ಜೈನ ಕಥಾವಾಙ್ಮಯ ಅವಿಚ್ಛಿನ್ನ ಮಾಣಿಕ್ಯಧಾರೆಗೆ ಹಲವು ಸೀಳುಗಳಿವೆ. ನೋಂಪಿ ಕಥೆಗಳ ಪಥ ಜೈನ ಕಥಾ ಸಾಹಿತ್ಯದ ದೊಡ್ಡ ಕವಲು. ಇದರಲ್ಲಿ ಇರುವುದಷ್ಟೂ ಶುದ್ಧಾಂಗವಾಗಿ ಆಪಾತತಃ ಜೈನವೆಂದು ತಿಳಿಯಬಾರದು. ಕಥೆಗಳಿಗೆ ತೊಡಿಸಿರುವ ಮೈಜೋಡು ದಿಟಕ್ಕೂ ಜೈನವೆ. ಆ ಕವಚವನ್ನು ಕಳಚಿದರೆ ಕಾಣುವುದು, ಚಿಪ್ಪನ್ನು ಒಡೆದು ಸಿಪ್ಪೆಯನ್ನು ಸುಲಿದರೆ ಉಳಿಯುವುದು ಜನಪದರ ಸಿರಿಸಂಪತ್ತು, ದೇಶೀಯ ಹೂರಣ, ಕಥೆಗಳ ಅನನ್ಯತೆ, ವಿಶಿಷ್ಟತೆ ಕೆನೆಕಟ್ಟಿರುವುದು ಧಾರ್ಮಿಕಾಚರಣೆಗಳ ವಿವರಗಳಿಗಿಂತ ಕಥಾನಕವು ಸುರಳಿ ಬಿಚುತ್ತ, ಅನಾವರಣ್ಣಗೊಳ್ಳುವ ರೀತಿಯಲ್ಲಿ, ಕಥೆಯನ್ನು ಕಲಾಕೃತಿಯಾಗಿಸುವ ಕುಸರಿ ಕಲೆಯಲ್ಲಿ. ಕನ್ನಡ ನೆಲದ ಸುಗ್ಗಿಯ ಈ ಪ್ರಕಾರ ಅತ್ಯಂತಿಕವಾಗಿ ಭಾರತೀಯವೆನ್ನುವಂತಹುದು. ದೇಸಿಯ ಹರಹು ಹಾಸುಹೊಕ್ಕು ಹಲವು ಕಥೆಗಳಲ್ಲಿದೆ. ದೇಶೀಯತೆಯ ಕಾಳಜಿಗೆ, ಧಾರ್ಮಿಕ ನಿಲವುಗಳಿಗೆ, ಪರಂಪರೆಯ ವಾರಸುದಾರಿಕೆಗೆ ನೋಂಪಿಯ ಕಥೆಗಳು ಹೆಗಲುಕೊಟ್ಟು ಇಳಿಸಿಕೊಂಡಿರುವುದ ಇದರ ಹೆಚ್ಚಳ. ಜೈನ ಸಾಂಸ್ಕೃತಿಕ ಜೀವನ ವಿಧಾನಾಂತರ್ಗತ ಅದ್ವೀತಿಯತೆಯನ್ನು ತನ್ನೊಳಗೆ ತುಂಬಿಕೊಂಡು ತುಳುಕಿರುವ ಉಪಜ್ಞತೆಯನ್ನು ಹೆಚ್ಚಿನ ಕಥೆಗಳಲ್ಲಿ ಕಾಣುತ್ತೇವೆ.

ನೋಂಪಿಗಳ ನಿರೂಪಣೆಯ ನೆಯ್ಗೆಗೆ ಕನ್ನಡದ ಸೊಗಡಿನ ಬಣ್ಣ ಬಳಿದು ಕೂತೂಹಲಕಾರಿ ನೆಲೆಗಳಿಗೆ ಸಂಕಥನವನ್ನು ಒಯ್ಯುವ ಕಥೆಗಳೂ ಇವೆ. ಒಟ್ಟಾರೆ ಕಥನ ಸಾಹಿತ್ಯ ವಲಯಕ್ಕೇನೆ ಸತ್ವಶಾಲಿ ಸಾಂಸ್ಕೃತಿಕ ಮತ್ತು ಸಮಾಜೊ – ಧಾರ್ಮಿಕ ಪರೀಕ್ಷ್ಯೆವನ್ನು ಕಟ್ಟಬಲ್ಲುದು. ಈ ಕಥೆಗಳ ಆಳನಿರಾಳ ಮಗ್ಗಲು ಬೇರುಗಳ ನಿರಿಗೆಗಳು ಬೆರಗು ತರುತ್ತವೆ.

ನೋಂಪಿಗಳ ಕಥೆಗಳನ್ನು ವಡ್ಡಾರಾಧನೆಯ ಕಥೆಗಳೊಂದಿಗೆ ತುಲನಾತ್ಮಕವಾಗಿ ತೂಗಿ ಪ್ರೌಢಪ್ರಬಂಧ ಬರೆಯುಷ್ಟು ಗ್ರಾಸವಿದೆ. ಜೈನಕಥಾಗುಚ್ಛ ಹಾಲು ಕಟ್ಟಿರುವುದು ಈ ಕಥನ ಮಾದರಿಯ ಚೌಕಟ್ಟಿನೊಳಗೆ. ಇವೆರಡು ಪ್ರಕಾರಗಳು ಜೈನ ಜನಪದರ ಸಾಹಿತ್ಯದ ಕಣಜಗಳು. ಜನಪದೀಯ ಆಶಯ ಮತ್ತು ಮಾದರಿಗಳು ವಡ್ಡಾರಾಧನೆಯಲ್ಲೂ ಹಾಸುಹೊಕ್ಕಾಗಿ ಸೇರ್ಪಡೆಯಾಗಿರುವುದು ದಿಟ (ನಾಗರಾಜಯ್ಯ, ಹಂಪ : ವಡ್ಡಾರಾಧನೆ ಮತ್ತು ಜಾನಪದ : ಬೊಂಗಳೂರು : ೧೯೯೭). ಆದರೆ ವಡ್ಡಾರಾಧನೆ ಪ್ರಧಾನವಾಗಿ ಶಿಷ್ಟಪದ ಸ್ವರೂಪದ ಬಂಧ ಮತ್ತು ರಚನೆಗೆ ಹೊರಳಿದೆ. ರಾಚನಿಕವಾಗಿ ನೋಂಪಿಯ ಕಥೆಗಳಲ್ಲಿ ಶಿಷ್ಟಪದ ಪರಿಷ್ಕರಣ ಗೌಣನೆಲೆಗೆ ಸರಿದಿದೆ. ಜಾನಪದ ಸೊಗಡು ಹಸಿಹಸಿಯಾಗಿ ಘಾಟು ಹೊಡೆಯುತ್ತದೆ.

ಸಾಮ್ಯಾಂಶವೆಂದರೆ ಪ್ರತಿ ಕಥೆಯಲ್ಲೂ ಆರಂಭ, ಪೀಠಿಕೆ, ಬೆಳವಣಿಗೆ, ಮುಗಿತಾಯ – ಇವು ನಿರ್ದಿಷ್ಟ ವ್ಯವಸ್ಥೆಯ ಕ್ರಮದಲ್ಲಿ ಎಳೆದ ಗೆರೆಯ ಮೇಲೆ ಚಲಿಸುತ್ತದೆ. ಆ ಒಟ್ಟು ಚೌಕಟ್ಟನ್ನು ಕದಲಿಸದೆ ಅದರೊಳಗಡಯೇ ಆಯಾ ಕಥೆಗಾರರು ಕಸರತ್ತು ಮಾಡುತ್ತಾರೆ. ಒಂದೇ ವಸ್ತು ಇರುವ ಕಥೆಯನ್ನು ಇಬ್ಬರೊ ಮೂವರೊ ಬರೆದಾಗಲೂ ಆಮೂಲಗ್ರವಾಗಿ ಬದಲಾವಣೆ ಇರುವುದಿಲ್ಲ ಎಂಬುದು ಒಂದು ದೂರನಿಯಂತ್ರಣದಿಂದ ಕತೆಗಳು ಆಕೃತಿಗೊಳ್ಳುತ್ತವೆಂಬುದನ್ನು ಸೂಚಿಸುತ್ತದೆ. ಮೂಲ ಆಶಯದೊಂದಿಗೆ ಸಂಕಥನದ ಆಕೃತಿಯನ್ನೂ ಕಾಪಾಡುತ್ತ ತನ್ನ ತನದ ಛಾಪನ್ನು ಕಥೆಗಾರ ಒತ್ತಿರುತ್ತಾನೆ.

