ಜಿನಚಂದ್ರನ ಮುಖ ದರ್ಶನದಿಂ
ದನಿತಱೊಳಘ ನಿಕರಮಿರದು ಜೀವಾವಳಿಗೆಂ
ತೆನೆ ಚಂದ್ರನ ದರ್ಶನದಿಂ
ಘನತರಮೊಸರ್ವ್ವಂತೆ ಚಂದ್ರಕಾಂತ ಗ್ರಾಮಂ ||

ಮನಮೊಲಿದು ಭಕ್ತಿ ಭರದಿಂ
ದನವರತಂ ಚಂದ್ರನಾಥನಂ ವಂದಿಸಿ ಮೇ
ದಿನಿಯೊಳು ಚಂದನ ಷಷ್ಟಿಯ
ಘನಿತರಮೆನಿಸಿರ್ದ್ದ ಕಥೆಯನಾ ವಿರಚಿಸುವೆಂ ||

ನಿಲ್ಲದೆ ಪಲವುಂ ಪೊಂಗಳು
ಸಲ್ಲವೇ ಭಾವಿಪಡೆ ಗೂಢನಾಗದಱೆಂ
ದೆಲ್ಲಾ ನೋಂಪಿಯ ಫಲಂಗಳ
ನಿಲ್ಲಿಯೇ ಬಕ್ಕು ನೋಂಪಿಯಿದು ಕೇವಲಮೇ ||

ಮತ್ತಮಿಂನಾ ನೋಂಪಿಯ ಕಥಾವತಾರಮೆಂತಾದುದೆಂದಡೆ

|| ಕ || ಜಂಬೂದ್ವೀಪದ ಮಧ್ಯದೊ
ಳಂಬರಮಂ ತುಡುಕುವಮರಗಿರಿಯಿರೆ ತೆಂಕಲು
ತುಂಬಿದ ನಾಡುಗಳಿಂದ ಕ
ರಂ ಬಗೆವಡೆ ರಮ್ಯಮಲ್ತೆ ಭರತ ಕ್ಷೇತ್ರಂ ||

ಆ ಭರತ ಕ್ಷೇತ್ರದೊಳತಿ
ಶೋಭೆಯನಾಂತೆಸವ ಮಗಧ ದೇಶಮನಾಳ್ವಂ
ಭೂಭುವನ ನುತ ಶ್ರೇಣಿಕ
ನಾ ಭೂಪನ ರಾಜಧಾನಿ ತಾಂ ರಾಜಗೃಹಂ ||

ಅಂತು ಮಹಾ ವಿಭೂತಿಯಂ ತಾಳ್ದಿದ ರಾಜಗೃಹಮೆಂಬ ಪುರದೊಳು ತಂನ ಪಟ್ಟದರಸಿ ಚೇಳನಿ ಮಹಾದೇವಿವೆರಸು ಶ್ರೇಣಿಕ ಮಹಾಮಂದಲೇಶ್ವರಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ವುತ್ತಮಿರ್ದೊಂದು ದಿವಸಂ ವಿಚಿತ್ರ ಚಿತ್ರಿತ ಭಿತ್ತಿಗಳಿಂ ರಮಣೀಯತರ ಮಣಿಕುಟ್ಟಿಮದಿಂ ಸುತ್ತಿದ ಮತ್ತವಾರಣಂಗಳಿಮ ತೆತ್ತಿಸಿದ ದಿಶಾ ಪುತ್ರಿಕೆಗಳಿಂ ಕತ್ತೂರಿ ಸಾರಾವಳಿಯಿಂದಂ ಮುತ್ತಿನ ರಂಗವಲ್ಲಿಗಳಿಂ ಚಂದನದ ತಳಿರ ತೋರಣಂಗಳಿಂ ಕರಮೆಸದಿಂದ್ರ ವಿಮಾನದ ಸೊಬಗಂ ಸೂಱೆಗೊಂಡು ಬಂದಂತಿರ್ದ್ದು ಮಣಿಮಾಡದೇಳನೆಯ ನೆಲಯ ಮಧ್ಯದೊಳಿಕ್ಕಿದ ಸಿಂಹಾಸನದ ಮೇಲೆ ಚೇಳಿನಿ ಮಹಾದೇವಿ ವೆರಸು ಕುಳ್ಳಿರ್ದ್ದು ಹಿಮಚಾಮರಂಗಳಂ ಕೋಮಲಾಂಗಿಯರಿಕ್ಕೆ ವಿಲಾಸಿನೀ ಜನಂ ವಿಳಾಸಂ ಬೆರಸು ಕುಳ್ಳಿರೆ ರಾಜ ಮಹಾರಾಜಂ ಮಂತ್ರೀ ಮಕುಟಬದ್ಧ ಶ್ರೇಷ್ಠಿ ಸೇನಾಪತಿ ಮೊದಲಾದ ಪಲಂಬರಿಂ ಪರಿವೃತ್ತನಾಗಿ ರಾಗರಸದ ಸಾಗರೊಳೋಲಾಡುತ್ತಂ ಲೀಲೆಯಿಂದೋಲಗಂಗೊಟ್ಟಿರ್ದ್ದಾ ಪ್ರಸ್ತಾವದೊಳೊ

|| ಕಂ || ಪರಿತಂದು ಋಷಿನಿವೇದಕ
ನರಸಂಗಾ ನಮ್ರನಾಗಿ ಕರಯುಗಳಮನಾ
ದರದಿಂ ಮುಗಿದವಧಾರಿಪು
ದೆರಡಿಲ್ಲದೆ ದೇವ ದಿವ್ಯಚಿತ್ತದಿನಿತ್ತಲೂ ||

ಯೆನಲೊಡಂ ಸಭಾಜನಮುಂ
ಘನ ನಿನದಂಗೇಳ್ದ ಶಿಖಿಗಳಂತಿರೆ ರಾಗಂ
ಜನಿಯಸಲಭಿಮುಖಮಾಗಳು
ವಿನಯದಿನಿಂತೆಂದು ಬಿಂನಪಂಗೈದನವಂ ||

ದಿವಿಜೇಂದ್ರ ಫಣಿ ನರೇಂ
ದ್ರ ವಿರಾಜಿತ ಮಕುಟ ಕೋಟಿ ತಾಟಿತ ಚರಣಂ
ಭುವನ ತ್ರಿತಯಾರಾಧ್ಯಂ
ಭವ ಮಥನಂ ವರ್ದ್ಧಮಾನನಪ್ರತಿಮಾನಂ ||

ಯೆನೆ ನೆಗಳ್ದ ವೀರನಾಥನ
ವಿನುತ ಶ್ರೀ ಸಮವಸರಣಮನವತರಿಸಿದುದೊ
ಯ್ಯನೆ ನಂಮ ಪುರದ ಪಡುವಣ
ಘನತರ ವಿಪುಲಾದ್ರಿಯಲ್ಲಿಗೆಂಬುದಮಾಗಳೂ ||

ಯೇಳಡಿಯನಿಳಿದು ನಡೆದು ನೃ
ಪಾಲಂ ಸಾಷ್ಟಾಂಗವೆಱಗಿ ಜಿನನಿರ್ದ್ದತ್ತಲು
ಲೋಲತೆಯಿಂ ಪೊಡೆವಟ್ಟು
ಪೇಳ್ದವಗಂಗಚಿತ್ತಮಂ ಕೊಟ್ಟಾಗಳೂ ||

ಆನಂದ ಭೇರಿಯಂ ಪರ
ಮಾನಂದದಿ ಪೊಯಿಸಿ ಭೂಮಿಪಾಲಂ ವಿಬುಧ ಜ
ನಾನಂದಂ ಜಿನನಂ ನಿ
ತ್ಯಾನಂದನಂ ನಂದನನೈದೆ ಕಾಣ್ಬೆನೆಂಬುತ್ಸವದಿಂ ||

|| ವ || ಅಂತು ಚೇಳಿನಿ ಮಹಾದೇವಿವೆರಸು ಶ್ರೇಣಿಕ ಮಹಾಮಂಡಲೇಶ್ವರಂ ವಿಜಯ ಗಜೇಂದ್ರಮನೇಱೆ ಮಂತ್ರಿ ಮಕುಟಬದ್ಧ ಸಾಮಂತ ಮಹಾಸಾಮಂತ ತಳವರ ದಂಡನಾಯ್ಕ ಪುರೋಹಿತಾದಿಗಳು ಸುತ್ತಲುಂ ಬಳಸಿ ಬರೆ ವಿಪುಲ ಗಿರೀಂದ್ರಮನೆಯ್ದೆ ವಂದು ದೂರದೊಳೆ ವಾಹನದಿಂದಿಳಿದು ಕರಕಮಲಂಗಳಂ ಮುಗಿದು ಪೊಡೆವಟ್ಟೂ

|| ಕ || ಕತಿಪಯ ಪುರಜನ ಪರಿಜನ
ಯುತನಾಗಳು ಕಮಳ ವನಕೆ ಕಳಹಂಸಂ ಮೃದು
ಗತಿಯಿಂ ಬಪ್ಪಂತಿರೆ ಬಂ
ದತಿ ರಾಗಂಬೆರಸು ಗಂಧಕುಟಿಯಂ ಬೇಗಂ ||

ತಾರಾಳಿವೆರಸು ಚಂದ್ರಂ
ಮೇರುವನೆಯ್ದ ಪ್ರದಕ್ಷಿಣಂಗೆಯ್ದವೋಲಾ
ಭೂರಮನಂ ಪರಿಜನ ಸಹಿ
ತೋರಂತಿರೆ ಮೂಱು ಸೂಳ್ವರಂ ಬಲವಂದಂ ||

ಅಂತು ಬಲವಂದು ಸಾಷ್ಟಾಂಗ ಪ್ರಣತನಾಗಿ ಮೂವತ್ತುನಾಲ್ಕತಿಶಯದೊಳಮೆಂಟು ತೆಱದ ಪ್ರಾತಿಹಾರ್ಯ್ಯದೊಳಂ ಕೂಡಿದ ಲಕ್ಷ್ಮೀ ಮಂಟಪ ಮಧ್ಯಸ್ಥಿತ ಸಿಂಹಾಸನಾಸೀನನಾಗಿರ್ದ್ದ ಕೋಟ್ಯಾದಿತ್ಯರ್ಕ್ಕಳ ಪ್ರಭೆಯ ನಿರಾಕರಿಸುವ ಮೆಯ್ಯೆಳಗಿಂ ತೊಳಗಿ ಬೆಳಗುತಿರ್ದ್ಧ ಶ್ರೀ ವರ್ದ್ಧಮಾನ ಸ್ವಾಮಿಯ ಮುಖಾರವಿಂದಕ್ಕಭಿಮುಖನಾಗಿ ಪರಮಾನಂದಮನಪ್ಪುಕೆಯ್ದು ಕರಕಮಳ ಯುಗಳಮಂ ಮುಗಿದೂ

|| ವೃ || ಶ್ರೀ ನಿಲಯಂ ಮನೋಜ ವಿಜಯಂ ನತಭೂವಳಯಂ ಕಷಾಯ ದಾ
ವಾನಲ ವಾರಿ ಮೋಹರಿಪುಹಾರಿ ಲಸದ್ಗುಣ ಧಾರಿ ಭವ್ಯತಾಂ
ಭೋನಿಧಿ ಚಂದ್ರನಾನತ ಶತೇಂದ್ರನನಾಕುಳ ಬೋಧ ರುಂಧ್ರ
ನೆಂಬೀ ನುತಿ ವೀರನಾಥ ನಿನಗಲ್ಲದೆ ಪೇಳ್ಪೆಱರ್ಗ್ಗುಂಟೆ ಲೋಕದೊಳೂ ||

|| ವ || ಯೆಂದು ವಂದಿಸಿ ಅನೇಕ ಸ್ತುತಿ ಶತಸಹಸ್ರಂಗಳಿಂ ಸ್ತುತಿಯಿಸಿ ತ್ರಿಭುವನ ವಲ್ಲಭನಂ ಪಲವರ್ದ್ಚನೆಗಳಿಂದರ್ಚ್ಚಿಸಿ ಪೊಡವಟ್ಟು ಗೌತಮ ಗಣಧರ ಸ್ವಾಮಿಗಳ್ಗೆ ಪಾದಾರ್ಚ್ಚನೆಗೆಯ್ದು ವಂದಿಸಿ ಸುತ್ತಲುಮಿರ್ದ ಋಷಿ ನಿಕಾಯಮಂ ಗುರು ಪರಿವಿಡಿಯಿಂ ವಂದಿಸಿ ಮನುಷ್ಯ ಕೋಷ್ಠದುಳ್ಕುಳ್ಳಿರ್ದ್ದು ತಂಮೀರ್ವ್ವರುಂ ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ತದನಂತರಂ ಚೇಳಿನಿ ಮಹಾದೇವಿ ಜ್ಞಾನ ಚತುಷ್ಟಯನಿಷ್ಟಿತರುಂ | ಸಪ್ತರ್ದ್ಧಿ ಸಂಪಂನರುಂ ಯೋಗಿ ಜನ ವಂದ್ಯರುಮಪ್ಪ ಗೌತಮ ಗಣಧರ ಸ್ವಾಮಿಗಳ್ಗೆ ಕರಕಮಲಂಗಳಂ ಮುಗಿದು ವಿನಯದಿಂ ಮೆಲ್ಲನೆ ಬಿಂನಪಮಿಂತೆಂದಳೂ

|| ಕ || ಕೈಸೋಂಕಲಾದ ವನಿತಾ
ಸಂಸರ್ಗಮನುಳ್ಳ ಪುರಷರಿಂ ಸ್ತ್ರೀಯರಿನಾ
ಸಂಸರ್ಗ್ಗಮಿಲ್ಲದಿರ್ದ್ದೊಡ
ಮೇಂ ಸೋಂಕುವರಿಂದೆ ಮಿಶ್ರದೋಷಂ ಬಕ್ಕುಂ ||

ಯೆಂತುಂ ಕಳೆಯಲು ಬಾರದ ಸಂತತ
ಮೊದನೊಡನೆ ನಡೆವ ಮಿಶ್ರಿತ ದೋಷಮ
ನಿಂತೀಗಳಂತೆ ಕಿಡಿಸುವು
ದುಂ ತಡೆಯದೆ ಬೆಸಸಿಮೆಂದೊಡಾ ಮುನಿಮುಖ್ಯರು ||

ಆದೊಡೆ ಚಂದನ ಷಷ್ಟಿಯ
ನಾದರದಿಂ ನೋಂಪುದಿದುವೆ ಸುಖಕಾರಣಮಂ
ತಾದೋಷ ಹರಣಮೆಂತೆನೆ
ಪಾದರಸಂ ಪೊಂನು ವಿಡಿದು ಜರಗಂ ಬಿಡುವೊಲು ||

ಬೆಲ್ಲದ ಭಿತ್ತಿಂದಾಗಳೆ
ನಿಲ್ಲದೆ ಕದಡಿರ್ದ್ದ ನೀರು ತಿಳಿವಂತಿರೆ ಮ
ತ್ತೆಲ್ಲಾ ಮಿಶ್ರಿತ ದೋಷಮ
ವೆಲ್ಲಮುಮೀ ನೋಂಪಿಯಿಂದೆ ಕೆಡುಗುಮಮೋಘಂ ||

|| ವ || ಯೆಂಬುದು ಚೇಳಿನಿ ಮಹಾದೇವಿ ಹರ್ಷೋತ್ಕರ್ಷ ಚಿತ್ತೆಯಾಗಿ ನಿಂಮಡಿಗಳಂತಾದೊಡಾ ನೋಂಪಿಯಂ ಮುಂ ನೋಂತ ಮಹಾ ಪುರಷರ ಕಥೆಯನೆನಗೆ ಬೆಸಸಿಮೆನಲವರಿಂತೆಂದು ಪೇಳ್ದರೀ ಜಂಬೂ ದ್ವೀಪದ ಭರತ ಕ್ಷೇತ್ರದೊಳವಂತಿಯೆಂಬುದು ನಾಡು ಉಜ್ಜೆನಿಯೆಂಬುದು ಪುರಮಾಪುರಂ ವಜ್ರವೇದಿಕೆಯಂ ಪೋಲ್ವ ಕೋಂಟೆಯಿಂ ರಮಣೀಯಮೆನಿಪ ರಾಜಾಲಯಂಗಳಿಂ ಕನಕಗಿರಿಯಂತೆಸೆವ ಜಿನಗೇಹಂಗಳಿಂ ವಿಶಾಲಮಪ್ಪ ವೇಶ್ಯಾವಾಟಂಗಳಿಂ ಸುಧಾ ಧವಳಿತಮಪ್ಪ ಧವಳಾರಂಗಳಿಂ ಸುತ್ತಿ ಸೊಗಯಿಸುವ ನಂದನವನಂಗಳಿಂ ಕಡು ರಮಣೀಯಮಪ್ಪುದಾ ಪುರಮನಾಳ್ವಂ ಪ್ರತಾಪ ಸಿಂಹನೆಂಬರಸನಾತನ ಪಟ್ಟದರಸಿ ಲಕ್ಷ್ಮೀಮತಿ ಮಹಾದೇವಿಯೆಂಬಳಾ ಪುರದ ರಾಜಶ್ರೇಷ್ಠಿ ಜಿನದತ್ತನೆಂಬನಾತನ ಮನೋನಯನ ವಲ್ಲಭೆ ಜಿನದತ್ತೆಯೆಂಬಳಂತವರ್ಗ್ಗಳೆಲ್ಲಂ ಸುಖ ಸಂಕಥಾ ವಿನೋದದಿಂ ರಾಜ್ಯಮನನುಭವಿಸುತ್ತಮಿರಲೊಂದು ದಿವಸಂ

|| ಕ || ವರ ಚಂದ್ರಗತಿಯಿನಾಗಳು
ಚರಿಗೆಗೆ ಬಂದೊರ್ವ್ವ ಋಷಿಯರಂ ಜಿನದತ್ತಂ
ಭರದಿಂ ನಿಲಿಸಿದನವರಂ
ತ್ವರಿತದೊಳೆ ಸಮಾಧಿಗುಪ್ತರೆಂಬನುಪಮರಂ ||

ಅಂತು ನಿಲಿಸಿ

|| ವೃ || ನವವಿಧ ಪುಂಣ್ಯದೊಳೆಱದು ಸಪ್ತಗುಣಂಗಳೊಳೊಂದಿ ಭಕ್ತಿಯಿಂ
ವಿವಿಧಮೆನಿಪ್ಪ ಭಕ್ಷತತಿಯಂ ಪರಮಾಂನಮನಿಕ್ಕಲುಂಡು ಮ
ತ್ತ ವಯವದಿಂದೆ ಕಯಿದೊಳದುದಾನಮಿದಕ್ಷಯಮಕ್ಕೆ ನಿಂಮೊಳೆಂ
ದವರನುರಾಗಿದಿಂ ಪರಸಿ ಪೋಪಿನಮಾದುದು ಪಿಂದ ಕೌತುಕಂ ||

|| ಕ || ಕನಕದ ಪವಿಯೊಳು ಪುರುಡಿಪ
ತನನರುಚಿ ಕೆಟ್ಟಾಗಳಂತೆ ಸೆಟ್ಟಿಯ ಮೆಯ್ಯೊಳು
ಜನಿಯಿಸಿತು ಕುಷ್ಟರೋಗಂ
ಘನಮಲ್ಲದೆ ಮಿಶ್ರದೋಷಮಾವಘದಿಂದಂ ||

ವ || ಅಂತು ವಲ್ಲಭನ ಮೆಯ್ಯೊಳು ತೊಟ್ಟನೊಮ್ಮೊದಲೊಳೆ ಪುಟ್ಟಿದೌದುಂಬರ ಕುಷ್ಟಮಂ ಜಿನದತ್ತೆ ಕಂಡು ಭಯ ಚಕಿತ ಚಿತ್ತೆಯಾಗಿ ಕಾರಣಮನಱಿಯದಿನಿತೇಕಾದುದೆಂದು ಕಿಱಿದು ಬೇಗಂ ಚಿಂತಾಕ್ರಾಂತೆಯಾಗಿ | ಜೈನಸ್ಯ ವಿಸ್ಮಯಂ ನಾಸ್ತಿಯೆಂಬೀ ದಿವ್ಯ ವಾಕ್ಯಮನುವಧರಿಸಿ ತಂನ ತಾನೆ ಸಂತಯಸಿಕೊಂಡು ಶುಚಿರ್ಭ್ಭೂತೆಯಾಗಿ ಮನೋಹರಮಪ್ಪ ನಿಜ ದೇಹಾರಮಂ ಪೊಕ್ಕು ಜಿನೇಂದ್ರಂಗಭಿಷೇಕ ಪೂಜೆಯಂ ಮಾಡಿಸಿ ಗಂಧೋದಕಮಂ ಕೊಂಡು ಪ್ರತಿಜ್ಞೆಗೈದೆಂನ ಭರ್ತ್ತಾರನ ಶರೀರಂ ಮುನ್ನಿನಂತಪ್ಪದೆಳೆ ಸಲ್ಲದೊಡಿದು ಸಂನ್ಯಸನಮೆಂದು ಕೈಯಿಕ್ಕಿಕೊಂಡಿರ್ದ್ದಳಿಪ್ಪಂನೆಗಂ

|| ಕ || ಆಸನಕಂಪಂ ಜ್ವಾಲಿನಿ
ಗಾ ಸಮಯದೊಳಾಗಲವಧಿಯಿಂದಱೆದು ಬಳಿ
ಕ್ಕಾ ಸತಿಯ ಮನೆಗೆ ವಂದಳು
ಭಾಸುರ ಸಮ್ಯಕ್ತ್ವದಳಲು ತಾಂ ಕೇವಳಮೆ ||

ಅಂತು ಬಂದು ಜ್ವಾಲಿನಿದೇವಿಯಿಂತೆಂದಳೂ

|| ಕ || ಯಿನಿತೇಕ ಪೊಣ್ಕೆ ಕೇಳ್ದಾ
ಜಿನದತ್ತೆ ಮದೀಯ ವಚನಮಂ ನಿಂನರಸಂ
ಗಿನಿತೊಂದು ಪೀಡೆಯಾದು
ದನಿತುಮನುತನೋರಂತೆ ಪೇಳ್ದಪೆಂ ಚಿತ್ತೈಸಾ ||

