ಶ್ರೀ ರಮಣೀ ರಮಣಂ ತ್ರಿಜ
ಗಾರಾಧ್ಯಂ ವೃಜಿನ ತಿಮಿರ ದಿನಮಣಿ ಪರಮಾ
ಧಾರಿತ ಪರಮಂ ದಿವ್ಯ ಶ
ರೀರಂ ಶ್ರೀ ಶಂಬವೇಶನೆಮಗೀಗೆಯೊಳ್ಪಂ |
ಅಪರಿಮಿತ ಸುಖವನೆಮಗೀಗೆ
ಪಂಚ ಪರಮೇಷ್ಠಿಗಳ್ಜಿ ನೋದಿತ…
ಭವರುದ್ಯ
ತ್ತಪನಿಧಿಗಳ ರಕ್ಷಿಸಲ್ಕೆ ನಮಗನವರತಂ ||
ಅನಘಮಗಣ್ಯ ಸುಖಸಾ
ಧನಮಂ ಮುಕ್ತ್ಯಂಗನಾ ಕಚಗ್ರಹವಿನಿಂತುಂ
ಜನಿಯಿತು ಪುಷ್ಪಾಂಜಲಿಯೆಂ
ಬನುಪಮ ನೋಂಪಿಯ ನೋಂತ ಭವ್ಯಾವಳಿಯೊಳ್ ||

ಆ ಪುಷ್ಪಾಂಜಲಿಯೊಪ್ಪುವ ಕಥೆಯದೆಂತೆನೆ | ಜಂಬೂ ದ್ವೀಪದ ಪೂರ್ವ್ವ ವಿದೇಹದೊಳಾಪಗೆ ಸೀತೋದೆಯದಱ ದಕ್ಷಿಣ ತಟದೊಳ್ ||

          ಕಂದ || ಅನತಿಶಯ ಸುಖಕೆ ನೆಲೆವೀ
ಡೆನಿಸಿರ್ಪ್ಪುದಾ ಮಂಗಳಾವತಿ ವಿಷಯಂ ತ
ಜ್ಜನಪದ ಲಲನೆಗೆ ತಿಲಕಮ
ದೆನೆ ಪದೆಪಿಂ ರತ್ನಸಂಚಯಂ ಪುರಮೆಸೆಗುಂ |
ಅ… ಯದನಾಳ್ವನಾ ನೃಪಂಗಂ |
ವಿಜಯಾವತಿ ಪಟ್ಟದರಸಿಯಾದಂಪ (ತಿ)…
ಗಿಷ್ಟ ವಿಷಯ ಸುಖದಿಂದಿರ್ದ್ದಂ ||

ವ || ಅಂತು ಸುಖದಿಂದಿರ್ಪ್ಪಿನಮೊರ್ಮ್ಮೆ ಬಂದ ಶರತ್ಸಮಯದೊಳೂ ||

ಕರಮೊಪ್ಪಿ ತೋಱುತಿಪ್ಪು
ಪ್ಪರಿಗೆಯೊಳನುರಾಗಮೊದವೆ ಕಡು ಚೆಲುವಿಂಸಖಿ ಯ
ರ್ವ್ವೆರಸಿ ದಿಶಾವಲೋಕನಂ ಗೆಯ್ವಾಗಳೂ ||

ವ || ಬಸದಿಯೊಳಗಿಂದಂ ಬರುತಿರ್ಪ್ಪ ಬಾಲಕರಂ ತರಳಾಕ್ಷಿ ಕಂಡು ಚಿಂತಿಸಿ ಸುತರಿಲ್ಲದಿಂತೆನಗೆ ಪೋದುದು ಕಾಲಮೆನುತ್ತದಕ್ಕೆ ಚಿಂತಿಸುತಿರಲಂತದಂ ಸಖಿಯರಿಂ ತಿಳಿದಾ ನೃಪನೆಯ್ದಿಯೇಕೆ ಶೋಕಿಸಿದಪೆಯೆಂದುಃಖಮನಾರಿ ಸುತ್ತ ಕುಳ್ಳಿರುತಂ | ಅಂತು ಕುಳ್ಳಿರ್ದು

|| ಕ || ದರಹಸಿತ ವದನನೆಂದಂ
ಧರಣೀಶರಱಿಯೆ ಪುಣ್ಯಮಂ ಗತ ಭವದೊ
ಳ್ನೆರಪದೆ ಬಯಸಿದೊಡೆಂತುಂ
ದೊರೆಕೊಳ್ಗುಮೋ ಚಿತ್ರಮಲ್ತೆ ಕರ್ಮ್ಮ ವಿಪಾಕಂ ||

|| ವ || ಅಂತಾದೊಡಮದಕ್ಕೇನಾಯ್ತು ನಾಮಾ ಚೈತ್ಯಾಲಯದೊಳಿರ್ಪ ಮುನೀಂದ್ರರಂ

|| ಕ || ಬೆಸಗೊಳ್ವಮೊರೆದು ನಮಗವ
ರುಸಿರ್ದುದೇ ದಿಟಮಂನೆವರೆಗಮೀ ಬೆವಸಮಂ
ಬಿಸುಡುವುದರ್ಹತ್ಪೂಜೆಯ
ನೆಸಗುವುದಿದಱಿಂದಮಬಲೆ ತೀರದದುಂಟೀ ||

|| ವ || ಯೆನಲಂತೆಗೆಯ್ವಮೆಂದರ್ಚನೆವೆರಸು ಜಿನಾಲಯಕ್ಕೆ ಪೋಗಿ ಜಂಗನಾಥನನರ್ಚಿಸಿ…ನ ಸಾಗರರ್ಗ್ಗಾದರದಿಂ ವಂದನೆಯಂ ಮಾಡಲು ಮುನಿಪಂ ಒಯೆಗೆಯಲ್ಕೆ ಧರ್ಮ್ಮಮಂ ಕೇಳ್ದತ್ಯಾನಂದಮಯನಾಗಿ ತತ್ಸತಿಗಿಂದುಮುಖಿಗೆ ಪುತ್ರ ಲಾಭಮಕ್ಕುಮೇ ಪೇಳಿಮನೆ ಮುನಿಪತಿಯಿಂತೆಂದನೆಲೆ ಭೂಪಾಲ ನಿನಗಂ ನಿಂನ ಪಟ್ಟಮಹಿಷಿಯಪ್ಪ ವಿಜಯಾವತಿಗಂ ಚಕ್ರಿ ಚರಮಾಂಗಂ ಮುಕ್ತಿನಿ… ನಂದನನಪ್ಪನೆನೆ ಯವರ್ಬ್ಬೀಳ್ಕೊಂಡು ರಾಜಗೃಹಕ್ಕೆಳ್ತಂದರ್ ಅಂತು ಬಂದೂ
          ವೃ || ಜಿನಪೂಜೆ ಜಿನಮುನಿ ಪದಸೇವೆ ಜಿನ ಚರಿತ್ರ ಶ್ರವಣಂ |
ಜಿನಸಮಯ… ನೃಪವನಿತೆಗೆ ಸಂದಉ

