ಶ್ರೀ ಮದ್ವಿಶ್ವವಿಲೋಚನಂ ಸುವಿಮಲಂ ವಿದ್ಯಾವಿಶಾಲಂ ವರಂ
ಕಾಮಸ್ಥೈರ್ಯಮದೇಭ ಪಂಚವದನಂ ಸುಕ್ಷೇಮ ವೀರ್ಯಾಸ್ಪದಂ
ಸೋಮಾದಿತ್ಯ ಸಹಸ್ರ ಕೋಟಿ ಕಿರಣಂ ಸರ್ವೇಂದ್ರವಂದ್ಯಂ ಮಹಾ
ಶ್ರೀಮಂತಂ ಸುಖಮೀಗೆ ಭ್ಯವ್ಯಜನಕಂ ಶ್ರೀವರ್ಧಮಾನಂ ಜಿನಂ ||

ಋಷಿವಂದ್ಯ ವೀರಜಿನಪನ
ಮಿಸುಪಾಂಘ್ರಿಗೆ ನಮಿಸಿ ಭವ್ಯಲೋಕಕ್ಕೆಲ್ಲಂ
ಉಸುರುವೆ ದಿಫಾವಳಿಯಂ
ಬೆಸಕದ ನೋಂಪಿಯ ವಿಧಾನಮಂ ಕನ್ನಡದಿಂ ||

|| ವಚನ || ಆ ವಿಧಾನಮೆಂತಾದುದೆಂದೊಡೆ ಈ ಜಂಬೂದ್ವೀಪದ ಭರತಕ್ಷೇತ್ರ ದಾರ್ಯಖಂಡದ ಮಗಧವಿಷಯದ ರಾಜಗೃಹನಗರಮನಾಳ್ವ ಕ್ಷಾಯಿಕ ಸಮ್ಯಕ್ತ್ವಾದ್ಯನೇಕಗುಣಮಣಿಭೂಷಿತನಪ್ಪ ಶ್ರೇಣಿಕಮಹಾಮಂಡಲೇಶ್ವರಂಗಾತನ ಪಟ್ಟದರಸಿ ಸಮ್ಯಕ್ತ್ವಶೀಲಗುಣಭೂಷಿತಾಂಗಿಯಾದ ಚೇಳಿನೀ ಮಹಾದೇವಿಗಂ ಪುಟ್ಟಿದ ಕುಣಿಕಮಹಾರಾಜಂ ರಾಜ್ಯಂಗೆಯ್ಯುತ್ತ ಸುಖಸಂಕಥಾ ವಿನೋದಿಂದಿರ್ದಿನಮೊಂದು ದಿವಸಮೊಡ್ಡೋಲಗಂ ಗೊಟ್ಟಿರಲಾ ಪ್ರಸ್ತಾವದೊಳಕಾಲ ಫಲಪುಷ್ಪಹಸ್ತನುಂ ದರಹಸಿತ ಪ್ರಸನ್ನ ವದನವನಜನುಮಾಗಿ ಋಷಿ ನಿವೇದಕಂ ಬಂನತಿದೂರದೊಳ್ನಿಂದು ಕರಕಮಲಂಗಳಂ ಮುಗಿದು ಫಲಪುಷ್ಪಂಗಳಂ ಕಾಣ್ಕೆಗೊಟ್ಟು ಬಿನ್ನಪವೆಂದಿಂತೆಂದನೆಲೆ ಸ್ವಾಮಿ ಎಮ್ಮ ನಗರದ ಸಮೀಪದ ವಿಪುಲಗಿರಿಯ ಶಿಖರಮನಲಂಕರಿಸಿ ಗೌತಮಸ್ವಾಮಿ ಗಂಧಕುಟಿ ಬಂದು ನೆಲಸಿರ್ದುದೆನಲದಂ ಕೇಳ್ದಾನಂದದಿಂ ಸಿಂಹಾಸನ ದಿಂದೆಳ್ದಾದೆಸೆಗೇಳಡಿಯಂ ನಡೆದು ಸಾಷ್ಟಾಂಗಪ್ರಣುತನಾಗಿ ವಸಗೆವೇಳ್ದಂಗಂಗಚಿತ್ತಮಂ ಕೊಟ್ಟಾನಂದಭೇರಿಯಂ ಪೊಯ್ಸಿ ಪರಿಜನ ಪುರಜನಾಂತಃಪುರಜನಂಗಳ್ವೆರಸು ಪಾದಮಾರ್ಗದಿಂ ಪೋಗಿ ದೂರದೊಳ್‌ ಛತ್ರಚಾಮರಾದಿ ರಾಜಚಿಹ್ನಂಗಳನುಳಿದು ಗಂಧಕುಟಿಯನೈದಿ ಮಾನಸ್ತಂಭಾದಿ ಶೋಭೆಗಳಂ ನೋಡುತ್ತಾನಂದದಿಂದೊಳಪೊಕ್ಕು ತನ್ಮಧ್ಯಸ್ಥಿತ ಸಿಂಹಪೀಠಮನಲಂಕರಿಸಿರ್ದ ಗೌತಮಸ್ವಾಮಿಗಳಂ ತ್ರಿಃಪ್ರದಕ್ಷಿಣಂಗೊಂಡು ಸಾಷ್ಟಾಂಗ ಪ್ರಣುತನಾಗೆದ್ದು ನಿಂದು ಕರಕಮಲಮುಕುಳಿತನಾಗಿ

|| ಕಂದ || ಜಯನಾಥ ಜಯ ಜಿನೇಶ್ವರ
ಜಯ ಜಯ ಕಂದರ್ಪದರ್ಪ ರಿಪುಕುಲ ಮಥನ
ಜಯನಷ್ಟಘಾತಿಕರ್ಮತತೇ
ಜಯಜಯ ದೇವೇಂದ್ರವೃಂದವಂದಿತ ಚರಣ ||

ಎಂದಿಂತು ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿ ತ್ರಿಕರಣಶುದ್ಧಿಯಿಂ ನಮಿಸಿ ಸುಧರ್ಮಗಣಧರರ್ಮೊದಲಾದ ಮುನಿಸಮುದಾಯಮಂ ವಂದಿಸಿ ಮನುಷ್ಯಕೋಷ್ಠದೊಳ್ಕುಳ್ಳಿರ್ದು ನಿರ್ಮಲಚಿತ್ತದಿಂ ಸಾಗಾರಾನಗಾರಧರ್ಮ ಸ್ವರೂಪಮಂ ಕೇಳ್ದು ಸಂತುಷ್ಟಚಿತ್ತನಾಗಿ ದಾನಶೀಲೋಪವಾಸಾದಿಗಳಂ ಕೈಕೊಂಡು ತದನಂತರಂ ಸುಧರ್ಮಗಣಧರಸಾಮಿಗಳಿಗೆ ಕುಣಿಕಮಹಾರಾಜಂ ಕರಕಮಲಂಗಳಂ ಮುಗಿದು ಎಲೆಸ್ವಾಮಿ ಎನಗೆ ದೀಪಾವಳಿಯಂ ನೋಂಪಿಯಂ ವಿಧಾನಮಂ ಬೆಸಸಿಮೆನಲವರಿಂತೆಂದು ಬೆಸಸಿದರ್

