ಶ್ರೀ ವೀತರಾಗಾಯ ನಮಃ ||

          ಶ್ರೀಯೆಂಬನಂತವಿದ್ಯಾ
ಶ್ರೀಯೆಂಬೀಯೆರಡೇ ಸೌಖ್ಯ ಹೇತುಗಳದಱಿಂ
ಶ್ರೀಯುಮನನಂತ ವಿದ್ಯಾ
ಶ್ರೀಯುಮನೆಮಗೀಗೆ ವರ್ದ್ಧಮಾನ ಜಿನೇಂದ್ರಂ ||

|| ವ || ಬುಧಾಷ್ಟಮಿಯ ಕತೆಯೆಂತೆಂದೊಡೀ ಜಂಬೂ ದ್ವೀಪದ ಭರತ ಕ್ಷೇತ್ರದೊಳಾರ್ಯ್ಯಾ ಖಂಡದೊಳಂಗವತಿಯೆಂಬುದು ವಿಷಯ | ಚಂಪಾಪುರಮೆಂಬುದು ಪೊಳಲದನಾಳ್ವಂ ವಿದಿತಾಂಖನೆಂಬರಸ ನಾತನ ಪಟ್ಟದರಸಿ ಗುಣವತಿಯೆಂಬಳಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲಾ ಪಟ್ಟನದೊಳೋರ್ವ್ವ ಬ್ರಾಹ್ಮಣಂ ಚತುರ್ವ್ವೇದಭಟ್ಟನೆಂಬಂ | ಆತನ ಸ್ತ್ರೀ ಸಾವಿತ್ರೆಯೆಂಬಳಂತವರಿರ್ವ್ವರ್ಗ್ಗಂ ಪುಟ್ಟಿದರಜ್ಞಾನ ಮೂರ್ತ್ತಿ ಪುಂಣ್ಯಕ್ಷಯರೆಂಬಿರ್ವ್ವರ್ಮ್ಮಕ್ಕಳು ಪುಟ್ಟುಉದುಂ | ತಾಯಿ ತಂದೆಯರಿಬ್ಬರು ಅಮರಲೋಕ ಪ್ರಾಪ್ತರಪ್ಪುದುಂ ತಾಉಂ ದರಿದ್ರರಾಗಿರೆ ಮತ್ತವರ ತಾಯಪ್ಪ ಮುತ್ತಬ್ಬೆ ಸಲಹುತ್ತಮಿರೆ ಅಂತಾ ಮುತ್ತಬ್ಬೆಗೊಂದುಪಾಯಮಿಲ್ಲದಂಗಡಿಯ ಭತ್ತದ ಪಸರಕ್ಕೆ ಪೋಗಿ ಭತ್ತದಿಘ್ಘಮಂ ಬೆಸಗೊಳುತ್ತಂ ಈ ಪರಿಯಲಿ ಅಂಗಡಿಯಂಗಡಿಗೊಪ್ಪಿಡಿ ಭತ್ತಮಂ ಕಳ್ದುಕೊಂಡು ಭತ್ತಮಂ ನೆರಪಿ ತಂದು ಅಂಬಲಿ ಗಂಜಿಯಂ ಕಾಸಿ | ಮಕ್ಕಳು ತಾನುಂ ಕುಡಿದು ಬದುಕುತ್ತಮಿರೆ | ಮತ್ತಾ ಮುತ್ತಬ್ಬೆ ಸತ್ತು ಆ ಪೊಳಲೊಳು ತಲೆ ಹುಳಿತ ನಾಯಾಗಿ ಪುಟ್ಟಿ ಕಂಡೆವರೆಲ್ಲಂ ಗುಂಡುಗೊಂಡು ತಗುಳೆ ನರಕಾವಸ್ತೆಯನುಣುತ್ತಮಿರ್ದ್ದಲ್ಲಿಯ ಪೊಳಲ ಶ್ರಾವಕ ಜನಂಗಳು ಬುಧಾಷ್ಟಾಮಿಯಂ ನೋನಲೆಂದು ಅಷ್ಟವಿಧಾರ್ಚನೆಯಂ ಕೊಂಡು ಸಹಸ್ರಕೂಟ ಚೈತ್ಯಾಲಯಕ್ಕೆ ಪೋಗಿ ತ್ರಿಃಪ್ರದಕ್ಷಿಣಂಗೆಯ್ದು ಕಾಲಂ ತೊಳದೊಳಗಂ ಪೊಗುಉದು ಮಿತ್ತಲಾ ನಾಯಿ ತಂನ ತಲೆಯ ಬೇನೆಗೆಂ ನಿಲಲಾಱದೆ ಬಂದು ಬಸದಿಯ ಪರಿ ಸೂತ್ರಮಂ ಪೊಕ್ಕು ಶ್ರಾವಕ್ಕರ್ಕಾಲಂ ತೊಳದುಕೊಂಡುದಕದೊಳ್ ಪೊರಳ್ದೊಡಾ ನಾಯ ತಲೆಯ ಪುಳುವೆಲ್ಲಮುದುರ್ದ್ದು ಪೋಗಲಂತಾ ನಾಯಿ ಜಾತಿಸ್ಮರನಾಗಿಯುಮಂತಾ ನೋಂಪಿಯ ಫಲಕ್ಕೆ ಮೆಚ್ಚಿ – ಚ್ಚಿನ – ಪಾಡುತ್ತಂ ಪ್ರಾಣ ಪರಿತ್ಯಾಗಂಗೆಯ್ದು ಮಾಪೊಳಲ ವಿದಿತಾಂಗ ಮಹಾರಾಜಂಗಂ ಗುಣವತಿ ಮಹಾದೇವಿಗಂ ರೂಪವತಿಯೆಂಬ ಕುಮಾರಿಯಾಗಿ ಪುಟ್ಟಿ ಬೆಳೆದೈಯ್ದು ವರ್ಷದಿಂ ಮೇಲೆ ಜೈನೋಪಾಧ್ಯಾಯರ ಸಮೀಪದೊಳೋದಿಸೆ ಸಮ್ಯಕ್ತ್ವ ದೃಢವ್ರತೆಯಾಗಿ ಯವ್ವನ ಪ್ರಾಪ್ತಿಯಾಗೆ (ಮೊಂ) ದು ದಿವಸಂ ಪರಿಚಾರಕಿಯರ್ವ್ವೆರಸು ಮಣಿಯಾಡದ ಮೇಲೆ ವೊಡ್ಡೋಲಗಂ ಗೊಟ್ಟು ಕುಳ್ಳಿರ್ಪ್ಪುದು ಮಿತ್ತಲ್ವಿಜಯಾರ್ದ್ಧ ಪರ್ವ್ವತದ ದಕ್ಷಿಣ ಶ್ರೇಢಿಯ ಗಗನವಲ್ಲಭಂ ಚಂಪಾಪುರಮನಾಳ್ವಂ ಚಿತ್ರವಾಹನನೆಂಬ ವಿದ್ಯಾಧರಂ ವಿಮಾನಾರೂಢನಾಗಿ ಸ್ವೇಚ್ಛಾವಿಹಾರದಿಂ ಪೋಗುತ್ತಮೊಡ್ಡೋಲಗಂ ಗೊಟ್ಟಿರ್ದ್ದ ರೂಪಾವತಿ ಕಂನೆಯಂ ಕಂಡು ಸೋಲ್ತಾಕೆಯ ಮಾತಾ ಪಿತೃಗಳಲ್ಲಿಗೆ ಬಂದಾಕೆಯಂ ಬೇಡಿ | ಪ್ರಾರ್ತ್ಥಿಸಿ ಪಡೆದು ರತ್ನಾಭರಣ ವಿಚಿತ್ರ ವಸ್ತ್ರಂಗಳನುಡಲುಂ ತೊಡಲುಂ ಕೊಟ್ಟು