ಶ್ರೀ ಶಂಭವ ಜಿನಾಯನಮಃ ||

          ಶ್ರೀಪಂಚಗುರು ಪದಂಗಳ
ಭಾವಿಸಿ ಸದ್ಭಕ್ತಿಯಿಂದಮೆರಗಿ ಬಳಿಕ್ಕಂ
ಭೂವಳೆಯದೊಳೆಸೆವಂತಿರೆ
ಸೂಚಿಪೆ ಭವ್ಯಾನಂದದ ನೋಂಪಿಯ ಕತೆಯಂ || ೧ ||

ಅದೆಂತೆಂದೊಡೆ ಜಂಬೂದ್ವೀಪದ ವಿಧೀಯ ಭರತ ಕ್ಷೇತ್ರದೊಳು ಮಗಧೆ ಎಂಬುದು ನಾಡು ರಾಜಗೃಹಮೆಂಬ ಪೊಳಲು ಅದನಾಳ್ವಂ ಶ್ರೇಣಿಕ ಮಹಾ ಮಂಡಲೇಶ್ವರನಾತನ ಪಟ್ಟದರಸಿ ಚೇಳಿನಿ ಮಹಾದೇವಿ ಯೆಂಬಳಂತವರೀರ್ವ್ವರುಂ ಸುಖ ಸಂಕಥಾವಿನೋದದಿಂ ರಾಜ್ಯಂಗೆಯುತ್ತಮಿರಲೊಂದು ದಿವಸಂ ವನಪಾಲಕಂ ಬಂದು ಸ್ರಾಷ್ಟಾಂಗ ಪ್ರಣತನಾಗಿ ಕೈಗಳಂ ಮುಗಿದು ಎಲೈ ಸ್ವಾಮಿ ಯಶೋಭದ್ರರೆಂಬ ದಿವ್ಯಜ್ಞಾನಿಗಳು ಮೂರುಸಾವಿರದೇಳು ನೂರೈವತ್ತು ತಂಡ ಋಷಿ ಸಮುದಾಯಂ ಬೆರಸು ಗ್ರಾಮ ನಗರ ಖೇಟ ಖರ್ವಡ ಮಡಂಬ ಪತ್ತನ ದ್ರೋಣಾ ಮುಖಂಗಳೆಂಬ ಸಂವಾಹನಂಗಳೊಳ್ ಜಿನೋದ್ದಿಷ್ಟದಿಂ ವಿಹಾರಿಸುತ್ತಂ ಬಂದು ನಮ್ಮ ಪುರದ ಬಹಿರುದ್ಯಾನದೊಳು ನೆಲಸಿರ್ಪರೆಂದು ಬಿನ್ನಪಂಗೈಯಲಾತಂಗಂಚಿತ್ತ ಮನಿತ್ತು ಆನಂದ ಭೇರಿಯಂ ಪೊಯಿಸಿ ಪರಿಜನ ಪುರಜನಂ ಬೆರಸಿ ಪಾದಮಾರ್ಗದಿಂ ಪೋಗಿ ಋಷಿ ಸಮುದಾಯಮಂ ತ್ರಿಃಪ್ರದಕ್ಷಿಣಂಗೈದು ದಿವ್ಯಾರ್ಚನೆಗಳಿಂದರ್ಚಿಸಿ ತ್ರಿಕರಣ ಶುದ್ಧಿಯಿಂ ಸಾಷ್ಟಾಂಗ ಪ್ರಣತನಾಗಿ ಕರ ಕಮಲಂಕಳಂ ಮುಗಿದು ಮುಂದೆ ಕುಳ್ಳಿರ್ದ್ದು ನಿರ್ಮ್ಮಳ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ತದನಂತರಂ ಚೇಳಿನಿಮಹಾದೇವಿ ಕರಕಮಳ ಕುಟ್ಮಳ ಮುಕುಳಿತೆಯಾಗಿ ಸ್ಯಾಮಿಯೆ ಎನಗನಂತ ಸುಖ ಪ್ರಾಪ್ಯರ್ತ್ಥಮಾಗಿ ಆವುದಾನೊಂದು ನೋಂಪಿಯು ಬೆಸಸಿಮೆನಲು ಅವರಿಂತೆಂದು ಪೇಳ್ದರು ಭವ್ಯಾನಂದಮೆಂಬ ನೋಂಪಿಯಂ ಸಮ್ಯಕ್ತ್ಯ ಪೂರ್ವಕಂ ಕೈಕೊಂಡು ಯಥಾಕ್ರಮದಿಂ ನೋಂತು