ಶ್ರೀ ಶಾಂತಿನಾಥಾಯ ನಮಃ ||

          ಕಂ || ಶ್ರೀವೃಷಭಾದಿ ಜಿನೇಂದ್ರಂ
ಗಾವಗಮೊಲಿದೆರಗಿ ಭಕ್ತಿ ಪೂರ್ವ್ವಕದಿಂದಂ
ಆವುದ ಪಂಚಾಳಂಕಾ
ರಾಮೆಂಬುವ ನೋಂಪಿಯ ವಿಧಿಯನು ನಾಂ ಪೇಳ್ವೆ ||

ವ || ಅದೆಂತೆಂದೊದೀ ಜಂಬೂದ್ವೀಪದ ಭರತಕ್ಷೇತ್ರದ ಮಗಧ ದೇಶದ ಸೌಂದರ ಪುರಮೆಂಬುದೊಂದು ಪೊಳಲದನಾಳ್ವಂ ವಿಶ್ವಸೇನಮಹಾರಾಜನೆಂಬರಸನಾತನಗ್ರಮಹಿಷಿ ರೂಪಸೌಂದರಿ ಯೆಂಬಳಂತವರೀರ್ವರುಂ ಸುಖಸಂಕಧಾ ವಿನೋದದಿಂ ರಾಜ್ಯಂಗೆಯುತ್ತಮಿರೆ ಅಕಾಲಜನಿತ ಕುಸುಮಫಲಾದಿಗಳಂ ಕೊಂಡು ವನಪಾಳಕಂ ಬಂದರಸಂಗೆ ಕಾಣಿಕೆಯಿತ್ತು ದೇವಾ ನಮ್ಮ ಉದ್ಯಾನವನದ ಪಶ್ಚಿಮ ದಿಗ್ಭಾಗದ ವಿಪುಲಗಿರಿಯ ಶಿಖರದಲ್ಲಿ ಶ್ರೀವರ್ದ್ಧಮಾನ ಸ್ವಾಮಿಗಳ ಸಮವಸರಣಂ ಬಿಜಯಂ ಗೆಯ್ದುದೆಂದು ಬಿನ್ನವಿಸೆ ಹರ್ಷೋತ್ಕರರ್ಷಚಿತ್ತನಾಗಿ ಯಾ ದೆಸೆಗೇಳಡಿಯಂ ನಡೆದು ನಮಸ್ಕರಿಸಿ ವಸಗೆತಂದ ವನಪಾಲಕಂಗಂಗಚಿತ್ತಮನಿತ್ತಾನಂದ ಭೇರಿಯಂ ಪೊಯ್ಸಿ ಪರಿಜನ ಪುರ ಜನಸಮೇತಂ ತನ್ನ ಪಟ್ಟದರಸಿ ಸಹಾ ಐನೂರ್ವ್ವರರಿಸಿಯರಂ ಸಹಿತಂ ಪೋಗಿ ದೂರದಿಂ ವಾಹನಮನಿಳಿದು ಸಮವಸರಣಮಂ ಪೊಕ್ಕು ಗಂಧಕುಟಿಯಂ ತ್ರಿಃಪ್ರದಕ್ಷಿಣಂ ಗೆಯ್ದು ವಸ್ತುಸ್ತವ ರೂಪಸ್ತವ ಗುಣಸ್ತವಗಳಿಂ ಸ್ತುತಿಯಿಸಿ ಸಾಷ್ಟಾಂಗ ಪ್ರಣತನಾಗಿ ಅನೇಕ ಪುಷ್ಪ ಫಲಾರ್ಚನೆಗಳಿಂದರ್ಚಿಸಿ ಸರ್ವ್ವಜ್ಞಂಗೆ ಅರ್ಚನೆಯಂ ವಂದನೆಯಂ ಮಾಡಿ ವಿಶ್ವಸೇನ ಮಹಾರಾಜನುಂ ರೂಪಸೌಂದರಿಯುಂ ಮುಂದೆ ಕುಳ್ಳಿರ್ದು ನೈರ್ಮಲ್ಯ ಚೇತನಸ್ವಭಾವದಿಂ ಧರ್ಮ್ಮಸೃತಿಯಂ ಕೇಳ್ದು ಹರ್ಷೋತ್ಕರ್ಷಚಿತ್ತನಾಗಿ ತದನಂತರಂ ಗೌತಮ ಗಣಧರರಿಗೆ ಕರಕಮಳಮಂ ಮುಗಿದು ಎಲೆಸ್ವಾಮಿ ಎನಗನಂತಸುಖಕರಮಪ್ಪುದಾವುದಾನೊಂದು ನೋಂಪಿಯಂ ಬೆಸಸಿ ಮೆನಲವರಿಂತೆಂದು ಬೆಸಸಿದರು ಪಂಚಾಳಂಕಾರಮೆಂಬ ನೋಂಪಿಯುಂಟಾ ನೋಂಪಿಯಂ ನೋಂಪುದೆನೆ ಆ ನೋಂಪಿಯ ವಿಧಿಯಂ ಬೆಸಸಿ ಎನಲವರಿಂತೆಂದು ಬೆಸಸಿದರೂ ಆವುದಾನೊಂದು ನಂದೀಶ್ವರದಷ್ಟಾಹ್ನೀಕದಲ್ಲೂ ನೋಂಪವರೆಲ್ಲಂ ದಂತಧಾವನ ಸ್ನಾನ ಧೌತವಸ್ತ್ರಾಂತರೀಯದಿಂದ ಅಳಂಕಾರಮಂ ಮಾಡಿಕೊಂಡು ಶುಚಿರ್ಭೂತರಾಗಿ ಚೈತ್ಯಾಲಯಕ್ಕೆ ಬಂದು ಜಿನೇಂದ್ರಂಗಭಿಷೇಕಾಷ್ಟ ವಿಧಾರ್ಚನೆಯಂ ಮಾಡಿ ಅರಹಂತರು ಸಿದ್ಧರು ಅಚಾರ್ಯ್ಯರು ಉಪಾಧ್ಯಾಯರು ಸರ್ವಸಾಧುಗಳುಮೆಂದು ಪೆಸರ್ಗ್ಗೊಂಡು ಐದು ಪಿಡಿಯಕ್ಕಿಯ ಪಿಂಜಮನಿಕ್ಕಿ ಐದು ಗಂಧತಿಲಕ ಐದು ಅಕ್ಷತೆಯಪುಂಜ ಐದುಪರಿಯ ಪುಷ್ಪ ಐದುಪರಿಯ ಭಕ್ಷದಲ್ಲೂ ಐದೈದುಸೇವಗೆಯ ಪಾಯಸ ಸಹಿತಂ ಚರುವನಿಟ್ಟು ಐದು ಬಾರೀ ದೀಪ ಐದುಬಾರೀ ಧೂಪ ಐದುಪರಿಯ ಫಲದಲ್ಲಿ ಐದೈದು ಫಲವನರ್ಚಿಸೂದು ದೊರಕದಿರ್ದ್ದಡೆ ಒಂದುಪರಿಯ ಫಲದಲ್ಲಿ ಐದನರ್ಚಿಸೂದು ಐದು ಶಾಂತಿಧಾರೆಯಂ ಕೊಡುವುದು ಓಂ ಹ್ರಾಂ ಹ್ರೀಂ ಹ್ರೂಂ ಹ್ರಃ ಅ ಸಿ ಉ ಸಾ ಶಾಂತಿರ್ಭವತು ಜಲಂ ನಿರ್ವ್ವಪಾಮಿ ಸ್ವಾಹಾ | ಗಂಧಂ ಸ್ವಾಹಾ | ಅಕ್ಷತಂ ಸ್ವಾಹಾ | ಪುಷ್ಪಂ ಸ್ವಾಹಾ | ಚರುಂ ಸ್ವಾಹಾ | ದೀಪಂ ಸ್ವಹಾ | ದೂಪಂ ಸ್ವಾಹಾ | ಫಲಂ ಸ್ವಾಹಾ | ಶಾಂತಿ ಧಾರಾಂ ಸ್ವಾಹಾ | ಎಂದು ಶಾಂತಿಧಾರೆಯನೆತ್ತುವುದು | ತದನಂತರಂ ಶ್ರುತಮಂ ರಚನೆಪೂರ್ವ್ವಕಂ ಅಷ್ಟವಿಧಾರ್ಚನೆ ಯಂ ಮಾಡುವುದು ಪೂರ್ವ್ವಾಚಾರ್ಯ್ಯರನರ್ಚಿಸೂದು ಋಷಿಯರ್ಗ್ಗೆ ನಮೋಸ್ತುಪೂರ್ವ್ವಕಂ ವಂದನೆಯಂ ಮಾಡಿ ನೋಂಪಿಯಂ ಕೈಕೊಂಡು ಕಥೆಯಂ ಕೇಳ್ದು ಉಪವಾಸಮಂ ಕೈಕೊಂಬುದು ಆರದಿರ್ದೊಡೇಕ ಠಾಣಲ್ಲೂ ಏಕಭಕ್ತಮಂ ಮಾಳ್ಪುದು ನೋಂಪಿಯ ತೊಡಗಿದ ದಿನಂ ಮೊದಲಾಗಿ ಐದುತಿಂಗಳಪರ್ಯ್ಯಂತ ದಿನಂಪ್ರತಿ ಐದು ಪಿಡಿಯಕ್ಕಿ ಐದು ಅಡಕೆ ಐದು ಅಡಕೆ ಐದು ಎಲೆ ಐದು ಪುಷ್ಪ ಆವುದಾನೊಂದು ದೊರಕಿದ ಫಲವಸ್ತು ಒಂದು ಸೊಡರು ಇಷ್ಟನ್ನು ಅರ್ಚಿಸುವುದು ದಿನಂಪ್ರತಿ ಪಂಚಪರಮೇಷ್ಠಿಗಳಿಗೆ ಹಾಲುಧಾರೆಯ ಮಾಡುತ್ತಂ ಬಹುದು ತಿಂಗಲು ತಿಂಗಳು ಐದುಪಂಚಮಿಯಲ್ಲಿ ನೋಂಪಿಯಂ ತೊಡಗಿದದಿನದಲ್ಲು ಮಾಡಿದಕ್ರಮಂ ತಪ್ಪದೆ ಮಾಡುವುದು ಕಡೆಯಪದಕ್ರಮಂ ತಪ್ಪದೆ ಮಾಡುವುದು ಕಡೆಯಪಂಚಮಿಯಲ್ಲಿ ಉದ್ಯಾಪನೆಯಂ ಮಾಳ್ಪಕ್ರಮಮೆಂತೆಂದರೆ ಐದುಪರಿಯ ಭಕ್ಷದಲ್ಲೂ ಐದೈದನು ಮಾಡಿ ಐವರಿಗೆ ಬೇರೆ ಬೇರೆ ಪೆಸೆರ್ಗೊಂಡು ಸೇವಗೆಯ ಪಾಯಸ ಸಹಿತಂ ಚರುದನಿಟ್ಟು ಬೆಲ್ಲ ತುಪ್ಪ ಸಹಿತಾಷ್ಟವಿಧಾರ್ಚನೆಯಂ ಮಾಡಿ ಐದುಗಂಧತಿಲಕ ಐದುಅಕ್ಷತೆಯಪುಂಜ ಐದುಪುಷ್ಪ ಐದುದೀಪ ಐದುಧ್ರೂಪ ಐದುಪರಿಯಫಲ ಐದುಪರಿಯಭಕ್ಷ ಐದುಪುಷ್ಪರಚನೆಯಿಂದರ್ಚಿಸಿ ವಸ್ತ್ರಾಲಂಕಾರಮಂ ಮಾಡಿ ಐದುಪರಿಯಭಕ್ಷದಲ್ಲೂ ಸೇವಗೆಯ ಪಾಯಸ ಬೆಲಸಹಿತಂ ಶ್ರುತಸ್ಕಂಧಪ್ರತಿಷ್ಠಾಪನಂ ಮಾಡಿಶ್ರುತಾಭಿಷೇಕ ಸಹಿತಂ ಚರುವನಿಡುವುದು ತಟ್ಟುಪಿಂಛ ಠವಣೆಕೋಲು ಪುಸ್ತುಕ ಶ್ರುತಪಾವಡೆಸಹಿತಂ ಕೊಡುವುದು ಐವರಜ್ಜಿಯರ್ಗ್ಗೆ ಉಡಕೊಡುವುದು ಚಾತುರ್ವ್ವರ್ಣ್ನಕ್ಕೆ ಯಥಾಶಕ್ತಿಯಿಂ ಸುವರ್ಣ್ನದಾನಮಂ ಮಾಳ್ಪುದುಯಿಂತಿದು ನೋಂಪಿಯ ವಿಧಾನಮೆಂದು ಪೇಳೆಕೇಳ್ದು ಸಂತುಷ್ಟಚಿತ್ತನಾಗಿ ನೋಂಪಿಯಂ ಕೈಕೊಂಡು ಯಥಾವಿಧಿಯಿಂ ನೋಂತುಜ್ಜೈಸಿ ಕಡೆಯೊಳ್ವಿಶಿಷ್ಟವೈರಾಗ್ಯ ಪರಾಯಣನಾಗಿ ಜಿನದೀಕ್ಷೆಯಂ ಕೈಕೊಂಡು ಉಗ್ರೋಗ್ರ ತಪಶ್ಚರಣಂಗೈದು ಸಮಾಧಿವಿಧಿಯಿಂ ಮುಡುಪಿ ಐದನೆಯ ಸ್ವರ್ಗ್ಗದಲ್ಲಿ ಪುಟ್ಟಿ ಅಲ್ಲಿಯಸುಖಮನನುಭವಿಸಿ ಬಂದಿಲ್ಲಿ ಚಕ್ರವರ್ತ್ತಿ ಶ್ರೀಯಂ ಪಡೆದು ಷಟ್ಕಂಡಮಂಡಳಾ ಧಿಪತಿಯಾಗಿ ರಾಜ್ಯಶ್ರೀಯುಮಂ ಭೋಗೋಪಭೋಗ ವಿಭವಾನುಭವಮಂ ಮಾಡಿ ಕಡೆಯೋಳ್ ವೈಗ್ಯಪುಟ್ಟಿ ಸಮಸ್ತರಾಜ್ಯಮಂ ಜರತೃಣಮಾಗಿ ಬಗೆದು ಬಿಟ್ಟು ಜಿನದೀಕ್ಷೆಯಂ ಕೈಕೊಂಡುಗ್ರೋಗ್ರ ತಪಶ್ಚರಣಂಗೆಯ್ದು ಪರಂಪರೆಯಿಂ ಮೋಕ್ಷಮಂ ಪಡೆದನೂ || ಪಂಚಾಳಂಕಾರ ನೋಂಪಿಯಕಥೆಗೆ ಮಂಗಳಾಮಹಾ || ಶ್ರೀ ಶ್ರೀ