ಅಂತು ಕೆಲವಾನು ದಿವಸಂ ಪೋಗಲೊಂದು ದಿವಸಮಾ ವನಿತೆ ಚತುರ್ತ್ಥಸ್ನಾನಂ ಮಾಡಿ ನಿಜವಲ್ಲಭನ ಸೂಳ್ಗೆ ವಂದೂ

|| ಕ || ಸತಿವೆರಸನಂಗ ರಾಗಾ
ಮೃತ ಜಲಧಿಯೊಳಗೆ ನೀಡುಮೋಲಾಡಿ ಜಗಂ
ನುತೆ ಸಮರತಜನಿತ ಶ್ರಮ
ಯುತ ನಿದ್ರಾಸುಖನಿಮಿಲ ವಿತಾಂಬಕೆಯವಳು ||

          ಹರಿವಿಷ್ಟರದೊಳ್ಮಣೆ ಶೇ
ಖರನಂ ನವನಿಧಿಗಳಿಂದ ಚತುರ್ದಶ ರತ್ನೋ
ತ್ಯರದಿಂ ಸುರಖೇಚರರಿಂ
ಪರಿವೃತನಂ ಕನಸಿನೊಳು ನೃಪಾಂಗನೆ ಕಂಡಳೂ ||

ವ || ಬೆಳಗಾಗಲೊಡನಾ ಪ್ರಪಂಚಮಂ ನಿಜಪತಿಗಱುಪುವುದುಮರಸಂ ತತ್ಸ್ವಪ್ನ ಫಲಂಗಳಂ ತಿಳಿಪಲೊಡಂ ||

ಕ ||… ಯಿರಲ್ ಬೆಳೆಯೆ ಗರ್ಬ್ಭಮುಂ ನವಮಾಸಂ
ಸಲೆ ಪಡೆದಳ್ಫೂವನಿತಾ
ಲಲಾಮನಂ ನೆಗಳ್ವ ತನಯನಂ ಶುಭದಿನದೊಳೂ ||

ಯೆನಿತೊಳವನಿತುಂ ಶಾಸ್ತ್ರಮನೂನಮೆನೆ ತಿಳಿದು ರತ್ನಶೇಖರ ಕುವರಂ ಜನನೀಜನಕರ್ಗ್ಗೆ ಸೌಖ್ಯಂ ಜನಿಯಿಸೆ ಯುವರಾಜ್ಯ ಲಕ್ಶ್ಮಿಯಂ ತಳೆದಿರ್ದ್ದಂ…

ವಸಂತ ನೃಪನೆಳ್ತರೆ ನಂದನ ಲಕ್ಷ್ಮಿಗಂದು ರಾಗಂ ತಲೆದೋಱೆ
… ನೃಪ ನಂದನಂ ಸಮನ್ವಿತ ಸ
ಖ ಸಂಕುಳಂ ವನಜಳೋಂನತ ಕೇಳಿನಿಮಿತ್ತ ಪೋ
ಗಿ ಶೋಭಿತಮೆನಲಾಡಿಯೋಲಗದೊಳಿರ್ದ್ದನದೊಂದುಚಿತ ಪ್ರದೇಶದೊಳ್ ||

|| ವ || ಅಂತಿರ್ಪ್ಪುದುಂ ವಸಂತದಿಂ ಗಾಯಕರ್ನ್ನೆರದೋಲಗಿಸುತ್ತಮಲ್ಲಿ

|| ಕ || ವನದ ವಿಳಾಸಮನಾ…
ಡಿಯುತ್ತ ರತ್ನಶೇಖರ ನೃಪನಿ
ರ್ಪ್ಪಿನಮೊರ್ವ್ವ ವಿಯಚ್ಛರ ರಾ
ಜ ನಂದನಂ ಗಗನ ಮಾರ್ಗ್ಗದೊಳ್ಪೋಗುತ್ತಂ ||
ನಡೆಯದಿರೆ ನಿಜ ವಿಮಾನಂ
ಪೊಡವೀಶನ ಮೇಲೆ ಭೂತಳಕ್ಕಿಳಿದಾತಂ

          ನ…. ಡರಿಸಿ ಜನ್ಮಾಂತರಾನುಬಂಧಂ ಕಾಣಲು ||

ವೃ || ಅಱಿಯೆಂ ವ..೦ಕಂ. ರೋ ಮೇಣ್ಗತ ಭವ ಜನಕಾಪತ್ಯರೋ ಪೇಳೆನಲ್ಲಾ ಡೆಱೆಯಂಗಂ ಖೇಚರಂಗಂತೊದವೆ ಮುದಮದೋರೊರ್ವ್ವರೊಳ್ ದೃಷ್ಟಿಯುಗ್ಮಂ ಪೆಱಪಿಂಗಿತ್ತಿಲ್ಲ ತಳ್ತಾಯತ ಕರಯುಗಳಂ ತಳೆಯ ಮಮತ್ವಮಕ್ಷತ್ರಿಯರ್ಗ್ಗೆನೆ ಸಖ ಸಂಪ್ರೀತಿಯಂ ತಾಳ್ದಿ ನಿಂದರ್ |

ತದನಂತರಂ

|| ಕ || ಯೇಕಾಸನದೊಳ್ಕುಳ್ಳಿ
ರ್ದ್ದೇಕಾರಣಮಿತ್ತ ಬಂದಿರಾವುದು ಕುಲಮಾ
ಳೋಕದಿನಾದುದು ಸುಖಮೆನ
ಲಾ ಕುವರಂ ರತ್ನ ಶೇಖರಂಗಿಂತೆಂದಂ ||
ಮದನಂ ಪುಟ್ಟಿದನೆಲೆಯೆನಿ
ಪುದು ಪೂರ್ವ್ವ ವಿ….
….ಡೊಪ್ಪಿದುದಾ ವಿಷಯಕೆ ಸುಕಂಠಪುರಮದನಾಳ್ವಂ

          || ಕ || ಜಿನಪದಭಕ್ತಂ ಜಯವ
ರ್ಮ್ಮ ನೃಪ ತತ್ಕಾಂತೆ ನೆಗಳ್ದ ವಿನಯಾವತಿಗಂ
ತನಯಂ ನಾನಂತವರ್ಗ್ಗಂ
ಜನಿಯಿಸಿದೆಂ ಮೇಘವಾಹನಂ ಪೆಸರಿಂದಂ ||

          ಯೆನಗಿತ್ತು ರಾಜ್ಯಮಂ ಪಿತೃ
ಜಿನದೀಕ್ಷೆಯನಾಂತನಾಂ ಸುರೇಂದ್ರಾಚಳದೊಳ್
ಜಿನಗೃಹ ವಂದನೆಯಂ ಮಾ
ಡಿ ನಲ್ಮೆಯಿಂ ಮಗುಳ್ದು ಬರುತ ನಿಂನಂ ಕಂಡೆಂ ||

ವ || ಯೆಂದು ಮೇಘವಾಹನಂ ಪೇಳ್ದು ಕುಮಾರನಂ ನೀನಾರ್ಗ್ಗೆಂಬುದುಂ ರತ್ನಶೇಖರಂ ತಂನ ವೃತ್ತಾಂತಮಂ ವಿಸ್ತರಮಱಿಪಿ ಬಳಿಕಮಾ ಖೇಚರಂಗಿಂತೆಂದಂ

ಪೋದ ಭವದಲ್ಲಿ ಪುಣ್ಯಮ
ನೇದೊರೆತಂ ನೆರಪಿ ವೃದ್ಧಿಯಂ ಬಗೆಯಲ್ಕಿಂ
ತೀ ದೊರೆಯ ವಿದ್ಯೆಗಳು ನಿನ
ಗಾದುವೆನಲ್ ಕೃತಿಗಳೊಳರೆ ನಿಂನಿಂ ಜಗದೊಳ್ ||

          || ವ || ಯೆಂದು ಪೊಗಳ್ದು ಮತ್ತಮಿಂತೆಂದಂ

          || ಕ || ಯೆನಗೆ ಸುರಗಿರಿಯಕೃತ್ತಿಮ
ಜಿನಗೃಹಮಂ ನೋದಲ್ಕರ್ತ್ತಿಯಾಯ್ತೆನೆ ಖಚರಂ
ನಿನಗೆ ವಿಮಾನಮನೇಱಲು
ಜನಿಯಿಸದೆನೆ ರತ್ನಶೇಖರಂ ನುಡಿಯದಿರಲ್ ||

          || ವ || ಆತನ ವಿಷಾದಮಂ ಮೇಘವಾಹನನಱಿದಿಂತೆಂದಂ

          || ಕ || ಸಾಧಿಸು ವಿದ್ಯೆಯನುತ್ತರ
ಸಾಧಕ ನಾನಪ್ಪೆನೆಂದು ಮಂತ್ರಮನಾ ವಿ
ದ್ಯಾಧರನುಪದೇಶಂಗೆಯ್ಯ
ಲಾ ಧರಣೀಪತಿ ತನುಜನದನೆಗೊಂಡಂ ||

          ಉಚಿತ ಪ್ರದೇಶದೊಳ್ತ
ತ್ಖಚರಂ ಪೇಳ್ದೋಜೆಯಿಂದೆ ಸಾಧಿಸಿದಂ ತಾ
ನವಳಿತ ಮನಸ್ಕನಾಕಾ
ಶಚರಗಾಮಿನಿ ಪ್ರಮುಖ ವಿದ್ಯೆಗಳನಯ್ನೂಱಂ ||

|| ವ || ಮತ್ತುಂ ರತ್ನಶೇಖರಂಗೆ ಕ್ಷುಲ್ಲುಕ ವಿದ್ಯೆಗಳಯ್ನೂಱುಂ ಸಾಧ್ಯಮಾಗೆ ಮೇಘವಾಹನಂ ಕಂಡು ವಿಸ್ಮಯಂ ಬಟ್ಟಿಂತೆಂದಂ

          || ಕಂ || ಪಿರಿದಾಯಾಸದೊಳಂ ಖೇ
ಚರರ್ಗಾದೊಡಮಾಗವೆನಿಪ ವಿದ್ಯೆಗಳೇಳಂ
ದಿರದೆ ದೊರೆಕೊಂಡವೆನೆ ಬಾ
ಪುರೆ ಕೃತಿಗಳಿಂನರೊಳರೆ ಭೂಮಂಡಲದೊಳ್ ||

|| ವ || ಯೆಂದು ಕುಮಾರನಗಣ್ಯ ಪುಣ್ಯ ಪ್ರಭಾವಮಂ ಕೊಂಡಾಡುವುದುಂ ನಿಜಪರಿಜನಮಂ ಪುರಕ್ಕೆ ಪೋಗಲ್ವೇಳ್ದು ಮೇಘವಾಹನಂ ಬೆರಸೂ

          ಬರೆ ರತ್ನಶೇಖರಂ ಮಂ
ದರಾದ್ರಿಗಂ ಗಗನಮಾರ್ಗ್ಗದಿಂದಂ ತಂಮಿ
ರ್ವ್ವರಕೃತ್ತಿಮಮಯ ಜಿನಮಂ
ದಿರಂಗಳಂ ಭಕ್ತಿ ಪೂರ್ವಕಂ ವಂದಿಸಿದಂ ||

