ವರವೀತಶೋಕೆಯೆಂಬುದು
ಪುರಮದಱೊಳ್ ಕೀರ್ತವಡೆದ ಪರದಂ ತ್ರಿಜಗ
ದ್ಗುರುಪದಯುಗ ಚಿತ್ತಂ ಭಾ
ಸುರವಿತ್ತಂ ಪೆಸರೊಳೊಪ್ಪೆ ತಾಂ ಧನದತ್ತಂ ||

ಆತನ ಸೆಟ್ಟಿತಿ ಪ್ರಭಾವತಿಯೆಂಬೊಳ್ ಪೆಂಡಿತ ಧನ ಶ್ರೀಯೆಂಬಳ್ ಆ ಯಿರ್ವರ್ಗಂ ಪುಟ್ಟಿದ ಪುಗಂ ನಾಗದತ್ತನೆಂಬಂ ಆತನ ಪೆಂಡಿತಿ ನಾಗವಸುಯೆಂಬಳ್ ಆಯಿರ್ವರುಮನ್ಯೋಸಕ್ತ ಚಿತ್ತರಾಗಿ ಸುಖಂ ಬಾಱುತ್ತುಮಿರೆ –

ಧನಮಿನಿತುಂಟವುಂ ತವುಗುಮೆಂಬಭಿಶಂಕೆಯ ಚಿಂತೆ ಚಿತ್ತದ
ತ್ತಿನಿಸುಮದೆಯ್ದ ದಪ್ರತಿಮ ಚಾಗದ ಭೋಗದಳುರ್ಕೆ ಪೆಂಪುವೆ
ತ್ತನವರತಂ ಪ್ರಭಾವಿಸುತುಮಿರ್ದನವದ್ಯ ಮಹೋದ್ಯನೆಂಬುದೊಂ
ದನಿತು ಪೊಗಱ್ತೆ ತನ್ನೊಳೊಡಗೂಡಿರೆ ವೈಶ್ಯಕುಮಾರನೊಪ್ಪಿದಂ ||

ಅಂತು ನಾಗದತ್ತನುದಾತ್ತಗುಣ ಸಂಪನ್ನನಾಗಿರ್ಪಿನಮಾ ಪೊಱಲ್ಗೆ ಮುನಿಗುಪ್ತಾ ಚಾರ್ಯರ್ ಬಂದಿರ್ದೊಡೆ ವಂದನಾಭಶಕ್ತಿಗರಸನುಂ ಪುರಜನಮುಂ ಪೋಗೆ ನಾಗದತ್ತನುಮೊಡನೆ ಪೋಗಿ ಬಂದಿಸಿ ಮುಂದೆ ಕುಳ್ಳಿರ್ದು ಧರ್ಮಶ್ರವಣಮಂ ಕೇಳ್ದೆಲ್ಲರುಂ ಶ್ರೀಪಂಚಮಿಯ ನೋಂಪಿಯಂ ಕೆಯ್ಕೊಳ್ವಾಗಳ್ ತಾನುಮೊಡನೆ ಕೆಯ್ಕೊಂಡೆನೆಂದು ಭಟ್ಟಾರರಂ ಬಂದಿಸಿ ಮನೆಗೆ ಬಂದಿರ್ದು ಫಾಲ್ಗುಣ ಮಾಸದ ಶುಕ್ಲಪಕ್ಷದ ಪಂಚಮಿಯಂದುಪವಾಸಂಗೆಯ್ದು ಮುನ್ನೆಂದು ಪಸಿದೊಂದುಗಱೆಗೆಯುಮಿರ್ದಱೆಯದಾ ಗರ್ಭಸುಖಿ ಪಗಲೆಲ್ಲಂ ದೇವತಾರ್ಚನಾ ಸ್ತವನ ಕ್ರಿಯೆಯಿಂದೆನಸುಂ ಸೈರಿಸಿರ್ದು ನೇಸಱು ಪಟ್ಟಾಗಳ್ ಪ್ರಾಣಸಂಕಟಮಾಗೆ-

ತಂದೆವಿರುಂ ತಾಯುಂ ಕರ
ಮೊಂದಿದ ಬಂಧುಗಳುಮಿಷ್ಟವನಿತೆಯುಮೋವೋ
ಎಂದು ಪರಿತಂದು ಕೆಲದೊಳ್
ನಿಂದು ಕರಂ ನೊಂದು ಬೆಂದು ಮಱುಗುತ್ತಿರ್ದರ್ ||

