|| ಶ್ರೀ ವೀತರಾಗಾಯ ನಮಃ ||

ಶ್ರೀಮದಮರೇಂದ್ರವಂದ್ಯಂ
ಕಾಮಧ್ವಂಸಿ ಮುಕ್ತಿಲಕ್ಷ್ಮೀಕಾಂತಾಂತಂ
ಕಾಮಿತ ಫಲಮಂ ಭವ್ಯರ
ಸಮೂಹಕೊಲಿದೀಗೆ ಪಾವನಂ ಪಾರ್ಶ್ವಜಿನಂ || ೧ ||

ಧರೆಯೊಳು ನಾಗರ ನೋಂಪಿಯ
ತೆಱನಱೆಯದೆ ನೋಂಪವರ್ಗ್ಗೆ ಗುರುತಾವೆಂದೀ
ವರ ಕಥೆಯಂ ಭವ್ಯಾವಳಿ
ಗಿರಿದಾಂ ವಿರಚಿಸುವೆನೆಸೆವ ಪೊಸ ಕಂನಡದಿಂ || ೨ ||

ಯಿಲಿಯಂ ಕಪ್ಪೆಯನೆಳೆದುಂ
ದುಳಿದಟ್ಟಿ ತಗುಳ್ದುತಿಂಬ ಪುತ್ತಿನ ಪುಳುವಂ
ಸಲೆನಾಗರರೆಂದು ಪೂಜಿಪ
ರೊಲವಿಂ ಜನಮರುಳು ಜಾತ್ರೆ ಮರುಳೆಂಭಿನವೋಲ್
‌ || ||

ಮುಂಗುರಿ ನವಿಲುಂ ಪರ್ದ್ದುಂ
ಬಂಗಿಯ ಸಾರಂಗವೆಂಬಿಲ್ಲಂ ದೈವಂ
ಪಿಂಗದೆ ನಾಗರ ಸಾಮ
ರ್ಥ್ಯಂಗಳನಂಡಲೆದು ಕಿಡಿಪ ಕಾರಣದಿಂದಂ || ೪ ||

ನಾಗರ ಮನೆಯಂ ಪೊಗುವಡೆ
ಬೇಗಂ ಕಂನಡಿಯೊಳು ತಳಿರ್ಗ್ಗಳಸದೊಳುಂ
ರಾಗದಿ ನಿಲಿಸದೆ ಕೊರಳಿಂ
ಗೋಗಡಿಸದೆಯುರುಳನಿಕ್ಕಿ ಕಳೆವರ್ಮ್ಮನೆಯಿಂ || ೫ ||

ತಂಮಯ ದೈವದ ಪಲ್ಲಂ
ಗಂಮನೆ ಕಳೆದಾಡಿಪರ್ಗ್ಗೆ ಮುನಿಯದೆ ಹವಿಯಂ
ತಂಮರ್ತ್ಥಿಯಿಂದಮಿಕ್ಕುವ
ತಂಮಂ ತಿಂಬುದಕೆ ಲೇಸು ಮಾಡಿದೆಯೆಂಬರ್ || ೬ ||

ಜಲ ಗಂಧಾಕ್ಷತೆ ಪುಷ್ಪಂ
ಚರುದೀಪಾರ್ಘ್ಯಮನದಕ್ಕೆ ಕುಡುವರು ಮತ್ತೆಂ
ಜಲು ನೀರಂ ತಳಿವರು ಬ
ಚ್ಚಲೊಳಿರ್ದ್ದು ಪೇಸಿ ಪೋಕುಮೆಂದಾ ನಾಗಂ || ೭ ||

ಕ್ರೂರತೆಯ ಮುಳಿದು ದೈವಂ
ಧಾರುಣಿಯೊಳಿಗಪ್ಪಡಕ್ಕಟಾ ಸಿಡಿಲು ತಾಂ
ಭೇರುಂಡ ಪೂತಿಯು ರಾಕ್ಷಸ
ನೋರಂತಿರೆ ದೈವ ಮಾಗಲ್ಲದೆ ತೀರದಿಂ || ೮ ||

