|| ಶ್ರೀ ವೀತರಾಗಾಯ ನಮಃ ||

ಶ್ರೀಮದಶೋಕ ವೃಕ್ಷ ಸುರ ದುಂದುಭಿ ವಿಷ್ಟರ ಪುಷ್ಟ ವೃಷ್ಟಿ ಸ
ಚ್ಚಾಮರದ ಪ್ರಭಾವಳಯ ಭಾಸುರ ದಿವ್ಯ ನಿನಾದದಿಂ ಜಗತ್

ಸ್ವಾಮಿ ಯೆನಿಪ್ಪನಂತ ಜಿನನನಂತ ಚತುಷ್ಟಯರೂಪನಕ್ಷಯ
ಶ್ರೀಮಣಿ ದರ್ಪ್ಪಣಂ ಕುಡುಗನಂತ ಜಿನಂ ನಮಗಿಷ್ಟ ಸಿದ್ದಿಯಂ ||

ಅನಂತಜ್ಞಾನಮನಂತ ದರ್ಶನಂ ಅನಂತ ಸೌಖ್ಯತ್ವಮನಂನ್ತ ವೀರ್ಯ್ಯಾತಾಂ ಭೀಭರ್ತ್ತಿಸಯೋನಂತ ಚತುಷ್ಟಯಂ ವಿಭುಃ ಸನೋಸ್ತ್ವನಂತೋಭವ ದುಃಖ ಶಾಂತಯೆ

ಈ ಚಂಬೂದ್ವೀಪದೊಳಭಿ
ರಾಜಿಪುದಾ ಮಗಧ ವಿಷಯಮದಱೊಳಗೆಸೆವಾ
ರಾಜಗೃಹ ನಗರದಧಿಪಂ
ಭ್ರಾಜಿಸುವಂ ಶ್ರೇಣಿಕ ಮಹಾಮಂಡಳೇಶಂ ||

ಆ ಭೂಪನರಸಿ ಸಕಲ ಗು
ಣಾಭರಣ ವಿಭೂಷಿತಾಂಗಿ ಚೇಳಿನಿಯೆಂಬಳ್

ಭೂಭುವನ ಸ್ತುತೆ ಪಿರಿದುಂ
ಶೋಭಿಪಳನವದ್ಯ ಚರಿತೆ ಶೀಲೋಂನತಿಯಿಂ ||

ಅಂತವರೀರ್ವರುಂ ರ್ಸುಖಸಂಕಥಾವಿನೋದದಿಂ ರಾಜ್ಯಂಗೇಯ್ಯುತ್ತವಿರಲೊಂದು ದಿವಸಂ

ಪರಿತಂದು ಋಷಿ ನಿವೇದಕ
ನರಸಂಗಿಂತೆಂದು ಬಿನ್ನಪಂಗೆಯ್ದನವಂ
ನರನಾಥ ವಿಪೂಳಗಿರಿಯೊಳ್
ಪರಮಾತ್ಮಂ ಬಂದು ನೆಲಸಿದಂ ವೀರಜಿನಂ ||

ಯೆಂದಾಸ್ಥಾನ ಮಂಡಪ ಮಧ್ಯಸ್ಥಿತ ಮಣಿಮಯ ಸಿಂಹಾಸನಾಸೀನನಾಗಿರ್ದ್ದ ಶ್ರೇಣಿಕ ಮಹಾರಾಜಂಗಂ ತದರ್ದ್ಧಾಸನಾಸೀನೆಯಾಗಿರ್ದ್ದ ಚೇಳಿನಿ ಮಹಾದೇವಿಗಂ ಬಿಂನವಿಸೆ

ಬಂದೊಸಗೆವೇಳ್ದವಂಗಾ
ನಂದದಿನಿತ್ತಂಗ ಚಿತ್ತಮಂ ನರನಾಥಂ
ಸಂದಾಪ್ತಾಗಮ ತತ್ವದೊ
ಳೊಂದು ಸಂದೇಹರಹಿತನೆರ್ದ್ದಾಸನದಿಂದಂ ||

ಚೇಳಿನಿ ಬೆರಸಿರದಾ ದೆಸೆ
ಗೇಳಡಿಯಂ ನಡದು ವಿನಯ ವಿನಮಿತನಾದಂ
ಸೂಳೈಸಿದ ಭೇರಿ ಧ್ವನಿ
ಗೇಳಿ ಬರೆ ಭವ್ಯ ನಿವಹಮರ್ಚ್ಚನೆ ಸಹಿತಂ ||

ಪರಿಜನ ಪುರಜನ ಸಹಿತಂ
ಪುರಮಂ ಪೊರಮಟ್ಟು ಪಾದಮಾರ್ಗ್ಗದೊಳಾಗಳು
ಪರಮ ಜಿನ ಭಕ್ತಿ ಭರದಿಂ
ವಿರಚಿತ ಸಮವಸೃತಿಯನೆಯ್ದಿ ಮಹೀಶಂ ||

|| ವ || ಪ್ರಥಮಾ ಸೋಪಾನಮಂ ಮೆಟ್ಟಲೊಡಂ ದಿವಿಜ ಜನಾಲವಿಪ್ತಪಾದ ಲೇಪೌಷಧಿ ಪ್ರಭಾವದಿಂ ವಿಂಶತಿ ಸಹಸ್ತ ಸೋಪಾನಂಗಳಂ ಕ್ರಮದಿನಡರದೊರ್ಮ್ಮೊದಲೊಳು ಸರ್ವ್ವಬಾಹ್ಯದೊಳು ವಿಶಾಲ ಸಮ ವೃತ್ತಮುಂ ಪಂಚರತ್ನ ಪ್ರಭಾ ಪಟಲ ವಿಘಟಿತ ತಮಸ್ತೋಮಮುಂ ನೃತ್ಯತ್ಪತಾಕಾ ಕಲಾಪ ಪರಿಕಲಿತಮುಂ ಮಾನುಷೋತ್ತರ ಪರ್ವ್ವತಾಕಾರದಿಂ ಸೊಗಯಿಸುವ ಧೂಳಿ ಸಾಲ ಬಾಹ್ಯಾಭ್ಯಂತರಂಗಳೊಳು ಪ್ರತ್ಯೇಕಂ ಶತ ಸಂಖ್ಯಾತವಚ್ಛಿಂನ ಮಣಿಮಯ ಮಕರ ತೋರಣಂ ನಿಕರಾಭಿರಾಮಮುಂ ತ್ರಿಭೂಮಿಕಾ ವಿಭೂಷಣದಿಂ ಭೂಷಿತಮುಂ | ಸುರನರ ಖಚರ ಮಿಥುನ ಸನಾಥಮುಂ | ರತ್ನ ತೋರಣ ಮಾಲಾ ವಿರಾಜಿತಮುಂ | ರತ್ನದಂಡಧರ ಜ್ಯೋತಿರಮರ ದೌವಾರಿಕಾಭಿ ರಕ್ಷಿತಮುಂ | ತ್ರಿಭುವನ ಜನ ನಯನ ವಿಸ್ಮಯ ಜನನ ಜನ್ಮ ಭೂಮಿಯೆನಿಸಿದ ಹಿರಣ್ಮಯ ಗೋಪುರ ದ್ವಾರ ಪುರೋಭಾಗದೊಳ್ನಿಂದೂ

ಹಿತ ಹಾತಿ ಜಾತನ ನಿರವಂ
ಚತುರಾಸ್ಯಂ ಚತುರ ಶಿತಿ ಲಕ್ಷ ಗುಣಾಲಂ
ಕೃತನಿರೆ ಸಂಮುಖ ದೊಳಾಂ
ಚತುರಂಗುಲದಂತರದೊಳ್ಮುಟ್ಟದೆ ಧರೆಯಂ ||

ಕಂಡು ಗಂಧಕುಟಿಯನೈದಿ ತ್ರಿಃಪ್ರದಕ್ಷಿಣಂಗೆಯ್ದು ಸಾಷ್ಟಾಂಗ ಪ್ರಣತನಾಗಿ ಕರ ಕಮಲಂಗಳಂ ಮುಗಿದು ಪರಮೇಶ್ವರಂಗಭಿಮುಖನಾಗಿ

ಜಯ ದುರಿತ ಹರಣ ನಿರುಪಮ
ಜಯ ಶಾಶ್ವತ ಸೌಖ್ಯದಾಯಿ ನಿತ್ಯಾನಂದಾ
ಜಯ ಮದನ ಮುದ ವಿಭಂಜನ
ಜಯ ಜಯ ಸರ್ವ್ವಜ್ಞ ಮೋಕ್ಷ ಲಕ್ಷ್ಮೀನಾಥಾ ||

