|| ಶ್ರೀ ವೀತರಾಗಾಯನಮಃ ||

ಕಲ್ಪಾಮರವೆಂಬ ನೋಂಪಿಯಂ ಶ್ರಾವಣ ಮಾಸದ ಶುಕ್ಲಪಕ್ಷದ ಚಉತಿಯಂದುಪವಾಸಂ ಗೆಯ್ದು ಪೂವಿನ ಮಂಟಪಮಂ ದೇವರ ಮುಂದೆ ಮಾಡಿಸಿ | ಜಿನ ಪ್ರತಮೆಗಭಿಷೇಕಮಂ ಮಾಡಿಸಿ ಅಷ್ಟವಿಧಾರ್ಚ್ಛನೆಯಂ ಮಾಡಿ ನೋಂಪಿಯಂ ಮೊದಲ್ಗೊಂಡು ಮತ್ತಮಿಂತು ಪದಿನೇಳು ಶುಕ್ಲ ಪಕ್ಷದ ಚತುರ್ಥಿಯೊಳಂ ನೋಂತುಜ್ಜವಣೆಯಂ ಮಾಳ್ಪುದಲ್ಲಿ ಪುಷ್ಪಕ ವಿಮಾನಮಂ ಮಾಡಿಸಿ ಪ್ರತುಮೆಯನರ್ಚ್ಚಿಸಿ ನೋಂಪಿಯಂ ಮಾಳ್ಪುದು | ಬಸ್ತಿಗೆ ಪಂಚರತ್ನಮಂ ಕೊಡುಉದುಮಿದುಜ್ಜವಣೆಯ ಕ್ರಮ | ಮಿಂತೀ ನೋಂಪಿಯಂ ಸಮ್ಯಕ್ತ್ವಪೂರ್ವ್ವಕಂ ನೋಂತವರ್ಗ್ಗಳು ಮಱು ಭವದೊಳು ಪಂಚರತ್ನದಿಂ ಮಾಡಿದ ಯೇಳು ವೊಂಭತ್ತು ನೆಲೆಯ ವಿಮಾನಂಗಳ್ಗೊಡೆಯರಾಗಿ ಸಮವಸರಣ ವಿಭೂತಿಯೊಳು ಅಷ್ಟ ಮಹಾಪ್ರಾತಿಹಾರ್ಯ್ಯದೊಳ್ಕೂಡಿಯರ್ಹತ್ಪರಮೇಷ್ಠಿ ಶ್ರೀಯಂ ಪಡೆವರು | ಮಂಗಳ ಮಹಾಶ್ರೀ