|| ಶ್ರೀ ವೀತರಾಗಾಯ ನಮಃ ||

ಶ್ರೀಯೋ ಜಿನೇಂದ್ರ ಚಂದ್ರಸ್ಯ ಚರಣಾಂಬೋರುಹ ದ್ವಯಂ |
ನತ್ವಾ ಗೌರೀ ಕಥಾಂ ವಕ್ಷ್ಯೇ ಶುಭ ಸೌಭಾಗ್ಯದಾಯಿನೀ ||

ಅದೆಂತೆಂದೊಡೆ ಜಂಬೂ ದ್ವೀಪದಲ್ಲಿ | ಅಮರಾವತಿಗೆ ತಿಲಕಮಾಗಿಪ್ಪ ಸಿಂಹಪುರಮೆಂಬ ಪಟ್ಟಣಮದಾನಾಳ್ವಂ ಯಿಕ್ಷ್ವಾಕು ವಂಶಕ್ಕೆ ತಿಲಕಮಾಗಿರ್ದ್ದ ವಿಷ್ಣುವರ್ದ್ಧನ ಮಹಾರಾಜಂ ಧರ್ಮ್ಮ ಕರ್ಮ್ಮ ಪುಣ್ಯಾಭಿವೃದ್ಧಿಯನು ಪೆರ್ಚ್ಚಿಸುವ ನಂದಮಹಾದೇವಿ ಮೊದಲಾದನೇಕ ಸ್ತ್ರೀರತ್ನಂಗಳೊಡನೆ ಕೂಡಿ ಸಕಲ ಸಾಮ್ರಾಜ್ಯಮುಮನನುಭವಿಸುತ್ತಿರ್ದ್ದ ವಿಷ್ಣುವರ್ದ್ದನ ಮಹಾರಾಜನ ಕುಮಾರನಪ್ಪ ಭವ್ಯ ಜನಂಗಳಿಗೆ ಶ್ರೇಯಸ್ಸಂ ಸಂಪಾದಿಸುವ ಶ್ರೇಯಾಂಶ ಜಿನೇಶ್ವರಂಗೆ ನಮಸ್ಕಾರಮಂ ಮಾಡಿ ಗೌರಿದೇವಿಯ ಕಥೆಯ ವಿಧಾನಮನಾರು ನೋಂತವರ ಕಥಾ ವಿಧಾನಮೆಂತೆಂದೊಡೆ | ಯೀ ಜಂಬೂದ್ವೀಪದ ಭರತ ಕ್ಷೇತ್ರದೊಳು ಕಾಂಭೋಜಮೆಂಬುದು ನಾಡು ಉಜ್ಜೇನಿಯೆಂಬುದು ಪೊಳಲದನಾಳ್ವಂ ಶ್ರೇಯೋರಾಜನೆಂಬರಸನಾತನರಸಿ ಶ್ರೇಯೋಮತಿಯೆಂಬಳಂತವರೀರ್ವ್ವರುಂ ಸುಖ ಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ | ಕುಂಥುನಾಮ ತಪೋಧನರು ಮೊದಲಾದ ಶ್ರೇಯೋಮುನೀಂದ್ರರು ಬಂದಾಪುರದ ಬಹಿರುದ್ಯಾನವನದೊಳು ರಮ್ಯಪ್ರದೇಶದೊಳಿರ್ದ್ದುದಂ | ವನಪಾಲಕನಿಂದಱೆದು | ಆತಂಗೆ ಪಾವುಡಮಂ ಕೊಟ್ಟು ಸಮಸ್ತ ಪರಿಜನ ಪುರಜನಂ ಬೆರಸು ಪಾದಮಾರ್ಗ್ಗದಿಂ ಪೋಗಿ ತ್ರಿಪ್ರದಕ್ಷಿಣಂಗೆಯ್ದು ಫಲವರ್ಚ್ಚನೆಗಳಿಂದರ್ಚ್ಚಿಸಿ ವಂದಿಸಿ ಮುಂದೆ ಕುಳ್ಳಿರ್ದ್ದು ಕರಕಮಲಂಗಳಂ ಮುಗಿದು | ಶ್ರೇಯೋಮತಿ ಮಹಾದೇವಿ ಪತಿಭಕ್ತಿಯಿಂ ಸ್ವಾಮಿಯೆನಗಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರಿಂತೆಂದರು | ಪಂನೊಂದನೆಯ ತೀರ್ತ್ಥಂಕರಪ್ಪ ಶ್ರೇಯೋಜಿನೇಂದ್ರ ಸ್ವಾಮಿಯರ ಯಕ್ಷಿಯರಪ್ಪ ಗೌರಿ ದೇವಿಯ ನೋಂಪಿಯಂ ನೋನಿಮೆನಲದಱ ವಿಧಾನಮೆಂತೆಂದೊಡೆ | ಭಾದ್ರಪದ ಶುದ್ಧ ೩ ದಿವಸದೊಳು ನೋಂಪರೆಲ್ಲಂ ದಂಥಧಾವನಸ್ನಾನಾದಿಗಳಂ ಮಾಡಿ | ಧೌತ ವಸ್ತ್ರಮನುಟ್ಟು ದಿವ್ಯ ರತ್ನಾಭರಣಂಗಳಂ ತೊಟ್ಟು ಪೂಜಾದ್ರವ್ಯ ಸಹಿತಂ ಚೈತ್ಯಾಲಯಕ್ಕೆ ಬಂದು | ಯಕ್ಷೇಶ್ವರಿ ಗೌರಿದೇವಿ ಸಹಿತಮಾದ ಶ್ರೇಯೋಜಿನೇಶ್ವರಂಗೆ ಪಂಚಾಮೃತದಭಿಷೇಕ ಪೂಜೆಯಂ ಮಾಡಿ ವೊಡ್ಡು ಚರು ಸಹಿತ ಬೆಲ್ಲದಚ್ಚು ತುಪ್ಪ ಭಕ್ಷ ಪಾಯಸ ಸಹಿತಂ ಅಷ್ಟವಿಧಾರ್ಚ್ಚನೆಯಂ ಮಾಡಿ ಶ್ರುತಗುರು ಪೂಜೆಯಂ ಮಾಡಿ | ಯಕ್ಷಿಯಪ್ಪ ಗೌರಿದೇವಿಗೆ ಬಾಯಿನ ಬೆಲ್ಲದಚ್ಚು ಬಾಳೆಯ ಹಂಣು ತೆಂಗಿನಕಾಯಿ ಕಡಲೆ ಹೊಂಗು ನೂಲು | ಕರಿಯ ಮಣಿ | ಗಂಧ ಚಂದ್ರ | ವೋಲೆಯ ತೌಡು ಚಿಗುಳಿ ತಂಬಿಟ್ಟು | ಹದಿನಾಱು ಭಕ್ಷ | ಹಚಿನಾಱು ಅಡಕೆ | ಹದಿನಾಲ್ಕು ಯೆಲೆ | ಫಲವಸ್ತು ಅಕ್ಷತೆ ಪುಷ್ಪ ಸಹಿತಂ | ಹೊಸ ಮೊಱದೊಳಿಕ್ಕಿ ಮೂನೂಲಂ ಸುತ್ತಿ ಗೌರಿ ದೇವಿಗೆ ಬಾಯಿನವನರ್ಚ್ಚಿಸುವ ಮಂತ್ರ | ಓಂ ಹ್ರೀಂದಾತೃಭಿರಭೀಪ್ಸಿತ ಫಲದೇಭ್ಯಃ ಸ್ವಾಹಾ || ಯೆಂದು ಅರ್ಗ್ಘ್ಯಮಂ ಕೊಟ್ಟು ಶ್ರುತದೇವಿಗೊಂದಂ ಕೊಡುಉದು | ಈ ಕ್ರಮದಿಂ ಮೂಱು ಬಾಯಿನಮನಾಗಲೀ ಯೆರಡು ಬಾಯಿನಮನಾಗಲಿ | ವೊಂದು ಬಾಯಿನಮನಾಗಲಿ | ಮುತ್ತೈದೆಯ್ದಯರ್ಗ್ಗೆ ಬಾಯನಮಂ ಕೊಟ್ಟು ನಮಸ್ಕಾರಮಂ ಮಾಡಿ | ಕಡೆಯೊಳು ಕಥೆಯಂ ಕೇಳ್ದು ಕಥಕನಂ ಪೂಜಿಸಿ ದಕ್ಷಿಣೆಯಂ ಕೊಡುಉದು | ರುಷಿಯರ್ಗ್ಗೆ ಚರಿಗೆಯಂ ಮಾಡಿಸಿ ಯೇಕಭುಕ್ತಮಂ ಮಾಳ್ಪುದು | ಮಱು ದಿವಸದೊಲು | ದೇವರಿಗೆ ಅಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿ | ಬ್ರಹ್ಮಪದ್ಮಾವತಿಗೇ ಶ್ರುತದೇವಿಯರ್ಗ್ಗೆ ಅನೇಕ ಪಳ ಪುಷ್ಪ ಭಕ್ಷನ್ಯವೇದ್ಯಂಗಳಿಂದಷ್ಟ ವಿಧಾರ್ಚ್ಚನೆಯಂ ಮಾಡಿ ಅರ್ಗ್ಗ್ಯಮಂ ಕೊಟ್ಟು ಕಥೆಯಂ ಕೇಳ್ದು ಏಕ ಭುಕ್ತಮಂ ಮಾಳ್ಪುದು | ಈ ಕ್ರಮದಿಂದೀರೇಳು ವರುಷಂಬರಂನೋಂತು ಉಜ್ಜಯಿಸುವ ಕ್ರಮ ಯೆಂತೆನೆ | ಯಕ್ಷೇಶ್ವರಿ ಗೌರಿದೇವಿ ಸಹಿತಮಾಗಿರ್ದ್ದ ಶ್ರೇಯೋಜಿನೇಶ್ವರನಂ ಪ್ರತಿಷ್ಟಾ ವಿಧಾನದಿಂ ಪ್ರತಿಷ್ಟೆಯಂ ಮಾಡಿಸಿ ತಿಲಕ ದಾನಮಂ ಮಾಡಿ ಸುವರ್ಣ್ನದಲಾಕೆಯನರ್ಚ್ಚಿಸಿ ಮಹಾಭಿಷೇಕ ಪೂಜೆಯಂ ಮಾಡಿ ನಾಂದಿಮುಖದೊಳು ಶಕ್ತ್ಯಾನುಸಾರದಿಂದೀರೇಳು ಮುತ್ತೆದೈಯೆರ್ಗ್ಗೆ ಮುಂನ ಪೇಳ್ದಕ್ರಮದಿಂ ಬಾಯಿನಮಂ ಕೊಟ್ಟು ನೂತನ ವಸ್ತ್ರ ಕಂಚುಕಂಗಳುಮನುಡಕೊಟ್ಟು ನೋನಿಸಿದಜ್ಜಿಯರ್ಗ್ಗುಡ ಕೊಡುವುದು | ಚಾತುರ್ವ್ವರ್ನ್ನಾಕ್ಕಾಹಾರ ದಾನಮಂ ಮಾಳ್ಪುದು | ಯಿದುಜ್ಜವಣೆಯ ಕ್ರಮ ಮತ್ತಂ ಬಡವರೊಡೆಯರೆಂನದೆ ಯಥಾ ಶಕ್ತಿಯಿಂ ನೋಂತು ಉದ್ಯಾಪನೆಯಂ ಮಾಳ್ಪುದೆನೆ ಶ್ರೇಯೋಮುನೀಂದ್ರರು ಪೇಳೆ ಕೇಳ್ದು ರುಗ್ಮಿಣಿ ಮಹಾದೇವಿಯುಂ | ಶ್ರೇಯೋಮತಿ ಮಹಾದೇವಿಯುಂ ಮೊದಲಾದ ಕುಮಾರಿಯರು ಗೌರಿದೇವಿಯ ನೋಂಪಿಯ ನೋಂತಾ ತತ್ಫಲದಿಂ ತದ್ಭವದೊಳೆ ಸಕಲ ದರಿದ್ರಂಗಳೆಲ್ಲಮಂ ಕೆಡಿಸಿ | ಧನಕನಕ ಸಮೃದ್ಧರಾಗಿ ಮತ್ತಂ ತಂನ ಪತಿ ಪುತ್ರರುಗಳೆಲ್ಲರು ಆಯುಷ್ಯಾಭಿವೃದ್ಧರಾಗಿ ಸಕಲ ಸಾಂ‌ಮ್ರಾಜ್ಯ ಶ್ರೀಯನನುಭವಿಸಿ ದೇವೇಂದ್ರ ಚಕ್ರವರ್ತ್ತಿಯ ಪದವಿಯಂ ಪಡೆದರಿಂತೀ ಗೌರಿಯ ನೋಂಪಿಯಂ ನೋಂತವರ್ಗ್ಗಂ ನೋನಿಸದವರ್ಗ್ಗಂ ಮಂಗಳ ಮಹಾ ಶ್ರೀ