ರಾಚನಿಕ ವರ್ಗೀಕರಣ

ಜೈನಕಥಾ ಸಂಪ್ರದಾಯದಲ್ಲಿ ಪ್ರಮುಖ ಹಾಗೂ ಪ್ರತ್ಯೇಕ ವಿಭಾಗವಾಗಿರುವ ನೋಂಪಿ ಕಥಾಶರೀರದ ವಿನ್ಯಾಸವನ್ನು ರಾಚನಿಕ ವಿಶ್ಲೇಷಣೆ ಮಾಡಿ ನೋಡಿದರೆ ಆ ಆಕೃತಿಯ ನಿರಿಗೆಗಳಲ್ಲಿ ನಾಲ್ಕು ಮುಖ್ಯ ಮಡಿಕೆಗಳು ಕಂಡುಬರುತ್ತವೆ: ಆರಂಭ, ಕಥಾಭಾಗ, ಆಚರಣೆಯ ವಿಧಾನ, ಅಂತ್ಯ. ಕಥೆಗಳು ವಿಂಗಡಿತವಾಗಿರುವ ಈ ಹಂತಗಳನ್ನು ಕೆಲವು ಮಾದರಿಗಳನ್ನು ಉದಾಹರಿಸಿ ಬಿಡಿಸುವುದರಿಂದ ಇದು ಇನ್ನುಷ್ಟು ನಿರುಕಾಗಬಲ್ಲುದು.

ಕಥಾಮುಖ : ಕಥೆಯ ಪ್ರಾರಂಭ

ಕಥೆಯ ಆರಂಭದಲ್ಲಿ ಕನ್ನಡ ಅಥವಾ ಸಂಸ್ಕೃತದಲ್ಲಿ ರಚಿತವಾದ ಜಿನಸ್ತುತಿ ಪದ್ಯವಿರುತ್ತದೆ;

ಅ. ಶ್ರೀ ವೀರ ವರ್ಧಮಾನ ಜಿ
ನಾವಳಿಗೊಲಿದರೆಗಿ ಭಕ್ತಿಯಿಂ ವಿರಚಿಸುವೆಂ
ಭೂವಳಯದೊಳತಿಶಯ ಶೋ
ಭೌವಹ ಸೌಭಾಗ್ಯದೊಂದು ನೋಂಪಿಯ ಕಥೆಯಂ ||

          ಇ. ಪುರುಜಿನರ ಚರಣಕಮಲ
ಕ್ಕುರುಮುದದಿಂದಱಗಿ ಸಪ್ತ ಪರಮಸ್ಥಾನಂ
ಬರಮೈದಿಸುವೀ ನೋಂಪಿಯ
ವರಕಥೆಯಂ ವಿರಚಿಪೆಂ ನಾಂಮಹೋತ್ಸವದಿಂ

          ಉ. ಪಾಂತು ಶ್ರೀ ಪಾದಪದ್ಮಾನಿ ಪಂಚಾನಾಂ ಪರಮೇಷ್ಠಿನಾಂ
ಲಾಲಿತಾನಿ ಸುರಾಧೀಶ ಚೂಡಾವಣಿ ಮರೀಚೆಭಿಃ ||
(ನಂದೀಶ್ವರದ ನೋಂಪಿ)

          ಎ. ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘ ಲಾಂಛನಂ
ಜೀಯಾತ್ ತ್ರೈಲೋಕ್ಯನಾಧಸ್ಯ ಶಾಸನಂ ಜಿನಶಾಸನಂ ||
(ಶುಕ್ರವಾರದ ನೋಂಪಿ)

ಪ್ರಾರಂಭದಲ್ಲಿ ಹೀಗೆ ಒಂದೊ ಎರಡೂ ಜಿನಸ್ತುತಿಯ (ಕಂದ) ಪದ್ಯಗಳನ್ನು ಬಳಸುವುದು ವಾಡಿಕೆ. ಸಹಸ್ರನಾಮದ ನೋಂಪಿಯ ಕತೆಯನ್ನು ಆರು ಕಂದ ಪದ್ಯಗಳಿಂದ ಆರಂಭಿಸಲಾಗಿದೆ. ಅಪರೂಪಕ್ಕೊಮ್ಮೆ ವೃತ್ತ ಪದ್ಯದಿಂದಲೂ ನಿರೂಪಣೆಗೆ ತೊಡಗುವುದುಂಟು; ಉಪಸರ್ಗ ನಿವಾರಣ ನೋಂಪಿಯ ಕಥೆಯು ಸ್ರಗ್ಧರೆ ವೃತ್ತವೊಂದರಿಂದ ಅನಾವರಣವಾಗಿ ಅನಂತರ ಒಂದು ಕಂದ ಪದ್ಯವೂ ಬಳಕೆಯಾಗಿದೆ. ಪ್ರತಿಯೊಂದು ಕಥೆಯೂ ಪದ್ಯದಿಂದಲೇ ಆರಂಭವಾಗಬೇಕೆಂದು ಅನುಲ್ಲಂಘನೀಯ ನಿಯಮವೇನಿಲ್ಲ; ಸಮಾಧಿವಿಧಿ ನೋಂಪಿ, ದುರ್ಗತಿ ನಿವಾರಣೆ ನೋಂಪಿ ಮುಂತಾದವು ಪದ್ಯರಹಿತ ನೇರ ಆರಂಭವಿರುವ ಕಥೆಗಳು. ಇಡೀ ಕಥೆ ಪದ್ಯಗಳಿಂದಲೇ ಕೂಡಿರುವುದೂ ಅಥವಾ ಗದ್ಯದಲ್ಲಿಯೇ ರಚಿತವಾಗಿರುವುದೂ ಉಂಟು. ಆ ವಿವರಗಳನ್ನು ಛಂದಸ್ಸಿನ ದೃಷ್ಟಿಯಿಂದ ಪೃತಕ್ಕಾಗಿ ಪರಿಭಾವಿಸಬೇಕು. ಅನಂತರ ಜಂಬೂದ್ವೀಪದ ಭರತಕ್ಷೇತ್ರದ ಒಂದು ದೇಶದ ರಾಜ ರಾಣಿ ಮಂತ್ರಿ ಶ್ರೇಷ್ಠಿಯರ ವಿಚಾರಬರುತ್ತದೆ.

