ಶ್ರೀ ವೀತರಾಗಾಯನಮಃ ||

ಶ್ಲೋಕ || ಪಾಂತು ಶ್ರೀಪಾದಪದ್ಮಾನಿ ಪಂಚಾನಾಂ ಪರಮೇಷ್ಠಿನಾಂ
ಲಾಲಿತಾನಿ ಸುರಾದೀಶ ಚೂಡಾಮಣಿ ಮರೀಚಿಭಿಃ ||

ಅದೆಂತೆಂದೊಡೆ ಈ ಜಂಬೂ ದ್ವೀಪದ ಭರತ ಕ್ಷೇತ್ರದದಾರ್ಯ್ಯಾ ಖಂಡದೊಳಯೋಧ್ಯಾಪುರಕಧಿಪತಿಯಪ್ಪ ಯಿಕ್ಷ್ವಾಕು ವಂಶದ ರಾಜಂ ಹರಿಷೇಣ ಚಕ್ರವರ್ತ್ತಿ ಯೆಂಬಾತಾನ ಮಹಾದೇವಿಯರು ಗಾಂಧಾರಿಯುಂ ಪ್ರಿಯಮಿತೆಯುಂ ಪ್ರಿಯ ಶ್ರೀಯುಮೆಂಬ ಮೂವ್ವರುಂ ಪ್ರಧಾನ ವಲ್ಲಭೆಯರ್ಮ್ಮೊದಲಾದೈನೂರ್ವ್ವರರಸಿಯರುಂ ವೆರಸು ಸುಖ ಸಂಕಥಾ ವಿನೋದದಿಂ ರಾಜ್ಯ ಶ್ರೀಯನನುಭವಿಸುತ್ತಮಿರಲೊಂದು ದಿನಂ ಆ ಹರಿಷೇಣ ಮಹಾರಾಜಂ ತಂನ ಮಹಾದೇವಿಯರು ಸಹಿತಂ ಪ್ರಧಾನ ಪರಿವಾರ ಪರಿವೃತನಾಗಿ ದೇವಾವನಮೆಂಬುದ್ಯಾನವನಮಂ ಪೊಕ್ಕು ಜಲಕ್ರೀಡೆಯನಾಡಿ ಆ ವನದ ಲತಾ ಮಂಟಪಂಗಳೊಳು ನಾನಾ ವಿಧ ವಿನೋದಂಗಳಂ ನೋಡುತ್ತಂ ಬಹ ಸಮಯದೊಳು ಆ ವನದ ಮಧ್ಯದ ಚಂದ್ರಕಾಂತದ ಮಣಿ ಶಿಲಾ ತಳದ ಮೇಲೆ ಕಲ್ಪವೃಕ್ಷದ ಮೊದಲೊಳು ಅರಿಂಜಯರುಂ ಅಮಿತಂಜಯರುಮೆಂಬ ಚಾರಣ ಪರಮೇಷ್ಠಿಗಳು ಬಿಜಯಂಗೆಯ್ದಲ್ಲಿ ಪಂಚಾಚಾರ ಕ್ರಿಯೆಯಂ ಮಾಡಿ ಕುಳ್ಳಿರ್ದ್ದುದಂ ಕಂಡಾ ಸಮಯದೊಳೂ ಆ ಪರಿಷೇಣ ಮಹಾರಾಜಂ ತಂನ ಮಹಾದೇವಿಯರು ಸಹಿತಂ ಬಂದು ಆ ಮುನೀಶ್ವರರಂ ತ್ರಿಃ ಪ್ರದಕ್ಷಿಣಂಗೆಯ್ದು ಸಾಷ್ಟಾಂಗವೆಱಗಿ ಪೊದವಟ್ಟು ನಾನಾ ವಿಧ ಪುಷ್ಪಮಾಲೆಗಳಿಂದನೇಕ ಫಲಂಗಳಿಂದರ್ಚ್ಚಿಸಿ ವಂದನೆಯಂ ಮಾಡಿ ಕರಕಮಲ ಮುಕುಳಿತರಾಗಿ ಕುಳ್ಳಿರ್ದ್ದು ತದನಂತರದೊಳಾ ಮುನೀಶ್ವರರ್ಪ್ಪರಸಿ ಯಿಂತೆಂದರೆಲೆ ಮಹಾರಾಜಾ ನೀನು ಪೂರ್ವ್ವಾರ್ಜ್ಜಿತದ ಧರ್ಮ್ಮ ಫಲದಿಂ ರಾಜ್ಯ ಪದವಿಯಂ ಪಡದೆ | ಯಿಂನು ಸ್ವರ್ಗ್ಗಾಪವರ್ಗ್ಗ ಸುಖಕ್ಕೆ ಕಾರಣಮಾಗಿ ರತ್ನತ್ರಯಂಗಳನತಿಚಾರಮಿಲ್ಲದೆ ನಡಸುವುದೆಂದುಪದೇಶಂಗೆಯ್ದು ಮತ್ತಮಿಂತೆಂದು ಬೆಸಸಿದರು ನೀನುಮುಂನ ಪೂರ್ವ್ವ ಭವದೊಳೀ ಪಟ್ಟಣದ ವೈಶ್ಯ ಕುಬೇರ ಮಿತ್ರನೆಂಬಂಗಮಾತನ ಭಾರ್ಯೆ ಸುನಂದೆಗಂ ಶ್ರವರ್ಮ್ಮನುಂ ಜಯವರ್ಮ್ಮನುಂ | ಜಯ ಕೀರ್ತ್ತಿಯುಮೆಂಬ ಮೂವರ್ತ್ತನೂಜರಾದರವರೊಳು ಆ ಶ್ರೀವರ್ಮ್ಮನೆಂಬ ನೀನು ಶ್ರಿಧರ ಗುರುಗಳ ಸಮೀಪದಲ್ಲಿ ಧರ್ಮ್ಮಮಂ ಕೇಳ್ದು ತದನಂತರದೊಳು ನಂದೀಶ್ವರದ ನೋಂಪಿಯಂ ಕೈಕೊಂಡು ನೋಂತು ಕೆಲಉ ದಿನದಿಂ ಮೇಲೆ ಆಯುಷ್ಯಾವಸಾನದೊಳು ಸಮಾಧಿ ವಿಧಿಯಿಂ ಶರೀರಮಂ ಬಿಟ್ಟು ಆ ನಂದೀಶ್ವರದ ನೋಂಪಿಯ ಫಲದಿಂದೀ ಪಟ್ಟಣದಧಿಪತಿ ವಜ್ರಬಾಹು ಮಹಾರಾಜಂಗಮಾತನರಸಿ ವಿಮಲ ಮಹಾದೇವಿಗಂ ಹರಿಷೇಣನೆಂಬ ಕುಮಾರನಾಗಿ ಪುಟ್ಟಿಯಿಂತಪ್ಪ ಚಕ್ರವರ್ತ್ತಿ ಪದವಿಯಂ ಪಡದೆ | ಆ ಜಯವರ್ಮ್ಮನುಂ ಜಯಕೀರ್ತ್ತಿಯುಮೆಂಬ ನಾವೀರ್ವ್ವರುಂ ಧರ್ಮ್ಮಧರ ಗುರುಗಳ ಸಮೀಪದೊಳು ಪಂಚಾಣು ವ್ರತಂಗಳಂ ಕೈಕೊಂಡು ನಡಸಿ ತದನಂತರಂ ನಂದೀಶ್ವರದ ನೋಂಪಿಯಂ ಕೈಕೊಂಡು