ಯೆದಿಂತನೇಕ ಸ್ತುತಿ ಶತ ಸಹಸ್ರಂಗಳಿಂ ಸ್ತುತಿಯಿಸಿ ದಿವ್ಯಾರ್ಚ್ಛನೆಗಳಿನರ್ಚ್ಛಿಸಿ ಪೊಡೆವಟ್ಟು ತದನಂತರಂ | ಗೌತಮ ಗಣಧರ ಸ್ವಾಮಿಗಳ್ಮೊದಲಾದ ಮುನಿ ಸಮುದಾಯಮಂ | ಯಥಾಕ್ರಮದಿ ಪೂಜಿಸಿ ಬಂದು ಮನುಷ್ಯ ಕೋಷ್ಟದೊಳ್ಕುಳ್ಳಿರ್ದ್ದು ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಾನಂತರಂ ಚೇಳಿನಿ ಮಹಾದೇವಿ ಗೌತಮ ಗಣಧರ ಸ್ವಾಮಿಗಳ್ಗೆ | ಕರಕಮಲಂಗಳ ಮುಕುಳಿತೆಯಾಗಿ

|| ಕ || ಯೆನಗೆ ಬೆಸಸುವುದು ಕೃಪೆಯಿಂ
ದನಂತ ಸುಖಕರಮೆನಿಪ್ಪ ನೋಂಪಿಯನೊಂದಂ
ಮನಮೊಸದು ನೋಂಪೆವೆಂದೆನೆ
ಮುನಿಪತಿ ಚೇಳಿನಿಗೆ ಜಿನರನುಜ್ಞೆಯಿನಾಗಳೂ ||

ಅನಂತ ಸ್ವಾಮಿಯಯಂ ನೋಂಪುವುದೆನಲಾ ನೋಂಪಿಯ ವಿಧಾನಮಂ ಬೆಸಸಿಮೆನಲಿಂತೆಂದು ಬೆಸಸಿದರ್ಭಾದ್ರಪದ ಶುದ್ಧ ಚತುರ್ದ್ದಶಿಯಂದಾ ಪರಮೇಶ್ವರಂ ನವ ಕ್ಷಾಯಿಕಲಬ್ದಿಗಳಾದಿನಾಥನಪ್ಪುದಱಿಂ ತಾವರೆಯ ತಂತುವಿನೊಳಾನುಂ ಪಟ್ಟಸೂತ್ರದೊಳಾನುಂ | ಶುದ್ಧಮಪ್ಪ ಕಾರ್ಪಾಸ ಸೂತ್ರದೊಳಾನುಂ | ವೊಂಭತ್ತೆಳೆಯ ದಾರಮಂ ಮಾಡಿ | ದಾರದೊಳಾದಿ ಭಟ್ಟಾರಕರ್ಮ್ಮೊದಲಾಗಿ ಅನಂತ ಭಟ್ಟಾರಕರ್ಪ್ಪರಿಯಂತಮಿರ್ದ್ದ ತೀರ್ತ್ಥಕರ ಸಂಖೆಯ ಗಂಟುಗಳಂ ಮಾಡಿ ಮಗಧ ದೇಶದೊಳೊಬ್ಬಳ ಗೋದುವಯೆರ ಪಿಟ್ಟಿಂದಪ್ಪತ್ತೆಂಟು ಮಂಡಗೆಯಂಗಳಂ ಮಾಡಿ ನೋಂಪವರ್ದ್ಧಂತದಾವನ ಸ್ನಾನನಾಚಮನಾದಿಗಳಂ ಮಾಡಿ ದೌತ ವಸ್ತ್ರಮನುಟ್ಟು ಶುಚಿರ್ಬ್ಭೂತರಾಗಿಯಷ್ಟ ವಿಧಾರ್ಚ್ಛನೆಗಳಂ ಕೊಂಡು ಚೈತ್ಯಾಲಯಕ್ಕೆ ಬಂದು ಚತುರ್ವ್ವಿಂಶತಿ ತೀರ್ತ್ಥಕ ಪರಮೇಶ್ವರರ್ಗ್ಗೆ ವಿಧಿಪೂರ್ವ್ವಕಮಭಿಷೇಕಮಂ ಮಾಡಿ ಓಂ ನಮೋರ್ಹತೇ ಭಗವತೇ ಅನಂತ ತೀರ್ತ್ಥಕರಾಯ ಪ್ರಕ್ಷಿಣಾಶೇಷಕಲ್ಮಷಾಯ ದಿವ್ಯತೋಜೋ ಮರ್ತ್ತಯೇ ನಮಃ ಸ್ವಾಹಾ | ಯೆಂದೀಮಂತ್ರದಿಂದಷ್ಟ ವಿಧಾರ್ಚನೆಯಂ ಮಾಡಿ ತದನಂತರಂ | ಶ್ರೀ ವೃಷಭಾಜಿತ ಶಂಭವ ಅಭಿನಂದನ ಸುಮತಿ ಪದ್ಮಪ್ರಭ ಸುಪಾರಿಶ್ವ ಚಂದ್ರಪ್ರಭ ಪುಷ್ಪದಂತ ಶೀತಳ ಶ್ರೇಯಾಂಸ ವಾಸುಪೂಜ್ಯ ವಿಮಲಾನಂತರೆಂದಿಂತು ಪದಿನಾಲ್ಕು ತೀರ್ಥಕರನಾಮೋಚ್ಛರಣಂಗೈದು ಗಂಟುಗಳೊಳಂ ಸದ್ಭಾವ ಸ್ಥಾಪನೆಗೆಯ್ದು ಮುಜ್ವಲನಂತ ಸ್ವಾಮಿಯನಾಹತದೊಳಾನುಂ ರತ್ನತ್ರಯನಾಹತದೊಳಾನುಂ ದಾರಮಂ ಗೋರೋಚನ ಕುಂಕುಮ ಕರ್ಪ್ಪೂರ ಮಿಶ್ರಿತ ಗಂಧದಿಂ ತೋಯ್ದು | ಯಂತ್ರದ ಮೇಲೆ ಸ್ಥಾಪ್ಯಂ ಮಾಡಿ | ಓಂ ನಮರ್ಹತೇ ಭಗವತೇ ತ್ರೈಲೋಕ್ಯ ನಾಥಾಯ ಅನಂತ ಜ್ಞಾನ ದರ್ಶನ ವೀರ್ಯ್ಯ ಸುಖಾತ್ಮಕಾಯ ಅನಂತ ತೀರ್ಥಕರಾಯ ನಮಃ ಸ್ವಾಹಾ | ಯೆಂದೀ ಮಂತ್ರದಿಂ ಪದಿನಾಲ್ಕು ಜಲಧಾರೆ | ಪದಿನಾಲ್ಕು ಸೂಳ್ಗಂಧ ಪದಿನಾಲ್ಕು ಪಿಡಿಯಕ್ಕಿ ಪದಿನಾಲ್ಕು ತೆಱದ ಪುಷ್ಪಂ ಪೂವಿಂದಿಪ್ಪತ್ತೆಂಟು ಮಂಡಗೆಗಳೊಳು ಪದಿನಾಲ್ಕು ಮಂಡಗೆಗಳು ಒಂದು ಬೆಲ್ಲದಚ್ಚು ಘೃತ ಬೆರಡು ಚರವಿಟ್ಟು ಪದಿನಾಲ್ಕು ಸೂಳ್ಕರ್ಪ್ಪೂರದಾರತಿಗಳುಂ | ಪದಿನಾಲ್ಕು ಸೂಳ್ದೂಪಂಗಳುಂ | ಪದಿನಾಲ್ಕೆಲೆ | ಪದಿನಾಲ್ಕಡಕೆಗಳುಂ | ಪದಿನಾಲ್ಕು ತೆಱದ ಫಲ ವಸ್ತುಗಳುಮೆಂದಿವಱಿಂದರ್ಚ್ಚಿಸಿ || ಓಂ ಹ್ರೀಂ ಅನಂತ ತೀರ್ಥಕರಾಯ ಓಂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಃ ಅ ಸಿ ಆ ಉ ಸಾ ಮಮಸರ್ವ್ವ ಶಾಂತಿಂ ಪುಷ್ಟಿಂ ತುಷ್ಟಿಂ ಸೌಭಾಗ್ಯಮಾಯುರಾರೋಗ್ಯಮೈಶ್ವರ್ಯ್ಯಮಿಷ್ಟ ಸಿದ್ಧಿಂ ಕುರು ಕುರು ಸರ್ವ್ವರೋಗಾಪಮೃತ್ಯು ವಿನಾಶನಂ ಕುರು ವಷಟ್‌ಯೆಂದೀ ಮಂತ್ರದಿಂದರ್ಗ್ಭ್ಯಮನೆತ್ತಿ ಬಳಿಕ್ಕೇನಾನುಂ ಸುವರ್ಣ್ನಮಂ ದೇವತಾ ಸಂಕಲ್ಪದಿಂ ಮಡಗಿ ತದನಂತರಂ | ಜೀ ಐಮ್‌ ಶ್ರೀರ್‌ ಹ್ರೀರ್‌ ಅರ್ಹಂ ಸರ್ವ್ವ ಶಾಂತಿಂ ಕುರು ಕುರು ವಷಟ್‌ ಯೆಂದೀ ಮಂತ್ರದಿಂ ದಾರಮಂ ಬಲದ ಕರ್ನ್ನದೊಳಾನುಂ | ಬಲದ ತೋಳೊಳಾನುಂ ಕಟ್ಟಿ ಓಂ ಐಂ ಹ್ರೀಂ ಸರ್ವ್ವ ಕರ್ಮ ಬಂಧನ ವಿನಿರ್ಮಕ್ತಾಯ ಅನಂತ ತೀರ್ತ್ಥಕರಾಯ ಅನಂತ ಸುಖ ಪ್ರದಾಯ ನಮಃ ಸ್ವಾಹಾ | ಎಂದೀ ಮಂತ್ರದಿಂ ಪಳೆಯ ದಾರಮಂ ಬಿಟ್ಟು ಶ್ರುತಮಂ ಗುರುಗಳುಮಂ ಪೂಜಿಸಿ ಪಡವಟ್ಟು ಬ್ರಹ್ಮಚರ್ಯ್ಯ ಪೂರ್ವ್ವಕಮುಪವಾಸಮಂ ಮಾಳ್ಪುದಾಱದೊಡೇಕ ಭುಕ್ತಮಂ ಮಾಳ್ಪುದುಳಿದ ಪದಿನಾಲ್ಕು ಮಂಡಗೆಗಳುಮೊಂದು ಬೆಲ್ಲದಚ್ಚುಮಂ ಘೃತಂ ಬೆರಸು ಪದಿನಾಲ್ಕಡಕೆ ಪದಿನಾಲ್ಕೆಲೆ ಪದಿನಾಲ್ಕು ತೆಱದ ಫಲವಸ್ತುಗಳ್ವೆರಸು ಅಮಳ್ಪಡಲಿಗೆಗಳೊಳಿಟ್ಟು ನೂಲಂ ಸುತ್ತಿ ಕಥೆಯಂ ಕೇಳ್ದು ಜೈನೋತ್ತಮ ಬ್ರಾಹ್ಮಣಂಗೆ ಸದಕ್ಷಿಣಮಾಗಿ ಬಾಯಿನಮನಿತ್ತು ಮನೆಗೆ ಪೋಗಿ ಪಾಲುಂ ಸರ್ಕ್ಕರೆ ಘೃತವೆರಸು ಮಂಡಗೆಗಳನೆ ಯೇಕಭಕ್ತಮಂ ಮಾಳ್ಪುದಿದು ನೋಂಪಿಯ ವಿಧಾನಮೀ ಪಾಂಗಿನಿಂದಿರೇಳುವರುಷಂಬರಂ ನೋಂತ್ತುಜ್ಜವಣೆಯಂ ಮಾಳ್ಪಾಗ ಭಾದ್ರಪದ ಶುದ್ಧ ಚತುರ್ದ್ಧಶಿಯಂದ ಪ್ರತಿಷ್ಠಾ ವಿಧಾನದಿಂ ವೇದಕೆಯನಿಕ್ಕಿ ಭೃಂಗಾರಛತ್ರ ಧ್ವಜ ಪತಾಕೆಗಳಂ ಮಾಡಿಸಿ ನಾಂದೀ ಮುಖದೊಳು ಪದಿನಾಲ್ಕು ಜೈನ ಮಿಥುನಂಗಳ್ಗುಣಲಿಕ್ಕೆ ಉಡಕೊಡುವುದು ಮಹಾ ಪೂಜೆಯಂ ಮಾಳ್ಪುದು ಚಾತುರ್ವ್ವನ್ನಕ್ಕಾಹಾರ ದಾನ ಪುರಸ್ಸರಂ ಪೂಜೆಯಂ ಮಾಳ್ಪುದು ಪದಿನಾಲ್ಕು ತಂಡ ಋಷಿಯರ್ಗ್ಗೆ ತಟ್ಟು ಕುಂಚ ಠವಣೆ ಕೋಲುಮಂ ಕುಡುವುದುಮನಂತನಾಥ ಪುರಾಣಮನೊಂದಂ ಬರಸುವುದು ಬಡವರೊಡೆಯರೆಂನದೆ ಯಥಾಶಕ್ತಿಯಿಂ ನೋಂತು | ದೇವರಿಗೆ ಘಂಟೆ ಜಯ ಘಂಟೆ ಆರತಿ ಧೂಪ ಗುಂಡಿಗೆ ದೇವಚ್ಛಂದ ಹೀಳಿವಳಿಗೆ ನಕ್ಷತ್ರ ಮಾಲೆಗಳೆಂಬಿವಂ ಕುಡುವುದು | ಜಾಗರಣೆಯಂ ಮಾಳ್ಪುದು ದೇವ ಪೂಜೆಯಂ ಮಾಳ್ಪುದು | ಪದಿನಾಲ್ಕು ತಂಡಜ್ಜಿಯರ್ಗ್ಗುಡ ಕೊಡುವುದು | ಯೆಂದಿಂತುದ್ಯಾಪನೆಯ ವಿಧಾನಮಂ ಪೇಳಲೊಡಂ | ಮುಂನಮೀ ನೋಂಪಿಯಂ ಅನಂತ ಸುಖಾ ಪ್ರಾಪ್ತಿ ನಿಮಿತ್ತಮಾಗಿ ನೋಂತ ಮಹಾಪುರುಷ ಕಥೆಯಂ ಬೆಸಸಿ ಮೆನಲಿಂತೆಂದು ಬೆಸಸಿದರೂ