ಕಥಾಭಾಗ

ಪ್ರತಿಯೊಂದು ನೋಂಪಿಗೂ ಒಂದು ಪ್ರಾಮಾಣ್ಯವನ್ನು ಸ್ಥಾಪಿಸಲಾಗುತ್ತದೆ. ಅದಕ್ಕಾಗಿ ಪವಿತ್ರವೂ ಗಂಭೀರವೂ ಆದ ಪರಿವೇಶ ಪ್ರವೇಶವನ್ನು ಕಲ್ಪಿಸಲಾಗುತ್ತದೆ. ಸಾಮಾನ್ಯವಾಗಿ ವಿಪುಲಾಚಲ (ವಿಪಲಗಿರಿ, ವಿಪುಲಾದ್ರಿ) ಬೆಟ್ಟದಲ್ಲಿ ಅಂತಿಮ ತೀರ್ಥಂಕರರಾದ ವರ್ಧಮಾನ ಮಹಾವೀರರು ಸಮವಸರಣದಲ್ಲಿ ವಿರಾಜಮಾನರಾಗಿರುವುದನ್ನು ಪ್ರಸ್ತಾಪಿಸಲಾಗುತ್ತದೆ. ತೀರ್ಥಂಕರರಲ್ಲದೆ ಬೇರೆ ಮುನಿಗಳ ಆಗಮನದ ಸುದ್ದಿಯೂ ಇರಬಹುದು. ಜಿನರ/ಋಷಿಮುನಿಗಳ ಆಗಮನದ ಶುಭವಾರ್ತೆಯನ್ನು ಋಷಿನಿವೇದಕನು ಮೊದಲು ನೋಡಿ ಕೂಡಲೆ ತನ್ನ ರಾಜನಿಗೆ ತಿಳಿಸುತ್ತಾನೆ. ಇಷ್ಟು ಉತ್ಕೃಷ್ಟ ಸುದ್ದಿಯನ್ನು ತಂದ ಕಾರಣಕ್ಕಾಗಿ ಪ್ರಭುವಾದವನು ವಾರ್ತಾಹರನಿಗೆ ಉಡುಗೊರೆ (ಅಂಗಚಿತ್ತ) ಕೊಟ್ಟು ಕಳಿಸುತ್ತಾನೆ. ಅನಂತರ ಸಿಂಹಾಸನದಿಂದ ಎದ್ದು, ತಪಸ್ವಿಗಳಿರುವ ಕಡೆಗೆ ಮುಖ ಮಾಡಿ ಏಳು ಹೆಜ್ಜೆಗಳನ್ನಿಟ್ಟು ನಮಸ್ಕರಿಸುತ್ತಾನೆ. ತನ್ನ ಪಟ್ಟದಾನೆಯನ್ನೇರಿ (ವಿಜಯಗಜೇಂದ್ರ) ಸಪರಿವಾರನಾಗಿ ಋಷಿಗಳಿರುವ ಸ್ಥಳ ತಲುಪಿ, ದೂರದಲ್ಲಿ ವಾಹನ ವೈಭವಗಳನ್ನು ಬಿಟ್ಟು, ಕಾಲು ನಡಿಗೆಯಲ್ಲಿ ಸಮೀಪಿಸಿ, ಮೂರು ಸುತ್ತು ಬಂದು ಸಪತ್ನೀಕನಾಗಿ ನಮಸ್ಕರಿಸುತ್ತಾನೆ. ತೀರ ಹತ್ತಿರವಾಗಲಿ ತೀರ ದೂರವಾಗಲಿ ಅಲ್ಲದಂತೆ ಕ್ರಮವರಿತು ಕುಳಿತು ಧರ್ಮಶ್ರವಣವನ್ನು ಪಡೆಯುತ್ತಾನೆ. ಆಮೇಲೆ ಗಂಡ ಇಲ್ಲವೇ ಹೆಂಡತಿಯು ಮುನಿಗಳನ್ನು ಕುರಿತು ‘ಅನಂತ ಸುಖಕ್ಕೆ ಕಾರಣಾವಾಗುವ ಯಾವುದಾದರೂ ಒಂದು ನೋಂಪಿಯನ್ನು ಬೆಸಸಿರಿ’ ಎಂದು ಬೇಡುತ್ತಾರೆ. ಆಗ ಅವರು ನೋಂಪಿಯನ್ನೂ ಅದನ್ನು ಈ ಹಿಂದೆ ಆಚರಿಸಿ ಬಹುಭಾಗ್ಯಕ್ಕೆ ಪ್ರಾತ್ರರಾದ ಉಪಾಸಕರ ಕಥೆಗಳನ್ನು ಹೇಳುವರು.

ನೋಂಪಿ ಕಥೆಗಳು ಮಹಿಮಾವಂತರಾದ ಋಷಿಗಳಿಂದ ಪ್ರಣೀತವೆಂಬ ಹೇಳಿಕೆಯಿಂದ ಕಥೆಗಳಿಗೆ ಪಾವಿತ್ರ್ಯ, ಗೌರವಾದರ ಭಾವನೆಗಳನ್ನು ದೊರಕಿಸುವುದು ಮೂಲ ಉದ್ದೇಶ. ಇದರಲ್ಲಿ ಎರಡು ತುದಿಗಳಿವೆ : ಕೇಳುಗ ಮತ್ತು ಹೇಳುಗ. ಆದರೆ ವಾಸ್ತವವಾಗಿ ಇವರಿಬ್ಬರೂ ವ್ರತಾಚರಣೆಯಲ್ಲಿ ಸಕ್ರಿಯಾತ್ಮಕ ಪಾತ್ರಧಾರಿಗಳಲ್ಲ. ತಟಸ್ಥ ಭೂಮಿಕೆಯಿಂದ ವ್ರತಕಥೆಯನ್ನು ಕೇಳುವವರೂ ಹೇಳುವವರೂ ಆಗುತ್ತಾರೆ. ಹಲವೊಮ್ಮೆ ಕಥೆ ಆಲಿಸಿದ ಶ್ರೋತೃಗಳು ವ್ರತ ಸ್ವೀಕರಿಸಿ ನೋಂಪಿಯನ್ನು ಆಚರಿಸುವುದುಂಟು.

ಹೆಚ್ಚಿನ ನೋಂಪಿಗಳಲ್ಲಿ ಹೀಗೆ ಕಥಾಮುಖಕ್ಕೂ ಕಥಾಭಾಗಕ್ಕೂ ನಾಂದಿಯೆಂಬಂತೆ ಪ್ರಸ್ತಾಪಗೊಳ್ಳುವವರು ಶ್ರೇಣಿಕ ಮತ್ತು ಚೇಳಿನಿ ಆಗಿರುತ್ತಾರೆ:

ಅಂತಾ ಶ್ರೇಣಿಕ ಮಹಾರಾಜಂ ಚೇಳನಿ ಮಹಾದೇವಿ ಸಹಿತಮೊಂದು ದಿವಸಂವೊಡ್ದೋಲಗಂಗೊಟ್ಟಿರಲಾ ಪ್ರಸ್ಥಾವದೊಳು ವನಪಾಲಕಂ ಬಂದು ಇಂತೆಂದಂ ಎಲೆ ಮಹಾರಾಜಾ ತ್ರಿಭುವನ ಜನಮಾಕೀರ್ಣ್ನ ಸಭಾಮಂಡಲ ಮಂಡಿತ ಶ್ರೀ ವೀರವರ್ದ್ಧಮಾನ ಸ್ವಾಮಿಯ ಸಮವಸರಣಂ ಬಂದು ನಿಂದು ವಿಪುಲಾಚಲ ಮಸ್ತಕಾಲಂಕೃತಮಾದುದೆನೆ ಸಿಂಹಾಸನದಿಂದೆದ್ದು ಆ ದೆಶೆಗೆ ಏಳಡಿಯಂ ನಡೆದು ಬಂದು ಸಾಷ್ಟಾಂಗ ಪ್ರಣತನಾಗಿ ಪೊಸಗೆ ತಂದಂಗೆ ಅಂಗಚಿತ್ತಮನಿತ್ತು ಆನಂದ ಭೇರಿಯಂ ಪೊಯಿಸಿ ಪರಿಜನ ಪುರಜನ ಅಂತಃಪುರಜನ ಸಹಿತಮಾಗಿ.

ಜಿನ ಪತಿಯ ನೋಳ್ಪ ಭರದಿಂ
ದನುಮಿಷಪತಿಯೆಂತುಟಂತು ಚೇಳನಿ ಸಹಿತಂ
ಜನಪತಿ ವಿಜಯಗಜೇಂದ್ರಮ
ನನುನಯದಿಂದೇಱೆ ಲೀಲೆಯಿಂ ಪೊಱಮಟ್ಟಂ ||

ಅಂತು ಪೊಱಮಟ್ಟ ವಿಪುಲಾಚಲದ ಬಹಿರ್ವನಮನೈದಿ ದುರಾಂತರದಿಂ ವಾಹನದಿಂದಿಳಿದು ಚೇಳನಿ ಸಹಿತಂ ಸಮವಸರಣಮಂ ಪೊಕ್ಕು ಗಂಧಾಕಾಟಿಯಂ ತ್ರಿಃ ಪ್ರದಕ್ಷಿಣಂಗೆಯ್ದು ಸಾಷ್ಟಾಂಗ ಪ್ರಣುತನಾಗಿ ತ್ರಿಭುವನ ಸ್ವಾಮಿಯು ಶ್ರೀ ವೀರವರ್ದ್ಧಮಾನ ಸ್ವಾಮಿಯಪ್ಪ ತೀರ್ಥನಾಢಣಂ ಅಭಿಮುಖವಾಗಿ ದ್ವಿವ್ಯಾರ್ಚ್ಚನೆಗಳಿಂದರ್ಚ್ಚಿಸಿ ಕರಕಮಲಂಗಳಂ ಮುಗಿದು

ಜಯ ವಿಶ್ವ ಜಗದ್ಭಂಧುವೆ
ಜಯಜಯ ತ್ರೈಲೋಕ್ಯನಾಥ ಪೂಜಿತ ಚರಣಾ
ಜಯ ವಿಶ್ವ ಗುಣಾಧಾರ
ಜಯಜಯ ಶಿವಕಾಮಿನಿ ಮೋಕ್ಷ ಸುಖ ಕಾರಣ ||

ಯಂದನೇಕ ಸ್ತುತಿ ಶತಸಹಸ್ರಂಗಳಿಂ ಸ್ತುತಿಯಿಸಿ ಮುನುಷ್ಯ ಕೋಷ್ಠದೊಳ್ಕುರ್ದ್ದು ಧರ್ಮ ಶ್ರವಣಾನಂತರದೊಳು ಗೌತಮಾದಿ ಯತಿ ಸಮುದಾಯ ಮಂ ವಂದಿಸಿ ಶ್ರೇಣಿಕ ಮಹಾಮಂಡಲೇಶ್ವರಂ ಕರಕಮಲಂಗಳಂ ಮುಗಿದು ಗೌತಮಗಣಧರ ಸ್ವಾಮಿಗಿತೆಂದಂ (ಷೋಡಶಭಾವನೆಯ ನೋಂಪಿ).