ನೋಂತು ಆಯುಷ್ಯಾವಸಾನದೊಳು ಸಮಾಧಿ ವಿಧಿಯಿಂ ಮುಡಿಪಿ ಹಸ್ತಿನಾಪುರದೊಳು ವಿಮಲವಾಹನನೆಂಬ ವೈಶ್ಯಂಗಮಾತನ ಭಾರ್ಯ್ಯೆ ಶ್ರೀಧರೆಗಮ ರಿಂಜಯರುಮವಿತಂ ಜಯರುಮೆಂಬ ಪುತ್ರರಾಗಿ ಪುಟ್ಟಿ ಯಮಧರ ಗುರುಗಳ ಸಮೀಪದೊಳು ಜಿನದೀಕ್ಷಾ ಪ್ರಾಪ್ತರಾಗಿ ಚಾರಣ ಪದವಿಯಂ ಬೇಕೆಂದು ನಿಧಾನಿಸಿ ನಂದೀಶ್ವರದ ನೋಂಪಿಯಂ ನೋಂತು ಆ ನೋಂಪಿಯ ಫಲದಿಂ ಚಾರಣ ಋದ್ಧಿಯಂ ಪಡೆದು ಮುಂನಿನ ನಿಂ ನಂಮ ಪೂರ್ವ್ವ ಭವಸ್ನೇಹಕಾರಣದಿಂ ನಾವು ಭವರ್ದ್ದರ್ಶನಾರ್ಥಮಾಗಿ | ನಿಂನಂ ಕಂಡು ನಿನಗೆ ನಂದೀಶ್ವರದ ನೋಂಪಿಯ ಮಹಾತ್ಮ್ಯಮಂ ತಿಳಿಪಲ್ಬಂದೆಉ ನೀನಿಂನು ನಂದೀಶ್ವರದ ನೋಂಪಿಯಂ ಕೈಕೊಂಡು ನೋಂಪುದೆಂದು ಬೆಸಸೆ ಮಹಾ ಪ್ರಸಾದಮೆಂದು ಕೈಕೊಂಡು ಆ ನಂದೀಶ್ವರದ ನೋಂಪಿಯ ವಿಧಾನದ ಕ್ರಮಮೆಂತೆಂದೊಡೆ ಈ ಜಂಬೂದ್ವೀಪಕ್ಕೆಂಟನೆಯ ದ್ವೀಪಂ ನಂದೀಶ್ವರ ದ್ವೀಪಮೆಂಬುದದಱ ನಾಲ್ಕುಂ ದಿಕ್ಕುಗಳೊಳು ಪ್ರತ್ಯೇಕಮೊಂದೊಂದಂಜನ ಪರ್ವ್ವತಗಳು ನಾಲ್ಕು ನಾಲ್ಕು ದಧಿ ಮುಖಂ ಪರ್ವ್ವತಂಗಳೊಳು ಯೆಂಟೆಂಟು ರತಿಕರ ಪರ್ವ್ವತಂಗಳೊಳಉ ಅದಱ ಅಪೂರ್ವ್ವ ಪರ್ವ್ವತಂಗಳೊಳು ಪದಿಮೂಱು ಚೈತ್ಯಾಲಯಂ ಆ ದಕ್ಷಿಣ ಪರ್ವ್ವತಂಗಳೊಳು ಪದಿಮೂಱು ಚೈತ್ಯಾಲಯಂ | ಆ ಪಶ್ಚಿಮ ಪರ್ವ್ವತಂಗಳೊಳು ಪದಿಮೂಱು ಚೈತ್ಯಾಲಯಂ | ಆ ಉತ್ತರ ಪರ್ವ್ವತಂಗಳೊಳು ಪದಿಮೂಱು ಚೈತ್ಯಾಲಯಂ | ಅಂತು ಅಂಜನ ಗಿರಿಯಾದಿಯಾಗಿ ಪರಿವಿಡಿಯಲು ನಾಲ್ಕು ದಿಕ್ಕಿನೊಳುಳ್ಳ ಪರ್ವ್ವತಂಗಳೊಳು ಕೂಡಿ ಅಯ್ವತ್ತೆರಡು ಚೈತ್ಯಾಲಯಂಗಳೊಳವು | ಆ ಚೈತ್ಯಾಲಯಂಗಳ ವಿಸ್ತಾರಂ ಉತ್ತರ ದಕ್ಷಿಣದಿಂ ನೂಱು ಯೋಜನ ನೀಳ ಯೆಪ್ಪತ್ತೈದು ಯೋಜನದುದ್ದ ಆಯ್ವತ್ತು ಯೋಜನದಗಲಮಿವಕ್ಕೆ ತಕ್ಕೆ ಪ್ರಾಕಾರ ಗೋಪುರ ಮಂಟಪ ಮಾನಸ್ತಂಭಂಗಳಿಂ | ನವರತ್ನ ಮಣಿ ಕನಕ ರಜತ ಮಾಲೆಗಳಿಂದಲಂಕೃತಮಾಗಿವೊಪ್ಪುತಿರ್ಪ್ಪಉ | ಆ ಚೈತ್ಯಾಲಯಂಗಳಿಗೆ ಶಂಕ ಪಡಹ ಕಹಳೆ ನಿಃಸಾಳ ಮೃದಂಗ ಭೇರಿ ತೂರ್ಯ್ಯ ವೇಣು ವೀಣಾ ಪ್ರಮುಖ ನಾನಾ ವಿಧ ವಾದ್ಯ ಜನಿತ ಪಂಚಮಹಾ ಶಬ್ದಂಗಳಿಂ ವೊಂದೊಂದು ಕೋಟಾ ಕೋಟಿಗಳಾಗಿ ಮೊಳಗೆ ಶಬ್ದಗಳಿಂ ಗಹಗಹಿಕೆ ಬಹುಲಿಕೆ ವಣಿವಹಣಿಯಿಂ ಇಟಾಯಿಗಳು ಮೆಱೆಯೆ ತಂತಂಮ ಸುಗತಿಗಳಂ ಭೋಧಿಸಿಯುಂ | ರತ್ನ ತೋರಣಧ್ವಜ ವಿತತಿಸಂದೋಹ ಭೃಂಗಾರ ಕಲಶದರ್ಪ್ಪಣಾತಪತ್ರಂಚಾಮರ ಸುಪ್ರತಿಷ್ಟಂ ಮೊದಲಾದ ಬಹುವಿಧ ಮಂಗಲ ದ್ರವ್ಯೋಪಕರಣದಿಂದೊಪ್ಪುತಿರ್ಪ್ಪ ಚೈತ್ಯಾಲಯಂಗಳಂ ಗಂಧಕುಟಿಯ ಮಧ್ಯದ ಲಕ್ಷ್ಮೀ ಮಂಟಪದ ನಡುವಣ ಸ್ಫಟಿಕ ರತ್ನ ನಿರ್ಮ್ಮಿತಪ್ಪ ಸಿಂಹಪೀಠದ ಮೇಲೆ ಆಯ್ನೂಱು ಬಿಲ್ಲುಚ್ಚೇಧದಲ್ಲಿ ಕೋಟಾಕೋಟಿ ಚಂದ್ರಾದಿತ್ಯರ್ಕಳ ಪ್ರಭೆಯಿಂ ವಿಶೇಷ ಪ್ರಭೆಯನುಳ್ಳ ದೇಹಕಾಂತಿಯಿಂದಿಕ್ಕೆಲದ ಚಾಮರ ಗ್ರಾಹಿಣಿಯರು ಮೂವತ್ತಿರ್ವ್ವರು ಯಕ್ಷ ಯಕ್ಷಿಯರಿಂದ ಲಂಕೃತಮಾಗಿ ಅಷ್ಟ ಮಹಾ ಪ್ರಾತಿಹಾರ್ಯ್ಯ ಸಮೇತಮಾಗಿ ವೊಂದೊಂದು ಚೈತ್ಯಾಲಯಕ್ಕೆ ನೋಱೆಂಟು ನೋಱೆಂಟು ಭಗವದರ್ಹತ್‌ ಪರಮೇಶ್ವರ ಪ್ರತಿಬಿಂಬಂಗಳೊಪ್ಪುತಿರ್ಪ್ಪವು | ಆ ನಂದೀಶ್ವರ ದ್ವೀಪಕ್ಕೆ ದೌಧರ್ಮ್ಮೆಂದ್ರಾದಿ ದ್ವಾದಶ ವಿಧ ಕಲ್ಪವಾಸಿಗರುಂ ಮುಖ್ಯವಾದ ದೆವರ್ಕ್ಕಳಿಂ ಕರಿತುರಗ ರಥ ಮಹಿಷ ವೃಷಭ ಕುಕ್ಕುಟ ವರಾಹ ಚಕ್ರವಾಲ ಸಿಂಹ ಭೇರುಂಡ ಶರಭ ಶಾರ್ದ್ದೂಲಂ ಮೊದಲಾದವಂ ತಂತಂಮಾ ಚಿಹ್ನ ಸಮನ್ವಿತರಾಗಿ ದಿವ್ಯ ವಸ್ತ್ರ ಆಭರಣ ಭೂಷಿತರಾಗಿ ದಿವ್ಯ ಸ್ತ್ರೀ ಪರಿವಾರ ಧ್ವಜಾಯುಧ ಸಮನ್ವಿತರಾಗಿ | ಗೀತ ವಾದ್ಯ ನೃತ್ಯ ಅಷ್ಟ ವಿಧಾರ್ಚ್ಛನೆಯ ದ್ರವ್ಯಂ ಬೆರಸು ಚೈತ್ಯಾಲಯಕ್ಕೆ ವಂದು ಗಂಧಕುಟಿಯಂ ತ್ರಿಪ್ರದಕ್ಷಿಣಂ ಗೆಯ್ದು ಅರ್ಹತ್ಪರಮೇಶ್ವರರ್ಗೆ ಅನೇಕ ಸ್ತವ ಸ್ತೋತ್ರಂಗಳಿಂಸ್ತುತಿಯಿಸಿ ಸಾಷ್ಟಾಂಗ ಪ್ರಣತರಾಗಿ ಶ್ರುತರಾಧನೆಯಂ ಮಾಡಿ ಮುಮುಕ್ಷುಗಳಂ ವಂದಿಸಿ ಧರ್ಮ್ಮ ಶ್ರವಣಮಂ ಕೇಳ್ದು ತದನಂತರ ತಂತಂಮ ಸಮುಚಿತ ಸ್ಥಾನಂಗಗೊಳು ಕುಳಿರ್ಪ್ಪು ದುಂಮಾ ಸಮಯದೊಳು ಯಿಂದ್ರಾಣಿ ಮೊದಲಾದ ದೇವಸ್ತ್ರೀಯರುಂ ತುಂಬರ ನಾರದರುಂ ಮಂಗಲ ಗೀತಂಗಳಂ ಪಾಡಲು | ರಂಭೆ ಊರ್ವ್ವಸಿ ಮೊದಲಾದವರು ಪಾತ್ರಂಗಳನಾಡುತ್ತಮಿರಲು ಅನೇಕ ಪಂಚ ಮಹಾ ಶಬ್ಧಂ ಬೆರಸು ಸುವರ್ಣ್ನ ಘಟಂಗಳಿಂ ನಾಳಿಕೇರೇಕ್ಷುರಸ ಚೂತ ದಾಡಿಮ ದ್ರಾಕ್ಷಾರಸ ಶರ್ಕ್ಕರೆ ಘೃತ ಕ್ಷೀರ ದಧಿಗಳಿಂದಭಿಷೇಕಂ ಮಾಡಿ ಸರ್ವೌಷಧಿ ಸಮನ್ವಿತ ಕಲ್ಕ ಚೂರ್ನ್ನದಿಂದುದ್ವರ್ತ್ತನಂ ಮಾಡಿ ಕರ್ಪ್ಪೂರಾದಿ ಸುಗಂಧ ದ್ರವ್ಯ ಮಿಶ್ರ ಗಂಗಾದಿ ತೀರ್ತ್ಥನದೀಜಲದಿಂ ಮಂತ್ರ ಸಮನ್ವಿತಮಾಗಿ ಗಂಧೋದಕಮಂ ಮಾಡಿ ಆ ನಂತರಂ ಪಂಚಭಕ್ಷಪಾಯಸದ ಚರುವಿಂ ಅಷ್ಟ ವಿಧಾರ್ಚ್ಚನೆರ್ಯಂ ಜಿನರ್ಗ್ಗೆ ನಿರ್ಬ್ಭರ ಭಕ್ತಿಯಿಂ ಮಾಡಿ ಬಲಗೊಂಡು ದೇವ ಸಮೂಹಮೆಲ್ಲಂ ಅಷ್ಟಮಿ ಮೊದಲ್ಗೊಂಡು ಪೌರ್ನ್ನಮಿ ಪರ್ಯ್ಯಂತಮೀ ಕ್ರಮದಿಂ ಮಹಾಪೂಜೆಯಂ ಮಾಡಿ ತಂತಂಮಲೋಕಕ್ಕೆ ಪೋಪರು | ಪಂಚಾಮೃತಾಭಿಷೇಕಾಷ್ಟ ವಿಧಾರ್ಚ್ಚನೆಯ ಫಲಮೆಂತೆನೆ ಜಿನೇಶ್ವರಂಗೆ ಯಿಕ್ಷುರಸಾಭಿಷೇಕಮಂ ಮಾಡಲು | ಯಿಕ್ಷ್ವಾಕು ಕುಲಾಧಿಪತಿಯಕ್ಕುಂ | ನಾಳಿಕೇರ ರಸಾಭಿಷೇಕದಿಂ | ದಶಾಂಗ ಭೋಗಮನನಭವಿಸುತ್ತಂ ರತಿಯ ಸಮಾನರಪ್ಪರನೇಕ ಸ್ತ್ರೀಯರಂ ಕಾಮ ಸಂನಿಭರಪ್ಪರನೇಕ ಪುತ್ರರಂ ಪಡೆವರುಂ | ಗೃತಾಭಿಷೇಕದಿಂದುತ್ತಮ ಭೋಗ ಭೂಮಿಯ ಸುಖಮನೆಯ್ದುಗುಂ | ಕ್ಷೀರಾಭಿಷೇಕದಿಂದಕ್ಷಣ ಪ್ರಸ್ತುತ ಕೀರ್ತ್ತಿಗಧಿಪತಿಯಕ್ಕುಂ | ದಧಿ ಸ್ನಪನದಿಂ ಚತುರುದಧಿ ಪ್ರಮಿತ ಭೂಪತಿ ಯಕ್ಕುಂ | ಸರ್ವೌಷಧಿ ಸಂಮಿಶ್ರ ಜಲಾಭಿಷೇಕದಿಂ ಸಕಲ ರೋಗ ರಹಿತರಕ್ಕುಂ | ಗಂಧೋದಕಾಭಿಷೇಕದಿಂ ಸುಗಂಧ ಶರೀರನಕ್ಕುಂ | ಮಂಗಲ ಕಲಶ ಸಂಬೃತ ತೀರ್ತ್ಥ ಜಲಾರ್ಚ್ಛನೆಯಿಂದಷ್ಟವಿಧ ಕರ್ಮ್ಮ ರಜೋ ರಹಿತನಕ್ಕುಂ ಅಷ್ಟ ಗಂಧಾರ್ಚ್ಚನೆಯಿಂ ಬಂಧುರ ಬಂಧು ಜನಾನ್ವಿತನಕ್ಕುಂ | ವಿಶದಾಖಂಡ ಕಲಮ ತಂಡುಲ ಪುಂಜಾರ್ಚ್ಚನೆಯಿಂ ದಕ್ಷ ತಲಕ್ಷಿಪತಿಯಕ್ಕುಂ | ಚಂಪಕ ಮಲ್ಲಿಕಾ ಜಾತಿ ಪುರಸ್ಸರ ನಾನಾ ಕುಸುಮಾರ್ಚ್ಚನೆಯಿಂ | ಸುಮನಃ ಸಂದೋಹ ಸೇವ್ಯನಕ್ಕುಂ | ಬಹುವಿಧ ಪರಮಾಂನ ಭಕ್ಷೋಪದಂಶ ನೈವೇಧ್ಯಾರ್ಚ್ಚನೆಯಿಂ | ಕಲ್ಪವೃಕ್ಷ ವಿತೀರ್ನ್ನಮಪ್ಪಮೃತಾಹಾರ ಸೇವೆಯಿಂದನಂತ ಸುಖ ತೃಪ್ತನಕ್ಕುಂ | ಮಾಣಿಕ್ಯ ರಚಿತಾ ಮಂತ್ರ ಪ್ರಬೋದಿತ ಕರ್ಪ್ಪೂರ ಪಾರಿ ಪ್ರದೀಪ ಕಲಾಪಾರ್ಚ್ಚನೆಯಿಂ ನವನಿಧಿಗಧೀಶನಕ್ಕುಂ | ಕಾಳಾಗರು ಧೂಪಮರ್ಚ್ಚನೆಯಿಂ | ಸರ್ವ್ವ ಜಗದ್ವಶ್ಯಮಕ್ಕುಂ | ಕ್ರಮುಖ ಜೋಭಮೊಚಾಮ್ರ ಬೀಜಪೂರ ಘನಸ ಜಂಜೀರ ದಾಡಿಮ ಪ್ರಮುಖಾನೇಕ ಹೃದ್ಯ ಫಲಾರ್ಚ್ಛನೆಯಿಂದಭಿಷ್ಟ ಚತುರ್ವಿಧ ಪುರುಷಾರ್ತ್ಥ ಫಲಮಂ ಪಡೆಗುಂ | ಶಾಂತಿ ಧಾರಾರ್ಚ್ಚನೆಯಿಂ | ಪ್ರಧ್ವಸ್ತ ಕಲ್ಮಷನಕ್ಕುಂ | ಛತ್ರ ಚಾಮರ ಸಿಂಹಾಸನಾಧಿ ಪ್ರಶಸ್ತ ಮಂಗಲೋಪಕರಣಾರ್ಪ್ಪಣೆಯಿಂದಖಿಲ ಮಂಗಲೋತ್ತಮ ಪಂಚಕಲ್ಯಾಣ ವರೇಂಣ್ಯನಕ್ಕುಂ | ಯೀ ಕ್ರಮದಿಂ ನೋಂಪಿಯಂ ನೋನಲುವೇಳ್ಕೆಂದು ಪೇಳ್ದು ಮತ್ತಮೀಯೆರಡುವರೆ ದ್ವೀಪದೊಳಗುಳ್ಳ ಮಾನುಷ ಭವ್ಯರ್ಗ್ಗೆಯೀ ನೋಂಪಿಯ ಕ್ರಮವುಂ ಪೇಳ್ದಪರು | ಆಷಾಢ ಮಾಸದ ಶುಕ್ಷ ಪಕ್ಷದ ಸಪ್ತಮಿಯಲು ಶುಭ ಚಿತ್ತದಿಂ ನೋಂಪವರೆಲ್ಲಂ ದಂತ ದಾವನ ತೈಲಾ ಭ್ಯಂಗನದಿಂ ಶುಚಿರ್ಭ್ಭೂತರಾಗಿ ದೌತವಸ್ತ್ರ ಸಮೇತರುಮಾಗಿ ಅಷ್ಟ ವಿಧಾರ್ಚ್ಛನಾ ದ್ರವ್ಯಂ ಬೆರಸು ಬಂದು ಚೈತ್ಯಾಲಯಮಂ ಮೂಱು ಸೂಳ್ಪಲಗೊಂಡು ಜಿನೇಶ್ವರಂಗೆ ವಸ್ತುಸ್ತವ ರೂಪಸ್ತವ ಗುಣಸ್ತವಂಗಳಿಂ ಸ್ತುತಿಯಿಸಿ ಪಂಚಾಮೃತದ ಅಭಿಷೇಕಾಷ್ಟ ವಿಧಾರ್ಚ್ಚನೆಗಳಂ ಮಾಡಿ ಶ್ರುತಮಂ ಗುರುಗಳಂ ವಂದಿಸಿ ಸಪ್ತಮಿ ಮೊದಲಾಗಿ ಪೌರ್ನ್ನಮಿವರ ಅಧಃಶಯನ ಬ್ರಹ್ಮಚರ್ಯ್ಯಾ ದ್ವಿಗರತಿ ದೇಶವಿರತಿ ಮೊದಲಾಗಿ ಪೌರ್ನ್ನಮಿ ಪರಿಯುಂತಂ ವಿಕಥೆ ದುರ್ಬ್ಭಾವಂಗಳಂ ಪರಿಹರಿಸಿ ಧರ್ಮ್ಮಧ್ಯಾನ ಚರಿತ ಪುರಾಣ ಶ್ರವಣಾದಿ ಶುಭ ಭಾವನೆಗಳಿಂ ಪೊತ್ತ ಕಲೆಉದು | ಆ ಸಪ್ತಮಿಯಲ್ಲು ಯೇಕ ಭುಕ್ತಮಂ ಮಾಡಿ ಗುರುಗಳ ಸಮೀಪಕ್ಕೆ ಬಂದು ನವಮಿಯ ಧ್ಯಾನ ಪರಿಯತಂ ಚತುರ್ವ್ವಿಧಾಹಾರ ನಿವೃತ್ತಿಯೆಂದು ಉಪವಾಸಮಂ ಕೈಕೊಂಡು ಪತ್ರಶಾಕಮಂತೋಱೆದು ಆ ಅಷ್ಟಮಿಯಲ್ಲು ಚೈತ್ಯಾಲಯದಲ್ಲಿ ಮಂಟಪಮಂ ಮೇಲುಕಟ್ಟುಮಂ ಫಲವಳಿಗೆಗಳಿಂದಲಂಕರಿಸಿ ಆ ಮಂಟಪದ ಮಧ್ಯದಲು ಮಂದರಮನಿರಿಸಿ ಆಸ್ಥಾನದೊಳು ಪಂಚಮಂಡಲ ಯಂತ್ರಮಂನು ಧರಿಸಿ | ಮಧ್ಯದೊಳಂ ತ್ರಿಭುವನಾಧಿಪತಿ ಪರಿವೃತ ಅರ್ಹದ್ಬೀಜಮಂ ನಾದ ಬಿಂದು ಕಳಾ ಸಮೇತಮಾಗಿ ಬಂದು | ನಾಲ್ಕು ದಿಕ್ಕಿನೊಳು ನಾಲ್ಕು ನಾಲ್ಕು ಕಣಯಂಗಳೊಳು ಪ್ರತಿಮೆಗಳಂ ಪೂಜೆ ವೆರಸು | ಓಂ ಹ್ರೀಂ ಕ್ಲೀಂ ಶ್ರೀಂ ಐಂ ಅರ್ಹಂ ಏಹಿ ನಮೋರ್ಹತೇ ಸ್ವಾಹಾ || ಆಹ್ವಾನಂ | ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ತಿಷ್ಠ ತಿಷ್ಠಠಠ ನಮೋರ್ಹತೇ ಸ್ವಾಹಾ | ಸ್ಥಾಪಂ | ಓಂ ಹ್ರೀಂ ಶ್ರೀಂ ಕ್ಲೀಂ ಐಂ ರ್ಹಂ ಮಮ ಸನ್ನಿಹಿತಾ ಭವ ಭವ ವಷಟ್‌ ನಮೋರ್ಹತೇ ಸ್ವಾಹಾ | ಸಂನಿಧೀಕರಣಂ || ಯೀ ಮಂತ್ರದಿಂದಾಹ್ವಾನ ಸ್ಥಾಪನ ಸಂನಿಧೀಕರಣ ಪೂಜೆಗಳಂ ಮಾಡಿ ಆಧಿವಾಸನೆಯಂ ನಿರ್ವ್ವರ್ತ್ತಿಸಿ ಪಂಚಾಮೃತಾಕಾಭಿಷೇಕಮಂ ಮಾಡಿ ಪಂಚೋಪಚಾರಮಂತ್ರ ಸಹಿತವಾಗಿ ಸ್ಥಾಪಿಸೂದು | ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ವಂ ಮಂ ಹಂ ಸಂ ತಂ ಪಂ ಪರಿಂ ಪಂ -ಹಂ -ಸಂ -ತಂ -ತಂ -ಪಂ -ಝಂ -ಝಂ ಝ್ವಿಂ ಝ್ವಿಂ ಕ್ಷಿಂ ಕ್ಷಿಂ ದ್ರಾಂ ದ್ರಾಂ ದ್ರೀಂ ದ್ರೀಂ ದ್ರಾವಯ ದ್ರಾವಯ ನಮೋರ್ಹತೇ ಭಗವತೇ ಶ್ರೀಮತೇ ಪವಿತ್ರತರಗಂಧೋಧಕ ಜಲೇನ ಜಿನಮಭಿಷೇಚಯಾಮಿ ಸ್ವಾಹಾ || ಈ ಮಂತ್ರದಿಂ ಗಂಧೋಧಕಂ ಮಾಡಿ ಓಂ ಹ್ರೀಂ ಶ್ರೀಂ ಕ್ಷೀಂ ಐಂ ಅರ್ಹಂ ಸರ್ವ್ವಜ್ಞಾನ ಸರ್ವ್ವಜಗತಾಂ ಶಾಂತಿಂ ಕುರ್ವ್ವಂತು ಸ್ವಾಹಾ || ಈ ಮಂತ್ರದಿಂ ನೋಂಪವರೆಲ್ಲಂ ಗಂಧೋಧಕಂ ತಳೆದುಕೊಂಬುದು ಪರಮೇಶ್ವರ ಬಿಂಬಗಳಂ ಅಷ್ಟಗಂಧಂಗಳಿಂ ಲೇಪನಂಗೆಯ್ದು ಸುಗಂಧ ಪುಷ್ಟ ಮಾಲೆಗಳಿಂರ್ಚ್ಚಸಿ ಮಂತ್ರಂಗಳಿಂದ ಷ್ಟವಿಧಾರ್ಚ್ಛನೆಯಂ ಮಾಡಿ ನಂದೀಶ್ವರ ಸ್ತೋತ್ರ ಮನೋದುತ್ತಲರ್ಚ್ಚನೆಯಂ ಮಾಡುತ್ತ ಮಹಾನುರಾಗದಿಂ ಜಯ ಜಯೋದ್ಘೋಷಣಂ ಮಾಡುತ್ತ ಗೀತ ವಾದ್ಯ ನ್ಯತ್ಯ ಸಮೇತಮಾಗಿ ಮಂದರಮಂ ಮೂಱು ಸೂಳ್ಬಲಗೊಂಡು ಸುವರ್ಣ್ನ ನಿರ್ಮ್ಮಿತ ಕೇತಕಿದಳಂಗಳಿಂದರ್ಗ್ಫ್ಯಮನೆತ್ತಿ ನವರತ್ನ ಕುಸುಮಾಂಜಲಿಯಂ ನಿರ್ವ್ವರ್ತ್ತಿಸಿ ಅನಂತರಂ ನೂಱೆಂಟು ಬಾರಿ ಮೊದಲಾಗಿ ಯಥಾಶಕ್ತಿಯಿಂ ಪಂಚ ನಮಸ್ಕಾರಂಗಳಂ ಜಪಿಯಿಸಿ ಅಷ್ಟಮಿಯಲುಪವಾಸ ಜಾಗರ ಅಧಶ್ಶಯನಂ ಮಾಳ್ಪುದು | ಆ ಪ್ರಥಮ ದಿನದ ಪೆಸರು ನಂದೀಶ್ವರ ಸಂಪತ್ಕರಮೆಂಬುದು ಅಷ್ಟಮಿಯ ಉಪವಾಸದ ಫಲಂ ಹತ್ತು ಲಕ್ಷೆಯು ಹತ್ತು ಸಾವಿರ ಉಪವಾಸದ ಫಲ ಮಕ್ಕುಂ ಯೆರಡನೆಯ ದಿನದೊಳು ಮುಂಪೇಳ್ದ ಕ್ರಮದಿಂದಭಿಷೇಕಾಷ್ಟ ವಿಧಾರ್ಚ್ಚನೆಯಿಂ ಮಾಡಿ ಯೆರಡು ಜಪಂ ಮೊದಲಾಗಿ ಯಥಾಶಕ್ತಿಯಿಂ ಪಂಚ ನಮಸ್ಕಾರಮಂ ಜಪಿಯಿಸಿ ದೇವರಂ ಬಲಗೊಂಡು ಶ್ರುತ ಪೂಜೆ ಗುರುಪೂಜೆಯಂ ಮಾಡಿ ಬಂದು ಚಾತುರ್ವ್ವರ್ನ್ನಕ್ಕಾಹಾರ ದಾನ ಪುರಸ್ಸರವಾಗಿ ಪಾರಣೆಯಂ ಮಾಳ್ಪುದು | ಆ ದಿನದ ಪೆಸರುಂ ಅಷ್ಟಮಹಾ ಪ್ರಾತಿಹಾರ್ಯ್ಯಮೆಂಬುದು | ಆ ಪಾರಣೆಯ ಫಲಂ ಯಿಪ್ಪತ್ತು ಲಕ್ಷೆಯುಂ ಯಿಪ್ಪತ್ತು ಸಾವಿರ ಉಪವಾಸದ ಫಲಮಕ್ಕುಂ | ಮೂಱನೆಯ ದಿನಂ ಮುಂ ಪೇಳ್ದ ಕ್ರಮದಿಂದಷ್ಟಾಭಿಷೇಕಾಷ್ಟ ವಿಧಾರ್ಚ್ಛನೆಯಂ ಮಾಡಿ ಮೂರು ಜಪಂ ಮೊದಲಾಗಿ ಯಥಾಶಕ್ತಿಯಿಂ ಪಂಚನಮಸ್ಕಾರ ಮಂ ಜಪಿಯಿಸಿ ದೇವರಂ ಬಲಗೊಂಡು ಬಂದು ಮೇಲೋಗರವಿಲ್ಲದೆ ಉಪ್ಪಿಲ್ಲದೆ ಬಱಿಯೋಗರಮಂ ಯೇಕಭುಕ್ತಮಂ ಮಾಳ್ಪುದು | ಆ ದಿನದ ಪೆಸರು ತ್ರಿಳೋಕಸಾರಮೆಂಬುದು ಆ ದಿನದ ಫಲಂ ಮೂವತ್ತು ಲಕ್ಕೆಯಂ ಮುವತ್ತು ಸಾವಿರ ಉಪವಾಸದ ಫಲಮಕ್ಕುಂ | ನಾಲ್ಕನೆಯ ದಿನಂ ಮುಂ ಪೇಳ್ದ ಕ್ರಮದಿಂ ಅಭಿಷೇಕಾಷ್ಟ ವಿಧಾರ್ಷ್ಷನೆಯಂ ಮಾಡಿ ನಾಲ್ಕು ಜಪಂ ಮೊದಲಾಗಿ ಯಥಾ ಶಕ್ತಿಯಿಂ ಪಂಚನಮಸ್ಕಾರಮಂ ಜಪಿಯಿಸಿ ದೇವರಂ ಬಲಗೊಂಡು ಶ್ರುತಗುರು ಪೂಜೆಯಂ ಮಾಡಿ ಮನೆಗೆ ಬಂದು ಯೇಕ ದಿನದಿಂದೇಕ ಭುಕ್ತಮಂ ಮಾಳ್ಪುದಂ ಆ ದಿನದ ಹೆಸರು ಚತುರ್ಮ್ಮು ಖಮೆಂಬುದು | ಆ ದಿನದ ಫಲಂ ನಾಲ್ವತ್ತು ಲಕ್ಷಿಯುಂ ನಾಲ್ವತ್ತು ಸಾವಿರ ಉಪವಾಸದ ಫಲಮಕ್ಕುಂ | ಆಯ್ದನೆಯ ದಿನದೊಳು ಮುಂ ಪೇಳ್ದ ಕ್ರಮದಿಂದಭಿಷೇಕಾಷ್ಟ ವಿಧಾರ್ಚ್ಛನೆಯಂ ಮಾಡಿ ಆಯ್ದು ಜಪಂ ಮೊದಲಾಗಿ ಯಥಾ ಶಕ್ತಿಯಿಂ ಪಂಚ ನಮಸ್ಕಾರಮಂ ಜಪಿಯಿಸಿ ದೇವರಂ ಬಲಗೊಂಡು ಬಂದು ಮೂಱನೆಯ ಜಾವದಿಂ ಮೇಲೆ ಸಂಪೂರ್ನ್ನಮಾಗಿ ಯೇಕ ಭುಕ್ತಮಂ ಮಾಳ್ಪುದು | ಆ ದಿನದ ಪೆಸರು ಪಂಚ ಕಲ್ಯಾಣಮೆಂಬುದು | ಆ ದಿನದ ಫಲಂ ಆಯ್ವತ್ತು ಲಕ್ಷಿಯುಂ ಆಯ್ವತ್ತು ಸಾವಿರ ಉಪವಾಸದ ಫಲಮಕ್ಕುಂ | ಆಱನೆಯ ದಿನದೊಳು ಮುಂಪೇಳ್ದ ಕ್ರಮದಿಂದಭಿಷೇಕಾಷ್ಟವಿದಾರ್ಚ್ಛನೆಯಂ ಮಾಳ್ಪುದು | ಆಱು ಜಪಂ ಮೊದಲಾಗಿ ಯಥಾಶಕ್ತಿಯಿಂ ಪಂಚನಮಸ್ಕಾರಮಂ ಜಪಿಯಿಸಿ ದೇವರಂ ಬಲಗೊಂಡು ಬಂದುಪ್ಪಿಲ್ಲದೆ ಹಸಿಯ ಹುಣಿಸೆಯ ಹುಳಿಯಲೋಗರಮಂ ಕಲಸಿ ಯೇಕ ಭುಕ್ತಮಂ ಮಾಳ್ಪುದು | ಆ ದಿನದ ಪೆಸರು ಸ್ವರ್ಗ ಸೋಪಾನಮೆಂಬುದು | ಆ ದಿನದ ಫಲಂ ಅಱವತ್ತು ಲಕ್ಕೆಯುಂ ಅಱುವತ್ತು, ಸಾವಿರ ಉಪವಾಸದ ಫಲಮಕ್ಕುಂ | ಯೇಳನೆಯ ದಿನದೊಳು ಮುಂಪೇಳ್ದ ಕ್ರಮದಿಂದಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿಯೇಳು ಜಪಂ ಮೊದಲಾಗಿ ಯಥಾಶಕ್ತಿಯಿಂ ಪಂಚ ನಮಸ್ಕಾರಮಂ ಜಪಿಯಿಸಿ ದೇವರಂ ಬಲಗೊಂಡು ಬಂದು ಬಱೆಯೋಗರಮಂ ಮೂಱುಮೇಲೋಗರಂ ಬೆರಸು ಯೇಕ ಭುಕ್ತಮಂ ಮಾಳ್ಪುದು | ಚೈತ್ಯಾಲಯಕ್ಕೆ ಬಂದು ಪಾಡ್ಯದ ಮಧ್ಯಾಹ್ನ ಪರಿಯಂತಂ ಚತುರ್ವ್ವಿಧಾಹಾರ ನಿವೃತ್ತಿಯೆಂದುಪವಾಸಮಂ ಕೈಕೊಂಬುದಂ ಆ ದಿನದ ಪೆಸರು ಸಪ್ತ ಪರಮ ಸ್ಥಾನಮೆ ಸಂಪತ್ಕರಮೆಂಬುದು | ಆ ದಿನದ ಫಲಂ ಯೆಪ್ಪುತ್ತು ಲಕ್ಕೆಯುಂ ಯೆಪ್ಪತ್ತು ಸಾವಿರದು ಪವಾಸದ ಫಲಮಕ್ಕುಂ | ಎಂಟನೆಯ ದಿನದೊಳು ಮುಂ ಪೇಳ್ದ ಕ್ರಮದಿಂದಭಿಷೇಕಾಷ್ಟ ವಿದಾರ್ಚ್ಛನೆಯಂ ಮಾಡಿ | ಯೆಂಟು ಜಪಂ ಮೊದಲಾಗಿ ಯಥಾ ಶಕ್ತಿಯಿಂ ಪಂಚ ನಮಸ್ಕಾರಮಂ ಜಪಿಯಿಸಿ ದೇವರಂ ಬಲಗೊಂಡು ರಾತ್ರಿಯೊಳು ನಾಲ್ಕಭಿಷೇಕ ನಾಲ್ಕು ಪೂಜೆ ಪೂರ್ವ್ವವಾಗಿ ಧರ್ಮ್ಮನಂದದಿಂ ಜಾಗರಮಂ ಮಾಳ್ಪುದು ಕಥೆಯಂ ಕೇಳುಉದು ಶ್ರುತಪೂಜೆಯಂ ಗುರು ಪೂಜೆಯಂ ಮಾಳ್ಪುದು ಆ ದಿನದ ಪೆಸರು ಅಷ್ಟ ಮಹಾವಿಭೂತಿಯೆಂಬುದು | ಆ ದಿನದ ಫಲಂ ಮೂಱು ಕೋಟಿಯು ಯೆಂಭತ್ತು ಲಕ್ಕೆ ಉಪವಾಸದ ಫಲಮಕ್ಕುಂ | ವೊಂಭತ್ತನೆಯ ದಿನದೊಳು ಮುಂ ಪೇಳ್ವ ಕ್ರಮದಿಂದಭಿಷೇಕಾಷ್ಟ ವಿದಾರ್ಚ್ಛನೆಯಂ ಮಾಡಿ ಯಥಾಶಕ್ತಿಯಿಂ ಪಂಚ ನಮಸ್ಕಾರಮಂ ಜಪಿಯಿಸಿ ಕಥೆಯಂ ಕೇಳ್ದು ಋಷಿಯರ್ಗ್ಗೆ ಪಂಚ ಭಕ್ಷ ಸಹಿತ ಆಹಾರದಾನಮಂ ಮಾಡಿ ಚಾತುರ್ವ್ವರ್ನಮಂ ಸನ್ಮಾನದಾನಂಗಳಿಂ ಪೂಜಿಸಿ ಬಳಿಕ್ಕವರಂ ಕೂಡಿಕೊಂಡು ತಾನು ಪಾರಣೆಯಂ ಮಾಳ್ಪುದು | ಈ ಕ್ರಮದಿಂದಾಷಾಢ ಮಾಸದೊಳು | ಕಾರ್ತ್ತಿಕಮಾಸದೊಳಂ | ಫಾಲ್ಗುಣ ಮಾಸದೊಳಂ ನಂದೀಶ್ವರದ ನೋಂಪಿಯಂ ನೋಂಪುದೀ ನೋಂಪಿಯನನಂತವೀರ್ಯ್ಯರಪರಾಜಿತರು ನೋಂತು ಚಕ್ರವರ್ತ್ತಿಯ ಪದವಿಯಂ ಪಡೆದರು | ವಿಜಯ ಕುಮಾರಂ ನೋಂತು ಚಕ್ರವರ್ತ್ತಿಗೆ ಸೇನಾಪತಿ ಪದವಿಯಂ ಪಡೆದು ಜರಾಸಂಧಂ ನೋಂತು ಚಕ್ರವರ್ತ್ತಿ ಪದವಿಯ ಪಡದನು ಮೇಘರಥಂ ನೋಂತು ಅವಧಿ ಜ್ಞಾನಮಂ ಪಡದನು ಸ್ತ್ರೀಯರು ಹೇಸಿ ತಂನ ಪೊಲ್ಲದಿರ್ದ್ದಡೆ ಪ್ರದ್ಯುಮ್ನ ಕುಮಾರಂ ನೋಂತು ಕಾಮದೇವನಾದನು | ರುಗ್ಮಿಣಿ ನೋಂತು ವಾಸುದೇವಂಗೆ ಮದುವೆಯಾದಳು | ಅನೇಕ ಸ್ತ್ರೀಯರು ನೋಂತು ಯಿಂದ್ರಾದಿಗಳ್ಗೆ ದೇವಿಯರಾದರೆಂದು ಛರಣ ಪರಮೇಷ್ಠಿಗಳು ಬೆಸಸೆ ಹರಿಷೇಣ ಮಹಾರಾಜನುಮಾತನ ಮಹಾದೇವಿಯರು ಕೇಳ್ದು ಸಂತುಷ್ಟ ಹೃದಯರಾಗಿಯಾ ನೋಂಪಿಯಂ ಕೈಕೊಂಡು ಗುರುಗಳು ಬೀಳ್ಕೊಂಡು ಮಹಾ ವಿಭವದಿಂ ಪುರ ಮನರಮನೆಯಂ ಪೊಕ್ಕು ಸುಖದಿನಿರುತ್ತಂ ಯಥಾಕ್ರಮದಿಂದಾ ನೋಂಪಿಯಂ ನೋಂತಿ ಉದ್ಯಾಪನೆಯಂ ಮಾಡಿ ಸ್ವರ್ಗ್ಗ ಲೋಕಮನೈದಿದರು ಯೆಲ್ಲಾ ಸ್ತ್ರೀಪುರುಷರುಗಳು ನೋಂತು ತಂತಮ್ಮ ಇಷ್ಟಾರ್ತ್ಥ ಫಲಂಗಳಂ ಪಡದರು ಯೀ ನೋಂಪಿಯ ಮೂಱುವರುಷಂ ನೋಂತವರು ಸ್ವರ್ಗ್ಗಮಂ ಪಡವರು ಆಯ್ದ ವರುಷ ನೋಂತವರು ಯೇಳನೆಯ ಭವದೊಳು ಮೋಕ್ಷಮಂ ಪಡವರು ಯೇಳು ವರ್ಷ ನೋಂತವರು ಮೂಱನೆಯ ಭವಕ್ಕೆ ಮೋಕ್ಷಮಂ ಪಡೆವರು | ವೊಂಭತ್ತು ವರ್ಷಂ ನೋಂತವರು ಮೂಱು ಭವಕ್ಕೆ ಮೋಕ್ಷಮಂ ಪಡೆವರು || ೦ ||

ಶ್ಲೋಕ || ಇದಂ ಪುಣ್ಯಮಿದಂ ಪೂತಮಿದಂ ಮಂಗಲಮುತ್ತಮಂ
ಇದಮಾತುಷ್ಕಮಧಿಕಂ ಯಥಾ ಸ್ವರ್ಗ್ಗಂ ದಧಾತು ಮೇ ||

ಯೀ ನೋಂಪಿಯುದ್ಯಾಪನೆಯ ಕ್ರಮಂ ಯಿಪ್ಪತ್ತ ನಾಲ್ಕು ಚೈತ್ರಾಲಯಮಂ ಮಾಡಿಸಿ ಧ್ವಜಾರೋಹಣ ಪೂರ್ವ್ವಕಮಾಗಿ ಪ್ರತಿಷ್ಠೆಯಂ ಮಾಡಿಸಿ ಅಮೃತಪಡಿಗೆ ಗ್ರಾಮಂಗಳಂ ಸರ್ವ್ವ ಬಾಧಾ ಪರಿಹಾರಾರ್ತ್ಥಮಾಗಿ ಚತುಃಸೀಮೆಗೆ ಮುಕ್ಕೊಡೆಯ ಕಲ್ಲನಟ್ಟು ಕುಡುಉದು ಯಿಪ್ಪತ್ತನಾಲ್ಕು ಪಶುವಂ ಮುಕ್ಕೊಡೆಯನೊತ್ತಿ ಬಿಡುಉದು | ಅಡ್ಡಣಿಗೆ ಘಂಟೆ ಜಯಘಂಟೆ ಕೈತಾಳ ಪರಿಯಾಣ ಆರತಿ ಧೂಪ ಗುಂಡಿಗೆ ಹೊಳವಳಿಗೆ ನಕ್ಷತ್ರಮಾಲೆ ಮೊದಲಾದ ಪೂಜೋಪಕರಣಗಳು ಕುಡುಉದು | ಮಂಟಪದಲ್ಲಿ ಮಂಧರಮನಿರಿಸಿ ಅಲ್ಲಿ ಚತುರ್ಮ್ಮುಖವಾಗಿ ಪ್ರತುಮೆಗಳಂ ಚತುಸ್ಥಾನದಲ್ಲಿ ಸ್ಥಾಪಿಸಿ ಪಕ್ವಾಂನ ಫಲವಸ್ತುಗಳಂ ಪ್ರತ್ಯೇಕವಾಗಿ ಯಿಪ್ಪತ್ತನಾಲ್ಕು ಪ್ರಕಾರದಲು ಕಟ್ಟುಉದು ಉಪವಾಸ ಅಧಃಶಯನ ಬ್ರಹ್ಮಚರ್ಯ್ಯದಿಂದಾ ರಾತ್ರೆಯಲು ನಾಲ್ಕು ಜಾವಂ ಅಭಿಷೇಕ ಅಷ್ಟವಿಧಾರ್ಚ್ಚನೆಯಂ ಮಾಡು ಜಾಗರಮಂ ಮಾಡುಉದು ಮಹಾ ಪುರಾಣಮಂ ಕೇಳ್ವುದು ಯಿಪ್ಪತ್ತನಾಲ್ಕು ಪುರಾಣಂ ಯಿಪತ್ತ ನಾಲ್ಕು ಗೋಣಿಯನಿತೆ ಪಿಂಛಕಮಂಡಲ ತಟ್ಟು ಕಥೆಯ ಪುಸ್ತಕ ಕವಳಿಗೆ ಠವಣೆ ಕೋಲು ಶ್ರುತ ಪಾವಡೆ ಸಹಿತ ಯಿಪ್ಪತ್ತನಾಲ್ಕು ತಂಡ ಋಷಿಯರ್ಗ್ಗೆ ಕುಡುಉದು ಅನಿತೆಯಜ್ಜಿಯರ್ಗ್ಗೆ ಸೀರೆಯಂ ಮಂಡೆಪಾವಡೆಯಂ ಕುಡುಉದು | ಪಂಡಿತರ್ಗ್ಗಂ ಶ್ರಾವಕರ್ಗ್ಗಂ ಉಡಕೊಡುಉದು | ದೀನಾನಾಥ ದುಸ್ಥಿತರ್ಗ್ಗೆ ಯಥಾ ಶಕ್ತಿಯಿಂ ಕ್ರುಪಾನಿಮಿತ್ತಂ ದಕ್ಷಿಣೆಯಂ ಕುಡುಉದು ಚಾತುರ್ವ್ವರ್ಣಂಗಳಿಹಾರ ದಾನಮಂ ಮಾಳ್ಪುದು ಸುವರ್ನ್ನ ಶಾಸ್ತ್ರೌಷಧ ದಾನಂಗಳಂ ಮಾಳ್ಪುದು | ಕಥೆಯಂ ಪೇಳ್ದ ವರ್ಗ್ಗೆ ದಕ್ಷಿಣೆಯಂ ಕುಡುಉದು ವಸ್ತುವಿಲ್ಲದ ಬಡವರು ಹಿಂದೆ ಹೇಳಿದ ಕ್ರಮದೊಳು ವೊಂದು ಭಗೆಯಂ ಮಾಳ್ಪುದು ಅದಱೆಂದ ಬಡವರು ವಿತ್ತಕ್ಕೆ ತಕ್ಕ ಹಾಂಗೆ ಗೋಷ್ಠಿಯೊಳು ಕೂಡಿ ಕೊಡುಉದು ಯಿದು ಉದ್ಯಾಪನೆಯ ಕ್ರಮಂ | ಪಟ್ಟದರಸಿಯರು ಪ್ರಧಾನವೊಲ್ಲಭೆಯರು ನೋಂಪಡೆ ಮನೆಯೆಲ್ಲಮಂ ಪೂಸಿ ಸಾರಿಸಿ ಕಾರುಣಿ ರಂಗವಾಲಿಯನಿಕ್ಕಿ ಪೀಠದ ಮೇಲೆ ಪೂರ್ನ್ನ ಕುಂಭಮನಿರಿಸಿ ಆ ಕುಂಭದ ಮೇಲೆ ಕಥೆಯ ಪುಸ್ತಕಮನಿರಿಸಿ ಪಳವಳಿಗೆಯಂ ಕಟ್ಟಿ ಅಷ್ಟ ವಿಧಾರ್ಚ್ಚನೆಯಂ ಮಾಡಿ ಸಪ್ತಮಿ ಮೊದಲಾಗಿ ಪೌರ್ನ್ನಮಿ ಪರ್ಯ್ಯಂತ ಹಿಂದೆ ಹೇಳಿದ ಕ್ರಮದಲ್ಲಿ ಮಾಡುಉದು ಕಥೆಯಂ ಕೇಳುಉದು ದಿನಂಪ್ರತಿ ಪಂಚ ನಮಸ್ಕಾರಮಂ ಜಪಿಸೂದು ಯಿದುದ್ಯಾಪನೆಯ ಕ್ರಮಂ || ಈ ನೋಂಪಿಯಂ ಯಥಾಕ್ರಮದಿಂ ನೋಂತವರ್ಗ್ಗಳು ಸಪ್ತ ಪರಮಸ್ಥಾನಂಗಳನೈದುವರು ಯೀ ನೋಂಪಿಯಂ ನೋಂಪಿಸಿ ದವರ್ಗ್ಗಂ ನೋಂತವರ್ಗ್ಗಂ ಪೇಳಿದವರ್ಗ್ಗಂ ಕೇಳಿದವರ್ಗ್ಗಂ ಮಂಗಳ ಮಹಾಶ್ರೀ || ಸಪ್ತಮಿಯಲಿ ಏಕ ಭುಕ್ತ | ಅಷ್ಟಮಿಯಲು ಉಪವಾಸ | ನವಮಿಯ ದಿನಂ ಸಂಪೂರ್ಣ್ನ ಪಾರಣೆ | ದಶಮಿಯ ದಿನಂ ಏನುಯಿಲ್ಲದೆ ಬಱೆಯೋಗರಮಂ ಏಕಭುಕ್ತಮಂ ಮಾಳ್ಪುದು | ಏಕಾದಶಿಯ ದಿನಕೆ ಎಕ ಬಡಿಣದಿಂ ಏಕಭುಕ್ತಮಂ ಮಾಳ್ಪುದು | ದ್ವಾದಶಿಯ ದಿನ ಮೂಱು ಜಾವದಾಗ ಸಂಪೂರ್ನ್ನಮಾಗಿ ಏಕ ಭುಕ್ತಂ ಮಾಳ್ಪುದು | ತ್ರಯೋದಶಿಯ ದಿನಂ ಉಪ್ಪಿಲ್ಲದೆ ಹಸಿಯ ಹುಣಸೆಯ ಹುಳಿಯಲು ವೋಗರಮಂ ಕಲಸಿ ಏಕ ಭುಕ್ತಮಂ ಮಾಳ್ಪುದು ಚತುರ್ದ್ದಸಿಯ ದಿನ ಮೂಱು ಮೇಲೋಗರ ಸಹಿತ ಏಕ ಭುಕ್ತಂ ಮಾಳ್ಪುದು | ಪೌರ್ನ್ನಮಿಯ ದಿನ ಉಪವಾಸ ಮಾಳ್ಪುದು | ಪಾಡ್ಯದಲು ಏಕಭುಕ್ತಮಂ ಮಾಳ್ಪುದು || ಯೀ ಕಥೆಯೊಳು ಪೇಳ್ದ ಕ್ರಮನುನುದಾಸೀನಂ ಮಾಡಲಾಗದು | ಮಂಗಳ ಮಹಾ ಶ್ರೀ ವೀತರಾಗಾಯ ನಮಃ ||