ಶ್ರೀ ಮದ್ವಿಶ್ವವಿಲೋಚನಂ ಸುವಿಮಲಂ ವಿದ್ಯಾವಿಶಾಲಂ ವರಂ
ಕಾಮಸ್ಥೈರ್ಯಮದೇಭ ಪಂಚವದನಂ ಸುಕ್ಷೇಮ ವೀರ್ಯಾಸ್ಪದಂ
ಸೋಮಾದಿತ್ಯ ಸಹಸ್ರ ಕೋಟಿ ಕಿರಣಂ ಸರ್ವೇಂದ್ರವಂದ್ಯಂ ಮಹಾ
ಶ್ರೀಮಂತಂ ಸುಖಮೀಗೆ ಭ್ಯವ್ಯಜನಕಂ ಶ್ರೀವರ್ಧಮಾನಂ ಜಿನಂ ||

ಋಷಿವಂದ್ಯ ವೀರಜಿನಪನ
ಮಿಸುಪಾಂಘ್ರಿಗೆ ನಮಿಸಿ ಭವ್ಯಲೋಕಕ್ಕೆಲ್ಲಂ
ಉಸುರುವೆ ದಿಪಾವಳಿಯಂ
ಬೆಸಕದ ನೋಂಪಿಯ ವಿಧಾನಮಂ ಕನ್ನಡದಿಂ ||

ದಿಪಾವಳಿ ನೋಂಪಿಯ ವಿಧಾನವು ಹೇಗೆಂದರೆ :

ಈ ಜಂಬೂದ್ವೀಪದ ಭರತ ಕ್ಷೇತ್ರದಲ್ಲಿ ಆರ್ಯಖಂಡದಲ್ಲಿ ಮಗಧ ದೇಶವಿದೆ. ಅದರಲ್ಲಿ ರಾಜಗೃಹ ನಗರವಿದೆ. ಅದನ್ನು ಆಳುವವನು ಕ್ಷಾಯಿಕ ಸಮ್ಯಕ್ತವೇ ಮೊದಲಾದ ಅನೇಕ ಗುಣಮಣಿಗಳಿಂದ ಭೂಷಿತನಾದ ಶ್ರೇಣಿಕ ಮಹಾಮಂಡಲೇಶ್ವರ. ಆತನ ಪಟ್ಟದರಸಿ ಚೇಳಿನಿ ಮಾಹಾದೇವಿ. ಅವರ ಮಗ ಕುಣಿಕ ಮಹಾರಾಜ. ಕುಣಿಕನು ರಾಜ್ಯವಾಳುತ್ತಾ ಸುಖಸಂಕಥಾವಿನೋದದಿಂದ ಇರಬೇಕಾದರೆ ಒಂದು ದಿವಸ ಒಡ್ದೋಲಗದಲ್ಲಿರುವಾಗ ಆಕಾಲಪುಷ್ಪವನ್ನು ತೆಗೆದುಕೊಂಡು ನಗುಮೊಗದಿಂದ ಋಷಿನಿವೇದಕನು ಬಂದನು. ಆತ ಅತಿದೂರದಲ್ಲಿ ನಿಂತು ಕೈಮುಗಿದು ಹಣ್ಣು ಹೂಗಳನ್ನು ಕಾಣಿಕೆ ಕೊಟ್ಟು ಬಿನ್ನಪವೆಂದು ಹೀಗೆ ಹೇಳಿದನು – ‘ಎಲೈ ಸ್ವಾಮಿಯೆ, ನಮ್ಮ ನಗರದ ಸಮೀಪದ ವಿಪುಲಗಿರಿಶಿಖರವನ್ನು ಅಲಂಕರಿಸಿ ಗೌತಮ ಸ್ವಾಮಿ ಗಂಧಕುಟಿ ಬಂದು ನೆಲಸಿದೆ.’ ಅದನ್ನು ಕೇಳಿ ಆನಂದದಿಂದ ಸಿಂಹಾಸನದಿಂದೆದ್ದು ಆ ದಿಕ್ಕಿಗೆ ಏಳು ಆಡಿ ನಡೆದು ಸಾಷ್ಟಾಂಗ ಪ್ರಣುತನಾಗಿ, ಸಂತೋಷದ ಸುದ್ಧಿ ಕೆಳಿದ ಋಷಿನಿವೇದಕನಿಗೆ ಬಹುಮಾನವಿತ್ತು ಆನಂದ ಭೇರಿಯನ್ನು ಹೊಯ್ಸಿದನು. ಪರಿಜನ ಪುರಜನ ಅಂತಃಅಪುರಜನಗಳನ್ನು ಕೂಡಿ ಕಾಲುನಡಿಗೆಯಲ್ಲಿ ಹೊರಟನು. ದೂರದಲ್ಲಿ ಛತ್ರಚಾಮರಾದಿ ರಾಜಚಿಹ್ನೆಗಳನ್ನು ಉಳಿದು ಗಂಧಕುಟಿ ತಲಪಿದನು. ಮಾನಸ್ತಂಭಾದಿ ಶೋಭೆಗಳನ್ನು ನೋಡುತ್ತಾ ಆನಂದದಿಂದ ಒಳಹೊಕ್ಕು ಅದರ ನಡುವೆಯಿದ್ದ ಸಿಂಹಪೀಠವನ್ನು ಅಲಂಕರಿಸಿದ್ದ ಗೌತಮ ಸ್ವಾಮಿಗಳನ್ನು ಮೂರು ಸುತ್ತುಹಾಕಿ ನಮಸ್ಕರಿಸಿ ಎದ್ದು ನಿಂತು ಕೈಮುಗಿದು –

ಜಯನಾಥ ಜಯ ಜಿನೇಶ್ವರ
ಜಯಜಯ ಕಂದರ್ಪದರ್ಪ ರಿಪುಕುಲ ಮದನ
ಜಯ ನಷ್ಟಘಾತಿಕರ್ಮಹರ
ಜಯ ಜಯ ದೇವೇಂದ್ರವೃಂದವಂದಿತ ಚರಣ ||

ಎಂಬುದಾಗಿ ಸ್ತುತಿಸಿ ತ್ರಿಕರಣಶುದ್ಧಿಯಿಂದ ನಮಿಸಿ ಸುಧರ್ಮಗಣಧರರೇ ಮೊದಲಾದ ಮುನಿ ಸಮುದಾಯವನ್ನು ವಂದಿಸಿ ಮನುಷ್ಯಕೋಷ್ಠದಲ್ಲಿ ಕುಳಿತು ನಿರ್ಮಲ ಚಿತ್ತದಿಂದ ಸಾಗರ ಅನಾಗಾರ ಧರ್ಮ ಸ್ವರೂಪವನ್ನು ಕೇಳಿ ಸಂತುಷ್ಟಚಿತ್ತನಾಗಿ ದಾನಶೀಲ ಉಪವಾಸಾದಿಗಳನ್ನು ಕೈಕೊಂಡು ತರುವಾಯ ಸುಧರ್ಮಗಣಧರಸ್ವಾಮಿಗಳಿಗೆ ಕುಣಿಕ ಮಹಾರಾಜನು ಕರಕಮಲಗಳನ್ನು ಮುಗಿದು ‘ಎಲೆಸ್ವಾಮಿ’ ‘ನನಗೆ ದೀಪಾವಳಿಯ ನೋಂಪಿಯ ವಿಧಾನವನ್ನು ಅಜ್ಞಾಪಿಸಿರಿ’ ಎಂದು ಬೇಡಿದನು. ಅವರು ಹೀಗೆಂದು ಹೇಳಿದರು:

ಈ ಜಂಬೂದ್ವೀಪದ ಭರತ ಕ್ಷೇತ್ರದಲ್ಲಿ ಆರ್ಯಖಂಡದಲ್ಲಿನ ವಿದೇಹ ವಿಷಯದ ಕುಂಡಪುರವನ್ನು ಆಳುವ ನಾಥವಂಶದ ಸಿದ್ಧಾರ್ಥ ಮಹಾರಾಜನು ದುಷ್ಟ ನಿಗ್ರಹ ಶಿಷ್ಟ ಪರಿಪಾಲನಮಾಡಿ ಪ್ರಜೆಗಳನ್ನು ರಕ್ಷಿಸಿ ರಾಜ್ಯವಾಳುತ್ತಿದ್ದನು. ಆತನ ಪಟ್ಟ ಮಹಿಷಿ ಪ್ರಿಯಕಾರಿಣೀ ಮಹಾದೇವಿ. ಅವರು ಇಷ್ಟವಿಷಯ ಕಾಮಭೋಗಗಳನ್ನು ಅನುಭವಿಸುತ್ತಿರಬೇಕಾದರೆ ಇತ್ತ ಅಚ್ಯುತಕಲ್ಪದ ಪುಷ್ಪೋತ್ತರ ಅಧೀಶ್ವರನು ಇನ್ನು ಆರು ತಿಂಗಳಿಗೆ ಅವತರಿಸುವುದನ್ನು ಇಂದ್ರನು ತಿಳಿದು, ಕುಬೇರನಿಗೆ ಅಪ್ಪಣೆ ಮಾಡಿದನು. ಆಗ ಸಿದ್ಧಾರ್ಥರಾಜನ ಅರಮನೆಯಲ್ಲಿ ಮೂರುವರೆ ಕೋಟ ಪಂಚರತ್ನದ ಮಳೆಯನ್ನು ತ್ರಿಸಂಧ್ಯೆಯಲ್ಲೂ ಸುರಿಸಿದನು. ಹೀಗೆ ಕುಬೇರನು ದಿನವೂ ಚಿನ್ನದ ಮಳೆ ಸುರಿಯಲು ಸಂತಸದ ತುದಿ ಮುಟ್ಟಿದ ರಾಜದಂಪತಿಗಳಲ್ಲಿ ಪ್ರಿಯಕರಾಣಿಯು ಮಲಗಿದ್ದು ಬೆಳಗಿನಜಾವದಲ್ಲಿ ಆನೆ ಮತ್ತು ಸಿಂಹ ಲಕ್ಷ್ಮೀ ಹಾಗೂ ಚಂದ್ರ ಸೂರ್ಯ ಕಮಲ ಪೂರ್ಣಕುಂಭ ಸರಸ್ಸು ಸಾಗರ ಸಿಂಹಪೀಠ ವಿಮಾನ ಸರ್ಪ ಇಂದ್ರಾಲಯ ರತ್ನರಾಶಿ ಅಗ್ನಿ – ಎಂಬ ಹದಿನಾರು ಶುಭಸ್ವಪ್ನಗಳನ್ನು ಕಂಡಳು. ಅನಂತರ ತನ್ನ ಮೊಗವನ್ನು ಹೋಗುವ ಆನೆಯ ಆಕಾರವನ್ನು ಕಂಡಳು. ಆಗ ಮಂಗಳ ಪಾಠಕರ ಧ್ವನಿಗಳಿಂದ ಎಚ್ಚೆತ್ತಳು. ಸಿದ್ಧಾರ್ಥ ಮಹಾರಾಜನಿಗೆ ತಾನು ಕಂಡ ಕನಸುಗಳನ್ನು ಹೇಳಿದಳು. ಅವುಗಳ ಫಲಗಳನ್ನು ದೊರೆ ಹೇಳಿದನು. ಮುಂದೆ ದೇವತೆಗಳು ಬಂದು ಪ್ರಿಯಕಾರಿಣೀ ದೇವಿಯನ್ನು ಪೂಜಿಸಿ ನಮಿಸಿ ಹೋದರು. ದಿಗಂಗನೆಯರೂ ದೇವಾಂಗನೆಯರೂ ಇಂದ್ರನ ಅಪ್ಪಣೆಯಿಂದ ಪ್ರಿಯಕಾರಿಣಿಗೆ ಪರಿಚಾರಕಿಯಾರಾಗಿ ಓಲೈಸುತ್ತಿರುವಾಗ ಒಂಬತ್ತು ತಿಂಗಳು ತುಂಬಿ ಚೈತ್ರ ಶುದ್ಧ ತ್ರಯೋದಶಿಯಲ್ಲಿ ಉತ್ತರ ಫಲ್ಗುನಿಯಲ್ಲಿ ಶಶಾಂಕಯೋಗದಲ್ಲಿ ಗಂಡುಮಗು ಹುಟ್ಟಿ ಲೋಕಶ್ಚರ್ಯಗಳಾದವು. ಸೌಧರ್ಮೇಂದ್ರನು ಶಚಿಸಹಿತ ಐರಾವತ ಆನೆ ಹತ್ತಿ ದೇವತೆಗಳ ಸಮೇತ ಬಂದು ಆರಮನೆಯನ್ನು ಹೊಕ್ಕು ಮಹಾವಿಭೂತಿಯಿಂದ ಕುಮಾರನನ್ನು ಮಂದರಗಿರೆಗೆ ಒಯ್ದು ಪಾಂಡುಕವನದ ಪೂರ್ವೋತ್ತರ ದಿಗ್ಭಾಗದ ಪಾಂಡುಕ ಶಿಲಾತಲದ ಮೇಲಿನ ಸಿಂಹಾಸನದಲ್ಲಿರಿಸಿ ಹಾಲ್ಗಡಲಿನ ನೀರಿಂದ ಜನ್ಮಾಭಿಷೇಕ ಕಲ್ಯಾಣ ಮಾಡಿ ಮಗುವಿಗೆ ವೀರ ಎಂಬ ಹೆಸರಿಟ್ಟು ಹೋದರು. ಇತ್ತ ವೀರನಾಥನು ಹೊನ್ನಬಣ್ಣದ ದೇಹದ ಕಾಂತಿಯವನಾಗಿ ಬೆಳಗಿದನು. ಸಂಜಯ ವಿಜಯರೆಂಬ ಚಾರಣರು ತಮಗೆ ಬಂದ ಸಂದೇಹವನ್ನು ಕೇವಲ ತೀರ್ಥಂಕರ ಬಾಲಕನನ್ನು ಕಂಡಮಾತ್ರದಿಂದ ನಿಸ್ಸಂದೇಹ ಮಾಡಿಕೊಂಡುದರಿಂದ ಸನ್ಮತಿ ಎಂಬ ಹೆಸರಿತ್ತು ಹೋದರು.