ಆಚರಣೆಯ ವಿಧಾನ

ನೋಂಪಿಯನ್ನು ಮಾಡುವವರಿಗೆ ಕೊಡುವ ಮಾಹಿತಿಗಳು ಮತ್ತು ಸೂಚನೆಗಳು ಪ್ರತಿ ಕಥೆಯಲ್ಲೂ ತಪ್ಪದೆ ಬರುತ್ತವೆ. ಗಣಧರರು/ಋಷಿ ಮುನಿಗಳು ಆಯಾ ನೋಂಪಿಯನ್ನು ಆಚರಿಸುವ ಧಾರ್ಮಿಕ ವಿಧಿವಿಧಾನಗಳನ್ನು ಹೇಳುವರು. ನಿರ್ದಿಷ್ಟ ನೋಂಪಿಗಳನ್ನು ವರ್ಷದ ಯಾವ ಕಾಲದಲ್ಲಿ, ಯಾವ ಕ್ರಮದಲ್ಲಿ, ಯಾವ ಪದಾರ್ಥಗಳಿಂದ ಮಾಡಬೇಕೆಂಬುದನ್ನು ವಿವರಿಸುವರು. ನೋಂಪಿಯನ್ನು ಪಾಲಿಸುವವರು ಉಪವಾಸಾದಿಗಳನ್ನು ಕಟ್ಟು ನಿಟ್ಟಾಗಿ ಆನುಸರಿಸುವುದಲ್ಲದೆ ಪೂಜಾದಿಗಳ ಶಾಸ್ತ್ರ ವಿಧಿಯನ್ನು ಈ ಭಾಗದಲ್ಲಿ ಕಾಣುತ್ತೇವೆ.

ನೋಂಪಿಯ ಉಪದೇಶಕನ ಪಾತ್ರ ಇದರಲ್ಲೂ ಉಂಟು. ಈತ ಸಾದ್ಯಂತವಾಗಿ ನೋಂಪಿಯ ಚಾಲಕ, ಪ್ರೇರಕ, ಬೋಧಕ, ಸೂಚಕ, ದೂರ ನಿಯಂತ್ರಕ ಹಾಗೂ ಆಪ್ತ ಮಾರ್ಗದರ್ಶಕ. ಜೈನಾಗಮ ಜ್ಞಾನಿಯಾದ ಈ ಉಪದೇಶಕನಿಗೆ ನೋಂಪಿಯ ಸಮಸ್ತವೂ ಕರತಲಾಮಲಕ. ಈತ ಪರಂಪರೆಯನ್ನೂ ಬಲ್ಲ, ವರ್ತಮಾನದಲ್ಲಿ ಆಚರಿಸಬೇಕಾದ ವಿಧಾನವನ್ನೂ ತಿಳಿದಿದ್ದಾನೆ, ನೋಂಪಿಯನ್ನು ನಡೆಸಿದ್ದರಿಂದ ಸಿಗುವ ಪಲಪರಿಣಾಮವನ್ನೂ ಆರಿತಿದ್ದಾನೆ. ಅದರಿಂದ ಉಪದೇಶಕ ಮಹಾಶಾಯನು ನೋಂಪಿಯ ಪೌರಾಣಿಕ ಹಿನ್ನಲೆ, ಸಾಮಾಜಿಕ ಅರಿವು ಚಾರಿತ್ರಿಕ ಮಹತ್ವ – ಇವೆಲ್ಲವನ್ನೂ ಮನಗಾಣಿಸುತ್ತಾನೆ.

ಅಂತ್ಯ ; ನೋಂಪಿಯ ಫಲಶ್ರುತಿ

ಆಯಾ ನೋಂಪಿಯನ್ನು ಆಚರಿಸಿದ್ದರಿಂದ ಅಂತಿಮವಾಗಿ ಸಿಗುವ ಸುಖ ಫಲವನ್ನೂ ತಿಳಿಸುವರು. ಕಥಾ ಚೌಕಟ್ಟಿನ ಮಾದರಿಯಲ್ಲಿಯೇ ಇದೂ ಅಳವಟ್ಟಿದೆ. ನೋಂಪಿಯ ವಿಚಾರದಲ್ಲಿ ಆರಂಭದಲ್ಲಿ ಪ್ರಶ್ನೆ ಕೇಳಿದವರೆ ‘ಈ ನೋಂಪಿಯನ್ನು ಹಿಂದೆ ಯಾರಾದರೂ ಮಾಡಿದ್ದುಂಟೆ, ಅವರಿಗೆ ಏನಾಯಿತು’ ಎಂಬಂತೆ ಕೇಳುವರೆಂಬುದನ್ನು ಕಥಾಭಾಗದಲ್ಲಿ ಪ್ರಸ್ತಾಪಿಸಿದೆ. ನೋಂಪಿ ಕಥಾನಿರೂಪಕರಾದ ಉಪದೇಶಗಳು ಪೂರ್ವಕಾಲದಲ್ಲಿ ಆಯಾ ನೋಂಪಿಯನ್ನು ಆಚರಿಸಿದವರು ಯಾರೆಂಬುದನ್ನು ತಿಳಿಸಿರುತ್ತಾರೆ ಮತ್ತು ಹಾಗೆ ನೋಂಪಿಯನ್ನು ಮಾಡಿದ್ದರಿಂದ ಅವರು ಪಡೆದ ಮಹಿಮಾತಿಶಯಗಳನ್ನೂ ನಿರೂಪಿಸುವರು

. ಯೀಕಥೆಯಂ ಕೇಳಿ ಮುದಮಂ ತಾಳಿದವರುಂ
ನಾಕಾದಿಸುಖವ ಪಡೆವರು
ಲೋಕೈಕರುಮೆನಿಸಿ ಕಡೆಗೆ
ಮೋಕ್ಷವ ಪಡೆವರುಮಿಂತೀ ಶುಕ್ರವಾರದ ನೋಂಪಿಯಂ ||

. ಈ ನೋಂಪಿಯಂ ಅನಂತವೀರ್ಯ್ಯರ್ ಅಪರಾಜಿತರ್
ನೋಂತು ಚಕ್ರವರ್ತ್ತಿಯ ಪದವಿಯಂ ಪಡೆದರು
ವಿಜಯಕುಮಾರಂ ನೋಂತು ಚಕ್ರವರ್ತ್ತಿಗೆ ಸೇನಾಪತಿ
ಪದವಿಯಂ ಪಡೆದನು
ಜರಾಸಂಧಂ ನೋಂತು ಚಕ್ರವರ್ತಿಯ ಪದವಿಯಂ ಪಡೆದನು
ಮೇಘರಥಂ ನೋಂತು ಆವಧಿಜ್ಞಾನಮಂ ಪಡೆದನು
ಸ್ತ್ರೀಯರು ಹೇಸಿ ತಂನ ಪೊಲ್ಲದಿರ್ದ್ಧಡೆ ಪ್ರದ್ಯುಮ್ನ ಕುಮಾರಂ
ನೋಂತು ಕಾಮದೇವನಾದನು
ರುಗ್ಮಿಣಿ ನೋಂತು ವಾಸುದೇವಂಗೆ ಮದುವೆಯಾದಳು
ಅನೇಕ ಸ್ತ್ರೀಯರು ನೋಂತು ಯಿಂದ್ರಾದಿಗಳ್ಗೆ ದೇವಿಯರಾದರು
(ನಂದೀಶ್ವರದ ನೋಂಪಿ)

