ಶ್ರೀಗಧಿಪವೀರಜಿನಪತಿ
ಗೋಗಡಿಸದೆ ಭಕ್ತಿಯಿಂದಮೆರಗಿ ಬಳಿಕ್ಕಂ
ತಾಗಮದೋಜೆಯೊಳೀಭವ
ರೋಗಹರಾಷ್ಟಮಿಯ ನೋಂಪಿಯಂ ವಿರಚಿಸುವೇಂ ||

          ಪೂರ್ವ್ವಾಚಾರ್ಯ್ಯಕೃತಂ ತ
ತ್ಸರ್ವ್ವಜ್ಞರ ದಿವ್ಯವಚನದಿಂ ಪುಟ್ಟಿದುದೀ
ನಿರ್ವ್ವಾಣಸುಖಪ್ರಾಪ್ತಿಯ
ನವ್ಯಗ್ರದೊಳೀವ ನೋಂಪಿಯಿದು ಕೇವಳಮೇ ||

          ಎಲ್ಲಾ ಭವರೋಗಂಗಳ
ನೆಲ್ಲಮನೀ ನೋಂಪಿಯೊಂದೆ ಗೆಲಲಪ್ಪುದರಿಂ
ಫುಲ್ಲಶರ ವಿಜಯನಿಷ್ಟದಿ
ನೆಲ್ಲರುಮರಿದಾರ್ತ್ತು ಕೂರ್ತ್ತುನೋಂಪುದು ನೊಲವಿಂ ||

ವ || ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದ ಕಾಶ್ಮೀರ ವಿಷಯದ ಕೌಶಂಬೀ ಪುರಮನಾಳ್ವ | ಕೇಶವಾಂಕನೆಂಬರಸನಾತನ ಪಟ್ಟದರಸಿ | ಕೌಶಿಕೆಯೆಂಬಳಂತವರೀರ್ವ್ವರುಂ | ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲಾ ಪುರದ ರಾಜಶ್ರೇಷ್ಠಿ | ಕುಸುಮದತ್ತನೆಂಬಾತನ ಪೆಂಡತಿ ಕುಸುಮದತ್ತೆಯೆಂಬಳ್ ಯಿರ್ವ್ವರುಂ ಮುನ್ನೂರರುವತ್ತು ಕೋಟಿದ್ರವ್ಯಕ್ಕೊಡೆಯರಾಗಿ | ಮೂವತ್ತಿರ್ವ್ವಮ್ಮಕ್ಕಳಂ ಪಡೆದು | ಕಾಮನುಂ ರತಿಯುಮಿರ್ಪ್ಪಂದದಿಂ | ದೇವೇಂದ್ರನುಂ ಶಚಯುಮಿರ್ಪ್ಪಂದದಿಂ | ಧರಣೇಂದ್ರ ಪದ್ಮಾವತಿಯುಮಿರ್ಪ್ಪಂದದಿಂ | ನಿಶ್ವಿಂತರುಂ ನಿರಾಮಯರುಂ ನಿರಾತಂಕರುಂ | ನಿರುಪದ್ರವರುಂ | ನಿರಾಲಸ್ಯರುಮಾಗಿರಂತರಿತಸಕಲ ಸಂಸಾರ ಭೋಗೋಪಭೋಗಂಗಳಂ | ಪಲಕಾಲವನುಭವಿಸುತ್ತ ಮಿರ್ಪ್ಪಿನಮೊಂದು ದಿವಸಂ | ಭವರೋಗವೈದ್ಯರುಂ | ಭವ ಸಾಗರೋತ್ತಾರಕರುಂ | ಭವಾಂಬುರಾಶಿ ವಡಬಾನಳರುಂ | ಭವದಾವಾಗ್ನಿ ಧಾರಾ ಸಂಪಾತರುಂ | ಭವಾಂಭೋಧರ ಝಂಝಾನಿಳಯರುಂ | ಬವತಿಮಿರ ಸಹಸ್ರ ಕಿರಣರುಂ | ಭವಸರೋಜವನ ಮತ್ತವಾರಣರುಂ | ಭವಪ್ರಮತ್ತ ಗಜಪಂಚಾನನರುಂ | ಭವಸಿಂಹರಿಪು ಭೇರುಂಡರುಂ | ಭಗಿರಿ ವಜ್ರದಂಡರುಂ | ಭವದೀಪಾಂಕುರ ಪ್ರಭಂಜನರುಂ | ಭವ್ಯಜನ ಮುಖಕಮಲ ವಿಕಸನ ದಿವಾಕರರುಂ | ಭವ್ಯಜನ ಕುವಲಯಾನಂದ ಸುಧಾಕರರುಂ | ಭವ್ಯಜನಸೇವ್ಯಗುಣರತ್ನ ರತ್ನಾಕರರುಮೆನಿಪ ನೆಗಳ್ತೆಯಿಂ ಪೊಗಳ್ತೆವೆತ್ತ ಪಂಚಪ್ರಮಿತ ಋಷಿಸಮುದಾಯಂ ಬೆರಸು | ಭುವನ ಭೂಷಣ | ಭಟ್ಟಾರಕರೆಂಬ ದಿವ್ಯಜ್ಞಾನಿಗಳು | ಗ್ರಾಮೇಕರಾತ್ರಂ | ನಗರೇ ಪಂಚರಾತ್ರಮಟವ್ಯಾಂ ದಶರಾತ್ರಮೆಂಬ ಜಿನೇಂದ್ರೋಪದಿಷ್ಟದಿಂ ವಿಹಾರಿಸುತ್ತಂ ಬಂದಾಪುರದ ಬಹಿರುದ್ಯಾನವನದೊಳಿರ್ದ್ದುದಂ ವನಪಾಲಕನಿಂದರಿದು | ಕೇಶವಾಂಕ ಮಹಾರಾಜನುಂ | ಕೌಶಿಕಮಹಾದೇವಿಯಂ | ಕುಸುಮದತ್ತನುಂ | ಕುಸುಮದತ್ತೆಯುಂ | ಸಮಸ್ತಬಂಧುಜನಂಗಳುಂ | ಪರಿಜನ ಪುರಜನ ಸಮೇತಂ | ಪಾದಮಾರ್ಗ್ಗದಿಂ ಪೋಗಿ | ಸಮಸ್ತ ಋಷಿ ಸಮುದಾಯಮಂ ಮೂರುಸೂಳ್ ಬಲಗೊಂಡು ಪಲವುಂ ದಿವ್ವಾರ್ಚ್ಚನೆಗಳಿಂದರ್ಚ್ಚಿಸಿ | ಗುರುಪರಿವಿಡಿಯಂ ಬಂದಿಸಿ ಮುಂದೆ ಕುಳ್ಳಿರ್ದ್ದು | ತಂಮನಿಬರುಂ

ಕಂ || ದುರ್ಮ್ಮತಿನಿವಾರಣಮುಮುಂ
ಕರ್ಮ್ಮಕ್ಷಯಕಾರಣ ಮುಮನಖಿಲ ಜನಕ್ಕಂ
ನಿರ್ಮ್ಮಲಸುಖಪ್ರದಮುಮಂ
ಧರ್ಮಶ್ರವಣಮುಮನೊಲ್ದು ಕೇಳ್ದತಿಮುದದಿಂ ||

ವ || ಸಂತುಷ್ಟಚಿತ್ತನಾಗಿ ತದನಂತರ ಕುಸುಮದತ್ತಂ | ಕರಕಮಳಂಗಳಂ ಮುಗಿದು | ಸ್ವಾಮಿ ಯೆನಗಿನಿತೊಂದೈಶ್ಯರ್ಯ್ಯಾಯುರಾರೋಗ್ಯ ರೂಪು ಸೌಭಾಗ್ಯ ಪುತ್ರಲಾಭ ಮಿದಾವ ಜನ್ಮದೊಳುಪಾರ್ಜ್ಜಿಸಿದ | ಪುಣ್ಯದ ಫಲಮದಂ ಬೆಸಸಿಮೆಂದು ಬಿನ್ನಪಂ ಗೆಯ್ವುದು ಮವರಿಂತೆಂದು ಪೇಳ್ದರು | ನೀಂ ಮುನ್ನಿನ ಜನ್ಮದೊಳು | ಭವರೋಗ ಹರಾಷ್ಟಮಿಯ ನೋಂಪಿಯಂ ನೋಂತ ಪುಣ್ಯಫಲಮೆನಲದೆಂತೆನಲೀ ಜಂಬೂದ್ವೀಪದ ಭರತಕ್ಷೇತ್ರದ ಕಳಿಂಗವಿಷಯದ ಕನಕಪುರದ ಬಡ ಪರದನೋರ್ವ್ವಂ | ಕಮಳಸಖನೆಂಬನಾತನ ಪೆಂಡತಿ ಕಮಳಮುಖಿಯೆಂಬಳಂತವರೀರ್ವ್ವರುಂ | ಪಲಕಾಲಂ ಮಕ್ಕಳಿಲ್ಲದೆ ದುಃಖದಿಂ ಸಂತಾಪಂ ಬಡುತ್ತಂ | ಚಿಂತಾಕ್ರಾಂತರಾಗಿ ಸಂಗಳೆ ಗುಗ್ಗುರಿಯಂ ಮಾರಿ ಜೀವಿಸುತ್ತಮಿರ್ಪ್ಪಿನಮೊಂದು ದಿವಸಂ | ದೇವಪಾಳ ಯಶೋಮುನಿತಿಲಕರು | ಮಾಸೋಪವಾಸದ ಪಾರಣೆಯೊಳು | ಯಿಂದ್ರಗತಿಯಿಂ ಚರ್ಯ್ಯಾಮಾರ್ಗ್ಗದೊಳು ಬರೆ | ಕಂಡು ತಂಮಿರ್ವ್ವರುಂ | ತ್ರಿಕರಣಶುದ್ಧಿಯಿಂ ಬಂದಿಸಿ | ನಿಲಿಸಿ ನವವಿಧ ಪುಣ್ಯದೊಳ್ನೆರೆದು | ಸಪ್ತಗುಣ ಸಮನ್ವಿತರಾಗಿ ದಾನಂ ಗೊಟ್ಟು | ಚರ್ಯ್ಯಾನಂತರಂ | ಕರಕಮಳಂಗಳಂ ಮುಗಿದು | ಕಮಲಮುಖಿ ಯಿಂತೆಂದು | ಬಿಂನಪಂ ಗೆಯಿದಳು | ಸ್ವಾಮಿ ಯೆನಗೀ ಮನುಷ್ಯಜನ್ಮಂ ನಿರರ್ತ್ಥಕಮಾಗಿ ಪೋದಪ್ಪುದಿದಂ | ಸಫಲಮಂ ಮಾಳ್ಪುದಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರು | ಭವರೋಗಹರಾಷ್ಟಮಿಯ ನೋಂಪಿಯಂನಿಂತೆಂದು ಪೇಳ್ದರಾಷಾಢದ ನಂದೀಶ್ವರದಷ್ಟಮಿಯೊಳು | ನೋಂಪಿಯಂ ಕೈಕೊಂಡು ಕಾರ್ತ್ತೀಕ ನಂದೀಶ್ವರದಷ್ಟಮಿ ಪರ್ಯ್ಯಂತಮಿರ್ದ್ದು | ಶುಕ್ಲಪಕ್ಷದಷ್ಟಮಿಯೊಳ್ನೋಂಪವರೆಲ್ಲಂ | ದಂತಧಾನವ ಸ್ನಾನಾದಿಗಳಂ ಮಾಡಿ | ಶುಚಿರ್ಬ್ಭೂತರಾಗಿ | ಚೈತ್ಯಾಲಯಕ್ಕೆ ಬಂದು | ಚತುರ್ವ್ವಿಂಶತಿ ತೀರ್ತ್ಥಕರರಿಗೆ | ಪಂಚಾಮೃತದಿಂ ಮಹಾಭಿಷೇಕಪೂಜೆಯಂ ಮಾಡಿ | ಶ್ರೀಗಂಧ ಕುಂಕುಮ ಕರ್ಪ್ಪೂರ ಗೋರೋಚನದಿಂದುದ್ವರ್ತ್ತನಂ ಮಾಡಿ ಸುಗಂಧ ಪುಷ್ಪಮನರ್ಚ್ಚಿಸುವುದು | ಅಕ್ಕಿ ಪಾಯಿಸ ಆಳೆಯಂಬಲಿ ಗೋಧಿ ಹುಗ್ಗಿ ಬಿಸೂರಿಗೆ ಹಾಲು ತುಪ್ಪ ಸರ್ಕ್ಖರೆಯಂ | ಚತುರ್ವ್ವಿಂಶತಿ ತೀರ್ತ್ಥಕರ್ಗ್ಗಂ | ಶಾಸನದೇವತೆಯರ್ಗ್ಗಂ | ಚರುವನಿಡುವುದು | ಕರ್ಪ್ಪೂರದಾರತಿ ದಶಾಂಗಧೂಪಮಂ ನಿವಾಳಿಸೂವದು | ಯಿಳೆಬಾಳೆ ಹಲಸು | ನಾರಂಗ ನಾಳಿಕೇರ ಜಂಬೀರ ಬೀಜಪೂರ ಸಹಕಾರ ಕಪಿತ್ಥಂ ಮೊದಲಾಗಿ ದೊರೆಕೊಂಡಂತಪ್ಪ | ಫಲಂಗಳನರ್ಚ್ಚಿಸೂದು | ನೆಲವತ್ತಿಯಡಕೆ ಬಿಳಿಯಲೆಯನರ್ಚ್ಚಿಸೂದು | ಬಳಿಕ್ಕಂ ಶ್ರುತ ಗುರುಪೂಜೆಯಂ ಮಾಡಿ | ಕಥೆಯಂ ಕೇಳ್ದುಪವಾಸಮಂ ಮಾಳ್ಪುದಾರದೊಡೆಕಠಾರದಿಂದೇಕ ಭುಕ್ತಮಂ ಮಾಳ್ಪುದು | ಪಾರಣೆಯ ದಿವಸದೊಳು ಯಧಾಶಕ್ತಿಯಿಂ | ಚಾತುರ್ವ್ವರ್ಣಕ್ಕಾಹಾರ ದಾನಮಂ ಮಾಳ್ಪುದು | ಯಾಕ್ರಮದಿಂ ನೋಂತು ಕಡೆಯೊಳುಜ್ಜವಣೆಯಂ ಮಾಳ್ಪಕ್ರಮಮೆಂತದೊಡೆ | ಚತುರ್ವ್ವಿಂಶತಿ ತೀರ್ತ್ಥಕರಿಂಗೆ | ಪಂಚಾಮೃತಂಗಳಿಂ | ಮಹಾಭಿಷೇಕ ಪೂಜೆಯಂ ಮಾಡಿ | ಪಂಚಪ್ರಕಾರದ ಪಾಯಸ ಪಂಚ ಪ್ರಕಾರದ ಭಕ್ಷಂಗಳಂ | ಹಾಲುತುಪ್ಪ ಶರ್ಕ್ಖರೆ ವೆರಸು ದೇವರ್ಗ್ಗಂ ಶಾಸನ ದೇವತೆಯರ್ಗ್ಗಂ ಚರುವನಿಡುವುದು | ಕರ್ಪ್ಪೂರದಾರತಿಯ ನಿವಾಳಿಸೂದು | ಶರ್ಕ್ಕರೆ ಗುಗ್ಗುಳ ದಶಾಂಗಧೂಪಮನಿಕ್ಕುವುದು | ಪಡೆದಂತಪ್ಪ ಫಲಂಗಳನರ್ಚ್ಚಿಸೂದೂ | ಸೋಗವೆರಸಿದ ಕಬ್ಬನರ್ಚ್ಚಿಸಿಸೂದು | ತದನಂತರಂ | ಶ್ರುತಮನಳಂಕರಿಸಿ ಶ್ರುತವಸ್ತ್ರಸಹಿತಂ | ಶ್ರುತಪೂಜೆಯಂ ಮಾಳ್ಪುದು | ಕಥೆಯಂ ಕೇಳ್ದು ಕಥಕನಂ ಪೂಜಿಸೂದು | ನೋನಿಸಿದವರ್ಗ್ಗುಡ ಕೊಡುವುದು | ಯಥಾಶಕ್ತಿಯಿಂದ ಭಕ್ತಿಪೂರ್ವ್ವಕಂ ನೋಂಪುದುಮಂ ಮಾಳ್ಪುದು | ಸುವರ್ನ್ನದಾನಮಂ ಮಾಳ್ಪುದು | – ಮತ್ತಂ ಬಡವರೊಡೆಯರೆಂನದೆ ಯಥಾಶಕ್ತಿಯಿಂ ಭಕ್ತಿಪೂರ್ವ್ವಕಂ ನೋಂಪುದಿದುಜ್ಜವಣೆಯ ಕ್ರಮಮೆಂದು ಪೇಳೆ ಕೇಳ್ದರಸನುಂ ಸಂತುಷ್ಟ ಚಿತ್ತನಾಗಿ

