|| ಶ್ರೀ ವೀತರಾಗಾಯ ನಮಃ ||

ಆವಂಗೀ ವ್ರತ ಶಬ್ದಂ
ಭಾವಿಪೊಡದು ತೋಱದಿಗಾಯ್ತು ವಸ್ತುವ್ಯಯಂ
ಪಾವನ ಸುಖ ಸಂದೋಹಮ
ನೀವಂ ಮುನಿಸುವ್ರತೇಶನಾತನೆ ದೇವಂ ||

ಯೆರಗಿ ಮುನಿಸುವ್ರತೇಶಂ
ಗಱಿಯಮೆಯಿಂ ಗೆಯ್ದು ಹಿಂಸೆ ಪುಸಿಕಳವುಗಳಿಂ
ನೆರೆಕೆಟ್ಟುನರಕಕಿಳಿವಂ
ಕುಱಿಗಳಿಗಳಿಗುಸುರ್ವ್ವೆನೊಂದು ನೋಂಪಿಯ ಕಥೆಯಂ ||

ಆ ವಿಧಾನಮೆಂತಾದುದುದೆಂದೊಡೆ ||

|| ಕ || ಜೀವದಯೆಯೊಂದೆಧರ್ಮ್ಮಂ
ಜೀವ ದಯಾಷ್ಟಮಿಯುಮಾದುದರಿಂ ಭವ್ಯ
ರ್ಜ್ಜೀವದಯದಲ್ಲಿ ನೆಗಳ್ವೀ
ಜೀವದಯಾಷ್ಟಮಿಯ ನೋಂತು ಸುಖಮಂ ಪಡೆವರೂ ||

|| ವ || ಅದೆಂತೆಂದೊಡೀ ಜಂಬೂದ್ವೀಪದ ಭರತ ಕ್ಷೇತ್ರದಾರ್ಯ್ಯಾ ಖಂಡದ ಮಧ್ಯದೊಳ್ಮಗಧೆಯೆಂಬುದು ನಾಡು ರಾಜ್ಯಗೃಮೆಂಬುದು ಪೊಳಲಾ ಪುರಮನಾಳ್ವಂ ಶ್ರೇಣಿಕ ಮಹಾಮಂಡಲೇಶ್ವರನಾತನ ಪಟ್ಟ ಮಹಾದೇವಿ ಸಕಲಗುಣಗಣಾಭರಣೆ ಸಮ್ಯಕ್ತ್ವ ರಥಾಕರೆ ಚೇಳಿನಿ ಮಹಾದೇವಿಯೆಂಬಳವರೀರ್ವ್ವರುಂ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರ್ದ್ದೊಂದು ದಿವಸಂ ಸರ್ವ್ವಾವಸರಮೆಂಬೋಲಗ ಶಾಲೆಯೊಳೊಡ್ಡೋಲಗಂಗೊಟ್ಟಿರಲಾ ಸಮಯದೊಳೊರ್ರ್ವ ಋಷಿ ನಿವೇದಕನಕಾಲ ಫಲಪುಷ್ಪಂಗಳಂತಂದಿತು ಸಾಷ್ಟಾಂಗ ಪ್ರಣುತನಾಗಿ ದೇವಾ ಬಿಂನಪಮೆಂದಿತೆಂದನೆಂಮವಿಪುಲಗಿರಿ ಮಸ್ತಕದಲ್ಲಿ ಶ್ರೀ ವೀರವರ್ಧಮಾನ ಸ್ವಾ,ಮಿಯ ಸಮವಸರಣಂ ಬಂದು ನೆಲಸಿರ್ದ್ದುದೆನೆ ಸಿಂಹಾಸನದಿಂದೆರ್ದ್ದು ಆ ದಿಕ್ಕಿಗೇಳಡಿಯಂ ನಡೆದು ಪೊಡವಟ್ಟು ವೊಸಗೆದಂದಗಂಗಚಿತ್ತಮಂ ಕೊಟ್ಟಾನಂದ ಭೇರಿಯಂ ಪೊಯ್ಸಿ ಪರಿಜನ ಪುರಜನ ಬಂಧು ಜನ ಸಹಿತಂ ವಿಜಯಗಜೇಂದ್ರಮಂ ತಾನು ಚೇಳಿನಿ ಮಹಾದೇವಿ ಸಹಿತಮನೇಱಿ | ವಿಪುಲಾ ಚಲಕ್ಕೆ ಬಂದ್ದು ದೂರಾಂತರದಿಂ ವಾಹನಮನಿಳಿದು ಸಮವಶರಣಮಂ ಪೊಕ್ಕು ಧೂಳಿಶಾಲ ಮಾನಸ್ತಂಭ ಮೊದಲಾದ ಭೂಮಿಗಳತಿಶಯಮಂ ಚೇಳಿನಿ ಮಹಾದೇವಿಗೆ ಪೇಳುತ್ತಾ ಪೋಗಿ ಗಂಧಕುಟಿಯಂ ತ್ರಿಪ್ರದಕ್ಷಿಣಂಗೆಯ್ದು ತ್ರಿಜಗಾರಾಧ್ಯನಮಪ್ಪ ಜಿನೇ ಶ್ವರಂಗಭಿಮುಖವಾಗಿ ಕರಕಮಲಂಗಳಂ ಮುಗಿದು ನಿಂದೂ |

ಜಯದುರಿತ ಹರಣ ನಿರುಪಮ |
ಜಯ ಶಾಶ್ವತ ಸೌಖ್ಯದಾಯಿ ನಿತ್ಯಾನಂದಾ
ಜಯಮದನ ಮದ ವಿಭಂಜನ
ಜಯ ಜಯ ಸವ್ವಜ್ಞ ಮೋಕ್ಷ ಲಕ್ಷ್ಮೀನಾಥ ||

ಯೆಂದನೇಕ ಸ್ತುತಿ ಸತಸಹಸ್ರಗಳಿಂ ಜ್ಞಾನದರ್ಶನ ಸವ್ರಕ್ತ್ವ ಚಾರಿತ್ರದಾನಲಾಭ ಭೋಗೋಪ ಬೋಗಂಗಳೆಂಬ ನವ ಕೇವಲ ಲಲ್ಬಿಗೆಱೆಯನಪ್ಪ ಶ್ರೀ ವೀರವರ್ದ್ಧಮಾನ ಸ್ವಾಮಿಯಂ ಸ್ತುತಿಯಿಸಿ ಗೌತಮ ಗಣಧರರ್ರ್ಗೆ ವಂದಿಸಿ ಪಂನೊಂದನೆಯ ಮನುಷ್ಯ ಕೋಷ್ಠದೊಳ್ಕುಳ್ಳಿರ್ದ್ದು | ಸರ್ವ್ವಜ್ಞ ಮುಖ ಕಮಲ ವಿನರ್ಗ್ಗತ ಸಾಗಾರನಾಗಾರ ಧರ್ಮ್ಮ ಶ್ರವನಾನಂದಾಮೃತಪಾನ ಪರಿಹೃಷ್ಠ ಚಿತ್ತನಾಗಿರ್ಪ್ಪುದುಂ | ಚೇಳಿನಿ ಮಹಾದೇವಿಸಬಾಮಧ್ಯದೊಳಿರ್ದ್ದು ನಿಂದು ಕರಕಮಲಂಗಳಾಂ ಮುಗಿದು ಗೌತಮ ಗಣಧರರ್ಗ್ಗಿಂತೆಂದಳೆಲೆ ಸ್ವಾಮಿ ಗೃಹಸ್ತರುಗಳ್ಗೆ ನಾನಾ ತೆಱದಿಂದಂ | ಹಿಂಸಾನಂದ ವೃಷಾನಂದ ಸ್ತೆಯಾನಂದಸುರಕ್ಷಣಾನಂದ ಮೆಂಬ ನಾಲ್ಕುಂ ತೆಱದ ಕ್ರೋಧದಿಂ ರಾಗದಿಂ ಮೇಣು ಹಿಂದೆ ಬಕ್ಕುಮಾ ಹಿಂಸೆಯಿಂ ನರಕಾದಿ ದುರ್ಗ್ಗತಿ ದುಃಖಮುಮಕ್ಕು ದಱೆಂ ಹಿಂಸಾ ದೋಷಮಂ ಪರಿಹರಿಪುದೊಂದಾನುಮೊಂದು ನೋಂಪಿಯಂ ಬೆಸಸಿಮೆನಲು