ಪರಮ ಜಿನಪತಿಯ ಚರಣ
ಕ್ಕುರುಮುದದಿಂದೆರಗಿ ಬಸಿರಬಳಗದ ನೋಂಪಿಯ
ವರಕಥೆಯಂ ವಿರಚಿಸುವೆಂ
ಸುರುಚಿರಮೆಂದೆನಿಸಿ ನೆಗಳ್ದ ಪೊಸ ಕಂನಡದಿಂ ||

ವ || ಅದೆಂತೆಂದೊಡೀಜಂಬೂದ್ವೀಪದ ಭರತಕ್ಷೇತ್ರದೊಳು ಮಗಧೆಯೆಂಬುದು | ನಾಡು ರಾಜಗೃಹಮೆಂಬುದು ಪೊಳಲದನಾಳ್ವಂ | ಶ್ರೇಣಿಕಮಹಾಂಡಲೇಶ್ವರ ನಾತನ ಪಟ್ಟದರಸಿ | ಚೇಳಿನಿಮಹಾದೇವಿ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ | ಋಷಿನಿವೇದಕಂ ಬಂದಾಸ್ಥಾನಮಂಟಪಮಂ ಪೊಕ್ಕು ಸಾಷ್ಟಾಂಗವೆರಗಿ ಪೊಡವಟ್ಟು | ದೇ ವ ವಿಪುಲಗಿರಿಯೊಳು ವೀರಸ್ವಾಮಿಯ ಸಮವಸರಣಂ ಬಂದು ನೆಲಸಿದುದೆಂದು ಬಿಂನಪಂಗೆಯ್ದೊಡಾತಂ ಗಂಗಚಿತ್ತಮನಿತ್ತಾನಂದ ಭೇರಿಯಂ ಪೊಯ್ಸಿ ನಿಜಪರಿಜನ ಪುರಜನಂ ಬೆರಸು | ಪಾದಮಾರ್ಗ್ಗದಿಂ ಪೋಗಿ ಸಮವಸರಣಂ ಬಂದು ನೆಲಸಿದುದಂ ಕಂಡು ಪೊಳಗಂ ಪೊಕ್ಕು ಗಂಧಕುಟಿಯಂ ತ್ರಿಪ್ರದಕ್ಷಿಣಂಗೆಯ್ದು ಪರಮೇಶ್ವರನಂ ಪಲವರ್ಚ್ಚನೆಗಳಿಂದರ್ಚ್ಚಿಸಿ | ಬಂದಿಸಿ ತದನಂತರಂ ಮನುಷ್ಯ ಕೋಷ್ಠದೊಳ್ಕುಳ್ಳಿರ್ದ್ದು | ನಿರ್ಮ್ಮಳಚಿತ್ತದಿಂ | ಧರ್ಮ್ಮಶ್ರವಣಮಂಕೇಳ್ದು ಸಂತುಷ್ಟಚಿತ್ತರಾಗಿ | ಬೀಳ್ಕೊಂಡು ನಿಜಪುರಮನೆಯ್ದಿ ಸುಖಮಿರ್ದ್ದರು | ಮತ್ತಮಾ ಪುರದ ರಾಜಶ್ರೇಷ್ಠಿ ಜಯಸೇನನೆಂಬನಾತನ ಪೆಂಡತಿ ಜಯಸೇನೆಯೆಂಬಳು | ಗವುತಮಸ್ವಾಮಿಗಳ್ಗೆ ಕರಕಮಳಂಗಳಂ ಮುಗಿದು | ಸ್ವಾಮಿ ಯನಗಾವುದಾನುಮೊಂದು ನೋಂಪಿಯಂ ಬೆಸಸಿಮೆ ನಲವರು ಬಸಿರಬಳಗದ ನೋಂಪಿಯನಿಂತೆಂದು ಪೇಳ್ದರು ಆವುದಾನುಮೊಂದು ನಂದೀಶ್ವರದಷ್ಟಮಿಯೊಳು ನೋಂಪಿಯಂ ಕೈಕೊಂಡು ಮುಂದಣ ನಂದೀಶ್ವರದ ಪೌರ್ನ್ನಮಿಪರ್ಯ್ಯಂತಂ | ನಾಲ್ಕು ತಿಂಗಳು ನಿತ್ಯಾಭಿಷೇಕಾಷ್ಟವಿಧಾರ್ಚ್ಚನೆಯಿಂದರ್ಚ್ಚಿಸಿ ಕಥೆಯಂ ಕೇಳ್ಪುದುಂ | ಕಡೆಯೊಳುಜ್ಜವಣೆಯಂ ಮಾಳ್ಪಕ್ರಮಮೆಂತೆಂದೊಡೆ