ಇತ್ತ ಮತ್ತೊಂದು ದಿವಸ ಇಂದ್ರನ ಸಭೆಯಲ್ಲಿ ವೀರನಾಥನಿಗಿಂತ ಅಗ್ಗಳರಾದ ಶೂರರು ಇಲ್ಲವೆಂದು ನುಡಿಯಲು ಸಂಗಮಕನೆಂಬ ದೇವನು ಅವನನ್ನು ಪರೀಕ್ಷಿಸಲೆಂದು ಬಂದನು. ಉದ್ಯಾನವನದಲ್ಲಿ ಸಮಾನ ವಯಸ್ಸಿನ ರಾಜಕುಮಾರರೊಡನೆ ವೀರ ಬಾಲಕನು ಮರಗಳಾಟದಲ್ಲಿದ್ದನು. ಅವನನ್ನು ಅಂಜಿಸಲೆಂದು ಮರದ ತುದಿಯಿಂದ ಯೊಡಗಿ ಹಬ್ಬಿ ಮಹಾಸರ್ಪದ ರೂಪದಲ್ಲಿ ಸಂಗಮಕನು ಕಾಣಿಸಿದ. ಆದರೆ ಅದರ ಹೆಡೆಯನ್ನು ಮೆಟ್ಟಿ ವೀರನು ಭಯವಿಲ್ಲದೆ ಆಡುತ್ತಿದ್ದನು. ಅದರಿಂದ ಮೆಚ್ಚಿದವನಾಗಿ ವೀರನಿಗೆ ಮಾಹಾವೀರನೆಂದು ಹೆಸರಿಟ್ಟು, ಸಂಗಮಕನು ಹೋದನು. ಇತ್ತ ಮೂವತ್ತು ವರ್ಷ ಕಳೆಯಲು ಮತ್ತೊಂದುದಿನ ಮಹಾವೀರನು ಸಂಸಾರದ ಅಸಾರತೆಯನ್ನು ಅರಿತವನಾಗಿ ಚಂದ್ರಪ್ರಭವೆಂಬ ಪಲ್ಲಕ್ಕಿಯಲ್ಲಿ ಕುಳಿತು ನಾಥಷಂಡವನಕ್ಕೆ ಹೋದನು. ಆರುದಿನಗಳು ಉಪವಾಸಮಾಡಿ ಮಾರ್ಗಶಿರ ಬಹುಳ ದಶಮಿ ಅಪರಾಹ್ಣದಲ್ಲಿ ಉತ್ತರ ಫಲ್ಗುನೀ ನಕ್ಷತ್ರದಲ್ಲಿ ಸಿದ್ಧ ನಮಸ್ಕಾರ ಪೂರ್ವಕವಾಗಿ ಪಂಚಮುಷ್ಟಿಯಿಂದ ತಲೆಗೂದಲನ್ನು ಕಿತ್ತುಹಾಕಿದರು. ಅದನ್ನು ರತ್ನದ ತಟ್ಟೆಯಲ್ಲಿ ಕೊಂಡೊಯ್ದು ಸೌಧರ್ಮೇಂದ್ರನು ಸಮುದ್ರಕ್ಕೆ ಬಿಟ್ಟು ಬಂದನು.

ಇತ್ತ ಮಹಾವೀರನು ಸಾಮಾಯಿಕ ಶುದ್ಧ ಸಂಯಮ ಧಾರಣೆಯಿಂದ ಚತುರ್ಜ್ಞಾನಧರನಾಗಿ ಪಾರಣೆಯ ದಿವಸ ಕೂಳಗ್ರಾಮದಲ್ಲಿ ಪ್ರಿಯಂಗುಕುಸುಮನಾದ ಕೂಳನೆಂಬ ರಾಜನ ಮನೆಯಲ್ಲಿ ಆಹಾರ ಪಡೆದರು. ಚಿನ್ನದಮಳೆ, ಹೂವಿನ ಮಳೆ, ದೇವವಾದ್ಯಗಳ ಧ್ವನಿ, ಮಂದಾನಿಲ, ದಿವಿಜಪ್ರಶಂಸೆಯ ಧ್ವನಿ – ಎಂಬ ಪಂಚಾಶ್ಚರ್ಯಗಳಾದುವು. ಅಂದು ರಾತ್ರಿಯಾದಾಗ ಮಹಾವೀರನು ಉಜ್ಜಯಿನಿಯಲ್ಲಿ ಅತಿ ಮುಕ್ತವೆಂಬ ಸ್ಮಶಾನದಲ್ಲಿ ಪ್ರತಿಮಾಯೋಗದಲ್ಲಿ ನಿಂತನು. ಈಶ್ವರನು ಗೌರಿಯೊಡನೆ ಬಂದು ಧೈರ್ಯ ಪರೀಕ್ಷೆ ಮಾಡಲಾಗಿ ಮಹಾವೀರನು ಚಲಿತನಾಗದೆ ಅಂತರ್ಮುಖಿಯಾಗೇ ಇದ್ದನು. ಆಗ ಈಸ್ವರನು ಮಾಹಾವೀರನಿಗೆ ನಮಸ್ಕರಿಸಿ ಹೋದನು. ಹನ್ನೆರಡು