ಶಂಖ ಪಟಹಕಹಳೆ ನಿಸ್ಸಾಳ ಮೃದಂಗ ಭೇರಿ ತೂರ್ಯಣುವೇ ವೀಣಾಪ್ರಮುಖ ನಾನಾವಿಧವಾಧ್ಯಜನಿತ ಮಹಾಶಬ್ದಂಗಳ್ ಎಂದು ನಂದೀಶ್ವರದ ನೋಂಪಿಯ ಕಥೆಯಲ್ಲಿದೆ.
ಪಂಚವಿಂಶತಿಮಲ ೨೫ ದೋಷಗಳು – ೬ ಅನಾಯತಗಳು, ೩ ಮೂಢಗಳು, ೮ ಮದಗಳು, ೮ ಶಂಕಾದಿ ದೋಷಗಳು.
ಪಂಚಸಮಿತಿ ಈರ್ಯಾ ಸಮಿತಿ, ಭಾಷಾಸಮಿತಿ, ಏಷಾಣಾಸಮಿತಿ, ಆದಾನನಿಕ್ಷೇಪಣಸಮಿತಿ, ಉತ್ಸರ್ಗಸಮಿತಿ ೫ ಧಾರ್ಮಿಕ ಪ್ರವೃತ್ತಿಗಳು.
ಪಂಚಾಚಾರ ಸಮ್ಯಗ್ ದರ್ಶನಾಚಾರ, ಸಮ್ಯಗ್ ಜ್ಞಾನಾಚಾರ, ಸಮ್ಯಗ್ ಚಾರಿತ್ರಾಚಾರ, ತಪಾಚಾರ, ವೀರ್ಯಾಚಾರ ಎಂಬ ಅಯ್ದುಬಗೆಯ ಆಚಾರಗಳು.
ಪಂಚಾಶ್ವರ್ಯ ಉತ್ತಮಪಾತ್ರಕ್ಕೆ ಆಹಾರದಾನ ಮಾಡಿದಾಗ ಅಯ್ದು ಬಗೆಯ ಆಶ್ಚರ್ಯಗಳುಂಟಾಗುತ್ತವೆ – ದೇವದುಂದುಭಿ ಹೂಮಳೆ, ಹೊನ್ನಿನ ಮಳೆ ; ಕಮ್ಮನೆಯ ಮೆಲುಗಾಳಿ, ದೇವತೆಗಳಿಂದ ಮೆಚ್ಚುಗೆ – ಇವು ೫ ಸೋಚಿಗಗಳು
ಪಂಚಾಸ್ತಿಕಾಯ ಬಹುದೇಶವ್ಯಾಪಿಯಾದ ಜೀವ, ಪುದ್ಗಲ ಧರ್ಮ, ಅಧರ್ಮ, ಆಕಾಶ – ಎಂಬ ೫ ಪದಾರ್ಥಗಳು. ಅಸ್ತಿ ಎಂದರೆ ಇರುವಿಕೆ.
ಪಂಚೌದುಂಬರ ೫ ಉದುಂಬರಗಳು – ಅತ್ತಿ, ಆಲ, ಗೋಣಿ, ಬಸರಿ, ಅರಳಿ ಎಂಬ ೫ ಹಾಲು ಬರುವ ಮರಗಳು (ಕ್ಷೀರವೃಕ್ಷಗಳು). ಈ ಫಲಗಳನ್ನು ತಿನ್ನಕೂಡದೆಂದು ಜೈನವ್ರತ.
ಪದಾನುಸಾರಿ ಬುದ್ಧಿ ಪುಸ್ತಕದಲ್ಲಿ ಯಾವುದಾದರೂ ಒಂದು ಶಬ್ದವನ್ನು ಗ್ರಹಣಮಾಡಿ ಆ ಸಂಪೂರ್ಣ ಗ್ರಂಥದ ಸಾರವನ್ನು ತಿಳಿದುಕೊಳ್ಳುವ ಬುದ್ಧಿ.
ಪನ್ನೊಂದು ನೆಲೆಗಳು ವಾಸಸ್ಥಾನ, ಆಶ್ರಯಸ್ಥಳ
ಪರಿಗ್ರಹ ಪೆಂಡತಿ, ಮನೆ, ಮಕ್ಕಳು, ಹಣ – ಮೊದಲಾದವುಗಳಲ್ಲಿರುವ ಮಮಕಾರದ ಪರಿಣಾಮ. ಇದರಲ್ಲಿ ಅಂತರಂಗ ಪರಿಗ್ರಹ ಮತ್ತು ಬಾಹ್ಯಪರಿಗ್ರಹ ಎಂದು ಎರಡು ಬಗೆ.
ಪರಿನಿಷ್ಕ್ರಮಣಕಲ್ಯಾಣ ತೀರ್ಥಂಕರ ನಾಗುವವನು ಬಂಧುಗಳಿಗೆ ಬಿಡುಗಡೆ ಗೊಂಡು ದೇವತೆಗಳು ತಂದ ಶಿಬಿಕೆಯನ್ನೇರಿ ಅರಮನೆ ತೊರೆದು ತಪಸ್ಸಿಗೆ ಹೋಗುವುದು. ಪಂಚಕಲ್ಯಾಣಗಳಲ್ಲಿ ಇದು ಮೂರನೆಯ ಕಲ್ಯಾಣ.
