ಪರಿಪಾಲನೆ

ನೋಂಪಿ ಪಾಲನೆ ಸಾಮಾನ್ಯವಾಗಿ ಮಂಡಲಗಳಂತೆ ಬೆಸ ಸಂಖ್ಯೆಯಲ್ಲಿ ಇರುತ್ತದೆ. ಅನಂತನ ನೋಂಪಿ ಮಾತ್ರ ಮೂರುದಿನ ನಡೆಯುತ್ತದೆ. ಇನ್ನುಳಿದವು ಬಹುವಾಗಿ ಒಂದೇ ದಿನದ ನೋಂಪಿಗಳು. ಭಾನುವಾರ (ದ) , ಶುಕ್ರವಾರ (ದ) ನೋಂಪಿ ಮೊದಲಾದವು ಅಷ್ಟಾಹ್ನಿಕಕೊಮ್ಮೆ ಯಂತೆ ವರ್ಷಕ್ಕೆ ಮೂರು ಸಲ ಬರುತ್ತದೆ. ಆದರೆ ಆನಂತನ ನೋಂಪಿ, ಸಿದ್ಧರ ನೋಂಪಿ, ಮೊದಲಾದವು ವರ್ಷಕ್ಕೆ ಒಂದೇ ಬರುವುದು. ಭಾನುವಾರ ಶುಕ್ರವಾರದ ನೋಂಪಿಗಳನ್ನು ಒಂಬತ್ತು, ಅಂದರೆ ಸ್ಥೂಲವಾಗಿ ಮೂರು ವರ್ಷ ಆಚರಿಸಿದರೆ ಮುಗಿಯುತ್ತದೆ. ಸಿದ್ಧರ ನೋಂಪಿಯನ್ನು ಒಂಬತ್ತು ವರ್ಷ ಆಚರಿಸಿ ಹತ್ತನೆಯ ವರ್ಷ ವಿಸರ್ಜಿಸಬೇಕು. ಅನಂತನ ನೋಂಪಿಯನ್ನು ಹದಿಮೂರು ವರ್ಷ ಆಚರಿಸಿ ೧೪ನೆಯ ವರ್ಷ ಒಪ್ಪಿಸಬೇಕು. ಆಗ ೧೪ ಬುಟ್ಟಿ ಬಾಗಿನ ೧೪ ಹಣ್ಣು ಹಂಪಲು ೧೪ ಪುಂಜ ೧೪ ಬಗೆ ಹೂ ೧೪ ಬಗೆ ಭಕ್ಷ್ಯ ಇತ್ಯಾದಿ ಮಾಡಿ ಇಡಬೇಕು; ಅನಂತರ ಅನಂತನಾಥ ತೀರ್ಥಂಕರರಿಗೆ – ೧, ಅಮ್ಮನವರಿಗೆ – ೧, ಸುವಾಸಿನಿಯರಿಗೆ ೧೧ – ಹೀಗೆ ೧೩ ಬಾಗಿನ ಕೊಟ್ಟು ಉಳಿದೊಂದು ಬಾಗಿನವನ್ನು ನೋಂಪವರು ಪರಸ್ಪರ ಬದಲಾಯಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗುವುದು ಕ್ರಮ; ಗೌರಿ ಬಾಗಿನದಂತೆ. ಒಂದು ನೋಂಪಿಯನ್ನು ಒಂದು ಮಂಡಲ ಆಚರಿಸಿ ಒಪ್ಪಿಸಿದ ಮೇಲೆ ಮತ್ತೆ ಆ ನೋಂಪಿ ಆಚರಿಸುವುದಿಲ್ಲ. ಬೇರೊಂದು ನೋಂಪಿ ಪ್ರಾರಂಭಿಸಬಹುದು. ದಂಪತಿಗಳು ನೋಂಪಿ ಆಚರಿಸುವುದು ಉತ್ತಮವೆಂಬ ನಂಬಿಕೆಯಿದ್ದರೂ ವಿವಾಹಿತರೂ, ಅವಿವಾಹಿತರೂ, ಪಾಲಿಸಲು ಆಭ್ಯಂತರವಿಲ್ಲ. ತಂದೆಯಿಂದ ಮಗನಿಗೆ, ತಾಯಿಯಿಂದ ಮಗಳಿಗೆ – ಸೊಸೆಗೆ, ಪರಂಪರೆಯಾಗೂ ನೋಂಪಿ ಆಚರಿಸುವುದುಂಟು. ನೋಂಪಿ ಪಾಲನೆ ದಿನ ಬಿಸಿ ನೀರು, ಮಂಡಗೆ, (ಹಾಲು) ಸಕರೆ, ಗಂಜಿ ತೆಗೆದುಕೊಳ್ಳಬಹುದೇ ಹೊರತಾಗಿ ಉಪ್ಪು ಹುಳಿ ಖಾರ ಸೇವಿಸುವಂತಿಲ್ಲ. ಒಂದು ಬಸದಿಯಲ್ಲಿ ನೋಂಪಿ ಆಚರಿಸಿದರೆ ಮತ್ತೆ ಮುಂದಿನ ನೋಂಪಿಗಳನ್ನು ಅದೇ ಬಸದಿಯಲ್ಲಿ ಸಾಮಾನ್ಯವಾಗಿ ನಡಸಬೇಕು. ಕೆಲವು ಅನಾನುಕೂಲಗಳಿಂದಾಗಲೀ, ಅನಿವಾರ್ಯ ಕಾರಣಗಳಿಂದಾಗಲೀ ಬೇರೆ ಊರಿನ ಬಸದಿಯಲ್ಲಿ ಆಚರಿಸಬೇಕಾದ ಪ್ರಸಂಗ ಒದಗಿ ಬಂದರೆ, ಆಗ ಮೊದಲು ಅಥವಾ ಹಿಂದಿನ ವರ್ಷ ಆಚರಿಸಿದ್ದ ಬಸದಿಯಿಂದ ನೋಂಪಿ ದಾರವನ್ನು ತೆಗೆದುಕೊಂಡು ಹೋಗಬೇಕು ಇಲ್ಲವೆ ಅಲ್ಲಿಗೆ ತರಿಸಿಕೊಳ್ಳಬೇಕು.

