ಶ್ರೀ ಬ್ರಹ್ಮದೇವಾಯ ನಮಃ ||

          ಕಂ || ಸುಲಲಿತ ಜಿನೇಂದ್ರಪದಮಂ
ವಿಲಸಿತದ್ಭಕ್ತಿಯಿಂದ ವಂದಿಸಿ ಮುದದಿಂ
ಮಲರಹಿತವಾದ ಧರ್ಮ್ಮದ
ಫಲಮಂಗಳದೊಂದು ನೋಂಪಿಯಂ ವರ್ಣ್ನಿಸುವೆಂ ||

ವ || ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದಾರ್ಯ್ಯಾ ಖಂಡದೊಳು ಕಾಂಭೋಜಿಯೆಂಬುದು ನಾಡು ಭೂತಿಳಕಮೆಂಬುದು ಪೊಳಲದನಾಳ್ವ ಭೂಪಾಳನೆಂಬರಸ ನಾತನ ಪಟ್ಟದರಸಿ ಲಕ್ಷ್ಮೀಮತಿ ಮೊದಲಾದಯ್ನೂರ್ವ್ವರಸಿಯರುಂ ತಾನುಂ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲು ಅರಸಿಂಗೆ ಪುತ್ರಸಂತಾನಮಿಲ್ಲದಿರೆ ಪಲವುದಿನಂ ಚಿಂತಿಸುತ್ತಿರ್ಪ್ಪುದುಂ ಮತ್ತಮಾಪುರದ ರಾಜಶ್ರೇಷ್ಠಿ ವೃಷಭಕಂಬದ ವೃಷಭದತ್ತಂ ಆತನಭಾರ್ಯ್ಯೆ ಋಷಭದತ್ತೆಗಂ ಪುತ್ರಸಂತಾನ ಮಿಲ್ಲದಿರಲವರುಂ ಚಿಂತಿಸುತ್ತಮಿರ್ಪ್ಪುದುಂ ಮೊದಲಾದಯ್ನೂರು ತಂಡ ಸಮುದಾಯಂ ಬಂದು ವನಮೆಲ್ಲಂ ಸರ್ವ್ವರ್ತುಕಮಾಗೆ ವನಪಾಳಕಂ ಚೋದ್ಯಂಬಟ್ಟು ಅಕಾಲಜನಿತ ಪುಷ್ಪ ಫಲಂಗಳ ತಂದತ್ಯಂತ ಪ್ರಮೋದಾಂತರಂಗ ಸಂಗತನಾಗಿ ಬಂದು ಅರಸಂಗೆ ಕೊಟ್ಟು ಸಾಷ್ಟಾಂಗವೆರಗಿ ಕೈಗಳಂ ಮುಗಿದು ದೇವಾ ನಮ್ಮ ಉದ್ಯಾನವನಕ್ಕೆ ಶ್ರೀಧರಾಚಾರ್ಯ್ಯರ್ಮ್ಮೊದಲಾದಯ್ನೂರು ತಂಡ ಋಷಿ ಸಮುದಾಯಂ ಬಿಜಯಂಗೈದರೆಂದು ಬಿನ್ನವಿಸೆ ಕೇಳ್ದು ಅತ್ಯಂತ ಸಂತೋಷ ತುಷ್ಟ ಚಿತ್ತನಾಗಿ ಆ ದೆಶೆಗೇಳಡಿಯಂ ನಡೆದು ಸಾಷ್ಟಾಂಗಮೆರಗಿ ಪೊಡಮಟ್ಟು ವಸಗೆತಂದಂಗಂಗ ಚಿತ್ತಮನಿತ್ತಾನಂದ ಬೇರಿಯಂ ಪೊಯಿಸಿ ಪರಿಜನ ಪುರಜನ ತನ್ನದೇವಿಯರುಂ ವೃಷಭದತ್ತಶೆಟ್ಟಿಯುಮಾತನಸ್ತ್ರೀಯು ಸಹಿತ ಪಾದಮಾರ್ಗದಿಂ ಪೋಗಿ ಮುನೀಂದ್ರರಂ ತ್ರಿಃ ಪ್ರದಕ್ಷಿಣಂ ಗೆಯ್ದು ಸಾಷ್ಟಾಂಗವೆರಗಿ ನಮೋಸ್ತುಮಾಡಿ ಫಲಾರ್ಚನೆಗಳಿಂದರ್ಚಿಸಿ ಮುಂದೆಕುಳ್ಳಿರ್ದು ನಿರ್ಮ್ಮಳಚಿತ್ತದಿಂ ಧರ್ಮ್ಮಶ್ರವಣಮಂ ಕೇಳ್ದುತದನಂತರ ಭೂಪಾಳಮಹಾರಾಜ ಕರಕಮಳಯುಗಮಂ ಮುಗಿದು ಸ್ವಾಮಿ ಯೆನಗೀಭವದೊಳು ಪುತ್ರಸಂತಾನಮುಂಟೋಯಿಲ್ಲವೊ ಬೆಸಸುವದೆನಲವರಿಂತೆಂದರು ಪುಣ್ಯಾಧಿಕರಪ್ಪರೆಣ್ಬ ರ್ಕ್ಕುಮಾರರುಪುಟ್ಟುಗುಮೆನೆ ಸಂತೋಷಂ ಬಟ್ಟು || ಸವಣೋಅಮೋಘವಯಣೋಯೆಂಬೀ ವಾಕ್ಯಾರ್ಥಮಂ ನಿಶ್ಚೈಸಿರಾಗರಸದೊಳೋಲಾಡುತ್ತಮಿರೆ ಮತ್ತಂ ವೃಷಭದತ್ತಶೆಟ್ಟಿ ಕೈಗಳಂ ಮುಗಿದು ತನಗೆ ಪುತ್ರರಿಲ್ಲದುದಂ ಬಿನ್ನವಿಸೆ ಆತಂಗೈಯ್ವರು ಮಕ್ಕಳು ಪುಟ್ಟ ಗುಮೆಂದು ಬೆಸಸೆ ಯಾತಂ ಸಂತುಷ್ಟಚಿತ್ತನಾಗಿ ಬಳಿಕ್ಕಮಿರ್ವ್ವರುಂ ಫಲಮಂಗಳದ ನೋಂಪಿಯಂ ನೋಂಪುದೆನೆ ಮಹಾಪ್ರಸಾದಮದರ ವಿಧಾನಮಂ ಬೆಸಸಿಮೆನಲವರಿಂತೆಂದು ಪೇಳ್ದರು || ಕಾರ್ತ್ತೀಕ ಫಾಲ್ಗುಣ ಆವುದಾನೊಂದು ನಂದೀಶ್ವರದೊಳು ಬಂದ ಮಂಗಳವಾರ ಆಷಾಢ ಮಾಸದ ಶುಕ್ಲಪಕ್ಷದ ಮಂಗಳವಾರದ ದಿನದಲ್ಲು ಶುಚಿರ್ಭೂತರಾಗಿ ಸ್ವಾಮಿಗೆ ಮಹಾಗಂಧ ಕುಂಕುಮಕರ್ಪೂರದಿಂದುದ್ವರ್ತ್ತನಂ ಗೆಯಿದು ಭಕ್ಷಪಾಯಸದಿಂ ನೈವೇದ್ಯಮನಿಟ್ಟು ಶ್ರುತಗುರುಪೂಜೆಯಂ ಮಾಡಿ ತದನಂತರಂ ಪದ್ಮಾ ವತೀದೇವಿಗೆ ಪಾಯಸ ತುಪ್ಪ ಶರ್ಕ್ಕರೆಯಿಂ ಚರುವನಿಟ್ಟು ಕರ್ಪೂರದಾರತಿ ಕಾಳಾಗರು ಧೂಪ ಪನ್ನೆರಡುಫಲ ಪನ್ನೆರಡಡಕೆ ಪನ್ನೆರಡುಎಲೆ ವಪ್ಪಿಡಿಯಕ್ಕಿ ವಪ್ಪಿಡಿಯುಪ್ಪು ವೋಲೆಯತೋಡು ಕರಿಯಮಣಿ ಹೊಂಗನೊಲು ಚಿಗುಳಿ ಬಳಿಕ್ಕಂ ಋಷಿಯರ್ಗಾಹಾರ ದಾನಮಂ ಮಾಡಿ ತಾನೇಕಭಕ್ತುಮಂ ಮಾಳ್ಪುದು ಆ ದಿವಸಮಂ ದರ್ಮ್ಮಕಥನದಿಂ ಪೊತ್ತಂ ಕಳೆವುದು ಯೀಕ್ರಮದಿಂ ಪ್ರತಿಮಾಸದ ಶುಕ್ಲಪಕ್ಷದ ಮಂಗಳವಾರದಲ್ಲಿ ನೋಂಪುದು ಪನ್ನೆರಡು ವರ್ಷ ಪನ್ನೆರಡು ಮಾಸಂ ನೋಂತು ಕಡೆಯೊಳು ಆಷಾಢ ಮಾಸದ ಶುಕ್ಲಪಕ್ಷದ ಮಂಗಳವಾರದಲ್ಲಿ ಉದ್ಯಾಪನೆಯಂ ಮಾಳ್ಪುದು ಅದರಕ್ರಮಮೆಂತೆನೆ ದೇವರಿಗೆ ಮಹಾಭಿಷೇಕ ಪೂಜೆಯಂ ಮಾಡಿಸಿ ಬಳಿಕ ಶ್ರುತಗುರು ಪೂಜೆಯಂ ಮಾಡಿ ಬಳಿಕ ಹನ್ನೆರಡು ಹೊಸ ಬೀಸಣಿಗೆಯೊಳು ಪ್ರತ್ಯೇಕಂ ಪನ್ನೆರಡು ಪರಿಯಭಕ್ಷ ಪನ್ನೆರಡು ಪನ್ನೆರಡುಮಂ ತುಂಬಿ ಆಯ್ದುಪರಿಯ ಪಾಯಸ ಐದುಪರಿಯ ಕಲಸೋಗರ ಅಥವಾ ವಂದು ಪರಿಯ ಪಾಯಸ ವಂದು ಪರಿಯ ಕಲಸೋಗರ ಅಳೆಯಂಬಲಿ ಹನ್ನೆರಡುಬೀಸೂರಿಗೆಯಂ ತುಂಬಿ ಪದ್ಮಾವತಿಗೆ ದೇವಾಂಗವಸ್ತ್ರ ಷೋಡಶಾಭರಣಂಗಳನರ್ಚ್ಚಿಸಿ ವಂದು ಸುವರ್ನ್ನದ ಫಲ ಗಂಧಾಕ್ಷತೆ ಬಿಚ್ಚಾಲೆ ಕರೀಮಣಿ ಹೊಂಗನೂಲು ಚಿಗುಳಿ ತಂಬಿಟ್ಟು ನೆನಗಡಲೆ ಉಂಡಲಿಗೆ ಹನ್ನೆರಡುತೆರದಫಲ ಪನ್ನೆರಡಕೆ ಪನ್ನೆರಡು ಎಲೆ ಅಕ್ಕಿ ಉಪ್ಪು ಸೇವಗೆಯಪಾಯಸಮಂ ಹೊನ್ನಪರಿಯಾಣದೊಳು ತುಂಬಿ ತುಪ್ಪ ಶರ್ಕ್ಕರೆ ಪರಿಪರಿಯಭಕ್ಷದಿಂ ಚರುವನಿಟ್ಟು ಆ ಬಾಯಿನಮಂ ದೇವರಿಂಗೊಂದು ಶ್ರುತಕ್ಕೊಂದು ನೋನಿಸಿದ ಉಪಾಧ್ಯಾಯರಿಗೊಂದು ಕಢೆಯ ಪೇಳ್ದವರ್ಗೆ ದಕ್ಷಿಣೆಸಹಿತಮೊಂದು ಬಾಯಿನಮಂ ಕೊಡುವುದು ಉಳಿದವಂ ಸುವಾಸಿನಿಯರ್ಗೆ ಅಥವಾ ಶಾಸನ ದೇವತೆಯರ್ಗೆ ಕೊಡುವುದು ದೇವರಿಗೆ ಪೂಜೋಪಕರಣಗಳಂ ಕೊಡುವುದು ಪನ್ನೆರಡುತಂಡ ಋಷಿಯರ್ಗ್ಗೆ ಅಜ್ಜಿಯರ್ಗ್ಗೆ ಆಹಾರ ದಾನಮಂ ಮಾಡಿ ಜ್ಞಾನೋಪಕರಣ ಸಂಯಮೋಪಕರಣಂಗಳ ಕೊಡುವುದು ಬಡವರೊಡೆಯರೆನ್ನದರಿದು ಭಕ್ತಿಪೂರ್ವ್ವಕದಿಂ ಈ ಕ್ರಮದಿಂ ಶಕ್ತಿಗೆ ತಕ್ಕಂತೆ ಉದ್ಯಾಪನೆಯಂ ಮಾಳ್ಪುದು ಮೆಂದು ಪೇಳೆಕೇಳ್ದು ನೋಂಪಿಯಂ ಕೈಕೊಂಡು ಗುರುಗಳಂ ಬೀಳ್ಕೊಂಡು