ಪರ್ಯಾಂಕಾಸನ ತಪಸ್ಸಿಗೆ ಕುಳಿತುಕೊಳ್ಳುವ ಕ್ರಮ ; ಅರ್ಧಪದ್ಮಾಸನ
ಪಲ್ಯ ಉಪಮಾ ಪ್ರಮಾಣ ವಾಚಕ ; ಬಹುದೊಡ್ಡ ಸಂಖ್ಯೆಯ ಎಣಿಕೆಯುಳ್ಳ ಒಂದು ಕಾಲಪ್ರಮಾಣ.
ಪಲ್ಯಂಕಾಸನ ಯೋಗಾಭ್ಯಾಸಕ್ಕೆ ತಕ್ಕುದಾದ ರೀತಿಯ ಆಸನ. ಬಲಪಾದವನ್ನು ಎಡತೊಡೆಯಮೇಲೂ ಎಡಪಾದವನ್ನು ಬಲತೊಡೆಯ ಮೇಲೂ ಇಟ್ಟು ಧ್ಯಾನಕ್ಕೆ ಕುಳಿತುಕೊಳ್ಳುವುದು – ಪರ್ಯಂಕಾಸನ = ಸುಖಾಸನ.
ಪಾಂಡುಕವನ ಮಂದರ ಪರ್ವತದ ಮೇಲಿನ ನಾಲ್ಕು ವನಗಳಲ್ಲೊಂದು. ಜಿನಶಿಶುವನ್ನು ಜನ್ಮಾಭಿಷೇಕಕ್ಕೆ ಕರೆತರುವುದು ಇಲ್ಲಿಗೇನೆ.
ಪಾರಣೆ ಉಪವಾಸದ ಮರುದಿನ ತೆಗೆದುಕೊಳ್ಳುವ ಆಹಾರ
ಪುಣ್ಯ ಶುಭಕರ್ಮ, ಆತ್ಮವನ್ನು ಪಾಪದಿಂದ ಬಿಡಿಸುವಂತಹದು. ಇದರಲ್ಲಿ ಭಾವಪುಣ್ಯ, ದ್ರವ್ಯಪುಣ್ಯ ಎಂದು ೨ ಬಗೆ.
ಪುಷ್ಕರವರ ದ್ವೀಪ ಮಧ್ಯಲೋಕದಲ್ಲಿ ಸಮುದ್ರದ ಮಧ್ಯದಲ್ಲಿರುವ ೧೬ ಭೂಪ್ರದೇಶಗಳಲ್ಲೊಂದು. ಈ ದ್ವೀಪಕ್ಕೆ ಪದ್ಮ ಮತ್ತು ಪುಂಡರೀಕ ಇವರು ಒಡೆಯರು.
ಪೂರ್ವ್ವಗಳು ಜೈನರ ಪ್ರಾಚೀನ ಧರ್ಮಗ್ರಂಥಗಳು. ಇವುಗಳ ಸಂಖ್ಯೆ ೧೪ (ದೃಷ್ಟಿವಾದದಲ್ಲಿ ಅಂತರ್ಗತ).
ಪೂರ್ವವಿದೇಹ ಜಂಬೂದ್ವೀಪದ ಸಪ್ತಕ್ಷೇತ್ರಗಳಲ್ಲಿ ಒಂದು. ಇದು ಮಂದರಪರ್ವತದ ಪೂರ್ವಕ್ಕೆ ಇರುವುದರಿಂದ ಪೂರ್ವವಿದೇಹವೆಂದು ಹೆಸರು.
ಪೃಥಕ್ತ್ವವಿತರ್ಕವೀಚಾರ ವಿತರ್ಕವೆಂದರೆ ಶಾಸ್ತ್ರ, ವಿಚಾರವೆಂದರೆ ವಿಪರೀತ ವರ್ತನ. ಒಂದುಶಾಸ್ತ್ರದಿಂದ ಬೇರೊಂದು ಶಾಸ್ತ್ರವಚನ, ಒಂದು ಯೋಗ್ದಿಂದ ಇನ್ನೊಂದುಯೋಗದ ಆಲಂಬನ – ಹೀಗೆ ಅಖಂಡವಾಗಿ ಸಾಗುವ ಧ್ಯಾನ.
ಪ್ರತಿಮಾಯೋಗ ಅಷ್ಟಮಿ, ಚತುರ್ದಶಿ ಮೊದಲಾದ ಪರ್ವತಿಥಿಗಳ ಉಪವಾಸದ ರಾತ್ರಿಯವೇಳೆ ನಿಂತ ಪ್ರತಿಮೆಯಂತೆ ನಿಂತು ಮಾಡುವಧ್ಯಾನ.
ಪ್ರತೀಂದ್ರ ಇಂದ್ರನಿಗಿಂತ ಸ್ವಲ್ಪ ಕೆಳಮಟ್ಟದ ಇಂದ್ರ. ನಾಲ್ಕುಪ್ರಕಾರದ ದೇವವರ್ಗಗಳಲ್ಲಿಯೂ ಇಂದ್ರನ ಕೆಳಗೆ ಪತೀಂದ್ರರು ಇರುತ್ತಾರೆ. (ಭವನವಾಸಿ, ವ್ಯಮ್ತರ, ಜ್ಯೋತಿರ್ ಮತ್ತು ಕಲ್ಪವಾಸಿ ಎಂಬ)
ಪ್ರತ್ಯೇಕ ಸ್ವಯಂಬುದ್ಧಿ ೧೮ ಋದ್ಧಿಗಳಲ್ಲಿ ಒಂದು ; ಅಪರಿಮಿತವಾದ ಬುದ್ಧಿ ಶಕ್ತಿ. ತನ್ನ ಸಂಯಮ ಉತ್ಕರ್ಷದಿಂದಲೇ ಎಲ್ಲವನ್ನೂ ಬಲ್ಲವನಾಗವಿಕೆ.
