|| ವೃ || ಯೇನುಮನೊಲ್ಲೆನೆನ್ನ ಹಿತ ಸುಖಾಪ್ತಿ ನಿಮಿತ್ತ ಮೆನಿಪ್ಟ ಯಾನಮಂ
ತಾನಮನಾದಿನಾಥ ಜಿನನಾಥವೆಡೆಯೊಳ್ನೆಲಸಿರ್ದ್ದ ಮುಕ್ತಿಕಾಂ
ತಾನಿಟಳ ಸ್ವರತ್ತಿಳಕ ಲಕ್ಷ್ಮಿಯೊಳೊಂದಿದಲ್ಲಿಗೆಂನುಮಂ
ನೀ ನಿರದೊಯ್ದು ಸತ್ಪಥಮನೈಯ್ದಿಸು ದುಃಖವಿಗರ್ತಾತ್ಮಗಂ ||

          || ಕ || ವಿಭುಚರಿತಂ ಮಾಡಿ ಭೂ
ತ ಭವಿಷ್ಯದ್ವರ್ತ್ತಮಾನ ಜಿನಗೃಹ ಶೋಕಾ
ವಿಭವೆ ಕ್ಷಣ ಸುಖರಸದಿಂ
ಪ್ರಭೂತ ಶೋಕಾಗ್ನಿ ದಾಹಮಂ ಮಗ್ಗಿಸುವೆಂ ||

|| ವ || ಯೆನಲೊಡನಾ ಮಾನಿನಿಯಂ ವಿದ್ಯಾಕಾಂತೆ ಕೈಳಾಸಕ್ಕೊಯ್ದಿಳಿಪುವುದುಂ

|| ಕ || ಯೆನಿತು ಜಿನಾಲಯಮಂ
ತನಿತು ಮನೊಲವಿಂ ಪ್ರದಕ್ಷಿಣ ತ್ರಯ ಸಹಿತಂ
ವಿನುತಿಗಳೊಳೊಂದಿ ಜಿನವಂ
ದನೆಯಂ ಪರಿಪೂರ್ನ ಭಕ್ತಿಯಿಂ ನಿರ್ಮಿಸಿದಳೂ ||

          ಅನುರಾಗದಿಂ ಪ್ರಭಾವತಿ
ಜಿನಮಂದಿರಮೊಂದಲ್ಲಿಱಲ್ ಧರಣೇಂದ್ರಾಂ
ಗನೆ ಪದ್ಮಾವತಿ ಬಂದ
ದನರ್ಚ್ಚಿಸಿ ಪೊಱಮಡುತ್ತೆ ಕಂಡಾ ಸತಿಯಂ ||

          ನೀನಾರ್ಗ್ಗೆನಲ್ ಪ್ರಭಾವತಿ
ತಾನೆಳ್ತಂದ ಪ್ರಪಂಚಮಂ ಪೇಳುತಿರ
ಲ್ಯಾನಂದದಿಂ ದೇವ ಸಂ
ತಾನಂ ಜಿನರಾಜ ಸದನಮಂ ಸಾರ್ತತ್ತಂದರ್ ||

|| ವ || ಅಂತು ಬಂದು ಭಗವದರ್ಹತ್ಪರಮೇಶ್ವರಂಗೆ ಮಹಾಭಿಷೇಕ ಪೂಜೆಯಂ ಯಥಾಕ್ರಮದಿಂ ಮಾಡಿ ಮಾಡಿ ತ್ರಿಪ್ರದಕ್ಷಿಣಂಗೆಯ್ದಾಗಳೂ || ಮಾಳತೀಚರಣ ವೃತ್ತಂ ||

ತ್ರಿದಶರಾಜಪೂಜಿತಂ | ವೃಷಭನಾಥಮೂರ್ಜ್ಜಿತಂ | ಕನಕ ಕೇತಕೈರ್ಯ್ಯಜೇರ್ಬ್ಭವ ವಿನಾಶಕ ಜಿನಂ || ೧ ||

ಅಜಿತನಾಮಧೇಯಕಂ | ವಿವಿಧ ಭವ್ಯ ಸೌಖ್ಯಕಂ | ವಿಜಿತಕೇತ ಕೈರ್ಯಜೇ ರ್ಭ್ಬವ ವಿನಾಶಕಂ ಜಿನಂ || ೨ ||

ಸಕಳಲೋಕ ಸಂಯುಜೇತಹಮೀಹ ಶಂಭವೈರ್ಯ್ಯಜೆ | ಸುರಭಿಸಿಂಧು ವಾರಕ್ಕೆ | ರ್ಭವ ವಿನಾಶಕಂಜಿನಂ || ೩ ||

ವರಗುಣೌಘಸಂಯುಜೆ | ತಮಭಿನಂದನೈರ್ಯ್ಯಜೆ | ವಕುಲ ಮಾಲಯಾ ಸದಾರ್ಬ್ಭವ ವಿನಾಶಕಂ ಜಿನಂ || ೪ ||

ಸುಮತಿ ನಾಮಕಂ ಪರೈ ಸುರಭಿ ವೃಕ್ಷಪುಷ್ಪಕೈರ್ವ್ವರ ಗಣಾಧಿಪರ್ಯ್ಯಜೇರ್ಭ್ಬವ ವಿನಾಶಕಂ ಜಿನಂ || ೫ ||

ತ್ರಿಭುವನಸ್ಯ ವಲ್ಲಭಂ | ವಿಜಿತಮಂಬುಜಪ್ರಭಂ | ನವಸಿತಾಬಕೈರ್ಯ್ಯ ಜೇ ಭವ ವಿನಾಶಕಂ ಜಿನಂ || ೬ ||

ಭುವಿಸುಪಾರಿಶ್ವನಾಮಕಂ || ರಹಿತ ಘೌತಿಕ ರ್ಮ್ಮಕಂ | ಬಹುಯಜೇಹಿಪಾಟಲೈ | ಭವ ವಿನಾಶಕಂ ಜಿನಂ || ೭ ||

ವಿದಿತ ಮುಕ್ತಿ ಸೌಖ್ಯಕಂ || ಸುರಭಿನಾಗ ಚಂಪಕೈರ್ವ್ವರ ಶಶಿಪ್ರಭಂ ಯಜೇರ್ಬ್ಭವ ವಿನಾಶಕಂ ಜಿನಂ || ೮ ||

ಸಕಲಸೌಖ್ಯಾಕಾರಕ್ಕೈಸು ಶತಪತ್ರಧಾಮಕ್ಕೆ | ಸುವಿಧಿನಾಮಕೈರ್ಯ್ಯಜೇ ರ್ಬ್ಬವ ವಿನಾಶಕಂ ಜಿನಂ || ೯ ||

ಪ್ರಚುರ ಭೃಂಗಸಂರವೈ | ರ್ದ್ವಿಕಚನೀಲಕೈರವ್ವೆ | ರ್ಜ್ಜಗತಿ ಶೀತಳಂ ಯಜೇ ಭವವಿನಾಶಕಂ ಜಿನಂ || ೧೦ ||

ವಿಬುಧ ಚಿತ್ತ ನಂದನಂ ಕ್ಷಿತಿಪ ವಿಷ್ಣು ನಂದನಂ | ಕುವಲಯೈರ್ಯ್ಯಜೆ ವಿಭುಂ | ಭವವಿನಾಶಕಂ ಜಿನಂ || ೧೧ ||

