ಅಷ್ಟಾಹ್ನಿಕ

ಜೈನ ಪರ್ವ – ವ್ರತ – ನೋಂಪಿಗಳ ಉಗಮವನ್ನು ಅಷ್ಟಾಹ್ನಿಕ ಪರ್ವದಲ್ಲಿ ಗುರುತಿಸಬಹುದು. ಶ್ರಾವಕರು ಈ ಪರ್ವದಲ್ಲಿ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಜಿನ ಪೂಜಾದಿಗಳಲ್ಲಿ ತೊಡಗುತ್ತಾರೆ. ಗುಣಭದ್ಯಾಚಾರ್ಯರ (೯ ನೇಯ ಶತಮಾನ) ಉತ್ತರ ಪುರಾಣದಲ್ಲಿ ೨೨ನೆಯ (ನೇಮಿ) ತೀರ್ಥಂಕರ ಚರಿತೆಯ ‘ಅರ್ಹದ್ದಾಸ -ಜಿನದತ್ತೆ’ ದಂಪತಿಗಳ ಬಗೆಗೆ ಬರೆಯುತ್ತಾ ಹೀಗೆ ಶ್ಲೋಕಿಸಿದ್ದಾರೆ.

ಅಷ್ಟಾಹ್ನಿಕಾಂ ಮಹಾಪೂಜಾಂ ವಿಧಾಯ ನರಪಪ್ರಿಯಾ
ಕುಲಸ್ಯ ತಿಲಕಂ ಪುತ್ರಂ ಲಪ್ಸೀಯಾಹಮಿತಿ ಸ್ವಯಮ್
||

( = ಅಷ್ಟಾಹ್ನಿಕಪರ್ವ ಮಾಹಾಪೂಜೆಯನ್ನು ಮಾಡಿ ವಂಶಕ್ಕೆ ತಿಲಕನಾದ ಮಗನನ್ನು ಪಡೆಯುವೆನೆಂದು ದೊರೆಯಪ್ರಿಯೆ ಬಗೆದಳು)

ಪಂಪ (೯೪೧) ‘ಸಮಸ್ತ ಭವ್ಯ ಜನ ನಿರ್ವರ್ತ್ಯಮಾನಾಷ್ಟಾಹ್ನಿಕಮುಂ’ ಎಂದು ಆದಿ ಪುರಾಣದಲ್ಲಿ (೧೫-೧೩) ಹೇಳಿದ್ದಾನೆ. ರನ್ನ (೯೭೩) ರನ್ನ ಅಜಿತನಾಥ ಪುರಾಣದಲ್ಲಿ (೧೨-೧ ವ) ಈ ಪರ್ವದ ಸೂತ್ರವನ್ನೇ ಕೊಟ್ಟಿದ್ದಾನೆ; ಅಷ್ಟಾಹ್ನಿಕಮೆಂಬುದು ‘ಸಕಲ ಶ್ರಾವಕ ಜನಂಗಳ್‌ ಮಾೞ್ಪ ಪೂಜೆಯಕ್ಕುಂ’.

ಈ ಅಷ್ಟಾಹ್ನಿಕ ಪರ್ವದ ಮರಿಗಳಂತಿವೆ ಭಾನುವಾರದ ನೋಂಪಿ ಮತ್ತು ಶುಕ್ರವಾರದ ನೋಂಪಿ ಕತೆಗಳು. ಅಷ್ಟಾಹ್ನಿಕ ಪರ್ವ ಅಷ್ಟ (ಎಂಟು) ದಿನಗಳ ತನಕ ನಿರಂತರವಾಗಿ ಆಚರಿಸುವ ವ್ರತಗಳಿಂದ ಕೂಡಿದ ಪರ್ವ. ಈ ಎಂಟೂ ದಿನಗಳಲ್ಲಿ ಉಪವಾಸ ಮಾಡುತ್ತಾರೆ. ಹಾಗೆ ಉಪವಾಸ ಮಾಡಿದವರುಗಳೇ ಅಷ್ಟೋಪವಾಸಿಗಳು. ಶ್ರಾವಕರಲ್ಲದೆ ಜೈನಯತಿ – ಭಟಾರರೂ ಈ ಉಪವಾಸ ಮಾಡುತ್ತಿದ್ದರು : ‘ಮೇಘನನ್ದಿ ಭಟ್ಟಾರಕರ ಶಿಷ್ಯರಪ ಕೇಶವ ನನ್ದಿ ಅಷ್ಟೋಪವಾಸಿ ಭಳಾರರ ಬಸಿದಿಗೆ ಪೂಜಾನಿಮಿತ್ತಂ ಧಾರಾ ಪೂರ್ವಕಂ’ ಎಂದು ೧೦೪೮ರ ಶಿಕಾರಿಪುರದ ಶಾಸನದಲ್ಲಿ (ಎಪಿಗ್ರಾಫಿಯ ಕರ್ನಾಟಿಕ vii) ಹೇಳಿದೆ; ‘ಆದಿವಾರ ದಂದು ದೇಸಿಗಣದ ಅಷ್ಟೋಪವಾಸಿ ಭಳರರ್ಗೆ ತಮ್ಮ ಮಾಡಿಸಿದ’ ಎಂಬುದಾಗಿ ೧೦೫೪ರ ಒಂದು ಶಾಸನದಲ್ಲಿ (ಸೌತ್‌ ಇಂಡಿಯನ್‌ ಇನ್ಸ್‌ಕ್ರಿಪ್ಷನ್ಸ್‌ ix -i) ಉಲ್ಲೇಖಿಸಿದೆ. ಇದೇ ಶಾಸನದಲ್ಲಿ ಅಷ್ಟುವಾಸ (ಸಂ- ಅಷ್ಟೋಪವಾಸ), ಅಷ್ಟುವಾಸಿ (ಸಂ. ಅಷ್ಟೋಪವಾಸಿನ್‌) ಎಂಬ ರೂಪಗಳೂ ಇವೆ – ‘ಬೇಹೂರ ವಿಪ್ರಮುಖ್ಯ ರ್ಕ್ಕೋಟ್ಟರ್‌ ಪೂಜೆಗಷ್ಟುಪಾಸದ ಮುನಿಗೆ ಮಹಾ ಗುಣಗೆ ಚಂದ್ರತಾರಂಬರೆಗಂ’ ನೋಂಪಿಗಳಲ್ಲಿ ಕೆಲವು ವಿಶೇಷ. ನಯಸೇನ ತನ್ನ ಧರ್ಮಾಮೃತದಲ್ಲಿ ಈ ಹೆಚ್ಚಗಟ್ಟಲೆ ನೋಂಪಿಗಳನ್ನು ‘ಒಳ್ನೋಂಪಿ’ ಗಳೆಂದು ಕರೆದಿದ್ದಾನೆ. ಪಲವುಮೊಳ್ನೋಂಪಿಗಳಂ ….. ಅಲಸದೆ ಮನದೊಳ್‌ ಚಿಂತಿಸಿ’ (ಧರ್ಮಾ ಮೃತ, ೩-೨೧೬, ೨೧೭) ಎಂದು ಹೇಳಿದ್ದಾನೆ.

ನೋಂಪಿ ಕತೆಗಳು ಅಥವಾ ವ್ರತಕತೆಗಳು ಜೈನ ಸಾಹಿತ್ಯದ ವಿಶಿಷ್ಟ ಪ್ರಕಾರವಾಗಿ ಬೆಳೆದು ಬಂದಿದೆ. ಈ ಕಥಾ ಸಾಹಿತ್ಯ ಧಾರ್ಮಿಕ ಪರಿಸರದಿಂದ ತುಳುಕುತ್ತಿದೆ. ಇದರ ಉಗಮ ವಿಕಾಸಗಳಲ್ಲಿ ಭಟ್ಟಾರಕರ ಮತ್ತು ಜೈನ ಬ್ರಾಹ್ಮಣರ ಪಾಲು ದೊಡ್ಡದು. ಜೈನರಲ್ಲಿ