ವರ್ಷಗಳಾದ ಮೇಲೆ ಜೃಂಭಿಕಗ್ರಾಮದ ಹತ್ತಿರ ಋಜಗತಿ ಎಂಬ ತೊರೆಯ ತಡಿಯಚೆಲುವಾದ ತೋಟದ ಕಲ್ಲಿನ ಮೇಲೆ ಸಾಲವೃಕ್ಷದ ಕೆಳಗಿರುವಾಗ ವೈಶಾಖ ಶುದ್ಧ ದಶಮಿ ಅಪರಾಹ್ಣದಲ್ಲಿ ಚಂದ್ರಹಸ್ತೋತ್ತರ ಮಧ್ಯವತ್ರಿತನಾಗಲು ಕೇವಲ ಜ್ಞಾನ ಉಂಟಾಯಿತು. ಆಗ ಆತನ ಬಳಿಗೆ, ಗೌತಮ ಗ್ರಾಮದ ಗೌತಮ ಗೋತ್ರದಲ್ಲಿ ಅಭಿಮಾನಧನನಾದ ಇಂದ್ರಭೂತಿಯೆಂಬ ಬ್ರಾಹ್ಮಣನನ್ನು ದೇವೆಂದ್ರನು ಉಪಾಯದಿಂದ ಕರೆತಂದನು. ಆತನಿಗೆ ಮಹಾವೀರನು ಜೀವಾಜೀವಾದಿ ಪದಾರ್ಥ ತತ್ತ್ವವನ್ನು ತಿಳಿಸಲು ಇಂದ್ರಭೂತಿಯು ಅಯ್ನೂರುಜನ ಬ್ರಾಹ್ಮಣ ಕುಮಾರರರೊಡನೆ ದೀಕ್ಷಿತನಾದನು. ಶ್ರಾವಣ ಮಾಸದ ಬಹುಳ ಪ್ರತಿಪದದ ಪೂರ್ವಾಹ್ಣದಲ್ಲಿ ಮಹಾವೀರರ ಉಪದೇಶದಿಂದ ದ್ವಾದಶಾಂಗದರ್ಥ ಪದಗಳನ್ನೂ ಅಪರಾಹ್ಣದಲ್ಲಿ ಚತುರ್ದಶ ಪೂರ್ವದರ್ಥಗಳನ್ನೂ ಉಪದೇಶಿಸಿದರು. ತತ್ವಗಳನ್ನು ತಿಳಿದ ಗೌತಮಗಣಧರನು ಪೂರ್ವರಾತ್ರಿಯಲ್ಲಿ ಅಂಗಗಳಿಗೂ ಪಶ್ಚಿಮ ರಾತ್ರಿಯಲ್ಲಿ ಪೂರ್ವಗಳಿಗೂ ವಚನ ರಚನೆಮಾಡಿದನು, ಪ್ರಥಮ ಗಣಧರನಾದನು ಅಲ್ಲಿಂದ ಮುಂದೆ ವಾಯುಭೂತಿ ಅಗ್ನಿಭೂತಿ ಸುಧರ್ಮ ಮೌರ್ಯ ಮಂಡಿ ಪುತ್ರ್ಯತ್ರೇಯ ಅಕಂಪನ ಅಮಳಕ ಪ್ರಭಾಸ ಎಂಬುವರು ಗಣಧರರಾದರು. ವರ್ಧಮಾನ ಭಟ್ಟಾರಕರು ಹನ್ನೊಂದು ಜನ ಗಣಧರರು, ೨೦೦ ಜನ ಪೂರ್ವಧರರು, ೯,೯೦೦ ಜನ ಶಿಕ್ಷಕರು, ೧,೩೦೦ ಅವಧಿಜ್ಞಾನಿಗಳು, ೭೦೦ ಜನ ಕೇವಲಿಗಳು, ೯೦೦ ವಿಕ್ರಿಯಾಋದ್ಧಿಪ್ರಾಪ್ತರೂ, ೫೦೦೦ ಮನಃಪರ್ಯ್ಯಜ್ಞಾನಿಗಳು, ೪೦೦ ವಾದಿಗಳು. ಚಂದನಾರ್ಯಿಕೆ ಮೊದಲಾದ ೩೬,೦೦೦ ಅಜ್ಜಿಯರು, ಒಂದು ಲಕ್ಷ ಶ್ರಾವಕರು, ಮೂರು ಲಕ್ಷ ಶ್ರಾವಿಕೆಯರು, ಅಸಂಖ್ಯಾತ ದೇವದೇವಿಯರು, ಸಂಖ್ಯಾತ ತಿರ್ಯಗ್‌ ಜಾತಿಗಳು – ಹೀಗೆ ದ್ವಾದಶಗಣಸಮೇತ ಸಿಂಹಾಸನದ ನಡುವೆ ಕುಳಿತು ಷಡ್ಡ್ರವ್ಯ ನವಪದಾರ್ಥ ಮೊದಲಾದವನ್ನು ಅರ್ಧಮಾಗಧೀ ಭಾಷೆಯಲ್ಲಿ ಉಪದೇಶಿಸಿದರು. ಅದನ್ನು ಕೇಳಿ ಅನೇಕರು ಸನ್ಮಾರ್ಗವರ್ತಿಗಳಾದರು.