ಅರುಹ ಪದಕಾಂತಿಕಂ | ಸುಗುಣ ವಾಸುಪೂಜ್ಯಕಂ | ವರಕುಂದಕೆರ್ಯ್ಯಜೆ | ರ್ಬ್ಭವ ವಿನಾಶಕಂ ಜಿನಂ || ೧೨ ||

ವಿಮಲಸೌಖ್ಯ ಸಂಯುಜೆ | ವಿಮಲ ನಾಮಕೈರ್ಯ್ಯಜೆ | ನವ ನಮೇರು ಪುಷ್ಪಕೈ ರ್ಬ್ಭವ ವಿನಾಶಕಂ ಜಿನಂ || ೧೩ ||

ವರಚರಿತ್ರ ಭೂಷಿತಂ | ನಂತಮನಂತನಾಮಕಂ | ಕನಕ ಪದ್ಮ ಕೈರ್ಯ್ಯಜೆ | ರ್ಭ್ಬವ ವಿನಾಶಕಂ ಜಿನಂ || ೧೪ ||

ನಿಖಿಲ ವಸ್ತು ಬೋಧಕಂ | ವಿಧಿತ ಧರ್ಮ್ಮನಾಥಯತಂ | ನವ ಕದಂಬಕೈರ್ಯ್ಯಜೆ | ರ್ಬ್ಬವ ವಿನಾಶಕಂ ಜಿನಂ || ೧೫ ||

ಭುವನವರ್ತ್ತಿ ಕೀರ್ತಿಂತಂ | ಪರಮಶಾಂತಿ ನಾಮಕಂ | ವಿಚಕಿಲೈರ್ಯ್ಯಜೆ ಸದಾ ಭವವಿನಾಶಕಂ ಜಿನಂ || ೧೬ ||

ತಿಲಕಪುಷ್ಪಧಾಮಕ್ಕೆ | ಪ್ರಚುರ ಪುಂಣ್ಯಾಕಾರಕ್ಕೆ | ರ್ಜ್ಜಗತಿ ಕುಂಥು ಮಾಯಜೆ | ರ್ಬ್ಭವ ವಿನಾಶಕಂ ಜಿನಂ |||| ೧೭ ||

ಅರಮನಂಗರ್ಜ್ಜಿತಂ | ಸಕಲಭವ್ಯ ವಂದಿತಂ | ಕುರುವಕೈರ್ಯ್ಯಜೆ ಪ್ರಭುಂ | ಭವವಿನಾಶಕಂ ಬೆನಂ || ೧೮ ||

ತಮಿಹ ಮಲ್ಲಿನಾಮಕಂ | ತ್ರಿಜಗದೀಶನಾಯಕಂ | ಕುಟಜ ಪುಷ್ಪ ಕೈರ್ಯ್ಯಜೆರ್ಭವ ವಿನಾಶಕಂ ಜಿನಂ || ೧೯ ||

ಗುಣನಿಧಿಂ ಚ ಸುವ್ರತಂ | ವರವಿನೇಯ ಸುವ್ರತಂ | ಸಮುಚ್ಕುಂದಕೈರ್ಯ್ಯಜೆ | ರ್ಭವ ವಿನಾಶಕಂಜಿನಂ || ೨೦ ||

ಭುವಿ ನಮಿಂಸು ನಾಯಕಂ | ಭವಪಯೋಧಿ ಪಾರಗಂ | ವಿಮಳಗೊಜ್ಜ ಕೈರ್ಯ್ಯಜೆ | ರ್ಭ್ಬವ ವಿನಾಶಕಂ ಜಿನಂ || ೨೧ ||

ಶಶಿ ಕರೌಘ ಕೀರ್ತಿತಂ | ವಿಶದ ನೇಮಿ ನಾಮಕಂ | ಅಮರ ಕುಂದಕೈರ್ಯ್ಯಜೆ | ಭವ ವಿನಾಶಕಂ ಜಿನಂ || ೨೨ ||

ಅಪ್ರವರ ಪಾರೀಶ್ವನಾಮಕಂ | ಹರಿತ ವರ್ಣ್ಣ್ನ ದೇಹಕಂ | ಸುಕಣ ವೀರಕೈರ್ಯ್ಯಜೆ | ರ್ಭವವಿನಾಶಕಂ ಜಿನಂ || ೨೩ ||

ಸುಭಗ ವರ್ದ್ಧಮಾನಕಂ | ವಿಬುಧ ವರ್ದ್ಧಮಾನಕಂ | ಸುರಸ ಪುಷ್ಪಕೈರ್ಯ್ಯಜೆ | ರ್ಭವ ವಿನಾಶಕಂ ಜಿನಂ || ೨೪ ||

ವ || ಯೆಂದು ತೀರ್ತ್ಥಕರ ನಾಮಪುರಸ್ಸರಂ ದಿವ್ಯ ಕುಸುಮಾಕ್ಷತ ಫಲಾದಿ ವಿವಿಧಾರ್ಚ್ಚನೆಗಳಿಂದರ್ಚ್ಚಿಸಿ ಸುತ್ತಂ | ಸಂಗೀತ ಸಮನ್ವಿತಂ | ಬಲಗೊಂಡಾ ಜಿನರಂ ಬೀಳ್ಕೊಂಡು ದೇವೇಂದ್ರಂ ನಿಜನಿವಾಸಕ್ಕೆ ಪೋಪುದುಮಿತ್ತಲಾ ಪ್ರಭಾವತಿ ಪೂಜಾ ಪ್ರಭಾವಕ್ಕೆ ಮೆಚ್ಚಿ ಸಂತೋಷಂ ಬಟ್ಟು ಪದ್ಮಾವತಿಗೆ ಕೈಗಳಂ ಮುಗಿದು

|| ಕ || ದೇವಿಯವರಾರ್ಗ್ಗೆ ಪೂಜೆಯ
ದಾವುದು ಪೆಸರೇನಿದಕ್ಕೇ ನಿದಱ ಫಲಮಂ
ಸದ್ಭಾವದಿ ಬೆಸಸುವುದೆನೆ ಪ
ದ್ಮಾವತಿ ಧರ್ಮ್ಮಾನುರಾಗಮತಿ ಯಿಂತೆಂದಳೂ ||

          || ವೃ || ಯಿದು ದೇವೇಂದ್ರಯುತಂ ಚತುರ್ವ್ವಿಧ ಸುರಾನಿಕಂ ಲಸತ್ಪೂಜೆ
ಯಿದು ಪುಷ್ಪಾಂಜಲಿಯೆಂಬುದಿಂತಿದನಲಂಪಿಂ ನೋಂತ ಭವ್ಯರ್ಕ್ಕಳ
ಭ್ಯುದಯಶ್ರೀಸುಖಯಾನ ಪಾತ್ರದೆ ಭವಾಂಭೋರಾಸಿಯಂ ದಾಂಟಿ ಶಾ
ಶ್ವದನಂತೋಜ್ವಲ ಸೌಖ್ಯ ಸಂಪದಮನವ್ಯಾಬಾಧಮಂ ಪೊರ್ದ್ದುವರೂ ||

|| ವ || ಯೆಂದುದೆಲ್ಲಮಂ ತಿಳಿಯೆ ಪೇಳ್ದುದುಮಂತಾದೊಡಾನೀ ನೋಂಪಿಯಂ ನಾಂ ನೋಂಪೆನೆಂಬುದುಂ ಕರಮೊಳ್ಳಿತಂತೆ ಗೆಯ್ವುದೆಂದಾ ದೇವತೆಯಾದಿನಂ ಭಾದ್ರಪದ ಶುದ್ಧ ಪಂಚಮಿಯಪ್ಪುದಱೆಂ ಪ್ರಭಾವತಿ ನೋಂಪಿಯಂ ಪ್ರಾರಂಭಿಸಿ ಪಂಚದಿನನಂಬರಂ ನೋನಲೊಡಂ ಉದ್ಯಾಪನಾ ವಿಧಾನಮನಱೆಸಿ ದೃಢವ್ರತೆಯಾಗೆಂದು ಪರಸಿ ಪದ್ಮಾವತಿ ನಿಜ ನಿವಾಸಕ್ಕೆ ಪೋಪುದುಮಿತ್ತಲಾ ಪ್ರಭಾವತಿ ತಂನ ಕೆಲದೊಳಿರ್ದ್ದವಳೋಕಿನೀ ವಿದ್ಯಾ ದೇವತೆಯ ಮೊಗಮಂ ನೋಡಿ ನಿಂನ ಪ್ರಸಾದದಿನಿಂತೀ ಜಿನಭವನಮನೊಳ್ಪುವೆತ್ತ ನೋಂಪಿಯುಮಂ ಮಾನಿನಿ ಕಂಡೆಂ | ಸತ್ಪುಣ್ಯೋಪಾರ್ಜ್ಜಿತಮಂ ತಳೆದೆಂ ಸುಖೈಕ ಭಾಜನಮಾದೆನದು ಕಾರಣದಿಂದೆಂನ ನಿಜನಗರಿಗೊಯ್ವುದೆನಲಾ ದೇವತೆ ಮೃಣಾಳ ನಗರಮನೆಯ್ದಿಸುವುದುಂ | ಪ್ರಭಾವತಿಯವನಿ ತಿಳಕಮೆಂಬ ಜಿನಾಲಯಮಂ ಪೊಕ್ಕು ದೇವ ಗುರುವಂದನೆಯಂ ಮಾಡಿರ್ಪ್ಪುದುಮಾ ಸಮಯದೊಳೂ

|| ಕ || ಶ್ರುತಕೀರ್ತಿ ಪುತ್ರಿ ರಜತ
ಕ್ಷಿತಿಧರ ಜಿನಗೃಹಮನುನೊಲ್ದು ವಂದಿಸಿ ಬಂದವ
ನಿತಳ ತಿಳಕದೊಳಿರ್ದ್ದಪ
ಳತುಳಾತುಳ ಪುಂಣ್ಯನೀಕ್ಷಿಸಲ್ಪಗೆದಂದಂ ||

          || ಕ || ಪುರದೊಳಗಣ ಭವ್ಯಜನಂ
ನೆರೆದೆಳ್ತರಲವರ್ಗ್ಗೆ ತೀರ್ತ್ಥವಂದನೆಯುಂ ಸೌಂ
ದರಿ ಪೇಳಲೊಡಂಬಡಿಕೆಯ
ಪರಿವಿಡಿಯಂ ತತ್ಪ್ರಪಂಚಮಂ ನೆಱು ಪೇಳ್ದಳೂ ||

|| ವ || ಅಂತು ಪೇಳ್ದುದುಮವರತಿ ಕುತೂಹಳ ಚಿತ್ತರಾಗಿ

|| ಕ || ಏಪಾಂಗಿದಱ ವಿಧಾನೋ
ದ್ಯಾಪನ ವಿಧಿ ಯಾವ ಕಾಲದೊಳು ನೋನುವರಿಂ
ತೀ ಪುಷ್ಪಾಂಜಲಿಯನೆನ
ಲ್ಕಾ ಪರಮ ವಿನೇಯ ತತಿಗೆ ಬಾಲಕಿ ನುಡಿದಳೂ ||

ಅದೆಂತೆಂದೆನೆ

ಪದೆಪಿಂ ಭಾದ್ರಪದಾಶ್ವೈ
ಜದಲ್ಲಿ ಕಾರ್ತ್ತಿಕದ ಮಾರ್ಗ್ಗಶೀರ್ಷದೊಳಂ ಪು
ಷ್ಯದ ಮಾಘ ಫಾಲ್ಗುನದುಭಯ
ತ್ರದೊಳಂ ದೊರೆಕೊಂಡಮಾಸದೊಳ್ನೋಂಪುದಿದಂ ||

          ಉಪವಾಸಂ ಮಾಳ್ಪುದು ಭಾ
ದ್ರಪದದ ಸಿಂತಪಂಚಮಿಯೊಳು ಪೂರ್ವ್ವಾಹ್ಣದೊಳಂ
ಸ್ನಪನ ಪುರಸ್ಸರ ಜಿನಗೃಹ
ಕೆ ಪೋಗಿ ಚವ್ವೀಸ ತೀರ್ಥಕರರ್ಗ್ಗಾದರದಿಂ ||

          ಕ್ರಮದಿನಭಿಷೇಕ ಪೂಜೆಯ
ನೆ ಮಾಡಿ ತೀರ್ಥಕರ ನಾಮಪೂರ್ವ್ವಕದಿಂ ಪುಂ
ಜಮಕ್ಷತೆಯಂ ಮಾಡಿ ಬಳಿ
ಕ ಮಾಳೈಯಕ್ಷಿಯರ್ಗ್ಗೆ ಪುಂಜಮಂ ಪಂನೆರಡಂ ||

          || ವೃ || ನಲವಿಂದಿಪ್ಪತ್ತನಾಲ್ಕುಂ ತೆಱದ ಕುಸುಮದಿಂ ಸತ್ಪಲವ್ರಾತದಿಂ ಮಂ
ಗಳ ಗೀತಾವಾದ್ಯ ನೃತ್ಯಂ ಬೆರಸು ವಿಭವದಿಂ ನೋಂಪ ಸಂಸೇವ್ಯ ಭವ್ಯಾ
ವಳಿ ಮೂಱುಂ ಸೂಳ್ವರಂ ಮಂದರಮನೆ ಬಲಗೊಂಡರ್ಚ್ಛೆಸುತ್ತಿಂತು ಪುಷ್ಪಾಂ
ಜಲಿಯಂ ಕೈಕೊಂಡು ಸಂಧ್ಯಾತ್ರಯದೊಳೊಡರಿಸುತ್ತಿರ್ಪ್ಪುದೀ ಮಾರ್ಗ್ಗದಿಂದಂ ||

|| ವ || ಅಂತು ಮಱುದಿವಸಂ ಪಾರಣೆಯಂ ಮಾಳ್ಪುದೀ ಕ್ರಮದಿ ನಾಲ್ಕು ದಿನಂ ತಪ್ಪದೆ ಪೂಜೆಯಂ ಮಾಡಿ ಪುಷ್ಪಾಂಜಲಿಯಂ ಸಂತೋಷದಿನಿತ್ತು ನವಮಿಯೊಳುಪವಾಸಂ ಯಥಾಕ್ರಮದಿಂದಂ

|| ಕ || ಜಾಗರಮಂ ಮಾಳ್ಪುದು ಪೂ
ಜಾಗೃತಿಯಂ ಜಾವಕ್ಕೊಂಮೆ ಮಾಳ್ಪುದು ಬೆಳಗ
ಪ್ಪಾಗಳು ನೋಂಪವರೆಲ್ಲನು
ರಾಗದೆ ರತ್ನಾಂಜಲಿಯಂ ಮಾಡಿ ಬಳಿಕ್ಕಂ ||

