|| ಶ್ರೀ ಚಂದ್ರ ಪ್ರಭಜಿನಾಯ ನಮಃ ||

ಶ್ರೀವರ್ದ್ಧಮಾನಜಿನರಂ
ಗಾವಗಮೊಲಿದೆರಗಿ ಭಕ್ತಿಯಿಂ ನವನಿಧಿ ಭಂ
ಡಾರದ ನೋಂಪಿಯ ಕಥೆಯಂ
ಭೂವಳಯಕ್ಕರಿಯೆಪೇಳ್ವೆ ನತಿಶಯದಿಂದಂ ||

ಅದೆಂತೆಂದೊಡೆ ಜಂಬೂ ದ್ವೀಪದ ಭರತ ಕ್ಷೇತ್ರದ ಸುಗಂಧಿ ವಿಷಯದ ರತ್ನಸಂಚಯಪುರಮನಾಳ್ವ ದೇವಪಾಳನೆಂಬರಸನಾತನ ಪಟ್ಟದರಸಿ ಲಕ್ಷ್ಮೀಮತಿ ಮಹಾದೇವಿಯಂಬಳಂತವರೀರ್ವ್ವರುಂ ಸುಖಸಂಕಥಾ ವಿನೋದದಿಂ ರಾಜ್ಯಪಾಳನ ಮಾದುತ್ತಿಮಿರಲೊಂದುದಿನಂ ಸಕಲಾಗಮ ಸಂಪನ್ನರಪ್ಪ ಶ್ರುತಸಾಗರ ಭಾಟ್ಟಾರಕರೆನಿಪ ದಿವ್ಯ ತಪೋಧನರು ಬಂದು ಆ ಪುರದ ಪೊರವಳಲ ಮನೋಹರಮೆಂಬ ಉದ್ಯಾನ ವನದೊಳಿರ್ದುದಂ ವನಪಾಳಕನಿಂದರಿದು ಸಮಸ್ತ ಪರಿಜನ ಪುರಜನಂ ಬೆರಸು ಪಾದಮಾರ್ಗದಿಂ ಪೋಗಿ ತ್ರಿಃಪ್ರದಕ್ಷಿಣಂಗೈದು ಪಲವರ್ಚನೆಗಳಿಂದರ್ಚಿಸಿ ಗುರುಭಕ್ತಿ ಪೂರ್ವ್ವಕಂ ವಂದಿಸಿ ಮುಂದೆ ಕುಳಿರ್ದು ನಿರ್ಮ್ಮಲಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ತದನಂತರಂ ಲಕ್ಷ್ಮೀಮತಿ ಮಹಾದೇವಿ ಕರಕಮಳಂಗಳಂ ಮುಗಿದು ಸ್ವಾಮಿ ಎನಗೆ ಅನಂತಸುಕ್ಕೆ ಕಾರಣಮಪ್ಪು ದಾವುದಾನೊಂದು ನೋಂಪಿಯಂ ಬೆಸಸಿಮೆನೆ ಅವರು ನವನಿಧಿ ಭಂಡಾರದ ನೋಂಪಿಯ ನಿಂತೆಂದು ಪೇಳ್ದರು ಆಷಾಢ ನಂದೀಶ್ವರದಷ್ಟಮಿಯಾದಿಯಾಗಿ ಕಾರ್ತಿಕ ನಂದೀಶ್ವರದ ಪೂರ್ಣಿಮಾ ಪಯ್ಯಂತರಂ ದಿನಂಪ್ರತಿ ಸುಚಿರ್ಭೂತರಾಗಿ ಚೈತ್ಯಾಲಯಕ್ಕೆ ಬಂದು ದೇವರಮುಂದೆ ಆರ್ಹಂತರು ಸಿದ್ಧರು