ಶ್ರೀ ದಿವಿಜರಾಜನುತ ಜಿನ
ಪಾದಪಯೋಜಾತಮಂ ವಂದಿಸಿ ನಾಂ
ಮೇದಿನಿಗತಿ ಹಿತಮೆನಿಸುವ
ಶ್ರೀ ದಶಲಾಕ್ಷಣಿಕ ಧರ್ಮಕಥೆಯಂ ಪೇಳ್ವೆಂ ||

ಸಂಪದ್ಯುಕ್ತನಾದ ದೇವತೆಗಳೊಡೆಯ ದೇವೇಂದ್ರನಿಂದ ಹೊಗಳಿಸಿಕೊಂಡಿರುವ ಜಿನನ ಅಡಿದಾವರೆಗಳಿಗೆ ನಮಸ್ಕರಿಸಿ ನಾನು ಈ ಭೂಮಿಗೆ ಅತಿ ಹಿತಕರವಾದ ದಶಲಾಕ್ಷಣಿಕ ನೋಂಪಿಯ ಕಥೆಯನ್ನು ಹೇಳುತ್ತೇನೆ.

ಜಂಬೂದ್ವೀಪದ ಭರತ ಕ್ಷೇತ್ರದಲ್ಲಿನ ಆರ್ಯಖಂಡದ ಮಗಧ ದೇಶದಲ್ಲಿ ಅನುಪಮವಾದ ರಾಜಗೃಹವೆಂಬ ಪುರ. ಅದನ್ನು ಆಳುವವನು ಸಮ್ಯಗ್ದೃಷ್ಟಿಯವನಾದ ಶ್ರೇಣಿಕ ಮಹಾಮಂಡಲೇಶ್ವರ. ಆತನ ಪಟ್ಟಮಹಾದೇವಿ, ಪತಿವ್ರತಾದಿ ಸುಗುಣ ಸಂಪನ್ನೆ ದರ್ಶನ ಶುದ್ಧೆ ಜಿನಧರ್ಮರಹಸ್ಯ ಬಲ್ಲಿದೆ ಆದ ಚೇಳಿನೀದೇವಿ. ಶ್ರೇಣಿಕ ಚೇಳಿನಿಯರು ಸುಖಸಂಕಥಾವಿನೋದದಿಂದ ರಾಜ್ಯವಾಳುತ್ತಿರುವಾಗ ಒಂದು ದಿವಸ ರಾಜಗೃಹದ ಉದ್ಯಾನಕ್ಕೆ ಸಮೀಪದಲ್ಲಿನ ವಿಪುಲಾಚಲದಲ್ಲಿ ಹದಿನೆಂಟು ದೋಷಗಳಿಲ್ಲದವನೂ ಅಷ್ಟಮಹಾಪ್ರಾತಿಹಾರ್ಯಾ ಸಮನ್ವಿತನೂ ಆದ ವೀರವರ್ಧಮಾನ ಸ್ವಾಮಿಯ ಸಮವಸರಣ ಅವತರಿಸಿತು. ಆ ಮಹಾನುಭಾವನ ಸಾಮರ್ಥ್ಯದಿಂದ ಆ ವನದೊಳಗೆ ಹಾವು -ಮುಂಗಸಿ, ಆನೆ -ಸಿಂಹ, ಜಿಂಕೆ -ಹುಲಿಗಳು ತಮ್ಮ ಜಾತಿವೈರ್ಯವನ್ನು ತೊರೆದು ಲೀಲಾವಿನೋದದಿಂದಕೂಡಿದ್ದುವು. ಕಾಲವಲ್ಲದ ಕಾಲದಲ್ಲಿ ಬಿಟ್ಟ ಹೂವು ಹಣ್ಣುಗಳಿಂದ ತುಂಬಿದ ಮರಗಳನ್ನು ನೋಡಿ ಚಕಿತನಾದ ವನಪಾಲಕನು ಅವನ್ನು ತಂದು ದೊರೆಗೆ ಕೊಟ್ಟು ನಮಿಸಿ ಇಂತೆಂದು ಬಿನ್ನವಿಸಿದ. ಎಲೆ ಮಹಾರಾಜ, ವಿಫುಲಾಚಲ ಶಿಖರದಲ್ಲಿ ಅಂತಿಮ ತೀರ್ಥಂಕರರಾದ ಶ್ರೀ ವೀರವರ್ಧಮಾನಸ್ವಾಮಿಯ ಸಮವಸರಣ ಬಂದು ನೆಲಸಿದೆ. ಅದನ್ನು ಕೇಳಿ ಅರಸನು ಸಿಂಹಾಸನದಿಂದ ಎದ್ದು ಆ ದಿಕ್ಕಿಗೆ ಏಳು ಅಡಿ ನಡೆದು ಸಾಷ್ಟಾಂಗ ಪ್ರಣಾಮ ಮಾಡಿ ವನಪಾಲಕನಿಗೆ ಉಡುಗೊರೆಯಿತ್ತು ಆನಂದ ಭೇರಿಯನ್ನು ಹೊಯ್ಸಿ ಪರಿಜನ ಪುರಜನ ಅಂತಃಪುರನ ಸಮೇತ ಕಾಲುನಡಿಗೆಯಲ್ಲಿ ಹೋಗಿ ಸಮವಸರಣವನ್ನು ಹೊಕ್ಕು ಗಂಧಕುಟಿಯನ್ನು ಮೂರುಬಾರಿ ಸುತ್ತಿ ವಸ್ತುಸ್ತವ ರೂಪಗಸ್ತವ ಗುಣಸ್ತವ ಮೊದಲಾದ ಅಣೆಕ ಸ್ತುತಿಗಲ್ಳಿಂದ ಕೊಂಡಾಡಿ ಹಲವು ಆರ್ಚನೆಗಳಿಂದ ಅರ್ಚಿಸಿ ಸಾಷ್ಟಾಂಗವೆರಗಿ ಅನಂತರ ಗೌತಮಗಣಧರ ಮೊದಲಾದ ಮುನಿಸಮುದಾಯಕ್ಕೆ ವಂದಿಸಿ ಮನುಷ್ಯ ಕೋಷ್ಠದಲ್ಲಿ ಕುಳಿತು ಜಿನನಿಂದ ನಿರೂಪಿತನಾದ ಜೀವಾದಿ ಪದಾರ್ಥಗಳ ಸ್ವರೂಪವನ್ನು ಕೇಳಿ ಸಂತುಷ್ಟ ಚಿತ್ತನಾಗಿ ಶ್ರೇಣಿಕ ಮಹಾರಾಜನು ಮತ್ತೆ ನಮಿಸಿ ಗೌತಮನಿಗೆ ಹೀಗೆಂದನು, ‘ಎಲೆ ಸ್ವಾಮಿ, ಸಂಸಾರದ ಬಿಡುಗಡೆಮಾಡುವಂಥ ಒಂದು ನೋಂಪಿಯನ್ನು ಅಪ್ಪಣೆ ಮಾಡಿ’. ಅದಕ್ಕೆ ಮುನೀಶ್ವರರು ಹಿಗೆಂದು ನೀರೂಪಿಸಿದರು: ‘ಎಲೈ ಮಹಾರಾಜನೇ ಕೇಳು. ಧಾತಕೀಖಂಡ ದ್ವೀಪದ ಪೂರ್ವ ಮೇರುವಿನ ದಕ್ಷಿಣ ಭಾಗದ ಸೀತೋದಾ ನದಿಯ ಸಮೀಪದಲ್ಲಿ ವಿಶಾಲವೆಂಬ ಪಟ್ಟಣವಿದೆ. ಅದನ್ನು ಆಳುವವನು ಪ್ರಿಯಂಕರನೆಂಬ ದೊರೆ. ಅವನ ಅರಸಿ ಪ್ರಿಯಂಕರಿ. ಅವರಿಬ್ಬರ ಮಗಳು ಮೃಗಾಂಕರೇಖೆ. ಆತನ ಮಂತ್ರಿ ಮತಿ (ಣಿ) ಶ್ರೇಣಿಕರ, ಮಂತ್ರಿಯ ಮಡದಿ ಶಶಿಪ್ರಭೆ. ಅವರಿಬ್ಬರಿಗೆ ಮಗಳು ಕಾಮಸೇನೆ. ಪ್ರಿಯಂಕರ ರಾಜನ ರಾಜ ಶ್ರೇಷ್ಠಿ ಗುಣಶೇಖರ, ಗುಣಶೇಖರನ ವಲ್ಲಭೆ ಶೀಲಭದ್ರೆ, ಪುತ್ರಿಮದನಲೇಖೆ. ರಾಜನ ತಳವಾರ ಲಕ್ಷಭಟ, ಅವನ ಪತ್ನಿ ಚಂದ್ರಲೇಖೆ, ಮಗಳು ರೋಹಿಣಿ. ಆ ನಾಲ್ಕೂಜನ ಕನ್ಯೆಯರು ಜೈನೋಪಾಧ್ಯಾಯರ ಸಮಕ್ಷದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತ ಪರಸ್ಪರ ಸ್ನೇಹದಿಂದ ಇದ್ದರು. ಒಮ್ಮೆ ತಂದೆತಾಯಿಯರ ಅಪ್ಪಣೆ ಪಡೆದು ಗೆಳತಿಯರೆಲ್ಲ ಕ್ರಿಡಾ ನಿಮಿತ್ತದಿಂದ ಚೈತ್ರವನವನ್ನು ತಲಪಿ ಅಲ್ಲಿ ಕಂಗೊಳಿಸುವ ಮಾವಿನಮರ ಸಂಪಿಗೆಮರ ಮಾಲತಿ ಲತೆ ಮಲ್ಲಿಗೆ ಬಳ್ಳಿ ನಂದಿಬಟ್ಟಲು ಮೊದಲಾದ ಹೂವುಗಳು, ಜಲಪುಷ್ಪಗಳಿಂದ ಶೋಭಿಸುವ ತಿಳಿಗೊಳಗಳು ಅವುಗಳನ್ನು ಆಶ್ರಯಿಸಿದ ಗಿಳಿ ಕೋಗಿಲೆ ದುಂಬಿ ಹಂಸಗಳು – ಇವನೆಲ್ಲ ನೋಡಿ ಹಕ್ಕಿಗಳ ಇಂಪಾದ ಹಾಡು ಕೇಳುತ್ತಾ ಲೀಲಾವಿಹಾರ ಮಾಡುತ್ತಾ ಇರುವಾಗ ಅಲ್ಲೊಂದು ಅಶೋಕವೃಕ್ಷದಡಿಯಲ್ಲಿ ಇದ್ದ ನಿರ್ಮಲವಾದ ಸ್ಫಟಿಕ ಶಿಲೆಯ ಬಂಡೆಯ ಮೇಲೆ ಅವಧಿಜ್ಞಾನ ಸಂಪನ್ನರಾದ ವಸಂತಶಯನ (ವಸಂತಸೇನ) ರೆಂಬ ಅವಧಿಜ್ಞಾನ ಸಂಪನ್ನರು ಧ್ಯಾನದಲ್ಲಿದ್ದರು. ನಾಲ್ಕು ಜನ ಕನ್ನಿಕೆಯರೂ ಅವರ ಬಳಿ ಬಂದು ಧ್ಯಾನ ಮುಗಿಯುವವರೆಗೂ ಪೂಜಿಸುತ್ತಿದ್ದರು. ಧ್ಯಾನಾಂತರ ಮುನಿಗಳಿಗೆ ವಂದಿಸಿ ಧರ್ಮಸ್ವರೂಪದ ಬಗ್ಗೆ ಉದೇಶ ಕೇಳಿದರು. ತುರುವಾಯ ಅವರು ‘ಸಂಸಾರವೇ ಕಷ್ಟಕರ. ಅದರಲ್ಲಿ ಸ್ತ್ರೀ ಜನ್ಮ ಅತ್ಯಂತ ಕಷ್ಟ. ಈ ಸ್ತ್ರೀ ಜನ್ಮವನ್ನು ಕಳೆದು ಸದ್ಗತಿ ದೊರಕಿಸುವ ನೋಂಪಿಯೊಂದನ್ನು ತಿಳಿಸಿರಿ’ ಎಂದು ಬೇಡಿದರು. ಆಗ ಆ ಮಹಾ ಮುನಿವರು ಅವರಿಗೆ ದಶಲಾಕ್ಷಣಿಕ ಪರ್ವದ ನೋಂಪಿಯನ್ನು ವಿವರಿಸತೊಡಗಿದರು.

ಭಾದ್ರಪದ ಮಾಸದ ಶುಕ್ಲಪಕ್ಷದ ಪಂಚಮೀ ದಿವಸದಲ್ಲಿ ಸ್ನಾನಮಾಡಿ ಶುಚಿಯಾಗಿ ಮಡಿಯುಟ್ಟು ೨೪ ತೀರ್ಥಂಕರರ ಪ್ರತಿಮೆಗೆ ಅಭಿಷೇಕ ಅಷ್ಟವಿಧಾರ್ಚನೆ ಮಾಡಿ ಯಥಾಶಕ್ತಿಯಿಂದ ಸುವರ್ಣಾದಿ ಪಾತ್ರೆಗಳಲ್ಲಿ ಶ್ರೀಗಂಧರಸ ಲೇಪದಿಂದ ಲೇಪಿಸಿ ಹತ್ತು ದಳ ಕಮಲವನ್ನು ಬರೆದು ಅದರ ನಡುವೆ ಪಂಚಗುರು ಹೆಸರು ಬರೆದು ಹೊರಗಿನ ದಳಗಳಲ್ಲಿ ಪ್ರದಕ್ಷಿಣ ಕ್ರಮದಿಂದ ಉತ್ತಮಕ್ಷಮಾ, ಮಾರ್ದವ, ಆರ್ಜವ, ಸ್ತಯ, ಶೌಚ, ಸಂಯಮ, ತಪಸ್‌, ತ್ಯಾಗ, ಆಕಿಂಚನ್ಯ, ಬ್ರಹ್ಮ ಚರ್ಯ – ಎಂಬ ಹತ್ತು ಧರ್ಮಗಳನ್ನು ಸ್ಥಾಪಿಸಿ ಪಂಚ ಪರಮೇಷ್ಠಿಗಳ ಪೂಜೆ ಮಾಡಿ ಅನಂತರ ಅಷ್ಟವಿಧಾನಾರ್ಚನಾ ದ್ರವ್ಯಗಳಿಂದ ಪ್ರತಿ ದಳಗಳನ್ನು ಪೂಜಿಸಿ ‘ಉತ್ತಮ ಕ್ಷಮಾ ಮಾರ್ದವಾರ್ಜವ ಸತ್ಯ ಶೌಚ ಸಂಯಮ ತಪಸ್‌ತ್ಯಾಗ ಆಕಿಂಚನ್ಯ ಬ್ರಹ್ಮಚರ್ಯಾಣಿ ಧರ್ಮಃ’ ಎಂಬ ಸೂತ್ರವನ್ನು ಹೇಳುತ್ತಾ ಅರ್ಘ್ಯವನ್ನೆತ್ತಿ ಪುಷ್ಪಾಂಜಲಿಯನ್ನು ೨೪ ತೀರ್ಥಂಕರ ಸ್ತೋತ್ರದಿಂದ ಮಾಡಬೇಕು. ಹೀಗೆ ಪಂಚಮಿಯಲ್ಲಿ ತೊಡಗಿ ಚತುರ್ದಶಿಯರೆಗೆ ನೋಂಪುವುದು. ಬ್ರಹ್ಮಚರ್ಯ್ಯ. ಭೂಶಯನ, ಧಾರಣೆ ಪಾರಣೆ, ಗಂಜಿ ಆಹಾರ -ಇವುಗಳಲ್ಲಿ ಯಾವುದಾರೂ ಒಂದನ್ನು ಯಥಾಶಕ್ತಿಯಿಂದ ಆಚರಿಸಿ ಕ್ರಮವಾಗಿ ಪ್ರತಿವರ್ಷ ಹತ್ತುವರ್ಷದವರೆಗೆ ಮಾಡುವುದು. ಅದರ ಉಜ್ಜವಣೆ ಕ್ರಮ ಹೇಗೆಂದರೆ, ಕಡೆಯ (ಹತ್ತನೆಯ) ವರ್ಷದ ಚತುರ್ದಶಿಯಲ್ಲಿ ಮಹೋತ್ಸಾಹದಿಂದ ೨೪ ತೀರ್ಥಂಕರರಿಗೆ ಮಹಾಭಿಷೇಕ ಪೂಜೆ ಮಾಡಿ ೨೪ ತೀರ್ಥಂಕರ ಪ್ರತಿಮೆಯನ್ನೂ ಶ್ರುತಸ್ಕಂಧವನ್ನೂ ಗಣಧರ ಪಾದುಕವನ್ನೂ ಮಾಡಿಸಿ ಚೈತ್ಯಾಲಯಕ್ಕೆ ಅಡ್ಡಣಿಗೆ ಹರಿವಾಣ ಗಂಟೆ ಮೊದಲಾದ ಉಪಕರಣಗಳನ್ನೂ ಭೇರಿ ಶಂಕ ಮೊದಲಾದ ವಾದ್ಯಗಳನ್ನು ಛತ್ರಚಾಮರಾದಿಗಳನ್ನೂ , ಋಷಿಯರಿಗೆ ಅಜ್ಜಿಯರಿಗೆ ಮೊದಲಾದ ಶ್ರಾವಕರಿಗೆ ಯಥಾಯೋಗ್ಯವಾಗಿ ಬ್ರಹ್ಮಚಾರಿ ಜ್ಞಾನೋಪಕರಣ ಮತ್ತು ಸಂಯಮೋಪಕರಣಗಳನ್ನೂ ಅರ್ಚನಾದಿಗಳನ್ನೂ ಕೊಡುವುದು, ಚತುಸ್ಸಂಘಕ್ಕೆ ಆಹಾರದಾನ ಮಾಡುವುದು. ಈ ಬಗೆಯ ಉಜ್ಜವಣೆಗೆ ಶಕ್ತಿಯಿಲ್ಲದವರು ೨೦ ವರ್ಷ ನೋಂಪುವುದು.