ಶುಭದಿನ ಮುಹೂರ್ತ್ಥದೊಳು ಮಹೋತ್ಸಾಹದಿಂ ವಿವಾಹಮಾಗಿ ತಂನ ಗಗನವಲ್ಲಭ ಪುರಕೆ ಪೋಗಿ ಪಟ್ಟಮಹಾದೇವಿಯೆಂದು ಪಟ್ಟಂಗಟ್ಟಿ ಸುಕಥಾ ವಿನೋದದಿಂ ರಾಜ್ಯಂಗೆಯುತ್ತಮಿರ್ದ್ದೊಂದು ದಿವಸಂ ದಿವ್ಯ ಜ್ಞಾನಿಗಳೂ ಮಾಸೋಪವಾಸದ ಪಾರಣೆಯ ದಿನಂ ಚರ್ಯ್ಯಾ ಮಾರ್ಗ್ಗದಿಂ ಬರೆ ರೂಪವತಿ ಕಂಡು ಶ್ರದ್ಧಾದಿ ಸಪ್ತಗುಣ ಸಮನ್ವಿತೆಯಾಗಿ ನಿಲಿಸಿ ನಿರಂತರಾಯಮಾಗಲೊಡನೆ ಅಹೋಪಾತ್ರಮಹೋಧಾತೃವೆಂದು ದೇವರ್ಕ್ಕಳು ಪಂಚಾಶ್ಚರ್ಯಮಂ ಮಾಡಿ ತಾನುಂ ಜಾತಿ ಸ್ಮರೆಯಾಗಿ ತಂನ ಪೆಱಗನ ಭವ ಪ್ರಪಂಚಮೆಲ್ಲಮಂ ತಿಳಿದು ರೂಪಾವತಿ ವಿದ್ಯಾಧರ ವಿಮಾನಾರೂಢೆಯಾಗಿ ಗಗನ ಮಾರ್ಗ್ಗದಿಂ ಚಂಪಾಪುರಕೆ ಬಂದು ತಂನ ತಂದೆತಾಯಿಗಳಂ ಸರ್ವ್ವಾಂಗ ಪ್ರಣತೆಯಾಗಿ ಪೊಡೆವಟ್ಟು ಕ್ಷೇಮ ಕುಶಲಂಗಳಂ ಬೆಸಗೊಂಡು ತದನಂತರಂ ಬುಧಾಷ್ಟಮಿಯ ನೋಂಪಿಯಂ ಬೆಸಸಿಮೆನಲವರು ರೂಪವತಿ ಸಹಿತಂ ಅಷ್ಟವಿಧಾರ್ಚ್ಚನೆಗಳಂ ಕೊಂಡು ಸಹಸ್ರಕೂಟ ಚೈತ್ಯಾಲಯಕ್ಕೆ ಪೋಗಿ ತ್ರಿಃಪ್ರದಕ್ಷಿಣಂಗೆಯ್ದು ಕರಕಮಲ ಮುಕುಳಿತರಾಗಿ ವೊಗಳಂ ಪೊಕ್ಕು ಜಿನೇಶ್ವರನಂ ಬಂದಿಸಿ ಅರ್ಚ್ಚಿಸಿ | ಶ್ರೀಮತಿ ಗಂತಿಯರಂ ಬಂದಿಸಿ ಕುಳ್ಳಿರ್ದ್ದು ಧರ್ಮ್ಮ ಶ್ರವಣಮಂ ಕೇಳ್ದು ತದನಂತರಂ ಬುಧಾಷ್ಟಮಿಯ ವಿಧಾನಮಂ ಬೆಸಸಿಮೆನಲವರಿಂತೆಂದರು | ಬುಧವಾರದಲು ಅಷ್ಟಮಿ ಕೂಡಿದ ದಿನದಲೂ ಮಿಂದು ಶುಚಿರ್ಭ್ಭೂತರಾಗಿ | ವಸ್ತ್ರಾಭರಣಂಗಳನುಟ್ಟು ತೊಟ್ಟು | ಅಷ್ಟವಿಧಾರ್ಚ್ಚನೆವೆರಸು