ಈ ಜಂಬೂದ್ವೀಪದ ಭರತಕ್ಷೇತ್ರದಾರ್ಯಖಂಡದ ವಿದೇಹ ವಿಷಯದ ಕುಂಡಪುರಮನಾಳ್ವ ನಾಥವಂಶದ ಸಿದ್ಧಾರ್ಥಮಹಾರಾಜಂ ದುಷ್ಟನಿಗ್ರಹ ಶಿಷ್ಟ ಪರಿಪಾಲನಂಗೆಯ್ದು ಪ್ರಜೆಗಳಂ ರಕ್ಷಿಸಿ ರಾಜ್ಯಂಗೆಯ್ಯುತ್ತಿರ್ದನದೆಂತೆಂದೊಡೆ :

ವೃ || ಶಶ್ವದ್ಧರ್ಮಪರಾಯಣಂ ಪರಹಿತಂ ಸತ್ಕೀರ್ತಿತೇಜೋಜ್ಜ್ವಲಂ
ನಿಶ್ಚಿಂತಂ ಪ್ರಿಯಕಲ್ಪವೃಕ್ಷಸದೃಶಂ ಸಪ್ತಾಂಗರಾಜ್ಯಾನ್ವಿತಂ
ಕೌಶಲ್ಯಾದಿವಚಃಪ್ರವೇಕಮನಿಶಂ ವಾಗ್ವಲ್ಲಕೀವೈಣಿಕಂ
ಶ್ರೀ ಸಿದ್ಧಾರ್ಥನೃಪಾಗ್ರಗಣ್ಯನೆಸೆದಂ ಸಂಸಾರಸಾರೋದಯಂ ||

ಇಂತೊಪ್ಪುವರಸನ ಪಟ್ಟಮಹಿಷೀ ಪ್ರಿಯಕಾರಿಣೀ ಮಹಾದೇವಿಯೆಂತಪ್ಪಳೆಂದೊಡೆ

|| ಸಿರಿಗರಸಿ ಶೀಲಸಂಪದ
ಕರಸಿಯು ವರರೂಪಿಗರಿಸಿ ನಯಗುಣಕರಸಿಯು
ಧರೆಗರಸಿಯು ಸಿದ್ಧಾರ್ಥನ
ತರುಣಿಯರಿಂಗರಸಿಯಾಗಿ ಮೆರೆಯುತ್ತಿರ್ದಳ್
‌ ||

ಅಂತವರೀರ್ವರುಮಿಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತಿರ್ಪಿನ ಮಿತ್ತಲಚ್ಯುತ ಕಲ್ಪದ ಪುಷ್ಪೋತ್ತರಾಧೀಶ್ವರನಿನ್ನ ರುದಿಂಗಳಿಗ ವತರಿಸುವುದನಿಂದ್ರನವಧಿಯಿಂದರಿದು ಕುಬೇರಂಗೆ ಬೆಸಸಿದೊಡವರ ಮನೆಯೊಳ್‌ ಮೂರುವರೆಕೋಟಿ ಪಂಚರತ್ನದ ಮಳೆಯಂ ತ್ರಿಸಂಧ್ಯೆಯೊಳಂ ಕರೆಯುತ್ತಿರ್ದನ ದೆಂತೆಂದೊಡೆ

ವೃ || ಸುರಿಯಿತ್ತುಜ್ಜ್ವಲ ಪಂಚರತ್ನವರಿಸಂ ಸೋರಿತ್ತು ಚಂಬೋನ್ಕರಂ
ಕರೆಯಿತ್ತುಂ ಸುರಪುಷ್ಟವೃಷ್ಟಿಸತತಂ ತೀಡಿತ್ತು ಮಂದಾನಿಲಂ
ಮೊರೆಯಿತ್ತುಂ ಸುರಭೇರಿದೇವನಿಚಯಂ ಕೈಯೆತ್ತಿಕೊಂಡಾಡಿತುಂ
ಇರುದೈದಚ್ಚರಿಯಾದುದತ್ತು ಸುಜನರ್ ಸಂತೋಷಮಂ ತಾಳ್ವಿನಂ ||

ಇಂತು ಪಂಚಾಶ್ಚರ್ಯಸಹಿತಂ ಧನದಂ ದಿನಂಪ್ರತಿ ವಸುಧಾರೆಯಂ ಸುರಿಯೆ ಸಂತಸದಂತ ಮನಪ್ಪುಗೆಯ್ದಿರ್ಪಿನಮೊಂದು ದಿವಸಂ ಪ್ರಿಯಕಾರಿಣೀ ಮಹಾದೇವಿಯರು ಸಪ್ತತಲ ಪ್ರಾಸಾದದ ನಂದ್ಯಾವರ್ತ ಗರ್ಭಗೃಹದ ರತ್ನ ಪರ್ಯಂಕದೊಳು ಪವಡಿಸಿರ್ದು ಮನೋಹರಮೆಂಬ ಬೆಳಗಪ್ಪಜಾವದೊಳು :

ವೃ || ಗಜೇಂದ್ರೋ ಗವೇಶೋ ಮೃಗಾಧೀಶ್ವರಶ್ರೀಃ
ಸ್ರಜಾವಿಂದುರರ್ಕೋ ಝಷೌಪೂರ್ಣಕುಂಭೌ
ಸರಸ್ಸಾಗರಃ ಸಿಂಹಪೀಠಂ ವಿಮಾನಂ
ಫಣೀಂದ್ರಾಲಯೋ ರತ್ನರಾಶಿಃ ಕೃಶಾನುಃ ||

ಎಂಬ ಷೋಡಶ ಶುಭಸ್ವಪ್ನ ದರ್ಶನಾನಂತರಂ ನಿಜವದನಾರವಿಂದ ಪ್ರವೇಶಿ ಗಜರೂಪಮಂ ಕಂಡು ಮಂಗಳಪಾಠಕ ಧ್ವನಿಗಳಿಂದೆಚ್ಚತ್ತು ಅಭಿಷೇಕ ಪುಣ್ಯ ಪ್ರಸಾಧನ ಮಂಗಳ ದರ್ಪಣಾಲೋಕ ನವಿಧಿಗಳಂ ತೀರ್ಚಿ ಸಿದ್ಧಾರ್ಥ ಮಹಾರಾಜನಲ್ಲಿಗೆ ಪೋಗಿ ಪಾದಪ್ರಣಾಮ ಪೂರ್ವಕಮರ್ಧಾಸನದೊಳ್ಕುಳ್ಳಿರ್ದು ತಾನು ಕಂಡ ಕನಸುಗಳನರಿಪಿ ತತ್ಫಲಮನರಸನಿಂ ಕೇಳ್ದಾಗಳೆ ತತ್ಫಲಮಂ ಪಡೆದಂತೆ ಸಂತಸಂ ಬಟ್ಟು ಸುಖಮಿರ್ಪಿನಂ ಸ್ವರ್ಗಾವತರಣ ಕಲ್ಯಾಣಪೂರ್ವಕಂ

|| ನೆರೆಸಗ್ಗದ ಪುಷ್ಪೋತ್ತರ
ದೆರೆಯನುಮಾಷಾಢಶುದ್ಧ ಷಷ್ಟಿಯೊಳಂ ತಾಂ
ವರಪ್ರಿಯಕಾರಿಣಿಯುದರಕೆ
ಬರಲಿಂದ್ರರುಮರಿದುಮವಧಿಯಿಂ ಬಂದಾಗಳ್
‌ ||

