ಭಾರತೀಯ ಕಥಾ ಸಾಹಿತ್ಯದಲ್ಲಿ ಸಿಂಹಪಾಲು ಸಂದಿರುವುದು ಜೈನರ, ಬೌದ್ಧರ ಕಥೆಗಳ ರಾಶಿಗೆ. ಇವು ಗುಣದಲ್ಲೂ ಗಾತ್ರದಲ್ಲೂ ಪ್ರಮುಖವಾಗಿರುವುದರಿಂದ ಜಗತ್ತಿನ ಶ್ರೇಷ್ಠ ಕಥೆಗಾರರ ಶ್ರೇಣಿಯಲ್ಲಿ ಜೈನರನ್ನೂ ಬೌದ್ಧರನ್ನೂ ಅಗ್ರಸ್ಥಾನದಲ್ಲಿರಿಸಲಾಗಿದೆ. ಪ್ರಾಕೃತ, ಸಂಸ್ಕೃತ, ಕನ್ನಡ, ತಮಿಳು, ಗುಜರಾತಿ, ರಾಜಸ್ತಾನಿ, ಹಿಂದಿ ಮೊದಲಾದ ಭಾಷೆಗಳಲ್ಲಿ ಸಿಗುವ ಜೈನ ಕಥಾ ಸಾಹಿತ್ಯ ಸಮೃದ್ಧವಾಗಿದೆ. ತ್ರಿಷಷ್ಟಿಶಲಾಕಪುರುಷರ ಕಥೆಗಳು, ಕಾಮದೇವರ ಕಥೆಗಳು, ಪಂಚತಂತ್ರ ಕಥೆಗಳು, ವಿಕ್ರಮಾರ್ಕರ ಕಥೆಗಳು, ಆರಾಧನಾ ಕಥೆಗಳು, ಸಮ್ಯಕ್ತ್ವ ಕೌಮುದಿ ಕಥೆಗಳು, ನೋಂಪಿಯ ಕಥೆಗಳು, ಉಪಸರ್ಗಕೇವಲಿಗಳ ಕಥೆಗಳು ಸ್ತ್ರೀಯರ ಕಥೆಗಳು, ಮಹಾಪುರುಷರ ಕಥೆಗಳು, ಅನುಪ್ರೇಕ್ಷೆಯ ಕಥೆಗಳು ಶ್ರಾವಕಾಚಾರದ ಕಥೆಗಳು – ಹೀಗೆ ಲೋಕ ಸಾಹಿತ್ಯ ಪ್ರತೀಕವಾದ ಸಾವಿರಾರು ಕಥೆಗಳು ತವನಿಧಿಯ ಬಾಗಿಲು ತೆರೆಯುತ್ತದೆ ಜೈನ ಕಥಾ ಪ್ರಪಂಚ.

ಶಿಷ್ಟ ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಸತ್ವಾಂಗದ ಜೀವದ್ರವ್ಯವನ್ನು ಒದಗಿಸುವ ಒಂದು ಮಾತೃಮೂಲ ಪ್ರಾಕೃತ ಕಥಾ ಸಾಹಿತ್ಯ. ಕಾಲ್ಪನಿಕತೆಯೊಂದಿಗೆ ಸಂಲಗ್ನಗೊಂಡ ವೈವಿಧ್ಯಮಯವೂ ಸಮೃದ್ಧವೂ ಆದ ಜೀವನಪರ ಕಥಾನಕಗಳಿವೆ. ತಾಜಾ ವಸ್ತುಗಳಿಲ್ಲದೆ ಸೊರಗುತ್ತಿರುವ ಇಂದಿನ ಸಾಹಿತ್ಯ ಪ್ರಕಾರಗಳಿಗೆ ನವನವೀನ ಜೀವಪರ ಕಥನಕಗಳನ್ನು ವರಸೆ ಬೊಗಸೆಯಾಗಿ ಮೊಗೆಯುವ ಜೈನಕಥಾ ಸಾಹಿತ್ಯ ಅಕ್ಷಯ ಭಂಡಾರ. ಸಮಾಜಮುಖಿ ಸಾಂಸ್ಕೃತಿಕ ನಿಲುವುಗಳಿರುವ ಕಥನಗಳನ್ನು ಆಧುನಿಕ ಸಂದರ್ಭಗಳಿಗೆ ಅಳವಡಿಸುವ ಸಾಧ್ಯತೆಯನ್ನು ಸೃಜನಶೀಲ ಲೇಖಕರು ಪರಿಶೀಲಿಸಬೇಕು.

