ಪಂಚಕಲ್ಯಾಣ

ಜಿನನಿಗೆ ಆಯ್ದು ಕಲ್ಯಾಣಗಳನ್ನು ಜೈನ ಪುರಾಣಗಳು ಹೇಳಿವೆ : ಗರ್ಭಾವತರಣ, ಜನ್ಮಾಭಿಷೇಕ, ಪರಿನಿಷ್ಕ್ರಮಣ, ಕೇವಲ ಜ್ಞಾನ ಪ್ರಾಪ್ತಿ ಮತ್ತು ಪರಿನಿರ್ವಾಣ. ಇವನ್ನು ಪಂಚಕಲ್ಯಾಣಗಳನ್ನೆಲ್ಲಾಗಿದೆ. ಇವೆಲ್ಲದಕ್ಕೂ ಸುದೀರ್ಘ ಪರಂಪರೆಯಿದೆ. ಇವುಗಳಲ್ಲಿ ಜನ್ಮಾಭಿಷೇಕವು ನೋಂಪಿ ಕಥೆಗಾರರಿಗೆ ಪ್ರಿಯವೆನಿಸಿದ್ದುಂಟು. ಅದಕ್ಕೆ ಕಾರಣಗಳಿವೆ. ಜನ್ಮಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಐರಾವತದ ಕಲ್ಪನೆ ಮೂಲ ಸಂಸ್ಕೃತ ಪೂರ್ವಪುರಾಣದಲ್ಲಿ ಒಂದೇ ಒಂದು ಶ್ಲೋಕದಲ್ಲಿ ಬಂದಿದೆ :

ಸುರೇಭರದನೋದ್ಭೂತ ಸುರಾಂಬುಜದಲಾಶ್ರಿತಂ
ನೃತ್ತಮಪ್ಸರಸಾಂ ದೇವಾನಕರೋದ್ರಸಿಕಾನ್ಭೃಶಂ ||

ಅಂದರೆ ಐರಾವತ ಗಜದಂತಗಳಲ್ಲಿ ಉಂಟಾದ ದೇವಕಮಲಗಳ ಎಸಳುಗಳಲ್ಲಿ ಅಪ್ಸರಸ್ತ್ರೀಯರು ಮಾಡುತ್ತಿರುವ ನರ್ತನವು ದೇವತೆಗಳಿಗೆ ಬಹಳ ಸಂತೋಷವನ್ನುಂಟುಮಾಡಿತು.

ಆದರೆ ಜಿನಸೇನಾಚಾರ್ಯರು ಐರಾವತ ಆನೆಯ ೩೨ಮುಖ, ಪ್ರತಿ ಮುಖದಲ್ಲೂ ೮ ಕೋಡುಗಳೂ, ಪ್ರತಿ ಕೋಡಿಗೂ ಇರುವ ಸರೋವರವೂ, ಸರೋವರದ ೩೨ ತಾವರೆಗಳೂ, ಪ್ರತಿ ತಾವರೆಗೂ ೩೨ ಎಸಳುಗಳೂ, ಒಂದೊಂದು ದಳದ ಮೇಲೆ ಕುಣಿಯುವ ೩೨ ಅಮರ ಹೆಣ್ಣುಗಳೂ – ಇಷ್ಟೂ ಇರುವ ಸಮೃದ್ಧ ಚಿತ್ರವನ್ನು ಇನ್ನೊಂದು ಸಂದರ್ಭದಲ್ಲಿ ಹೀಗೆ ಕೊಟ್ಟಿದ್ದಾರೆ :

ತಮೈರಾವಣಮಾರೂಢಃ ಸಹಸ್ತಾಕ್ಷೋದ್ಯುತತ್ತರಾಮ್
ಪದ್ಮಾಕರ ಇವೋತ್ಫುಲ್ಲ ಪಂಕಜೋ ಗಿರಿಮಸ್ತಕೇ ||
ದ್ವಾತ್ರಿಂಸದ್ವದನಾನ್ಯಸ್ಯ ಪ್ರತ್ಯಾಸ್ಯಂ ಚ ರದಾಷ್ಟಕಂ
ಸರಃ ಪ್ರತಿರದಂ ತಸ್ಮಿನ್ನಬ್ಜಿನ್ಯೇಕಾ ಸರಃ ಪ್ರತಿ ||
ದ್ವಾತ್ರಿಂಶತ್ಫ್ರಸವಾಸ್ತಸ್ಯಾಂ ತಾವತ್ಫ್ರಮಿತ್ರ ಪತ್ರಕಾಃ
ತೇಷ್ವಾಯತೇಷು ದೇವಾನಾಂ ನರ್ತಕ್ಯಸ್ತತ್ಪ್ರಮಾಃ ಪೃಥಕ್
||
ನೃತ್ಯಂತಿ ಸಲಯಂ ಸ್ಮೇರ ವಕ್ತ್ರಾಬ್ಜೌ ಲಲಿತ ಭ್ರುವಃ
ಪಶ್ಯಚಿತ್ತದ್ರುಮೇಷೂ ಚ್ಚೈರ್ನ್ಯಸ್ಯಂತಃ ಪ್ರಮುದಾಂಕುರಾನ್
||
(ಜಿನಸೇನಾಚಾರ್ಯ, ಪೂರ್ವಪುರಾಣ, ಸರ್ಗ ೨೨. ಶ್ಲೋಕ ೫೩-೫೬)

ಆ ಐರಾವತ ಗಜವನ್ನೇರಿದ ಸಾವಿರ ಕಣ್ಣುಗಳುಳ್ಳ ದೇವೇಂದ್ರನು ಪರ್ವತದ ಶಿಖರದಲ್ಲಿ ವಿಕಸಿತವಾದ ಕಮಲಗಳುಳ್ಳ ಪದ್ಮ ಸರೋವರದಂತೆ ಅಧಿಕವಾಗಿ ಪ್ರಕಾಶಿಸಿದನು. ಈ ಐರಾವತ ಗಜಕ್ಕೆ ೩೨ ಮುಖಗಳೂ, ಒಂದೊಂದು ಮುಖದಲ್ಲಿ ಎಂಟೆಂಟು ಹಲ್ಲುಗಳೂ, ಒಂದೊಂದು ಹಲ್ಲಿನಲ್ಲಿ ಒಂದೊಂದು ಸರೋವರವೂ, ಒಂದೊಂದು ಸರೋವರದಲ್ಲಿ ಒಂದೊಂದು ಕಮಲಲತೆಯೂ, ಒಂದೊಂದು ಕಮಲಲತೆಯಲ್ಲಿ ೩೨ ಕಮಲಗಳೂ, ಒಂದೊಂದು ಕಮಲದಲ್ಲಿ ೩೨ ಎಸಳುಗಳೂ, ದೀರ್ಘವಾದ ಆ ಒಂದೊಂದು ಎಸಳಿನಲ್ಲಿ ಮಂದಹಾಸಯುಕ್ತವಾದ ಮುಖಕಮಲವುಳ್ಳವರೂ ಮನೋಹರವಾದ ಹುಬ್ಬುಗಳುಳ್ಳವರೂ, ಚೆನ್ನಾಗಿ ನೋಡುತ್ತಿರುವವರ ಮನಸ್ಸುಗಳೆಂಬ ವೃಕ್ಷಗಳಲ್ಲಿ ಸಂತೋಷಗಳೆಂಬ ಅಂಕುರಗಳನ್ನುಂಟುಮಾಡುವವರೂ ಆದ ೩೨ ಮಂದಿ ದೇವನರ್ತಕಿಯರು ಲಯಕ್ಕನುಸಾರವಾಗಿ ನರ್ತನವನ್ನು ಮಾಡುತ್ತಾರೆ. (ಕನ್ನಡ ಗದ್ಯಾನುವಾದ ಸಹಿತ (ಸಂ) ಎರ್ತೂರು ಶಾಂತಿರಾಜ ಶಾಸ್ತ್ರೀ, ಪೂರ್ವಪುರಾಣ, ತೃತೀಯ ಮುದ್ರಣ (೧೯೯೨) ಪು. ೩೬೦).

ಜಿನಸೇನಾಚಾರ್ಯರು ಆದಿನಾಥರ ಕೇವಲಜ್ಞಾನ ಪ್ರಾಪ್ತಿಯ, ಕೈವಲ್ಯ ಬೋಧೋತ್ಸವ ಕಾಲದಲ್ಲಿ ಮಾಡಿರುವ ಮೇಲಿನ ವರ್ಣನೆಯನ್ನು ಪಂಪನು ಸ್ಥಳಾಂತರಿಸಿ, ಜನ್ಮಾಭಿಷೇಕ ಕಲ್ಯಾಣ ಸಂದರ್ಭಕ್ಕೆ ಸಮುಚಿತವಾಗಿ ಅಳವಡಿಸಿದ್ದಾನೆ; ಕನ್ನಡ ಕವಿಯ ಔಚಿತ್ಯ ಪ್ರಕಟವಾಗಿದೆ – ನೆಗೞ್ದೈರಾವತ ದಂತಿಗಾದುದು ಮೊಗಂ ಮೂವತ್ತೆರೞ್ನೋೞ್ವೆಡಾ ಮೊಗಮೊಂದೊಂದಱೊಳೆಂಟು ಕೋಡವಱೊಳಂತೊಂದೊದಱೊಳ್‌ ಪೂಗೊಳಂ ನೆಗೞ್ದೊಂದೊಂದೆಸದಿರ್ಕ್ಕುಮಾ ಕೊಳಗಳಂತೊಂದೊಂದಱೊಳ್‌ ಚಿತ್ತಪ ತ್ರಗಣಂ ಪದ್ಮಿನಿ ನಾಡೆ ಚೆಲ್ವನೊಳಕೊಂಡೊಂದೊಂದೆ ಕಣ್ಗೊಪ್ಲುಗುಂ ||