ಇಂತು ಚತುರ್ನಿಕಾಯಾಮರರ್ವೆರಸು ಸಿದ್ಧಾರ್ಢನರಮನೆಯಂ ಪೊಕ್ಕು ಪ್ರಿಯಕಾರಿಣೀ ದೇವಿಯರಂ ಭದ್ರಾಸಮನೇರಿಸಿ ವಸ್ತ್ರಾಭರಣ ಮಾಲೆಗಳಿಂ ಪೂಜಿಸಿ ಪೊಡಮಟ್ಟು ಪೋದರಿತ್ತ ದಿಗಂಗನೆಯರುಂ ದೇವಾಂಗನೆಯರುಂ ಇಂದ್ರನ ಬೆಸನದಿಂ ಪ್ರಿಯಕಾರಿಣಿಗೆ ಪರಿಚಾರಕಿಯರಾಗೋಲೈಸುತ್ತಿರಲು ನವಮಾಸಂ ನೆರೆದು ಚೈತ್ರ ಶುದ್ಧ ತ್ರಯೋದಶಿಯೊಳುತ್ತರ ಫಲ್ಗುನಿಯೊಳು ಶಾಂಕ ಯೋಗದೊಳು ತ್ರಿಜ್ಞಾನಧರು ಪುಟ್ಟಿ

ವೃ || ಮೊಳಗಿತ್ತುಂ ದಶದಿಕ್ಕು ದೇವನುದಿಸಲ್ಮೂಲೋಕಮುಯ್ಯಾಂತುದುಂ
ತಿಳಿಜೊನ್ನಂಗಳನೀಗು ಕೀರ್ತಿಕಿರಣಂ ಬೆಳ್ಳಾಸರಂ ಗೊಡುದುಂ
ವಿಲಸನ್ಮೋಕ್ಷದ ದಾರಿವಟ್ಟ ತೆರೆಯಿತ್ತ್ವಳ್ವಟ್ಟೆ ನೇರ್ಪಟ್ಟುದುಂ
ಕಲಧೌತಾಂಗನ ಪುಣ್ಯದೆಳ್ತರಮುಮಂ ಏಂ ಬಣ್ಣಿಪೆಂ ನಾನದಂ ||

ಇಂತು ಲೋಕಾಶ್ಚರ್ಯ ಮಾಗಿರ್ಪಿನಂ ಸೌಧರ್ಮೇಂದ್ರಂ ಪುಲೋಮ ಕನ್ಯಾಸಹಿತಮೈರಾವತ ಗಜಮನೇರಿ ಚತುರ್ನಿಕಾಯಾಮರರ್ವೆರಸು ಬಂದು ಪುರಮನರಮನೆಯಂ ಪೊಕ್ಕು ಮಹಾ ವಿಭೂತಿಯಿಂ ಕುಮಾರನಂ ಮಂದರಗಿರಿಗೊಯ್ದು ಪಾಂಡುಕವನದ ಪೂರ್ವೋತ್ತರ ದಿಗ್ಭಾಗದ ಪಾಂಡುಕ ಶಿಲಾತಲದ ಮೇಗಣ ಸಿಂಹಾಸನದೊಳಿರಿಸಿ ದುಗ್ಧಾಬ್ಧಿ ಜಲದಿಂ ಜನ್ಮಾಭಿಷೇಕ ಕಲ್ಯಾಣಂ ಮಾಡಲದೆಂತಾಯಿತೆಂದೊಡೆ

ವೃ || ಇಳೆಗತ್ಯುನ್ನತಮೆಂಬ ಮೇರುಗಿರಿಯಂ ನುಂಗಲ್ಕೆ ಬಂದಬ್ಧಿಯಿಂ
ಮುಳುಗಿತ್ತೆಂಬಿನಮಾದುಂದಂದಭಿಷವಂ ಮತ್ತಾ ಪಯಃ ಪೂರಮಂ
ನೆಲನಂ ಮಿಕ್ಕು ನಗಂಗಳಗ್ರವಿಡಿದಂಭೋರಾಶಿಯಂ ಪೊಕ್ಕುದೆಂ
ಬಳವಿಂಗಂ ಮಿಗಿಲಪ್ಪ ಸದ್ವಿಭವಮಂ ನೋಡಲ್ಕೆ ಕಣ್ಸಾಕ್ವವೈ ||

ಇಂತಮಿತಮಪ್ಪ ಕ್ಷೀರಘಂಟಂಗಳಂ ದೇವನಿಕಾಯಂ ತಂದೊದಗಿಸುತ್ತಿರಲಮ ರೇಂದ್ರರೆಡೆವಿಡದಭಿಷೇಕಂಗೆಯ್ವ ವಸರದೊಳಮರ ಸಮಿತಿ ತಂತಮ್ಮ ಮನದೊಳಿಂತೆಣಿಸಲಿಂತಪ್ಪಚ್ಚರಿಯಾದುದದೆಂತೆನೆ

ವೃ || ಜಿನದೇವಂ ಶಿಶುವಪನೀ ಬಹಘಟಿಕ್ಷೀರಾಂಬುಗೆಂತಾರ್ಪನಂ
ದೆಣಿಸಲ್ದೇವನಿಕಾಯಮಂತದರಿದುಂ ನಾಸಾಗ್ರದಿಂ ಸುಯ್ವಿಡ
ಲ್ಕನಿಲಂ ಪೊಕ್ಕಿರದೆತ್ತೆ ತೂಲನಿಚಯಂ ತಾರಾಪಥಕ್ಕೆಳ್ವವೊ
ಲ್ಗಣನಾತೀತ ಸುರಾಸುರಾರ್ನಭದೊಳಂ ಪಾರಾಡಿದರ್ಪೇಳ್ವುದೇಂ ||

