ಶ್ರೀ ವೀತರಾಗಾಯ ನಮಃ ||

          ಶ್ರೀಮದ್ವೀರ ಜಿನೇಂದ್ರಂ
ಗಾಮುದದಿಂದೆಱಗಿ ಪಂಚಕಲ್ಯಾಣಂ ಮೆಂ
ಬೀ ಮಹಿಮೆವೆತ್ತ ನೋಂಪಿಯ
ಕಾಮಿತ ಫಲವೀವ ಕಥೆಯನಭಿವರ್ಣ್ನಿಸುವೆಂ ||

|| ಮ || ಅದೆಂತೆಂದೊಡೆ ಜಂಬೂದ್ವೀಪದ ಭರತ ಕ್ಷೇತ್ರದ ಕಾಂಭೋಜಮೆಂಬ ವಿಷಯದೊಳುಭೂತಿಲಕಮೆಂಬ ನಗರಮುಂಟದನಾಳ್ವ ಸಿಂಹವಿಕ್ರಮನೆಂಬರಸನಾತನ ಪಟ್ಟದರಸಿ ಪದ್ಮಾವತೀ ದೇವಿಯೆಂಬಳಂತವರಿರ್ವ್ವರುಂ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ ಮುನಿಗುಪ್ತ ಭಟ್ಟಾರಕರೆಂಬ ದಿವ್ಯ ಜ್ಞಾನಿಗಳು ವಿಹಾರಿಸುತ್ತಂ ಬಂದಾ ಪುರದ ಬಹಿರುದ್ಯಾನವನದೊಳಿರ್ದ್ದುದಂ ವನಪಾಲಕನಿಂದಱಿದುವ್ ಸಮಸ್ತ ಪರಿಜನಂ ಪುರಜನಂ ಬೆರಸು ಪಾದಮಾರ್ಗ್ಗದಿಂ ಪೋಗಿ ತ್ರಿಃಪ್ರದಕ್ಷಿಣಂಗೆಯ್ದು ಫಲವರ್ಚ್ಚನೆಗಳಿಂದರ್ಚ್ಚಿಸಿ ಗುರುಭಕ್ತಿಪೂರ್ವ್ವಕಂ ಬಂದಿಸಿ ಮುಂದೆ ಕುಳ್ಳಿರ್ದ್ದು ನಿರ್ಮ್ಮಲ ಚಿ ತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ತದ ನಂತರಂ ಪದ್ಮಾವತೀದೇವಿ ಕರಕಮಲಂಗಳಂ ಮುಗಿದು ಸ್ವಾಮಿ ಯೆನಗಾಉದಾನುಮೊಂದು ನೋಂಪಿಯಂ ದಯಗೆಯ್ಯಿಮೆನಲವರ್ಪ್ಪಂಚ ಕಲ್ಯಾಣದ ನೋಂಪಿಯನಿಂತೆಂದು ಪೇಳ್ದರಾಉದಾನುಮೊಂದು ನಂದೀಶ್ವರದ ಪೌರ್ಣ್ನಿಮಿಯೊಳು ಕೈಕೊಂಡು | ಮುಂದಣ ನಂದೀಶ್ವರ ಪೌರ್ನ್ನಮಿ ಪರಿಯಂತಂ ತಿಂಗಳ ತಿಂಗಳ ನಡುವಣ ಪೌರ್ನ್ನಮಿಗಳೊಳು ಪಂಚ ಪರಮೇಷ್ಠಿಗಳ ಪ್ರತುಮೆಗೆ ಪಂಚಾಮೃತದಿಂದ ಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿ ಪಂಚಭಕ್ಷ್ಯ ಪಾಯಸದಿಂ ಚರುವನಿಟ್ಟು ಅಷ್ಟ ವಿಧಾರ್ಚ್ಚನೆಯಂ ಮಾಳ್ಪುದು | ತದನಂತರಂ ಶ್ರುತಗುರು ಪೂಜೆಯಂ ಮಾಳ್ಪುದು | ಯೇಕಭುಕ್ತಮಂ ಕೈಕೊಂಡು ಕಥೆಯ ಕೇಳ್ದು ಕಥಕಂಗೆ ಪಂಚಭಕ್ಷ್ಯ ಸಹಿತ ಬಾಯಿನಮಂ ಕೊಡುಉದು | ಕಡೆಯಲುಜ್ಜವಣೆಯ ಕ್ರಮಮೆಂತೆನೆ ಮುಂ ಪೇಳ್ದ ಕ್ರಮದಿಂ ಪಂಚ ಪರ ಮೇಷ್ಠಿಗಳಿಗೆ ಪಂಚಾಮೃತದಿಂದಭಿಷೇಕಮಂ ಸವಿಸ್ತರದಿಂ ಮಾಡಿ ಪಂಚ ಪ್ರಕಾರದ ಪಾಯಸ | ಪಂಚ ಪ್ರಕಾರದ ಭಕ್ಷ್ಯದೊಳು ಪ್ರತ್ಯೇಕ ಪದಿನಾಱುಮಂ ದೇವರ್ಗ್ಗೆ ಅಷ್ಟವಿಧಾರ್ಚ್ಛನೆಯಂ ಮಾಳ್ಪುದು | ಶ್ರುತಕ್ಕೊಂದಱಲ್ಲಿ ನಾಲ್ಕು ನಾಲ್ಕುಮಂ ಶ್ರುತವಸ್ತ್ರ ಸಹಿತಂ ಶ್ರುತ ಪೂಜೆಯಂ ಮಾಳ್ಪುದು | ಮುನಿ ಪಾದಾರ್ಚ್ಛನೆಯಂ ಮಾಳ್ಪುದು | ತದ ನಂತರಂ ಚಕ್ರೇಶ್ವರಿ | ಜ್ವಾಲಿನಿ | ರೋಹಿಣಿ | ಜಕ್ಕಳಿ | ಪದ್ಮಾವತಿಯರಂ ಪೆಸರ್ಗ್ಗೊಂಡು ಅಯ್ವರ್ಸ್ಸೋವಾಸಿನಿಯರ್ಗ್ಗೆ ಸುಗಂಧಾಕ್ಷತೆ ಪುಷ್ಪ ತಾಂಬೂಲ ಸಹಿತಂ ಪಂಚ ಪ್ರಕಾರದ ಭಕ್ಷ ದೊಳಯ್ದಯ್ದುಮನಿರಿಸಿ ಬಾಯಿನಮಂ ಕೊಡುಉದು | ವೊಂದು ತಂಡ ರುಷಿಯರ್ಗ್ಗೆ ತಟ್ಟು ಕುಂಚ ಗುಂಡಿಗೆಯಂ ಠವಣೆ ಕೋಲು ಶ್ರುತ ಪಾವಡೆ ಸಹಿತಂ ಕೊಡುಉದು | ವೊಂದು ತಂಡಜ್ಜಿಯರ್ಗ್ಗೆ ಉಡ ಕೊಡುಉದು | ಚಾತುರ್ವ್ವರ್ಣ್ನಕ್ಕೆ ಚತುರ್ವ್ವಿಧ ದಾನಮಂ ಮಾಳ್ಪುದು ಇದು ಉಜ್ಜವಣೆಯ ಕ್ರಮ | ಮತ್ತಂ ಬಡವರೊಡೆಯರೆಂನದೆ ಯಥಾ ಶಕ್ತಿಯಿಂ ಭಕ್ತಿ ಪೂರ್ವ್ವಕಂ ನೋಂಪುದೆಂದು ಪೇಳೆ ಕೇಳ್ದು ಸಂತುಷ್ಟಚಿತ್ತರಾಗಿ ತಾಮಿರ್ವ್ವರುಂ ಸಮಸ್ತ ಬಂಧು ಜನ ಸಹಿತಂ ನೋಂಪಿಯಂ ಕೈಕೊಂಡು ಗುರುಗಳಂ ಬೀಳ್ಕೊಂಡು ಬಂದು ಯಥಾ ಕ್ರಮದಿಂ ನೋಂತುಜ್ಜವಣೆಯಂ ಮಾಡಿ ತತ್ಫಲದಿಂ ಪರಮೈಶ್ವರ್ಯ್ಯದೊಳ್ಕೂಡಿ ಸಮಸ್ತ ಸಂಸಾರ ಸುಖಾಮೃತ ಸಮುದ್ರದೊಳೋಲಾಡಿ ಪರಂಪರೆಯಿಂ ನಿರ್ವ್ವಾಣ ಸುಖಮಂ ಪಡೆದರು | ಯೀ ಪಂಚಕಲ್ಯಾಣದ ನೋಂಪಿಯಂ ಯಥಾ ಶಕ್ತಿಯಿಂ ಭಕ್ತಿ ಪೂರ್ವ್ವಕಂ ನೋಂತುವರ್ಗ್ಗಳುಂ ನೋನಿಸಿದವರ್ಗ್ಗಳುಂ ಸ್ವರ್ಗಮುಕ್ತಿ ಸೌಖ್ಯಪ್ರಾಪ್ತಿಯಿಂದಿರ್ಪ್ಪರು ಜಯ ಮಂಗಳ ಮಹಾಶ್ರೀ