|| ಕ || ಭರತದೊಳಾರ್ಯ್ಯಾ ಖಂಡದ
ಕುರುಜಾಂಗಣ ವಿಷಯಂ ಮೇಗೆ ನಾಭಿಯೊಲಿಕ್ಕುಂ
ವರಹಸ್ತಿನಾಪುರಂ ತಂ
ನರನಾಥಂ ಶಾಂತನೆಂಬನೂರ್ಜ್ಜಿತ ತೇಜಂ ||

ಆ ನೃಪನಮನೋವಲ್ಲಭೆ
ಭೂನುತ ಸಚ್ಚರಿತೆ ವಿಮಲ ಗಂಗೆ ಬುಧರ್ತ್ತ
ನ್ಮಾನಿನಿಯಂ ಜಾಹ್ನವಿಯೆನ
ಲೇನಿಳೆಯೊಳು ನಿಂದು ಮಲಿನೆಯಾದಳು ಬಗೆಯಲೂ ||

ಅಂತವರ್ಪ್ಪಲಕಾಲಂ ರಾಜ್ಯ ಸುಖಮನನುಭವಿಸುತ್ತಮಿರೆ ತತ್ಪುರದ ರಾಜಶ್ರೇಷ್ಠಿ ಸುದರ್ಶನನೆಂಬನಾತನ ಕುಲವಧು ಸನ್ಮತಿಯೆಂಬಳಾ ಯಿರ್ವ್ವರ್ಗ್ಗಂ |

ಗುಣವತಿಯೆಂಬ ತನೂಭವೆ
ಸೆಣಸುವಳು ಸಜ್ಜನ ರತಿಯೊಳತಿ ರೂಪತೆಯಿಂ
ದಣಕಿಪಳು ನಾಗ ಕಂನೆಯ
ನೆಣೆಯೆನೆ ಮುಡಿಪೆಱಗೆ ವಿಷದ ಪೆಡೆಯಪ್ಪುದಱೆಂ ||

ಅಂತಾಕೆ ಶೈಶವಂ ಪತ್ತುವಿಟ್ಟು ತತ್ಪುರ ವರದ ಕಮನೀಯಾಂತಮೆಂಬ ಜೈತ್ಯಾಲಯದೊಳು ಸುಪ್ರಭಾರ್ಯ್ಯಾಕೆಯರ ಸಮೀಪದೊಳಕ್ಷರಾಭ್ಯಾಸಮಂ ಮಾಡುತಿರಲೊಂದು ದಿವಸಮನಂತ ಸ್ವಾಮಿಯ ನೋಂಪಿಯಂ

|| ವೃ || ಭವ್ಯಜನಂಗಳಂ ದುರಿತ ಭೀರುಗಳಂ ಗುಣ ಪಕ್ಷಪಾತರಂ
ಸೇವ್ಯರನೆಲ್ಲರಂ ನೆರಪಿ ನೋನಿಸುತಿರ್ದ್ದಡೆ ಸುಪ್ರಭಾಖ್ಯೆಯ
ರ್ನ್ನವ್ಯಮಿದಾವ ನೋಂಪಿ ಪೆಸರಾವುದು ನೋಂಪ ವಿಧಾನಮೆಂತೆನಲ್

ಶ್ರವ್ಯಮಿದಕ್ಕ ಕೇಳ್ನಿನಗೆ ಪೇಳ್ದಪೆಮೆಂದುಸಿರ್ದ್ಧರ್ಸ್ಸವಿಸ್ತರಂ ||

|| ವ || ಅಂತು ಪೇಳ್ದು ಗುಣವತಿಗಮಿಂತೆಂದರಾದಿ ಪರಮೇಶ್ವರನ ಸಮವಸರಣಕ್ಕೆ ಭರತೇಶ್ವರ ಚಕ್ರವರ್ತ್ತಿ ಬಂದು ಗಂಧಕುಟಿಯಂ ತ್ರಿಪ್ರದಕ್ಷಿಣಂಗೆಯ್ದು ಸಾಷ್ಟಾಂಗ ಪ್ರಣತನಾಗಿ ಕರಕಮಲಂಗಳಂ ಮುಗಿದು ವೃಷಭೇಶ್ವರಂಗಭಿಮುಖನಾಗಿ

|| ಕ || ಶ್ರಣಾಗು ಕಂತು ಮದಹರ
ಶರಣಾಗಮರೇಂದ್ರ ವಂದ್ಯ ನಿರುಪಮ ಮಹಿಮಾ
ಶರಣಾಗನಂತ ಬೋಧಾ
ಶರಣಾಗೆಮಗಾವಭವದೊಳಂ ವೃಷಭಜಿನಾ ||

ಯೆಂದಿಂತನೇಕ ಸ್ತುತಿ ಶತ ಸಹಸ್ರಂಗಳಿಂ ಸ್ತುತಿಯಿಸಿ ದಿವ್ಯಾರ್ಚ್ಛನೆಗಳಿಂದರ್ಚ್ಛಿಸಿ ಪೊಡವಟ್ಟು ವೃಷಭಸೇನ ಗಣಧರರ್ಗ್ಗೆ ಕರಕಮಲಂಗಳಂ ಮುಗಿದು

|| ವೃ || ಧರೆಯ ಷಟ್ಖಂಡಮಂ ಸಾಧಿಸುವೆಡೆಯೊಳ್ಮಾಱಾಂರಿಲ್ಲೇಕೆ ಚಕ್ರಂ
ಪುರಮಂ ಸಾಕೇತಮಂ ನಾಂಪುಗೆ ಪುಗದಗಂಜಗೊಪ್ಪಿಸಿತ್ತೇಕೆ ನಂಸಂ
ಪುರದೇವಂಗಲ್ಲ ದಾಮಿಂನೆಱಗೆಮೆನುತರೆಂನ್ನನುಜರುಂ ದೀಕ್ಷೆಗೊಂಡ
ರ್ಪ್ಪುರಡಿಂದೇಂನಂಕಮಲಾಕ್ಷರ ಕೆಡೆಗುಡದೆ ಕಾರಣಂ ನಾಭಿ ಶೈಲಂ ||

ಯೆಂದಿಂತು ರಾಜಾಧಿರಾಜಂ ಬೆಸಗೊಳ್ವುದುಂ

|| ವೃ || ಭುವನ ಪ್ರಸ್ತುತ್ಯ ಭೂಭೃತ್ಕುಲ ಮಕುಟಮಣಿ ಜ್ಯೋತಿ ತೀತ್ತ್ಥ ಪ್ರಭಾವಂ
ಪವಿತ್ರಾಂಫ್ರಿದ್ವಂದ್ವಕಲ್ವಕರಮುಮವಸಂಖ್ಯಾತ ಮಾವರ್ತ್ತಿಸರ್ಕೊಂ
ದವರಪ್ಪ್ಪಂ ಪುಂಡಪೂರ್ವ್ವಂಣ ಪರ ಪರಿಣಮದ್ದುಷ್ಟಕಾಲ ಪ್ರಭಾವಂ
ಭವದೀಯ ಪ್ರಾಗುಪಾತ್ರ ಪ್ರಬಲ ದುರಘು ದುರ್ವ್ವಾರಪಾತ ಪ್ರಭಾವಂ ||

|| ವ || ಯೆಂದಿಂತು ವೃಷಭಸೇನ ಗನಧರ ಸ್ವಾಮಿಗಳು ಬೆಸಸವುದುಮಂತಾದೊಡಾ ದುಷ್ಕೃತಾನುಭಾಗ ವಿಪಾಕ ಸಂಜನಿತಾತ್ಮ ಸಂಕ್ಲೇಶ ವಿನಾಶ ಹೇತು ಭೂತಮಪ್ಪುದಾವುದಾನುಮೊಂದು ನೋಂಪಿಯಂ ಬೆಸಸಿಸಮೆನಲವರ್ಸ್ಸವ್ವ್ವಜ್ಞನಾಜ್ಞೆಯಿಂದಿಂತೆಂದು ಪೇಳ್ದರೀಯಾದಿ ತೀರ್ಥೇಶ್ವರಂಗೆ ಪದಿನಾಲ್ಕನೆಯಂ ಕೌಶಲಪುರಮನಾಳ್ವ ಸಿಂಹಸೇನಮಹಾರಾಜಂಗಂ ಲಕ್ಷುಮಣ ಮಹಾದೇವಿಗಂ ಪುಟ್ಟುಗುಮಾ ಪರಮೇಶ್ವರದನುದಯದೊಳು ದೇವೇಂದ್ರನಾಜ್ಞೆಯೆಂದನದಂ ಪಂಚರತ್ಮ ಸಮೇತಂ ಸುವರ್ನ್ನ ವೃಷ್ಟಿಯಂ ಪದಿನೈದು ತಿಂಗಳ್ವರಂ ಕಱೆಯಲಾ ಪುರ ಜನಂಗಳೆಲ್ಲಂ ಧನಕನಕ ಸಮೃದ್ಧರುಂ ಸುರಭಿಗಳುಮಪ್ಪರಿಲ್ದಿಗಳುಂ ಕ್ಷಾಮ ಡಾಮರಂಗಳುಂ ಕಿಡುಗುಮಾ ಪರಮೇಶ್ವರಂಗನಂತ ಸ್ವಾಮಿಯೆಂಬ ಪೆಸರಪ್ಪುದಾ ಪರಮೇಶ್ವರನಂ ನೀನೋಂಪುದಂತು ನೋನುತ್ತಮಿರಲು ದುರಿತ ಮೂಲಂಗಳಪ್ಪ ಸರ್ವ್ವ ವಿಘ್ನಂಗಳುಂ ದುರಿತಂಗಳೂಮ ನಿರ್ಮ್ಮೂಲಂಗಳಪುವೆಂದಾ ನೋಂಪಿಯವಿಧಾನಮಂ ಮುಂ ಪೇಳ್ದಂತೆ ಪೇಳ್ದೊಡೆ ಪಿರಿದುಂ ಸಂತೋಷಮನೆಯ್ದಿ ನೋಂಪಿಯಂ ಕೈಕೊಂಡು

|| ವೃ|| ಜಿನರಂ ಬೀಳ್ಕೊಂಡು ಮತ್ತಂ ಸಕಲ ಗಣಧರರ್ಗ್ಗಾಗಳಾ ನಮ್ರನಾಗ
ಲ್ಕೆನಸುಂ ವಾತ್ಸಲ್ಯ ಶೋಭಾನ್ವಿತನತುಲ ಗಜಾರೂಢನಾಗಲ್ಕೆ ಶಂಖ
ಸ್ವನಮುಂ ಬಂಬಾ ಮೃದಂಗ ಸ್ವನಮೆಸಯೆ ಚಲಚ್ಚಾಮರಾನೀಕಮೊಪ್ಪ
ಲ್ಮನುಜೇಂದ್ರಂ ಬಂದಯೋಧ್ಯಾಪುರಮನನುಪಮಂ ಪೊಕ್ಕನುತ್ಸಾಹದಿಂದಂ ||

