ಪುಲ್ಲಶರವಿಜಯ ಯರಜಿನ
ವಲ್ಲಭರಡಿದಾವರೆಗಳಿಗೆರಗಿ ಪೇಳ್ವೆಂ
ಸಲ್ಲಲಿತರ ಹಿತಕಾರಣ
ವಲ್ಲವೆ ಕೈವಲ್ಯಸುಖಾಷ್ಟಮಿ ನೋಂಪಿಯ ಕಥೆಯಂ ||

ವ || ಅದೆಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದೊಳು ನೇಪಾಳಮೆಂಬುದು | ಶ್ರೀಪುರಮೆಂಬ ಪೊಳಲದನಾಳ್ವ ಭೂಪಾಳನೆಂಬರಸನಾತನ ಪಟ್ಟದರಸಿ | ರೂಪವತಿ ಯೆಂಬಳಂತವರೀರ್ವರುಂ | ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರಲಾ | ಪೊಳಲ ರಾಜಶ್ರೇಷ್ಠಿಯಪ್ಪವಂ | ಶ್ರೀವರ್ಮ್ಮನೆಂಬನಾತನಸ್ತ್ರೀ ಶ್ರೀಮತಿಯೆಂಬಳವರೀರ್ವ್ವರ್ಗ್ಗಂ ಪುಟ್ಟಿದಮಕ್ಕಳು ನವನಾಗ ಸಹಸ್ರಬಳ | ಜಯಸೇನ | ವಿಜಯಸೇನ | ಧರ್ಮ್ಮಸೇನ | ನಯಸೇನ | ದಮವರಸೇನ | ಕೀರ್ತ್ತಿಸೇನ | ಭದ್ರಸೇನ | ಕಾಳಸೇನ | ವರಸೇನರೆಂಬ ಪದಿಂಬರ್ಗ್ಗಂಡುಮಕ್ಕಳು | ಯಿವರಿಂ ಕಿರಿಯಳು ಬಂಧುಶ್ರೀಯೆಂಬ ಮಗಳು ಪುಟ್ಟಿ | ಶೈಶವಮಂ ಪತ್ತುವಿಟ್ಟು | ನವಯವ್ವನಪ್ರಾಪ್ತಿಯಾಗಿ | ರೂಪಲಾವಣ್ಯದೊಳಂ | ಹಾವಭಾವವಿಲಾಸ ವಿಭ್ರಮದೊಳಂ ಸಮಸ್ತ ಕಲಾಪ್ರೌಢಿಯೊಳಂ ಕೂಡಿರ್ಪ್ಪುದುಮಿತ್ತಲು ಕಾಶ್ಮೀರವಿಷಯದ | ಚಿತ್ರಾಂಗಪುರದ ರಾಜಶ್ರೇಷ್ಠಿ ಧನಮಿತ್ರನೆಂಬನಾತನ ಪತ್ನಿ | ಧನವತಿಯೆಂಬಳಂತವರೀರ್ವ್ವರ್ಗ್ಗಂ ಪುಟ್ಟಿದ ಮಗಂ | ಧನಪಾಳನೆಂಬನಾತಂ | ನೂರಿಪ್ಪತ್ತುಕೋಟಿ ದ್ರವ್ಯಕ್ಕೊಡೆಯನಾಗಿರ್ದ್ದು ಬಂಧು ಶ್ರೀಯ ಸಕಲಕಲಾ ಗುಣಾತಿಶಯಮಂ ಕೇಳ್ದಾಸಕ್ತಚಿತ್ತನಾಗಿ | ಬಂದು ಪದಿನಾರು