ಶ್ರೀ ವೀರವರ್ದ್ಧಮಾನರ
ಪಾವನ ಕೋಮಳ ಪದಾಂಬುಜಾತಂಗಳಿಗಾಂ
ಭಾವ ವಿಶುದ್ಧಿಯೊಳೆೞಗೀಯೆ
ಭೂವಳಯಕ್ಕೈದೆಗೊಳದ ಕಥೆಯಂ ಪೇಳ್ವೆಂ ||

|| ವ || ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದೊಳ್ಮ ಗಧೆಯೆಂಬುದು ನಾಡು ರಾಜಗೃಹಮೆಂಬುದು ಪೊಳಲದನಾಳ್ವಂ ಶ್ರೇಣಿಕ ಮಹಾಮಂಡಲೇಶ್ವರನಾಥನ ಪಟ್ಟದರಸಿ ಚೇಳಿನಿಮಹಾದೇವಿಯಂಬಳಂತವರಿರ್ವ್ವರುಂ ಸುಖಾಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ ಶ್ರೀಮತಿ ಗಂತಿಯರ್ಚ್ಚರ್ಯ್ಯಾ ಮಾರ್ಗ್ಗಂದಿಂ ಬರೆ ಕಂಡು ಚೇಳಿನಿಮಹಾದೇವಿಯರುಂ ಬಂದು ಪಂಚಮುಷ್ಟಿಯಿಂ ಬಂಧಿಸಿ ನಿಲಿಸಿ ಚರ್ಯ್ಯನಂತರಂ ಕರಕಮಳಂಗಳಂಗಳ ಮುಗಿದು ವಿನಯದಿಂ ಬಿಂನಪಮೆಂದಿಂದಿತೆಂದಳು ಯೆಂನೆಯ್ದೆತನಮುಂ ಪುತ್ರ ಮಿತ್ರ ಬಾಂಧವರುಂ ಸ್ಥಿರತಾವರೆಯಾಗಿರ್ಪ್ಪುದಾವುದಾನುಮೊಂದು ನೋಂಪಿಯಂ ಬೆಸಸಿಮೆನೆಲವರಯ್ದೆಗೊಳದ ನೋಂಪಿಯನಿಂತೆಂದು ಪೇಳ್ದರೂ || ಶ್ರಾವಣ ಮಾಸದುತ್ತರಾನಕ್ಷತ್ರದೊಳು ಹತ್ತಳೆಯ ಪೊಂಗು ನೂಲಂ ಕಟ್ಟಿಕೊಂಬುದು | ಪುತ್ರಮಿತ್ರಾದಿಗಳ್ವೆರಸು ಚೈತ್ಯಾಲಯಕ್ಕೆ ಬಂದು ಕೊಳನನಿಕ್ಕಿ ನಾಲ್ಕು ದಿಕ್ಕಿ …… ಯೀಂದೋದಿಯುಮಂ ಭಿತ್ತಿ ಸರೋವರದ ನಡುವೆ ಜಕ್ಕಳೆಯಂ ಸ್ಥಾಪ್ಯಂ ಮಾಡಿ ನಾಲ್ಕು ದಿಕ್ಕಿನೊಳಂ ಸ್ಥಾಪ್ಯಂ ಮಾಡಿ ಆಯ್ದು ಹಿಡಿ ಅಕ್ಕಿ ಉಪ್ಪು ನನೆಗಡಲೆ ವೆರಸು ದೇವರ್ಗ್ಗಷ್ಟ ವಿಧಾರ್ಚ್ಚನೆಯಂ ಮಾಡೂದೂ | ಜಕ್ಕಳೆಯನರ್ಚ್ಚಿಸೂದು || ನಂದಾದೀವಿಗೆಯನಿರುಸೂದೂ | ದಿನಂಪ್ರತಿ ಕಥೆಯ ಕೇಳೂದೂ ಹತ್ತನೆಯ ದಿನದೊಳು ಆಯ್ದು ಹೂರಿಗೆಯಂ ದೇವರ್ಗ್ಗಂ ಜಕ್ಕಳೆಯಂ ಅರ್ರ್ಚಿಸೂದು | ಅಯ್ದೆಯರ್ಗ್ಗೆ ಬಾಯಿನಮಂ ಕೊಡೂದು | ನೋನಿಸಿದರ್ಗ್ಗಂ ಕಥಕಗಂ ಬಾಯಿನಮಂ ಕೊಡಉದು | ಯೀಕ್ರಮದಿಂ ಆಯ್ದು ವರುಷಂನೊಂತುಜ್ಜಯಿಸುವ ಕ್ರಮಮೆಂತೆಂದೊಡೆ ದೇವರ್ಗ್ಗೆ ಮಹಾಭಿಷೇಕ ಪೂಜೆಯಂ ಸವಿಸ್ತರಂ ಮಾಡಿ ಕೊಳಲುಂ ಹೊಸ ವಸ್ತ್ರದಿಂದಲಂಕರಿಸಿ ದೇವರಿಗೆ ಹೊಸ ವಸ್ತ್ರಮಂ ಹಾಸೆಯಂ ಪಾಸಿ | ದೇವತೆಯ ಮುಂದೆ ಆಯ್ದು ಪಿಡಿಯಕ್ಕಿ ಉಪ್ಪು ನನೆಗಡಲೆಯಂ ಪುಂಜಂ ಮಾಡಿ | ದೇವರ್ಗ್ಗಂ | ದೇವತೆಗಂ ವಡ್ಡಚರುವ ನೀಡುಉದು | ಶ್ರುತಗುರು ಪೂಜೆಯಂ ಮಾಡಿ ಕಥೆಯಂ ಕೇಳ್ದೇಕ ಭುಕ್ತಮಂ ಕೈಕೊಂಡು ಕಥಕನಂ ಪೂಜಿಸೂದು | ಆಯ್ದು ತಂಡ ರುಷಿಯರ್ಗ್ಗೆ ಆಹಾರ ದಾನಮಂ ಮಾಡೂದೂ | ನೋನಿಸಿದ್ದಜ್ಜಿಯರ್ರ್ಗುಡ ಕೊಉದು | ಮತ್ತಂ ಬಡವರೊಡೆಯರೆನ್ನದೆ ಯಥಾ ಶಕ್ತಿಯಿಂ ಭಕ್ತಿ ಪೂರ್ವ್ವಕಂ ನೋಂಪುದೆಂದು ಪೇಳೆ ಕೇಳ್ದು | ಸಂತೋಷ ಚಿತ್ತೆಯಾಗಿ ಚೇಳಿನಿ ಮಹಾದೇವಿ ನೋಂಪಿಯಂ ಕೈ ಕೊಂಡು ಶ್ರೀಮತಿ ಗಂತಿಯರಂ ಬೀಳ್ಕೊಂಡು ಯಥಾಕ್ರಮದಿಂ ನೋಂತುಜ್ಞೈಸಿ ತತ್ಫಲದಿಂ ದೇವಕುಮಾರ ಸಂನಿಭರಪ್ಪಪಲಂಬರು ಮಕ್ಕಳಂ ಪಡೆದು ಪಲವು ನಿಧಿ ನಿಧಾನಗಳ್ಗೊಡೆಯರಾಗಿ ಮುತ್ತೈದೆ ನಿತ್ತೈದೆ | ಪತ್ತೈದೆಯಾಗಿ | ತಂನಿತ್ತರುಂ ಮುತ್ತುರುಂ ಹೆತ್ತರುಂ ತಾನುಂ ತಂನ ವಲ್ಲಭನುಂ ಪಲಕಾಲ ಸುಖಮನನುಭವಿಸುವರುಂ ಅಯ್ದೆಗೊಳದ ನೋಂಪಿಗೆ ಮಂಗಲಮಹಾಶ್ರೀ.