ಶ್ರೀ ವೀತರಾಗಾಯನಮಃ ||

ದುರ್ಗ್ಗತಿ ನಿವಾರಣಮೆಂಬ ನೋಂಪಿಯಂ ಮಾಘ ಮಾಸದ ಕೃಷ್ಣ ಪಕ್ಷದ ಪಾಡ್ಯದೊಳುಪವಾಸಂಗೆಯ್ದು ನೋಂಪಿಯಂ ಕೈಕೊಂಡು ಶಾಂತಿನಾಥನ ಪ್ರಥುಮೆಗೆ ಪಗಲು ನಾಲ್ಕು ಜಾವದೊಳು ನಾಲ್ಕಭಿಷೇಕಮಂ ಮಾಡಿಸಿ ನೋಂಪಿಯಂ ಮಾಡುಉದು ನೋಂಪಿಯ ಮೊದಲ್ಗೊಂಡು ಅಂತು ಯಿಪ್ಪತ್ತೈದು ಕೃಷ್ಣ ಪಕ್ಷದ ಪಾಡ್ಯದಂದುಪವಾಸಮಂ ಮಾಡಿ ನೋಂಪಿಯಂ ಮಾಡುಉದು | ನೆಱೆದುಜ್ಜವಣೆಯಂದು | ತೀರವಳೆಯದೊಳು ನಾಲ್ಕು ಚತುಃಷ್ಕೋಣ ಕಳಸಂಗಳಂ ವೊಂದು ಧೂಪ ಗುಂಡಿಗೆಯಂ ವೊಂದು ಘಂಟೆಯಂ ಆಯ್ದು ನೆಲೆಯ ಮಂದರ ಪೀಠಮಂ | ಧ್ವಜಂಗಳಂ ಮಾಡಿಸಿ | ಬಸದಿಗೆ ಅರ್ಚ್ಚನೆವೆರಸು ಕುಡು ಉದುಮಿದುದ್ಯಾಪನೆಯ ಕ್ರಮ ಯೀ ನೋಂಪಿಯ ನೋಂತವರು ಮೇಲಪ್ಪ ಸ್ವರ್ಗದೊಳು ಯಿಪ್ಪರು ಭವ ಭವಾಂತರದೊಳು ನಾರಕರೊಳು ತಿರಿಕರೊಳು | ಕುಮನುಷ್ಯರೊಳು | ಭೂತಪಿಶಾಚ ದೇವತೆಗಳೊಳುತ್ತಮ ಮನುಷ್ಯರಾಗಿ ದೇವರೊಳುತ್ತಮ ದೇವರ್ಕ್ಕಳಾಗಿ | ಪುರುಷರೊಳುತ್ತಮದಿವ್ಯಪುರುಷರಾಗಿ ಪುಟ್ಟಿ ಭೋಗಂಗಳಂ ತಂನಿಂದಂ ಪೆಱರಿಂದಂ ಸುಖಂಗಳನೆಲ್ಲ ಮಂನನುಭವಿಸಿ ಕರ್ಮ ಕ್ಷಯದಿಂದನಂತ ಸುಖವನನುಭವಿಸಿ ತದನಂತರದೊಳು ಸರ್ವಜ್ಞರ ಮತದಿಂ ಶ್ರೀ ಸುಖದೊಳ್ಕೂಡಿರ್ಪ್ಪರು ಯೀ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಯಿಹತ್ರಯ ಸುಖಮಂ ಪರತ್ರಯದೊಳು ಸ್ವರ್ಗ್ಗಾಪವರ್ಗವಂ ಪಡೆವರು ಮಂಗಳ ಮಹಾ ಶ್ರೀ