ಕ || ಕಮಲಮುಖಿ ಕಮಳಸಖನುಂ
ಸಮಸ್ತಬಂದುಜನಮೆಯ್ದೇಕಯ್ಕೊಂಡೊಲವಿಂ
ಕ್ರಮದಿಂ ನೋಂತುದ್ಯಾಪನೆ
ಯುಮನತಿಶಯದಿಂದ ಮಾಡಿ ತತ್ಫಲದಿಂದಂ ||

ಕಮಳಸಖಂ ನಿಂನ ಪ್ರಾಣೇಶ್ವರನಪ್ಪೀ ಕುಸುಮದತ್ತನಾಗಿ ಪುಟ್ಟಿದಂ ಕಮಲಮುಖಿ ನೀನಾಗಿ ಪುಟ್ಟಿದೆ | ಸಮಸ್ತ ಬಂಧುಜನಂಗಳೆಲ್ಲರುಂ ಮಕ್ಕಳಾಗಿ ಪುಟ್ಟಿದರೆಂಬುದುಂ | ನೋಂಪಿಯ ಫಲದೊಳಾದ ಮಹಾಮಹಿಮೆಯಂ ಕಡು ಮೆಚ್ಚಿ ಸಂತೋಷಂ ಬಟ್ಟೂ ||

ಕಂ || ಅರಸನುಮರಸಿಯು ಪರಿಜನ
ಪುರಜನಬಂಧುಜನ ಕುಸುಮದತ್ತಂ ಬೆರಸಾ
ದರದಿಂದಿರದಾ ನೋಂಪಿಯ
ನುರುಮುದದಿಂ ಕುಸುಮದತ್ತೆ ತಾಂ ಕೈಕೊಂಡಳ್ ||

