೧೫. ಗೋಮುಖಿ ನೋಂಪಿ : ಕರ್ಣಪಾರ್ಯ (೧೧೪೦) ನೇಮಿನಾಥ ಪುರಾಣಂ (೬-೯೯ವ), ಮಹಾಪುರಾಣ ೭೦-೪೩೦, ಬಂಧುವರ್ಮ (೧೧೬೫) ಹರಿವಂಶಾಭ್ಯುದಯ (೬-೨೪ವ), ಸಾಳ್ವಕವಿಯ (೧೪೪೦) ಸಾಳ್ವಭಾರತ, ನೇಮಿಚಂದ್ರನ (೧೧೮೦) ಅರ್ಧನೇಮಿಪುರಾಣಂ.

೧೬. ಚಕ್ರವಾಳ ನೋಂಪಿ : ಚಕ್ರರತ್ನ ಪೂಜೆ; ಮಹಾಪುರಾಣ ೨೬-೧, ೪. ಕನ್ನಡದಲ್ಲಿ ಈ ನೋಂಪಿಯನ್ನು ಮೊಟ್ಟ ಮೊದಲನೆಯ ಸಲ ಸವಿವರವಾಗಿ ದಾಖಲಿಸಿದ್ದು ಪೊನ್ನಕವಿ (೯೬೫) ಶಾಂತಿಪುರಾಣಂ, ೪-೬೭, ೬೮. (ಸಂ. ಹಂಪ. ನಾಗರಾಜಯ್ಯ : ೧೯೮೨ : ೧೧೭-೧೮).

೧೭. ಚತುರ್ದಸೀ ನೋಂಪಿ : ಚತುರ್ಮುಕೋತ್ಸವ; ಮಹಾಪುರಾಣ ೭೩-೫೮ ಚಾಂದ್ರಮಾನ ಮಾಸದ ಒಂದೊಂದು ಪಕ್ಷದ ಹದಿನಾಲ್ಕನೆಯ ತಿಥಿಯ ಕಾಲದ ಆಚರಣೆ; ಎಪಿಗ್ರಾಫಿಯ ಕರ್ನಾಟಿಕ ಸಂಪುಟ ೧೧ ಹೊಳಲ್ಕೆರೆ ಶಾಸನ ಸಂಖ್ಯೆ -೧ ಕ್ರಿ.ಶ. ೧೧೫೪.

೧೮. ಚಾಂದ್ರಾಯಣ ನೋಂಪಿ : ಚಂದ್ರನ ವೃದ್ಧಿ ಕ್ರಯಗಳಿಗೆ ಅನುಸಾರವಾಗಿ ತಮ್ಮ ಆಹಾರವನ್ನು ಒಂದು ತುತ್ತಿನಿಂದ ಆರಂಭಿಸಿ ದಿನಕ್ಕೆ ಒಂದೊಂದೇ ತುತ್ತು ಹೆಚ್ಚಿಸುತ್ತ ಹೊರಟು ಆಮೇಲೆ ಕ್ರಮೇಣ ಒಂದೊಂದೇ ತುತ್ತು ಕಡಮೆ ಮಾಡುತ್ತ ಬರುವ ವ್ರತ.

೧೯. ಜಿನ(ಗುಣ) ಸಂಪತ್ತಿ ನೋಂಪಿ : ಜಿನೇಂದ್ರಗುಣ ಸಂಪತ್ತಿ : ಮಹಾಪುರಾಣ ೬-೧೪೧ರಿಂದ ೧೪೪, ೭-೫೩, ೬೩-೭೫೮; ಕರ್ಣಪಾರ್ಯ, ನೇಮಿನಾಥ ಪುರಾಣ ೧೪-೩೦ವ ಮತ್ತು ೧೪-೧೪ವ.

೨೦. ಜಿನರಾತ್ರಿ ನೋಂಪಿ : ಆದಿಪರಮೇಶ್ವರನು ಮಾಘ ಬಹುಳ ಚತುರ್ದಶಿಯಂದ ಮೋಕ್ಷವನ್ನು ಐದಿದನು. ಆ ಇರುಳನ್ನು ಜಿನರಾತ್ರಿಯೆಂದು ಕರೆದು ಜನರು ನಲಿದಾಡುವರು; ಯಶಃಕೀರ್ತಿಕವಿ, ಜಿಣರತ್ತಿವಿಹಾಣ ಕಹಾ (ಪ್ರಾಕೃತಕಾವ್ಯ).

೨೧. ಜೀವದಯಾಷ್ಟಮಿಯ ನೋಂಪಿ : ಯಶೋಧರ ಚರಿತೆಯ ಕಥೆ; ಸುಮಾರು ೨೫ ಕಾವ್ಯಗಳು ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿವೆ. ೧೦೯೮ರ ಶಾಸನದಲ್ಲೂ ಇದರ ಪ್ರಸ್ತಾಪ ಬಂದಿದೆ (Desai, P.B. : Jainism in South India and Some Jaina Epigraphs : 1957 : No. 2)

೨೨. ಜ್ಞಾನ ಪಂಚಮೀ ನೋಂಪಿ : ವಿದ್ಧಣೂ ಕವಿ (೧೩೬೬) ಣಾಣ ಪಂಚಮೀ ಚಉಪಇ.