ಇಂತು ಲೋಕಶ್ಚರ್ಯ ಮಾಗಲಧಿಕ ಭಕ್ತಿಯಿಂ ತನ್ನ ಮನಂ ತಣಿವನ್ನೆಗಮೀಂದ್ರರು ದುಗ್ದಾಬ್ಧಿಜಲದಿಂ ಜನ್ಮಾಷೇಕಂಗೈದು ದಶದಿಕ್ಕುಗಳಂ ಸುಗಂಧೀ ಕೃತಂಗಳಂ ಮಾಳ್ಪ ಗಂದಾಭೀಷೇಕಮಂ ಮಾಡಷ್ಟವಿಧಾರ್ಚನೆಗಳಿಂ ಪೂಜಿಸಿ ಪೊಡಮಟ್ಟು ಕುಮಾರಂಗೆ ತತ್ಕಾಲೋಚಿತ ಮಂಗಲಾಲಂಕಾರಮಂ ಮಾಡಿ

|| ಇರದಲ್ಲಿಂದಂ ಜಿನಪನ
ಪುರಕ್ಕೆದಿಸಿ ವಿಭವದಿಂದ ಶ್ರೀ ವೀರನುಮೆಂ
ಬರಿಕೆವೆಸರಿಟ್ಟು ಮಣಿದುಂ
ಸುರರಾಜಂ ಸುರರುವೆರಸು ಸುರಪುರಕ್ಕೆದಂ ||

ಇತ್ತ ವೀರನಾಥಂ ದ್ವಾಸಪ್ತತಿವರ್ಷ ಪರಮಾಯುಷ್ಯನುಂ ಸಪ್ತರತ್ನಿ ಪ್ರಮಾಣೋತ್ಸೇಧನನುಂ ಸುವರ್ಣ ವರ್ಣನುಂ ದಶ ವಿಧನಿಸ್ಸ್ವೇದತ್ವಾದಿ ಸ್ವಾಭಾವಿಕ ಗುಣ ಸಮನ್ವಿತನುಮೆನಿಸಿರ್ಪಿನಂ | ಕುಮಾರನ ಜನ್ಮ ದಿನದೊಳು ಸಂಜಯ ಜಯರೆಂಬ ಚಾರಣರು ಪದಾರ್ಥಂಗಳೊಳು ತಮಗೆ ಸಂದೇಹಮಾಗೆ ಬಂದು ತೀರ್ಥಂಕರ ಕುಮಾರನಂ ಕಾಣಲೊಡಂ ನಿಸ್ಸಂದೇಹಮಾಗಿ ತಮಗೆ ಸನ್ಮತಿಹೇತುವಾದುದರಿಂ ಸನ್ಮತಿಯೆಂಬ ಪೆಸರಿಟ್ಟು ಪೋದರಿತ್ತ ಮತ್ತೊಂದು ದಿವಸಮೀಂದ್ರನ ಸಭೆಯೊಳು ವೀರಸ್ವಾಮಿಗಳಿಂದಗ್ಗಳ ಶೂರರಿಲ್ಲೆಂದು ನುಡಿಯೆ ಸಂಗಮಕನೆಂಬ ದೇವಂ ಪರೀಕ್ಷಿಸಲೆಂದು ಬಂದುದ್ಯಾನವದೊಳ್ಸ ಮಾನವಯುರಂ ಚಲಕಾಕ ಪಕ್ಷಧರರುಮಪ್ಪ ರಾಜಕುಮಾರರೊಡನೆ ತರುಕ್ರೀಡಾ ಪರಾಯಣನಾಗಿರ್ದ ಕುಮಾರನಂ ಕಂಡಂಜಿಸಲೆಂದು ಮರದ ಮೊದಲಿಂ ತಗಳ್ದು ತುದಿವರಂ ಪರ್ವಿ ಮಹಾನಾಗ ರೂಪದೊಳಿರೆ ತತ್ಫಣಾಮಂಡಪಮನಾಶ್ರಯಿಸಿ ವಿಗತಭಯನಾಗಿ ಮತ್ತಂ ಕ್ರಿಡಿಸುತ್ತಿರ್ದ ಕುಮಾರನಂ ಕಂದತಿಪ್ರೀತನಾಗಿ ಮಹಾವೀರನೆಂದು ಪೆಸರಿಟ್ಟು ಸಂಗಮಕಂ ಪೋದನಿತ್ತಂ

|| ಅಮರೋಪನೀತಭೋಗದಿ
ನಮಿತಸುಖಂಬಡೆದು ಬೆಳೆದು ಮೂವತ್ತಬ್ದಂ
ಸಮನಿಸೆ ಕುಮಾರಕಾಲಂ
ಅಮರಿತು ವೈರಾಗ್ಯಕುವರಹೃತ್ಸರಸಿಯೊಳಂ ||

ಇಂತು ಮೂವತ್ತು ವರ್ಷಂ ಕುಮಾರ ಕಾಲಂ ಪೋಗೆ ಮತ್ತೊಂದು ದಿವಸ ಮಾಭಿನಿಬೋಧಿಕಜ್ಞಾನ ಪ್ರಕೃಷ್ಟಯೋಪಶಮ ವಿಜೃಂಭಿತ ಬೋಧನಾತ್ಮಭವ ಸಂಬಂಧಮಂ ನೆನೆದಿಂತು ಚಿಂತಿಸಿದಂ :

ವೃ || ನೆರೆತಾಯ್ತುಂದೆ ಬಳಗಂಬಾಗುರಿಕರುಂ ಬೆನ್ವಂದರುಂ ದಂದುಗಂ
ಸಿರಿಯುಬ್ಬುರ್ಕೆಮಗಾಡಿ ಮೋಡಿಗಮಕಂ ಮೆಯ್ವೆಂಡಿರುಂ ಮಕ್ಕಳುಂ
ಮರಳ್ವೆಟ್ಟಂ ತಳಿವಾಳೆಯಪ್ಪುಗೆ ಸೊಗಂ ಒರ್ವೋಗಮಾರ್ವೋಗಮುಂ
ಕರೆವೂವೆಂದರಿತಕ್ಕೆ ತಂದು ಬಿಡುವಂ ಕಣ್ಬೆತ್ತ ಕಟ್ಟಾಳವಂ ||