ಮಹಾವೀರರು ಮೂವತ್ತು ವರ್ಷ ಧರ್ಮೋಪದೇಶ ಮಾಡುತ್ತಾ ಪಾವಾನಗರದ ಮನೋಹರ ಉದ್ಯಾನದ ತಾವರೆಗೊಳದ ನಡುವಣ ಮಣಿಶಿಲಾತಲವನ್ನು ಹತ್ತಿ ಎರಡು ದಿನ ವಿಹಾರವಿಧಿ ನಿಲ್ಲಿಸ ಚತುರ್ಥ ಕಾಲದಲ್ಲಿ ಮೂರು ವರ್ಷ ಎಂಟು ತಿಂಗಳು ಹದಿನೈದು ದಿವಸ ಉಳಿದಿರುವಾಗ ಕಾರ್ತಿಕಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬೆಳಗಿನ ಜಾವದಲ್ಲಿ ಸ್ವಾತಿ ನಕ್ಷತ್ರದಲ್ಲಿ ಯೋಗ ನಿರೋಧಮಾಡಿ ಪರಮ ಶುಕ್ಲ ದ್ಯಾನದಿಂದ ಘಾತಿಕರ್ಮಗಳನ್ನು ಕೆಡಿಸಿ ಮೋಕ್ಷ ಲಕ್ಷ್ಮೀವಲ್ಲಭನಾಗಿ ತ್ರಿಲೋಕಾಗ್ರ ಶಿಖಾಮಣಿಯಾದ.

ತದನಂತರ ಸೌಧರ್ಮಾದಿ ಚತುರ್ನಿಕಾಯ ದೇವತೆಗಳು ಬಂದು ಸರ್ವಜ್ಞನ ಪರಮ ಔದಾರಿಕ ದಿವ್ಯ ಶರೀರವನ್ನು ಅರ್ಚಿಸಿದರು. ಆ ಸುರಾಸುರರೆಲ್ಲ ಸೇರಿ ಭೂಮಿ ಆಕಾಶ ಪ್ರದೇಶದಲ್ಲೆಲ್ಲ ಸುತ್ತಲೂ ರತ್ನ ಕರ್ಪೂರಾದಿ ಪ್ರದೀಪಗಳನ್ನು ಬೆಳಗಿ ಲೋಕವೆಲ್ಲವೂ ಪ್ರಕಾಶಿಸುವಂತೆ ಮಾಡಿದರು. ಎಲ್ಲರೂ ನಮಸ್ಕರಿಸದರು. ಮಂಗಳ ಘೋಷಣೆಗಳನ್ನು ಮಾಡಿದರು. ನಿರ್ವಾಣ ಕ್ಷೇತ್ರವನ್ನು ಅಷ್ಟವಿಧ ಅರ್ಚನೆಯಿಂದ ಪೂಜಿಸಿದರು. ಅಂದಿನಿಂದ ಪ್ರತಿವರ್ಷ ಅದೇ ಕ್ರಮದಲ್ಲಿ ದೇವತೆಗಳೂ ಸೇರಿ ದೀಪಾವಳಿಯನ್ನು ಮಾಡತೊಡಗಿದರು. ಅದರಿಂದ ಈ ಕ್ಷೇತ್ರದ ಭವ್ಯಜನಗಳೂ ನೋಂತು ಉದ್ಯಾಪನೆ ಮಾಡುತ್ತಾರೆ. ಅದರ ಕ್ರಮ ಹೀಗಿದೆ: ಕಾರ್ತಿಕ (ಅಥವಾ ಆಶ್ವಯುಜ) ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಲ್ಲಿ ನೋಮಪವರೆಲ್ಲರೂ ಮಿಂದು ಮಡಿಯುಟ್ಟು ಶುಚಿಯಾಗಿ ಅಭಿಷೇಕ ಅಷ್ಟವಿಧಾರ್ಚನೆ ದ್ರವಯಗಳಿಂದ ಚೈತ್ಯಾಲಯಕ್ಕೆ ಬಂದು ವಂದಿಸಿ ಸ್ತೋತ್ರಿಸಿ ಮಹಾವೀರರಿಗೆ ಅಭಿಷೇಕ ಮಾಡಿ ಅಷ್ಟವಿಧಾರ್ಚನೆ ಮಾಡಿ ನೊಂಪಿಯನ್ನು ಕೈಗೊಂಡು ಶ್ರುತಗುರು ಪೂಜೆ ಮಾಡಿ ಗುರು ಸನ್ನಿಧಿಯಲ್ಲಿ ಚತುರ್ದಶಿ ಉಪವಾಸ ಮಾಡಬೇಕು. ಉಪವಾಸ ಸಾಧ್ಯವಾಗದಿದ್ದರೆ ಚತುರ್ದಶೀ ಮಧ್ಯಾಹ್ನದವರೆಗೆ ಪ್ರತ್ಯಾಖ್ಯಾನಮಾಡಿ ಮನೆಗೆ ಬಂದು ಧರ್ಮಧ್ಯಾನದಿಂದ ಹೊತ್ತು ಕಳೆದು ಚತುರ್ದಶಿಯಂದು ಚೈತ್ಯಾಲಯಕ್ಕೆ ಬಂದು ವರ್ಧಮಾನ ತೀರ್ಥೇಶನನ್ನು ಪೂಜಿಸಿ ಪುಂಜವನ್ನಿಟ್ಟು ನಮಸ್ಕರಿಸಿ ಉಪವಾಸಕ್ಕೆ ಆಗದವರು ಏಕಭುಕ್ತ (ಒಂದು ಹೊತ್ತು) ಕೈಗೊಂಡು ಮನೆಗೆ ಹೋಗಿ ಏಕಬುಕ್ತ ಮಾಡಿಕೊಂಡು ಚೈತ್ಯಾಲಯಕ್ಕೆ ಬಂದು ಪ್ರತ್ಯಾಖ್ಯಾನಮಾಡಿ ಧರ್ಮಕಥಾ ಪ್ರಸಂಗದಿಂದ ಹೊತ್ತು ಕಳೆದು ಮನೆಗೆ ಬಂದು ಚತುರ್ದಶಿಯ ಬೆಳಗಿನ ಜಾವದಲ್ಲಿ ಶುಚಿರ್ಭೂತರಾಗಿ ಅರ್ಚನಾದ್ರವ್ಯ ಸಮೇತ ಬಸದಿಗೆ ಬಂದು ವೀರವರ್ಧಮಾನನಿಗೆ ಅಭಿಷೇಕ ಅಷ್ಟ ವಿಧಾರ್ಚನೆ ಮಾಡಿ ಕರ್ಪೂರದ ಲಕ್ಷ ದೀಪಗಳನ್ನು ಬೆಳಗುವುದು. ಅದಕ್ಕೆ ಆಗದವರು ಆ ಸಂಖ್ಯೆಗೆ ಕುಂದಿಲ್ಲದ ಕಲಮಾಕ್ಷತೆಯ (೨೪) ಪುಂಜಗಳನ್ನಿಕ್ಕಿ ಪೂಜಿಸಿ ೨೪ ಗಂಧ ೨೪ ಸುಗಂಧ ಪುಷ್ಪ ೨೪ ಚರು ೨೪ ಕರ್ಪೂರ ದೀಪ ೨೪ ಧೂಪ ೨೪ ಫಲಗಳನ್ನು ತುಂಬಿ ಕೂಷ್ಮಾಂಡ ಫಲವನ್ನು ೨೪ ಎಲೆ ಪಟ್ಟಸೂತ್ರದಲ್ಲಿ ಯಾಗಲಿ ಕರ್ಪಾಸ ಸೂತ್ರದಲ್ಲಾಗಲಿ ಅಲಂಕರಿಸಿ, ಅದು ದೊರೆಯದಿದ್ದರೆ ತೆಂಗಿನಕಾಯಿಯನ್ನು ಅದೇ ರೀತಿ ಆಲಂಕರಿಸಿ ಅರ್ಘ್ಯವನೆತ್ತಿ ಹಯ್ಯಂಗವೀನ (ಆಗತಾನೇ ತೆಗೆದ ಹಸುವಿನ ಬೆಣ್ಣೆ) ದಿಂದ ೨೪ ದೀಪ ಬೆಳಗಿ ಮಹಾರ್ಘ್ಯವನೆತ್ತಿ ದೇವರನ್ನು ಬಲಗೊಂಡು ವಂದಿಸಿ ಶ್ರುತಗುರು ಪೂಜೆಮಾಡಿ ಕಥೆ ಕೇಳಿ ಕಥಕನನ್ನು (ಕತೆ ಹೇಳಿದವನನ್ನು) ಪೂಜಿಸಿ ಮನೆಗೆ ಬಂದು ಚತುಸ್ಸಂಘ ಸಹಿತ ಪಾರಣೆ ಮಾಡುವುದು. ಇದು ನೋಂಪಿಯ ಕ್ರಮ. ಹೀಗೆ ೨೪ ವರ್ಷ ನೋಂತು ಉದ್ಯಾಪನೆ ಮಾಡುವ ಕ್ರಮ ಹೇಗೆಂದರೆ :

