ತೌಲನಿಕ ಅಧ್ಯಯನದ ಅಗತ್ಯ

ಉಪಲಬ್ಧ ನೋಂಪಿ ಕಥಾ ಸಾಹಿತ್ಯ ಅಪಾರವಾಗಿದೆ. ತಬ್ಬಿಬ್ಬು ಗೊಳಿಸುವಷ್ಟು ಅಗಾಧವಾಗಿದೆ. ಈ ಕಥಾ ಪರಂಪರೆ ಪೆಡದುಕೊಂಡು ಪಾಠ ಪ್ರಭೇದಗಳು, ಪ್ರಕಾರಗಳು ವಿಫುಲವಾಗಿವೆ. ಪ್ರಾಚೀನ ಚಂಪೂ ಮತ್ತು ಇತರ ಶಿಷ್ಟ ಸಾಹಿತ್ಯಾಂತರ್ಗತ ನೋಂಪಿ ಕಥಾ ಲಕ್ಷಣಗಳು ನಯಸೇನಕವಿಯ ಧರ್ಮಾಮೃತ ಮೊದಲಾದ ಕಾವ್ಯಗಳಲ್ಲಿ ಹೆಣೆದುಕೊಂಡಿವೆ. ಈ ಮೂಲ-ಚೂಲಗಳ ತೌಲನಿಕ ಅಧ್ಯಯನದ ಮೂಲಕ ಸಂವಾದಿ ಸಮಾನಕಥೆಗಳಲ್ಲಿ ಸಂಭವಿಸಿರುವ ವ್ಯತ್ಯಾಸಗಳ ಸ್ವರೂಪವನ್ನು ಸರಿಯಾಗಿ ಅರಿಯುವುದರಿಂದ, ಒಟ್ಟು ಕನ್ನಡ ಹಾಗೂ ಭಾರತೀಯ ಕಥಾ ಸಾಹಿತ್ಯದ ಸಮಗ್ರ ಅಧ್ಯಯನಕ್ಕೆ ಪೂರಕಮಾತ್ರವಲ್ಲದೆ ದಿಕ್‌ಸೂಚಿಯೂ ಆಗಬಲ್ಲುದು. ಭಾರತೀಯ ಕಥಾ ಪರಂಪರೆಗೇನೆ ಜೀವ ತುಂಬುವಂಥ ಕೆಲವು ಸತ್ವಶಾಲಿ ಕಥೆಗಳೂ, ಕಥನ ಕಲೆಯೂ ಕೆನೆಕಟ್ಟಿ ನಿಂತಿರುವುದು ನೋಂಪಿಕಥೆಗಳಲ್ಲಿ ಕಡಮೆಯೆಂದೇ ಹೇಳಬೇಕು; ಅದಕ್ಕೆ ನಾವು ಇತರ ಜೈನ ಕಥಾ ಸಾಹಿತ್ಯಕ್ಕೆ ಲಗ್ಗೆ ಹಾಕಬೇಕು. ಆದರೆ ಆರಾಧನಾ ಮತ್ತು ಇತರ ಪ್ರಭೇದಗಳಿಗೆ ಸೇರಿದ ಕಥೆಗಳಲ್ಲಿ ಕಾಣುವಂತೆ, ಇಲ್ಲಿಯೂ, ಜೈನ ಸಮಾಜವು ದೇಶಕಾಲ ಪರಿಸರವನ್ನು ಅವಲಂಬಿಸಿ, ನಿಧಾನಗತಿಯಿಂದ ಪಡೆದುಕೊಂಡ ಮಾರ್ಪಾಟುಗಳನ್ನು ಕಾಣಲು ಸಾಧ್ಯವಿದೆ.

ಇತಿಹಾಸ, ತರ್ಕಶಾಸ್ತ್ರ, ಮನಸ್‌ ಶಾಸ್ತ್ರ, ಮಾನವಿಕ, ಸಮಾಜಶಾಸ್ತ್ರ, ಸಾಹಿತ್ಯವಿಮರ್ಶೆ – ಹೀಗೆ ಭಿನ್ನ ಜ್ಞಾನ ಕ್ಷೇತ್ರಗಳನ್ನು ಸೇರಿಸಿ ರೂಪಿಸಿಕೊಂಡ ಅಂತರಶಿಸ್ತೀಯ – ಅಂತರಶಾಸ್ತ್ರೀಯ ದೃಷ್ಟಿ ಕೋನಗಳಿಂದ ನೋಂಪಿ ಕಥೆಗಳನ್ನು ಅಧ್ಯಯನ ಮಾಡಲು ಅವಕಾಶವಿದೆ; ಇಂಥ ಸಾಧ್ಯತೆಗಳಿಂದ ಜೈನ ಕಥಾ ಪರಂಪರೆಯ ಮೌಲಿಕತೆಯನ್ನು ಮನನ ಮಾಡಬಹುದು.

ಈ ಅಧ್ಯಾಯದ ಆರಂಭದ ಪ್ಯಾರಾದಲ್ಲಿ ಸೂಚಿಸಿರುವಂತೆ, ನೋಂಪಿಕಥೆಗಳ ಸಾಮಗ್ರಿಯ ಈ ಸಮೃದ್ಧಿಯೂ ತೌಲನಿಕ ಅಧ್ಯಯನಕಾರರಿಗೆ ಸವಾಲಾಗಿದೆ. ನೋಂಪಿಯ ಕತೆಗಳ ಬೇರುಗಳ ಬಹುಮೂಲಗಳಿಗೆ ಚಾಚಿಕೊಂಡು, ಎಲ್ಲೆಲ್ಲಿಂದಲೋ ಸಾರವನ್ನು ಹೀರಿದೆ. ಅರ್ಧಮಾಗಧಿ, ಅಪಭ್ರಂಶ, ಮಹಾರಾಷ್ಟ್ರೀ, ಶೌರಸೇನಿ ಪ್ರಾಕೃತಗಳಿಗೂ, ಸಂಸ್ಕೃತ ಭಾಷೆಗೂ ತೌಲನಿಕ ಅಧ್ಯಯನಕಾರನು ಉಡ್ಡೀನ ಮಾಡಬೆಕಾಗುತ್ತದೆ. ಆ ಭಾಷೆಗಳ ಆಗಮ ಆಗಮೇತರ ಕೃತಿರಾಶಿಯನ್ನು ಅವಲೋಕಿಸಿ, ನೋಂಪಿಕಥಾ ಮೂಲವನ್ನು ಹಿಡಿಯುವುದು ಸಾಹಸದ ವಿದ್ವತ್‌ ಕಾರ್ಯ. ಹೀಗೆಯೇ ಒಂದೊಂದೇ ಪ್ರಾತಿನಿಧಿಕವಾಗಬಲ್ಲ ನೋಂಪಿ ಕಥೆಗಳನ್ನು ತೆಗೆದುಕೊಂಡು, ಅದೇ ಕಥೆ ಪ್ರಾಕೃತ-ಸಂಸ್ಕೃತಗಳಲ್ಲಿ ಹೇಗೆ ಮೈ ಮನಗಳನ್ನು ಪಡೆದಿದೆ ಎಂಬುದನ್ನು ವಿಶ್ಲೇಷಿಸಿ, ಅದರ ಮುಖ್ಯ ಆಶಯಗಳ ನೆಲೆ ಬೆಲೆಗಳ ಸ್ವರೂಪವನ್ನು ತಿಳಿಸುವುದು ಮುಂದೆ ಆಗಬೇಕಾಗಿರುವ ಕೆಲಸ.

ಜೈನರಲ್ಲಿ ರೂಢಿಯಲ್ಲಿರುವ ನೋಂಪಿಗಳಿಗೂ, ವೈದಿಕರಲ್ಲಿ ಪ್ರಚಲಿತವಿರುವ ವ್ರತಗಳಿಗೂ ಇರುವ ಸಾಮ್ಯ-ವೈಷಮ್ಯಗಳ ಸ್ವರೂಪವನ್ನು ಕುರಿತೂ ತೌಲನಿಕ ಅಧ್ಯಯನದ ಅಗತ್ಯವಿದೆ. ನಾನು ಸ್ಥೂಲವಾಗಿ ಗಮನಿಸಿರುವ ಹಾಗೆ, ಇವೆರಡೂ ಪರಸ್ಪರ ಪೂರಕ ನೆಲೆಯಲ್ಲಿ ಸಾಗುವ ಪರಂಪರೆಗಳಾಗಿದ್ದರೂ, ಸಾದೃಶ್ಯವಿರುವಂತೆ ವೈದೃಶ್ಯವೂ ಇದೆ. ಇವೆರಡರಲ್ಲಿರುವ ಹೊಂದಿಕೆಯ ಅಂಶಗಳನ್ನೂ, ಭೇದವಿರುವ ಭಾಗ ಮತ್ತು ಕಾರಣಗಳನ್ನೂ ಗುರುತಿಸುವ ಕೆಲಸ ಇನ್ನೂ ಆಗಿಲ್ಲ. ದೇವಗಿರಿಯ ಮಂತ್ರಿ ಹೇಮಾದ್ರಿಯು ಬರೆದಿರುವ ವ್ರತಖಂಡವು ವೈದಿಕ ಪರವಾದ ಸಾಮಗ್ರಿಯನ್ನು ಒದಗಿಸುವ ಆಕರವಾಗಿದೆ. ವೈದಿಕರಲ್ಲಿ ತುಂಬ ಜನಪ್ರಿಯವಾಗಿದ್ದು, ಅವೈದಿಕ ಹಿಂದೂಗಳ ಮೇಲೆ ಗಾಢವಾಗಿ ಪ್ರಭಾವ ಬೀರಿರುವ ಸತ್ಯನಾರಾಯಣ ವ್ರತಕಥೆಯು ಪ್ರಾಚೀನವಾದುದಲ್ಲ. ಇದು ಸ್ಕಾಂದ ಪುರಾಣದ ರೇವಾಖಂಡಪ್ರೋಕ್ತವೆಂದು ಒಂದು ಪ್ರತೀತಿಯಿದೆ. ಆದರೆ ವಾಸ್ತವವಾಗಿ ಸ್ಕಂದ ಪುರಾಣದಲ್ಲಿ ಈ ಕತೆ ಇಲ್ಲ; ಪ್ರಾಯ; ಇದು ಪ್ರಕ್ಷಿಪ್ತವಿರುಬೇಕು. ತಮಿಳಿನಲ್ಲಿರುವ ತಿರುಪ್ಪಾವೈ ಎಂಬುದು ಶ್ರೇಷ್ಠವ್ರತವೇ ಆಗಿದೆ; ಇದನ್ನು ಆಚರಿಸಿದ ಮಹಾಭಕ್ತಳು ಅಂಡಾಳ್‌ ಗೋದಾ. ಈ ದಿಕ್ಕಿನಲ್ಲಿಯೂ ತೌಲನಿಕ ಅಧ್ಯಯನವನ್ನು ಬೆಳೆಸಬಹುದು.

