ಮಗಧರಾಜ ಶ್ರೇಣಿಕ ಬಿಂಬಸಾರ

ಮಗಧದೇಶದ ರಾಜ ಶ್ರೇಣಿಕನೊಂದಿಗೆ ಮಹಾವೀರರ ಮೈತ್ರಿ ಸಂಬಂಧ ಬಹಳ ದೀರ್ಘಕಾಲದ್ದು ಹಾಗೂ ಘನಿಷ್ಠವಾದದ್ದು. ಜೈನ ಪುರಾಣ ಪರಂಪರೆಯೆಲ್ಲವೂ ಶ್ರೇಣಿಕನ ಪ್ರಶ್ನೆಯೊಂದಿಗೆ, ಮಹಾವೀರ ಮತ್ತು ಅವರ ಪ್ರಮುಖ ಗಣಧರ ಇಂದ್ರಭೂತಿ ಗೌತಮನ ಉತ್ತರದೊಂದಿಗೆ ಪ್ರಾರಂಭವಾಗುತ್ತದೆ. ಶ್ರೇಣಿಕನ ಐತಿಹಾಸಿಕತೆಯ ಬಗ್ಗೆ ಸಂದೇಹಗಳಿಲ್ಲ. ಜೈನಗ್ರಂಥಗಳಲ್ಲದೆ ಬೌದ್ಧ ಸಾಹಿತ್ಯದಲ್ಲಿಯೂ ಸಮಾನಾಂತರ ವೃತ್ತಾಂತಗಳಿವೆ. ದಿಗಂಬರ ಜೈನ ಪರಂಪರೆಯಲ್ಲಿ ಈತನ ಹೆಸರನ್ನು ಶ್ರೇಣಿಕ ಎಂದು ತಿಳಿಸಿದ; ಶ್ವೇತಾಂಬರ ಪರಿವಿಡಿಯಲ್ಲಿ ಭಿಂಭಿಸಾರ/ಭಿಂಭಸಾರ ಎಂದಿದೆ. ಈತನಿಗೆ ಭೇರಿ (ಭಿಂಭಾ) ಬಾರಿಸುವ ಅಭಿರುಚಿ ಇದ್ದುದರಿಂದ ಭಿಂಭಸಾರ ಎಂಬ ಹೆಸರಾಯಿತು. ಈ ನಾಮರೂಪದ ಅಪಭ್ರಂಶರೂಪವೇ ಬಿಂಬಸಾರ/ಬಂಬಸಾರ. ಬೌದ್ಧಸಾಹಿತ್ಯ ರೂಢಿಯಲ್ಲಿ ಶ್ರೇಣಿಕ ಮತ್ತು ಬಿಂಬಸಾರ ಎಂಬ ಎರಡೂ ಹೆಸರುಗಳಿವೆ. ಈತನ ಮೈಬಣ್ಣ ಸುವರ್ಣದ (ಬಿಂಬ) ಹೊಳಪಿನಿಂದ ಕೂಡಿತ್ತು, ಅದರಿಂದ ಬಿಂಬಸಾರ ಎನ್ನಲಾಯಿತು (ಉದಾನ ಅಟ್ಠಕಥಾ ೧೦೪). ತಿಬ್ಬೆಟ್‌ ಸಂಪ್ರದಾಯದ ಪ್ರಕಾರ ಈತನ ತಾಯಿಯ ಹೆಸರು ಬಿಂಬಾ ಎಂದಿದ್ದು ಅದೇ ಮಗನಿಗೂ ಅನ್ವಯವಾಗಿ ಬಿಂಬಸಾರ ಎಂದಾಗಿದೆ.

ಮೇಲಿನ ಹೆಸರುಗಳು ಉಕ್ತ ಹೆಸರಿನ ಸುತ್ತ ಹಬ್ಬಿದ ಕಲ್ಪನೆಗಳು. ಶ್ರೇಣಿಕ ಎಂಬ ಹೆಸರೂ ಕೂಡ ಬೇರೆ ಬೇರೆ ಬಗೆಯಲ್ಲಿ ವ್ಯುತ್ಪತ್ತಿಯನ್ನು ಪಡೆದಿದೆ. ಹೇಮಚಂದ್ರನಿಂದ ರಚಿತವಾಗಿರುವ ‘ಅಭಿಧಾನ ಚಿಂತಾಮಣಿ’ ಯಲ್ಲಿ ಶ್ರೇಣೀಕಾರಯತಿ ಶ್ರೇಣಿಕೋ ಮಗಧೇಶ್ವರಃ-, ಯಾರು ಶ್ರೇಣಿಯನ್ನು ಸ್ಥಾಪಿಸಿದ್ದಾರೊ ಅವರನ್ನು ಶ್ರೇಣಿಕರೆಂದು ಕರೆಯಲಾಗುವುದು – ಎಂದು ಹೇಳಿದೆ. ಬೌದ್ಧ ಗ್ರಂಥವಾದ ವಿನಯಪಿಟಿಕಾದ ವಿವರಣೆ ಹೀಗಿದೆ: ಬಿಂಬಸಾರನನ್ನು ಆತನ ತಂದೆ ೧೮ ಶ್ರೇಣಿಗಳಿಗೆ ಒಡೆಯನನ್ನಾಗಿ ಮಾಡಿದ್ದನು, ಅದರಿಂದ ಶ್ರೇಣಿಕನೆಂದು ಆತನನ್ನು ಕರೆಯಲಾಯಿತು (ನಾಗರಾಜಯ್ಯ, ಹಂಪ.: ವೀರಜಿನೇಂದ್ರ ಚರಿತೆ : ೧೯೭೫ : ೩೧-೩೩).