ಎಂದು ಮನದೊಳ್ಪರಿಚ್ಛೇದಿಸಿ ಲೌಕಾಂತಿಕದೇವರ್ಪ್ರತಿ ಬೋದಿಸೆ ಸೌಧಾರ್ಮಕೃತ ಪರಿನಿಷ್ಕೃಮಣ ಕಲ್ಯಾಣಾಭೀಷೇಕಕಂ ಬಂದು ವಿಸರ್ಜನಂಗೈದು ಚಂದ್ರಪ್ರಭಮೆಂಬ ಸಿಬಿಕೆಯೊಳನೇಕತರು ಕುಸುಮ ಕಿಸಲಯ ಪಲ್ಲವಾಂಕುರ ರಸಾಸ್ವಾದಮತ್ತ ಮಧುಕರ ಕೋಕಿಲ ಶಿಕಕುಲ ಸನಾಥಮಪ್ಪ ನಾಥಷಂಡವನಕ್ಕೆ ಶಷ್ಟೋಪವಾಸದಿಂ ಪೋಗಿ ಮಣಿಶೀಲತಳದೊಳುತ್ತರಾಭಿ ಮುಖನಾಗಿರ್ದ ಮಾರ್ಗಶಿರ ಬಹುಳ ದಶಮಿಯಪರಾಹ್ಣದೊಳುತ್ತರ ಫಲ್ಗುನೀನಕ್ಷತ್ರದೊಳು ಕುಮಾರಕಾಲದೊಳ್‌ ಸಿದ್ಧನಮಸ್ಕಾರಪೂರ್ವಕಂ ಪಂಚಮುಷ್ಠಿಯಿಂ ತಲೆಯಂ ಪರಿಯೆ ಪಂಚಮಾಂಬುಧಿ ಯೊಳ ಳಿಕುಂತಳಂ ರತ್ನದಪಡಲಿಗೆಯೊಳ್ಕೊಂಡೊಯ್ದು ಸೌಧರ್ಮೆಂದ್ರನಿಕ್ಕಿ ಬಂದನಿತ್ತ ಸಾಮಾಯಿಕ ಶುದ್ಧ ಸಂಯಮ ಧಾರಣದಿಂ ಚತುಜ್ಞಾನಧರನಾಗಿ ಪಾರಣೆಯದಿನದೊಳು ಕೂಳ ಗ್ರಾಮದೊಳು ಪ್ರಿಯಂಗಹು ಕುಸುಮನಪ್ಪ ಕೂಳನೆಂಬರಸನ ಮನೆಯೊಳ್ನಿಲ್ತು ವಸುಧಾರೆಯುಂ ದವದುಂದುಭಿಯುಂ ಪುಷ್ಪಾವೃಷ್ಟಿಯುಂ ಮಂದಾನಿಲನುಂ ದಿವಿಜಪ್ರಶಂಸಾ ರವಮುಮೆಂಬ ಪಂಚಾಶ್ಚರ್ಯಂ ನೆಗಳೆ ಭಟ್ಟಾರಕರುಜ್ಜಯಿನಿ ಯೊಳತಿಮುಕ್ತಶ್ಮಶಾನ ದೊಳ್‌ ರಾತ್ರಿ ಪ್ರತಿಮಾ ಯೋಗದೊಳಿರ್ಪುದುಂ || ಈಶ್ವರಂ ಗೌರಿವೆರಸು ಬಂದು ಧೈರ್ಯ ಪರೀಕ್ಷೆಗೈಯಲೆಂದು ವಿಕ್ರಿಯೆಯಿನಾತಾಮ್ರತರಲೋಚನನು ಮತಿವಿಕಟಭೀಷಣ ಭ್ರೂಭಂಗನುಂ ಪಾದನ್ಯಾಸ ಪ್ರಕಂಪಿತ ಮಹೀತಳನುಮಾಗಿ ವೇತಾಳರೂಪಂಗಳುಮನ ನಲಾನಿಲಫಣಿಂದ್ರ ಗಜೇಂದ್ರ ಸಿಂಹರೂಪಂಗಳುಮಂ ಕಿರಾತಸೈನ್ಯಮಂ ವಿದ್ಯಾಪ್ರಭಾವದಿಂ ವಿಗುರ್ವಿಸಿ ಮಸಗಿ ಬಂದು ಕಹಕಹಾಟ್ಟಹಾಸಂಗೈದು ವಿವಿಧೋಪಸರ್ಗದಿನೆಂತುಂ ಚಾಳಿಸಲಾಪಲಾರದೆ ಮಹಾವೀರನೆಂದು ಪೆಸರಿಟ್ಟು ಪೊಡಮಟ್ಟು ಪೋದನಿತ್ತ ವರ್ಧಮಾನಭಟ್ಟಾರಕರು ದ್ವಾದಶವರ್ಷಂ ಛದ್ಮಸ್ಥಕಾಲಂ ಪೋಗೆ ಜೃಂಬೀಕ ಗ್ರಾಮದ ಸಮೀಪದ ಋಜುಗತಿಯೆಂಬ ತೊರೆಯ ತಡಿಯ ಮನೋಹರರೋದ್ಯಾನದ ಶಿಲಾಪಟ್ಟದೊಳಾ ತಪಯೋಗದೊಳು ಷಷ್ಟೋಪವಾಸದಿಂ ಸಾಲದ್ರುಮದಡಿಯೊಳಿರೆ ವೈಶಾಖ ಶುದ್ಧ ದಶಮಿಯಪರಾಹ್ಣದೊಳು ಚಂದ್ರಹಸ್ತೋತ್ತರ ಮಧ್ಯಮಾಶ್ರೀತನಾಗೆ ಕೇವಲ ಜ್ಞಾನೋತ್ಪತ್ತಿಯಪ್ಪುದೌಂ ತತ್ಕಲ್ಯಾಮ ಪೂಜಾಪೂರ್ವಕಂ ಕ್ಷಾಯಿಕ ಪ್ರಾಪ್ತ್ಯತಿಶಯಭಾಗಿತುಂ ಪರಮಾತ್ಮ ಲಕ್ಷಣೋಪೇತನುಮಾಗಿರ್ಪಿನಂ | ದೇವರಾಜನಾಗಮೋಪದೇಶಹೇತು ಭೂತನಪ್ಪ ನವಧಿಯಿಂದರಿದು ಗೌತಮಗ್ರಾಮದ ಗೌತಮ ಗೋತ್ರದೊಳಾದಿತ್ಯ ವಿಮಾನದಿಂ ಬಂದಿಂದ್ರಭೂತಿಯೆಂಬ ಪೆಸರೊಳಭಿಮಾನಧನಂ ಬ್ರಾಹ್ಮಣ ಆಗಿರ್ದೊಡಾತನನುಪಾಯದದೊಳು ಭಟ್ಟಾರಕರ ಸಮೀಕರಣಕ್ಕೆ ತರೆ ಜೀವಾದಿ ಪದಾರ್ಥತತ್ತ್ವ ಸಾಮಾನ್ಯ ವಿಶೇಷನಿಬಂಧ ದ್ರವ್ಯಾರ್ಥಿಕ ಪರ್ಯಾರ್ಥಿಕ ನಯಪ್ರರೂಪಣದಿನರಿಪೆ ಪಂಚಶತ ಬ್ರಾಹ್ಮಣಸೂನುಗಳ್ಸಹಿತಮಿಂದ್ರ ಭೂತಿ ಸಂಯಮಮಂ ಕೈಕೊಂಡು ಬುದ್ಧಿ ಕ್ರಿಯಾದ್ಯಷ್ಟವಿಧವೃದ್ಧಿ ಸಂಪನ್ನನಾಗಿ ಶ್ರಾವಣಮಾಸದ ಬಹುಳ ಪ್ರತಿಪದದ ಪೂರ್ವಾಹ್ಣದೊಳು ಭಟ್ಟಾರಕೋಪದೇಶದಿಂ ದ್ವಾದಸಾಂಗದರ್ಧ ಪದಂಗಳಂ ಅಂದಿನಪರಾಹ್ಣದೊಳು ಚತುರ್ದಶ ಪೂರ್ವದರ್ಥಪದಂಗಳುಮಂ ಕೇಳ್ದು ಸಮಸ್ತ ದ್ವಾದಶಾಂಗ ಚತುರ್ದಶಪೂರ್ವಾರ್ಧ ತತ್ತ್ವವೇದಿಯಾಗಿ ಪೂರ್ವರಾತ್ರದೊಳಂಗಂಗಳ್ಗೆ ಪಶ್ಚಿಮರಾತ್ರದೊಳ್ಪೂರ್ವಂಗಳ್ಗೆ ವಚನರಚನೆಯಂ ಮಾಡಿ ಪ್ರಥಮ ಗಣಧರರಾಗಿರ್ದರಲ್ಲಿಂ ಬಳಿಕಂ ವಾಯುಭೂತಿಯುಂ ಅಗ್ನಿಭೂತಿಯುಂ ಸುಧರ್ಮರುಂ ಮೌರ್ಯರುಂ ಮೌಡಿಯುಂ ಪುತ್ರರುಂ ಮೈತ್ರೆಯುರುಂ ಅಕಂಪನರುಂ ಅಮಕಳಕರುಂ ಪ್ರಭಾಸರುಮೆಂದು ಪದಿಂಬರ್ಗಣಧರರಾಗೆ ವರ್ಧಮಾನ ಭಟ್ಟಾರಕರಂತು ಗೌತಮರ್ಮೊದಲಾಗೆ ಪನ್ನೋರ್ವರ್ಗಣಧರರುಂ ಮೂನ್ನೂರ್ವ ಪೂರ್ವರವಧಿ ಜ್ಞಾನಿಗಳುಂ ಏಳ್ನೂರ್ವರ್ಕೇವಲಿಗಳುಂ ಒಂಬೈನೂರ್ವರ್ವಿಕ್ರಿಯರ್ದ್ಧಿ ಪ್ರಾಪ್ತರುಂ ಐದು ಸಾವಿರ ಮನಃ ಪರ್ಯಯಜ್ಞಾನಿಗಳುಂ ನಾಲ್ನೂರ್ವರ್ವಾದಿಗಳುಂ ಚಂದಾನಾರ್ಯಿಕೆಯರ್ಮೊದಲಾಗಿ ಮೂವತ್ತಾರು ಸಾಸಿರ್ವರಜ್ಜಿಕೆಯರುಂ ಒಂದು ಲಕ್ಕೆ ಶ್ರಾವಕರುಂ ಮೂರು ಲಕ್ಕೆ ಸ್ರಾವಿಕೆಯರುಂ ಅಸಂಖ್ಯಾತ ದೇವ ದೇವಿಯರು ಸಂಖ್ಯಾತ ತಿರ್ಯಗ್ಜಾತಿಗಳುಮಿಂತು ದ್ವಾದಶಗಣವೆರಸು ವರ್ಧಮಾನಭಟ್ಟಾರಕಂ ಸಿಂಹಾಸನ ಮಧ್ಯಗತನಾಗಿ ಷಡ್ಡ್ರನವ್ಯಪದಾರ್ಥ ಸಂಸಾರ ಮೋಕ್ಷಹೇತು ಫಲ ಪ್ರಪಂಚನಯನ ಪ್ರಮಾಣ ನಿಕ್ಷೇಪಾದಿಗಳಂ ಸಾಗಾರಾನಗಾರ ಧರ್ಮಸ್ವರೂಪಂಗಳುಮನನರ್ಧಮಾಗದೀ ಭಾಷೆಯಿಂ ಬೆಸಸೆ ಕೇಳ್ದು ಪಲಂಬರು ಸನ್ಮಾರ್ಗವರ್ತಿಗಳಾದರಂತು ವರ್ಧಮಾನಾದ್ಯನ್ವರ್ಥ ಸಹಸ್ರಾಷ್ಟ ನಾಮಧರನಾರ್ಯ ಖಂಡದೊಳ್ಮೂವತ್ತು ವಷಂ ಧರ್ಮೋಪದೆಶಂ ಗೆಯ್ಯುತ್ತಂ ಭವ್ಯಸೂಹಮಂ ಮೋಕ್ಷ ಮಾರ್ಗವರ್ತಿಗಳಂ ಮಾಡುತ್ತಂ ನಾನಾದೇಶವಿಹರಣಂ ಗೆಯ್ದು ಪಾವಾನಗರದ ಮನೋಹರೋದ್ಯಾನದ ತಾವರೆಗೊಳದ ನಡುವಣ ಮನಿಶಿಲಾತಲಮನೈದಿ ಎರಡು ದಿವಸಂ ವಿಹರಣ ವಿಧಿಯಂ ಮಾಣ್ದು ಚತುರ್ಥಕಾಲಂ ಮೂರುವರ್ಷಮುಮೆಂಟುತಿಂಗಳುಂ ಪದಿನೈದುದಿವಸಮುಳಿದಂದು *ಕಾರ್ತ್ತಿಕಮಾಸದ ಕೃಷ್ಣಪಕ್ಷದ ಚತುರ್ದಶಿಯ ಬೆಳಗಪ್ಪ ಜಾವದೊಳು ಸ್ವಾತಿ ನಕ್ಷತ್ರದೊಳವ ಯೋಗನಿರೋಧಂಗೆಯ್ದು ಪರಮ ಶುಕ್ಲಧ್ಯಾನದಿಂದಘಾತಿಕರ್ಮಂಗಳಂ ಕೆಡಿಸಿ ಮೋಕ್ಷಲಕ್ಷ್ಮೀವಲ್ಲಭನುಮಾಗಿ ತ್ರಿಲೋಕಾಗ್ರಶಿಖಾಮಣಿಯಾದಂ ತದನಂತರಂ ಸೌಧರ್ಮೇಂದ್ರಾದಿ ಚತುರ್ನಿಕಾಯಾಮರರ್ಬಂದು ಸರ್ವಜ್ಞನ ಪರಮೌದಾರಿಕದಿವ್ಯ ಶರೀರಮಂ ಕಾಲಾಗರು ಕರ್ಪೂರಾದಿ ಸುಗಂಧಸಾರಭೂತಪರಿಮಳದ್ರವ್ಯಂಗಳಿಂದಗ್ನೀಂದ್ರ ಮುಕುಟಾನಲ ಸುರಭಿಧೂಪಪರಿಮಲಮಾಲ್ಯಾದಿಗಳಿಂದರ್ಚಿಸಿ ತನ್ಮನೋ ಹರೋದ್ಯಾನಪ್ರದೇಶದೊಳು ನೆರೆದ ಸುರಾಸುರರೆಲ್ಲರುಂ ಭೂಮ್ಯಾಕಾಶ ಪ್ರದೇಶಮೆಲ್ಲರೊಳಂ ಸುತ್ತಲುಂ ರತ್ನಕರ್ಪೂರಾದಿಪ್ರದೀಪಂಗಳಂ ಬೆಳಗಿ ಲೋಕಮೆಲ್ಲಮಂ ಪ್ರಕಾಶಿಸೆ ಪೊಡಮಟ್ಟು ಮಂಗಳಘೋಷಣೆಗಳಂ ಮಾಡಿ ನಿರ್ವಾಣಕ್ಷೇತ್ರಮಂ ಜಲಗಂಧಾಕ್ಷತೆ ಮೊದಲಾದ ಅಷ್ಟ ವಿಧಾರ್ಚನೆಯಿಂ ಪೂಜಿಸಿ ಇಂತು ನಿರ್ವಾಣಕಲ್ಯಾಣ ಮಹಾಮಹಿಮೆಯಂ ಮಾಡಿ ತಂತಮ್ಮ ನೆಲೆಗೆ ಪೋದರಿತ್ತ ತತ್ಕ್ರಮದಿಂ ಪ್ರತಿ ವರ್ಷಮಿಂದ್ರಾದಿದೇವರ್ಕಳ್ನೆರೆದು ದೀಪಾವಳಿಯಂ ಮಾಳ್ಪುದರಿಂದೀಕ್ಷೇತ್ರದ ಭವ್ಯಜನಂಗಳ್ನೋಂತುದ್ಯಾಪನೆಯಂ ಮಾಳ್ಪರದೆಂತೆನೆ.

