ಶ್ರೀವರ್ಧಮಾನ ಜಿನಪಂ
ಗಾನತನಾಗೆರಗಿ ಭಕ್ತಿಯಿಂ ವಿರಚಿಸುವೆಂ
ಭುವನದಿ ನೋಂಪಿವಿಧಾನಂ
ಪಾವನ ಅಹಿಗಹಿಲನೋಂಪಿಯೆಂಬೀ ಕಥೆಯಂ ||

|| ವ || ಅದೆಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದೋಳ್ | ಮಗಧೆಯೆಂಬುದು ನಾಡು | ಐರಾವತಿಯೆಂಬುದು ಪೊಳಲು | ಅದನಾಳ್ವಂ ನಾರಾಯಣನೆಂಬ ಚಕ್ರವರ್ತ್ತಿಗಂ | ಆತನರಸಿ ರುಕ್ಮಿಣಿಮಹಾದೇವಿಗಂ | ಅಧಿಕ ಸಮ್ಯಗ್ದೃಷ್ಟಿ | ಆಕೆಗೆ ಪುಟ್ಟಿದ ಮಗಂ | ಕಾಮದೇವನೆಂಬಂ ಬಾಲತೆಯಂ ಪತ್ತುವಿಟ್ಟು | ಯುವರಾಜಪದವಿಯೊಳು ಸುಖವಿರ್ಪ್ಪುದುಂ | ನವಯವ್ವನನಾದ ಮಗನಂ | ನಾರಾಯಣಂ ನೋಡಿ | ರುಗುಮಣನ ಮಗಳು ರತಿದೇವಿ | ನವಯವ್ವನ ಪ್ರಾಪ್ತೆಯಾದಾಕೆಯಂ ಬೇಡಲು | ರುಗುವಿಣ ನಲ್ಲಿಗೆ ಮನುಷ್ಯರನಟ್ಟಿ ಬೇಡಿದರೆ | ರುಗುಮಣಂ ನಿಮಗೆ ಕುಡುವುದರಿಂದ ಮಾದಿಗರಿಗೆ ಕೂಡುವುದು ಲೇಸೆಂದೊಡಾಮಾತನವರಿಂ | ಕಾಮದೇವನುಂ ಕೇಳ್ದು ಮಾದಿಗ ವೇಷಮಂ ಕೈಕೊಂಡು | ಕಟಕ ಕಟಿಸೂತ್ರ ಕುಂಡಲ ಕೇಯೂರಹಾರಂ | ರತ್ನಮಯಪ್ಪ | ರತ್ನಮಕುಟಮಂ ಕಟ್ಟಿಕೊಂಡು ಕಾಮದೇವನೆಂಬ ಪೆಸರುಂ ಪ್ರತ್ಯಕ್ಷಮಾಗಿ ಮಾಡಿ | ಪೊನ್ನಮಿಳಿಯಂ ಪೊತ್ತುಕೊಂಡು | ರುಗುಮಣನ ಪಟ್ಟಣಮಂ ಪೊಕ್ಕು ತೊಳಲುತ್ತಂ ಬರ್ಪಾಗಳು | ಪುರನಂಗಳೆಲ್ಲಂ ಚೋದ್ಯಂಬಟ್ಟು ನೋಡುತ್ತಿರೆ | ಅರಮನೆಯ ಮುಂದಣ್ಗೆ ಬಪ್ಪಾಗಳು | ರತಿದೇವಿ ಕಂಡಾಸಕ್ತ ಚಿತ್ತೆಯಾಗೆ | ಮನಂಗೊಂಡಾಂ | ನಿಂನೊಡನೆ ಬರ್ಪ್ಪೆನೆಂಬುದು | ಮಾಯಾವಿದ್ಯೆಯಿಂ ಕೊಂಡುಪೋಗೆ | ದ್ವಾರಾವತಿಯ ಪಟ್ಟಣಮನೆಯ್ದಿ ಸರ್ವಾಭರಣ ಭೂಷಿತೆಯಾಗಿ | ಮಾದಿಗ ವೇಷಮಂ ಕೈಕೊಂಡು | ಪೊಂನ ಮೊರನುಂ ಪೊಂನ ನಾರುಂಬೆರಸಿ | ನಾರಕೊಳ್ಳಿಯೆನುತ್ತ | ಆರಮನೆಯ ಮುಂದೆ ಬಪ್ಪಾಗಳು | ಯಿದೇನು ಚೋದ್ಯವೆಂದು | ಪುರಸ್ತ್ರೀಯರೆಲ್ಲಂ ನೋಡುತ್ತಿರೆ | ರುಗುಮಿಣಿ ಮಹಾದೇವಿ ಪರಿಚಾರಕಿಯರನಟ್ಟಿದರೆ | ಅವರು ಪೊರಗೆ ಬೆಡದೊಡಗೊಂಡು ಬಂದು | ಅರಮನೆಯ ದಾರವಟ್ಟಮಂ ಪೊಗುವಾಗಳಾಕೆಯ ರೂಪಂ ಕಂಡು ತಂನ ಸೊಸೆಯೆಂದರಿದು | ಕಾಮದೇವನ ಗೂಡ್ಡ ಮೆಂದು ಸಂತೋಷಂಬಟ್ಟು | ಮಹಾವಿಭೂತಿಯಿಂದಿದಿರ್ಗ್ಗೊಂಡು | ಪಟ್ಟಣದೊಳಗಷ್ಟ ಶೋಭೆಗೆಯ್ಸಿ ಮದುವೆಯಂ ಮಾಡಿ | ಸುಖದಿಂದ ರಾಜ್ಯಂ ಗೆಯ್ಯುತ್ತಮಿರೆ | ಅದರಿಂ ಬಳಿಕ್ಕ ಆಕೆಯನೊಲ್ಲದಿರೆ | ರುಗುಮಿಣಿ | ಮಹಾದೇವಿಯುಂಮಳಿಸುತ್ತಂ | ತಂನ ಸೊಸೆಯ ಶೃಂಗಾರಮಂ ಮಾಡ್ಸಿ | ಮಂಚದಮೇಲೆ ಕುಳ್ಳಿರಿಸಿ | ಕಾಮದೇವಂ ತಾಯಲ್ಲಿಗೆ ಬಂದು ಬಿಲ್ಲು ಅಂ ಬುಮಂಬೇಡಿದೊಡೆ | ಸೊಸೆಯ ಸೆಜ್ಜೆಯಮನೆಯಲ್ಲಿರ್ದ್ದಪುವೆನೆ | ತಾನುಮಲ್ಲಿಗೆ ಹೋಗೆ | ರತಿದೇವಿಯಂಕಂಡು | ಅಬ್ಬೆಯ ಸೊಸೆಯಂ ನಿಂಬಾಣವಣ್ಣನು ಪೊಲ್ತಳೆನೆ | ತಾನುಂ ತಂನ ಮೇಳದಾಕೆಗಳು ಬೆರಸಿ | ನಿಂಬಾಣದ ಬನದಲ್ಲಿಗೆ ಪೋಗೆ | ಸರೋವರಮಂ ಕಂಡು | ಅದರ ರತ್ನ ಮಯಪ್ಪ ವಿಸ್ತಾರಮಂ ನೋಡಿ | ಸಂತೋಷಂಬಟ್ಟು ವೊಳಗಂ ಪೊಕ್ಕು | ಕಾಲು ಮುಖಮಂ ತೊಳೆದು ಮುಕ್ಕುಳಿಸಿ ನೋರ್ಪ್ಪಾಗಳು | ಅಲ್ಲಿ ವಿಷದ ಸಮಾನಮಾಗೆ | ನಾನುಂ | ಅತನ ಮನಕ್ಕೆ ಅಂತೆಯಕ್ಕುಮೆಂದು | ಖೇದಂಬಟ್ಟು ನಿರ್ವ್ವೇಗ ಪರಾಯಣೆಯಾಗೆ | ದೀಕ್ಷೆಯಂ ಕೈಕೊಳ್ವೆನೆಂದು ನೆನೆಯುತ್ತಿರ್ಪ್ಪಿನಮಾ ಸಮಯಕ್ಕೊರ್ವ ವಿಮಳ ಕೀರ್ತ್ತಾಚಾರ್ಯ್ಯರ್ಬ್ಬಿಜಯಂಗೆಯ್ಯಲೊಡಂ ಬೇಗದಿಂದಷ್ಟವಿಧಾರ್ಚ್ಚನೆಯಂ ಕೊಂಡು | ಪರಿವಾರ ಸ್ತ್ರೀಯರ್ವ್ವೆರಸು ಋಷಿಯರಲ್ಲಿಗೆ ಬಂದು | ತ್ರಿಪ್ರದಕ್ಷಿಣಂಗೆಯ್ದು ಪಂಚಮುಷ್ಟಿಯಿಂ ವಂದಿಸಿ | ಧರ್ಮ್ಮಶ್ರವಣಮಂ ಕೇಳ್ದು ತಂನ ಮನದ ನಿರ್ವ್ವೇಗಮಂ ಪ್ರಕಟ ಮಾಡಿ | ದೀಕ್ಷಾಪ್ರಸಾದಂ | ಭಟ್ಟಾರಕಾ ಬೆಸಸಿಂ ಯೆಂಬುದುಂ | ಮುನಿಪುಂಗವಂ | ಆಕೆಯ ನಿರ್ವ್ವೇಗ ವೃತ್ತಾಂತಮನರಿದು | ಯಿತೆಂದು ಬೆಸಸಿದರು | ಕೇಳುಮಗಳೆ ನೀಂ ಮುಂನಿನ ಭವದೊಳು | ನಿಂನ ಸವತಿಯ ಮನೆಯ ದೇವರುಂ ತಂದು | ತಿಪ್ಪೆಯ ಮೇಲೆ ಘಳಿಗೆವರಿಗೆ ಯಿರಿಸಿದೆ | ಆ ಪಾಪದ ಫಲಂ ದುಃಖಮಾಯ್ತು | ನಿಂನ ಗಂಡಂ ನಿಂನ ಸೆರೆಯಿಟ್ಟನೆಂದು | ಪೇಳಲೊಡಮದಕ್ಕೆ | ಪರಿಹಾರರ್ತ್ಥಮಾಗೆ ಯೆನಗೆ | ಆವುದಾನೊಂದು ನೋಂಪಿಯಯಂ ಬೆಸಸಿಯೆಂಬುದುಂ | ಭಟ್ಟಾರಕರಿಂತೆಂದು ಬೆಸಸಿದರು | ಅದಕ್ಕೆ ಅಹಿಗಹಿಲ ನೋಂಪಿಯಂ ಕೈಕೊಳ್ಳಿಮನೆ | ಮಹಾಪ್ರಸಾದಮೆಂದು | ಆ ನೋಂಪಿಯ ಕ್ರಮಮಂ ಬೆಸಸಿಮೆನ್ಲಾಚಾರ್ಯ್ಯರಿಂತೆಂದು ಪೇಳ್ದರು | ನಂದೀಶ್ವರದ ಯೆಂಟು ದಿನದೊಳಗಾನುಮೊಂದು ದಿನದೊಳು | ನೋಂಪಿಯಂ ಕೈಕೊಂಡು ನೋಂಪುದು | ಅದಕ್ಕೆ | ಹಾಗಲ ಹಡಲ ಬೇವು ದರಿಸಿ | ಮಿಡುಣೆಯೆಂಬಿವೆಲ್ಲಮಂ ವ್ರತದಿಂದೊಲ್ಲದಿರ್ದ್ದು | ನಾಲ್ಕು ತಿಂಗಳ ನಂತರ ವುದ್ಯಾಪನೆಯಂ ಮಾಳ್ಪುದು | ಯೆಂದು ಪೇಳೆ ಮಹಾಪ್ರಸಾದಮೆಂದು ಕೈಕೊಂಡು ಪೊಡವಡುವಾಗಳು | ಕಾಮದೇವಂ ತಂನರಸಿಯಂ ಕಾಣದೆ ಸಂಭ್ರಮದಿಂ ಬಂದು | ಸುಖಾಸನಮನೇರಿಸಿ ಕೊಂಡುಪೋಗೆ | ಅರಮನೆಯಂ ಪೊಕ್ಕು ಸುಖದಿನೊರ್ಪ್ಪುದುಂ | ರತಿದೇವ ತಂಮತ್ತೆಗೆ | ಅಹಿಗಹಿಲನೋಂಪಿಯಂ ಕೈಕೊಂಬುದಂ | ಅವರತ್ತೆ ಯಿಂತೆಂದಳಾ ನೋಂಪಿಯುದ್ಯಾಪನಾ ಕ್ರಮ ಯೇನೆಂಬುದುಂ ಯಿತೆಂದು ಪೇಳ್ದಳು | ನಂದೀಶ್ವರದೆಂಟು ದಿನದೊಳಗಾವುದಾನೊಂದು ದಿನದೊಳು ನೋಂಪಿಯಂ ಕೈಯ್ಕೊಂಡು | ಹಾಗಲ ಹಡಲ ಬೇವು ದರಿಸಿ ಮಿಡುಣೆ ಯೆಂಬಿವಂ | ವ್ರತವಿಶೇಷದಿಂ ತೊರೆವುದೆಂದು ಪೇಳೆ ನಾಂ ಕೈಕೊಂಡೆನಿಂತು | ನಾಲ್ಕು ತಿಂಗಳಿಂ ಮೇಲೆ ವುದ್ಯಾಪನೆಯಂ ಮಾಳ್ಪುದದರ ಕ್ರಮಮೆಂತೆಂದೊಡೆ | ಅರಿಸಿನ ಜೀರಿಗೆ ತ್ರಿಫಲೆ ತ್ರಿಕಟುಕ | ಯೇಲಕ್ಕಿ ತಿಬುಜಾಯಿಫಲ ಕುಂಕುಮ ಕರ್ಪ್ಪೂರಾದಿಯಾಗೆ | ಚಣಕ ಆಢಕ್ತಿ ಮಾಷ ಮುದ್ಗ ಗೋದೂಮ ತಿಲ ಶಾಲಿ ಪ್ರಭೃತಿ | ಆಢಕಿ | ಪ್ರಸ್ಥಪ್ರಮಾಣವನ್ಯ ಧಾನ್ಯದಿಂ ನಾನಾರತ್ನದಿಂ ಕೊಳನಂ ಕಟ್ಟಿಸಿ | ಆ ಕೊಳನ ನಡುವೆ | ಅಯ್ದು ಬಟ್ಟಲೊಳುಪ್ಪುಮಂ ತುಂಬಿ | ಅಯ್ದು ಕಲಶ | ಅಯ್ದು ಮೊರ ಅಯಿದು ಹಡಲಿಗೆ | ಯಿಂತಿವರೊಳುಬಿಲಿಬಾಯಿನಂಗಳಂ | ಪಂಚಭಕ್ಷಗಳಿಂ ಮೇಣ್‌ ತುಂಬಿ ಕೊಳನ ಸುತ್ತಲುಂ | ಯಿಳಿಪಿ | ಕೊಳನ ನಡುವೆ ಹದಿನೆಂಟು ಮೊಳದ ಹೊಸಸೀರೆಯಂ ಹಸೆಯ ಹಾಸಿ | ಪಂಚಪರಮೇಷ್ಠಿ ದೇವರಿಗೆ ಪಂಚಾಮೃತದಿಂ ಮಹಾಭೀಷೇಕ ಪೂಜೆಯಂ ಮಾಡಿ | ಕೊಳನ ನಡುವಣ ಹಸೆಯ ಮೇಲೆ ಸ್ಥಾಪ್ಯಂಮಾಡಿ | ಅಷ್ಟವಿಧಾರ್ಚ್ಚನೆಯಿಂದರ್ಚ್ಚಿಸಿ | ಅಯಿದು ಬೆಲ್ಲ ದಚ್ಚು | ಆಯ್ದು ಕಬ್ಬಿನ ಕೋಲು | ಅಯ್ದು ಪೋಂನ ಹೂವು | ಅಯಿದು ಬೆಳ್ಳಿಯಹೂವು | ಇವಂ ದೇವರ ಶ್ರೀಪಾದದಲ್ಲಿ ಅರ್ಚ್ಚಿಸಿ | ಅಯಿವರಾಚಾರ್ಯರ್ರ್ಗಂ | ಶ್ರುತಪೂಜೆಯ ಮಾಡಿ | ಆಯಿವರಜ್ಜಿಯರ್ಗ್ಗೆ ವುಡಕೊಡುವುದು | ಆಹಾರದ ದಾನಮಂ ಮಾಳ್ಪುದು | ಅನಾಥ ಜನಂಗಳ್ಗೆ | ಅಂನದಾನ ಸುವರ್ನ್ನದಾನಮಂ ಮಾಡಿ | ಯಥಾಕ್ರಮದಿಂ ನೋಂತುದ್ಯಾಪನೆಯಂ ಮಾಳ್ಪುದೆಂದು | ತಂಮತ್ತೆಗೆ ಪೇಳೆ ಕೇಳ್ದು | ಯಥಾಕ್ರಮದಿಂ ನೋಂತುದ್ಯಾಪನೆಯಂ ಮಾಡಿ | ಸುಖದಿಂ ತಾನುಂ ತನ್ನಪುರುಷನುಂ | ರಾಜ್ಯಂಗೆಯುತ್ತಮಿರಲು | ಪಲಂಬರಸು ಮಕ್ಕಳು ಪಡೆದು ನಿಶ್ಚಿಂತಮಿರಲೊಂದು ದಿವಸಂ | ಕಾಮದೇವಂ ಕಂನಡಿಯಂ ನೋಡಿ ತಂನ ಕೆಂನೆಯ ನರೆಯಂ ಕಂಡು | ಸಂಸಾರ ದುಃಖ ವಿಮುಖನಾಗಿ ತಂನ ಪಿರಿಯ ಮಗಂಗೆ ರಾಜ್ಯಮಂ ಕೊಟ್ಟು | ಜಿನದೀಕ್ಷೆಯಂ ಕೈಕೊಂಡು | ಉಗ್ರೋಗ್ರ ತಪಮಂ ಮಾಡಿ ಸಮಾಧಿವಿಧಿಯಿಂ ಮುಡುಪಿ | ಸರ್ವ್ವತೋಭದ್ರಮೆಂಬ ಕಲ್ಪದೊಳೆ ಪುಟ್ಟಿ | ಅಲ್ಲಿಯ ಸುಖಮಂ ತಣಿಯಲುಂಡು | ಅಲ್ಲಿಂ ಬಳಿಕ ಬಂದು ಮನುಷ್ಯಲೋಕದೊಳು ಪುಟ್ಟಿ | ಅಲ್ಲಿಯ ಸುಖಮಂ ತಣಿಯಲುಂಡು | ಅಲ್ಲಿಂ ಬಳಿಕಂ ಬಂದು ಮನುಷ್ಯಲೋಕದೊಳು ಉತ್ತಮ ಕ್ಷತ್ರಿಯ ಕುಲದೊಳ್ಪುಟ್ಟಿ | ಪಲಂರ್ಮ್ಮರ್ಕ್ಕಳಂ | ಪಡೆದು ಸಂಸಾರಸುಖಮಂ | ಫಲ ಕಾಲಮನನುಭವಿಸಿ | ಪರಮವೈರಾಗ್ಯದಿಂ ಜಿನದೀಕ್ಷೆಯಂ ಕೈಯ್ಕೊಂಡು ವುಗ್ರ ತಪಶ್ಚರಣಮಂ ಮಾಡಿ | ಸಮಾಧಿಮರಣದಿಂ ಮುಡುಪಿ ಮೋಕ್ಷಕ್ಕೆ ಪೋದಂರಿಂತೀ | ಅಹಿಗಹಿಲ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಬರೆದವರ್ಗ್ಗಂ | ಹೇಳಿದವರ್ಗ್ಗಂ | ಕೇಳಿದವರ್ಗ್ಗಂ ಜಯಮಂಗಳಂ ಮಹಾ || ಶ್ರೀ ಶ್ರೀ ಶ್ರೀ.