ಶ್ರೀ ವೀತ ರಾಗಾಯ ನಮಃ ||

ಜಯದುರಿತಹರಣ ನಿರುಪಮ
ಜಯಶಾಶ್ವತ ಸೌಖ್ಯದಾಯಿ ನಿತ್ಯಾನಂದಾ
ಜಯ ಮದನ ಮದ ವಿಭಜನ
ಜಯಜಯ ಸರ್ವಜ್ಞಮೋಕ್ಷಲಕ್ಷ್ಮೀನಾಥಾ ||

ವ || ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದ ಆರ್ಯಾಖಂಡದ ಕರ್ಣಾಟಕ ದೇಶದೊಳು ತೇರುದಾಳವೆಂಬ ಪುರಮದನಾಳುವರಸು ವಂಕಭೂಪಾಲಂ ಆತನ ಸ್ತ್ರೀ ಲಕ್ಷ್ಮೀಮತಿಯಂಬಳು ಅವರೀರ್ವರುಂ ಸುಖಸಂಕಥಾ ವಿನೋದದಿಂ ರಾಜ್ಯವನಾಳುತ್ತಿರಲೊಂದು ದಿವಸಂ ವಿದ್ಯಾನಂದಿ ಮಾಣಿಕ್ಯನಂದಿಯಂಬೀರ್ವ್ವರು ಮುನಿಗಳ್‌ ಚರ್ಯ್ಯಾನಿಮಿತ್ತಂ ಬರೆ ಭಕ್ತಿಯಿಂ ಆಹಾರ ದಾನಮನಿತ್ತು ನಿರಂತರಾಯಮಾಗಲ್‌ ವಂದಿಸಿ ಕರಕಮಲಗಳಂ ಮುಗಿದು ಎಲೈಶ್ರೀ ಗುರು ದಯಾಪರಂ ಪಂಚ ಸಂಸಾರ ಸಾಗರೋತ್ತಾರಕಂ ನೀಮೆನಗೆ ಪುಂಣ್ಯಕಾರಣಮಪ್ಪ ಆವುದಾನುಮೊಂದು ನೋಂಪಿಯಂ ಬೆಸಸಿಯೆನಲವರು ನಾಗಸ್ತ್ರೀ ನೋಂಪಿಯ ವಿಧಾನಮಂ ಬೆಸಸಿದರೂ ಆವುದಾನು ಮೊಂದು ಮಾಸದ ಶುಕ್ಲಪಕ್ಷದ ಬಿದಿಗೆಯಲ್ಲಿ ಏಕಭುಕ್ತಮಂ ಮಾಡಿ ಮರುದಿವಸ ತದಿಗೆಯಲೂ ನೋಂಪವರೆಲ್ಲಂ ಶುಚಿರ್ಭೂತರಾಗಿರ್ದ್ದು ಆರ್ಚನಾಧ್ರವ್ಯ ಸಹಿತಂ ಚೈತ್ಯಾಲಯಕ್ಕೆ ವಂದು ದೇವರಂ ಬಂದಿಸಿ ಮಂಟಪ ಶೃಂಗಾರಂಗೈದು ರತ್ನತ್ರಯ ಪ್ರಥಮೆಗೆ ಪಂಚಾಮೃತಾಭಿಷೇಕ ಪೂಜೆಯಂ ಮಾಡಿ | ಮೂರು ಎಲೆ ಮೂರು ಅಡಕೆ ಮೂರು ಅಕ್ಷತೆಯ ಪುಂಜ ಪ್ರತ್ಯೇಕ ಮೂರು ಅಷ್ಟವಿಧಾರ್ಚ್ಚನೆಯಂ ಮಾಡಿ ಶ್ರುತಗುರುಗಳಂ ಪರಿವಿಡಿಯಿಂ ಪೂಜಿಸಿ ನಂದಾದೀವಿಗೆಯಂ ಪತ್ತಿಸಿ ಮೂರು ಸೂಳ್ಪಲಗೊಂಡು ಮಂಗಳಾರತಿಯಂ ಗೈದು ಆಹಾರದಾನಮನಿತ್ತು ಪಾರಣೆಯಂ ಮಾಳ್ಪುದೂ | ಸಾಯಂ ಸಮಯದೊಳ್ ಕಥೆಯಂಕೇಳ್ವುದು | ಶುಭಧ್ಯಾನ ದೊಳಿರ್ಪ್ಪುದು | ಇಂತೀ ಕ್ರಮದೊಳು ವಂಬತ್ತು ತದಿಗೆ ಪೂಜಿಸುವುದೂ | ಕಡೆಯೊಳುದ್ಯಾಪನೆಯಂ ಮಾಳ್ಪುದೂ | ರತ್ನತ್ರಯ ಪ್ರಥಮೆಗೆ ಮಹಾಭಿಷೇಕ ಪೂಜೆಯಂ ಮಾಡುವುದೂ | ಚಾರುರ್ನರ್ಣ್ನಕ್ಕೆ ಆಹಾರಾಭಯ ಭೈಷಜ್ಯಶಾಸ್ತ್ರ ದಾನಂಗಳಂ ಕುಡುವುದೂ | ದೀನಾನಾಥರ್ಗ್ಗೆ ಅಭಯದಾನಮಂ ಕುಡುವುದೂ | ಮೂರು ಜೈನ ಮಿಥುನಕ್ಕೆ ಉಣಲಿಕ್ಕಿ ಸುಗಂಧಪನಿವಾರಮನಿತ್ತು ಕಳುಪುವುದೂ | ಮೂರು ಪುಸ್ತಕ ಮೂರು ಶ್ರುತಪಾವುಡೆ ಮೂರು ಜಪಮಾಲೆ ಸಹಿತ ಕುಡುವುದೂ | ನೂರೆಂಟು ಫಲ ನೂರೆಂಟು ಕಮಲ ಪುಷ್ಪಮನರ್ಚ್ಚಿಸುವುದೂ | ಇಂತಿದುದ್ಯಾಪಾನೆಯ ಕ್ರಮಂ | ಪೂರ್ವ ಭವದೊಳ್‌ ಶ್ರಾವಕ ಜನಂಗಳಿದನಾಚರಿಸಿವುದಂ ಕಂಡು ಅನುಮೋದನದಿಂ ಪೂರ್ವ ಮಾತಂಗಿ ಹೋಸದ ವ್ರತಮಂ ಕೈಕೊಂಡು ಸಮಾಧಿ ವಿಧಿಯಿಂ ಮುಡುಪಿ ನಾಗಸ್ತ್ರೀಯಾಗಿ ಪುಟ್ಟಿ ಧನದತ್ತನೆಂಬ ರಾಜಶ್ರೇಷ್ಠಿಗೆ ಪ್ರಾಣ ಕಾಂತೆಯಾಗಿರ್ದ್ದು ಸಂಸಾರ ಸುಖಮನನುಭವಿಸಿ ಸ್ವರ್ಗ್ಗಾಪವರ್ಗ್ಗಮಂ ಪಡೆದರೂ ಯಂದಿಂತದಂ ದಿವ್ಯ ತಪೋ ಮಹಿಮೆಯಿಂ ಪೇಳೆಯಿದಂ ವೊಂಕ ಭೂಪಾಲಂಕೇಳ್ದು ಹರ್ಷೋತ್ಕರ್ಷ ಚಿತ್ತದೀ ನೋಂಪಿಯಂ ಕೈಗೊಂಡು ವಂದಿಸಿ ಕೆಲವು ದಿವಸದಿನೀ ನೋಂಪಿಯಂ ಯಥಾಕ್ರಮದಿಂ ನೋಂತುಜ್ಜೈಸಿ ತತ್ಫಲದಿಂ ಸ್ವರ್ಗ್ಗಮಂ ಪಡೆದದೂ ಯಿಂತೀ ನೋಂಪಿಯಂ ಬಡವರೊಡೆಯರೆನ್ನದೆ ಯಥಾ ಶಕ್ತಿಯಿಂ ಮಾಡೆಯನಂತಾನಂತ ಸುಖಮನೆಯ್ದುವರ್‌ | ಇಂತಿ ನಾಗಸಸ್ತ್ರೀ ನೋಂಪಿಯಂ ನೋತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಮಂಗಳಮಹಾ ಶ್ರೀ ||