ನೋಂಪಿಯನ್ನು ಪ್ರಾರಂಭಿಸುವುದಕ್ಕೆ ಹೇಗೆ ಒಂದು ಶಾಸ್ತ್ರೋಕ್ತ ವಿಧಿ ಇದೆಯೋ ಹಾಗೆ ನೋಂಪಿಯನ್ನು ಪೂರ್ಣ ಗೊಳಿಸುವುದಕ್ಕೂ ಒಂದು ಕ್ರಮವಿವೆ. ಇದನ್ನು ಉದ್ಯಾಪನವೆನ್ನುವರು. “ವ್ರತ ಸಮಾಪ್ತಿ” ಯೆಂದು ಇದರ ರೂಢಿಯ ಅರ್ಥವಾದರೂ, ವ್ರತವನ್ನು ಪೂರ್ಣಗೊಳಿಸುವ ಕ್ರಮವೇ ಉದ್ಯಾಪನೆ. ಇದು ಸಂಸ್ಕೃತ ಶಬ್ಧ. ನೋಂಪಿ ಕಥೆಗಳಲ್ಲಿ ಉದ್ಯಾಪನೆ ಜತೆಗೆ ಉಜ್ಜವಣೆ, ಉಜ್ಜಮಿಸು- ಎಂಬ ಮಾತುಗಳು ಹೆಚ್ಚಾಗಿ ಬರುತ್ತವೆ. ಸಂಸ್ಕೃತ ಉದ್ಯಾಪನ ಶಬ್ಧ ಪ್ರಾಕೃತದಲ್ಲಿ ಉಜ್ಜವಣೆ ಆಗಿದ್ದು, ಆ ರೂಪಗಳೇ ಕನ್ನಡಕ್ಕೆ ಕಾಲಿಟ್ಟಿವೆ. ಪಂಪನ ಕಾಲಕ್ಕೆ ಉಜ್ಜವಣೆ ರೂಪ ಕನ್ನಡದಲ್ಲಿ ಬಳಕೆಗೆ ಬಂದಿತ್ತು (ಪಂಪ ಭಾರತ -೧೩-೩೬). ಪೊನ್ನನ ಶಾಂತಿ ಪುರಾಣದಲ್ಲೂ (೪-೧೦೮) ಮತ್ತು ಇತರ ಕೆಲವು ಕಾವ್ಯಗಳಲ್ಲೂ ಇದರ ಪ್ರಯೋಗವುಂಟು. ಉಜ್ಜವಿಸು ಎಂಬ ರೂಪದ ಪ್ರಾಚೀನ ಪ್ರಯೋಗ ಕಾವ್ಯಲೋಕನದಲ್ಲೇ ಅಲ್ಲದೆ ಅದಕ್ಕೂ ತುಂಬ ಹಿಂದಿನ ಸು. ೮೦೦ರ ಶಾಸನವೊಂದರಲ್ಲೂ ಪ್ರಯೋಗವಾಗಿದೆ (ಎಪಿಗ್ರಾಫಿಯ ಕರ್ನಾಟಿಕ xi ೩೫ -೫) ಉದ್ಯಾಪನೆ ಕಟ್ಟಳೆ ಮೂರು ದಿನ ನಡೆಯುತ್ತದೆ. ತೀರ್ಥಂಕರ ಮೂರ್ತಿಗೆ ಅಭೀಷೇಕವಾಗಬೇಕು ಉದ್ಯಾಪನೆ ವೆಚ್ಚದ ಬಾಬ್ತು. ನೂರಾರು ತೆಂಗಿನಕಾಯಿಗಳು ಬೇಕು. ಕಡಿಮೆ ಎಂದರೆ ಒಂದು ಸಾವಿರ ರೂಪಾಯಿ ಬೇಕಾಗುತ್ತದೆ. ನೋಂಪಿಗರು ತಲಾ ನೂರು ಇನ್ನೂರು ಎಂದು ಕೈಯಿಂದ ಚಂದಾ ರೀತಿಹಾಕಿ, ಸಾಮೂಹಿಕ ಸಂಗ್ರಹದಿಂದ ಹಣ ಕೂಡಿಸುವುದುಂಟು. ಈ ವಂತಿಕೆಯಿಂದ ಬಂದ ಹಣ ಸಾಲದಿದ್ದರೆ ಬಸದಿಯ ಧರ್ಮ ನಿಧಿಯಿಂದ ಹಾಕಬಹುದು. ಉದ್ಯಾಪನೆ ಕಾಲದಲ್ಲಿ ಧಾರ್ಮಿಕ ಸಡಗರ ಕಂಡುಬರುತ್ತದೆ. ಗುರುಗಳಿಗೆ (ಕ್ಷುಲ್ಲಕರು, ಐಲಕರು) ಪಿಂಛ ಕಮಂಡಲು ಕಾವಿ ವಸ್ತ್ರ ಕೊಡಿಸುವುದು, ಅಜ್ಜಿಯರಿಗೆ (= ಆರ್ಯಿಕೆ, ಅಜ್ಜಿಕೆ , ಕಂತಿ) ಬಿಳಿ ಸೀರೆ ಕೊಡಿಸುವುದು ಈ ಸಮಯದಲ್ಲಿ ನಡೆಯುತ್ತದೆ ಈ ಬಗ್ಗೆ ಎಲ್ಲ ನೋಂಪಿ ಕತೆಗಳಲ್ಲೂ ಕಡೆಯ ಭಾಗದಲ್ಲಿ ಸ್ಪಷ್ಟವಾದ ಸೂಚನೆಯೂ ಇದೆ. ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ.

(ನಂದೀಶ್ವರದ) ನೋಂಪಿಯುದ್ಯಾಪನೆ ಕ್ರಮಮೆಂತಪ್ಪುದೆಂದೊಡೆ ಇಪ್ಪತ್ತು ನಾಲ್ಕು ಚೈತ್ಯಾಲಯಂಗಳಂ ಮಾಡಿಸಿ ಧ್ವಜಾರೋಹಣ ಪೂರ್ವಕವಾಗಿ ಪ್ರತಿಷ್ಠೆಯಂ ಮಾಡಿಸಿ ಅಮೃತ ಪಡಿಗೆ ಗ್ರಾಮಂಗಳಂ ಸರ್ವಬಾಧಾ ಪರಿಹರಮಾಗಿ ಚತುಃಸೀಮೆಯೊಳು ಮುಕ್ಕೊಡೆಯ ಕಲ್ಲಂ ನೆಟ್ಟು ಕೊಡುವುದು. ಇಪ್ಪತ್ತು ನಾಲ್ಕು ಪಶುಗಳಂ ಮುಕ್ಕೊಡೆಯೊಳೊತ್ತಿ ಬಿಡುವುದು- ಅಡ್ಡಣೆಗೆ ಪರಿಯಾಣ ಘಂಟೆ ಜಯ ಘಂಟೆ ಕೈತಾಳ ಆರತಿ ಧೂಪಗುಂಡಿಗೆ ಪೊಳವಿಗೆ ನಕ್ಷತ್ರ ಮಾಲೆ ಮೊದಲಾದ ಪೂಜೋಪಕರಣಂಗಳಂ ಕೊಂಡು ಕೂಡುವುದು. ಮಂಟಪದಲ್ಲಿ ಮಂದರ ನಿಲಿಸಿ ಅಲ್ಲಿ ಚತುರ್ಮುಖವಾಗಿ ಪ್ರಥುಮೆಗಳಂ ಚತುಸ್ಥಾನದಲ್ಲಿ ಸ್ಥಾಪಿಸಿ ಪಕ್ವಾನ್ನ ಫಲಾವಳಿಗಳಿಂ ಪ್ರತ್ಯೇಕವಾಗಿ ಇಪ್ಪತ್ತು ನಾಲ್ಕು ಪ್ರಕಾರದಲ್ಲೂ ಕಟ್ಟುವುದು. ದೇವಾಂಗ ವಸ್ತ್ರದಿಂ ಮೇಲು ಕಟ್ಟಂ ಕಟ್ಟುವುದು. ಉಪವಾಸದ ರಾತ್ರಿಯೊಳು ಜಾಗರಮಂ ಮಾಡುವುದು ಮಹಾ ಪುರಾಣಮಂ ಕೇಳುವುದು. ಇಪ್ಪತ್ತು ನಾಲ್ಕು ಪಟ್ಟು ಸಿಂಪು ಗುಂಡಿಗೆ ಠವಣೆ ಕೋಲು ಶ್ರುತ ಪಾವಡೆ, ಇಪ್ಪತ್ತು ನಾಲ್ಕು ತಂಡ ಋಷಿಯರ್ಗ್ಗೆ ಕೊಡುವುದು. ಅನಿತೆ ಅಜ್ಜಿಯರ್ಗ್ಗೆ ವಸ್ತ್ರಮಂ ಕೊಡುವುದು ಪಂಡಿತರ್ಗ್ಗಂ ಶ್ರಾವಕರ್ಗ್ಗಂ ಉಡ ಕೊಡುವುದು. ದೀನಾನಾಥದುಚಿತರ್ಗ್ಗೆ ಯಥಾ ಶಕ್ತಿಯಿಂ ಕೃಪಾ ನಿಮಿತ್ತವಾಗಿ ದಕ್ಷಿಣೆಯಂ ಕೊಡುವುದು. ವಸ್ತುವಿಲ್ಲದ ಬಡವರು ಹಿಂದೆ ಪೇಳ್ದ ಕ್ರಮದಲ್ಲೂ ಒಂದು ಭಾಗೆಯಂ ಮಾಳ್ಪುದು. ಅದರಿಂ ಬಡವರಾದವರುಗಳು ವಿತ್ತಕ್ಕೆ ತಕ್ಕ ಹಾಗೆ ಗೋಷ್ಟಿಯೊಳಗೆ ಕೊಡುವುದು. ಇದು ಉದ್ಯಾಪನೆಯ ಕ್ರಮಂ. ಪಟ್ಟದರಸಿಯರುಂ ಪ್ರಧಾನವಲ್ಲಭೆಯರುಂ ನೋಂಪಡೆ ಮನೆಯಂ ಪೂಸಿ ಸಾರ್ಸಿ ರಂಗವಲೆಯನಿಕ್ಕಿ ಪೀಠದ ಮೇಲೆ ಪೂರ್ಣಕುಂಭಮನಿಕ್ಕಿ ಆ ಕುಂಭದ ಮೇಲೆ ಕಥೆಯ ಪುಸ್ತುಕಮನಿರಿಸಿ ಪಟ್ಟಾವಳಿಗೆಗಳಂ ಕಟ್ಟಿ ಅಷ್ಟ ವಿಧಾರ್ಚನೆಯಂ ಮಾಡಿ ಸಪ್ತಮಿ ಮೊದಲಾಗಿ ಪೌರ್ನಮಿ ಪರ್ಯಂತಂ ಪಿಂದೆ ಪೇಳ್ದ ಕ್ರಮದಿಂದುಪ್ರವಾಸಮಂ ಮಾಡುವುದು – ಇತ್ಯಾದಿ.

ಇಲ್ಲಿ ೨೪ ಎಂಬುದನ್ನೇ ಹೇಳಿರುವುದು ತೀರ್ಥಂಕರರ ಸಂಖ್ಯೆಗೆ ಸಂಕೇತ. ಅಮೃತಪಡಿಗೆ ಎಂದರೆ ದೇವರಿಗೆ ಇಡುವ ನೈವೇದ್ಯ. ಇದು ತೀರ ಅಪರೂಪದ ಶಬ್ದವಲ್ಲದಿದ್ದರೂ ೧೩ ನೆಯ ಶತಮಾನದಿಂದೀಚೆಗೆ ಪ್ರಯೋಗವಾಗಿದೆ. ಮುಕ್ಕೊಡೆ ಎಂಬುದು ಅಷ್ಟಮಹಾಪ್ರಾತಿಹಾರ್ಯಗಳಲ್ಲೊಂದು, ತೀರ್ಥಂಕರನಿಗೆ ಸಮವಸರಣದಲ್ಲಿ ಪ್ರಾಪ್ತವಾಗವಂತಹದು (ಕೇವಲ ಜ್ಞಾನೋತ್ತ್ಪತ್ತಿಯಾದ ಮೇಲೆ). ಇದು ಮೂರು ಲೋಕಗಳ ಪ್ರಭುತ್ವ ದೊರೆತುದರ ಸಂಕೇತ. ‘ಮಹಾಪುರಾಣಮಂ ಕೇಳುವುದು’ ಎಂದರೆ ಜಿನಸೇನ ಮತ್ತು ಗುಣಭದ್ರಾಚಾರ್ಯ ಪ್ರಣಿತ ಮಹಾಪುರಾಣದ ಪಾರಾಯಣವನ್ನು ಆಲಿಸುವುದು. ಇದು ಗಮನಾರ್ಹ ಹೇಳಿಕೆ; ಬಸದಿಗಳಲ್ಲಿ ಮಹಾಪುರಾಣವನ್ನು ಓದಿ ಹೇಳುತ್ತಿದರೆಂಬುದು ಇದರಿಂದ ತಿಳಿದುಬರುತ್ತದೆ. ಪಂಡಿತ ಮಂಡಳಿಗೆ ಜೈನ ಸಮಾಜ ಕೊಟ್ಟ ಪ್ರಾಶಸ್ತ್ಯವೂ ಇಲ್ಲಿ ವ್ಯಕ್ತವಾಗಿದೆ. ಶ್ರೀಮಂತರಂತೆ ವೈಭವದಿಂದ ಉದ್ಯಾಪನೆ (ಉಜ್ಜವಣೆ) ಮಾಡಲಾಗದವರು ಅವರವರು ಯಥಾಶಕ್ತಿ ಒಂದು ಭಾಗವನ್ನಾದರೂ ಮಾಡುವುದು – ಎಂದು ರಿಯಾಯಿತಿ ತೋರಿಸಲಾಗಿದೆ. ಅಂದರೆ ಭಕ್ತಿ ಮುಖ್ಯ. ಪುಸ್ತಕವನ್ನು ವಸ್ತುಗಳಲ್ಲಿ ಕಟ್ಟಿಡುತ್ತಿದ್ದರು, ಅದರ ರಕ್ಷಣೆಗಾಗಿ.

ಉಜ್ಜವಣೆ ಶಬ್ಧವನ್ನು ಬಿಟ್ಟರೆ ಬಹುವಾಗಿ ಪ್ರಯೋಗವಾಗುವ ಪರಿಭಾಷೆಯ ರೂಪಗಳಲ್ಲಿ ಕೆಲವು; ಚರು, ಚರ್ಯಾ, ಅಷ್ಟವಿಧಾರ್ಚನೆ, ಜಿನಪರ್ಯಾಯ, ಚಂದ್ರಗತಿ, ಮಾಸೋಪವಾಸ, ಪಾರಣೆ – ಮೊದಲಾದವು. ಅವನ್ನು ಬಿಟ್ಟರೆ ಅನೇಕ ಸ್ವಾರಸ್ಯವಾದ ಶಬ್ಧಗಳು ಕಂಡುಬರುತ್ತವೆ; ಉ(ವು) ಪವಾಸ, ಒ (ವೊ)ಂದು, ಬಸ್ತಿ, ಏ(ಯೋ) ಗೆಯ್ಯೆಂ, ಎ(ಯೆ)ನಗೆ. ಈ (ಯೀ), ಎ (ಯ)ಂತು, ಒ(ವ)ಟ್ಟು, ಇ(ಯಿ)ಪ್ಪತ್ತು, ಶ್ರು(ಶೃ)ತ, ತಪಸ್ವಿ(ಶ್ಚಿ), ಉ(ವು)ಜ್ಜ (ಜ್ಜೆ)ಯನಿ, ವನ್ನಿ(ರ್ಣಿ)ಸು, ಪೌರ್ನ್ನಮಿ, ಮುಂದಿನ (ಮುಂದಣ), ಸೈಸವ (ಶೈಶವ), (ಪರಮಾಗಮ) ಪುಸ್ತಕ, ವುಪೋಷ್ಯ ಸಕ್ಕರೆ – ಶ (ಸಃ) – ರ್ಕ್ಖರೆ – ಶರ್ಕರಾ, ಪಟ್ಟಾವಳಿ, ನೇತ್ರಪಟ್ಟೆ, ಚೀನ -ಮಹಾಚೀನ, ಭಾ(ಬಾ) ವಲಿವಿಧಿ, ನೆಲವತ್ತಿಯಡಕೆ, ಬಿಸೂರಿಗೆ (ಬಿಸಿ+ಊರಿಗೆ+ವೂರಿಗೆ), ಪ್ರತುಮೆ (ಪ್ರತಿಮೆ), ಕಳಿವುತ್ತ (ಕಳೆಯುತ್ತ) ಕೋಡಿ (ಕೋಟಿ), (ಅಯಿದು-ಅಯ್ದು- ಐದು, ಅಇವರು-ಅಯ್ವರು- ಐವರು, ಬೇರೊಕ್ಕಲು (ಪ್ರತ್ಯೇಕ ಸಂಸಾರ), ಬಾಯಿ (ಇ) ನ, ಮಾಳ್ಪ- ಮಾಳ್ಪುದು -ಮಾಡುವ ಮಾಡುವುದು, ಅವರ್ಗ್ಗಂ, ಕಾರ್ತ್ತಿಕ, ದುರ್ಗ್ಗತಿ, ನೋಂಪಿ(ಯ) ಕಥೆ, ನೋಂಪುದು, ನೋಂತು, ನೋಂಪವರು, ನೋನಿಸಿದವರು, ನೋಂಪಿ(ಈ), ನೋಂಪಿ- ಇತ್ಯಾದಿ. ಪಕಾರದ ರೂಪಗಳೂ ಇವೆ; ಪಂನೊಂದು, ಪಾರಿಪೋಗಿ, ಸಲು, ಪೊತ್ತು, ಪೇಳ್ದರು, ಪೆರ್ಚಿ, ಪುಟ್ಟಿ; ಹಕಾರದ ರೂಪಗಳೂ ಇವೆ. ಹಣ್ಣು, ಹನ್ನೆರಡು, ಹೂರಗಡಬು, ಹಾಲು, ಹಾಗಲಗಡಲೆ, ಹೂವು, ಹದಿನೆಂಟು, ಹೊಸ ಹಸೆಯ ಹಾಸಿ. ಶಕಟರೇಪ ತುಂಬ ವಿರಳ, ಱೞ ಇಲ್ಲ, ಕರ್ಮಣಿ ಪ್ರಯೋಗ ಅತ್ಯಂತ ಕಡಿಮೆ (ಸುತ್ತಲ್ಪಟ್ಟ್). ಬಳ್ಳ, ಸೊಲಗೆ ಮೊದಲಾದ ಆಳತೆಯ ಶಬ್ಧಗಳಿವೆ. ಶಬ್ಧಾದಿಯಲ್ಲಿನ ಪೂರ್ವ ಸ್ವರಗಳಿಗೆ ಯಕಾರವನ್ನು , ಪಶ್ಚಸ್ವರಗಳಿಗೆ ವಕಾರವೂ ಬರವಣಿಗೆಯಲ್ಲಿ ಕಂಡುಬರುತ್ತದೆ. ಈ ರೀತಿಯ ಇನ್ನೂ ಹಲವು ವೈಶಿಷ್ಟ್ಯಗಳಿವೆ.ಭಕ್ಷ್ಯಗಳ ಪ್ರಸ್ತಾಪ ವಡ್ಡರಾಧನೆಯಲ್ಲೂ (೭೮) ಉಂಟು.