ಪೊಸಪೂವಬ್ಚಿನಿಯೊಂದಱೊಳ್ ಸೊಗಯಿಕುಂ ಮೂವತ್ತೆರೞ್ಪೂವಿನೊಳ್
ಪೊಸಗಂಪಂ ಪುದಿದೊಪ್ಪಿ ತೋಱುವೆಸಳ್ಗಳ್ಮೂವತ್ತೆರೞ್ಚೆಲ್ವನ
ಪ್ಪೆಸಳೋರೊಂದಱ ಮೇಲೆ ಲೀಲೆ ಮಿಗೆ ಮೂವತ್ತಿರ್ವರೋರಂತೆನ
ರ್ತಿಸೆ ದೇವಾಂಗನೆಯರ್
ಬೆಡಂಗನೊಳಕೊಂಡತ್ತಿಂದ್ರರುಂದ್ರದ್ವಿಪಂ ||
(ಆದಿಪಂಪ, ಆದಿಪುರಾಣ, ೭-೫೪, ೫೫)

ಸೇನಸಂಘದ ಜಿನಸೇನಾಚಾರ್ಯರಿಗೆ ಸಮಕಾಲೀನ ಹಿರಿಯ ಮಹಾಕವಿಯಾದ, ಪುನ್ನಾಟ ಸಂಘದ ಇನ್ನೊಬ್ಬ ಜಿನಸೇನ ಆಚಾರ್ಯರು ತಮ್ಮ ‘ಹರಿವಂಶ ಪುರಾಣ’ ಮಹಾಕಾವ್ಯದಲ್ಲಿ ಇಂತಹುದೇ ಒಂದು ಸುಂದರ ಚಿತ್ರವನ್ನು, ಪೂರ್ವ ಪುರಾಣಕ್ಕೂ ಮೊದಲೇ ಕೊಟ್ಟಿದ್ದಾರೆ :

ಸುರೇಭವದನ ತ್ರಿಕೇ ದಶಗುಣೇ ದ್ವಯೋಶ್ಚಾಷ್ಟತೇ ರದಾಃ
ಪ್ರತಿರದಂ ಸರಃ ಸರಸಿಪದಿನೀ ತ್ರತ್ರಚ |
ಭವಂತಿ ಮುಖ ಸಂಖ್ಯಾಯಾ ಸಹಿತ ಪದ್ಮಪತ್ರಾಣ್ಯಪಿ
ಪ್ರಶಸ್ತ ರಸ ಭಾವಿತಾಃ ಪ್ರತಿದಲಂ ನಟಂತ್ಯಪ್ಸರಾ ||
(ಹರಿವಂಶ ಪುರಾಣ, ೩೮-೪೩)

=ಐರಾವತ ಆನೆಗೆ ೩೨ ಮುಖ, ಪ್ರತಿಯೊಂದು ಮುಖದಲ್ಲಿಯೂ ಎಂಟೆಂಟು ಕೋಡುಗಳು, ಒಂದೊಂದು ಕೋಡಿನಲ್ಲಿಯೂ ಒಂದೊಂದು ಕೊಳ, ಒಂದೊಂದು ಕೊಳದಲ್ಲಿಯೂ ಒಂದೊಂದು ತಾವರೆಯೂ, ಒಂದೊಂದು ತಾವರೆಯಲ್ಲಿಯೂ ೩೨ ಎಸಳುಗಳು, ಒಂದೊಂದು ಎಸಳಿನಲ್ಲಿಯೂ ಒಬ್ಬೊಬ್ಬ ಅಪ್ಸರೆಯ ಕುಣಿತ.

ಹೀಗೆ ಸಮಾನಾಂತರವಾಗಿ ಸಾಗುವ ಈ ಬಗೆಯ ವರ್ಣನೆಯನ್ನು ನೋಡಿದರೆ ಇದೊಂದು, ಇವರಿಬ್ಬರು ಜಿನಸೇನಾಚಾರ್ಯರಿಗಿಂತಲೂ ಇನ್ನೂ ಪ್ರಾಚೀನವೂ ಪರಂಪರಾಗತವೂ ಆದೊಂದು ಸಿದ್ಧ ವರ್ಣನೆಯೂ ಆಗಿರಬಹುದೆನಿಸುತ್ತದೆ. ಪ್ರಾಯಃ ಪ್ರಾಕೃತ ಆಕರಗಳಲ್ಲೂ, ಇಂದು ಅನುಪಲಬ್ಧವಾಗಿರುವ ಕವಿಪರಮೇಷ್ಠಿಯ ‘ವಾಗರ್ಥ ಸಂಗ್ರಹ’ ಪುರಾಣ ಕಾವ್ಯದಲ್ಲಿ ಅಂತರ್ಗತವೂ ಆಗಿ ಈ ವರ್ಣನೆ ಉಳಿದುಬಂದಿರಬಹುದು. ಇದೇ ಸಂಪ್ರದಾಯ ಮಾದರಿಯನ್ನು ಪಂಪನೂ, ಪಂಪನ ತರುವಾಯ ನೋಂಪಿ ಕಥೆಗಾರರೂ ಮುಂದುವರಿಸರಬೇಕು.

ಪಂಪನ ಪ್ರಭಾವಕ್ಕೊಂದು ನಿದರ್ಶನವೆಂದು ‘ಷೋಡಶ ಭಾವನೆ’ ನೋಂಪಿಯಿಂದ ಸ್ವಲ್ಪಭಾಗವನ್ನು ಉದ್ಧರಿಸಿದೆ :

ಸುರರಾಜಾನೇಕಪಕ್ಕಾನನಮೊಗೆದವು ಮೂವತ್ತೆರಳ್ಪ್ರಕ್ರಮಮೊಂದ
ಕ್ಕೆರಡುಂ ತಾನೆಂಟುವೋರೊಂದಲರ್ಗೊಳನೊಂದಬ್ಜ ಮೊಂದಕ್ಕೆಮೂವ
ತ್ತೆರಡದೊಂದಬ್ಜಕ್ಕೆ ಮೂವತ್ತೆರಡೆಸಳೆವರೊಳೊಂದೊಂದರೊಳ್ಪಿತ್ತರಂಬೆ
ತ್ತಿರೆ ಮೂವರ್ತ್ತಿರ್ವರುಂ ನರ್ತ್ತಿಸಿದರಾ ದಿವಿಜಸ್ತ್ರೀಯರಾನಂದದಿಂ
||

ಇಂತು ಪೇಳ್ದ ಕ್ರಮದಿಂ ಮೂವತ್ತೆರಡು ಮುಖಂಗಳೊಳೊಂದೊಂದು ಮುಖಕ್ಕೆ ಎಂಟು ದಂತಂಗಳುಮನೊಂದೊಂದು ದಂತದೊಳೊಂದು ಪೂಗೊಳನುವನೊಂದು ಪೊಗಳದೊಳ್ಮೂವತ್ತೆರಡು ಕಮಲಂಗಳುಮನೊಂದು ಕಮಲದೊಳ್ಮೂವತ್ತೆರಡೆಸೆಳುವ ನೊಂದೆಸಳೊಳ್ಮೂವ್ವರ್ತ್ತಿರ್ವರ್‌ ಸುರ ನರ್ತಕಿಯರುಮಂ ವಿಗುರ್ವ್ವಿಸಿಕ್ಕೊಂಡು ನಡೆವಾಗಲಾಜಗತ್ರಯ ಚೂಡಾಮಣಿಗೆ ….. . ಈ ಬಗೆಯ ನೋಂಪಿ ಕತೆಗಳು ಕಡಮೆಯೆಂಬುದು ನಿಜ. ಇದೊಂದು ಚಂಪೂಕಾವ್ಯದ ಸಂಗ್ರಹದಂತಿದೆ.

ಕರ್ಮಹರಾಷ್ಟಮಿಯ ಕತೆಯಲ್ಲಿ ಆರಂಭದಲ್ಲೇ ಬರುವ ರಾಜಗೃಹ ಪೊಳಲಿನ ವರ್ಣನೆ ಕೂಡ ಚಂಪೂ ಕಾವ್ಯದ ಮಾದರಿಯಲ್ಲಿದೆ. ‘ಈ ಜಂಬೂದ್ವೀಪದ ಭರತ ಕ್ಷೇತ್ರದಾರ್ಯ್ಯಾ ಖಂಡದೊಳು ಮಗಧೆಯೆಂಬ ನಾಡಲ್ಲಿ ರಾಜಗೃಹವೆಂಬುದು ಪೊಳಲದನಾಳ್ವಂ ಮಹಾಮಂಡಲೇಶ್ವರಂ ಶ್ರೇಣಿಕನೆಂಬನಾತನ ಪಟ್ಟದರಿಸಿ ಚೇಳಿನಿ ಮಹಾದೇವಿಯೆಂಬಳಂತವರೀರ್ವರಿಷ್ಟ ವಿಷಯ ಕಾಮಭೋಗಂಗಳನುಭವಿಸಿ ಪಲಕಾಲಂಗಳಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೈಯತ್ತಮಿರೆ ಪೊಳಲಂ ಸುತ್ತಿದ ಚಂದನ ವನಂಗಳಿಂದಂ ಬೆಳೆದೊರಗಿದ ಪಣ್ಣ ಕರ್ಬಂ ತೆಂಗು ಕೌಂಗು ಪಣ್ತೊದಗಿದ ಮಾದು ಫಲಮುಂ ಕವಲ್ತು ಕತ್ತರಿಸುವ ಎಳೆವಳ್ಳಿಯಂ ಯಿಳೆ ಕಿತ್ತಳೆ ಬಾಳೆ ಮೊದಲಾಗೊಡೆಯ ವೃಕ್ಷಂಗಳುಮಾವ ಕಾಲಮೆಡೆಯವರಿಯದೆ ಪರಿವ ಮಹಾ ನದಿಗಳೊಳೊಪ್ಪಿತೋರ್ಪಕೋಂಟೆಯಿಂ ಸೊಗಯಿಸುವ ನಾಲ್ಕು ಬಾಗಿಲುವಾಡಗಳು ಮಣಿಖಚಿತಮಪ್ಪ ಮಾಟಕೂಟ ಪ್ರಾಸಾದಂಗಳಿಂ ಅನೇಕ ವಿಧರತ್ನಭೂಷಣ ವಿಭೂಷಿತೆಯರಪ್ಪ ಪುಣ್ಯಾಂಗನಾ ಜನಗಳಿಂ ಸಂಕೀರ್ಣಮಪ್ಪ ಸುಜನರುಗಳಿಂದಮೊಪ್ಪುತ್ತಿರ್ದ ತತ್ಪುರದ ನಡುವೆ ಮೋಕಾಹಕ್ಕೆ ನಿಶ್ರೇಣಿಯಂತಿರ್ದ್ದ ಸಹಸ್ರಕೂಟ ಚೈತ್ಯಾಲಯದೊಳಗೆ ಭವ್ಯಜನ ಕುಮುದಿನೀ ಶರಶ್ಚಂದ್ರರೆನಿಸಿದ ಯಶೋಭದ್ರ ಸ್ವಾಮಿಗಳು ಯಿನ್ನೂರ್ವ್ವರ್ದ್ದಿವ್ಯ ತಪೋಧನರ ಸಮುದಾಯಂಗಳಿಂ ಬೆರಸು ಸುಧರ್ಮ ಪ್ರಬಾವನೆಯಂ ಮಾಡುತ್ತ ವಿರ್ಪನಮಾ ಪೊಳಲೊಳು’-