ಕೋಟಿದ್ರವ್ಯಮಂ ಧನಮಿತ್ರಂಗೆ ಕೊಟ್ಟು ಬಂಧುಶ್ರೀಯಂ ಮದುವೆನಿಂದು | ಮಗುಳ್ದು ತಂನ ಪೊಳಲ್ಗೆ | ಬಂಧು ಶ್ರೀಯಂ | ತಾನುಂ ಕಾಮರಾಗ ಸಾಗರದೊಳೋಲಾಡುತ್ತ ಮಿರ್ಪ್ಪಿನಮೊಂದುದಿವಸ ಬಂದು ಸ್ತ್ರೀಯ ಪುಣ್ಯದೇವತೆ ಋಷಿರೂಪಂ ತಳೆದು ಬರ್ಪ್ಪಂತೆ | ಸರ್ವ್ವಭೂಹಿತರೆಂಬ ಭಟ್ಟಾರಕರೆಂಬ ದಿವ್ಯಜ್ಞಾನಿಗಳು | ಪಂಚಶತಮಿ ತಋಷಿಸಮಿತಿಸಹಿತಂ | ಗ್ರಾಮೇಕರಾತ್ರಂ ನಗರೇ | ಪಂಚರಾತ್ರಮಟವ್ಯಾಂ ದಶರಾತ್ರಮೆಂಬ ಜಿನೋಪದಿಷ್ಟದಿಂ ವಿಹಾರಿಸುತ್ತಂ ಬಂದಾ | ಚಿತ್ರಾಂಗಪುರದ ಬಹಿರುದ್ಯಾನವನದೊಳು | ನಿರ್ಜ್ಜಂತುಕ ಶಿಲಾತಳದೊಳು ಕುಳ್ಳಿರ್ದ್ದು | ಪಂಚಾಚಾರ ಪರಿಹಾರಮಪ್ಪ ಪ್ರತಿಕ್ರಮಣ ನಿಯಮಂ ಗೆಯ್ಯುತ್ತಿರ್ದ್ದರಂ ಕಂಡು ವನಪಾಳಕಂ ಬಂಧು ಶ್ರೀಯಗಂ | ಧನಪಾಲಂಗಂ ಪೇಳೆ ಕೇಳ್ದು | ಸಂತುಷ್ಟಚಿತ್ತದಿಂರ್ಚನಾದ್ರವ್ಯಂಗಳಂ ಕೊಂಡುಪೋಗಿ | ಗುರುಪರಿವಿಡಿಯಿಂದರ್ಚ್ಚಿಸಿ ಬಂದಿಸಿ | ಬಳಿಯಂ ಪಿರಿಯಗುರುಗಳ ಮುಂದೆ ಕುಳ್ಳಿರ್ದ್ದು | ನಿರ್ಮ್ಮಳ ಚಿತ್ತದಿಂದ ದರ್ಮ್ಮಸ್ವರೂಪಮಂ ಕೇಳ್ದು ತದನಂತರಂ | ಬಂಧುಶ್ರೀ ಕರಕಮಳಂಗಳಂ ಮುಗಿದು | ಯೆಲೆಸ್ವಾಮಿ ಯನಗಿನಿತೊಂದು | ವಿಭವಾತಿಶಯಮಾವ ಪುಣ್ಯದ ಫಲದಿಂದಾದುದು ಬೆಸಸಿಮೆನೆಲವರಿಂತೆಂದು ಪೇಳ್ದರು | ನೀನು ಈಭವಕ್ಕೆ ಮೂರನೆಯರಿಭವದೊಳು | ಕೈವಲ್ಯಸುಖಾಷ್ಟಮಿಯ ನೋಂಪಿಯಂ ನೋಂತ ಫಲಮೆನಲವಂತೆನ್ದರೀ | ಜಂಬೂದ್ವೀಪದ ಭರತಕ್ಷೇತ್ರದೊಳು ಮಗಧೆಯೆಂಬುದು | ನಾಡು ರಾಜಗೃಹಮೆಂಬುದು ಪೊಳಲದನಾಳ್ವಂ | ಪ್ರತಾಪಂಧರನೆಂಬ ಮಹಾಮಂಡಲೇಶ್ವರನಾತನ ಮನೋನಯನವಲ್ಲಭೆ ವಿಜಯಾವತಿ ಮಹಾದೇವಿಯೆಂಬಳಂತವರೀರ್ವ್ವರುಂ | ಗಿಳಿಯದಂಪತಿಗಳಂತೆ | ಅತಿರಾಗಾನುರಂಜಿತ ಮನಸ್ಸಹಿತರಾಗಿ | ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯುತ್ತಮಿರ್ದ್ದರಾ ಪುರದಲ್ಲಿ ಬಡಪರದನೋರ್ವಂ | ಕನಕಪ್ರಭನೆಂಬನಾತನ ಪೆಂಡತಿ ಕನಕಮಾಲೆಯೆಂಬಳೊಂದು ದಿವಸಂ | ದೇವಪಾಲಮುನಿಗಳೆಂಬ ದಿವ್ಯತಪೋನಿಧಿಗಳು | ಮಾಸೋಪವಾಸದ ಪಾರಣೆ ವೇಳೆಯೊಳು | ಚರ್ಯ್ಯಾಮಾರ್ಗದಿಂ ಬರೆ ಕಂಡು | ಬಡವಂ ಕಡಾರ ದ್ರವ್ಯಮಂ ಕಂಡಂತೆ | ಕುರುಡಂ ಕಣ್ಬಡೆದಂತೆ ರೋಗಿ ದಿವ್ಯೌಷಧಮಂ ಪಡೆದಂತೆ | ಚಿಂತಾತುರಂ ಚಿಂತಾರತ್ನಮಂ ಪಡೆದಂತೆ | ವಂದಿಋಂದಂ ದಿವಿಜಕುಜಮಂ ಕಂಡಂತೆ | ರಾಗರಸದೊಳೋಲಾಡುತ್ತಮಿದಿರಂ ಬಂದು | ತ್ರಿಕರಣಶುದ್ಧಿಯಿಂ ತ್ರಿಃಪ್ರದಕ್ಷಿಣಂಗೆಯ್ದು ಬಂದಿಸಿ ನಿಲಿಸಿ | ನಮವಿಧಪುಣ್ಯದೊಳ್ನೆರದು | ಸಪ್ತಗುಣಸಮನ್ವಿತೆಯಾಗಿ ದಾನಂಗೊಟ್ಟು ನಿರಂತರಾಯಂಮಾಡಿಸಿ | ಬಳಿಕಂ | ಕರಕಮಳಮುಕುಳಿತೆಯಾಗಿ | ಸ್ವಾಮಿ ಯೆನಗಾವುದಾ ನೊಂದು ನೋಂಪಿಯಂ ಬೆಸಸಿಮೆನಲವರು | ಕೈವಲ್ಯಸುಖಾಷ್ಟಮಿಯಂ ನೋಂಪುದೆನಲಾ | ನೋಂಪಿಯ ವಿಧಾನಮೆಂತೆನೆ | ಆಷಾಢಮಾಸದ ನಂದೀಶ್ವರದ ಅಷ್ಟಮಿಯೊಳೂ ನೋಂಪಿಯಂ ಕೈಕೊಂಡು | ಕಾರ್ತ್ತಿಕನಂದೀಶ್ವರ ಅಷ್ಟಮಿಪರ್ಯ್ಯಂತಂ ನೋಂಪುದು | ನೋಂಪವರೆಲ್ಲಂ | ದಂತಧಾವನ ಸ್ನಾನಾಧಿಗಳಂ ಮಾಡಿ ಶುಚಿರ್ಭ್ಭೂತರಾಗಿ | ಅಭಿಏಕಾಷ್ಟವಿಧಾರ್ಚ್ಚನೆ ವೆರಸು | ಚೈತ್ಯಗೇಹಕ್ಕೆ ಬಂದು | ದೇವರ್ಗ್ಗೆ ಅಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿ | ಇಪ್ಪತ್ತನಾಲ್ಕು ಬಿಸೂರಿಗೆಯಂ | ಹಾಲುತುಪ್ಪಂಬೆರಸು ದೇವರ್ಗ್ಗರ್ಚ್ಚಿಸೂದು | ತಂದನಂತರಂ | ಶ್ರುತಪೂಜೆಯಂ ಮಾಡಿ | ಗುರುಪಾದಾರ್ಚ್ಚನೆಗೆಯ್ದು ಬಳಿಯಂ | ಗುರುಗಳ ಸಮಕ್ಷಮದೊಳುಪವಾಸಮಂ ಕೈಕೊಂಬುದು | ಆರದೊಡೇಕಠಾಣದಿಂ ದೇಕಭುಕ್ತಮುಮಂ ಕೈಕೊಂಬುದು | ತ್ರಿಕರಣಶುದ್ಧಿಯಿಂ ಕಥೆಯಂ ಕೇಳುವುದು | ಇಪ್ಪತ್ತು ನಾಲ್ಕು ಹೂರಿಗೆಯಂ ಹಾಲುತುಪ್ಪಂಬೆರಸು | ನೋನಿಸುವೆವರ್ಗ್ಗೆ ಬಾಯಿನಮಂ ಕೊಡುವುದು | ಕ್ರಮದಿಂ ಮುಂದಣಷ್ಟಮಿಗಳೊಳು ನೋಂತು ಕಾರ್ತ್ತಿಕ ನಂದೀಶ್ವರದಷ್ಟಮಿ ಯೊಳುಜ್ಜವಣೆಯಂ ಮಾಲ್ಪಕ್ರಮಮೆಂತೆನೆ ದೇವರ್ಗ್ಗೆ ಮಹಾಭಿಷೇಕ ಪೂಜೆಯಂ ಸವಿಸ್ತರಂ ಮಾಡಿ ದೇವರ ಮುಂದೆ | ಪಡೆದಂತಪ್ಪ ಧಾನ್ಯಗಳಂ | ಪುಂಜಮಂ ಮಾಡುವುದು | ಅದರ ಫಲಂಗಳಂ ಬೆಸಗೊಳವಪ್ಪೇಳ್ದಪರು ಯಳ್ಳನರ್ಚ್ಚಿಸಿದ ಫಲದಿಂ ಕಳಂಕಮಿಲ್ಲದಿರ್ಪ್ಪುರು | ಉಪ್ಪನರ್ಚ್ಚಿಸಿದ ಫಲದಿಂ ತಪ್ಪಿಲ್ಲದ ನುಡಿಯಿಂದೊಪ್ಪಂ ಬಡೆದಿರ್ಪ್ಪರು | ಅಕ್ಕಿಯನರ್ಚ್ಚಿಸಿದ ಫಲದಿಂ | ತಪ್ಪಿಲ್ಲದ ನುಡಿಯಿಂದೊಪ್ಪಂ ಬಡೆದಿರ್ಪ್ಪರು | ಅಕ್ಕಿಯನರ್ಚ್ಚಿಸಿದ ಫಲದಿಂ ಮಕ್ಕಳಂ ಪಲಂಬರಂ | ಪಡೆವರು | ಬೇಳೆಯಿನರ್ಚ್ಚಿಸಿದಫಲದಿಂ | ಕೀಳುಜಾತಿಗಳೊಳೆಲ್ಲಿಯುಂ ಪುಟ್ಟರು | ಗೋಧಿಯನರ್ಚ್ಚಿಸಿದ ಫಲದಿಂ | ಮೇಧಾವಿಗಳಪ್ಪರು | ಕಡಲೆಯನರ್ಚ್ಚಿಸಿದ ಫಲದಿಂ | ಬಡತನಮಿಲ್ಲದಿರ್ಪ್ಪರು | ತೊಗರಿಯನರ್ಚ್ಚಿಸಿದ ಫಲದಿಂ | ಮದ್ದಂ ಕುಡಿಯದಿರ್ಪರು | ಹೆಸರನರ್ಚ್ಚಿಸಿದ ಫಲದಿಂ | ಹೊಸವೊಂನ ತೊಡಿಗಯಂ ತೊಡುವರು | ಹಲಸಂದಯನರ್ಚ್ಚಿಸಿದ ಫಲದಿಂ | ಕುಲಕೆ ತಿಲಕಮಾಗಿಪ್ಪರು | ನವಣೆಯನರ್ಚ್ಚಿಸಿದ ಫಲದಿಂ | ಬವರಮಿಲ್ಲದಿರ್ಪ್ಪರು | ನೆಲ್ಲನರ್ಚ್ಚಿಸಿದ ಫಲದಿಂದೆಲ್ಲರ್ಗ್ಗಂ ಬಲ್ಲಿದರಾಗಿರ್ಪ್ಪರು | ದೊರೆಕೊಂಡಂತಪ್ಪಧಾನ್ಯಂಗಳನೊಮ್ಮಾ ನೊಮ್ಮಾನಮಂ ಪುಂಜಮಂಮಾಳ್ಪುದು | ದೊರೆಕೊಂಡಂತಪ್ಪ ಫಲಂಗಳನರ್ಚ್ಚಿಸೂವುದು | ಯಿಪ್ಪತ್ತು ನಾಲ್ಕು ಹೂರಿಗೆಯಂ | ಹಾಲು ತುಪ್ಪಂ ಬೆರಸು ದೇವರಿಗರ್ಚ್ಚಿಸುವುದು | ತದನಂತರಂ | ಶ್ರುತಮನಳಂಕರಿಸಿ | ಶ್ರುತವಸ್ತ್ರಸಹಿತ ಶ್ರುತಪೂಜೆಯಂ ಮಾಳ್ಪುದು | ಗುರುಪಾದಾರ್ಚ್ಚನೆ ಗೆಯ್ದು ಕತೆಯಂ ಕೇಳ್ದು ದಕ್ಷಿಣೆ ಸಹಿತಂ ಕಥಕನಂ ಪೂಜಿಸುವುದು | ಯಿಪ್ಪತ್ತುನಾಲ್ಕು ಹೂರಿಗೆಯಂ | ಹಾಲುತುಪ್ಪಂ ಬೆರಸು ನೋನಿಸಿದವರ್ಗ್ಗೆ ಬಾಯಿನಮಂ ಕೊಡುವುದು | ಯಥಾಶಕ್ತಿಯಿಂ ಚಾತುರ್ವ್ವರ್ಣ್ನಕ್ಕಾಹಾರ ದಾನ ಸುವರ್ಣ್ನ ದಾನಮಂ ಮಾಳ್ಪುದು | ಮತ್ತಂ ಬಡವರೊಡೆಯರೆಂನದೆ ಯಥಾಶಕ್ತಿಯಿಂ ಭಕ್ತಿಪೂರ್ವಕಂ ನೋಂಪುದು ಉಜ್ಜವಣೆಯಕ್ರಮಮೇನೆಂದು ಪೇಳೆ ಕೇಳ್ದು | ಕನಕಮಾಲೆ ಸಂತುಷ್ಟಚಿತ್ತೆಯಾಗಿ ಗುರುಗಳಂ ಬೀಳ್ಕೊಂಡು ಸುಖದಿಂದಿರ್ದ್ದು | ನೋಂಪಿಯ ದಿನಂ ಬರೆ | ಯಥಾಕ್ರಮದಿಂ ನೋಂತುಜ್ಜಯಿಸಿ | ತತ್ಫಲದಿಂ ತದ್ಭವದೊಳೆ ಬಡತನಮಂ ಪತ್ತುವಿಟ್ಟು ಸಮಸ್ತ ಧನಕನಕ ಸಮೃದ್ಧರಾಗಿ | ಪಲಂಬರ್ಮ್ಮಕ್ಕಳಂ ಪಡೆದು ಪಲ ಕಾಲಂ ಸುಖಮನನುಭವಿಸಿ | ತುದಿಯಳ್ವಿಶಿಷ್ಟ ವೈರಾಗ್ಯ ಪರಾಣೆಯಾಗಿ | ಕನಕಪ್ರಭಂ ದೇವಪಾಳಮುನಿಗಳ ಸಮೀಪದೊಳು ಜಿನದೀಕ್ಷೆಯಂ ಕೈಕೊಂಡು | ವುಗ್ರೋಗ್ರ ತಪದೊಳು ನೆಗಳ್ದಂತ್ಯಕಾಲದೊಳಂ | ಸಮಾಧಿವಿಧಿಯಿಂ | ಶರೀರಭಾರಮನಿಳಿಪಿ ಸೌಧರ್ಮ್ಮಕಲ್ಪದೊಳ್ಮಹರ್ದ್ದಿಕ ದೇವನಾಗಿಪುಟ್ಟಿ ಬಂದಿಲ್ಲಿ ಧನಪಾಳನಾದಂ | ಕನಕಮಾಲೆಯುಂ | ಪತಿವಿಯೋಗದಿಂ | ಸಂಸಾರ ಶರೀರ ಭೋಗ ಪರಿತ್ಯಕ್ತ ಪರಾಯಣೆಯಾಗಿ | ಲಕ್ಷ್ಮೀಮತಿ ಕನ್ತಿಯರ ಸಮಕ್ಷದೊಳು ಜಿನ ದೀಕ್ಷೆಯಂ ಕೈಕೊಂಡು ಪರಮೋತ್ಕೃಷ್ಟ ತಪದೊಳು ನೆಗಳ್ದು | ಕಡೆಯೊಳು ಪರಮ ಸಮಾಧಿಯಿಂ ಶರೀರ ಭಾರಮನಿಳಿಪಿಯಾ ಸೌಧರ್ಮ್ಮಕಲ್ಪದ ತತ್ಕನಕಪ್ರಭ ಚರಾಮರಂಗೆ ಪ್ರಾಣವಲ್ಲಭೆಯಾಗಿ ಪುಟ್ಟಿ | ಬಂದಿಲ್ಲಿ ನೀನಾಗಿ ಪುಟ್ಟಿದೆ | ಯೆಂಬುದುಮಾ ನೋಂಪಿಯ ಫಲೋದಯದೊಳಾದ | ಮಹಿಮೆಗೆ ಮೆಚ್ಚಿ ಸಂತೋಷಂಬಟ್ಟು | ಮತ್ತಮಾ ನೋಂಪಿಯಂ ಕೈ ಕೊಂಡು | ಯಥಾವಿಧಾನದಿಂ | ನೋಂತುಜ್ಜಯಿಸಿ | ತತ್ಫಲದಿಂ ಪಲಂಬರ್ಮ್ಮಕ್ಕಳಂ ಪಡೆದು | ಪಲವುಂ ನಿಧಿನಧಾನಂಗಳಿಗೊಡೆಯರಾಗಿ | ಪಲಕಾಲಂ ಸಕಲ ಸಂಸಾರ ಸುಖಮನನುಭವಿಸಿರುತ್ತಂ | ಪರಂಪರೆಯಿಂ ಮೋಕ್ಷಕ್ಕೆ ಸಂದರಿಂತೀ ಕೈವಲ್ಯಸುಖಾಷ್ಟಮಿಯ ನೋಂಪಿಯಂ ತ್ರಿಕರಣಶುದ್ಧಿಯಿಂ | ನೋಂತುವರ್ಗ್ಗಂ | ನೋನಿಸಿದವರ್ಗ್ಗಂ | ಕ್ರಮದಿನೊಡಂಬಟ್ಟರ್ಗ್ಗಂ | ಜಯ ಮಂಗಳಮಹಾ || ಶ್ರೀ ಶ್ರೀ