ನೋಂಪಿ ಕಥೆಗಳು ವಡ್ಡಾರಾಧನೆಯ ಮಾದರಿಯನ್ನು ನೆನಪಿಸುತ್ತವೆ. ಅಲ್ಲಿಯ ಎರಕ ಇಲ್ಲಿಯೂ ಕೆಲವು ಕಥೆಗಳಲ್ಲಿ ಕಂಡುಬರುತ್ತದೆ. ಕೇವಲ ಕೆಲವು ಉದಾಹರಣೆಗಳು; “ಜಂಬೂ ದ್ವೀಪದ ಭರತ ಕ್ಷೇತ್ರದೊಳು ಮಗಧೆಯೆಂಬುದು ನಾಡು. ರಾಜಗೃಹಮೆಂಬುದು ಪೊಳಲದನಾಳ್ವಂ….. ಎಂಬರಸನಾತನ ಪಟ್ಟದರಸಿ…… ಮಹಾದೇವಿ ಎಂಬಳಂತವರೀರ್ವರುಂ ಸುಖಸಂಕಥಾ ವಿನೋದದಿಂ ರಾಜ್ಯಂಗೆಯುತ್ತ ಮಿರಲೊಂದು ದಿವಸಂ; ‘ಗ್ರಾಮೇಕರಾತ್ರಂ ನಗರಿ ಪಂಚ ರಾತ್ರಮಟವ್ಯಾಂ ದಶರಾತ್ರಮೆಂಬ ಜಿನೇಂದ್ರೋಪದಿಷ್ಟದಿಂ ವಿಹಾರಿಸುತ್ತಂ ಬಂದಾಪುರದ ಬಹರುದ್ಯಾನ ವನದೊಳಿರ್ದ್ದು ವನಪಾಲಕರಿಂದರಿದು” (ಭವರೋಗಹರಾಷ್ಟಮಿಯ ನೋಂಪಿ) ‘ಮುನಿಗಳ ಪಕ್ಕದೆ ಜಿನದೀಕ್ಷೆಯಂ ಕೈಗೊಂಡು ಗುರುಗಳ ಪಕ್ಕದೆ ಪಲಕಾಲ ಶಾಸ್ತ್ರಮಂ ಕಲಿತು ಏಕವಿಹಾರಿಯಾಗ ಗ್ರಾಮನಗರ ಖೇಡ ಖರ್ವಡಮಡಂಬ ಪತ್ತದ ದ್ರೋಣಾ ಮುಖಂಗಳಂ ವಿಹರಿಸುತ್ತ ವುಗ್ರೋಗ್ರ ತಪಶ್ಚರಣದೊಳ್ನೆಗಳುತ್ತ …..” , ‘ಇಷ್ಟ ವಿಷಯ ಭೋಗೋಪಭೋಗಂಗಳನನುಭವಿಸಿ….’ (ಶ್ರುತಸ್ಕಂದನ ನೋಂಪಿ). ಇದರ ಓಟ – ವಿಷಯ ವಡ್ಡರಾಧನೆಯ ಧಾಟಿಯನ್ನು ನೆನಪಿಸುತ್ತದೆ. ಹೆಸರುಗಳಲ್ಲೂ ಅಷ್ಟೇ; ಕೇಶವಾಂಕ – ಕೌಶಿಕೆ, ಕುಸುಮದತ್ತ -ಕುಸುಮದತ್ತೆ. ತಿಲಕರಾಜ – ತಿಲಕವತಿ, ಪ್ರಿಯ(ಂ)ಕರ – ಪ್ರಿಯಂಕರಿ, ವೃಷಭದತ್ತ -ವೃಷಭದತ್ತೆ, ಮದನಪಾಲಕ -ಮದನಸೌಂದರಿ, ಕಮಳಮುಖಿ-ಕಮಳಸಖ; ‘ಸುಗಂಧ ಬಂಧುರದ ನೋಂಪಿಯ ಕಥೆಯಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದೊಳು ಅವಂತಿ ದೇಶದೊಳುಜಯಿನಿ ಎಂಬ ಪುರಕೆ ರತ್ನಪಾಲಂಗಂ ರತ್ನಮಿತ್ರೆಯೆಂಬರಸಿಯಾಗೆ ಸುಖಮಿರಲೊಂದು ದಿವಸಂ ರತ್ನಸಾಗರ ಭಟ್ಟಾಂಕರಂ …….’ ಅನೇಕ ವೇಳೆ ಹೆಸರುಗಳು, ವಡ್ಡಾರಾಧನೆಯಂತೆ ತೀರಾ ಸಾಂಕೇತಿಕ; ರಾಜಶ್ರೇಷ್ಠಿಯೊಬ್ಬನಿಗೆ ಧನಶ್ರೇಷ್ಠಿ, ಚೆಲುವೆಯಾದ ರಾಣಿಯೊಬ್ಬಳಿಗೆ ಮನೋಹರಿ ಪ್ರಜಾಪ್ರಪಂಚವನ್ನು ಪ್ರಭುವೊಬ್ಬನಿಗೆ ಭೂಪಾಲ- ಎಂಬಂಥ ಹೆಸರುಗಳಿರುವುದನ್ನು ಗಮನಿಸಬಹುದು.

ಜೈನ ಧಾರ್ಮಿಕ ಆಚರಣೆಗಳ ನಿಟ್ಟಿನಿಂದ ಇವಕ್ಕಿರುವ ಮಹತ್ವ ಕಡೆಗಣಿಸುವಂತಹುದಲ್ಲ ಎಂಬುದು ಇದುವರೆಗಿನ ಸಮೀಕ್ಷೆಯಿಂದ ಮನದಟ್ಟಾಗುತ್ತದೆ. ಇದರಂತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ, ಕನ್ನಡ ಗದ್ಯದ ಬೆಳವಣಿಗೆ ದೃಷ್ಟಿಯಿಂದ ಕೂಡ ನೋಂಪಿ ಕಥೆಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಕೆಲವು ಕಲಾವಂತಿಕೆಯ ದೃಷ್ಟಿಯಿಂದಲೂ ಗಮನಾರ್ಹವಾಗಿದ್ದು ಕುತೂಹಲ ಕೆರಳಿಸುತ್ತವೆ. ಕಥಾಸಂವಿಧಾನ, ಶೈಲಿ, ಭಾಷೆ, ಭಾವ, ಸಂಪತ್ತು, ಮನುಷ್ಯ ಸ್ವಭಾವ ಚಿತ್ರಣ, ಸಂಕೀರ್ಣತೆ -ಮೊದಲಾದ ನಿಟ್ಟಿನಿಂದ ನೋಡಿದಾಗಲೂ ಆಸಕ್ತಿ ಅರಳಿಸುವ ಅಂಶಗಳು ಆಡಗಿರುವುದು ಕಂಡುಬರುತ್ತದೆ. ಜೀವದಯಾಷ್ಟಮಿ, ಷೋಡಶಭಾವನೆ, ಚಂದನಷಷ್ಟಿ ಮುಂತಾದ ನೋಂಪಿ ಕಥೆಗಳು ಕಿರುಕಾವ್ಯಗಳಾಗಿವೆ. ನೋಂಪಿ ಕಥೆಗಳಲ್ಲೆಲ್ಲಾ ‘ಯಶೋಧರನ’ ಕಥೆ ಎಂಬ ಹೆಸರಿನಿಂದ ರೂಢಿಯಲ್ಲಿರುವ ಜೀವದಯಾಷ್ಟಮಿ ನೋಂಪಿಯ ಕಥೆ ಸುಪ್ರಸಿದ್ಧವಾದುದು. ಅನೇಕ ಕವಿಗಳು ಇದನ್ನು ಗದ್ಯದಲ್ಲೂ, ಪಧ್ಯದಲ್ಲೂ ಬರೆದಿದ್ದಾರೆ. ಜನ್ಮಕವಿಯ ಯಶೋಧರ ಚರಿತೆಯಂತೂ ಉತ್ತಮ ಕಾವ್ಯವಾಗಿ ಸುವಿಖ್ಯಾತವಾಗಿದೆ. ಅದಲ್ಲದೆ ಪದುಮನಾಭನೆಂಬ (ಸು. ೧೬ನೆಯ ಶತಮಾನ) ಕವಿ ಸುಮಾರು ೪೦೦ ಭಾಮಿನೀ ಷಟ್ಟದಿಗಳನ್ನೊಳಗೊಂಡ ನಾಲ್ಕು ಸಂಧಿಗಳ ಕಾವ್ಯ ಬರೆದಿದ್ದಾನೆ. ಆತ ತನ್ನ ಬಗ್ಗೆ ‘ಜಿನಮುನಿ ಶ್ರುತಕೀರ್ತಿ ತ್ರೈವಿದ್ಯ – ದೇವರ ಸುತ ಕವಿ – ಪದುಮನಾಭವಿಭು ವಿರಚಿತ ಯಶೋಧರ……’ ಎಂದು ಹೇಳಿಕೊಂಡಿದ್ದಾನೆ. ಇದೇ ರೀತಿ ೧೦೭ ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿರುವ ಚಂದನವರ್ಣಿಯ (ಸು ೧೭ನೆಯ ಶತಮಾನ) ಜೀಯದಯಾಷ್ಟಮಿ ನೋಂಪಿಯೂ ಲೇಸಾದ ಕಿರುವಾಕ್ಯವಾಗಿದೆ. ಈ ಕವಿ :