          ಪದೆಪಿಂದೆರಡೂವರೆ ದ್ವೀ
ಪದಕೃತ್ತಿಮ ಜಿನಗೃಹಂಗಳಂ ವಂದಿಸಿ ಸನ್ಮು
ದದಿಂ ಮಗುಳ್ದು ವಿಜೆಯಾ
ರ್ದ್ದದ ಶೋಭಿಪ ಸಿದ್ಧ ಕೂಟಮಂ ಸಾರ್ತ್ತಂದರು ||

|| ವ || ಅಂತು ಬಂದು ಜಿನಾಲಯಮಂ ಬಲವಂದು ನಿಷಿಧಿಯೆನುತ್ತೊಳಗಂ ಪೊಕ್ಕಭವನಂ ಬಲಗೊಂಡನೇಕ ಸ್ತೋತ್ರಂಗಳಿಂದಂ ಸ್ತುತಿಯಿಸಿದ ತದನಂತರಂ ಕಣ್ಗೊಳಿಸುವ ಮಂಟಪದ ಮಲಗಿನೊಳ್ಕುಳ್ಳಿರ್ಪ್ಪುದುಂ

|| ವೃ || ಅಂನೆಗಮೊರ್ವ್ವಳೂರ್ವ್ವಸಿಯ ಗಾಡಿ ತಿಲೋತ್ತಮೆಯೊಂದು ರೂಪು ಸಂ
ಪಂನತೆಯೀಕೆಯುಜ್ವಲ ಕಟಾಕ್ಷ ವಿಳೋಕನಕುಂಗುಡಕ್ಕದೇ
ನುಂ ನೆಱೆದಿರ್ದ್ದುದಿಲ್ಲೆನೆ ವಿಯಚ್ಛರ ತನ್ನ ಕಿಸಲಯದಂದದಿಂ
ದಂ ನಡೆತಂದಳಂದು ಜಿನವಂದನೆಗಿಂದು ಮುಖಿ ಕದಂಬದಿಂ ||

ಅಂತು ಬಂದೂ

|| ಕ || ಪರಮೇಶ್ವರನಂ ಪೂಜಿಸಿ
ಭರದಿಂದಂ ನಾಟ್ಯವಾಡಿ ಪೋಗುತ್ತಾ ಸೌಂ
ದರಿ ಕಂಡು ರತ್ನಶೇಖರ
ನರಪತಿಗಾಸಕ್ತೆಯಾಗಿ ತಂದೆಗೆ ಪೇಳ್ದಳೂ ||

|| ವ || ಮತ್ತಿತ್ತಲೊರ್ವ್ವಳಾ ಜಿನ ಮಂದಿರಕೆ ಸ್ವಯಂಬರಾಧ್ಯಕ್ಷೆಯೆನಿಸಿದ ಖಚರನಾರಿ ಬಂದು ಪರಮೇಶ್ವರ ವಂದನಾನಂತರಮಾ ನೃಪೇಶ್ವರನಂ ಕಂಡವರ ಸಮೀಪದೊಳ್ಕುಳ್ಳಿರ್ದ್ದು ವಿನಯಪುರಸ್ಸರಂ ರತ್ನಶೇಖರ ಕುಮಾರನ ಮುಖಾರವಿಂದಮಂ ನೋಡಿ

|| ವೃ || ಅರಸುಗಳಾವ ನಾಡವರ್ಗ್ಗಳೀಕ್ಷಣ ಸೌಖ್ಯ ಫಲೋದಯಂ ಸ್ವಯಂ
ಬರಮನಪೇಕ್ಷಿಸಲ್ಪಡೆದು ಬಂದವರಿಲ್ಲಿಯದೇಕೆ ನಿಂದಿರೆಂ
ದರಸರದೇನೋ ನಿಂಮ ಬರವಂ ಪರಿಭಾವಿಸಿ ನೋಡಿ ನೋಡಿ ಖೇ
ಚರಪತಿ ಪುತ್ರಿ ನಿಂನ ನಡೆ ನೋಡಲೊಡಂ ವಶಮಾಗದಿರ್ಪ್ಪಳೇ ||

|| ವ || ಯೆನಲೊಡಂ ರತ್ನಶೇಖರ ಕುಮಾರಂ ಮುಂನಂ ತಾನಾ ಕಂನೆಗಾ ಸಕ್ತನಪ್ಪುದಱೆಂದಾ ಕಾನ್ತೆಯ ನುಡಿದ ನುಡಿಗೆ ಸಂತೋಷಂ ಬಟ್ಟಿಂತೆಂದಂ

|| ಕ || ನೀನಾರ್ಗ್ಗೆ ನಿಜೇಶನ ಪೆಸ
ರೇನೆಂಬುದು ತತ್ಸ್ವಯಂಬರಕ್ಕೆಯಧಿಕೃತ ಪೇ
ಳ್ತಾನವಳಬಲೆಯುಮೆನೆತ
ನ್ಮಾನಿಸಿ ಮಂದಸ್ಮಿ ತಾಸ್ಯೆ ಯಂದಿಂತೆಂದಳೂ ||

          || ಕ || ದೊರೆವೆತ್ತೀ ವಿಜಯಾರ್ದ್ಧದ
ಕುರುಬದೊಳ… ೦ಕದೇಶೆ…ನಾಡೊಳು ರಥನೂ
ಪುರ ಚಕ್ರವಾಳ ಪುರಮಾ
ಪುರ ಲಕ್ಷ್ಮಿಗೆ ರಮಣನಾಗೆ ವಿದ್ಯುದ್ವೇಗಂ ||

          || ಕ || ಆ ರಮಣಂಗಂ ಸತಿ ಸುಖ
ಕಾರಿಣಿಗುದಯಿಸಿದ ಮದನಮಂಜೂಷೆ ಕಳಾ
ಧಾರೆ ಸುಕುಮಾರೆ ಯೆನಿಪೀ
ಸ್ತ್ರೀರತ್ನಕ್ಕಂ ಸ್ವಯಂಬರಮನೊಡರಿಸಿದಂ ||

ಯೆಂದು ಪೇಳ್ದ ಸಾಯದೊಳೂ

|| ಕ || ಆ ಗಗನಚರಂ ತನಗನು
ರಾಗಂ ಮಿಗೆ ಬಂದು ಜಿನರ್ಗ್ಗೆ ನತನಾಗಿ ಮನೋ
ರಾಗದಿನೊಡಗೊಂಡೊಯ್ದು
ಭ್ಯಾಗತ ವೃತ್ತಿಯನೆ ಮೆಱೆದನುಂನತ ಚಿತ್ತಂ ||

|| ವ || ಅಂತಂದಿನ ದಿವಸಂ ಪೋಪುದುಂ ಮಱು ದಿವಸಂ ಸ್ವಯಂಬರಮಂಟಪ ಮಧ್ಯ ಪ್ರದೇಶದೊಳೊ

|| ಕ || ಯೆರಡುಂ ಶ್ರೇಢಿಯ ವಿದ್ಯಾ
ಧರರರಾ ತನೂಜರೆಯ್ದೆ ನೆರೆದಿರಲಾ ಸೌಂ
ದರಿ ರತ್ನಶೇಖರಂಗಾ
ದರದಿಂದಂ ಕೂರ್ತ್ತು ಮಾಲೆ ಸೂಡಿದಳಾಗಳೂ ||

          ವಿಕಚೋತ್ಫಲ ನೇತ್ರೆಯೆನೊ
ಲ್ದುಕುಮಾರಂ ಕೈಕೊಳಲ್ಕೆ ವಿದ್ಯಾಧರ ಪೀಟಕ
ಕ್ಕೊಳಕೊಂಡುದು ತಂ
ತಂಮ ಕಳತ್ರಮನೆಳೆದುಕೊಂಡವೋಲ್ಕಡು ಮುಳಿಸಿಂ ||

|| ವ || ಆಗಳು ಧೂಮಶಿಖಿ ವಿಯಚ್ಛರರಾ… ಮೊದಲಾಗಿ

|| ವೃ || ಕದನಮದೋದ್ದತರ್ಕ್ಖಚರ ರಾಜ ತನೂಭವರಾಪ್ತ ಮಂತ್ರಿವ
ರ್ಗ್ಗದ ನುಡಿಗೇಳ್ದಟ್ಟಿ ಲಲಿತಾಹ್ವೌಅದೂತನನಾತನಾ ಗುಣಾ
ಸ್ಪದನ ಸಭಾಂತರಾಳಮನೆ ಪೊಕ್ಕು ವಿಯಚ್ಛರ ಕಂನೆಯತ್ತಣಿಂ
ಬಿಧಿಗೊಳಗಾಗದೊಪ್ಪಿಸಿ ಬರ್ದುಂಕೆನೆ ಕೋಪಿಸಿ ರತ್ನಶೇಖರಂ ||

          || ಕ || ಕೆಳೆಯನ ಮೊಗಮಂ ನೋಡಿ
… ಖೇಚರ ದೂತ ನಿಂಮ ವಿಧ್ಯಾಧರರಂ
ನಿಲವೇಳಾಹವಕನಿಬರ
ತಲೆಗೊಂಡಪೆನೀಗಳೆಂದು ಘರ್ಜ್ಜಿಸಿ ನುಡಿದಂ ||

|| ವ || ಅಗಳ್ಪರಿಭವಂ ಬೆತ್ತು ಬಂದ ಚರವಚನಮಂ ವಿದ್ಯಾಧರರ್ಕ್ಕೇಳಿ ಘನಘರ್ಜನೆಯಂ ಕೇಳ್ದ ಸಿಂಹದಂತೆ ಘರ್ಜಿಸಿ ತಂಮ ಸಮಗ್ರ ಬಲಸಹಿತಮೊಡ್ಡಿ ನಿಲ್ವುದುಮಿತ್ತಂ ರತ್ನಶೇಖರಂ ಮಿತ್ರಂಬೆರಸು ವಿದ್ಯೆಗಳಿಂ ಮಿಗುರ್ವ್ಸಿಸಿ

|| ವೃ || ಬಲಮನಪಾರಮಂ ಮುಳಿಸಿನಿಂದ ವಿಗುರ್ವ್ವಿಸಿ ತಂನ ಮಾವನುಂ
ಬಲಯುತನಾಗಿ ಕೂಡಿ ರಿಪುಸೇನೆಯೊಳಾಸುರಮಾಗೆ ಕಾದಲಾ
ಗಳೆ ಬಿಱುತೋಡೆ ಖೇಚರ ಬಲಂ ಖಚರಾಧಿಪನೆಯ್ದೆ ಕನಲ್ದು ಮೂ
ವಳಸಿನೆ ಸೇನೆ ಮುತ್ತಿ ತಳ್ತಿಱೆದನಾಸುರಮಾಗಿರೆ ರತ್ನಶೇಖರಂ ||

          || ಕ || ಪ್ರತಿವಿದ್ಯೆಗಳಿಂದವರೆ
ಚ್ಚ ತೀಕ್ಷಣ ಬಾಣಂಗಳನಿತುಮಂ ಖಂಡಿಸಿ ಭೂ
ತಿಪತಿ ದಿವ್ಯಬಾಣ ಜಾಲದಿ
ನರ್ತಕ್ಯ ಬಲನನಿಬರಂ ಕ್ಷಣಾರ್ದ್ಧದೆ ಗೆಲಿದಂ ||

|| ವ || ಅಂತದಂ ಕಂಡು ಧೂಮಶಿಖಂ ಮೇಲ್ವಾಯ್ದೊಡಾತನಂ ದಿವ್ಯ ವಿಶಿಖದಿಂ ಯಮಮುಖಮನೆಯ್ದಿಸಲೊಡಂ

|| ಕ || ಕೆಲರೋಡಿ ಪೋದರಾಗಳು
ಕೆಲಬರ್ವ್ವಿದ್ಯಾಧರರ್ಶರಣ್ಬೊಕ್ಕಾಗಳವರಂ
ನೆಲೆಗಳೊಳು ನಿಲಿಸಿ ನೃಪಕುಲ
ತಿಲಕಂ ಪುರಮಂ ಮಹಾ ವಿಭವದಿಂ ಪೊಕ್ಕಂ ||

          ಶುಭದಿನ ಮುಹೂರ್ತದೊಳ್ ಪೃಥು ವೀ
ಭವಂ ಸ್ತ್ರೀ ರತ್ನಮಂ ವಿವಾಹದೆ ಕೈಕೊಂ
ಡ ಭಯಂ ರಥನೂಪುರದೊ
ಳ್ಪ್ರಭೂತ ಮುದನಲ್ಲಿ ಕೆಲವು ದಿವಸಮನಿರ್ದ್ದಂ ||

          || ಕ || ಮಾತಾಪಿತೃ ದರ್ಶನದೊಂ
ದಾತುರಮಾ ರತ್ನಶೇಖರಂಗುದಯಿಸಿ ತಾಂ
ಮಾತುಳನೊಳಱಿಪಿ ಯುವತೀ ಸ
ಮೇತಂ ನಿಜರಾಜಧಾನಿಗಭಿಮುಖನಾದಂ ||