ಅಂತು ಪುರಮನರಮನೆಯಂ ಪೊಕ್ಕು ರಾಜಾಧಿರಾಜಂ ವೃಷಭಸೇನ ಗಣಧರ ಸ್ವಾಮಿಗಳ್ಪೆಸಸಿದಂದದಿಂ ನೋಂಪಿಯಂ ಮಾಳ್ಪಾಗಳೇಕಾದಶೋಪಾಸಕ ನಿಕಾಯಮಂ ಬರಿಸಿ ತಾವರೆಯ ತಂತವಿಂ ತ್ರಿಗುಣ ನವಪ್ರಮಾಣಮಪ್ಪಿಪ್ಪತ್ತೇಳೆಳೆಯ ಯಜ್ಞೋಪವೀತಮಂ ರತ್ನತ್ರಯ ದ್ಯೋತಕಮೆಂದವರ ಕೊರಳೊಳಿಕ್ಕಿ ತಂನ ತೋಳೊಳೀರೇಳು ಗಂಟಿನ ದಾರಮಂ ಕಟ್ಟಿ ಬಹುರತ್ನ ಸುವರ್ನ್ನ ಸಮೇತಂ ಬಾಯಿನಮನಿತ್ತು ಪದಿನಾಲ್ಕು ವರುಷಂಬರಮೀ ಪಾಂಗಿನಿಂ ನೋಂತುಜ್ಜವಣೆಯಂ ಮಹಾ ವಿಭೂತಿಯಿಂ ಮಾಡಿದನೆಂದು ಸುಪ್ರಭಾರ್ಯಿಕೆಯರ್ಗ್ಗುಣವತಿಗೆ ಪೇಳೆ ಕೇಳ್ದಾ ನೋಂಪಿಯಂ ಗುಣವತಿಯುಂ ಕೈಕೊಂಡು ಭಕ್ತಿಯಿಂ ನೋನುತ್ತಮಿರ್ದ್ದಳಿತ್ತಲೂ

|| ವೃ || ತುಂಗಭುಜಂ ಸಮಸ್ತ ರಿಪುರಾಜಕ ರಾಜಿತಮಂಡಲಿಂಗಳಂ
ನುಂಗುವ ಮಂಡಲಾಗ್ರರಸನೊಗ್ರ ವಿದುಂತುದ ಮಾರಿ ರಂಜಿಪಾ
ತುಂಗಭುಜಂ ಸುದರ್ಶನ ತನೂಜಿಯ ರೂಪನನೇಕರಿಂ ಮನಂ
ರಂಗಿಸಿ ಕೇಳ್ದು ತದ್ರಮಣಿಗಾಟಿಸಿ ಚಿಂತಿಸುತಿರ್ಪ್ಪ ನಿರ್ಪ್ಪಿನಂ ||

ಅನಂತರಂ ಮಂತ್ರಿಗಳೊಂದು ದಿವಸಂ ನಿಂಮಡಿಗಳ್ಗೆ ರುಜೆಯಿಲ್ಲದೆಯುಂ ಶರೀರಂ ಬಡವಪ್ಪುದಕ್ಕೆ ಕಾರಣಮೇನೆಂದು ಬೆಸಗೊಳ್ವದುಮವರ್ಗ್ಗಿಂತೆಂದಂ ಸುದರ್ಶನ ಸೆಟ್ಟಿಯು ಜೈನನಪುದಱಿಂ ಕೂಸಂ ಬೇಡಿದೊಡೆಮಗೀವನಲ್ಲದಱೆಂದನಗೆ ತತ್ತನೂಜಾ ಸಂಗಂ ಕೊರೆಕೊಳ್ಳದಿರ್ದ್ದಡೆ ಮದೀಯಾ ಸಂಗಂ ದೊರೆಕೊಳ್ಳದೆಂಬುದುಂ ನಿಜಸ್ವಾಮಿಯ ಮನೋಗತಮನಱೆದಿಂತೆಂದರಾದೊಡೆಮೇನಾಯ್ತು ಸುದರ್ಶನ ಸೆಟ್ಟಿಯಂ ಕೂಸಂ ಬೇಡಿ ಕಳುಪುವುದುಮಾತಂ ಕುಡದಿರ್ದ್ದ ಪಕ್ಷದೊಳದಕ್ಕೆ ತಕ್ಕುದಂ ಕಾಣಲಕ್ಕುಮಿದಕ್ಕಿನಿತು ಚಿಂತೆಯಂ ಮನದೊಳಿರಿಸಿ ಶರೀರಮಂ ಕೃಶಂ ಮಾಡಲ್ವೇಡೆಂದಾಳೋಚಿಸಿ ಸುದರ್ಶನ ಸೆಟ್ಟಿಯರಲ್ಲಿಗೆ ತಂಮ ಪ್ರಧಾನ ಪುರುಷರಂ ಸಮಕಟ್ಟಿ ಕಳಿಪಿದೊಡವರ್ಪ್ಪೋಗಿ ಹಸ್ತಿನಾಪುರಮನೈದಿ ಸುದರ್ಶನ ಸೆಟ್ಟಿಯಂ ಕಂಡು ಕೂಸಂ ಬೇಡುವುದುಂ ನಿಂಮರಸನೆಂಮೊಳು ಕೊಳುಕೊಡುಗೆಗೆ ಯೋಗ್ಯನಲ್ಲನೀಯೆನೆಂದು ಬಂದೆಂಯೆಂದು ನಿರಾಕರಿಸಿ ಕಳೆದೊಡವರ್ಭಂಗಿತರಾಗಿ ಪೋಗಿ ತಂಮರಸಂಗೆ ಪೋಳ್ದೊಡಾ ಕನ್ಯಾಲೋಭದಿಂ ತಂನ ಭೃತ್ಯರಪ್ಪ ವಿದ್ಯುನ್ಮಾಲಿಯುಮನಂತ ಮಾಲಿಯುಮೆಂಬಿರ್ವ್ವರ್ಮಾಯಾವಿಗಳಂ ಕಳಿಪಿದೊಡವರ್ಗ್ಗುಣವತಿಯೋದುತ್ತಿರ್ಪ್ಪ ಚೈತ್ಯಾಲಯಕ್ಕೆ ಬಂದು

|| ವೃ || ಕಾವಿಯ ತಡುಪು ಭಾಳದೊಳು ಬೊಟ್ಟು ಕೊರಳ್ಗೊಳುತ್ತರೀಯಕಂ
ಜೀವಮನೋವ್ರತಂ ತದೀಯ ನೊಯ್ಯನಿಡುತೋಳು ಪೊಕ್ಕು ಡಂಬಕ
ರ್ತ್ತಾವರೆ ಪೂಗಳಿಂ ಜಿನನರ್ಚ್ಚಿಸಿ ಮಂದಕರಂತೆ ಮೌನದಿಂ
ಶ್ರಾವಕವೇಷದಿಂ ವಿಷಕರಂಡಕ ಸಂನಿಭರಿರ್ದ್ದರಿರ್ವ್ವರುಂ ||

|| ವ || ಅಂತು ಕಿಱಿದು ಪೊತ್ತು ಪಲ್ಲಯಂಕಾಸನದಿಂ ಬೆರಳ್ಗಳನೆಣಿಸಿ ಬಂದು ರಂಗಮಂಟಪ ದೊಳ್ಕುಳ್ಳಿರ್ಪ್ಪುದುಂ ಗುಣವತಿ ಸಮಯ ವಾತ್ಸಲ್ಯದಿಂ ನೀಮೆಮಗಿಂದಭ್ಯಾಗತ ರಾಗಿಮೆಂಬುದುಮವರಿಂತೆಂದರ

|| ಕಂ || ಉಪವಾಸಮೆಮಗೆನಲ್ನೀ
ಮುಪವಾಸಮಂ ಮಾಳ್ಪಿರೆಂದೆನಲೆಂದ
ರ್ಸ್ವಪುರ ಬಹಿರ್ಭಾಗದೊಳಿ
ರ್ದ್ದಪುದಾನಂದಕರ ಜಿನಗೃಹಂ ತೀರ್ತ್ಥಮದಂ ||

|| ವ || ವಂದಿಸಿ ಬಂದು ನಾಳೆ ಪಾರಣೆಯಂ ಮಾಳ್ಪೆಮೆನಲಂತಾದೊಡಾನುಂ ನಿಂಮೊಡನೆ ಬಂದು ತೀರ್ತ್ಥವಂದನೆಯಂ ಮಾಳ್ಪೆನೆನೆ ಕರಮೊಳ್ಳಿತ್ತು ಬಂನ್ನಿಮೆಂದೊಡಗೊಂಡು ಪೋಪಾಗಳೂ

|| ವೃ || ಅತ್ತರಲ್ಜಿನೇಂದ್ರ ಗೃಹಮಿತ್ತಲಿದೇನೆಳದೊಯ್ವಿರಂ ನಾನೀ
ಮುತ್ತಮರೆಂದು ನಂಬಿ ಬರೆ ನಿಂಮೊಡನೆನ್ನನಗಲ್ಚಿ ತಂದೆಯಂ
ಪೆತ್ತಳನೆಂದು ನೊಂದು ನಡೆಗಟ್ಟಳನಿರ್ವ್ವರುಮೆತ್ತಿಕೊಂಡು ಪೋ
ಗುತ್ತಿರಲುತ್ತು ಬಾಯ್ವಿಡುವ ಮುಗ್ಧೆಯನೊಯ್ದರತೀವ ಲುಬ್ಧಕರೂ ||

