ಶ್ರೀ ವೀರಜಿನೇಂದ್ರಂಗೆಱಗಿಯೆ
ಪಾವನ ಷಟ್ಕೋಣ ಚಕ್ರ ಗಣಧರ ವಲಯಂ
ಶ್ರೀವರಯೆಂತ್ರದ ನೋಂಪಿಯ
ದೇವ ಸ್ತುತ ಕಥೆಯ ಪೇಳ್ವೆ ಪೊಸ ಕಂನಡದಿಂ ||

|| ವ || ಅದೆಂತೆಂದೊಡೆ ಜಂಬೂ ದ್ವೀಪದ ಭರತ ಕ್ಷೇತ್ರದ ಆರ್ಯ್ಯಾ ಖಂಡದ ಮಗಧ ದೇಶದ ರಾಜಗೃಹ ನಗರಾಧೀಶ್ವರಂ ಶ್ರೇಣಿಕ ಮಹಾಮಂಡಲೇಶ್ವರನಾತನ ಪಟ್ಟದರಸಿ ಚೇಳಿನಿ ಮಹಾದೇವಿಯೆಂಬಳವರಿರ್ವ್ವರುಂ ಸುಖದಿನಿರಲೊಂದು ದಿವಸಂ ಸಭಾ ಮಂಟಪದೊಳೋಲಗಂಗೊಟ್ಟಿರಲಾ ಪ್ರಸ್ಥಾವದೊಳೊರ್ವ್ವ ಋಷಿ ನೀವೇದಕಂ ಬಂದು ಸಜ್ಞೋದಯದಿನಾದ ಸರ್ವ್ವರ್ತ್ತುಕ ಪುಷ್ಪ ಫಲಂಗಳಂ ಕೊಟ್ಟು ದೇವಾ ನಿಂಮ ವಿಪುಲಾಚಲಕ್ಕೆ ಶ್ರೀ ವೀರವರ್ದ್ಧಮಾನ ಸ್ವಾಮಿಯ ಸಮವಸರಣಮಂ ಬಂದುದೆನಲಾ ದೆಸೆಗೆಳಡಿಯಂ ನಡದು ಸಾಷ್ಟಾಂಗ ಪ್ರಣುತನಾಗಿ ಆನಂದ ಭೇರಿಯಂ ಪೊಯ್ಸಿ ಯೊಸಗೆ ದಂದಂಗಂಗ ಚಿತ್ತಮನಿತ್ತು ಸಮಸ್ತ ಪರಿಜನ ಪುರಜನ ಬಂಧುಜನಂ ಬೆರಸು ಸಮವಸ್ರಣಮನೆಯ್ದಿ ಗಂಧ ಕುಟಿಯಂ ರ್ತ್ರಿಪ್ರದಕ್ಷಿಣಂಗೆಯ್ದು ಶ್ರೀ ಮುಖಾಲೋಕನಂಗೆಯ್ದು

|| ಕ || ಜಯ ಜಯ ಸುರನರ ಸೇವ್ಯ
ಜಯ ಜಯ ಸಾನಂದ ನಂದಿತಾಖಿಲ ಭವ್ಯಾ
ಜಯ ಜಯ ವೀರ ಜಿನೇಶಾ
ಜಯ ಜಯ ಯೋಗೀಂದ್ರ ಹೃದಯಮಾನವ ಹಂಸಾ ||

|| ವ || ಯೆಂದನೇಕ ಸ್ತುತಿ ಶತ ಸಹಸ್ರಂಗಳಿಂ ಸ್ತುತಿಯಿಸಿ ಅಷ್ಟ ವಿಧಾನರ್ಚ್ಚನೆಯಂ ಮಾಡಿ ಗಣಧರ ನಿಕಾಯಮಂ ಯಥಾಕ್ರಮದಿಂ ವಂದಿಸಿ ಮನುಷ್ಯಕೋಷ್ಠದೊಳ್ಕುಳ್ಳಿರ್ದ್ದು ನಿರ್ಮ್ಮಲ ಚಿತ್ತದಿಂ ಧರ್ಮ್ಮಶ್ರವಣಮಂ ಕೇಳ್ದು ತದನಂತರಂ ಕರಕಮಳ ಮುಕುಳಿತನಾಗಿ | ಯೆಲೆ ಸ್ವಾಮಿಯೆನಗೆ ಗಣಧರ ವಳಯದ ನೋಂಪಿಯ ವಿಧಾನಮಂ ನಿರೂಪಿಸಲ್ವೇಳ್ಕುಮೆ ನಲ್‌ಗಣಧರರಿಂತೆಂದರೆಲೆ ಭವ್ಯ ಚೂಡಾಮಣಿಯೆ | ದತ್ತಾವಧಾನವಾಗಿ ಕೇಳೆಂದಿಂತೆಂದಾರಾಷಾಢ ಕಾರ್ತ್ತಿಕ ಫಾಲ್ಘುಣ ಮಾಸಂಗೊಳೊಳಾವುದಾನೊಂದು ಮಾಸದ ಶುಕ್ಲಪಕ್ಷದ ನಂದೀಶ್ವರದಷ್ಟಮಿಯಂದು ಪವಾಸಂ ಮೇಣೇಕ ಭುಕ್ತಮಂ ಕೈಕೊಂಡು ಅಧಃ ಶಯನ ಬ್ರಹ್ಮಚರ್ಯ್ಯಮಂ ಪೌರ್ನ್ನಮಿ ಪರಿಯಂತಂ ಕೈಕೊಂಡು ಮಹಾಭಿಷೇಕಮಂ ಮಾಡಿ ಪರಮೇಶ್ವರಂಗೆ ಅಷ್ಟ, ವಿಧಾರ್ಚ್ಚನೆಯಂ ನಿರ್ವ್ವರ್ತ್ತಿಸಿ ತದನಂತರಂ ಹೇಮ ರಜತ ಕಾಂಸ್ಯಪಾತ್ರದೊಳು ಶ್ರೀಖಂಡ ಕರ್ಪ್ಪೂರ ಕಾಶ್ಮೀರಂ ಮೊದಲಾದ ಸುಗಂಧದ್ರವ್ಯಂಗಳಂ ಲೇಪಿಸಿ ಸುವರ್ಣ್ನ ಶಲಾಕೆಯಿಂ ಯಂತ್ರಮನುದ್ಧರಿಸಿ ನೂತನ ಸಿತ ದೌತವಸ್ತ್ರಮಂ ಆಚ್ಛಾದಿಸಿ ಉತ್ತಮ ಪಕ್ಷ ನಾಲ್ವತ್ತೆಂಟು ಮಧ್ಯಮ ವಿಪ್ಪತ್ತನಾಲ್ಕು ಜಘನ್ಯ ಪಂನೆರಡು ಅಥವಾ ಆಱೂಱನು ಜಲಧಾರೆ ಗಂಧ ತಿಲಕಮಕ್ಷತೆ ಪುಷ್ಪ ಚರುದೀಪ ಧೂಪ ಫಲಂಗಳಿಂದರ್ಚ್ಚಿಸಿ ಷಟ್ಸುವರ್ಣ್ನಪುಷ್ಪಮಂ ಷಡ್ವಿಧ ರತ್ನಂಗಳ್ಸಮೇತಮಗರ್ಘ್ಯಮನೀವುದೆಂಟು ದಿವಸಂ ಆರಾಧಿಸಿ ಪ್ರತಿ ದಿವಸಂ ಮಾಲಾಮಂತ್ರಮಂ ಕೇಳ್ದು ಯೇಕಭುಕ್ತಮಂ ಮಾಳ್ಪುದು | ಪಾಡ್ಯದ ಪ್ರಾತಃ ಕಾಲದೊಳು ಪಂಚರತ್ನ ಸುವರ್ಣ್ನ ಪುಷ್ಪ ಸಹಿತಮರ್ಗ್ಘ್ಯಮನಿತ್ತು ಬಳಿಕ್ಕ ಶ್ರುತ ಪೂಜೆ ಗುರು ಪೂಜೆಯಂ ಮಾಡಿ ಚಾತುರ್ವ್ವರ್ನ್ನಕ್ಕಾಹಾರ ದಾನಮಂ ಮಾಡಿ | ಯಿಂತು ನಾಲ್ವತ್ತೆಂಟು ಅಥವಾ ಯಿಪ್ಪತ್ತನಾಲ್ಕು ಪಂನೆರಡು ಆಱು ಮೂರು ವರುಷಂ ನೋಂತುದ್ಯಾಪನೆಯಂ ಮಾಡುವಲ್ಲಿ ಗಣಧರ ವಳಯದ ಯಂತ್ರಂಗಳಂ ಪ್ರತಿ ಸಮೇತಂ ಮಾಡಿಸಿ | ಪ್ರತಿಷ್ಟೆಯಂ ಮಾಡಿಸಿ ಆಱು ತೆಱದ ಪೂಜೋಪಕರಣಂಗಳಂ ದೇವರ್ಗ್ಗೆ ಸಮರ್ಪ್ಪಿಸಿ ಗಣಧರ ವಳಯದ ಯಂತ್ರಂಗಳಂ ಸುವರ್ಣ್ನ ರತ್ನಗಂಧಪುಷ್ಪ ಚರು ದೀಪ ಧೂಪ ಫಲ ವಸ್ತ್ರಂಗಳಿಂದರ್ಚ್ಚಿಸಿ ಶ್ರುತಪೂಜೆಯಂ ಗುರುಪೂಜೆಯಂ ಮಾಡಿ ಚಾತುರ್ವ್ವರ್ನ್ನಕ್ಕಾಹಾರ ದಾನಮಂ ಮಾಡುವುದುದ್ಯಾಪನೆಯ ಕ್ರಮಂ | ಯಿಂತಿದೆಲ್ಲಮಂ ಶ್ರೇಣಿಕಂ ಕೇಳ್ದು ಬಳಿಕ್ಕ ಗಣಧರರ್ಗ್ಗಿಂತೆಂದು ಬಿಂನವಿಸಿದನೆಲೆ ಸ್ವಾಮಿ ಈ ಗಣಧರ ಯಂತ್ರಾರಾಧನೆಯಿಂದೇನು ಫಲಮನೆಯ್ದಿದರು ಬೆಸಸಿಮೆನಲವರಿಂತೆಂದರು ಯೀ ಜಂಬೂ ದ್ವೀಪದ ಭರತ ಕ್ಷೇತ್ರದ ಮಂಗಲಾವತಿ ವಿಷಯದ ರತ್ನ ಸಂಚಯ ಪುರಮನಾಳ್ವರಸಂ ಸಿಂಹವಾಹನಂ ಆತನರಸಿ ವಿನಯಾವತಿಯೆಂಬಳಂತವರಿರ್ವ್ವರ್ಗ್ಗಂ ಪುಟ್ಟಿದಮಗಂ ಚಂದ್ರಾಭನೆಂಬನಾತನ ಪಟ್ಟದರಸಿ ಚಂದ್ರಮುಖಿಯೆಂಬಳಂತವರಿರ್ವ್ವರ್ಸ್ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ವುತ್ತಮಿ ರ್ದ್ದೊಂದು ದಿವಸಂ | ಪ್ರಭಾತಿಕ ಕ್ರಿಯಾನಂತರಂ ಮಹಾಸ್ಥಾನಮಂಟಪ ಮಧ್ಯಸ್ಥಿತ ಸಿಂಹಾಸನಾರೂಢನಾಗಿರ್ಪ್ಪಿನಮನಿತಕ್ಕೆ ವನಪಾಲಕಂ ಸಹಸ್ರದಳ ಕಮಲಂ ತಂದು ಕುಡೆ ಮಹಾಶ್ಚರ್ಯದಿಂ ನೋಡುತ್ತಿರ್ಪ್ಪಿನಂ ಕಮಲ ಕರ್ಣ್ನಿಕೆಯೊಳು ಮೃತವಾಗಿರ್ದ್ದ ಭ್ರಮರಮಂ ಕಂಡು ಅಹೊ ಯೇಕೇಂದ್ರಿಯ ವಶದಿಂ ಗತ ಪ್ರಾಣನಾದುದು ಪಂಚೇಂದ್ರಿಯ ವಶಗತರೇನೇನಾಗರೆಂದು ಸಂಸಾರ ದುಃಖಕ್ಕೆ ಬೆದೆಱಿ ವೈರಾಗ್ಯಮನೆಯ್ದಿ ಚಂದ್ರಾಭಂಗೆ ರಾಜ್ಯಮಂ ಕೊಟ್ಟು ಮತಿವರ್ದ್ಧನ ಗುರು ಪಾರೀಶ್ವದೊಳು ದೀಕ್ಷೆಯಂ ಕೈಕೊಂಡನಿತ್ತ ಚಂದ್ರಾಭಂ ಬೆಳದು ನವ ಯೌವನಮದದಿಂ ಜಿನಮಾರ್ಗ್ಗಮಂ ಬಿಟ್ಟುವೊಂದು ದಿವಸಂ ಬೇಂಟೆವೋಗುತ್ತ ಮಾರ್ಗ್ಗದೊಳಭಯ ಘೋಷ ಮುನಿಯಂ ಕಂಡು ನಂಮ ಕಾರ್ಯ್ಯಾಕ್ಕೆ ವಿಘ್ನಕಾರಿಯೆಂದ ಕಾರಣ ಕುಪಿತ ಚಿತ್ತನಾಗಿ ಅಲ್ಲಿಂದವರಂ ಪೊಱಮಡಿಸಿದ ಪಾಪದ ಫಲದಿಂ ಕೆಲವಾನು ದಿವಸಕ್ಕೆ ಕಳಿಂಗ ದೇಶದರಸಂ ಕಾಲಯಮಂ ಚತುರಂಗ ಸೇನೆ ವೆರಸು ದಂಡೆತ್ತಿ ಬಂದು ರತ್ನ ಸಂಚಯಮನಾವೇಷ್ಟಿಸಿರಲು ಚಂದ್ರಾಭಂ ಚಂದ್ರಮುಖಿಯುವೆರಸು ಮಲಯಗಿರಿಯ ಸಮೀಪದ ಅರಂಣ್ಯದೊಳು ಭಿಲ್ಲರಂ ಕೂಡಿ ಭಿಲ್ಲವೇದಿಂದಿರ್ದ್ದೊಂದು ದಿವಸಂ ಮಲಯ ಗಿರಿ ಕಂದದೊಳಿರ್ದ್ದ ಯುಗಂಧರ ಮುನಿಯಂ ಕಂಡು ಪರಮಾನಂದದಿಂ ವಂದಿಸಿ ಕರಕಮಲಂಗಳಂ ಮುಗಿದು ಭಿಂನವಿಸಿದನೆಲೆ ಸ್ವಾಮಿಯೆನಗಾವ ಪಾಪದ ಫಲದಿಂ ರಾಜ್ಯ ಭ್ರಷ್ಟತ್ವಮಾದುದೆನಲವರಿಂತೆಂದರು ನೀನು ಸದ್ಧರ್ಮ್ಮಮಂ ಬಿಟ್ಟು ಮಿಥ್ಯ ಮಾರ್ಗ್ಗಮನಾಶ್ರಯಿಸಿವೊಂದಾನು ದಿವಸದಲ್ಲಿ ಬೇಂಟೆ ವೋಗುತ್ತಿ ಮಾರ್ಗ್ಗದೊಳು ಅಭಯ ಘೋಷ ಮುನಿಯಂ ಕಂಡು ನಿಃಕಾರಣಮವರನಲ್ಲಿಂ ಪೊಱಮಡಿಸಿದ ಪಾಪದ ವಿಪಾಕದಿಂ ನೀಂ ರಾಜ್ಯ ಭ್ರಷ್ಟನಾದೆಯೆಂದು ಉತ್ತರ ಜಲ್ಮದೊಳ್ನರಕಾದಿ ದುಃಖಮಂ ಮಾಡಿಕೊಂಡೆಯೆನಲು ನಡ ನಡಂ ನಡುಗಿ ಯೆಲೆ ಸ್ವಾಮಿ ಆ ಪಾಪ ಪರಿಹಾರಮಾವುದಱೆಂದಾನೀ ಪುಂಣ್ಯೋಪಾರ್ಜ್ಜನೆಯಕ್ಕು ಮದನುಪದೇಶಂಗೆಯ್ಯಿಮೆನಲು ಯೆಲೆ ಮಹಾರಾಜಾ ಕೇಳು ಪರಂಪರಾಗತ ಗಣಧರ ವಲಯಯಂತ್ರದ ನೋಂಪಿಯಂ ಸಂಮ್ಯಕ್ತ್ವ ಪೂರ್ವ್ವಕಂ ನೋನುಮೆನಲದಱ ವಿಧಾನಮೆಂತೆನಲು ಮುಂ ಪೇಳ್ದ ಕ್ರಮದಿಂ ಸವಿಸ್ತಂ ಪೇಳೆ ಕೇಳ್ದು ಗುರುಪಾದ ಮೂಲದೊಳು ಕೈ ಕೊಂಡರು | ಕೆಲಉ ದಿವಸಕ್ಕಾಧೀಶ್ವರಂ ಗತಪ್ರಾಣನಾಗಲಪುತ್ರಿಕನೀ ಕರಾಜ್ಯಕ್ಕರುಹನಲ್ಲೆಂದು ಮಂತ್ರಿ ಮುಖ್ಯರು ಪಟ್ಟಭದ್ರ ಹಸ್ತಿಯಂ ಶೃಂಗಾರಮಂ ಮಾಡಿ ಶುಂಡಾ ದಂಡದೊಳು ಗಂಧೋದಕ ಪರಿಹಾರ್ನ್ನಮಪ್ಪ ಕನಕ ಕಳಸಮನಿತ್ತು ಗಂಧಾದಿಗಳಿನರ್ಚ್ಛಿಸಿ ಬಿಡಲ್ಕಂದು ಚಂದ್ರಾಬನ ಮಸ್ತಕದಲ್ಲಿ ಸ್ನಾನಂಗೆಯ್ದು ಮಾಲೆಯನಿಕ್ಕಿ ಚಂದ್ರಮುಖಿವೆರಸಿ ಚಂದ್ರಾಭನಂ ತಂನ ಮಸ್ತಕ ದೊಳಿರಿಸಿಕೊಂಡು ನಗರದ ಮಾರ್ಗ್ಗವಿಡಿದು ಬರೆ ಮಂತ್ರಿ ಮುಖ್ಯರೆಲ್ಲರುಂ ಸಂತೋಷದಿಂ ಪುರಮನರಮನೆಯಂ ಪುಗಿಸಿ ಸುಮುಹೂರ್ತ್ತದೊಳು ಪಟ್ಟಾಭಿಷೇಕಮಂ ಮಾಡಿ ರಾಜ್ಯದೊಳ್ನಿಂದು ಗಣಧರ ವಲಯದ ನೋಂಪಿಯಂ ಮಹಾಮಹಿಮೆವೆತ್ತು ನೋಂತು ಪ್ರತಿ ದಿವಸಂ ಪೂಜಾ ತತ್ಪರನಾಗಿ ವೊಂದು ದಿವಸಂ ಚತುರಂಗ ಬಲಂ ಸಮಾಗ್ರ್ಯಮಂ ನೋಡಿ ಸಂನಾಹ ಭೇರಿಯಂ ಪೊಯಿಸಿ ಸುಮುಹೂರ್ತ್ತದೊಳು ದ್ವಿಗ್ವಿಜಯಕ್ಕೆ ಪೊಱಮೊಟ್ಟು ಸಮಸ್ತ ದೇಶಂಗಳಂ ಸಾಧಿಸುತ್ತಂ ತಂನ ಮಂಗಳಾವತಿ ವಿಷಯದ ರತ್ನ ಸಂಚಯಮನಾವೇಟಿಸಿದ ಕಾಲಯಮನಂ ಜಯಿಸಿ ನಿಜ ರಾಜ್ಯದೊಳ್ನಿಂದು ರತ್ನ ಸಂಚಯ ಪುರದೊಳು ಚೈತ್ಯಾಲಯಂಗಳಂ ಮಾಡಿಸಿ ಗಣಧರ ವಲಯದ ಯಂತ್ರಮಂ ಬರೆಯಿಸಿ ಪ್ರತಿಷ್ಠೆಯಂ ನಿರ್ವ್ವರ್ತ್ತಿಸಿ ನೋಂಪಿಯನುದ್ಯಾಪನೆಯಂ ಮಹಾಮಹಿಮೆಯಿಂ ಮಾಡಿ ಬಹುಕಾಲ ರಾಜ್ಯಂಗೆಯ್ದು ತನ್ನ ಸುತನಪ್ಪ ದೇವದತ್ತ ಕುಮಾರಂಗೆ ರಾಜ್ಯ ಪಟ್ಟಂಗಟ್ಟಿ ತಾನು ಶ್ರಾವಕ ವ್ರತಂಗಳಲ್ಲಿ ನಿಷ್ಟಿತನಾಗಿ ಸಮಾಧಿ ಮರಣದಿಂ ಶರೀರಭಾರಮನಿಳಿಪಿ ಲಾಂತವೇಂದ್ರನಾಗಿ ತಾಂ ತವ ಕಾಪಿಷ್ಟದಯ್ವತ್ತು ಸಾಸಿರ ವಿಮಾನಂಗಳ್ಗೊಡೆಯನುಂ ಪಂಚ ಹಸ್ತೋತ್ಸೇದನುಂ | ಪದಿನಾಲ್ಕು ಸಾವಿರೋಪಮಾಯುಷ್ಯನುಂ ರೂಪ ಪ್ರವಿಚಾರನುಮಾಗಿ ದೇವಲೋಕ ಸುಖಮನನುಭವಿಸಿ ಬಂದೀ ಚಂಬೂದ್ವೀಪದಪರ ವಿದೇಹದ ಸೀತೋದಾನದಿಯ ದಕ್ಷಿಣ ತಟದ ಪದ್ಮ ವಿಷಯದ ಸಿಂಹಪುರೇಶ್ವರಂ ಪುರುಷದತ್ತನಾತನಭಾರ್ಯ್ಯೆ ವಿಮಲಮತಿ ಯಂತವರಿರ್ವ್ವರ್ಗ್ಗಂ ಅಪರಾಜಿತನೆಂಬ ಪುತ್ರನಾಗಿ ಪುಟ್ಟಲಾಗಳವರಯ್ಯಂ ಶಿಶುವಿಂಗೆ ರಾಜ್ಯ ಪಟ್ಟಮಮಂ ಕಟ್ಟಿ ದಿವ್ಯ ಜ್ಞಾನಿಗಳಪ್ಪ ದೇಶ ಭೂಷಣ ಭಟ್ಟಾರಕರ ಸಮೀಪದೊಳು ತಪಂ ಬಟ್ಟನಿತ್ತಲೀ ಅಪರಾಜಿತಂ ಬೆಳದು ಮಹಾ ಮಂಡಲೇಶ್ವರನಾಗಿ ಬಹುಕಾಲಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ ಬಹಿರುದ್ಯಾನವನಕ್ಕೆ ವಿಮಲ ವಾಹನ ಸರ್ವ್ವಜ್ಞಂ ಬರಲು ವನಪಾಲಕನಿಂ ಕೇಳ್ದು ಸಹಸ್ರ ಪುತ್ರರ್ವ್ವೆರಸು ವಂದಿಸಲ್ಪೋಗೆ ಅವರು ಶುಕ್ಷಧ್ಯಾನ ಬಲದಿಂ ನಿರ್ವ್ವಾಣ ಪದ ಪ್ರಾಪ್ತರಾಗಲವರಂ ಕಾಣದದುವೆ ತನಗೆ ನಿರ್ವ್ವೇಗ ಕಾರಣಮಾಗೆ ಪಿರಿಯ ಮಗಂಗೆ ರಾಜ್ಯ ಪಟ್ಟಂಗಟ್ಟಿ ಪಂಚ ಶತಕುಮಾರರ್ವ್ವೆರಸಿ ಯಮಧರ ಮನಿಪಾರಿಶ್ವದಲ್ಲಿ ದೀಕ್ಷಾ ಸ್ವೀಕಾರಂ ಮಾಡಿ ಮೂಲೋತ್ತರ ಗುಣಂಗಳ್ವೆರಸಿ ಬಾಹ್ಯಾಭ್ಯಂತರ ಪರಿಗ್ರಹ ತ್ಯಕ್ತನಾಗಿ ದ್ವಾದಶ ತಪದೊಳ್ನಿರತನಾಗಿ ಬಹು ಕಾಲಂ ತಪಂಗೆಯ್ದು ಗಂಧಮಾದನ ಗಿರಿಯಲ್ಲಿ ಶುಕ್ಲ ಧ್ಯಾನ ಪರನಾಗಿ ನಿಂದು ನಿರ್ವ್ವಾಣ ಪದವಿಗೆ ವೊಡೆಯನಾದನೆಂದು ಗೌತಮಗಣಧರರು ಶ್ರೇಣಿಕ ಮಹಾರಾಜಂಗೆ ಪೇಳೆ ಕೇಳ್ದು ಸಂತುಷ್ಟ ಚಿತ್ತನಾಗಿ ಚೇಳಿನಿ ವೆರಸಿ ಗಣಧರವಳಯದ ನೋಂಪಿಯಂ ಕೈಕೊಂಡು ಸರ್ವ್ವಜ್ಞನಂ ಬೀಳ್ಕೊಂಡು ತಂನ ಪುರಮನರಮನೆಯಂ ಪೊಕ್ಕು ಸುಖದೊಳಿರಲು ನೋಂಪಿಯ ದಿನಂ ಬರೆ ಮಹಾ ಮಹಿಮೆಯಿಂ ನೋಂತು ಸುಖದಿನಿರ್ದ್ಧರಿಂತೀ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಪೇಳ್ದವರ್ಗ್ಗಂ ಕೇಳ್ದವರ್ಗ್ಗಂ ಮಂಗಲ ಮಹಾ ಶ್ರೀ