ಉದ್ಯಾಪನೆಯಂ ಮಾಡೆ ತತ್ಫಳದಿಂ ತದ್ಭವದಲ್ಲಿ ಏತತ್ಸುಖಮನೆಯ್ದುವರೆನೆ ಮಹಾ ಪ್ರಸಾದಮೆಂದಾ ನೋಂಪಿಯ ವಿಧಾನಮೆಂತೆಂದೊಡೆ – ಆವುದಾನೊಂದು ನಂದೀಶ್ವರ ಪಂಚಮಿ ಮೊದಲ್ಗೊಂಡು ನೋಂಪವರೆಲ್ಲರುಂ ದಂತಧಾವನ ಸ್ನಾನ ಧೌತವಸ್ತ್ರ ಸಮನ್ವಿತರಾಗಿ ಚೈತ್ಯಾಲಯಕ್ಕೆ ಬಂದು ಪಂಚ ಪರಮೇಷ್ಠಿಗಳ್ಗೆ ಪಂಚಾಮೃತದಿಂದಭಿಷೇಕ ಪೂಜೆಯಂ ಮಾಡಿ ಶ್ರೀಖಂಡ ಕುಂಕುಮ ಕರ‍್ಪೂರಾದಿ ಸುಗಂಧದಿಂದುದ್ವರ್ತ್ತನಂ ಮಾಡಿ ಪರಮೇಷ್ಠಿಗಳ ಶ್ರೀ ಪಾದ ಸನ್ನಿಧಿಯೊಳು

ಕಂ || ಜಲಧಾರೆಯನೈದಂ ಸ
ತ್ತಿಲಕಮನೈದಂ ಸುಲಕ್ಷಣಾಕ್ಷತ ಪುಂಜಗಳೈದಂ
ವಿಲಸತ್ಪ್ರ ಸೂನಮೈದಂ
ಪಲಮೈದಂ ಭಕ್ತಿಯಿಂದಮರ್ಚಿಸಿ ಬಳಿಯಿಂ || ೧ ||

ತದನಂತರಮೇನಾನುಮೊಂದುಪ್ರಕಾರ ಭಕ್ಷ ಸಹಿತಂ ಅಷ್ಟವಿಧಾರ್ಚನೆಯು ಮಾಡಿ ತದನಂತರಂ ಶ್ರುತಗುರು ಪೂಜೆಯಂ ಮಾಡಿ ಗುರು ಪಾದಾರ್ಚನೆಯಂ ಮಾಡಿ ಕಥೆಯಂ ಕೇಳ್ದು ನಿಯಮದಿಂದೈದು ಜಪಂ ಮೊದಲಾಗಿ ಯಥಾಕ್ರಮದಿಂದ ನೋಂತು ಯಥಾಶಕ್ತಿಯಂ ಪಂಚ ನಾಮಸ್ಕಾರಮಂ ಜಪಿಸಿ ಉಪವಾಸವಂ ಕೈಕೊಂಬುದು ಆರದೊಡೇಕ ಭುಕ್ತಮಂ ಮಾಳ್ಪುದು ಆಪಾಂಗಿಂ ಮುಂದಣಷ್ಟಮಿ ಚತುರ್ದಶಿಗಳೊಳಂ ಕೃಷ್ಣ ಪಕ್ಷದ ಪಂಚಮಿಯಷ್ಟಮಿ ಚತುರ್ದಸಿಗಳೊಳಂ ತಪ್ಪದೆ ನೋಂತು ನಾಲ್ಕನೆಯ ತಿಂಗಳ ನಂದೀಶ್ವರದ ಶುಕ್ಲ ಪಕ್ಷದ ಪಂಚಮಿಯಂದು ಉದ್ಯಾಪನೆಯಂ ಮಾಳ್ಪ ಕ್ರಮವೆಂತೆಂದೊಡೆ ಮುಂಪೇಳ್ದ ಕ್ರಮದಿಂ ಶುಚಿರ್ಭೂತರಾಗಿ ಚೈತ್ಯಾಲಯಕ್ಕೆ ಬಂದು ಪಂಚ ಪರಮೇಷ್ಠಿಗಳಂ ಯಥಾಶಕ್ತಿಯಿಂ ಪಂಚಾಮೃತದಿಂದ ಅಭಿಷೇಕಮಂ ಮಾಡಿ ಶ್ರೀ ಖಂಡಾದಿ ದ್ರವ್ಯಂಗಳಿಂದುದ್ವರ್ತ್ತನಂ ಮಾಡಿ ಪೂರ್ವ್ವಕ್ರಮದಿಂ ಜಲಾದಿ ಪಂಚಕರ್ಮಂ ಪರಮಾನಂದದಿಂದರ್ಚಿಸಿ ಪಂಚ ಭಕ್ಷದೊಳೊಂದರೂಳೈದೈದಂ ಪಾಯಸ ಸಮನ್ವಿತಂ ದೇವರ್ಗಷ್ಟವಿಧಾರ್ಚನೆಯಂ ಮಾಳ್ಪುದು ಶ್ರುತಕ್ಕೆ ಬಣ್ಣಿಗೆಯೊಳು ನಾಲ್ಕು ನಾಲ್ಕುಂ ಪಾಯಸ ಸಮನ್ವಿತಂ ಅಷ್ಟವಿಧಾನರ್ಚನೆಯಂ ಮಾಳ್ಪುದು ತದನಂತರಂ ಗುರುಪಾದಾರ್ಚನೆಯಂ ಮಾಡಿ ಕಥೆಯಂ ಕೇಳ್ದು ಕಥಕನಂ ಪೂಜಿಸಿ ಐವರು ಸಮ್ಯಗ್‍ದೃಷ್ಟಿಗಳ್ಗೆ ಆಯಿದು ಮಳ್ಪಡಲಿಗೆಗಳೊಳೈದು ಭಕ್ಷದೊಳೈದೈದನಿಕ್ಕಿ ಐದಡಕೆ ಇಪ್ಪತ್ತೈದು ಎಲೆಯುಮನಿಕ್ಕಿ ಮೂನೂಲಂ ಸುತ್ತಿ ಬಾಯಿನಮನಿತ್ತು ಮಂತ್ರದಿಂ ಕೊಡುವುದು ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ಪಂಚಪರಮೇಷ್ಠಿ ಭಗರ್ವಾ ಮಮ ಸರ್ವಯಿಷ್ಟ ಸಿದ್ಧಿಂ ಕುರುಕುರು ಸ್ವಾಹಾ || ಎನ್ನುತ್ತಂ ಬಾಯಿನಮನಿತ್ತು ನೋನಿಸಿಸವರ್ಗುಡ ಕೊಡುವುದು ಚಾತುರ್ವ್ವರ್ಣಕ್ಕೆ ಯಥಾಶಕ್ತಿಯಿಂ ಸುವರ್ಣಾದಿ ದಾನಮಂ ಮಾಳ್ಪುದು ಧರ್ಮ್ಮಾನುರಾಗದಿಂ ಪೊತ್ತ ಕಳೆವುದು ಮರುದಿನಂ ಪಾರಣೆಯಂ ಮಾಳ್ಪುದೆಂದು ನೋಂಪಿಯ ವಿಧಾನಮನುಜ್ಜವಣೆಯ ಕ್ರಮಮುಮಂ ಪೇಳೆ ಕೇಳ್ದು ಪರಮಾನಂದಂ ಪುಟ್ಟಿ ಮುನಿಪಾದಕ್ಕೆರಗಿ ಬೀಳ್ಕೊಂಡು ಪುರಮನರಮನೆಯಂ ಪೊಕ್ಕು ಸುಖದಿಮಿರೆ ನೋಂಪಿಯದಿನಂ ಬರಲು ಪರಮಾನುರಾಗದಿಂ ಯಥಾಕ್ರಮದಿಂ ಸವಿಸ್ತರಂ ನೋಂತು ಉಜ್ಜೈಸಿ ತತ್ಫಲದಿಂ ತದ್ಭವದಲ್ಲಿಯೇ ಪಲವು ನಿಧಿ ನಿದಾನಂಫ಼ಳ್ಗೊಡೆಯರಾಗಿ ಪರಮೈರ್ಶ್ವದೋಳ್ಕೂಡಿ ದೇವಕುಮಾರ ಸನ್ನಿಭರಪ್ಪ ಪಲಂಬರರ್ಮ್ಮಕ್ಕಳಂ ಪಡೆದು ದಿವ್ಯ ಸುಖಮನನುಭವಿಸಿ ಜಿನಧರ್ಮ ಪ್ರಭಾವಮಂ ಪಿರಿದನುರಾಗದಿಂ ಮಾಡಿ ಭವ್ಯೋತ್ತಮರೆನಿಸಿ ನೆಗಳ್ದು ಪರಂಪರೆಯಿಂ ಸ್ವರ್ಗಾಪವರ್ಗಸುಖಮನೆಯ್ದಿದರಿಂತೀ ಭವ್ಯಾನಂದಮೆಂಬ ನೋಂಪಿಯಂ ಸಮ್ಯಕ್ತ್ಯ ವೂರ್ವ್ವಕಂ ನೋಂತವರ್ಗಂ ನೋನಿಸಿದವರ್ಗಂ ಕ್ರಮದಿಂದೊಡಂಬಟ್ಟವರ್ಗಂ ಮಂಗಳ ಮಹಾ || ಶ್ರೀ ಶ್ರೀ ಶ್ರೀ