ಆಚಾಯ್ಯರು ಉಪಾದ್ಯಾಯರು ಸರ್ವ್ವ ಸಾದುಗಳು ಜಿನಧರ್ಮ್ಮ ಜಿನಗಮ ಜಿನಚೈತ್ಯ ಜಿನ ಚೈತ್ಯಾಲಯಮೆಂಬೀ ನಾಮಂಗಳಂ ಪೆಸರ್ಗ್ಗೊಳ್ಳುತ್ತಂ ಒಂಬತ್ತು ಹಿಡಿಯಕ್ಕಿಯಂ ಕ್ರಮದಿ ನರ್ಚಿಸುವರು ವಂದಿಸುವುದು ಅಷ್ಟಮಿ ಚತುರ್ದಶಿಗಳೊಳು ಶುಚಿರ್ಭೂತರಾಗಿ ಚೈತ್ಯಾಲಯಕ್ಕೆ ಬಂದು ಅಭಿಷೇಕಾಷ್ಟ ವಿಧಾರ್ಚನೆಯಂ ಮಾಡಿ ನಿತ್ಯದಂತೆ ಪುಂಜವನಿಕ್ಕಿ ಏಕ ಭುಕ್ತಮಂ ಮಾಳ್ಪುದು ಕಡೆಯೊಳುಜ್ಜವಣೆಯ ಕ್ರಮಮೆಂತೆಂದೊಡ ದೇವರ್ಗೆ ಮಹಾಭೀಷೇಕ ಪೂಜೆಯಂ ಸವಿಸ್ತರಂ ಮಾಡಿಸಿ ಮಂದರದ ಮುಂದೆ ಸುಲಕ್ಷಣಾಕ್ಷತ ಪುಂಜಗಳನೊಂಭತ್ತೊಂಭತ್ತು ಮಾನಪರಿಮಾಣದಿಂದೊಂಭತ್ತಂ ಮಾಡಿ ಪ್ರತ್ಯೇಕಂ ಒಂಭತ್ತು ಪ್ರಸೂನಮಾಲೆ ಒಂಭತ್ತಡಕೆ ಒಂಭತ್ತೆಲೆ ಒಂಭತ್ತು ಫಲ ಒಂಭತ್ತು ಹೊರಣಗಡುಬ ನರ್ಚಿಸೂದು ವಂಭತ್ತು ನಕ್ಷತ್ರಮಾಲೆಯನರ್ಚಿಸುವದು ತದನಂತರಂ ಕಥೆಯಂ ಕೇಳ್ದು ಕಥಕನಂ ಪೂಜಿಸುವುದು ನೋನಿಸಿದಜ್ಜಿಯರ್ಗೆ ಉಡಕೊಡುಉದು ಚಾತುರ್ವ್ವರ್ನ್ನಕ್ಕೆ ಅಹಾರಧಾನಮಂ ಮಾಳ್ಪುದು || ಯಿಂತಿದುಜ್ಜವಣೆಯ ಕ್ರಮಂ ಮತ್ತಂ ಬಡವರೊಡೆಯರೆನ್ನದೆ ಯಥಾಶಕ್ತಿಯಿಂ ಭಕ್ತಿಯಿಂ ನೋಂಪುದೆನೆ ಕೇಳ್ದು ಲಕ್ಷ್ಮೀಮತಿ ಮಹಾದೇವಿ ಸಂತುಷ್ಟ ಚಿತ್ತೆಯಾಗಿ ನೋಂಪಿಯಂ ಕೈಕೊಂಡು ಯಥಾ ಕ್ರಮದಿಂ ನೋಂತುಜ್ಜೈಸಿ ತತ್ಪ್ರತ್ಯಧಿವಾಸಿಗಳಪ್ಪರಸುಗಳೊಳೆಲ್ಲ ಕಪ್ಪಮಂ ಕೈಕೊಳುತ್ತಂ ಮಹಾ ಮಂಡಲೇಶ್ವರ ಪದವಿಯೋಳ್ಕೂಡಿ ದೇವಕುಮಾರ ಸನ್ನಿಭರಪ್ಪ ಪಲಂಬರ್‌ ಮಕ್ಕಳಂ ಪಡೆದು ಸಮಸ್ತ ಭೋಗೋಪಭೋಗಂಗಳೊಳೆಲ್ಲಂ ಅನುಭವಿಸುತ್ತಂ ರಾಜ್ಯಂಗೆಯ್ಯುತ್ತಮಿರೆ ಮತ್ತುಮಾ ಅವಸರದದೊಳೋರ್ವ್ವ ಕಡುಬಡವನಪ್ಪ ಪ್ರಿಯದತ್ತನೆಂಬ ಪರದನ ಪೆಂಡತಿ ಬಂಧುಮತಿಯಂಬಳು ಪಲವುಮಕ್ಕಳತಾಯಿ ತಾನು ಯೀನೋಂಪಿಯಂ ಭಕ್ತಿಗೆ ತಕ್ಕಂತೆ ನೋಂಪಿನೆಂದು ಲಕ್ಷ್ಮೀಮತಿ ಮಹಾದೇವಿಯೊಡನೆ ಕೈಕೊಂಡು ಯಥಾಶಕ್ತಿಯಿಂ ನೋಂತುಜ್ಜವಣೆಯಂ ಮಾಡಿ ನೋಂಪಿಯೊಳದ ಪುಣ್ಯ ಪ್ರಭಾವದಿಂ ತದ್ಭವದೊಳೆ ದರಿದ್ರ ಬಾವಮೆಲ್ಲಮಂ ಪತ್ತುವಿಟ್ಟು ಧನಕನಕ ಸಮೃದ್ಧರಾಗಿ ಮತ್ತಂ ಪಲವು ನಿಧಿ ನಿಧಾನಂಗಳಂ ಪಡೆದು ರಾಜಶ್ರೇಷ್ಥಿ ಪದವಿಯಂ ಕೈಕೊಂಡು ನೋಂಪಿಯೊಳದ ಫಲದ ಮಹಿಮೆಯಂ ಪ್ರಭಾವಿಸುತ್ತಂ ನಾನಾ ಜೀರ್ಣ್ನ ಚೈತ್ಯಾಲಯಂಗಳಂ ಜೀರ್ಣ್ನೋದ್ಧರಣಂಗಳಂ ಮಾಡುತ್ತಂ ದೀನನಾಥ ಜನಂಗಳಂ ದಾನ ಸನ್ಮಾನಾದಿಗಳಂ ತಣಿಸುತ್ತ ಮಹಾದಾನ ಪೂಜೆ ಶೀಲೋಪವಾಸದಿಗಳೊಳ್ಕೊಡಿದ ಶ್ರಾವಕ ಧರ್ಮ್ಮದೊಳೆ ನೆಗಳುತ್ತಂ ಸಮಸ್ತ ಭೋಗೋಪ ಭೋಗ ವಿಭವ ಸಂಸಾರ ಸುಖಮಂ ತಣಿಯುಂಡು ಪರಂಪರೆಯಿಂ ದೇವಪಾಳ ಮಂಡಲೇಶ್ವರನುಂ ಲಕ್ಷ್ಮೀಮತಿ ಮಹಾದೇವಿಯಂ ಪ್ರಿಯದತ್ತ ರಾಜಶ್ರೇಷ್ಠಿಯುಂ ಬಂಧು ಮತಿಯುಂ ಮೊದಲಾದ ತಮ್ಮಿನಿಬರುಂ ಕರ್ಮಕ್ಷಯಾನಂತರಂ ಮೋಕ್ಷ ಲಕ್ಷ್ಮಿಯೋಳ್ಕೂಡಿದರು ಇಂತೀ ನವನಿಧಿ ಭಂಡಾರದ ನೋಂಪಿಯಂ ನೋತವರ್ಗಂ ನೋನಿಸದವರ್ಗಂ ಕೇಳ್ದವರ್ಗಂ ಕ್ರಮದಿಂದೊಡಂಬಟ್ಟವರ್ಗಂ ಪೇಳ್ದುವರ್ಗಂ ಮಂಗಳ ಮಹಾ ಶ್ರೀ ಶ್ರೀ