ಪಾವುಂ ಪುತ್ತುಮನಱೆಯದೆ
ದೇವತೆಗಳಿವೆಂದುಮಱೆಯದೆ ಪೂಜಿಪರುಂ ಪ
ದ್ಮಾವತಿಯುಂ ಧರಣೇಂದ್ರನು
ಮಾವಗಮೀ ಪಾರ್ಶ್ವನಾಥರ ಯಕ್ಷರವರಲ್ತೆ || ೯ ||

|| ಮತ್ತಮಾ ಧರಣೇಂದ್ರನ ಕಥೆಯೆಂತೆಂದೊಡೆ

 

ನಾಗರ ಪಂಚಮಿಯ ನೋಂಪಿಯ ಕಥೆ

 

ಧರಣೇಂದ್ರನ ಕಥೆಯೆಂತೆಂದೊಡೆ ಜಂಬೂದ್ವೀಪದ ಭರತ ಕ್ಷೇತ್ರದಾರ್ಯ್ಯಾ ಖಂಡದ ಮಗಧ ದೇಶದರಸಂ ಶ್ರೇಣಿಕ ಮಹಾಮಂಡಲೇಶ್ವರನಾತನ ಪಟ್ಟಮಹಾದೇವಿ ಸಕಲ ಗುಣ ಸಂಪಂನೆ ಚೇಳಿನಿಯೆಂಬಳಂತವರಿರ್ವ್ವರುಂ | ಸುಖ ಸಂಕಥಾ ವಿನೋದದಿಂ ರಾಜ್ಯಶ್ರೀ ಯನನುಭವಿಸುತ್ತಿರಲೊಂದು ದಿವಸಂ | ಋಷಿ ನಿವೇದಕಂ ಪರಿತಂದು ಅರಸಂಗಿಂತೆಂದು ಬಿಂನಪಂಗೆಯ್ದನಮರನಾಥಂ ಬೆರಸು ವಿಪುಲಗಿರಿಯೊಳು ವರಗುಣ ನಿಧಿ ಬಂದು ನೆಲಸಿದ ವೀರ ಜಿನನೆಂದು ಭಿಂನಪಂಗೆಯ್ಯೆ ಹರ್ಷೋತ್ಕರುಷ ಚಿತ್ತನಾಗಿ | ಚೇಳಿನಿ ಮಹಾದೇವಿ ಸಹಿತಂ | ಶ್ರೇಣಿಕ ಮಹಾರಾಜನಾ ದೆಶೆಗೇಳಡಿಯಂ ನಡದು ಸಾಷ್ಟಾಂಗ ಪ್ರಣತನಾಗಿ ಒಸಗೆದಂದಂಗಂಗ ಚಿತ್ತಮನಿತ್ತು ಆನಂದ ಭೇರಿಯಂ ಪೊಯಿಸಿ | ಪರಿಜನ ಪುರಜನಂ ಬೆರಸು | ಪಾದಮಾರ್ಗ್ಗದಿಂ ಪೋಗಿ ಸಮವಸರಣಮಂ ಪೊಕ್ಕು ಗಂಧಕುಟಿಯಂ ತ್ರಿಃ ಪ್ರದಕ್ಷಿಣಂಗೆಯ್ದು | ಸಾಷ್ಟಾಂಗವೆೞಗಿ ಪೊಡವಟ್ಟು ಪರಮೇಶ್ವರಂಗಭಿಮುಖನಾಗಿ ನಿಂದು | ಅನೇಕ ಸ್ತುತಿ ಶತ ಸಹಸ್ರಂಗಳಿಂ | ಸ್ತುತಿಯಿಸಿ | ಅನೇಕಾರ್ಚ್ಛನೆಗಳಿಂದರ್ಚ್ಚಿಸಿ | ತದನಂತರಂ ಗಣಧರ ದೇವಾದಿ ಮುನಿಸಮುದಾಯಮಂ ಗುರುಪರಿವಿಡಿಯಿಂ ಪಾದಾರ್ಚ್ಚನೆಗೆಯ್ದು ಬಂದಿಸಿ | ಸ್ವಯೋಗ್ಯ ಕೋಷ್ಠದೊಳ್ಕುಳ್ಳಿರ್ದ್ದು ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಂ ಕೇಳ್ದು | ತದನಂತರಂ ಚೇಳಿನಿ ಮಹಾದೇವಿ ಭಕ್ತಿಯಿಂ | ಕರಕಮಳ ಮುಕುಳಿತೆಯಾಗಿ ಗೌತಮ ಸ್ವಾಮಿಗಳೆ | ಯೆನಗೆ ಬಂಧು ಜನ ಸಮೃದ್ಧಿಯಿಂ ಪುಂಣ್ಯಸಮೃದ್ಧಿ ಯುಮಪ್ಪುದಾವುದಾನುಮೊಂದು ನೋಂಪಿಯಂ ಬೆಸಸಿಮೆನೆಯವರಿಂತೆಂದು ಪೇಳ್ದರು ಕಮಠೋಪಸರ್ಗ್ಗಮಂ ನಿವಾರಿಸಿದ ಧರಣೇಂದ್ರ ಪದ್ಮಾವತಿಯುಮಂ ಪಾರ್ಶ್ವತೀರ್ತ್ಥಕರುಮಂ ಗರುಡ ಪಂಚಮಿಯೊಳು ನೋಂಪುದೆನಲಾ ನೋಂಪಿಯ ವಿಧಾನಮೆಂತೆನೆ | ಶ್ರಾವಣ ಮಾಸದ ಶುದ್ಧ ಪಂಚಮಿಯೊಳು ಶುಚಿರ್ಭ್ಭೂತರಾಗಿ ಅಭಿಷೇಕಾಷ್ಟವಿಧಾರ್ಚ್ಚನೆಯಂ ಮಾಳ್ಪ ದ್ರವ್ಯ ಸಹಿತಂ ಚೈತ್ಯಾಲಯಕ್ಕೆ ಬಂದು ಧರಣೇಂದ್ರ ಪದ್ಮಾವತಿ ಸಹಿತಂ ಪಾರಿಶ್ವತೀರ್ಥಕರಿಗೆ ಅಭಿಷೇಕಾಷ್ಟವಿಧಾರ್ಚನೆಯಂ ಮಾಡಿ ಅರಳು ಕಡಲೆ ಮುಳ್ಳು ಸೌತೆಯ ಕಾಯಿ ಮುಷ್ಟಿಗೆ ಹಾಲು ತುಪ್ಪ ಬೆಲ್ಲವೆರಸಿ | ಬಾಯಿನಮಂ ಕೊಡುವುದು | ಮುಷ್ಟಿಗೆ ಹಾಲು ತುಪ್ಪ ಬೆಲ್ಲವೆರಸಿ ಅಷ್ಟವಿಧಾರ್ಚ್ಚನೆಯಂ ಮಾಡಿ | ಸಮ್ಯಗ್‌ದೃಷ್ಟಿಗಳಪ್ಪ ಅಯ್ವರು ಸೊವಾಸಿನಿಯರ್ಗ್ಗೆ ಗಂಧಾಕ್ಷತೆತಾಂಬೂಲಮಂಕೊಟ್ಟು | ಅರಳು ನನೆಗಡಲೆ ಸೌತೆಯ ಕಾಯಿ ಮುಷ್ಟಿಗೆ ಹಾಲುತುಪ್ಪ ಬೆಲ್ಲವೆಂಬಿನಿತಂ ಬಾಯಿನಮಂ ಕೊಡುವುದು | ಬಳಿಕ್ಕ ತಾನೇಭಕ್ತಮಂ ಮಾಳ್ಪುದು ಮತ್ತಂ ಮೞುದಿನ | ಸೀಯಳ ಷಷ್ಟಿಯೊಳು | ಹಚ್ಚಂಬಲಿಯನಟ್ಟು ಆ ಅಂಬಲಿಯಂ ಮುಳ್ಳು ಸೌತೆಯ ಕಾಯಿವೆರಸಿ ಚೈತ್ಯಾಲಯಕ್ಕೆ ಬಂದು ನೇಮಿ ತೀರ್ತ್ತೇಶ್ವರಂಗಳಂ ಜಕ್ಕಳೆಗಂ ಅಭಿಷೇಕಾಷ್ಟ ವಿಧಾರ್ಚ್ಛನೆಯಂ ಮಾಡಿ | ಆ ಅಂಬಲಿಯಂ ಸೌತೆಯ ಕಾಯಂ ಎಕ್ಕೆ ಎಲೆಯೊಳು ಅಯ್ವರು ಸೊವಾಸಿನಿಯರ್ಗ್ಗೆ ಬಾಯಿನಮಂ ಕೊಟ್ಟು | ಮನೆಗೆ ಪೋಗಿ ಆ ಅಂಬಲಿಯಂ ಸೌತೆಯ ಕಾಯಿವೆರಸಿಯೇಕ ಭುಕ್ತಮಂ ಮಾಳ್ಪುದು | ಯಿದು ಶೀಯಳ ಷಷ್ಟಿಯ ವಿಧಾನಂ | ಯೀ ನೋಂಪಿಯಂ ಮುಂನ ನೋಂತರಾನೆ | ಯೀ ಜಂಬೂ ದ್ವೀಪದ ಭರತ ಕ್ಷೇತ್ರದ ವಿಜಯಾರ್ದ್ಧ ಪರ್ವ್ವತದ ದಕ್ಷಿಣ ಶ್ರೇಣಿಯ ರಥನೂಪುರ ಚಕ್ರವಾಳಪುರಮನಾಳ್ವಂ | ಗರುಡ ವಿದ್ಯಾಧರನೆಂಬನೊರ್ವ್ವಂ | ಮೊಂದು ದಿವಸಮಕೃತ್ರಿಮದ ಚೈತ್ಯಾಲಯದ ವಂದನೆಯಂ ಮಾಡಿ ಬಪ್ಪಲಿಯಾತನ ಶತ್ರು ಗಗನ ವಿದ್ಯಾಚ್ಛೇದನಂಗೆಯ್ಯೆ ಆ ವಿದ್ಯಾಧರ ಮಾನ ಸಹಿತ ಸಮಾಧಿಗುಪ್ತ ಮುನಿಗಳ ಪಾದೋಪಾಂತದೊಳು | ಬಿರ್ದ್ದನಂ ಮುನೀಶ್ವರಂ ಕಂಡು ಕರುಣದೊಳುಯಿಂತೆಂದು ಬೆಸಸಿದರು | ಧರಣೇಂದ್ರ ಪದ್ಮಾವತಿ ಸಹಿತಂ | ಪಾರ್ಶ್ವನಾಥನ ನೋಂಪಿಯಂ ನೋಂಪುದೆನೆ ನೋಂಪಿಯ ಫಲದಿಂ ನಿಂನ ವಿದ್ಯಗಳೆಲ್ಲಂ ಮುಂನಿನಂತಕ್ಕುಮೆನೆ ನೋಂಪಿಯ ವಿಧಾನಮಂ ಪೇಳೆ ಕೇಳ್ದು ಮತ್ತಮಿಂತೆಂದರು | ಮಾಳವ ದೇಶದ ಚಿಂಚಗಾವೆಯೊಳು ನಾಗನಗೌಡನೆಂಬನಾತನ ಪೆಂಡತಿ | ಕಮಳೆಯೆಂಬಳು | ಅವರ ಮಕ್ಕಳು ಮಹಾಬಳ | ಪರಬಳ | ರಾಮ | ಸೋಮ ಭೀಮನೆಂಬ ಅಯ್ವರಿಂ ಕಿೞೆಯಳು ಚಾರಿತ್ರಮತಿ ಯೆಂಬಳಾಕೆಗೆ ನೆರೆಯೂರ ತಂಬಗಾವೆಯ ಧನದಗೌಡನ ಮಗಂ ಮನೋನಯನ ನೆಂಬಂಗೆ ಚಾರಿತ್ರಮತಿಯಂ ಮದುವೆಯಂ ಮಾಡಲವರ್ಗ್ಗೆ ಯೀಶಾನನೆಂಬ ಮಗಂ ಪುಟ್ಟಿ ಸುಖದಿಂದಿರಲೊಂದು ದಿವಸಂ ಮುನಿಗುಪ್ತರೆಂಬ ಚಾರಣ ಋಷಿಯರು ಬಾವಲಿಯಂ ಬರಲು ಕಂಡು ನವವಿಧ ಪುಂಣ್ಯ ಸಪ್ತಗುಣ ಸಂಪನನಾಗಿ ನಿರಂತರಾಯಮಂ ಮಾಡಿಸಲನಂತರಮವರಕ್ಷಯ ದಾನಮೆಂದು ಪರಸಿ ಕುಳ್ಳಿರ್ಪ್ಪ ಸಮಯ ದೊಳು | ಪೊೞಗೊರ್ವ್ವಂ ಬಂದಿರೆ ಕಂಡು ನೀನಾರೆತ್ತಣಿಂ ಬಂದೆಯೆನಲು ಚಿಂಚಗಾವೆಯ ಜನಗಳೆಲ್ಲಂ ನಿನ್ನನೊಡಗೊಂಡು ಬಾಯೆಂದಡೆ ಬಂದೆನೆನೆಯದೇನು ಕಾರಣಮನೆನೆ ನಿನ್ನ ತವರ್ಮ್ಮನೆಯವರೆಲ್ಲಂ ಪೋದಿರುಳುಮೊಂದಿದರೆನಲು ಕೇಳ್ದು ಕುಳ್ಳಿರೆಂದು ಧೈರ್ಯದಿಂ ಮುನಿಗಳ ಶ್ರೀಪಾದಕ್ಕೆ ವಂದನೆಯಂ ಮಾಡಿ ಕುಳ್ಳಿರ್ದ್ದು ಕೈಗಳಂ ಮುಗಿಯೆ | ಆಕೆಯ ಮನದ ಖೇದಮನರಿದು ಅವಧಿ ಜ್ಞಾನದಿಂ ನೋಡಿಯೆಲೆ ಮಗಳೆ ಸಂಸಾರ ಸ್ವರೂಪಮಿಂತು ಟಕ್ಕು ಭ್ರಾಂತಿ ಬೇಡೆಂದು ಪೇಳೆಯೆಂನ ತವರ್ಮ್ಮನೆಯವರೊರ್ಮ್ಮೆಯೇ ಮೂರ್ಚ್ಚಿತರಾದರದೇನು ಕಾರಣಂ ಬೆಸಸಿಮೆನೆ ಚಿಂಚಗಾವೆಯ ನಿಂಮ ತವರ್ಮ್ಮನೆಯವರ ಕೆಯ್ಯೊಲದೊಳಗೆ ಆಲದಮರನುಂಟಾ ಆಲದ ಮರದ ಮುಂದೊಂದು ಪುತ್ತುಂಟಾ ಪುತ್ತಿನೊಳು ನೇಮೀಶ್ವರ ಪಾರ್ಶ್ವ ಭಟ್ಟಾರಕರ ಪ್ರತಿಮೆಯುಂಟು | ಅವರ ಭವನ ವಾಸಿಕರು ಪೂಜಿಪರು | ನಿಮ್ಮಯ್ಯನಾ ಮರನಂ ಕಡಿದು ಪುತ್ತನುತ್ತು ಬಿತ್ತಲಲ್ಲಿಯೇ ಪ್ರತಿಮೆಗೂ | ಉಪಸರ್ಗ್ಗಮಾದೊಡೆ ಆ ಭವನವಾಸಿಕರಱೆದು ಕಡು ಮುಳಿದೀಯಂದಮಂ ಮಾಡಿದರೆಂದೊಡಂ ಅದಕ್ಕೆ ತಕ್ಕ ಪರಿಹಾರಮಪ್ಪುಪಾಯಮುಳ್ಳೊಡೆ ಬೆಸಸಿಮೆನೆ ಗರುಡ ಪಂಚಮಿಯಂ ನೋನೆ ನೀನು ಅವರ್ಗ್ಗೆ ಉಪಶಮನಪ್ಪುದೆಂದು ಪೇಳೆ ಕೇಳ್ದು ಪಂಚಮಿಯಂ ಕೈಕೊಂಡುಮದಱ ವಿಧಾನಮನಿಂತೆಂದವರು | ಆ ಪುತ್ತಂ ಸಸಿನೆ ಮಾಡಿ ಆ ಜಿನಬಿಂಬಂಗಳಿಗೆ ಅಭಿಷೇಕಮಂ ಮಾಡಿಸಿ ಆ ಗಂಧೋಧಕಮನಾ ಪುತ್ತಿನ ಮಣ್ಣುಮಂ ಮನೆಗೆ ಕೊಂಡು ಪೋಗಿ ನೀನವರ ಮೇಲೆ ತಳಿಯೆ ನಿರ್ವ್ವಿಷಮಕ್ಕೆಂದು ಬೆಸಸಿ ಬಿಜಯಂಗಯ್ಯೆ ಚಾರಿತ್ರಮತಿ ರುಷಿಯರು ಬೆಸಸಿದಂದದೊಳು ನೋಂತು ಬರ್ಪ್ಪಾಗ ಚಿಂಚಗಾವೆಯರ್ಕ್ಕಂಡು ಯೀಕೆಯೆಂತಪ್ಪ ಧರ್ಮ್ಮಮೋಗಳೀಕೆಯೆಲ್ಲಿಪ್ಪಳೆನುತಿಪ್ಪನೆಗಂ | ಆಕೆ ಬೇಗದಿಂ ಬಂದ ಗಂಧೋದಕಮನವರ ಮೇಲೆ ತಳಿಯಲವರ್ಪ್ರಾಣವಾದುದಂ ಕಂಡು ಪುರಜನಂಗಳೆಲ್ಲಂ ಬೆಕ್ಕಸಂ ಬಟ್ಟು ನೀಂ ನೋಂತ ನೋಂಪಿಯಾವುದೆನೆ ಯಾ ನೋಂಪಿಯ ನಮಗೆ ಪೇಳೆನೆ ಮಿಥ್ಯಾದೃಷ್ಟಿಗಳೀ ನೋಂಪಿಯಂ ನೋನಲಾಗದನೆ ವೊಡನೆ ಬಂದ ಮನುಷ್ಯಂ ಪುತ್ತಿನೊಳು ನೋಂತಳೆಂದು ಪೇಳಲವರೆಲ್ಲಂ ಮತ್ತೊಂದು ಪುತ್ತಿನೊಳು ನೋಂತುಮವರ್ಪ್ಪೊಗೆ ಮಱುದಿನಂ ಚಾರಿತ್ರಮತಿ ಊರಿಂಗೆ ಪೋಪೆನೆನೆ ಮಿಂದುಂಡು ಪೋಗೆನೆ ಯೆನಗೆ ಷಷ್ಟಿಯ ನೋಂಪಿಯುಂಟುನೆಯದಕ್ಕೇನೆನೆ ಸೀಯಳೆಯ ಹಚ್ಚಂಬಲಿಯನೆ ಬೇಗದಿಂದಾಕೆಯ ಮಕ್ಕಳಿಗೆ ಮೂಱುಂಡೆ ಮೊದಲಾದ ಖಜ್ಜಾಯಂಗಳಂ ಮಾಡಿ ಆಕೆ ತಂದ ಮಡಕೆಯೊಳು ಹಚ್ಚಂಬಲಿಯಿನಿಕ್ಕಿ ಕೊಟ್ಟು ನೀಂ ಬಟ್ಟೆಯೊಳು ನಂಮ ಕೆಯ್ಯೂಲದೊಳಗಣ ಕಱೆಯೊಳುಂಡು ಪೋಗೆನೆ ಕರಮೊಳ್ಳಿತ್ತೆಂದು ಪೋಗೆ ಕೆಱೆಯ ತಡಿಯೊಳಿಪ್ಪಾಗಳಾ ಮುಂನಿನ ಮುನಿಗಳಾಕೆಯ ಪುಂಣ್ಯೋದಯದಿಂ ಕಾಂತರ ಚರ್ಯ್ಯ ಮಾರ್ಗ್ಗದಿಂ ಬರೆ ಕಂಡು ನಿಲಿಸಿ ನಿರಂತರಾಯಮಂ ಮಾಡಿಸಿ ಕುಳ್ಳಿರ್ದ್ದ ಪ್ರಸ್ತಾವದೊಳೊರ್ವ್ವಂ ಬಂದು ಚಾರಿತ್ರ ಮತಿಗಿಂತೆಂದಂ ನಿಂಮತ್ತೆ ನೀಂ ತಡದುದಕ್ಕೆ ನಿಂನಮಗಂ ಕಾಡೂದಕ್ಕೆ ಕೋಪಿಸಿ ಹೊಳೆಯೊಲೀಡಾಡಿದಳೆನೆ ಕೇಳ್ದು ಗುರುಗಳಿಗೆ ಬಿಂನವಿಸೆ ಗುರುಗಳು ಯಿಂತೆಂದರು | ನೀಂ ಮುಂನ ಕಂಡ ನೇಂಮಿನಾಥ ಜಕ್ಕಳೆ ಯಬ್ಬೆಯುಂ ಮುಂನಿನಂತರ್ಚ್ಚಿಸಿ ಅಭಿಷೇಕ ಪೂಜೆ ಸಹಿತಂ ಹಚ್ಚಂಬಲಿಯ ಚರುವನಿಟ್ಟು ಅಯ್ವರು ಸೊವಾಸಿನಿಯರ್ಗ್ಗೆ ಎಕ್ಕೆಯೆಲೆಯೊಳಿಕ್ಕಿ ಸೌತೆಯಕಾಯಿವೆರಸಿ ಬಾಯಿನಮಂ ಕೊಡೆ ಲೇಸಕ್ಕುಮೆಂದು ಪೇಲ್ದವರು ಬಿಜಯಂಗೆಯ್ಯು ಆ ಅಂದದಿಂ ನೋನಲಾ ಧರಣೆಂದ್ರ ಪದ್ಮಾವತಿ ಜಕ್ಕಣಬ್ಬೆಯು ನಿಬ್ಬರ ಭಕ್ತಿಯಿಂ ನೊನೆ ಅಪತ್ತಾಗಲಾಗದೆಂದಾ ಸಿಸುವಂ ತೊಟ್ಟಿಲೊಳಿಕ್ಕಿ ಕಳಿಪಿದೊಡೆ ಸಂತೋಷದಿಂದೇಭುಕ್ತಮಂ ಮಾಡಿ ಮನೆಗೆ ಪೋಪಾಗಳು ಅತ್ತೆ ಯೀಕೆ ನೋಂತ ನೋಂಪಿಯ ಫಲ ಸಫಲಮೆಂದು ಸಂತೋಷಂಬಟ್ಟು ಪುತ್ರ ಪುತ್ರಾದಿಗಳು ಸಹಿತ ಸುಖದಿನಿರ್ದರೆಂದು ಪೇಳೆ ಗರುಡ ವಿದ್ಯಾಧರಂ ಗುರುಗಳು ಬೆಸಸಿದಂದದಿಂ ನೋಂಪಿಯಂ ನೋಂತು ಗಗನ ಗಾಮಿನಿ ಮೊದಲಾದ ವಿದ್ಯೆಗಳೆಲ್ಲಂಸಾಧ್ಯಮಾಗಿ ಪುತ್ರಪೌತ್ರಾದಿಗಳು ಸಹಿತ ವಿದ್ಯಾಧರ ರಾಜ್ಯಶ್ರೀಯಂ ಸುಖದಿನನುಭವಿಸಿ ಪಡದನೆಂದು ಗೌತಮ ಸ್ವಾಮಿಗಳು ಚೇಳಿನಿ ಮಹಾದೇವಿಗೆ ಬೆಸಸೆ ಯಾ ನೋಂಪಿಯಂ ಯಥಾ ಕ್ರಮದಿಂ ನೋಮ್ತು ದೇವಕುಮಾರ ಸಂನಿಭರಪ್ಪ ಪಲಂಬರ್ಮ್ಮಕ್ಕಳಂ ಪಡೆದು ರಾಜ್ಯ ಶ್ರೀಯೊಳ್ಕೂಡಿ ಸುಖಮನನುಭವಿಸಿ ಕಡೊಯೊಳು ಸಂನ್ಯಸನ ಸಮಾಧಿಯಿಂ ಮುಡಿಪಿ ಸ್ವರ್ಗ್ಗದೊಳು ದೇವನಾಗಿ ಸುಖಮನನುಭವಿಸಿ ಪರಂಪರೆಯೊಳು ಶಾಶ್ವತ ಸುಖಕ್ಕೆ ಭಾಜನಮಾದುದಂ ಭವ್ಯ ಜನಂಗಳಳು ಕೇಳ್ದು ನಂಬಿ ಭಕ್ತಿ ಪೂರ್ವ್ವಕಂ ನೋಂತು ಸಪ್ತ ಪರಮ ಸ್ಥಾನಂಗಳಂ ಪಡೆವರು | ಯೀ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಮಂಗಳ ಮಹಾ || ವೀರ ಜಿನಾಯ ನಮಃ || ನಿರ್ವ್ವಿಘ್ನ ಮಸ್ತು || ಶುಭಮಸ್ತು ಶ್ರೀ