ಅರ್ಧಮಾಗಧಿ ಭಾಷೆಯಲ್ಲಿರುವ ಜಂಬೂದ್ವೀಪ ಪಣ್ಣತ್ತಿ (ಪ್ರಜ್ಞಪ್ತಿ) ಯಲ್ಲಿ ೯ ನಾರುವರು ಮತ್ತು ೯ ಕಾರುವರು, ಒಟ್ಟು ೧೮ ಶ್ರೇಣಿಗಳ ಪಟ್ಟಿಯನ್ನು ಹೇಳಿದೆ: ಕುಂಬಾರ, ಪಟವಾ, ಸ್ವರ್ಣಕಾರ, ಸೂತಕಾರ (ಅಡಿಗೆಯವನು-ಬಡಗಿ), ಗಂಧರ್ವ (ಹಾಡುಗಾರ), ಕಾಸವಗ್ಗ (ಕ್ಷೌರಿಕ), ಮಾಲಾಕಾರ (ಹೂವಾಡಿಗ) ಕಚ್ಛಕಾರ (ತರಕಾರಿಯವನು), ಮತ್ತು ತಂಭೂಲಿಯ (ವಿಳೆಯೆಲೆಯವನು) – ಇವರು ೯ ನಾರುವರು . ಒಂಬತ್ತು ಕಾರುವರು : ಚರ್ಮಕಾರ (ಮೋಚಿ), ಯಂತ್ರಪೀಡಕ (ಸಾಣಿಕ), ಗಂಛೀಯ (ಬಟ್ಟೆ ಮಾರಾಟಗಾರ), ಚಿಂಪಿ(ಶಿಲ್ಪಕಾರ), ಕಂಸಾರ (ಲೋಹಿ), ಸೇವಕ (ಸೀವಗ), ಗ್ವಾಲ (ಗೋವಾಡಿಗ, ಗೊಲ್ಲ), ಭಿಲ್ಲ (ಅರಣ್ಯಾಧಿಕಾರಿ) ಮತ್ತು ಧೀವರ (ಮೀಂಗುಲಿಗ) ಪ್ರಾಕೃತ ಗ್ರಂಥಗಳಲ್ಲಿ ದೊರೆಯುವ ‘ಸೇನಿಯ’ ಶಬ್ಧದ ಅಭಿಪ್ರಾಯ ಸೈನಿಕ, ಸೇನಾಪತಿ ಎಂದಿರಬೇಕು. ಅದರ ಸಂಸ್ಕೃತ ರೂಪಾಂತರ ಶ್ರೇಣಿಕ.

ಮಗಧ ದೇಶದ ರಾಜಗೃಹ ನಗರದ ಉಪಶ್ರೇಣಿಕ / ಪ್ರಶ್ರೇಣಿಕ ರಾಜನ ರಾಣಿಯರಲ್ಲಿ ಚಿಲಾತ ದೇವಿಯಿಂದ ಹುಟ್ಟಿದವನು ಚಿಲಾತಪುತ್ರ (ಕಿರಾತಪುತ್ರ), ಮತ್ತು ಸುಪ್ರಭಾದೇವಿಯಿಂದ ಹುಟ್ಟಿದವನು ಶ್ರೇಣಿಕ ಚಿಲಾತಪುತ್ರನು ಅನೀತಿ ಮಾರ್ಗ ಹಿಡಿದನು. ಅದರಿಂದ ಶ್ರೇಣಿಕ ಚಿಲಾತಪುತ್ರನನ್ನು ಸೋಲಿಸಿ ತಾನು ಪಟ್ಟಾಭಿಷಿಕ್ತನಾದನು. ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಗಳ ಹತ್ತಾರು ಗ್ರಂಥಗಳಲ್ಲಿ ಶ್ರೇಣಿಕ ಸಂಬಂಧವಾದ ಕಥಾಚಕ್ರ ಸಿಗುತ್ತದೆ. ಕನ್ನಡದಲ್ಲಿ ಭ್ರಾಜಿಷ್ಣು ವಿರಚಿತ ವಡ್ಡಾರಾದ್ಥನೆಯಲ್ಲಿ ಚಿಲಾತಪುತ್ರನ ರಮ್ಯ ಕಥಾನಕವಿದೆ. ಜಿನದೇವಣ್ಣನೆಂಬ ಕವಿ ಶ್ರೇಣಿಕ ಚರಿತ್ರೆಯನ್ನು ಬರೆದಿದ್ದಾನೆ. ಶ್ರೇಣಿಕನ ಮಡದಿ ಚೇಲನಾಳ (ಚೇಳಿನಿ) , ಮಕ್ಕಳಾದ ಅಭಯಕುಮಾರ, ವಾರಿಷೇಣ, ಗಜಕುಮಾರರ ಮೊದಲಾದವರ ಕಥೆಗಳು ವಿಪುಲವಾಗಿವೆ. ಅಭಯಕುಮಾರನ ಕಥಾ ಚಕ್ರವಂತೂ ಸುಪ್ರಸಿದ್ಧವಾಗಿದೆ (ನಾಗರಾಜಯ್ಯ ಹಂಪ : ಜೈನ ಕಥಾ ಕೋಶ : ೧೯೯೭ : ಪೀಠಿಕೆ ೪೨ – ೪೩). ನೋಂಪಿಯ ಕಥೆಗಳಲ್ಲಿ ಶ್ರೇಣಿಕನ ಕುಟುಂಬ ಪರಿವಾರದ ಪ್ರಸ್ತಾಪ ಹಾಸು ಹೊಕ್ಕಾಗಿದೆ.

ಮಗಧ ನಾಡಿನ ರಾಜಗೃಹದೊಡೆಯ ಶ್ರೇಣಿಕ ಮಾಂಡಲೀಕನ ಹನ್ನೆರಡು ಜನ ಹೆಂಡತಿಯರು ಆಚರಿಸಿದ ನೋಂಪಿಗಳು ಯಾವುವು ಎಂಬುದನ್ನು ವಿನಯ ಸಂಪತ್ತಿನಯೆಂಬ ನೋಂಪಿಯ ಕಥೆಗಾರನು ದಾಖಲಿಸಿದ್ದಾನೆ :

“ಶ್ರೇಣಿಕ ಮಹಾರಾಜನಾತ್ಮೀಯ ವಲ್ಲಭೆಯರಪ್ಪ ಚೇಳಿನಿ, ಮನೋಹರಿ, ಜಯಾವತಿ, ವಿಜಯ, ಸುಮತಿ, ವಸುಧೆ, ನಂದಿ, ಲಕ್ಷ್ನಣೆ, ಮಾಯಾವತಿ, ವಿಮಳೆ, ಸುಭಧ್ರೆ, ಶ್ಯಾಮೆಯೆಂಬೀ ಪನ್ನೀರ್ವ್ವರ್ಬೆರಸು –

(ವಿನಯ ಸಂಪತ್ತಿಯ ನೋಂಪಿ)