ಕಾರ್ತ್ತಿಕ (ಅಶ್ವಯುಜ) ಮಾಸದ ಕೃಷ್ಣಪಕ್ಷದ ತ್ರಯೋದಶಿಯೊಳ್‌ ನೋಂಪವರೆಲ್ಲಂ ದಂತಧಾವನಸ್ನಾನಾದಿಗಳು ಮಾಡಿ ದೌತವಸ್ತ್ರಮನುಟ್ಟು ಶುಚಿರ್ಭೂತರಾಗಿ ಅಭಿಷೇಕಾಷ್ಟವಿಧಾರ್ಚನಾದ್ರವ್ಯಂ ಬೆರಸು ಚೈತ್ಯಾಲಯಕ್ಕೆ ಬಂದು ಈರ್ಯಾಪಥಶುದ್ಧಿಗೆಯ್ದೊಳಗಂ ಪೊಕ್ಕು ವಂದನೆಯಂ ಮಾಡಿ ಸಾಷ್ಟಾಂಗವೆರಗಿ ಪೊಡಮಟ್ಟು ಸ್ತೋತ್ರಂಗೆಯ್ದು ವರ್ಧಮಾನ ತೀರ್ಥೇಶ್ವರಂಗೆ ಅಭಿಷೇಕಮಂ ಮಾಡಿ ಅಷ್ಟವಿಧಾರ್ಚನೆಗಳಿಂದರ್ಚಿಸಿ ನೋಂಪಿಯಂ ಕೈಕೊಂಡು ಶ್ರುತಗುರು ಪೂಜೆಯಂ ಮಾಡಿ ಗುರುಸನ್ನಿಧಿಯೊಳ್‌ ಚತುರ್ದಶಿ ಯಪವಾಸಮಂ ಕೈಕೊಂಬುದು ಆಗದೊಡೆ ಚತುರ್ದಶೀ ಮಧ್ನಾಹ್ನ ಪರ್ಯಂತ ಪ್ರತ್ಯಾಖ್ಯಾನಂಗೊಂಡು ಮನೆಗೆ ಬಂದು ಧರ್ಮಧ್ಯಾನದಿಂ ಪೊತ್ತು ಗಳೆದು ಚತುರ್ದಶಿಯ ದಿವಸಂ ಚೈತ್ಯಾಲಯಕ್ಕೆ ಬಂದು ವರ್ಧಮಾನ ತೀರ್ಥೇಶ್ವರಂಗೆ ಯಥಾಶಕ್ತಿಯಿಂ ಪೂಜಿಸಿ ಫಲಪುಂಜಮನಿಕ್ಕಿ ಪೊಡಮಟ್ಟು ಉಪವಾಸಕ್ಕಾರದಿರ್ದವರು ಏಕಭುಕ್ತಮಂ ಕೈಕೊಂಡು ಮನೆಗೆ ಹೋಗಿ ಏಕ ಭುಕ್ತಮಂ ಮಾಡಿಕೊಂಡು ಚೈತ್ಯಾಲಯಕ್ಕೆ ಬಂದು ಪ್ರತ್ಯಾಖ್ಯಾನಂಗೊಂಡು ಧರ್ಮಕಥಾಪ್ರಸಂಗದಿಂ ಪೊತ್ತಂಗಳೆದು ಮನೆಗೆ ಬಂದು ಚತುರ್ದಶಿಯ ಬೆಳಗಪ್ಪಜಾವದೊಳು ಶುಚಿರ್ಭೂತರಾಗಿ ಆರ್ಚನಾದ್ರವ್ಯಂಗೆರಸು ಚೈತ್ಯಾಲಯಕ್ಕೆ ಬಂದು ಶ್ರೀವರವರ್ಧಮಾನಸ್ವಾಮಿಗೆ ಅಭಿಷೇಕಾಷ್ಟವಿಧಾರ್ಚನೆಯಂ ಮಾಡಿ ಕರ್ಪೂರದ ಲಕ್ಷದೀಪಂಗಳಂ ಬೆಳಗುವುದು ಅದಕ್ಕಾಗದವರು ತತ್ಸಂಖ್ಯೆಯ ನ್ಯೂನಮಿಲ್ಲದ ಕಲಮಾಕ್ಷತೆಯ (೧೪) ಪುಂಜಗಳನಿಕ್ಕಿ ಪೂಜಿಸಿ ೨೪ ಗಂಧ ೨೪ ಸುಗಂಧಪುಷ್ಪ ೨೪ ಚರು ೨೪ ಕರ್ಪೂರದೀಪ ೨೪ ಧೂಪ ೨೪ ಫಲಂಗಳಂ ತೀವಿ ಕೂಷ್ಮಾಂಡಫಲಮಂ ೨೪ ಎಳೆಯ ಪಟ್ಟ ಸೂತ್ರದೊಳಾನುಂ ಕಾರ್ಪಾಸ ಸೂತ್ರದೊಳಾನುಂ ಅಲಂಕರಿಸಿ ಮೇಣದು ದೊರೆಯದಿರ್ದೊಡೆ ನಾಳಿಕೇರಫಲಮನೀ ತೆರದಿಂದಲಂಕರಿಸಿ ಅರ್ಘ್ಯಮನೆತ್ತಿ ಹಯ್ಯಂಗವೀನದಿಂದಿಪ್ಪತ್ತನಾಲ್ಕು ದೀಪಮಂ ಬೆಳಗಿ ಮಹಾರ್ಘ್ಯಮನೆತ್ತಿ ದೇವರಂ ಬಲಗೊಂಡು ವಂದಿಸಿ ಶ್ರುತ ಗುರು ಪೂಜೆಯಂ ಮಾಡಿ ಕಥೆಯಂ ಕೇಳ್ದು ಕಥನಕಂ ಪೂಜಿಸಿ ಮನೆಗೆ ಬಂದು ಚತ್ಸುಂಘಸಹಿತಂ ಪಾರಣೆಯಂ ಮಾಳ್ಪುದಿದು ನೋಂಪಿಯಕ್ರಮಮಿಂತು ಇಪ್ಪತ್ತುನಾಲ್ಕು ವರ್ಷಂ ನೋಂತುದ್ಯಾಪನೆಯಂ ಮಾಳ್ಪಕ್ರಮಮೆಂತೆನೆ