ಕನ್ನಡದಲ್ಲಿ ಬಂದಿರುವ ಎಲ್ಲ ಕಥೆಗಳೂ ಪ್ರಾಕೃತ ಇಲ್ಲವೆ ಸಂಸ್ಕೃತ ಮೂಲಕ್ಕೆ ಸೇರಿದ್ದೆಂದು ಸಾರಾಸಗಟಾಗಿ ಹೇಳುವುದು ಸರಿಯಾಗಲಾರದು. ಕನ್ನಡ ಕವಿಗಳೇ ಕಲ್ಪಿಸಿ ಹೇಳಿದ ನೋಂಪಿ ಕಥೆಗಳು ಇರಬಹುದು. ಜೈನ ಜನಪದ ಸಾಹಿತ್ಯ ಎಂದು ಇವನ್ನು ಗುರುತಿಸುವ ಹಂತದಲ್ಲಿ ಇವುಗಳಲ್ಲಿರುವ ದೇಸೀಯ ಹಾಗೂ ಜಾನಪದೀಯ ಸೊಗಡದನ್ನು ಪ್ರತ್ಯೇಕವಾಗಿಯೇ ನೋಡಬೇಕಾಗುತದೆ.

ನೋಂಪಿಯ ಕಥೆಗಳಲ್ಲಿ ಎಲ್ಲವೂ ಒಂದೇ ಪ್ರಮಾಣದ ಪ್ರಸಾರ ಪಡೆದಿವೆಯೆಂದು ಹೇಳಲಾಗುವುದಿಲ್ಲ. ಕೆಲವು ನೋಂಪಿ ಕಥೆಗಳು ಹೆಚ್ಚು ಜನಾದರಣೆಗೆ ಪಾತ್ರವಾಗಿವೆ. ಉದಾಹರಣೆಗೆ ಶ್ರೀ ಪಂಚಮೀ ನೋಂಪಿಯ ಕಥೆ. ಇದು ಋಷಿ ಪಂಚಮೀ, ಜ್ಞಾನಪಂಚಮೀ, ನಾಗರಪಂಚಮೀ, ನಿರ್ಜರ ಪಂಚಮೀ (ಣಿಜ್ಝರ), ಶ್ರೀ ಪಂಚಮೀ, ಶ್ರುತಪಂಚಮೀ – ಎಂದು ಕವಲೊಡೆದಿದೆ. ಇವು ನಾಮಸಾದೃಶ್ಯವಿರುವ, ಅಲ್ಲಲ್ಲಿ ವ್ಯತ್ಯಾಸಗಳೂ ಸಮಾನತೆಯೂ ಇರುವ ನೋಂಪಿಗಳೂ ಹೌದು. ಶ್ರುತಪಂಚಮೀ ನೋಂಪಿಯೂ ಶ್ರುತಸ್ಕಂಧ ನೋಂಪಿಯೂ ಬೇರೆಯಾಗಿವೆ. ಸ್ವತಂತ್ರರೂಪದ ಹತ್ತು ಕಥೆಗಳು ಇರುವ ಣಾಣಪಂಚಮೀ ಕಥಾ (ಜ್ಞಾನ ಪಂಚಮೀ ಕಥಾ)ವನ್ನು ಪ್ರಾಕೃತದಲ್ಲಿ ಮಹೇಶ್ವರ ಸೂರಿಯು (ಕ್ರಿ. ಶ. ೧೦೧೫) ರಚಿಸಿದ್ದಾನೆ; ಅದರಲ್ಲಿ ಎರಡು ಸಾವಿರಗಾಹೆಗಳಿವೆ. ಇದರಲ್ಲಿರುವ ಸ್ವತಂತ್ರ ರೂಪದ ಹತ್ತು ಕತೆಗಳು:

. ಜಯಸೇನ, ೨. ನಂದ, ೩, ಭದ್ರ, ೪. ವೀರ, . ಕಮಲ, . ಗುಣಾಸುರಾಗ, . ವಿಮಲ, . ಧರಣ, . ದೇವೀ, ೧೦. ಭವಿಷ್ಯದತ್ತ.

ಸ್ವತಂತ್ರರೂಪದಲ್ಲಿರುವ ಈ ದಶಕಥಾ ಗೊಂಚಲಿನಲ್ಲಿ ಜಯಸೇನನ ಕಥೆ ಮತ್ತು ಭವಿಷ್ಯದತ್ತ ಎಂಬೆರಡು ಕಥೆಗಳು ದೊಡ್ಡವು, ತಲಾ ಐನೂರು ಗಾಥಾಗಳಿಂದ ಕೂಡಿದ ಕಥೆಗಳು. ಅಂದರೆ ಇವೆರಡರಿಂದ ಒಂದು ಸಾವಿರ ಗಾಹೆಗಳಾಗುತ್ತವೆ. ಇನ್ನುಳಿದ ಎಂಟು ಕಥೆಗಳು ಸರಾಸರಿ ೧೨೫ ಗಾಹೆಗಳಲ್ಲಿವೆ, ಅವು ಒಟ್ಟು ಒಂದು ಸಾವಿರ ಗಾಥೆಗಳಾಗುತವೆ. ಅಲ್ಲಿಗೆ ಣಾಣಪಂಚಮೀ ಕಹಾ ಕಾವ್ಯದ ಪ್ರಮಾಣ ಎರಡು ಸಾವಿರ ಗಾಹೆಗಳು : “ಈ ಹತ್ತೂ ಕಥೆಗಳು ಜ್ಞಾನ ಪಂಚಮೀ ವ್ರತದ ಮಹಾತ್ಮೆಯನ್ನು ವಿವರಸಲೆಂದೇ ಬರೆದುವಗಳಾಗಿವೆ. ಕಥೆಗಳು ಬಹುಸುಂದರ, ಸರಳ, ಮತ್ತು ಧಾರವಾಹಿ ರೀತಿಯಲ್ಲಿವೆ. ಅಲ್ಲಲ್ಲಿ ವಿವಿಧ ರಸ, ಭಾವ, ಹಾಗೂ ಲೋಕೋಕ್ತಿಗಳ ಸಮಾವೇಶ ಮಾಡಲಾಗಿದೆ. ಇದರಿಂದ ಈ ಕೃತಿಯು ಉತ್ತಮ ಕಾವ್ಯವೆನಿಸುತ್ತದೆ” (ಡಾ. ಹೀರಾಲಾಲ್‌ ಜೈನ್‌ : ೧೯೭೧: ೧೭೩) ಮಹೇಶ್ವರ ಸೂರಿಯು ಜ್ಞಾನ ಪಂಚಮಿ ವ್ರತ ಪಾಲನೆಯ ಪ್ರಾಮುಖ್ಯವನ್ನು ಸ್ಥಾಪಿಸಲು ಹತ್ತೂ ಕಥೆಗಳನ್ನೂ ದೃಷ್ಟಾಂತ ಕಥೆಗಳನ್ನಾಗಿಸಿದ್ದಾನೆ.

ಉದಯ ಗುರುವಿನ ಶಿಷ್ಯನೂ, ಠಕ್ಕರ ಮಾಲ್ಹೇ ಎಂಬಾತನ ಮಗನೂ ಆದ ವಿದ್ಧಣೂ (೧೩೬೬) ಎಂಬ ಕವಿ, ಮಗಧ ದೇಶದಲ್ಲಿ ವಿಹರಿಸುವಾಗ ಬರೆದ ಕಥೆ ‘ಜ್ಞಾನ ಪಂಚಮೀಚ ಉಪಿಇ’ ಎಂಬುದು; ಇದರಲ್ಲಿ ಶ್ರುತಪಂಚಮೀ ವ್ರತದ ಮಹಿಮೆಯನ್ನು ಸಾರಿದೆ. ಬಾಲಚಂದ್ರ ಮುನಿಯ ಶಿಷ್ಯನಾದ ವಿನಯ ಚಂದ್ರನೆಂಬ ಕವಿಯೂ “ಚೂನಡೀ’, ‘ಕಲ್ಯಾಣರಾಸ’ ಎಂಬ ಕೃತಿಗಳನ್ನು ರಚಿಸಿದ್ದಾನಲ್ಲದೆ ‘ಣಿಜ್ಝರ ಪಂಚಮೀಕಹಾ’ವನ್ನೂ ಬರೆದಿದ್ದಾನೆ; ನಿರ್ಜರ ಪಂಚಮೀ ಕಥೆಯು ೯೮ ಪದ್ಯಗಳ ಕಿರುಕಾವ್ಯ. ಗೀತಛಂದದಲ್ಲಿರುವ ಈ ಪುಟ್ಟಕಾವ್ಯ ಬಾಲವಿಧವೆಯೊಬ್ಬಳ ಕರುಣಾರ್ದ್ರದಾರುಣ ಕಥೆಯನ್ನು ಹೃದಯಂಗಮವಾಗಿ ನಿರೂಪಿಸಿದೆ.