—-

ಮಂಗಳವಾರದ ನೋಂಪಿ – ಇವು ಪದ್ಮಾವತಿ ಮತ್ತು ಜ್ವಾಲಾಮಾಲಿನಿ ಯಕ್ಷಿಯರ ಸಂಬಂಧವಾದ ನೋಂಪಿಗಳು; ಗೌರೀ ನೋಂಪಿಯಂತೂ ನೇರವಾಗಿ ಗೌರೀ ಯಕ್ಷಿಗೇ ಸಂಬಂಧಿಸಿದ್ದು. ಇದೇ ರೀತಿ ಬೇರೆ ಬೇರೆ ಯಕ್ಷಿಯರ ಸಂಬಂಧ ನೋಂಪಿ ಕಥೆಗಳೂ ಇವೆ. ತೀರ್ಥಂಕರರಿಗೆ ಯಾರಿಂದಲಾದರೂ ತೊಂದರೆ ಬಂದರೆ, ಉಪಸರ್ಗ ಉಂಟಾದರೆ ಕೂಡಲೆ ಅದರ ಸೂಚನೆ ಜಿನಶಾಸನ ದೇವತೆಗಳಾದ ಯಕ್ಷರಿಗೆ ದೊರೆಯುತ್ತದೆ ಅವರ ‘ಆಸನ ಕಂಪ’ ಆಗುವುದರ ಮೂಲಕ. ತೀರ್ಥಂಕರರ ಗರ್ಭಾವತರಣ – ಜನನಗಳ ಕಾಲದಲ್ಲಿ ದೇವೆಂದ್ರನಿಗೆ ಆಸನ ಕಂಪನವಾಗುವುದರಿಂದ ವಾರ್ತೆ ನಿರೂಪವಾಗುವುದರ ಭಾವನೆಯ ಇನ್ನೊಂದು ಮುಖವಿದು. ಆ ಮೂಲ ಕಲ್ಪನೆಯ ವಿಸ್ತೃತ ವಿಚಾರವಿದೆಯೆಂದು ತೋರುತ್ತದೆ. ಅದರಂತೆ ಪರಮ ಜಿನಭಕ್ತರಿಗೆ ತೊಂದರೆಯಾದಾಗಲೂ ಯಕ್ಷರಿಗೆ ಆಸನ ಕಂಪನವಾಗುತ್ತದೆಂಬ ನಿರೂಪಣೆಯೂ ಇದೆ. ಚಂದನ ಷಷ್ಟಿಯೆಂಬ ನೋಂಪಿಯ ಕಥೆಯೊಂದರಲ್ಲಿ ಬರುವ ಭಾಗವಿದು :

“ಅಂತುವಲ್ಲಭನ (ಜಿನದತ್ತನ) ಮೈಯೊಳು ತೊಟ್ಟನೋರ್ಮೊದಲೊಳೆ ಪುಟ್ಟಿದೌದುಂಬರ ಕುಷ್ಟಿಯುಂ ಜಿನದತ್ತೆ ಕಂಡು ಭಯಚಕಿತಚಿತ್ತೆಯಾಗಿ || ಕಾರಣಮನರಿಯದಿನಿತೇಕಾದುದೆಂದು ಕಿರಿದುಬ್ಬೆಗಂ ಚಿಂತಾಕ್ರಾಂತೆಯಾಗಿ | ಜೈನಸ್ಯ ವಿಸ್ಮಯೋನಾಸ್ತಿಯೆಂಬ ದಿವ್ಯ ವಾಕ್ಯವನವಧರಿಸಿ | ತನ್ನಂ ತಾನೆ ಸಂತೈಸಿಕೊಂಡು ಶುಚಿರ್ಭೂತೆಯಾಗಿ | ಮನೋಹರಮಪ್ಪ ಜಿನಗೇಹಾರಮಂ ಪೊಕ್ಕು ಜಿನಚಂದ್ರಂಗಭಿಷೇಕ ಪೂಜೆಯಂ ಮಾಡಿಸಿ ಗಂಧೋದಕಮಂ ತಳಿದುಕೊಂಡೆನ್ನ ಭರ್ತಾರನ ಶರೀರಂ | ಮುನ್ನಿನಂತಪ್ಪೊಡೇಳ್ವೆ ನಲ್ಲದಿದುವೆ ಸನ್ಯಸನ ಮೆಂದು ಪ್ರತಿಜ್ಞೆಗೆಯ್ದು ಕೈಯೆತ್ತಿಕೊಂಡಿರ್ದಳಿಪ್ಪಂನೆಗಂ

ಆಸನ ಕಂಪಂ ಜ್ವಾಲಿನಿ
ಗಾಸಮಯದೊಳಾಗಲವಧಿಯಿಂದರಿದು ಬಳಿ
ಕ್ಕಾಸತಿಯ ಮನೆಗೆ ಬಂದಳು
ಭಾಸುರ ಸಮ್ಯಕ್ತ್ವದೊಳ್ಪು ತಾಂ ಕೇವಳಮೇ ||

ಅನ್ತು ಬಂದು ಜ್ವಾಲಾಮಾಲಿನೀ ದೇವಿಯಿಂತೆದಳು

ಇನಿತೇಕೆ ಪೊಣ್ಕೆ ಕೇಳೌ
ಜಿನದತ್ತೆ ಮದೀಯವಚನಂಗಳನವರತಂ
ನಿನಿತೊಂದು ಪೀಡೆಯಾದುದ
ನನಿತುಪಮಮನೋರಂತೆಯೆ ಪೇಳ್ದಪೆ ಚಿತ್ತೈಸು ||

ಹೀಗೆ ಯಕ್ಷಿಯರ ಉಲ್ಲೇಖಗಳು ನೋಂಪಿ ಕತೆಗಳ ಒಡಲಲ್ಲಿ ಸೇರಿಕೊಂಡು ಇವಕ್ಕೆ ಜನಾನುರಾಗದ ಜತೆಗೆ ಪೂಜ್ಯಸ್ಥಾನವನ್ನೂ ದೊರಕಿಸಿಕೊಟ್ಟಿವೆ.

ನೋಂಪಿ ಕಥೆಗಳು (ಎರಡು ಜೈನ ಶಾಖೆಗಳಲ್ಲಿ) ದಿಗಂಬರ ಪರಂಪರೆಯಲ್ಲಿ ಅಧಿಕವಾಗಿವೆ. ಶ್ವೇತಾಂಬರ ಆಮ್ನಾಯದಲ್ಲಿ ಅಷ್ಟಾಗಿ ಇವು ಕಂಡುಬರುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ಶ್ವೇತಾಂಬರ ಪರಂಪರೆಯ ಮುನಿಗಳು ಉಪವಾಸ ಶ್ರೇಣಿಗೆ ಮಹತ್ವ ಕೊಡುತ್ತಾರೆಯೇ ಹೊರತು ಉಪಾಸನಾ ವಿಧಿಗಳಿಗೆ ಅಲ್ಲ. ದಿಗಂಬರ ಪರಂಪರೆಯಲ್ಲಿ ಉಪವಾಸಕ್ಕೂ ಅಧಿಕ ಮನ್ನಣೆಯಿದೆ. ಶ್ರವಣಬೆಳಗೊಳದ ಶಾಸನಗಳನ್ನಾಗಲಿ, ನೋಂಪಿ ಕತೆಗಳಲ್ಲಿ ಬರುವ ಉಪವಾಸದ ಪ್ರಸ್ತಾಪವನ್ನಾಗಲಿ ಗಮನಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಇದರ ಜೊತೆಗೆ ದಿಗಂಬರ ಸಂಪ್ರದಾಯದಲ್ಲಿ ಮತ ಪ್ರಕ್ರಿಯೆ, ಪೂಜೆ, ಆರಾಧನೆಗಳಿಗೂ ಮೇಲ್ಮೆಯಿದೆ. ಇಲ್ಲಿ ತಾಂತ್ರಿಕ ಪಂಥಗಳ ಪ್ರಭಾವವನ್ನೂ ಊಹಿಸಬಹುದು. ನೋಂಪಿ ಕಥೆಗಳು ಉಪವಾಸ ಮತ್ತು ಮತಾಚರಣೆಗೆ ಸಮಾನ ಅನ್ಯೋನ್ಯತೆಯ ಎರಕ. ಮತೀಯ ಕ್ರಿಯಾವಿಧಿಗಳ ಆರಾಧನಾ ಪದ್ಧತಿಗಳ ಅತಿ ನಿಷ್ಠೆಯನ್ನು ನೋಂಪಿ ಆಚರಣೆ ಹಾಗೂ ಅದರ ಉದ್ಯಾಪನೆಯಲ್ಲಿ ಸ್ಪಷ್ಟವಾಗಿ ಕಾಣುತ್ತೇವೆ. ನೋಂಪಿಯ ಬಾಹ್ಯ ಆಚರಣೆಗಳನ್ನು ವಿಡಂಬಿಸಿರುವ ಒಂದು ಶರಣ ವಚನ ಹೀಗೆದೆ :

ನಿಚ್ಚ ಸಾವಿರ ನೋಂಪಿಯ ನೋಂತು
ಒಂದು ದಿನ ಹಾದರವನಾಡಿದಡೆ
ಆ ನೋಂಪಿಯು ತನಗೆ ಫಲಿಸುವುದೆ ಅಯ್ಯಾ?