ಸಪ್ತರ್ಧಿ ಸಂಪಂನರುಂ | ಸರ್ವ್ವ ಜೀವದಯಾ ಪರಿಣತಾಂತಃಕರಣರುಂ ಚತುಃಜ್ಞಾನ ಜ್ಯೋತಿಗಳು ಮಪ್ಪ ಗೌತಮ ಗಣಧರ ಸ್ವಾಮಿಗಳು ಚೇಳಿನಿ ಮಹಾದೇವಿಗಿಂತೆಂದು ನಿರೂಪಿಸಿದರೆಲೆ ಮಗಳೆ ನಿಂನ ಸಕಲ ದೋಷಮಂ ಕೆಡಿಸಲು ಸಮರ್ತ್ಥಮಪ್ಪ ಜೀವ ದಯಾಷ್ಟಮಿಯಂ ನೋಂಪಿಯಂ ನೋಂಪುದೆನಲಾ ಮಹಾಸತಿ ಅನ್ತೆಗೆಯ್ವೆನೆಂದದಱ ವಿಧಾನಮಂ ಬೆಸಸಿಮೆನಲವರಿಂ ತೆಂದರಾಶ್ವೈಜ ಮಾಸದ ಶುಕ್ಲ ಪಕ್ಷದ ಸಪ್ತಮಿಯ ರಾತ್ರಿಯಲ್ಲಿ ನೋಂಪವರೆಲ್ಲಂ ಚೈತ್ಯಾಲಯಕ್ಕೆ ಬಂದು ಪರಮೇಶ್ವರನಂ ಪೂಜಿಸಿ ಗುರು ಭಕ್ತಿ ಪೂರ್ವ್ವಕಂ ರುಷಿಯರ್ಗ್ಗೆ ವಂದಿಸಿ ನೋಂಪಿಯಂ ಕೈಕೊಂಡು ನವಮಿ ಪರಿಯಂತರಂ ಬ್ರಹ್ಮಚರ್ಯ್ಯ ಉಪವಾಸಮಂ ಸ್ವೀಕರಿಸಿ ಮಱದಿವಸದಷ್ಟಮಿಯೊಳು ಶುಚಿರ್ಭೂತರಾಗಿ ಪೂಜಾ ದ್ರವ್ಯವೆರಿಸಿ ಚೈತ್ಯಾಲಯಕ್ಕೆ ಬಂದು ಜಿನೇಶ್ವರನಂ ಮಹಾ ವಿಭವದಿಂ ಪಂಚಾಮೃತದಿಂದಭಿಷೇಕಮಂ ಮಾಡಿಸಿ ಅನೇಕ ವಿಧದಷ್ಟ ವಿಧಾರ್ಚ್ಚನೆಯಂ ಮಾಡಿಸಿ ಪಂಚ ಪರಮೇಷ್ಠಿಗಳ ಪೂಜೆಯಂ ಸವಿಸ್ತರಂ ಮಾಡಿ ಕಥೆಯಂ ಕೇಳ್ದು ಜಾವ ಜಾವದಲ್ಲಿ ಅರ್ಹತ್ಪರಮೇಶ್ವರಂಗ ಅಭಿಷೇಕ ಅಷ್ಟ ವಿಧಾರ್ಚ್ಛನೆಯಂ ಜಾವಜಾವದಲ್ಲಿ ಮಾಡಿ ಧರ್ಮ್ಮೋದ್ಯೋಗದಿಂ ಜಾಗರಮಿರ್ದ್ದು ದಿನಕರನುದಯಂಗೆಯ್ವಾಗಳು ಸರ್ವ್ವಜ್ಞನಂ ಪೂಜಿಸಿ ಭೂಯಾತ್ಪುನರ್ದ್ದರುಷನಮೆಂದು ಬೀಳ್ಕೊಂಡು ಮನೆಯಂ ಪೊಕ್ಕು ಯಥಾಶಕ್ತಿಯಿಂದ ತಂಡ ಋಷಿಯರ್ಗ್ಗೆ ಅಜ್ಜಿಕಾ ಸಮುದಾಯಕ್ಕೆ ನಿರಂತರಾಯಮಂ ಮಾಡಿಸಿ ನಾನಾ ಥರಂ ತೃಪ್ತಿ ಬಡಿಸಿ ಬಂಧು ಜನ ಸಹಿತಂ ಪಾರಣೆಯಂ ಮಾಳ್ಪುದು ೮ ವರುಷಂ ಬರಂ ನೋಂತು ಕಡೆಯೊಳುಜ್ಜವಣೆಯಂ ಮಾಳ್ಪ ವಿಧಾನಮೆಂತೆಂದೊಡೆ ಪರಮಾತಿಶಯ ಕೇವಳಿಗಳಪ್ಪ ಮುನಿಸುವ್ರತ ಸ್ವಾಮಿಗಳ ಪ್ರತಿಕೃತಿಯಂ ಯಕ್ಷ ಯಕ್ಷಿ ಸಹಿತವಾಗಿ ಮಾಡಿಸಿ ಚೈತ್ಯಾಲಯಮಂ ಕಟ್ಟಿಸಿ ಪ್ರತಿಷ್ಠೆಯಂ ಮಾಡಿಸಿ ಘಂಟೆ ಚಾಮರ ಹೆಳವಳಿಗೆ ಗೀತವಾದ್ಯ ನೃತ್ಯ ಶ್ರೀಬಲಿ ಮುಂತಾದ ವೈಭವಂಗಳಂ ಯಾಥಾಶಕ್ತಿಯಿಂ ನಿತ್ಯ ಪೂಜೆ ಮುಂತಾದುದಕ್ಕೆ ಕ್ಷೇತ್ರ ಪೂದೋಟಂಗಳಂ ಬಿಡುಉದು | ಜೈನ ಬ್ರಾಹ್ಮಣ ಮಿಥುನಕ್ಕೆ ೮ ಮಂದಿಗೆ ಸೀರೆ ವೋಲೆ ಱವಕೆ ಚಿಂತಾಕು ಕರಿಯಮಣಿ ಮೂಕುತಿ ಮುಂತಾದವುಂ ಹಚ್ಚಡವೈರಣೆ ಶಿರೋವೇಷ್ಟನ ಕುಂಡಲ ಮುಂತಾದವಂ ಕೊಟ್ಟು ಭೋಜನ ತಾಂಬೂಲಾ ದಿಗಳಿಂ ಅವರ ತೃಪ್ತಿ ಬಡಿಸಿ ಚತುಃಸಂಘಮಂ ಪೂಜಿಸಿ | ೮ ತಂಡ ರುಷಿಯರ್ಗ್ಗೆ ಭಿಕ್ಷೆಯಂ ಮಾಡಿಸಿ ತಟ್ಟು ಕುಂಚ ಗುಂಡಿಗೆ ಪುಸ್ತಕ ಶ್ರುತ ಪಾವಡೆಗಳಂ ಕೊಟ್ಟು ಅನಿತೆಯಜ್ಜಿಯರ್ಗ್ಗೆ ಕೊಟ್ಟು ಚತುಃಸಂಘ ಪೂಜೆಯಂ ಮಾಡಿ ತಂನ ವಿಭವಾನು ಗುಣಮಾಗಿ ವಸಂತೋಕುಳಿಯಂ ಮಾಳ್ಪುದು ಯಿದು ನೋಂಪಿಯ ಉದ್ಯಾಪನೆಯ ಕ್ರಮಮೆಂದು ಗೌತಮ ಸ್ವಾಮಿಗಳು ಪೇಳೆ ಕೇಳ್ದು ಸಂತುಷ್ಟ ಚಿತ್ತನಾಗಿ

|| ಕ || ಆವಾವ ದೋಷಮೆಲ್ಲಮ
ನೋವದೆ ಪರಿಹರಿಪ ಜೀವದಯಾಷ್ಟಮಿಯಂ
ಭಾವಿಸಿ ನೋಂಪವರೆಲ್ಲರಂ
ಭೂವಳಯದ ಸುಖಮನುಂಡು ಮುಕ್ತಿಯ ಪಡೆವರೂ ||

ಯೆಲ್ಲಾ ವ್ರತಮುಂ ನೋಂಪಿಯು
ಕೊಲ್ಲದ ವ್ರತಕಧಿಕಮಲ್ತುಮದಱಿಂ ಭವ್ಯ
ರ್ಪ್ಪೊಲ್ಲಮೆಗೆಯ್ದು ದೋಷಕೆ
ಸಲ್ಲದೆ ಪೂಜಿಪುದು ಜೀವದಯಾಷ್ಟಮಿಯಂ ||