ಇವರು ನೋಂತ ನೋಂಪಿಗಳಾವುದೆಂದೆನೆ
ವಿನಯಸಂಪತ್ತಿಯಂ ಚೇಳಿನಿ ನೋಂತಳು
ಕಲ್ಬಾಮರಮೆಂಬ ನೋಂಪಿಯಂ ಜಯಾವತಿ ನೋಂತಳು
ಕೇವಳಬೋಧಿಯಂ ವಿಜಯ ನೋಂತಳು
ಚಾರಿತ್ರಮಾನಮೆಂಬ ನೋಂಪಿಯಂ ಸುಮತಿ ನೋಂತಳು
ಶ್ರುತಸ್ಕಂದಮೆಂಬ ನೋಂಪಿಯಂ ವಸುಧೆ ನೋಂತಳು
ತ್ರೈಳೋಕ್ಯಸಾರಮೆಂಬ ನೋಂಪಿಯಂ ನಂದಾಮಹಾದೆವಿ ನೋಂತಳು
ಕಂದರ್ಪಸಾಗರಮಂ ಮನೋಹರಿ ನೋಂತಳು
ದುರ್ಗತಿ ನಿವಾರಣಮಂ ಲಕ್ಷ್ಮೀಮತಿ ನೋಂತಳು
ಕಲ್ಯಾಣ ತಿಲಕಮಂ ಮಾಯಾವತಿ ನೋಂತಳು
ಅನಂತ ಸುಖಮಂ ವಿಮಲೆ ನೋಂತಳು
ಸಮಾಧಿ ವಿಧಾನಮಂ ಸುಭದ್ರೆ ನೋಂತಳು
ಭವದುಃಖ ನಿವಾರಣಮಂ ಶ್ಯಾಮಾದೇವಿ ನೋಂತಳು
ಇಂತೀ ಪನ್ನೆರಡು ನೋಂಪಿಯಂ ಪನ್ನೀರ್ವ್ವರು ನೋಂತರು”.

ಶ್ರೇಣಿಕ ರಾಜನನ್ನು –

ಭೋಗದೊಳು ನಾಗೇಂದ್ರನುಮಂ
ಮಹೈಶ್ವರ್ಯದೊಳು ದೇವೇಂದ್ರನುಮಂ
ವಿಭವದೊಳು ವಿಯಚ್ಚರೇಂದ್ರನು ಮಂ
ಕಮನೀಯತರ ಮೂರ್ತ್ತಿಯೊಳು ಕಾಮದೇವನುಮಂ ಪೋಲ್ತೆಸೆಯ

ಎಂದೂ ಚೇಳಿನಿ ರಾಣಿಯನ್ನು –

ಜಿನಭಕ್ತಿಯೊಳು ಶಚಿಮಹಾದೇವಿಯುಮಂ
ಗುರುಭಕ್ತಿಯೊಳು ರುಗ್ಮಿಣಿ ಮಹಾದೇವಿಯುಮುಂ
ಪತಿವ್ರತದೊಳು ಸೀತಾಮಹಾದೇವಿಯುಂ
ರೂಪಿನೊಳು ರತಿದೇವಿಯುಮಂ ಪೋಲ್ತಳ್

ಎಂದೂ ಚಂದನಷಷ್ಟಿ ನೋಂಪಿಯ ಕಥೆಯಲ್ಲಿ ವರ್ಣಿಸಲಾಗಿದೆ.

ಚೇಳಿನಿ ಮಹಾದೇವಿ ನೋಂಪಿಯಂ ಪರಮೋತ್ಸಾಹಂಬೆರಸು ಕೈಕೊಂಡು ಜಿನಸ್ವಾಮಿಯಂ ಬೀಳ್ಕೊಂಡಂತಿರ್ವ್ವರುಂ ತನ್ಮನೀಂದ್ರಂಗೆ ಪುನರ್ ನಮಸ್ಕಾರಮಂ ಗೆಯ್ದು ಸಮವಸರಣಮಂ ಪೊಱಮಟ್ಟು ವಿಜಯಗಜೇಂದ್ರಮನೇಱೆ ರಾಜಗೃಹಕ್ಕಭಿಮುಖರಾಗಿ ಬಪ್ಪಾಗಳೂ

ಶ್ರೇಣಿಕನೋ ಸುರೇಶ್ವರನೊ ಚೇಳಿನಿಯೋ ವಿನೂತಗೀ
ರ್ವ್ವಾಣಗಜೇಂದ್ರಮೋ ವಿಜಯವಾರಣಮೋಬಗೆವಂದು ಬೇಧಿಕಂ
ಜಾಣನೆನಿಪ್ಪವಂ ಕುಳಿಶಮಿಲ್ಲದ ಕಾರಣದಿಂದಮಲ್ಲದಾ
ಶ್ರೇಣಿಕಗಂ ಸುರೇಶ್ವರಗಮೇಂ ಪೆಱತಾವುದೊ ಬೇಧಮೆಂಬಿನಂ ||

ಭೇರಿಮೃದಂಗ ಶಂಖ ಕಹಳಾದಿಗಳರ್ಣ್ನವದಂತೆ ಘೂರ್ಣ್ನೆಸಲ್
ಭೋರೆನೆ ಸುತ್ತಲುಂ ನೃಪಕುಮಾರಕರುಂ ಭಟರುಂ ಪ್ರಧಾನರುಂ
ವಾರಣಮುಂ ಹಯೋತ್ಕರಮುಮೊಪ್ಪಿರೆ ರಾಜಗೃಹಕ್ಕೆ ಬಂದು
ಮೀರಮಣೀಯ ರತ್ನಕೃತ ತೋರಣ ಮಾಲೆಗಳಂ ನುಸುಳ್ವುತಂ ||

ಅಂತು ಸುಜನ ಜನಂಗಳಿಕ್ಕುವ ಸೇಷಾಕ್ಷತಂಗಳುಮಂ ಪರಸುವ ಪರಕೆ
ಗಳನಾಂತುಕೊಳುತ್ತಂ ತಂನರಮನೆಯಂ ಪೊಕ್ಕು ಶ್ರೇಣಿಕ ಮಹಾಮಂಡಲೇ
ಶ್ವರಂ ಭೋಗದೊಳು ನಾಗೇಂದ್ರನುಮಂ ನಹೈಶ್ವರ್ಯ್ಯದೊಳು ದೇವೇಂದ್ರನುಮಂ
ವಿಭದೊಳು ವಿಯಚ್ಚರೇಂದ್ರನುಮಂ ಕಮನೀಯತರ ಮೂರ್ತ್ತಿಯೊಳು
ಕಾಮದೇವನುಮಂ ಪೋಲ್ತೆಸೆಯೆ ಚೇಳಿನಿ ಮಹಾದೇವಿಯುಂ ಜಿನಭಕ್ತಿಯೊಳು
ಶಚಿಮಹಾದೇವಿಯುಮಂ ಗುರುಭಕ್ತಿಯೊಳು ರುಗ್ಮಿಣಿ ಮಹಾದೇವಿಯುಮಂ
ಪತಿವ್ರತದೊಳು ಸೀತಾಮಹಾದೇವಿಯುಮಂ ರೂಪಿನೊಳು ರತಿದೇವಿಯುಮಂ
ಪೋಲ್ತಳಂತಿರ್ವ್ವರುಂ ಮಹಾ ಪ್ರಖ್ಯಾತ ಗುಣಾವಳಿಗೆ ಸಂದು ಯಶಸ್
ಕೀರ್ತ್ತಿಯಂ
ತಾಳ್ದಿ ಜಿನಧರ್ಮ್ಮ ಪ್ರದೀಪಕರಪ್ಪ ಪಲಂಬರ್ ಮಕ್ಕಳಂ ಪಡೆದು ಪಲವು
ನಿಧಿ ನಿಧಾನಂಗಳ್ಗೊಡೆಯರಾಗಿ ಪಲಕಾಲಂ ರಾಜ್ಯಂಗೆಯ್ವುತ್ತಮಿರ್ದ್ದರ್ ||
(-ಚಂದನ ಷಷ್ಟಿಯ ನೋಂಪಿಯ ಕಥೆ)

