|| ಶ್ರೀ ಚಂದ್ರನಾಥಾಯ ನಮಃ ||

ಸಂಸಾರ ಚಕ್ರಗಮನಾಗಮನ ಪ್ರಮುಕ್ತನ್ ಸಿದ್ಧಾನ್
ತ್ರಿಲೋಕ ಮಹಿತಾನ್
ಶರಣಂ ಪ್ರಪದ್ಯೇ ||

ನಮಃ ಶ್ರೀ ವರ್ದ್ಧಮಾನಾಯ ನಿರ್ಧೂತ ಕಲಿಲಾತ್ಮನೆ
ಸಾಲೋಕಾನಾಂ ತ್ರಿಲೋಕಾನಾಂ ಯದ್ವಿದ್ಯಾದರ್ಪ್ಪಣಾಯತೇ ||

ರಾಗ ದ್ವೇಷ ಕ್ರೋಧಮಾನಮದ ಹರುಷ ಜಾತಿ ಜರಾಮರಣ ಮಾತ್ಸರ್ಯ್ಯಾದಿ ಸಕಲ ದೋಷ ರಹಿತನುಂ ಸಕಲ ಮಿಮಲ ಕೇವಲಾವ ಬೋಧ ದರ್ಶನ ಸುಖವೀರ್ಯ್ಯ ಗುಣ ಮತಿ ಭೂಷಿತನುಂ | ಮುನಿಗಣ ಪ್ರಮುಖ ದ್ವಾದಶಗಣ ಪರಿವೃತನ ಶೋಕ ವೃಕ್ಷಾದ್ಯುಷ್ಟ ಮಹಾಪ್ರಾತಿಹಾರ್ಯ್ಯಾ ವಿರಾಜಿತನುಮಾಗಿ | ಮುನೀಂದ್ರ ನಾಗೇಂದ್ರ ನರೇಂದ್ರ ದೇವೇಂದ್ರಾದಿಗಳ್ಗೆ ಸ್ವಾಮಿಯಪ್ಪ ಶ್ರೀ ವರ್ದ್ಧಮಾನ ಸ್ವಾಮಿಯ ಸಮವಸರಣಂ ಬಿಜಯಂಗೆಯ್ದು ಭವ್ಯ ಶಶಿಯಭಿವೃದ್ಧಿಕಾರಣಮಾಗಿ ಧರ್ಮ್ಮಾಮೃತ ವರುಷಮಂ ಕಱೆವಾಗಳು ಪರಮ ಧಾರ್ಮ್ಮಿಕನೆನಿಸಿದ ಒದ್ದಾಯನ ಮಹಾರಾಜನುಮಾತನ ಪ್ರಾಣವಲ್ಲಭೆಯುಮಪ್ಪಿಂದ್ರ ಮಹಾದೇವಿಯುಂ | ಪರಿವಾರ ಸಮನ್ವಿತಂ ಸಮವಸರಣ ಭೂಮಂಡಲದೊಳು ಕನಕ ಸ್ತಂಭಂಗಳಿಂ ನಿರ್ವಿತಮುಕ್ತಾಫಲ ಪ್ರಲಂಬಿತಮಣಿಮಯ ಧಾಮಂಗಳಿಂ || ಹಿಮಾಂಭೋ ಜನ ಮೇರು ಮಂದಾರ ಪಾರಿಜಾತ ಅಶೋಕ ಚಂಪಕ ಪುಂನಾಗ ಮಾಲತಿ ವಕುಲ ತಿಲಕಾದಿ ಪುಷ್ಪಂಗಳಿಂದಲಂಕೃತಮಾಗಿ ಕಡು ಚೆಲುವನಪ್ಪ ಶ್ರುತ ಮಂಟಪದೊಳು ಗೌತಮಸ್ವಾಮಿ ಪರಿವೃತ ಪರಮ ಪುರುಷೋತ್ತಮನವ್ಯಯ ವೀತರಾಗ ವೀತಶೋಕ ವಿಗತ ಕರ್ಮ್ಮರಿಪು ಸರ್ವ್ವಜ್ಞ ಸರ್ವ್ವಹಿತ | ಸರ್ವ್ವದರ್ಶನ ಸರ್ವ್ವೇಶ್ವರ ಮಹಾನುಭಾವ ಮಹೇಶ್ವರ ಮಹಾ ವೀರ ಭಗವದರ್ಹದಾದ್ಯಷ್ಟೋತ್ತರ ಸಹಸ್ರ ನಾಮಾಭಿದೇಯನಪ್ಪ ಪರಮೇಶ್ವರನ ಸಮವಸರಣಮಂ ಪರಮಾನುರಾಗದಿಂ ಪೊಕ್ಕು ಗಂಧಕುಟಿಯಂ ತ್ರಿಃಪ್ರದಕ್ಷಿಣಂ ಗೆಯ್ದು ತ್ರೈಲೋಕ್ಯನಾಥನಪ್ಪ ಶ್ರೀ ವರ್ದ್ಧಮಾನ ಸ್ವಾಮಿಯಂ ಕಂಡು | ರಸ ಸಿದ್ದಿಯಂ ಕಂಡ ಸಿದ್ಧನಂತೆ ಸಂತೋಷದಂತಮನೆಯ್ದಿ ತ್ರಿಕರಣ ಶುದ್ಧಿಯಿಂ ಸಾಷ್ಟಾಂಗ ಪ್ರಣುತನಾಗಿ | ವಸ್ತುಸ್ತವ ರೂಪಸ್ತವ ಗುಣಸ್ತವಂಗಳಿಂ ಸ್ತುತಿಯಿಸಿ ಅನೇಕಾರ್ಚನೆಗಳಿಂದರ್ಚ್ಚಿಸಿ ವಂದಿಸಿ ಶ್ರುತ ಮಂಟಪಮೆನೆಯ್ದಿ ಗೌತಮ ಸ್ವಾಮಿಗಳ್ಗೆ ನಮೋಸ್ತು ಮಾಡಿ ಧರ್ಮ್ಮಾಮೃತಮನೀಂಟಿ ತಂಣನೆ ತಣಿದು ಸಂಸಾರ ಸಮುದ್ರಮಂ ದಾಂಟಿದಂತೆ ರಾಗಿಸಿ ಪ್ರಸನ್ನ ಮನರಾಗಿರ್ದ್ದಾ ಯಿರ್ವ್ವರೊಳಿಂದ್ರ ಮಹಾದೇವಿ ಗೌತಮ ಸ್ವಾಮಿಗಳ್ಗೆ ಕೈಗಳಂ ಮುಗಿದು ವಿನಯ ನಿನಮಿತೋತ್ತಮಾಂಗೆಯಾಗಿ | ಅಱಿಯಮೆಯಿಂದಾದ ಪಾಪಕರ್ಮ್ಮಗಳಂ ನೀಗುವುದಕ್ಕುಪಾಯಮಾಗಿ ನೋನಲು ತಕ್ಕ ನೋಂಪಿಗಳಂ ನೋಂತವರು ಪಡೆದ ಫಲಂಗಳಂ ಬೆಸಸಿಯಾ ನೋಂಪಿಯೊಳಗೆನಗೊಂದು ನೋನಲ್ತಕ್ಕ ನೋಂಪಿಯಂ ಬೆಸಸಿಮನೆ ಗೌತಮ ಸ್ವಾಮಿಗಳಿಂತೆಂದು ಪೇಳ್ದರು | ಸ್ವರ್ಗ್ಗಾಪವರ್ಗ್ಗಮನೀವುವಾದೀ ಗೃಹಸ್ಥರಿಗೆ ನೋನಲು ತಕ್ಕ ನೋಂಪಿಗಳು ಚಕ್ರವಾಳಮುಂ | ಶ್ರುತಪಂಚಮಿಯುಂ | ಶ್ರೀ ಪಂಚಮಿಯುಂ | ಪಂಚಕಲ್ಯಾಣಮುಂ | ಜಿನಾಗಮ ಸಂಪತ್ತಿಯುಂ | ಗೃಹಪಾತ ಸಮುಚ್ಚಯಮುಂ | ಸ್ವರ್ಗ್ಗ ಸೋಪಾನಮುಂ | ಸಂತತಿ ವರ್ದ್ಧನಮುಂ | ತಾರಾವಳಿಯಂ | ನಂದೀಶ್ವರಮುಂ | ಸಿಂಹ ವಿಕ್ರೀಡಿತಮಂ ಚತುರ್ವ್ವಿಂಶತಿಯುಂ ಪುಣ್ಯಾಹವರ್ದ್ಧನಮುಂ ಅಶೋಕವರ್ಧನಮುಂ | ರೋಹಿಣಿಯುಂ ಅನಂತ ಸುಖ ವರ್ದ್ಧನಮುಂ | ಸರ್ವ್ವ ಭೂಮಿ ಸಂಚಯಮುಂ | ತ್ರಿಲೋಕ ಸಾರಮುಂ | ವಜ್ರಹತಮುಂ ಶಾಂತ ಕುಂಭಮುಂ | ಮುಕ್ತಾವಳಿಯುಂ | ಯಿಂದ್ರ ಪೂಜೆಯುಮೆಂಬ ಫಲಉಂ ನೋಂಪಿಗಳೊಳು ಚಕ್ರವಾಳಮೆಂಬ ನೋಂಪಿಯ ನೋಂತುಜ್ಜವಣೆಯಂ | ಮಾಡಿ ಯಿಷ್ಟ ವಿಷಯಸುಖಂಗಳಂ ಪಡೆದವರ್ಪ್ಪಲಂಬರವರೊಳು ಕೆಲಂಬರಂ ಪೇಳ್ವೆ ಯೀ ಜಂಬೂದ್ವೀಪದ ಭರತ ಕ್ಷೇತ್ರದ ವಿಜೆಯಾರ್ದ್ಧ ಪರ್ವತದ ದಕ್ಷಿಣ ಶ್ರೇಣಿಯ ರಥಾನೂಪುರ ಚಕ್ರವಾಳಮೆಂಬ ನಗರಾದಿ ನಾಥನರಸಿ ವಾಯುವೇಗಿಯಂಬಳಂತವಳತಿ ಪ್ರೀತಿಯಿಂ ಸುಖ ಸಂಕಥಾ ವಿನೋದಿಂದಿರ್ಪ್ಪಾಗಳಾವರ್ಯ್ವಿರ್ಗ್ಗಂ ಸ್ವಯಂಪ್ರಭೆಯಂಬ ಕುಮಾರಿ ಪುಟ್ಟಿ ಕಲ್ಪಲತೆಯಂತೆ ಬೆಳೆದು ನವಯವ್ವನ ರೂಪು ಸಂಪಂನೆಯಾಗಿ ನಕ್ಷತ್ರಗಣಂ ಪರವೃತೆಯಾದ ಪೂರ್ಣಚಂದ್ರ ಮಂಡಲದಂತೆ ಸಹಸ್ರ ಸಖಿಯರಿಂ ಪರವೃತೆಯಾಗಿ ಪೆತ್ತತಾಯುಂ ದಾದಿಯುಂ ಯೆತ್ತಿಕೊಂಡಿಪ್ಪವಳುಂ ಶೃಂಗಾರ ಗೆಯ್ವುಳುಂ | ಓದಿಸುವಳುಮೆಂಬಯ್ವ ತಾಯಿಗಳುವೆರಸು ವನಕ್ರೀಡೆಗೆ ಪೋಗಿ ನಾನಾ ವಿನೋದಂಗಳಿಂದಾಡುತ್ತಮಿರ್ದ್ದಲ್ಲಿ ಶ್ರೀನಿಳಯಮೆಂಬ ಜಿನಾಲಯಮಂ ಕಂಡೊಳಗಂ ಪೊಕ್ಕು ದೇವಾದಿ ದೇವನಪ್ಪರ್ಹತ್ಪರಮೇಶ್ವರನಂ ತ್ರಿಕರಣ ಶುದ್ಧಿಯಿಂ ಸ್ತುತಿಶತ ಸಹಸ್ರಂಗಳಿಂ ಸ್ತುತಿಯಿಸಿ ಪಲವು ತೆಱದ ಪುಷ್ಪಂಗಳಿದರ್ಚ್ಚಿಸಿ | ಯನೇಕಮಪ್ಪ ಸೌರಭಂಗಳನೊಳಕೊಂಡು ತಂಣನೆ ತೀಡುವ ತಂಗಾಳಿಯಿಂದೆಲ್ಲಾ ಜೀವಂಗಳ್ಗೆ ಸುಖಮಯಮಪ್ಪ ಶೋಕೆಯ ತರುವಿನ ನೆಳಲಲಿಪೇಕ ಶಿಲಾತಳದೊಳು ಬಿಜಯಂಗೆಯ್ದಿರ್ದ್ದ | ಜಗತ್ಪತಿಗಳುರು | ಪೃಧ್ವಿವರ್ದ್ದನರುಮೆಂಬ ಚಾರಣ ಪರಮೇಷ್ಠಿಗಳಂ ಕಂಡು | ವಿನಯ ವಿನಮಿತೋತ್ತಮಾಂಗೆಯಾಗಿ ನಮಸ್ಕಾರಗೆಯ್ದು ಧರ್ಮ್ಮಶ್ರವಣಂ ಕೇಳ್ದು ತನಗಿಷ್ಟಮಪ್ಪದಂ ಮನದೊಳ್ನೆನೆದು ಚಕ್ರವಾಳಮೆಂಬ ನೋಂಪಿಯಂ ಕೈಕೊಂಡು ಕ್ರಮಂದಪ್ಪದೆ ನೋಂತು ದಿವ್ಯ ತಪೋಧರ ಸಮೀಪದೊಳು ಮಹಾಮಹಿಮೆಯಿಂ ಮಹಾಪೂಜೆ ಸಹಿತಂ ಉಜ್ಜವಣೆಯಂ ಮಾಡಿ ದ್ವಾದಶ ವರ್ಷಾನಂತರಂ ಮಧುರ ವಸಂತ ಮಾಸಮಾಗಿ ರೂಪಾತಿಶಯಂ ತಳ್ತಿರಲೀ ಜಂಬೂ ದ್ವೀಪದ ಭರತ ಕ್ಷೇತ್ರದಾರ್ಯ್ಯಾ ಖಂಡದ ಸುರಮ್ಯ ವಿಷಯದ ಪೌದನ ಪುರಾಧಿಪತಿಯಪ್ಪ ಮಹಾರಾಜಂಗಂ ಶಶಿಮಹಾದೇವಿಗಂ ತ್ರಿಪಿಷ್ಟನೆಂಬ ಮಗಂ ಪುಟ್ಟಿ ಸಿಂಹದ ಮಱೆಯಂತೆ ಬೆಳೆದು ರೂಪುಯವ್ವನ ಸಂಪಂನನಾಗಿಯುಂ ಮುಂ ಪೇಳ್ದ ಸ್ವಯಂಪ್ರಭೆಯೆಂಬ ಕುಮಾರಿಯಂ ಬೇಡಿ ಪಡೆದು ವಿವಾಹಮಂ ತಾಳ್ದಱವತ್ತ ನಾಲ್ಕು ಸಹಸ್ರ ದೇವಿಯರೊಳು ಪಟ್ಟಮಹಾದೇವಿ ಪ್ರತಿಪತ್ತಿಯನಿತ್ತು ಪದಿನಾಱು ಸಾಸಿರ್ಮ್ಮಕುಟ ಬದ್ಧರಂ ಬೆಸಕಯ್ಸಿಕೊಂಡರ್ದ್ಧ ಚಕ್ರವರ್ತ್ತಿ ಪದವಿಯಂ ಪಡೆದು ವಾಸುದೇವನಾಗಿ ರಾಜ್ಯಶ್ರೀಯನನುಭವಿಸುತ್ತಂ ವಿಜೆಯಕುಮಾರನೆಂಬ ಮಗನಂ ಜ್ಯೋತಿರ್ಮ್ಮಾಲೆಯೆಂಬ ಕುಮಾರಿಯಂ ಪಡೆದು ಸಂತೋಷದಂತಮನೆಯಿದಿ ಮಕ್ಕಳ ವಿವಾಹೋತ್ಸಾಹಮಂ ಮಾಡಿ ಪಲವು ಕಾಲಮಿಷ್ಟ ವಿಷಯದ ಕಾಲಮಂ ಭೋಗಂಗಳನನುಭವಿಸಿ ಸ್ವಯಂಪ್ರಭೆ ಸ್ತ್ರೀಯತ್ವಮನಜ್ಞಾನತ್ವಮುಮಂ ಪತ್ತುವಿಟ್ಟೂ ಪುರುಷತ್ವಮುಂ ಸುಜ್ಞಾನತ್ವಮಕ್ಕೆಂದು ದಾನಪೂಜೆಂಗಳಂ ಮಾಡಿ ಜೀವಿತಾಂತ್ಯದೊಳು ಸನ್ಯಸನ ವಿಧಿಯಿಂ ಪಂಚ ಪರಮೇಷ್ಠಿಗಳ ಚರಣಯುಗಳಮಂ ತಂನ ಹೃದಯಮೆಂಬ ಗರ್ಬ್ಭಗೃಹದೊಳು ಭಾವನೆಯಂ ಪ್ರತಿಷ್ಠೆಯಂ ಮಾಡಿ ಜಿನ ಚರಣ ಪರಿಣತಾಂತಃ ಕರಣೆಯಾಗಿ ಶರೀರ ಪರಿತ್ಯಾಗಂಗೆಯ್ದಚ್ಚ್ಯುತ ಕಲ್ಪದೊಳಚ್ಚ್ಯುತೇಂದ್ರನಾಗಿ ಯಿಪ್ಪತ್ತೆರಡು ಸಾಗರೋಪಮಕಾಲಂ ದಿವ್ಯ ಸುಖಮನನುಭವಿಸಿಯಪವರ್ಗ್ಗಕೆ ಭಾಜನೆಯಾದಳು ಮತ್ತಂ ಪಾಂಡವರಯ್ವರುಂ ದ್ಯೂತದಿಂ ವಂಚಿಸಲ್ಪಟ್ಟ ನಾಡುಂ ಬೀಡುಮಂ ದುರಿಯೋಧನಂಗೆ ಸೋಲ್ತು ವನವಾಸದೊಳಿರ್ದ್ದ ಕಾಲದೊಳು ಹಸ್ತನಾಪುರದೊಳಿರ್ದ್ದು ಮಕ್ಕಳಂ ಕಾಣದತಿ ದುಃಖಿತೆಯಾಗಿರ್ದ್ದ ಕೊಂತಿ ಶ್ರೀಯಾದೇವಿಯನಾರಾಧಿಸುವುದುಂ | ಪ್ರಸಂನೆಯಾಗಿ ಬಂದು ದಿವ್ಯಮುನಿಗಳ ಸಮೀಪದೊಳು ಚಕ್ರವಾಳದ ನೋಂಪಿಯಂ ನೋಂತು ಉದ್ಯಾಪನೆಯಂ ಮಾಡಿ ನಿನಗಿಷ್ಟ ಸಿದ್ಧಿಯುಂ ಸ್ವರ್ಗ್ಗಾಪವರ್ಗ ಸುಖ ಪ್ರಾಪ್ತಿಯಕ್ಕೆಂದು ಉಪದೇಶಂಗೆಯ್ದಾ ಶ್ರೀಯಾದೇವಿ ನಿಜ ನಿವಾಸಕ್ಕೆ ಪೋದಳಾ ಕೊಂತಿದೇವಿಯುಂ | ನಿಜಾಲಯಕ್ಕೆ ಬಂದು ತ್ರೈಲೋಕ್ಯನಾಥನಪ್ಪರ್ಹತ್ಪರ ಮೇಶ್ವರಂಗೆ ನಮಸ್ಕರಿಸಿಯರ್ಚ್ಚಿಸಿ ಮುನಿ ಮುಖ್ಯರಂ ವಂದಿಸಿ ಚಕ್ರವಾಳಮೆಂಬ ನೋಂಪಿಯಂ ಕಾರುಣ್ಯಂ ಮಾಡಿಯೆಂದು ಕೈಕೊಂಡವರ ಸಮಕ್ಷದೊಳು ನೋಂತುದ್ಯಾಪನೆಯಂ ಕ್ರಮಂದಪ್ಪದೆ ಮಾಡಿ ಬಳಿಕ್ಕಂ ತಂನ ಮಕ್ಕಳಪ್ಪ ಧರ್ಮ್ಮಪುತ್ರಾದಿಗಳಜ್ಞಾತವೇಷದಿಂ ವನವಾಸದೊಲು ಚರಿಯಿಸುತಿರ್ದ್ದು ದುರ್ಯ್ಯೋಧನಾದಿಗಳಂ ಸಂಗ್ರಾಮದೊಳ್ಗೆಲ್ದು ಪಲಕಾಲಂ ರಾಜ್ಯ ಶ್ರೀಯನನುಭವಿಸಿದರಿಂತು ಕೋಂತೀದೇವಿಯುಂ ನೋಂತು ಸ್ತ್ರೀಯತ್ವಮನಜ್ಞಾನತ್ವಮುಮಂ ಪತ್ತುವಿಟ್ಟು ಪದಿನಾಱನೆಯ ಕಲ್ಪದೊಳಗ್ಗಳಮಪ್ಪ ಸುಖಮನನುಭವಿಸಿದಳು ಮತ್ತಂ ಯೇಕ ಪುರಷ ವ್ರತದೊಳೆ ದೃಢವ್ರತೆಯಪ್ಪ ಸೀತಾದೇವಿ ನೋಂತುದ್ಯಾಪನೆಯಂ ಮಾಡಿ ಲೋಕೋತ್ತಮನಪ್ಪ ರಾಮಸ್ವಾಮಿಗೆ ವಲ್ಲಭೆಯಾಗಿ ಬಳಿಕ್ಕಂ ಸ್ತ್ರೀಯತ್ವಮಂ ಪತ್ತುವಿಟ್ಟು ಸ್ವರ್ಗ್ಗಾಪ ವರ್ಗ್ಗಕ್ಕೆ ಭಾಜನೆಯಾದಳು ಮತ್ತಂ | ಪಲಂಬರು ಶ್ರೀಮಂತೆಯನ್ನೋಂತುಜ್ಜಯಿಸಿ ತಂಮಿಷ್ಟ ಭವಂಗಳಂ ಪಡೆದರೆಂದು ಗೌತಮ ಸ್ವಾಮಿಗಳ್ಪೇಳೆ ಒದ್ದಾಯನ ಮಹಾರಾಜನ ಪ್ರಧಾನ ವಲ್ಲಭೆ ಯಿಂದ್ರಮಹಾದೇವಿಯವರ ಶ್ರೀಪಾದ ಪದ್ಮಂಗಳ ಸಂನಿಧಿಯೊಳಾ ನೋಂಪಿಯಂ ಗುರು ಭಕ್ತಿ ಪೂರ್ವ್ವಕಂ ಕೈಕೊಂಡು ಕ್ರಮಂದಪ್ಪದೆ ನೋಂತುಜ್ಜಯಿಸಿ ಸ್ತ್ರೀಯತ್ವಮಂ ಪರಿಹರಿಸಿ ಸಜ್ನಾತ್ವಮಂ ಪಡೆದು ಸ್ವರ್ಗ್ಗದ ದಿವ್ಯಸುಖಂಗಳಂ ಮರ್ತ್ಯಲೋಕದೊಳು ಪಲವುತೆಱದ ವಿಭವಂಗಳ ಪಡೆದು ಯೇಳನೆಯ ಭವದೊಳ್ನಿತ್ಯಾನಂದಮಪ್ಪ ಮೋಕ್ಷ ಸುಖಮಂ ಪಡೆದಳಾ ಚಕ್ರವಾಳದ ನೋಂಪಿಯ ಕ್ರಮಮುಂ ಉದ್ಯಾಪನೆಯ ಕ್ರಮಮುಮೆಂತೆಂದೊಡೆ | ಫಾಲ್ಗುಣ ಮಾಸದೊಳುತ್ತರಾ ನಕ್ಷತ್ರದೊಳ್ಮುಂನ ದಿನದರ್ಪರಾಣ್ಹದೊಳು ಚೈತ್ಯಾಲಯಕ್ಕೆ ಬಂದು ದೇವರ್ಗ್ಗಂ ಶ್ರುತಕ್ಕಂ ವಂದನೆಯಂ ಮಾಡಿ ಆಚಾರ್ಯ್ಯರ್ಗ್ಗೆ ಗುರುಭಕ್ತಿ ಪೂರ್ವ್ವಕಂ ಮಾಡಿಯೋಂದು ನೋಂಪಿಯಂ ಕೈಕೊಂಡು ಅಂನಪಾನ ಖಾದ್ಯ ಲೇಪ್ಯಮೆಂಬ ಚತುರ್ವ್ವಿಧಾಹಾರ ನಿವೃತ್ತಿಯಂ ಮಾಡಿ ಉಪವಾಸಮಂ ಮಾಳ್ಪುದುಮದು ಪಂಚಕಲ್ಯಾಣಮೆಂಬ ಪೆಸರನುಳ್ಳುದು ಯೆಂಟು ಸಾವಿರ ಮುಪವಾಸಮಂ ಮಾಡಿದ ಫಲಮಕ್ಕುಂ | ಆ ಪ್ರಕಾರದಲು ಚೈತ್ರ ಮಾಸದೊಳು ಚಿತ್ರಾ ನಕ್ಷತ್ರ ಕೂಡಲು ಮುಂನಿನಂತುಪವಾಸಮಂ ಮಾಳ್ಪುದೀ ಅಷ್ಟಮಹಾಪ್ರಾತಿಹಾರ್ಯ್ಯ ವಿಭೂತಿಯೆಂಬ ಪೆಸರನುಳ್ಳುದು ಹತ್ತು ಸಾವಿರಮುಪವಾಸದುದಂ ಮಾಡಿದ ಫಲಮಕ್ಕುಂ | ವೈಶಾಖ ಮಾಸದೊಳ್ವಿಶಾಖ ನಕ್ಷತ್ರ ಕೂಡಲು ಮುಂನಿನಂತುಪವಾಸಮಂ ಮಾಳ್ಪುದು ಅದು ಜೀವ ದರ್ಶನಯೆಂಬ ಪೆಸರುನುಳ್ಳುದು ಹಂನೆರಡು ಸಾವಿರಮುಪವಾಸದ ಫಲಮಕ್ಕುಂ | ಜ್ಯೇಷ್ಠಮಾಸದೊಳು ಜ್ಯೇಷ್ಠಾ ನಕ್ಷತ್ರಂ ಕೂಡಲು ಮುಂನಿನಂತುಪವಾಸಮಂ ಮಾಡುಉದು ಚತುರ್ವ್ವಿಂಶತಿ ತೀರ್ಥಕರ ಪೆಸರನುಳ್ಳುದು ಹದಿನಾಲ್ಕು ಸಾವಿರ ಉಪವಾಸಮಂ ಮಾಡಿದ ಫಲಮಕ್ಕುಂ | ಆಷಾಢ ಮಾಸ ಪೂವ್ವಾಷಾಢ ನಕ್ಷತ್ರದಲು ಮುಂನಿನಂತುಪವಾಸಮಂ ಮಾಳ್ಪುದು ಅದು ಧರ್ಮ್ಮಧ್ಯಾನಮೆಂಬ ಪೆಸರನುಳ್ಳದು | ಹದಿನಾರು ಸಾವಿರುಪವಾಸಮಮ ಮಾಡಿದ ಫಲಬಹುದು | ಶ್ರಾವಣ ಮಾಸದೊಲು ಶ್ರಾವಣ ನಕ್ಷತ್ರದಲು ಮುಂನಿನಂತುಪವಾಸಮಂ ಮಾಳ್ಪುದು ಅದು ನಂದ್ಯಾವರ್ತ್ಥಮೆಂಬ ಪೆಸರನುಳ್ಳದು | ಹದಿನೆಂಟು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ | ಭಾದ್ರಪದ ಮಾಸದಲು ಪೂರ್ವ್ವಾ ಭಾದ್ರಪದ ನಕ್ಷತ್ರಂ ಕೂಡಲು ಮುಂನಿನಂತುಪವಾಸಮಂ ಮಾಡಲಾರ್ಯ್ಯಾವರ್ತ್ಥಯೆಂಬ ಪೆಸರನುಳ್ಳದದು ನಾಲ್ವತ್ತೊಂದು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ | ಆಶ್ವಯುಜ ಮಾಸದಲು ಅಶ್ವಿನಿ ನಕ್ಷತ್ರ ಕೂಡಲು ಮುಂನಿನಂತುಪವಾಸಮಂ ಮಾಳ್ಪುದದು | ಚತುರ್ವ್ವಿಂಶತಿ ಸ್ತವಮೆಂಬ ಪೆಸರನುಳ್ಳದಮಱುವತ್ತೊಂದು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ | ಕಾರ್ತ್ತಿಕ ಮಾಸದೊಳು ಕೃತ್ತಿಕಾ ನಕ್ಷತ್ರಂ ಕೂಡಲು ಮುಂನಿನಂತುಪವಾಸಮೆಂಬ ಪೆಸರನುಳ್ಳದುಮದುವೊಂದು ಕೋಟಿಯುಮೆಂಟು