ಪ್ರಾತಿಹಾರ್ಯ ಕೇವಲಜ್ಞಾನ ಪಡೆದ ತೀರ್ಥಂಕರನಿಗೆ ಒದಗುವ ಸಂಪತ್ತು ಇದು ೮ ಬಗೆ – ಅಶೋಕ ವೃಕ್ಷ, ದಿವ್ಯ ಪುಷ್ಪವೃಷ್ಟಿ, ದಿವ್ಯಧ್ವನಿ, ಚಾಮರ, ಆಸನ, ಭಾಮಂಡಲ, ದೇವದುಂದುಭಿ, ಆತಪತ್ರ (ಕೊಡೆ)
ಪ್ರಾಯೋಪಗಮನ ಶ್ರಮಣರು ತಮ್ಮರೋಗಕ್ಕೆ ತಾವೂ ಚಿಕಿತ್ಸೆ ಮಾಡದೆ, ಬೇರೆಯವರು ಮಾಡಿಸಲೂ ಎಡೆಗೊಡದೆ ಧ್ಯಾನದಲ್ಲಿ ಮುಳುಗಿದ್ದು ಪ್ರಾಣ ಬಿಡವರು.
ಪ್ರೊಷಧೋಪವಾಸ ಶಿಕ್ಷಾ ವ್ರತದ ಪ್ರಕಾರ ಎರಡು ದಿನಗಳ ಉಪವಾಸ ಮಾಡಿ ಏಕಾಂತದಲ್ಲಿ ಧರ್ಮಧ್ಯಾನಕ್ಕೆ ಕುಳಿತುಕೊಳ್ಳುವುದು. ಇದರಲ್ಲಿ ಅಂತರಂಗ ಉಪವಾಸ, ಬಾಹ್ಯ ಉಪವಾಸ ಎಂದು ೨ ಬಗೆ
ಬಸದಿ ಜೈನದೇವಾಲಯ
ಬಹಿರಂಗ ತಪಸ್ಸು ಆನಶನ (ಉಪವಾಸ), ಅವಮೋದರ್ಯ (ಕಡಮೆ ಊಟ), ವೃತ್ತಿ ಪರಿಸಂಖ್ಯಾನ (ಬಿಕ್ಷೆಗಾಗಿ ಇಂತಿಷ್ಟೇ ಮನೆಗಳಿಗೆ, ಇಲ್ಲಿಯ ತನಕ ಮಾತ್ರಹೋಗುತ್ತೇನೆಂಬ ನಿಯಮ), ರಸಪರಿತ್ಯಾಗ (ಹಾಲು ತುಪ್ಪ ಇತ್ಯಾದಿ ಬಿಡುವುದು) ವಿವಿಕ್ತಾವಾಸ (ಏಕಾಂತ), ಕಾಯಕ್ಲೇಶ (ದೇಹದಂಡನೆ).
ಬಾಹ್ಯ ಪರಿಗ್ರಹ ಹೆಂಡತಿ ಮನೆ ಮಕ್ಕಳು ಎಂಬ ಮಮನೆತ ಸುಳಿಯಲ್ಲಿ ಸಿಕ್ಕಿಬೀಳುವುದು.
ಬೀಜ ಬುದ್ಧಿ ಬೀಜಾಕ್ಷರ ರೂಪ ಪದಗಳನ್ನು ಗ್ರಹಣ ಮಾಡಿ ಅನೇಕ ಅರ್ಥಗಳನ್ನು ತಿಳಿಯುವ ಬುದ್ಧಿ
ಭವ ಸಂಸಾರ, ಹುಟ್ಟು
ಭವ್ಯ ಕರ್ಮದಲ್ಲಿ ಮುಳಗದೆ ಬಿಡುಗಡೆ ಪಡೆಯುವ ಕಸುವನ್ನು ಉಳಿಸಿಕೊಂಡಿರುವ ಜೀವ. ಬೇಗನೆ ಸಿದ್ಧಿಪಡೆಯಬಲ್ಲುದು ಆಸನ್ನಭವ್ಯ, ತಡವಾಗಿ ಸಿದ್ಧಿಗಳಿಸಬಲ್ಲದು ದೂರಭವ್ಯ.
ಬಾವಲಿ ಬ್ಬಾವರಿ; ಜೈನ ಮುನಿಗಳು ಆಹಾರಕ್ಕಾಗಿ ಶ್ರಾವಕರ ಮನೆಗಳನ್ನು ಕುರಿತು ಹೋಗುವ ಅನಗಾರ ವೇಳೆ ; ಮಾಧುಕಾರಿ ವೃತ್ತಿ.
ಭವ್ಯಜನ ಸಿದ್ಧಿಹೊಂದುವ ಸಾಮರ್ಥ್ಯ ಇರುವವರು
ಭವಾವಳಿ ಹುಟ್ಟು ಸಾವುಗಳ ಸರಪಳಿ, ಜನ್ಮಾಂತರ ; ಪೂರ್ವ ಜನ್ಮಗಳ ಕಥನ
ಭೋಗ ಭೂಮಿ ಕಲ್ಪವೃಕ್ಷಗಳಿಂದ ಭೋಗ, ಉಪಭೋಗದ ಸಾಧನಗಳು ಸಿಗುವ ನೆಲ. ಇಲ್ಲಿ ವಾಣಿಜ್ಯ – ಕೃಷಿ ಇಲ್ಲದೆ, ರಾಜ – ಪ್ರಜೆ ತಾರತಯ ಇಲ್ಲದೆ ನಿರಾಂತಕ ಬಾಳು ಸಾಧ್ಯ. ಇವರಲ್ಲಿ ಉತ್ತಮ, ಮಧ್ಯಮ, ಜಘನ್ಯ ಎಂದು ಮೂರು ಬಗೆ.