ಇರ್ದಿದರ್ಕೇ ಗೆಯ್ವಮಾವುದುಪಾಯಂ ಪೇಱಿಮೆನುತಿರೆ ತಂದೆ ಸಾರೆವಂದಿಂತೆಂದಂ

ಎನಿತಾನು ಕೋಟಯುಂ ಮನೆದೀವಿ ಧನಮಿರ್ದು
ದನಿತುಮಂ ದಾನಂಗುಡು ನೋಂಪಿಯೊಂದಱೊ
ಳೆನಿತಕ್ಕುಂ ಮಗನೆ ಬಿಸುಡಿದಂ ||

          ಧರೆಗೆಲ್ಲಂ ಚೋದ್ಯಮಾಗಿರೆ ಜಿನಮಹಿಮೆಯಂ
ಪಿರಿದನಾಂ ಮಾಡಿ ನಿನಗೀವೆನಿದೇ
ವಿರಿದುಪವಾಸ ಬಿಸುಡಿದಂ ||

          ಕನಕದಿಂ ರತ್ನದಿಂ ಜಿನಭವನಂಗಳಂ
ನಿನಗೆ ಮಾಡಿಸುವೆನುಪವಾಸಮೊಂದಱೊ
ಳಿನಿತನೇಕಱಿವೆ ಬಿಸುಡಿದಂ ||

ಎನೆ ನಾಗದತ್ತನಿಂತೆಂದಂ-

ಅತಿಶಯ ದಾನಮುಂ ಮೇಣ್ ನುತಪೂಜೆಯುಂ
ಪ್ರತಿಯಿಲ್ಲ ದರ್ಹದ್ಫವನಮುಮೇವುದೋ

          ವ್ರತಭಂಗಂಗೆಯ್ದ ಮನುಜಂಗೆ ||

ಎಂದೊಡಾ ಮಾತಿಂಗೆ ತಂದೆ ಮಾಣ್ದುಸುರದಿರೆ ತಾಯ್ ಮಱುಗಿ ಬಂದಿಂತೆಂದಳ್

ಪಲವಪ್ಪ ನೋಂಪಿಯಂ ಸಲೆ ಮಹಾತಿಥಿಗಳಂ
ಪಲಕಾಲ ನೋಂತು ನಿನಗೀವೆನೊಂದಱ
ಫಲಮೆನಿಸುಂಟು ಬಿಸುಡಿದಂ ||

          ಅಷ್ಟೋಪವಾಸಮರ್ಧಾಷ್ಟಮಾ ಯೆಂಬಿವ
ನಷ್ಟಮಿ ಬಾವು ದಿವಸಮಂ ನೋಂತೀವೆ
ಜ್ಯೇಷ್ಠಪುತ್ರಕನೆ ಬಿಸುಡಿದಂ ||

          ಸರ್ವಾನುಕೂಲಮಂ ಸರ್ವತೋಭದ್ರಮ
ನೊರ್ವಳೆ ನೋಂತು ನಿನಗೀವೆನಿದುವೇನ
ಪೂರ್ವಮೇ ಮಗನೆ ಬಿಸುಡಿದಂ ||

          ಪರಮ ಚಾಂದ್ರಾಯಣ ಮುರಜ ಮಧ್ಯಾದಿ ಮಂ
ದರ ಪಂಙ್ತೆಯೆಂದು ನೆಗಮ್ದಿವಂ ನೋಂತೀವೆ
ನಿರವೇಡ ಮಗನೆ ಬಿಸುಡಿದಂ ||

ಎಂದೊಡಬ್ಬಾ ಕೇಳಿಮೆಂದು ನಾಗದತ್ತನಿಂತೆಂದಂ-

ಎನಿತಾನುಂ ನೋಂಪಿಯಂ ನಿನಗೀವೆನೆಂದೊಡೀ
ಮುನಿಯಿತ್ತ ವ್ರತಮನಱಿದೊಡೆ ನೀಮಿತ್ತು
ದೆನಗೇಕೆ ಮತ್ತೆ ಫಲಮಕ್ಕುಂ ||

