ಶ್ರೀ ವೀತ ರಾಗಾಯ ನಮಃ ||

ಶ್ರೀ ಚಂದ್ರಪ್ರಭ ಜಿನಪತಿ
ಗಾಂ ಚತುರ ನಮಸ್ಕ್ರಿಯಾದಿ ಕಾರಮನಿಂತೀ
ಭೂಚಕ್ರದೊಳೆಸೆವಂತಿರೆ
ಸುಚಿಸುವೆಂ ನಿತ್ಯ ಸುಖದ ನೋಂಪಿಯ ಕತೆಯಂ ||

ಅದೆಂತೆಂದೊಡೆ ಜಂಬೂದ್ವೀಪದ ಭರತ ಕ್ಷೇತ್ರದೊಳು ಚಂದ್ರವರ್ಧನಮೆಂಬುದು ನಾಡು ಚಂದ್ರಪುರಮೆಂಬುದು ಪೊಳಲದನಾಳ್ವಂ ಚಂದ್ರಶೇಖರನೆಂಬರ್ಸನಾತರಸಿ ಚಂದ್ರಲೇಖೆಯೆಂಬಳಂತವರೀರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ | ಋಷಿನಿವೇದಕಂ ಬಂದು ಸಾಷ್ಟಾಂಗವೆಱಗಿ ಪೊಡವಟ್ಟು ದೇವಾ ನಂಮ ಪುರದ ಬಹಿರುದ್ಯಾನವನದೊಳು ಯಶೋಧರ ಮುನಿ ತಿಲಕರೆಂಬ ದಿವ್ಯಮುನಿಗಳು ಮೂಱು ಸಾಸಿರದೇಳುನೂಱು ತಂಡ ಋಷಿ ಸಮುದಾಯಂ ಬೆರಸು ಬಂದಿರ್ದ್ದಪರೆಂದು ಭಿಂನಪಂಗಯ್ಯೆ ಅರಸನಾತಂಗಂಗಚಿತ್ತಮಂ ಕೊಟ್ಟಾನಂದ ಭೇರಿಯಂ ಪೊಯ್ಸಿ ನಿಜಪರಿಜನ ಪುರಜನಂ ಬೆರಸು ಪಾದಮಾರ್ಗ್ಗದಿಂ ಪೋಗಿ ಪಲವರ್ಚ್ಚನೆಗಳಿಂದರ್ಚ್ಚಿಸಿ ವಂದಿಸಿ ಮುಂದೆ ಕುಳ್ಳಿರ್ದು ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ತದ ನಂತರಂ ಚಂದ್ರಲೇಖೆ ಕರಮಲಂಗಳಂ ಮುಗಿದು ಸ್ವಾಮಿ ಯೆನಗಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರು ನಿತ್ಯ ಸುಖದ ನೋಂಪಿಯಂ ನೋಂಪುದೆನಲಾ ನೋಂಪಿಯಂ ಮುಂನ ನೋಂತು ಫಲಮನೆಯ್ದಿದವರ ಕಥೆಯನೆನಗೊಂದಂ ಬೆಸಸಿಮೆನಲವರು ಯಿಂತೆಂದರೀ ಜಂಬೂದ್ವೀಪದ ಭರತ ಕ್ಷೇತ್ರದೊಳುತ್ತಮ ಜನ್ಮನಿಳಯಮೆಂಬುದು ನಾಡು ನಿತ್ಯ ವಸಂತಮೆಬುದು ಪೊಳಲದನಾಳ್ವಂ ಸತ್ಯ ಸಾಗರನೆಂಬನಾತನರಸಿ ಚಿತ್ತೋತ್ಸವೆಯೆಂಬಳಾ ಪುರದೊಳೆರ್ವ್ವ ಬಡ ಪರದಂ ನಿತ್ಯರೋಗ ಸಾಗರನೆಂಬತಾನ ಪೆಂಡತಿ ನಿತ್ಯ ದುಃಖಿಯೆಂಬಳಂತವರಿರ್ವ್ವಗ್ಗಂ ಪುಟ್ಟಿದ ಮಕ್ಕಳು | ಮನು ಮಾಣಿಕನುಂ | ಮನುಮದನನುಂ | ಮನೋಜನುಂ | ಮನೋಹರನುಮೆಂಬ ನಾಲ್ವರು ಮಕ್ಕಳಾಗಿ ಸಗಳಲೆ ಸಂಬಾರಗಡಲೆ ಚಕ್ಕುಲಿ ಮೊರುಂಡೆಯೆಂಬಿವಂ ಮಾಱೆ ಜೀವಿಸುತ್ತಮಿರ್ಪ್ಪೊಂದು ದಿವಸಂ ಪರ್ವ್ವದೊಳು ನಿತ್ಯದುಃಖಿತೆ ತಂನ ಪತಿಗಂ ಸುತರ್ಗ್ಗಂ ಉಣಲೆಡೆ ಮಾಡಿ ಮಕ್ಕಳ ಬರವಂ ನೋಡಿ ಪಾರುತ್ತಮಿರ್ಪ್ಪ ಸಮಯದೊಳು ಮಾಸೋಪವಾಸದ ಪಾರಣೆ ನಿಮಿತ್ತಂ ಭೂತನಂದ ಭಟ್ಟಾರಕರೆಂಬ ದಿವ್ಯ ಮುನಿಗಳು ಚರ್ಯ್ಯ ಮಾರ್ಗ್ಗದಿಂ ಬರೆ ಕಂಡು ರಾಗದಿನಿದಿರಂ ಬಂದು ಮೂರು ಸೂಳ್ಪಲಗೊಂಡು ತ್ರಿಕರಣ ಶುದ್ಧಿಯಿಂ ವಂದಿಸಿ ನಿಲಿಸಿ ಚರ್ಯ್ಯಾನಂತರಂ ಕೈಗಳಂ ಮುಗಿದು ಸ್ವಾಮಿ ಯೆನಗೆ ದುಃಖ ನಿವಾರಣಪ್ಪುದಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರು ನಿತ್ಯ ಸುಖದ ನೋಂಪಿಯನಿಂತೆಂದು ಪೇಳ್ದರಾವುದಾನುಮೊಂದು ನಂದೀಶ್ವರದ ಚತುರ್ದ್ದಶಿಯೊಳು ನೋಂಪರೆಲ್ಲಂ ಪಲ್ಲಂ ಸುಲಿದು ಮಿಂದು ದಣಿಬಮನುಟ್ಟು ಚೈತ್ಯಾಲಯಕ್ಕೆ ಬಂದು ಪಂಚಪರಮೇಷ್ಠಿಗಳ್ಗೆ ಪಂಚಾಮೃತದಿಂದಭಿಷೇಕಮಂ ಮಾಡಿಸಿ ಅಷ್ಟ ವಿಧಾರ್ಚ್ಚನೆಯಿಂದರ್ಚ್ಚಿಸಿ ಬಳಿಕ್ಕಂ | ಗೋದಿಯ ಪಾಯಸಮಂ ತುಪ್ಪ ಶರ್ಕ್ಕರೆ ವೆರಸು ದೇವರ್ಗ್ಗಂ ಜಕ್ಕಳೆಗಂ ಚರುವನಿಡುವುದದಱ ಫಲಮೆಂತೆನೆ ಭೂದರೋಂತಿಯಂ ಪೆತ್ತು ಮಾಧವನ ಮಗನ ರೂಪಿಂಗೆಣೆಯಾಗಿ ಮೇಧಾವಿಗಲೆನಿಸಿ ನೆಗಲ್ದು ಬೋಧಾಧೀಶ್ವರನಾಗಿ ಬಾಧೆಯಿಲ್ಲದಿರ್ಪ್ಪಂದು ಕಾರಣದಿಂ ಗೋಧಿಯ ಪಾಯಸಮಂ ಚರುವನಿಟ್ಟು ತದನಂತರ ಶ್ರುತಗುರು ಪೂಜೆಯಂ ಮಾಡಿ ಕಥೆಯಂ ಕೇಳ್ದು ಪವಾಸಮಂ ಕೈಕೊಂಬುದಾಱದೊಡೇಕ ಭುಕ್ತಮಂ ಕೈಕೊಂಬುದು ಮಱುದಿವಸಂ ಪೌರ್ನ್ನಮಿಯ ದಿವಸಂ ಯಥಾ ಶಕ್ತಿಯಿಂ ಸಮುದಾಯಮಂ ಮಾಳ್ಪುದು | ಮತ್ತಮೀ ಕ್ರಮದಿಂ ಮುಂದಣ ನಂದೀಶ್ವರದ ಚತುರ್ದ್ದಶಿ ಪರಿಯಂತಂ ತಿಂಗಳು ತಿಂಗಳು ಚತುರ್ದ್ದಶಿಗಳೊಳು ನೋಂಪ ಕ್ರಮಮೆಂತೆಂದೊಡೆರಡನೆಯ ಚತುರ್ದ್ದಶಿಯೊಳು ಶುಚಿರ್ಭ್ಭೂತರಾಗಿ ಚೈತ್ಯಾಲಯಕ್ಕೆ ಬಂದು ದೇವರ್ಗ್ಗಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿ ಶೇವಗೆಯ ಪಾಯಸಂ ತುಪ್ಪ ಶರ್ಕ್ಕರೆ ವೆರಸು ದೇವರ್ಗ್ಗಂ ಜಕ್ಕಳೆಗಂ ಚರುವನಿಡುಉದದಱ ಫಲಮೆಂತೆಂದೊಡೆ ಪಾವನಕುಲದೊಳ್ಪುಟ್ಟಿ ಶ್ರಾವಕ ಜನಾಗ್ರಗಂಣ್ಯರೆಂದೆನಿಸಿ ಭೂವಳಯದೊಳಗೆಸೆವ ಕೀರ್ತಿಯಂ ಪಡೆವರದು ಕಾರಣದಿಂ ಸೇವಗೆಯ ಪಾಯಸಮಂ ತುಪ್ಪ ಶರ್ಕ್ಕರೆ ವೆರಸು ಚರುವನಿಟ್ಟು ಬಳಿಕ್ಕಂ ಶ್ರುತಪೂಜೆಯಂ ಗುರು ಪೂಜೆಯಂ ಮಾಡಿ ಕತೆಯಂ ಕೇಳ್ದುಪವಾಸಮಂ ಕೈಕೊಂಬುದಾಱದೊಡೇಕ ಭುಕ್ತಮಂ ಮಾಳ್ಪುದು ಮಱು ದಿವಸಂ ಯಥಾಶಕ್ತಿಯಿಂ ಸಮುದಾಯಮಂ ಮಾಳ್ಪುದು | ಮೂಱರೆನೆಯ ಚತುರ್ದ್ದಶಿಯಂದು ದೇವರ್ಗ್ಗಭಿಷೇಕ ಅಷ್ಟ ವಿಧಾರ್ಚ್ಚನೆಯಿಂ ಮಾಡಿಸಿ ಸೊಜ್ಜಿಗೆಯ ಪಾಯಸಮಂ ತುಪ್ಪ ಶರ್ಕ್ಕರೆ ವೆರಸು ದೇವರ್ಗ್ಗಂ ಜಕ್ಕಳೆಗಂ ಚರುವನಿಡುಉದದಱ ಫಲಮೆಂತೆಂದೊಡೇಕ ಭುಕ್ತಮಂ ಮಾಳ್ಪುದು | ಉಜ್ವಲಮಪ್ಪ ಕೀರ್ತ್ತಿಯಂ ಪಡೆದು ಸಜ್ಜನ ಪೂಜ್ಯರಾಗಿ ದುರ್ಜ್ಜನತ್ವಮನೆಂದುಂ ಪೊರ್ದ್ದದಿಪ್ಪರಂತು ಚರುವನಿಟ್ಟು ಶ್ರುತ ಪೂಜೆಯಂ ಗುರುಪೂಜೆಯಂ ಮಾಡಿ ಕಥೆಯಂ ಕೇಳ್ದುಪವಾಸಮಂ ಕೈಕೊಂಬುದಾಱದೊಡೇಕ ಭುಕ್ತಮಂ ಕೈಕೊಂಬುದು ಮಱುದಿವಸದ ಪೌರ್ನ್ನಮಿಯೊಳು ಯಥಾ ಶಕ್ತಿಯಿಂ ಸಮುದಾಯಮಂ ಮಾಳ್ಪುದು ನಾಲ್ಕನೆಯ ಚತುರ್ದ್ದಶಿಯೊಳು ಪಂಚಪರಮೇಷ್ಠಿಗಳ್ಗೆ ಪಂಚಾಮ್ರುತ ದಿಂದಾಭಿಷೇಕಾಷ್ಟವಿಧಾರ್ಚ್ಛನೆಯಂ ಮಾಡಿ ಮತ್ತಂ ದೇವರ್ಗ್ಗಂ ಜಕ್ಕಳೆಗಮಲಕ್ಕಿಯ ಪಾಯಸಮಂ ತುಪ್ಪ ಶರ್ಕ್ಕರೆ ವೆರಸಿ ಚರುವನಿಡುಉದದಱ ಫಲಮೆಂತೆಂದೊಡೆ ಮಕ್ಕಳಂ ಪಲಂಬರಂಪಡೆದು ತಕ್ಕರಿವರೆನಿಸಿಕೊಂಡು ಮಿಕ್ಕಿರ್ದ್ದ ಶ್ರೀಯೊಳ್ಕೂಡಿ ಚೊಕ್ಕಳರಾಗಿ ಬಕ್ಕು ಡಿಯಲ್ಲದಿರ್ಪ್ಪರಂತು ಅಕ್ಕಿಯ ಪಾಯಸಮಂ ಚರುವನಿಟ್ಟು ಶ್ರುತ ಪೂಜೆಯಂ ಗುರುಪೂಜೆಯಂ ಮಾಡಿ ಕಥೆಯಂ ಕೇಳ್ದುಪವಾಸಮಂ ಕೈಕೊಂಬುದಾಱದೊಡೇಕ ಭುಕ್ತಮಂ ಮಾಳ್ಪುದು ಮಱುದಿನವಂ ಯಥಾಶಕ್ತಿಯಿಂ ಸಮುದಾಯಮಂ ಮಾಳ್ಪುದು ಆಯ್ದನೆಯ ಚತುರ್ದ್ದಶಿಯಂದುಜ್ಜವಣೆಯಂ ಮಾಳ್ಪಮೆಂತೆಂದೊಡೆ ಪಂಚಪರಮೇಷ್ಟಿಗಳ್ಗೆ ಪಂಚಾಮೃತದಿಂದಭಿಷೇಕ ಪೂಜೆಯಂ ಮಾಡಿ ಪಂಚಪ್ರಕಾರದ ಪಾಯಸಮಂ ತುಪ್ಪ ಶರ್ಕ್ಕರೆ ವೆರಸು ದೇವರ್ಗ್ಗಂ ಜಕ್ಕಳೆಗಂ ಚರುವನಿಡುಉದಯ್ದು ಬಂಣಿಗೆಯಡಿಗೆಯೊಳು ಬೇಱೆ ವೇಱಯ್ದದಂದೇವರ್ಗ್ಗಂ ಚರುವನಿಡುಉದು ಜಕ್ಕಳೆಗಂ ಬಂನಿಗೆಯೊಳು ಮೂಱಂ ಚರುವನಿಡುಉದು | ದೇವರ್ರ್ಗಯ್ದು ಬೆಲ್ಲದಚ್ಚನರ್ಚಿಸುಉದು | ಜಕ್ಕಲಿಗೆ ಮೂಱು ಬೆಲ್ಲದಚ್ಚನರ್ಚ್ಚಿಸುಉದು ತೊಂಡಲು ದಂಡೆಯರಿಸಿನ ವೋಲೆಯ ತೊಡುವುದು ಕರಿಯಮಣಿಯನರ್ರ್ಚಿಸೂದು | ನನೆಗಡಲೆ ಚಿಗುಳಿ ತಂಬುಟ್ಟು ಬಾಳೆಯಹಣ್ಣು ಕಬ್ಬಿನ ಕೋಲನರ್ಚ್ಚಿಸೂದು | ಶ್ರುತವಸ್ತ್ರ ಸಹಿತಂ ಶ್ರುತ ಪೂಜೆಯಂ ಮಾಳ್ಪುದು | ಕಥೆಯ ಪುತ್ಸಕಮನರ್ರ್ಚಿಸಿ ಕಥೆಯಂ ಕೇಳ್ದು ಕಥಕನಂ ಪೂಜಿಸಿ ನೋನಿಸಿದಜ್ಜಿಯರ್ಗ್ಗುಡ ಕೊಟ್ಟು ಗುರುಗಳ್ಗೆ ಪಾದಾರ್ಚ್ಚನೆಯಂ ಮಾಡಿಯುಪವಾಸಮಂ ಕೈಕೊಬುದಾಱದೊಡೇಕ ಭುಕ್ತಮಂ ಮಾಳ್ಪುದು ಮಱು