ಹೀರನರಕಾದಿ ದುಃಖಮ
ನೋರಂತೆ ಪರಿಹಸಲಾರ್ಪ್ಪ ವರ ಸಮ್ಯಕ್ತ್ವಂ
ದಿರದೆ ನಿನಗುಂಟು ನಿನಗಿಂ
ತಿರದುದೇನಾವ ಕಾರ್ಯ್ಯಮಂ ಬಗೆವಾಗಳೊ ||

ಕಾಮಲತೆಯೆಂಬಳಿಂದು ಮ
ನೋಮುದದಿಂದಿರೆ ತದೀಯ ಧವಳಾರದೊಳಾ
ಕಾಮಿನಿಯಂ ಮುಟ್ಟಲು ಗಂ
ಡಾಮಲಿನೆಯನೊಲಿದು ನೆರದು ಬಂದು ನಿಜೇಶಂ ||

ಸ್ನಾನಂಗೈಯದೆ ಮನೆಯೊಳು
ತಾನಿರ್ಪ್ಪುದುಮೊರ್ವ್ವ ದಿವ್ಯ ಮುನಿ ಪುಂಗವರ
ತ್ಯಾನಂದದೆ ಚರಿಗೆಗೆ ವರೆ
ಹೀನ ಗುಣಂ ನಿನಗೆ ಬೆಚ್ಚಿ ನಿಲಿದನವರಂ ||

ಅಂತೇವಯಸದೆ ನಿಲಿಸಿದೊ
ಡಿಂತೀ ರುಜೆಯಾಯ್ತು ನಿಂನ ಪತಿಗೆನೆ ಮ
ತ್ತೆಂತಾ ರುಜೆ ಪರಿಹರಿಕುಮ
ದಂ ತಡೆಯದೆ ನೀನೇ ಪೇಳವೇಳ್ಕುಮಮೋಘಂ ||

ಯೆನಲೊಡನಾ ಜ್ವಾಲಿನಿ ಚಂ
ದನ ಷಷ್ಟಿಯ ನೋಂಪಿಯಿಂದಮೀ ರುಜೆ ಕಿಡುಗಂ
ತನಿತರೊಳದಱ ವಿಧಾನಮ
ನೆನಗಱೆವಂತಾಗೆ ಬೇಗಮೀಗಳೆ ಪೇಳಿಂ ||

|| ವೃ || ಯೆಂದನುರಾಗದಿಂ ಬೆಸಗೊಳಲ್ಜಿನದತ್ತೆಗೆ ದೇವಿ ಪೇಳ್ದಳಾ
ನಂದದಿನಂದು ಭಾದ್ರಪದ ಮಾಸವ ಕೃಷ್ಣ ಷಷ್ಟಿಯಿಂದ ಮುಂ
ನೊಂದು ದಿನಂ ದಿವಾಂತ್ಯದೊಳು ಮಿಂದು ದಣಿಂಬಮನುಟ್ಟು ನೋಂಪವ
ರ್ಬ್ಬಂದು ಮಹೋತ್ಸವಂ ಬೆರಸು ಮಾಳ್ಕೆ ಜಿನಂಗಭಿಷೇಕ ಪೂಜೆಯಂ ||

|| ವ || ಅಂತು ಜಿನೇಶ್ವರಂಗಭಿಷೇಕ ಮಾಡಿ ತದನಂತರಂ ಬ್ರತಮಂ ಗುರುಗಳುಮಂ ಫಲವರ್ಚ್ಚನೆಗಳಿಂದರ್ಚ್ಚಿಸಿ ಮಂದಿಸಿ ಯೇಕ ಭುಕ್ತಮನಕ್ಕೆ ಉಪವಾಸಮನಕ್ಕೆ ನೋಂಪಿ ಸಹಿತಂ ಕೈಕೊಂಡು ಷಷ್ಟಿಯ ದಿವಸಂ ಪಗಲೆಲ್ಲಂ ಜಿನಪೂಜಾನಂದದೊಳಂ ಜಿನೋದಿತಮಪ್ಪ ಪುಂಣ್ಯಕಥಾ ಕಥನಪಸ್ತಂಗದೊಳಂ ಪೊತ್ತುಗಳವತಂತು ಪೊತ್ತುಗಳೆದೊ

|| ವೃ || ಆ ದಿನಮಿಕ್ಕೆ ಜಾಗರಮನೊಪ್ಪಿರೆ ಮಾಡುಗೆ ಜಾವಕೊಂದನ
ತ್ಯಾದರದಿಂ ಮಹಾಭಿಷವಮಂ ಜಿನನಂಗದ ಸಂಗಮದ ಗಂ
ಧೋದಕಮಂ ಮನೋಮುದದೆ ಮಸ್ತಕದೊಳ್ತಳೆದೆಯ್ದೆ ಮ
ತ್ತಾದ ವಿಸೋಧಿಯಂ ನೆಱೆಯೆ ಹಸುಗೆ ತಂಮಯ ಮೆಯ್ಗಳೆಲ್ಲಮಂ ||

ಅಂತು ಗಂಧೋದಕಮಂ ಕೊಂಡಷ್ಟವಿಧಾರ್ಚ್ಚನೆಯಂ ಮಾಡಿ ತದನಂತರಂ || ಜಿನಮಾರ್ಹತೆ ಭಗವತೆ ಚಂದ್ರಪ್ರಭನಾಥಾಯ ಯಕ್ಷಯಕ್ಷಿ ಸಹಿತಾಯ ಓಂ ಶ್ರೀಂ ಹ್ರೀಂ ಸ್ವಾಹಾ ಎಂಬೀ ಮಂತ್ರಮನೋದುತ್ತಂ

|| ಕ || ಜಲಧಾರೆಯನಾಱಂ ಸ
ತ್ತಿಲಕಮನಾಱಂ ಸುಲಕ್ಷಣಾಕ್ಷತ ಪುಂಜಂ
ಗಳನಾಱಂ ಜಿನಪದದೊ
ಳ್ವಿಲಸಿತಮಾಗಲ್ಕೆ ಮಾಡುವುದು ನೋಂಪವರ್ಗ್ಗಳೂ ||

ಆಱುಂ ಪುಷ್ಪದೊಳಂ ಮ
ತ್ತಾಱೂಱುವನಾಱು ಭಕ್ಷದೊಲಗಾಱಾಱಂ
ಬೇಱಾಱುದೀಪಧೂಪಮ
ನಾಱುಂ ಪಲದೊಳಗೆ ಪೂಜಿಸುವುದಾಱುಱಂ ||

ಅಂತಷ್ಟ ವಿಧಾರ್ಚ್ಛನೆಯಂ
ಸಂತಸದಿಂ ಮಾಡಿ ಮತ್ತೆ ಪುಷ್ಪಾಂಜಲಿಯಂ
ಶಾಂತಿಕರಮಿದುವೇ ಜಗಕೇನು
ತಂ ತಡೆಯದೆ ಶಾಂತಿ ಧಾರೆಯಂ ಕೊಟ್ಟಾಗಳೂ ||