೨೩. ತದಿಗೆ ನೋಂಪಿ : ‘ಪುಣ್ಯದಿನಂ ವೈಶಾಖಶುದ್ಧ ತದಿಗೆಯಕ್ಷಯ ತೃತೀಯೆಯೆಂಬ ಪುಣ್ಯದಿನಮಾಯ್ತು’ – ಚಾವುಂಡರಾಯ ಪುರಾಣ.

೨೪. ದಶಲಾಕ್ಷಣಿಕ ನೋಂಪಿ : ಮಾಘ, ಚೈತ್ರ ಮತ್ತು ಭಾದ್ರಪದ ತಿಂಗಳ ಶುದ್ಧ ಪಂಚಮಿಯಿಂದ ಚತುರ್ದಶಿವರೆಗಿನ ಪರ್ವದಿನಗಳು ವ್ರತಾಚರಣೆ. ಈ ನೋಂಪಿಯನ್ನು ಹತ್ತು ವರ್ಷಗಳವರೆಗೆ ಮಾಡುವುದುಂಟು, ಭಗವತೀದಾಸ, ದಶಲಾಕ್ಷಣೀರಾಸ; ಸಕಲಕೀರ್ತಿ, ದ್ವಿಕಾವಲೀವ್ರತ ಕಥಾ.

೨೫. ದೀಪಾವಳೀ ನೋಂಪಿ : ಜ್ಞಾನ ಸೂರ್ಯನಾದ ಮಹಾವೀರ ಜಿನನು ಕಣ್ಮರೆಯಾದ ದಿನ ಇರುಳು ಸೊಡರು ಹೊತ್ತಿಸಿ ಜಿನರ ಪೂಜೋತ್ಸವವನ್ನು ಆಚರಿಸಿದರು. ಅಂದಿನಿಂದ ಅದು ದೀಪಾವಳಿಯೆಂದು ಹೆಸರಾಯಿತು.

೨೬. ಧರ್ಮಚಕ್ರ ನೋಂಪಿ : ತೀರ್ಥಂಕರರು ವಿಹಾರ ಮಾಡುವಾಗ ಅವರ ಮುಂದೆ ಚಲಿಸುವ ಸಾವಿರ ಅರಗಳ ಚಕ್ರವು ನೇಸರನ್ನೂ ಮೀರಿಸುವ ಬೆಳಕಿನಿಂದ ಕೂಡಿರುತ್ತದೆ. ಮಹಾಪುರಾಣ ೬೨-೪೯೫, ಕಮಲಭವ (೧೨೩೫) ಶಾಂತೀಶ್ವರ ಪುರಾಣ ೮-೧೩೨ ವ.

೨೭. ನಂದೀಶ್ವರ ನೋಂಪಿ : ನಂದೀಶ್ವರದಷ್ಟಮೀ ನೋಂಪಿ : ಕಾರ್ತೀಕ, ಪಾಲ್ಗುಣ, ಆಷಾಢ – ಈ ಮೂರು ತಿಂಗಳಲ್ಲಿ ಕಡೆಯ ಎಂಟು ದಿನಗಳಲ್ಲಿ ನಂದೀಶ್ವರವೆಂಬ ದ್ವೀಪದಲ್ಲಿ ಸೌಧರ್ಮಾಧಿ ಇಂದ್ರರು ಮಾಡುವ ಪೂಜೆ, ಮತ್ತು ಅದೇ ಸಮಯದಲ್ಲಿ ಲೋಕದಲ್ಲಿ ಲೋಗರೂ ಪೂಜಿಸುವರು; ವಡ್ಡಾರಾಧನೆ; ಮಹಾಪುರಾಣ ೬೩-೫೩೦, ೨೯೨ ೬೭-೮೦. ತಮಿಳಿನಲ್ಲಿ ತಿಱುನಂದೀಶ್ವರ ಎಂದು ಕರೆಯಲಾಗಿದೆ. ಪಂಪಕವಿಯ ಆದಿಪುರಾಣವು (೧೬೭೯) ಪೂರೈಸಿದ್ದು ೯೪೧ರ ಪ್ಲವ ಸಂವತ್ಸರ ಕಾರ್ತಿಕ ನಂದೀಶ್ವರದಲ್ಲಿ. ರನ್ನ ಕವಿಯ ಅಜಿತಪುರಾಣದ ಬರವಣಿಗೆ ಮುಗಿದದ್ದು ೯೯೩ರ ವಿಜಯ ಸಂವತ್ಸರದ ಕಾರ್ತಿಕ ನಂದೀಶ್ವರದಲ್ಲಿ.