ತೇರದಾಳ ಮತ್ತು ಗೊಂಕ ಭೂಪಾಲ

ನಾಗಸ್ತೀ ನೋಂಪಿಯಲ್ಲಿ ಮೊದಲಲ್ಲಿ ಈ ಒಕ್ಕಣೆಯಿದೆ :

ಕರ್ಣಾಟ ದೇಶದೊಳು ತೇರುದಾಳವೆಂಬ ಪುರಮದನಾಳುವ ಅರಸು
ವಂಕ ಭೂಪಾಲಂ ತನ ಸ್ತ್ರೀ ಲಕ್ಷ್ಮೀಮತಿಯಂಬಳು ಅವರೀರ್ವರು
ಸುಖಸಂಕಥಾ ವಿನೋದದಿಂ ರಾಜ್ಯವನಾಳುತ್ತಿರಲೊಂದು ದಿವಸ
ವಿದ್ಯಾನಂದಿ ಮಾಣಿಕ್ಯನಂದಿಯಂಬೀರ್ವರು ಮುನಿಗಳು
ಚರ್ಯಾನಿಮಿತ್ತಂ ಬರೆ ಆ ರಾಯಂ ಕಂಡು ನವವಿಧ
ಪುಂಣ್ಯದಿಂ ಬಲಗೊಂಡು ಭಕ್ತಿಯಿಂ ಆಹಾರದಾನಮಂ
ಕೊಟ್ಟನು.

ಬಿಜಾಪುರ ಜಿಲ್ಲೆಯ ಜಮಖಂಡಿ ತೇರದಾಳವು ವಿಖ್ಯಾತ ಜೈನ ಕೇಂದ್ರ. ಇಂಡಿಯನ್‌ ಆಂಟಿಕ್ವೆರಿಯ ಹದಿನೈದನೆಯ ಸಂಪುಟದಲ್ಲೂ (ಪು. ೧೪. ಕಾಲ ೧೧೨೫) ಕರ್ನಾಟಕ್‌ ಇನ್ಸ್‌ಕ್ರಿಷ್ಪನ್ಸ್‌ ಐದನೆಯ ಸಂಪುಟದಲ್ಲಿರುವ ಸಂಖ್ಯೆ ೨೧, ೯೮, ೯೯ ಮತ್ತು ೧೪೩ನೆಯ ಶಾಸನಗಳೂ (ಕಾಲಕ್ರಮವಾಗಿ ೧೧೨೫, ೧೧೮೧, ೧೧೮೭,ಮತ್ತು ೧೭೪೮) ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತವೆ. ಕಲ್ಯಾಣ ಚಾಲುಕ್ಯರ ಸಾಮ್ರಾಟ ಆರನೆಯ ವಿಕ್ರಮಾದಿತ್ಯನ ಮಾಂಡಳಿಕನಾದ ರಟ್ಟ ಕಾರ್ತವೀರ್ಯನು ಆಳುತ್ತಿರುವಾಗ ಆತನ ಸಾಮಂತಾಧಿಕಾರಿಯಾದ ಗೊಂಕ ದೇವರಸನು ತೇರಿದಾಳವನ್ನು ತನ್ನ ನೆಲೆವೀಡಾಗಿಸಿ ಆಳುತ್ತಿದ್ದನು. ಮಹಾಜಿನ ಭಕ್ತನಾದ ಗೊಂಕ ದೇವರಸನು ೧೧೨೫ರಲ್ಲಿ ನೇಮಿನಾಥ ತೀರ್ಥಂಕರ ಬಸದಿಯನ್ನು ಮಾಡಿಸಿದನು. ಇದರ ಪ್ರತಿಷ್ಠಾಪನೆಗಾಗಿ ಮಹಾಮಂಡಲೇಶ್ವರ ಕಾರ್ತವೀರನೂ ಮಾಘಣಂದಿ ಸಿದ್ಧಾಂತಿಕದೇವರೂ ಉಪಸ್ಥಿತರಿದ್ದರು. ಈ ಬಸದಿಗೆ ನಿರ್ಮಾಪಕನ ಹೆಸರಿಂದ ‘ಗೋಂಕಜಿನಾಲಯ’ ವೆಂದು ನಾಮಕರಣವಾಯಿತು. ಈ ಅಧಿಕೃತ ವಿವರ ಈಗಾಗಲೇ ದಾಖಲಾಗಿದೆ:

—-

ವಿದ್ವಾಂಸರಾದ ಮಧುಸೂಧನ ಅಮಿಲಾಲ್‌ ಡಾಕಿಯವರು ನಿರ್ಧರಿಸಿದ್ದಾರೆ. (Dhaky, M. A. : the Date of Vidyananda : Literary and Epigraphical Evi – dence – article in Nirgrantha, vol – 2, 1996 : 25 – 28). ಅನಂತರ ಕೊಪ್ಪಳದ ಶಾಸನಗಳೂ ಈ ತೀರ್ಪನ್ನು ಸಮರ್ಥಿಸಿವೆ. ಅಜ್ಞಾತ ಕರ್ತೃಕನಾದ ನಾಗಸ್ತ್ರೀ ನೋಂಪಿಯ ಕಥೆಗಾರನು ತನ್ನ ೧೩ -೧೪ ನೆಯ ಶತಮಾನದ ರಚನೆಯ ವೇಳೆಗೆ ಕೀರ್ತಿಕಾಯರಾಗಿದ್ದು ಜೈನ ಸಮಾಜದಲ್ಲಿ ಪೂಜನೀಯರೆನಿಸಿದ್ದ ವಿದ್ಯಾನಂದಿ – ಮಾಣಿಕ್ಯ ನಂದಿಯವರನ್ನೂ ಗೊಂಕರಸ ಮತ್ತು ಲಕ್ಷ್ಮಿದೇವಿ ದಂಪತಿಗಳನ್ನು ಒಂದು ಕಾಲದ ಮಣೆಯ ಮೇಲೆ ನಿಲ್ಲಿಸಿರುವುದು ಕಥೆಗೊಂದು ಪವಿತ್ರ ಪರಿವೇಶ ಹಾಗೂ ಚಾರಿತ್ರಿಕ ನೆಲೆ ಸೂಚಿಸುವ ಸಲುವಾಗಿ ಷೋಢಶಭಾವನೆ ನೋಂಪಿಯಲ್ಲಿ ನಿರೂಪಿತವಾಗಿರುವ ನಗಿರೆ ರಾಜ್ಯದ ಇತಿಹಾಸದ ಪ್ರಸ್ತಾಪವನ್ನು ನೋಂಪಿಗಳ ಕರ್ತೃವನ್ನು ಚರ್ಚಿಸುವಾಗ ಮಾಡಿದ್ದಾಗಿದೆ. ಹೀಗೆ ಸಮಕಾಲೀನವೂ ಪ್ರಾಚೀನವೂ ಆದ ಚರಿತ್ರೆ ಅಲ್ಲಲ್ಲಿ ಕುಡಿಯಿಟ್ಟಿದೆ.

ಕಥೆಗಾರರು

ಸುಗಂಧ ದಶಮಿಯ ನೋಂಪಿಯ ಕಥೆಯನ್ನು ಹೇಳಿದ ಕವಿ –

ನರಪಾಲ ಪಂಡಿತೇಶನ
ವರವಧು ಗಂಗಾಂಬಿಕಾ ತನೂಭವನಿಂತಂ
ತರಿಸದ ಸುಖಮಂ ಕೊಡುವೀ
ಪರಮ ಕಥಾಂತರಮನಱೆಯಭಿವರ್ಣ್ನೀಸಿದಂ ||

ತಂಗಳು ತವನಿಧಿಯ ನೋಂಪಿಯ ಕಥೆಯನ್ನು ಬರೆದ ಕವಿ –

ಮಂಗಳ ಕಾರಣವೆನಿಸುವ
ತಂಗುಳು ತವನಿಧಿಯ ನೋಂಪಿಯಂ ಕನಕಶ್ರೀ
ಹೆಂಗಳ್ಗಂತಿಯು ಪೇಳ್ದಾ
ಪಾಂಗಿಂದಾನುಸುರ್ವೆನೆಸೆವ ಪೊಸಕಂನಡದಿಂ ||

ಆ ನಂತನ ನೋಂಪಿಯ ಕಥೆಗಾರ –

ಉಭಯ ಲೋಕ ಸುಖಮಂ
ಮಭೀತಿವಂತರಪೇಕ್ಷಿಪ
ರ್ತ್ರಿಭುವನೇಶನನಂತನನಕ್ಷಯನಂ ಮಹಾ
ವಿಭವದಿಂ ನೆಱೆಯೆ ಮಾಡೆ
ಮಹಾಮಹಿಮಂಗಿದಂ
ಶುಭದಮಂ ರಚಿಸಿದಂ ಕಥೆಯಂ ವಿಭು ಕೇಶವಂ ||

ಪುಷ್ಪಾಂಜಿಯೆ ನೋಂಪಿಯನ್ನು ರಚಿಸಿದ್ದು –

ಸತತಂ ವಾಂಛಿತ ಫಲಮಂ ಭವ್ಯ
ಪ್ರತತಿಗೆ ದಯೆಗೆಯ್ವನುಪಮರಾ
ಅತಿಶಯ ಜಿನರಂ ವರಕವಿ ನಾಗಣನು
ರುತರ ಶ್ರುತಮಂ ಯತಿವರಂ ಪೂಜಿಸುವೆ ||

01_269_NK-KUH

—-

ಷೋಡಶಭಾವನೆ ನೋಂಪಿಯ ಕಾವ್ಯವನ್ನು ಪ್ರಾಯೋಗಿಕ ವಿಮರ್ಶೆಯ ನಿಟ್ಟಿನಿಂದ ಇನ್ನಷ್ಟು ವಿವರವಾಗಿ ವಿವೇಚಿಸಬೇಕಾದ್ಧಿದೆ; ಅದು ಪ್ರತ್ಯೇಕ ಅಧ್ಯಯನವನ್ನು ಬಯಸುವ ಪ್ರಯತ್ನ. ಪ್ರಸ್ತುತ ತೀರ ಸಂಕ್ಷೇಪಿಸಿ ಇಲ್ಲಿ ಕೆಲವು ಮಾತುಗಳನ್ನು ಅಳವಡಿಸಿದೆ. ನಾಗಲದೇವಿಯು ಕನ್ನಡ ಭಾಷೆಯ ಉತ್ಕಟ ಅಭಿಮಾನಿ, ತನ್ನ ಮನೆಮಾತಾದ ಕನ್ನಡವನ್ನು ‘ವರಸುಖಭಾಷೆ’ (ಶ್ರೇಷ್ಠ ಸುಖದಾಯಕ ಭಾಷೆ) ಯೆಂದು ಹೊಗಳಿದ್ದಾಳೆ. ಅಷ್ಟರಿಂದ ತೃಪ್ತಳಾಗದೆ ಇನ್ನೂ ಮುಂದೆ ಹೋಗಿ ‘ಸುರುಚಿರ ಕರ್ಣಾಟ ಭಾಷೆ’ (ಹೊಳಪಿನ ಕನ್ನಡ ನಾಡಿನ ನುಡಿ) ಎಂದು ಹೇಳಿ ನಲಿದಿದ್ದಾಳೆ. ಅರಮನೆಯ ಅಧಿಕಾರಶಾಹಿ ವಲಯದ ಹೊರಗೆ, ಕನ್ನೆ ಮಾಡದ ಐಂದ್ರಿಯಕ ಭೋಗ ಜೀವನದ ಆಚೆಗೆ ಚಾಚಿಕೊಂಡ ಹೆಣ್ಣಿನ ವ್ಯಕ್ತಿತ್ವದ, ಸೃಜನ ಪ್ರತಿಭೆಯ ರಚನಾಕ್ರಮ ಪಾರದರ್ಶಕಗೊಂಡಿರುವ ಆಕೃತಿ ಈ ಕೃತಿ. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕಾವ್ಯದ ಅಂಗಳಕ್ಕಿಳಿದು ಅಕ್ಷರ ವಿನ್ಯಾಸದ ರಂಗವಲ್ಲಿ ಬಿಡಿಸಿಟ್ಟಂತಿರುವ ಷೋಡಶ ಭಾವನೆಯ ಕಾವ್ಯ ಚಂಪೂ ಶೈಲಿಯಲ್ಲಿದ್ದು ಚಾರಿತ್ರಿಕ ಮಹತ್ವದ ಖಂಡಕಾವ್ಯವಾಗಿದೆ.

ಇಂದಿನ ಜೋಗದ ಜಲಪಾತದ ನೆರೆ ಹೊರೆಯನ್ನೊಳಗೊಂಡ ಗೇರಸೊಪ್ಪೆಯ ಪ್ರದೇಶ ಹಿಂದೆ ನಗಿರೆ ರಾಜ್ಯವೆಂದು ಹೆಸರು ಪಡೆದಿತ್ತು; ನಗಿರೆ ರಾಜ್ಯಕ್ಕೆ ಕ್ಷೇಮಪುರ, ಭಲ್ಲಾತಕೀಪುರ ಎಂಬ ಇನ್ನೆರಡು ಹೆಸರುಗಳಿದ್ದವು. ಹೊನ್ನಾವರ, ಹಾಡುವಳ್ಳಿ, ನಗಿರೆನಾಡು -ಇವು ಮೂರು ಜ್ಞಾತಿ ರಾಜರ ಆಳಿಕೆಗೆ ಸೇರಿದ್ದವು. ಇವರೆಲ್ಲ ಜೈನಧರ್ಮಕ್ಕೆ ಸೇರಿದವರಾಗಿದ್ದರು. ಗೇರ ಸೊಪ್ಪೆಯ ರಾಜರಾಣಿಯರು ಜಿನಧರ್ಮದಲ್ಲಿ ಶ್ರದ್ಧಾಭಕ್ತಿಗಳನ್ನು ಹೊಂದಿದ್ದು ಅನೇಕ ಧರ್ಮಕಾರ್ಯಗಳನ್ನು ಗೇರ ಸೊಪ್ಪೆಯೇ ಅಲ್ಲದೆ ಮೂಡಬಿದುರೆ, ಶ್ರವಣಬೆಳಗೊಳ, ಚಂದ್ರಗುತ್ತಿ, ಹೊನ್ನವಾರ ಮೊದಲಾದ ಸ್ಥಳಗಳಲ್ಲಿ ಮಾಡಿದ್ದಾರೆ. ಮೂಡಬಿದುರೆಯ ಶಾಸನಗಳು ನಮೂದಿಸಿರುವ ಪ್ರಕಾರ ನಾಗಲದೇವಿಯ ತಿಳುವಳ್ಳಿಪುರವಾರಾಧೀಶ ಕಾಯಪ್ಪನ ಮಗಳು; ತಾಯಿ ಲಕ್ಷ್ಮೀಮತಿ. ಭೈರವರಾಯನ ಇನ್ನೊಬ್ಬ ರಾಣಿಯಾದ ಮಾಣಿಕದೇವಿಯು ಸಂಗಮನೃಪಾಲನ ಮಗಳು:

“ರೂಪಲಾವಣ್ಯದಿಂ ಚೆಲುವೆಯಾಗಿದ್ದ ನಾಗಲದೇವಿಯಂ ಮಂಗಲೋ
ತ್ಸಾಹದಿಂ ಕುಡಲಾ ಭೈರವ ಮಹೀಪಾಲಂ ಮಾಣಿಕ ಮಹಾದೇವಿ
ನಾಗಲದೇವಿಯರೆಂಬ ಪಟ್ಟಮಹಾದೇವಿಯರಿಂದ ಅನೇಕ ಅಂತಃಪುರಂ
ಧ್ರಿಯರೊಳ್
ಕೂಡಿ ನಿಜರಾಜ್ಯಭಾರಧುರಂಧರನಾಗಿ ಸುಖಸಂಕಥಾ
ವಿನೋದದಿಂ ರಾಜ್ಯಂಗೈಯ್ಯುತ್ತಿರ್ದು”

ಶಶಿರವಿಯನ್ನರಪ್ಪ ವರಸಂಗಮನಂ ಗುರುರಾಯನೆಂಬವರಂ
ಪೆಸರ್ವಡೆದಾ ತನೂಭವರ ತಾಂ ಪಡೆದಿರ್ದನತಿ ಪ್ರಮೋದದಿಂ ||

ಎಂಬುದಾಗಿ ಶಾಸನಗಳಿಂದ ತಿಳಿದುಬರುತ್ತದೆ. ಈ ಹಿರಿಯ ಭೈರವೇಂದ್ರ ಆಡಳಿತದ ಅವಧಿ ಕ್ರಿ. ಶ. ೧೪೩೮- ೧೪೬೨. ಈತ ವಿಜಯನಗರ ಸಾಮ್ರಾಜ್ಯದ ಮಹಾಮಾಂಡಲಿಕ. ಮಹಾಜಿನಭಕ್ತರಾದ ಈ ದಂಪತಿಗಳನ್ನು ಸಾಳ್ವಕವಿ ತನ್ನ ಸಾಳ್ವಭಾರತದಲ್ಲಿ ಪ್ರಶಂಸಿಸಿರುವ ಪದ್ಯಗಳು ((ಸಂ) ಹಂಪ. ನಾಗರಾಜಯ್ಯ : ೧೯೭೬)

ವನಜಮುಖಿಯಾ ಲಕ್ಷ್ಮಿಯುದರದಿ
ಜನಿಸಿದುನ್ನತನಮಲ ಜಿನಮತ
ವನಧಿವರ್ಧನ ಚಂದ್ರನಭಿನವನಿಂಬನಿನತೇಜಾ
ಜನನುತಮಹಾಮಂಡಲೇಶ್ವರ
ನನುಪಮಿತ ಗುಣಧಾಮನೀ ಭೂ
ವನಿತೆಯ ಪಡೆದಾಳು ಭೈರವರಾಯನಂದೆಸೆದಾ || ೧ -೨೫ ||