          ಮುನಿಜನಮಿಪ್ಪತ ನಾಲ್ವ
ರ್ಗ್ಗತನಿತುಂ ಸಮನಿಸದೊಡಯ್ದು ತಂಡಕ್ಕನಿತುಂ
ಜನಿಯಿಸದೊಡೆ ಒರ್ವ್ವರ್ಗ್ಗಿಂ
ಬಿನೆ ಮಾಡಾಹಾರ ದಾನಮಂ ಸಂಮದದಿಂ ||

          ಬಳಿಕೆರಡು ಜೈನ ಮಿಥುನ
ಕ್ಕೊಲವಿಂದುಣಲಿಕ್ಕಿ ವಸ್ತ್ರ ಭೂಷಣಮಂ ಮಾ
ದಲ ಫಲಮನೊಂದಂ ಕೊಟ್ಟು
ಲೀಲೆಯಿಂ ಮಾಳ್ಪುದೇಕಭುಕ್ತಮನಾಗಳೂ ||

          ಈ ಪರಿಯಿಂದಂ ಪೂಜಾ
ವ್ಯಾಪಾರದಿನಯ್ದು ವರುಷಮುಂ ನೆಱೆ ನೋಂತು
ದ್ಯಾಪನೆಯಂ ಮಾಡುವುದಂ
ತಾ ಪರಿಯಂ ಕೇಳಿಮೆಂದು ತದ್ವಧು ಪೇಳ್ದರೂ ||

          ಜಿನ ಗೇಹಂಗಳನಿಪ್ಪ
ತ್ತ ನಾಲ್ಕನಂತಲ್ಲದಂದು ಪಿರಿದುಂ ನಲವಿಂ
ಜಿನಗೃಹಮೊಂದಱೊಳಿಪ್ಪ
ತ್ತನಾಲ್ಕು ಪ್ರತುಮೆಗಳ ಮಾಳ್ಪುದತಿ ಮುದದಿಂದಂ ||

          ಅದು ದೊರಕೊಳ್ಳದೊಡಂದಱೊ
ಳದಱಿಂ ಯಿಪ್ಪತ್ತನಾಲ್ಕು ಪ್ರತಿಕೃತಿಗಳನ
ಲ್ಲದೊಡೊಂದು ಸಿದ್ಧ ಪರಮೇ
ಷ್ಠಿ ದಿವ್ಯ ಮೂರ್ತಿಯನೆ ಮಾಳ್ಪುದತಿ ಮುದದಿಂದಂ ||

          ವಿರಚಿಸಿ ಕಳಶ ಸ್ಥಾಪನ
ಪರಿಕರಣಮನೆಯ್ದೆ ಮುಂನೆ ಪೇಳ್ದಂತೆ ಜಗ
ದ್ವರನಂ ಪೂಜೆಗಳಂ ಸಾ
ದರದಿಂದಂ ಮಾಡಿ ಎಳ್ಕೆ ಪುಷ್ಪಾಂಜಲಿಯಂ ||

          ಜಾಗರದೊಳಿಳ್ದುದುಮನು
ರಾಗದೆ ಪುಷ್ಪಾಂಜಲಿ ಕಥಾ ಕೃತಿಯುಮನಂ
ತಾಗಳೇ ಶ್ರುತ ಪೂಜೆಯುಮಂ
ಯೋಗೀಂದ್ರಾರ್ಚ್ಛನೆಯನೆಸಗುವುದು ಪರಿವಿಡಿಯಿಂ ||

          ಮುನಿಜನ ಮಿಪ್ಪತ್ತನಾಲ್ವ
ರ್ಗ್ಗೆ ನಲ್ಮೆಯಿಂ ತಟ್ಟು ಕುಂಭ ಶ್ರುತದಾರಮನಿಂ
ಬಿನೆ ಮಾಡಿ ಜೈನ ಮಿಥುನ
ಕ್ಕನಿತಕ್ಕುಣಲಿಕ್ಕೆ ಕುಡುವುದುಡಲುಂ ತುಡಲುಂ ||

          ಅನಿತಕ್ಕಾಱದೊಡಂ ಕಾಂ
ಚನದಿಂದಕ್ಕಿಯನೆ ಮಾಳ್ಪುದಿಪ್ಪತ್ತ ನಾಲ್ಕಂ
ಜಿನರ್ಗ್ಗೇಱಿಸುವುದಿದುದ್ಯಾ
ಪನೆಯ ಕ್ರಮಮೆಂದು ಪೇಳ್ವದುಂ ಕೇಳ್ದವರ್ಗ್ಗಳೂ ||

          ಉರ್ವ್ವೀತಳದೊಳು ಬಗೆವಡ
ಪೂರ್ವ್ವಂ ನಿಂನಿಂದಮಾಯ್ತು ಪುಷ್ಪಾಂಜಲಿಯೆಂ
ದುರ್ವ್ವೀಸುರ ಸುತೆಯಂ ಪೊಗ
ಳ್ದರ್ವ್ವಿಶದ ಸ್ತುತಿಗಳಿಂದ ಮೃದುವಿನೆಯರೂ

|| ವ || ಅಂತರವರೆಲ್ಲಂ ನೋಂಪಿಯಂ ಕೈಕೊಂಡು ನೆಗಳುತಿರ್ದ್ದರಿತ್ತಲಾ ಪುಷ್ಪಾಂಜಲಿಯ ಪ್ರಭಾವಮಂ ಭರತ ಕ್ಷೇತ್ರದೊಳ್ಪಭಾವಿಸಿ ನಿಜ ವೈರಾಗ್ಯ ಸ್ವಯಂಭು ಮುಮುಕ್ಷುಗಳ್ಗ ಭಿಮುಖೆಯಾಗಿ ಕೈಗಳಂ ಮುಗಿದೂ

|| ಕ || ದೀಕ್ಷೆಯನೀವುದು ಘನ ದುರಿ
ತ ಕ್ಷಯಮಂ ಮಾಳ್ಪುದೆಂಬುದುಂ ಮುನಿಪಂ ಬೋ
ಧಕ್ಷಣದಿಂ ತ್ರಿದಿನಾಯುವ
ನೀಕ್ಷಿಸುತೆ ಯೊಳ್ಳಿತಪ್ಪ ಬಗೆಯಂ ಬಗೆದಾ ||

|| ವ || ನಿನಗೆ ತಿದ್ರಿನಾಯಷ್ಯಮೆಂದು ದೀಕ್ಷೆಯಂ ಕೊಡುವುದುಮಾಗಳ್ಪಲವು ಗುಣಂಗಳಂ ತಳೆದು ಧ್ಯಾನಾರೂಢೆಯಾಗಿರ್ಪ್ಪುದುಮಾ ಪ್ರಪಂಚಮೆಲ್ಲಮನವಳೋಕಿನೀ ವಿದ್ಯೆ ಶ್ರುತಕೀರ್ತ್ತಿಗಱಿಪುವುದುಮಾ ದುರಾತ್ಮನವಳಂದು ಗಂಡ ಚಿಂತಿಸಿ ತೊಲಗದೆ ಪೂಜೆಯಂ ಗಡ ನಿರೀಕ್ಷಿಸುವಳ್ಗಡ ರಜತಾದ್ರಿಯೊಳ್ತಾಂ ಗಡ ಮತ್ತೆ ಕೇಳದೆ ತಪಂ ಬಡುವಳ್ಗಡ ಧೂರ್ತ್ತೆಯಲ್ಲಳೆ

|| ಕ || ಕೆಡಿಸಿ ತಪದಿಂದಮವಳಂ
ಪಿಡಿದೀಗಳೆ ತಪ್ಪುದೆಂಬುದುಂ ವಿದ್ಯೆಗಳಾ
ಗಡೆ ಪೋಗಿ ಕಠಿಣ ವಚನದೆ
ಜಡಿಯುತ್ತಂ ಮುತ್ತಿ ಮುಸುಱೆದವು ಯೋಗಿನಿಯಂ ||

|| ವ || ಅಗಳಾ ಘೋರೋಪಸರ್ಗ್ಗಕ್ಕೆ ಚಳಿಯಿಸದೆ ಧ್ಯಾನಾಧೀನ ಮಾನಸಿಯಾಗಿರ್ಪ್ಪುದುಮತ್ತಲಾ ಪದ್ಮಾವತಿಯಾಸನಕಂಪದಿಂದಱೆದು ಬಂದುಪಸರ್ಗ್ಗವಂ ಪರಿಹರಿಸಿ

|| ಕ || ಯೆಂನುಪದೇಶದಿನೆಯ್ದಿದ
ಳೆಂನಿಂದಂ ಪೂಜೈಯಾದಳೆಂಬಿದೇ ಮನದೊಳ್
ತಾಂ ನಿಲೆ ಪೂಜಿಸಿದಳ್ಫಣಿ
ಕಂನೆ ಸದ್ದೃಷ್ಟಿಗಳ್ಗೆ ಮಚ್ಛರಮುಂಟೇ ||

|| ವ || ಯಿಂತರ್ಚ್ಚಿಸಿ ಪದ್ಮಾವತಿ ನಿಜ ನಿವಾಸಕ್ಕೆ ಪೋಪುದುಮಿತ್ತಲಾ ಯೋಗಿನಿ ಸಮಾಧಿಯಿಂ ಮುಡುಪಿಯಚ್ಯುತ ಕಲ್ಪದೊಳು ಪದ್ಮಾವರ್ತ್ತ ವಿಮಾನದೊಳು ಪದ್ಮನಾಭನಾಗಿ ನೆಲಸದೊಡಂ

|| ಕ || ತೆಱೆಯೆ ವಿಮಾನ ಪಿಡಿಕೈ
ನಿಱಿದಾಡಿ ಸುರಾಂಗನೋತ್ಕರಂ ನಲವಿಂದಂ
ಪೊಱೆಪೊಣ್ಮೆ ದಿವ್ಯನಾದಂ
ಮೆಱೆದುದು ತದ್ದಿವ್ಯಪತಿಯ ಜನ್ಮೋತ್ಸಾಹಂ ||

          || ವೃ || ಯಿದು ಪುಷ್ಪಾಂಜಲಿಯೊಂದು ಪುಂಣ್ಯಫಲದಿಂದೀ ಷೋಡಶ ಸ್ವರ್ಗ್ಗ ಸಂ
ಪದಮಾಯ್ತಿಂದು ಮದ್ವಿಮಾನಮುರು ಪದ್ಮಾವರ್ತ್ತ ನಾಮಂ ಸಮಂ
ತಿದು ದೀಪಾಘಮಿದಪ್ಪರೋಗಣಮಿದೆಲ್ಲಂ ಮತ್ಪರಿವಾರಮೆಂ
ದುದಿತಾತ್ಮಾವಧಿ ಬೋಧನಱಿದಂ ಶ್ರೀ ಪದ್ಮನಾಭಾಮರಂ ||

ಆ ದೇವಂಗೆಯುತ್ಸೇದ ಮೂಱುಮೊಳಂ ಪರಮಾಯು ಯಿಪ್ಪತ್ತೆರಡು ಸಮುದ್ರೋಪಮಮನಿತೆ ಸಹಸ್ರ ನಿಬದ್ಧಮಮೃತಾಹಾರಮನೆನೆದು ತಣಿವಂ ಮನದೊಳೂ ಮತ್ತಂ ದ್ವಾವಿಂಶಶಿ ಸಹಸ್ರಮಾನಾಂತರ ಸುರಭಿ ನಿಶ್ವಾಸನುಂ ಮನಃ ಪ್ರವೀಚಾರನುಮಣಿಮಾದಿ ಗುಣ ವಿಭೂಷಣನುಮಾಗಿ ತಂನ ಮುಂದಿನ ತಂದೆಯಪ್ಪ ಶ್ರುತಕೀರ್ತ್ತಿಯಂ ಬಂದು ಪ್ರತಿಬೋಧಿಸಲೊಡಮಾತಂಗೆ ವೈರಾಗ್ಯಂ ಪುಟ್ಟಿ ಸ್ವಯಂಭು ಮುಮುಕ್ಷುಗಳ ಸಮಕ್ಷದೊಳು ದೀಕ್ಷೆಯಂ ಕೈಕೊಳಿಸಿ ನಿಜನಿವಾಸಕ್ಕೆ ಪೋಪುದುಮಿತ್ತ ಶ್ರುತಕೀರ್ತಿ ಸಮಾಧಿಯಿಂ ಮುಡುಪಿ ತತ್ಕಲ್ಪದೊಳು ಪ್ರಭಾಸ ವಿಮಾನದೊಳು ಪ್ರಭಾಕರನೆಂಬ ದೇವನಾಗಿ ಪುಟ್ಟಿ ಪ್ರೀತಿಯಿಂ ಕೂಡಿರ್ಪ್ಪುದುಮಾ ಪದ್ಮನಾಭಾಮರಂಗನೇಕ ಸ್ತ್ರೀಯರ್ಕ್ಕಳಿರ್ದಿಂ ಬಳಿಯಮೊರ್ವ್ವಳ್ಕನಕ ಮಾಲೆಯೆಂಬಳ್ಪುಟ್ಟಿ ಪಟ್ಟಮಹಾದೇವಿಯಾಗಲಾ ಮೂವರುಂ | ಸುರಲೋಕ ಸುಖಮನನುಭವಿಸಿ ಬಂದೂ

|| ಕ || ಶ್ರೀ ಪದ್ಮನಾಭ ದಿವಿಜಂ
ಭೂಪಾಲಕನಿಂ ಪ್ರಭಾಕರಂ ಘನ ವಾಹಂ
ರೂಪವತಿ ಕನಕಮಾಲೆ ದ
ಳೀ ಪತಿಹಿತೆಯೆಂದು ಪೇಳ್ದನಾ ಮುನಿಮುಖ್ಯಂ ||

|| ವ || ಅದು ಕಾರಣದಿಂ ನಿಂನಿಂಮೊಳು ಪರಸ್ಪರ ಪ್ರೀತಿ ದೊರಕೊಂಡುದೆಂದು ಮತ್ತಮಿಂತೆಂದರೂ

|| ವೃ || ನೃಪ ಪುಷ್ಪಾಂಜಲಿಯೊಂದು ಪುಂಣ್ಯಫಲದಿಂದಂ ನೀನೇ ಕೇಳ್ಮುಂದೆ ಚ
ಕ್ರಮತಿತ್ವಂ ದೊರೆಕೊಂಡು ವಿಶ್ವಮಹಿಯಂ ದೋರ್ದ್ದದರೊಳ್ತಾಳಿ
ಮಿಪರಂ ತೊತ್ತು ವೆಸಕ್ಕೆ ತಂದು ಪಲಕಾಲಂ ರಾಜ್ಯದೊಳ್ನಿಂದು ಮು
ಕ್ತಿಪದ ಪ್ರಾಪ್ತನೆಯಪ್ಪೆಯೆಂದೊಡದಱೊಳ್ಪಂ ಬಂಣಿಸಲ್ಬಲ್ಲರಾರೂ ||

|| ವ || ಯೆಂದು ಪುಷ್ಪಾಂಜಲಿ ಪ್ರಭಾವಮಂ ಮುಂದೆ ಸಮನಿಸುವ ಬೋಧಿಯುಮನಱಿಪಿ ಚಾರಣರ್ಗ್ಗಗನ ಮಾರ್ಗ್ಗಮನಲಂಕರಿಸಿ

|| ವೃ || ಜನಪತಿ ನೇತ್ರಪುತ್ರಿಕೆಗಳಿಂ ಕಿಱಿದಂತರಮಂ ಪ್ರಮೋದದಿಂ
ಮುನಿಪತಿಯುಗ್ಮಮಂ ಕಳಿಪಿ ಶೇಷ ಜಿನಾಲಯ ವೃಂದಮಂ ಘನಾ
ರ್ಚ್ಚನೆ ನುತಿ ಮಾರ್ಗ್ಗದಿಂ ಬಿಡದೆ ಪೂಜಿಸಿ ವಂದಿಸಿ ತಂನ ಪಟ್ಟಣ
ಕ್ಕನುಪಮ ವೈಭವಂ ತಳರ್ದ್ದನಾ ಧರಣಿಪತಿ ರತ್ನಶೇಖರಂ ||

|| ವ || ಅಂತು ನಿಜರಾಜಧಾನಿಯಂ ಪೊಕ್ಕು ಸುಖಮಿರೆ

|| ಕ || ನೆರೆ ತೋಱೆ ಕೆಂನೆಯೊಳು ವೃಷ
ಧರನೆನಿಸಿದ ವಜ್ರಸೇನನುರ್ವ್ವೀತಳ ಭರಮಂ
ದೊರೆಕೊಳಿಸಿ ರತ್ನಶೇಖರ
ಧರಣಿಶನೊಳಂದು ದೀಕ್ಷೆಯಂ ಕೈಕೊಂಡಂ ||

          ಸಕಳ ಚರಿತ್ರೆನಿಯತ್ತಂ
ಸಕಳ ಶ್ರುತದಾನಿಯಾಗಿ ತನ್ಮುನಿ ರಾಜಂ
ಸಕಳ ಜ್ಞಾನಾಧೀನಂ
ಸಕಳ ಜಗನ್ನಾಥ ಪೂಜ್ಯ ಪದಮಂ ಪಡೆದಂ ||

ಯಿತ್ತಲೂ

ಆ ರತ್ನಶೇಖರಂ ಧಾ
ತ್ರೀ ರಮಣಿಯೊಳೊಂದಿ ಸುಖದಿನಿರ್ದ್ದಲ್ಲಿ ಮನೋ
ಹಾರಿಯೆನಿಸಿರ್ದ್ದ ಚಂದ್ರವಿ
ಹಾರ ಕ್ರೀಡಾ ವಿನೋದಮಂ ಕೈಕೊಂಡಂ ||

|| ವ || ಅಂತಾ ಚಂದ್ರಿಕಾ ವಿಹಾರಾ ನಂತರಂ ಸುಖನಿದ್ರಿತನಾಗಿ ಸುಪ್ರಭಾತ ಗೀತಾಳಾಪದಿನೆಚ್ಚುತ್ತು ದಿವಸ ವ್ಯಾಪಾರಮಂ ತೀರ್ಚ್ಚಿ ಯೊಡ್ಡೋಲಗಂಗೊಟ್ಟಿರ್ಪ್ಪ ಸಮಯದೊಳೊ

|| ಕ || ತ್ವರಿತದಿ ಶಸ್ತ್ರಾಗಾರದಿ
ನಿರದೊರ್ವ್ವಂ ಬಂದು ಪೊಡೆವಡುತ್ತ
ಧರಿತ್ರೀಶ್ವರ ಭಿಂನಪಮವ
ಧರಿಪುದು ಖರಕರನಿಭಚಕ್ರರತ್ನಮುದಯಿಸಿತೀಗಳೂ ||

ಎನಲೊಡಂ

ಜನನಾಥಂ ಸ್ಮಿತಾಸ್ಯಂ
ಘನವಾಹನ ಖೇಚರೇಂದ್ರನಂ ನೋಡಿ ಬಳಿ
ಕ್ಕನುರಾಗಿಯಾಗಿ ಚಾರಣ
ಮುನಿಯುಗಮಂ ನೆನೆದು ವಿನಯ ವಿನಮಿತನಾದಂ ||

ತದನಂತರಂ

ಮಿತ್ರಂ ಪೇಳ್ದೋಜೆಯೊಳಾ
ಕ್ಷತ್ರಿಯ ತಿಲಕಂ ಜಿನೇಂದ್ರ ಪೂಜಾ ಸಹಿತಂ
ನೇತ್ರಾನಂದನಮಾಗಿರ್ದು
ಧರಿತ್ರಿಗೆ ತಚ್ಚಕ್ರರತ್ನಮಂ ಪೂಜಿಸಿದಂ ||

ಅಂತು ಪೂಜಿಸಿ

ಅಪರಿಮಿತ ಬಲಯುತ ಸಿಂ
ಹ ಪರಾಕ್ರಮನಧಿಕ ತೇಜನಾ ನೃಪ ಸಕಳೋ
ರ್ವ್ವಿಪ ನಭಯನಂದು ಷಟ್ಟಂ
ಡ ಪೃಥ್ವಿಯಂ ರತ್ನ ಶೇಖರಂ ಸಾಧಿಸಿದಂ ||

          ಆ ಸಕಳ ಚಕ್ರವರ್ತ್ತಿಗೆ
ಭಾಸುರ ಮಣಿ ಮಕುಟರವನಿಪರ್ಮ್ಮೂವತ್ತಿ
ಚ್ಛಾಸಿರ್ವ್ವರ್ ಪ್ರತಿದಿವಸಂ
ದಾಸತ್ವಮನಾಂತು ನಲ್ಮೆಯೊಳ್ಪುದಿದಿರ್ಪ್ಪರು ||