ತಮ್ಮತಮ್ಮ ನಿಜಗೃಹಕ್ಕೆ ಬಂದು ಯಥಾಕ್ರಮದಿಂ ನೋಂತುಜ್ಜಯಿಸಿ ತತ್ಪಲದಿಂ ಸ್ವರ್ಗ್ಗಚ್ಯುತರಾಗಿ ಬಂದ ದೇವರ್ಕ್ಕಳು ಶ್ರೀಪ್ರಭುನುಂ ಮಿತ್ರಪ್ರಭನುಂ ಚಂದ್ರಪ್ರಭನುಂ ಕಾಮಪ್ರಭನುಂ ಸೂರ್ಯ ಪ್ರಭನುಂ ರತ್ನಪ್ರಭನುಂ ವಿಮಳಪ್ರಭನುಮೆಂಬ ಯೆಣ್ಬರ್ಕ್ಕುಮಾರರ್ಪ್ಪುಟ್ಟುವುದುಂ ಮತ್ತಂ ವೈಶ್ಯೋತ್ತಮಂಗೆ ನಾಗದತ್ತನುಂ ರುದ್ರದತ್ತನುಂ ಯಿಂದ್ರದತ್ತನುಂ ಸೂರದತ್ತನುಂ ವೀರದತ್ತನು ಮೆಂಬೈವರು ಮಕ್ಕಳು ಪುಟ್ಟುವುದುಂ ಆಯೆಲ್ಲರುಂ ಸಕಳಶಾಸ್ತ್ರಪರಿಣತರುಂ ಲೋಕೋತ್ತಮರುಂ ಭವ್ಯೋತ್ತಮರುಮಾಗಿ ದಾನಪೂಜೆಗಳಂ ಮಾಡುತ್ತ ಸುಖದಿ ರಾಜ್ಯಂಗೆಯುತ್ತಮಿರಲೊಂದು ದಿವಸಂ ಅಮಿತನಗರಿಮಿತತೇಜರು ಮೆಂಬೀರ್ವ್ವರು ಚಾರಣ ಪರಮೇಷ್ಠಿಗಳು ಬಿಜಯಂಗೈಯ್ಯೆ ಸಾಷ್ಟಾಂಗ ಪ್ರಣತರಾಗಿ ಫಲಾರ್ಚನೆಗಳಿಂದರ್ಚಿಸಿ ಮುಂದೆ ಕುಳ್ಳಿರ್ದು ನಿರ್ಮ್ಮಳಚಿತ್ತದಿಂ ಧರ್ಮ್ಮಶ್ರವಣಮಂ ಕೇಳ್ದು ತದನಂತರಂ ಕರಕಮಳಂಗಳಂ ಮುಗಿದು ತಮ್ಮ ಭವಾಳಿಗಳಂ ಕೇಳಿ ಅವರುಮವಧಿಜ್ಞಾನದಿಂದರಿದು ಈ ಪುರದರಸು ಫಲಮಂಗಳವಾರದ ನೋಂಪಿಯ ನೋಂತುಫಲದಿಂ ನೀವು ಸ್ವರ್ಗ್ಗದಿಬಂದು ಪುತ್ರರಾದಿರನೆ ಸಂತೋಷಂ ಬಟ್ಟು ಚಾರಣಪರಮೇಷ್ಠಿಗಳಂ ಬೀಳ್ಕೊಂಡು ತಾವು ಈ ನೋಂಪಿಯಂ ನೋಂತು ಪಲಂಬರ್ಮ್ಮಕ್ಕಳಂ ಪಡೆದು ಪಲವು ನಿಧಿನಿಧಾನಂಗಳಿಗೊಡೆಯರಾಗಿ ಪಲವು ರಾಜ್ಯಂಗಳಂ ಸಾಧಿಸಿ ಕಪ್ಪಮಂ ಕೊಂಡು ದಾನಪೂಜೆಗಳಂ ಮಾಡಿ ಪಲಕಾಲ ರಾಜ್ಯಮನನುಭವಿಸಿ ಬಳಿಕ್ಕ ಮಹಾತಪಶ್ಚರಣಂಗಳಂ ಮಾಡಿ ಆತ್ಮಾರಾಧನೆಯಂ ನೋಂತು ಸ್ವಗ್ಗಾಪವರ್ಗ್ಗಂಗಳಂ ಪಡೆದರು ಈ ನೋಂಪಿಯಂ ನೋಂತುವರ್ಗ್ಗಳು ನೋನಿಸಿದವರ್ಗ್ಗಳು ಸ್ವರ್ಗಾಪವರ್ಗಂಗಳಂ ಪಡೆವರು ಮಂಗಳಂ ||