ಕತೆಯ ಪ್ರಾರಂಬವಷ್ಟೇ ಇಷ್ಟು ಹರಹಿನಿಂದ ಆರಂಭವಾಗಿರುವುದು. ಇನ್ನುಳಿದ ಭಾಗವೆಲ್ಲ ಮತ್ತೆ ಮಾಮೂಲಿ ನೋಂಪಿ ಚೌಕಟ್ಟಿಗೆ ಒಳಪಟ್ಟಿವೆ. ಈ ನೋಂಪಿ ಸಾಹಿತ್ಯವು ಜನಪದ ಸಾಹಿತ್ಯಕ್ಕೆ ಹತ್ತಿರ ಬರತ್ತದೆಂಬುದು ಮನನೀಯವಾಗಿದೆ. ಇದೇ ರೀತಿ ರನ್ನಕವಿಯ ಅಜಿತಪುರಾಣದಲ್ಲಿನ ಜನ್ಮಾಭೀಷೇಕದ ವರ್ಣನೆಯ ಮಾದರಿಯನ್ನು ಹೊತ್ತ ವರ್ಣನೆ ‘ದೀಪಾವಳಿಯ ನೋಂಪಿ’ ಕತೆಯಲ್ಲಿದೆ. ನೋಂಪಿ ಕತೆಗಳಲ್ಲಿ ಕನ್ನಡದ ವಾತಾವರಣ ಹೇರಳವಾಗಿ ಕಂಡುಬರುತ್ತದೆ. ಕೆಲವು ಕತೆಗಳ ಹೆಸರುಗಳು ಕೂಡ ಕನ್ನಡ ನುಡುಕಟ್ಟುಗಳಲ್ಲಿವೆ ಉೞ್ಗೆ ನೋಂಪಿ, ತಂಗಳು ತವನಿಧಿ ನೋಂಪಿ, ಬಸಿರಬಳಗದ ನೋಂಪಿ, ಮಿಗೆಯರಳ ನೋಂಪಿ, ಹಿಡಿಯಕ್ಕಿಯ ನೋಂಪಿ. ಹಲವಾರು ನೋಂಪಿ ಕತೆಗಳನ್ನು ಕನ್ನಡ ನಾಡಿನ ರಾಜ, ರಾಣಿ, ಸಾಮಂತ ಮನ್ನೆಯ ಶ್ರೀಮಂತರು ಹೇಳಿಸಿರುವುದಕ್ಕೆ ಸ್ಪಸ್ಟ ವಿವರಗಳಿವೆ. ಸಹಜವಾಗಿಯೇ ಈ ನೆಲದ ದೇಸಿಯ ಬಣ್ಣ ಬಂದಿದೆ. ಕೆಲವು ನೋಂಪಿ ಕತೆಗಾರರಿಗಂತೂ ಅಲಲ್ಲಿ, ಕನ್ನಡ ಭಾಷೆಯ ಬಗೆಗೆ ಮಮಕಾರವನ್ನು ವಾಚ್ಯವಾಗಿ ಹೇಳಿದ ಹೊರತು ಸಮಾಧಾನವಿಲ್ಲ. ಷೋಡಶ ಭಾವನೆ ನೋಂಪಿ ಕತೆಯಿಂದ ಒಂದು ಉದಾಹರಣೆ :

ವರಸುಖ ಭಾಷಾಮಯಮಂ
ಸುರಚಿರ ಕರ್ಣ್ನಾಟ ಭಾಷೆಯಿಂ ವಿರಚಿಸ ಭ
ವ್ಯರ ಮನದಜ್ಞಾನ ತಮೋ
ಹರಣಮನಾಗಿಸಿದಳೇಂ ವಿದಗ್ಧೆಯೋ ಜಗದೊಳ್
||

ಬಾಳಿನ ಕಷ್ಟ ಕಾರ್ಪಣ್ಯಗಳಿಗೆ ಎಷ್ಟೋ ವೇಳೆ ಕಾರಣವಾಗುವುದು ನಮ್ಮಲ್ಲಿ ತಲೆದೋರುವ ರಾಗದ್ವೇಷ ಮೋಹ ಮದ ಮಾತ್ಸರ್ಯಾದಿಗಳು. ಈ ವಿಕಾರಗಳನ್ನು ಹತ್ತಿಕ್ಕುವುದು ಆರೋಗ್ಯವಂತನಾಗಿ, ಹಾಳಾಗದೆ ಬಾಳಬೇಕೆಂದು ಬಯಸುವವರ ಆದ್ಯ ಕರ್ತವ್ಯ. ಇವುಗಳ ಪ್ರವಾಹದಿಂದ ವ್ಯಕ್ತಿ ಪತಿತನಾಗಿ ಕೊಚ್ಚಿಹೋಗದಂತೆ ಗಟ್ಟಿಯಾಗಿ ನಿಲ್ಲಬೇಕಾದರೆ ಆತ್ಮಬಲ ಬೇಕು. ಜೈನದರ್ಶನ ಅಂಥ ಬಲದ ಸಂವರ್ಧನೆಗೆ ಸಹಾಯಕ.

ಜನಸಾಮಾನ್ಯರಿಗೆ ದೇಶ ಕಾಲ ವರ್ತಮಾನಗಳ ಪರಿಸರವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಆತ್ಮಬಲವನ್ನು ಕಾಯ್ದುಕೊಳ್ಳುವ ಕಸುವು ಇರುವುದಿಲ್ಲ. ಅವರಿಗೆ ಸದಾ ಎಚ್ಚರಿಕೆ ಕೊಡುವ, ತಿದ್ದಿ ನೇರ್ಪುಗೊಳಿಸುವ, ದಾರಿ ತೋರಿ ಉಪಕರಿಸಬಲ್ಲ ವಾತಾವರಣ, ಮಾರ್ಗದರ್ಶನ ಹಾಗೂ ಆಶ್ವಾಸನೆಯ ಅಗತ್ಯವಿರುತ್ತದೆ. ಮುಮುಕ್ಷ ಇಲ್ಲವೆ ಉತ್ತಮ ಆದರ್ಶ ಜೀವನಕ್ಕೆ ದರ್ಶನಗಳು ದಾರಿದೀಪ, ಊರೆಗೋಲು. ಶ್ರೀಸಾಮಾನ್ಯನ ಬಾಳಿನಲ್ಲಿ ಆದಷ್ಟೂ ಕಲುಷಿತ ಪರಿಸರ ಮತ್ತು ಬಾವನೆಗಳನ್ನು ಹೊಡೆದೋಡಿಸಬಲ್ಲ ಅನುಕೂಲಕರ ವಾತಾವಾರಣವನ್ನು ಉಂಟುಮಾಡುವ ಸದುದ್ದೇಶದಿಂದಲೇ ಬಸದಿಗಳನ್ನು ಕಟ್ಟಿಸಿದ್ದು, ಪರ್ವದಿಗಳ ಆಚರಣೆಯನ್ನು ಕಲ್ಪಿಸಿದ್ದು, ವರ್ಷದುದ್ದಕ್ಕೂ ಅಷ್ಟೇಕೆ ನಿಡುಬಾಳಿನುದ್ದಕ್ಕೂ ಈ ಪರ್ವಗಳು ಪೂಜೆ ಪುರಸ್ಕಾರಾದಿಗಳು ಎಡೆಬಿಡದೆ ಕಾಣಿಸಿಕೊಳ್ಳುತ್ತಿರುತ್ತವೆ. ಎಲ್ಲಿಯೂ ಬದುಕು ಕುಸಿಯದಂತೆ, ಬೀಳುವ ಬಾಳನ್ನು ಮತ್ತೆ ಮತ್ತೆ ಎತ್ತಿ ಕಟ್ಟಿ ನಿಲ್ಲಿಸುವುದೇ ಈ ನಿರಂತರ ಹಬ್ಬಗಳ ಸಂಕೇತ.

ನೋಂಪಿಗಳನ್ನು ವರ್ಷದ ಯಾವ ಕಾಲದಲ್ಲಿ ಆಚರಿಸಬೇಕೆಂಬ ವಿಚಾರವಾಗಿಯೂ ಶಾಸ್ತ್ರವಿವರಣೆಯಿದೆ. ಒಂದೊಂದು ನೋಂಪಿಗೂ ನಿರ್ದಿಷ್ಟವಾದ ಮಾಸ, ತಿಥಿ, ನಕ್ಷತ್ರಗಳನ್ನು ತಿಳಿಸಿದ್ದಾರೆ. ಇದನ್ನು ಸಾಮಾನ್ಯವಾಗಿ ಆಯಾ ನೋಂಪಿಯಲ್ಲೇ ಹೇಳಿರುವುದುಂಟು. ನೋಂಪಿಗಳ ಆಚರಣೆ ಹೆಚ್ಚಾಗಿ ಬರುವುದು ಆಷಾಢ, ಶ್ರಾವಣ, ಭಾದ್ರಪದ ಮತ್ತು ಆಶ್ವೀಜ ಮಾಸಗಳಲ್ಲಿ; ಇವನ್ನು ಚಾತುರ್ಮಾಸಗಳೆನ್ನುತ್ತಾರೆ. ಆಷಾಢ ಮಾಸದ ಪೌರ್ಣಮಿಯ ದಿನದಿಂದ ಹಿಡಿದು ಮಾರ್ಗಶಿರದ ಹತ್ತನೆಯ ದಿನದವರೆಗೆ ವರ್ಷಾವಾಸ (- ವಸ್ಸಾವಾಸ) ಬರುತ್ತದೆ. ಇದು ಮಳೆಗಾಲವೂ ಹೌದು. ಆದ್ದರಿಂದ ಜೈನಯತಿಗಳು ಧರ್ಮವಿಹಾರವನ್ನು ನಿಲ್ಲಿಸಿ ಒಂದು ಕಡೆ ತಂಗುತ್ತಾರೆ. ಆಗ ಅವರು ಅಭ್ಯಾಸ ಉಪವಾಸ ಧ್ಯಾನ ಉಪದೇಶ – ಇವುಗಳಲ್ಲಿ ತೊಡಗುತ್ತಾರೆ. ಇದೇ ಚಾತುರ್ಮಾಸ.

ಈ ಚಾತುರ್ಮಾಸವನ್ನೇ ಹೆಚ್ಚಾಗಿ ನೋಂಪಿಗಳ ಆಚರಣೆಗೆ ಆರಿಸಿಕೊಂಡಿರುವುದರ ಉದ್ದೇಶ ಇದರಿಂದ ಸ್ಪಷ್ಟವಾಗುತ್ತದೆ. ಮುನಿಗಳ ಮಾರ್ಗದರ್ಶನ, ನೇತೃತ್ವ ಈ ನೋಂಪಿಗಳ ಆಚರಣೆಗೆ ಸಿಗುತ್ತದೆ. ಶ್ರಾವಕರಿಗೆ ಅದರಿಂದ ಹೆಚ್ಚು ಸ್ಫೂರ್ತಿ ಉತ್ಸಾಹ ಸಂತೋಷ. ಮುನಿಗಳ ಆಹಾರಾದಿಗಳಿಗೂ ಗಮನ ಕೊಡಬಹುದು. ಶ್ರವಣ-ಶ್ರಾವಕರ ಸಂಬಂಧ ಸುಸೂತ್ರವಾಗುತ್ತದೆ.

ನೋಂಪಿಗಳನ್ನು ಆಚರಿಸುವ ತಿಥಿಯ ವಿಚಾರವಾಗಿಯೂ ವಿವರಣೆಗಳಿವೆ:

ತ್ರಿಮೂಹೂರ್ತೇಷು ಯತ್ರಾರ್ಕಃ ಉದಯಾಸ್ತಮಯೇ ತಥಾ |
ಸಾತಿಥಿಸ್ಯಕರಾಜ್ಞೇಯಂ ಪ್ರಾಯೋ ಧರ್ಮಕಥಾಸು ಚ
||

ಸೂರ್ಯೋದಯ ಹಾಗೂ ಅಸ್ತಮದಲ್ಲಿ ಮೂರು ಮುಹೂರ್ತ (೨ ಘಂಟೆ ೨೪ ನಿಮಿಷ)ವಿದ್ದರೆ ಅದರಲ್ಲಿ ನೋಂಪಿ ಆಚರಿಸಬಹುದು, ಅದಕ್ಕೆ ಧರ್ಮತಿಥಿಯೆಂದು ಹೆಸರು.

ಅಷ್ಟಮೀ ನವಮೀ ಯುಕ್ತಾ ಪೌರ್ಣಮಾಸ್ಯಾ ಚತುರ್ದಶೀ
ಕಾರ್ಯಾ ಜೈನೈಸ್ತ್ರಯೋದಶ್ಯಾ ಸಪ್ತಮ್ಯಾ ಪ್ರಯುತಾನಚ
||

ಅಷ್ಟಮಿ ಮತ್ತು ನವಮಿಗಳ ಸಂಗಮವಾಗಿದ್ದರೆ ಅಷ್ಟಮೀ ನೋಂಪಿಯನ್ನು ಆಚರಿಸಬಹುದು; ಸಪ್ತಮಿಯ ಮೇಲೆ ಅಷ್ಟಮಿ ಉಪರಿ ಬಂದಿದ್ದರೆ ಆ ದಿನ ಆಚರಿಸಬಾರದು; ಚತುರ್ದಶೀ ಉಪವಾಸ ಆಚರಿಸಬಹುದು, ತ್ರಯೋದಶೀ ಉಪರಿಚತುರ್ದಶೀ ಬಂದಿದ್ದರೆ ಆಚರಿಸಬಾರದು.

ಕೆಲವು ನೋಂಪಿಗಳನ್ನು ವರ್ಷದ ಯಾವುದೋ ಒಂದು ಗೊತ್ತಾದ ತಿಂಗಳು, ದಿನಗಳಲ್ಲಿ ಆಚರಿಸಬೇಕೆಂದು ಶಾಸ್ತ್ರ ತಿಳಿಸುತ್ತದೆ. ಅದೇ ಶಾಸ್ತ್ರ ಈ ನೋಂಪಿಗಳನ್ನು ವರ್ಷಾಕಾಲವೂ ಎಡೆಬಿಡದೆ ಪಾಲಿಸಿಕೊಂಡು ಹೋಗುವುದರ ಫಲಾಧಿಕ್ಯವನ್ನೂ ಸಾರಿದೆ. ಶಕ್ತರೂ ಅನುಕೂಲಿಗಳೂ ನಿರಂತರ ಇವನ್ನು ಅನುಸರಿಸಲೆಂಬುದು ಸೂಚನೆಯಾಗಿದ್ದರೂ ಅದಕ್ಕೂ ಮೀರಿದ ಧ್ವನಿಯಿರುವಂತೆ ತೋರುತ್ತದೆ. ಆಯಾ ಧರ್ಮದ ಪ್ರಭಾವ ಇರುವುದು ಸಾಮಾನ್ಯರ ದೃಷ್ಟಿಯಲ್ಲಿ, ಧಾರ್ಮಿಕ ಆಚರಣೆಗಳಲ್ಲಿ. ಸಂತತವಾದ ಈ ಆಚಾರ ಪೂಜೆ ಪುರಸ್ಕಾರ ಧರ್ಮದ ಪರಿಧಿಯಲ್ಲೇ ಧರ್ಮ ಬಾಂಧವರನ್ನು ಬಂಧಿಸಲು ಸಾಧ್ಯವಾಗುತ್ತದೆ. ಇಲ್ಲಿನವರು ಈ ಲಕ್ಷ್ಮಣ ಗೆರೆ ದಾಟದಂತೆ ನೋಡಿಕೊಳ್ಳುವುದರ ಜತೆಗೆ ಉಳಿದವರನ್ನೂ ಇದರತ್ತ ಸೆಳೆಯಲು ಸಾಧ್ಯವಾಗುತ್ತದೆ. ಆಧುನಿಕರಿಗೆ ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಪ್ರಜ್ಞೆ ಮೇಳೈಸಿಕೊಳ್ಳುತ್ತಿರುವ ವರ್ತಮಾನದ ಬದುಕಿಗೆ ಇದರ ಪ್ರಯೋಜನ ಎಷ್ಟು ಎಂತು ಎಂಬುದು ಚಿಂತನೀಯ.

ನೋಂಪಿಯ ಕತೆಗಳಲ್ಲೂ ಜೈನಧರ್ಮ ಸಾರಿದ ದಾನಗಳ ಮಹತ್ವವನ್ನೇ ಎತ್ತಿ ಹಿಡಿದಿವೆ; ಆಹಾರದಾನ, ಅಯಭದಾನ, ಔಷಧಿಯ ದಾನ, ಶಾಸ್ತ್ರದಾನ. ಆಹಾರಾಭಯ ಭೈಷಜ್ಯ ಶಾಸ್ತ್ರದಾನಗಳು ಸಮಾಜದ ಸುಖಕ್ಕೆ, ಸಮತಾಭಾವಕ್ಕೆ, ಪರಿಮಿತ ಪರಿಗ್ರಹಕ್ಕೆ ಉಪಕಾರ ಬುದ್ಧಿಗೆ ಪ್ರತೀಕವಾಗಿದೆ. ಸಮಾಜದ ಸ್ವಸ್ಥ ಜೀವನಕ್ಕೆ ಈ ದಾನಗಳ ಹಿಂದಿನ ಮನೋಧರ್ಮ ಅಗತ್ಯ.

ಶಾಸ್ತ್ರದಾನ ಉಳಿದ ದಾನಗಳಿಂದ ಒಂದು ಕೈ ಮಿಗಿಲೆಂದು ಜೈನಧರ್ಮದ ಚರಿತ್ರೆಯ ದೃಷ್ಟಿಯಿಂದ ಹೇಳಬಹುದು. ಅಚ್ಚಿನ ಅನುಕೂಲವಿಲ್ಲದಿದ್ದ ಹಿಂದಿನ ಕಾಲದಲ್ಲಿ ಈ ದಾನದ ಹಿರಿಮೆ ದೊಡ್ಡದು. ಪ್ರಯೋಜನ ಅಪಾರ. ಜೈನರಲ್ಲಿ ಪ್ರಗಲ್ಬ ಪಾಂಡಿತ್ಯ ಶಾಸ್ತ್ರಾದಿಗಳ ಅರಿವು ಜ್ಞಾನಪ್ರಸಾರ ವೆಗ್ಗಳಿಸಲು ಈ ಶಾಸ್ತ್ರದಾನ ಕೂಡ ಕಾರಣ. ಗುರುಗಳಿಗೂ ಗೃಹಸ್ಥರಿಗೂ ಶಾಸ್ತ್ರ ಕೃತಿಗಳನ್ನು ಓಲೆಗರಿಗಳ ಮೇಲೆ ಬರೆಸಿಕೊಡುವುದರ ಮೂಲಕ ಧಾರ್ಮಿಕಪರಂಪರೆ ಅವ್ಯವಚ್ಛಿನ್ನವಾಗಿ ಉಳಿದು ಬರಲು ನೆರವು ದೊರೆಯಿತು. ಆದುದರಿಂದಲೇ ಈ ಭಾವನೆಗೆ ಇಂಬಾಗುವಂತೆ ಧಾರ್ಮಿಕ ಪರಿವೇಷ ಕಟ್ಟಿದ್ದರು. ಈ ಶಾಸ್ತ್ರ ಪೂಜೆಯೇ ನೋಂಪಿ ಕತೆಗಳು ಹೇಳುವ ಶ್ರುತಪೂಜೆ. ಶ್ರುತಪೂಜೆಯೆಂಬ ಕಲ್ಪನೆಯೇ ಕಮನೀಯ, ಪರಿಭಾವ್ಯ.