ವ || ಅಂತಾ ನೋಂಪಿಯಂ ಸಮ್ಯಕ್ತಪೂರ್ವ್ವಕಮಾಗಿ ಕೈಕೊಂಡು ಗುರುಗಳಂ ಬೀಳ್ಕೊಂಡು ನಿಜಪುರಮನೆಯಿದಿ | ನೋಂಪಿಯಂ ಯಥಾಕ್ರಮದಿಂ ನೋಂತುಜ್ಜಯಿಸಿ ತತ್ಫಲದಿಂ | ಸಕಲ ಸಂಸಾರ ಭೋಗಸಾಗರದೊಳೋಡುತ್ತಮಿರ್ದ್ದಂತ್ಯ ಕಾಲದೊಳಿಷ್ಟ ವೈರಾಗ್ಯ ಪರಾಯಣೆಯಾಗಿ | ಕುಸುಮದತ್ತೆ | ಲಕ್ಷ್ಮೀಮತಿಯ ಸಮೀಪದೊಳು ಜಿನದೀಕ್ಷೆಯಂ ಕೈಕೊಂಡುಗ್ರೋಗ್ರ ತಪದೊಳ್ನೆಗಳ್ದಂತ್ಯಕಾಲದೊಳ್ಪರಮ ಸಮಾಧಿವಿಧಿಯಂ | ಶರೀರಭಾರಮಂನಿಳಿಪಿ | ಪದಿನಾರನೆಯಚ್ಯುತಕಲ್ಪದೊಳು | ಮಹರ್ದ್ದಿಕ ದೇವನಾಗಿಪ್ಪತ್ತೆರಡು ಸಾಗರೋಪಮ ಕಾಲಂಬರಂ | ದಿವ್ಯಸುಖಮನನುಭವಿಸಿ ಬಂದಿಲ್ಲಿ ಮನುಷ್ಯೋತ್ತಮನಾಗಿ ಪುಟ್ಟಿ | ಪರಂಪರೆಯಿಂ | ಮೋಕ್ಷಕ್ಕೆ ಸಂದಳು | ಕುಸುಮದತ್ತನು | ಸತಿವಿಯೋಗದಿಂ ವೈರಾಗ್ಯ ಪರಾಯಣನಾಗಿ | ದೇವಯಶೋಮುನಿತಿಲಕರ ಸಮಕ್ಷದೊಳು | ಜಿನದೀಕ್ಷೆಯಂ ಕೈಕೊಂಡು ವಿಶಿಷ್ಟ ತಪದೋಳ್ನೆಗಳ್ದಂತ್ಯಕಾಲದೊಳು ಸಕಲ ಕರ್ಮ್ಮನಿರ್ಮ್ಮೂಲಂಗೆಯ್ದು ಮುಕ್ತಿ ಶ್ರೀಯೊಳ್ಕೂಡಿದಂ |

ಈ ನೋಂಪಿಯ ಸಾಮರ್ತ್ಥ್ಯಂ
ಭಾನೂದಯಮೆಂತುಟಂತಘತಿಮಿರಹರಂ
ಪೀನ ದರಿದ್ರಾಬಳಸಂ
ತಾನಕ್ಷಯಕಾರಿ ವಜ್ರವಾರಿಯೆನಿಕ್ಕುಂ |

ವ || ಯಿನ್ತೀಭವರೋಗಹರಾಷ್ಟಮಿಯ ನೋಂಪಿಯಂ | ತ್ರಿಕರಣಶುದ್ಧಿಯಿಂ ಸಮ್ಯಕ್ತ್ವಪೂರ್ವ್ವಕಮಾಗಿ | ನೋಂತುವರ್ಗ್ಗಂ | ನೋನಿಸಿದವರ್ಗ್ಗಂ | ಬರೆದವರ್ಗ್ಗಂ ವಡಂಬಟ್ಟವರ್ಗ್ಗಂ | ಜಯಮಂಗಳ ಮಹಾ || ಶ್ರೀ ವಾಸುಪೂಜ್ಯಾಯನಮಃ ||