ಮನಃ ಪ್ರವೀಚಾರ ಮನಸ್ಸಿನಿಂದ ಮೈಥುನವನ್ನು ಅನುಭವಿಸುವುದು.
ಮನುಷ್ಯಕೋಷ್ಠ ತೀರ್ತ್ಥಂಕರರು ಧರ್ಮೋಪ್ರದೇಶ ಮಾಡುವ ಸಮವಸರಣ ಮಂಟಪದಲ್ಲಿ ಮನುಷ್ಯರು ಕುಳಿತುಕೊಳ್ಳುವ ಜಾಗ.
ಮಾನಸ್ತಂಭ ಸಮವಸರಣದ ನಾಲ್ಕು ಪ್ರವೇಶ ದ್ವಾರಗಳಲ್ಲಿ, ಜೈನಗುಡಿಗಳ ಮುಂದುಗಡೆ ಇರುವ ಎತ್ತರದ ಕಂಬ. ನೋಡುಗರ ಮಾನವನ್ನು ಸ್ತಂಭನಗೊಳಿಸುವುದರಿಂದ ಮಾನಸ್ತಂಭ.
ಮಹರ್ಧಿಕದೇವ ತುಂಬ ಪ್ರಭಾವವುಳ್ಳ ದೇವತೆ, ದೇವೇಂದ್ರ
ಮಾರ್ದವ ಬಾಗುವಿಕೆ ; ಜ್ಞಾನ, ಅದರ ಸತ್ಕಾರ, ಕುಲ, ಜಾತಿ, ಬಲ, ಐಶ್ವರ್ಯ, ತಪ, ಶರೀರ ಸೌಂದರ್ಯ – ಇವುಗಳ ಅಭಿಮಾನ ಶೂನ್ಯತೆ ; ವಿನೀತ ಭಾವ.
ಮಿಥ್ಯಾದೃಷ್ಟಿ  ಸಮ್ಯಕ್ತ್ವಕ್ಕೆ ವಿರುದ್ಧವಾದ, ಹುಸಿಯಾದ ಜ್ಞಾನಪರಿಣಾಮ
ಮುಕ್ತಿ ಹುಟ್ಟುಸಾವುಗಳಿಂದ ಪೂರ್ಣ ಬಿಡುಗಡೆ. ಮೋಕ್ಷ
ಮುಕ್ಕೊಡೆ ಛತ್ರತ್ರಯ, ೮ ಮಹಾಪ್ರಾತಿಹಾರ್ಯಗಳಲ್ಲಿ ಒಂದು.
ಮುಕ್ಕೊಡೆಯಕಲ್ಲು ತೀರ್ತ್ಥಂಕರರ ಪ್ರತೀಕವಾದ ಛತ್ರತ್ರಲಾಂಛನ ಇರುವಕಲ್ಲು ; ಇಂಥ ಕಲ್ಲನ್ನು ನೆಲಹೊಲಗಳ ಮೇರೆಯಲ್ಲಿ ನೆಟ್ಟು ಅದು ಜೈನರದ್ದೆಂದು ಸೂಚಿಸಲಾಗುತ್ತದೆ.
ಮುಡುಪು / ಮುಡಿಪು ಸಲ್ಲೇಖನ ವ್ರತಾಚರಣೆಯ ಮೂಲಕ ಮರಣ
ಮೂಲಗುಣ ಮುಂದಿನ ಸಾಧನೆಗಳಿಗೆ ಮೂಲವಾಗಿರುವ ಮತ್ತು ಮೊದಲಿನಿಂದಲೂ ಯಾವಾಗಲೂ ಪಾಲಿಸಬೇಕಾದ ವ್ರತ ನಿಯಮಗಳು.
ಯೋಜನ ದೂರದ ಅಳತೆಯ ಮಾನದಂಡ, ಎರಡು ಗಾವುದ ಅಥವಾ ನಾಲ್ಕು ಹರದಾರಿಗೆ ಒಂದು ಯೋಜನ
ರತ್ನತ್ರಯ ಮುಕ್ತಿ ಹೊಂದಲು ನೆರವಾಗುವ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಮಗ್ ಚಾರಿತ್ರ.
ರೂಪಸ್ತವ ರೂಪವನ್ನು ಕುರಿತ ಸ್ಥಿತಿ. ವಸ್ತುಸ್ತವ, ಗುಣಸ್ತವ ಮತ್ತು ರೂಪಸ್ತವ – ಇವು ಮಹಾಪುರುಷನಚರಿತೆಯನ್ನು ಹೇಳುವ ವರ್ಮನೆಗಳು.
ರಾತ್ರಿಪ್ರತಿಮೆ ರಾತ್ರಿ ಹೊತ್ತಿನಲ್ಲಿ ಪ್ರತಿಮೆಯನ್ನು ಹಾಗೆ ನಿಂತು ಮಾಡುವ ಧ್ಯಾನ.
ಲವಣೋದಧಿ ಉಪ್ಪುನೀರು ಇರುವ ಕಡಲು.
