ಶ್ರೀ ವೀತರಾಗಾಯ ನಮಃ ||

          ಪರಮ ಜಿನಪತಿಯ ಚರಣ
ಕ್ಕುರು ಮುದದಿಂದೆಱಗಿ ಭಕ್ತಿಯಿಂ ಬಳಿಕಿಂತೀ
ನಿರತಿಶಯ ಸುಖದ ನೋಂಪಿಯ
ವರಕಥೆಯಂ ಧರೆಯೊಳೆಸೆಯಲಭಿವರ್ಣ್ನಿಸುವೆಂ ||

ಅದೆಂತೆಂದೊಡೀ ಜಂಬೂದ್ವೀಪದ ಭರತ ಕ್ಷೇತ್ರದೊಳು ಕಾಂಭೋಜಮೆಂಬುದು ನಾಡುಮುಜ್ಜೇನಿಯೆಂಬುದು ಪೊಳಲದನಾಳ್ವಂ ಮದನ ಪಾಲನೆಂಬರಸನಾತನ ಪಟ್ಟದರಸಿ ಮದನ ಸೌಂದರಿಯೆಂಬಳಂತವರಿರ್ವ್ವರುಂ ಸುಖ ಸಂಕಧಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ ಮುನಿಗುಪ್ತ ಭಟ್ಟಾರಕರೆಂಬ ದಿವ್ಯಜ್ಞಾನಿಗಳು ಬಂದಾಪುರದ ಮನೋಹರಮೆಂಬುದ್ಯಾನವನದ ರಮ್ಯಪ್ರದೇಶದೊಳಿರ್ದ್ದುದಂ ವನಪಾಲಕನಿಂದಱಿದು ಸಮಸ್ತ ಪರಿಜನ ಪುರಜನಂಬೆರಸು ಪಾದ ಮಾರ್ಗ್ಗದಿಂ ಬಂದು ತ್ರಿಃಪದಕ್ಷಿಣಂಗೆಯ್ದರ್ಚ್ಚಿಸಿ ವಂದಿಸಿ ಮುಂದೆ ಕುಳ್ಳಿರ್ದ್ದು ಧರ್ಮ್ಮ ಶ್ರವಣಮಂ ಕೇಳ್ದುತದ ನಂತರಂ ಮದನ ಸೌಂದರಿ ಕಮಲಂಗಳಂ ಮುಗಿದು ಸ್ವಾಮಿ ಯೆನಗಾಉದಾನುಮೊಂದು ನೋಂಪಿಯಂ ಬೆಸಸಿಮೆನನಲವರು ನಿರತಿಶಯ ಸುಖದ ನೋಂಪಿಯನಿಂತೆಂದು ಪೇಳ್ದಾರಾಉದಾನುಮೊಂದು ನಂದೀಶ್ವರದಷ್ಟಮಿಯೊಳು ನೋಂಪಿಯಂ ಕೈಕೊಂಡು ಮುಂದಣ ನಂದೀಶ್ವರದ ಪೌರ್ನಿಮಿ ಪರಿಯಂತಂ ದಿನಂಪ್ರತಿ ಚತುರ್ವ್ವಿಶಂತಿ ತೀರ್ತ್ಥಕರ ಪ್ರತುಮೆಗೆ ಕ್ಷೀರ ಧಾರೆ ಪುಷ್ಪಮಾಲೆ ಅಡಕೆಯೆಲೆ ಕರ್ಪ್ಪೂರದಾರತಿಯೆಂಬಿವಂ ತಪ್ಪದೆ ದಿನಂ ಪ್ರತಿ ನಡೆಸುಉದು ತಿಂಗಳು ತಿಂಗಳು ಪೌರ್ನ್ನಮಿಯೊಳು ಪುಷ್ಪ ರಚನೆಯುಮಂ ದೀಪರಚನೆಯುಮಂ ಮಾಳ್ಪುದು ಕಡೆಯೊಳುಜ್ಜೈಸುವ ಕ್ರಮೆಂತನೆ | ದೇವರ್ಗ್ಗೆ ಮಹಾಭಿಷೇಕಮಂ ಮಾಳ್ಪುದು | ನಾಲ್ಕು ತೆಱದ ಭಕ್ಷಂಗಳಿಂ ಚರುವನಿಡು ಉದು | ನಾಲ್ಕು ಪ್ರಕಾರದ ಫಲಂಗಳಿಂದರ್ಚ್ಚಿಸುಉದು | ನಾಲ್ಕು ಪರಿಯ ಧಾನ್ಯಮಂ ದೇವರಮುಂದೆ ರಾಸಿಯಂ ಮಾಳ್ಪುದು | ನಾಲ್ಕು ಪ್ರಕಾರದ ಭಕ್ಷೃದಿಂ ಜೈನ ಮಿಥುನಕ್ಕೆ ಬಾಯಿನಮಂ ಕೊಡುಉದು | ನೋನಿಸಿದಜ್ಜಿಯರ್ಗುಡ ಕ್ರಮಂ | ಮತ್ತಂ ಬಡವರೊಡೆಯರೆಂನದೆ ಯಥಾಶಕ್ತಿಯಿಂ ಭಕ್ತಿಪೂರ್ವ್ವಕಂ ನೋಂಪುದೆಂದು ಪೇಳೆ ಕೇಳ್ದು ನೋಂಪಿಯಂ ಮದನಸೌಂದರಿ ಕೈಕೊಂಡು ಗುರುಗಳು ಬೀಳ್ಕೊಂಡು ಬಂದು ಯಥಾಕ್ರಮದಿಂ ನೋನುತ್ತಮಿರಲಾ ಪುರದ ಪರದನೊರ್ವ್ವಂ ನಿರ್ವಿಶುದ್ದಿಯೆಂಬನಾತನ ಪೆಂಡತಿ ಶೀಲವತಿಯೆಂಬಳಂತವರಿರ್ವ್ವರ್ಗ್ಗಂ ಮೂವತ್ತುನಾಲ್ಕು ಗಂಡುಮಕ್ಕಳಾಗಿಯನಿಬರುಂ ದುರ್ಬುದ್ಧಿಗಳಾಗಿ ಬಸಿರ್ಗ್ಗೆ ಕೂಳ ಪಡೆವನಿತುಪಾಯಮನಱಿಯದಿರೆ ಶೀಲವತಿ ತಂನ ತಾನುಮೀ ನೋಂಪಿಯಂ ಮದನ ಸೌಂದರಿಯೊಡನೆ ಕೈಕೊಂಡು ಯಥಾಕ್ರಮದಿಂ ಭಕ್ತಿ ಪೂರ್ವ್ವಕಂ ನೋಂತುಜ್ಜೈಸಿ ತತ್ಫಲದಿಂ ತದ್ಭವದೊಳೆ ದರಿದ್ರ ಭಾರಮನೀಡಾಡಿ ಸಮಸ್ತ ಧನ ಕನಕ ಸಮೃದ್ಧಿಯಾಗಿ ಮತ್ತಂ ತಂನ ಮಕ್ಕಳುಂ ತಾನುಂ ಬುದ್ಧಿಯೊಡೆಯರಾಗಿ ವಸ್ತು ಪುರುಷರಪ್ಪುದುಮಾ ಪುರದ ರಾಜಶ್ರೇಷ್ಠಿಯ ಮಕ್ಕಳು ಮೂವತ್ತ ನಾಲ್ವರ‍್ಕುಮಾರಿಯರಂ ತಂನ ಮಕ್ಕಳಿಂಗೆ ಮದುವೆಯಂ ಮಾಡಿ ಮತ್ತಂ ತಂಮನಿಬರುಂ ಫಲವುಂ ನಿಧಿ ನಿಧಾನಂಗಳ್ಗೊಡೆಯರಾಗಿ ಜಿನ ಧರ್ಮ್ಮದ ನಿರತಿಶಯದ ನೋಂಪಿಯೊಳಾದ ಮಹಾ ಮಹಿಮೆಯಂ ಪ್ರಭಾವಿಸುತ್ತಂ ದೀನಾನಾಥರಂ ದಾನ ಸನ್ಮಾನಾದಿಗಳಿಂ ತಣಿಪುತ್ತಂ ಸಮಸ್ತ ಭೋಗೋಪಭೋಗಂಗಳೊಳ್ಕೂಡಿ ಪರಂಪರೆಯಿಂ ನಿರ್ವ್ವಾಣ ಪದವಿಯಂ ಪಡೆದರಿಂತು

|| ಕ || ನಿರತಿಶಯ ಸುಖದ ನೋಂಪಿಯ
ನುರು ಮುದದಿಂ ನೋಂಪ ನೋನಿಪರ್ ಕ್ರಮದಿಂದಂ
ಪೌರುಷಮನೆಯ್ದಿ ಭವ್ಯ
ರ್ಪ್ಪರಮ ಸುಖಾಸ್ಪದಮಾ ಮುಕ್ತಿ ಪದಮಂ ಪಡೆವರ್ ||