ಶ್ರುತ ಮುನೀಶ್ವರ ವರತನೂಭವ
ಜಿತಮದನ ಶುಭಚಂದ್ರಮುನಿಪನ
ಸುತನು ಚಂದಣವರ್ನ್ನಿ ರಚಿಸಿದ ಕಥೆ ಯಶೋಧರನಾ
ವಿತತಮಾಗೀ ಜಪದೊಳೆಸೆಯಲಿ
ಸತತಮಿದನೊಲಿದೋರನಾಲಿಪ
ನುತಿಪರಿಗೆ ತಾಂ ಮುನಿಸುವ್ರತನು ನಿಕಮನೊಲಿದೀಗೇ
||

ಎಂದು ಸ್ವವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾನೆ. ಇದೇ ಚಂದಣವರ್ಣಿಯೆಂಬ ಕವಿ ಚಂಪೂರೂಪದಲ್ಲಿ ನಂದೀಶ್ವರ ನೋಂಪಿ ಕಥೆಯನ್ನು ಬರೆದಿದ್ದಾನೆ. ಆದರೆ ಚಂಪೂರೂಪದಲ್ಲಿ ನೋಂಪಿ ಕಥೆಗಳನ್ನು ನಿರೂಪಿಸಿದ ಕಾವ್ಯಗಳು ಅಪರೂಪ, ಅಜ್ಞಾತ ಕವಿಗಳಿಂದ ಗದ್ಯದಲ್ಲಿ ರಚಿತವಾದ ನೋಂಪಿ ಕಥೆಗಳೇ ಹೆಚ್ಚು. ಜೀಯದಯಾಷ್ಟಮಿ ನೋಂಪಿ ಕಥೆ (ಯಶೋಧರ ಕಾವ್ಯ) ಸಾಂಗತ್ಯ ಛಂದಸ್ಸಿನಲ್ಲೂ ರಚಿತವಾಗಿದ್ದು ಎರಡು ಕಾವ್ಯಗಳು ದೊರೆತಿವೆ ಮತ್ತು ಅವು ಅಜ್ಞಾತ ಕರ್ತೃಕಗಳಾಗಿವೆ. ಅಲ್ಲದೆ ಚಂದ್ರಸಾಗರ ವರ್ಣಿಯೆಂಬ (ಬ್ರಹ್ಮಣಾಂಕ) ಕವಿಯಿಂದ ಕುಸುಮಷಟ್ಪದಿಯಲ್ಲಿ ರಚಿತವಾದ ಜೀಯದಯಾಷ್ಟಮಿ ನೋಂಪಿ ಕಥೆಯಿದೆ. ಇದರಲ್ಲಿ ಎರಡು ಸಂಧಿಗಳು ಹಾಗೂ ೧೫೧ ಪದ್ಯಗಳಿವೆ. ((ಸಂ) ನಾಗರಾಜಯ್ಯ ಹಂಪ, ಶಿವಣ್ಣ, ಎಸ್‌ : ಚಂದ್ರಸಾಗರವರ್ಣಿಯ ಕೃತಿಗಳು : ೧೯೮೧ : ೫೭-೮೭). ಮೇಲೆ ಹೆಸರಿಸಿದ ಚಂದಣವರ್ಣಿ ಮತ್ತು ಈ ಚಂದ್ರಸಾಗರವರ್ಣಿ ಪ್ರತ್ಯೇಕ ಕವಿಗಳೆಂಬುದನ್ನು ಗಮನಿಸಬೇಕು.

ಈ ಯಶೋಧರ ಕಥೆ ಅಥವಾ ಜೀಯದಯಾಷ್ಟಮಿ ನೋಂಪಿಯ ಕಥೆ ಕನ್ನಡದಲ್ಲಿಯೇ ಅಲ್ಲದೆ ಬೇರೆ ಭಾಷೆಗಳಲ್ಲೂ ಪ್ರಚಾರವಾಗಿದೆ :

೦೧. ಹರಿಭದ್ರನ ಸಮರಾಇಚ್ಚಕಹಾ (ಸಮರಾದುತ್ಯಕಥಾ) ೮ನೆಯ ಶತಮಾನದ ಪ್ರಾಕೃತಕೃತಿ.
೦೨. ಗುಣಭದ್ರಚಾರ್ಯರ ಉತ್ತರ ಪುರಾಣ, ೧೦ನೆಯ ಶತಮಾನದ ಆರಂಭದಲ್ಲಿ ಪೂರೈಸಿದ ಸಂಸ್ಕೃತ ಕಾವ್ಯ.
೦೩. ಪುಷ್ಪದಂತ ಮಹಾ ಕವಿಯ ಜಸಹರ ಚರಿಉ (ಯಶೋಧರವರಿತ್ರೆ) ಪ್ರಾಕೃತ ಕಾವ್ಯ, ೧೦ನೆಯ ಶತಮಾನ)
೦೪. ಸೋಮದೇವ ಸೂರಿಯ ಯಶಸ್ತಿಲಕ ಚಂಪು, ೧೦ನೆಯ ಶತಮಾನದ ಸಂಸ್ಕೃತ ಕೃತಿ.
೦೫. ವಾದಿರಾಜನ ಯಶೋಧರ ಚರಿತೆ, ೧೧ನೆಯ ಶತಮಾನ
೦೬. ವಾಸವಸೇನನ ಯಶೋಧರ ಚರಿತೆ, ೧೩ನೆಯ ಶತಮಾನ
೦೭. ಸಕಲ ಕೀರ್ತಿಯ ಕೃತಿ, ೧೩ನೆಯ ಶತಮಾನ
೦೮. ಸೋಮಕೀರ್ತಿಯ ಕಾವ್ಯ, ೧೫ನೆಯ ಶತಮಾನ
೦೯. ಮಾಣಿಕ್ಯ ಸೂರಿಯ ಕಾವ್ಯ, .೧೪ನೆಯ ಶತಮಾನ
೧೦. ಪದ್ಮನಾಭನ ಕಾವ, ೧೬ನೆಯ ಶತಮಾನ
೧೧. ಪೂರ್ಣದೇವನ ಕಾವ್ಯ, ೧೬ನೆಯ ಶತಮಾನ
೧೨. ಕ್ಷಮಾಕಲ್ಯಾಣನ ಕಾವ್ಯ, ೧೮ನೆಯ ಶತಮಾನ
೧೩. ಮಲ್ಲಿಭೂಷ, ಬ್ರಹ್ಮ, ನೇಮಿದತ್ತ, ಶ್ರುಸಾಗರ, ಹೇಮಕುಂಜರ ಮುಂತಾದವರ ಕಾವ್ಯಗಳು
೧೪. ಜೀವಕಚಿಂತಾಮಣಿಯೆಂಬ ತಮಿಳು ಕಾವ್ಯ ೧೧ನೆಯ ಶತಮಾನ
೧೫. ಜಿನಚಂದ್ರಸೂರಿ, ದೇವೆಂದ್ರ ಲಾವಣ್ಯರತ್ನ, ಮನೋಹರ ದಾಸ ಮೊದಲಾದವರು ಬರೆದ ಗುಜರಾತಿ ಕಾವ್ಯಗಳು (೧೬- ೧೭ ಶತಮಾನ)
೧೬. ಪಂಡಿತ ಲಕ್ಷ್ಮಿದಾಸನ ಹಿಂದಿ ಕಾವ್ಯ, ೧೮ ನೆಯ ಶತಮಾನ