ವರ್ಧಮಾನ ತೀರ್ಥೇಶ್ವರ ಪ್ರಕೃತಿಯಂ ಸುವರ್ಣರಜತಲೋಹಗಳಿಂ ಸಲಕ್ಷಣಮಾಗಿ ಮಾಡಿಸಿ ಶುಭಮುಹೂರ್ತದೊಳು ಅಂಕುರಾರ್ಪಣ ಧ್ವಜಾರೋಹಣಾದಿ ಮಂಗಲಂಗಳನೆಸಗಿ ಪ್ರತಿಷ್ಠೆಯಂ ತದ್ದಿನ (ನೋಂಪಿಯದಿನ) ದೊಳವ ಮಹಾಭಿಷೇಕಮಂ ಮಾಡಿಸಿಕೊಟ್ಟು ನಿತ್ಯಾಭಿಷೇಕ ಪೂಜಾದಿಗಳಿಗೆ ಕ್ಷೇತ್ರಮಂ ಬಿಡಿಸಿಕೊಟ್ಟು ಕಪಿಲೆಗಳಂ ಕೊಡುವುದು ೨೪ ತಂಡ ಋಷಿಯರ್ಗೆ ಆಹಾರಾದಿ ಚತುರ್ವಿಧದಾನಮಂ ಮಾಳ್ಪುದು ಅಜ್ಜಿಕೆಯರುರ್ಗುಡ ಕೊಡುವುದು ಚತುರ್ವಿಧದಾನಮಂ ಮಾಳ್ಪುದು ದೀನಾನಾಥರ್ಗುಣಲಿಕ್ಕುಡಕೊಡುವುದು (೨೪ ಬೆಸಳಿಗೆಯೊಳು ೨೪ ಮಂದಿಗೆ ೨೪ ಎಲೆ ೨೪ ಅಡಿಕೆ ಬಾಳೆಯ ಹಣ್ಣು ಪುಷ್ಪ ಗಂಧಾಕ್ಷತೆ ಸಹಿತವಾಗಿ ಸಮ್ಯಗ್ದೃಷ್ಟಿಗಳಿಗೆ ೨೪ ಬಾಯಿನಮಂ ಕೊಡುವುದು) ಇದು ಉದ್ಯಾಪನೆಯ ಕ್ರಮಂ ಇದಕ್ಕಾರದಿರ್ದೊಡೆ ಇಮ್ಮಡಿಸಿ ನೋಂಪುದಿದು ನೋಂಪಿಯ ಕ್ರಮಮೆಂದು ಗಣಧರಸ್ವಾಮಿಗಳು ಬೆಸಸೆ ಕುಣಿಕಮಾಹಾರಾಜಂ ಭವ್ಯಜನಂ ಬೆರಸು ನೋಂಪಿಯಂ ಕೈಕೊಂಡು ಜಿನನಂ ವಂದಿಸಿ ಬೀಳ್ಕೊಂಡು ಗಣಧರರ್ಮೊದಲಾದ ಋಷಿಸಮುದಾಯಕ್ಕಂ ಪೊಡಮಟ್ಟು ಗಂಧಕುಟಿಯಂ ಪೊರಮಟ್ಟು ಭವ್ಯಜನಂಗಳ್ವೆರಸು ವಿಭವದಿಂ ಪುರಮನರಮನೆಯಂ ಪೊಕ್ಕು ಸುಖದಿಮಿರ್ದುನಂಪಿಯ ದಿನಂ ಬರೆ ಭವ್ಯಜನಂಗಳ್ವೆರಸು ನೋಂತುದ್ಯಾಪನೆಯಂ ಮಾಡಿ ತತ್ಫಲದಿಂ ಪಲವು ನಿಧಿನಿಧಾನಂಗಳ್ಗೊಡೆಯರಾಗಿ ದೇವ ಕುಮಾರಸನ್ನಿಭರಪ್ಪ ಪಲವು ಮಕ್ಕಂಳಂಪಡೆದು ಅನೇಕ ಭೋಗೋಪ ಭೋಗಂಗಳನನುಭವಿಸಿ ಕಡೆಯೊಳು ಸಮಾಧಿವಿಧಿಯಿಂ ಮುಡುಪಿ ಸ್ವರ್ಗಮಂ ಪಡೆದರ್‌