ಹಲವು ಕಾಲ ಗುರುಲಿಂಗ ಜಂಗಮವನರ್ಚಿಸಿ ಆರಾಧಿಸುತ
ಒಮ್ಮೆಯಾದರೂ ದೂಷಣೆಯ ಮಾಡಿದಡೆ
ಆ ಪೂಜಾಫಲ ತಮಗೆ ಸಿದ್ಧಿಸುವುದೆ? ಸಿದ್ಧಿಸದಾಗಿ

ಅನೇಕ ಆಯಾಸದಲ್ಲಿ ಗಳಿಸಿದ ಧನವ
ನಿಮಿಷದಲ್ಲಿ ಅರಸು ದಂಡವ ಕೊಂಡಂತಾಯಿತ್ತು ಇವರ ಭಕ್ತಿ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ನಿಮ್ಮ ಒಲವಿಲ್ಲದ ಕಾರಣ.

– ಸ್ವತಂತ್ರ ಸಿದ್ಧಲಿಂಗೇಶ್ವರ (೧೫೫೦)

ನೋಂಪಿ ಸಾಹಿತ್ಯದ ವ್ಯಾಪ್ತಿ ಕರ್ನಾಟಕದ ದಿಗಂಬರ ಜೈನರಲ್ಲಿ ವ್ಯಕ್ತವಾಗಿರುವುದಲ್ಲದೆ, ಅದರ ನೆಲೆಗಟ್ಟು ಕನ್ನಡ ಭಾಷೆಯಲ್ಲೇ ಬೇರು ಬಿಟ್ಟು ನಿಂತಿದೆ. ನೋಂಪಿ ಕಥೆಗಳ ಹರವು, ವಿವಿಧತೆ, ಸಲಿಲತೆ ಕೇವಲ ಕನ್ನಡದಲ್ಲಿ ಕಂಡುಬರುತ್ತದೆ. ನೋಂಪಿ ಕಥೆಗಳು ಕನ್ನಡಕ್ಕೇ ವಿಶಿಷ್ಟವಾದವು. ಅಖಿಲ ಭಾರತ ಮಟ್ಟದಲ್ಲಿ ಜೈನ ಧರ್ಮದ ಇತಿಹಾಸಕ್ಕೆ ಕನ್ನಡ ನಾಡಿನ ಕೊಡುಗೆಯೆಂದು ಇವನ್ನು ಪರಿಗಣಿಸಬಹುದು.

ಜೈನೇತರರಲ್ಲೂ ವ್ರತಗಳೂ, ವ್ರತಥೆಗಳೂ ಇವೆ. ವೈದಿಕರಲ್ಲಿ ಅನಂತನ ವ್ರತ ಪ್ರಸಿದ್ಧ. ಇದನ್ನು ಜೈನರು ಆಚರಿಸುವ ನೋಂಪಿಯೊಡನೆ ಹೋಲಿಸಬಹುದು. ಇಲ್ಲಿ ಯಾರ ಪ್ರಭಾವ ಯಾರ ಮೇಲೆ ಬಿದ್ದಿದೆ ಎಂಬುದು ಸಂಶೋಧನೆಗೆ ಅವಕಾಶ ಮಾಡಿ ಕೊಟ್ಟಿದೆ. ಕನ್ನಡ ನಾಡಿನಲ್ಲಿ ನೋಂಪಿ ಎಂಬ ದೇಶ್ಯ ಶಬ್ಧದ ಪ್ರಚಾರಕ್ಕೆ ಜೈನರು ವಿಶೇಷವಾಗಿ ಕಾರಣರು. ವೀರಶೈವ ಧರ್ಮದ ಮೇಲೆ ಜೈನರ ಪ್ರಭಾವ ಈ ಅಂಶದಲ್ಲೂ ನಿಚ್ಚಳವಾಗಿ ಕಂಡುಬರುತ್ತದೆ. ವೀರಶೈವ ಸಾಹಿತ್ಯದಲ್ಲಿ ಕ್ವಚಿತ್ತವಾಗಿ ನೋಂಪಿಯ ಪ್ರಸ್ತಾಪವಿದೆ. ಉದಾಹರಣೆಗೆ ಭೀಮ ಕವಿಯ ಬಸವ ಪುರಾಣದಲ್ಲಿ ಬರುವ ಎರಡು ಪದ್ಯಗಳನ್ನು ಇಲ್ಲಿ ಗಮನಿಸಬಹುದು :

ಕಾಂತೆ ತಾಂ ಸುತರಿಲ್ಲದಿರ್ದೊಡ
ನಂತ ಚಿಂತಾಕ್ರಾಂತೆಯಾಗು
ತ್ತಂತು ನೋಂಪಿಗಳಂ ಪಲಮನುರೆ ನೋಂತು ಬೇಸತ್ತು
ಸಂತತಿಯದೆಂತಪ್ಪುದೆಮಗಿ
ನ್ನೆಂತೆನುತ ಸತಿಪತಿಗಳುಂ ಮತಿ
ಮಂತರಿಂದಂ ಪೊತ್ತಗೆಗಳಿಂತೆಗೆಸಿ ನೋಡಿಸುತ ||

ಸಂದ ನೋಂಪಿಗಳೊಳು ವಿಚಾರಿಸಿ
ನಂದಿ ನಾಥನ ನೋಂಪಿಯದು ಪಲ
ವಂದದಿಂ ಕಾಮ್ಯಾರ್ಥ ಸಿದ್ಧಿಗೆ ನಿತ್ಯ ಕಾರಣವು
ಎಂದು ಸುವ್ರತ ನಿಯತವಂ ಬುಧ
ರಿಂದುಮುಖಿಗರಿಪಿದೊಡೆ ಪರಮಾ
ನಂದದಿಂಮಾರಾಣಿ ಶಿವ ಮಂದಿರಕೆ ನಡೆತಂದು ||

ಇದರಂತೆ ಸಿಂಗಿರಾಜ ಪುರಾಣದಲ್ಲಿ (೫, ೧೪-೩೭) ವೃಷಭ ನೋಂಪಿ, ಪ್ರೌಢರಾಯನ ಕಾವ್ಯದಲ್ಲಿ (೨೧-೨೮) ಬಸವನ ನೋಂಪಿ, ಮತ್ತು (೧೦- ೫೫) ಗೌರೀ ನೋಂಪಿ, ಚೆನ್ನಬಸವ ಪುರಾಣದಲ್ಲಿ (೫, ೫೫-೪೫) ಬಸವನ ನೋಂಪಿ, ಪ್ರಭು ದೇವರ ಪುರಾಣದಲ್ಲಿ (೪.೧೮) ಪಾರ್ವತಿಯ ನೋಂಪಿ – ಇವನ್ನು ಹೆಸರಿಸಲಾಗಿದೆ. ಈ ಕೃತಿಗಳ ಮೂಲದಲ್ಲಿ ‘ನೋಂಪಿ’ ಉಲ್ಲೇಖವಾಗಿರದೆ, ಕನ್ನಡದಲ್ಲಷ್ಟೆ ಇದರ ಸೇರ್ಪಡೆಗೆ ಕಾರಣ ಜೈನ ಪ್ರಬಾವವೆನ್ನಬಹುದು.

ನೋಂಪಿ ಕತೆಗಳು ಜಿಜ್ಞಾಸುಗಳಿಗೆ ಸುಗ್ರಾಸ, ಪಿ. ಎಚ್‌. ಡಿ. ನಿಬಂಧಕ್ಕೆ ಒಳ್ಳೆಯ ವಿಷಯ. ರೂಢಿ ಶಬ್ದದಲ್ಲೇ ಹೇಳುವುದಾರೆ ‘ಅಸಂಖ್ಯಾತ’ ನೋಂಪಿ ಕಥೆಗಳಿವೆ. ಸುಮಾರು ೩೬೫ ನೋಂಪಿ ಕಥೆಗಳಿವೆಯೆನ್ನಲಾಗಿದೆ. ಇವುಗಳಲ್ಲಿ ಬಹುಮಟ್ಟಿನವಕ್ಕೆ ಕರ್ತೃವಿನ ವಿಚಾರ ತಿಳಿದುಬರುವುದಿಲ್ಲ. ಸಾಮಾನ್ಯವಾಗಿ ಕಥಾಂತ್ಯದಲ್ಲಿ ಲೇಖಕರ ಹೆಸರು, ಊರು ಮೊದಲಾದುವನ್ನು ತಿಳಿಸುವುದು ಬಳಕೆಯಲ್ಲಿದೆ. ಆ ಬಗೆಯ ಉಲ್ಲೇಖವೂ ಅನೇಕ ನೋಂಪಿ ಕಥೆಗಳಲ್ಲಿಲ್ಲ. ಏನಿದ್ದರೂ ಪದ್ಯರೂಪದ ಕಥೆಗಳ ಲೇಖಕರಲ್ಲಿ ಶೇಕಡಾ ತೊಂಬತ್ತೇಳು ತಿಳಿಯದು.