ಹೀಗೆ ವಿವಿಧ ಭಾಷೆಗಳಲ್ಲಿ ಈ ಕಥೆ ಪ್ರಚಾರ ಪಡೆದಿದೆ. ಈ ನೋಂಪಿ ಕಥೆಯ ವ್ಯಾಪ್ತಿ, ಪ್ರಾಚೀನತೆ ಮನದಟ್ಟಾಗುತ್ತದೆ. ಈ ಕಥೆಯ ತೌಲನಿಕ ಹಾಗೂ ವಿಮರ್ಶಾತ್ಮಕ ಅಧ್ಯಯನವೇ ಒಂದು ನಿರ್ಬಂಧಕೆ ವಸ್ತುವಾಗಬಲ್ಲುದು. ಬಹುಶಃ ನೋಂಪಿ ಕಥೆಗಳೆಲೆಲ್ಲಾ ಕಾವ್ಯ ಗುಣದ ದೃಷ್ಟಿಯಿಂದ ಇದಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಇಲ್ಲಿ ಕೇವಲ ಪ್ರಾತಿನಿಧಿಕವೆಂಬಂತೆ ಈ ಕಥೆಯನ್ನು ಅತಿ ಸಂಕ್ಷಿಪ್ತವಾಗಿ ವಿಮರ್ಶಿಸಿದೆ; ಇದರ ಕಥೆ ಎಲ್ಲರಿಗೂ ತಿಳಿದಿದ್ದೇ. ಆದ್ದರಿಂದ ಇದರ ವಿಮರ್ಶೆಗೆ ನೇರವಾಗಿ ತೊಡಗಿದ್ದೇನೆ, ಜನ್ನನ ಕಾವ್ಯವನ್ನು ಕೇಂದ್ರವಾಗಿರಿಸಿಕೊಂಡು.

ಜನ್ನ ಕವಿಯು, ತನಗಿಂತ ಹಿಂದೆ ಆಗಿಹೋದ ಸೋಮದೇವ – ವಾದಿರಾಜ ಮೊದಲಾದವರ ವಸ್ತುವನ್ನೇ ಎತ್ತಿಕೊಂಡಿದ್ದರೂ, ಅದರ ಹೊರ ಆಕಾರದಲ್ಲೂ ಸತ್ವದಲ್ಲೂ ಸೂಕ್ಷ್ಮಗಳಲ್ಲೂ ಭಾಷಾ ಪ್ರಯೋಗದಲ್ಲೂ ಮಾಡಿಕೊಂಡಿರುವ ವ್ಯತ್ಯಾಸಗಳು ಕವಿಯ ಧೋರಣೆಯನ್ನು ಹೆಚ್ಚು ನಿಕರವಾಗಿಸಲು ನೆರವಾಗುತ್ತವೆ. ಅಲ್ಲದೆ ಕನ್ನಡದ ಸಂದರ್ಭದಲ್ಲಿಟ್ಟು ನೋಡಿದಾಗಲಂತೂ ವಿಶಿಷ್ಟ-ಶ್ರೇಷ್ಠ ಕಾವ್ಯವಾಗಿದೆ; ಉಳಿದ ಕನ್ನಡ ಯಶೋಧರ ಕಾವ್ಯಗಳು, ಕಾವ್ಯವಾಗಲು ಪ್ರಯತ್ನಿಸದೆ ನೋಂಪಿಯ ಧಾರ್ಮಿಕ ವಲಯದಲ್ಲೇ ಉಳಿಯಲು ಹವಣಿಸುತ್ತವೆ. ಜನ್ನನಲ್ಲಿ ಧರ್ಮೋಪದೇಶ ಇಲ್ಲವೇ ಇಲ್ಲವೆಂದಲ್ಲ, ಇದ್ದರೂ ಅದು ಗೌಣವಾಗಿದೆ. ಧರ್ಮ ಆನುಷಂಗಿಕವಾಗಿ ಕೆಳಗೆ ನಿಂತು ಕಾವ್ಯ ಮೇಲೇರಿ ವಿಜೃಂಭಿಸಲು ಜನ್ನನ ಕಾವ್ಯ ಅವಕಾಶಮಾಡಿಕೊಟ್ಟಿದೆ. ಪಂಪನ ಆಶಯವನ್ನು ಜನ್ನನಿಗೂ ವಿಸ್ತರಿಸಿ ಹೇಳುವುದಾದರೆ, ಧರ್ಮ ಹಾಗೂ ಕಾವ್ಯ ಧರ್ಮಗಳು ಗುರುತು ಸಿಗದಂತೆ ಬೆಸೆದುಕೊಂಡಿವೆ. ಮೂಲ ವಸ್ತು ಎಲ್ಲಿಯದೇ ಅಗಲಿ, ಅದನ್ನು ಜನ್ನ ತನ್ನದನ್ನಾಗಿಸಿ ಕನ್ನಡದ ಮೂಸೆಯಲ್ಲಿ ಕಂಡರಿಸಿರುವ ರೀತಿ ಪರಿಣಾಮಕಾರಿಯಾಗಿದೆ. ಕನ್ನಡ ಭಾಷೆಯ ಸೊಗಡು ದೇಸಿ ಮೊನಚುಧ್ವನಿ, ಚಿತ್ರಕಶಕ್ತಿ ಇವು ಸಾರ್ಥಕವಾಗಿ ಹೆಣೆದುಕೊಂಡಿವೆ.

ಮಾನವನ ಭಾವನೆಗಳ ವಿಕಾರ ಸ್ವರೂಪ ಚಿತ್ರಿಸುವುದು ಜನ್ನ ಪ್ರಧಾನ ಉದ್ದೇಶ. ಈ ಧೋರಣೆ ಸಾಮಾನ್ಯವೇ ಆದರೂ ಅಭಿವ್ಯಕ್ತಿಯಲ್ಲಿ ಕವಿ ದೊಡ್ಡದನ್ನು ಸಾಧಿಸಿದ್ದಾನೆ. ಭವಾವಳಿ, ಧರ್ಮಪ್ರಸಾರ ಇಲ್ಲೂ ಇದೆ. ಆದರೆ ಪಾಪಭೀತಿ ಅಥವಾ ಪಾಪಪ್ರಜ್ಞೆ ಹಲವು ಜನ್ಮಗಳ ವರ್ತುಲಕ್ಕೆ ಅಂಚು ಹೆಣೆದುಕೊಂಡು ಬರುತ್ತದೆ. ಯಶೋಧರ ಅಹಿಂಸಕನೇ ಹೊರತು ಹುಂಬನಲ್ಲ, ಹೇಡಿಯಲ್ಲ. ಈ ಆದರ್ಶದಿಂದ ಅವನು ತನ್ನ ಮಡದಿಯನ್ನಾಗಲಿ, ಅವಳ ಮಿಂಡನನ್ನಾಗಲಿ ಕೊಲ್ಲಲಿಲ್ಲ. ತಾಯಿಯ ಮಾತಿಗೆ ಕಟ್ಟುಬಿದ್ದು ಹಿಟ್ಟಿನ ಕೋಳಿಯನ್ನು ಬಲಿಕೊಡುವಾಗಲೂ ಪಾಪ ಭೀರುವಾದ ಯಶೋಧರನ ಆತ್ಮಸಾಕ್ಷಿ ಜಾಗೃತವಾಗಿತ್ತು. ಅವನು ಕ್ಷೋಭೆಗೊಂಡ ಚಿತ್ರವನ್ನು ಕವಿ ಕೆಲವೇ ಮಾತುಗಳಲ್ಲಿ ಧ್ವನಿಸುತ್ತಾನೆ. ತಾಯಿ-ಮಗ ಪಾಪಾತ್ಮರಾಗಿ ಪರಿಗಣಿತರಾಗಿ ಆ ಪಾಪದ ಕಾಳಿಕೆ ಕಳೆದುಕೊಳ್ಳಲು ಭವಮಾಲೆಯ ರಾಟಳದಲ್ಲಿ ಸುತ್ತುತ್ತಾರೆ. ಏಳೂ ಭವಗಳ ಜೀವ ಸಂಚಾರ ಚಿತ್ರಣದಲ್ಲಿ ಜನ್ನನ ಸೃಷ್ಟಿಶೀಲ ಶಕ್ತಿ ಬಿಚ್ಚುತ್ತದೆ; ಅಲ್ಲದೆ ಅವು ಭವಾಂತರದ ವಾಸನೆಯಿರುವ ಜನ್ಮಾಂತರಗಳೆಂಬುದನ್ನು ನೆನಪಿಡಬೆಕಾಗುತ್ತದೆ. ಅಹಿಂಸೆಯ ಪ್ರತಿಪಾಧನೆಯೂ ಪರಿಣಾಮಕಾರಿಯಾಗಿ ಬಂದಿದೆ.