ಅಂತ್ಯದ ಘಟ್ಟದಲ್ಲಿ ಎರಡು ಹಂತಗಳಿವೆ : ಒಂದು, ನೋಂಪಿಯನ್ನು ವಿಸರ್ಜಿಸುವುದು; ಇನ್ನೊಂದು ಫಲಶ್ರುತಿ. ವಿಸರ್ಜನೆಗೆ ಪರ್ಯಾಯ ಶಬ್ಧ ಉಜ್ಜವಣೆ (ಉದ್ಯಾಪನ) ಎಂದರೆ ಕೈಗೊಂಡ ವ್ರತವನ್ನು ಕ್ರಮವಾಗಿ ಪಾಲಿಸಿ ಪೂರೈಸುವ ಶಾಸ್ತ್ರೋಕ್ತವಾದ ವಿಧಾನ. ಫಲ ಬಾಗಿನಗಳನ್ನು ಕೊಡುವುದು, ಕಥೆ ಹೇಳಿದವರಿಗೂ ಓದಿದವರಿಗೂ ಗೌರಿವಿಸುವುದು – ಇವೆಲ್ಲ ಇದರ ಭಾಗವಾಗಿ ಬರುತ್ತದೆ. ಮುನಿ – ಕಂತಿಯರಿಗೂ, ಶ್ರಾವ – ಶ್ರಾವಿಕೆಯರಿಗೂ, ಬಸದಿಗಳಿಗೂ ದಾನಾದಿಗಳನ್ನಿತ್ತು ನೋಂಪಿಯನ್ನು ಉಜ್ಜವಿಸುವುದು ಉತ್ತಮವೆನ್ನಲಾಗಿದೆ :

  • ಅನಾಥ ಜನಂಗಳ್ಗೆ ಅಂನದಾನ ಸುವರ್ನದಾನಮಂ, ಮಾಡಿ (ಅಹಿಗಹಿಲ ನೋಂಪಿ)
  • ಪುಸ್ತಕ ಶ್ರುತಪಾವಡೆ ಪಟ್ಟೆನೂಲು ಠವಣೆಕೋಲು ಸಹಿತ ಶ್ರುತಪೂಜೆಯಂ ಮಾಡುವುದು ಋಷಿಯರ್ಗ್ಗೆ ತಟ್ಟು ಕುಂಚ ಕಮಂಡಲುಮುಂ ಕೊಡುವುದು ಅಜ್ಜಿಯರ್ಗ್ಗೆ ವುಡಕೊಡುವುದು ಪಂಡಿತರ್ಗ್ಗಂ ಶ್ರಾವಕರ್ಗ್ಗಂ ಆಹಾರ ದಾನಮಂ (ಶಕ್ತಿಗೆ ತಕ್ಕಂತು)ಮಾಡುವುದು (ಹಿಡಿಯಕ್ಕಿಯ ನೋಂಪಿ)
  • ಯಥಾಶಕ್ತಿಯಿಂ ದಾನಮಂ ಮಾಳ್ಪುದು ಮತ್ತಂ ಬಡವರೊಡಯರೆಂನದೆ ಯಥಾ ಶಕ್ತಿಯಿಂ ನೋಂಪುದು (ಕೈವಲ್ಯ ಸುಖಾಷ್ಟಮೀ ನೋಂಪಿ)
  • ಬಡವನುಪವಾಸಮಂ ಮಾಡಿ ಪೂಜೆಗನುಕೂಲನಪ್ಪುದು, ಮಧ್ಯ ಮಶ್ರೀಯನುಳ್ಳವಂ ಅಭಿಷೇಕ ಅಷ್ಟವಿಧಾರ್ಚನೆಯಂ ಮಾಳ್ಪುದು, ಅಧಿಕಶ್ರೀಯನುಳ್ಳವನಭಿಷೇಕ ಅಷ್ಟವಿಧಾರ್ಚನೆ ಆಹಾರ ಅಭಯ ಭೈಷಜ್ಯ ಶಾಸ್ತ್ರ ದಾನಮಂ ಮಾಳ್ಪುದು ಉಪಕರಣಗಳು ಮಾಡಿಸಿಕೊಡುವುದು (ಕರ್ಮಹರಾಷ್ಟಮಿ ನೋಂಪಿ)

ನೋಂಪಿಯನ್ನು ಆಚರಿಸುವವರಿಗೆ ಆಕರ್ಷಣೆ ಹಾಗೂ ಪ್ರೇರಣೆ ತರಲು ಇದೊಂದು ಸಿದ್ಧ ಚೌಕಟ್ಟು, ಈ ನಾಲ್ಕು ಸ್ತರಗಳ ಸರ್ವೇ ಸಾಧಾರಾಣ ಚೌಕಟ್ಟನ್ನು ಇಟ್ಟುಕೊಂಡು ನೋಂಪಿ ಕಥೆ ಮೈಪಡೆಯುತ್ತದೆ. ಪ್ರತಿಯೊಂದು ಕಥೆಗೂ ಕೆಲವು ಸೇರ್ಪಡೆಗಳಿಂದ ಇಲ್ಲವೆ ವ್ಯವಕಲನದಿಂದ ಹಿಗ್ಗುವ -ಕುಗ್ಗುವ ಸ್ಥಿತಿ ಸ್ಥಾಪಕ ಸಾಧ್ಯತೆ ಇರುವುದರಿಂದ ಒಂದೇ ಕಥೆಗೆ ವಿಭಿನ್ನ ಗಾತ್ರ ಆಕಾರಗಳ ಪಾಠ ಪ್ರಭೇಧಕ್ಕೆ ಎಡೆಯುಂಟಾಗಿದೆ. ಎಲ್ಲ ಕಥೆಗಳ ಒಡಲಲ್ಲು ಈ ಸಂಕೋಚನ – ವಿಸ್ತರಣದ ಜೀವಕಣಗಳು ಇರುವುದರಿಂದ ಆಯಾ ಕಥೆಯನ್ನು ಉಲ್ಲಾಸ ಶೀಲತೆಯಿಂದ ಬೆಳೆಸುವ ಪುನಶ್ಚೈತನ್ಯ ಶಕ್ತಿ ಕಥೆಗಾರನಲ್ಲಿ ಇರಬೇಕಾಗುತ್ತದೆ. ಕೆಲವು ಕಥೆಗಳು ಮ್ಲಾನಗೊಂಡು ಮುದುಡಲೂ ಇಲ್ಲವೇ ಮರುಹುಟ್ಟು ಪಡೆದು ಅರಳಲೂ ಕವಿಯ ಸೃಷ್ಟಿ ಸಾಮರ್ಥ್ಯದ ಮಿತಿ ಅಥವಾ ವ್ಯಾಪ್ತಿ ಪ್ರಧಾನ ಕಾರಣವೆಂಬುದನ್ನು ವಿಮರ್ಶಿಸಿ ಗುರುತಿಸಬಹುದು.

ನೋಂಪಿಯ ಕಥೆಗಳದು ವಿಶಾಲಲೋಕ. ನೂರಾರು ನೋಂಪಿಯ ಕಥೆಗಳ ಈ ಪ್ರಪಂಚ ಅವಗಣನೆಗೆ ತುತ್ತಾಗಿದೆ. ಪುನರಾವರ್ತನೆಗೊಳ್ಳುವ ಕಥೆಗಳ ಆಶಯ, ಅದಕ್ಕಿರುವ ತಾತ್ವಿಕ ನೆಲೆಗಟ್ಟನ್ನು ಸೀಳಿ, ಧಾರ್ಮಿಕ ಚೌಕಟ್ಟನ್ನು ಸುಲಿದು, ಸಾಂಸ್ಕೃತಿಕ ಹಾಸನ್ನು ಬಿಡಿಸಿಟ್ಟರೆ ಅಂದಂದಿನ ಸಾಮಾಜಿಕತೆಯ ನೋಟ ಸಿಗುತ್ತದೆ. ಇದು ಕೆಲವು ಖಚಿತವಾದ ತೀರ್ಮಾನಗಳ ಕಡೆಗೆ ನಡೆಯುವುದಕ್ಕೆ ನೆರವಾಗುತ್ತದೆ. ಕಥೆಗಳ ಒಟ್ಟು ವಿಶಿಷ್ಟತೆಯನ್ನು ಕುರಿತು ಹೊಸ ವಾಗ್ವಾದಗಳಿಗೆ ಹಾದಿ ತೆರೆಯುವ ಇಂಥ ಪ್ರಯತ್ನ ಇನ್ನೂ ಆಗಬೇಕು.