೨೮. ನಕ್ಷತ್ರಮಲಾ ನೋಂಪಿ : ಇಪ್ಪತ್ತೇಳು ಮುತ್ತಿನ ಸರಮಂ ನಕ್ಷತ್ರಮಾಲೆಯಂಬುದು – ಎಂಬುದಾಗಿ ನಾಗವರ್ಮನ (೧೦೪೨) ಅಭಿಧಾನ ರತ್ನಮಾಲೆ (ಹಲಾಯುಧ) ಕೊಶದಲ್ಲಿ ಹೇಳಿದೆ.

೨೯. ನವನಧಿ ಭಂಡಾರ ನೋಂಪಿ : ಪೊನ್ನ, ಶಾಂತಿಪುರಾಣ ೯-೮೭ವ. ೯೪ವ; ಎಪಿಗ್ರಾಫಿಯ ಕರ್ನಾಟಕ ಸಂಪುಟ ೬ (ಹಳೆಯ ಆವೃತ್ತಿ) ಮೂಡಿಗೆರೆ ಶಾಸನ ಸಂಖ್ಯೆ ೧೩, ಕಾಲ ೧೦೬೩.

೩೦. ನವಗ್ರಹ ನೋಂಪಿ : ನೇಸರು, ತಿಂಗಳು, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು – ಈ ನವಗ್ರಹಗಳನ್ನು ಪ್ರಸನ್ನ ಗೊಳಿಸುವುದಕ್ಕಾಗಿ ಮಾಡುವ ನವಧಾನ್ಯಗಳ ಪೂಜೆ; ಗೋದಿ ಬತ್ತ ತೊಗರಿ ಹೆಸರು ಕಡಲೆ ಅವರೆ ಎಳ್ಳು ಉದ್ದು ಮತ್ತು ಹುರಳಿ ಧಾನ್ಯಗಳಿಂದ ನೋಂಪಿಗೈದು ದಾನ ಮಾಡುವುದು.

೩೧. ನಿರ್ಜರ ಪಂಚಮೀ ನೋಂಪಿ : ವಿನಯಚಂದ್ರ (೧೫ ಶ.) ಣಿಜ್ಝರ – ಪಂಚಮೀ ವಿವಾಣ ಕಹಾಣಕ (ಅಪಭ್ರಂಶ ಕಾವ್ಯ).

೩೨. ನಿದುಃಖ ಸಪ್ತಮೀ ನೋಂಪಿ : ಬಾಲಚಂದ್ರ ಕವಿ, ಣಿದ್ದಹ ಸತ್ತಮೀ ಕಹಾ (ಪ್ರಾಕೃತ ಕಾವ್ಯ)

೩೩. ನಿಶ್ಯಲ್ಯ ಅಷ್ಟಮೀ ನೋಂಪಿ : ಶಲ್ಯವೆಂದರೆ ನೋಂಪಿ ಆಚರಿಸುವವರಿಗೆ ಉಂಟಾಗುವ ಅಡ್ಡಿಗಳು ಮೂರು-ಮಾಯೆ, ಮಿಥ್ಯಾತ್ವ, ನಿದಾನ – ಇವು ಇಲ್ಲದಂತೆ ಮಾಡುವ ನೋಂಪಿಯಿದು.

೩೪. ಪಂಚಕಲ್ಯಾಣ ನೋಂಪಿ : ಎಕ, ಸಂಪುಟ ೨ (ಪರಿಷ್ಕೃತ) ಸಂಖ್ಯೆ ೩೪೪. ತೀರ್ಥಂಕರನಿಗೆ ಸಂಬಂಧಿಸಿದ ಹಾಗೆ ನಡಸುವ ಗರ್ಭಾವತರಣ, ಜನ್ಮಾಭಿಷೇಕ, ನಿಷ್ಕ್ರಮಣ, ಕೇವಲಜ್ಞಾನೋತ್ಪತ್ತಿ, ನಿರ್ವಾಣ-ಎಂಬ ಆಯ್ದು ಮಂಗಲಕರ ಸಂದರ್ಭಗಳ ಆಚರಣೆ.

೩೫. ಪಂಚನಮಸ್ಕಾರ ನೋಂಪಿ : ಅರಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು – ಎಂಬ ಆಯ್ವರು ಪರಮೇಷ್ಠಿಗಳಿಗೆ ಗೌರವ ತೋರುವ ವ್ರತಾಚರಣೆ : ಎಕ ಸಂಪುಟ ೨ (ಪರಿಷ್ಕೃತ) ಸಂಖ್ಯೆ, ೫೩೯, ಕಾಲ ೧೨೧೪; ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್‌, ಸಂಪುಟ-೫, ಶಾಸನ ಸಂಖ್ಯೆ ೩೨ ಕಾಲ ೧೨೧೫.