ಜನ್ನ ಕವಿ ‘ಬೇವಂ ಮೆಚ್ಚಿದ ಕಾಗೆಗೆ…. ಎಂಬ’ ಕಡೆ ಹಾಗೂ ಇನ್ನಿತರ ಕೆಲವು ಪ್ರಸ್ತಾಪಗಳಲ್ಲಿ ನವಿಲು ಹಂದಿ ಟಗರು ಕೋಳಿ ಮುಂತಾದ ಪ್ರಾಣಿ ಲೋಕದ ಪ್ರತಿಮೆಗಳಿಂದ ಮಾತನಾಡುವುದು ಗಮನಾರ್ಹವಾಗಿದೆ. ಇಲ್ಲಿನ ವ್ಯಕ್ತಿಗಳ ವರ್ತನೆಯೂ ಪ್ರಾಣಿಗಳಂತೆ Irrational ಆಗಿದೆಯೆಂದು ಕವಿ ಧ್ವನಿಸುವಂತಿದೆ. ಮಾನವ ಜೀವನ ಕೂಡ ಪ್ರಾಣಿ ಲೋಕದ ಬದುಕಿದಂತೆ ಅರ್ತಾಕಿಕ. ಅಮೃತಮತಿಯದು ಭಾವೋದ್ವೇಗ ವಶವಾದ ಆಕರ್ಷಣೆಗಿಂತ ಲೈಂಗಿಕವಾದ ಸೆಳೆತವೆಂದು ತೋರುತ್ತದೆ. ಅವಳಲ್ಲಿ ಸಂವೃತವಾಗಿ ಅದುಮಿಟ್ಟಿದ್ದ ಕಾಮತೃಷ್ಣೆ ಅಷ್ಟಾವಂಕನ ಗಾನದಿಂದ ವಿವೃತವಾಗಿ ಅನಾವರಣಗೊಂಡಿತು. ಈ ಭಾಗದ ನಿರೂಪಣೆಯಲ್ಲಿ ಜನ್ನಕವಿ ಮನುಷ್ಯ ಮನಸ್ಸಿನ ಗೂಢದಲ್ಲಿ ಕುಳಿತು ಮಾತನಾಡುತ್ತಿರುವಂತೆ ಅನಿಸುತ್ತದೆ. ‘ನೋಡುವ ಕಣ್ಗಳ ಸವಿ’ ಎಂಬಲ್ಲಿ ಸೌಂದರ್ಯಪ್ರಶಂಸೆಯ ಉದ್ಗಾರವಿದ್ದರೂ, ‘ಒಲವಾದಡೆ ರೂಪದ ಕೋಟಲೆಏವುದೊ’ ಎಂದು ಹೇಳುವಾಗ ಜೀವನದ ಅನಿವಾರ್ಯತೆಯನ್ನು ಒಪ್ಪಿಕೊಂಡ ಧೋರಣೆ ಹೊಳಲಿಟ್ಟಂತಿದೆ. ಮತ್ತು ಇಲ್ಲಿಯೇ ನಾಗರಿಕ-ಬರ್ಬರ ಜೀವನದ ಅಂತರಗಗಳನ್ನು ಕವಿ ಸಂಕೇತಿಸಿದಂತೆಯೂ ತೋರುತ್ತದೆ. ಅಮೃತಮತಿಯನ್ನು ಪತಿತ್ವದಿಂದ ಪತನತ್ವಕ್ಕೆ ತಳ್ಳಲು ನೆರವಾದದ್ದು ಸಂಗೀತ. ಸಂಗೀತ ಕಾಮಪ್ರಚೋದಕವೆ ಎಂಬುದು ಚಿಂತನೀಯ. ಗಾನ ಹೇಗೆ ಮನಸೆಳೆಯುತ್ತದೆಂಬುದಕ್ಕೊಂದು ಭವ್ಯ ಸಾಕ್ಷಿ ಈ ಕಥಾನಕದಲ್ಲಿದೆ. ಕಾಮೋದ್ರೇಕ ಗಾಯನವನ್ನು ಆಸ್ವಾದಿಸುವ ಅವಳ ನೀತಿ ಲಘುವಾದದ್ದೆ ಎಂಬ ಪ್ರಶ್ನೆಗೂ ಈ ಪ್ರಸಂಗ ಎಡೆಗೊಡುತ್ತದೆ. ಇಷ್ಟು ಗಾಢವಾಗಿ, ಮನಸ್‌ಶಾಸ್ತ್ರದ ಆಧಾರದ ಆಲೊಚನೆಗೂ ದಾರಿ ತೆರೆಯುವ ಕಥೆಯನ್ನು ಅತಿ ಕಿರಿದರಲ್ಲೇ ಕವಿ ಚಿತ್ರಿಸಿರುವುದು ಕೂಡ ಸ್ವಾರಸ್ಯವಾಗಿದೆ. ಉಳಿದ ಇದೇ ವಸ್ತುವಿನ ನೋಂಪಿ ಕಥೆಗಳು ಈ ಪಟ್ಟದಲ್ಲಿ ಚಿಂತನಶೀಲವಾಗಿಲ್ಲ.

ನೋಂಪಿ ಕತೆಗಳಿಗೆ ಆರಂಭ-ಮುಕ್ತಾಯಗಳಲ್ಲಿ ಏಕತಾನವುಂಟು. ಕತೆಯ ಬೆಳವಣಿಗೆಯಲ್ಲೂ ವೈವಿಧ್ಯ ಕಡಮೆ, ಪಾರಿಭಾಷಿಕ ಶಬ್ದಗಳ ಮಿಶ್ರಣವಿದೆ. ಹೆಚ್ಚಿನ ಕಥೆಗಳು ಆಯ್ದು ಪುಟದೊಳಗೇ ಮುಗಿದುಬಿಡುತ್ತದೆ. ಕೆಲವು ಕತೆಗಳಲ್ಲಿ ಪೂಜಾಕ್ರಮದ-ಮಂತ್ರದ ಹೊರತು ಕತೆಯೇ ಇರುವುದಿಲ್ಲ – ಎಂಬಂಥ ಇತಿಮಿತಿಗಳೂ ಇವೆ. ಆದರೆ ಪರಿಭಾಷೆಯ ಹೊರಗೆ ಕುಸಿಯದ ಕತೆಗಳೂ ಇವೆ. ಇಲ್ಲಿಯ ಶೈಲಿ ನಿರರ್ಗಳವಾಗಿ ಓಡುತ್ತದೆ. ವಡ್ಡಾರಾಧನೆಯಂತೆ ಪ್ರಾಕೃತದ, ಸಂಸ್ಕೃತದ ಗಾಹೆ ಶ್ಲೋಕಗಳ ಬಳಕೆ ಹೆಚ್ಚಿಲ್ಲ. ಪ್ರಾಕೃತದ ಬಳಕೆ ಇಲ್ಲಿ ಎಷ್ಟು ಕಡಿಮೆಯೆಂದರೆ, ನನ್ನ ಗಮನಕ್ಕೆ ಇದುವರೆಗಿನ ಪರಿಶೀಲನೆಯಿಂದ ನೋಂಪಿ ಕತೆಗಳಲ್ಲಿ ಕಂಡುಬಂದಿರುವ ಗಾಹೆ ಒಂದು ಮಾತ್ರ.

ಪಡೆಗಹಮುಚ್ಚಠಾಣಂ ಪಾದೋದಕ ಮಂಚಣಂ ಚ ಪಣಮಂಚ
ಮಣವಯಣ ಕಾಯಸುದ್ಧಿಂ ಯೇಸಣ ಸುದ್ಧಿಂ ಚ ಣಹವಿಹಂ ಪುಣ್ಣಂ ||

ಇದು ಕರ್ಮಹರಾಷ್ಟಮಿಯ ನೋಂಪಿಯ ಕತೆಯಲ್ಲಿ ಬರುತ್ತದೆ. ‘ಒಂದು ಸ್ವಾರಸ್ಯ ವಿಶೇಷಾಂಶವೆಂದರೆ ವಡ್ಡಾರಾಧನೆಯ ಮುದ್ರಿತವಾದ ಪ್ರತಿಯ ಏಳನೆಯ ಪುಟದ ಅಡಿಟಿಪ್ಪಣಿಯಲ್ಲಿ ಕೊಟ್ಟಿರುವ ಪಡಿಗಹಮುಚ್ಚಂ ಠಾಣಂ…. ಎಂಬ ಪ್ರಾಕೃತಗಾಹೆ ಚಾವುಂಡರಾಯ ಪುರಾಣದಲ್ಲೂ ದೊರೆಯುವುದು. “ಈಗ ಅಚ್ಚಾಗಿರುವ ಚಾವುಂಡರಾಯ ಪುರಾಣ ಭಾಗದಲ್ಲೇ ಈ ಪ್ರಾಕೃತ ಗಾಹೆಯಿದ್ದು ತುಂಬ ಅಶುದ್ಧವಾಗಿದೆ. ಅದನ್ನು ವಡ್ಡಾರಾಧನೆಯ ಪ್ರತಿಯಿಂದ ಸರಿಪಡಿಸಿಕೊಳ್ಳಬಹುದು” – ಎಂಬ ವಿವರಣೆಯನ್ನು ಇಲ್ಲಿಗೂ ಅನ್ವಯಿಸಬಹುದು. ಈ ಗಾಹೆ ಮೂರು ಪ್ರತ್ಯೇಕ ಕೃತಿಗಳಲ್ಲಿ ಬಂದಿರುವುದು ಗಮನಾರ್ಹವಾಗಿದೆ. ಇದನ್ನು ಬಿಟ್ಟರೆ “ಸವಣೊ ಅಮೋಘವಯಣೋ” ಎಂಬ ವಾಕ್ಯ ಫಲ ಮಂಗಳವಾರದ ನೋಂಪಿ ಕತೆ, ಸಪ್ತ ಪರಮಸ್ಥಾನದ ನೋಂಪಿ ಕತೆಗಳಲ್ಲಿ ಬರುತ್ತದೆ; ಇದು ಸುಕುಮಾರಚರಿತೆ, ಧರ್ಮಾಮೃತ – ಮೊದಲಾದ ಕಾವ್ಯಗಳಲ್ಲೂ ಪ್ರಯೋಗವಾಗಿದೆ. ಇದರ ಸಂಸ್ಕೃತರೂಪ ‘ಶ್ರಮಣಃ ಅಮೋಘ ವಚನಃ’ ಎಂದಾಗುತ್ತದೆ. ಅಂದರೆ ಶ್ರಮಣವಾಣಿ ನಿಶ್ಯ (ಅಮೋಘ)ವಾದುದು ಎಂದರ್ಥ. ಸಪ್ತ ಪರಮ ಸ್ಥಾನದ ನೋಂಪಿಯಲ್ಲಿ ಬರುವ ‘ನಾನ್ಯಥಾ ಮುನಿ ಭಾಷಿತಂ’ ಎಂಬಂತಹುದೇ ವಾಕ್ಯ ವಡ್ಡಾರಾಧನೆಯಲ್ಲಿ ‘ನಾನ್ಯಥಾ ಜಿಲ ಭಾಷಿತಂ’ (೫೧) ಎಂಬಂತೆ ಪ್ರಯೋಗವಾಗಿದೆ.

ಬಹುಮಟ್ಟಿನ ನೋಂಪಿ ಕತೆಗಳ ಭಾಷೆ ಸರಳವೂ ಅಕ್ಲಿಷ್ಟವೂ ಆಗಿದೆ. ವಡ್ಡಾರಾಧನೆ ಅಥವಾ ಚಾವುಂಡರಾಯ ಪುರಾಣಗಳಷ್ಟು ನೋಂಪಿ ಕತೆಗಳು ವಿಮರ್ಶಕರ ಪರಿಶೀಲನೆಗೆ ಇನ್ನೂ ಸಮಗ್ರವಾಗಿ ಒಳಗಾಗಿಲ್ಲ. ಶೈಲಿ, ಕಲೆಗಾರಿಕೆ ಮೊದಲಾದ ಆಕರ್ಷಣೆಯ ಗುಣಗಳಲ್ಲಿ ವಡ್ಡಾರಾಧನೆಗೇ ಮೊದಲ ಮಣೆ. ಜನಪ್ರಿಯತೆಯಿಂದ ಮಾತ್ರ ನೋಂಪಿ ಸಾಹಿತ್ಯಕ್ಕೆ ಮನ್ನಣೆ ದೊರೆತಿದೆ. ಕತೆಗಾರಿಕೆಯಿಂದ ಆಧರಿಸಿ ಹೇಳುವುದಾದರೆ, ವಡ್ಡಾರಾಧನೆಯನ್ನು ಬಿಟ್ಟರೆ ಚಾವುಂಡರಾಯ ಪುರಾಣಕ್ಕಿಂತ ನೋಂಪಿ ಕತೆಗಳಿಗೇ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಾಗುತ್ತದೆ. ಏಕೆಂದರೆ ಚಾವುಂಡರಾಯ ಅಷ್ಟೇನೂ ಒಳ್ಳೆಯ ಕತೆಗಾರನಲ್ಲ. ಪುರಾಣವನ್ನು ಶಾಸ್ತ್ರಜಡನಾಗಿ ವರ್ಣಿಸುತ್ತಾನೆ. ನೋಂಪಿ ಕತೆಗಳಲ್ಲಿ ಕೆಲವಂತೂ ಚಾವುಂಡರಾಯ ಪುರಾಣದ ನೀರಸಗದ್ಯವನ್ನು ಮೆಟ್ಟಿ ನಿಲ್ಲುತ್ತದೆ.

ಒಂದು ಉದಾಹರಣೆಯಾಗಿ ಷೋಡಶ ಭಾವನೆ ನೋಂಪಿಯ ಕಥೆಯನ್ನು ಹೆಸರಿಸಬಹುದು. ಇದರಲ್ಲಿ ‘ಜೀವಂಧರ ತೀಥೇಶ್ವರ’ನ ಕಥೆ ಒಂದು ಸಂಕ್ಷಿಪ್ತ ತೀರ್ಥಂಕರ ಪುರಾಣದಂತಿದೆ, ಘನೀಕರಿಸಿಕೊಂಡು ಅಚ್ಚುಕಟ್ಟಾಗಿದೆ. ಇದರಲ್ಲಿ ಪಂಪನ ಆದಿಪುರಾಣದ ಪ್ರಭಾವವೂ ಕಂಡುಬರುತ್ತದೆ. ಸೀಮಂಕರನ ಪಟ್ಟಮಹಾದೇವಿ ರಾಜೀವ ಲೋಚನನಿಗೆ ಹದಿನಾರು ಸ್ವಪ್ನಗಳು, ಗರ್ಭಶೋಧನೆ, ಗರ್ಭಾವತರಣೋತ್ಸವ, ಜನ್ಮಾಭಿಷೇಕೋತ್ಸವ, ಪರಿನಿಷ್ಕ್ರಮಣ, ಕೈವಲ್ಯಬೋಧೋತ್ಸವ – ಇವೆಲ್ಲ ಅಡಕವಾಗಿದೆ. ಒಂದು ವೃತ್ತ ಹತ್ತು ಕಂದಪದ್ಯಗಳೂ ಬಂದು, ಸುಮಾರು ೧೬ ಪುಟಗಳ ಪ್ರಮಾಣದ ಈ ಕಥೆಗೆ ನೋಂಪಿ ಕಥೆಗಳ ಶ್ರೇಣಿಯಲ್ಲಿ ವಿಶಿಷ್ಟಸ್ಥಾನ ಕೊಡಬಹುದು.