ಶ್ರೀ ವೀತರಾಗಾಯನಮಃ ||

ಶ್ರೀವರ ಚಂದ್ರಪ್ರಭ ಜಿನ
ಗಾವಮೊಲ್ದೆೞಗಿ ಭಕ್ತಿಯಂ ವಿರಚಿಸುವೆಂ
ಭೂವಿಖ್ಯಾತಮೆನಿಪ್ಪಿ
ಪಾವನತರ ಕಲ್ಪಕುಜದ ನೋಂಪಿಯ ಕಥೆಯಂ ||

|| ವ || ಅದೆಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದಾರ್ಯ್ಯಾಖಂಡದೊಳು ವಸುಭೂಷಣಮೆಂಬುದು ನಾಡು ಭೂತಿಲಕಮೆಂಬುದು ಪೊಳಲದನಾಳ್ವಂ ದೇವ ಪಾಲನೆಂಬರಸನಾತನ ಪಟ್ಟದರಿಸಿ ಲಕ್ಷ್ಮೀಮತಿಯೆಂಬಳಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರ್ದ್ದೊಂದು ದಿವಸಂ ಮತಿಸಾಗರಭಟ್ಟಾರಕರೆಂಬ ದಿವ್ಯ ಜ್ಞಾನಿಗಳು ಬಂದಾಪುರದ ಬಹಿರುದ್ಯಾನವನದೊಳಿರ್ಪ್ಪುದುಂ ವನಪಾಲಕನಿಂದೞೆದು ಬಂದು ಬಲಗೊಂಡು ಫಲವರ್ಚ್ಚನೆಗಳಿಂದರ್ಚ್ಚಿಸಿ ಬಂದಿಸಿ ಮುಂದೆ ಕುಳ್ಳಿರ್ದ್ದು ಧರ್ಮಶ್ರವಣಮಂ ಕೇಳ್ದು ತದನಂತರ ಲಕ್ಷ್ಮೀಮತಿ ಮಹಾದೇವಿ ಕರಕಮಳಂಗಳಂ ಮುಗಿದು | ಸ್ವಾಮಿಯೆನಗಾಉದಾನುಮೊಂದು ನೋಂಪಿಯಂ ದಯೆಗೆಯ್ಯಿಮೆನಲವರು ಕಲ್ಪಕುಜದ ನೋಂಪಿಯನಿಂತೆಂದು ಪೇಳ್ದರಾಉದಾನುಮೊಂದು ನಂದೀಶ್ವರದ ಪೌರ್ನ್ನಮಿಯೊಳ್ಕಯಿ ಕೊಂಡು ಮುಂದಣ ನಂದೀಶ್ವರದ ಪೌವರ್ನ್ನಮಿ ಪರಿಯಂತಂ ದಿನಂಪ್ರತಿ ವೊಂದಡಕೆ || ಯೆರಡೆಲೆ | ಹೂದಿನರಳು ಸಹಿತ ಪಿಡಿಯಕ್ಕಿಯನರ್ಚ್ಚಿಸೂದು | ಸಂಜೆ ಸೊಡರು ತಪ್ಪದೆ ನಾಲ್ಕು ತಿಂಗಳು ನಡಸೂದು | ಕಡೆಯೊಳುಜ್ಜೈಸುವ ಕ್ರಮಮೆಂತನೆ | ಚತುರ್ವ್ವಿಂಶತಿ ತೀರ್ತ್ಥಕರಿಗೆ ಮಹಾಭಿಷೇಕ ಪೂಜೆಯಂ ಸವಿಸ್ತರಂ ಮಾಡಿ | ಯಿಪ್ಪತ್ತನಾಲ್ಕು ಹೂರಿಗೆ ಸೊಲ್ಲಗೆ ತುಪ್ಪ | ಆಯ್ದು ಬೆಲ್ಲದಚ್ಚುಸಹಿತಂ ದೇವರಿಗರ್ಚ್ಚಿಸೂದು | ಹಂನೆರಡು ಹೂರಿಗೆ ಸೊಲ್ಲಗೆ ತುಪ್ಪವೊಂದು ಬೆಲ್ಲದಚ್ಚುಮಂ ಶ್ರುತಕ್ಕರ್ಚ್ಚಿಸೂದು | ತದನಂತರಂ ಕಥೆಯಂ ಕೇಳೂದು | ಕಥನಂ ಮಂನಿಸಿ ಯೇಕ ಭುಕ್ತಮಂ ಕೈಕೊಂಡು | ವೊಂದು ತಂಡ ರುಷಿಯರಂ ನಿಲಿಸೂದು | ಗಂಧವಟ್ಟಲಂ ದೇವರ್ಗ್ಗೆ ಮಾಡಿಸಿ ಕೊಡುಉದು | ಯಿದುಜ್ಜವಣೆಯ ಕ್ರಮ | ಯೀ ನೋಂಪಿಯಂ ಕ್ರಮಂದಪ್ಪದೆ ನೋಂತುಜ್ಜೈಸಲು | ದೇವೋತ್ತಮರಾಗಿ ಪುಟ್ಟುವರೆಂದು ಮುನೀಶ್ವರರು ಪೇಳೆ ಭವತ್ಕುಲತಿಲಕೆ ಕೇಳ್ದು | ಸಂತುಷ್ಟ ಚಿತ್ತೆಯಾಗಿ ನೋಂಪಿಯಂ ಕೈಕೊಂಡು ಗುರುಗಳಂ ಬೀಳ್ಕೊಂಡು ಬಳಿಯಂ ಯಥಾ ಕ್ರಮದಿಂ ನೋಂತುಜ್ಜವಣೆಯಂ ಮಾಡಿ ತತ್ಫಲದಿಂ ತದ್ಭವದೊಳೆ ಸಮಸ್ತ ಭೋಗೋಪ ಭೋಗಂಗಳ್ಗೊಡೆಯರಾಗಿ ಸಮಸ್ತ ದೇವೋತ್ತಮರಾಗಿ | ದಿವ್ಯಸುಖಮನನುಭವಿಸಿ ಬಂದಿಲ್ಲ ಚಕ್ರವರ್ತ್ತಿ ಪದವಿಯಂ ತಾಳ್ದು ಕಡೆಯೊಳು ನಿರ್ವ್ವೇಗ ಪರಾಯಣರಾಗಿ ಪರಂಪರೆಯಿಂ ನಿರ್ವ್ವಾಣ ಪದಕ್ಕೆ ಸಂದಳಿಂತೀ ಕಲ್ಪಕುಜದ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಮಂಗಳ ಮಹಾಶ್ರೀ