ಎಂದೊಡಬ್ಬೆಯುಂ ಪೋಗೆ ಬಱೆಕ್ಕೆ ನಾಗವಸು ಬಂದಿಂತೆಂದಳ್

ಏಂ ಪೇಱೆಮಱಿಯಿರೇ ನೋಂಪುದು ಋಷಿಯರ
ನಾಂಪುದುಮೆನಗೆ ಬೆಸನೆಂದುಮದಱಿನೀ
ನೋಂಪಿಯಂ ನಾನೆ ಸಲಿಸುವೆಂ ||

          ಊನಮಿಲ್ಲದ ನಿಮ್ಮ ದಾನಕ್ಕೆ ಧರ್ಮಕ್ಕೆ
ಯಾನಱ್ತಿವಟ್ಟು ಬೆಸಕೆಯ್ವೆನೆನ್ನನಿ
ನ್ನೀ ನೋಂಪಿವಿಡಿದು ಕೆಡಿಪಿರೇ ||

          ಒಂದುಮಂ ಕಡೆಗಣಿಯಿಸದೊಂದು ಚಿತ್ತದೊ
ಳೊಂದಿದಂತಱಿದು ಬೆಸಕೆಯ್ವೆನೀ ನೋಂಪಿ
ಯೊಂದಱಿಂ ದೆನ್ನನಱಿವಿ ರೇ ||

          ಇನ್ನೆಗಂ ಕೂರ್ಮೆಯಿಂ ನಿನ್ನ ಮೆಚ್ಚನೆ ಮಚ್ಚಿ
ದೆನ್ನನಿಂತೞ್ತಿಯೆ ಬಿಸುಟೊಂದು ಪಾಪಮಂ
ನೀನ್ನೋಂತ ನೋಂಪಿ ಕಿಡಿಕುಮೇ ||

ಎನೆ ನಾಗದತ್ತನಾ ಮಾತಂ ಕೇಳ್ದಿಂತೆಂದಂ

          ನಿನ್ನ ಕೇಡಿಂಗೞಲ್ದೆನ್ನನಿಂತೆಂದಪೆ
ಸನ್ನುತ ವ್ರತಮನೞಿದೊಡೆ ಕಿಡುವೆನಿಂ
ತೆನ್ನ ಕೇಡಿಂಗೆ ಬಯಸುವೋ ||

ಎಂಬುದಂ ಕೇಳ್ದು ಮಱುಮಾತಿಂಗಾಸೆಗಾಣದೆ ಮುಚ್ಚೆವೋಗಿ ಬಿೞ್ದಾಗಳಾಕೆಯಂ ಪಿಡಿದೊಂದುದೆಸೆಗೆಗುಯ್ದು ತಣ್ಪುಗೆಯ್ಯುತ್ತಿರೆ ಬಂಧುಗಳಪ್ಪವರೊಲಗೊರ್ವಂ ಕುಶಲ ನಪ್ಪಾತನಾ ಮನೆಯ ಮೇಗಂ ಚಿದ್ರಂ ಮಾಡಿ ಕನ್ನಡಿಯನಮರ್ಚಿ ಬೆಳಗುವ ಮಾಣಿಕಂಗಳಂ ಬಳಸಿಯಂ ಪತ್ತಿಸಿಟ್ಟು ನೇಸರ್ಮೂಡಿತಿನ್ನೇಕಿರ್ಪಿರ್ ಪಾಲ್ಗಂಜಿಯಂ ಕುಡಿವಿರೇೞಿಮೆನೆ ಪೊೞ್ತಿನಳವಿಯನಱಿದು ಕೃತಕಮಿದುಮಿಗಳೆನ್ನ ಪ್ರಾಣಂ ಪೋದೊಡಂ ಪೋಕೆ ಆನಳಿಪುವೆನಲ್ಲೆಂ ನೀಮೆಲ್ಲಂ ಮಗುೞ್ದುಸರದಿರಿಂ ಆರಾನುಂ ಸೈರಣೆಯುಳ್ಳವರ್ ವಂದೆನ್ನ ಕೆಲದೊಳಿರ್ದು ಅವಸ್ಥಾಂತರಮನಱಿದು ಪಂಚನಮಸ್ಕಾರಮನೋದುತ್ತುಮಿರಿಂ ಎಂದು ಪೇೞ್ದು ತಾನುಂ ಪರಮಾತ್ಮ ಧ್ಯಾನದೊಳ್ ಮುಡಿಪಿ ಸೌಧರ್ಮ ಕಲ್ಪದೊಳ್ ರತ್ನಮಯಮಪ್ಪ ವಿಮಾನದೊಳಗೆ ಪಾಸಿನ ಪೊರೆಯೊಳ್ ಪುಟ್ಟಿದೆರಡು ಘಳಿಗೆಯೊಳ್ ನವಯೌವನನುಂ ಷೋಡಶಾಭರಣ ಭೂಷಿತನುಮಾಗಿ ದಿವ್ಯ ವಿಳಾಸದಿನಿರ್ದನಲ್ಲಿ –

ಎತ್ತಲುಂ ಜಯಜಯ ನಿನಾದಮೆ ಎತ್ತಲುಂ ಚಿತ್ತಕ್ಕೆ ಸಂಹ್ಲಾದಮೆ
ಎತ್ತ ನೋಡುವೊಡಮೊಸೆದಾಟಮೆ ಎತ್ತ ಕೇಳ್ವಡಮೆಸೆವ ಪಾಟಮೆ
ಎತ್ತಲುಂ ತೀಡುವೊಡಮೊಳ್ಗಂದಮೆ ಎತ್ತಲುಂ ಮಣಿಮಯ ಸುಬಂಧಮೆ
ಎಲ್ಲ ದೆಸೆಯುಂ ಕರಮೆ ರಮ್ಯಮೆ ಎಲ್ಲ ನೆಲನುಂ ಮನಕ್ಕೆ ರಮ್ಯಮೆ
ಎಲ್ಲ ಕಾಲಮುಮವರ್ಗೆ ಭೋಗಮೆ ಎಲ್ಲ ಮಾೞ್ಕೆಯೊಳಮನುರಾಗಮೆ
ಎಲ್ಲರೋಡೊರ್ವರೊಳ್ ಕೂರ್ಪರೇ ಎಲ್ಲರುಂ ಸುಖದಿಂದಮಿರ್ಪರೇ
ಆಗಳುಂ ವಿಪುಳ ಸಂಪ್ರೀತಿಯೆ ಆಗಳುಂ ಬಹು ವಿಧದ ಭೂತಿಯೆ
ಆಗಳುಂ ಚಿತ್ತ ಸಂತೋಷಮೇ ಆಗಳುಂ ಶೋಭನ ವಿಶೇಷಮೇ
ಆಗಳುಂ ಮಣಿಮಯ ವಿಳಾಸಮೆ ( ಆಗಳು ಮನಕ್ಕೆ ವಿನೋದಮೆ )
ಆಗಳುಮ್ ಮಿತ್ರ ಸಂಯೋಗಮೇ ಆಗಳುಂ ಕ್ರೀಡನೋದ್ಯೋಗಮೇ
ಆಯುಮಿಕ್ಕಿರ್ದ ಕಲ್ಪಾಯುವೆ ಶ್ರೀಯಾಯುಮುಳ್ಳಿನಂ ಸ್ಥಾಯುವೆ ||

          ಅನವರತ ಭೋಗದಿಂದಂ
ತನುಪಮಮಾರ್ಗಿದ ಸಗ್ಗದೊಳ್ ಸುಖಮಂ ತಾ
ನನುಭವಿಸಿ ಬಂದು ಬೞಿಯಿಂ
ಮನುಷ್ಯ ಗತಿಯೊಳ್ ಪ್ರಸಿದ್ಧ ರಾಜಾನ್ವಯದೊಳ್ ||

ಮಗಧೆಮೆಂಬುದು ದೇಶಂ ಆ ದೇಶದೊಳಿಂದ್ರ ಪುರೋಪಮಂಬೆತ್ತು ತೊಲಗಿ ಬೆಳಗುವ ಕನಕಪುರ ವರದೊಳ್ ಮಂಡಳೀಕಶ್ರೀಯನಾಂತೆಸೆವ ಜಯಂಧರ ಮಹಾರಾಜಂಗಂ ಸುಶೀಲವತಿಯಪ್ಪ ಪೃಥ್ವೀ ಮಹಾದೇವಿಗಂ ಸುಸ್ವಪ್ನ ಪೂರ್ವಕಮಾಗಿ ಸುಲಗ್ನದೊಳ್ ಸುಲಕ್ಷಣೋಪಲಕ್ಷಿತ ಚರಮದೇಹಧಾರಿಯಾಗಿ ಪುಟ್ಟಿ ವಿಕ್ರಮಂಧರನೆಂಬ ನಾಮಂ ಬೆತ್ತನಂತರದೊಳ್ ಬಾಳಕೇಳಿ ವಿಳಾಸದೊಳ್ ತಮ್ಮುಪವನ ಮಧ್ಯದೊಳಿರ್ಪಕೃತಿಮ ಚೈತ್ಯಾಲಯಕ್ಕಂಬೆಗಾಲಿಂದೆ ಬಂದು ವಜ್ರಮಯಪ್ಪಪಡಿಗಳ್ ಮುಟ್ಟಿದಂತನಿತರೊಳೆ ಜಯ ಜಯ ನಿನಾದಂಬೆರಸು ತೆಱೆಯಲ್ ಘನಾವರಣಂ ಪೋಗೆ ಬೆಳಗುವ ಭಾಸ್ಕರ ಬಿಂಬದಂತಮಿತ ಚಂದ್ರಾದಿತ್ಯ ಪ್ರಭಾನಿರಸನಂಗೆಯ್ವ ಪಾದ ನಖ ವಿರಾಜಮಾನಮಂ ನಿತ್ಯನಿರುಪಮ ನಿರಾನಂದ ನಿರ್ವಿಕಾರ ನಿರ್ಮಲಮುಮಪ್ಪ ಜೈನೇಂದ್ರ ಮೂರ್ತಿಯಂ ಕಂಡು ಶಿಸುವಿನೊಡನಿರ್ಪ ದಾದಿಯರನ್ನ ವ್ಯಾಪಾರಮಂ ಬಿಟ್ಟು ಸಾಷ್ಟಾಂಗವೆರಿಗಿರ್ಪಿನಮಿತ್ತ ತತ್ಸಮಿಪವರ್ತಿಯಾಗಿರ್ಪ ವಿಷ ಕೂಪಮಂ ಸಾರೆವಂದು ಕೂಪದೊಳ್ ನಿರೀಕ್ಷಣಂಗಯ್ಯೆ ತೋರ್ಪ ತನ್ನ ಪ್ರತಿ ಬಿಂಬಮಂ ಕಂಡೊಳಕ್ಕೆ ಬೀವ್ವಿಶಿಸುವಂ ನಾಗರಾಜಂ ಕಂಡು ಪೆಡೆಯೊಳಾಂತನಿತ್ತಲ್ ಶಿಸುವಂ ಕಾಣದ ವಾರ್ತೆಯಂ ಕೇಳ್ದು ಪೃಥ್ವೀಮತಿ ಮಹಾಕ್ಲೇಶದಿಂ ಬಂದು ಕೂಪ ನಿರೀಕ್ಷಣಂಗೆಯ್ದಲ್ಲಿ ಶಿಸುವಂ ಕಂಡು ವಾತ್ಸಲ್ಯದಿಂ ನೆಲೆಗೊದದ ವಿಷಮಯಮಪ್ಪ ಭಾವಿಯಂ ಧುಮ್ಮಿಕ್ಕೆಜಿನ ಪೂಜಾ ಧುರಂಧರೆಯಾಗಿ ಸುಶೀಲೆಯಪ್ಪುದೞಿಂ ಜಾನುದಘ್ನಮಾಗೆ

ಈ ವಾರ್ತೆಯಂ ಜಯಂಧರ ಮಹಾರಾಜಂ ಕೇಳ್ದು ಪರಿಮಿತ ಪರಿಜನಂಬೆರಸು ಬಂದು ನಾಗರಾಜನಂ ಪ್ರಾರ್ಥಿಸಿ ಶಿಸುವಂ ಕೊಂಡು ಬಂದು ಜಿನಪೂಜಾ ಮಹೋತ್ಸವಂಗೆಯ್ದು ಪುನರ್ನಮಸ್ಕಾರಂಗೆಯ್ದು ಮನೆಗೆ ಬಂದು ಕೃತಘ್ನತೆಯನುೞಿದು ಕೃತಜ್ಞತೆಯಂ ಕೆಯ್ಕೊಂಡು ನಾಗಕುಮಾರನೆಂದೆಂಭಿಧಾನಂಗೆಯ್ದು ಶಸ್ತ್ರ ಶಾಸ್ತ್ರಂಗಳೊಳ್ ಪ್ರವೀಣನಂ ಮಾಡೆಯಾ ವ್ಯಾಲಮಹಾವ್ಯಾಲ ಅಚ್ಛೇದ್ಯ ಅಭೇದ್ಯ ಕುಮಾರನುಂ ಚರಮದೇಹಿಗಳಪ್ಪರೆಂಬೀ ಸಕಲರುಂ ಬಂದು ಕೂಡೆ ದಿಗ್ವಿಜಯಂ ಗೆಯ್ದುಮೆಣ್ಫಾಸಿರ್ವರ್ ರಾಜಪುತ್ರಿಯರಂ ಮದುವೆನಿಂದು ಯೆಣ್ಪಾಸಿರ ಮುಕುಟಬದ್ಧರಂ ಬೆಸಕೆಯ್ಸವ ಮಹಾಮಂಡಳಿಕ ಪದವಿಯನಾಂತು ಸುಖಸಂಕಥಾ ವಿನೋದದಿಂ ರಾಜ್ಯಭಾರಮನಾಂತು ನಿಜರಮನೀಜನಮಹೋರನುಂ ಧಾರ್ಮಿಕ ಜನಂಗಳ್ಗೆ ಪರಮಬಾಂಧವನುಂರಿಪು ಮಹೀಪತಿ ಮಾನಗರ್ವಲತಾಲವಿತ್ರನುಂ ಮಿತ್ರಜನಸಂಘ ಸರೋರುಹಮಿತ್ರನುಂ ಜಿನೇಂದ್ರ ಪಾದಪಯೋಜ ಪ್ರಣಾಮಾವೇಕ್ಷಣ ಪವಿತ್ರೀಕೃತ ನೇತ್ರನುಂ ಜಿನಶಾಸ್ತ್ರ ಪಾರಾವಾರ ಪಾರಂಗತನುಮಪ್ಪ ನಾಗಕುಮಾರನುಂ ಮಹಾಮಂಡಳಿಕ ಶ್ರೀಯಂ ಪಲಂಕಾಲಂಬರಮನು ಭವಿಸುತ್ತಿರ್ದೊಂದು ದೆವಸಂ ನಾನಾರತ್ನ ಖಚಿತಮಪ್ಪ ರತ್ನಸಾನು ಸದೃಶಮಾಗಿ ವೊಪ್ಪುವ ನಿಜ ಪ್ರಾಸಾದೋಪರಿಮ ಪ್ರದೇಶದೊಳವ ಅಷ್ಟವಿಧಮಹಿಷೀಜನಪುರಸ್ಪರಮಾದ ಯೆಣ್ಫಾಸಿರ್ವರರಸಿಯರುಂ ಅನೇಕ ಪರಿವಾರ ಸ್ತ್ರೀಯರು ಬೆರಸು ಸಿಂಹಾಸನಾನೀನನೊಡ್ದೋಲಗಂ ಗೊಟ್ಟಿರ್ಪಿನಂ

ನೋಡಿದರೆಲ್ಲರುಂ ನಾಗೇಂದ್ರನುಂ ನರೇಂದ್ರನುಂ ಸುರೇಂದ್ರನುಂಮಿವಂಗೆ ಪಾಸಟಿಯಲ್ಲೆಂದು ಪೊಗೞೆ ಇಂತು ಮಹಾ ಮಹಿಮೆವೆತ್ತಿರ್ದೆಡೆಯೊಳ್ ದಿಶಾವಲೋಕನಂ ಗೆಯ್ಯುತ್ತಿರ್ದಾಗಳಂತರಿಕ್ಷದೊಳ್