ಆಹಾರಾದಿ ದಾನಗುಣದ ಮಹಿಮೆ ಮತ್ತು ಚಾತುರ್ವರ್ಣ ಜೈನ ಸಮಾಜದ ಸಂರಕ್ಷಣೆಗೆ ದಾರಿ ಮಾಡಿಕೊಟ್ಟಿರುವ ನೋಂಪಿ ಕತೆಗಳನ್ನು ಓದು ಬರೆಹ ಬಲ್ಲವರು ತಾವೇ ಓದಿಕೊಳ್ಳುವರು, ಬಾರದವರಿಗೆ ಓದಿ ಹೇಳುವರು. ಓದಿಸಿ ಕೇಳುವವನು ಓದಿಸಿದವನಿಗೆ ಉಡುಗೊರೆಗಳನ್ನಿತ್ತು ಸನ್ಮಾನಿಸುವರು. ಜೈನ ಧರ್ಮದ ಆಚಾರಾಂಗ ಇಲ್ಲಿ ಕಂಡುಬರುತ್ತದೆ. ನೋಂಪಿಯನ್ನು ಪರಂಪರೆಯಾಗಿ ಪಾಲಿಸುವಂತೆ ಪ್ರೇರೇಪಿಸಲು ‘ಈ ನೋಂಪಿಯನ್ನು ನೋನುವವರಿಗೂ, ನೋನಿಸಿದವರಿಗೂ, ಕ್ರಮವಾಗಿ ಒಡಂಬಟ್ಟವರಿಗೂ ಬರೆದವರೆಗೂ ಇಹದೊಳು ಪರದೊಳು ಸುಖಪಡೆದು ಕ್ರಮೇಣ ಸ್ವರ್ಗ ಮೋಕ್ಷಗಳನ್ನು ಪಡೆಯುತ್ತಾರೆಂದು ಗೌತಮ ಸ್ವಾಮಿಗಳು ಹೇಳಿರುವರು. ಸಿದ್ಧಾಂತ ತಪ್ಪಲಾರದು, ‘ನಿಶ್ಚಯ’ ಎಂಬ ಆಕರ್ಷಣೆಯ ಮಾತುಗಳೂ,

ಇಂತೀ ಕಥೆಯಂ ಪೇಳ್ದೊಡ
ನಂತ ಸುಖಂ ಭವ್ಯಜನಕೆ ಪಡೆಮಾತೇನೋ
ಸಂತತ ಶಾಶ್ವತ ಸುಖಮಾನ
ನಂತಜನಂ ನೋಂಪವರ್ಗೆ ಕೊಡುವನನವರತಂ
||

ಈ ಕಥೆಯಂ ಕೇಳ್ದ ಭವ್ಯಾ
ನೀಕಮಿದಂ ಬರೆವನೆವವಂದಿಸಜವರುಂ
ಲೋಕಂಸ್ತುತಿಯಿಪೆ ನೆಗೆಳ್ದರೆ
ನೇಕರು ಸುರಲೋಕ ಮೋಕ್ಷ ಸುಖಮಂ ಪಡೆವರ್
||

ಎಂಬ ಕಮನೀಯ ಆಮಿಷವೂ ವ್ಯಕ್ತವಾಗಿದೆ, ಕೆಲವು ಕನ್ನಡ ಕವಿಗಳೂ ಇದನ್ನು ಅನುಮೋದಿಸಿದ್ದಾರೆ.

ಜೈನ ಧರ್ಮದಲ್ಲಿ ಪೂಜಾ ವಿಧಾನಗಳು, ಆರಾಧನಾ ಕ್ರಮಗಳು ಪ್ರಾರಂಭದಲ್ಲಿ ಇರಲಿಲ್ಲವೆಂದೂ, ಪುರಾಣಗಳು ರಚಿತವಾದ ಅನಂತರದ ಕಾಲದಿಂದ ಈಚೆಗೆ ಹೆಚ್ಚಾದುವೆಂದೂ ಹೇಳಬಹುದು. ಅದರಲ್ಲಿಯೂ ಮುಖ್ಯವಾಗಿ ಆರರಿಂದ ಹದಿನಾಲ್ಕನೆಯ ಶತಮಾನದವರೆಗಿನ ಅವಧಿ ಜೈನ ಮತದ ಇತಿಹಾಸದಲ್ಲಿ ಸಂಧಿಕಾಲ. ಈ ಅವಧಿಯಲ್ಲಿ ಅದು ಅನೇಕ ಆಘಾತಗಳನ್ನು ಎದುರಿಸಿ ನಿಲ್ಲಬೇಕಾಯಿತು. ಶೈವ ಮತ್ತು ವೈಷ್ಣವ ಧರ್ಮಗಳ ಪ್ರಾಬಲ್ಯ ಪ್ರಚಾರ ಜೈನರ ಪ್ರಗತಿಗೂ ಅಸ್ತಿತ್ವಕ್ಕೂ ಸವಾಲುಗಳನ್ನು ಒಡ್ಡಿತ್ತು. ಅಲ್ಲದೆ ಜೈನ ಧರ್ಮದ ಮೂಲ ತತ್ವದಲ್ಲಿ (ಸಾಮಾಯಿಕ ಪಾಠ) –

ನಿಜಾರ್ಜಿತಂ ಕರ್ಮವಿಹಾಯ ದೇಹಿನೋ |
ನ ಕೋಪಿ ಕಸ್ಯಾತ ದದಾತಿ ಕಿಂಚನ ||
ವಿಚಾರಯನ್ನೇವಮನನ್ಯ ಮಾನಸಃ
ಪರೋ ದದಾತೀತಿ ವಿಮುಂಚ ಶೇಮುಷೀಮ್
||

ಎಂದು ಹೇಳಿದೆ; ಅಂದರೆ “ಎಲೈ ಜೀವನೇ, ಸಂಸಾರಿ ಜೀವಿಗೆ ತಾನು ಮಾಡಿದ ಕರ್ಮವು ಫಲವನ್ನು ಕೊಡುವುದಲ್ಲದೆ ಬೇರೊಂದಿಲ್ಲ. ಈ ರೀತಿಯ ಒಂದೇ ಮನಸ್ಸಿನಿಂದ ವಿಚಾರ ಮಾಡಿ ‘ಪರರು ಕೊಡುವರು’ ಎಂಬ ಆಲೋಚನೆಯನ್ನು ಸಂಫೂರ್ಣವಾಗಿ ಬಿಟ್ಟುಬಿಡು” ಎಂದು ತಿಳಿಸಿದೆ. ಇದು ನಿಷ್ಠುರವಾದ ಸತ್ಯ, ನಿತ್ಯವಾದ ಕರ್ಮ ಸಿದ್ಧಾಂತ.

ಯಾರು ಯಾರನ್ನೂ ಉದ್ಧಾರ ಮಾಡಲಾರರು, ತನ್ನನ್ನು ತಾನೇ ಕಾಪಾಡಿಕೊಳ್ಳಬೇಕು ಎಂಬ ಹೇಳಿಕೆ ಜನಸಾಮಾನ್ಯರಿಗೆ ನುಂಗಲಾರದ ತುತ್ತು. ಕಷ್ಟದಲ್ಲಿರುವಾಗ, ತೊಂದರೆಗೆ ಒಳಗಾದಾಗ, ಏನನ್ನೋ ಇಚ್ಛಿಸಿ ಪಡೆಯಲು ಪ್ರಯತ್ನಿಸುತ್ತಿರುವಾಗ ನಮಗಿಂತ ಮೀರಿದ ಶಕ್ತಿಯೊಂದು ನಮ್ಮ ಪ್ರಾರ್ಥನೆಯಿದ್ದರೆ ಸಹಾಯ ಮಾಡುತ್ತದೆಂದರೆ ಅದೆಷ್ಟು ಸಮಾಧಾನ, ಉತ್ಸಾಹ! ಬಹುಸಂಖ್ಯೆಯಲ್ಲಿದ್ದ ಜೈನೇತರರು, ತಮ್ಮ ನೆರೆಹೊರೆಯ ಪರಿಸರದವರು ಮಂತ್ರ ತಂತ್ರಗಳಿಂದ, ವ್ರತಪೂಜೆ ಬಲಿಗಳಿಂದ, ಆರಾಧನೆ ಉಪವಾಸಗಳಿಂದ, ದೇವತೆಗಳನ್ನು ಪ್ರಾರ್ಥಿಸಿ ಫಲಪ್ರಯೋಜನಗಳನ್ನು ಪಡೆದವರೆಂಬ ಪ್ರಚಾರ ಕೇಳಿಬರುತ್ತಿರುವಾಗ ಅದನ್ನು ವಿರೋಧಿಸುವುದು ಸಾಮಾನ್ಯರಿಂದ ಸಾಧ್ಯವಿಲ್ಲ. ಈ ಪರಿಸರದ ಮಧ್ಯೆ ಜೈನ ಧರ್ಮದ ಪರಮ ಆದರ್ಶ ಜೀವನ. ಕರ್ಮತತ್ವಗಳು ಸಾಮಾನ್ಯ ಜನತೆಗೆ ಕಠಿಣತರವಾಗಿ ಕಂಡುವು. ದೇವ ದೇವತೆಗಳ ಪೂಜೆಯಿಂದ ಬೇಕಾದುದನ್ನು ಪರೆಯಬಹುದೆಂಬುದು ಆಕರ್ಷವಾಗಿ ಕಡೆಗೆ ಅನಿವಾರ್ಯವಾಗಿ ತೋರಿಬಂತು. ಯಶೋಧರ ಚರಿತ್ರೆಯಲ್ಲಿ ಕಡೆಗೆ ಹಿಟ್ಟಿನ ಕೋಳಿಯನ್ನಾದರೂ ಬಲಿಕೊಡೋಣವೆಂಬ ತೀರ್ಮಾನ ತಳೆದದ್ದು ಇಂಥ ಭಾವನೆಗೆ ಸಾಕ್ಷಿ. ಇಂಥದೊಂದು ಅನಿವಾರ್ಯತೆಯನ್ನು ಅರ್ಥಮಾಡಿಕೊಂಡ ಆಚಾರ್ಯರು ಸಂಸಾರೀ ಜೀವಿಗಳಿಗೆ ಇದಕ್ಕೊಂದು ಅವಕಾಶ ಕಲ್ಪಿಸಿಕೊಟ್ಟರು.

ಮಾನವನ ಆತ್ಮೋನ್ನತಿಗೆ, ಕರ್ಮಕ್ಷಯಕ್ಕೆ ವ್ರತಗಳೂ ಪೂಜೆಗಳೂ ಅವಶ್ಯವೆಂದು ಕೆಲವು ಹಿರಿಯ ಗುರುಗಳು ಆದೇಶವಿತ್ತರು. ಸದ್ಭಾವನೆಯಿಂದ ತೊಡಗುವ ಆರಾಧನೆ ಉಪಾಸನೆ ಅಭಿಷೇಕ ಪೂಜಾವಿಧಿಗಳಿಗೆ ಶುಭ ಪರಿಣಾಮ ಉಂಟೆಂದರು. ಪೂಜ್ಯಪಾದರು, ಏಲಾಚಾರ್ಯರು, ಅಕಲಂಕಾಚಾರ್ಯರು, ಮಲ್ಲಿಸೇನಾಚಾರ್ಯರು ಮೊದಲಾದವರು ವ್ಯವಹಾರದೃಷ್ಟಿಯಿಂದ ವ್ರತ ಪೂಜಾದಿಗಳಿಗೂ ಯಕ್ಷೋಪಾಸನೆಗೂ ದಾರಿಮಾಡಿಕೊಟ್ಟರು. ಯಕ್ಷ-ಯಕ್ಷಿ ಮೊದಲಾದ ದೇವತೆಗಳ ಪೂಜೆಯು ನಿಶ್ಚಯನಯದ ದೃಷ್ಟಿಯಿಂದ ಮಿಥ್ಯಾತ್ವವೆಂದು ಆಶಾಧರಸೂರಿಯೇ ಮೊದಲಾದ ಕೆಲವು ಆಚಾರ್ಯರು ಖಂಡಿಸಿದ್ದಾರೆ.

ಆದರೆ ನೋಂಪಿ ಪೂಜಾದಿಗಳು ಸಮ್ಯಕ್ತ್ವ ಪ್ರವೃತ್ತಿಗಳ ವಿಕಾಸಕ್ಕೆ ಎಲ್ಲಿಯವರೆಗೆ ಕಾರಣವಾಗುತ್ತದೆಯೋ ಅಲ್ಲಿಯವರೆಗೆ ಅವನ್ನು ಅನುಸರಿಸುವುದು ಮಿಥ್ಯಾತ್ವವಾಗದೆಂದು ಕೆಲವು ತಾತ್ವಿಕರು ಸಾದರಪಡಿಸಿದ್ದಾರೆ. ಯಕ್ಷ-ಯಕ್ಷಿಣಿಯರು ತೀರ್ಥಂಕರರ ಸೇವೆಯಲ್ಲಿ ತತ್ಪರರಾಗಿರುತ್ತಾರೆ. ಅದರಿಂದ ಅವರನ್ನು ಸಮ್ಯಕ್ತ್ವ ಜೀವಿಗಳೆಂದು ಕಾಯಬೇಕು, ಪೂಜಿಸಬೇಕು; ಸಾಮಾನ್ಯ ಜನರಿಗೆ ಹೀಗೆ ಮಾಡಲು ಅವಕಾಶ ಕೊಡದೆ ಹೋದರೆ, ಅವರು ಗತ್ಯಂತರವಿಲ್ಲದೆ ಕಷಾಯಪ್ರೇರಿತರಾದ ಮಾರಿಮಸಣಿ ಮೊದಲಾದ ಕ್ಷುದ್ರದೇವತೆಳ ಪೂಜೆಗೆ ತೊಡಗಿಯಾರು ಎಂದು ಕೆಲವರು ಎಚ್ಚರಿಕೆ ನೀಡಿದ್ದಾರೆ. ಕವಿ ಸೋಮದೇವನಂತೂ ತನ್ನ ಯಶಸ್ತಿಲಕವೆಂಬ ಕಾವ್ಯದಲ್ಲಿ ಈ ರೀತಿ ಹೇಳಿದ್ದಾನೆ.

ಸರ್ವ ಏವ ಹಿ ಜೈನಾನಾಂ ಪ್ರಮಾಣಂ ಲೌಕಿಕೋ ವಿಧಿಃ
ಯತ್ರ ಸಮ್ಯಕ್ತ್ವಹಾನಿರ್ನಯತ್ರನ ವ್ರತದೂಷಣಮ್
||

ಅಂದರೆ “ಸಂಸಾರಿಕ ವ್ಯವಹಾರದಲ್ಲಿ ಎಲ್ಲಿ ಜೈನರಿಗೆ ಲೋಕರೂಢಿಯು ಒಂದು ನಿಯಮ. ಆದರೆ ಎಲ್ಲಿ ಸಮ್ಯಕ್ತ್ವಕ್ಕೆ ಹಾನಿಯಲಿಲ್ಲವೋ ಅಂಥ ವ್ರತವು ದೂಷಣಕಾರಿಯಾಗದು”. ಹೀಗೆ ವ್ರತ (ನೋಂಪಿ)ಗಳಿಗೆ ಚಾಲನೆ ಸಿಕ್ಕಿತು. ಪೂಜಾ ವಿಧಾನಗಳನ್ನು ಮೈಗೂಡಿಸಿಕೊಂಡ ನೋಂಪಿ ಕಥೆಗಳು ರಾಶಿಯಾಗಿ ಹುಟ್ಟಿದುವು. ಜೈನ ಸಮಾಜದಲ್ಲಿ ಅದುವರೆಗೆ ಕೇವಲ ಕಂಠಸ್ಥವಾಗಿದ್ದ ಜಾನಪದ ಕಥೆ ಕಲ್ಪನೆ ನಂಬಿಕೆಗಳು ಅಭಿವ್ಯಕ್ತ ಪಡೆಯಲು ನೋಂಪಿ ಕಥೆಗಳು ತಕ್ಕ ಮಾಧ್ಯಮವಾಗಿ ಉಚಿತವಾಗಿ ಒದಗಿ ಬಂದುವು.

ಹೀಗೆ ಅನಿವಾರ್ಯತೆಯಿಂದಾಗಿ ಉದ್ಭವಿಸಿದ ನೋಂಪಿ ಸಾಹಿತ್ಯ ಕ್ರಮೇಣ ಒಂದು ವ್ಯವಸ್ಥಿತ ರೂಪವನ್ನು ಪಡೆಯಿತು. ಜನಾನುರಾಗವನ್ನು ವೆಗ್ಗಳಿಸಲು ಯಕ್ಷಿಯರನ್ನು ನೋಂಪಿ ಕತೆಗಳಲ್ಲಿ ಪ್ರಮುಖ ಪಾತ್ರಗಳನ್ನಾಗಿ ಮಾಡಿದರು. ರಾಜಾಶ್ರಯಕ್ಕಾಗಿ ರಾಜರಾಣಿಯರೂ ನೋಂಪಿ ಆಚರಿಸಿದ ಕಥೆಗಳನ್ನು ಕಟ್ಟಿದರು. ಶ್ರೀಮಂತವರ್ಗದ ಪುರಸ್ಕಾರಕ್ಕಾಗಿ ಅವರಿಗೂ ಕಥೆಯಲ್ಲಿ ಸಿಂಹಪಾಲು ದೊರೆಯಿತು. ಸಾಮಾನ್ಯರಿಗಂತೂ ಇದರ ಆಮಿಷ ಅಸದಳವಾಯಿತು. ನೋಂಪಿಯ ಆಚರಣೆಯಿಂದ ಪ್ರಾಪ್ತವಾಗುವ ಸ್ಥಿತಿಗತಿಗಳನ್ನು ಪ್ರತಿಯೊಂದೂ ಕಥೆಯಲ್ಲಿ ಉಲ್ಲೇಖಿಸುತ್ತಾರೆಂಬುದನ್ನು ಆಗಲೇ ಹೇಳಿದ್ದಾಗಿದೆ. ನೋಂಪಿ ಕಥೆಗಳಲ್ಲಿಯೇ ಅಲ್ಲದೆ ಅನ್ಯತ್ರವೂ ಇದನ್ನು ಪೋಷಿಸುವ ಪದ್ಯಗಳಿವೆ :

ವ್ರತಾನಿ ಸಮ್ಯಕ್ಪ್ರತಿಪಾಲಯನ್ನರೋ
ನರೇಂದ್ರದೇವೇಂದ್ರ ಮುನೀಂದ್ರ ಸಂಪದಂ
ಸಮಾಪ್ಯ ಕೈವಲ್ಯ ವಿಭೂತಿ ಭಾಗ್ಭವೇತ್