ಈ ಅಕ್ಷಯ ಜೈನ ಕಥಾ ಪರಂಪರೆಯಲ್ಲಿ ನೋಂಪಿ ಕಥಾ ಸಾಹಿತ್ಯ ಪ್ರಮುಖವೂ ಪ್ರತ್ಯೇಕವೂ ಆದ ಒಂದು ಪ್ರಕಾರ. ಜೈನ ಸಮಾಜದಲ್ಲಿ ನೋಂಪಿ ಸಂಕಥನವು ಬಹುಜನ ಮನ್ನಣೆ ಪಡೆದಿರುವ ವಿಶಿಷ್ಟ ಕಥನ ಮಾದರಿ. ಜೈನ ಸಮಾಜದ ಧಾರ್ಮಿಕ, ಸಾಮಾಜಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬದುಕಿನ ಪದರ ಪಾತಳಿಗಳನ್ನು ವ್ಯಾಪ್ತವಾಗಿ, ಆಪ್ತವಾಗಿ ಬಿಂಬಿಸುವ ರನ್ನಗನ್ನಡಿ ಈ ನೋಂಪಿ ಕಥಾ ಸಾಹಿತ್ಯ. ಇದು ಜೈನ ಜನಪದ ಸಾಹಿತ್ಯವಾಗಿ ಮೈಪಡೆದು ಕುತೂಹಲಕಾರಿ ನೆಲೆಗಳಿಗೆ ನಮ್ಮನ್ನು ಒಯ್ಯುತ್ತದೆ.

ಭಾರತೀಯ ಕಥಾ ಸಾಹಿತ್ಯದ ಹಿನ್ನೆಲೆಯಲ್ಲಿಟ್ಟು ತೂಗಿ ನೋಡುವ ತೌಲನಿಕ ಅಧ್ಯಯನದೊಂದಿಗೆ ಈ ನೊಂಪಿ ಕಥಾಸಾಹಿತ್ಯವನ್ನು ತನಿಯಾಗಿಯೂ ಅಭ್ಯಸಿಸಬಹುದು. ಕನ್ನಡ ಸಾಹಿತ್ಯದ ಸಂದರ್ಭದಲ್ಲಂತೂ ನೋಂಪಿಕಥಾ ಪ್ರಕಾರದ ಆಯಾಮ ಹಾಗೂ ಹಾಸು ಅನನ್ಯವೆನಿಸುವಂತಹುದು. ಪಂಪ ಪೂರ್ವಕಾಲೀನ ಕಾಲ ಘಟ್ಟದಲ್ಲಿಯೇ ಹುಟ್ಟಿಕೊಂಡಿರುವ ನೋಂಪಿಯ ಕಥೆಗಳು, ದೇಶೀಯ ಸತ್ವದೊಂದಿಗೆ ಬೆರೆತು ಶತಮಾನಗಳ ಹಾಸಿನಲ್ಲಿ ಮರುಹುಟ್ಟು ಪಡೆಯುತ್ತ ಬೆಳೆದು ಬಂದಿವೆ. ಸಂಸ್ಕೃತ, ಪ್ರಾಕೃತ ಮೂಲ ಆಕರಗಳಿಂದ ಕನ್ನಡಕ್ಕೆ ಕಸಿ ಮಾಡಿರುವ ಕಥೆಗಳಲ್ಲದೆ ಕನ್ನಡದ ನೆಲದಲ್ಲೇ ಮೈ ತಾಳಿದ ಕಥೆಗಳೂ ಇವೆ. ಎರವಲಿರಲಿ ಇಲ್ಲಿಯದಿರಲಿ ಒಟ್ಟಾರೆ ಎಲ್ಲ ಕಥೆಗಳಲ್ಲೂ ಕನ್ನಡದ ಸೊಗಡು ಹಾಗೂ ಘಾಟು ತುಳುಕುತ್ತದೆ. ಜೈನ ಕಥಾ ಸಾಹಿತ್ಯಕಾರರು ಕನ್ನಡದ ಅರಿವಿಗೆ ನೀಡಿದ ಸ್ವೋಪಜ್ಞ ವಿಶಿಷ್ಟ ಕೊಡುಗೆಯಾದ ನೋಂಪಿಯ ಕಥೆಗಳಿಗೆ ಇರುವ ವಿವಿಧ ಮಗ್ಗಲುಗಳನ್ನು ಇನ್ನೂ ಸರಿಯಾಗಿ ಅರಿಯಬೇಕಾಗಿದೆ. ಪ್ರಸ್ತಾವನೆಯಲ್ಲಿ ಈ ಕೊಡುಗೆಯ ನೆಲೆಬೆಲೆಯ ಸ್ವರೂಪವನ್ನು ಗುರುತಿಸುವುದರೊಂದಿಗೆ ಕನ್ನಡ ಕಥನ ಸಾಹಿತ್ಯದ ತಿಳುವಳಿಕೆಗೆ ಒದಗುವ ಒಂದು ಪ್ರರಿಪ್ರೇಕ್ಷ್ಯವನ್ನು ಕಟ್ಟುವ ಪ್ರಯತ್ನಮಾಡಿದ್ದೇನೆ. ಹಾಗೂ ಈ ಅಧ್ಯಯನವನ್ನು ಇನ್ನು ಮುಂದೆ ಯಾವ ದಿಕ್ಕುಗಳಲ್ಲಿ ಮುಂದುವರಿಸಲು ದಾರಿಗಳಿವೆಯೆಂಬುದನ್ನು ಸೂಚಿಸಿದ್ದೇನೆ.