          || ಕ || ಕೆಂಪೆನಿಸಿದೆರಡುಕೆಲಂ
ನುಂಪೆನಿಸಿದುದೊಂದು ಶಾವೆ ಕಳಶಮನೊಂದುಂ
ಕೆಂಪಾಗಿ ಕೂಡಿತಪ್ಪದು
ಸಂಪೂರ್ಣ್ನಂ ಮಾಡಿ ಗಡಿಗೆಯ ಪಂನೆರಡಂ ||

|| ವ || ಅನ್ತುಮಾಡಿಸಿ ಪಂನೆರಡು ಗಡಿಗೆಗಳೊಳು ಹಂನೆರಡು ಧಾನ್ಯಮಂ ತೀವಿದೊಂದು ಕೆಲದೊಳಿಕ್ಕಿ ಪಡೆದಂತಪ್ಪ ಫಲಂಗಳನಿಕ್ಕಿ | ಅದರ ಮೇಲೆ ಶ್ರಾವೆಯನಿಳಿಪಿ | ಅದರಮೇಲೆ ಕಳಶಮನಿಳಿಪಿ | ಆ ಕಳಸದ ಮೇಲೆ | ಹಾಲುತುಪ್ಪಮಂ ತೀವಿ | ಸುವರ್ನ್ನಮನಿಕ್ಕಿ | ಶೋಭನಗಂಧಮಂ ಪೂಸಿ | ಮೂನೂಲಂ ಸುತ್ತಿ | ಮತ್ತೊಂದು ಕೆಲದೊಳು ಕಡಲೆಯನಿಕ್ಕಿಯಷ್ಟಹುಗ್ಗಿ | ಅಳೆಯನಿಟ್ಟಟ್ಟ ಹಚ್ಚಂಬಲಿ ಕಲಸುಗೂಳೊಳು ತುಯ್ಯಲು ತುಪ್ಪಮಂ ತೀವಿಪಡೆದಂತಪ್ಪ ಫಲಮಂನಿಕ್ಕಿ ಹಂನೆರಡು ಹೂರಣಗಡುಬು | ಹಂನೆರಡು ತರಗು | ಹನ್ನೆರಡು ಮಂಡಗೆಯುಮರ್ಹತ್ಪರಮೇಶ್ವರನಂ | ಮಹಾಭಿಷೇಕಾಷ್ಟವಿಧಾರ್ಚನೆಯಿಂದರ್ಚ್ಚಿಸಿ | ದೇವರಮುಂದೈದು ಮಾನಯೆಳ್ಳು ವೆರಡು ಪುಂಜವಮಾಡಿ | ಆ ಪುಂಜದ ಮೇಲೆ ಯೆರಡು ಕೆಲನಿಳುಪುವಾಗ ಬಸುರುಬಳಗವಾಗಿಪ್ಪೆ ನೆಂದುಚ್ಚರಿಸಿ ದೇವರಮುಂದೆ ಧಾನ್ಯದ ಕೆಳಗಿರಿಸುವುದು | ಜಕ್ಕಲೆಯಮುಂದುಳಿದಕೆಲನಿರಿಸಿ ನೋನಿಸಿದವರ್ಗ್ಗುಡ ಕೊಡುವುದು | ಮುತ್ತೈದೆ ಕಥೆಯಂ ಕೇಳ್ಪುದು | ಆಯ್ದು ತಂಡ ಋಷಿಯರಂ ಮೇಣಯ್ದು ತಂಡಜ್ಜಿಯರಂ ನಿಲಿಸೂದು | ಚಾತುರ್ವ್ಯರ್ನ್ನಕ್ಕಾಹಾರದಾನ ಸುವರ್ನ್ನ ದಾನಮಂ ಮಾಳ್ಪುದು | ಗೋತ್ರಮಲ್ಲದವರ್ಗ್ಗೆ ಬಾಯಿನಮೆಂದಾದೊಡ ಮಿಕ್ಕಲಾಗದೆಂದು ಕೇಳ್ದು | ನೋಂಪಿಯಂ ಕೈಕೊಂಡು ನೋನುತ್ತಮಿರ್ಪ್ಪುದುಮಲ್ಲಿಯ ಬಡಪರದನೋರ್ವ್ವಂ | ಜಯಸೇನನೆಂಬನಾತನ ಪೆಂಡತಿ ಜಯಸೇನೆಯೆಂಬಳೊಂದು ದಿವಸಂ | ವಿಜಯಸೇನೆ ಬಸದಿಗೆ ಪೋಗಿ ನೋಂತು ಮನೆಗೆ ಬರುತ್ತಿರ್ದ್ದದಂ ಜಯಸೇನೆ ಕಂಡೆಲ್ಲಿಗೆ ಪೋಗಿ ಬಂದಿರಕ್ಕಯೆನೆ | ಕೇಳ್ದಾನುಂ ನೋಂಪಿಯಂ ನೋಂಪುದೆನೆ ಬಡವರ್ಗ್ಗಿದಳವಡದೆನಲಳವಡುವಂತಾಗಿ ನೋಂಪೆನೆಂದು ಕೈಕೊಂಡು ಬಸದಿಗೆ ಪೋಗಿ ನೋಂತುಬಂದೆಯೆನಲಾವ ನೋಂಪಿಯೆನೆ | ಬಸಿರಬಳಗದ ನೋಂಪಿಯೆನಲದರ ವಿಧಾನಮೆಂತೆನೆ | ಮುಂ ಪೇಳ್ದ ವಿಧಾನಮಂ ಸವಿಸ್ತರಂ ಪೇಳೆ ಕೇಳ್ದಾನುಂ | ನೋಂಪಿಯಂ ನೋಂಪೆನೆ | ಬಡವರ್ಗಿದಳವಡದೆನಲಡುವಂತಾಗಿ ನೋಂಪೆನೆಂದುಕೈಕೊಂಡು ಯಥಾಶಕ್ತಿಯಂ ನಿತ್ಯಾಭಿಷೇಕಾಷ್ಟ ವಿಧಾರ್ಚನೆ ಸಹಿತಂ ನೋನುತ್ತಮಿರ್ಪುದುಂ | ಯಥಾಶಕ್ತಿಯಿಂ ನಿತ್ಯಾಭಿಷೇಕಾಷ್ಟ ವಿಧಾರ್ಚನೆ ಸಹಿತಂ ನೋನುತ್ತಮಿರ್ಪುದುಂ | ಜಯಸೇನೆಗೆ ಮಕ್ಕಳುಂ ಸೊಸೆಯರೂ | ಮುನ್ನಿಂಪಿರಿದಾಗಿ | ಪಿರಿದಪ್ಪ ಶ್ರೀಯೊಳ್ಕೂಡಿ | ಬಸಿರಬಳಗವಾಗೆ ಸುಖಮಿರ್ದು ಶ್ರೀಯ್ಯಮದದಿಂ ತನ್ನ ಮಕ್ಕಳು ಸೊಸೆಯರ ಬಲವರ್ಗಮಂ ಪೆರ್ಚ್ಚಿ ನೋಂಪಿಯನವಜ್ಞೆಗೆಯ್ದು ಉದಾಸೀನಂಮಾಡಿ ನೋನದಿರೆ ನೋಂಪಿಯ ಕ್ರಮಂ ತಪ್ಪಿಪೋಗೆ | ತನ್ನಶ್ರೀಯುಂ ಪಾರಿಪೋಗಿ | ತನ್ನ ಸೊಸೆಯರು ಮಕ್ಕಳುಂ ತನ್ನ ಕಡೆಗೆ ಕಡುಮುಳಿದು ಬೇರೊಕ್ಕಲಾದಂದುಮಳಿಸಿ ಕಂದಿಕುಂದಿ ಶೆಟ್ಟಿಯೋರ್ವಂಗುಣಲೆಡೆ ಮಾಡಿ | ಶೆಟ್ಟಿಬಾರದೆತಡನೆಂದು | ವಿಜಯ ಸೇನೆಯೊಳಗಂ ಪೊರಗಂನೋಡುತ್ತಮಿರ್ಪ ಸಮಯದೊಳೂ

          || ಕಂದ || ಬರೆಚರ್ಯ್ಯಾಮಾರ್ಗದಿತಾಂ
ಪರಮತಪೋಧನ ಸುಭದ್ರಭಟ್ಟಾರಕರುಂ
ಸರಸಿಜವದನೆ ಗುಣೋನ್ನತೆ
ಪರಮೋತ್ಸವ ವಿಜಯಸೇನೆ ಕಂಡಳು ಮುದದಿಂ ||