ಶ್ರುತ ಪಂಚಮಿಯ ಮಹಿಮೆಯನ್ನು ಪ್ರಕಟಿಸುವ ಶ್ರೇಷ್ಠ ಕಾವ್ಯಗಳು ಪ್ರಾಕೃತ, ಸಂಸ್ಕೃತ, ಕನ್ನಡದಲ್ಲಿ ಸಾವಿರ ವರ್ಷಗಳ ಹಿಂದಿನಿಂದ ರಚಿತವಾಗಿವೆ. ಇವುಗಳಲ್ಲಿ ಸತ್ಕೃತಿಯೆಂದರೆ ಪುಷ್ಪದಂತ ಮಹಾಕವಿಯು ಅಪಭ್ರಂಶ-ಪ್ರಾಕೃತದಲ್ಲಿ ಬರೆದಿರುವ ‘ಣಾಯಕುಮಾರಚರಿಉ’ (ನಾಗಕುಮಾರಚರಿತೆ). ಪುಷ್ಪದಂತ ಕವಿಯು ಒಂಬತ್ತು ಸಂಧಿಗಳಲ್ಲಿ, ನಾನಾ ಛಂದಗಳಲ್ಲಿ, ರಸಭಾವ ಪರಿಪ್ಲುತವಾಗಿ ನಾಗಕುಮಾರನ ರಮ್ಯಕಥಾನಕವನ್ನು ವರ್ಣಿಸಿದ್ದಾನೆ. ಶ್ರುತ ಪಂಚಮಿಯಂದು ಉಪವಾಸದ ಫಲದಿಂದ ನಾಗಕುಮಾರನು ಎಂತಹ ಪದವಿ ವೈಭವ ಸುಖ ಸಮೃದ್ಧಿಗೆ ಪಾತ್ರನಾದನೆಂಬುದು ಈ ಕಾವ್ಯ ಕಥೆಯ ಆಶಯ. ಪ್ರಾಯಃ ಪುಷ್ಟದಂತ ಕವಿಗೂ ಮೊದಲು ಇಂದ್ರನಂದಿಯು (ಕ್ರಿ.ಶ. ೧೦ಶ.ದ ಆರಂಭ) ಸಂಸ್ಕೃತದಲ್ಲಿ ರಚಿಸಿರುವ ಶ್ರುತಾವತಾರ ಮತ್ತು ಶ್ರುತಪಂಚಮಿ ಕಥಾಗ್ರಂಥಗಳನ್ನು ಪ್ರಾಕೃತ ಕವಿಗೆ ಪರೋಕ್ಷ ಪ್ರೇರಣೆಯಾಗಿರಬೇಕು.

ಆದರೆ ನಾಗಕುಮರನ ಕತಾ ಪರಂಪರೆಗೆ ೧೨೦೦ ವರ್ಷಗಳ ಇತಿಹಾಸವಿದೆ (ನಾಗರಾಜಯ್ಯ ಹಂಪ : ಫಣಿಕುಮಾರ ಕಥಾಸಾಹಿತ್ಯ : ೧೯೭೭). ನಾಗಕುಮಾರ, ವಿಕ್ರಮಂಧರ, ಫಣಿಕುಮಾರ, ಪ್ರತಾಪಂಧರ ಎಂಬ ಹೆಸರುಗಳಿಂದ ಪ್ರಸಿದ್ಧ ಕಥಾನಾಯಕನಾಗಿರುವ ಈ ಮಹಾಪುರಷನು ಪಂಚಮಿ ನೋಂಪಿಯ ಸತ್ಫಲದ ಪ್ರತೀಕವಾಗಿದ್ದಾನೆ. ಪ್ರಾಕೃತದ ಮಹಾಕವಿಗಳಾದ ಸ್ವಯಂಭು (೭. ಶ.ದ. ಕಡೆ) ಮತ್ತು ತ್ರಿಭುವನ ಸ್ವಯಂಭು (೮ ಶ.) ಇವರ ಸಂಯುಕ್ತ ರಚನೆಯಾದ ‘ಪಂಚಮೀಚರಿಉ’ ಕಾವ್ಯವು (ನಾಗಕುಮಾರ) ಪಂಚಮಿ ಚರಿತೆ ಕೃತಿಯಾಗಿದೆ.

ಕನ್ನಡ ಕಥಾ ಸಾಹಿತ್ಯದಲ್ಲಿಯೂ ನಾಗಕುಮಾರನ ಶ್ರೀ ಪಂಚಮೀ ಕಥಾ ಪರಂಪರೆ ತುಂಬ ಕವಿ-ಜನ-ಪ್ರಿಯವಾಗಿ ಬೆಳೆದಿದೆ. ಪೊನ್ನಕವಿಯು (೯೬೦) ಶಾಂತಿಪುರಾಣದಲ್ಲಿ ಒಂದು ಕಡೆ ಇದನ್ನು ಪ್ರಸ್ತಾಪಿಸಿದ್ದಾನೆ : ಅಂತು ಯೌವನಂ ನೆಱೆವಿನಂ ಒಂದು ದೇವಸಂ ಶ್ರೀ ಪಂಚಮಿಯೊಳುಪವಾಸ ನಿರತೆಯಾಗಿ…. (೫-೧೮ವ). ಪೊನ್ನನು ಪುಷ್ಪದಂತ ಕವಿಯ ಸಮಕಾಲೀನ ಕವಿಯೂ ಹೌದು. ಪೊನ್ನನ ತರುವಾಯ ಕರ್ಣಪಾರ್ಯನು ನೇಮಿನಾಥಪುರಾಣ ಕಾವ್ಯದಲ್ಲಿ (೩-೧೪ವ) ಈ ನೋಂಪಿಕಥೆಯನ್ನು ಸೂಚಿಸಿದ್ದಾನೆ : ಒಂದು ದೆವಸಂ ಶ್ರೀ ಪಂಚಮಿಯ ನೋಂಪಿಯುಪವಾಸದೊಳಂ. ಕರ್ಣಪಾರ್ಯ ಇನ್ನೂ ಒಂದೆಡೆ ಮತ್ತೆ ಇದನ್ನು ನೆನಪಿಸಿಕೊಂಡಿದ್ದಾನೆ – ಶ್ರೀ ಪಂಚಮಿಯ ನೋಂಪಿಯಂ ನೋಂತು ಪವವಾಸದೊಳ್‌ (೧೪-೧೮ವ).

ಸಂಸ್ಕೃತದಲ್ಲಿ ಜಯದೇವಕವಿ (೧೦ಶ), ಮಲ್ಲಿಷೇಣ (೧೦೪೮), (ಶ್ರೀ) ಧರಸೇನ (೧೨ಶ), ರಾಮಚಂದ್ರ ಮುಮುಕ್ಷು (ಸು. ೧೧-೧೨ಶ) – ಮೊದಲಾದ ೧೦ ಜನ ಕವಿಗಳು ನಾಗಕುಮಾರನ – ಪಂಚಮಿ ಕಥಾ ಕಾವ್ಯಗಳನ್ನು ರಚಿಸಿದ್ದಾರೆ; ಪ್ರಾಕೃತ ಮತ್ತು ಹಿಂದಿಯಲ್ಲೂ ಕಾವ್ಯಗಳಿವೆ (ನಾಗರಾಜಯ್ಯ, ಹಂಪ : ೧೯೭೭ : ೫ ರಿಂದ ೧೨) ಕನ್ನಡದಲ್ಲಿ ಈ ಕಥೆಯನ್ನು ಸ್ವಾರಸ್ಯ ಪೂರ್ಣವಾಗಿ ಕಾವ್ಯಶಕ್ತಿಯಿಂದ ನಿರೂಪಿಸಿದವನು ಬಂಧುವರ್ಮ ಕವಿ, ಜೀವಸಂಬೋಧನೆ ಕಾವ್ಯದಲ್ಲಿ (ನಾಗರಾಜಯ್ಯ ಹಂಪ : ಕವಿ-ಬಂಧವರ್ಮ, ಜಿಜ್ಞಾಸೆ : ೧೯೯೩) ಅನಂತರ ಮಲ್ಲಿಷೇಣ, ನಾಗರಾಜಕವಿ, ಕಲ್ಯಾಣ ಕೀರ್ತಿ, ಬಾಹುಬಲಿ-ವರ್ಧಮಾನ, ಚಂದ್ರಸಾಗರವರ್ಣಿ (ಬ್ರಹ್ಮಣಾಂಕ) – ಈ ಕವಿಗಳು ಸ್ವತಂತ್ರ ಕಾವ್ಯಗಳನ್ನು ರಚಿಸಿದ್ದಾರೆ; ಮಲ್ಲಿಷೇಣನು ಗದ್ಯದಲ್ಲೂ, ನಾಗರಾಜನು ಪುಣ್ಯಾಸ್ರವ ಚಂಪು ಕಾವ್ಯದಲ್ಲೂ ಈ ನೋಂಪಿ ಕಥೆಯನ್ನು ಹೇಳಿದ್ದಾರೆ ಇವರೆಲ್ಲರಿಗಿಂತಲೂ ತುಂಬ ವಿಸ್ತಾರವಾಗಿ, ತೀರಲಂಬಿಸಿ ಈ ನೋಂಪಿ ಕತೆಯನ್ನು ಬೊಮ್ಮಣಕವಿಯು ‘ನಾಗಕುಮಾರ ಷಟ್ಪದಿ’ ಕಾವ್ಯದಲ್ಲಿ ನಿರೂಪಿಸಿದ್ದಾನೆ (ನಾಗರಾಜಯ್ಯ ಹಂಪ : (ಸಂ) ನಾಗಕುಮಾರಷಟ್ಪದಿ : ೧೯೭೬).