ಸಮಾಜದ ವಿವಿಧ ವರ್ಗವನ್ನುದ್ದೇಶಿಸಿ ಕೆಲವು ಕಥೆಗಳನ್ನು ರಚಿಸಿದೆ. ತದನುಗುಣವಾಗಿ ಬೇರೆ ಬೇರೆ ಹಂತಗಳವರು ಶ್ರೋತೃಗಳಾಗಿರುವುದು ಕಂಡುಬರಿತ್ತಿದೆ. ಕೆಲವು ಭಟ್ಟಾರಕರೂ (ಜ್ಞಾನ ಭೂಷಣ), ಆರ್ಯಿಕೆಯರೂ, ಆರ್ಚಕರೂ ನೋಂಪಿ ಕಥೆಗಳನ್ನ ‘ಸೃಷ್ಟಿಸಿರುವ’ ಸಾಧ್ಯತೆ ಇದೆ. ಭಟ್ಟಾರಕರೂ, ಕಂತಿ (ಅರ್ಯಿಕೆ – ಅಜ್ಜಿ (ಕೆ)) ಯರೂ ಕೆಲವನ್ನು ಹೇಳಿರುವ ಸಂಭಾವ್ಯತೆಯನ್ನು ಪುಷ್ಟೀಕರಿಸುವ ಅಂಶಗಳಲ್ಲಿ ಒಂದು ಕಂದ ಪದ್ಯ ಇಂತಿದೆ :

ಮಂಗಳ ಕಾರಣವೆನಿಸುವ
ತಂಗಳು ತವನಿಧಿಯ ನೋಂಪಿಯ ಕನಕಶ್ರೀ
ಹೆಂಗಳ್ಗಂತಿಯು ಪೇಳ್ದಾ
ಪಾಂಗಿಂದಾನುಸುರ್ವೆನೆಸೆವ ಪೊಸ ಕನ್ನಡದಿಂ ||

ತಂಗಳು ತವನಿಧಿಯ ನೋಂಪಿ ಕಥೆಗಳಲ್ಲಿ ೫೦ ಜನ ಅಜ್ಜಿಕೆಯರ ತಂಡದ ಒಡತಿ ಕನಕಶ್ರೀ ಕಂತಿಯವರ ಉಲ್ಲೇಖವಿದ್ದು ಅವರೇ ಈ ನೋಂಪಿ ಕಥೆಯನ್ನೂ ಇದರ ಮಹತ್ವವನ್ನೂ ತಿಳಿಸಿದರೆಂಬ ವಿವವರಣೆಯಿದೆ. ಅನೇಕ ನೋಂಪಿಯ ಕಥೆಗಳಲ್ಲೂ ಈ ಪರಿಯ ವಿವರವಿರುತ್ತದೆ. ಭಟ್ಟಾರಕರರೊಬ್ಬರು ಇಲ್ಲವೆ ಕಂತಿಯೊಬ್ಬರು ಶ್ರಾವಕನ(ಳ) ಕೋರಿಕೆಯ ಮೇರೆಗೆ ನೋಂಪಿಯೊಂದನ್ನು ಅದರ ವಿಧಿವಿಧಾನಗಳೊಡನೆ ವಕ್ಕಾಣಿಸುತ್ತಾರೆ. ಇಂತಹ ಹಲವಾರು ಹೇಳಿಕೆಗಳ ಆಧಾರದಿಂದ ಮೇಲಿನ ಬಲ ಬರುತ್ತದೆ.

ಅಂತರಿಕ ಪ್ರಮಾಣಗಳನ್ನು ಆಂಗೀಕರಿಸುವುದಾರೆ ಬಸಿರಬಳಗದ, ನಾಗರ ಪಂಚಮಿ, ಸೌಖ್ಯಸುಖದ ಮತ್ತು ಉಪಸರ್ಗ ನಿವಾರಣ ನೋಂಪಿ ಕಥೆಗಳನ್ನು ಬರೆದವನು ಒಬ್ಬನೆಂದು ತಿಳಿಯಲವಕಾಶವಿದೆ; ಇವೆಲ್ಲ ಕಥೆಗಳೂ ನಡುವೆ ಕೆಲವು ಕಂದ ಪದ್ಯಗಳನ್ನೂ ಒಳಗೊಂಡಿವೆ; ಶೈಲಿಯನ್ನು ನೋಡಿದರೂ ಇವುಗಳ ಕರ್ತೃ ಒಬ್ಬ ಸಮರ್ಥ ಲೇಖಕನೆಂದೂ ಗೊತ್ತಾಗುತ್ತದೆ.

ಮತ್ತೆ ಕೆಲವು ನೋಂಪಿ ಕಥೆಗಳು ಆರಂಭದಲ್ಲಾಗಲಿ ನಡುವೆಯಾಗಲಿ ಅಂತ್ಯದಲ್ಲಾಗಲಿ ಯಾವ ಪದ್ಯವನ್ನೂ ಒಳಗೊಂಡಿಲ್ಲ. ಅವುಗಳ ಒಂದು ಮನೋಧರ್ಮದ ಲೇಖಕನ(ರ) ರಚನೆಯಿರಬಹುದು. ಪ್ರಾರಂಭದಲ್ಲಿ (ಕಂದ) ಪದ್ಯಗಳನ್ನೊಳಗೊಂಡ ಕಥೆಗಳಲ್ಲಿ ಕೆಲವು ವರ್ಧಮಾನ (ವೀರ) ಜಿನರ ಪ್ರಾರ್ಥನೆಯಿಂದ ಕೂಡಿವೆ. ಉದಾ : ಅಹಿಗಹಿಲ ನೋಂಪಿ, ಸೌಭಾಗ್ಯನೋಂಪಿ, ನವನಿಧಿ ಭಾಂಡಾರದ ನೋಂಪಿ, ಕಲ್ಪಕುಜದ ನೋಂಪಿ, ಶ್ರುತಸ್ಕಂದದ ನೋಂಪಿ. ಈ ಕಥೆಗಳಲ್ಲಿ ಹೊಂದಾಣಿಕೆಯಿದ್ದು ಅವು ಏಕ ಕರ್ತೃಕವೆಂಬ ಭಾವನೆಗೆ ಇಂಬಾಗಿವೆ. ಇದೇ ರೀತಿಯಾಗಿ ಭವಸಾಗರೋತ್ತರಣದ ನೋಂಪಿ ಹಾಗೂ ಕರ್ಮಹರಾಷ್ಟಮಿ ನೋಂಪಿ ಕಥೆಗಳಲ್ಲಿ ಸಾದೃಶ್ಯ ಗಮನಾರ್ಹವಾಗಿವೆ.

‘ನೋಂಪಿ ಕಥೆಗಳನ್ನು ಸೃಷ್ಟಿಸಿರುವ ಸಾಧ್ಯತೆಯಿದೆ’ ಎಂದು ಮೇಲೆ ಹೇಳಿದ್ದಕ್ಕೆ ಕಾರಣವೆಂದರೆ ಇವುಗಳ ಮೂಲ ಅನೇಕ ವೇಳೆ ಅಜ್ಞಾತ. ಇವು ಅನುವಾದಗಳೋ ಸ್ವತ್ರಂತ್ರ ರಚನೆಗಳೋ ಸರಿಯಾಗಿ ತಿಳಿಯುವುದಿಲ್ಲ. ನೋಂಪಿ ಕಥೆಗಾರ(ರು) ಒಬ್ಬನಲ್ಲ, ಹಲವರು: ಆ ಹಲವರು ಒಂದು ಕಡೆಗೆ ಪ್ರದೇಶಕ್ಕೆ ಸೇರಿದವರಲ್ಲ, ಹಲವು ಭಾಗಗಳಿಗೆ ಸೇರಿದವರು. ನೋಂಪಿ ಕಥೆಗಳ ವಿಶ್ಲೇಷಣೆಯಲ್ಲಿ ಸ್ಮರಣೆಗೆ ಬರುವ ವಡ್ಡಾರಾಧನೆ, ಚಾವುಂಡರಾಯ ಪುರಾಣ -ಇವುಗಳಿಗೆ ಮೂಲವಾಗಿ ಪ್ರಾಕೃತ – ಸಂಸ್ಕೃತ ಗ್ರಂಥಗಳಿವೆ. ನೋಂಪಿ ಕಥೆಗಳಿಗೆ ಅಂಥ ಮೂಲ ಆಕರ ಅಸ್ಪಷ್ಟ. ಕೇವಲ ಬಾಯಿಂದ ಬಾಯಿಗೆ ಹರಿದು ಬರುತ್ತಿದ್ದ ಜನರೂಢಿಯ ಕಥೆಗಳು ಇಲ್ಲಿ ಹಲವಾರಿವೆ. ಸ್ಥೂಲವಾಗಿ, ಇವನ್ನು ‘ಜೈನ ಜನಪದ ಕಥೆಗಳು’ ಎಂದು ತಿಳಿಯಬಹುದು. ಉಳಿದ ಜೈನ ಕಥಾಕಾವ್ಯ ಸಾಹಿತ್ಯದಂತೆ ಇಲ್ಲಿಯೂ ಕೆಲವು ಕಥೆಗಳಲ್ಲಿ ಅವುಗಳನ್ನು ಶ್ರೇಣಿಕ (ಬಿಂಬಸಾರ) ಮಹಾರಾಜನಿಗೆ ಗೌತಮ್ ಗಣಧರನು ಮೊದಲು ವಿಪುಲಾಚಲದಲ್ಲಿ ಹೇಳಿದರೆಂಬ ಹೇಳಿಕೆಯಿರುತ್ತದೆ. ಇಂಥ ಹೇಳಿಕೆ ಶ್ರೋತೃವೃಂದದ ವೃತ್ತಿ ಭಕ್ತಿಗೌರವ ಗಳಿಸಲು ಬಂದಿರಬಹುದು. ನದಿಗಳು ಬೆಟ್ಟದಿಂದ ಹುಟ್ಟಿ ಹರಿದು ಬರುವಂತೆ, ಜೈನ ಕಥೆಗಳು ವಿಪುಲಗಿರಿಯಿಂದ ಶ್ರೇಣಿಕ ಪ್ರಣಾಲಿಕೆಯಲ್ಲಿ ವಿಪುಲವಾಗಿ ಇಳಿದು ಬರುತ್ತದೆ. ‘ಜನಮೇಜಯ ರಾಜನಿದ್ದಂತೆ ಜೈನ ಪುರಾಣಗಳ ಶ್ರೇಣಿಕ ಮಹಾರಾಜ. ಶ್ರೇಣಿಕ, ಚೇಳಿನಿ ಮಹಾದೇವಿಯರಿಗೆ ಹೇಳಿದರೆಂಬ ನೋಂಪಿ ಕಥೆಗಳು ಹಲವಾರಿವೆ; ಜೀವದಯಾಷ್ಟಮಿ ನೋಂಪಿ, ಕಮಹರಾಷ್ಟಮಿ ನೋಂಪಿ, ಚಂದನಷಷ್ಟೀ ನೋಂಪಿ, ಶ್ರುತಸ್ಕಂಧದ ನೋಂಪಿ (ಇದರಲ್ಲಿ ಶ್ರೇಣಿಕ ಮತ್ತು ಚೇಳಿನಿಯರನ್ನು ಸುಂದರವಾಗಿ ವರ್ಣಿಸಲಾಗಿದೆ) ಇತ್ಯಾದಿ. ವಡ್ಡಾರಾಧನೆಯಲ್ಲಿ ಚೇಳಿನಿಯ ಪ್ರಸ್ತಾಪವೇ ಇಲ್ಲ; ಇಲ್ಲಿ ಆಕೆ ಶ್ರೇಣಿಕನಷ್ಟೇ ಪ್ರಮುಖಳು. ದೀಪಾವಳಿ ನೋಂಪಿ ಕಥೆಯಲ್ಲಿ ಶ್ರೇಣಿಕನ ಮುಂದುವರೆದ ವಂಶ ಕುಡಿಯೊಬ್ಬನು ಶ್ರೋತೃವಾಗಿದ್ದಾನೆ. ವಡ್ಡರಾಧಾನೆಯಲ್ಲಿ ಇಲ್ಲದೆ ಇಲ್ಲಿ ಹೇರಳವಾಗಿ ಕಾಣುವ ಮತ್ತೊಂದು ಪ್ರಾತ್ರವೆಂದರೆ ಗೌತಮಗಣಧರರದು.

ಭಾಷಾ ವಿಜ್ಞಾನದ ದೃಷ್ಟಿಯಿಂದ ನೋಂಪಿ ಕಥೆಗಳು ಅಭ್ಯಸನೀಯ. ಅವುಗಳ ಭಾಷೆ ಹಳಗನ್ನಡವಂತೂ ಅಲ್ಲ. ಭಾಷಿಕ ಆಧಾರದಿಂದ ಹೇಳುವುದಾದರೆ, ನೋಂಪಿ ಕಥೆಗಳಲ್ಲಿ ಹೆಚ್ಚಿನವು ನಡುಗನ್ನಡದ ಲಕ್ಷಣಗಳನ್ನೊಳಗೊಂಡಿವೆ. ಇದು ಒಂದೇ ರೀತಿಯ ನಡುಗನ್ನಡವಲ್ಲ. ಈ ಕಥೆಗಳಿಗೆ ಸುಮಾರು ಐದು ಶತಮಾನಗಳ ಕಾಲದ ಹರವು ಇರುವುದರಿಂದ ನಡುಗನ್ನಡದ ಅವಸ್ಥಾಂತರದಲ್ಲಿ ಘಟಿಸಿರುವ ಹಲವಾರು ಭಾಷಿಕ ವ್ಯತ್ಯಾಸಗಳನ್ನು ಚಾರಿತ್ರಿಕವಾಗಿ ಈ ಕಥೆಗಳಲ್ಲಿ ಗುರುತಿಸಬಹುದು; ಇವುಗಳನ್ನು ವಿಶೇಷವಾಗಿ ಅಭ್ಯಾಸ ಮಾಡಿ ಒಂದು ವರ್ಣನಾತ್ಮಕ ವ್ಯಾಕರಣ ಸಿದ್ಧಪಡಿಸಿದರೆ ಅನೇಕ ಸಂಗತಿಗಳು ಸ್ಪಷ್ಟವಾಗುತ್ತದೆ. ಜೈನ ನುಡಿಕಟ್ಟುಗಳು ಸೂರೆ ಹೋಗಿರುವ ಈ ಕಥೆಗಳ ಭಾಷೆಯನ್ನು ಪರಿಶೀಲಿಸಿದಾಗ, ಪ್ರಾದೇಶಿಕ ಉಪಭಾಷೆಯ ಲಕ್ಷಣಗಳೂ ಇರುವಂತೆ ತೋರುತ್ತದೆ. ಗ್ರಂಥಸಂಪಾದನೆಯನ್ನು ಒಟ್ಟಾರೆ ಸಮೀಕ್ಷಿಸಿದಾಗ ಅವೆಲ್ಲಾ ಜನಪ್ರಿಯ ‘ಬಜಾರ್‌ ಎಡಿಷನ್‌’ ಆಗಿವೆ. ಪಾಠ ಸಂಪ್ರದಾಯಗಳಿರುವುದರಿಂದ ಶಾಸ್ತ್ರಶುದ್ಧ ಗ್ರಂಥ ಪರಿಷ್ಕಾರಕ್ಕೆ ಅವು ಅವಕಾಶ ಕೊಟ್ಟಿವೆ. ಇದಕ್ಕೊಂದು ಉದಾಹರಣೆ ಕೊಡಬಹುದು :

ಜೀವದಯಾಷ್ಟಮಿ ನೋಂಪಿಯ ಒಂದು ಪ್ರತಿಯಲ್ಲಿರುವ ಪದ್ಮಗಳಿಗೂ ಇನ್ನೊಂದು ಪ್ರತಿಯಲ್ಲಿರುವ ಪದ್ಯಗಳಿಗೂ ಇರುವ ಅಂತರವನ್ನು ನೋಡಿ :

. ಆವಾವ ದೋಷಮಲ್ಲಮ |
ನೋವದೆ ಪರಿಹರಿಪ ಜೀವದಯಾಷ್ಟ ಮಿಯಂ |
ಭಾವಿಸಿ ನೋಂಪವರೆಲ್ಲಂ |
ಭೂವಳಯ ಸುಖದ ಸುಖನುಂಡು ಮುಕ್ತಿ ಪಡೆವರ್‌
ಎಲ್ಲಾ ವ್ರತಮಂ ನೋಂಪಿಯು
ಕೊಲ್ಲದವ್ರತಗಧಿಕಮಲ್ತುಮದರಿಂ ಭವ್ಯಂ |
ಪೊಲ್ಲಮೆಗೆಯಿದತಿ ದೋಷಕೆ
ಸಲ್ಲದೆ ಪೂಜಿಪುದು ಜೀವದಯಾಷ್ಟ ಮೀಯಾಂ ||
. ಆವಾವ ದೋಷಮೆಲ್ಲಮ
ನೋವದೆ ಪರಿಹರಿಪ ಜೀವದಯಾಷ್ಟ ಮೀಯಂ
ಭಾವಿಸಿ ನೋಂಪವರೆಲ್ಲಂ
ಭೂವಳಯದ ಸುಖಮನುಂಡು ಮುಕ್ತಿಯ ಪಡೆವರು ||
ಎಲ್ಲಾ ನೋಂಪಿಯ ಕೊಂಡ
ರ್ಗ್ಗೆಲ್ಲಾ ವ್ರತದಧಿಕಮಲ್ತು ಮದರಿಂ ಭವ್ಯ |
ರ್ಪ್ಪೊಲ್ಲಮೆ ಗೆಯ್ದಾ ದೋಷಕೆ
ಸಲ್ಲದೆ ಪೂಜಿಪುದೀ ಜೀವದಯಾಪ್ಪ ಮಿಯಂ ||