ಓಂ ನಮೋಂ ಅರ್ಹತೇ ಭಗವತೇ ಚಂದ್ರಪ್ರಭ ನಾಥಾಯ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಃ ಮಮ ಸರ್ವ್ವ ಶಾಂತಿಂ ಕುರು ಸ್ವಾಹಾ || ಯೆಂಬೀ ಮಂತ್ರಮನೋದುತ್ತಂ ಸುವರ್ನ್ನ ಪುಷ್ಪದೊಳು ಜಲ ಗಂಧಾಕ್ಷತೆ ವೆರಸರ್ಗ್ನ್ಯಮಂ ಕೊಟ್ಟು ಶ್ರುತಮಂ ಗುರುಗಳುಮಂ ಪೂಜಿಸಿ ಬಂದಿಸಿ ತದನಂತರಂ

|| ಕ || ಆಱುಂ ಭಕ್ಷದೊಳಂ ತೆಗೆ
ದಾಱಾಱು ಮನಿಕ್ಕಿಯಾಱು ಮೊಱದೊಳು ನೂಲಂ
ಮೂರಾಗಿ ಸುತ್ತಿ ಬಯಿನ
ಮಾಱಂ ಸೊವಾಸಿನಿ ಜನಂಗಳಿಗೀವುದೂ ||

ಸೊವಾಸಿನಿಯರಿಲ್ಲರ್ದೊ
ಡೀವುದು ಕರೆದಜ್ಜಿಯರ್ಗ್ಗೆ ತದನಂತರದೊಳು
ಭಾವಿಸಿ ಕಥೆಯಂ ಪೇ
ಳ್ವವರ ವೊಪ್ಪದೊಳೊಲಿದು ಪೂಜಿಪುದು ಕಥಕನುಮಂ ||

|| ವ || ಯಿಂತೀ ಕ್ರಮದಿಂದಾಱು ವರುಷಂ ಬರಂ ನೋನುತ್ತಂ ಕಡೆಯೊಳುಜ್ಜಯಿಸುವ ದಿನದೊಳು ಚಂದ್ರಪ್ರಭ ಸ್ವಾಮಿಯ ಪ್ರತುಮೆಯಂ ಚೆಲುವನಪ್ಪಂತು ಮಾಡಿಸಿ ಜಿನಗೃಹದ ಮುಂದೆ ವೇದಿಕೆಯನಿಕ್ಕಿ ಗಂಧಕುಟಿಯನೆತ್ತಿಸಿ ಭೃಂಗಾರ ಕಳಶ ದರ್ಪ್ಪಣ ಧ್ವಜ ಚಾಮರ ಧ್ವಜಪತಾಕೆಗಳು ಮೊದಲಾದ ಪಲಉಂ ಶಾಖೆಗಳಂ ಮಾಡಿಸಿ ಪ್ರತಿಮೆಯನಾ ವೇದಿಕೆಯ ಮಧ್ಯಕ್ಕೆ ಬಿಜಯಂಗೆಯ್ಸಿ ಶುಭಲಗ್ನದೊಳು ಶಲಾಕೆಯನುರ್ಚ್ಚಿ ಮುಂನಿನಂತೆ ನೋಂಪವರೆಲ್ಲಂ ಚಾಗರಮಿಪ್ಪುದಾಱುಂ ತಂಡ ರುಷಿಯರ್ಗ್ಗೆ ಶ್ರುತಪೂಜೆಯಂ ಮಾಳ್ಪುದಾಱು ತಂಡಜ್ಜಿಯರ್ಗ್ಗುಡ ಕೊಡುಉದಾಱು ಜೈನ ಮಿಥುನಂಗಳಿಗೆ ಬಾಯಿನ ಸಹಿತಮುದಕೊಡುಉದು ಮತ್ತಂ ಚಾತುರ್ವ್ವರ್ಣಕ್ಕಾಹಾರ ಅಭಯ ಭೈಷಜ್ಯ ಶಾಸ್ತ್ರದಾನಂಗಳ ಮಾಳ್ಪುದು | ಘಂಟೆ ಜಯ ಘಂಟೆ ಹೆಳವಳಿಗೆ ನಕ್ಷತ್ರಮಾಲೆ ಆರತಿ ಧೂಪ ಘಟಕಳಸ ಕಂನಡಿ ಮೊದಲಾದುಪಕರಣಂಗಳಂ ದೇವರ್ಗ್ಗೆ ಮಾಡಿಸಿ ಕೊಡುಉದಿಂತಿದು ನೋಂತುಜ್ಜಯಿಸುವ ಕ್ರಮಮೆಂದು ಪೇಳ್ದು ಮತ್ತಂ ಗುಣರತ್ನ ಭೂಷಣಾಂಗಿಯಪ್ಪ ಜಿನದತ್ತೆಗೆ ಜ್ವಾಲಿನಿ ದೇವಿಯಿಂತೆಂದಳೂ ||

ವರಪೂರ್ವ್ವ ವಿದೇಹದ ಪುಂ
ಡರೀಕಿಣಿ ಪುರದ ಪೊಱಗಣೊಪ್ಪುವ ಸೀಮಂ
ಕರಮವೆಂಬುಧ್ಯಾನ ದಿನದು
ಪರಿವೃತಮಾಗಿರ್ಪ್ಪುದೊಂದು ಜೈನ ನಿವಾಸಂ ||

ಮತ್ತಮಾ ಚೈತ್ಯಾಲಯದ ಚೆಲ್ವಂ ಪೊಗಳ್ವಡಿಂದ್ರ ನೀಲದ ನೆಲಗಟ್ಟಿಂ ಪಳಿಕಿನ ಬಿತ್ತಿಗಳಿಂದ ವಜ್ರದ ಕಂಭಗಳಿಂ ಚಂದ್ರಕಾಂತದ ಗಡಗೆಗಳಿಂ | ಸೂರ್ಯಕಾಂತದ ಬೋಧಿಗೆಗಳಿಂ ಕರ್ಕ್ಕೇತನ ಕಪೋತವಾಲಿಗಳಿಂ | ಪುಷ್ಯರಾಗದ ಪೂವಲಿಗಳಿಂ | ವಿನಕಲ್ಗಳಿಂ ಮರಕತದ ಮತ್ತ ವಾರಣಂಗಳಿಂ ನಾನಾಮಣಿ ಖಚಿತ ಸಾಲಭಂಜಿಕೆಗಳಿಂ | ದಿವ್ಯತರಮಪ್ಪ ದಿಶಾ ಕೂಟಂಗಳಿಂ | ಕರಮೆಸೆವ ಸುವರ್ಣ್ನ ರಚಿತ ಸಪ್ತಭೂಮಿಕೆಗಳಿಂ ಪದರಾಗದ ಫಲವುಂ ಕಳಸಂಗಳಿಂ ಮುಂತಣ ಮಾನಸ್ತಂಭಗಳಿಂ ಮಕರ ತೋರಣಂಗಳಿಂ | ದುಕೂಲದೇವಾಂಗದ ಮಿಳಿರ್ವ್ವ ಗುಡಿಗಳಿಂ | ಮೇರುಗಿರಿಯಂತೆ ಕರಮುತ್ತುಂಗಮನೆ ಮತ್ತಂ ಚಂದನಾಶೋಕ ಸಪ್ರಚ್ಛದ ಸಹಕಾರಮೆಂಬ ನಾಲ್ಕು ವನಂಗಳಿಂದ ನವರತ್ನಮೊಪ್ಪುವುದಱೆಂ ನಿತ್ಯಮಂಡಿತಮುಮಾದುದಾ ನಿತ್ಯಮಂಡಿತ ಚೈತ್ಯಾಲಯಕ್ಕೆ ವಂದನಾರ್ತ್ಥಂ ಪೋಗಿ ರಾಗದಿನೊಳಗಂ ಪೊಕ್ಕು ವಿಚಿತ್ರತರ ಮಣಿಮಯ ಸಿಂಹಾಸನಮಸ್ತಕಾಗ್ರವಷ್ಟಂಭದಿಂ ಕುಳ್ಳಿರ್ದ್ದ ತ್ರಿಭುವನ ಸ್ವಾಮಿಯ ರೂಪಾತಿಶಯಮನೆಂನ ಕಣ್ತಣಿವಿನಂ ನೋಡಿ ಕಳಂಕವಿಲ್ಲದ ಚಂದ್ರಮಂಡಲಕ್ಕಾ ಪರಮೇಶ್ವರನ ಶ್ರೀಮುಖವೆಣೆಯಾದುದಱೆಂ ಹೃತ್ಕುವಲಯಮಲರೆ ಕರಕಮಲಂಗಳಂ ಮುಗಿಯೆ ಮಹೋತ್ಸವದಿನಭಿಮುಖೆಯಾಗಿ

|| ಕ || ಜಯ ದುರಿತ ಭಟನಿವಾರಣ
ಜಯ ಭಾಸುರ ಮುಕ್ತಿ ಕಾಮಿ ನೀ ಪ್ರಿಯ ರಮಣಾ
ಜಯ ಭಾಕ್ತಿಕ ಸುಖ ಕರಣಾ
ಜಯ ಜಯ ದೇವೇಂದ್ರ ವೃಂದ ವಂದಿತ ಚರಣಾ ||

|| ವ || ಯೆಂದಿಂತನೇಕ ಸ್ತುತಿ ಶತಸಹಸ್ರಂಗಳಿಂ ತ್ರಿಭುವನಾದಿ ಪತಿಯಂ ಸ್ತುತಿಯಿಸಿ ಪಲಉಂ ದಿವ್ಯಾರ್ಚ್ಛನೆಗಳಿಂದರ್ಚ್ಚಿಸಿ ತದನಂತರಂ ಗಂಧೋದಕ ಸಿದ್ಧ ಸೇಸೆಯಂ ಕೊಂಡು ಕಿಱಿದು ಬೇಗಮಲ್ಲಿರ್ದ್ದು

|| ಕ || ವರ ಸುಮತಿ ಗಂತಿಯರು ವಿ
ಸ್ತರದಿಂದೀ ನೋಂಪಿಯಂ ಕ್ರಮಂ ತಪ್ಪದೆ
ಭ ವ್ಯರ ಸಭೆಗೆಲ್ಲಂ ಪೇಳು
ತ್ತಿರೆ ಕೇಳ್ದಾಂಬಂದು ಮಂತೆ ನಿನಗಾಂ ಪೇಳ್ದೆಂ ||

ಯೆಂದಾ ಜ್ವಾಲಿನಿ ಪೇಳಲು
ಸೌಂದರಿ ಕಯ್ಯೆತ್ತಿ ಕೊಂಡು ದೇಹಾರದಿನೆಯ್ದಿ
ತಂದು ನಿಜಪತಿಗೆ ಪೇಳ್ದಾ
ನಂದದೆ ಜಿನದತ್ತೆ ನೋಂಪೆನೆಂದತಿ ಮುದದಿಂ ||

ಯಿರೆ ಭಾದ್ರಪದಂ ಮಾಸಂ
ಬರೆ ಕೃಷ್ಣದ ಷಷ್ಟಿಯಲ್ಲಿ ಕೈಕೊಂಡು ಸವಿ
ಸ್ತರದಿಂದೊಪ್ಪಂಬೆತ್ತಾ
ದರದಿಂ ನೋಂತು ಜಾಗರಣೆಯಂ ಗೆಯ್ದ ದಿನಂ ||

ಮಿಕ್ಕ ವಿಶೋಧಿಯನಾಳಿ
ದಕ್ಕಿದು ಮರ್ದ್ದೆಂದು ಪೂಸಿ ಗಂಧೋದಕಮಂ
ಚಿಕ್ಕನೆ ರುಜೆ ಪೋಗಲು ಪುಟ
ವಿಕ್ಕಿದ ಚಿಂನದ ವೋಲಾಯ್ತು ಸೆಟ್ಟಿಯ ದೇಹಂ ||

|| ವ || ಅಂತು ಸಂತಪ್ತಕಾಂಚನ ಚ್ಛವಿಯಂತೆ ಕಾಂತಿಯಂ ಪೆತ್ತ ನಿಜಕಾಂತನ ಶರೀರಮಂ ಜಿನದತ್ತೆ ಕಂಡು ಹರುಷೋತ್ಕರುಷ ಚಿತ್ತೆಯಾಗಿ ಬಳಿಕ್ಕಿಂತೆಂದಳೂ

|| ವೃ || ನಿರುಮಪ ಚಂದ್ರನಾಥನ ಜಗತ್ರಯ ವಂದ್ಯನ ನೋಂಪಿಯಂದಮೇ
ನರಿದೆ ಮದೀಯ ವಲ್ಲಭನೊಳಾದ ರುಜಾಹರಣಂ ಮಹೋತ್ಸವಂ
ಬೆರಸು ನರೇಂದ್ರ ದೇವ ಖಚರೇಂದ್ರ ಪದಂಗಳನೀಗುಮಿತ್ತು ಮ
ತ್ತಿರವೆ ವಿನೇಯ ಕೋಟಿಗಳನೈದಿಸುಗುಂ ವರಮೋಕ್ಷ ಲಕ್ಷ್ಮಿಯಂ ||

ಯಿಂತಾ ನೋಂಪಿಯೊಳಾದ ಮಹಾಮಹಿಮೆಯಂ ಪಲವುಂ ತೆಱದಿಂ ಪೊಗಳ್ದೂ

|| ಕ || ಜ್ವಾಲಿನಿ ಪೇಳ್ದಾ ಕ್ರಮದಿಂ
ಲೋಲಾಕ್ಷಿ ನೋಂತಳಾಱುಂ ವರುಷಂ ಬರೆಗಂ
ಲೀಲೆಯೊಳು ಮಾಡಿದಳು ಪಿರಿ
ದಾಲಾಮಪಂ ಬೆರಸು ಕಡೆಯೊಳುದ್ಯಾಪನೆಯಂ ||

|| ವ || ಅಂತುದ್ಯಾಪನೆಯ ಮಾಡಿ ನೋಂಪಿಯ ಫಲದಿಂ ಜಿನದತ್ತ ಸೆಟ್ಟಿಯುಂ ಸಕಲ ಗುಣ ಸಂಪಂನೆಯಪ್ಪ ಜಿನದತ್ತೆಯಂ ನಿಶ್ಚಿಂತರಾಗಿ

|| ವೃ || ರತಿಯುಂ ತಾನುಮಿಂದ್ರನುಂ ಶಚಿಯು ಚಂದ್ರಾಣಿಯುಂ ಚಂದ್ರನುಂ
ಸತತಂ ಮಾಡಿದ ಪಾಂಗಿನಿಂ ಪಲವು ಕಾಲಂ ಚಕ್ರವಾಕಂಗಳಂ
ತತಿರಾಗಂ ಬೆರಸೊಂದನೊಂದಗಲದತ್ಯಾನಂದದಿಂದಿರ್ಪ್ಪವೋಲ್