ನಾಗಕುಮಾರನನ್ನು ಕುರಿತು ತಮಿಳಿನಲ್ಲೂ ಕಾವ್ಯವಿದೆ; ಕನ್ನಡದಲ್ಲಿ ಯಕ್ಷಗಾನಗಳಿವೆ, ಜಾನಪದ ಹಾಡುಗಳಿವೆ, – ಇದು ಈ ನೋಂಪಿ ಕಥಾ ಪರಂಪರೆಯ ವ್ಯಾಪಕ ಸ್ವರೂಪವನ್ನು ಸ್ಪಷ್ಟಪಡಿಸುತ್ತವೆ. ಜತೆಗೆ ಶ್ರವಣ ಬೆಳಗೊಳದ ಜೈನಮಠದ ಗೋಡೆಗಳಲ್ಲಿಯೂ ನಾಗಕುಮಾರನ ಕಥಾ ಪರಂಪರೆಯ ಸುಂದರವಾದ ವರ್ಣ ಜಿತ್ರಗಳಿವೆ; ಈ ಭಿತ್ತಿ ಚಿತ್ರಗಳನ್ನು ನಾನು ಪ್ರಥಮ ಬಾರಿಗೆ ಗುರುತಿಸಿ, ಅದರ ಚಿತ್ರಗಳನ್ನು ಮುದ್ರಿಸಿ ಧಾಖಲಿಸಿದ್ದೇನೆ (ನಾಗರಾಜಯ್ಯ ಹಂಪ : ೧೯೭೭ : vi-xii) ಶ್ರೀ ಪಂಚಮಿಯು ಪ್ರತಿವರ್ಷ ಭಾದ್ರಪದ ಶುದ್ಧ ಪಂಚಮಿಯಂದ ಉಪವಾಸ ಮತ್ತು ತ್ರಿಕಾಲ ಜಪಮಾಡುವ ಒಂದು ನೋಂಪಿ. ನೂರಾರು ನೋಂಪಿಗಳಲ್ಲಿ ಇದು ಶಿಖರ ಸ್ಥಿತಿ ಮುಟ್ಟಿರುವ ಒಂದು ಜನಾನುರಾಗಿ ನೋಂಪಿ. ಕಾವ್ಯಾಂಶಗಳು ಹೆಚ್ಚು ಸಿಗುವ ನೋಂಪಿಕಥೆಯೂ ಇದೇನೆ.

ಶ್ರುತಪಂಚಮಿ ವ್ರತ ಮಹಾತ್ಮೆಯನ್ನು ಪ್ರಕಟಗೊಳಿಸುವ ಸಲುವಾಗಿ ಅಪಭ್ರಂಶ ಭಾಷೆಯಲ್ಲಿ ಧನಪಾಲಕವಿಯು ಬರೆದ ‘ಭವಿಸಯತ್ತ ಕಹಾ’ (ಭವಿಷ್ಯ ದತ್ತಕಥಾ) ಕೂಡ ಇಪ್ಪತ್ತೆರಡು ಸಂಧಿಗಳ ಉತ್ತಮ ಕಾವ್ಯ. ವೈಶ್ಯ ಜಾತಿಯ ಧಕ್ಕಡ ವಂಶದ ಮಾಏಸರ (ಮಾಹೇಶ್ವರ) ಮತ್ತು ಧನಶ್ರೀ ದಂಪತಿಗಳ ಮಗನಾದ ಧನಪಾಲಕವಿಯ (೧೧ ಶ.) ಭವಿಸಯತ್ತ ಕಹಾದ ನಾಯಕನಾದ ವಣಿಜ ಭವಿಷ್ಯದತ್ತನು ಕೂಡ ನಾಗಕುಮಾರನ ಇನ್ನೊಂದು ರೂಪವಷ್ಟೆ; ಅಷ್ಟರ ಮಟ್ಟಿಗೆ ಈ ಇಬ್ಬರು ಕಥಾನಾಯಕರ ನೋಂಪಿ ಕಥೆಗಳು ಹೊಂದಿಕೆಯನ್ನು ತೋರಿಸುತ್ತವೆ. ಧನಪಾಲ ಕವಿಯ ಅಪಭ್ರಂಶ ಭಾಷೆಯ ಕಾವ್ಯದ ‘ಅನೇಕ ಪ್ರಕರಣಗಳು ಬಹು ಸುಂದರ ಹಾಗೂ ರೋಚಕಗಳಾಗಿವೆ. ಬಾಲಕ್ರೀಡೆ, ಸಮುದ್ರಯಾತ್ರೆ, ನೌಕಾಭಂಗ, ಪಟ್ಟಣಕ್ಕೆ ಬೆಂಕಿಹತ್ತುವಿಕೆ, ವಿಮಾನಯಾತ್ರೆ ಮೊದಲಾದ ವರ್ಣನೆಗಳು ಓದಲು ತಕ್ಕವಾಗಿವೆ. ಕವಿಯ ಸಮಯದಲ್ಲಿ ವಿಮಾನವಿರಲಿ ಇಲ್ಲದಿರಲಿ, ಆದರೆ ವಿಮಾನದ ವರ್ಣನೆಯನ್ನು ಬಹಳ ಸಜೀವರೂಪದಲ್ಲಿ ಮಾಡಿದ್ದಾನೆ” (ಡಾ. ಹೀರಾಲಾಲ್‌ ಜೈನ್‌ : ೧೯೭೧:೨೦೧).

ಆಚಾಮ್ಲವರ್ಧನ ನೋಂಪಿಯು ಕನ್ನಡ ಸಾಹಿತ್ಯದಲ್ಲಿ ಪ್ರಸ್ತಾಪಗೊಂಡಿರುವ ಇನ್ನೊಂದು ಪ್ರಾಚೀನ ನೋಂಪಿ. ಕ್ರಿ.ಶ.ಸು. ೮೦೦ರಲ್ಲಿ ರಚಿತವಾಗಿರುವ ಆರಾಧನಾ ಕರ್ಣಾಟ ಟೀಕಾ ವಡ್ಡಾರಾಧನೆಯಲ್ಲಿಯೇ ಭ್ರಾಜಿಷ್ಣುವು ಈ ನೋಂಪಿಯನ್ನು ಹೆಸರಿಸಿದ್ದಾನೆ: ಆಚಾಮ್ಲವರ್ಧನಮೆಂಬ ನೋಂಪಿಯಂ ಪನ್ನೆರಡು ವರ್ಷಂಬರಂ ನೋಂತು ಸಮಾಧಿ ಮರಣದಿಂದಂ ಮುಡಿಪೆ: (ನಾಗರಾಜಯ್ಯ ಹಂಪ : (ಸಂ) ವಡ್ಡಾರಾಧನೆ : ೧೯೯೩:೫೭). ಆಚಾಮ್ಲವರ್ಧನ ನೋಂಪಿ ಎಂಬುಕ್ಕೆ ವರ್ಧಮಾನಮೆಂಬ ನೋಂಪಿ, ಆಯಂಬಿಲಂ ವರ್ಧಮಾನಮೆಂಬ ನೋಂಪಿ ಎಂಬ ಪಾಠಾಂತರಗಳೂ ಇವೆ; ಆಯಂಬಿಲ-ವದ್ಧಮಾಣೋ ನಾಮ ತವೋ ಕಓ – ಎಂಬುದು ಪ್ರಾಕೃತ ಕಥಾ ಸಂಗ್ರಹದ ಪಾಠ; ಆಯ ಎಂದರೆ ಪರಿಮಿತ ಪ್ರಮಾಣ, ಅಂಬಿಲ ಎಂದರೆ ಗಂಜಿ.

ಆಚಾಮ್ಲವರ್ಧನವೂ ಉಪವಾಸದ ನೋಂಪಿ. ಒಂದು ಆಚಾಮ್ಲ, ಒಂದು ಪಾರಣೆ, ಎರಡು ಆಚಾಮ್ಲ ಎರಡು ಪಾರಣೆ – ಹೀಗೆ ಹತ್ತು ಆಚಾಮ್ಲಗಳವರೆಗೂ ಹೆಚ್ಚಿಸಿಕೊಂಡು ಹೋಗುವುದು. ಆಮೇಲೆ ಮತ್ತೆ ಇದನ್ನು ಒಂಬತ್ತು ಆಚಾಮ್ಲ ಒಂದು ಪಾರಣೆ, ಎಂಟು ಆಚಾಮ್ಲ ಒಂದು ಪಾರಣೆ ಎಂಬಂತೆ ಕ್ರಮೇಣ ಕಡಮೆ ಮಾಡುವುದು. ಹೀಗೆ ಕ್ರಮವಾಗಿ ನಡಸಿದರೆ ೧೦೦ ಆಚಾಮ್ಲವೂ, ೧೯ ಪಾರಣೆಗಳೂ ಆಗುತ್ತವೆ. ಆದಿಪುರಾಣದಲ್ಲಿ ಪಂಪನೂ (೩-೬೫ ವ), ಶಾಂತಿಪುರಾಣದಲ್ಲಿ ಪೊನ್ನನೂ (೯-೮೪) ಸುಕುಮಾರ ಚರಿತೆಯಲ್ಲಿ ಶಾಂತಿನಾಥಕವಿಯೂ (೯-೧೦ ವ) ಆಚಾಮ್ಲವರ್ಧನ ನೋಂಪಿಯನ್ನು ಹೇಳಿದ್ದಾರೆ. ‘ಸೌವೀರಭಕ್ತಿ’ ಎಂಬ ಹೆಸರಿನ ನೋಂಪಿಗೂ ಇದಕ್ಕೂ ಸಂಬಂಧವಿದೆ; ಈ ನೋಂಪಿಯು ಚೆಲುವನ್ನು ಹೆಚ್ಚಿಸುತ್ತದೆಂದು ತಿಳಿಯಲಾಗಿದೆ.

ಅನಂತನ ನೋಂಪಿಯ ಕತೆಯ ವಿಚಾರವನ್ನು ‘ಯಶೋಧರ ಚರಿತೆ’ ಕುರಿತು ಹೇಳುವಾಗ ತಿಳಿಸಿದ್ದಾಗಿದೆ. ಜನ್ನನ ಅನಂತನಾಥ ಪುರಾಣದಲ್ಲಿಯೂ (೧೦-೮೦ ರಿಂದ ಮುಂದಿನ ಭಾಗ) ಇದರ ಪರಿಚಯವಿದೆ. ಶ್ರವಣಬೆಳ್ಗೊಳ ಶಾಸನದಲ್ಲಿ ಈ ವ್ರತದ ಉಲ್ಲೇಖ ಸಿಗುತ್ತದೆ (ಎಕ. ೨ (ಪ) ೪೯೨ (೩೬೧). ೧೮೫೮. ಪು. ೩೧೨) ಭಗವತೀದಾಸನೆಂಬ ಹಿಂದಿ ಕವಿಯ ಅನಂತ ಚತುರ್ದಶೀ ಚೌಪಾ ಈ (೧೭ ಶ) ಕಾವ್ಯ ಬರೆದಿದ್ದಾನೆ. ೧೭ನೆಯ ಶತಮಾನದ ಆದಿಭಾಗದಲ್ಲಿ ಹಿಂದಿಸಾಹಿತ್ಯಕ್ಕೆ ಭದ್ರವಾದ ತಳಹದಿಯನ್ನು ಹಾಕಿದ ಭಗವತೀದಾಸನು ಕಾಷ್ಠಾಸಂಘದ ಮಥುರಾನ್ವಯದ ಪುಷ್ಕರ ಗಣದ ಭಟ್ಟಾರಕ ಸಕಲ ಚಂದ್ರನ ಪಟ್ಟಧರನಾದ ಮಂಡಲಾಚಾರ್ಯ ಮಾಹೇಂದ್ರಸೇನನ ಶಿಷ್ಯನೀತ. ಅಗರವಾಲ್‌ ದಿಗಂಬರ ಜೈನ ಕವಿಯಾದ ಈತನು ಸಹಜಾದಿಪುರದವನು. ಧರ್ಮವಿಹಾರ ಮಾಡುತ್ತ ಅನೇಕ ಸ್ಥಳಗಳಲ್ಲಿದ್ದು ಕೃತಿ ರಚನೆ ಮಾಡಿದ್ದಾನೆ, ಅವುಗಳಲ್ಲಿ ಹೆಚ್ಚಿನವು ನೋಂಪಿಯ ಕಥೆಗಳೇ ಆಗಿವೆ: ಆದತ್ತಿ ವ್ರತರಾಸ, ಆದಿತ್ಯವಾರ ಕಥಾ, ದಶಲಾಕ್ಷಣೀ ರಾಸ, ರೋಹಣೀ ವ್ರತರಾಸ, ಸಮಾಧೀ ರಾಸ, ಸುಗಂಧ ದಶಮೀ ಕಥಾ – ಇವು ವ್ರತಕಥಾ ಕಾವ್ಯಗಳು.

ಭಗವತೀ ದಾಸನು ರಚಿಸಿರುವ ಸುಗಂಧ ದಶಮೀ ಕಥಾ ಗಮನಾರ್ಹ. ನೋಂಪಿಯ ಕಥೆಗಳಲ್ಲಿ ಬಹು ಬಳಕೆಯಲ್ಲಿರುವ ಸುಗಂಧ ದಶಮಿಯ ನೋಂಪಿಯು ಪ್ರಾಚೀನ ಹಿನ್ನೆಲೆಯನ್ನು ಪಡೆದಿದೆ. ಇದರ ಮೊದಲ ಸೆಲೆ ಮಹಾಭಾರತ ಕತೆಯ ದ್ರೌಪದಿಯ ಹಿಂದಣ ಜನ್ಮವಾದ ನಾಗಶ್ರೀ ಮತ್ತು ಸುಕುಮಾಲಿಯಾರ ಚರಿತ್ರೆಯಲ್ಲಿದೆ. ಈ ಪುಸ್ತಕದ ಮೊದಲನೆಯ ಅಧ್ಯಾಯದಲ್ಲಿ ಪ್ರಸ್ತಾಪಿಸಿರುವ ಪ್ರಾಚೀನ ಪ್ರಾಕೃತ ಗ್ರಂಥವಾದ ನಾಯಾ-ಧಮ್ಮ-ಕಹಾಓ (ಜ್ಞಾತೃಧರ್ಮಕಥಾ)ದಲ್ಲಿ ಮೊದಲನೆಯ ಶ್ರುತಸ್ಕಂಧದ ೧೯ ಅಧ್ಯಾಯಗಳಲ್ಲಿ ೮ನೆಯ ಅಧ್ಯಾಯದಲ್ಲಿ ವಿದೇಹರಾಜಕನ್ಯೆಯಾದ ಮಲ್ಲಿಯ, ಹಾಗೂ ೧೬ನೆಯ ಅಧ್ಯಾಯದಲ್ಲಿ ದ್ರೌಪದಿಯ ಪೂರ್ವ ಭವಗಳ ಭವಾವಳಿ ಕಥೆಗಳಿವೆ. ಅವುಗಳು ಈ ಸುಗಂಧ ದಶಮಿ ನೋಂಪಿಗೆ ಸಂಬಂಧ ಹೊಂದಿವೆ. ನಾಗಪುರದ ಶಾಸ್ತ್ರ ಭಂಡಾರದಲ್ಲಿ ಸುಗಂಧದಶಮಿ ಕಥೆಯ ಅಪೂರ್ವ ಹಸ್ತಪ್ರತಿಯಿದೆ; ಅದರಲ್ಲಿ ಈ ನೋಂಪಿ ಕಥೆಯನ್ನು ನಿರೂಪಿಸುವಾಗ ಕಥಾಭಾಗವನ್ನು ಚಿತ್ರಿಸುವ ೭೫ ಚಿತ್ರಗಳಿವೆ. ಬಾಲಚಂದ್ರ ಕವಿಯ ಸುಗಂಧ ದಶಮಿ ‘ಸುಗಂಧ ದಹಮೀ ಕಹಾ’ ಎಂಬ ಪ್ರಾಕೃತ ಕಾವ್ಯವಿದೆ; ಬಾಲಚಂದ್ರನ ಇನ್ನೊಂದು ಕಾವ್ಯ ಣಿದ್ದಹ ಸತ್ತಮೀ ಕಹಾ ಎಂಬುದೂ ವ್ರತ ಕತೆಯೇ ಆಗಿದೆ – ಇದು ನಿದುಃಖ ಸಪ್ತಮೀ ನೋಂಪಿ ಕಥೆ.

ಕನಕಾವಳೀ ನೋಂಪಿಯನ್ನು ಕರ್ಣಪಾರ್ಯನು ತನ್ನ ನೇಮಿನಾಥ ಪುರಾಣದಲ್ಲಿ ಹೇಳಿದ್ದಾನೆ : ಕನಕಾವಳೀ ನೋಂಪಿಯಂ ನೋಂತು (೧೪-೨೨ ವ). ಇದು ಒಂದು ವರ್ಷದಲ್ಲಿ ೮೩ ಉಪವಾಸಗಳಿರುವ ನೋಂಪಿ. ಪ್ರತಿ ತಿಂಗಳಲ್ಲಿ ೧, ೫, ೧೦ನೆಯ ತಿಥಿ ಮತ್ತು ಕೃಷ್ಣ ೨, ೬, ೧೨ನೆಯ ತಿಥಿಗಳಲ್ಲಿ ಉಪವಾಸ, ತ್ರಿಕಾಲ ಮಂತ್ರಜಪ – ಹೀಗೆ ಒಂದು ವರ್ಷದ ನೋಂಪಿ. ಪೂರ್ವಪುರಾಣದಲ್ಲಿಯೇ ಜಿನಸೇನಾಚಾರ್ಯರು ಈ ನೋಂಪಿಯನ್ನು ಹೆಸರಿಸಿದ್ದಾರೆ (ಪರ್ವ ೭. ಶ್ಲೋಕ ೩೯) ಚಾವುಂಡರಾಯ ಪುರಾಣದಲ್ಲಿಯೂ ಉಲ್ಲೇಖ ಬಂದಿದೆ ((ಸಂ) ಕಮಲಾಹಂಪನಾ, ಶೇಷಗಿರಿ : ೧೯೮೩ : ೩೩೭೦).

ಕನ್ನಡ ಕವಿಗಳಿಗೆ ನೋಂಪಿ ಕಥೆಗಳ ಬಗೆಗೆ ಹೆಚ್ಚಿನ ಕಳಕಳಿಯೂ, ತಿಳಿವಳಿಕೆಯೂ ಇರುವುದನ್ನು ಈ ಹಿಂದೆಯೇ ಹೇಳಿದ್ದಾನೆ. ಚಾಮುಂಡರಾಯನಂತೂ ಆಚಾಮ್ಲವರ್ಧನ ನೋಂಪಿ (ಪು. ೨೭), ಕನಕಾವಳಿ ನೋಂಪಿ (ಪು. ೩೩೭), ಕರ್ಮಕ್ಷಪಣ (ಪು. ೨೫), ಕಲ್ಪವೃಕ್ಷ ಪೂಜೆ (೧೯೭), ಚತುರ್ಮುಕ ಪೂಜೆ (೧೯೭), ಮುಕ್ತಾವಳೀ ನೋಂಪಿ (ಪು. ೨೬), ರತ್ನಾವಳೀ ನೋಂಪಿ (೨೬), ಸರ್ವತೋಭದ್ರ (೨೬), ಸಿಂಹ ವಿಕ್ರೀಡಿತ (೨೬) ಮುಂತಾದ ನೋಂಪಿಗಳನ್ನು ಹೆಸರಿಸದ್ದಾನೆ. ಕರ್ಣಪಾರ್ಯ ಕವಿಯು ಅಷ್ಟಮೀ ನೋಂಪಿ (೧೪-೧೪ ವ), ಆಚಾಮ್ಲವರ್ಧನ ನೋಂಪಿ (೧೪-೩೩ ವ) ಕನಕಾವಳೀ ನೋಂಪಿ (೧೪-೨೨ ವ) ಗೋಮುಖಿ ನೋಂಪಿ (೬-೯೯ ವ : ಬಂಧುವರ್ಮನ ಹರಿವಂಶದಲ್ಲಿ ೬-೨೪ ವ), ಜಿನಗುಣ ಸಂಪತ್ತಿ ನೋಂಪಿ (೧೪-೩೦ ವ), ಜಿನಸಂಪತ್ತಿ ನೋಂಪಿ (೧೪-೧೪ ವ : ಜಿನಗುಣಸಂಪತ್ತು), ನಂದೀಶ್ವರ (೧-೧೩೦) ವಡ್ಡಾರಾಧನೆಯಲ್ಲೂ ಬಂದಿದೆ, ಮುಕ್ತಾವಣಿ ನೋಂಪಿ (೧೪-೨೪ ವ : ಪಂಪನ ಆದಿಪುರಾಣ ೫-೫೮ ವ), ರತ್ನಾವಳಿ ನೋಂಪಿ (೧೪-೧೯) : ಆದಿಪುರಾಣ, ೩-೫೮ ವ) ಶ್ರೀ ಪಂಚಮಿ ನೋಂಪಿ (೧೪-೧೮ ವ) ಸಿಂಹ ನಿಷ್ಪೀಡಿತ ನೋಂಪಿ (೬-೬೦ ವ) ಮೊದಲಾದುವನ್ನು ಹೆಸರಿಸಿದ್ದಾನೆ.