|| ವ || ಯೆಂದು ಪೇಳೆ ಕೇಳ್ದು ಶ್ರೇಣಿಕ ಮಹಾಮಂಡಲೇಶ್ವರನುಂ | ಚೇಳಿನಿ ಮಾಹಾದೇವಿಯಂ ನೋಂಪಿಯಂ ಕೈಕೊಂಡು ಯೆಲೈ ಸ್ವಾಮಿ ಮುಂನ್ನೀ ನೋಂಪಿಯ ನೋಂತ ಮಹಾನುಭಾವರ ಕಥೆಯಂ ನಿರೂಪಿಸೆಂದು ಬಿಂನವಿಸೆ ಅವರಿಂತೆಂದು ಪೇಳ್ದರೂ || ಈ ಜಂಬೂದ್ವೀಪದ ಭರತ ಕ್ಷೇತ್ರದಾರ್ಯ್ಯಾ ಖಂಡದೊಳವಂತಿ ವಿಷಯದೊಳುಜ್ಜಯಂತಿಯೆಂಬ ಪುರಮಾ ಪುರಮನಾಳ್ವಂ ಯಶೋಘ ಮಹಾರಾಜನಾತನ ಪಟ್ಟದರಸಿ ಚಂದ್ರಮತಿಯೆಂಬಳವರಿರ್ವ್ವಗ್ಗಂ ಮಹೇಂದ್ರಂಗಮಿಂದ್ರಾಣಿಗಂ ಜಯಂತನಂತೆ ಯಶೋಧರನೆಂಬ ಕುಮಾರಂ ಪುಟ್ಟಿ ಶೈಶವಂ ಪತ್ತುವಿಟ್ಟು ಶಸ್ತ್ರ ಶಾಸ್ತ್ರಂಗಳೊಶ್ವಗಜಾರೋಹಣಂ ಮೊದಲಾದ ಸಕಲ ಕಲಾ ಪ್ರವೀಣಾನಾಗಿರೆ ಯಶೋಘ ಮಹಾರಾಜಂ ಯಶೋಧರ ಕುಮಾರಂಗೆ ಅಮೃತಮತಿಯೆಂಬ ರಾಜಪುತ್ರಿಕೆಯಂ ಅಗ್ನಿ ಸಾಕ್ಷಿಕವಾಗಿ ವಿವಾಹಮಂ ಮಾಡಿ ಸುಖದಲ್ಲಿರ್ಪ್ಪುದುಂ ಅಮೃತಮತಿಗಂ ಯಶೋಧರಂಗಂ ಮೂಡಣದಿಕ್ಕಿಂಗಂ ದಿವಸಕ್ಕೆ ಸೂರ್ಯನುದಯಿಂತು ಯಶೋಮತಿ ಎಂಬ ಕುಮಾರನುದಯಗೆಯುವದು ಯಶೋಘ ಮಹಾರಾಜಂ ಪುತ್ರಪೌತ್ರರಿಂ ಬಳಸಿ ಸಪ್ತತಳ ಪ್ರಾಸಾದದ ಮೇಲೊಡ್ಡೋಲಗಂಗೊಟ್ಟಿರಲಾ ಸಮಯದೊಳುಲ್ಕಾಪಾತಮಂ ಕಂಡು ಸಂಸಾರ ವಿರಕ್ತನಾಗಿ ಕಾಯಾಯುಗಳನಸ್ಥಿರಂಗಳೆಂದಱೆದು ಯಶೋಧರಂಗಭಿಷೇಕ ಪೂರ್ವಂ ರಾಜ್ಯ ಪಟ್ಟಮಂ ಕಟ್ಟಿ ಪರಮ ನಿರ್ವ್ವಾಣಸಾಧನಮಪ್ಪ ಜಿನದೀನಕ್ಷೆಯಂ ಕೈಕೊಂಡು ಉಗ್ರೋಗ್ರ ತಪಶ್ಚರಣಂಗಳಂ ಮಾಡುತ್ತಮಿರೆ ಯಿತ್ತಲ್‌ಯಶೋಧರ ಮಹಾರಾಜಂ ರಾಜ್ಯಂಗೆಯ್ಯುತ್ತಮಿರ್ದ್ದೊಂದು ದಿವಸಂ ರಾತ್ರಿ ಸಮಯದೊಳು ಸಾಮಂತ ಪುರೋಹಿತ ಸೇನಾಪತಿ ದಂಡನಾಯಕ ಮುಂತಾದ ಬಾಹತ್ತರವಿನೆಯೋಗಮಂ ಬೀಳ್ಕೊಟ್ಟು ಸಜ್ಜಾಗೃಹಮಂ ಪೊಕ್ಕು ರತಿಯುಂ ಕಾಮದೇವನುಂಮಿರ್ಪ್ಪಂತು ಅಮೃತಮತಿಯುಂ ತಾನುಂ ಮನ್ಮಥ ಕೇಳಿ ವಿನೋದಾಮೃತ ಸಮುದ್ರ ಮಧ್ಯದೊಳೋಲಾಡಿ ಪುಟ್ಟಿರ್ಪ್ಪುದುಂ ಬೆಳಗಪ್ಪ ಜಾವದೊಳು ಅರಮನೆಯಿಂದತಿ ದೂರಮಲ್ಲದೆಡೆಯೊಳು ಯಾಗಹಸ್ತಿಯಂ ಕಟ್ಟಿರಲದ ಮಾವತಿಗನಷ್ಟವಂಕನೆಂಬಾತ ನಿದ್ರೆಯಿಂದೆಚ್ಚತ್ತು ಸುಸ್ವರದಿಂದಾಳಾಪವ ಪಂಚಮವೆಂಬ ರಾಗಮಂ ಮಾಳ್ಪುದಾ ಸಮಯದೊಳೆಚ್ಚತ್ತಿರ್ದ್ದ ಅಮೃತ ಮತಿಯದಂ ರಾಗಸ್ವರಮಂ ಕೇಳ್ದು ಕಿವಿವೇಟಂಗೊಂಡು ಬೆಳಗಾಗಲೊಡಂ ಗುಣವತಿಯೆಂಬ ದೂತಿಯಂ ಕರೆದೆಲೆ ಅಬ್ಬಾನಂಮ ಸಜ್ಜಾಗೃಹದ ಸಮೀಪದಲ್ಲಿ ಕಟ್ಟಿರ್ದ್ದಾನೆಯ ಮಾವತಿಗಂ ರಾಗಂಗೆಯ್ಯಲಾತನ ರಾಗಮೆಂನ ಮನಮಂ ಸೆಱೆಗೆಯ್ದುದಾತನಂ ನನಗೆ ನೀಂ ಪೋಗಿತರಲ್ವೇಮೆನಲಾಕೆಯಾತನಿರ್ದ್ದಲ್ಲಿಗೆ ಪೋಗಿಯಾತನಷ್ಟವಂಕನೆಂತಪ್ಪ ಚೆಲುವನೆಂದೀಕ್ಷಿಸಿ ಕುಗ್ಗಿದ ಕೊರಳುಂ ಹಱೆದಲೆಯುಂ ನಂಡು ಮೂಗುಂ ಹಿರಹಲ್ಲುಂ ಗೀಜು ವಾಯುಂ ಕೊಳೆತ ಕಂಣು ಮೂಲಗಿವಿಯುಂ ನಲಿದಪ್ಪ ಪಣೆಯುಂ ರೋಮಮಿಲ್ಲದ ವುರ್ಬ್ಬಂ ಗೂಡೂಗೊಂಡೆದೆಯುಂ ಸೊಬೆಗುತ್ತದಿಂದುಬ್ಬಿದ ಹೊಟ್ಟೆಯುಂ ಸುಡೆ ಪುಂಣೀಂ ಸುರಿದ ಕೀವಿಂ | ಮುತ್ತಿ ಜೊಂನೆಂದೇಳುವ ನೊಣಉಂ | ಆನೆಯ ಮೂತ್ರಗಳಿಂ ಬೆಂದ ಬೆರಳ್ಗಳುಂ | ಹತ್ತಿದ ನಿತಂಬಮುಂ ಮುಱೆದ ಬೆಂನುಂ ಬತ್ತಿದ ಕಾಲ್ಗಳುಂ | ಹೆಡಸು ನಾರುವ ಶರೀರವುಂ ಯಿಂತಿರ್ದ ಆನೆವಾಂಕನಂ ಕಂಡು ಗುಣವತಿ ಅತಿ ಪೇಸಿ ಅರಸಿಯಂ ನಿಂದಿಸಿ ಮರಳಿ ಅರಸಿಯಲ್ಲಿಗೆ ಬಂದು ಯಿಂತೆಂದೆಳೆಲೆ ಮಗಳೆ ನೀನಪ್ಪೊದೇ ಮನುಷ್ಯಾಕಾರಮಂ ಧರಿಸಿದ ಉರ್ವ್ವಸಿಯಂತಿಪ್ಪೆ ನಿನ್ನ ವಲ್ಲಭಂ ದೇವೆಂದ್ರನಂತಿಪ್ಪಂ ನೀನೀ ನಿಕೃಷ್ಟನಂ ಬಯಸಲಪ್ಪುದನುಚಿತಮೆನಲಾಕೆಯಿಂತೆಂದಳೆಲೆ ಮರುಳೆ ಆವಾತನಲ್ಲಿ ಕಾಮಂ ಪೂಜ್ಯನಾತಂ ಹೀನಕುಲನಾದೊಡಂ ರೂಪಾಧಿಕಮಿಲ್ಲದಿರ್ದೊಡಂ ಸ್ತ್ರೀಯರಿಗೆ ಆತನೆ ಕಾಮದೇವನಾದ ಕಾರಣಂ ರೂಪು ಕುಲ ಗುಣಂಗಳೆಂಬ ದುರ್ಬ್ಬುದ್ಧಿಯಂ ಬಿಟ್ಟು ಸ್ತ್ರೀಯರ ಮನವ ಸೋಲಿಸುವವಂ ಕಾಮದೇವನೆಂದೇ ಬಗೆದು ತರಲ್ವೇಳ್ಕುಮೆನಲಾ ಗುಣವತಿಯಾಕೆಯ ನಿರ್ಬ್ಬಂಧದಿಂ ಸಂಬಂಧಿಸಿ ಕೊಡಲಾತನೊಡನೆ ಕಾಮ ಸುಖವ ನನಭವಿಸುತ್ತಮಿರಲೊಂದು ದಿವಸಂ ಯಶೋಧರ ಮಹಾರಾಜಂ ತಂನೊಳು ಮುಣಂ ಮಾಳ್ಪಾಲಿಂಗನ ಚುಂಬನ ಮೊದಲಾದಕ್ಕಱಂ ಕಾಣದೆ ಬೇಧಿಸಿಯಾಕೆಯ ಮನಮಂ ಕಾಣದಿರೆ ವೊಂದಾನೊಂದುದಿನಂ ರಾಯಂ ವೋಲಗಂ ಗೊಟ್ಟು ಅಮೃತಮತಿಯಂ ಹತ್ತಿರೆ ಕುಳ್ಳಿರಿಸಿ ಕೊಂಡು ನಾಟಕ ಸಾಲೆಯಿಂ ರಾತ್ರಿಯಲ್ಲಿ ಹೊತ್ತುಗಳದು ವೊಡ್ಡೋಲಗಮಂ ಬೀಳ್ಕೊಟ್ಟು ತಂನ ಪ್ರಾಣವಲ್ಲಭೆಯಪ್ಪ ಅಮೃತಮತಿಯ ಕೈವಿಡಿದುಕೊಂಡು ಸಜ್ಜಾಗೃಹಕ್ಕೆ ಬಂದು ಸ್ತ್ರೀ ಪುರುಷರುಂ ಕಾಮ ಕ್ರೀಡೆಯಲ್ಲಿ ಸುಖವಿರ್ದ್ದು ನಿದ್ರಾಮುದ್ರಿತನಾದುದಂ ಕಂಡು ಮೆಲ್ಲನೆಳ್ದು ಅಷ್ಟವಂಕಂಗೆ ಭಕ್ಷಂಗಳಂ ತೆಗೆದುಕೊಂಡು ಪೋಪುದಂ ರಾಯನೆಚ್ಚತ್ತು ಆಕೆಯ ಪಿಂದೆಯೆ ಪೋಗಿ ಮಱೆಗೊಂಡಿರೆ ಅಮೃತಮತಿ ಪೋಗಿ ಅಷ್ಟವಂಕನುಂ ಮಲಗಿರ್ದ್ದನನೆಬ್ಬಿಸೆ ಆತಂ ಕ್ರೋಧಮಂತಾಳ್ದು ನಿದ್ರೆಯಂ ಕೆಡಿಸಿದೆಯೆಂದು ಕೋಪಾಕ್ರಾಂತನಾಗಿ ಯೆಂದೂ ಬರ್ಪ್ಪ ಪೊತ್ತಿಂಗೆ ಬಂದುದಿಲ್ಲವೆಂದು ಕೋಪಿಸಿ ಈಕೆಯಂ ಮುಂದಲೆವಿಡಿದು ಆನೆಯ ನೇಣುಗಳಿಂ ಬಡಿಯೆ ಆಕೆ ದೈನ್ಯವೃತ್ತಿಯಿಂ ಬೇಡಿಕೊಳುತ ಲಿಂತೆಂದಳು ಯೆಲೆ ಪ್ರಿಯನೆ ರಾಯಂ ನಾಟಕ ಶಾಲೆಯಂನಾಡಿಸಿ ಬರ್ಪ್ಪಾಗಂ ಪೊತ್ತು ಪೋಯ್ತು ಅದು ಕಾರಣದಿನಾನುಂ ಬಂದುದಿಲ್ಲ ಅದಕ್ಕೆ ನೀನುಂ ನಂನ ಕೊಲಲಾಗದೆಂದು ಬೇಡಿಕೊಂಡು ಆ ನೋವಂ ಮಱದು ತಾನುಂ ತಂದ ಕಜ್ಜಾಯಮಂ ಆತಂಗೆ ಕೊಟ್ಟು ಅಷ್ಟವಂಕನೊಳು ನೆರದುರ್ಪ್ಪುದುಂರಾಯಂ ಕಂಡು ಖಡ್ಗಮಂ ನೆಗಪಿ ಪೊಯ್ವೆನೆಂದು ಬಗೆದು ತಂನ ಮನದೊಳಿಂತೆಂದು ಭಾವಿಸಿದಂ ನಿಕೃಷ್ಟನೆಂನ ದೆಸೆಯಿಂಜೀವಿಪಂ ಇವಳುಂ ಸ್ತ್ರೀವಧೆಯೆಂದು ಶತ್ರುರಾಯರುಗಳ ಮಸ್ತಕಮಂ ವಿಧಾರಿಸಿ ಖಡ್ಗಂ ಹೀನನುಮಿಂತಪ್ಪ ನಿಕೃಷ್ಟನಲ್ಲಿ ಪ್ರಯೋಗಿಪುದಲ್ಲವೆಂದು ರಾಯಂ ಕೊಲೆಗೆ ಪೇಸಿ ತಿರುಗಿ ಬಂದು ಮಂಚದ ಮೇಲೆ ಪವಡಿಸಿ ಸ್ತ್ರೀಯರ ಗುಣಾಗುಣಂಗಳಂ ಸ್ತ್ರೀಯರ ಅವಿಚಾರಮಂ ಭಾವಿಸುತ್ತವಿರೆ ಅಮೃತಮತಿಯುಂ ಅಷ್ಟವಂಕನೊಳ್ನೆರದು ಅವನೊಳ್ಪೇಳಿಕೊಂಡು ಸಜ್ಜಾಗೃಹಕ್ಕೆ ಬಂದು ಮಂಚದ ಮೇಲೆ ಮಲಗಿ ಆ ವೇಳೆ ಬೆಳಗಾಗೆ ಮಂಗಳ ಪಾಠಕ ಧ್ವನಿಯಿಂ ರಾಯನೆದ್ದು ಮುಖ ಮಜ್ಜನಮಂ ಮಾಡಿ ದೇವಾಧಿದೇವನಪ್ಪ ಅರ್ಹತ್ಪರಮೇಶ್ವರಂಗೆ ವಂದಿಸಿ ವೊಡ್ಡೋಲಗದೊಳ್ಕುಳ್ಳಿರ್ದ ಸಮಯದೊಳು ವೊರ್ವ್ವಂ ರಾಯಗೆ ನೆಯ್ದಿಲ ಪುಷ್ಪಮಂ ಕಾಣಿಕೆಯಂ ಕಡೆ ಅದಂ ರಾಯಂ ವಾಸಿಸಿ ಕಯ್ಯೊಳು ಪಿಡಿದು ಕೊಂಡು ವೋಲಗಮಂ ಬೀಳ್ಕೊಟ್ಟು ತಂನ ಪ್ರಾಣವಲ್ಲಭೆಯಪ್ಪ ಅಮೃತಮತಿಯ ವೊಡ್ಡೋಲಗಮಂ ಪೊಕ್ಕು ಆಕೆಯಂ ಕಾಂದು ಯಿರುಳಿನ ವೃತ್ತಾಂತಮಂ ಪೇಳುವಂತೆ ಆಕೆಯ ಕೂಡೆ ಸರಸ ವಿನೋದದಿಂ ನೈದಿಲ ಪುಷ್ಟದಿಂದಿಡೆ | ಆಕೆಯುಂ ಆಗಳೆ ಮೂರ್ಚ್ಛೆವೋಗಿ ಬೀಳೆ ಅದಂ ಅರಸಂ ಕಂಡು ಶೀತಲ ಕ್ರಿಯೆದಿಂದೆಚ್ಚಱೆಕೆಯಂ ಪುಟ್ಟಿಸಿ ಯೆಲೆ ಪ್ರಿಯಳೆ ನಿನಗೆ ಯಿಂದು ಬಂದ ವಿಪತ್ತು ಯಿಂನೆಂದಿಗೂ ಬಾರದೆಂದು ಸಂಕೇತದಿಂದಱೆಪಿ ರಾಯಂ ಸ್ತ್ರೀಯರ ಮಾಯಮಂ ನೆನೆವುತ್ತ ತಂನ ತಾಯರಮನೆಗೆ ಬರೆ ಚಂದ್ರಮತಿ ಮಗನ ಮೊಗಮಂ ನೋಡಿ ಮಱುಗಿ ನಿನಗಾರ ಭಯದಿಂ ನಿಂನ ಮುಖಕಮಲ ಬಾಡಿದುದಕ್ಕೆ ಕಾರಣ ಮೇನೆಂದು ಮಗನಂ ಬೆಸಗೊಳೆ ಯೆಲೆ ತಾಯೆ ನಿಂನ ಕೃಪೆಯಿಂ ನನಗೊಂದು ಭಯವಿಲ್ಲ ನಿಂನೆಯ ರಾತ್ರಿಯಲ್ಲಿ ನಿಂನ ಪೆಜ್ಜೊಸೆಯಪ್ಪ ಅಮೃತಮತಿ ಯೇಳು ನೆಲೆಯುಪ್ಪರಿಗೆಯಿಂದಂ ಕೆಳಗಣ ಬಚ್ಚಲ ಗುಳಿಯೊಳ್ಪೊರಳುಉದಂ ಕಂಡೆನು ಚಂದ್ರನ ಕಾಂತಿಯಂ ರಾಹು ಪಿಡಿಉದಂ ಸ್ವಪ್ನದಲ್ಲಿ ಕಂಡು ಅತಿಭೀತನಾದನೆನೆ ಆ ಮಾತಂ ತಾಯಿ ಕೇಳ್ದು ದುಃಸ್ವಪ್ನಮೆಂದು ಬಗೆದು ಮಗನೆ ನೀ ಕಂಡ ಸ್ವಪ್ನದ ಫಲಮತಿ ಕಷ್ಟವೆಂದು ರಾಜಬಾಧೆಯಂ ಪೇಳ್ಗುಮಿದಱದೋಷಮನೊಂದೇ ಕ್ಷಣದೊಳು ಕೆಡಿಸಲರ್ಪ್ಪಾ ಚಂಡಮಾರಿಯೆಂಬ ದೇವತೆಯಂ ಪೂಜಿಸಿ ನಿಂನ ಭುಜದಂಡಮಂಟಿತಮಪ್ಪ ಕಂಡಯದಿಂ ಕುಱೆಗಳ ಸಹಸ್ರಮಂ ಕೊಂದು ದೇವಿಯಂ ಪೂಜಿಸಿ ತೃಪ್ತಿ ಬಡಿಸಲು | ಸ್ವಪ್ನ ದೋಷಮೆಲ್ಲಂತೀರ್ಗ್ಗುಮೆನಲರಸಂ ನಡನಡಂ ನಡುಗಿ ಕಿವಿಗಳಂ ಮುಚ್ಚಿ ಅತಿ ಭೀತನಗಿಂತನ ತಾಯಿಗಿಂತೆಂದನೆಂಮ ಕುಲದರಸುಗಳೆಲ್ಲರುಂ ಶ್ರೀ ಜಿನಧರ್ಮ್ಮ ಪರಾಯಣರುಂ ಹಿಂಸಾದಿ ವ್ರತಮಂ ಧರಿಸಿ ಸ್ವರ್ಗ್ಗಾದಿ ಮೋಕ್ಷಮಂ ಪಡೆದರು ಅದಂ ನೀನಱೆಯದಂತೀ ಹಿಂಸೆಯ ನುಡಿಯಂ ನುಡಿಯಬಹುದೆ ಎಂದು ಪೇಳಿ ತಂನ ಮನದೊಳಿಂತೆಂದನೆತ್ತ ಮೆಟ್ಟಲೆತ್ತ ಚಪ್ಪಟೆಯಾಯ್ತುಮೆಂದು ತಾನೊಂದಂ ನೆನದರೆ ತಾನೊಂದಾಯಿತ್ತಾಗಿ ಸ್ತ್ರೀಯರೊಳಂ ಬಾಲಕರೊಳಮಜ್ಞಾನಿಗಳೊಳಂ ಮೂರ್ಖ್ಖರೊಳಂ ಸ್ವಪ್ನಾದಿಗಳಂ ಪೇಳಲಾಗದೆಂಬ ನೀತಿಯಂ ನೆನೆವುತ್ತ ತಾಯಿ ಪೇಳಿದ ಹಿಂಸೆಗೆ ಪೇಸುತ್ತಮಿರ್ಪ್ಪ ನಿಜ ಕುಮಾರನಂಕಂಡು ಚಂದ್ರಮತಿಯಿಂತೆಂದಳೂ ತಾಯ ಮಾತಂ ಮೀಱುಉದು ಕ್ಷತ್ರಿಯ ರಾಜ ಪುರ್ತ್ರಂಗೆ ಲಕ್ಷಣಮಲ್ಲೆಂದು ನಿರ್ಬ್ಬಂಧಿಸಿ ಪೇಳೆ ಹಿಂಸೆಗೆ ಕೇಳದಿರೆ ತಾಯ ಮನದೊಳೊಂದುಪಾಯಮಂ ನೆನೆದು ಪಿಟ್ಟಿನ ಕೋಳಿಯರ ಚಿತ್ರಿಕರಿಂ ಮಾಡಿಸಲದು ವಿಚಿತ್ರಮಪ್ಪುದುಮಾ ರೂಪಾತಿಶಯಕ್ಕೆಮೊಂದು ಪಿಶಾಚಮದಱೊಳಗೆ ಪೊಕ್ಕಿರಲುಂ ಆ ಕೋಳಿಯಂ ಕೊಲ್ಲೆಂಬುದುಂ ಅರಸಂ ವೊಲ್ಲೆನೆಂದೊಡೆ ತಂನ ಪ್ರಾಣಕ್ಕೆ ಮಾಡಿಕೊಂಬೆನೆನಲಾಭೀತನಾಗಿ ತಾಯುಪರೋಧಕ್ಕೊಂಡಂಬಟ್ಟು ಆಶ್ವಯುಜ ಮಾಸದ ಶುಕ್ಲಪಕ್ಷದಷ್ಟಮಿಯ ಕುಜವಾರಮಂದು ಚಂಡಿಕಾದೇವಿಯ ಮುಂದಾ ಹಿಟ್ಟಿನ ಕೋಳಿಯಂ ತಾಯವೊತ್ತಂಬಲದಿಂ ಖಂಡಯದಿಂ ಕೋಳಿಯ ವೊಳಪೊಕ್ಕಿರ್ದ್ದ ಭೂತಂ ಕೋಳಿಯಂತೆ ಕೊಡೆ ಕೂಗೆ ಅರಸಂ ಆ ಧ್ವನಿಯಂ ಕೇಳ್ದು ಪಿಡಿದಸಿಯಂ ನೆಲಕ್ಕೀಡಾಡಿ ಮಱುಗಿ ನಡ ನಡಂ ನಡುಗಿ ಕಣ್ಬನಿಯಂ ತುಂಬಿ

|| ಕ || ಯಿದು ಕೋಳಿಯ ಧ್ವನಿಯಲ್ಲಂ
ಸುದತಿಯ ದೆಸೆಯಿಂದಾಮಾದ ನರಕ ದ್ವಾರ
ಕ್ಕಿದು ಕರೌದೆಂದು ಮನದೊಳು
ಕುದಿದಂ ಪಾತಕಿಯೆನಿಪ್ಪ ತಾಯಿಂ ನೊಂದಂ ||