ದಿವಸಂ ಪೌರ್ನ್ನಮಿಯೊಳಯ್ದು ತಂಡ ರುಷಿಯರ್ಗ್ಗೆ ಸಮುದಾಯಮಂ ಮಾಳ್ಪುದು ಮೇಣೈಯ್ದು ತಂಡಜ್ಜಿಯರಂ ನಿಲಿಸುಉದು | ಚಾತುರ್ವ್ವರ್ನ್ನಕ್ಕಾಹಾರ ದಾನ ಸುವರ್ನ್ನದಾನಮಂ ಮಾಳ್ಪುದು | ಮತ್ತಂ ಬದವರೊಡಡೆಯರೆನ್ನದೆ ಯಥಾ ಶಕ್ತಿಯಿಂ ಭಕ್ತಿಪೂರ್ವ್ವಕ್ಕಂ ನೋಂಪುದೆಂದು ಪೇಳೆ ಕೇಳ್ದು ಸಮ್ಯಕ್ತ್ವಪೂರ್ವ್ವಕಮಾಗಿ ನೋಂಪಿಯಂ ಕೈಕೊಂಡು ಯಥಾಕ್ರಮದಿಂ ನೋಂತುಜ್ಜಯಿಸಿ ತತ್ಫಲದಿಂ ತದ್ಭವದೊಳೆ ಸಮಸ್ತರೋಗ ದುಃಖಮಂ ನಿವಾರಿಸಿ ಪತಿಯುಂ ಪುತ್ರರುಂ ತಾನುಂ ಧನಕನಕ ಸಮೃದ್ಧರಾಗಿ ತತ್ಪುರದ ರಾಜಶ್ರೇಷ್ಠ ಪದವಿಯಂ ಪಡೆದು ಸಮಸ್ತ ಸಂಸಾರ ಭೋಗ ಸಾಗರದೊಳೋಲಾಡುತ್ತಮಿರ್ದ್ದುಂ ಪಲವುಂ ಚೈತ್ಯಾಲಯಂಗಳಂ ಮಾಡಿಸುತ್ತಂ ಪಲಉಂ ಜೀರ್ನ್ನ ಜಿನಾಲಯಂಗಳನುದ್ಧರಿಸುತ್ತ ಪಲವು ತೀರ್ತ್ಥ ಯಾತ್ರೆಗಳಂ ಮಾಡುತ್ತಂ ಸಮಸ್ತ ಭವ್ಯೋತ್ತಮರೆನಿಸಿ ನೆಗಳುತ್ತಮಿರ್ದ್ದುಂ ಪರಂಪರೆಯಿಂ ಮೋಕ್ಷಮನೆಯ್ದಿ ನಿತ್ಯ ಸುಖಮನೆಯ್ದಿದರೆಂದು ಪೇಳೆ ಸಂತುಷ್ಟ ಚಿತ್ತೆಯಾಗಿ ಚಂದ್ರಲೇಖೆ ನೋಂಪಿಯಂ ಸಮ್ಯುಕ್ತ್ವಪೂರ್ವ್ವಕಮಾಗಿ ಕೈಕೊಂಡು ಗುರುಗಳಂ ಬೀಳ್ಕೊಂಡು ಯಥಾ ಕ್ರಮದಿಂ ನೋಂತುಜ್ಜಯಿಸಿ ತತ್ಫಲದಿಂ ದೇವಕುಮಾರ ಸಂನಿಭರಪ್ಪ ಪಲಂ ಬರ್ಮ್ಮಕ್ಕಳಂ ಪಡದು ಫಲವುಂ ನಿಧಿ ನಿಧಾನಂಗಳ್ಗೊಡೆಯರಾಗಿ ಸಮಸ್ತ ಸಂಸಾರ ಭೋಗ ಸಾಗರದೊಳೋಲಾಡುತ್ತಂ | ಮಹಾಮಂಡಲೇಶ್ವರ ಪದವಿಯೊಳ್ಕೂಡಿ ಮತ್ತಂ ಜಿನ ಭಕ್ತಿಯೊಳು ಪ್ರಭಾವತಿ ಮಹಾದೇವಿಯುಮಂ ರೂಪು ಲಾವಂಣ್ಯ ವಿಲಾಸದೊಳು ರತಿಮಹಾದೇವಿಯುಮಂ ಗುರು ಭಕ್ತಿಯೊಳು ರುಗ್ಮಿಣಿ ಮಹಾ ದೇವಿಯುಮಂ ದರ್ಶನ ಶುದ್ಧಿಯೊಳು ರೇವತಿ ಮಹಾದೇವಿಯುಮಂ ಪುರುಷ ಭಕ್ತಿಯೊಳು ಪ್ರಭಾವತಿ ಮಹಾದೇವಿಯುಮಂ | ಬಾಂಧವ ಜನಾಗ್ರಗಣ್ಯ ಪುಂಣ್ಯೋದಯದ ಮಹಿಮೆಯೊಳು ಸುಲೋಚನ ಮಹಾದೇವಿಯುಂ | ಸಮಸ್ತ ಕಲಾಪ್ರೌಢೆಯೊಳು ಸರಸ್ವತಿ ಮಹಾದೇವಿಯುಮಂ ಪೋಲ್ತೆಸೆದೊಪ್ಪುತಿರ್ದ್ದೊಂದು ದಿವಸಂ ತಂನ ಕಿವಿ ಸಮುದ್ರಘೋಷಮಂ ಕೇಳದಿರೆ ತನಗೇಳು ದಿನದಾಯುಷ್ಯಮೆಂದೞೆದು | ಸಂಸಾರ ಶರೀರ ಭೋಗ ಪರಿತ್ಯಕ್ತೆಯಾಗಿ ಲಕ್ಷಿಮತಿ ಗಂತಿಯರ ಸಮೀಪದೊಳು ದೀಕ್ಷೆಯಂ ಕೈಕೊಂಡು ಸಕಳ ಸಂನ್ಯಸನ ಪ್ರತ್ಯಾಖ್ಯಾನದಿಂ ಸ್ವಪರ ವೈಯಾಪೃಥ್ಯಾ ನಿರಪೇಕ್ಷರಾಗಿ ಶರೀರ ಭಾರಮನಿಳಿಪಿ ಪದಿನಾರನೆಯಚ್ಯುತ ಕಲ್ಪದೊಳು ಮಹರ್ದ್ದಿಕ ದೇವನಾಗಿ ಪುಟ್ಟಿ ದ್ವಾವಿಂಶತಿ ಸಾಗರೋಪಮಾಯುಷ್ಯಾವಸಾನಂ ಬರಂ ದಿವ್ಯ ಸುಖಮನನುಭವಿಸಿ ಬಂದೀ ಪೂರ್ವ್ವ ವಿದೇಹದಲ್ಲಿ ಪುಷ್ಕಳಾವತಿ ವಿಷಯದ ಪುಂಡರೀಕಿಣಿ ಪುರಮನಾಳ್ವ ಸಿಂಹರಥ ಮಹಾರಾಜಂಗಂ ಸುಕಾಂತಾ ಮಹಾದೇವಿಂ ಶತ್ರುಂಜಯನೆಂಬ ಮಗನಾಗಿ ಪುಟ್ಟಿ ಕುಮಾರ ಕಾಲದೊಳ್ತೀವಿದ ವೈರಾಗ್ಯ ಪರಾಯಣನಾಗಿ ಭೂತಾನಂದರೆಂಬ ದಿವ್ಯಮುನಿಗಳ ಸಮೀಪದೊಳು ಜಿನ ದೀಕ್ಷೆಯಂ ಕೈಕೊಂಡು ಗ್ರೋಗ್ರತಪದೊಳ್ನೆಗಳ್ದಂತ್ಯಕಾಲದೊಳ್ಸಕಲ ಕರ್ಮ್ಮ ನಿರ್ಮ್ಮೂಲಂ ಗೆಯ್ದು ಮೋಕ್ಷಕ್ಕೆ ಸಂದರಿಂದಲೇ

|| ಕ || ನಿತ್ಯ ಸುಖಮೆಂಬ ನೋಂಪಿಯ
ನತ್ಯಂತ ಸುಭಕ್ತಿಯಿಂದೆ ನೋಂತವರೆಲ್ಲಂ
ನಿತ್ಯಸುಖ ನಿಳಯ ಮೋಕ್ಷಮ
ನತ್ಯಾಶ್ಚರ್ಯ್ಯದೊಳೆ ಪಡೆದು ಸುಖದಿಂದಿರ್ಪ್ಪರು ||

ನಿತ್ಯಸುಖದ ನೋಂಪಿಯಂ ನೋಂತವರ್ಗ್ಗಂ ನೋನಿಸಿದ ವರ್ಗ್ಗಂ | ಕ್ರಮದಿಂದೊಡಂಬಟ್ಟವರ್ಗ್ಗಂ | ಪೇಳ್ದವರ್ಗ್ಗಂ | ಕೇಳ್ದವರ್ಗ್ಗಂ | ಮಂಗಳ ಮಹಾ ವೀತರಾಗಾಯ ನಮಃ || ಶುಭಮಸ್ತು || ನಿರ್ವ್ವಿಘ್ನಮಸ್ತು ||