|| ಶ್ರೀ ವೀತರಾಗಾಯನಮಃ || ನಿರ್ವ್ವಿಘ್ನಮಸ್ತು ||

ಶ್ರೀ ವೀರವರ್ದ್ಧಮಾನ ಜಿ
ನಾವಳಿಗೊಲ್ದೆಱಗಿ ಭಕ್ತಿಯಿಂ ವಿರಚಿಸುವೆಂ
ಭೂವಳಯದೊಳತಿಶಯ ಶೋ
ಭಾವಹ ಸೌಭಾಗ್ಯದೊಂದು ನೋಂಪಿಯ ಕಥೆಯಂ ||

ಅದೆಂತೆಂದೊಡೀ ಜಂಬೂದ್ವೀಪದ ಭರತಮದನಾಳ್ವಂ ಭೂಪಾಲನೆಂಬರಸನಾತನ ಪಟ್ಟದರಸಿ ಮನೋಹರಿಯೆಂಬಳಂತವರಿರ್ವ್ವರುಂ ಸುಖಸಂಕಧಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲಾ ಪುರದ ರಾಜಶ್ರೇಷ್ಠ ಧನಪಾಲನೆಂಬಾತನ ಪಿರಿಯ ಪೆಂಡತಿ ಧನವತಿಯೆಂಬಳು ತಂನ ಗಂಡನೊಲ್ಲದೆ ತನಗೆ ಮಕ್ಕಳಿಲ್ಲದೆ ಪಿರಿದುಂ ದುಃಖ ಭಾಜನೆಯಾಗಿಪ್ಪುನಮೊಂದು ದಿವಸಂ ದೇಶಭೂಷಣರೆಂಬವಧಿ ಜ್ಞಾನಿಗಳು ನಾನಾ ದೇಶಂಗಳ ವಿಹಾರಿಸುತ್ತಂ ಬಂದಾ ಪುರದ ನಡುವಣ ಸಹಸ್ರ ಕೂಟ ಚೈತ್ಯಾಲಯದೊಳಿರ್ದುದ ಧನವತಿ ಕೇಳ್ದು ತಂನ ಮನದೊಳಾದ ಚಿಂತಾವಿಶಾದಮಂ ಪತ್ತುವಿಟ್ಟು ಸಂತೋಷಂ ಬಟ್ಟು ಶುಚಿರ್ವ್ವಸ್ತಾಭರಣ ಭೂಷಿತೆಯಾಗಿ ವಿವಿಧಾರ್ಚ್ಚನಾ ದ್ರವ್ಯಸಹಿತಂ ತಂನ ಪಕ್ಕದವರಂ ಕೂಡಿಕೊಂಡು ಚೈತ್ಯಾಲಯಕ್ಕೆ ಬಂದು ಪರಮೇಸ್ವರಂಗಭಿಷೇಕ ಅಷ್ಟವಿಧಾರ್ಚ್ಚನೆಯಂ ಮಾಡಿ ಶುತ್ರಮಂ ಗುರುಗಳುಮಂ ವಂದಿಸಿ ಮುಂದೆ ಕುಳ್ಳಿರ್ದ್ದು ಕರಕಮಲಂಗಳಂ ಮುಗಿದು ಸ್ವಾಮೀಯೆನಗೀ ಮನುಷ್ಯ ಜನ್ಮಂ ನಿಃಷ್ಫಲಮಾದ ಕಾರಣಮಂ ದಯೆಗೆಯ್ಯಿಮಿನಲವರಿಂತೆಂದು ಪೇಳ್ದರು ನೀಂ ಮುಂನಿನ ಜಲ್ಮದೊಳು ಚರ್ಯ್ಯಾ ಮಾರ್ಗ್ಗದಿಂ ಪುರದ್ವಾರಕ್ಕೆ ಬಂದ ಜಿನಮುನಿಗಳಂ ಕಂಡು ನವಯವ್ವನ ಮದದಿಂದುದಾಸಿನಂಗೆಯ್ದ ಕಾರಣದಿಂ ನೀನುಮೀ ಜಲ್ಮದೊಳೆಲ್ಲರ್ಗ್ಗ ಮುದಾಸೀನೆಯಾಗಿರ್ಪ್ಪೆಯೆಂದು ಬೆಸಸುಉದುಂ ಮತ್ತಂ ಬಿಂನಪೆಮೆಂದಿತೆಂದಳೆನಗೀ ದೋಷ ಪರಿಹಾರಾರ್ಥಮಾಉದಾನುಮೊಂದು ನೋಂಪಿಯಂ ದಯೆಗೆಯ್ಯಲ್ವೇಳ್ಕುಮೆನಲವರು ಸೌಭಾಗ್ಯದ ನೋಂಪಿಯನಿಂತೆಂದು ಪೇಳ್ದರಾಷಾಢದ ನಂದೀಶ್ವರದಷ್ಟಮಿಯೊಳು ನೋಂಪಿಯಂ ಕೈಕೊಂಡು ಕಾರ್ತ್ತಿಕ ನಂದೀಶ್ವರದ ಪೌರ್ನ್ನಮಿ ಪರಿಯಂತರಂ ದಿನಂಪ್ರತಿ ಚತುರ್ವ್ವಿಂಶತಿ ತೀರ್ತ್ಥಕರ ಪ್ರತುಮೆಗೆ ನಿತ್ಯಾಭಿಷೇಕಮುಮಂ ಶ್ರೀ ಗಂಧ ಕುಂಕುಮ ಕರ್ಪ್ಪೂರ ಸಂಮಿಶ್ರ ಗಂಧದಿಂದುದ್ವರ್ತ್ಥನಂ ಮಾಡಿ ಕಂಮನಪ್ಪ ಪುಷ್ಪಮಾಲೆಯಂ ಕರ್ಪ್ಪೂರದಾರತಿಯುಮಂ ತಾಂಬೂಲಮುಮಂ ತಪ್ಪದೆ ನಡಸೂದು | ಜ್ವಾಲಿನಿ ಜಕ್ಕಳೆ ಪದ್ಮಾವತಿಯಂ ಪೆಸರ್ಗ್ಗೊಂಡು ದಿನಂಪ್ರತಿ ಮೂವರು ಮುತ್ತೈದೆಯರ್ಗ್ಗೆ ಕುಂಕುಮ ಬೊಟ್ಟನಿಡುಉದು ದಿನಂ ಪ್ರತಿ ದೇವರಿಗುದ್ವರ್ತ್ತನಂ ಗೆಯ್ದ ಗಂಧಮಂ ತಾಂ ತಿಲಕಮನಿಟ್ಟುಕೊಂಬುದು ಕಡೆಯೊಳುಜ್ಜೈಸುವ ಕ್ರಮೆಂತೆನೆ ದೇವರ್ಗ್ಗೆ ಮಹಾಭಿಷೇಕ ಪೂಜೆಯಂ ಸವಿಸ್ತರಂ ಮಾಡಿಸೂದು | ತದನಂತರಂ ಮೂಱು ತೆಱದ ಭಕ್ಷಂಗಳೊಳಿಪ್ಪತ್ತನಾಲ್ಕುಮಂ ದೇವರ್ಗ್ಗರ್ಚ್ಚಿಸುಉದು | ಶ್ರುತವ ಸ್ವಸಹಿತ ಶ್ರುತಪೂಜೆಯಂ ಮಾಳ್ಪುದು ವೊಂದು ತಂಡ ರುಷಿಯರ್ಗ್ಗೆ ತಟ್ಟು ಕುಂಚ ಗುಂಡಿಗೆಯಂ ಕೊಡುಉದು | ಜ್ವಾಲಿನಿ ಜಕ್ಕಳೆ ಪದ್ಮಾವತಿಯರಂ ಪೆಸರ್ಗ್ಗೊಂಡು ಮೂವರು ಮುತ್ತೈದೆಯರ್ಗ್ಗೆ ಮೂಱುಂ ತೆಱದ ಭಕ್ಷದೊಳಂ ಪ್ರತ್ಯೇಕಂ ನಾಲ್ಕುಮಂ ವೊಂದು ಬೆಲ್ಲದಚ್ಚು ಸಹಿತಂ ಬಾಯಿನಮಂ ಕೊಡುಉದು | ಮೂಱು ತೆಱದ ಭಕ್ಷದೊಳೊಂದು ತಂಡ ರುಷಿಯರ್ಗ್ಗಹಾರ ದಾನಮಂಕೊಡುವದು ಚಾತುರ್ವ್ವರ್ನ್ನಕ್ಕಾಹಾರ ದಾನಂಗಳಂ ಮಾಳ್ಪುದುಮಿದುಜ್ಜೈಸುವ ಕ್ರಮಂ | ಮತ್ತಂ ಬಡವರೊಡೆಯರೆನ್ನದೆ ಯಥಾಶಕ್ತಿಯಿಂ ಭಕ್ತಿಪೂರ್ವ್ವಕಂ ನೋಂಪುದೆಂದು ಪೇಳೆ ಕೇಳ್ದು ಸಂತುಷ್ಟಚಿತ್ತೆಯಾಗಿ ಗುರುಗಳಂ ಬೀಳ್ಕೊಂಡು ಬಳಿಕ್ಕಂ ಯಥಾ ಕ್ರಮದಿಂ ನೋಂತುಜ್ಜೈಸಿ ತತ್ಫಲದಿಂ ತಂನ ಪುರುಷಂಗೆ ತಾನೇ ಪ್ರಾಣವಲ್ಲಭೆಯಾಗಿ ಸೌಭಾಗ್ಯವತಿಯಂ ಗೋತ್ರ ಚಿಂತಾಮಣಿಯುಮೆಂಬ ಪೆಸರುಂ ತನಗೆ ಪ್ರಸಿದ್ಧಮಾಗೆ ತನಗೆ ದೇವಕುಮಾರ ಸಂನಿಭರಪ್ಪ ಪಲಂಬರ್ಮ್ಮಕ್ಕಳಂ ಪಡೆದು ಮಹಾದಾನ ಪೂಜೆಯೊಳ್ಕೂಡಿ ಜಿನ ಧರ್ಮ್ಮದ ಮಹಾ ಮಹಿಮೆಯಂ ಪ್ರಭಾವಿಸ್ತುತಂ ಸುಖದಿಂದಿರ್ದ್ದು ಕಡೆಯೊಳು ಮೋಕ್ಷ ಸುಖಮಂ ಪಡೆದಳಿಂತೀ ಸೌಭಾಗ್ಯದ ನೋಂಪಿಯಂ ಯಥಾ ಶಕ್ತಿಯಿಂ ಭಕ್ತಿ ಪೂರ್ವ್ವಕಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂ ಬಟ್ಟವರ್ಗ್ಗಂ ಮಗಳಮಹಾ ಶ್ರೀ || ವೀತರಾಗಾಯ ನಮಃ || ೦ ||