ಲಾಂತವಕಲ್ಪ ಮಧ್ಯಲೋಕದ ಮೇಲುಗಡೆ ದೇವತೆಗಳು ವಾಸಿಸುವ ೧೬ ಕಲ್ಪಗಳಲ್ಲಿ ಒಂದು.
ಲೇಶ್ಯ ಆತ್ಮವು ಪುಣ್ಯಪಾಪಗಳಿಗೆ ಅಧೀನವಾಗದ ಮಾರ್ಗ ಮತ್ತು ಪರಿಣಾಮ. ಇದರಲ್ಲಿ ಶುಭಲೇಶ್ಯೆ ಮತ್ತು ಅಶುಭ ಲೇಶ್ಯೆಗಳೆಂದು ಆರು ಬಗೆ – ಕೃಷ್ಣ, ನೀಲ, ಕಾಪೋತ, ಪೀತ, ಪದ್ಮ, ಶುಕ್ಲ.
ಲೌಕಾಂತಿಕಾಮಾರರು ಲೋಕದ ಕೊನೆಯಲ್ಲಿ ಇರುವ ದೇವತೆಗಳು. ಇವರು ೧೨ ಅಂಗ ಶಾಸ್ತರಬಲ್ಲವರು ,ಬ್ರಹ್ಮಚಾರಿಗಳು, ತೀಂರ್ಥಂಕರ ಪಂಚಕಲ್ಯಾಣಗಳಲ್ಲಿ ಆಸಕ್ತರು. ಇವರಿಗೆ ದೇವದರ್ಷಿಗಳೆಂದೂ ಹೆಸರುಂಟು.
ವಣಿವಹಣಿ ನಡಗೆ, ಗತಿ
ವಸ್ತುಸ್ತವ ಮಾಹಾಪುರುಷರ ರೂಪ, ಗುಮ, ವಸ್ತುವನ್ನು ಸ್ತುತಿಸುವುದು.
ವಾರುಣಿವರ ಮಧ್ಯಲೋಕದಲ್ಲಿನ ಕಡಲಿನ ನಡುವಣ ೧೬ ದ್ವೀಪಗಳಲ್ಲೊಂದು. ವರುಣ ಮತ್ತು ವರುಣ ಪ್ರಭರು ಈ ವಾರುಣಿವರದ್ವೀಪಕ್ಕೆ ಅಧಿಪತಿಗಳು.
ವಿದೇಹ ಕ್ಷೇತ್ರ ಬಿಹಾರ್ ರಾಜ್ಯದ ಗಂದಾ ನದಿಯ ಉತ್ತರ ಭಾಗವು ವಿದೇಹವೆಂದೂ ದಕ್ಷಿಣಭಾಗವು ಮಾಗಧವೆಂದೂ ಪ್ರಸಿದ್ಧವಾಗಿದೆ. ವಿದೇಹ ಕ್ಷೇತ್ರಕ್ಕೆ ತೀರಭಕ್ತಿ (ತಿರಹುತ್) ಎಂಬ ಹೆಸರೂ ಉಂಟು. ವಿದೇಹ ಕ್ಷೇತ್ರದ ಉತ್ತರಕ್ಕೆ ಹಿಮಾಲಯ, ದಕ್ಷಿಣಕ್ಕೆ ಗಂಗಾನದಿ, ಪೂರ್ವಕ್ಕೆ ಕೌಶಿಕೀನದಿ, ಪಶ್ಚಿಮಕ್ಕೆ ಗಂಡಕೀನದಿ. ಇದು ಒಟ್ಟು ವಿದೇಹದ ಸೀಮಾರೇಖೆ ಕುಂಡಿಪುರವಿದ್ದುದು ವಿದೇಹ ದೇಶದಲ್ಲಿ. ಇಲ್ಲಿ ಹುಟ್ಟಿದ್ದರಿಂದ ಮಹಾವೀರರಿಗೆ ವೈದೇಹ, ವಿದೇಹದತ್ತ, ವಿದೇಹ ಸುಕುಮಾರದೆ ಎಂದೂ ಹೇಳಿದ. ವಿದೇಹವು ಮನುಷ್ಯನಿಗೆ ಮೋಕ್ಷ ದೊರೆಯುವ ಸ್ಥಳ, ಇಲ್ಲಿ ಸೀತಾ, ಸೀತೋದಾ ನದಿಗಳೂ ೧೧೨ ಸಾವಿರ ಉಪನದಿಗಳೂ ಹರಿಯುತ್ತವೆ. ಇಲ್ಲಿನ ಸುಮೇರು ಪರ್ವತದ ಉತ್ತರ – ದಕ್ಷಿಣಕ್ಕೆ ಭೋಗಭೂಮಿಯೂ ದಕ್ಷಿಣ-ಪಶ್ಚಿಮಕ್ಕೆ ಕರ್ಮಭೂಮಿಯೂ ಇವೆ. ೪ ದಿಕ್ಕಿಗೂ ನಾಲ್ಕು ಇಜಾಯಾರ್ಧ ಪರ್ವತಗಳಿವೆ.
ವೀತರಾಗ ರಾಗದ್ವೇಷಾದಿಗಳು ಇಲ್ಲದವರು, ಜಿನರು.
ವ್ಯುಪರತಶುಕ್ಲಧ್ಯಾನ ಯೋಗಿಯು ತನ್ನ ಆತ್ಮವನ್ನು ಕರ್ಮಮಲದಿಂದ ದೂರಗೊಳಿಸಿ ಮೋಕ್ಷಗಳಿಸಲು ಸಾಧನಾವಾಗುವ ಧ್ಯಾನ. ಇದನ್ನು ಪರಮ ಶುಕ್ಲಧ್ಯಾನವೆನ್ನಾಲಾಗಿದೆ.