ಅಂನೆಗಂ

ತರುಣೀ ರತ್ನಮನಿಂದೆ ತಂದು ನಿನಗಾಮಿತ್ತಪ್ಪೆಮಾವಂದದಿಂ
ಬರವಂ ಪಾರ್ದ್ಧಿರೆನುತ್ತೆ ಪೋದರವರಿಂತೇನಾದರೆಂದಿಂತೆನು
ತ್ತಿರೆ ಬಂದರ್ಬ್ಬೆರಗಾಗೆ ಮುಳ್ಗಿ ಪದದೊಳ್
ಸ್ತ್ರೀರತ್ನಮಂ ಭೃತ್ಯರಾ
ನರನಾಥಂಗಿರದಿತ್ತು ಪೆತ್ತರೆಱೆಯಂ ಮೆಚ್ಚಿತ್ತು ಭಂಡಾರಮಂ ||

|| ವ || ಅಂತವರ್ಗ್ಗೆ ತುಷ್ಟಿದಾನಮನಿತ್ತು ಕಳಿಪಿ ತಾನಾ ಕನ್ಯಾರತ್ನಮನಾವಂದದಿಂ ತನಗೆ ವಂಶಂ ಮಾಡಲಾರದೆ ಸುದರ್ಶನ ಸೆಟ್ಟಿಯರಲ್ಲಿಗೆ

|| ವೃ || ವುಂಮಳಿಸಲ್ಕೆ ವೇಡ ಭವದೀಯ ತುನೂಜೆಗಪಾಯಮಿಲ್ಲ ಬಂ
ದೆಂಮ ಸಮೀಪದಲ್ಲಿ ಸುಖದಿಂದಿರುತಿರ್ದ್ದಪಳಾ ಮೃಗಾಕ್ಷಿಯಂ
ಘಂಮೆನೆ ಬಂದು ಮಾಳ್ಪುದು ವಿವಹವನೆಂನೊಡನೆಂದು ಭೂಭುಜಂ
ಸಂಮನಿಸಟ್ಟಿದಂ ಬಲು ಮನುಷ್ಯರನೋಲೆಯನಿತ್ತು ಬೇಗದಿಂ ||

|| ವ || ಅಂತಟ್ಟಿದಡವರ್ಪ್ಪೊಗಿ ಹಸ್ತಿನಾಪುರಮನೈದಿ ಸುದರ್ಶನ ಸೆಟ್ಟಿಯಂ ಕಂಡು ಪೊಡೆವಟ್ಟು ಲೇಖಾರ್ತ್ಥಮಂನೀವುದುಂ ಬಾಜಿಸಿ ನೋಡಿಯಶಕ್ಯಾನುಷ್ಟಾನಮಪ್ಪುದಱೆ ನೊಡಂಬಟ್ಟು ಪೋಗಿ ಮಹಾ ವಿಭೂತಿಯಿಂ ತುಂಗಭುಜ ಮಹಾರಾಜಂಗೆ ಗುಣವತಿಯಂ ಮದುವೆಯಂ ಮಾಡಿ ತಂನ ಪೊಳಲ್ಗೆ ಪೋದನಿತ್ತಲ್ಕೆಲವಾನುಂ ದಿವಸಕ್ಕೆ ನೋಂಪಿಯ ದಿವಸಂ ಬರೆ ಗುಣವತಿ ಮಹಾದೇವಿ ತಂನರಸಂಗೆಯನಂತ ಸ್ವಾಮಿಯ ನೋಂಪಿಯೆನಗುಂಟು ನೋಂಪಿಗೆ ತಕ್ಕ ಸಮಕಟ್ಟಂ ಕೊಡಿಮೆಂದೊಡಾಕೆಗಾತನತಿ ವಶಗತನಪ್ಪದಱೆಂ ಭಂಡಾರಿಗನಂ ಕರಯಿಸಿಯಿವರ್ಬ್ಬೇಡಿದುದೆಲ್ಲಮಂ ಕುಡೆಂದು ಸಮರ್ಪ್ಪಿಸಲಾತಂ ಗುಣವತಿ ಮಹಾದೇವಿ ಪೇಳಿದುದೆಲ್ಲಮಂ ಕುಡೆ ಕೊಂಡು ಸಮಕಟ್ಟಿ ಶುಚಿರ್ಬ್ಭೂತೆಯಾಗಿ ಚೈತ್ಯಾಲಯಕ್ಕೆ ಪೋಗಿ ಶುಭ ಪರಿಣಾಮದಿಂ ನೋಂಪಿಯಂ ನೋಂತು ಮಹಾ ಪೂಜೆಯಂ ಮಾಡಿ ಚಾತುರ್ವ್ವರ್ನ್ನಕ್ಕೆ ಪೂಜೆಯಂ ಮಾಡಿ ಬಾಯಿನಮಂನಿತ್ತು ಕಥೆಯಂ ಕೇಳ್ದು ಬಲದ ತೋಳೊಳೀರೇಳು ಗಂಟಿನ ದಾರಮಂ ಕಟ್ಟಿ ಮನೆಗೆ ಪೋಗಿ ಯೇಕ ಭುಕ್ತಮಂ ಮಾಡಿ ಮಱುದಿವಸಮರಸನ ಸೂಳ್ಗೆ ಪೋಗಿ ಕಿಱೆದು ಪೊಳ್ತಿಂದಾಕೆಯ ತೋಳೊಳು ಕಟ್ಟಿರ್ದ್ದ ದಾರಮಂ ಕಂಡಿದೇನೆಂದು ಬೆಸಗೊಂಡಡೆ ಅದನಂತಸ್ವಾಮಿಯ ನೋಂಪಿಯ ದಾಮೆಂದಡಿದು ಸವಣರಿದು ನಿನಗೆ ಕೊಟ್ಟ ವಶೀಕರಣದ ದಾರಮೆಂದದಂ ಪಱೆದು ಸಜ್ಜೆವಳನಿಟ್ಟು ಪೋದ ಧೂಪ ಘಟಾಗ್ನಿಯೊಳಿಕ್ಕಿ ಸುಡೆ ಗುಣವತಿ ಮಹಾದೇವಿ ಪತಿವ್ರತೆಯಪ್ಪುದಱೆಂದುಸುರದಿರೆ ಕೆಲವಾನು ದಿವಸಕ್ಕೆಯಾತನ ದಾಯಾದರೂ

|| ವೃ || ಕವಿತಂದೆಲ್ಲರುಮೆಯ್ದೆ ಸೂಱೆಗೊಳುತಂ ನಾಡಂ ಕೆಲರ್ಬ್ಬಂದು ಕಂ
ಡವರಂ ಸಂತವಿಡುತ್ತಮೀ ಧರೆಯಂ ಸಾಮಂತ ಸಂದೋಹಮಂ
ಸುವಿಧೇಯಂ ನೆಱೆ ಮಾಡಿ ಮುತ್ತಿ ಪುರಮಂ ಸಪ್ತಾಂಗಂ ಕೊಂಡರಾ
ಭುವನಾಧೀಶನನಂತ ತೀರ್ಥಕರನಾಜ್ಞಾ ಭಂಗಮೆಗೆಯ್ಯದೋ ||

|| ಕಂ || ತುಂಬಭುಜಶಿಖರದೊಳು ಸಿರಿ
ಸಂಗತಿಯಾಗಿರೆ ಸಪತ್ನಿಯಂ ಗುಣವತಿಯಂ
ತುಂಬಭುಜಂ ಭುಜದೊಳಿಡ
ಲ್ಪಿಂಗಿದಳೆನೆ ರಾಜ್ಯಲಕ್ಷಮಿ ಪೆಱಪಿಂಗಲೊಡಂ ||

|| ವ || ತಾನುಂ ಗುಣವತಿಯುಂ ಪುರಮಂ ಪೊಱಮಟ್ಟು ಪೋಗಿ ಗಿರಿಗಹ್ವರಂಗಳೊಳಿರಳ್ಕೆಯಿಗಳಿದಿರುತ್ತಂ ರಾಜ್ಯ ಭ್ರಷ್ಟನಾಗಿ ತೊಳಲುತ್ತೊಂದೆಡೆಯೊಳೂ

|| ವೃ || ಮನಮಂ ಕಟ್ಟಿ ಋಷಿಕ ಪಂಚಮುಮಂಗೆಲ್ದೋವಿ ಜೀವಂಗಳಂ
ತನು ತಾನಾನಲ್ಲೆ ನನಂತ ಬೋಧನುಮನೆ ಶಾಂತಾತ್ಮನಪ್ಪಾತ್ಮ
ನೆನೆಪಂ ತಂನೊಳು ತಂನನಪ್ರತಿಮನಂತಂ ನಿಂದೆ ಸಂಧಾನಿಪಾ
ಮುನಿಕೈಯಿಕ್ಕಿ ದೃಢ ಸಂಸ್ಥಿತನಿರಲ್ಕಂಡಂ ಮಹೀಪಾಲಕಂ ||