          ಬರೆ ಮೇಘವಾಹನಂ ಖೇ
ಚರ ರಾಜ ತನೂಬಹರ್ಪ್ಪಲರ್ಬ್ಬಳಸಿ ಮನೋ
ಹರಮೆನಿಪ ವಿಮಾನಮನೇ
ಱಿ ರಾಗದಿಂ ರತ್ನ ಸಂಚಯಕ್ಕೆಳ್ತಂದಂ ||

          ತಿಳಿದು ಚರವಚನದಿಂದಂ ಭೂ
ತಳನಾಥಂ ವಜ್ರಸೇನನಿದಿರ್ಪ್ಪೋಗಿ ಮುದಂ ಬೆರ
ಸಲೊಡಗೊಂಡು ಬಂದಧಿಕ
ಲೀಲೆಯಿಂ ರಾಜಭವನಮಂ ಪುಗಲಾಗಳೂ ||

ತನಯನೊಡವಂದ ಖೇಚರರ್ಗ್ಗೆ ನಲ್ಮೆಯಂ ಮೆಱದು ಕಳಿಪಿ ಬಳಿಯಂ | ಜನನೀ ಜನಕರ್ಗ್ಗಿನಿತಾಯಿತು ಮಿಶ್ರನಿಂದಮೆಂದಱಿಸಿ ಯೇಱೆ ವಿಮಾನಮನುಂನತಚಿತ್ತ ರತ್ನಶೇಖರಂ ಮಿತ್ರಯುತಂ

ಪೋಗಿ ಪಲ ತೆಱದಿನರ್ಚ್ಛಿಸಿ
ರಾಗದಿನಾ ರಂಗಮಂಟಪದೊಳಿರಲು ನಭೋ
ಭಾಗದಿ ಚಾರಣಯುಗಳಂ
ಬೇಗಂ ಬರಲಮಿತಗತಿ ಜಿತಾರಿಗಳೆಂಬರೂ ||

ಅಂತು ಬರ್ಪ್ಪುದಂ ಕಂಡು

|| ಕ || ಯಿದಿರ್ವ್ವೋಗಿ ಭಕ್ತಿಪೂರ್ವಕ
ಮುದಾತ್ತ ನಾನಂದದಿಂದ ವಂದಿಸಿ ಕುಳ್ಳಿ
ರ್ಪ್ಪುದುಂ ಪೇಳ್ದಾಧರ್ಮ್ಮಮಂ
ಕೇಳ್ದು ದಿವ್ಯಮುನಿಗಳ್ಗೆ ರತ್ನಶೇಖರ ಕುವರಂ ||

ನತನಾಗಿ ಯೆನಗೇನಿಂತೀ ಸತಿ ಮಿತ್ರರೊಳಧಿಕ ಮೋಹಮೇಕಾಯ್ತು ಪೂರ್ವೋಪಾರ್ಜ್ಜಿತ ಪುಂಣ್ಯಮೆಂತು ದೊರೆಕೊಂಡುದೆಂಬುದಂ ತಿಳಿಪಿಮೆನೆ ಮುನೀಂದ್ರರ್ಪ್ಪೇಳ್ದರೂ

ಸಕಳ ಸರ್ವಜ್ಞರ್ಸ್ಸಂಭವ ತೀ
ರ್ತ್ಥಕರಾ ತೀರ್ತ್ಥ ಪ್ರವರ್ತ್ತನಾನಂತರದಿಂ
ಪ್ರಕಟಮೆನೆ ಭರತದೊಳು ರಂ
ಜಿಕುಮಾರ್ಯ್ಯಾ ಖಂಡದೊಳ್ ಮೃಣಾಳಾಖ್ಯಪುರಂ ||

          ಅರಸಂ ಜಿತಾರಿಯೆಂಬಂ
ಸರಸಿದ ಮುಖಿ ಕನಕಮಾಲೆಯೆಂಬಳ್ ಪ್ರಾಣೇ
ಶ್ವರಿ ಶ್ರುತಕೀರ್ತ್ತಿಯೆನಿಪ್ಪಂ
ಪುರೋಹಿತಂ ಭೂಮಿದೇವ ಕುಲ ಸಂಭೂತಂ ||

          ಭಾನುಮತಿಯೆಂಬಳಾತನ
ಮಾನಿನಿಯವರಾತ್ಮಜೆ ಪ್ರಭಾವತಿಯೆಂಬಳು
ಜೈನೋಪಾಧ್ಯಾಯರೊಳಂ
ಭೂನಾಥನ ಸುತೆಯ ಕೂಡೆ ಶಾಸ್ತ್ರಮನಱಿದಳು ||

|| ವ || ಅಂತವರ್ಸ್ಸುಖದಿನಿರಲೊಮ್ಮೆ ಬಂದ ವಸಂತ ಸಮಯದೊಳಾ ಪುರಾಧಿಪಂ ವನಕ್ರೀಡಾ ನಿಮಿತ್ತಂ ಪೋಪುರ್ದುಂ

|| ಕ || ಶ್ರುತ ಕೀರ್ತ್ತಿಯಂದು ತಂನಯ
ಸತಿವೆರಸು ವನಕ್ಕೆ ಪೋಗಿ ರಾಗತೆಯಿಂದಂ
ಲತೆವನೆಯೊಳ್ಳಿಶ್ರಮಿಸಿರೆ
ಸತಿಯಂಗದ ಸೌರಭಕ್ಕೆ ಭುಜಗಂ ಪಿಡಿಯಲೂ ||

          ಮೃತೆಯಾದ ವನಿತೆಯಂ ಕಂ
ಡತಿ ದುಃಖದಿಂದಂ ಶರೀರ ಸಂಸ್ಕಾರಮನಾ
ಶ್ರುತಕೀರ್ತ್ತಿ ಮಾಡಿ ಮಾಣದೆ
ಸತಿಯಂ ನೆನೆನೆನೆದು ಶೋಕ ವಿಹ್ವಳನಾದಂ ||