ಶಾಸನದೇವತೆ ಯಕ್ಷಿ ಜಿನರ ಶಾಸನವನ್ನು ಸಂರಕ್ಷಿಸುವ ದೇವಿ.
ಶುಕ್ಲಧ್ಯಾನ ಯೋಗಿಯು ತನ್ನ ಆತ್ಮವನ್ನು ಕರ್ಮಮಲದಿಂದ ದೂರಗೊಳಿಸಿ ಮೋಕ್ಷಗಳಿಸಲು ಸಾಧನ. ಇದರಲ್ಲಿ ಪೃಥಕತ್ತ್ವವಿತರ್ಕ ವೀಚಾರ, ಏಕತ್ವ ವಿತರ್ಕವೀಚಾರಾ, ಸೂಕ್ಷ್ಮಕ್ರಿಯಾ ಪ್ರತಿಪಾತಿ, ವ್ಯುಪರತಕ್ರಿಯಾ ನಿವರ್ತಿ – ಎಂದು ನಾಲ್ಕು ವಿಧ.
ಶಿಕ್ಷಾವ್ರತ ಮುನಿ ಜೀವನದ ಶಿಕ್ಷಣವನ್ನು ಶ್ರಾವಕರಿಗೆ ನೀಡುವ ವ್ರತ. ಇದರಲ್ಲಿ ದೇಶಾವಕಾಶಿಕ, ಸಾಮಯಿಕ, ಪ್ರೊಷಧೋಪವಾಸ, ವೈಯಾವೃತ್ಯ – ಎಂದು ೪ ಬಗೆ
ಶ್ರಾವಕ ಜೈನಗ್ರಹಸ್ಥ, ಉಪಾಸಕ, ಇವರಲ್ಲಿ ಪಾಕ್ಷಿಕ, ನೈಷ್ಠಿಕ, ಸಾಧಕ ಎಂದು ಮೂರು ತೆರ.
ಶ್ರಾವಕಧರ್ಮ ಗೃಹಸ್ಥರು ದಿನದಿನವೂ ಮಾಡಬೇಕಾದ ಅರ್ಚನೆ (ಇಜ್ಯಾ) ಗುರುಸೇವೆ (ವಾರ್ತಾ), ದತ್ತಿ, ಸ್ವಾಧಾಯ, ಸಂಯಮ, ತಪ – ಇವನ್ನು ಆಚರಿಸುವುದು.

 

ಶ್ರುತ ಜೈನ ಮೂಲಶಾಸ್ತ್ರ ಗ್ರಂಥಗಳು
ಶ್ರುತಕೇವಲಿ ಅಂಗಪೂರ್ವಗಳಲ್ಲಿ ಪಾರಗಾಇಯಾದ ಪರೋಕ್ಷ ಜ್ಞಾನಿ ; ಪ್ರತ್ಯಕ್ಷ – ಪರೋಕ್ಷ ಜ್ಞಾನಗಳೆರಡನ್ನು ಪಡೆದಿರುವವರು ; ಗಣಧರರು.
ಶ್ರುತಪೂಜೆ ಜ್ಯೇಷ್ಠಶುದ್ಧ ಪಂಚಮಿಯಂದು ಶ್ರುತರೂಪದಲ್ಲಿ ಇದ್ದ ಶಾಸ್ತ್ರವನ್ನು ಲಿಪಿಬದ್ಧವಾಗಿಸಿದರು. ಅಂದಿನಿಂದ ಇದು ಪವಿತ್ರಪರ್ವತಿಥಿಯಾಗಿ, ಹಬ್ಬವಾಗಿ ಆಚರಿಸಲ್ಪಡುತ್ತಿದೆ.
ಶ್ರುತಸ್ಕಂಧ ಜೈನಧರ್ಮ ಶಾಸ್ತ್ರ, ಗ್ರಂಥಗಳ ಸಮೂಹ, ತೀಂರ್ಥಂಕರರ ಉಪದೇಶವನ್ನು ಆಧರಿಸಿ ರಚಿಸಿದ ದ್ವಾದಶಾಂಗ ಸೂತ್ರ.
ಷಟ್ಕಷಾಯ ಹಾಸ್ಯ, ರತಿ ಅರತಿ, ಸೋಕ, ಭಯ ಮತ್ತು ಜುಗುಪ್ಸೆಯೆಂಬ ೬ ವಿಧ ದೋಷಗಳು
ಷಡಾವಶ್ಯಕ ಮುನಿಗಳು ನಿತ್ಯ ಆಚರಿಸಬೇಕಾದ ಸಾಮಾಯಿಕ, ತೀರ್ಥಂಕರ ಸ್ತವನ, ಪಂಚಪರಮೇಷ್ಠಿ ವಂದನ, ಪ್ರತಿಕ್ರಮಣ ಪ್ರತ್ಯಾಖ್ಯಾನ ಮತ್ತು ಕಾಯೋತ್ಸರ್ಗ ಎಂಬ ೬ ಕ್ರಿಯೆಗಳು.