ವರ್ಧಮಾನ ತೀರ್ಥೇಶ್ವರನ ಪ್ರತಿಕೃತಿಯನ್ನು ಚಿನ್ನ ಬೆಳ್ಳಿ ಲೋಹಗಳಿಂದ ಸಲಕ್ಷಣವಾಗಿ ಮಾಡಿಸಿ ಶುಭ ಮುಹೂರ್ತದಲ್ಲಿ ಅಂಕುರಾರ್ಪಣ ಧ್ವಜಾರೋಹಣ ಮೊದಲಾದ ಮಂಗಳಗಳನ್ನು ಮಾಡಿ ಪ್ರತಿಷ್ಠೆ ಮಾಡಿಸಿ ನೋಂಪಿಯ ದಿನದಲ್ಲಿ ಮಹಾಭಿಷೇಕ ಮಾಡಿಸಿಕೊಟ್ಟು ನಿತ್ಯಾಭಿಷೇಕ ಪೂಜಾದಿಗಳಿಗೆ ಭೂಮಿಯನ್ನು ಬಿಡಿಸಿ ಕೊಟ್ಟು ಹಸುಗಳನ್ನು ಕೊಡುವುದು. ೨೪ ತಂಡ ಋಷಿಯರಿಗೆ ಆಹಾರಾದಿ ಚತುರ್ವಿಧ ದಾನವನ್ನು ಮಾಡುವುದು. ಅಜ್ಜಿಕೆಯರಿಗೆ ಉಡಲು ಕೊಡುವುದು. ಚತುರ್ವಿಧ ಸಂಘಕ್ಕೆ ಚತುರ್ವಿಧ ದಾನವನ್ನು ಮಾಡುವುದು. ದೀನರಿಗೂ ಅನಾಥರಿಗೂ ಉಣಲೂ ಉಡಲೂ ಕೊಡುವುದು. ಬಾಳೆಯ ಹಣ್ಣು ಹೂ ಗಂಧ ಅಕ್ಷತೆ ಸಹಿತ ಸಮ್ಯಗ್‌ ದೃಷ್ಟಿಯುಳ್ಳವರಿಗೆ ೨೪ ಮಂಡಿಗೆ ೨೪ ಎಲೆ ೨೪ ಅಡಿಕೆ ೨೪ ಬಾಯಿನ ಕೊಡುವುದು – ಇದು ಉದ್ಯಾಪನೆಯ ಕ್ರಮ. ಇದಕ್ಕೆ ಆಗದಿದ್ದರೆ ಎರಡು ಪಟ್ಟು ನೋಂಪಿ ಮಾಡುವುದು. ಇದು ನೋಂಪಿಯ ಕ್ರಮ ಎಂಬುದಾಗಿ ಗಣಧರ ಸ್ವಾಮಿಗಳು ತಿಳಿಸಿದರು. ಕುಣಿಕ ಮಹಾರಾಜನು ಭವ್ಯಜನ ಸಮೇತ ನೊಂಪಿಯನ್ನು ಕೈಗೊಂಡು ಜಿನನನ್ನು ವಂದಿಸಿ ಬೀಳ್ಕೊಂಡು ಗಣಧರರೇ ಮೊದಲಾದ ಋಷಿಸಮುದಾಯಕ್ಕೆ ನಮಸ್ಕರಿಸಿ ಗಂಧಕುಟಿಯಿಂದ ಹೊರಟು ಬಂದು ಭವ್ಯಜನರೊಡನೆ ವೈಭವದಿಂದ ಪಟ್ಟಣವನ್ನೂ ಅರಮನೆಯನ್ನೂ ಪ್ರವೇಶಿಸಿ ಸುಖದಿಂದ ಇದ್ದು ನೋಂಪಿಯ ದಿವಸ ಬರಲು ಭವ್ಯ ಜನರೊಡನೆ ನೋಂತು ಉದ್ಯಾಪನೆಯನ್ನು ಮಾಡಿದನು. ಅದರ ಫಲದಿಂದ ಹಲವು ನಿಧಿ ನಿಧಾನಗಳಿಗೆ ಒಡೆಯನಾಗಿ ದೇವಕುಮಾರರಿಗೆ ಸಮಾನರಾದ ಹಲವು ಮಕ್ಕಳನ್ನು ಪಡೆದು ಅನೇಕ ಭೋಗೋಪಭೋಗಗಳನ್ನು ಅನುಭವಿಸಿ ಕಡೆಯಲ್ಲಿ ಸಮಾಧಿವಿಧಿಯಿಂದ ಮುಡಿಪಿ ಸ್ವರ್ಗವನ್ನು ಪಡೆದನು.

ಈ ನೋಂಪಿಯ ವಿಧಿಯನ್ನು ಹೇಳುವವರೂ ಇದನ್ನು ಪಡೆದು ನಡಸುವವರೂ ಬೇರೊಬ್ಬರಿಂದ ಮಾಡಿಸುವವರೂ ಆನಂದಿಸುತ್ತಾರೆ. ಇದನ್ನು ಓದುವವರೂ ಸ್ವರ್ಗಾಪವರ್ಘ ಸುಖವನ್ನು ಪಡೆಯುವರು.

ಇದು ದೀಪಾವಳಿ ನೋಂಪಿಯ ವಿಧಾನ.