          ಮಗಳಾತನ ಮನದೊಂದು
ಬ್ಬೆಗಮಂ ಕಳೆಯಲ್ಕೆ ಜಿನಗೃಹಕ್ಕೊಯ್ಯಲೊಡಂ
ನೇಗಳ್ದದ್ರು ವಾದಿ ಸಂಸಾ
ರಗತಿ ಸ್ಥಿತಿಯಂದಮಂ ಮುನೀಂದ್ರಂ ಪೇಳಲ್ ||

          ತಿಳಿಯಲೊಡಂ ವೈರಾಗ್ಯಂ
ನೆಲಸಲ್ ಶ್ರುತಕೀರ್ತ್ತಿ ದೀಕ್ಷೆಯಂ ಕೈಕೊಂಡು
ಜ್ವಲಮಾಗಿ ನಡೆದು ಮುನಿಕುಲ
ತಿಲಕಂ ವಿದ್ಯಾನುವಾದಮಂ ನೆಱೆ ತಿಳಿದಂ ||

|| ವ || ಯಿತ್ತಲಾ ಪ್ರಭಾವತಿ ಪಿತೃವಿಯೋಗದಿಂ ಕಿಱೆದು ಪೊತ್ತು ಚಿಂತಾ ಕ್ರಾಂತೆಯಾಗಿರ್ಪ್ಪುದುಂ | ಬಂಧು ಜನಂಗಳ್ಪಂದು ಸಂತೈಸಿ… ದಿರುತ್ತಂ | ವಿವಾಹವಿಧಿಯನೊಡರ್ಚುವ ಬಗೆಯೊಳಿರಲು ಪ್ರಭಾವತಿ ತಿಳಿದು ಜಿನಮುನಿಗಳ ಸಮಕ್ಷದೊಳು ಬ್ರಹ್ಮಚರ್ಯ್ಯ ಪೂರ್ವ್ವಕಂ ಪಲವುಂ ನೋಂಪಿಗಳಂ ಕೈಕೊಂಡು ನಿಜೋಚಿತ ವ್ರತ ಪ್ರತತಿಯೊಳತಿಶಯಮೆನೆ ನೆಗಳುತ್ತಮಿರ್ದ್ದಳಂನೆಗೆಮಿತ್ತಲಾ ಮುನಿವಿಷಯ ಸುಖಾಸಕ್ತ ಚಿತ್ತನಾಗಿ

|| ವೃ || ಸಾಧಿಸಿ ವಿದ್ಯೆಯಂ ವಿಷಯ ಸೌಖ್ಯಮನಾರ್ಪ್ಪಿನಮುಣ್ಮೆನಿಗಳಾ
ರಾಧಿಸಿ ಮಂತ್ರಮಂ ಬಳಿಕ ಮುಪ್ಪಿನೊಳೊಪ್ಪಿರೆ ಸಚ್ಛರಿತ್ರದಿಂ
ಸಾಧಿಸುವೆ ಪರತ್ರಯಮನೆನುತ್ತಲವಂ ತಱೆಸಂದು ಮತ್ತೆ ಚಿಂ
ತಾಧಿಕನಾದನಾವನೆನಗ… ಸಾಧಕನೆಂದನಂತರಂ ||

          || ಕ || ನೆನೆದುತ್ತರ ಸಾಧಕಿಮ
ತ್ತನೂಜೆಯಾದಪ್ಪಳೆಂದು ಪರಿತುಷ್ಟ ಮನಂ
ಮುನ್ನಮೆ ಬಂದಂತು ನಯಮು
ನಿನ್ನ ಪುರಕ್ಕೆ ಮೃಣಾಳವತಿಗೆಯತಿ ದ್ರುತಗತಿಯಿಂ ||

|| ವ || ಬಂದು ನಿಜತನೂಜೆಯಿರ್ದ್ದ ಜಿನಾಲಯಮನೆಯ್ದುವುದುಮಾ ಕೆಯಾ… ದಿಂವಂದನೆಯಂ ಮಾಡಿ ಪರಸಿ ಬಳಿಯಂ

|| ಕ || ಆ ಯತಿಯತೀವ ವಿಷಯ ಸು
ಖಾಯತ್ತಮನಸ್ವಿಯಾ ಪ್ರಭಾವತಿಗಂ ತಂತ
ನಾಯತಿಕೆಗೆದುವೆ ನಿಂನ ಸ
ಹಾಯತೆಯಿಂ ಮಂತ್ರ ಸಿದ್ಧಿ ನಮಗುದಯಿಸುಗುಂ ||

|| ವ || ಯೆಂಬುದುಮಾ ತನೂದರಿಯಂತೆಗೆಯ್ಯಲಾಕೆಯಂ ಬಹಿರಾತ್ಮಂ ಗಹನಕ್ಕೊಯ್ಯಲೊಡಂ

|| ಕ || ಕಪಟಮನಱಿಯದೆ ತಂದೆಯ
ಜಪಕ್ಕೆ ಸಹಕಾರಿಯಾಗೆ ಸಾಧಿತವಿದ್ಯಂ
ವಿಪರೀತ ಮನಂ ವಿದ್ಯಾ
ಪ್ರಪಂಚದಿಂದಲ್ಲಿಯೊಂದು ಪುರಮಂ ಪಡೆದಂ ||

|| ವ || ಅಂತಾ ಮಾಯಾವಿ ವ್ಯೋಮಗಾಮಿನಿ ಕಾಮರೂಪಿ ಮೊದಲಾದ ಪದಿನಾಱುಂ ವಿದ್ಯೆಗಳಂ ಸಾಧಿಸಿ ತತ್ವಭಾವದಿಂ ವಿರಚಿಸಿದ ಪುರದೊಳು ತನಗತಿ ಸೌಖ್ಯಾಕರಮೆನಿಪ ಧವಳಾಗಾರಮಂ ನಿರ್ಮ್ಮಿಸಿ

|| ಕ || ತನುಜೆಗೆ ಮತ್ತೊಂದು ನಿಕೇ
ತನಮಂ ಸಮೆದಿರಿಸಿ ಸುಖದಿನಿರ್ದ್ದಂ ವಿದ್ಯಾ
ವನಿತೆಯರೊಳು ರಮಿಯಿಸುವರ
ಮುನಿಕಾಮುಕರಿಂನರಾರೆನಲ್ಮೂ ಜಗದೊಳೂ ||

|| ವ || ಅಂತು ಸುಖದಿನಿರ್ದ್ದ ತಂದೆಯಿರವಂ ಪ್ರಭಾವತಿ ಸೌಂದರಿ ಕಂಡು ಮನದೊಳ್ನೊಂದು ಪ್ರತಿಭೋದಿಸಲೆಂದಾತನ ಸಾರಣ್ಗೆ ವಂದೂ

