ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಠಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಅಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಭೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ತತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಆಧುನಿಕ ಕನ್ನಡದಲ್ಲಿ ಕಥಾಸಾಹಿತ್ಯ ಪರಂಪರೆ ಅತ್ಯಂತ ಸಮೃದ್ಧವಾಗಿ ವ್ಯಾಪಕವಾಗಿ ಹಾಗೂ ವಿಶಿಷ್ಟವಾಗಿ ಹರಿದು ಬಂದಿದೆ. ಆಂಗ್ಲ ಸಾಹಿತ್ಯದ ಅಧ್ಯಯನ ಆಧುನಿಕ ಕನ್ನಡ ಕಥೆಗಳ ಹುಟ್ಟಿಗೆ ಕಾರಣವೆಂದು ಹೇಳುವವರುಂಟು. ಆದರೆ ಭಾರತೀಯ ಸಾಹಿತ್ಯದ ಸಾಗರ ಸದೃಶ ಸೃಷ್ಟಿಯಲ್ಲಿ ಸಂಸ್ಕೃತ ಭಾಷೆಯ ಕಥೆಗಳು ಬಹುಮುಖ್ಯ ಭಾಗವನ್ನು ಆವರಿಸುತ್ತವೆ. ಅನಂತರ ಪ್ರಾಕೃತ ಹಾಗೂ ದೇಶೀಯ ಭಾಷೆಗಳಲ್ಲೂ ಈ ಕಥನ ಶ್ರೀಮಂತಿಕೆ ಸಾವಿರಾರು ಟಿಸಿಲುಗಳನ್ನು ಪಡೆದುಕೊಂಡು ಬಹು ವಿಶಾಲವಾಗಿ ಕಣ್ಣು ಕೋರೈಸುವಂತೆ ಬೆಳೆದು ನಿಂತಿದೆ. ಭಾರತದ ಎಲ್ಲಾ ದೇಶೀಯ ಭಾಷೆಗಳಲ್ಲೂ ಆಡುನುಡಿಯ ಸೊಂಪಿನೊಡನೆ, ನೆಲದ ಕಂಪಿನೊಡನೆ, ಅನುಭವದ ಪೆಂಪಿನೊಡನೆ ಅಕ್ಷಯ ಸ್ವರೂಪದ ಕಥನಲೋಕ ಮೈತೆರದುಕೊಂಡಿದೆ. ಇವು ಬಿಚ್ಚುವ ಧಾಮಿಕ, ಸಾಮಾಜಿಕ, ಸಾಂಸ್ಕೃತಿಕ ಅಲೌಕಿಕ ಮಗ್ಗಲುಗಳು ಅನಂತವಾಗಿವೆ. ಮೌಖಿಕ ಪರಂಪರೆಯಲ್ಲಿ ಅನ್ಯಾದೃಶವಾಗಿ ಮೂಡಿಬಂದ ಈ ಕಥೆಗಳು ಕನ್ನಡ ಸಾಹಿತ್ಯದಲ್ಲಿ ಜೈನ ವಿದ್ವಾಂಸರ, ಕವಿಗಳ, ಧಾರ್ಮಿಕ ಅಭಿರುಚಿ, ಸಾಹಿತ್ಯಕ ಅಭಿವ್ಯಕ್ತಿ ಶಕ್ತಿ ಮತ್ತು ಅನ್ಯಾದೃಶವಾದ ಕಥನಕೌಶಲಗಳಿಂದ ಮೈ ದುಂಬಿಕೊಂಡಿವೆ. ಜೈನ ಧರ್ಮೀಯರನ್ನು ಮಾತ್ರವಲ್ಲದೆ ಎಲ್ಲ ಧರ್ಮಗಳ ಕಥನ ಪ್ರಿಯರಿಗೂ ಆಕರ್ಷಣೆಯ ಮನರಂಜನೆಯ ಮತ್ತು ಮಾನಸಿಕ ಶಿಕ್ಷಣದ ದ್ಯೋತಕಗಳಾಗಿ ಚಿರಸ್ಥಾಯಿಗೊಂಡಿವೆ.