ಚೈತ್ಯಾಲಯಕ್ಕೆ ಬಂದು ದೇವರಿಗಭಿಷೇಕ ಪೂಜೆಯಂ ಮಾಡಿ ದೇವರ ಮುಂದೈದು ಬಳ್ಳಂ ಮೇಣು ಅಯ್ದು ಮಾನಂ ಮೇಣು ಅಯ್ದು ಸೊಲ್ಲಗೆಯು ಮೇಣು ತಂನ ಶಕ್ತಿಯಿಂ ನೆಲ್ಲಂ ರಾಸಿ ಮಾಡಿ ವೊಂದಡಕೆಯೆರಡೆಲೆ ವೊಂದು ಪೂ ಮಾಲೆ ವೊಂದು ಬೆಲ್ಲದಲ್ಲು ಪಠಾವಳಿಯ ನೂಲಂ ತುಪ್ಪದಲು ದೀವಿಗೆಯಂ ಬೆಳಗಿ ಕರ್ಪ್ಪೂರದಾರತಿಯನೆತ್ತಿ ಕಾಳಗರು ಧೂಪಮನಿಕ್ಕಿ ರಾಶಿಯ ಮೇಲೆ ಪ್ರದಕ್ಷಿಣಮಾಗಿ ದಿಗ್ದೇವತೆಯರಂ ಸ್ಥಾಪಿಸಿ ಆ ದೇವತೆಯರ ಪೆಸರೇನೆಂದೊಡೆ | ಓಂ ಜಯೇ ಸ್ವಾಹಾ | ಓಂ ವಿಜಯೇ ಸ್ವಾಹಾ | ಓ ಅಜಿತೇ ಸ್ವಾಹಾ | ಓಂ ಅಪರಾಜಿತೇ ಸ್ವಾಹಾ | ಯೆಂದು ದಿಕ್ಕಿನೊಳುನಾಮಾಕ್ಷರಂಗಳಂ ಬರೆದು | ವೀ ದಿಕ್ಕಿನೊಳು | ಓಂ ಶ್ರೀ ಸ್ವಾಹಾ | ಓಂ ಹ್ರೀಂ ಸ್ವಾಹಾ | ಓಂ ಧ್ರುತಿ ಸ್ಬಾಹಾ | ಓಂ ಕೀರ್ತ್ತಿ ಸ್ವಾಹಾ | ಯಾ ದೇವತೆಯರ ನಾಮಾಕ್ಷರಂಗಳಂ ನಾಲ್ಕು ಗೋಟಿನ ರಾಸಿಯ ಮೇಲೆ ಪ್ರದಕ್ಷಿಣೆಮಾಗಿ ಬರೆದು ರಾಸಿಯಂ ದೇವರ್ಗ್ಗೆ | ಸಮರ್ಪಿಸುವಲ್ಲಿ ಗಂಧಾಕ್ಷತೆ ಪುಷ್ಪವಂ ಕೊಂಡು ಪುಷ್ಪಾಂಜಲಿಯಂ ಮಾಡುವಲ್ಲಿ ಓಂ ಹ್ರಾಂ ಣಮೋ ಅರಹಂತಾಣಂ | ಓಂ ಹ್ರೀಂ ಣಮೋ ಸಿದ್ಧಾಣಂ | ಓಂ ಹ್ರೂಂ ಣಮೋ ಆಯಿರಿಯಾಣಂ | ಓಂ ಹ್ರೌಂ ಣಮೋ ಉವಝ್ಝಾಯಾಣಂ | ಓಂ ಹ್ರಃ ಣಮೋ ಳೋಯೋ ಸವ್ವಸಾಹೂಣಂ | ಯೆಂಬೀ ಜೀವರಕ್ಷಣೆ ಪಂಚ ನಮಸ್ಕಾರ ಮಂತ್ರದಿಂ ಪುಷ್ಪಾಂಜಲಿಯಂ ಮಾಡುವುದುಂ | ಶ್ರುತಗುರುಗಳುಮನರ್ಚ್ಚಿಸಿ ಪೊಡೆವಟ್ಟುಯೇಕ ಭುಕ್ತಮಂ ಬ್ರಹ್ಮಚರ್ಯ್ಯ ಪೂರ್ವ್ವಕಂ ಕೈಕೊಂಡು ಕ್ರಮದಿಂದೊಂದುಮಡಿಯಿಂದಿಂಮಡಿಯಾಗಿ ಅಯ್ದು ಬುಧಾಷ್ಟಮಿ ಪರಿಯಂತಮೀ ಕ್ರಮದಿಂ ಮಾಳ್ಪುದು | ಬಳಿಕ್ಕಂ ಮೂಱು ಬುಧಾಷ್ಟಮಿಯೊಳು ವೊಕ್ಕುಳಂ ಮೇಣು ವೊಂದು ಬಳ್ಳಂ ಮೇಣು ಯೆರಡು ಹಿಡಿ ಮೇಣೀ ಕ್ರಮದಿಂ ಹೋಮ ದ್ರವ್ಯ ಧಾನ್ಯಮಂ ಅರ್ಚ್ಛಿಸೂದು | ಅರ್ಚ್ಛಿಸೂದು ಬಳಿಕ್ಕಮ್ ವೊಂಭತ್ತನೆಯ ಬುಧಾಷ್ಟಮಿಯೊಳು ಸ್ಥಾಪನೆಯಂ ಮಾಡುವಲ್ಲಿ ಶ್ರೀ ವರ್ದ್ಧಮಾನ ಸ್ವಾಮಿಯ ಪ್ರತುಮೆಯಂ ಮಾಡಿಸಿ ಪ್ರತಿಷ್ಟಾವಿಧಾನದಿಂದ ವೇದಿಕೆಯಂ ಮಾಡಿಸಿ ಆ ವೇದಿಕೆಯ ಮಧ್ಯದಲು ದೇವರಂ ಸ್ಥಾಪ್ಯಂ ಮಾಡಿ ಆ ದೇವರ ಯೆಂಟು ದಿಕ್ಕಿನಲೆಂಟು ಕೊಳಗ ಧಾನ್ಯಮಂ ರಾಸಿ ಮಾಡುವುದು | ಯಿಲ್ಲದಿರ್ದ್ದಡೊಂದು ಬಳ್ಳ ಧಾನ್ಯಮಂ ರಾಸಿ ಮಾಡೂದು | ಯೆಂಟು ಬೆಲ್ಲ | ಯೆಂಟಡಕೆ | ಹದಿನಾಱೆಲೆ | ಯೆಂಟು ಫಲ ಯೆಂಟು ಪರಿಯ ಭಕ್ಷೃಂಗಳನರ್ಚಿಸೂದು | ಯೆಂಟು ಪರಿಯಾಮದೊಳು ಯೆಂಟು ಬಗೆಯಡುಗೆಯ ನೈವೇದ್ಯಮನಿಕ್ಕಿಯೆಂಟು ತಂಡದಜ್ಜಿಯರ್ಗ್ಗೆ ಮೇಣೆಂಟು ತಂಡ ಪ್ರಜೆ ಶ್ರಾವಕ ಸೊವಾಸಿಯರ್ಗ್ಗೆ ಬಾಯಿನಮಂ ಕೊಡೂದು || ಯೆಂಟು ಮಿಥುನಕ್ಕೆ ಉಣಲಿಕ್ಕೂದು | ಉಡಕೊಡುಉದು | ಯೆಂಟು ತಂಡ ರುಷಿಯರ್ಗ್ಗೆ ತಟ್ಟು ಕುಂಚ ಕಮಂಡಲ ಪುಸ್ತಕ ಕವಳಿಗೆ ಠವಣೆ ಕೋಲು ಶ್ರುತ ಪಾವಡೆ ಸಹಿತಂ ಕೊಡುಉದು | ಶ್ರುತ ಪೂಜೆಯಂ ಮಾಳ್ಪುದು | ಯೆಂಟು ತಂಡದಜ್ಜಿಯರ್ಗ್ಗೆ ವಸ್ತ್ರದಾನಮಂ ಕೊಡುಉದು | ದೇವರಿಗೆ ಘಂಟೆ | ಜಯಗಂಟೆ ಆರತಿ | ಧೂಪ | ಗುಂಡಿಗೆ | ಹೊಳವಳಿಗೆ | ನಕ್ಷತ್ರಮಾಲೆ ಧಂದೋಹಂ ಮೊದಲಾದ ಉಪಕರಣಂಗಳಂ ಕೊಡುಉದು | ಕಥೆಯಂ ಪೇಳ್ದರ್ಗ್ಗೊಂದು ಬಾಯಿನಮಂ ದಕ್ಷಿಣ ಸಹಿತಂ ಕೊಡುಉದು | ಬಳಿಕ ಕಡೆಯೊಳು ಉಡ ಕೊಡುಉದು | ಚಾತುರ್ವ್ವರ್ಣ್ನಕ್ಕೆ ಚತುರ್ವ್ವಿಧ ದಾನಮಂ ಮಾಳ್ಪುದು | ಯೀ ಕ್ರಮದಿಂ ಪೇಳೆ ಕೇಳ್ದು | ರೂಪವತಿ ನೋಂಪಿಯಂ ಕೈಕೊಂಡು ತಂನ ಗಗನವಲ್ಲಭ ಪುರಕೆ ಪೋಗಿ ನೋಂಪಿಯಂ ಯಥಾ ಕ್ರಮದಿಂ ನೋಂತು ಉದ್ಯಾಪನೆಯಂ ಮಾಡಿ | ಫಲಕಾಲಂ ರಾಜ್ಯಂಗೆಯ್ಯುತ್ತಮಿರ್ದ್ದೊಂದು ದಿವಸಂ ಸಹಸ್ರಕೂಟ ಚೈತ್ಯಾಲಯಕ್ಕೆ ಪೋಗಿ ದೇವರಷ್ಟ ವಿಧಾನರ್ಚ್ಛನೆಯಿಂದರ್ಚ್ಚಿಸಿ ಪೊಡೆವಟ್ಟಲ್ಲಿರ್ದ್ದ ದಿವ್ಯಜ್ಞಾನಿಗಳಪ್ಪ ಚಾರಣ ರುಷಿಯರಂ ಬಂದಿಸಿ ನಿರ್ಮ್ಮಳ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ವೈರಾಗ್ಯ ಪಾರಾಯಣರಾಗಿ ತಂಮ ಪಿರಿಯ ಮಗಂಗೆ ಸಮಾಧಿ ರಾಜ್ಯಪಟ್ಟಮಂಕಟ್ಟಿ ಜಿನ ದೀಕ್ಷೆಯಂ ಕೈಕೊಂಡು ಉಗ್ರೋಗ್ರ ತಪಶ್ಚರಣಮಂ ಮಾಡಿ ಸಮಾಧಿ ವಿಧಿಯಂ ಮುಡಿಪಿ ಸ್ವರ್ಗ್ಗ ಮೋಕ್ಷಂಗಳಂ ಪಡೆದರಿಂತೀ ಬುಧಾಷ್ಟಮಿಯ ನೋಂಪಿಯಂ ನೋಂತವರ್ಗ್ಗ ನೋನಿಸಿದವರ್ಗ್ಗಂಕ್ರಮದಿಂದೊಡಂಬಟ್ಟ ವರ್ಗ್ಗಂ ಸ್ವರ್ಗ್ಗ ಮೋಕ್ಷಂಗಳು ಪಡೆವರು | ಮಂಗಳ ಮಹಾಶ್ರೀ || ಶುಭಮಸ್ತು || ನಿರ್ವಿಘ್ನ ಮಸ್ತು || ಶ್ರೀ ವೀರ ಜಿನಾಯ ನಮಃ || ಲಲಿತ ಕೀರ್ತ್ತಿ ಮುನಯೇ ನಮಃ ||