ಶ್ರೀ ಬ್ರಹ್ಮದೇವಾಯನಮಃ ||

ಅನಂತಸೌಂದರಿಯೆಂಬ ನೋಂಪಿಯಂ ಚೈತ್ರಮಾಸದ ಕೃಷ್ಣ ಪಕ್ಷದ ಬಿದಿಗೆಯಂದು ಉಪವಾಸಮಂ ಗೆಯ್ದು ಅರಹಂತದೇವರ ಮುಂದೆ ಉಜ್ವಳಮಪ್ಪಕೀರ್ತ್ತಿಯಿಂದಂ ಮಕರತೋರಣದಿಂದಂ ಬೆಳ್ಗೊಡೆ ಕಳಶ ಕನ್ನಡಿ ಚಾಮರ ಬಿಜ್ಜಣಿಗೆ ಪಡಿಗಹಾವುಗೆಗಳೆರಡೆರಡುಮಂ ವಟ್ಟುಗಳಾಗಿ ಅರ್ಚಿಸಿ ನೋಂಪಿಯಂ ಕೈಕೊಂಡು ಉಪವಾಸಂ ನೆರದಂದು ಉಜ್ಜನಣೆಯನಿಕ್ಕುವುದಕ್ಕೆ ತಮ್ಮ ವಿತ್ತಾನುಸಾರಮನರಿದು ಅಷ್ಟಮಂಗಳಂಗಳಂ ಮಾಡಿಸಿ ಅಷ್ಟಮಹಾಪ್ರಾತಿಹಾರ್ಯ್ಯ ಸಮೇತಂ ಜಿನ ಪ್ರತಿಮೆಯ ನಭಿಷೇಕಾಷ್ಟವಿಧಾರ್ಚನೆಯ ಮಾಡಿ ಬಸ್ತಿಗೆ ಕೊಡುಗೆ ಯಾ ನೋಂಪಿಯನೆರಗುಂ ಯೀನೋಂಪಿಯಫಲದಿಂ ಜನ್ಮಜನ್ಮಾಂತರದೊಳೆಲ್ಲಂ ನೆಟ್ಟೈಯಿದೆಯರಾಗಿಯುಂ ನೀಡುಂ ಮಂಗಳವತಿಯರಾಗಿಯುಂ ವೋಲೆಯೊಡಮುತ್ತುಮಿಪ್ಪತೊಡರಂ ಬಿಟ್ಟು ನಿಡುಕಾಲಂ ಭೋಗೋಪ ಭೋಗಂಗಳಂ ಸುಖದಿಂದನುಭವಿಸಿ ಎಣೆಯಗಲದೆ ಕಲತ್ರ ಪುತ್ರ ಮಿತ್ರ ಬಂಧುವರ್ಗ್ಗಂಗಳೆಲ್ಲಂ ಸುಖಮನುಭವಿಸುತ್ತಂ ಕಡೆಯೊಳು ಅನಂತಸುಖಮಪ್ಪ ಮೋಕ್ಷಸುಖಮನನುಭವಿಸುತ್ತಮಿರ್ಪರಿಂತೀ ಅನಂತ ಸೌಂದರಿಯ ನೋಂಪಿಯ ನೋಂತವರ್ಗ್ಗಂ ಮಂಗಳ ಮಹಾ || ಶ್ರೀ ಶ್ರೀ