೩೬. ಪಂಚಮೀ ನೋಂಪಿ : ಮಹೇಶ್ವರಕವಿ (ಹನ್ನೊಂದನೆಯ ಶ.) ಪಂಚಮೀಕಹಾ (ಪ್ರಾಕೃತ ಕಾವ್ಯ); ಚತುರ್ಮುಖ ಕವಿ (ಏಳನೆಯ ಶ.) ಪಂಚಮೀ ಚರಿತ (ಅಪಭ್ರಂಶ ಕಾವ್ಯ); ವಿಷ್ಣು (೧೬೦೦) ಪಂಚಮೀ ವ್ರತಕಥಾ.

೩೭. ಪುರಂದರ ವಿಧಿ ನೋಂಪಿ : ಅಮರಕೀರ್ತಿ ಕವಿ, ಪುರಂದರ ವಿಹಾಣ ಕಹಾ.

೩೮. ಪುಷ್ಪಾಂಜಲಿ ನೋಂಪಿ : ರಾಮಚಂದ್ರ ಮುಮುಕ್ಷು (೯-೧೦ ಶ) ಪುಣ್ಯಾಸ್ರವ ಕಥಾ ಕೋಶ; ನಾಗರಾಜ (೧೩೩೧) ಪುಣ್ಯಾಸ್ರವ ಚಂಪೂ, ಪಟ್ಟಾಭಿರಾಮ, ರತ್ನಶೇಖರ ಚರಿತೆ.

೩೯. ಮಿಗಿಲರಳ ನೋಂಪಿ : ಮಿಗೆಯರಳ ನೋಂಪಿ : ಹೆಚ್ಚಾದ ಹೂಗಳ ಪೂಜೆ ಆಷಾಢಮಾಸದ ನಂದೀಶ್ವರ ಅಷ್ಟಮಿಯಿಂದ ಕಾರ್ತಿಕ ನಂದೀಶ್ವರ ಅಷ್ಟಮಿವರೆಗೆ, ಒಂದು ಹೂವಿನಿಂದ ಆರಂಭಿಸಿ, ಪ್ರತಿದಿನವೂ ಒಂದೊಂದು ಹೂವನ್ನು ಹೆಚ್ಚು ಮಾಡುತ್ತ ಜಿನಪೂಜೆ ಎಸಗುವುದು.

೪೦. ಮುಕ್ತಾವಳೀ ನೋಂಪಿ : ಜಿನಸೇನಾಚಾರ್ಯ, ಪಂಪ, ಪೊನ್ನ, ಚಾವುಂಡರಾಯ, ಕರ್ಣಪಾರ್ಯ ಮೊದಲಾದವರು ಹೆಸರಿಸಿದ್ದಾರೆ.

೪೧. ರತ್ನತ್ರಯ ನೋಂಪಿ : ಮೂವತ್ತು ಉಪವಾಸಗಳೂ ಹತ್ತು ಪಾರಣೆಗಳೂ ಉಳ್ಳ ನೋಂಪಿ.

೪೨. ರತ್ನಾವಳೀ ನೋಂಪಿ : ಮಹಾಪುರಾಣ ೭-೩೨, ೪೪, ೭೧-೮೬೪; ಆದಿಪುರಾಣಂ ೩-೫೩ ವ, ಚಾವುಂಡರಾಯ ಪುರಾಣ ಇತ್ಯಾದಿ.

೪೩. ಕಥಾವರ್ತೋತ್ಸವ ನೋಂಪಿ : ವಿದ್ಯಾಧರರು ಮಾಡುವ ಪೂಜೆ. ಮಹಾಪುರಾಣ ೭೩-೫೮.

೪೪. ರಸಪರಿತ್ಯಾಗ ನೋಂಪಿ : ತುಪ್ಪ ಹಾಲು ಎಣ್ಣೆ ಬೆಲ್ಲ ಸಕ್ಕರೆ ಉಪ್ಪು ಮೊದಲಾದ ರಸ ಪದಾರ್ಥಗಳನ್ನು ತೆಗದುಕೊಳ್ಳದ ವ್ರತ.

೪೫. ರೋಹಿಣೀ ನೋಂಪಿ : ವಿಶಾಲಕೀರ್ತಿ (೧೫ ಶ.) ಮತ್ತು ಭಗವತೀದಾಸ (೧೭ ಶ) ವಿರಚಿತ ರೋಹಿಣೀವ್ರತರಾಸ.