ಜೈನ ಹಾಗೂ ಕನ್ನಡ ಸಾಂಸ್ಕೃತಿಕ ಜಗತ್ತನ್ನು ಸಮೃದ್ಧಗೊಳಿಸಿದ ನೋಂಪಿಯ ಕಥೆಗಳನ್ನು ಕಳೆದ ಶತಮಾನದ ಆದಿಯಲ್ಲಿ ಮೊದಲು ಅಚ್ಚಿಟ್ಟವರು ಚಾಮರಾಜನಗರದ ಬಲ್ಲಿದರೊಡೆಯ ಬಿ. ಪದ್ಮರಾಜ ಪಂಡಿತರು. ಅವರು ಮೂರು ಬೇರೆ ಬೇರೆ ಸಂಪುಟಗಳಲ್ಲಿ ಸುಮಾರು ೬೦ ಕಥೆಗಳನ್ನು ಹೊರ ತಂದರು. ಅಲ್ಲಿಂದೀಚೆಗೆ ಅದೇ ಕಥೆಗಳು ಆವರ್ತನಗೊಂಡ ಆವೃತ್ತಿಗಳು ಭಿನ್ನ ಪಾಠಾಂತರದೊಂದಿಗೆ ಮುದ್ರಣವಾದುವು, ಕೇವಲ ಆರೇಳು ಹೊಸ ಕಥೆಗಳು ಹೊರ ಬಂದುವು; ಅದರ ಸಮೀಕ್ಷೆಯನ್ನು ಉಪೋದ್ಘಾತದಲ್ಲಿ ಕಾಣಬಹುದು. ಆದರೆ ನೋಂಪಿ ಕಥೆಗಳ ವಿಶ್ಲೇಷಣಾತ್ಮಕ ಅಧ್ಯಯನ ಮತ್ತು ವಿಮರ್ಶೆಗೆ ಬಿ. ಪದ್ಮರಾಜ ಪಂಡಿತರಾಗಲಿ ಅವರ ಅನಂತರದವರಾಗಲಿ ತೊಡಗಲಿಲ್ಲ. ಬಹುಕಾಲದ ಈ ಕೊರತೆಯನ್ನು ಹೋಗಲಾಡಿಸಿ ವಿದ್ವಜ್ಜನರ ಅಗತ್ಯವನ್ನು ಪೂರೈಸುವ ಪ್ರಯತ್ನ ಪ್ತಸ್ತುತ ಗ್ರಂಥದ ಪೀಠಿಕೆಯಲ್ಲಿದೆಯಲ್ಲದೆ ಇದುವರೆಗೆ ಅಚ್ಚಾದ ಕಥೆಗಳೊಂದಿಗೆ ಕೆಲವು ಅಪ್ರಕಟಿತ ಕಥೆಗಳನ್ನೂ ಸೇರಿಸಲಾಗಿದೆ. ಇಷ್ಟೊಂದು, ೮೪ ಕಥೆಗಳು, ಒಟ್ಟಿಗೆ ಒಂದೇ ಹೊತ್ತಗೆಯಲ್ಲಿ ಮೊತ್ತ ಮೊದಲನೆಯ ಸಲ ಹೊರಬರುತ್ತಿದೆ.