ಮೋಕ್ಷ ತಿಲಕವೆಂಬ ವ್ರತವನ್ನು ನೋನ್ತು ಗಂಗರಾಜ ದಂಡಾಧಿಪನ ಅತ್ತಿಗೆ ಜಕ್ಕಣಬ್ಬೆಯ ನಯನದೇವರನ್ನು ಮಾಡಿದಳೆಂದು ಶ್ರವಣಬೆಳುಗೊಳದ ಶಾಸನದಿಂದ ತಿಳಿದುಬರುತ್ತದೆ (ಎ.ಕ. ೧೧ : ೧೨೫, ೫೦೩, ೫೦೪) ಸಿದ್ಧಚಕ್ರ ನೋಂಪಿಯ ಕಥೆಯ ಮಹಿಮೆ ಮಹತ್ವಗಳನ್ನು ಸಾದರಪಡಿಸುವ ಸಲುವಾಗಿ ಹುಟ್ಟಿಕೊಂಡಿರುವ ಕಥೆಯೇ ಶ್ರೀಪಾಲ ಚರಿತೆ. ಎರಡು ಬಗೆಯ ಶ್ರೀಪಾಲಚರಿತೆಗಳಿವೆ. ಮಂಗರಸಾದ್ಯ ಕವಿಗಳು ಬರೆದ ಶ್ರೀಪಾಲ ಚರಿತೆ ಒಂದು, ದೇವರಸಾದ್ಯರು ಬರೆದ ಶ್ರೀಪಾಲ ಚರಿತೆ ಇನ್ನೊಂದು. ರತ್ನಶೇಖರ ಸೂರಿಯು (೧೪ ಶ) ಬರೆದ ಶ್ರೀಪಾಲ ಚರಿತೆ ನೋಂಪಿಯ ಕಥೆಯು ಪ್ರಾಕೃತದಲ್ಲಿದೆ, ಇದರಲ್ಲಿ ೧೩೪೨ ಗಾಥಾಗಳಿವೆ. ನರಸೇನನೆಂಬ ಇನ್ನೊಬ್ಬ ಕವಿಯೂ (೧೫೬೧) ಅಪಭ್ರಂಶ ಪ್ರಾಕೃತದಲ್ಲಿ ಚಿರಿವಾಲಚರಿಉ ಕಾವ್ಯ ಬರೆದಿದ್ದಾನೆ. ಅಪಭ್ರಂಶ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಸುಮಾರು ನಲವತ್ತು (೪೦) ಶ್ರೀಪಾಲ ಚರಿತೆಗಳು ರಚಿತವಾಗಿರುವುದು ಈ ನೋಂಪಿಕಥೆಯ ಪ್ರಸರಣಾಧಿಕ್ಯವನ್ನು ಹೇಳುತ್ತದೆ (ಡಾ. ವೇಲಣಕರ : ಜಿನರತ್ನಕೋಶ).

“ಕ್ರಿ.ಶ. ೧೪೬೪ ರಿಂದ ಕಾರ್ಕಳದಲ್ಲಿ ರಾಜ್ಯಭಾರ ಮಾಡಿಕೊಂಡು ಇರುತ್ತಿದ್ದ ಹಿರಿಯ ಭೈರವದೇವನು ಕ್ರಿ.ಶ. ೧೫೦೪ರಲ್ಲಿ ತಾನು ಸೌಭಾಗ್ಯ ನೋಂಪಿಯನ್ನು ಮಾಡಬೇಕೆಂದು ನಿಶ್ಚಯಿಸಿದನು. ಈ ನೋಂಪಿಯನ್ನು ನಡಸಿಕೊಡಲು ಮೂಡುಬಿದ್ರಿಯ ಶ್ರೀ ಚಾರುಕೀರ್ತಿ ಸ್ವಾಮಿಗಳವರಿಗೆ ಬಿನ್ನವತ್ತಳೆಯನ್ನು ಬರೆದು ಕಳುಹಿಸಿದನು. ಆದರೆ ಮೂಡಬಿದ್ರೆಯಲ್ಲಿ ಚೌಟರಸನಿಗೂ ಅದೇ ಸಮಯ ನೋಂಪಿ ಇದ್ದ ಕಾರಣ ಅವರಿಗೆ ಬರಲು ಅನಾನುಕೂಲವಾಗಿ ತಾವು ಹೋಗದೆ ಮೂಡಬಿದ್ರಿಗೆ ಆಗ ಆಗಮಿಸಿದ್ದ ಓರ್ವ ನಿರ್ವಾಣ ಸ್ವಾಮಿಗಳವರನ್ನು ಕಾರ್ಕಳಕ್ಕೆ ಕಳುಹಿಸಿಕೊಟ್ಟರು. ಭೈರವದೇವನು ಇದರಿಂದ ಅಸಮಾಧಾನಗೊಂಡು ಅದೇ ನಿರ್ವಾಣ ಸ್ವಾಮಿಗಳವರಿಗೆ ಪಟ್ಟಕಟ್ಟಿ ತಮ್ಮ ವಂಶದ ಮೂಲಗುರು ಪೀಠವಾದ ಪನಸೋಗೆಯ ಶಾಖೆಯದೇ ಒಂದು ಮಠವನ್ನು ಕಾರ್ಕಳದಲ್ಲಿ ಸ್ಥಾಪಿಸಿ, ಪಟ್ಟಕಟ್ಟಿದ ನಿರ್ವಾಣ ಸ್ವಾಮಿಗಳವರಿಗೆ ಪಟ್ಟದ ಅಭಿಧಾನವಾದ ಶ್ರೀ ಲಲಿತಕೀರ್ತಿ ಭಟ್ಟಾರಕರೆಂಬ ಪ್ರಶಸ್ತಿಯನ್ನು ಕೊಟ್ಟು ಅವರಿಂದ (ಸೌಭಾಗ್ಯ ನೋಂಪಿಯ) ವ್ರತವನ್ನು ಆಚರಿಸಿ ಕೊಂಡನು. ಹೀಗೆ ಪನಸೋಗೆಯ ಶಾಖೆಯಾಗಿ ಅಸ್ತಿತ್ವಕ್ಕೆ ಬಂದದ್ದು ಕಾರ್ಕಳದ ಶ್ರೀ ಲಲಿತಕೀರ್ತಿ ಪೀಠ” (ಡಿ. ಪುಟ್ಟಸ್ವಾಮಯ್ಯ; ಕಾರ್ಕಳದ ಚರಿತ್ರೆ).

ಈ ತೆರನಾಗಿ ಒಂದೊಂದು ನೋಂಪಿಯ ಕಥೆಯನ್ನು ಕುರಿತ ಕೃತಿಗಳನ್ನು ಹೇಳುತ್ತಾ ಹೊರಟಲ್ಲಿ ಅದು ಇನ್ನೊಂದು ಗ್ರಂಥವಾಗುತ್ತದೆ. ಸಾರಾಂಶವಿಷ್ಟೆ, ತೌಲನಿಕ ಅಧ್ಯಯನದ ಅಗತ್ಯವಿದೆ ಎಂಬುದರತ್ತ ಈ ಅಂಕಿ ಅಂಶಗಳು ಬೆರಳೆತ್ತಿ ತೋರಿಸುತ್ತವೆ.

ಭಾರತೀಯ ಮತ್ತು ಕನ್ನಡ ಸಾಹಿತ್ಯದ ಸೃಜನಶೀಲತೆಯ ಆಳ, ವಿಸ್ತಾರ, ವೈವಿಧ್ಯವನ್ನು ವೆಗ್ಗಳಿಸಲು ಪ್ರಾಕೃತ ತವನಿಧಿಗೆ ಇನ್ನೊಮ್ಮೆ ಮುಗಿಬೀಳಬೇಕು. ಬಹುಭಾಷೆ, ಬಹುಧರ್ಮ, ಬಹು ಸಂಸ್ಕೃತಿ ವಾರಸುದಾರನಂತಿರುವ ಕನ್ನಡ ಸಾಹಿತ್ಯದ ಕಥನಕ್ರಮದ ಪುನಶ್ಚೇತರಿಕೆಗೆ ಬೇಕಾಗುವ ಧಾತು ದ್ರವ್ಯಸಾಮಗ್ರಿ ಪ್ರಾಕೃತ ಈ ಗಣಿಯಲ್ಲಿದೆ.