೪೬. ಷೋಡಶ ಭಾವನೆ ನೋಂಪಿ : ವಿನಯವನ್ನು ನೆಲೆಗೊಳಿಸುವ ಭಾವನೆ, ತೀರ್ಥಂಕರನಾಗುವುದಕ್ಕೆ ಕಾರಣವಾದ ೧೬ ಭಾವನೆಗಳಲ್ಲೊಂದು ೧೬ ಮನೋವೃತ್ತಿಗಳು – ದರ್ಶನ ವಿಶುದ್ಧಿ, ವಿನಯ ಸಂಪನ್ನತೆ, ಶೀಲವ್ರತಗಳಲ್ಲಿ ಅನತಿಚಾರ, ಅಭೀಕ್ಷ್ಯ ಜ್ಞಾನಯೋಗ, ಸಂವೇಗ, ಶಕ್ತಿತಸ್ತ್ಯಾಗ, ಶಕ್ತಿತಸ್ತಪ, ಸಾಧುಸಮಾಧಿ, ವೈಯಾವೃತ್ಯ, ಅರ್ಹದ್ಭಕ್ತಿ, ಆಚಾರ್ಯಭಕ್ತಿ ಉಪಾಧ್ಯಾಯಭಕ್ತಿ, ಪ್ರವಚನ ಭಕ್ತಿ, ಆವಶ್ಯಕಾಪರಿಹಾರಿಣಿ, ಮಾರ್ಗಪ್ರಭಾವನೆ ಮತ್ತು ಪ್ರವಚನ ವತ್ಸಲತ್ವ.

೪೭. ಶಿವರಾತ್ರಿ ನೋಂಪಿ : ಮಾಘಮಾಸದ ಕೃಷ್ಣ ಪಕ್ಷದ ಚತುರ್ದಶಿಯ ರಾತ್ರಿ ಆಚರಿಸುವ ವ್ರತ (ಉಪವಾಸ), ಜಿನರಾತ್ರಿ.

೪೮. ಶೀಲಕಲ್ಯಾಣ ನೋಂಪಿ : ದಿಗ್‌ವ್ರತ, ದೇಶ ವ್ರತಾದಿಗಳಿಗೆ ಮತ್ತು ಸಾಮಾಯಿಕ ಪೋಷಧ ಉಪವಾಸಾದಿಗಳಿಗೆ ‘ಶೀಲ’ವೆಂದು ಹೆಸರು.

೪೯. ಶ್ರುತಪಂಚಮೀ ನೋಂಪಿ : ಮಹಾಪುರಾಣ ೭-೫೪, ಧನಪಾಲಕವಿ (ಹತ್ತನೆಯ ಶ.) ಭವಿಸಯುತ್ತ ಕಹಾ; ಮೈಸೂರು ಆರ್ಕಿಯಲಾಜಿಕಲ್‌ ರಿಪೋರ್ಟ್‌ ೧೯೧೬, ಪು೧ ೮೩; ಕನ್ನಡ ಇನ್ಸ್‌ಕ್ರಿಪ್ಷನ್ಸ್‌ ಆಫ್‌ ಆಂಧ್ರ ಪ್ರದೇಶ (೧೯೬೧), ಶಾಸನ ಸಂಖ್ಯೆ ೭೩, ಕ್ರಿ.ಶ. ೧೩೬೦.

೫೦. ಶ್ರುತಜ್ಞಾನ ವಿಧಿ ನೋಂಪಿ : ಓದುವುದರಿಂದ ಮತ್ತು ಕೇಳುವುದರಿಂದ ಬರುವ ಜ್ಞಾನ; ಇದನ್ನು ೧೫೮ ದಿನ ನೋನುವುದೂ ಉಂಟು. ಪಂಪ, ಆದಿಪುರಾಣ ೩-೪೦ ವ.

೫೧. ಸಪ್ತಜ್ಯೋತಿ ನೋಂಪಿ : ಎಕ, ಸಂಪುಟ-೮, ನಗರ ಶಾಸನ ಸಂಖ್ಯೆ ೫೭, ಕಾಲ ೧೦೭೭.

೫೨. ಸಪ್ತಪರಮಸ್ಥಾನ ನೋಂಪಿ : ಮೋಕ್ಷ ಪದವಿಯನ್ನು ಪಡೆಯಲು ಇರುವ ಸಜ್ಜಾತೀತ್ವ, ಸದ್ಗೃಹತ್ವ, ಪಾರಿವ್ರಾಜ್ಯ, ಸುರೇಂದ್ರತ್ವ, ಸಾಮ್ರಾಜ್ಯ, ಆರ್ಹಂತ್ಯ ಮತ್ತು ನಿರ್ವಾಣ – ಎಂಬ ಏಳು ಹಂತಗಳನ್ನು ಪಡೆಯುವಿಕೆ. ಮಹಾಪುರಾಣ ೨೨-೮೧, ೬೩-೨೬೮.

೫೩. ಸರ್ವಾರ್ಥ ಸಿದ್ಧಿ ನೋಂಪಿ : ಆಯ್ದು ಅಣೂತ್ತರಗಳೆಂಬ ವಿಮಾನಗಳಲ್ಲಿ ನಟ್ಟನಡುವೆ ಇರುವ ಶ್ರೇಷ್ಠ ವಿಮಾನ ಸರ್ವಾರ್ಥ ಸಿದ್ಧಿ. ಇದು ಬಹು ಪುಣ್ಯವಂತರ ಬೀಡು. ಮಹಾಪುರಾಣ ೧೧-೧೧೫ ರಿಂದ ೨೦೨.