ನೋಂಪಿ ಕಥೆಗಳಿಗೆ ಸಂಬಂಧಿಸಿದಂತೆ ಓಲೆಗರಿ ಗ್ರಂಥಗಳೂ, ಕೋರಿ ಕಾಗದ ಕಡತಗಳೂ ಸಾಕಷ್ಟು ದೊರೆಯುತ್ತವೆ : ಪುರೋಹಿತ ವರ್ಗದವರು ಬರೆದುಕೊಂಡ ಕಡತಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಮುದ್ರಣ ರೂಪದಲ್ಲಿ ಇದುವರೆಗೆ ನೋಂಪಿ ಕಥೆಗಳನ್ನು ಸಂಗ್ರಹಿಸಿ ಪ್ರಕಟಿಸಿದವರಲ್ಲಿ ಮೈಸೂರು ಜಿಲ್ಲೆಯ ಚಾಮರಾಜನಗರದಲ್ಲಿದ್ದ ಬ್ರಹ್ಮಸೂರಿ ಪಂಡಿತರ ಮಕ್ಕಳಾದ ಪದ್ಮರಜ ಪಂಡಿತರಿಗೆ ಅಗ್ರತಾಂಬೂಲ ಸಲ್ಲುತ್ತದೆ. ಈ ವಿದ್ವಾಂಸರು ನೋಂಪಿ ಕಥೆಗಳನ್ನು ಸಂಗ್ರಹಿಸಿರುವರಲ್ಲಿ, ಪ್ರಕಟಿಸುವಲ್ಲಿ ತೋರಿದ ಶ್ರದ್ಧೆ, ವಹಿಸಿದ ಶ್ರಮ, ಸಲ್ಲಿಸಿದ ಸೇವೆ ಸ್ಮರಣೀಯ. ಸುಮಾರು ಎಂಬತ್ತು ನೋಂಪಿ ಕಥೆಗಳನ್ನು ಪದ್ಮರಾಜ ಪಂಡಿತರೊಬ್ಬರೇ ಪ್ರಕಟಿಸಿದ್ದಾರೆ : ೧೮೯೩, ೧೯೧೫, ೧೯೨೬, ೧೯೨೯, ೧೯೩೦. ಹೀಗೆ ಬೇರೆ ಬೇರೆ ಇಸವಿಗಳಲ್ಲಿ ಒಟ್ಟು ಆಯ್ದು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪದ್ಮರಾಜ ಪಂಡಿತರು ಚಾಮರಾಜನಗರದಲ್ಲೂ, ಬೆಂಗಳೂರಿನ ಮಲ್ಲೇಶ್ವರಂ ಬಡವಾಣೆಯಲ್ಲೂ ತಮ್ಮ ಮುದ್ರಾಣಾಲಯ ವ್ಯವಸ್ಥೆ ಮಾಡಿಕೊಂಡಿದ್ದರು.

ಅಲ್ಲಿಂದ ಮುಂದೆ ಈ ಕಾರ್ಯವನ್ನು ಮುಂದುವರಿಸಿದವರಲ್ಲಿ ಆಸ್ಥಾನ ವಿದ್ವಾನ್‌ ನ್ಯಾಯತೀರ್ಥ ಎ. ಶಾಂತಿರಾಜ ಶಾಸ್ತ್ರೀಗಳು ಗಣ್ಯರು. ಗ್ರಂಥ ಸಂಪಾದನಾ ಶಾಸ್ತ್ರ, ಚಾರಿತ್ರಿಕ ಬೆಳವಣಿಗೆಯಲ್ಲಿ ಎ. ಶಾಂತಿರಾಜ ಶಾಸ್ತ್ರೀಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಓಲೆಗರಿಯಿಂದ ಕೇವಲ ಪ್ರತಿಯೆತ್ತಿ ಅನಾಮತ್ತಾಗಿ, ಅವರ ಕೆಲವು ಸಮಕಾಲೀನರು ಹಳಗನ್ನಡ ಗ್ರಂಥಗಳನ್ನು ಪ್ರಕಟಿಸುತ್ತಿದ್ದಾಗ, ಶಾಂತಿರಾಜ ಶಾಸ್ತ್ರಿಗಳವರು ಅವರಿಗಿಂತ ಅಯ್ವತ್ತು ವರ್ಷ ಮುಂದಿದ್ದರೆನ್ನಬಹುದು. ಪಾಠಾಂತರಗಳನ್ನು ಹಲವು ಹಸ್ತಪ್ರತಿಗಳಿಂದ ತುಲನೆ ಮಾಡಿ ಗುರುತಿಸಿ ಸ್ವೀಕಾರ ಯೋಗ್ಯವಾದ ಪಾಠವನ್ನು ಒಪ್ಪಿಕೊಂಡು, ಉಳಿದುವನ್ನು ಅಡಿಟಿಪ್ಪಣಿಯಲ್ಲಿಟ್ಟು, ಪೀಠೆಕೆಯನ್ನೂ ಚೊಕ್ಕವಾಗಿ ಬರೆದು ಕವಿಕಾವ್ಯ ಪರಿಚಯ ಮಾಡಿ; ಕಥಾಸಾರಾಂಶ ಕೊಟ್ಟು – ಹೀಗೆ ಶಾಂತಿರಾಜ ಶಾಸ್ತ್ರೀಗಳು ಕೆಲವು ಕಾವ್ಯಗಳನ್ನು ಶಾಸ್ತ್ರ ಶುದ್ಧವಾಗಿ ಸಂಗ್ರಹಿಸಿಕೊಟ್ಟಿದ್ದಾರೆ. ಹೀಗಾಗಿ ಇಬ್ಬರು ಸಂಪಾದಿಸಿರುವ ನೋಂಪಿ ಕಥೆಗಳಿಗೆ ಗಣ್ಯ ಸ್ಥಾನವಿದೆ.

ನೋಂಪಿ ಕಥೆಗಳ ಸಂಗ್ರಹ ಮತ್ತು ಪ್ರಕಟನ ಕಾರ್ಯದಲ್ಲಿ ತೊಡಗಿದ ಇನ್ನಿತರರೆಂದರೆ (ಇವರಲ್ಲಿ ಬಹುಮಂದಿ ಒಂದೊಂದೆ ಕೃತಿಯನ್ನು ಅಥವಾ ಕತೆಯನ್ನು, ಮುಖ್ಯವಾಗಿ ಶಾಸ್ತ್ರ ದಾನಕ್ಕೆ ಸಿದ್ಧಪಡಿಸಿದ್ದಾರೆ) :

. ದಿವಂಗತ ಎಂ. ನೇಮಿರಾಜಶಾಸ್ತ್ರೀ, ೨. ಪಂಡಿತ ಕೆ. ಭುಜಬಲಿಶಾಸ್ತ್ರೀ, ೩. ಡಾ || ಬಿ. ಎಸ್‌. ಕುಲಕರ್ಣಿ, ೪. ಬಿ. ಬಿ. ಮಹೀಶವಾಡಿ, ೫. ಬಿ. ದೇವ ಕುಮಾರ ಜೈನ್‌, ೬. ಹಂಪ. ನಾಗರಾಜಯ್ಯ ಮೊದಲಾದವರು.

ಇಷ್ಟಿದ್ದೂ, ಆಗಲೇ ಹೇಳಿದಂತೆ, ಒಂದು ಶಾಸ್ತ್ರೋಕ್ತ ರೀತಿಯ ಹಾಗೂ ಗ್ರಂಥ ಸಂಪಾದನೆಯ ನಿಮಯಕ್ಕೊಳಪಟ್ಟ ಸಂಪಾದನೆಯ ಕಾರ್ಯಕ್ಕೆ ವಿದ್ವಾಂಸರು ಇನ್ನೂ ತೊಡಗಬೇಕಾಗಿದೆ. (ಮೈಸೂರು ವಿಶ್ವವಿದ್ಯಾಲಯದ ಕನ್ನಡ ಆಧ್ಯಯನ ಸಂಸ್ಥೆಯವರು ಈ ಕಾರ್ಯ ಕೈಗೊಂಡಿದ್ದಾರೆಂದು ತಿಳಿದುಬಂದಿದೆ).