          ಲಲಿತಾಂಗಿ ಪದ್ಮಿನಿ
ಕುಲ ತಿಲಕ ಪ್ರಮುಖಾಂಗನಾ ಜನಂ ತದ್ಧಾತ್ರಿ
ತಳಪತಿಯೊಳಂದು ಸತಿಯ
ರ್ತ್ತಳೆದುದು ಷಣ್ಣವತಿಮಿತಿ ಸಹಸ್ರಪ್ರಮುಖಂ ||

          ಪಿಂಗಳ ಪಾಂಡುಕನ್ಯರ
ತ್ನಂಗಳುಮುರು ಶಂಖ ಪದ್ಮಕಾಳ ಮಹಾಕಾ
ಳಂಗಳ್ಪಯಸಿದವಂ ಕುಡು
ಗುಂ ಗಡವಂ ಸರ್ವ್ವ ರತ್ನಮಾಣವಕಂಗಳೂ ||

          || ವೃ || ಅಸಿ ದಂಡಂ ಚಕ್ರರತ್ನೋಜ್ವಲ ತರಮಣಿ ಸತ್ಯಾಕಿಣಿ ಚರ್ಮ್ಮರತ್ನ
ಪ್ರಸರಂ ಗಂದೇಭಮಶ್ವ ಸ್ಥ ಪತಿವರ ಮಹಾಸ್ತ್ರೀ ಪುರೋರತ್ನಮೆಂಬೀ
ಪೆಸರಿಂ ಕೈಗೆಯ್ದು ತಾಂ ಸಂತೋಷಮನೊದವಿಕುಂ ನಿಚ್ಛಮೊಲ್ದೋಲಗಿಪ್ಪ
ರ್ವ್ವಸುಧಾಧೀಶರ್ಸ್ಸುರಕ್ಖೇಚರ ವರ ನೃಪನೀ ಮಹಿಮೆಯಂ ತಾಳ್ದಿ ನಿಂದಂ ||

          || ವೃ || ಘನವಾಹಾ ಪ್ರಮುಖರ್ಗ್ಗೆ ರೌಪ್ಯನಗ ಮುಖ್ಯಾವಾಸಮಂ ಕೊಟ್ಟಶೇ
ಷ ನೃಪಾಲರ್ಗ್ಗೆ ಯಥೋಚಿತೌಘ ನಗರ ವ್ರಾತಂಗಳಂ ಕೊಟ್ಟು ಸ
ಜ್ಜನ ಸಂರಕ್ಷಣ ದಕ್ಷರಕ್ಷಮಿತ ಸಾಮರ್ತ್ಥ್ಯರ್ದ್ಧರಾ ಚಕ್ರ ಪಾ
ಲನದೊಳ್ತಂನ ಸಮಾನಮಿಲ್ಲೆನಿಸಿ ಪೆಂಪಂ ತಾಳ್ದಿದಂತಾನೃಪಂ ||

          || ವೃ || ಯಿದು ಪುಷ್ಪಾಂಜಲಿಯೊಂದು ಪುಣ್ಯ ಫಲದಿಂದಂ ಚಕ್ರವರ್ತ್ತಿತ್ವ ಸಂ
ಪದಮಾಯ್ತಂದು ಮಗುಳ್ದು ಮಂತದನೆ ನೋಂತುತ್ಸಾಹಮಂ ಚಿತ್ತದೊಳ್
ಪದೆಪಿಂ ತಾಳ್ದಿ ಧರಾಧಿಪಂ ಜಿನಮಹಾ ಸತ್ಪೂಜೆಯಂ ಕೌತುಕಾ
ಸ್ಪದಮಾಯ್ತುರ್ವ್ವರೆಗೆಂಬಿನಂ ನಲವಿನಿಂ ನೋಂತಂ ವಿನಯಾಸ್ಪದಂ ||

          ಧರಣಿಯನೊಂದುಗುಂದದಯು ತಾಬ್ದ ಮನೂನಮೆನಲ್ಕೆ ಪಾಲಿಸು
ತ್ತಿರಲಿರುಳುಳ್ಕು ಬಿರ್ದ್ದೊಡದನೀಕ್ಷಿಸಿ ಸಂಸೃತಿಗಳೈ ರಾಜ್ಯ ಸೌಂ
ದರಿಯೊಡನಾತ್ಮ ಜಾತ ಕನಕ ಪ್ರಭನಂ ನಿಲವೇಳ್ದು ತಾಳ್ದಿದು
ರ್ದ್ದರ ತಪದಿಂದೆ ಮುಕ್ತಿವಧುವಂ ನೆರೆದಂ ನೃಪರತ್ನಶೇಕರಂ ||

|| ವ || ಮತ್ತಮಾ ಕ್ಷತ್ರಿಯ ಪುತ್ರನ ಕಳತ್ರಮೆನಿಸಿದ ಮದನ ಮಂಜೂಷೆ ಮೊದಲಾದನೇಕ ಕಾಂತಾ ಕದಂಬಮುಂತನ್ಮಿತ್ರನಪ್ಪ ಮೇಘವಾಹನ ವಿದ್ಯಾಧರಂ ಮೊದಲಾದನೇಕ ರಾಜ ಸಮಾಜಂ ಬೆರಸು ಜಿನದೀಕ್ಷೆಯಂ ತಳೆದು ತಂತಂಮ ಪರಿಣಾಮನುಸಾರಿಯಪ್ಪ ಸುಗತಿ ಪ್ರಾಪ್ತರಾದರೂ

|| ವೃ || ದ್ವಿಜಕನ್ಯೋತ್ತಮೆ ನೋಂತು ಭಕ್ತಿಯೊಳಿದಂ ಪುಷ್ಪಾಂಜಲಿ ನೋಂಪಿಯಂ
ನಿಜವೈರಾಗ್ಯದೆ ದೀಕ್ಷೆಗೊಂಡು ದಿವದೊಳ್ದೇವೇಂದ್ರನಾಗಿರ್ದ್ದು ಬಂ
ದು ಜಯಶ್ರೀಪತಿ ರತ್ನಶೇಖರನುಮಾದಂ ತಾಳ್ದಿ ಷಟ್ಖಂಡಮಂ
ತ್ರಿಜಗತ್ಪೂಜಿತ ದೀಕ್ಷೆಯಂ ತಳೆದು ಮೋಕ್ಷಸ್ಥಾನಮಂ ಪೊರ್ದ್ದಿದಂ ||