ಮಾಡಕೂಟ ತರುಗುಲ್ಮ ಮೃಗಶುಪಕ್ಷಿಮನುಷ್ಯಾಕಾರಂಗಳಂ ಕೊಂಡು ತೋರ್ಪ ಮೇಘಾಡಂಬರಮಂ ಕಂಡು ವಿಸ್ಮಯಂ ಬಟ್ಟು ನೋಡುತ್ತಿರ್ಪನ್ನೆಗಮದೃಶ್ಯಮಾಗಿ ಪೋಗೆ ಕಂಡು ಮನದೊಳಿಂತೆಂದಂ ತನುವುಂ ಕಳತ್ರಮುಂ ಬಂಧುಜನಂಗಳುಂ ಧನಮು ವಿಭವಮುಂ ನೋಡ್ಕಲೆ ಮಂಜು ದರಿಯಮರಂ ಸುರಚಾಪಂ ನೀರಬೊಬ್ಬುಳಿಕೆ ಕಿಸು ಸಂಜೆಯ ರಂಜನೆಯಂತೆ ಕಿಡಲಿರ್ಪುದಲ್ಲದೆ ಶಾಸ್ವತಮಲ್ತೆಂದುಂ ಮತ್ತಮಧ್ರುವಾದಿ ದ್ವಾದಶಾನುಪ್ರೇಕ್ಷಾಭಾವನಂಗೆಯ್ದು ತನ್ನ ಪಿರಿಯ ಮಗನಪ್ಪ ದೇವಕುಮಾರಂಗೆ ಪಟ್ಟಮಂ ನಿರ್ಮೂಲನಂ ಗೆಯ್ಯಲೊಡನೆ ಕೇವಲ ಜ್ಞಾನೋದಯಮಾದಾಗಳನಱಿದು ಇಂದ್ರನಾಜ್ಞೆಯಿಂ ಕುಬೇರಂ ಬಂದು ಗಂಧಕುಟಿಯಂ ನಿರ್ಮಿಸಿಲಾ ಗಂಧಕುಟಿಯ ಮಧ್ಯದೊಳ್ ವಿರಾಜಿಸುತಿರ್ಪ ಸಿಂಹ ಪೀಠಸ್ಥಿತ ಕಮಲ ಕರ್ಣಿಕಾಂತರಮಂ ನಾಲ್ವೆರಲ್ ಮುಟ್ಟದೆ ಕುಳ್ಳಿರ್ದೊಪ್ಪುವ ದೇವಾದ್ಗಿದೇವನಂ ಬಂದಿಸಲೆಂದು ಚತುರ್ನಿಕಾಯಾಮರರರ್ಕಳುಂ ಮನುಷ್ಯೋತ್ತಮರುಂ ಬಂದು ಜಯಜಯ ನಿನಾದೊಡನೆ ಕೂಡಿ ಸಾಷ್ಟಾಂಗ ಪ್ರಣಾಮಂಗೆಯ್ದು ಅಷ್ಟವಿಧಾರ್ಚನೆಯಿಂದರ್ಚಿಸಿ ಪುನಃ ಪ್ರಣಾಮಂ ಮಾಡಿ ತಂತಮ್ಮ ಯಥಾ ಯೋಗ್ಯಸ್ಥಾನದೊಳವರ್ ಕುಳ್ಳಿರೆ

ದೇವಾಧೀಶಂಬಂದು ಸಾಷ್ಟಾಂಗ ಪ್ರಣಾಮದಿಂ ಪೊಡೆವಟ್ಟು ಮುಕುಳಿತ ಕರಕಮಲನಾಗಿ ಎಲೆಸ್ವಾಮಿ ಪ್ರಾಂಇಗಳ ಸಹಜ ಪರಿಣಾಮಂ ಸಾಗಾರ ಧರ್ಮಮುಮುಂ ನಿರವಿಸವೇೞ್ಕೆಂದು ಬಿನ್ನಪಂಗೆಯ್ಯೆ ಸಹಜಾರ್ದ್ರ ಹೃದಯನುಂ ನಿರ್ವ್ಯಾಜ ಪರಪುರುಷಾರ್ಥ ನಿರ್ವಾಹಕನುಂ ಉಪಮಾತೀತನುಮಪ್ಪ ಜಿನೇಂದ್ರನುಂ ಎಲೆ ಭವ್ಯವೆ ನಿನ್ನ ಪ್ರಶ್ನತ್ರಯಮ್ಗಳ್ಗೆ ಮೊದಲ್ ಪೇವ್ದಿಮನುಷ್ಯ ಪರಿಣಾಮಮೆಂತೊಂದೊಡೆ….

(ಇಲ್ಲಿಂದಮುಂದೆ ಹನ್ನೆರಡು ಪುಟಗಳಷ್ಟು ಧರ್ಮೋಪದೇಶವಿದೆ. ಅದು ತೌಲನಿಕ ಅಧ್ಯಯನಕ್ಕೊಳಪಡುವುದಿಲ್ಲವಾದ ಕಾರಣ ಇಲ್ಲಿ ಕೊಟ್ಟಿಲ್ಲ)