ಷಡ್ದ್ರವ್ಯ ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ, ಕಾಲ – ಎಂಬ ಆರು ದ್ರವ್ಯಗಳು
ಷೋಡಶ ಭಾವನೆ ತೀರ್ಥಂಕರತ್ವವನ್ನು ಸಾಧಿಸಿ ಕೊಡುವ ೧೬ ಬಗೆಯ ಭವಾನೆಗಳು
ಷೋಡಶ ಸ್ವರ್ಗ ಪುಣ್ಯದ ಪರಿಣಾಮಕ್ಕನುಗುಣವಾಗಿ ಜೀವಗಳು ಹುಟ್ಟುವ ೧೬ ಸ್ವರ್ಗಗಳು
ಸಂಭಿನ್ನಶ್ರೋತೃಬುದ್ಧಿ ೧೨ ಯೋಜನ ಉದ್ಧ, ೯ ಯೋಜನ ಅಗಲದ ಪ್ರದೇಶದಲ್ಲಿರುವ ಮನುಷ್ಯ ಹಾಗೂ ಪ್ರಾಣಿ ಸಂಬಂಧಿಯಾದಅಕ್ಷರಾತ್ಮಕ ಹಾಗೂ ಅನಕ್ಷರಾತ್ಮಕ ಶಬ್ದಗಳನ್ನು ಒಂದೇ ಕಾಲದಲ್ಲಿ ಬೇರೆ ಬೇರೆಯಾಗಿ ಅರಿಯುವು ಜಾಣ್ಮೆ
ಸಂಸೃತಿ ಹುಟ್ಟುಸಾವುಗಳ ಪರಂಪರೆ, ಭವಾವಳಿ
ಸನ್ಯಸನ ಕಷಾಯಗಳನ್ನೂ ಆಹಾರವನ್ನೂ ಕಡಿಮೆಮಾಡಿ, ಪಂಚಮಪರಮೇಷ್ಠಿಗಳ ನೆನಹಿನಲ್ಲಿ ಮುಳುಗಿರುವಾಗ ಹರಣ ಹೋಗುವುದು
ಸಪ್ತಗುಣ ಸಮ್ಯಗ್ ದರ್ಶನ ಶುದ್ಧ, ಕರ್ಮಶುದ್ಧ, ಸುಶೀಲಗುಣ ಶುದ್ಧ, ಉದ್ಯೋಗ ಶುದ್ಧ, ಗುರುಭಕ್ತ, ಪ್ರವಚನ ಕುಶಲಿ, ಮತಿ ಪ್ರಗಲತ್ವ ಈ ೭ ನಗೆಯ ಗುಣಗಳು.
ಸಪ್ತಜ್ಯೋತಿ ಆತ್ಮಜ್ಯೋತಿ, ಆಚಾರ್ಯಜ್ಯೋತಿ, ಪುರುಷಜ್ಯೋತಿ, ಪುತ್ರಜ್ಯೋತಿ, ಪುಣ್ಯಜ್ಯೋತಿ, ಸಹೋದರ ಜ್ಯೋತಿ ಬಂಧು ಜ್ಯೋತಿ.
ಸಪ್ತತತ್ವ ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರೆ, ಮೋಕ್ಷ – ಈ ೭ ತತ್ವಗಳು.
ಸಪ್ತರ್ಧಿ ಬುದ್ಧಿ ಋದ್ಧಿ, ತಪರ್ಧಿ ಔಷಧರ್ಧಿ, ರಸರ್ಧಿ, ಬಲರ್ಧಿ, ಜ್ಞಾನರ್ಧಿ, ಚಾರಣರ್ಧಿ – ಈ ೭ ಸಿದ್ಧಿ – ಮಹಿಮೆಗಳು
ಸಮವಸರಣ ಕೇವಲಜ್ಞಾನ ಉಂಟಾದಮೇಲೆ ತೀರ್ಥಂಕರನು ಧರ್ಮೋಪದೇಶ ಮಾಡುವುದಕ್ಕೆ ಇಂದ್ರನ ಅಪ್ಪಣೆಯಂತೆ ಕುಬೇರನು ಮಾಡಿದ ೧೨ ಯೋಜನವಿಸ್ತಾರದ ಮಂಡಲಾಕಾರದ ಸಭಾಮಂಟಪ.
ಸಮ್ಯಕ್ತ್ವ ಜಿನಮತದಲ್ಲಿ ಅಖಂಡವಾದ ನಂಬಿಕೆ, ಅಚಲವಾದ ಶ್ರದ್ಧೆ.
ಸಮ್ಯಗ್ ದೃಷ್ಟಿ ಸಮ್ಯಘ್ ದರ್ಶನ; ಜಿನರಲ್ಲೂ ಜಿನಾಗಮದಲ್ಲೂ ಜಿನಮುನಿಗಳಲ್ಲೂ ಜೀವಾದಿ ನವತತ್ವಗಳಲ್ಲೂ ವಿಶ್ಚಾಸ ಮತ್ತು ನಿಷ್ಠೆ ತೋರುವುದು.
ಸಮಾಧಿ ವಿಧಿ ಚಿತ್ತನಿರೋಧದಿಂದ ಆತ್ಮಜ್ಞಾನಿಯಾಗಿ ನಿವೃತ್ತಿ ಪೂರ್ವಕವಾಗಿ ಶರೀರಭಾರವನ್ನು ಇಳಿಸುವುದು ಸಮಾಧಾನದಿಂದ ಸಾವನ್ನು ಸ್ವಾಗತಿಸುವುದು.
ಸವಣ ಶ್ರವಣ, ಜೈನ ಸನ್ಯಾಸಿ
ಸವ್ವಸಾಹೂ ಪಂಚಪರಮೇಷ್ಠಿಗಳಲ್ಲಿ ಅಯ್ದನೆಯವರಾದ ಸರ್ವ ಸಾಧುಗಳು.