ಪ್ರಸರಣ : ಪರ್ಯಟನ

ಕ್ರಿ.ಶ. ಒಂಬತ್ತನೆಯ ಶತಮಾನದ ವೇಳೆಗೆ ಕರ್ನಾಟಕದಲ್ಲಿ ನೋಂಪಿಗಳ ಬಳಕೆ ಮತ್ತು ಕಥಾನಕಗಳ ಹೇಳಿಕೆ ನಡೆದಿತ್ತೆಂಬುದಕ್ಕೆ ಭ್ರಾಜಿಷ್ಣುವಿನ (೮೦೦) ಆರಾಧನಾ ಕರ್ಣಾಟ ಟೀಕಾ (ವಡ್ಡಾರಾಧನೆ), ಪಂಪನ (೯೪೧) ಆದಿಪುರಾಣ ಮತ್ತು ಪೊನ್ನನ (೯೬೫) ಶಾಂತಿಪುರಾಣ ಊರೆಗೋಲಾಗಿವೆ. ಇನ್ನೂ ಮುಖ್ಯವಾದ ಆಧಾರವೆಂದರೆ ಜಿನಸೇನಾಚಾರ್ಯರ (೮೬೫) ಪೂರ್ವಪುರಾಣ (ಆದಿಪುರಾಣ) ಮತ್ತು ಗುಣಭದ್ರಾಚಾರ್ಯರ (೮೯೮) ಉತ್ತರ ಪುರಾಣ. ನೂರಾರು ನೋಂಪಿ ಕಥೆಗಳಲ್ಲಿ ಎಲ್ಲವೂ ಸಮಪ್ರಮಾಣದ ಪ್ರಸರಣವನ್ನು ಪಡೆದಿಲ್ಲ. ಕೆಲವು ಹೆಚ್ಚು ಪ್ರಚಾರದಲ್ಲಿವೆ, ಮತ್ತೆ ಕೆಲವು ಅಪರೂಪವೆನಿಸಿವೆ. ಪ್ರಾಯೋಗಿಕ ಅಧ್ಯಯನಕ್ಕೆ ಒಳಪಡಿಸಿದರೆ ಕೆಲವು ಕಥೆಗಳ ಆಯಾಮ, ಬೀಸು ಹಾಸುಗಳು ಅಚ್ಚರಿಗೊಳಿಸುತ್ತದೆ. ನಿದರ್ಶನಕ್ಕಾಗಿ ಶ್ರೀಪಂಚಮಿಯ ನೋಂಪಿ ಕಥೆ ನಡೆದು ಬಂದ ದಾರಿಯನ್ನು ನೋಡಬಹುದು, ಈ ಕತೆಯ ನಾಯಕನಾದ ನಾಗಕುಮಾರನು ಫಣಿಕುಮಾರ, ವಿಕ್ರಮಂಧರ, ಜಿನಮುನಿ ಎಂಬಿತ್ಯಾದಿ ಹೆಸರುಗಳಿಂದ ಜನಪ್ರಿಯನಾದ ಜನಪದರ ಒಡೆಯನೆನಿಸಿದ್ದಾನೆ. ಈ ನೋಂಪಿ ಕಥೆಯಲ್ಲಿ ಜಾನಪದ ಆಶಯಗಳು ಗುತ್ತಿಗುತ್ತಿಯಾಗಿ ತೆಕ್ಕೆ ಹಾಕಿವೆ. ಈತನ ಬಗೆ ಜನಪದ ಗೀತೆಗಳಿವೆ, ಯಕ್ಷಗಾನವಿದೆ, ಆರತಿ ಹಾಡುಗಳಿವೆ, ಜೋಗಳ ಪದಗಳಿವೆ, ರತ್ನಾಕರ ವರ್ಣಿ ಕವಿ ಬರೆದ ಕೀರ್ತನೆಯಿದೆ, ಸಂಸ್ಕೃತ, ಪ್ರಾಕೃತ, ಕನ್ನಡ ಕಾವ್ಯಗಳಿವೆ (ನಾಗರಾಯಜಯ್ಯ, ಹಂಪ : ಫಣಿಕುಮಾರ ಕಥಾ ಸಾಹಿತ್ಯ : ೧೯೭೭) ಈ ರಮ್ಯಕಥಾ ನಾಯಕನನ್ನು ಕುರಿತು ಹೊರಬಂದಿರುವ ಕಾವ್ಯ ಕಥಾನಕಗಳ ಸಂಕ್ಷಿಪ್ತ ಸಮೀಕ್ಷೆಯಿಂದ ನೋಂಪಿ ಕಥೆಗಳ ವೈಭವ, ವ್ಯಾಪ್ತಿ ಮತ್ತು ಮಹತ್ವಗಳಿಗೆ ಕನ್ನಡಿ ಹಿಡಿದಂತಾಗಬಹುದೆಂಬ ಗ್ರಹಿಕೆಯಿಂದ ಅಂತಹ ಪ್ರಯತ್ನ ಈಗಾಗಲೆ ನಡೆದಿದೆ (ಅದೇ).

ಭಾರತೀಯ ಭಾಷೆಗಳಲ್ಲಿ ನಾಗಕುಮಾರ ಚರಿತೆಗಳ ಒಂದು ಅವಲೋಕನದಿಂದ ತಿಳಿದು ಬರುವ ಪ್ರಕಾರ ಎಲ್ಲ ನಾಗಕುಮಾರ ಚರಿತೆಗಳು ತಿರುಳು ಹಾಗೂ ಸಂದೇಶ ಇರುವುದು ಶ್ರೀ ಪಂಚಮಿ ನೋಂಪಿಯ ಹಿರಿಮೆ ಸಾರುವುದರಲ್ಲಿ.

ನಂದೀಶ್ವರದ ನೋಂಪಿಯ ಕತೆ ೩೮ ಪುಟ ಪ್ರಮಾಣದ ದೊಡ್ಡ ಕಥೆ ಮಾತ್ರವಲ್ಲದೆ ಪಕ್ವ ಚಂಪೂಕಾವ್ಯವೂ ಹೌದು. ವೈವಿಧ್ಯಮಯವಾಗಿ ಹರಡಿಕೊಂಡಿರುವ ಈ ಕಥೆಯನ್ನು ಜೈನಧರ್ಮದ ಸಂಕ್ಷಿಪ್ತ ಕೈಪಿಡಿ ಎನ್ನಲಡ್ಡಿಯಿಲ್ಲ. ಆದ್ಯಂತಪ್ರಾಸ ಯುಕ್ತ ಲಲಿತರಗಳೆ, ತ್ರೋಟಕದ್ವಯ, ತರಳ ಮೊದಲಾದ ವಿವಿಧ ವೃತ್ತಗಳು, ಹಲವಾರು ಕಂದಗಳು, ಉತ್ತಮಗದ್ಯ ಇವುಗಳಿಂದ ಮೈತುಂಬಿಕೊಂಡಿರುವ ನಂದೀಶ್ವರ ನೋಂಪಿಯ ಕಾವ್ಯವನ್ನು ಜೈನ ಧಾರ್ಮಿಕ, ಸಾಂಸ್ಕೃತಿಕ, ಲೌಕಿಕ ಲೋಕದ ಪ್ರಾತಿನಿಧಿಕ ಕೃತಿಯೆನ್ನಬಹುದು. ಎರಡು ನಂದೀಶ್ವರ ನೋಂಪಿಯ ಕತೆಗಳಲ್ಲಿ ಒಂದು ಪುಟ್ಟಗದ್ಯ ಪ್ರಧಾನವಾದ ನಿರೂಪಣೆಯಾಗಿದ್ದು ನೀರಸವಾಗಿದೆ, ಇನ್ನೊಂದು ಚೆಲುವಾಂತ ಚಂಪೂಕಾವ್ಯವಾಗಿದೆ. ಹೀಗಾಗಿ ಎರಡೂ ಕಥೆಗಳ ತಿರುಳು ಒಂದೇ ಆದರೂ ಅವಗಳ ಅಭಿವ್ಯಕ್ತಿಯಲ್ಲಿರುವ ಅಂತರ ಎದ್ದು ತೋರುತ್ತದೆ. ಇದೇ ಬಗೆಯ ಇನ್ನೊಂದು ಕತೆ ಷೋಡಶ ಭಾವನೆ ನೋಂಪಿಯದು. ಇವುಗಳಲ್ಲಿ ಚಂಪೂ ಕಾವ್ಯವೂ ಕನ್ನಡ ನಾಡಿನ ಕವಯುತ್ರಿಯೊಬ್ಬಳ ಪ್ರತಿಭೆ ಹೆಪ್ಪಗಟ್ಟಿರುವ ಹೆಚ್ಚಳವನ್ನು ಅನ್ಯತ್ರ ಹೇಳಿದ್ದಾಗಿದೆ.

ಕನ್ನಡದಲ್ಲಿ ರಚಿತವಾಗಿರುವ ನೂರಾರು ನೋಂಪಿಯ ಕಥೆಗಳೆಲ್ಲವೂ ಸ್ವತಂತ್ರ ರಚನೆಗಳೆಂದು ಹೇಳಲಾಗದು. ಕನ್ನಡದ ಲೇಖಕರೇ ತಂತಂಮ ಉಪಜ್ಞತೆಯಿಂದ ಸೃಷ್ಟಿಸಿರುವ ಕತೆಗಳೂ ಇವೆಯೆಂಬುದು ದಿಟ. ಆದರೆ ಅಷ್ಟೇ ನಿಜ, ಅನೇಕ ಕತೆಗಳಿಗೆ ಅನ್ಯಮೂಲಗಳೂ ಇದ್ದುವೆಂಬುದು. ಪ್ರಾಕೃತ ಸಂಸ್ಕೃತಾದಿ ಭಾಷೆಗಳಲ್ಲಿ ಇರುವ ಸಂವಾದಿ ಕತೆಗಳನ್ನು ಪರಿಶೀಲಿಸಿದರೆ ಈ ಕಥೆಗಳು ದೇಶಕಾಲ ಭಾಷೆಗಳ ಚೌಕಟ್ಟಿನೊಳಗೆ ಎಷ್ಟು ದೂರದವರೆಗೆ ಪರ್ಯಟನ ಮಾಡಿವೆ ಎಂಬುದು ಮನವರಿಕೆಯಾಗುತ್ತದೆ. ಇದು ಮತ್ತಷ್ಟು ತೌಲನಿಕ ಅಧ್ಯಯನದ ವಿಷಯ. ಮಾದರಿಗಾಗಿ ಕೆಲವು ನೋಂಪಿಗಳ ವಿವಿಧ ಆಕರ ಪ್ರಸ್ತಾಪವನ್ನು ಗಮನಿಸಬಹುದು :

೦೧. ಅಣತಿ ನೋಂಪಿ ಕತೆ : ಆಣಂತಿ, ಆಣತಿ ಎಂಬ ರೂಪಗಳು ಇವೆ. ಭಗವತೀದಾಸನೆಂಬ (೧೭ನೆಯ ಶತಮಾನ) ಹಿಂದಿಯ ಕವಿ ‘ಆದತ್ತಿವ್ರತರಾಸ’ವನ್ನು ರಚಿಸಿದ್ದಾನೆ. ಆಣತಿವ್ರತವು ಅಭಕ್ಷಣವ್ರತಕ್ಕೆ ಸವಂವಾದಿಯಾದುದು. ಮಹಾಪುರಾಣ, ಪರ್ವ ೭೧, ಶ್ಲೋಕ ೯೪೫.