          ಕುಲಮನಪಾರ ವಿದ್ಯೆಯುಮನುತ್ತಮ ಜಾತಿಯನುದ್ಘ ರೂಪುಮಂ
ಸುಲಲಿತ ಸಾರ್ವ್ವಭೌಮ ಪದಮಂತ ಪದಿಂ ಸುರಲೋಕ ವೈಭವಂ
ಗಳನುಣುತಂ ಬಳಿಕ್ಕಖಿಳ ಕರ್ಮಣ ವಿಮುಕ್ತರೆನಿಪ್ಪರುದ್ಗಮಾಂ
ಜಲಿಯ ವಿಧಾನಮಂ ಬಿಡದೆ ಮಾಡಿದೆ ಭವ್ಯ ಜನಂಗಳೆಲ್ಲರುಂ ||

          || ಕ || ಯಿಂತಿದನತ್ಯಾನಂದದೆ
ನೋಂತವರುಂ ಒರೆವ ಕೇಳ್ವ ಬಾಜಿಸುವವರುಂ
ಸಂತತಮಭ್ಯುದಯ ಶ್ರೀ
ಕಾಂತೆಗೆ ಪತಿಯಪ್ಪ ರಮಳ ಬೋಧರೆನಿಪ್ಪರ್ ||

|| ಶ್ರೀ || ಶ್ರೀ ವೀತರಾಗಾಯ ನಮಃ | ನಿರ್ವ್ವಿಃಘ್ನಮಸ್ತು | ರಾಗ ದೇಶಾಖಿ ಪಲ್ಲವ ಪದ |

ಪೂಜಿಸುವೆಂ ನಾನೊಲವಿಂ
ರಾಜಿತ ಗುಣ ಭೂಷಿತ ರಾ
ತ್ರೈಜಗದಧಿಪ ಚತುರ್ವ್ವಿಂಶತಿ ಜಿನ
ರಾಜರನನಘರನನವರತಾ ||

          ಶ್ರೀ ಸುದತೀಕರನಭವರನಮೃತ
ಶ್ರೀ ಸತಿ ವಿವಾಹ ಗೃಹಮೆನಿಪಾ
ಭಾಸುರಮಣಿಮಯ ಮಂಡವಿಗೆಯೊಳು
ದ್ಘಾಸಿತರಾದತುಳ ಜಿನಪರಂ || ೧ ||

          ಸುರಮನುಜೋರಗಪತಿ ತತಿ ಪೂಜಿತ
ಪುರುದೇವಾಜಿತ ಶಂಭವರಾ
ಸರಸಿಜ ಕಣವೀರವಕುಲದಲರಲಿ
ವರಲುಂಗಾಮ್ರ ಘನಸ ಫಲದಿಂ || ೨ ||

          ಅಭಿನಂದನ ಸುಮತಿ ಜಿನಪ ಪದ್ಮ
ಪ್ರಭರಂ ಬಗೆ ಸುರಭಿ ತಿಲಕದಾ
ಸುಭದಗಲಿಂ ದ್ರಾಕ್ಷಾ ನಾರಂಗ ರ
ಸ ಭರಿತ ಜಂಬೀರದ ಫಲದಿಂ || ೩ ||

          ಅಪಗತ ದುರಿತ ಸುಪಾರೀಶ್ವ ಚಂದ್ರನಾ
ಥ ಪುಷ್ಪದಂತ ಜಿನಾಧಿಪ ರಾ
ಜ ಪಾರವಿಂದ ಸುರ ಹೊಂನೆಯ ಅರಲಿಂ
ದ ಪೂಗ ಬಿಂಬ ಕದಳಿಯ ಫಲದಿಂ || ೪ ||

          ಶೀತಳ ಜಿನರಂ ಶ್ರೇಯಾಂಸರನು
ದೂತ ದುರಿತ ವಾಸುಪೂಜ್ಯರಾ
ಕೇತಕೀ ಕುಂದ ಕುಟಜದರಲಿಂದಾಂ
ಬ್ರಾತ ಕಪಿತ್ಥ ಬದರ ಫಲದಿಂ || ೫ ||

          ಸಮವಸರಣ ವಿಭವಾದಿಪರೆನಿಸಿದ
ವಿಮಾಳಾನಂತ ಧರ್ಮ್ಮಜಿನರಾ
ಕುಮುದ ಜಾಜಿ ಗೊಜ್ಜಗೆಯರಲಿಂ ದಾ
ಡಿಮ ಜಂಬೂತ್ರ ಪುಷ್ಪದ ಫಲದಿಂ || ೬ ||

          ಶಾಂತರಸಾಮೃತ ವಾರ್ದ್ಧಿಗಳೆನಿಸಿದ
ಶಾಂತಿ ಕುಂಥುಪುರ ಜಿನಾಧಿಪರಾ
ಸಂತಾನಕ ಚಂಪಕ ಪಾಟಲಿಯರ
ಲಿಂ ತೆಂಗೀಳೆ ಜಾಯಿ ಫಲದಿಂ || ೭ ||

          ಮಲ್ಲಿತೀರ್ತ್ಥಕರ ಮುನಿಸುವ್ರತ ಜಿನ
ವಲ್ಲಭ ನಮಿಭಟ್ಟಾರಕರಾ
ಮಲ್ಲಿಗೆ ಮಾಧವಿ ಬಂದುಗೆಯರಲಿಂ
ನೆಲ್ಲಿಬದಣೆ ಪಾಗಲ ಫಲದಿಂ || ೮ ||

          ಪರಮ ನೇಮಿ ಪಾರೀಶ್ವ ವರ್ದ್ಧಮಾ
ನರಯಿರವಂತಿಗೆ ಸೇವಂತಿಗೆಯಾ
ಕುರವಕದರಲಿಂ ಕೂಷ್ಮಾಂಡದ ಕಂ
ಮರದ ಪಟೋಲದ ಫಲದಿಂ || ೯ ||

          ಕ್ರಮದೆ ವಜ್ರ ವೈಢೂರ್ಯ್ಯ ಪ
ಚ್ಚೆ ಮುತ್ತು ಮಾಣಿಕಂ ನೀಲಂ ಪವಳಾ
ವಿಮಳಿನ ಗೋಮೇಧಿಕಂ ಪುಷ್ಯರಾ
ಗಮೆಂಬ ನವ ರತ್ನಾಂಜಲಿಯಿಂ || ೧೦ ||

          ಸುರಭಿ ಸಲಿಲ ಗಂಧಾಕ್ಷತೆ ಲತಾಂತ
ಚರುವರ ದೀಪ ಧೂಪ ಫಲದಿಂ
ಪರಿಶೋಭಾವಹ ಶಾಂತಿಧಾರೆಯಂ
ಸುರಚಿರಾಷ್ಟ ಮಂಗಲ ಚಯದಿಂ || ೧೧ ||

          ವಿಳಸಿತ ಕೀರ್ತ್ತಿಗಧಿಪರಕ್ಕರಸು
ಗಳಿಳಾ ಜನಂ ಮುದಮಂ ತಳೆಗೆ
ಮಳೆಪದದೊಳು ಕೊಳುಗೆಲ್ಲಾಧಾನ್ಯಂ
ಬೆಳೆಗೆ ಜೈನ ಧರ್ಮದ ಫಲದಿಂ || ೧೨ ||

          ಸತತಂ ವಾಂಛಿತ ಫಲಮಂ ಭವ್ಯ
ಪ್ರತತಿಗೆ ದಯಗೆಯ್ವನುಪಮರಾ
ಅತಿಶಯ ಜಿನರಂ ವರಕವಿ ನಾಗಣನು
ರುತರಂ ಶ್ರುತಮಂ ಯತಿವರರಂ ಪೂಜಿಸುವೆಂ || ೧೩ ||

          ಶ್ರೀ ವೀತರಾಗಾಯ ನಮಃ ಶುಭಮಸ್ತು | ಶ್ರೀ
ಪುಷ್ಪಾಂಜಲಿಯ ನೋಂಪಿಯ ಕಥೆ ಸಮಾಪ್ತಂ ||