ಜೈನ ಕಥಾ ಸಾಹಿತ್ಯವು ಜಿನರ ಕಥನಗಳಿಂದಲ್ಲದೆ ಯಕ್ಷರು, ನಾಗರು, ವಿದ್ಯಾಧರರು, ಖೇಚರರು, ಕಿನ್ನರರು, ಕಿಂಪುರುಷರು ಮೊದಲಾದವರ ಕಥಾನಕಗಳಿಂದ ತುಂಬಿ ತುಳುಕಿದೆ. ತೀರ್ಥಂಕರರು ವರಕೊಡರು, ಶಾಪಕೊಡರು – ಹೀಗೆ ಭಕ್ತರಿಗೆ ಆಗ್ರಹ -ಅನುಗ್ರಹ ನೀಡದೆ ಅತ್ಮಧ್ಯಾನ ನಿರತ ಜಿನರ ಶಾಸನದೇವತೆಗಳಾದ ಯಕ್ಷ ಯಕ್ಷಿಯರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವರು. ಜಿನ ಶಾಸನ ದೇವ ದೇವಿಯರಲ್ಲಿ ಮದುವೆಯಾಗದ ಹುಡುಗ ಹುಡುಗಿಯರನ್ನು ಚೆಂದುಳ್ಳ ಜಾಣ ಸಿರಿವಂತ ಮನೆತನದ ಜೋಡಿಯನ್ನು ಬೇಡಿದರು, ಮದುವೆಯಾದ ಗಂಡ ಹೆಂಡಿರು ಗಂಡುಮಕ್ಕಳನ್ನು ಬಯಸಿದರು. ವಣಿಜರು ಲಾಭ ಕೇಳಿದರು, ಕಡಲು ವರ್ತಕರು ಹದುಳದಿಂದ ಹಿಂತಿರುಗಲು ಕೋರಿದರು. ಕ್ಷತ್ರಿಯರು ಗೆಲುವನ್ನು ಹಂಬಲಿಸಿದರು. ತಾಯಿಯರು ತಮ್ಮ ಕೂಸುಕಂದಯ್ಯಗಳು ಸಿಡಿಬು – ದಡಾರ – ಅಮ್ಮ ಕಾಯಿಲೆಗಳಿಂದ ಪಾರಾಗುವಂತೆ ಹರಕೆ ಹೊತ್ತರು, ವಿರಹಿಗಳು ಮರುಸಂಗಮಕ್ಕೆ ಹಾತೊರೆದರು, ಪ್ರಜೆಗಳು ಕಾಲಕಾಲಕ್ಕೆ ಮಳೆಯಾಗಿ ಬೆಳೆ ಬಂದು ಕಣಜ ತುಂಬಿ, ಕ್ಷಾಮ ಡಾಮರ ಪಸವಾಗಲಿ ಕಳ್ಳಕಾಕರ ಕಾಟವಾಗಲಿ ಇರದಂತೆ ಹದುಳಬಾಳನ್ನು ಕೇಳಿದರು. ಇಂಥ ಬಯಕೆಗಳು ನೋಂಪಿಗಳ ಹಾದಿಯನ್ನೂ ಹಿಡಿದರು.

ಲಬ್ಧಿವಿಧಾನ ನೋಂಪಿಯ ಅಯಾಮಗಳು

ವಾರಾಣಾಸಿಪುರದ ವಿಶ್ವಲೋಭನೆಂಬ ಅರಸನು ತನ್ನ ಪಟ್ಟದರಸಿಯಾದ ವಿಶಾಲಾಕ್ಷಿಯು ತನ್ನನ್ನು ಬಿಟ್ಟುಹೋದುದನ್ನು ತಿಳಿದು ಆ ವಿಯೋಗದಿಂದ ಉಂಟಾದ ದುಃಖದಿಂದ ಮರಣಹೊಂದಿದ ಸಂಕಥನ ಲಬ್ಧಿವಿಧಾನ ನೋಂಪಿ ಕಥೆಯಲ್ಲಿದೆ. ಹೆಂಡತಿಯ ಅಗಲಿಕೆಯಿಂದ ನೊಂದು ಸತ್ತ ಗಂಡನ ಈ ಕಥನ ಅಪರೂಪದ್ದು.

ಇದೇ ಲಬ್ಧಿವಿಧಾನ ನೋಂಪಿ ಕಥೆಯಲ್ಲಿ ವಿಶ್ವಲೋಭರಾಜನ ಪಟ್ಟದ ರಾಣಿಯಾದ ವಿಶಾಲಾಕ್ಷಿಯು ಕನ್ನೆ ಮಾಡದ ಗವಾಕ್ಷದಿಂದ ಹೊರಗಿನ ಲೋಕನಾಟಕವನ್ನು ನೋಡಿ ಆಕರ್ಷಿತಳಾದುದನ್ನೂ ದಾಖಲಿಸಿದೆ. ಆಕೆ ಹೊರಲೋಕಕ್ಕೆ ಎಷ್ಟು ಮೋಹಿತಳಾದಳೆಂದರೆ ಆರಮನೆಯನ್ನೂ ಅರಸನನ್ನೂ ತೊರೆದು ಸಖಿಯರೊಂದಿಗೆ ಪಲಾಯನ ಮಾಡುತ್ತಾಳೆ: ‘ಗವಾಕ್ಷದಿ ನಾಟಕಮಂ ನೋಡಿ ಚಂಚಲಚಿತ್ತೆಯಾಗಿಯೆನ್ನನೀಯರಸು ಸೆರೆಯೊಳಿಕ್ಕಿದಂ ಸ್ವೇಚ್ಛಾ ವಿಹಾರಮಂ ಪಡೆದೆ ನಿಲ್ಲೆಂದು ಚಿಂತಿಸಿ ಕೃತಿಮ ಸ್ತ್ರೀರೂಪ ಮಾಡಿ ತಂನವಸ್ತ್ರಾಭರಣದಿಂದಮಾ ಸ್ತ್ರೀರೂಪನಲಂಕರಿಸಿ ಮಂಚದೊಳ್ಮಲಗಿಸಿದಂತು ಮಾಡಿ ತಾನುಂ ಚಾಮರೆ ರಂಗಿಯೆಂಬಿರ್ವರು ಚೇಟಿಯರಂ ಕೂಡಿಕೊಂಡು ರಾತ್ರಿಯೊಳು ಕ್ಷುಲ್ಲಕ ದ್ವಾರದಿ ಪೊರ ಮಟ್ಟು ಪೋದಳು’. ಮುಂದೆ ಜಿನಮುನಿಗೆ ತೊಂದರೆ ಕೊಟ್ಟು ಕುಷ್ಠವ್ಯಾಧಿಯಿಂದ ಸತ್ತು ಬೆಕ್ಕು ಹಂದಿ ನಾಯಿ ಕೋಳಿಯಾಗಿ ಹುಟ್ಟಿದ ವಿವರಣೆಯಿದೆ. ಇದು ಸ್ಥೂಲವಾಗಿ ಯಶೋಧರ ಚರಿತೆಯಲ್ಲಿನ ಅಮೃತಮತಿ ಕಥೆಯನ್ನು ಹೋಲುತ್ತದೆ. ಮುಖ್ಯ ವ್ಯತ್ಯಾಸವೆಂದರೆ ಈ ರಾಣಿ ಮತ್ತು ಚೇಟಿಯರು ಪರಿವರ್ತನೆ ಪಡೆದು ವ್ರತೋಪವಾಸಗಳಿಂದ ದೇವತೆಗಳಾಗುವರು.