ಅಂತು ಕಂಡು

ಗುಣವತಿಗೆ ತೋಱೆ ನಾಮೀ
ಮಣಕಿನ ಸವಣನ ಕಂಡುದಱೆನಮಗಿಂನುಂ
ಉಣಲಿಹುದುಂ ದುಃಖಮೆನಲೀ
ಕ್ಷಣದೊಳೆ ಸುಖಿಯಪ್ಪೆಮಿವರ ದರ್ಶನದಿಂದಂ ||

|| ವ || ಯಿವರ್ಮ್ಮಹಾ ತಪೋಧನರಿವರಂ ಕಾಣ್ಬ ಸೈಪಾರ್ಗ್ಗೆ ದೊರೆಕೊಳ್ಗುಮೆಂದು ಗುಣವತಿ ಮಹಾದೇವಿ ಪೊಗಳೆ ತುಂಗಭುಜ ಮಹಾರಾಜಂ ತಂನ ಮನದೊಳೂ

|| ಕ || ತೊಟ್ಟನಿವರಂನ ರಾಜ್ಯಂ
ಕೆಟ್ಟಂದಮನೆ ಮಗಳೀವರಾದೊಡೆಱಗುವೆನೆಱಗೆಂ
ನೆಟ್ಟನದನಱೆಯದಿರ್ದ್ದೊಡೆ
ಬಿಟ್ಟಿಯೆ ಪೊಡವಡಿಕೆ ನಾಡ ತಿರಿಕರಿಗೆನುತಂ

|| ವ || ತಾನುಂ ಗುಣವತಿಯುಮವರ ಸಮೀಪಕ್ಕೆ ಬರೆ ಗುಣವತಿವೆಸರನ್ವರ್ತ್ಥಮಾಗೆ ಗುಣವತಿ ಮಹಾದೇವಿ ದೀಪವರ್ತ್ತಿ ನಿಧಾನಕ್ಕೆಱಗುವಂತೆಱಗಲವರ್ಪ್ಪರಸಿ ಮನಃ ಪರ್ಯ್ಯಾಯ ಜ್ಞಾನಿಗಳಪ್ಪುದಱೆಂದಮೀತಂ ಮಹಾಪುರುಷನುಮಾಸಂನ ಭವ್ಯನುಮೆಂದಱೆದೂ

|| ಕ || ಯೆಲೆ ತುಂಭುಜ ಮಹೀಪತಿ
ಮಲಿನಂಗೆಱಗುವಡೆ ನನ್ನ ರಾಜ್ಯಶ್ರೀಯೊಂ
ದಳಿವಂ ಬಲ್ಲಡೆ ವಂದಿಪೆ
ನುಳಿದಂತೇಕೆಱಪೆನೆನುತ ಮನದೊಳು ಬಂದೈ ||

ಯೆನೆ ತುಂಗಭುಜ ಮಹೀಪತಿ
ಮನದೊದೊಳ್ಪೆಱಗಾಗಿ ಮುನಿಯ ಪದಸರಸಿಜದೊಳು
ಮನದೆಱಕಂ ಪಿರಿದಾಗಿರೆ
ವಿನಯದೆ ಸಾಷ್ಟಾಂಗಮೆಱಗೆ ಮುನಿ ಪರಸಲೊಡಂ ||

|| ವ || ಸ್ವಾಮಿ ಯೆಂನ ರಾಜ್ಯಮದಾವ ಕಾರಣದಿಂ ಕೆಟ್ಟುದದಂ ಬೆಸಸಿಮೆನೆ ನೀನೀಗುಣವತಿ ಮಹಾದೇವಿಯ ತೋಳೊಳ್ಕಟ್ಟಿರ್ದ್ದ ಅನಂತಸ್ವಾಮಿಯ ನೋಂಪಿಯ ದಾರಮಂ ಸವಣರ್ನ್ನಿನಗೆ ಕೊಟ್ಟ ವಶೀಕರಣದ ದಾರಮೆಂದದಂ ಪಱೆದು ಸುಟ್ಟು ಕಳೆದೊಡೆ ಗುಣವತಿ ಮಹಾದೇವಿ ನಿನಗಂಜುವ ಕಾರಣದಿನುಸುರದಿರಲನಂತಮತಿ ಯಕ್ಷಿಯಂ ಬೆರಸು

|| ಕ || ಆಕ್ಷೂಣ ಧರ್ಮ್ಯ ರಕ್ಷಣ
ದಕ್ಷಂ ಪಾತಾಲಯಕ್ಷನು ಕ್ಷೋಭಿಸಿ ನೀ
ಭಿಕ್ಷಾಸನನಪ್ಪಂತಿರ
ಲಾಕ್ಷಣದಿಂ ಬಂದು ದಾಯಿಗರಿಂ ಮಾಡಿಸಿದಂ ಯೇಕೆಂದೊಡೆ

|| ಕ || ಅದು ಕೆಟ್ಟಡೆ ಕೆಡುವುದು ಸಿರಿ
ಯದು ಪಱೆದೊಡೆ ಪರಿವುದೆಸೆವುದಾಸೀನಂ ಮಾ
ಡಿದೊಡಂತೆ ತಂನ್ನುಮಂ ಬಗೆ
ಯದು ಲೋಕಂ ಸೂತ್ರ ಮದಱೆನವಹಿತ ಪಾತ್ರಂ ||

ಯೆಂದಾ ಮಹಾತಪೋ ಧನರ್ಬ್ಬೆಸಸೆ ತುಂಗಭುಜ ಮಹಾರಾಜ ಮನದೊಳ್ವಿಸ್ಮಯಂ ಬಟ್ಟು ಜಿನ ಧರ್ಮ್ಮ ಮಹಾತ್ಮ ದರ್ಶನದಿಂ ಮಿಥ್ಯಾತ್ವ ಕರ್ಮ್ಮೋಪಶಮನಾಪ್ತಾಗಮ ಪದಾರ್ತ್ಥ ಶ್ರದ್ಧಾನ ಪರಾಯಣನಾಗಿ ಯಿಂನೆಂನ ರಾಜ್ಯ ಪದಪ್ರಾಪ್ತಿಗಾವುದು ಕಾರಣಮದಂ ಬೆಸಸಿಮೆನಲನಂತ ಸ್ವಾಮಿಯಂ ಪಂಚ ವಿಂಶತಿ ಮಲರಹಿತಮಪ್ಪ ಸಮ್ಯಕ್ವ ಪೂರ್ವ್ವಕಂ ಶ್ರಾವಕ ವ್ರತಂಗಳಾಂ ತಾಳ್ದಿ ನೋಂತಡಕ್ಕು ಮೆಂದು ಪೇಳ್ದು ಮತ್ತಮಿಂತೆಂದರಿಂದಿನ ಬೆಳಗಪ್ಪ ಜಾವದೊಳು ಪಾತಾಳ ಯಕ್ಷನುಮನಂತಮತಿಯಕ್ಷಿಯುಂ | ನೀಂ ಜಿನಧರ್ಮ್ಮ ಪ್ರಾಪ್ತನಾದುದಕ್ಕೆ ಸಂತುಷ್ಟ ಚಿತ್ತರಾದರದು ಕಾರಣದಿಂ ಸ್ವಪ್ನದೊಳು ಬಂದನರ್ಗ್ಫ್ಯ ವಸ್ತು ವಾಹನಂಗಳುಮಂ ಛತ್ರ ಚಾಮರಂಗಳಾಂ ಕುಡುವುದುಮಂ ಕಾಣ್ಬಿರೆಂದು ಪರಸಿ ಪೋಪುದುಂ

ಜಂಗಮ ಜಿನರೆನಿಸಿದ ಮುನಿ
ಪುಂಗವರಿವರಲ್ಲದೆಮಗೆ ಪೆಱರಾಪ್ತರೆ ಮ
ತ್ತಂ ಗುಣ ವಿಧಾನರಂ ತಾಂ
ತುಂಗಭುಜಂ ನೋಡೆ ಕಣ್ಬೊಲಂಗಳಿವೆನಗಂ ||

|| ವ || ಅಂತವರಗಲ್ಕೆಗುಬ್ಬೆಗಂ ಬಟ್ಟು ತಾಯಿರ್ವ್ವರುಂ ಮುಂದಣ ಪೊಳಲಿಂಗ ಪೋಗಿ ಮಹೋತ್ಸವಮೆಂಬ ಚೈತ್ಯಾಲಯದೊಳು ನಿದ್ರೆಗೆಯ್ದು ಬೆಳಗಪ್ಪ ಜಾವದೊಳೊ

|| ಕ || ಮುನಿ ಪೇಳ್ದ ಮಾಳ್ಕೆಯಿಂ ತಮ
ಗನಿಮಿಷರಿರದಿತ್ತ ವಿವಿಧ ವಸುಗಳಂ ವಾ
ಹನುಮಂ ಛತ್ರಂ ಚಾಮರ
ಮನಿತಂ ಸ್ವಪ್ನದೊಳು ಕಂಡು ಕುಳ್ಳಿರ್ದ್ದಾಗಳೂ ||

|| ವ || ಕಂಡ ಕನಸುಗಳನೊರೆರ್ವ್ವರ್ಗ್ಗೆ ಪೇಳ್ದು ಸಂತುಷ್ಟ ಚಿತ್ತರಾಗಿರ್ಪ್ಪುದುಮಿತ್ತಲಾ ದಾಯಾದರೆಲ್ಲಂ ರಾಜ್ಯಮಿದೆಮಗೆ ತಮಗೆಂದು ತಂಮೊಳಿಱೆದಾಡಲ್ಕಾದಿ ಪೋಪುದುಂ