ಸತತಂ ದಾನ ಗುಣಾನ್ವಿತಸ್ಸುಖದೊಳಂದಾ ಯಿರ್ವ್ವರುಂ ||

ಲೀಲೆಯಿಂ

|| ಕ || ತೊಲಗದ ಲಕ್ಷ್ಮಿಯಮಾಯುಮ
ನಳವಲ್ಲದ ಕೀರ್ತ್ತಿಯೆಂಬಿವಂ ತಾಳ್ದಿ ಧರಾ
ತಳದೊಳು ವಿಷಯ ಸುಖಂಗಳ
ಜಲಧಿಯೊಳೋಲಾಡಿ ನಾಡೆ ಪೊಂಪುಳಿಯೋದರೂ ||

|| ವ || ಅಂತು ಸಮಸ್ತ ವಿಷಯ ಸುಖಾನುಕೂಲಂಗಳಪ್ಪ ಭೋಗೋಪ ಭೋಗಂಗಳಂ ಪಲಕಾಲಮನನುಭವಿಸುತ್ತಮಿರ್ದ್ದುಮೊಂದು ದಿವಸಂ ಜಿನದತ್ತೆ ತಾಂ ಕಾಲಜ್ಞಾನದೊಳು ಜಾಣೆಯುಂ ಪ್ರವೀಣೆಯಮಪ್ಪುದಱೆಂ ನಡು ಬಯಲಾಗಿ ತೋರ್ಪ್ಪಾದಿತ್ಯ ಮಂಡಲಮಂ ಕಂಡು ತನಗೆ ಪತ್ತು ದಿನದಾಯುಷ್ಯಮೆಂದಱೆದು ಸಂಸಾರ ಶರೀರ ಪರಿಭೋಗ ಪರಿತ್ಯಕ್ತ ಪರಾಯಣೆಯಾಗಿ

|| ವೃ || ಧನದತಿ ಕಾಂಕ್ಷೆಯಂ ತನುವಿನಾಸೆಯುಮಿಂದ್ರಿಯವರ್ಗ್ಗದಿಚ್ಛೆಯುಂ
ಮನೆಯ ತೊಡಂಕುಮಾತ್ಮ ಜರಮೋಹಮುಮಿಷ್ಟರ ಚಿಂತೆಯೆಂಬಿವಂ
ಮನಮುಱೆ ಬಿಟ್ಟು ಪೋಪ ಹರಮಪ್ಪ ಜನಸ್ತುತಮಪ್ಪ ಲೋಕ ಪಾ
ವನ ತರಮಪ್ಪ ಸನ್ಯಸನಮಂ ಜಿನದತ್ತೆ ಸಮಂತು ತಾಳ್ದಿದಳೂ ||

ಅಂತು ಜಿನದತ್ತೆ ಸನ್ಯಸನಮಂ ಕೈಕೊಂಡು ಸಮಾಧಿ ವಿಧಿಯಿಂ ಶರೀರಮನಿಳಿಪಿ ಪದಿನಾಱನೆಯಚ್ಯುತ ಕಲ್ಪದೊಳಪಪಾದಭವನದೊಳಮಳ್ವಾಸಿನ ನಡುವೆ ಪುಟ್ಟಿದಂತರ್ಮುಹೂರ್ತ್ತದೊಳು ನವಯವ್ವನ ಪ್ರಾಪ್ತಿಯಪ್ಪುದುಂ ತನುಕಾಂತಿ ದಿಸೆದಿಸೆಗೆಲ್ಲಂ ಪಸರಿಸಿ ಸಹಜಾಲಂಕಾರಮೆನಿಸಿದ ತೊಟ್ಟ ಭೂಷಣಂಗಳಿಂದುಟ್ಟ ದೇವಾಂಗ ವಸ್ತ್ರದಿಂ ಸೂಡಿದ ಪಾರಿಜಾತ ಕುಸುಮಂಗಳಿಂ ಕರಮೆಸೆದು ಕುಳ್ಳಿರ್ಪ್ಪುದುಂ ತದ್ವಿಮಾನದ ಪಡಿಗಳು ತಮಗೆ ತಾವೇ ತೆಱೆಯೆ ಪಂಚಾಶ್ಚರ್ಯ್ಯಂ ನೆಗಳೆ ದೇವಕಾಂತೆಯರೈತಂದು ತತ್ಕಾಂತನ ಮೊಗಮಂ ನೋಡುತ್ತಮಿರೆಯವಯವದಿಂ ಮುತ್ತಿನ ಸೇಸೆಗಳಂ ತಳೆಯೆ ಪರಿವಾರ ದೇವರ್ಕ್ಕಳೆಲ್ಲಂ ನೆರದು ಬಂದೋಲಗಿಸಿ ತತ್ಕಲದೊಳಿಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯ ಮಹರ್ದ್ದಿಕ ದೇವನಾಗಿ ಪುಟ್ಟಿ ಸುಖಮಿರ್ಪ್ಪುದುಮಿತ್ತಲೂ

|| ಕ || ವನಿತಾ ವಿನಿಯೋಗದಿಂದಂ
ಜಿನದತ್ತಂ ನೊಂದು ಮನದೊಳಂದು ಬಳಿಕ್ಕಿಂ
ತನಗಾದ ಭೋಗ ಕಾಂಕ್ಷೆಯ
ತನುವಿನ ವೈರಾಗ್ಯಮೆಸಯೆ ವೈಶ್ಯಕುಲಾರ್ಕ್ಕಂ ||

|| ವ || ತಂನ ಪಿರಿಯ ಮಗಂಗಾತ್ಮಿಯ ಪದವಿಯಂ ಕೊಟ್ಟು ಸಕಲ ಗುಣ ಸಂಪಂನರುಂ || ಭವ್ಯ ಕಮಲ ಮಾರ್ತ್ತಂಡರುಮಪ್ಪ ಶ್ರುತ ಸಾಗರಭಟ್ಟಾರಕರೆಂಬ ದಿವ್ಯ ಮುನಿ ಮುಮುಕ್ಷುಗಳ ಸಮಕ್ಷದೊಳು ಬಾಹ್ಯಾಂಭ್ಯಂತರ ಪರಿಗ್ರಹ ನಿವೃತ್ತಿ ಲಕ್ಷಮನುಳ್ಳ ಜಿನದೀಕ್ಷೆಯಂ ಕೈಕೊಂಡೂ

|| ವೃ || ಮೇರು ಗಿರೀಂದ್ರಮಮಂ ಸ್ಥಿರತೆಯೊಳ್ಜಲ ರಾಶಿಯನೊಪ್ಪವೆತ್ತ ಗಂ
ಭೀರತೆಯೊಳ್ವಿಯತ್ತಳು ಮನಾತ್ಮ ವಿಶುದ್ಧಿಯೊಳೆಯ್ದೆ ಪೋಲ್ತು ಕ
ರ್ಮ್ಮಾರಿಯನಾವಗಂ ಕಿಡಿಪೆನೆಂಬುಱೆಂ ಜಿನದತ್ತ ಯೋಗಿ ವಿ
ಸ್ತಾರದೆನುತ್ತರೋತ್ತರಮೆನಲ್
ತಪದೊಳ್ನಡೆದಂತ್ಯಕಾಲದೊಳೂ ||