ಗ್ರಾಂಥಿಕವಾಗಿ ಮೊದಲು ದೊರೆಯುವ ವಡ್ಡಾರಾಧನೆಯ ಬಹುಬಗೆಯ ಕಥನ ಪ್ರಪಂಚ, ಕಥೆಗಳು ಒಳಗೊಳ್ಳಬಹುದಾದ ಎಲ್ಲಾ ಸೂಕ್ಷ್ಮತೆಗಳನ್ನು ಸಂಕೀರ್ಣತೆಯನ್ನು ಕಲಾಕೌಶಲವನ್ನು ಭಾಷಾ ಸೌಂದರ್ಯವನ್ನು ಒಳಗೊಂಡಿವೆ. ಧರ್ಮ ಪ್ರಸಾರದ ಮತ್ತು ಆ ಮೂಲಕ ಮಾನಸ ಪರಿಶಿಕ್ಷಣದ ಉದ್ದೇಶದಿಂದ ನೂರಾರು ಕವಿಗಳ ಅನುಭವದ ಗಣಿಯಿಂದ ಹೊಮ್ಮಿದ ಕಥಾರತ್ನಗಳು ನಮ್ಮ ಸಾಹಿತ್ಯದ ಬಹು ಅಮೂಲ್ಯ ಭಾಗಗಳಾಗಿವೆ. ಜೈನ ಧರ್ಮೀಯರ ಸಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆನುಭಾವಿಕ ಹಾಗೂ ಐತಿಹಾಸಿಕ ಪ್ರಜ್ಞೆಯಿಂದ ಅರಳಿದ ನೂರಾರು ನೋಂಪಿಯ ಕಥೆಗಳು ಹಸ್ತಪ್ರತಿಗಳಲ್ಲಿ, ಹಲವು ಪ್ರಕಟಿತ ಕಾವ್ಯಗಳ ಒಳನೇಯ್ಗೆಯಲ್ಲಿ ಇನ್ನೂ ಹುದುಗಿಕೊಂಡಿವೆ. ಇವುಗಳ ಸಮಗ್ರ ಸಂಗ್ರಹ ಸಂಶೋಧನೆ, ವಿಶ್ಲೇಷಣೆ, ಪರಿಚಯ ಮತ್ತು ಪ್ರಸಾರ ಇನ್ನೂ ಪೂರ್ಣವಾಗಿ ನಡೆದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಕನ್ನಡದ ಪ್ರತಿಷ್ಠಿತ ಮತ್ತು ಪ್ರಬುದ್ಧ ಹಾಗೂ ಬಹುಶ್ರುತ ವಿದ್ವಾಂಸರಲ್ಲಿ ಒಬ್ಬರಾದ ಗೆಳೆಯ ಪ್ರೊ. ಹಂಪ. ನಾಗರಾಜಯ್ಯ ಅವರು ಅಪಾರ ಪರಿಶ್ರಮದಿಂದ ತಮ್ಮ ದಶಕಗಳ ಕಾಲದ ಸಾಹಿತ್ಯ ಕೃಷಿಯ ಸತ್‌ ಪ್ರೇರಣೆಯಿಂದ, ಅನನ್ಯವಾದ ಮೌಲ್ಯ ಪ್ರಜ್ಞೆಯಿಂದ ೮೪ ನೋಂಪಿಯ ಕಥೆಗಳನ್ನು ಪ್ರಸ್ತುತ ಸಂಪುಟದಲ್ಲಿ ತುಂಬ ವಿಚಕ್ಷಣತೆಯಿಂದ ಕಲೆಹಾಕಿ ಸಂಪಾದಿಸಿ ಕನ್ನಡಿಗರಿಗೆ ನೀಡಿದ್ದಾರೆ; ಬಹಳಷ್ಟು ಮಟ್ಟಿಗೆ ಅಜ್ಞಾತವಾಗಿ ಉಳಿದಿದ್ದ ಈ ಕಥೆಗಳ ಅನ್ಯಾದೃಶ್ಯ ಸಂಪತ್ತನ್ನು ಸಾಹಿತ್ಯಾಸಕ್ತರಿಗೆ ಒದಗಿಸಿದ್ದಾರೆ. ವಿಸ್ತಾರವಾದ ಅವರ ಪ್ರಸ್ತಾವನೆ ವಿದ್ವತ್‌ಪೂರ್ಣವೂ ಚೇತೋಹಾರಿಯೂ, ಕಥೆಗಳ ಅಂತರದರ್ಶಕವಾಗಿಯೂ ಇದ್ದು ಈ ಕೃತಿಯ ಸಾಂಸ್ಕೃತಿಕ ಹಾಗೂ ವಿಮರ್ಶಾತ್ಮಕ ಮೌಲ್ಯವನ್ನು