ಹೀಗೆ ಹೇಳಿದ ಮುನಿವಚನವನ್ನು ಕೇಳಿ ಆ ನಾಲ್ವರು ಕನ್ನೆಯರೂ ಮನವಚನ ಕಾಯ ಪ್ರಕರಣ ಶುದ್ಧಿಯಿಂದ ಆ ಮುನಿಗೆ ವಂದಿಸಿ ಸಂತೋಷ ಚಿತ್ತರಾಗಿ ಮನೆಗೆ ಹೋಗಿ ಆ ನೋಂಪಿಯ ದಿನ ಬರಲು ಮುನಿಗಳು ಹೇಳಿದ ಕ್ರಮದಿಂದ ಹತ್ತು ವರ್ಷ ನೋಂತು ಉದ್ಯಾಪನೆ ಮಾಡಿ ಕೆಲವು ಕಾಲ ಭೋಗೋಪಭೋಗಗಳನ್ನು ಭೋಗಿಸಿ ತಮ್ಮ ಆಯುಷ್ಯಾವಸಾನ ಕಾಲದಲ್ಲಿ ಸನ್ಯಸನ ವಿಧಿಯಿಂದ ಮುಡಿಪಿ ವಜ್ರಗಿರಿ, ವಜ್ರಾಭ, ವಜ್ರಾಂಕ, ವಜ್ರಸಾರಥಿ ಎಂಬ ನಾಲ್ಕು ಮಿಮಾನಗಳಲ್ಲಿ ಕ್ರಮದಿಂದ ಅಮರಗಿರಿ ಅಮರಚೂಲ, ದೇವಾಭ, ಪದ್ಮನಾಭರೆಂಬ ದೇವಕುಮಾರರಾಗಿ ಹುಟ್ಟಿ ಹದಿನಾರು ಸಾಗರೋಪಮಕಾಲ ಹತ್ತನೆಯ ಸ್ವರ್ಗ ಸುಖ ಅನುಭವಿಸುತ್ತ ನಂದೀಶ್ವರ ದ್ವೀಪ ಮೊದಲಾದ ಎಲ್ಲಾ ಅಕೃತಿಮ ಚೈತ್ಯ ಭವನಗಳನ್ನು ಭಕ್ತಿ ಪೂರ್ವಕವಾಗಿ ವಂದಿಸುತ್ತ ತಮ್ಮ ಆಯುಷ್ಯ ಮುಗಿದಾಗ ಅಲ್ಲಿಂದ ಬಂದು ಅಲ್ಲಿ ಈ ಜಂಬೂದ್ವೀಪದ ಭರತ ಕ್ಷೇತ್ರದ ಅವಂತಿದೇಶದ ಉಜ್ಜಯನೀ ನಗರದ ಅಧಿರಾಜ ಸ್ಥೂಲಭದ್ರ ಮತ್ತು ಪಟ್ಟದರಸಿಯರಾದ ವಿಚಕ್ಷಣೆ ಲಕ್ಷ್ಮೀಮತಿ ಸುಶೀಲೆ ಕಮಲಾಕ್ಷಿ ಎಂಬವರಿಗೆ ಕ್ರಮವಾಗಿ ಆ ದೇವತೆಗಳು ಪೂರ್ಣಾಭ, ದೇವರಜ, ಗುಣ(ಣಿ) ಚಂದ್ರ, ಪದ್ಮಾಕ್ಷ ಎಂಬ ಕುಮಾರರಾಗಿ ಹುಟ್ಟಿ ತಂದೆಯ ಮನೆಯಲ್ಲಿ ಜಿನೋತ್ಸವಾದಿ ಅನೇಕ ಮಂಗಳ ಕಾರ್ಯಕ್ಕೆ ಪಾತ್ರರಾಗಿ ಚಂದ್ರನ ಕಲೆಯ ಹಾಗೆ ಅಭಿವೃದ್ಧಿ ಪಡೆದು ಜೈನೋಪಾಧ್ಯಾಯರ ಸನ್ನಿಧಿಯಲ್ಲಿ ಸಕಲ ಶಾಸ್ತ್ರ ಪ್ರವೀಣರಾಗಿದ್ದರು. ಇತ್ತ ಹೂಣ ದೇಶಾಧಿಪತಿಯಾದ ತಿಲಕರಾಜನಿಗೆ ತಿಲಕವತಿಯೆಂಬ ಪಟ್ಟದರಾಣಿಯಿದ್ದಳು. ಇವರಿಗೆ ಬ್ರಾಹ್ಮೀ, ಕಕುಭೆ, ಮೃಗಾಕ್ಷಿ, ಕುಮಾರಿ ಎಂಬ ನಾಲ್ವರು ಹೆಣ್ಣು ಮಕ್ಕಳು ಹುಟ್ಟಿ ಬೆಳೆದು ಮದುವೆಗೆ ಒದಗಿ ಬಂದಿದ್ದರು. ಆ ನಾಲ್ವರು ರಾಜಕುಮಾರರು ಕ್ರಮವಾಗಿ ಈ ನಾಲ್ವರು ಕುವರಿಯರನ್ನು ಮದುವೆಯಾಗಿ ಸಂಸಾರ ಸುಖವನ್ನು ಅನುಭವಿಸುತ್ತಿದ್ದರು. ಆ ಕುಮಾರರ ಸಕಲ ಕಲಾ ಪ್ರೌಢತೆಯನ್ನೂ ಜಾತಿವಿದ್ಯಾತಿಶಯವನ್ನೂ ನೋಡಿ ಸ್ಥೂಲಭದ್ರ ರಾಜನು ಪರಮಾನಂದವನ್ನು ಹೊಂದಿ ಸಮಸ್ತ ರಾಜ್ಯಾಧಿಪತ್ಯವನ್ನು ಕುಮಾರರಿಗೆ ಸಮರ್ಪಿಸಿದನು. ಕುಮಾರರು ಪರಸ್ಪರ ಸ್ನೇಹಯುಕ್ತರಾಗಿ ಒಬ್ಬರನ್ನೊಬ್ಬರು ಅಗಲಿ ಇರಲಾರದೆ ಯಾವಾಗಲೂ ಶಸ್ತ್ರಶಾಸ್ತ್ರಾಭ್ಯಾಸಪರಾಯಣರಾಗಿ ದುಷ್ಟ ನಿಗ್ರಹ ಶಿಷ್ಟಪರಿಪಾಲನೆಯನ್ನು ಮಾಡುತ್ತ ಅತಿಪ್ರೀತಿಯಿಂದ ರಾಜ್ಯ ಸುಖವನ್ನು ಅನುಭವಿಸುತ್ತ ಹಿಮ ಶಿಶಿರ ವಸಂತ ಗ್ರೀಷ್ಮ ವರ್ಷ ಶರತ್ಕಾಲವೆಂಬ ಆರು ಋತುಗಳಿಗೆ ಯೋಗ್ಯವಾದ ವಸ್ತ್ರ ಆಭರಣ ಅನ್ನಪಾನ ಲೇಪನ ಮೊದಲಾದ ಭೋಗೋಪಬೋಗಗಳನ್ನು ಅನುಭವಿಸುತ್ತ ಇರಲು ಅಷ್ಟರಲ್ಲಿ ಒಂದು ದಿನ ಸ್ಥೂಲಭದ್ರ ರಾಜನು ಕುಮಾರರ ಕರುಮಾಡವನ್ನು ತಲಪಿ ದಿಕ್ಕನ್ನು ಅವಲೋಕಿಸುತ್ತಿರಲು ಆ ಸಮಯದಲ್ಲೊಂದು ಮೇಘವು ವಿಚಿತ್ರ ಆಕಾರಗಳಿಂದ ಕಣ್ಣಿಗೆ ಮಂಗಳಾವಾಗಿ ಕಾಣಿಸಿ ಮರುಗಳಿಗೆಯಲ್ಲೇ ಮಾಯವಾಯಿತು. ಅದರಿಂದ ಅವನಿಗೆ ವೈರಾಗ್ಯ ಮೂಡಿ ಶರೀರ ಆಯುಷ್ಯ ಐಶ್ವರ್ಯಗಳೆಲ್ಲ ಈ ತೆರನಾಗಿ ನಶ್ವರವೆಂದು ಅರಿತು ಆ ಸಮಯದಲ್ಲಿ ದ್ವಾದಶಾನುಪ್ರೇಕ್ಷೆಗಳನ್ನು ಭಾವಿಸಿ ಸಂಸಾರ ಸುಖಕ್ಕೆ ಹೇಸಿ ತನ್ನ ಮಕ್ಕಳಿಗೆ ರಾಜ್ಯಾಭೀಷೇಕಮಾಡಿ ಪಿಹಿತಾಸ್ರವ ಭಟ್ಟಾರಕರ ಚರಣ ಸನ್ನಿಧಿಯಲ್ಲಿ ನೂರುಮಂದಿ ರಾಜಕುಮಾರರ ಸಹಿತ ಬಾಹ್ಯ ಅಭ್ಯಂತರ ಪರಿಗ್ರಹಾದಿಗಳಿಂದ ನಿವೃತ್ತನಾಗಿ ಜಿನ ದೀಕ್ಷೆಯನ್ನು ಕೈಕೊಂಡು ಜಿನದೀಕ್ಷೆ ಪಡೆದು ಪರಮೋಪಶಾಂತಚಿತ್ತನಾಗಿ ತಪವನ್ನು ಆಚರಿಸಿ ಸ್ವರ್ಗವನ್ನು ಸೇರಿದನು.

ಇತ್ತ ನಾಲ್ವರು ಕುಮಾರರು ಆಲೋಚಿಸಿದರು : ರಾಜ್ಯಸುಖ ಯಾವುದೇ ರೀತಿಯಲ್ಲಿ ಒಳಿತಲ್ಲ. ನಮ್ಮ ತಂದೆ ಅದರಿಂದಲೇ ಒಂದು ಕೊಳೆತ ಕಡ್ಡಿಯನ್ನು ಬಿಸುಡುವಂತೆ ರಾಜ್ಯ ತ್ಯಜಿಸಿ ನಿರ್ಗ್ರಂಥರೂಪದ ಜಿನದಿಕ್ಷೆಯನ್ನು ಕೈಗೊಂಡು ಘಾತಿ ಆಘಾತಿಕರ್ಮಗಳನ್ನು ಕೆಡಿಸಿ ಮೋಕ್ಷ ಲಕ್ಷ್ಮಿಗೆ ವಲ್ಲಭನಾದನು. ಅನಂತಗುಣ ಚತುಷ್ಟಯ ಲಕ್ಷಣ ಪ್ರಾಪ್ತಿಯಾಗಲು ಮೋಕ್ಷಪುರಕ್ಕೆ ರಾಜ್ಯ ಸಂಪತ್ತು ಅಡ್ಡಿ, ಅವು ನಮಗೆ ಅಹಿತ. ಹೀಗೆ ಚಿಂತಿಸಿ ಆ ನಾಲ್ವರು ವೈರಾಗ್ಯಪರರಾಗಿ ಕಿರಿಯ ಕುಮಾರನಾದ ಹರಿಷೇಣನಿಗೆ ಪಟ್ಟಗಟ್ಟಿದರು. ಅನಂತ ಸುಖಪಡೆಯಲು ಅಲ್ಪಸುಖ ಸಾಧನ ತೊರೆಯುವುದು ಅಚ್ಚರಿಯೇನೂ ಅಲ್ಲ. ಆಮೇಲೆ ಆ ನಾಲ್ವರೂ ಶೀಲಸಾಗರ ಭಟ್ಟಾರಕರ ದಿವ್ಯಚರಣ ಸನ್ನಿಧಿಯಲ್ಲಿ ಜಿನದೀಕ್ಷೆ ಪಡೆದು ತಪಸ್ಸು ಆಚರಿಸಿ ಪರಮ ಶುಕ್ಲಧ್ಯಾನವೆಂಬ ಬೆಂಕಿಯಲ್ಲಿ ಘಾತಿಕರ್ಮಗಳೆಂಬ ಪುಳ್ಳೆಗಳನ್ನು ಪೂರ್ಣವಾಗಿ ಉರುಪಿ ಕೇವಲಜ್ಞಾನ ದರ್ಶನದಿಂದ ಲೋಕಾಲೋಕ ಸ್ವರೂಪವನ್ನು ಅರಿಯುತ್ತಾ ಕಾಣುತ್ತಾ ಸ್ಪಲ್ಪಕಾಲ ಗಂಧಕುಟಿಯಲ್ಲಿ ವಿಹರಿಸುತ್ತಾ ಧರ್ಮೋಪದೇಶ ಮಾಡಿದರು. ತಮ್ಮ ಆಯಸ್ಸು ಮುಗಿಯುವುದರಲ್ಲಿ ಉಳಿದ ಅಘಾತಿ ಕರ್ಮಗಳನ್ನು ಕಳೆದು ಏಕ ಕಾಲದಲ್ಲಿ ಈಷತ್‌ ಪ್ರಾಗ್ಭಾರವೆಂಬ ಮೋಕ್ಷ ಸ್ಥಾನಕ್ಕೆ ಸಂದರು. ನಿತ್ಯಾನಂತ ನಿರ್ಮಲ ಸ್ವರೂಪ ಪ್ರಕಾಶನ ಸಮರ್ಥರಾಗಿ ಸಚ್ಚಿದಾನಂದದ ಆತ್ಮರಾಗಿ ಲೋಕಾಲೋಕ ಸ್ಥಿತಿಯನ್ನು ಓರ್ವೊದಲೆ ತಿಳಿಯುತ್ತ ಅನಂತ ಸುಖದಿಂದ ಇದ್ದರು. ಹೀಗೆಂದು ಗೌತಮ ಶ್ರೇಮಿಕ ಮಹಾರಾಜನಿಗೆ ತಿಳಿಸಿದರು. ತನ್ನ ರಾಮಿ ಚೇಳಿನಿದೇವಿ ಸಹಿತವಾಗಿ ನೋಂಪಿಯನ್ನು ಕೇಳಿದ ಶ್ರೇಣಿಕನು ಸಂತುಷ್ಟಚಿತ್ತನಾಗಿ ವೀರವರ್ಧಮಾನಸ್ವಾಮಿಗೂ ಗೌತಮ ಗಣಧರರಿಗೂ ವಂದಿಸಿ ರಾಜಗೃಹಕ್ಕೆ ಮರಳಿ ಅರಮನೆ ಸೇರಿ ನೋಂಪಿಯನ್ನು ಮಾಡಲು ನಿಶ್ಚಯಿಸಿ ನೋಂಪಿಯ ದಿನ ಬಂದಾಗ ನೋಂತು ಉದ್ಯಾಪನೆ ಪೂರೈಸಿ ಸುಖದಿಂದ ಇದ್ದನು. ಇತ್ತಕಡೆ ವೀರವರ್ಧಮಾನ ಸ್ವಾಮಿಯ ಸಮವಸರಣ ಪಾವಾಪುರದ ಉದ್ಯಾನಕ್ಕೆ ತೆರಳಲು ಅಲ್ಲಿ ಸ್ವಾಮಿಯು ಸಮವಸರಣವನ್ನು ವಿಸರ್ಜಿಸಿ ಪರಮ ಶುಕ್ಲಧ್ಯಾನ ನಿರತನಾಗಿ ಮೋಕ್ಷ ಪ್ರಾಪ್ತನಾದನು.

ಈ ನೋಂಪಿಯನ್ನು ಓದಿದವರಿಗೆ ಹೇಳಿದವರಿಗೆ ಕೇಳಿದವರಿಗೆ ಮತ್ತು ಇದನ್ನು ನೋಂತವರಿಗೆ ಅನೊಮೋದನೆ ಮಾಡಿದವರಿಗೆ ಸ್ವರ್ಗ -ಮೋಕ್ಷ ಫಲಗಳು ದೊರೆಯುವುವು.