ಸಂಸಿದ್ಧಿವಧ್ವಾ ಕುಚಕುಂಭವಲ್ಲಭಃ
||

ಅಂದರೆ ‘ದೋಷಗಳನ್ನು ನಿವಾರಿಸಿಕೊಂಡು ಅಹಿಂಸಾದಿ ವ್ರತ (ನೋಂಪಿ)ಗಳನ್ನು ಆಚರಿಸತಕ್ಕವನು ಚಕ್ರವರ್ತಿ ದೇವೇಂದ್ರ ಹಾಗೂ ಗಣಧರರ ಪದವಿಗಳನ್ನು ಪಡೆಯುತ್ತಾನೆ. ಕೇವಲ ಜ್ಞಾನವೇ ಮೊದಲಾದ ಉತ್ತಮ ಜ್ಞಾನಗಳಿಂದ ಕಂಗೊಳಿಸುತ್ತಾನೆ’ ಎಂದು ಹೇಳಿರುವುದು ಪ್ರಲೋಭನೆಯಂತಿದೆ. ಜತೆಗೆ ನೋಂಪಿಗಳನ್ನು ಆಚರಿಸದೆ ಇರತಕ್ಕವರಿಗೆ ಕಷ್ಟ ಕಾರ್ಪಣ್ಯಗಳು ಸಾಂಸಾರಿಕವಾಗಿ ಪ್ರಾಪ್ತವಾಗುತ್ತವೆಂಬ ಹೆದರಿಕೆಯನ್ನು ಹಾಕಿದ್ದಾರೆ :

ನಿಸ್ಸೌಭಾಗ್ಯೋ ಭವೇನ್ನಿತ್ಯಂ
ಧನಧಾನ್ಯಾದಿ ವರ್ಜಿತಃ
ಭೀತ ಮೂರ್ತಿಃ ಸದಾ ದುಃಖೀ
ವ್ರತ ಹೀನಶ್ಚ ಮಾನವಃ
||

“ವ್ರತ ಹೀನನಾದ ಮಾನವನು ಸೌಭಾಗ್ಯವನ್ನು ಕಳೆದುಕೊಳ್ಳುವನು. ಧನ ಧಾನ್ಯಾದಿಗಳು ಇಲ್ಲದವನಾಗಿ ದರಿದ್ರನಾಗುವನು. ನಾನಾವಿಧವಾದ ಭಯಗಳಿಂದ ಪೀಡಿತನಾಗುವನು”. ಇದು ಇರ್ತೆರನಾದ ಪರಿಣಾಮಕ್ಕೆ ನಾಂದಿಯಾಯಿತು; ಒಂದು, ಇದ್ದುಳ್ಳ ಕುಬೇರರೂ ಅದನ್ನು ಅಚ್ಯುತವಾಗಿರಿಸಿಕೊಳ್ಳಲು. ನೋಂಪಿ ಆಚರಿಸಬೇಕಾಯಿತು. ಇನ್ನೊಂದು ನಿರ್ಗತಿಕರು ಮತ್ತೆ ಧನಿಕರಾಗಲು ನೋಂಪಿ ಆಚರಿಸಬೇಕಾಯಿತು. ಇದು ಒಂದೇ ಏಟಿಗೆ ಹೂವು ಹಣ್ಣುಗಳನ್ನು ಒಟ್ಟಿಗೆ ಬುಟ್ಟಿಗೆ ಬೀಳಿಸುವಷ್ಟು ತಂತ್ರಯುಕ್ತವಾಗಿದೆ. ಇದೇ ಧ್ವನಿ “ವ್ರತೇನ ಯೋ ವಿನಾ ಪ್ರಾಣೀ ಪಶು ದೇವ ನ ಸಂಶಯಃ | ಯೋಗ್ಯಾಯೋಗ್ಯಂ ನ ಜಾನಾತಿ ಭೇದಸತ್ರ ಕುತೋಭವೇತ್‌” ಎಂಬ ಶ್ಲೋಕದಲ್ಲೂ ಅನುರಣಿತವಾಗಿದೆ.

ಲೌಕಿಕ ಲಾಭದ ದೃಷ್ಟಿ ನೋಂಪಿಯ ಒಂದು ಮುಖ ಮಾತ್ರ. ನೋಂಪಿಗಳಿಗೆ ಇನ್ನೊಂದು ಮುಖವೂ ಇದೆ. ಮಾನವ ಬದುಕಿಗೆ ಇದರ ಆಚರಣೆಯಿಂದ ಬರುವ ಆತ್ಮ ಸಂತೋಷ ನೆಮ್ಮದಿ, ಶಿಸ್ತು, ಆರೋಗ್ಯ, ಉದಾತ್ತತೆ ಇವನ್ನು ಅವಶ್ಯ ಒಪ್ಪಿಕೊಳ್ಳಬೇಕಾಗುತ್ತದೆ. ನೋಂಪಿಯು ಜೀವನ ಶೋಧನೆಗೆ ಆಧಾರವಾಗಿರುವಂತೆ ದಾರಿಯೂ ಆಗಿದೆ. ನೋಂಪಿಯ ಆಚರಣೆಯೆಂಬುದು ಒಂದು ಸಂಕ್ಷಿಪ್ತ ರೂಪದ ತಪಸ್ಸು ಇದ್ದಂತೆ. ಇಚ್ಛಾ ನಿರೋಧಸ್ತಪಃ ಎಂಬಂತೆ ಅಹಿತಕಾರಿ ಇಚ್ಛೆಗಳನ್ನು ನಿಯಂತ್ರಿಸುವ ಪ್ರಯತ್ನವೂ ತಪಸ್ಸೇ ಆಗುತ್ತದೆ. ವಾಸ್ತವವಾಗಿ ನೋಂಪಿಯನ್ನು ಆಚರಿಸುವ ಅವಧಿಯಲ್ಲಿ ನೋಂತವರು ಸಂಯಮ ಸ್ವರೂಪಿಗಳಾಗಿ ಕಟ್ಟುನಿಟ್ಟಾದ ನೀತಿನಿಯಮಗಳಿಂದ ವರ್ತಿಸಬೇಕಾಗುತ್ತದೆ. ಅವರ ಆಹಾರ ವಿಹಾರಗಳು ಕ್ರಮ ಕ್ಲುಪ್ತಗತಿಗೆ ಬದ್ಧವಾಗಿರುತ್ತವೆ. ಆಶಾಧರ ಸೂರಿಯವರು (ಸಾಗಾರ ಧರ್ಮಾಮೃತ, ಅದ್ಯಾಯ ೨) ವ್ರತದ (ನೋಂಪಿಯ) ಸ್ವರೂಪವನ್ನು ವಿಶದಪಡಿಸಿದ್ದಾರೆ :

ಸಂಕಲ್ಪ ಪೂರ್ವಕಸ್ಸೇವ್ಯೋ
ನಿಯಮೋ ಶುಭಕರ್ಮಣಃ
|
ನಿರ್ವತ್ತಿರ್ವಾ ವ್ರತಂ ಸ್ಯಾದ್ವಾ
ಪ್ರವೃತ್ತಿಃ ಶುಭಕರ್ಮಣಃ
||

“ಅನುಭವಿಸಲು ಅರ್ಹವಾದ ವಿಷಯಗಳನ್ನು ಸಂಕಲ್ಪ ಪೂರ್ವಕವಾಗಿ ಅನುಭವಿಸುವುದು, ಹಿಂಸಾದಿ ಆಶುಭಕರ್ಮಗಳನ್ನು ಸಂಕಲ್ಪದಿಂದಲೇ ದೂರಮಾಡುವುದು, ಇಲ್ಲವೇ ಪಾತ್ರ ದಾನಾದಿ ಶುಭ ಕರ್ಮಗಳಲ್ಲಿ ತೊಡಗುವುದು ವ್ರತವೆನಿಸುತ್ತದೆ”.

ನೋಂಪಿಯನ್ನು ಆಚರಿಸುವಷ್ಟೂ ಕಾಲ ಕಾಯಾ ವಾಚಾ ಮನಸಾ ತ್ರಿಕರಣ ಪೂರ್ವಕವಾಗಿ ಶುಭ ಚಿಂತನೆಗೆ ಅನುಗುಣವಾಗಿ ಇರಬೇಕಾಗುತ್ತದೆ. ಆತ್ಮ ಶುದ್ಧಿಗೆ ಎಡೆಮಾಡಿ ಕೊಡುವ ಕ್ರಮಗಳನ್ನು ವ್ಯವಸ್ಥಿವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ಪ್ರಶಾಂತ ವಾತಾವರಣವನ್ನು ನೋಂಪಿಯ ಆಚರಣೆಗೆ ಆರಿಸಿಕೊಳ್ಳಲಾಗಿದೆ. ಆ ಕಾಲದಲ್ಲಿ ರಾಗ ದ್ವೇಷ ಮೋಹ ಮದಮಾತ್ಸರ್ಯ ಕೋಪಗಳಿಗೆ ತಿಲಾಂಜಲಿ ಕೊಡಬೇಕಾಗುತ್ತದೆ, ಅಂದರೆ ದುರ್ಭಾವನೆಗಳಿಗೆ ಅವಕಾಶವಿರುವುದಿಲ್ಲ. ಎರಡನೆಯದಾಗಿ ಶಯ್ಯಾ ಸುಖ ತ್ಯಾಗವಿರುತ್ತದೆ. ಇಲ್ಲಿ ಭೂಶಯನವನ್ನು ವಿಧಿಸಿದ್ದಾರೆ. ಇದರಿಂದ ಬ್ರಹ್ಮಚರ್ಯ ಪಾಲನೆಯಾಗುತ್ತದೆ, ರತಿ ಸಂಯಮ ಕಲಿಸಿಕೊಡುತ್ತದೆ. ವೀರ್ಯನಾಶವನ್ನು ನಿಲ್ಲಿಸುವುದು, ದೀರ್ಘ ಜೀವನಕ್ಕೆ ಪಾಲಿಸಬೆಕಾದ ನಿಯಮಗಳಲ್ಲೊಂದು ಎಂಬುದನ್ನು ಇಲ್ಲಿ ನೆನೆಯಬೇಕು. ಮೂರನೆಯದಾಗಿ ನೋಂತ ಕಾಲದಲ್ಲಿ ಉಪವಾಸ (ನಿಟ್ಟುಪವಾಸ) ಇಲ್ಲವೇ ಅತಿ ಮಿತಾಹಾರ (ಕಾಂಚಿಕಾಹಾರ – ಅಂಬಲಿ, ಗಂಜಿ ಲಘು ಆಹಾರ ಸೇವನೆ) ಮಾಡಬೇಕು; ಮತ್ತು ಹೀಗೆ ಕಡಮೆಯಾಗಿ ತೆಗೆದುಕೊಳ್ಳುವ ಆಹಾರವೂ ದ್ರವರೂಪದ್ದೂ, ಸ್ವಾತ್ವಿಕರೂಪದ್ದೂ ಆಗಿರುತ್ತದೆ. ಇದು ಆರೋಗ್ಯ ಜೀವನಕ್ಕೆ ಮೊದಲ ಮೆಟ್ಟಿಲು. ಉಪವಾಸ ಹಾಗೂ ಅಲ್ಪಾಹಾರವನ್ನು ವೈದ್ಯ ವಿಜ್ಞಾನವೂ ಮಾನ್ಯ ಮಾಡಿದೆ ನಿರೋಗಿಗಳ, ದೀರ್ಘಾಯುಗಳ ಜೀವನ ಚರಿತ್ರೆಯಿಂದಲೂ ಈ ಸಂಗತಿಯ ಸತ್ಯ ಸ್ಥಾಪಿತವಾಗಿದೆ. ನಾಲ್ಕನೆಯದಾಗಿ ಕೆಲವು ಜನ ಒಟ್ಟಿಗೆ ಸೇರಿ, ಒಂದೆಡೆ ಕಲೆತು ಸಾಮಾಹಿಕವಾಗಿ ನೋಂಪಿ ಆಚರಿಸಬಹುದು. ಇದು ಸಾಂಘಿಕ ಜೀವನದ ಸೌಹಾರ್ದ ಭಾವನೆಗೆ ಇಂಬಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸಂಪತ್ತಿನ ಸಮಾನ ವಿತರಣೆಗೂ, ಸ್ನೇಹ ಸೌಹಾರ್ದ ಸಹಕಾರಗಳಿಗೂ, ಸಮಾನಾವಕಾಶಕ್ಕೂ ಇದು ದಾರಿ ತೆರೆಯುತ್ತದೆ.