ಲಕ್ಷೆಯುಮೆಂಟು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ | ಪುಷ್ಯಮಾಸದಲು ಪುಷ್ಯ ನಕ್ಷತ್ರಂ ಕೂಡಲು ಮುನಿಂನಂತುಪವಾಸಮಂ ಮಾಳ್ಪುದು | ಪಂಚಾಲಂಕಾರಮೆಂಬ ಪೆಸರನುಳ್ಳವದುಮಾನೂಱಱವತ್ತು ಲಕ್ಷೆಯುಮೆರಡು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ ಮಾಘ ಮಾಸದಲು ಮಘಾ ನಕ್ಷತ್ರಂ ಕೂಡಲು ಮುಂನಿನಂತುಪವಾಸಮಂ ಮಾಳ್ಪುದದು ಧನವರ್ದ್ಧನಮೆಂಬ ಪೆಸರನುಳ್ಳುದುಮಱುವತ್ತು ಲಕ್ಷೆಯುಪವಾಸಮಂ ಮಾಡಿದ ಪಲಮಕ್ಕುಂ | ಮಿಂತು ಫಾಲ್ಗುಣ ಮಾಸಂ ಮೊದಲ್ಗೊಂಡು ಮುಱು ವರ್ಷಂ ಬರಂ ಮೂಱು ತಿಂಗಳು ಯೆಡವಱೆಯದೆ ನೋಂತು ತಿಂಗಳ ಲೆಕ್ಕ ಮೂವತ್ತೊಂಭತ್ತುಪವಾಸಮಕ್ಕಮದಱ ಫಲಂ ಕೂಡೆ ಯೆಂಟುಕೋಟಿಯುಮೆಪ್ಪತ್ತು ಲಕ್ಷೆಯುಪವಾಸದ ಫಲಮಕ್ಕುಮೀ ಕ್ರಮದಲು ನೋನುತ್ತಮಿರ್ದ್ದ ಬಳಿಕ ಮೊದಲಲು ಮೇಣು ಕಡೆಯಲು ಮೇಣು ನಡುವೆ ಮೇಣು ತ್ರಿಜಗದ್ಗುರುಪ್ಪರ್ಹತ್ಪರಮೇಶ್ವರಂಗೆ ಅಷ್ಟೋತ್ತರ ಶತಕಳಸದಿಂ ವಿಧಿಯುಕ್ತಮಾಗಿ ಕಳಸಾಭಿಷೇಕಮಂ ಮಾಡಿಸಿ ಶಕ್ತ್ಯಾನುಸಾರದಿಂ ಒಡ್ಡು ಚರುವನಿಟ್ಟು ಬೇಱೆ ಪಾರ್ಶ್ವ ಭಟ್ಟಾರಕಂಗೆ ಪೂಜೆಯಂ ಮಾಡಿ ಗೌತಮ ಗಣಧರ ನಾಮೋದ್ದೇಶಂಗಯ್ದಷ್ಟ ವಿಧಾರ್ಚ್ಚನೆಯಂ ದೇವರು ಬಲದೊಳ್ಮಾಡಿ ನೋನಿಸಿದಾಚಾರ್ಯ್ಯರ್ಗ್ಗಂ ಅಷ್ಟ ವಿಧಾರ್ಚ್ಚನೆಯಿಂದರ್ಚ್ಚಿಸಿ ಆಹಾರಾಭಯ ಭೈಷಜ್ಯ ಶಾಸ್ತ್ರ ದಾನಮಂ ಮಾಳ್ಪುದು | ಯಥಾಶಕ್ತಿಯಿಂದಾಗಮ ಗ್ರಂಥ ಶ್ರುತಪಾವಡೆ ಕವಳಿಗೆ ಠವಣೆಕೋಲು ತಟ್ಟು ಕುಂಚ ಕಮಂಡಲಮಂ ಕುಡುವುದು | ಮತ್ತೆಲ್ಲಾ ರುಷಿಯರ್ಗ್ಗೆ ತಟ್ಟು ಅಜ್ಜಿಯರ್ಗ್ಗೆ ಹುಟ್ಟಿಗೆ | ಬ್ರಹ್ಮಚಾರಿಗಳ್ಗುಡ ಕೊಡುಉದು ಚಾತುರ್ವ್ವರ್ಣ್ನಮಂ ಯಥೋಚಿತ ಪ್ರತಿಪತ್ತಿಯಿಂ ಮನ್ನಿಸುವುದು | ಉಪವಾಸದ ದಿನಂ ದೇವ ಪೂಜೆಯಂ ಮಾಡಿ ಮೂಱುದಿವಸಂ ಶುಚಿರ್ಭ್ಭೂತರಾಗಿಯಭಿಷೇಕ ಅಷ್ಟ ವಿಧಾರ್ಚ್ಚನೆಯಂ ದ್ರವ್ಯ ಸಹಿತಂ | ಚೈತ್ಯಾಲಯಕ್ಕೆ ಬಂದು ತ್ರಿಃಪ್ರದಕ್ಷಿಣಂಗೆಯ್ದು ನಿಶಿಧಿಯಂದೊಳಗಂ ಪೊಕ್ಕು ದೇವರಂ ವಂದಿಸಿ ದೇವತಾ ಸ್ತವನಂಗೆಯ್ದು ಭೂಮಿ ಶುದ್ಧಿಯಂ ಮಾಡಿ ಚತುರಸ್ರವಾಗಿ ಸಾರಿಸಿ ರಂಗವಲ್ಲಿಯನಿಕ್ಕಿ ಕಳಸ ಕಂನಡಿ ಚ್ಛತ್ರ ಧ್ವಜ ಘಂಟೆ ಪಲ್ಲವ ಪುಷ್ಪ ಸೊಡರ್ಗ್ಗಳಿಂದಲಂಕರಿಸಿ ಕಥೆಯ ಪುಸ್ತಕಮಂ ಕೆಲದೊಳರ್ಚ್ಚಿಸಿ ಕಥೆಯಂ ಪೇಳ್ವ ಬ್ರಹ್ಮಚಾರಿಯನುಂ ಕುಲಜನಪ್ಪ ಶ್ರಾವಕನಕ್ಕೆ ಮೇಣು ಪಾದಪ್ರಕ್ಷಾಲನಂಗೆಯ್ದು ಗಂಧಾಕ್ಷತೆ ಪುಷ್ಪಾದಿಗಳಂ ಕೊಟ್ಟು ತ್ರಿಕರಣ ಶುದ್ಧಿಯಿಂ ಕಥೆಯಂ ಕೇಳ್ದು ದೇವರು ಶ್ರುತಗುರುಗಳುಮಂ ವಂದಿಸಿ ತಪಸ್ವಿಗಳುಂ ಚಾತುರ್ವ್ವರ್ನ್ನದೊಱೆಕೊಂಡವರ ಮೌನದಾಳು ನಿಲಿಸಿಕೊಂಡವರಿಗೆ ನಿರಂತರಾಯನಮಂ ಮಾಡಿಸಿ ಬಳಿಕ್ಕಂ ತಾಂ ಪಾರಣೆಯಂ ಮಾಳ್ಪುದುಪವಾಸದ ದಿನಂ ತಾನುಂಬನಿತಕ್ಕಿಯಂ ದೇವರ್ಗ್ಗೆ ಕೊಡುವುದು ಮೇಣು ಶ್ರಾವಕರ್ಗ್ಗೆಯಾಗಲಿ ಕೊಡುಉದು | ಕ್ರಮದಿಂ ನೋಂತುಜ್ಜವಣೆಯಂ ಮಾಡಿಸಿ ಯಿಹ ಪರ ಜಲ್ಮದೊಳು ಬೇಡಿದ ಸುಖಂಗಳಂ ಪಡೆದು ಸ್ವಗ್ಗಾಪವರ್ಗ್ಗಕ್ಕೆ ಭಾಜನರಪ್ಪರೀ ಪೇಳಲ್ಪಟ್ಟುಪವಾಸದೊಳಗೇ ನಾನುಮೊಂದು ಉಪವಾಸಂ ತಪ್ಪಿದೊಡಾಚಾರ್ಯ್ಯರ ಸಮೀಪದೊಳು ಪ್ರಾಯಶ್ಚಿತ್ತಂ ಕೈಕೊಂಬುದು ಪುರುಷರು ನೋಂಪಡೆ ಶ್ರೀ ಗುರುಗಳು ಬೆಸಗೊಂಬುದು ಸ್ತ್ರೀಯರು ನೋಂಪಡೆ ತಾಯಿ ತಂದೆ ಗಂಡನಂ ಬೆಸಗೊಂಬುದು ಕೊಡಗೂಸು ನೋಂಪಡೆ ತಾಯಿ ತಂದೆ ಅಂಣನಂ ಬೆಸಗೊಂಬುದು

|| ಕ || ಬೇಡೆದುದಂ ತಳುವಿಲ್ಲದೆ
ಮಾಸಲು ಸದ್ಧರ್ಮ್ಮ ದಾನ ತಪಮಂ ಬೇಗಂ
ಮಾಡೂದು ಸುಖಮನೊಲ್ವೊಡೆ
ನಾಡಾಡಿಯ ಮಾತನಾಡಿ ಮಾಣ್ಹಪುದುಂಟೇ ||

ಆಕ್ರಮಿಸಿ ಬೇಗದಿಂ ಭವ
ಚಕ್ರಮನೇಱೆ ತವಿಪ ಬುದ್ಧಿಯರ್ಬ್ಬೇಗಂ
ಚಕ್ರವಾಳದ ನೋಂಪಿಯ
ನೀ ಕ್ರಮದಿಂ ನೋಂತು ಪಡೆವುದಕ್ಷಯ ಸುಖಮಂ ||