೫೪. ಸಹಸ್ರನಾಮದ ನೋಂಪಿ : ನಿರ್ದಿಷ್ಟದೇವತೆಯ ಸಹಸ್ರ ಹೆಸರುಗಳನ್ನು ಹೇಳುತ್ತ ಸಾವಿರ ಹೂಗಳಿಂದ ಮಾಡುವ ಅರ್ಚನೆ.

೫೫. ಸಾರಸ್ವತದ ನೋಂಪಿ : ಎಂಟು ವಿಧವಾದ ಲೋಕಾಂತಿಕ ದೇವರುಗಳಲ್ಲಿ ಒಂದು ವರ್ಗದ ಹೆಸರು ಸಾರಸ್ವತ.

೫೬. ಸಿಂಹನಿಷ್ಕ್ರೀಡಿತ ನೋಂಪಿ : ಮಹಾಪುರಾಣ ೭-೨೩, ೫೪-೧೬೧, ೬೦-೫೫, ೬೧; ೬೧-೬೩.

೫೭. ಸಿದ್ಧ ಚಕ್ರನೋಂಪಿ : ಸಾಧಕನು ಸಿದ್ಧಿಯನ್ನು ಪಡೆಯಲು ಪೂಜಿಸುವ ಚಕ್ರ ಮತ್ತು ಅದರ ವ್ರತ; ಎಂಎಆರ್‌ ೧೯೧೬, ಪುಟ. ೮೩. ರತ್ನಶೇಖರಸೂರಿ (೧೪ನೆಯ ಶ.) ಶ್ರೀಪಾಲ ಚರಿತೆ; ಬ್ರಹ್ಮನೇಮಿದತ್ತ (೧೫೨೮) ಶ್ರೀಪಾಲಚರಿತ.

೫೮. ಸುದರ್ಶನ ತಪ : ಮಹಾಪುರಾಣ ೭-೭೭.

೫೯. ಸೌಖ್ಯಸುಖ ನೋಂಪಿ : ಪಂಪ, ಆದಿಪುರಾಣ ೩-೬೩ ವ.

೬೦. ಸೌಧರ್ಮಕಲ್ಪ ನೋಂಪಿ : ಮಹಾಪುರಾಣ ೬೯-೪೨.

೬೧. ಹಿಂಸಾವಿರಮಣ ನೋಂಪಿ : ಮಹಾಪುರಾಣ ೬೨-೪೯೫.

ಶಾಸನಗಳಲ್ಲಿ ನೋಂಪಿಯನ್ನು ಕುರಿತ ಪ್ರಸ್ತಾಪಗಳು

ಕನ್ನಡ ಕಾವ್ಯಗಳಲ್ಲದೆ ಶಾಸನಗಳಲ್ಲಿ ಕೂಡ ಉಲ್ಲೇಖಿಸಿರುವುದು ನೋಂಪಿಗಳ ವ್ಯಾಪಕ ಪ್ರಸರಣವನ್ನು ಕನ್ನಡಿಸುತ್ತದೆ. ಕೆಲವು ನಿದರ್ಶನಗಳನ್ನು ಕೆಳಗೆ ಕೊಟ್ಟಿದೆ :

. ಸ್ವಸ್ತಿ ಶ್ರೀ ಮೂಲ ಸಂಘ ದೇಸಿಯಗಣ ಪುಸ್ತಕ ಗಚ್ಛಯಿಂಗಳೇಶ್ವರದ ಬಳಿಯ ಮಾಧವ ಚಂದ್ರ ಭಟ್ಟಾರಕರ ಗುಡ್ಡ ಶ್ರೀಮದ್‌ ರಾಜಧಾನಿ ಪಟ್ಟಣಮ್‌ ಎರಂಬರಗೆಯ ಕುಲಾಗ್ರ್ಯ ಸೇನಬೋವ ಆಚಣ್ಣಯವರ ಮಗ ದೇವಣನು ಸಿದ್ಧಚಕ್ರದ ನೋಂಪಿ ಶ್ರತಪಂಚಮೀ ನೋಂಪಿಗೆ ಮಾಡಿಸಿದ ಪಂಚಪರಮೇಷ್ಠಿಗಳ ಪ್ರತುಮೆ ಮಂಗಳಮ್‌ – ಇದು ಇಂದು ಹೈದರಾಬಾದು ಸಾಲಾರ್‌ ಜುಂಗ್‌ ಮೂಸಿಯಮ್ಮಿನ (ಸಂಖ್ಯೆ : ಎಸ್‌ಜೆಎಂ. ೪೨-೮೫) ದಕ್ಷಿಣ ಭಾರತ ಕೊಠಡಿಯಲ್ಲಿ ಇರುವ ಪಂಚ ಪರಮೇಷ್ಠಿಗಳ ಕಲ್ಲಿನ ಬಿಂಬದ ಮೇಲಿರುವ ಹನ್ನೆರಡನೆಯ ಶತಮಾನದ ಶಾಸನ ಪಾಠ.