ನೋಂಪಿ ಕಥೆಗಳಲ್ಲಿ ಬರುವ ಪರಿಭಾಷೆ ಪರಿಮಿತವಾದುದು, ವಡ್ಡಾರಾಧನೆ ಇಲ್ಲವೇ ಚಾವುಂಡರಾಯ ಪುರಾಣಗಳಿಗೆ ಹೋಲಿಸಿದಾಗ, ಅರ್ಚನೆಗೈದು, ಭಾವಪೂಜೆ, ದ್ರವ್ಯ ಪೂಜೆ, ಅಷ್ಟವಿಧಾರ್ಚನೆ ಎಂಬ ಪಾರಿಭಾಷಿಕ ಶಬ್ದಗಳು ಅನೇಕ ಕಡೆ ಪದೇ ಪದೇ ಬರುತ್ತವೆ. ಅವುಗಳ ಪುನರಾವೃತ್ತಿ ಪ್ರಮಾಣವು ಹೆಚ್ಚಿರುವುದರಿಂದ, ಜೈನೇತರರಿಗೆ ಅವುಗಳ ಹಿನ್ನೆಲೆಯನ್ನು ಪರಿಚಯಿಸಿ ಕೊಡಬೇಕಾಗುತ್ತದೆ. ಇಲ್ಲಿ ಸಂಗ್ರಹವಾಗಿ ಆ ಶಬ್ದಗಳ ಹಿನ್ನೆಲೆಯನ್ನು ತಿಳಿಸಿದ್ದೇನೆ : ಅರ್ಚನೆಗೈದು ಎಂಬುದಕ್ಕೆ ಪೂಜೆಮಾಡಿ ಎಂಬರ್ಥವಿರುವುದು ನಿಜವಾದರೂ ಇಲ್ಲಿನ ಸಾಂದರ್ಭಿಕ ಅರ್ಥ ಅದಕ್ಕಿಂತ ಹೆಚ್ಚಿದೆ. ಪೂಜೆಯೆಂದರೆ ಗೌರವ, ಸತ್ಕಾರಗಳೂ ಆಗುತ್ತವೆ. ಈ ಪೂಜೆಯಲ್ಲಿ ಎರಡು ಬಗೆ : ಭಾವಪೂಜೆ ಮತ್ತು ದ್ರವ್ಯಪೂಜೆ. ಕಾಯಾ ವಾಚಾ ಮನಸಾ ಶುದ್ಧಿಯಿಂದ ಮನಸ್ಸಿನಲ್ಲಿಯೇ ಸ್ತುತಿರೂಪವಾಗಿ ಮಾಡುವ ಪೂಜೆಗೆ ಭಾವ ಪೂಜೆಯೆಂದು ಹೆಸರು. ಭಾವಪೂಜೆಯಲ್ಲಿ ಸಾಮಾಯಿಕ, ಚತುರ್ವಿಂಶತಿಸ್ತವನ, ವಂದನ, ಪ್ರತಿಕ್ರಮಣ, ಕಾರ್ಯೋತ್ಸರ್ಗ, ಪ್ರತ್ಯಾಖ್ಯಾನ – ಎಂಬ ಆರು ವಿಧಗಳಿವೆ. ನೋಂಪಿ ಕಥೆಗಳಲ್ಲಿ ಈ ಎಲ್ಲ ವಿಧಗಳ ಪ್ರಸ್ತಾಪ ಅನೇಕ ಕಡೆ ಬರುತ್ತದೆ; ಅದರಿಂದ ಒಂದೊಂದಾಗಿ ಇವನ್ನು ಕಿರಿದರಲ್ಲಿ ಪರಿಚಯಿಸಲಾಗುವುದು.

ಸಾಮಾಯಿಕವೆಂದರೆ, ಅಹಂ ಸಮಸ್ತ ಸಾವಾದ್ಯಯೋಗದ್ವಿರಹಿತೋಸ್ಮಿ ಎಂಬ ಹಾಗೆ, ಸಮಸ್ತ ಸಾವದ್ಯ ಯೋಗವನ್ನು ತ್ಯಾಗ ಮಾಡಿ ಪರದ್ರವ್ಯಗಳಿಂದ ನಿವೃತ್ತನಾಗಿ ಧ್ಯಾನ ಮಾಡುವಿಕೆ. ಈ ಸಾಮಾಯಿಕ ಭಾವಪೂಜೆಯಿಂದ ಮನಸ್ಸಿನಲ್ಲಿ ಸಮತಾಭಾವವನ್ನು ಪಡೆಯಲು ಸಹಾಯವಾಗುತ್ತದೆ. ಸುಲಭಸಾಧ್ಯವಾಗುತ್ತದೆ. ಸ್ತುತಿ, ಸ್ತವ, ಸ್ತವನ – ಇವು ಸಮಾನಾರ್ಥಕ ಸಂವಾದಿ ಶಬ್ದರೂಪಗಳು. ಚತುರ್ವಿಂಶತಿಸ್ತವನ (ಸ್ತುತಿ) ಎಂದರೆ ೨೪ ಜನ ತೀರ್ಥಂಕರ ಗುಣಸ್ಮರಣೆ, ಗುಣಕೀರ್ತನೆ ಮಾಡುವುದು. ಇದು ಪ್ರಾರ್ಥನಾ ರೂಪವಾಗಿರುವುದರಿಂದ ಇದನ್ನು ಪ್ರಾರ್ಥಾನಾತ್ಮಕ ಸ್ತವವೆಂದೂ ಹೇಳುವರು. ಇದರಲ್ಲಿ ವಸ್ತುಸ್ತವನ ಗುಣಸ್ತವನ ರೂಪಸ್ತವನ ಎಂಬ ಭೇದಗಳಿವೆ – ಇವುಗಳ ವಿವರಣೆ ಇಲ್ಲಿ ಅಷ್ಟು ಪ್ರಸ್ತುತವಾಗಲಾರದೆಂದು ಕೈ ಬಿಟ್ಟಿದ್ದೇನೆ.

ನೋಂಪಿಗಳಲ್ಲಿ ಬರುವ ವಂದನೆಯೆಂಬ ಭಾವಪೂಜೆಯಲ್ಲಿ ಪಂಜಾಂಗ ವಂದನೆ, ಅಷ್ಟಾಂಗ ವಂದನೆ, ಪಶ್ವರ್ಧ ವಂದನೆ ಎಂದು ತ್ರಿವಿಧಗಳಿವೆ. ಜಿನಬಿಂಬದ ಎದುರಿನಲ್ಲಿ ತಲೆ ಎರಡು ಕೈಗಳು ಮತ್ತು ಎರಡು ಮೊಣಕಾಲುಗಳನ್ನು ನೆಲಕ್ಕೆ ಸೋಕಿಸಿ ಸ್ತುತಿ ಮಾಡುವುದು ಪಂಚಾಂಗ (=ಆಯ್ದು ಅಂಗಗಳ) ವಂದನೆ. ತಲೆ, ಎರಡು ಕೈಗಳು, ಮುಖ, ಎದೆ ಹೊಟ್ಟೆ ಮತ್ತು ಎರಡು ಕಾಲುಗಳನ್ನು ಭೂಸ್ಪರ್ಷ ಮಾಡಿಸಿ ಮಾಡುವ ಸ್ತುತಿಯೇ ಅಷ್ಟಾಂಗ (= ಎಂಟು ಅಂಗಗಳ) ವಂದನೆ. ಪಶ್ವರ್ಧ ವಂದನೆಯೆಂದರೆ ಪಶುಗಳ ಹಾಗೆ ಒಂದೇ ಮಗ್ಗುಲಾಗಿ ಮಲಗಿ ವಂದಿಸುವುದು. ಇವೆಲ್ಲವೂ ವಂದನಾಭಾವ ಪೂಜೆಗಳೇ ಆಗಿವೆ.

ನೋಂಪಿ ಕಥೆಗಳಲ್ಲಿ ಪೂರ್ವಾರ್ಧವು ಕಥಾ ಭಾಗದಿಂದ ಕೂಡಿದ್ದರೆ ಉತ್ತರಾರ್ಧವು ಈ ಆರಾಧನಾ ಭಾಗದಿಂದ ತುಂಬಿದೆ. ನೋಂಪಿ ಸಾಹಿತ್ಯವನ್ನು, ಈ ಕಾರಣದಿಂದಾಗಿ, ಸ್ಥೂಲವಾಗಿ ಜೈನ ಪೂಜಾಸಾಹಿತ್ಯದ ಒಂದು ಪ್ರಕಾರವೆಂದು ನಾವು ಪರಿಗಣಿಸಬಹುದು. ಹೊಯ್ಸಳ ವಂಶದ ದೊರೆಗಳ ಕಾಲದಲ್ಲಿ ಮಹಾಕೋಶಾಧ್ಯಕ್ಷನಾಗಿದ್ದ ಹುಲ್ಲಮಯ್ಯನು, ಹೊಯ್ಸಳ ರಾಜರಿಂದ ‘ಸವಣೇರು’ ಹಳ್ಳಿಯನ್ನು ಬಹುಮಾನವಾಗಿ ಪಡೆದು, ಅದನ್ನು ೧೧೫೮ರಲ್ಲಿ ಗೋಮಟೇಶ್ವರನ ‘ಅಷ್ಟ ವಿಧಿ ಪೂಜೆ’ಗೆ, ಹಾಗೂ ಯತಿಗಳ ಆಹಾರ ದಾನಕ್ಕಾಗಿ ಬಿಟ್ಟುಕೊಟ್ಟಂತೆ ಶಾಸನಗಳಿಂದ ತಿಳಿದುಬರುತ್ತದೆ. (ಎಪಿಗ್ರಾಫಿಯ ಕರ್ನಾಟಿಕ ಸಂಪುಟ ೨, ಶ್ರವಣಬೆಳಗೊಳದ ಶಾಸನ ಸಂಖ್ಯೆ ೮೪).