೦೨. ಅನಂತ ಚತುರ್ದಶೀ ನೋಂಪಿ : ಭತವತೀದಾಸ (೧೭ಶ.) ಅನಂತ ಚತುರ್ದಶೀ ಚಾಪಾಈ.

೦೩. ಅನಂತನ ನೋಂಪಿ : ಅನನ್ತನ ವ್ರತ, ಶ್ರವಣಬೆಳಗೊಳ ಶಾಸನ ೪೯೨; ಜನ್ನ (೧೨೩೫) ಅನಂತನಾಥ ಪುರಾಣಂ; ಮಾಘಣಂದಿ, ಶಾಸ್ತ್ರಸಾರ ಸಮುಚ್ಚಯಂ.

೦೪. ಅಷ್ಟಾಹ್ನಿಕ ನೋಂಪಿ : ಮಹಾಪುರಾಣ, ೭-೨೨೦, ೫೪-೫೦, ೬೨-೪೦೭, ೭೦-೭, ೪೮,; ೭೩-೫೮, ೭೬-೧೪೬೮.

೦೫. ಅಕ್ಷತೆಯ ನೋಂಪಿ : ಸಕಲಕೀರ್ತಿ (೧೪೦೦) ಅಕ್ಷಯ ನಿಧಿ ವ್ರತಕಥಾ.

೦೬. ಆಚಾಮ್ಲವರ್ಧನ ನೋಂಪಿ : ಇದು ಸೌವೀರ ಭುಕ್ತಿ ನೋಂಪಿಗೆ ಸಂವಾದಿ, ಹರಿಷೇಣ (೯೪೧), ಬೃಹತ್‌ ಕಥಾ ಕೋಶದಲ್ಲಿ ಸನತ್ಕುಮಾರನ ಕಥೆ : ನಾಗವರ್ಮನ (೧೦೪೨) ವರ್ಧಮಾನಪುರಾಣಂ, ೧೩-೧೯ ವಚನ, ವಡ್ಡಾರಾಧನೆ, ಚಾವುಂಡರಾಯ ಪುರಾಣಂ (೯೭೮), ಪೊನ್ನನ (೯೬೫) ಸಾಂತಿಪುರಾಣಂ, (- ೮೪; ಮಹಾಪುರಾಣ ೭-೪೨, ೭೧-೯೫೩), ಶಾಂತಿನಾಥ ಕವಿಯ ಸುಕುಮಾರ ಚರಿತೆ ಇತ್ಯಾದಿ. ಈ ಪ್ರಯೋಗಬಾಹುಳ್ಯವು ಇದರ ಅಧಿಕ ಪ್ರಸಾರವನ್ನು ಹೇಳುತ್ತದೆ.

೦೭. ಆದಿತ್ಯವಾರದ ನೋಂಪಿ : ಇದಕ್ಕೆ ಅರ್ಕವಾರದ ನೋಂಪಿ, ಭಾನುವಾರದ ರವಿವಾರದ – ಎಂಬ ಇತರ ಹೆಸರುಗಳಿವೆ. ಭಗವತೀದಾಸ, ಆದಿತ್ಯವಾರ ವ್ರತ ಕಥಾ; ಭುವನಕೀರ್ತಿಮುನಿ (೧೬೯೧) ರವಿವ್ರತಕಥಾ.

೦೮. ಉೞ್ಗೆನೋಂಪಿ : ಉಗ್ಗಿ ನೋಂಪಿ. ಕೇಶಿರಾಜನು (೧೨೩೫) ಶಬ್ದಮಣಿದರ್ಪಣ ವ್ಯಾಕರಣದಲ್ಲಿ ‘ಉೞ್ಗೆ-ಉಗ್ಗಿಯೆಂದೊಂದು ನೋಂಪಿ’ ಎಂದು ತಿಳಿಸಿದ್ದಾನೆ. ರನ್ನನ (೯೯೩) ಅಜಿತನಾಥಪುರಾಣ ೬-೨೮, ನಾಗವರ್ಮ (೧೦೪೨) ಕಾವ್ಯಾವಲೋಕನ, ಪದ್ಯ ಸಂಖ್ಯೆ ೮೯೨; ಸೌತ್‌ ಇಂಡಿಯನ್‌ ಇನ್ಸ್‌ಕ್ರಿಪ್ಷನ್ಸ್‌ ಸಂಪುಟ ೯, ಭಾಗ-೧, ಶಾಸನ ಸಂಖ್ಯೆ ೧೦೧, ಕಾಲ ೧೦೪೫.

೦೯.ಏಕಾವಳೀ ನೋಂಪಿ : ಸಕಲಕೀರ್ತಿ (೧೪೦೦) ಏಕಾವಲೀ ವ್ರತಕಥಾ

೧೦. ಐಂದ್ರಧ್ವಜ ನೋಂಪಿ : ಇದು ಇಂದ್ರನಿಗೆ ಸಂಬಂಧಿಸಿದ್ದು, ಇಂದ್ರಮಹಾ ಎಂದೂ ಕರೆಯುವರು. ಇಂದ್ರನ ಹಬ್ಬ (ಇಂದ್ರಮಹ)ವನ್ನು ಆಚರಿಸುವಾಗ ಇಂದ್ರಕೇತು / ಇಂದ್ರಧ್ವಜವನ್ನು ನೆಟ್ಟು ಉತ್ಸವ ಆಚರಿಸುವರು. ರಾಮಾಯಣ (ಇವ. ೧೬.೩೬) ಮಹಾಭಾರತ (೧.೬೪.೩೩) ಮಹಾಕಾವ್ಯಗಳಲ್ಲೂ ಕಥಾಸರಿತ್‌ ಸಾಗರದಲ್ಲೂ ಇಂದ್ರಮಹೋತ್ಸವದ ಉಲ್ಲೇಖವಿದೆ; ಭಾಸನೂ ಹೇಳಿದ್ದಾನೆ. ಭರತಚಕ್ರವರ್ತಿ ಎಂಟು ದಿವಸ ಇಂದ್ರ ಪೂಜೆ ಮಾಡಿದನು. ನಾಯಾಧಮಕಹಾಓ, ಭಗವತೀ ಸೂತ್ರ, ಬೃಹತ್‌ ಕಲ್ಪಸೂತ್ರಗಳಲ್ಲಿ ಇಂದ್ರಯಷ್ಟಿ ಅರ್ಥಾತ್‌ ಇಂದ್ರಧ್ವಜದ ವಿವರಣೆ ಸಿಗುತ್ತದೆ. (Nagarajaiah, Hampa : Indira in Jaina Iconography : 2001)

೧೧. ಕನಕಾವಳೀ ನೋಂಪಿ : ಮಹಾಪುರಾಣ ೭-೩೯, ೭೧-೮೯೩; ಪಂಪ (೯೪೧) ಆದಿಪುರಾಮ ೩-೬೪ ವ; ಕರ್ಣಪಾರ್ಯ (೧೧೪೦) ನೇಮಿನಾಥ ಪುರಾಣಂ, ೧೪-೨೨ವ ಚಾವುಂಡರಾಯಪುರಾಣಂ, ಸಕಲಕೀರ್ತಿ (೧೪೦೦) ಕವಿಯ ಸಂಸ್ಕೃತ ಕಾವ್ಯ ಇತ್ಯಾದಿ.

೧೨. ಕರ್ಮಕ್ಷಪಣ ನೋಂಪಿ : ‘ಸಕಲ ಶ್ರಾವಕ ವ್ರತಂಗಳಂ ಕೈಗೊಂಡು ನೂಱು ನಾಲ್ವತ್ತು ದಿವಸಂ ನೆಱೆವ ಕರ್ಮಕ್ಷಪಣಮೆಂಬ ನೋಂಪಿಯಂ ನೋಂತು’ – ಚಾವುಂಡರಾಯ ಪುರಾಣಂ.

೧೩. ಕಲ್ಪಕುಜದ ನೋಂಪಿ : ಕುಜ ಪಂಚಮಿ ನೋಂಪಿ: ಕಲ್ಪವೃಕ್ಷ ಮಹಾಪೂಜೆ; ಇದು ಚಕ್ರವರ್ತಿಗಳು ಮಾಡುವ ಪೂಜೆಯೆಂದು ಶ್ರಾವಕಾಚಾರದಲ್ಲಿ ಹೇಳಿದೆ. ಶಾಂತಿನಾಥ ಕವಿಯೂ (೧೦೬೨) ಸುಕುಮಾರ ಚರಿತೆಯಲ್ಲಿ ‘ಚಕ್ರವರ್ತಿಗಳ್‌ ಮಾಳ್ಪ ಕಲ್ಪವೃಕ್ಷಮೆಂಬ ಪೂಜೆಯಂ’ (೬-೨೫ ವ) ಎಂದು ಸ್ಪಷ್ಟಪಡಿಸಿದ್ದಾನೆ. ಮಹಾಪುರಾಣ ೭-೨೨೦; ೪೧-೧೦೮, ೭೩-೫೯, ಪಂಪನ ಆದಿಪುರಾಣಮಂ ೪-೩೦ವ, ಪುಷ್ಪದಂತಪುರಾಣಂ ೧೩-೫೫ ಇತ್ಯಾದಿ.

೧೪. ಕೀಳ್ವಾಗು ನೋಂಪಿ : ‘ಕೀಳ್ವಾಗು’ ಎಂಬುದು ‘(ಪಂಚ) ನಮಸ್ಕಾರ’ದ ಕನ್ನಡ ರೂಪ. ಇದು ಪ್ರಣಮಿಸುವ ವ್ರತ: ಕೀೞ್‌+ವಾಗು=ಕೆಳಗೆ+ಬಾಗು. ಕೆಳಗೆ ಬಾಗುವುದೆಂದರೆ ನಮಸ್ಕರಿಸುವುದೆಂದರ್ಥ. ಕ್ರಿ.ಶ. ೧೨೧೫ರಲ್ಲಿ ರಚಿತವಾದ ಧಾರವಾಡದ ಶಾಸನದಲ್ಲೂ ಈ ವ್ರತದ ಮಾತಿದೆ.