|| ಶ್ರೀ ವೀತರಾಗಾಯ ನಮಃ ||

ಶ್ರೀ ಮದಮರೇಂದ್ರ ವಂದ್ಯಂ
ಕಾಮಹರಂ ಸಕಲ ವಿಮಲ ಕೇವಲ ಭೋದಂ
ಸೋಮಾರ್ಕ್ಯ ಕೋಟಿ ತೇಜಂ
ನೇಮಿಜಿನಂ ಕುಡುಗೆ ನಮಗೆ ಸುಖ ಸಂಪದಮಂ ||

ಮಂಗಳ ಕಾರಣವೆನಿಸುವ
ತಂಗುಳು ತವನಿಧಿಯ ನೋಂಪಿಯಂ ಕನಕ ಶ್ರೀ
ಯೆಂಬಳ್ಗಣಿನಿಯೆ ಪೇಳ್ದಾ
ಪಾಂಗಿಂ ನಾನುಸುರ್ವ್ವೆನೆಸೆವ ಪೂಸಕಂನಡದಿಂ ||

|| ವ || ಅದೆಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದೊಳವಂತಿಯೆಂಬುದು ನಾಡು | ಉಜ್ಜೆನಿಯೆಂಬುದು ಪೊಳಲದನಾಳ್ವಂ ಪ್ರತಾಪ ಸಿಂಹನೆಂಬರಸನಾತನರಸಿ ಪದ್ಮಾವತಿಯೆಂಬಳಂತವರಿರ್ವ್ವರುಂ ಸುಖ ಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರಲಾಪುರಕ್ಕೆ ಶ್ರೀಗಂತಿಯರೈವತ್ತು ತಂಡಜ್ಜಿಕಾಸಮುದಾಯಂ ಬೆರಸು ಬಂದುದಂ ಪದ್ಮಾವತಿ ಕೇಳ್ದು | ಚೈತ್ಯಾಲಯಕ್ಕೆ ಅಷ್ಟ ವಿಧಾರ್ಚನೆ ಸಹಿತಂ ಬಂದು ಪರಮ ಜಿನಪತಿಗೆ ಅಭಿಷೇಕ ಪೂಜೆಯಂ ಮಾಡಿಸಿ | ಪುಣ್ಯ ವೃದ್ಧಿಯಂ ಮಾಳ್ಪುದೆಂದು ಬೇಡಿಕೊಂಡು ತದನಂತರಮಿಂತೆಂದಳು | ಯೆನಗಾಉದಾನುಮೊಂದು ಪರಮ ಸುಖಕ್ಕೆ ಕಾರಣ ನೋಂಪಿಯಂ ಬೆಸಸಿಮೆಂದು ಬಿಂನಪಂಗೆಯ್ಯಲವರಿಂತೆಂದರಾಷಾಢ ನಂದೀಶ್ವರಮಾದಿಯಾಗಿ | ಕಾರ್ತ್ತೀಕ ನಂದೀಶ್ವರದ ಪೌರ್ಣ್ನಮಿ ಪರಿಯಂತಂ ಅಷ್ಟಮಿ ಚತುರ್ದ್ದಶಿಗಳೊಳು ಶುಚಿರ್ಬ್ಭೂತರಾಗಿ ಚೈತ್ಯಾಲಯಕ್ಕೆವಂದು ಜಿನೇಶ್ವರರಿಗೆ ಯಥಾಶಕ್ತಿಯಿಂದಭಿಷೇಕ ಪೂಜೆಯಂ ಮಾಡಿ ತದನಂತರಂ | ಶ್ರುತದ ಮುಂದೆ ದಿನಂಪ್ರತಿಯಂ ನಾಲ್ಕು ಹಿಡಿಯಂ ನಾಲ್ಕು ಪುಂಜಂ ಮಾಡಿ ಗುರಗಳಂ ಬಂಧಿಸಿ ಮನೆಗೆ ಬಂದೇಕ ಭುಕ್ತಮಂ ಮಾಳ್ಪದು | ದಿನಂಪ್ರತಿ ನಾಲ್ಕು ತಿಂಗಳು ತಂಗುಳಂನುಂಣೆ ನೆಂದು ವ್ರತಮಂ ಕೈಕೊಂಬುದು ಯಿದು ನೋಂಪಿಯ ಕಥೆ | ಕಡೆಯಜ್ಜವಣೆಯ ಕ್ರಮಮೆಂತೆಂದೊಡೆ ಹಂನೆರಡು ಬೇಸಳಿಗೆಯೊಳಗೆ ಹುಗ್ಗಿ | ಹಚ್ಚಂಬಲಿ | ಕಸುಗೂಳು | ಪಾಯಸಮಂ ಬಡಿಸಿ | ಆಯ್ದು ಬಿಸು ಹೂರಿಗೆಯಂ ಮುಚ್ಚಿ ಮೇಲೆಯೆ ಸಮುಚ್ಚಿಯಂ ಮುಚ್ಚಿ | ದೇವರ್ಗ್ಗೊಂದು ಶ್ರುತಕ್ಕೊಂದು ನೋನಿಸಿದಜ್ಜಿಯರ್ಗ್ಗೊಂದ ಜಕ್ಕಳೆಗೊಂದು ಕಥಕಗೊಂದು | ಉಳಿದ ಬೇಸಳಿಗೆಗಳಂ ಜೈನ ಸೋವಾಸಿನಿಯರ್ಗ್ಗೆ ಬಾಯಿನಮಂ ಕುಡುಉದು | ನೋನಿದಜ್ಜಿಯರ್ಗ್ಗೆ ಬಾಯಿನಮಂ ವಸ್ತ್ರಮಂ ಕುಡುಉದು | ಕಥಕನಂ ಪೂಜಿಸುಉದು | ಚಾತುರ್ವ್ವರ್ಣ್ಣಕ್ಕೆ ಯಥಾ ಶಕ್ತಿಯಿಂ ಭಕ್ತಿ ಪೂರ್ವಕಂ ಆಹಾರಾದಿ ದಾನಮಂ ಮಾಳ್ಪುದೆಂದು ಪೇಳೆ ಕೇಳ್ದು ಪದ್ಮಾವತಿಯು ನೋಂಪಿಯಂ ಕೈಕೊಂಡು ಆಕೆಯ ವಿಳಾಸಿನಿ ವಸಂತಮಾಲೆಯುಂ ನೋಂಪಿಯಂ ಕೈಕೊಂಡು ನೋನುತ್ತಮಿರಲುಜ್ಜವಣೆಯ ದಿನಂ ಬರೆ ವಸಂತಮಾಲೆ ವಸ್ತ್ರನಿಮಿತ್ತ ತಂತುವಾಯನ ಮನೆಗೆ ಪೋಗಿ | ಉಜ್ಜವಣೆಯ ಪೊಸವಸ್ತ್ರಮಾಗದಿರೆ ಚಿಂತಾಕ್ರಾಂತೆಯಾಗಿರ್ಪ್ಪುದು ತಂತುವಾನಿಂತೆಂದನೀಗಳೇ ಪೊಸ ವಸ್ತ್ರವ ನೆಯ್ದು ಕೊಡುವೆ ನಿಂನ ನೋಂಪಿಯೊಳೆ ನಾನುಂ ಫಲಮಂ ಕೊಟ್ಟಡೆ ಬೇಗನೆಯ್ದು ಕೊಡುವೆನೆನಲಂತೆಗೆಯ್ವೆನೆಂದು ಅಷ್ಟಮ ಭಾಗದೊಳೊಂದು ಭಾಗಮಂ ಕೊಡಲು ತ್ವರಿತದಿಂ ವಸ್ತ್ರಮಂ ಕುಡೆ | ಕೊಂಡು ಮನೆಗೆ ಬಂದು ಶುಚಿರ್ಭ್ಬೂತೆಯಾಗಿ | ಚೈತ್ಯಾಲಯಕ್ಕೆ ಪೋಗಿ ಯಥಾಶಕ್ತಿಯಿಂ ಜಿನೇಶ್ವರಂಗೆ ಅಭಿಷೇಕ ಪೂಜೆಯಂ ಮಾಡಿಸಿ ಉಜ್ಜೈಸಿ ಬಾಯಿನಮಂ ಕೊಟ್ಟು ಹೋಗಿ ಯೇಕವೃತ್ತಮಂ ಮಾಡಿ ಸುಖಮಿರ್ಪ್ಪುದು | ಮಿತ್ತ ಪದ್ಮಾವತಿ ಹೊತ್ತನತಿಕ್ರಮಿಸಿ ರಾತ್ರಿಯೊಳುಜ್ಜವಣೆಯಂ ಮಾಡಿ ಬಾಯಿನಮಂ ಕೊಟ್ಟು ತಂದ ಮನೆಗೆ ಬಂದೇಕ ಭುಕ್ತಮಂ ಮಾಡಿರ್ಪ್ಪುದು | ಬಾಯಿನಮಂ ರಾತ್ರಿಯೊಳಾರುಮುಂಣ್ಬರಿಲ್ಲದಿರೆ ನಾನಾ ಪ್ರಕಾರದ ಜೀವರಾಶಿಗಳು ತಿಂದು ಕೆಟ್ಟು ಪೋಗಲದನಾರುಮುಂಣದೆ ಉದಾಸೀನಗೆಯ್ದು ಕಳೆಯೆ | ಕೆಲಉ ದಿನಂ ಪೋಗೆ ಯಿತ್ತಲಾ ವಸಂತಮಾಲೆ ಆ ಪುರದ ರಾಜಶ್ರೇಷ್ಠ ಭಾನುದತ್ತನೆಂಬ ಪರದನಾತನ ಪರದಿತಿ ಲಕ್ಷ್ಮೀಮತಿಗೆ | ಕುಬೇರಕಾನ್ತನೆಂಬ ಮಗನಾಗಿ ಪುಟ್ಟಿ ಸುಖದಿಂದರಲಾ ಪದ್ಮಾವತಿ ಆಯುಷ್ಯಾವಸಾನದೊಳು ಸಾಕಲ್ಯರಹಿತ ನೋಂಪಿಯ ದೆಸೆಯಿಂದಾಪುರದೊಳು ಕಾಮಲತೆಯೆಂಬ ಸೂಳೆಯ ಬಸುಱೊಳು ಹೆಂಣುಮಗಳಾಗಿ ಪುಟ್ಟಿರ್ಪ್ಪುದು ಯಿತ್ತಲು ತಂತುವಾಯಂ ಮುಡುಪಿ ನೋಂಪಿಯ ಅಷ್ಟಮ ಭಾಗದ ಫಲದಿಂದಾ ಪುರದೊಳ್‌ ನಂದಿವರ್ದ್ಧನನೆಂಬ ಪರದಂಗಂ ನಂದಿವರ್ದ್ಧನೆಯೆಂಬ ಪರದಿತಿಗಂ ಕನಕಮಾಲೆಯೆಂಬ ಮಗಳಾಗಿ ಪುಟ್ಟಿ | ಪಂಚವರ್ಷಪ್ರಾಪ್ತಿಯಪ್ಪುದು | ಭಾನುದತ್ತಂ ತಂನ ಮಗಂಗೆ ಕಂನೆಯಂ ಬೇಡಿ ಪಡದು ಶುಭದಿನ ಮಹೂರ್ತ್ತದೊಳು ಮದುವೆಯಂ ಮಾಡಿ ಸುಖಮಿರ್ದ್ದರಿತ್ತಲೊಂದು ದಿವಸಂ ವಿಮಲಬೋಧರೆಂಬವಧಿಜ್ಞಾನಿಗಳಾ ಪುರದ ಬಹಿರ್ಭಾಗದುದ್ಯಾನವನಕ್ಕೆ ಬಂದುದಂ | ಸಮಸ್ತ ಪುರಜನಂ ಕೇಳ್ದು | ವಂದನಾ ನಿಮಿತ್ತಂ ಪೋಗಲೊಡನವರೊಡನೆ ಕುಬೇರಕಾನ್ತನುಂ ಕನಕಮಾಲೆಯುಂ ಸರ್ವ ಸಂಭ್ರಮದಿಂ ಪೋಗಿ ಗುರುಗಳ ಬಂದಿಸಿ ಧರ್ಮಶ್ರವಣಮಂ ಕೇಳ್ದು ತದನಂತರ ಕುಬೇರಕಾಂತಂ | ಕರಕಮಲಂಗಳಂ ಮುಗಿದು | ಯೆಲೆಸ್ವಾಮಿ ಯೆನಗೆ ಕನಕಮಾಲೆಯಲ್ಲದೆ ಉಳಿದಾವ ಸ್ತ್ರೀಯರೊಳಂ ಸ್ನೇಹಮಿಲ್ಲದದಂ ಬೆಸಸಿಮೆನಲ್ನೀಂ ಮುಂನಿನ ಭವದೊಳು ವಸಂತಮಾಲೆಯಾಗಿ ಪುಟ್ಟಿ ನಿನ್ನ ನೋಂಪಿಯ ಅಷ್ಟಮಭಾಗೆಯನಿತ್ತ ಫಲದಿಂ | ತಂತುವಾಯ ಕನಕಮಾಲೆಯಾದಳು | ಅದು ಕಾರಣದಿಂದತಿ ಸ್ನೇಹಿತನಾದೆಯೆಂದು ಬೆಸಸಲಾ ಸರ್ವ್ವಪ್ರಿಯೆ ಯಿಂತೆಂದಳೆನಗೆ ಸಮಸ್ತ ಪುರುಷರೆಲ್ಲಂ ಸ್ನೇಹಮಾಳ್ಪರೀ ಕುಬೇರಕಾನ್ತನೇಕ ಸ್ನೇಹಗೆಯ್ಯನೆಂಬುದಂ ಬೆಸಸಿಮೆನಲ್ನೀಂ ಮುಂನಿನ ಭವದೊಳ್‌ ಪದ್ಮಾವತಿಯಾದಂದು ನೋನಲೊಲ್ಲದೆ ಹೊತ್ತನತಿಕ್ರಮಿಸಿ ನೊಂದುಜ್ಜವಣೆಯಂ | ಮಾಡಿ ಬಾಯಿನಮಂ ಕುಡೆ | ರಾತ್ರಿಯೊಳುಂಬರಿಲ್ಲದೆ ನಾನಾ ಪ್ರಾಣಿಗಳೆಂಬಲಿಸಿದವಪ್ಪುದಱಿಂ | ನಾನಾ ಪುರುಷರೆಂಜಲಂ ತಿಂಬ ಸೂಳೆಯಾಗಿ ಪುಟ್ಟಿದೆಯೆಂದು ಬೆಸಸಲಂನೆಗಂ | ತನಗೆ ಭವಸ್ಮರಣೆಯಾಗಱಿದು ಸಂಮ್ಯಕ್ತ್ವಪೂರ್ವಕಂ ನೋಂಪಿಯನೀ ವಿಧಾನದಿಂ ನೋಂತುಜ್ಜೈಸಿ | ಸೌಧರ್ಮಕಲ್ಪದೊಳಮರೇಂದ್ರ ಪದವಿಯಂ ಪಡೆದಳು ಕುಬೇರಕಾನ್ತಗಂ ಕನಕಮಾಲೆಗಂ ಭವಸ್ಮರಣೆಯಾಗಿ | ಪುನರ್ನ್ನೋಂಪಿಯಂ ನೋಂತುಜ್ಜವಣೆಯಂ ಮಾಡಿ ತತ್ಪಲದಿಂದಚ್ಚುತ ಕಲ್ಪದೊಳಿಂದ್ರ ಪ್ರತೀಂದ್ರರಾದರು || ಈ ತಂಗಳು ತವನಿಧಿಯ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಮಂಗಳ ಮಹಾಶ್ರೀ