ಖ್ಯಾತೆ ಪಟ್ಟದ ರಾಣಿಯಭಿನವ
ಸೀತೆಯೆನಿಸಿದ ನಾಗಲಾಂಬಿಕೆ
ಯಾತನೂಭವ ನವಮನೋಭವ ಸಂಗನೃಪವೆರಸೆ
ಪ್ರೀತಿಯಿಂ ಪಲಕಾಲವಾ ರಘು
ಜಾತನೆನೆ ಧರ್ಮಾರ್ಥ ಕಾಮವ
ನೋತು ಸಾಧಿಸಿ ಭೈರವವೇಶ್ವರನರಸುಗೆಯಿದನದಾ || ೧-೨೬ ||

ಮಹಾಮಂಡಲೇಶ್ವರ ಭೈರವರಾಜೇಂದ್ರನು ‘ಅಭಿನವ ನಿಂಬ’ ಎಂದೆನಿದ್ದನು. ನಿಂಬಸಾಮಂತನು ಮಹಾವೀರಸೇನಾನಿಯೂ ಜಿನಭಕ್ತ ಧುರಂಧರನೂ ಆಗಿದ್ದುದು ದೊಡ್ಡ ಇತಿಹಾಸ. ಭೈರವೇಂದ್ರನು ನಗಿರೆ ರಾಜ್ಯದ ಗೆರೆಸೊಪ್ಪೆಯಿಂದ ಆಳುತ್ತಿದ್ದಾಗ ಶ್ರವಣಬೆಳಗೊಳ ಮತ್ತು ಹೊನ್ನಾವರದ ಜಿನ ಚೈತ್ಯಾಲಯಗಳಿಗೆ ದಾನ ಮಾಡಿದ್ದನಲ್ಲದೆ ಮೂಡಬಿದುರೆಯ ಸಾವಿರ ಕಂಬದ ಬಸ್ದದಿಗೆ ದತ್ತಿಯಿತ್ತು ಚಿನ್ನ ಬೆಳ್ಳಿ ಹರಿವಾಣ ಕಲಶ ಪಾತ್ರೆಗಳನ್ನು ದಾನ ಮಾಡಿದ್ದು ಶಾಸನೋಕ್ತವಾಗಿದೆ :

ವೇಣುಪುರದ ಚಂದ್ರನಾಥ ಸ್ವಾಮಿಗೆ ರಜತಮಯಂಗಳಪ್ಪ
ವಿಪುಲೋಜ್ವಲ ಕುಂಭಘಟೀ ಗಣಂಗಳಂ ರಜತದೆ ಮಾಡಿದ
ದಂಡಿಗೆಯಂ ಪರಿಯಣಮನರ್ಥಿ ಭಕ್ತಿಯಿಂ ರಜತದ ತಾಣ
ದೀವಿಗೆಗಳಂ

ರಜತದ ಪೃಥು ಪೀಠ ಮುಮುಂ
ರಜತದ ಪರಿಪರಿಯ ಬಟ್ಟಲಂ ಗಿಂಡಿಯುಮಂ
ಯಜನಕ್ಕುಚಿಂತಂಗಳಾ
ನಿಜ ಭುಜ ಬಲಶಾಲಿ ಭೈರವೇಶ್ವರನಿತ್ತ ||

ಜಿನ ಭಕ್ತ ಮಂಡಲೇಶ್ವರ ಗಂಡನಿಗೆ ತಕ್ಕ ಹೆಂಡತಿ ರಾಣಿ ನಾಗಲಾಂಬಿಕೆ. ಈಕೆ ಇದೇ ಮೂಡಬಿದುರೆಯ ತ್ರಿಭುವನ ತಿಲಕ ಚೂಡಾಮಣಿ ಚೈತ್ಯಾಲಯದ ಮುಂಭಾಗದಲ್ಲಿ ವಿರಾಜಮಾನವಾಗಿರುವ ೫೦ ಅಡಿ ಎತ್ತರದ ಅತಿ ಸುಂದರ ಮಾನಸ್ತಂಭವನ್ನು ನಿಲ್ಲಿಸಿದಳು, ಸೊಗಸಾದ ಮುಖಮಂಟಪ ಮಾಡಿಸಿದಳು. (Nagarajaiah. Hampa : Manastambha : 2000) ಇಷ್ಟು ಪ್ರಸಿದ್ಧಳೂ ಪ್ರತಿಷ್ಠತಳೂ ಆದ ಅಭಿಲಾಷಿತಾರ್ಥೆ ದನವಿನೋದೆ ನಾಗಲದೇವಿಯು ೧೫ನೇಯ ಶತಮಾನದ ಶ್ರೇಷ್ಠ ಕವಯತ್ರಿಯೂ ಆಗಿದ್ದಳು. ನಗಿರೆ ರಾಜರನ್ನು ‘ಜೈನಧರ್ಮದ ತವರು’ ಎಂದು ಆಕೆ ಹೇಳಿರುವುದು ಸ್ವಭಾವೋಕ್ತಿ. ‘ಇಳೆಯೊಳ್‌ ಜಿನಧರ್ಮಕೆ ಇದು ನಿಲಯಂ ತಾಂ ಎನಿಸಿ ಮೆರೆದ ನಗರೀ ನೃಪ ಸಂಕುಲ’ ಕ್ಕೆ

—-

ಚಾಳಿಸುವುದೊಂದು ಬಗೆಯ’ ಎಂದಿದೆ. ಇದು ನಿರ್ದಿಷ್ಟ ನೋಂಪಿಯ ನಿರ್ದೆಶನವಾಗಿರದಿದ್ದರೂ ನೋಂಪಿಯ ಪ್ರಸ್ತಾಪವಿದೆ. ಬಂಧುವರ್ಮನ ಹರಿ ವಂಶಾಭ್ಯುದಯದಲ್ಲೂ (ಸು. ೧೨೦೦) ಗೋಮುಖಿ ನೋಂಪಿಯನ್ನು ಹೇಳಿದೆ. ಸಾಳ್ವನ ಸಾಳ್ವ ಭಾರತದಲ್ಲೂ ಉಂಟು. ಪ್ರಾಚೀನ ವ್ರತಗಳಲ್ಲಿ (ಉೞ್ಗೆ ) (ಉಗ್ಗಿ ) ಎಂಬ ನೋಂಪಿಯೂ ಒಂದು. ಕೇಶಿರಾಜನ ಶಬ್ಧಮಣಿದರ್ಪಣದಲ್ಲಿ ‘ಉೞ್ಗೆ ಯೆಂದೊಂದು ನೋಂಪಿ’ ಎಂಬ ಮಾತಿದೆ. ರನ್ನನ ಅಜಿತನಾಥ ಪುರಾಣದಲ್ಲೂ (೬- ೨೮), ನಾಗವರ್ಮನ ಕಾವ್ಯವಲೋಕನದಲ್ಲೂ (ಪದ್ಯ ಸಂ. ೮೯೨), ಸೌತ್‌ ಇಂಡಿಯನ್‌ ಇನ್ಸ್‌ಕ್ರಿಪ್ಷನ್ಸ್‌ ix -i (೧೦೧ -೧೫) ಶಾಸನದಲ್ಲೂ (ಕಾಲ ೧೦೪೫) ಉಗ್ಗಿಯ ಪ್ರಸ್ತಾಪವಿದೆ. ಕಾವ್ಯವಲೋಕನದ ಪದ್ಯ ಇಲ್ಲಿ ಉಲ್ಲೇಖ್ಯವಾಗಿದೆ :

ಸುಗ್ಗಿಯ ಪುಗಿಯೊಳ್ ಮುಂಕೊಂ
ಡುಗ್ಗಿಯನಜ್ಜವಿಸಿದಂತೆ ಮೋನಮನುಱೆದೇಂ
ಬಗ್ಗಿಸಿದವೊ ಕೋಗಿಲೆಗಳ್

ಮೊಗಪ್ಪ ವಿಯೋಗಿಯಂ ಪುಗಲ್
ಪುಗಲ್ ಪುಗಲೆನುತಂ ||

ಇಲ್ಲಿನ ಪ್ರಸಂಗ ಸೂಚಿಸುವುದರ ಪ್ರಕಾರ ‘ಉಗ್ಗಿ’ ನೋಂಪಿಯಲ್ಲಿ ಮೌನವಾಗಿರಬೇಕು. ನೋಂಪಿಯನ್ನು ‘ಉಜ್ಜವಿಸಿದ’ ಮೇಲೆ ಮೌನ ಮುರಿದು, ಮಾತಾಡಬಹುದು. ಉೞ್ಗೆ ಯಂತೆ ‘ಆಚಾಮ್ಲವರ್ಥನ’ ವೆಂಬ ನೋಂಪಿಯೂ ಪ್ರಾಚೀನ ದಾಖಲೆಗಳನ್ನು ಪಡೆದಿದೆ. ವಡ್ಡಾರಾಧನೆಯಲ್ಲೂ (ಪುಟ ೬೬) ಶಾಂತಿಪುರಾಣದಲ್ಲೂ (೯-೮೪), ಸುಕುಮಾರ ಚರಿತೆಯಲ್ಲೂ (೯-೧೦ ವ) ಇದರ ಪ್ರಸ್ತಾಪವಿದೆ. ಆಚಾಮ್ಲವೆಂದರೆ ಒಣಗಿದ ಆಹಾರ ಪದಾರ್ಥಗಳನ್ನು ನೀರಿನಲ್ಲಿ ನೆನೆಸಿ ತಿನ್ನುವುದು. ಅದೊಂದು ಉಪವಾಸ ವ್ರತ. ಈ ಉಪವಾಸ ವ್ರತವನ್ನು ತಪಿಸ್ಸಿಗೆ ಸಮಾನವೆಂದು ತಿಳಿದು ‘ಆಚಾಮ್ಲವರ್ಥನ ತಪ’ ವೆಂದು ಪಂಪ ಮತ್ತು ಚಾವುಂಡರಾಯ ತಿಳಿಸಿದ್ದಾರೆ : ‘ಅಭಿನಂದನ ಗುರುಗಳಂ ಸಾರ್ದು ಶಾಶ್ವತ ಸೌಖ್ಯವರ್ಧನನಕರಮಪ್ಪ + ಆಚಾಮ್ಲವರ್ಧನ ತಪದೊಳ್‌ ನೆಗೆೞ್ದು ಪರಮ ಪದಮನೆಯ್ದಿದಂ -‘ ಆದಿ ಪುರಾಣ ೩- ೬೫ವ. ‘ಆಚಾಮ್ಲವರ್ಥನ ತಪದಿಂ ನೆಗೆೞ್ದು ಜಯ ವರ್ಮಂ ಪರಮ ಪದಮನೈದಿದೊಂ’ – ಚಾವುಂಡರಾಯಪುರಾಣ. ಆಚಾಮ್ಲವರ್ಧನ ನೋಂಪಿಗೆ ಸೌವೀರ ಭುಕ್ತಿ ಎಂಬ ಹೆಸರೂ ಇದೆ. ಇದು ಸೌಂದರ್ಯ ವರ್ಧಕ ವ್ರತವೆಂಬ ನಂಬಿಕೆಯಿದೆ. ಇದನ್ನು ಒಂದು ಆಚಾಮ್ಲ ಒಂದು ಪಾರಣೆ, ಎರಡು ಆಚಾಮ್ಲ ಒಂದು ಪಾರಣೆ, ಮೂರು ಆಚಾಮ್ಲ ಒಂದು ಪಾರಣೆ ಎಂಬಂತೆ ಕ್ರಮವಾಗಿ ಹತ್ತರವರೆಗೂ ಹೆಚ್ಚಿಸಿಕೊಂಡು ಹೋಗಿ ಆಮೇಲೆ ಒಂಬತ್ತು ಆಚಾಮ್ಲ ಒಂದು ಪಾರಣೆ, ಎಂಟು ಆಚಾಮ್ಲ ಒಂದು ಪಾರಣೆ, ಎಂಬ ಕ್ರಮದಲ್ಲಿ ಒಂದರವರೆಗೆ ಇಳಿಸಿಕೊಂಡು ಬರಬೇಕು. ಅಲ್ಲಿಗೆ ಒಟ್ಟು ಒಂದು ನೂರು ಆಚಾಮ್ಲಗಳೂ ಹತ್ತೊಂಬತ್ತು ಪಾರಣೆಗಳೂ ಆಗುತ್ತವೆ. ಹೀಗೆ ನಡಸುವುದರಿಂದ ಚೆಲವು ಹೆಚ್ಚುತ್ತದೆಂಬ ನಂಬಿಕೆಯಿದೆ. ಆಯುರ್ವೇದ ಶಾಸ್ತ್ರದ ಬೆಂಬಲವೂ ಇದಕ್ಕಿದೆ. ನೋಂಪಿಗಳಲ್ಲಿ ‘ರೂಪಾತಿಶಯದ ನೋಂಪಿ’ ಎಂಬುದೊಂದಿದೆ. ಬಹುಶಃ ಅದೂ ಆಚಾಮ್ಲ ವರ್ಧನಕ್ಕಿರುವ ಇನ್ನೊಂದು ಹೆಸರಿರಬಹುದು.