ಕೆಲವು ನೋಂಪಿಯ ಕಥೆಗಳಲ್ಲಿ ಎರಡು ಮೂರು ನಾಲ್ಕು ಕಥೆಗಳು ಹೆಣೆದಿರುತ್ತವೆ. ಇದೇ ಲಬ್ಧಿವಿಧಾನ ನೋಂಪಿಯೊಳಗೆ ಎರಡು ಸ್ವತಂತ್ರ ಕಥೆಗಳನ್ನು ಅಂಟಿಸಲಾಗಿದೆ. ಜೈನ ಋಷಿ ಮುನಿ ಪರಂಪರೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಗೌತಮ ಗಣಧರರು. ತೀರ್ಥಂಕರ ಪ್ರಣೀತ ಉಪದೇಶ ಸಾರವನ್ನು ಲೋಕಕ್ಕೆ ಬಿಚ್ಚಳಿಸಿ ಬಿತ್ತರಿಸಿದರು. ಇವರು. ಲಬ್ಧಿವಿಧಾನ ನೋಂಪಿಯ ಕಥೆಯಲ್ಲಿ ಮಹಾವೀರರ ಹಾಗೂ ಗೌತಮಗಣಧರರ ಧಾರ್ಮಿಕ ಅನುಬಂಧ ಏರ್ಪಟ್ಟ ವಿಧಾನವನ್ನು ಹೇಳಿದೆ. ಈ ನೀರೂಪಣೆ ಅನ್ಯಪುರಾಣ ಕಥನಗಳಲ್ಲಿ ಹೇಳಿರುವುದಕ್ಕೆ ಅನುಗುಣವಾಗಿದೆಯಾದರೂ ಇಲ್ಲೊಂದು ಸ್ವತಂತ್ರ ಸ್ವೋಪಜ್ಞ ಸಂಬಂಧವನ್ನು ಕಲ್ಪಿಸಲಾಗಿದೆ. ಪಟ್ಟಮಹಿಷಿ ವಿಶಾಲಾಕ್ಷಿ ಮತ್ತು ಇಬ್ಬರು ಚೇಟಿಯರೇ ದೆವಲೋಕದಿಂದ ಬಂದು ಇಂದ್ರಭೂತಿ ವಾಯುಭೂತಿ ಅಗ್ನಿಭೂತಿ ಆದರೆಂದು ಇಲ್ಲಿ ಹೇಳಿರುವುದು ಹೊಸ ಹೇಳಿಕೆ. ಇದು ಮಹಿಳೆಯರಿಗೆ ಸಂದು ಬಹುದೊಡ್ಡ ಮರ್ಯಾದೆ ಮತ್ತು ಮನ್ನಣೆ.

ಚರಿತ್ರೆಯ ಘಾಟು

ನೋಂಪಿಯ ಕಥೆಗಳಲ್ಲಿ ಚಾರಿತ್ರಿಕ ಸಂಗತಿಗಳು ಹೆಣೆದುಕೊಂಡಿರುವುದೂ ಉಂಟು. ಪ್ರಾಚೀನ ಭಾರತದ ಹಾಗೂ ಕರ್ನಾಟಕದ ರಾಜಕೀಯ ಜೀವನ ಪುನಾರಚನೆಗೆ ಜೈನ ಕಥಾ ಪರಂಪರೆಯಲ್ಲಿ ಸಿಗುವ ಆಕರಗಳ ಭಂಡಾರ ಎಷ್ಟು ಉಪಯುಕ್ತವೆಂಬುದನ್ನು ಸಂಶೋಧಕರು ತೋರಿಸಿದ್ದಾರೆ. ಚಾರಿತ್ರಿಕ ಸಾಮಗ್ರಿಯಿರುವ ಕೆಲವು ನೋಂಪಿಯ ಕಥೆಗಳು ಇಲ್ಲಿ ಪೃಥಕ್ಕರಿಸಲಾಗುವುದು. ಈ ವಿಭಜನೆಗೆ ಪೌರಾಣಿಕ ಪಾತ್ರಗಳಿಂದ, ಶುದ್ಧ ಧಾರ್ಮಿಕ ಪ್ರಕ್ರಿಯೆ ಪರಿಭಾಷೆಯಿಂದ ಕಥೆಯನ್ನು ಕದಲಿಸಿ, ಚರಿತ್ರೆಯ ಚೌಕಟ್ಟಿಗೆ ಅಳವಡುವ ಸಾಮಗ್ರಿಯನ್ನು ಹೆಕ್ಕಿ ಪರಾಮರ್ಶಿಸಬೇಕಾಗುತ್ತದೆ.

ದೀಪಾವಳಿ ನೋಂಪಿನಲ್ಲಿ ವರ್ತಮಾನ ಕಾಲದ ತೀರ್ಥಂಕರ ವರ್ಧಮಾನ ಮಹಾವೀರರ ಚರಿತೆ ಅಡಕವಾಗಿ ಬಿತ್ತರಗೊಂಡಿದೆ. ಉಪಸರ್ಗ ನಿವಾರಣ ನೋಂಪಿನಲ್ಲಿ ಮಹಾವೀರರಿಗಿಂತ ಹಿಂದಣ ಹಾಗೂ ೨೩ನೆಯ ತೀರ್ಥಂಕರರಾದ ಪಾರ್ಶ್ವನಾಥರ ಜೀವನ ಹರಳುಗೊಂಡಿದೆ. ಮಹಾವೀರರ ಮೊದಲಗಣಧರರಾದ ಇಂದ್ರಭೂತಿ ಗೌತಮ ಗಣಧರನ ಚರಿತೆಯನ್ನು ಲಬ್ಧಿವಿಧಾನದ ನೋಂಪಿ ನಮೂದಿಸಿದೆ. ಶ್ರೇಣಿಕ ಮತ್ತು ಚೇಲನಾದೇವಿ (ತದ್ಭವ ರೂಪ : ಚೇಳಿನಿ) ದಂಪತಿಗಳು ಜೈನ ಕಥಾ ಸಾಹಿತ್ಯದ ಕೇಂದ್ರ ಬಿಂದುಗಳಾದುದರಿಂದ ಬಹುಮಟ್ಟಿನ ನೋಂಪಿಯ ಕಥೆಗಳ ಉಗಮಕಾರಣರಾಗಿ ಬರುತ್ತಾರೆ. ಇವರ ಸವಿವರವಾದ ಪೂರ್ವೇತಿಹಾಸವನ್ನು ಮುಂದೆ ಕೊಟ್ಟಿದೆ. ಸಪ್ತಪರಮಸ್ಥಾನದ ನೋಂಪಿಯಲ್ಲಿ – ‘ಜೀನೇಂದ್ರ ಮಾತಾಭಿರುಚಿಯೊಳು ವಾರಿಷೇಣ ಮಹಾರಾಜನುಮಂ ಪೋಲ್ತೆಸೆವಂ’ ಎಂಬಲ್ಲಿ – ಪ್ರಸ್ತಾಪಗೊಂಡಿರುವ ವಾರಿಷೇಣನು ಇದೇ ಶ್ರೇಣಿಕ – ಚೇಲನಾ ದಂಪತಿಗಳ ರಾಜಕುಮಾರ.

ವೈಶಾಲಿ ನಗರದ ನರೇಶ ಚೇಟಕ

“ಇಂದಿನ ಬಿಹಾರ ಪ್ರಾಂತ್ಯದ ಬಹು ಭಾಗವನ್ನೊಳಗೊಂಡ ಪ್ರದೇಶಕ್ಕೆ ಎರಡೂವರೆ ಸಾವಿರ ವರ್ಷಗಳ ಹಿಂದೆ ವೈಶಾಲಿ ಎಂಬ ಹೆಸರಿತ್ತು. ವೈಶಾಲಿ ಗಣರಾಜ್ಯವಾಗಿತ್ತು. ಅಲ್ಲಿನ ರಾಜಕೀಯ ಪದ್ಧತಿ ಪ್ರಜಾಪ್ರಭುತ್ವ ಮಾದರಿಯಲ್ಲಿತ್ತು. ವೈಶಾಲಿಯನ್ನು ಪ್ರಜಾಪ್ರಭುತ್ವದ ತಾಯಿಯೆಂದು ಕರೆದಿದ್ದಾರೆ. ಇದು ಗಂಗಾನದಿಯ ಉತ್ತರಕ್ಕಿತ್ತು ಮತ್ತು ಇದಕ್ಕೆ ತೀರಭುಕ್ತಿಯೆಂದೂ ವಿದೇಹವೆಂದೂ ಹೆಸರಿತ್ತು. ಇದರ ಎಲ್ಲೆಗಳು : ಉತ್ತರಕ್ಕೆ ಹಿಮಾಲಯ, ದಕ್ಷಿಣಕ್ಕೆ ಗಂಗಾನದಿ, ಪೂರ್ವಕ್ಕೆ ಕೈಶಿಕೀ, ಪಶ್ಚಿಮಕ್ಕೆ ಗಂಡಕೀ ನದಿ. ಲಿಚ್ಛವಿಯರೂ ಜ್ಞಾತೃಗಳೂ ಮೊದಲಾದ ಕೆಲವು ರಾಜವಂಶದವರು ವೈಶಾಲಿಯ ಬೇರೆ ಭಾಗಗಳನ್ನು ಆಳುತ್ತಿದ್ದರು. ಗಂಡಕೀ ನದಿಯ ಎರಡು ಭಾಗಗಳಲ್ಲಿ ಎರಡು ಉಪನಗರಗಳಿದ್ದುವು; ಒಂದು, ಕ್ಷತ್ರಿಯ ಕುಂಡಗ್ರಾಮ; ಇನ್ನೊಂದು, ವೈದಿಕ ಕುಂಡಗ್ರಾಮ.