ಅತಿಶಯವಾಗಿ ವರ್ಧಿಸಿದೆ. ಸತತ ಪರಿಶ್ರಮ, ಅರ್ಪಣ ಮನೋಧರ್ಮ, ದುಡಿಮೆ ಹಾಗೂ ಸಾಹಿತ್ಯಾಂತರಂಗವನ್ನು ಅನನ್ಯತೆಯಿಂದ ಪ್ರವೇಶಿಸಿ ಅದರ ಆಂತರ್ಯದ ಮುತ್ತು ರತ್ನಗಳನ್ನು ಹೆಕ್ಕಿ ತರುವ ಪ್ರಥಮದರ್ಜೆಯ ಸಂಶೋಧನಾ ಸಾಹಸಿಗಳಲ್ಲದವರಿಗೆ ಇಂಥ ಕಾರ್ಯ ಸಾಧ್ಯವಾಗುವುದಿಲ್ಲ. ಕೇವಲ ಸಾಹಿತ್ಯ ಪ್ರೀತಿಯಿಂದ ವಿದ್ವತ್‌ ಪ್ರೇಮದಿಂದ, ಕನ್ನಡ ವಿಶ್ವವಿದ್ಯಾಲಯದ ಬಗೆಗಿನ ಅಭಿಮಾನದಿಂದ ಪ್ರೊ. ಹಂಪನಾ ಅವರು ಇಂತಹ ಅಮೂಲ್ಯ ಕೃತಿಯನ್ನು ಕನ್ನಡಗರಿಗೆ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ವಿಶ್ವವಿದ್ಯಾಲಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ. ಹಾಗೆಯೇ ಇನ್ನೂ ಅಜ್ಞಾತವಾಗಿ ಉಳಿದಿರುವ, ಭಾಷೆಯ ಸೊಗಸು ನಿರೂಪಣೆಯ ಸೊಗಸು ಕಲ್ಪನೆಯ ಸೊಗಸು ಕಲಾಕೌಶಲ್ಯದ ಸೊಗಸು ಜೀವನ ಸತ್ವ ಹಾಗೂ ಸತ್ವಗಳ ಸೊಗಸಿನಿಂದ ಕೂಡಿರುವ ನೂರಾರು ಸಂಖ್ಯೆಯ ಕಥೆಗಳು ಡಾ. ಹಂಪನಾ ಅವರ ಮೂಲಕ ಸಂಶೋಧನಾ ಭಾಂಡಾಗಾರದಿಂದ ಕನ್ನಡಿಗರಿಗೆ ದೊರೆಯುವಂತಾಗಲಿ, ಆ ಮೂಲಕ ಕನ್ನಡ ಕಥನ ಲೋಕದ ಮೌಲಿಕ ತೌಲನಿಕ ವಿಮರ್ಶೆಗೆ ಅನುವಾಗಲಿ ಎಂದು ಆಶಿಸುತ್ತೇನೆ.

ಈ ಕೃತಿಯ ಸಂಪಾದನೆಗೆ ಪ್ರೇರಣೆ ನೀಡಿದ ಸ್ವತಃ ಶ್ವೇಷ್ಠ ಸಂಶೋಧಕರಾದ ಕನ್ನಡ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿ ಅವರನ್ನು ಈ ಸಂದರ್ಭದಲ್ಲಿ ಮನಸಾ ಸ್ಮರಿಸುತ್ತೇನೆ. ಈ ನೋಂಪಿಯ ಕಥೆಗಳ ಪ್ರಕಟಣೆಗೆ ಆರ್ಥಿಕ ನೆರವು ನೀಡಿ ಇಂತಹ ಅನನ್ಯ ಕೃತಿಯೊಂದು ಕನ್ನಡಿಗರಿಗೆ ದೊರೆಯಲು ಕಾರಣರಾದ ಸಂಸ್ಕೃತಿ ಪ್ರಿಯ ಶ್ರೀಮಂತ ಉದ್ಯಮಿ ಹೊಸಪೇಟೆಯ ಮಾನ್ಯಶ್ರೀ ಅಭೇರಾಜ್‌ ಬಲ್ದೋಟ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಡಾ. ಎಚ್. ಜೆ. ಲಕ್ಕಪ್ಪಗೌಡ
ಕುಲಪತಿಗಳು