|| ವ || ಅನ್ತುಕಂಡು ತ್ರಿಕರಣಶುದ್ಧಿಯಿಂ ವಂದಿಸಿ | ನಿಲಿಸಿ ನವವಿಧಪುಣ್ಯದೊಳು ನೆರೆದು | ಸಮಸ್ತ ಗುಣಸಮನ್ವಿತೆಯಾಗಿ | ಷಡುಋದ್ದಿ ಸಹಿತಂ | ಚತುರ್ವಿಶೇಷಮನುಳ್ಳ ದಾನಮಂ ಕೊಟ್ಟು ಚರ್ಯಾನಂತರಂ ಕರಕಮಂಗಳಂ ಮುಗಿದು | ಜೀಯಾ ಬಿನ್ನಪವವಧಾರಿಸಿ | ನಿಃಕಾರಣಂ ಮಕ್ಕಳುಂ | ಬೇರೊಕ್ಕಲಾದುದಂ | ಶ್ರೀಯುಂ ತೂಳ್ದುತೊ ಮೊರ್ದಲೆ ಪಾರಿಪೋದುದುನುಂ ಬೆಸಸಿಮೆನಲವರಧಿಜ್ಞಾನಿಗಳಪ್ಪುದರಿಂ ಪೇಳೆ ನೀಂ ಗರ್ವ್ವದಿಂ ಕೈಕೊಂಡಕೆ ನೋಂಪಿಯಂನಿಳಿಕೆಗೆಯ್ದು | ಬಿಟ್ಟ ಪಾಪದಿಂ | ನಿಂನ ಮಕ್ಕಳು ನಿನಗೆ ಮುಳಿದು ಬೇರೂಕ್ಕಲಾದರು | ಶ್ರೀಯುಂಪಾರಿಪೋಗಿ ನಿನಗಿಂತವಸ್ಥೆಯಾದುದೆಂದು ಪೇಳೆಕೇಳ್ದು ತಾನು ಗೆಯ್ದಿಹ ಪಾಪಕ್ಕೆ ತಾನೆ ಭಯಂಕರಂಗೊಂಡು ಮರುಗಿ ಮತ್ತಮಾ ನೋಂಪಿಯಂ ತ್ರಿಕರಣಶುದ್ಧಿಯಿಂ | ಸಮ್ಯಕ್ತಪೂರ್ವ್ವಕಮಾಗಿ ಕೈಕೊಂಬುದುಂ | ತಾಯಿಮಕ್ಕಳೊಂದಾಗಿ | ಮುಂನಿನಂತೆ ಶ್ರೀಯೊಳ್ಕೂಡಿ ಸುಖಮಿರ್ದ್ದಳು | ಜಯಸೇನೆಯುಂ | ವಿಜಯಸೇನನುಂ | ಯಧಾ ಕ್ರಮದಿಂದ ನೋಂತುಜ್ಜೈಸಿ | ತತ್ರಲದಿಂ | ಪಲಂಬರ್ಮ್ಮಕ್ಕಳುವಡೆದು | ಪಲವುನಿಧಿ ನಿದಾನಕ್ಕೊಡೆಯರಾಗಿ | ಬಸಿರಬಳಗಮಾಗಿ | ಚತುರ್ವ್ವಿಧ ದಾನಪೂಜೆಯಂ ಮಾಡುತ್ತಂ | ಸಕಲ ಸಂಸಾರಸುಖಮನನುಭವಿಸಿ ಕಡೆಯೊಳ್ಪರಮವೈರಾಗ್ಯ ಪರಾಯಣೆಯಾಗಿ | ಸಮ್ಯಕ್ತ್ಯ ಪೂರ್ವ್ವಕಂ | ಜಿನದೀಕ್ಷೆಯಂ ಕೈಕೊಂಡು | ವಿಶಿಷ್ಟ ತಪದೊಳಂತ್ಯಕಾಲದೊಳು ಪರಮಸಮಾಧಿಯಂ | ಶರೀರಭಾರಮನಿಳಿಪಿ | ಸ್ವರ್ಗ್ಗದೊಳು | ಮಹರ್ದ್ಧಿಕ ದೇವನಾಗಿಪುಟ್ಟಿ ದಿವ್ಯಸುಖಮನನುಭವಿಸಿ ಬಂದಿಲ್ಲಿ | ಮನುಷ್ಯೋತ್ತಮರಾಗಿಲ್ಲಿ ಪರಂಪರೆಯಿಂದಷ್ಟವಿಧ ಕರ್ಮ್ಮಂಗಳಂ ನಿರ್ಮ್ಮೂಲನಂಗೆಯ್ದು ಮೋಕ್ಷಸ್ಥಾಪಮನೆಯ್ದುದರಿಂತೀ ಬಸಿರಬಳಗದ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂ ಸ್ವರ್ಗ್ಗಂಗಳಕ್ಕು ಜಯಮಂಗಳಮಹಾ || ಶ್ರೀ ಶ್ರೀ ಶ್ರೀ