|| ಬಳಬಳಸಿ ಪೂತಮಹಿಯುಮ
ಪೊಳಲುಮ ದೀಕ್ಷಾವನಪಥಮ ಸುರರುಂ ನರರುಂ
ಬೆಳಗೆ ಬಹುಲಕ್ಕದೀಪದಿ
ವೊಳು ಲಕ್ಷಾವಳಿಯ ನೋಂಪಿವೆಸರಾಯ್ತಾಗಳ್
‌ || ||

ಈ ನೋಂಪಿಯ ವಿಧಿವೇಳ್ವರು
ಮೀ ನೋಂಪಿಯಕೊಂಡು ಕೈಕೊಳಿಸುವರುಂ
ಆನಂದಿಪರೋದುವರುಂ
ಭೂನುತಸ್ವರ್ಗಾಪವರ್ಗ ಸುಖಮಂ ಪಡೆವರ್
‌ || ||

ವೃ || ಅರಿದೀ ನೋಂಪಿಯ ನೋಂತಭವ್ಯಜನಕಂ ಶಿಷ್ಟೇಷ್ಟಸಂಪ್ರಾಪ್ತಿಯುಂ
ಸಿರಿ ಸಂಪತ್ತು ಕಲತ್ರ ಪುತ್ರ ಸಖರುಂ ಸಾಮ್ರಾಜ್ಯ ಸತ್ಕೀರ್ತಿಯುಂ
ಸುರರಾಜ್ಯೈಸಿರಿಸರ್ವಭೌಮಪದಮುಂ ಸರ್ವಾರ್ಥಸಂಸಿದ್ಧಿಯುಂ
ದೊರೆಕೊಳ್ಗುಂ ದಿಟಮಾಗಿ ಶಾಶ್ವತಸುಖಂ ಭದ್ರಂ ಮಂಗಲಂ ||

|| ಇತಿ ದೀಪಾವಳಿ ನೋಂಪಿಯ ವಿಧಾನಂ ||

 

* ತಿಂಗಳಿಗೆ ಕೃಷ್ಣಪಕ್ಷವು ಮೊದಲೆಂದು ತಿಳಿಯುವ ಉತ್ತರ ಹಿಂದೂಸ್ಥಾನದವರಿಗೆ ಕಾರ್ತ್ತಿಕ ಕೃಷ್ಣ ೧೪ ಆದರೆ ಶುಕ್ಲಪಕ್ಷವು ತಿಂಗಳಿಗೆ ಮೊದಲೆಂದು ತಿಳಿಯುವ ದಾಕ್ಷಿಣಾತ್ಯರಿಗೆ ಅದು ಅಶ್ವಯುಜ ಕೃಷ್ಣ ೧೪ ಆಗುವುದು.