ಶ್ಲೋ || ಪಾರ್ಶ್ವನಾಥಜಿನಂ ನತ್ವಾ
ಸರ್ವಸಂಪತ್ಸಮೃದ್ಧಿದಂ
ಕಥಾಂ ಕಲ್ಯಾಣಮಾಲಾಖ್ಯಾಂ
ವಕ್ಷ್ಯೇ ಮೋಕ್ಷೈಕ ಸಾಧಕಂ ||

ವ || ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದೊಳು ಕ್ಷೋಣೀಭೂಷಣಮೆಂಬುದುನಾಡು ಭೂತಿಳಕ ಮೆಂಬುದು ಪೊಳಲದನಾಳ್ವಂ ಧರ್ಮಪಾಲನೆಂಬರಸನಾತನ ಪಟ್ಟದರಿಸಿ ಧರ್ಮಪಾಲೆಯೆಂಬಳು | ಆ ಈರ್ವರು ದಂಪತಿಗಳುಂ ಸುಖಸಂಕಥಾ ವಿನೋದದಿನಿರಲೊಂದು ದಿವಸಂ | ಭದ್ರಸಾಗರ ಭಟ್ಟಾರಕರೆಂಬವಧಿಜ್ಞಾನಿಗಳು ಬಂದಾಪುರದ ಬಹಿರುದ್ಯಾನ ವನದೊಳಿರ್ದ್ದುದಂ ವನಪಾಳಕನಿಂದರಿದು ಬಂದು ಪಲವರ್ಚ್ಚನೆಗಳಿಂದರ್ಚಿಸಿ ವಂದಿಸಿ ಮುಂದೆಕುಳ್ಳುರ್ದ್ದು ನಿರ್ಮಲಾಂತರಂಗ ಸಂಗತರಾಗಿ ಧರ್ಮಪರಿಣತಿಯಿಂದ ಧರ್ಮಶ್ರವಣಮಂ ಕೇಳಿ ತದನಂತರಂ ಧರ್ಮಪಾಲೆ ಕರಕಮಳಮಂ ಮುಗಿದು ಸ್ವಾಮಿ ಯನಗಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರು ರೂಪಾತಿಶಯ ನಿತ್ಯಸುಖ ಸಪ್ತಪರಮಸ್ಥಾನದ ನೋಂಪಿಯಂ ಮೊದಲಾದ ರೊಳುತ್ತಮೋತ್ತಮಮಪ್ಪ ಕಲ್ಯಾಣಮಾಲೆಯೆಂಬ ನೋಂಪಿಯನಿಂತೆಂದು ಪೇಳ್ದರು ಆವುದಾನುಮೊಂದು ನಂದೀಶ್ವರದೆಂಟುದಿನದೊಳು ನೋಂಪಿಯಂ ಕೈಕೊಂಡು ಮುಂದಣ ನಂದೀಶ್ವರದ ಪೌರ್ಣ್ನಮಿ ಪರ್ಯಂತಂ ನಡಸುವ ಕ್ರಮಮೆಂತೆಂದೊಡೆ ದಶಮಿ ದಶಮಿಯದಿನದೊಳು ಪಾರ್ಶ್ವತೀರ್ಥಕರರಿಗೆ ಪಂಚಾಮೃತಾಭಿಷೇಕ ಒಂದು ಹೂವಿನ ಮಾಲೆ ಒಂಮನಕಡಲೆ ಯೆಂಟಡಕೆ ಯೆಂಟೆಲೆ ಒಂದು ಬೆಲ್ಲದಚ್ಚು ವೊಡ್ಡಚರು ಆವುದಾನೊಂದು ಭಕ್ಷವಂ ಮಾನಕ್ಕಿಯಿಂದೈದು ಅಕ್ಷತೆಯ ಪುಂಜಗಳುಸಹಿತ ಅಷ್ಟವಿಧಾರ್ಚನೆಯಂ ನಾಲ್ಕು ತಿಂಗಳು ವರಂ ನಡಸುವುದು ಆ ಬಳಿಕ ಶ್ರುತಗುರು ಪೂಜೆಯಂ ಮಾಡುವುದು. ಕಡೆಯೊಳುಜ್ಜೈಸುವ ಕ್ರಮವೆಂತೆಂದರೆ ಪಾರ್ಶ್ವತೀರ್ಧಕರಿಗೆ ಮಹಾಭಿಷೇಕಮಂ ಮಾಡಿ ಇಪ್ಪತ್ತು ನಾಲ್ಕು ಹೂರಿಗೆ ಇಪ್ಪತ್ತು ನಾಲ್ಕು ಕರಜೀಕಾಯಿಕಾಯಿ ಆಯಿವತ್ತು ನಾಲ್ಕು ಚಕ್ಕುಲಿ ಐವತ್ತು ನಾಲ್ಕು ಮೋದಕ ಐವತ್ತು ನಾಲ್ಕು ಬೆಲ್ಲ ಐವತ್ತು ನಾಲ್ಕು ಅಡಿಕೆ ಐವತ್ತು ನಾಲ್ಕು ಎಲೆ ಐವತ್ತುನಾಲ್ಕು ಅಕ್ಷತೆಯ ಪುಂಜಂಗಳಿಂ ದೊಡ್ಡಚರು ಸಹವಾಗಿ ಅಷ್ಟವಿಧಾರ್ಚನೆಯಂ ಮಾಡಿ ತದನಂತರಂ ಶ್ರುತಕ್ಕೆ ನಾಲ್ಕು ಹೂರಿಗೆ ಮೊದಲಾದವರಿಂ ಗಣಧರರುಗಳಿಗೆ ಮೂರು ಹೂರಿಗೆ ಮೊದಲಾದವರಿಂದಷ್ಟವಿಧಾರ್ಚನೆಯಂ ಮಾಡಿ ತದನಂತರಂ ಅಜ್ಜಿಯರ್ಗ್ಗೆ ಆಯಿದುಹೂರಿಗೆ ಒಂದುಬೆಲ್ಲದಚ್ಚು ಐಯ್ದಡಕೆ ಐಯ್ದೆಲೆಯು ಮನೊಂದು ಬೆಸವಣಿಗೆಯೂಳಿಕ್ಕಿ ಬಾಯಿನಮಂ ಕೊಟ್ಟು ತದನಂತರಂ ಕಥಕಗೊಂದು ಬಾಯಿನಮಂ ಕೊಟ್ಟು ಕಥೆಯಂ ಕೇಳ್ದು ಯೇಕ ಭುಕ್ತಮಂ ಕೈಕೊಂಡು ಒಂದು ತಂಡ ಋಷಿಯರಂ ನಿಲ್ಲಿಸೂದು ನೋನಿಸಿದ ಅಜ್ಜಿಯರ್ಗ್ಗೆ ಉಡಕೊಡುವದು ನಿರಂತರಾಯಂ ಮಾಡಿಸೂದು ಸಮ್ಯಗ್ಧೃಷ್ಟಿಬ್ರಾಹ್ಮಣ ಮಿಥುನಕ್ಕೆ ಉಣಲಕ್ಕಿ ಕೊಡುವುದು ಉಡಕೊಡುವುದು ಯಿದಕ್ಕೆ ಶಕ್ತಿಯಿಲ್ಲದೊಡಂ ಯಥಾಶಕ್ತಿಯಿಂ ಮಾಳ್ಪುದು ಇದು ವುಜ್ಜವಣೆಯ ಕ್ರಮಂ ತಪ್ಪದೆ ನೋಂತುಜ್ಜಯಿಸಲು ದೇವೋತ್ತಮರಾಗಿ ಪುಟ್ಟುವರೆಂದು ಪರಮ ಋಷೀಶ್ವರರು ಪೇಳೆ ಧರ್ಮಪಾಲೆಯೆಂಬರಸಿ ಕೇಳ್ದು ಸಂತುಷ್ಟಚಿತ್ತೆಯಾಗಿ ನೋಂಪಿಯಂ ಕೈಕೊಂಡು ಗುರುಗಳಂ ಬೀಳ್ಕೊಂಡು ಯಥಾಕ್ರಮದಿಂ ನೋಂತುಜ್ಜಯಿಸಿ ತತ್ಫಲದಿಂ ತದ್ಭವದೊಳೆ ಸಕಲ ಸಾಮ್ರಾಜ್ಯ ಶ್ರೀಯನನುಭವಿಸಿ ಫಲವುಂ ಮಕ್ಕಳಂ ಪಡೆದು ಭವ್ಯೋತ್ತಮ ಶ್ರೇಷ್ಠರುಗಳಾಗಿ ನೆಗಳ್ದು ಭವಭವಾಂತರದೊಳು ದೇವೋತ್ತಮರಾಗಿ ಪರಂಪರೆಯಿಂ ನಿರ್ವಾಣಕ್ಕೆ ಸಂದರಿಂತೀ ಕಲ್ಯಾಣ ಮಾಲಾ ನೋಂಪಿಯಂ ನೋಂತವರ್ಗಂ ನೋನಿಸಿದವರ್ಗ್ಗಂ ತದನುಮತವ ನೆಯ್ದಿದವರ್ಗ್ಗಂ ಜಯಮಂಗಳ ಮಹಾ || ಶ್ರೀ ಶ್ರೀ