ನೋಂಪಿ ಕತೆಗಳ ಒಟ್ಟು ಸ್ವರೂಪವನ್ನು ಹೀಗೆ ವಿವರಿಸಬಹುದು : ಪ್ರಾರಂಭದಲ್ಲಿ ಸಾಮಾನ್ಯವಾಗಿ ಒಂದು ಕಂದ ಪದ್ಯ ಅಥವಾ ಅಪರೂಪವಾಗಿ ಒಂದು ವೃತ್ತ ಪದ್ಯವಿರುತ್ತದೆ; ಅದು ಪ್ರಾರ್ಥನಾ ಪದ್ಯವಾಗಿದ್ದು ಬಹುವಾಗಿ ವರ್ತಮಾನಕಾಲದ ಅಂತಿಮ ತೀರ್ಥಂಕರನಾದ ವರ್ಧಮಾನ ಮಹಾವೀರನ ಸ್ತುತಿಯಾಗಿರುತ್ತದೆ. ಇಂಥ ಕೆಲವು ಪ್ರಾಥನಾ ಪದ್ಯಗಳಲ್ಲಿ ಕೇವಲ ಮಾದರಿಯಾಗಿ ಒಂದೆರಡು ಪದ್ಯಗಳನ್ನು ಉದಾಹರಿಸಿದೆ :

ಸುರರಾಜ ವಂದ್ಯ ಪಾದಂ
ಉರಗೇಂದ್ರರ ಸ್ತುತಿಗುಣಗಣಾನ್ವಿತ ಮಹಿಮಂ
ವರವೀರ ವರ್ಧಮಾನಂ
ಗೆರಗಿ ಶ್ರುತ ಸ್ಕಂದ ನೋಂಪಿಯಂ ವಿರಚಿಸುವೆಂ
||

ಅಪರೂಪವಾಗಿ ಶಾರದೆಯ ಸ್ತುತಿಯೂ ಇರುತ್ತದೆ

ಶಾರದೆಯಂ ಸಕಲಕಲಾ
ವಾರಿಧಿಯಂ ನಮಿಸಿ ಭವವಿನಾಶ ನಿಮಿತ್ತಂ
|
ಸಾರಮೆನಿಸಿರ್ಪ ಷೋಡಶ
ಕಾರಣಮಂ ಪುಣ್ಯನಿಲಯಮಂ ವಿರಚಿಸುವೆಂ
||

ಸಂಸ್ಕೃತ ಶ್ಲೋಕದಿಂದ ಒಮ್ಮೊಮ್ಮೆ ಕಥೆಯನ್ನು ಆರಂಭಿಸುವುದುಂಟು :

ಪಾರ್ಶ್ವನಾಥಂ ಜಿನಂ ನತ್ವಾ ಸರ್ವ ಸಂಪತ್ಸಮೃದ್ಧಿದಂ
ಕಥಾಂ ಕಲ್ಯಾಣಮೂಲಾಖ್ಯಾಂ ವಕ್ಷೈ ಮೋಕ್ಷೈಕಸಾಧನಂ
||

ಯಾವ ಪ್ರಾರ್ಥನಾ ಪದ್ಯವೂ ಇಲ್ಲದೆ ನೇರವಾಗಿ ಗದ್ಯದಲ್ಲಿ ಪ್ರಾರಂಬವಾಗುವ ಕಥೆಗಳೂ ಇವೆ; ಉದಾಹರಣೆ -ಸುಗಂಥಬಂಧುರದ ನೋಂಪಿಯ ಕಥೆ.

ತೀರ್ಥಂಕರ ಸ್ತುತಿ, ಕಥಾರಂಭ, ಯಾರು ಯಾರಿಗೆ ಹೇಗೆ ಹೇಳಿದರೆಂಬ ನೀರೂಪಣೆ, ಹಿಂದೆ ಆಯಾ ನೋಂಪಿಯನ್ನು ಆಚರಿಸಿ ಸದ್ಗತಿ ಪಡೆದವರ ಪೂರ್ವಕತೆ, ವ್ರತವನ್ನು ಆಚರಿಸದೆ ಬಿಟ್ಟದ್ದರಿಂದ ಆದ ನಷ್ಟ, ಬಂದ ನಷ್ಟ, ವ್ರತಪಾಲನೆಯಿಂದ ಮತ್ತೆ ಸುಖಪ್ರಾಪ್ತಿ, ಕಡೆಯಲ್ಲಿ ಮತ್ತೆ ಒಂದು ಕಂದ ಪದ್ಯ (ಇರಬಹುದು, ಇಲ್ಲದಿರಬಹುದು)

ಇಂತೆಸೆವೀ ಕಥೆಯಂ ಭುವ
ನಾಂತರದೊಳು ಪೇಳ್ದ ಕೇಳ್ದ ಭವ್ಯರಿಗೆ
ಸಂತತ ಮುಕ್ತಿ ಶ್ರೀಯನ
ನಂತ ಗುಣಾಂಬೋಧಿ ಚಂದ್ರ ಜಿನನೊಲಿದೀವಂ
||

ಸಂಸ್ಕೃತ ಶ್ಲೋಕದಿಂದ ಪ್ರಾರಂಭವಾಗಿ ಸಂಸ್ಕೃತ ಶ್ಲೋಕದಿಂದಲೇ ಮುಕ್ತಾಯವಾಗುವ ನೋಂಪಿ ಕಥೆಗಳು ತೀರಕಡಿಮೆ (ನಂದೀಶ್ವರದ ನೋಂಪಿ). ಅಂತೂ ಕಥಾಂತ್ಯದಲ್ಲಿ ಪದ್ಯ ಐಚ್ಛಿಕ, ಕಥಾರಂಭದಲ್ಲೂ ಅದು ಕಡ್ಡಾಯವಲ್ಲ. ಕಥೆಯ ಕಡೆಯಲ್ಲಿ ಫಲಶ್ರುತಿ, ದಾನ ಕೊಡಬೇಕಾದ ಸೂಚನೆ ಇವು ಬರುತ್ತವೆ. ವ್ರತಾಚರಣೆ ವಿವರ ಕಥೆಯಲ್ಲಿ ಅನಿವಾರ್ಯವಾಗಿ ಇದ್ದೇ ಇರುತ್ತದೆ. ನೋಂಪಿಗಳನ್ನು ಬಸದಿಗಳಲ್ಲೇ ಆಚರಿಸುವುದು ವಾಡಿಕೆ. ಇದಕ್ಕೆ ಮೂಲಕಾರಣ ಬಸದಿಯಲ್ಲಿ ಪವಿತ್ರ ಪೂಜಾರ್ಹ ಭಾವನೆ ತರುವ ಪರಿಸರ ಇರುತ್ತವೆಂಬುದು; ಎರಡನೆಯದಾಗಿ ಅಲ್ಲಿ ಕೆಲವು ಅನುಕೂಲತೆಗಳು ಇರುತ್ತವೆ : ಮೂರನೆಯದಾಗಿ ಅಲ್ಲಿ ಮುನಿಗಳೂ ಅಜ್ಜಿಕೆಯರೂ ಇರುತ್ತಾರೆ. ಅದರಿಂದ ನೋಂಪವರೂ, ನೋನುವವರೂ ತಮ್ಮ ಊರಿನಲ್ಲಿ ಬಸದಿ ಇಲ್ಲದಿದ್ದರೆ ಬಸದಿ ಇರುವ ಊರಿಗೆ ಹೋಗಿ, ಅಲ್ಲಿ ವಸತಿ ಮಾಡಿ ನೋಂಪಿ ಪೂರೈಸಿಕೊಂಡು ಬರುತ್ತಾರೆ. ‘ನೋಂಪಿದಾರ’ ಎಂದೇ ಬೇರೆ ಇರುತ್ತದೆ. ಇದನ್ನು ಕಟ್ಟಿಕೊಳ್ಳುವುದು ವ್ರತಪಾಲನೆ ದಿನಗಳಲ್ಲಿ ಮಾತ್ರ. ಆಗ ಅವರು ಮಡಿಯಾಗಿರಬೇಕು. ಕಾಯಾ ವಾಚಾ ಮನಸಾ ಮೈಲಿಗೆ ಆಗುವಂತಿಲ್ಲ. ವ್ರತ ವಿಸರ್ಜನೆ ಆದ ಕೂಡಲೆ ನೋಂಪಿ ದಾರ ಬಿಚ್ಚಿ ಬಸದಿಯಲ್ಲೇ ಬಿಟ್ಟಿರಬೇಕು.