ಈ ಸಂದರ್ಭದಲ್ಲಿ ಉತ್ತರ ಪುರಾಣ ಖ್ಯಾತಿಯ ಗುಣಭದ್ರಾಚಾರ್ಯರು ತಮ್ಮ ಆತ್ಮಾನುಶಾನವೆಂಬ ಇನ್ನೊಂದು ಕೃತಿಯಲ್ಲಿ ಹೇಳಿರುವ ಮಾತು ಉಲ್ಲೇಖನೀಯವಾಗಿದೆ. ನೋಂಪಿಗಳನ್ನು ಆಚರಿಸುವ ದಿನಗಳನ್ನು ಪರ್ವಗಳೆನ್ನುತ್ತಾರೆ. ಗುಣ ಭದ್ರಾಚಾರ್ಯರು ಮಾನವ ಶರೀರವನ್ನು ಇಕ್ಷುವಿಗೆ (ಕಬ್ಬಿನ ಜಲ್ಲೆಗೆ) ಹೋಲಿಸಿದ್ದಾರೆ. ಕಬ್ಬಿನ ಜಲ್ಲೆಯಲ್ಲಿರುವ ಗಂಟುಗಳಿಗೂ ಪರ್ವವೆನ್ನುತ್ತಾರೆ. ಆ ಪರ್ವ (ಗಂಟು)ಗಳಲ್ಲಿ ಕ್ರಿಮಿಗಳು ಉಂಟಾದರೆ ಕಬ್ಬು ಪುಷ್ಟವಾಗಿ ಬೆಳೆಯದು, ಅದು ರಸಹೀನವಾಗುತ್ತದೆ. ಅದರಂತೆ ಮಾನವ ಜೀವನವೂ; ಇಲ್ಲಿ ದುರ್ಭಾವನೆಗಳು ಸಂಭವಿಸಿದರೆ ಜೀವನ ನೀರಸವೂ ವ್ಯರ್ಥವೂ ಆಗುತ್ತದೆ. ಸದ್ಭಾವನೆಗಳಿಂದ ಜೀವನ ಪುಷ್ಟಗೊಂಡು ಸುಖದ ಸಂಪುಟವಾಗಲು ಪರ್ವಗಳನ್ನು, ಪರ್ವಗಳಲ್ಲಿ ತಿಳಿಸಿರುವ ವ್ರತಗಳನ್ನು ಆಚರಿಸಬೇಕು. ಈ ‘ಪರ್ವ’ ಶಬ್ದದ ತದ್ಭವ ರೂಪವೇ ‘ಹಬ್ಬ’ ಎಂದು ತಿಳಿದಾಗ ಇದರ ಮಹತ್ವ ಮತ್ತೂ ಪ್ರಕಾಶಿತವಾಗುತ್ತದೆ.

ನೋಂಪಿ ಕಥೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಿಸಿ ಪರಿಶೀಲಿಸಿರುವ ಈ ಸಂದರ್ಭದಲ್ಲಿ ಅವುಗಳಲ್ಲಿ ಕಂಡುಬರುವ ಕೆಲವು ನ್ಯೂನತೆಗಳನ್ನೂ ಗುರುತಿಸಬಹುದು. ಅವುಗಳಲ್ಲಿ ವಿಶೇಷವಾಗಿ, ನಮ್ಮ ಹಳಗನ್ನಡ ಸಾಹಿತ್ಯದಲ್ಲಿ ಕಂಡುಬರುವಂತೆ, ಒಂದು ರಾಜನಿಷ್ಠ ಸಮಾಜದ ವ್ಯವಸ್ತೆ ಕಾಣುತ್ತದೆ. ಬಹು ಮಟ್ಟಿನ ಕಥೆಗಳಲ್ಲಿ ರಾಜರಾಣಿಯರೇ, ಪ್ರಮುಖ ಪಾತ್ರಗಳು. ಈ ರೀತಿಯ ಕಥಾಚೌಕಟ್ಟಿಗೆ ಕಾರಣವೇನೆಂಬುದು ಹಿಂದೆಯೇ ನೋಡಿದ್ದೇವೆ. ಆದರೆ ಪ್ರಜಾಪ್ರಭುತ್ವದ ಏರುಗಾಲದಲ್ಲಿ ಈ ಪ್ರಭುತ್ವ ಪ್ರತಿಷ್ಠೆಗಳ ಕಲ್ಪನೆ ಅಷ್ಟಾಗಿ ಆಸ್ವಾದವಾಗದೆ ಹೋಗಬಹುದು.

ಎರಡನೆಯದಾಗಿ ರಾಜರಿಗೆ ಹತ್ತಾರು ನೂರಾರು ಜನ ರಾಣಿಯರಿದ್ದರೆಂಬ ವರ್ಣನೆಗಳೂ ಕೆಲವು ಕಥೆಗಳಲ್ಲಿವೆ. ಒಬ್ಬಳೇ ಪಟ್ಟ ಮಹಿಷಿಗೆ ನಿಷ್ಠರಾದ ರಾಜರಂತೆ ದೊಡ್ಡ ಅಂತಃಪುರದ ಪರಿವಾರವೇ ಶ್ರೇಣಿಯಾಗಿ ನಿಂತ ಕಥೆಗಳೂ ಇವೆ. ಕೆಲವು ಶ್ರೀಮಂತರಿಗೂ ಇಂಥ ಪತ್ನಿಯರ ತಂಡೋಪತಂಡವಿದ್ದ ಸಂಗತಿ ಹೇಳುವ ಕತೆಗಳೂ ಇವೆ. ಇವು ಬಹು ಪತ್ನಿಯರನ್ನು ಪಡಯುವ ಅನುಕೂಲವಿದ್ದ ಸಮಾಜದ ವ್ಯವಸ್ಥೆಗೆ ಸೇರಿದ ಕಥೆಗಳು. ಕಾನೂನು ಇಂದು ವ್ಯತಿರಿಕ್ತವಾಗಿರುವುದರಿಂದ ಈ ನಿರೂಪಣೆ ಆಧುನಿಕ ದೃಷ್ಟಿಗೆ ಅತಿರೇಕವಾಗಿ ತೋರುತ್ತದೆ.

ಮೂರನೆಯದಾಗಿ ಮಕ್ಕಳಿಗಾಗಿ ಹಂಬಲಿಸುವ, ಅನೇಕ ಮಕ್ಕಳನ್ನು ಪಡೆದಿದ್ದ, ಬಹುಪುತ್ರ-ಪುತ್ರೀ ಸಂತಾನವಾಗಲೆಂದು ಹರಸುವ ಕೆಲವು ಕಥೆಗಳಿವೆ. ಕುಟುಂಬ ಯೋಜನೆ ಜನಪ್ರಿಯವಾಗಿ, ಸಂತಾನ ನಿಯಂತ್ರಣ ಹಾಗೂ ಸಂತಾನ ಹರಣ ಶಸ್ತ್ರಕ್ರಿಯೆ – ಇವು ರೂಢಿಯಲ್ಲಿರುವ ಈಗಿನ ಸಮಾಜಿಕ ವ್ಯವಸ್ಥೆಯ ಸಂದರ್ಭದಲ್ಲಿ ಅತಿ ಸಂತಾನ ಪ್ರಚಾರದ ಕಥೆಗಳು ಆರೋಚಕವಾಗಿ, ಕಾಣುತ್ತವೆ.

ನಾಲ್ಕನೆಯದಾಗಿ ಅನೇಕ ನೋಂಪಿ ಕಥೆಗಳಲ್ಲಿ ಬರುವ ಆರಾಧನೆಗಳು ಪವಾಡಗಳು, ಪೂಜೆಯ ವಿಧಿವಿಧಾನಗಳಲ್ಲಿರುವ ಅದ್ದೂರಿ ವ್ಯವಸ್ಥೆಗಳು ಇವು ಇಂದಿನ ವೈಜ್ಞಾನಿಕ ವ್ಯವಸ್ಥೆಯಲ್ಲಿ ಅರ್ಥಹೀನವೆಂದು ತೋರುವ ಸಾಧ್ಯತೆಯಿದೆ.