“ಕ್ಷತ್ರಿಯ ಕುಂಡಗ್ರಾಮಕ್ಕೆ ಕುಂಡಪುರ, ಕುಂಡಲಪುರ, ಕುಂಡಗ್ರಾಮ, ಕುಂದಪುರ ಎಂಬ ಹೆಸರುಗಳಿದ್ದುವು. ಇದರ ಗಣರಾಜ ಸಿದ್ಧಾರ್ಥ. ಈ ಸಿದ್ಧಾರ್ಥ ಕಾಶ್ಯಪ ಗೋತ್ರಕ್ಕೆ ಸೇರಿದವನು, ನಾಥ (ಜ್ಞಾತ-) ವಂಶೀಯನು. ಈತ ಜೈನರ ೨೩ನೆಯ ತೀರ್ಥಂಕರನಾದ ಪಾರ್ಶ್ವನಾಥನ ಅನುಯಾಯಿಯೂ ಸಮ್ಯಕ್ತ್ವ ಸಂಪನ್ನನೂ ಆಗಿದ್ದನು. ಈತನಿಗೆ ಚೇಟಕರಾಜನ ಮಗಳಾದ ಪ್ರಿಯಾಕಾರಿಣಿ (ತ್ರಿಶಲಾ) ಮಹಿಷಿಯಾಗಿದ್ದಳು; ಒಂದು ಜೈನಶಾಖೆಯ ಹೇಳಿಕೆಯಂತೆ ತ್ರಿಶಲೆಯು ಚೇಟಕ ಮಹಾರಾಜನ ತಂಗಿ. ವೈಶಾಲಿಯ ದೊರೆ ಚೇಟಕ್. ವಾಸಿಷ್ಟ ಗೋತ್ರಕ್ಕೆ ಸೇರಿದ ಚೇಟಕ ಮಹಾರಾಜ ಆದರ್ಶ ಜೈನ ಶ್ರಾವಕ.

“ಚೇಟಕನಿಗೆ ಹತ್ತು ಜನ ಗಂಡು ಮಕ್ಕಳು : ಧನದತ್ತ, ಧನಭದ್ರ, ಉಪೇಂದ್ರ, ಸುದತ್ತ, ಸಿಂಹಭದ್ರ, ಕುಂಬೋಜ, ಅಕಂಪನ, ಪತಂಗತ, ಪ್ರಭಂಜನ, ಪ್ರಭಾಸ. ಚೇಟಕನಿಗೆ ಏಳು ಜನ ಮಗಳುದಿರು : ಪ್ರಿಯಾಕಾರಿಣಿ (ತ್ರಿಶಲಾ), ಮೃಗಾವತೀ, ಸುಪ್ರಭಾ, ಪ್ರಭಾವತೀ (ಶೀಲವತೀ), ಜ್ಯೇಷ್ಠಾ, ಚೇಲನಾ (ಚೇಳಿನಿ), ಚಂದನಾ (ಇನ್ನೊಂದು ಹೇಳಿಕೆಯ ಪ್ರಕಾರ ಚಂದನಾಳು ಚಂಪಾದೇಶದ ನರೇಶನಾದ ದಧಿವಾಹನನ ಮಗಳು). ಅಂದಿನ ಭಾರತದ ಬಹು ಭಾಗ ಚೇಟಕನ ದೊಡ್ಡ ಬಳಗದ ಬಿಳಿಲುಗಳಿಂದ, ಬಾಂಧವ್ಯದ ವಾತಾವರಣದಿಂದ ಕೂಡಿತ್ತು. ಹಿರಿಯ ಮಗಳನ್ನು ಸಿದ್ಧಾರ್ಥ ರಾಜನಿಗೆ ಕೊಟ್ಟಿತ್ತು. ಎರಡನೆಯ ಮಗಳು ಮೃಗಾವತಿಯನ್ನು ವತ್ಸದೇಶದ ಕೌಶಾಂಭಿಯನ್ನು ಆಳುತ್ತಿದ್ದ ಚಂದ್ರವಂಶದ ಶತಾನೀಕನಿಗೆ ಧಾರೆಯೆರೆಯಲಾಗಿತ್ತು. ಮೂರನೆಯ ಮಗಳು ಸುಪ್ರಭಾದೇವಿ ದಸಾರ್ಣ ದೇಶದ ರಾಜಧಾನಿ ಹೇಮಕಕ್ಷೆಯ ರಾಜನಾದ ದಶರಥನ ಪಟ್ಟಮಹಿಷಿ. ನಾಲ್ಕನೆಯವಳಾದ ಪ್ರಭಾವತಿಯು ಕಚ್ಛದೇಶದ ರೋರುಕನಗರದ ರಾಜನಾದ ಉದಯನನ ರಾಣಿ. ಈ ಪ್ರಭಾವತಿಯು ಸಮುಜ್ವಲ ಅಕಳಂಕ ಶೀಲವ್ರತದಿಂದ ಶೀಲವತೀ ಎಂದು ಖ್ಯಾತನಾಮಳಾಗಿದ್ದಾಳೆ.

“ಐದನೆಯ ಮಗಳು ಜ್ಯೇಷ್ಠೆಯನ್ನು ವಿವಾಹವಾಗ ಬಯಸಿದ ಮಹೀಪುರದ ಮಹೀಪಾಲ ಸಾತ್ಯಕಿಗೆ ಸಂಬಂಧ ಬೆಳಸಲು ಚೇಟಕ ನಿರಾಕರಿಸಿದ. ಸಾತ್ಯಕಿ ಯುದ್ಧಕ್ಕೆ ಬಂದು ಸೋತು ಅಪಮಾನದಿಂದ ದೀಕ್ಷಿತನಾದ. ಜ್ಯೇಷ್ಠ ಮತ್ತು ಚೇಲನಾ ಶ್ರೇಣಿಕನನ್ನು ಮದುವೆಯಾಗಲು ಬಯಸಿದರು. ಆಗ ಚೇಳನೆಯ ಚಮತ್ಕಾರದಿಂದ ಜ್ಯೇಷ್ಠೆಗೆ ಆ ಮದುವೆ ತಪ್ಪಿತು. ಜೀವನದಲ್ಲಿ ಜಿಗುಪ್ಸೆಯುಂಟಾಗಿ ಜ್ಯೇಷ್ಠಾ ಜೋಗಿನಿಯಾದಳು. ಚೇಟಕನ ಕಟ್ಟಕಡೆಯ ಮಗಳು ಚೇಲನಾ (ಚೇಳಿನಿ) ದೇವಿಯು ಮಗಧದ ರಾಜನಾದ ಶ್ರೇಣಿಕಬಿಂಬಸಾರನ ಅಗ್ರ ಮಹಿಷಿಯಾದಳು. ಹೀಗೆ ಭಾರತದ ಹಲವಾರು ಭಾಗಗಳನ್ನಾಳುವ ರಾಜರುಗಳೂ ರಾಣಿಯರೂ ಮಹಾವೀರನ ಚಿಕ್ಕಪ್ಪ, ಚಿಕ್ಕಮ್ಮ ಆಗಿದ್ದರು. ಇದರಿಂದ ಮಹಾವೀರನಿಗೆ ತನ್ನ ಅಹಿಂಸಾಧರ್ಮ ಪ್ರಚಾರಕ್ಕೆ ಹೆಚ್ಚು ನೆರವು, ಪ್ರೋತ್ಸಾಹ ದೊರೆಯಲು ಅನುಕೂಲವಾಯಿತು” (ಕಮಲಾ ಹಂಪನಾ : ಮಹಾವೀರರ ಜೀವನ ಸಂದೇಶ : ೧೯೭೫ : ೩-೪).