ಯೇನಂ ನೆಗಳ್ದೈ ನೀನೀ
ಮಾನಿನಿಯರ ಕತದೆ ಬಿಸುಡುವುದೆ ಸಾರತಪೋ
ಮಾನಿನಿಯಂ ಸಮುಚಿತ ವಿಜ್ಞಾ
ನನೆ ದಾರಕ್ಕೆ ಹಾರಮಂ ಪಱಿವರೆ ಪೇಳೂ ||

          ಅಕ್ಕಟ ಸತಿ ಸತ್ತಳಲಿಂ
ತಕ್ಕೆಡೆಯೊಳ್ಮದುವೆ ನಿಂದು ಸಂಸೃತಿಗತ ಸೌ
ಖ್ಯಕ್ಕೆಡೆ ಯಾಗದೆ ಜಿನಮಾ
ರ್ಗ್ಗಕ್ಕಳಿವಂ ನಿಂನ ವಂದಿಗರ್ಮ್ಮಾಡುವರೆ ||

|| ವ || ಯೆನಲಾ ದುರಾತ್ಮಂ ತಂನ ವಿದ್ಯೆಯಂ ಬರಿಸಿ ತಂನ ಭೋಗಕ್ಕಿವಳು ಪ್ರತಿಕೂಲೆಯಾದಪಳೆಂದು ಯಿರುಳೊಳೀಯುಗ್ರಾಟವಿಯೊಳ್ನಿಸೃಪನು ಬಿಸುಡಿಸಿದನಾ ಪ್ರಭಾವತಿಯಂ

|| ವೃ || ಒಳಱುವ ಹಸ್ತಿಯೂಳ್ಪ್ರಹರಿಯುಬ್ಬಿ ಪಕ್ಷಿರ್ಬ್ಬಲಿ ಭೀತಿಯೆಳೆಯಿಂ
ಪೆಳಱುವ ಪುಲ್ಲೆ ಪಾಯಿವ ಗಿಡಿಗಂ ಬಿಡದೋಡುವ ಪಕ್ಕನುಡಿಯಂ
ಕಳಕುಳಾಮಾಗಗುರ್ಬ್ಬಿಪ ಮಹೋಗರಮೊವ್ವಳ ಕೆರೆ ಗೊಂ
ಡಳದೆಸುತಿರ್ಪ್ಪ ಬೇಡರುಗಳಬ್ಬವರಾಹಮಹಾರವೋತ್ತರಂ ||

|| ವ || ಅಂತುಗುರ್ವ್ವಿಸುತ ಕ್ರೂರ ಮೃಗಕಠೋರ ಧ್ವನಿಯಂ ನಿದ್ರೆ ತಿಳಿದೆಚ್ಚತ್ತು ರೌದ್ರಾಟವಿಯ ವಿಷಮ ಸ್ಥಿತಿಗೆ ಭಯಸ್ಥೆಯಾಗದೆ

|| ವ || ತನುಜೆಯನೆಂನನಿಂತು ಭಯಲೋಕ ಹಿತಾರ್ತ್ಥಮನೊಲ್ದು ಪೇಳೆಮಾ
ಜ್ಜನಕರಣ್ಯದೊಳ್ಪಿಸುಡಲಟ್ಟಿದನೊ ವೋದುರಾತ್ಮನೆಂದದೇ
ಮುನಿದಳೆ ಮಿತ್ರರಂನೆನೆದಳೆ ಮನದೊಳ್ನಲವಿಂದೆ ತಾಳಿದಳ್
ಜಿನಪದಮಂ ಜಿನೇಂದ್ರ ಮತಮಂ ಜಿನರಾಜ ವಿಧಾನ ಸೂಕ್ತಿಯಿಂ ||

          || ಕ || ಆ ಕಮಳಾನನೆ ಚಿತ್ತದೊ
ಳೇಕತ್ವದ ತೆಱನನಱಿದು ಭಾವಿಸುತಿರಲಾ
ವ್ಯಾಕುಲತೆಯಿಂದೆ ಮತ್ತವ
ಳೋಕಿಮಿಯಂ ನೋಡಲಟ್ಟಿದಂ ಕೃತಕಾತ್ಮಂ ||

|| ವ || ಆಗಳಾ ವಿದ್ಯಾದೇವತೆ ಬಂದು ಪ್ರಭಾವತಿಯಿರ್ಪ್ಪ ಧೀರೋದಾತ್ತತೆಗೆ ವಿಸ್ಮಯಂಬಡುತ್ತಮಿಂತೆಂದಳೂ

ಪೆತ್ತಮಗಳೋರ್ವ್ವಳಂ ಸ
ದ್ದೃತಯುತೆಯನಕಟಮೆಂನದುಗ್ರಾಟವಿಯೊಳ್
ಮತ್ತೆನಿಸದೇ ವಿಷಯಾಸವ
ಮತ್ತುಂಟಿ ಸುಡಿಸಿದನಕಟ ಕಾಮಿಯೆ ಪೊಲೆಯಂ ||

ಎಂದು ಮಾಣದೆ

ದ್ರುತವಿಲಂಬಿತವೃತ್ತಂ || ನಿನಗೆ ಪೇಳ್ದುದು ಗೆಯ್ವೆನದೆಲ್ಲಿಗಂ
ನಿನಗೆ ಪೋಗುತಿರಲ್ಪಿರಿದರ್ತ್ಥಿ ಪೇಳ್
ಜನಿನಿಯಿರ್ವ್ವರುಮಲ್ಲಿಗೆ ಪೋಪೆಮೆಂ
ದೆನೆ ಕುಮಾರಿ ಸುಖಾಬ್ಧಿಯೊಳೊಂದಿದಳ್ ||

|| ವ || ಅಂತು ಸಂತೋಷಮಂ ತಾಳ್ದಿದಾ ಕಾಂತೆ ವಿದ್ಯಾಕಾಂತೆಗಿಂತೆಂದಳೊ