|| ಕ || ಸಂತಾನಮಿಲ್ಲದೆಲ್ಲಂ
ಚಿಂತಾಕ್ರಾಂತರ್ಕ್ಕಳಾಗಿ ಮಂತ್ರಿಗಳನಿತುಂ
ಮಂತಣದೊಳಿರ್ದ್ದು ನಿಶ್ಚಿಂತ
ಮಂತಣರಱಸುತ್ತ ಬಂದು ಕಂಡೊಸೆದೆಲ್ಲಂ ||

|| ವ || ಸಾಷ್ಟಾಂಗ ಪ್ರಣತರಾಗಿ ದೇವ ಮದೀಯ ಪುಣ್ಯ ಪ್ರಭಾವದಿಂ ನಿಂಮಂ ಕಂಡೆವೆಂದು ಪಿಂದಣ ವೃತ್ತಂತಮೆಲ್ಲಮಂ ಬಿಂನಪಂಗೆಯ್ದು ವಿಜಯಂಗೈಯಿಮೆಂದು

|| ವ || ತುಂಗ ಗಜೇಂದ್ರಮಮ್ ದಿವಿಜ ನಾಯಕನೆಂಬಿನಮೇಱೆ ಲೀಲಿಯಿಂ
ತುಂಗಭುಜಂ ಮನೋರಮೆಯುಮಂದೊಡನೇಱೆ ವಿಲಾಸಿನಿ ಜನಂ
ಕಂಗೆಸದಿಕ್ಕೆ ಚಾಮರಮನೆತ್ತಿದ ಬೆಳ್ಗೆಡೆ ಚಂದ್ರಬಿಂಬಮಂ
ಭಂಗಿಸಿಕೊಂಡು ಪೋದರವನಿಪತಿಯಾ ಭುವನ್ನೈಕ ಸೇವ್ಯನಂ ||

|| ವ || ಅಂತು ಕೊಂಡು ಪೋಗಿ ಪುರಮರಮನೆಯಂ ಪೋಗಿ ರಾಜ್ಯ ಭ್ರಷ್ಟನಾಗಿರ್ದ್ದು ಮಂಗಲ ಪರಿಹರಾರ್ತ್ಥಮಾಗಿ ಚೈತ್ಯಾಲಯಂಗಳೊಳು ವಿಧಿ ಪೂರ್ವ್ವಕಂ ಜೀನೇಶ್ವರಂಗೆ ಮಹಾಭೀಷೇಕಂಗಳಂ ಮಾಡಿಸಿ ಪಟ್ಟಂಗಟ್ಟಿ ಸುಖದಿನರಸು ಗೆಯ್ವುತಿರ್ದ್ದು ನೋಂಪಿಯ ದಿವಸಂ ಬರೆ ತಾಮಿರ್ವ್ವರುಂ ಶುಚಿರ್ಭ್ಭೂತರಾಗಿ ಮಹಾವಿಭೂತಿಯಿಂ ನೋಂತು ಮಹಾಪೂಜೆಯಂ ಮಾಡೀರೇಳು ವರುಷಬರಂ ನೋಂತುದ್ಯಾಪನೆಯಂ ಮಾಡಿ ನಿಧಿ ನಿಧಾನಂಗಳ್ಗೊಡೆಯರಾಗಿ ಪಲಕಾಲಂ ರಾಜ್ಯ ಸುಖಮನನನುಭವಿಸಿ ಕಡೆಯೊಳು ಸಮಾಧಿ ಮರಣಂ ದೊರೆಕೊಳೆ ಮುಡಪಿ ಸ್ವರ್ಗದೊಳ್ಪುಟ್ಟಿ ದಿವಿಜ ಲೋಕ ಸುಖಸುಧಾ ಸಮುದ್ರಂಗಳನೀಂಟಿ ಬಂದು ಚರಮಾಂಗರಾಗಿ ಪುಟ್ಟಿ ಪಲಕಾಲಂ ರಾಜ್ಯಂಗೆಯ್ದು ವೈರಾಗ್ಯದಿಂ ಜಿನದೀಕ್ಷೆಯಂ ಕೈಕೊಂಡು ಗ್ರೋಗ್ರತಪಶ್ಚರಣಂ ಮಾಡಿ ಶುಕ್ಲ ಧಾನನದಿಂ ಘಾತಿಕರ್ಮ್ಮಂಗಳಂ ಕಿಡಿಸಿಯನಂತ ಚತುಷ್ಟಯ ಪ್ರಾಪ್ತರಾಗಿ ಮೋಕ್ಷಕ್ಕೆ ಪೋದರೆಂದು ಗೌತಮ ಗಣಧರಂ ಶ್ರೇಣಿಕ ಮಹಾ ಮಂಡಳೇಶ್ವರಂಗಂ ಗುಣವತಿ ಚೇಳಿನಿ ಮಹಾದೇವಿಗಂ ಪೇಳೆ ಕೇಳ್ದು ಸಂತುಷ್ಟ ಚಿತ್ತರಾಗಿ ತಾನುವನಂತ ಸ್ವಾಮಿಯ ನೋಂಪಿಯಂ ಭಕ್ತಿಯಿಂ ಕೈಕೊಂಡು ಸರ್ವ್ವಜ್ಞರಂ ಚಿತ್ತರಾಗಿ ತಾನುವನಂತ ಸ್ವಾಮಿಯ ನೋಂಪಿಯಂ ಭಕ್ತಿಯಿಂ ಕೈಕೊಂಡು ಸರ್ವ್ವಜ್ಞರಂ ವಂದಿಸಿ ಗಣಧರರಂ ಪೂಜಿಸಿ ಸಮವಸರಣಮಂ ಪೊಱಮಟ್ಟು

|| ವೃ || ವಿಜಯ ಗಜೇಂದ್ರಮಂ ಮಗಧ ನಾಯಕನೇೞೆ ಸುರೇಂದ್ರ ಲೀಲೆಯಿಂ
ತ್ರಿಜಗ ವಿನೂತೆ ಚೇಳಿನಿಯುಮಂದೊಡನೇೞಲು ಶಂಖನಿಸ್ವನಂ
ಧ್ವಜ ನಿಕರಂಗಳುಂ ದೆಸೆಯಮಾಗಸಮಂ ನೆೞೆ ತೀವೆ ಚಾಮರ
ವ್ರಜಮೆಸೆಯಲ್ಕೆ ರಾಜಗೃಹಮಂ ಪುಗುತಂದನದೊಂದು ಲೀಲೆಯಿಂ ||

ಮಲೆವರಿಭೂಪರಂಜಿ ಮಿಗೆ ಕಪ್ಪವನಟ್ಟುವ ಬಂದು ಕಾಣ್ಬ
ಸತ್ಕುಲಯುತರಪ್ಪ ಮಕ್ಕಳನೇಕರುಮಂ ಪಡೆದಾವ ಕಾಲಮಂ
ತೊಲಗದಕ್ಷಿಯೊಳ್ನೆಱೆವ ನೃಪನೆದಿಪ್ಪುದನಂತನಾಥನೊ
ಳ್ನೆಲಸಿದ ಭಕ್ತಿಯಿಂ ನೆೞೆಯೆ ನೋಂತವರ್ಗ್ಗೆ ಭವದೊಳ್ನಿರಂತರಂ ||

ಉಭಯ ಲೋಕ ಸುಖಮಂ ಭೀತಿವಂತರಪೇಕ್ಷಿಪ
ರ್ತ್ರಿಭುವನೇಶವನಂತನನಕ್ಷಯನಂ ಮಹಾ
ವಿಭವದಿಂ ನೆೞೆಯೆ ಮಾಡೆ ಮಹಾ ಮಹಿಮಂಗಿದಂ
ಶುಭದಮಂ ರಚಿಸಿದಂ ಕಥೆಯಂ ವಿಭು ಕೇಶವಂ ||

ಇಂತೀ ಕಥೆಯಂ ಪೇಳ್ದೊಡ
ನಂತ ಸುಖಂ ಭವ್ಯಜನಕೆ ಪಡೆಮಾತೇನೋ
ಸಂತತ ಶಾಶ್ವತ ಸುಖಮನ
ನಂತಜಿನಂ ನೋಂತವರ್ಗೆ ಕೊಡುವನನವರತಂ ||

ಈ ಕಥೆಯ ಕೇಳ್ದ ಭವ್ಯಾ
ನೀಕಮಿದಂ ಬರೆವ ನೆನೆವ ವಂದಿಪ ಜನರುಂ
ಲೋಕಂ ಸ್ತುತಿಯಿಸೆ ನೆಗಳ್ದರ
ನೇಕರು ಸುರಲೋಕ ಮೋಕ್ಷಸುಖಮಂ ಪಡೆವರ್ ||

ಇಂತೀ ಅನಂತನಾಥಸ್ವಾಮಿ ಕಥೆ ಸಂಪೂರ್ಣಂ