ಅಂತು ಮನೆಗೆ ಬಂದು ವೈರಾಗ್ಯದಿಂ ಜಿನದೀಕ್ಷಾಭಿಮುಖನಪ್ಪ ನಿಜವಲ್ಲಭನಂ ಅಮೃತಮತಿ ಕಂಡು ತಂನ ದೂಸಱೆಂದೀತಂ ಪೋಪನಿದಕ್ಕೆ ತಕ್ಕುದಂ ಮಾಳ್ಪೆನೆಂದು ಮನದೊಳು ನೆನೆದು ಪತಿಯ ಸಮೀಪಕ್ಕೆ ಬಂದು ಕಾಲ್ಗೆಱಗಿ ನೀಂ ಕ್ಷತ್ರಿಯೋತ್ತಮಂ ದಯಾಪರನಪ್ಪುದಱೆಂ ಸ್ತ್ರೀಯಪ್ಪೆಂನಪರಾಧಮಂ ಸೈರಿಸಿ ಯಶೋಮತಿಗೆ ಪಟ್ಟಂಗಟ್ಟಿ ಯೆಂನರ ಮನೆಯೊಳಾನುಂ ನೀಉಂ ಅತ್ತೆಯುಂ ಭೋಜನಂಗೆಯು ಮೂವರುಂ ಜಿನರೂಪಧಾರಗಳಷ್ಟವೆಂದೊಡಂಬಡಿಸಿ ವಿಷದ ಲಡ್ದುಗೆಯಂ ಮಾಡಿಕ್ಕಿಗಂದನುಮಂ ಅತ್ತೆಯನುಮಂ ಕೊಂದಷ್ಟವಂಕನೊಡನೆ ಕಾಮ ಭೋಗಂಗಳನನುಭವಿಸುತ್ತಮಿರ್ದ್ದಳಿತ್ತಂ ಯಶೋಧರಂ ಸತ್ತು ಪಿಟ್ಟಿನ ಕೋಳಿಯಂ ಕೊಂದ ದೋಷದಿಂ ವಿಂಧ್ಯಗಿರಿಯಲ್ಲಿ ನವಿಲಾಗಿ ಪುಟ್ಟಿದನಿತ್ತಲೂ ಚಂದ್ರಮತಿಯುಂ ಸತ್ತು ಕರಹಾಟ ದೇಶದಲ್ಲಿ ಹೆಂಣುನಾಯಾಗಿ ಪುಟ್ಟಿದಳಿಂತರ್ವ್ವರು ಪರಸ್ಪರ ವೈರಭಾವದಿಂಯೆಯ್ಯ ಮೃಗಮುಂ ಕೃಷ್ಣ ಸರ್ಪ್ಪನುಂ ಅಜನುಂ ಕೋಣನುಂ ಮೀನುಂ ಮೊಸಳೆಯುಂ ಆಡುಂ ಹೋತನುಂ ಮೊದಲಾದನೇಕ ಭವಂಗಳೊಳು ಅನ್ಯೋನ್ಯ ಹತಿಯಿಂ ಸತ್ತು ಕಡೆಯೊಳುಜ್ಜೆನಿಯಲ್ಲಿ ಮಾದೆಗನ ಮನೆಯಲ್ಲಿ ಕೋಳಿಗಳಾಗಿ ಪುಟ್ಟಿರಲಾ ಮಾದೆಗನಸಂಗೆ ಕಾಣಿಕೆದಂದು ಕೊಡಲಾತಂ ಚಂಡಕರ್ಮ್ಮನೆಂಬ ತಳವಾಱನ ವಶಕ್ಕೆ ಕೊಡಲೊಂದು ದಿವಸಂ ಯಶೋಮತಿ ಮಹಾರಜಂ ತಂನರಸಿ ಕುಸುಮಾವಳಿಯೆಂಬ ಳ್ವೆರಸಿ ಉದ್ಯಾನವೊನಕ್ಕೆ ಪೋಗಿ ಪೂವಿನ ಮಂಟಪದೊಳು ತಳಿರ ತಳ್ಪದೊಳು ತಾನುಂ ಕುಸುಮಾವಳಿ ಕಾಮಸುಖದಿನಿದ್ದನಿರಲು ಚಂಡಕರ್ಮ್ಮಂ ಕೋಳಿಗಳ್ವೆರಸು ವನ ವಿಹಾರಂಗೆಯುತ್ತಮಲ್ಲಿರ್ದ್ದ ದಿವ್ಯ ಮುನಿಗಳಂ ಕಂಡು ಜೀವತತ್ವಮಂ ಕೇಳಿ ಜೀವದಯ ಸ್ವರೂಪಮಂ ಕೇಳ್ದುಮಲ್ಲಿರ್ಪ್ಪ ಸಮಯದಲ್ಲಿಯಾ ಕೋಳಿಗಳು ಕೇಳಿ ಸಂತುಷ್ಟಂಗಳಾಗಿ ಸರಸಂಗೈಯ್ಯೆ ಯಶೋಮತಿಯೆಂಬರಸಂ ಶಬ್ಧವೇಧಿಯೆಂಬ ಬಾಣದಿಂದೆರಡಱ ಶಿರಮಂ ನೊರ್ಮ್ಮೊದಲೊಳೆಚ್ಚೇದಿಸಲವೆರಡುಂ ಕುಸುಮಾವಾಳಿಯ ಗರ್ಭದೊಳಭಯರುಚಿ ಯಭಯಮತಿಗಳೆಂಬ ಗಂಡು ಪೆಣ್ಗೂಸುಗಳಾಗಿ ಪುಟ್ಟಿ ಶಿಶುತ್ವಮಂ ಪತ್ತುವಿಟ್ಟು ಬಲಕಾಲದೊಳೆ ಸುದತ್ತಾಚಾರ್ಯ್ಯರ ಪಕ್ಕದೊಳು ಹಿಂದಣ ಪ್ರಪಂಚಮಂ ಕೇಳ್ದು ನಿರ್ವೇಂಗಂ ಪುಟ್ಟಿ ಕ್ಷುಲ್ಲಕರಾಗಿ ತಪಂಗೆಯ್ವುತ್ತಂ ಯೌಧೇಯ ವಿಷಯದ ರಾಜ ಪುರದ ಅರಸಂ ಮಾರಿದತ್ತನಾ ಪುರದ ಬಹಿರುದ್ಯಾನಕ್ಕೆ ಸುದಾತ್ತಾಚಾರ್ಯ್ಯರುಂ ಸಮುದಾಯಂ ಬೆರಸಿ ಬಂದು ಪಂಥಾತಿ ಚಾರ ಪ್ರತಿಕ್ರಮನಂಗೆಯ್ದು ಪವಾಸಮಂ ಕೈಕೊಂಡು ಬ್ರಹ್ಮಚಾರಿಯುಗ್ಮಮಂ ಭಿಕ್ಷಾನಿಮಿತ್ತಮಾ ಪುರಕ್ಕೆ ಕಳಿಹಲಾ ಪ್ರಸ್ಥಾವದೊಳು ಚೈತ್ರ ಮಾಸದ ಶುಕ್ಷ ಪಕ್ಷದಷ್ಟಮಿಯುಂ ಬರಲ ರಾಜಪುರವರಸ ಮಾರಿದತ್ತಂ ಚಂಡಮಾರಿಯ ಭಕ್ತನಪ್ಪುದಱೆಂದಾ ದೇವತೆಗೆ ಜಾತ್ರೆಯಂ ನೆರಪಿ ದೇವತೆಯ ಮುಂದೆಲ್ಲಾ ಜೀವಂಗಳ ಯಗಲಂಗಳ ವಂದಿಸುವ ಪ್ರತಿಜ್ಞೆಯಿದಂ ಶುಭಲಕ್ಷಣ ಸಂಬೃತಂಗಳಪ್ಪ ಮನುಷ್ಯ ಯುಗ್ಮಮಂ ತರಲ್ಪೇಡಿ ಚಂಡಕರ್ಮ್ಮನೆಂಬ ತಳಾಱನ ನಟ್ಟಲಾತಂ ಬಂದು ಭಿಕ್ಷಾ ನಿಮಿತ್ತವಾಗಿ ಬರ್ಪ್ಪಭಯರುಚಿಯಭಮತಿಗಳಂ ಕಂಡವರೀರ್ವ್ವರಂ ಪಿಡಿದು ದೇವತೆ ಸಂತುಷ್ಟೆಯಹಳೆಂದು ಪಿಡಿದೊಯ್ದು ಮಾರಿದತ್ತಂಗೊಪ್ಪಿಸಲಾತಂ ಕೊಲಲೆಂದು ಯಿವರ ಗಂಧ ಲೇಪನವಂ ಮಾಡಿ ಪೂವಿನ ಮಾಲೆಯನಿಕ್ಕಿ ದೇವತೆಯ ಮುಂದೆ ಕುಳ್ಳಿರಿಸಿ ಅರಸಂ ಖಡ್ಗಮಂ ಜಡಿದು ಜನಮೆಲ್ಲಂ ಅರಸಂ ಯಿವರೊಡನೆ ಪರಸಿಮೆನಲವರಿಂತೆಂದರೆಲೆ ಮಹಾರಾಜಾ ನೀಂ ರಾಜಚಂದ್ರನಪ್ಪುದಱೆಂ ಚಂದ್ರನಂತೆಲ್ಲಾ ಜನಂಗಳಿಗೆ ಹಿತಮನೆ ನೆಗಳುತ್ತ ಪ್ರಜೆಗಳಂ ಪ್ರತಿಪಾಲಿಸುತ್ತ ಪುತ್ರಮಿತ್ರರ ಪ್ರತಿಪಾಲಿಸಿ ದಯಾ ಮೂಲಮಪ್ಪ ಅಹಿಂಸಾಧರ್ಮ್ಮಮೆ ಮೋಕ್ಷಮಾರ್ಗಮೆಂದಾರಾಧಿಸಿ ಸದ್ಧರ್ಮ್ಮ ಪರಾಯಣನಾಗಿ ರಾಜನ್ವಯ ತಿಲಕನೆನಿಸಿ ಸುಖದಿರಾಜ್ಯ ಸಮುನನುಭವಿಸೆಂದು ಪರಸಿ ಅರಸಂ ಆ ಪರಕೆಯಂ ಕೇಳ್ದು ವಿಸ್ಮಯಾನ್ವಿತನಾಗಿ ಪಿಡಿದ ಖಡ್ಗಮಂ ನೆಲಕ್ಕೀಡಾಡಿ ಯಿವರೀರ್ವ್ವರ ಧೈರ್ಯಕ್ಕಂ ಬಾಲಕಾಲದಲ್ಲಿಯ ನಿರ್ವೆಗ ತೋಱವಿಗಂ ಮೆಚ್ಚಿ ನೀವಾರಾವ ಕುಲಮೇನು ನಿಮಿತ್ತಮೀ ಹರಯದಲ್ಲಿ ಭೋಗನಿಸ್ಪೃಹರಾದಿರೆನೆ ಅವರಿಂತೆಂದರೆಲೆ ಮಹಾರಾಜಾ ಯೆಂಮ ಚರಿತಮೆಂಬುದು ಧಾರ್ಮಿಕರ್ಗ್ಗೆಯೆ ಸೊಗಸೂದು | ನೀನು ಮೀತ್ಯಾ ಧರ್ಮ್ಮರತನಾದನದು ಕಾರಣ ನಿನ್ನಭೀಷ್ಟಮಪ್ಪಂತೆ ಮಾಡೆಂಬುದುಂ ಅರಸಂ ನೀವು ಮಹಾರಾಜರುಗಳು ಮಹಾಪುರುಷರೆಂದು ಅವರ ಪಾದ ಪ್ರಕ್ಷಾಲನಂ ಮಾಡಿ ತಾನುಂ ಭಕ್ತಿಯಿಂ ವಂದಿಸಿ ಬೇಡಿಕೊಂಡು ನಿರ್ಬ್ಬಂಧದಿ ಬೆಸಗೊಳೆ ಅವರಿಂತೆಂದರೆಲೆ ಮಹಾರಾಜಾ ನೀನೊಳ್ಳಿತಂ ಬೆಸಗೊಂಡೆ ನಿಂನ ಬಾಳ್ವೆಯಿಂ ದಿನದಿನಕ್ಕೆ ಮೋಕ್ಷಮಾರ್ಗಭಿಮುಖವಾಯ್ತು ಧನ್ಯತ್ವಗುಣವೆಂಬುದು ಬಹಿರ್ನ್ನಿಮಿತ್ತಮಿಲ್ಲದಿಂದು ಪ್ರಕಟಮನೆಯ್ದಿದರಾಗಿ ಯಿಂದೆಂಮ ದೆಸೆಯಿಂ ಕಲ್ಯಾಣ ಪರಂಪರೆಗೆ ಕಾರಣಮಾಯ್ತೆಂದು ಶ್ಲಾಘಸಿ ಅರಸನೊಡನೆ ತಂಮ ಹಿಂದಣ ಭವದ ಕಥೆಯ ವಿಸ್ತಾರವಾಗಿ ಹಿಟ್ಟಿನ ಕೋಳಿಯಂ ಕೊಂದುದು ಮೊದಲಾಗಿ ತಂಮ ಭವಭವದ ಪ್ರಪಂಚಮಂ ನೀರೂಪಿಸೆ ಅರಸಂ ಕೇಳ್ದು ಭಯ ಚಕಿತ ಚಿತ್ತನಾಗಿ ಸುರಿವ ಕಣ್ಬನಿಯ ಪ್ರವಾಹದಿಂದಾ ಬ್ರಹ್ಮಚಾರಿಗಳ ಪಾದ ಪ್ರಕ್ಷಾಲನಂಗೆಯ್ದು ಪೂಜಿಸಿ ಪೊಡವಡೆ ಸರ್ವಜನಕೆಲ್ಲಂ ಕೇಳಿ ಚ್ಯೋದ್ಯಂಬಟ್ಟು ಯಿವರ್ಗೆ ತಾವೆಲ್ಲರುಂ ಸಾಷ್ಟಾಂಗ ಪ್ರಣುತರಾಗಿರ್ದ್ದುದಂ ಕಂಡು ಪರಸುತಿರೆ ಆ ಚಂಡಮಾರಿ ದೇವತೆಯೆಂತಿರ್ದ್ದುದೆದೊಡೆ ಕರದ ಖಡ್ಗ ಕಪಾಲಮುರ್ವ್ವ ಸುರೆ ಉರಿವ ನಾಲಗೆ ಕರುಳು ಮಾಲೆ ಪೊರಳ್ದಗಲ್ಲ ಕೋರ್ಚೆದಾಡೆ ಹಱೆದ ತಲೆ ಬಿಡಗಂಣು ನೀಳ್ದ ನಾಲಗೆ ಇಂತಪ್ಪ ಭಯಂಕರಮೆನಿಸಿ ನೆಗಲ್ದ ಚಂಡಮಾರಿ ದೇವತೆ ಆ ಬ್ರಹ್ಮಚಾರಿಗಳ ಭವ ಪ್ರಪಂಚ ಮಂ ತಾಂ ಕೇಳ್ದು ಹಿಂಸೆಗೆ ಪೇಸಿ ಭಯ ಭ್ರಾಂತಿಯಾಗಿ ಮಱುಗಿ ಹಿಟ್ಟಿನ ಕೋಳಿಯಂ ಕೊಂದು ಯಶೋಧರನುಂ ಚಂದ್ರಮತಿಯುಂಮಿಂತಪ್ಪ ಭವಭವದಲ್ಲಿಯ ಚಿಂತ್ಯಮಪ್ಪ ದುಃಖ ದಾವಾಗ್ನಿಯಿಂ ಬೆಂದು ನೊಂದರಿಂನು ಸಚೇತನಂಗಳಪ ಜೀವವಧೆಯಂ ಮಾಡಿದ ನಿರ್ಗ್ಗುಣರಿಂನೆಂತಪ್ಪ ಪಾತಕದ ಫಲಮನುಂಬೆಂದು ಮಱುಗಿ ಪ್ರತ್ಯಕ್ಷಮಪ್ಪ ದಿವ್ಯ ರೂಪಂಧರಿಸಿಯಾ ಬ್ರಹ್ಮಚಾರಿಗಳ ಪಾದೋಪಾಂತ ಧರೆಯೊಳ್ಪೊರಳಿ ಯೆಂನಂ ರಕ್ಷಿಪುದೆಂದು ದೈನ್ಯಂಬಡುವ ದೇವತೆಯನರಸಂ ಸರ್ವಜನವೆಲ್ಲಂ ಕಾಂಡಾಶ್ಚರ್ಯ್ಯಂಭಡುತ್ತಿರಲಾ ದೇವತೆಯಿಂತೆಂದೆಳೆಲೆ ಸ್ವಾಮಿ ಯೆನಗೆ ಅಹಿಂಸಾ ವ್ರತಮಂ ಪಾಲಿಪುದೆಂದು ಬ್ರಹ್ಮಚಾರಿಗಳ ಪಾದಮಂ ಪೂಜಿಸಿ ಅವರ ಪಕ್ಷದೊಳು ಅಹಿಂಸಾ ವ್ರತಮಂ ಸ್ವೀಕರಿಸಿ ಪಂಚಾಣು ವ್ರತಂಗಳಂ ಕೈಕೊಂಡು ಅಷ್ಟಮೂಲ ಗುಣಂಗಳಂ ಧರಿಸಿ ಸಮ್ಯಕ್ತ್ವಮಂ ಸ್ವೀಕರಿಸಿಕೊಂಡು ತಾನುಂ ಪ್ರಜೆಗಳೊಡನೆಯಿಂದು ಮೊದಲೆಂನ ಭಕ್ತರೆಲ್ಲರುಂ ನಿರವಧ್ಯಮಪ್ಪ ಭಕ್ಷ ಪಕ್ವಾಂನ ಪಾಯಸ ಸುಗಂಧ ಪುಷ್ಪಂಗಳಿಂ ಪೂಜಿಪುದಲ್ಲದೆ ಕೆಡಿಸುವೆನೆಂದು ವೊದಱಿ ಸಾಱಿಪೇಳಿ ಬ್ರಹ್ಮಚಾರಿಗಳಿಗೆ ಪೊಡವಟ್ಟು