ಈ ಪುಸ್ತಕ ಪ್ರಕಟಣೆಗೆ ಮುನ್ನ ನಡೆದ ಪೂರ್ವ ತಾಲೀಮನ್ನೂ ಇಲ್ಲಿ ಉಲ್ಲೇಖಿಸಬೇಕು.

ಅ. ಕೋಲಾರ ಜಿಲ್ಲೆ ಗುಡಿಬಂಡೆಯ ವಿವೇಕೋದಯ ಗ್ರಂಥಮಾಲೆಯ ವತಿಯಿಂದ ೧೯೭೬ರಲ್ಲಿ ಸುರೇಶ್‌ ಜೈನ್‌ ಅವರು ನಾನು ಸಂಪಾದಿಸಿದ ‘ಕೆಲವು ನೋಂಪಿಯ ಕಥೆಗಳು’ ಪುಸ್ತಕವನ್ನು ಪ್ರಕಟಿಸಿ ಉಪಕರಿಸಿದರು. ಅದರಲ್ಲಿ ೧೯ ಕಥೆಗಳನ್ನು ಗದ್ಯಾನವಾದ ಮಾಡಿಕೊಟ್ಟಿದೆ. ಅಲ್ಲದೆ ನಲವತ್ತು (೪೦) ಪುಟಗಳು ವಿಸ್ತಾರವಾದ ವಿವೇಚನೆಯನ್ನೂ ಅಳವಡಿಸಿದ್ದೆ.

ಆ. ಆನಂತರ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನ ಯೋಜನೆಗೆಂದು ‘ನೋಂಪಿ ಕಥೆಗಳು : ಸಮಗ್ರ ಪರಿಶೀಲನೆ’ ಎಂಬ ಪ್ರೌಢ ಪ್ರಬಂಧವನ್ನು (೧೯೭೮) ಸಾದರ ಪಡಿಸಿದೆ. ಅದನ್ನು ಅಂಗೀಕರಿಸಿ, ತಜ್ಞರ ಪರಿಶೀಲನೆ ಮಾಡಿಸಿ ಎರಡು ಸಾವಿರ ರೂಪಾಯಿ ನಗದು ಬಹುಮಾನ ನೀಡಿ ವಿಶ್ವವಿದ್ಯಾಲಯ ಪುರಸ್ಕರಿಸಿತು. ಹಿರಿಯ ವಿದ್ವಾಂಸರಾದ ಶಂ. ಬಾ. ಜೋಶಿಯವರು ಆ ಹಸ್ತಪ್ರತಿಯ ಪರಿಶೀಲಕರಾಗಿದ್ದು ಬರವಣೆಗೆಯನ್ನು ಮೆಚ್ಚಿದ್ದನ್ನು ನೆನೆಯಲು ಈಗಲೂ ಹರ್ಷವಾಗುತ್ತದೆ.

ಇ. ೧೯೯೫ರಮಾರ್ಚಿ ತಿಂಗಳಲ್ಲಿ ಕುವೆಂಪು ವಿಶ್ವವಿದ್ಯಾಲಯದ ಆಶ್ರಯದಲ್ಲಿ ‘ಜೈನ ಕಥಾ ಪರಂಪರೆ : ಪ್ರೇರಣೆ – ಪ್ರಭಾವ’ ವಿಷಯವಾಗಿ ಎರಡು ದಿವಸ ವಿಶೇಷ ಉಪನ್ಯಾಸ ಏರ್ಪಡಿಸಿದವರು ಹಿರಿಯ ಸಾಹಿತಿ ಡಾ. ಎಚ್‌. ಜೆ. ಲಕ್ಕಪ್ಪಗೌಡರು.

ಈ. ೧೯೯೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ‘ಉಪೇಕ್ಷಿತ ಸಾಹಿತ್ಯ’ ಕುರಿತ ವಿಶೇಷ ಉಪನ್ಯಾಸ ಮಾಲೆಯಲ್ಲಿ ‘ನೋಂಪಿ ಕಥಾ ಸಾಹಿತ್ಯ’ದ ಬಗ್ಗೆ ನನ್ನಿಂದ ಕಾರ್ಯಕ್ರಮ ನಡೆಯಿತು.

ಉ. ೧೯೯೭ರ ಫ್ರೆಬ್ರವರಿ ತಿಂಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ನನ್ನಿಂದ ‘ಜೈನ ಕಥಾ ಸಾಹಿತ್ಯದ ಆಯಾಮಗಳು’ ಕುರಿತು ಮೂರು ವಿಶೇಷ ಉಪನ್ಯಾಸಗಳನ್ನು ಮಾಡಿಸಿತು. ಅಷ್ಟಲ್ಲದೆ ಅದರ ಮುಂದುವರಿಕೆಯಾಗಿ ‘ಜೈನ ಕಥಾ ಕೋಶ’ದ ಯೋಜನೆಯನ್ನೂ ಒಪ್ಪಿಸಿತು. ಏತತ್ಸಂಬಂಧವಾದ ನಾಲ್ಕು ದಶಕಗಳ ನನ್ನ ಅಧ್ಯಯನದ ಸರಕನ್ನು ಅದರ ಪ್ರಸ್ತಾವನೆಯಲ್ಲಿ ಹರಡಬೇಕೆಂದು ಒತ್ತಾಯಿಸಿ ಬರೆಸಿ ಪ್ರಕಟಿಸಿದವರು ಅಂದಿನ ಕುಲಪತಿ ಕವಿ-ನಾಟಕಕಾರ ಪ್ರೊ. ಚಂದ್ರಶೇಖರ ಕಂಬಾರರು.

ಊ. ೨೦೦೦ ಇಸವಿಯ ಆರಂಭದಲ್ಲಿ ಆಗಿನ ಕನ್ನಡ ವಿಶ್ವವಿದ್ಯಾಲಯದ ಕುಲಪತಿ, ಹಿರಿಯ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿಯವರು ಅಕ್ಕರೆಯಿಂದ ತಮ್ಮಲ್ಲಿದ್ದ ನೋಂಪಿಯ ಕಥೆಗಳ ದೊಡ್ಡ ಓಲೆಗರಿಕಟ್ಟನ್ನು ನನಗೆ ಒಪ್ಪಿಸಿ ‘ಇದರಲ್ಲಿ ಇರುವ ಎಲ್ಲ ನೋಂಪಿ ಕತೆಗಳನ್ನೂ ಸಂಪಾದಿಸಿ, ಸಮಗ್ರ ಪ್ರಸ್ತಾವನೆಯೊಂದಿಗೆ ಪ್ರಕಟನೆಗಾಗಿ ಬೇಗ ಸಿದ್ಧಪಡಿಸಿ ಕೊಡಬೇಕು’ – ಎಂದು ಆಗ್ರಹಪಡಿಸಿದರು. ಕಾರಣಾಂತರಗಳಿಂದ ಕಾಲಲಬ್ಧಿ ಕೂಡಿಬರಲಿಲ್ಲ. ಅವರ ಅಪೇಕ್ಷೆಯನ್ನು, ಅವರು ಕುಲಪತಿಯಾಗಿದ್ದ ಅವಧಿಯಲ್ಲಿ, ಈಡೇರಿಸಲು ಆಗಲಿಲ್ಲವೆಂದು ಉಭಯತ್ರರಿಗೂ ಕಸಿವಿಸಿಯೆನಿಸಿತು.

ಆದುದ್ದೆಲ್ಲಾ ಒಳಿತೇ ಆಯಿತೆನಿಸುತ್ತದೆ. ಯೋಗಾಯೋಗವೆಂಬಂತೆ, ೧೯೯೫ರಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ನನ್ನಿಂದ ಜೈನ ಕಥಾ ಸಾಹಿತ್ಯದ ವೈಭವದರ್ಶನಕ್ಕೆ ಪ್ರೇರೇಪಿಸಿದ ಜಾನಪದ ತಜ್ಞ ಡಾ. ಎಚ್‌. ಜೆ. ಲಕ್ಕಪ್ಪಗೌಡರು ಇದೀಗ ಕನ್ನಡ ವಿಶ್ವವಿದ್ಯಲಯದ ಕುಲಪತಿಗಳಾಗಿ ಈ ಗ್ರಂಥವನ್ನು ಪ್ರಕಾಶನ ಪಡಿಸುತ್ತಿದ್ದಾರೆ. ಮೂರೂ ಜನ ಗೆಳೆಯ ಕುಲಪತಿಗಳ ಉಪಕಾರವನ್ನೂ ಉತ್ತೇಜನವನ್ನೂ ಎದೆತುಂಬಿ ನೆನೆಯುತ್ತೇನೆ.