ಸರ್ವತೋಭದ್ರತಪಸ್ಸು ಒಟ್ಟು ೭೫ ಉಪವಾಸಗಳನ್ನೂ ೨೫ ಪಾರಣೆಗಳನ್ನೂ ಮಾಡುವ ವ್ರತ.
ಸರ್ವಾರ್ಥಸಿದ್ಧಿ ೧೬ ಸ್ವರ್ಗಗಳ ಮೇಲೆ ೯ ಗ್ರೈವೇಯಕಗಳಿದ್ದು, ಅವುಗಳ ಮೇಲೆ ೫ ಅನುತ್ತರೆ ವಿಮಾನಗಳುಂಟು. ಈ ೫ ರಲ್ಲಿ ಸರ್ವೋತ್ಕೃಷ್ಟವಾದದ್ದು ಸರ್ವಾರ್ಥಸಿದ್ಧಿ. ಇದು ಉಳಿದ ನಾಲ್ಕರ ನಡುವೆ ಇದೆ.
ಸಾಗಾರ ಗೃಹಸ್ಥಾಶ್ರಮದಲ್ಲಿರುವ ಜೈನ.
ಸಾಗರೋಪಮಾಯುಷ್ಯ ಸಾಮಾನ್ಯ ಎಣಿಕೆಗೆ ಸಿಅದ ಬಹುದೀರ್ಘಕಾಲದ ಬಾಳುವೆ; ಪಲ್ಯಕಾಲಗಳ ಹತ್ತು ಕೋಟಾಕೋಟಿಕಾಲ.
ಸಾಮಾಯಿಕ ಸಮತಾಭಾವವನ್ನು ಧಾರಣ ಮಾಡಲು ನೆರವಾಗುವ ಎಲ್ಲ ಆಚಾರ ವಿಚಾರಗಳು.
ಸಿದ್ಧಪರಮೇಷ್ಠಿ ಪಂಚಪರಮೇಷ್ಠಿಗಳಲ್ಲಿ ಒಬ್ಬರು, ಅಘಾತಿಕರ್ಮಗಳನ್ನು ನಾಶಮಾಡಿ ದೇಹವನ್ನು ಬಿಟ್ಟು ಸಿದ್ಧಶಿಲೆಯ ಶಾಸ್ವತ ಸುಖದಲ್ಲಿ ನೆಲಸಿದ ಅಯೋಗಿ ಕೇವಲಿಗಳು
ಸಿದ್ಧಶಿಲೆ ಈಷತ್ ಪ್ರಾಗಾಭರವೆಂಬ ಸಿದ್ಧ ಕ್ಷೇತ್ರದ ನಡುವೆ ಇರುವ ಶುದ್ಧ ಸ್ಫಟಿಕಶಿಲೆ, ಇದು ಬಿಚ್ಚಿದ ಕೊಡೆಯ ಆಕಾರದಲ್ಲಿ ಇದ್ದು ಉಂಟಾಗುವದದಪ್ಪವೂ ೪೫ ಲಕ್ಷಯೋಜನ ವಿಸ್ತಾರವೂ ಇದೆ. ಸಿದ್ಧಶಿಲೆಯ ನೆತ್ತಿಯಲ್ಲಿ ಮುಕ್ತರಾದ ಸಿದ್ಧರು ನೆಲಸುವರು.
ಸೂಕ್ಷ್ಮ ಕ್ರಿಯಾಪ್ರತಿಪಾತಿ ಕೇವಲಿಯ ಆಯುಃಕರ್ಮವು ಅಂತರ್ಮುಹೂರ್ತದಲ್ಲಿ ಇರುವಾಗ ಉಳಿದ ಕರ್ಮಗಳೂ ಅದೇ ಪ್ರಮಾಣದಲ್ಲಿರುತ್ತವೆ. ಆಗ ಆತನು ಮನೋ ವಚನ ಕಾಯಯೋಗಗಳನ್ನು ತ್ಯಾಗ ಮಾಡಿ ಸುಖ್ಶ್ಮ ಕಾಯಯೋಗದಲ್ಲಿ ನಿಂತು ಮಾಡುವ ಧ್ಯಾನವಿದು.
ಸೂರ್ಯಪ್ರತಿಮೆ ಹಗಲು, ಪ್ರತಿಮೆ ; ರಾತ್ರಿ ಪ್ರತಿಮೆಗೆ ವಿರೋಧವಾದುದು
ಸೌಧರ್ಮ ಕಲ್ಪ ಊರ್ಧ್ವಲೋಕದ ೧೬ ಕಲ್ಪಗಳಲ್ಲಿ ಮೊದಲನೆಯದು.
ಸ್ವದೇಹ ಪರಿಮಾಣ ಆತ್ಮ (ಜೀವ) ನು ಯಾವ ಪ್ರಾಣಿ ಅಥವಾ ವ್ಯಕ್ತಿಯ ದೇಹದಲ್ಲಿ ಇರುವನೊ ಆ ದೇಹದ ಪ್ರಮಾಣ ಹೊಂದಿರುತ್ತಾನೆ. ಆತ್ಮನ ಸ್ವರೂಪ ಕುರಿತ ಜೈನ ವ್ಯಾಖ್ಯಾನದಲ್ಲಿ ಇದು ಪ್ರಾಮುಖ್ಯ ಪಡೆದಿದೆ. ನೋಡಿ : ಅಗುರು ಲಘುತ್ವ.