ಅದೃಷ್ಯವಾಗಿ ದೇವತೆ ಪೋಗೆ ಮತ್ತಂ ಜನಂಗಳೆಲ್ಲಂ ಪೇಸಿ ಜಿನಧರ್ಮ್ಮರತರಾದರಲ್ಲಿ ಮಾರಿದತ್ತ ಮಹಾರಾಜಂನಿಂತೆಂದನಾನಿತು ಕಾಲಂಗೈದ ಪಾಪಂ ತಪಂಬಟ್ಟಲ್ಲದೆ ಪೋಗದೆಂದು ನಿರ್ವ್ವೇಗಮಂ ತಾಳ್ದು ದೀಕ್ಷೆಯಂ ಪಾರ್ತ್ಥಿಸಲವರಿರ್ವ್ವರು ತಂಮ ಶ್ರೀ ಗುರುಗಳಪ್ಪ ಸುದತ್ತಾಚಾರ್ಯ್ಯರ ಸಮೀಪಕ್ಕೊಯ್ದುದುಮವರೀ ಮಹಾರಜಗೆ ಹಿಂಸಾ ದೋಷಮಂ ಸವಿಸ್ತರಂ ನಿರೂಪಿಸಲಾತಂ ಕುಸುಮದತ್ತನೆಂಬ ಕುಮಾರಂಗೆ ರಾಜ್ಯಾಭಿಷೇಕ ಪೂರ್ವಕಂ ಪಟ್ಟಂಗಟ್ಟಿ ಸುದತ್ತಾಚ್ಚಾರ್ಯ್ಯರಿಂ ಜೀವದಯಾಷ್ಟಮಿಯ ನೋಂಪಿಯಂ ಕೊಡಿಸಿ ಕುಮಾರನಿಗೆ ಸರ್ವ್ವ ಜೀವ ದಯಾಷ್ಟಮಿಯ ಪರನಾಗಿರೆಂದು ಬುದ್ಧಿವೇಳಿ ತಾನುಂ ಸಂಸಾರಕ್ಕೆ ಪೇಸಿ ಜಿನದೀಕ್ಷೆಯಂ ಸ್ವೀಕರಿಸಿದನಾ ಪುರದೊಳಗಣ ಪುರುಷರುಂ ಸ್ತ್ರೀಯರುಂ ಜೀವದಯಾಷ್ಟಮಿಯ ನೋಂಪಿಯಂ ಕೈಕೊಂಡು ಯೆಂಟು ವೊರುಷಂ ನೋಂತು ಉದ್ಯಾಪನೆಯಂ ಮಾಡಿ ದೇವೇಂದ್ರ ಧರಣೀಂದ್ರ ಮುನೀಂದ್ರ ಸಂಪತ್ತುಗಳನನುಭವಿಸಿ ಕ್ರಮದಿಂ ಸ್ವರ್ಗ್ಗಾದಿ ಸುಖಮಂ ಪಡದರು ಮತ್ತಂ ಮಾರಿದತ್ತ ಮುನಿಜೀವದಯಾಷ್ಟಮಿಯ ಉಪವಾಸ ಪೂರ್ವ್ವಕವಾಗಿ ನೋಂಪಿಯಂ ಕೈಕೊಂಡು ಉಗ್ಗೋಗ್ರ ತಪಶ್ಚರಣಂಗೆಯ್ದು ಸನ್ಯಸನ ವಿಧಿಯಿಂ ಶರೀರ ಭಾರಮನಿಳಿಸಿ ೩ನೆಯ ಸ್ವರ್ಗ್ಗದಲ್ಲಿ ಅಣಿಮಾದಿ ಗುಣೋಹಿತನುಂ ಸಪ್ತ ಸಾಗರೋಪಮ ಜೀವಿತನುಂ ಪಂಕ ಪ್ರಭಾವ್ಯಾಪ್ತಾವಧಿಜ್ಞಾನ ಸಂಪಂನನು ತತ್‌ಕ್ಷೇತ್ರ ಹಾರಕ ವೈಕ್ರಿಯಕದೇಹನುಂ ೭ ಸಾವಿರ ವರ್ಷಕೊಂಮೆ ಮನಸಾಹಾರನುಂ ೩ ತಿಂಗಳು ೧೫ ದಿನಕೊಂಮೆ ಉಚ್ವಾಸಮನುಳ್ಳನುಂ ೪ ಲಕ್ಷೆಯುಂ ೮೦ ಸಾಸಿರ ಪೆಂಡಿರ್ಗ್ಗೊಡೆಯನುಂ ಮಲಧಾತು ರಹಿತಮಪ್ಪ ದಿವ್ಯಧರ ದೇಹನಾಗಿ ಪುಟ್ಟಿ ಸುಖಮಿರ್ದ್ದಂ ಅಭಯರುಚಿ ಅಭಯಮತಿಯುಂ ಯಿಶಾನ ಕಲ್ಪದ ದೇವರಾಗಿ ಸ್ವರ್ಗ್ಗದ ದಿವ್ಯ ಸುಖಮನನುಭವಿಸಿ ಕ್ರಮದಿಂದ ಮೋಕ್ಷಮಂ ಪಡದರೆಂದು ಗೌತಮ ಗಣಧರರು ನಿರೂಪಿಸಿ ಶ್ರೇಣಿಕ ಮಹಾಮಂಡಲೇಶ್ವರನುಂ ಚೇಳಿನಿ ಮಹಾ ದೇವಿಯೆಂ ಕೇಳಿ ಸಂತುಷ್ಟ ಚಿತ್ತರಾಗಿ ನೋಂಪಿಯ ಪ್ರಭಾವಕ್ಕೆ ಮೆಚ್ಚಿ ನೋಂಪಿಯಂ ಕೈಕೊಂಡು ಸರ್ವ್ವಜ್ಞನಂ ಗಣಧರರುಮಂ ಬೀಳ್ಕೊಂಡು ಸಮವಸರಣಮಂಪೊಱಮಟ್ಟು ಅನೇಕ ವಿಭವದಿಂ ಬಂದು ಪುರಮನರಮನೆಯಂ ಪೊಕ್ಕು ಸುಖಮಿರೆ ನೋಂಪಿಯ ದಿನಂ ಬರೆ ಆಶ್ವಯುಜ ಮಾಸದ ಶುಕ್ಷಪಕ್ಷದಷ್ಟಮಿಯ ದಿನದಲ್ಲಿ ನೋಂಪಿಯಂ ತಾವಿರ್ವ್ವರುಂ ಯಥಾಕ್ರಮದಿಂ ಭಕ್ತಿ ಪೂರ್ವ್ವಕಂ ಪಲಂರ್ಬ್ಭವ್ಯರಂ ಕೂಡಿಕೊಂಡು ಮಹಾ ವಿಭವದಿಂದೆಂಟು ವರ್ಷಂ ನೋಂತು ಕಡೆಯೊಳುಜ್ಜವಣೆಯಂ ಮಾಡಿ ಜೀರ್ಣ ಚೈತ್ಯಾಲಯಂಗಳಂ ಜೀಣ್ನೋದ್ಧಾರಣಂಗಳಂ ಮಾಡಿಸಿ ಪ್ರತಿಷ್ಟೆಯಂ ಮಾಡಿಸಿ ಕ್ಷೇತ್ರಂಗಳಂ ಬಿಟ್ಟು ಜೈನ ಬ್ರಾಹ್ಮಣರಿಂಗೆ ಅಗ್ರಹಾರಂಗಳಂ ಬಿಟ್ಟುಕೊಟ್ಟು ತತ್ಫಲದಿಂ ಜಯಂತ ಮನ್ಮಥರ್ಗ್ಗೆಣೆಯರಪ್ಪ ಪಲಂಬರು ಪುತ್ರರಂ ರತಿಗೆ ಸಮಾನೆಯರಪ್ಪ ಪುತ್ರಿಕೆಯರಂ ಪಡದು ಪಿರಿದಪ್ಪೈಶ್ವರ್ಯ್ಯಕ್ಕೊಡೆಯರಾಗಿ ದಿವ್ಯ ಸುಖಮನನುಭವಿಸಿದರೂ ||

ಆವಾವ ಜೀವವೆಲ್ಲವ
ನೋವದೆ ವಧೆಗೆಯ್ದು ಮಾರಿದತ್ತ ನರೇಂದ್ರಂ
ದೇವೇಂದ್ರನಾದನೆಂದರೆ
ಜೀವದಯಾಷ್ಟಮಿಯಂ ನೋಂಪಿ ಸಾಧಾರಣಮೇ ||

ಯಿಂತೀ ಜೀವದಯಾಷ್ಟಮಿಯ ನೋಂತು ಮಹಾ ಪುರಷರ್ಗ್ಗಂ ನೋನಿಸಿದವರ್ಗ್ಗಂ ಮಂಗಳ ಮಹಾಶ್ರೀ