ದೇಶೀಯ ಮೂಲದ ಬೇರು ಕಾಂಡ ಚಿಗುರಗಳಿರುವ ಇಂಥ ಸಾಂಸ್ಕೃತಿ ಆಕೃತಿಗಳ ಶೋಧ ಮತ್ತು ಅವುಗಳಿಗೆ ಪುನರ್‌ ಜನ್ಮ ಕೊಡುವ ವಿಶ್ಲೇಷಣೆ ಜರೂರು ನಡೆಯಬೇಕಾಗಿರುವ ಸಾಹಿತ್ಯ ಚಟುವಟಿಕೆ. ಜೈನ ಪರಂಪರೆಯ ಅವಿಭಾಜ್ಯ ಘಟಕವಾಗಿ ಬೆಳೆದು ಕನ್ನಡ ಸಂಸ್ಕೃತಿಯಲ್ಲಿ ಆಳವಾಗಿ ಕಾಲೂರಿರುವ ನೋಂಪಿಯ ಕಥೆಗಳು ಬೆಳಕು ಚೆಲ್ಲುವ ವಿಭಿನ್ನ ಪಾತಳಿಗಳ ಅಧ್ಯಯನ ವ್ಯಾಪಕವಾಗಿ ನಡೆದಿಲ್ಲದಿರುವುದಕ್ಕೆ ಅವು ಸುಲಭವಾಗಿ ಸಿಗದಿರುವುದೂ ಒಂದು ಕಾರಣ. ಉಪಲಬ್ಧ ನೋಂಪಿ ಕಥಾ ಸಾಹಿತ್ಯ ಅಪಾರವಾಗಿದೆ. ತಬ್ಬಿಬ್ಬು ಗೊಳಿಸುವಷ್ಟು ಅಗಾಧವಾಗಿದೆ. ಅದರ ಸಂಚಯ, ಸಂಕಲನ ಸಂಶೋಧನೆ, ಸಂತುಲನ ಮತ್ತು ವಿಮರ್ಶೆಯ ಆಯಾಮಗಳು ಇನ್ನೂ ತೆರೆದ ಬಾಗಿಲು. ಸಮ್ರವೂ ವ್ಯವಸ್ಥಿತವೂ ಆದ ಸಾಂಗೋ ಪಾಂಗ ವ್ಯಾಸಂಗಕ್ಕೆ ಈ ಸಂಪುಟ ಒಂದು ಮಂಚ, ಜಗತಿ.

ಜೈನಕಥಾಕೋಶ, ವಡ್ಡಾರಾಧನೆ ಮತ್ತು ನೋಂಪಿಯ ಕಥೆಗಳ ಮೂಲಕ ಒಟ್ಟು ನಾಲ್ಕು ನೂರಕ್ಕೂ ಹೆಚ್ಚಿನ ಕಥೆಗಳ ಬಾಗಿನವನ್ನು ಕನ್ನಡ ಓದುಗರ ಮಡಿಲಿಗೆ ಇಡುವುದು ಸಾಧ್ಯವಾಯಿತೆಂಬುದು ನನ್ನ ನಿರಂತರ ಸಾಹಿತ್ಯ ಕೃಷಿಗೆ ಸಿಕ್ಕ ಸತ್ಫಲವೆಂದು ನಂಬಿದ್ದೇನೆ ತೊಂಬತ್ತೇಳು ವರ್ಷ ಬಾಳಿದ ನನ್ನ ತಾಯಿ ಪದ್ಮವಾವತಮ್ಮ ತನ್ನ ನಿಡುಬಾಳಿನಲ್ಲಿ ಹತ್ತಾರು ನೋಂಪಿಗಳನ್ನು ಸುಮಾರ ೭೦ ವರ್ಷ ಆಚರಿಸಿದ್ದರು. ಅನೇಕ ನೋಂಪಿಗಳು ಅವರಿಗೆ ಕಂಠಪಾಠವಾಗಿದ್ದುವು. ಅವರಿಂದಲೂ ನನ್ನ ತಂದೆ ಶ್ಯಾನುಭೋಗ ಪದ್ಮನಾಭಯ್ಯನವರಿಂದಲೂ ಅನೇಕ ಮಾಹಿತಿ ಅನಾಯಾಸವಾಗಿ ನನಗೆ ಅವಗತವಾಗಿತ್ತು. ಅವರ ಕೃಪೆಯಿಂದ ನೋಂಪಿ ಕಥಾ ಸಾಹಿತ್ಯದ ಅಧ್ಯಯನ ಸುಲಭ ಸಾಧ್ಯವಾಯಿತೆಂಬ ಸಂಗತಿಯನ್ನು ನಿವೇದಿಸುವಾಗ, ತಾಯಿ ತಂದೆಯರು ಕುರೂಡಿ ಗ್ರಾಮದ ಬಸದಿಯಲ್ಲಿ ತನ್ಮಯತೆಯಿಂದ ನೋಂಪಿಯನ್ನು ಆಚರಿಸುತ್ತಿದ್ದ ದೃಶ್ಯವಾಳಿ ನೆನಪಾಗುತ್ತದೆ.

ಪ್ರಸ್ತುತ ಗ್ರಂಥ ಸಂಪಾದನೆಗೆ ಪ್ರಧಾನ ಆಕರವಾಗಿರುವುದು ಡಾ. ಎಂ. ಎಂ. ಕಲಬುರ್ಗಿಯವರ ಮೂಲಕ ಬಂದ ತಾಳೆಯೋಲೆ ಕಟ್ಟು. ಈ ಸಂಪ್ರತಿಕಾರನು ಉಕಾರ ಪ್ರಯೋಗ ಪ್ರವೃತ್ತಿಯುಳ್ಳಾತ; ಇಡುಉದು, ಕೊಡುಉದು; ದೀರ್ಘತ್ವದಲ್ಲಿ ಇರುಸೂದು, ಕೇಳೂದು, ಕೊಡೂದು, ಅಲ್ಲಲ್ಲಿ ತುಸುಗರಿಗಳು ಸೀಳಿ ಇಲ್ಲವೇ ಮುಕ್ಕಾಗಿರುವ ಕಾರಣ ಕೆಲವು ಕಡೆ ಒಕ್ಕಣೆ ತ್ರುಟಿತವಾಗಿದೆ, ಕಂದ-ವೃತ್ತ ಪದ್ಯಗಳು ಅಸಮಗ್ರವಾಗಿವೆ. ತೀರ ಪರಿಮಿತ ಪ್ರಮಾಣದ ಈ ಶಿಥಿಲತೆಯನ್ನು ಬಿಟ್ಟರೆ ಇದು ಉತ್ತಮ ಓಲೆಗರಿ ಗ್ರಂಥ. ಒಂದೇ ಕಟ್ಟಿನಲ್ಲಿ ಸಮಾರು ೬೫ ಕಥೆಗಳಿರುವುದು ಅಪರೂಪವೆ. ಉಳಿದ ೧೭ ಕಥೆಗಳನ್ನು ಬಿ. ಪದ್ಮರಾಜ ಪಂಡಿತರ, ಎರ್ತೂರು ಶಾಂತಿರಾಜ ಶಾಸ್ತ್ರಿಗಳ ಮತ್ತು ನನ್ನ ಪ್ರಕಟಿತ ಸಂಕಲನಗಳಿಂದ ತೆಗೆದುಕೊಂಡಿದೆ. ಜತೆಗೆ ಬಂಧುವರ್ಮಕವಿ ವಿರಚಿತ ಜೀವ ಸಂಬೋಧನಂ ಕಾವ್ಯದಿಂದ ನಾಗಕುಮಾರನ ಕಥೆಯನ್ನೂ ಮಲ್ಲಿಷೇಣ ವಿರಚಿತ ಶ್ರೀ ಪಂಚಮೀ ಕಥೆಯನ್ನೂ ಅಳವಡಿಸಿದೆ.