(ಹೈದರಾಬಾದು ಆರ್ಕಿಯಾಲಾಜಿಕಲ್‌ ಸೀರೀಸ್‌, ಸಂಪುಟ ೧೨, ಶಾಸನ ಸಂಖ್ಯೆ – ೧೦)

.

೦೧. ಶ್ರೀಯುತ

೦೨. ವ್ಯಯ ಸಂವತ್ಸರದ ಮಾಗ ಸು

೦೩. ದ್ದ ೧೩ನೆಯ ತ್ರಯೋದಸಿಯ

೦೪. ಲು ಕರಿಯ ಕಾಂತಣಸೆಟ್ಟಿ

೦೫. ಯರ ಮಕ್ಕಳು ಕರಿಯ ಬಿ

೦೬. ರುಮಣ ಸೆಟ್ಟೆಯರ ತಂ

೦೭. ಮಕರಿಯ ಗುಂಮಟಸೆಟ್ಟಿ

೦೮. ಯರು ಬಿಡಿತಿಯಿಂದ ಸಂ

೦೯. ಗವ ಕೂಡಿಕೊಂಡು ಬೆಳಗು

೧೦. ಳದಲು ಗುಂಮಟನಾಥನ

೧೧. ಪಾದದ ಮುಂದೆ ರತ್ನತ್ರ

೧೨. ಯದ ನೋಂಪಿಯ ಉದ್ಯಾ

೧೩. ಪನೆಯ ಮಾಡಿ ಸಂಘಪೂಜೆ

೧೪. ಯ ಮಾಡಿ ಕೀರ್ತ್ತಿ ಪುಣ್ಯವನು

೧೫. ಉಪಾರ್ಜಿಸಿಕೊಂಡರು ಶ್ರೀ

(ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೨, ಶ್ರವಣಬೆಳಗೊಳ ಶಾಸನ ಸಂಖ್ಯೆ ೩೩೩ (೨೩೨) ಕ್ರಿ.ಶ. ೧೫ನೆಯ ಶತಮಾನದ ಲಿಪಿ).

ಈ ಶಾಸನದಿಂದ ಗೊತ್ತಾಗುವಂತೆ, ಶ್ರವಣಬೆಳಗೊಳದ ದೊಡ್ಡ ಬೆಟ್ಟದ ಮೇಲೆ ಗೊಮ್ಮಟ ದೇವರ ಸನ್ನಿಧಿಯಲ್ಲಿ ಕೂಡ ನೋಂಪಿಯನ್ನು ಆಚರಿಸುತ್ತಿದ್ದರು ಮತ್ತು ಉದ್ಯಾಪನೆಯನ್ನೂ ಮಾಡುತ್ತಿದ್ದರು.

.

. ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘಲಾಛನಂ
ಜೀಯಾತ್ರೆಕೋಕ್ಯನಾಥಸ್ಯ ಶಾಸನಂ ಜಿನಶಾನಸಂ ||

. ಶ್ರೀ ಮೂಲಸಂಘದ ದೇಶಿಯಗಣದ ಪುಸ್ತಕ ಗಚ್ಛದ
ಶುಭಚಂದ್ರಾಸಿದ್ಧಾಸ್ತದೇವರಗುಡ್ಡಿ ದಂಡನಾಯ್ಕಕ್ಕ

. ಗಂಗರಾಜನತ್ತಿಗೆ ದಂಡನಾಯಕ್ಕ ಬೊಪ್ಪದೇವನ ತಾಯಿ
ಜಕ್ಕಮವ್ವೆ ಮೋಕ್ಷ ತಿಳಕಮಂ ನೋಂತು ನೋಂಬರೆ

. ನಯಣದ ದೇವರ ಮಾಡಿಸಿ ಪ್ರತಿಷ್ಠೆಯ ಮಾಡಿಸಿದರು
ಮಂಗಳ ಮಹಾಶ್ರೀ ಶ್ರೀ

(ಎಪಿಗ್ರಾಫಿಯ ಕರ್ನಾಟಿಕ ಸಂಪುಟ – ೨, ಶ್ರವಣಬೆಳಗೊಳ ಶಾಸನ ಸಂಖ್ಯೆ ೫೦೩ (೩೬೭), ಕ್ರಿ.ಶ. ೧೨ನೆಯ ಶತಮಾನದ ಲಿಪಿ)

ಈ ಶಾಸನದಿಂದ ತಿಳಿದುಬರುವಂತೆ ಶ್ರವಣಬೆಳಗೊಳವು ನೋಂಪಿಗಳನ್ನು ಆಚರಿಸುವ ಕೇಂದ್ರಗಳಲ್ಲೊಂದಾಗಿ ಇದ್ದುದಲ್ಲದೆ ಅಲ್ಲಿನ ಬಸದಿಗಳಿಗೆ ನೋಂಪಿಯ ನೆನಪು ನಿಲ್ಲುವ ಹಾಗೆ ಜಿನಬಿಂಬಾದಿಗಳನ್ನು ಮಾಡಿಸಿಕೊಡುತ್ತಿದ್ದರು.

.

. ಶ್ರೀ ಶಾಲಿವಾಹನ ಶಕಾಬ್ದಃ ೧೭೮೦ ಶ್ರೀಮತ್‌ ಪಶ್ಚಿಮ
ತಿಂತ್ಥಂಕರ ಮೋಕ್ಷಗತಾಬ್ಧಃ ೨೫೨೧ರ ಪ್ರಭವಾದಿಗತಾಬ್ಧಃ

. ೫೧೮ ಶೆಲ್ಲಾನಿನ ಕಾಳಯುಕ್ತಿನಾಮ ಸಂವತ್ಸರ ಆಷಾಢಶುದ್ಧ
ಪೂರ್ಣಿಮಾತಿಥಿಯಿಲ್‌ ಶ್ರೀಮತ್‌ ಬೆಳ್ಗುಳನಗರ ಭಣ್ಡಾ

. ರಜಿನಾಲಯತ್ತಿಲ್‌ ಅನಂನ್ತವೃತೋದ್ಯಾಪನಾ ನಿಮಿತ್ತಂ ಶ್ರೀ ವೃಷಾಭಾದ್ಯನನ್ತ
ತಿತ್ಥಂಕರ ಪರ್ಯ್ಯನ್ತಚತುರ್ದಶ ಜಿನಪ್ರತಿಬಿಂಬಮಾನದು

. ತಞ್ಚನಗಱಂ ಚತ್ತಿರಮ್‌ ಅಪ್ಪಾವು ಶ್ರಾವಕರಾಲ್‌
ಶೆಯ್ವಿತ್ತ ಉಭಯಂ ವರ್ದ್ಧತಾಂ ನಿತ್ಯಮಂಗಲಂ ||

(ಎಪಿಗ್ರಾಫಿಯ ಕರ್ನಾಟಿಕ ಸಂಪುಟ – ೧, ಶ್ರವಣಬೆಳಗೊಳ ಶಾಸನ ಸಂಖ್ಯೆ ೪೯೨ (೩೬೧), ಕ್ರಿ.ಶ. ೧೮೫೮)

ಇದರಿಂದ ತಿಳಿಯುವಂತೆ, ಶ್ರವಣಬೆಳಗೊಳದ ಹೆಸರಾಂತ ಭಂಡಾರ ಬಸದಿಯಲ್ಲಿ ನೋಂಪಿಗಳನ್ನು ಆಚರಿಸಲಾಗುತ್ತಿತ್ತು. ಉದ್ಯಾಪನೆಯನ್ನು ನೆರವೇರಿಸಲಾಗುತ್ತಿತ್ತು.

. ದೇಮಪಾಯಗಳು ಆಣಂತಿಯ ನೋಂಪಿ ನಿಮಿತ್ತವಾಗಿ ಮಾಡಿಸಿದ ಪ್ರತಿಷ್ಟೆ – ಮೈಸೂರು ಆರ್ಕಿಯಾಲಜಿಕಲ್‌ ರಿಪೋರ್ಟ್‌, ೧೯೪೧, ಪು. ೫೧, ಕಾಲ ಕ್ರಿ.ಶ. ೧೨೦೦.

. ದೇವಣನು ಸಿದ್ಧಚಕ್ರದ ನೋಂಪಿ ಶ್ರುತಪಂಚಮಿ ನೋಂಪಿಗೆ ಮಾಡಿಸಿದ ಪಂಚಪರಮೇಷ್ಠಿಗಳ ಪ್ರತಿಮೆ : ಕನ್ನಡ ಇನ್ಸ್‌ಕ್ರಿಪ್ಷನ್ಸ್‌ ಆಫ್‌ ಆಂಧ್ರ ಪ್ರದೇಶ ಹೈದರಾಬದು ೧೯೬೧, ಶಾಸನ ಸಂಖ್ಯೆ ೭೩, ಪುಟ ೧೧, ಕ್ರಿ.ಶ. ೧೨ನೆಯ ಶತಮಾನ.

ಇನ್ನು ಛಂದಸ್ಸು ಮತ್ತು ಇತರ ದೃಷ್ಟಿಗಳಿಂದ ನೋಂಪಿಯ ಕಥೆಗಳ ವೈಶಿಷ್ಟವನ್ನು ಮನಗಾಣುವುದಕ್ಕೆ ಇದರ ಅಧ್ಯಯನವನ್ನು ಬೆಳೆಸುವವರನ್ನು ಕೈ ಬೀಸಿ ಕರೆಯುತ್ತಿದೆ.