ಪ್ರಾಯೋಪಗಮನ ವಿಧಿಯಿಂ
ದಾ ಯೋಗಿ ಜನಾಗ್ರಗಣ್ಯನಚ್ಯುತ ಕಲ್ಪ
ಕಾಯರ್ಬ್ಬದ್ಧಮದಾಗಿರ
ಳಾಯುಷ್ಯದ ಕಡೆಯೊಳೆಯ್ದಿದಂ ತತ್ವದಮಂ ||

|| ವ || ಅಂತು ಕಲ್ಪದೊಳಿಂದ್ರನಾಗಿ ಪುಟ್ಟಿ ಪೂರ್ವ್ವ ಭವದ ಜಿನದತ್ತೆಯಪ್ಪ ಮಹಾರ್ದ್ದಿಕ ದೇವನುಂ ಪರಮ ಕಲ್ಯಾಣ ಮಿತ್ರರಾಗಿ ಸುರಲೋಕ ಸುಖದ ಸಾರದೊಳೋಲಾಡುತ್ತ ಮಿರ್ದ್ದು ಬಂದು ಬಳಿಯಂ ಪರಂಪರೆಯಂ ಮೋಕ್ಷ ಲಕ್ಷ್ಮಿ ವಲ್ಲ ಭರಪ್ಪರೆಂದಿಂತೂ

|| ಕ || ಗೌತಮ ಗಣಧರರಾಗಳು
ಚಾತುರ್ಯ್ಯದ ಕಣಿ ಎನಿಪ್ಪ ಚೇಳಿನಿಗಱಿಪಲು
ಪ್ರೀತಿಯೊಳೆ ನಲಿದು ಕೇಳ್ದಾ
ಭೂತಳಪತಿಯರಸಿ ನೋಂಪಿಯಂ ಕೈಕೊಂಡಳೂ ||

|| ವ || ಅಂತು ಚೇಳಿನಿ ಮಹಾದೇವಿ ನೋಂಪಿಯಂಪರಮೋತ್ಸಾಹಂ ಬೆರಸು ಕೈಕೊಂಡು ಜಿನಸ್ವಾಮಿಯಂ ಬೀಳ್ಕೊಂಡುಮಿರ್ವ್ವರುಂ ತನ್ಮುನೀಂದ್ರಂಗೆ ಪುನರ್ನ್ನಮಸ್ಕಾರಮಂ ಗೆಯ್ದು ಸಮವಸರಣಮಂ ಪೊಱಮಟ್ಟು ವಿಜಯ ಗಜೇಂದ್ರಮನೇಱೆ ರಾಜಗೃಹಕ್ಕಭಿಮುಖರಾಗಿ ಬಪ್ಪಾಗಳೂ

|| ವೃ || ಶ್ರೇಣಿಕನೋ ಸುರೇಶ್ವರನೊ ಚೇಳಿನಿಯೋ ಶಚಿಯೋ ವಿನೂತ ಗೀ
ರ್ವ್ವಾಣ ಗಜೇಂದ್ರಮೋ ವಿಜಯವಾರಣಮೋ ಬಗೆವಂದು ಬೇಧಿಕುಂ
ಜಾಣನೆನಿಪ್ಪವಂ ಕುಳಿಶಮಿಲ್ಲದ ಕಾರಣದಿಂದಮಲ್ಲದಾ
ಶ್ರೇಣಿಕಗಂ ಸುರೇಶ್ವರಗಮೇಂ ಪೆಱತಾವುದೊ ಬೇಧಮೆಂಬಿನಂ ||

ಭೇರಿ ಮೃದಂಗ ಶಂಖ ಕಹಳಾದಿಗಳರ್ಣ್ನವದಂತೆ ಘೂರ್ಣ್ನಿಸ
ಲ್ಭೋರನೆ ಸುತ್ತಲುಂ ನೃಪ ಕುಮಾರಕರುಂ ಭಟರುಂ ಪ್ರಧಾನರುಂ
ವಾರಣಮುಂ ಹಯೋತ್ಕರಮುಮೊಪ್ಪಿರೆ ರಾಜ ಗೃಹಕ್ಕೆ ಬಂದು
ಮೀ ರಮಣೀಯ ರತ್ನ ಕೃತ ತೋರಣ ಮಾಲೆಗಳಂ ನುಸುಳ್ವುತಂ ||

|| ವ || ಅಂತು ಸುಜನ ಜನಂಗಳಿಕ್ಕುವ ಸೇಷಾಕ್ಷರಂಗಳುಮಂ ಪರಸುವ ಪರಕೆಗಳನಾಂತು ಕೊಳುತ್ತಂ ತಂನರಮನೆಯಂ ಪೊಕ್ಕು ಶ್ರೇಣಿಕ ಮಹಾಮಂಡಲೇಶ್ವರಂ ಭೋಗದೊಲು ನಾಗೇಂದ್ರನುಮಂ ಮಹೈಶ್ವರ್ಯ್ಯದೊಳು ದೇವೇಂದ್ರನುಮಂ | ವಿಭವದೊಳು ವಿಯಚ್ಚರೇಂದ್ರನುಮಂ ಕಮನೀಯತರ ಮೂರ್ತ್ತಿಯೊಳು ಕಾಮದೇವನುಮಂ ಪೊಲ್ತೆಸೆಯೆ ಚೇಳಿನಿ ಮಹಾದೇವಿಯುಂ ಜಿನಭಕ್ತಿಯೊಳು ಶಚಿಮಹಾದೇವಿಯುಮಂ | ಗುರುಭಕ್ತಿಯೊಳು ರುಗ್ಮಿಣಿ ಮಹಾದೇವಿಯಮಂ | ಪತಿವ್ರತದೊಳು ಸೀತಾಮಹಾದೇವಿಯುಮಂ | ರೂಪಿನೊಳು ರತಿದೇವಿಯುಮಂ ಪೋಲ್ತಳಂತಿವ್ವರುಂ ಮಹಾ ಪ್ರಖ್ಯಾತ ಗುಣಾವಳಿಗೆ ಸಂದು ಯಶಸ್ಕೀರ್ತ್ತಿಯಂ ತಾಳ್ದಿ ಜಿನಧರ್ಮ್ಮ ಪ್ರದೀಪಕರಪ್ಪ ಪಲಂಬರ್ಮ್ಮಕ್ಕಳಂ ಪಡೆದು ಪಲವು ನಿಧಿ ನಿಧಾನಂಗಳ್ಗೊಡೆಯರಾಗಿ ಪಲಕಾಲಂ ರಾಜ್ಯಂಗೆಯ್ವುತ್ತಮಿರ್ದ್ದರಿತ್ತಲೂ

|| ಕ || ನಾನಾ ಪ್ರಕಾರದಿಂದಂ
ತಾನಪ್ಪುದು ಮಿಶ್ರದೋಷಮದನಪಹರಿಪೊಂ
ದೀ ನೋಂಪಿಯನಿಳಿಕೆಯ್ದಾ
ಹೀನಗುಣರ್ಮ್ಮಾಳ್ಪ ಧರ್ಮ್ಮದೊಳ್ಪುರುಳುಂಟೇ ||

ಧರೆಯೊಳು ಚಂದನ ಷಷ್ಟಿಯ
ವರನೋಂಪಿಯನೊಲಿದು ನೋಂಪ ನೋನಿಪ ಬವ್ಯ
ರ್ಗ್ಗುರುತರ ದುರಿತಾಪಹಾರಂ
ದೊರೆಕೊಳ್ಗುಂ ಸಕಲ ಸೌಖ್ಯಮಂ ಪರಮಪದಂ ||

ಯಿಂತೆಸವೀ ಕಥೆಯಂ ಭುವ
ನಾಂತರದೊಳು ಪೇಳ್ವ ಕೇಳ್ವ ಭವ್ಯರ್ಗ್ಗೆಲ್ಲಂ
ಸಂತತ ಮುಕ್ತಿಶ್ರೀಯನ
ನಂತ ಗುಣಾಂಬೋಧಿ ಚಂದ್ರನಾಥಂ ಕುಡುಗುಂ ||