ಕೃತಜ್ಞತೆ

  • ಡಾ. ಕಮಲಾ ಹಂಪನಾ, ಗುಡಿಬಂಡೆ ಸುರೇಶ ಜೈನ್‌
  • ಪ್ರಸಾರಾಂಗದ ಸುಜ್ಞಾನಮೂರ್ತಿ, ಕೆ. ಎಲ್‌. ರಾಜಶೇಖರ್‌, ಕಲಾವಿದ ಕೆ. ಕೆ. ಮುಕಾಳಿ.
  • ಕುಮಾರಿ ತಮಿಳ್‌ ಸೆಲ್ವಿ, ಅಕ್ಷರ ಸಂಯೋಜಕ ಎನ್‌. ಮಂಜುನಾಥ್‌ ಹಾಗೂ ಸತ್ಯಶ್ರೀ ಪ್ರಿಂಟರ್ಸ್‌‌ನ ಸ್ನೇಹಿತರು.

– ಹಂಪ ನಾಗರಾಜಯ್ಯ

 

 

ಎಷ್ಟೆಷ್ಟೈಸಿರಿ ಪೆರ್ಚುಗುಂ ತನಗೆ ತಾನಷ್ಟಷ್ಟು ಸದ್ಧರ್ಮಕು
ತ್ಕೃಷ್ಟಂ ಮಾಡಲೆವೇಳ್ಕು ನೋಂಪಿಗಳಾ ನಿರ್ಗ್ರಂಥರಂ ನಿಚ್ಚಸಂ
ತುಷ್ಟಂ ಮಾಡಲೆ ವೇಳ್ಕು ಧಾರ್ಮಿಕ ಜನಕ್ಕಾಧಾರವಾಗಲ್ಕೆವೇ
ಳ್ಕಷ್ಟುಂ ತಾಂ ಸುಕೃತಾನುಬಂಧಿ ಸುಕೃತಂ ರತ್ನಾಕರಾಧೀಶ್ವರಾ ||
– ರತ್ನಾಕರವರ್ಣಿ, ೧೫೫೭, ರತ್ನಾಕರ ಶತಕ

ತನುಮಂ ಸಂಘದ ಸೇವೆಯೊಳ್‌‍ ಮನಮನಾತ್ಮ ಧ್ಯಾನದಭ್ಯಾಸದೊಳ್
ಧನಮಂ ದಾನ ಸುಪೂಜೆಯೊಳ್
ದಿನಮನರ್ಹದ್ಧರ್ಮಕಾರ್ಯ ಪ್ರವ
ರ್ತನೆಯೊಳ್ ಪರ್ವ ವನೊಲ್ದು ನೋಂಪಿಗಳೊಳಿರ್ದಾಯುಷ್ಯಮಂ ಮೋಕ್ಷ ಚಿಂ
ತನೆಯೊಳ್
ತೀರ್ಚುವ ಸದ್ಗೃಹಸ್ತನನಘಂ ರತ್ನಾಕರಾಧೀಶ್ವರಾ ||
– ರತ್ನಾಕರವರ್ಣಿ, ೧೫೫೭, ರತ್ನಾಕರ ಶತಕ

ಪುಲಿಯ ಮೀಸೆಯನಂಜದುಯ್ಯಲನಾಡಪ್ಪುದು ನಂಜನೆಂ
ಜಲಿಸಪ್ಪುದು ಸಿಂಹಮಂ ಪಿಡಿದೇಱಲಪ್ಪುದು ಕಿಚ್ಚಿನೊಳ್

ತೊಲಗದೊರ್ಮೆಯೆ ಪಾಯಲಪ್ಪುದು ಸೊಕ್ಕಿದಾನೆಗೆ ಸಂದುದುಮಾ
ರ್ಮಲೆಯಪ್ಪುದು ನಿನ್ನ ನೋಂಪಿಗೆ ಗಂಡನಾವನೊ ಸೈರಿಪಂ || ೧ – ೧೬೯
– ನಯಸೇನ, ೧೧೧೨, ಧರ್ಮಾಮೃತ

ಸಾಸಿರ ನೋಂಪಿಯೊಂದೆ ಪಾದರದೊಳೆ ಕೆಟ್ಟುಪೋಕುಂ
– ಬ್ರಹ್ಮಶಿವ, ೧೧೫೭, ಸಮಯ ಪರೀಕ್ಷೆ