|| ಶ್ರಿ ಪಾರ್ಶ್ವನಾಥಾಯ ನಮಃ ||

ಜಯನಾಥ ಜಯ ಜಿನೇಶ್ವರ
ಜಯ ಕಂದರ್ಪ್ಪದರ್ಪ್ಪ ರಿಪುಗಣ ಮಥನಾ
ಜಯ ನಷ್ಟ ಘಾತಿ ಕರ್ಮಕ
ಜಯ ಜಯ ದೇವೇಂದ್ರ ಮಕುಟ ಘಟಿತಾ ಚರಣ ||

ವ || ಅದೆಂತೆಂದೊಡೆ ಜಂಬೂದ್ವೀಪದ ಭರತ ಕ್ಷೇತ್ರದ ಕುರುಜಾಂಗಣ ವಿಷಯದ ಅಮರಾವತಿಯೆಂಬ ಪುರಮನಾಳ್ವಯಿಂದ್ರ ಮಹಾರಾಜಂ ಆತನರಸಿ ಪದ್ಮಾವತೀ ಮಹಾದೇವಿಯುಂ ತಂನ ವಿಳಾಸಿನಿಯರು ಸಹಿತಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರೆ ಆ ಪುರದ ಪಶ್ಚಿಮ ಭಾಗದ ವಿಪುಳ ವನದ ಮಧ್ಯ ಪ್ರದೇಶದಲ್ಲಿ ಶ್ರೀ ಮಲ್ಲಿನಾಥ ತೀರ್ಥೇಶ್ವರರ ಸಮವಸರಣಂ ಬಿಜಯಂಗೆಯ್ದುದೆಂದು ವನಪಾಲಕಂ ಬಂದು ಇಂದ್ರ ಮಹಾರಾಜಂಗೆ ಬಿನ್ನವಿಸೆ ಹರ್ಷೋತ್ಕರ್ಷ ಚಿತ್ತನಾಗಿ ಆ ವನಪಾಳಕಂಗೆ ಅಂಗಚಿತ್ತಮಂ ಕೊಟ್ಟು ಆನಂದ ಭೇರಿಯಂ ಪೊಯಿಸಿ ಪರಿಜನ ಸಹಿತಂ ಪಾದ ಮಾರ್ಗದಿಂ ಪೋಗಿ ಸಮವಸರಣಮನೆಯ್ದಿ ಗಂಧಕುಟಿಯಂ ತ್ರಿಃಪ್ರದಕ್ಷಿಣಂಗೆಯ್ದು ದರ್ಶನ ವಸ್ತು ರೂಪ ಗುಣ ಭೇದ ಚತುಃಪ್ರಕಾರಮಪ್ಪ ಸ್ತವನಾದಿಗಳಿಂ ಸ್ತುತಿಯಿಸಿ ವಂದನೆಯಂ ಮಾಡಿ ಅರ್ಚನಾದ್ರವ್ಯಂಗಳಿಂದರ್ಚ್ಚಿಸಿ ದೇವತಾಸ್ತವನಮಂ ನಿರ್ವ್ವರ್ತ್ತಿಸಿ ಶ್ರುತ ವಂದನೆಯಂ ಮಾಡಿ ಅರ್ಚನಾದ್ರವಂಗಳಿಂದರ್ಚ್ಚಿಸಿ ದೇವತಾಸ್ತವನಮಂ ನಿರ್ವ್ವರ್ತ್ತಿಸಿ ಶ್ರುತವಂದನೆಯಂ ಮಾಡಿ ತದನಂತರಮಿಂದ್ರಣಂದಿ ಸ್ವಾಮಿಗಳ್ಗೆ ವೊಂದನೆಯಂ ಮಾಡಿ ನಿರ್ಮ್ಮಳ ಚಿತ್ತದಿಂ ಧರ್ಮ್ಮಶ್ರವಣಮಂ ಕೇಳ್ದು ಹರ್ಷೋತ್ಕರ್ಷಚಿತ್ತನಾಗಿರ್ದ್ದೆಲೆ ಸ್ವಾಮಿ ಯನಗೆ ಮೋಕ್ಷ ಸುಖಲಬ್ಧಮಪ್ಪುದಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರಿಂತೆಂದರತಿಶಯಮಪ್ಪ ಆಷಾಢ ಮಾಸದ ಶುದ್ಧ ಚತ್ತಾರಿ ಪಾಡ್ಯದೊಳು ತ್ರಿಲೋಕಸಾರಮೆಂಬ ನೋಂಪಿಯುಂಟಾ ನೋಂಪಿಯಂ ನೋಂತರೆ ಮೋಕ್ಷ ಸುಖಪ್ರಾಪ್ತಿಯಪ್ಪುದೆಂದು ಬೆಸಸೆ ಆ ವಿಧಾನಮೆಂತನೆ ದೇವಪೂಜೆಯಂ ಮಾಡಿಸಿ ತಂಡುಲ ಗೋಧಿ ಕಡಲೆ ತೊಗರಿ ವುದ್ದು ಹೆಸರು ಚಣಂಗಿ ಯೀ ಸಪ್ತಧಾನ್ಯದಿಂ ಮಗಧ ದೇಶದೊಬ್ಬಳ್ಳ ಪಿಟ್ಟಿಂ ಕಡುಬಂ ಮಾಡಿ ತುಪ್ಪ ಶರ್ಕ್ಕರೆ ಸಹಿತಂ ದೇವರ್ಗ್ಗರ್ಚ್ಚಿಸಿ ವುಳಿದ ಕಡುಬಂ ಜೈನೋಪಾಧ್ಯಾಯರ್ಗ್ಗೆ ಬಾಯಿನಮಂ ಕೊಡುವುದು ಕಥೆಯಂ ಕೇಳ್ದು ಕಥಕನಂ ಪೂಜಿಸಿ ದಕ್ಷಿಣೆಯಂ ಕೊಟ್ಟು ಯೀ ಕ್ರಮದಿಂದೆಂಣ್ಟು ವರ್ಷಂ ನೋಂತು ಉದ್ಯಾಪನೆಯಂ ಮಾಳ್ಪುದು ಉದ್ಯಾಪನೆಯ ಕ್ರಮಮೆಂತೆಂದೊಡೆ ದೇವರ್ಗ್ಗೆ ಮಹಾಭಿಷೇಕಮಂ ಪೂಜೆಯಂ ಮಾಡಿಸಿ ವುಪಕರಣಂಗಳಂ ಕೊಡುವುದು ಯೇಳು ತಂಡ ಮೇಣೊಂದು ತಂದ ಋಷಿಯರು ಅಜ್ಜಿಯರ್ಗ್ಗೆ ತಟ್ಟು ಕುಂಚ ಕಮಂಡಲ ಪುಸ್ತಕ ವಸ್ತ್ರಮಂ ಸಹವಾಗಿ ಕೊಡುವುದು ದೀನಾನಾಥರ್ಗ್ಗೆ ಭೂರಿ ದಾನಮಂ ಕೊಟ್ಟು ಸಪ್ತಧಾನ್ಯ ಬೆಳೆವಂಥಾ ಕ್ಷೇತ್ರಮಂ ದೇವರಿಗೆ ಕಲ್ಲ ನೆಡಿಸಿಕೊಟ್ಟು ಚಾತುವರ್ನ್ನಕ್ಕೆ ಉಣಲೆಕ್ಕಿಸಿ ಸುದೃಷ್ಟಿಗಳಾಗಿರ್ದ್ದು ಏಳು ಮಂದಿ ಬ್ರಾಹ್ಮಣರ್ಗ್ಗೆ ಬಾಇನಮಂ ಕೊಡುವ ಕ್ರಮಮೆಂತೆಂದೊಡೆ ಹಿಂದೆ ಹೇಳಿದ ಕ್ರಮದಿಂ ಕಡುಬಂ ಮಾಡಿ ಯೇಳು ಬಾಇನಂಗಳಂ ಪುರುಷ ಪ್ರಮಾಣ ಮಾಡಿ ಕಟ್ಟಿಸಿಯೇಳು ತೆರದ ಫಲವಸ್ತು ಯೇಳಡಕೆ ಯೇಳೆಲೆ ವೊಂದೊಂದು ಯಜ್ಞೋಪವೀತಮನಿಟ್ಟು ಗಂಧಾಕ್ಷತೆಯಿಂದರ್ಚ್ಚಸಿ ದಕ್ಷಿಣೆ ಸಹಾ ಯೇಳುಮಂದಿ ಸಮ್ಯಗ್‌ ದೃಷ್ಟಿ ಬ್ರಾಹ್ಮಣರ್ಗ್ಗೆ ಬಾಇನಮಂ ಕೊಟ್ಟು ಸಪ್ತಧಾನ್ಯದೊಳು ಪ್ರತ್ಯೇಕಂ ಖಂಡುಗ ಖಂಡುಗಮಂ ವೊಕ್ಕುಳೊಕ್ಕುಳ ತುಪ್ಪಮಂ ಪ್ರತ್ಯೇಕಂ ಕೊಟ್ಟು ಯೇಳು ಮಂದಿಗುಣಲಿಕ್ಕಿ ವಬ್ಬಂಗೆ ವಸ್ತ್ರಾಲಂಕಾರಮಂ ಮಿಥುನಸಹ ವುಡಕೊಟ್ಟು ಕಥೆಯಂ ಕೇಳ್ದು ದಕ್ಷಿಣೆಯಂ ಕೊಡುವುದು ಅರಸುಗಳಾದೊಡೆ ಬಾಇನಮಂ ಕೊಟ್ಟು ಯೇಳುಮಂದಿ ಗೃಹಸ್ಥರಿಗೆ ತಕ್ಕ ಹಾಗೆ ಕ್ಷೇತ್ರಮಂ ಬಿಟ್ಟು ದೇವರಿಗೂ ಸದೃಷ್ಟಿಗಳ್ಗೂ ಧರ್ಮ್ಮಂ ಕೊಡುವುದೆಂದು ಇಂದ್ರಣಂದಿ ಸ್ವಾಮಿಗಳು ಯಿಂದ್ರ ಮಹಾರಾಜಂಗೆ ಪೇಳೆ ಪರಿಜನ ಪುರ ಜನ ಸಹಿತಂ ಕ್ರಮದಿಂ ನೋಂತು ಸ್ವರ್ಗ್ಗಾಪ ವರ್ಗ್ಗಮಂ ಪಡೆದರು ಇಂದ್ರ ಮಹಾರಾಜಂ ಕ್ರಮದಿಂ ಸಪ್ತಪರಮಸ್ಥಾನಮಂ ಪಡೆದಂ ಚತ್ತಾರಿಯ ಪಾಡ್ಯದ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಜಯ ಮಂಗಳ ಮಹಾ || ಶ್ರೀ